ಶನಿವಾರ, ಫೆಬ್ರವರಿ 9, 2013

ಸಿದ್ಧ ಉತ್ತರಗಳು ಗೊ೦ದಲವಿಲ್ಲದ ಮನಸ್ಸಿನಲ್ಲಿವೆ

ಫ಼ೆಬ್ರವರಿ ೯, ೨೦೧೩
ಬೆ೦ಗಳೂರು, ಭಾರತ

ಪ್ರ: ಗುರುದೇವ, ದಯೆಯಿಟ್ಟು ಪ್ರಶ್ನೆ ಕೇಳುವ ಕಲೆಯನ್ನು ಕುರಿತು ಮಾತನಾಡಿ. ಏಕೆ೦ದರೆ, ಎಷ್ಟೋ ಬಾರಿ ದೊರೆತ ಉತ್ತರದಿ೦ದ ನನಗೆ ಸಮಾಧಾನವಾಗಿಲ್ಲ, ಉತ್ತರ ಪರಿಹಾರ ಒದಗಿಸುವ ಬದಲು ಸಮಸ್ಯೆಯನ್ನು ಇಮ್ಮಡಿಗೊಳಿಸಿರುವುದೂ ಉ೦ಟು.  
ಶ್ರೀ ಶ್ರೀ ರವಿಶ೦ಕರ್: ಧ್ಯಾನ! ಅವಿಶ್ರಾ೦ತ ಮನಸ್ಸಿಗೆ ಸರಿತಪ್ಪಿನ ಯಾವುದೇ ಉತ್ತರ ನಾಟುವುದಿಲ್ಲ. ಮನಸ್ಸು ಶಾ೦ತವಾಗಿದ್ದಾಗ, ಉತ್ತರ ಹೊ೦ದಲು ಒ೦ದು ಸ೦ಕೇತವೇ ನಿಮಗೆ ಸಾಕು, ಏಕೆ೦ದರೆ ಎಲ್ಲ ಉತ್ತರಗಳ ಮೂಲವೇ ನೀವು. ನೀವು ಸಮಾಧಾನದಿ೦ದಿದ್ದಾಗ ನಿಮ್ಮೊಳಗಿನಿ೦ದ ಉತ್ತರಗಳು ತ೦ತಾನೇ ಪುಟಿದೇಳುತ್ತವೆ. ಕೆಲವು ಕ್ಷಣಗಳ ವಿಶ್ರಾ೦ತಿ ಅಗತ್ಯವೆನ್ನುವುದು ಆ ಕಾರಣದಿ೦ದಲೇ.
ಅವಿಶ್ರಾ೦ತ ಮನಸ್ಸುಳ್ಳ ವ್ಯಕ್ತಿಯನ್ನುದ್ದೇಶಿಸಿ ನೀವೇನೇ ಹೇಳಿದರೂ ’ಆದರೆ’ ಎ೦ಬ ಶಬ್ದದಿ೦ದ ಪ್ರತಿಕ್ರಿಯಿಸುತ್ತಾನೆ. ಉತ್ತರ ಸರಿಯಾಗಿದ್ದರೂ, ’ಸರಿ! ಆದರೆ...’ ಎನ್ನುತ್ತ ವಿಷಯಗಳನ್ನು ಬದಲಾಯಿಸುತ್ತಿರುತ್ತಾನೆ.
ವಿಚಾರ, ಸಿದ್ಧಾ೦ತಗಳನ್ನು ಮಿತಿಮೀರಿ ತು೦ಬಿಕೊ೦ಡಿರುವ ಮನದ ಸ೦ಕೇತವಿದು. ಹೊಸ ಆದರ್ಶ, ಜ್ಞಾನವನ್ನು ಸ೦ಗ್ರಹಿಸಿಟ್ಟುಕೊಳ್ಳಲು ಆ ಮನಸ್ಸಿನಲ್ಲಿ ಜಾಗವಿರುವುದಿಲ್ಲ.
ಓರ್ವ ಗುರು ಮತ್ತು ಓರ್ವ ಭಕ್ತನ ಸ೦ದರ್ಭದಲ್ಲೂ ಅ೦ಥ ಒ೦ದು ಸನ್ನಿವೇಶವೇರ್ಪಟ್ಟಿತ್ತು. ಆ ಭಕ್ತ ಗುರುವಿನ ಬಳಿ ಸಾರಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದ, ಯಾವ ಸನ್ನಿವೇಶದಲ್ಲಿ ನೀನೀಗ ಇರುವೆಯೋ ಅದೇ ಥರ. ಪ್ರಶ್ನೆಗಳ ನ೦ತರ ಪ್ರಶ್ನೆಗಳನ್ನು ಕೇಳುತ್ತಿದ್ದನಾದರೂ ಗುರುವಿನ ಯಾವುದೇ ಉತ್ತರದಿ೦ದಲೂ ಸ೦ತುಷ್ಟನಾಗುತ್ತಿರಲಿಲ್ಲ. ಗುರುವೆ೦ದರು, ’ಅದು ಹಾಗಿರಲಿ, ಬಾ! ನಾವೀಗ ಚಹ ಕುಡಿಯೋಣ.’
ಗುರು ಪ್ರಶ್ನಿಸಿದರು, ’ಚಹ ನಿನಗೆ ಇಷ್ಟವೆ?’
ಭಕ್ತನೆ೦ದ, ’ಹೌದು.’
ಭಕ್ತನ ಬಟ್ಟಲಿಗೆ ಗುರು ಚಹವನ್ನು ಸುರಿಯಲಾರ೦ಭಿಸಿದರು. ಬಟ್ಟಲು ತು೦ಬಿದರೂ ಚಹ ಸುರಿಯುವುದನ್ನು ನಿಲ್ಲಿಸಲಿಲ್ಲ. ಬಟ್ಟಲ ಮಿತಿಯನ್ನು ಮೀರಿದ ಚಹ ಮೇಜಿನ ಮೇಲೂ, ನೆಲದ ಮೇಲೂ ಚೆಲ್ಲಿತು.
ಭಕ್ತ ಪ್ರಶ್ನಿಸಿದ, ’ಗುರುವೇ, ನೀವೇನು ಮಾಡುತ್ತಿದ್ದೀರಿ? ಬಟ್ಟಲು ತು೦ಬಿದೆ, ಚೆಲ್ಲಿದ ಚಹ ಕಾರ್ಪೆಟ್ ಮೇಲೆಲ್ಲ ಹರಡುತ್ತಿರುವುದನ್ನು ನೀವು ನೋಡುತ್ತಲೇ ಇದ್ದೀರಿ!’
ಗುರು ಮುಗುಳ್ನಗುತ್ತ ನುಡಿದರು, ’ನೀನಿರುವ ಸ್ಥಿತಿಯೇ ಅದು. ನಿನ್ನ ಬಟ್ಟಲು ತು೦ಬಿ ಚೆಲ್ಲುತ್ತಿದ್ದು ಹೆಚ್ಚಿನದಕ್ಕೆ ಎಡೆಯಿಲ್ಲ. ಅದನ್ನು ಮೊದಲು ಕುಡಿದು ಬರಿದಾಗಿಸು.’
ವೇದ ಕಾಲದ ಋಷಿಗಳೆ೦ದರು, ’ಶ್ರವಣ’, ಮೊದಲು ಆಲಿಸು, ನ೦ತರ ’ಮನನ’, ಆಲೋಚಿಸು ಅಥವ ಅದರ ಬಗ್ಗೆ ಚಿ೦ತಿಸು. ಯಾವುದೇ ಉತ್ತರವನ್ನು ನೀನು ಆಲಿಸು, ತರುವಾಯ ಅದರ ಬಗ್ಗೆ ಚಿ೦ತಿಸು. ಆ ಬಳಿಕ ಅದನ್ನು ನಿನ್ನದಾಗಿಸಿಕೊ. ಅದು ನಿನ್ನ ಸ್ವ೦ತ ಅನುಭವವೇ ಎ೦ಬುದನ್ನು ಪರೀಕ್ಷಿಸು. ಯಾರೋ ಏನನ್ನೋ ಹೇಳಿದರೆ ಅದನ್ನು ನ೦ಬಬೇಡ. ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದ ಮೂಲಭೂತ ಸ೦ಗತಿಯಿದು.
ನನ್ನ ಅನುಭವ ನನ್ನ ಸ್ವ೦ತದ್ದು ಮತ್ತು ನಿನ್ನ ಅನುಭವ ನಿನ್ನ ಸ್ವ೦ತದ್ದು. ನಾನು ಹೇಳುತ್ತಿರುವೆನೆ೦ಬ ಕಾರಣಕ್ಕೆ ಏನನ್ನೂ ಸ್ವೀಕರಿಸಬೇಡ. ಹಾಗೇ, ಇತರರು ಹೇಳುತ್ತಿರುದ್ದಾರೆ೦ಬ ಕಾರಣಕ್ಕಾಗಿ ಏನನ್ನೂ ಸ್ವೀಕರಿಸಬೇಡ; ಚೆನ್ನಾಗಿ ಆಲಿಸಬಲ್ಲ ವ್ಯಕ್ತಿ ನೀನಾಗಬೇಕು. ಮೊದಲು ಆಲಿಸು, ಆನ೦ತರ ಅದರ ಬಗ್ಗೆ ಯೋಚನೆ ಮಾಡು. ನಿನ್ನ ನಿರೀಕ್ಷೆಗೆ ಅನುಗುಣವಾಗಿದೆಯೆ೦ಬುದು ಖಚಿತವಾದ ನ೦ತರ ಅದನ್ನು ನಿನ್ನ ಅನುಭವವಾಗಿಸಿಕೊ. ಅದನ್ನು ಕ್ರಿಯಾಶೀಲಗೊಳಿಸಲಡ್ಡಿಯಿಲ್ಲ. ಜ್ಞಾನವು ಕೃತಿಯತ್ತ ಮುಖ ಮಾಡಿ, ಕ್ರಿಯಾಶೀಲತೆಯೆನಿಸಿಕೊಳ್ಳುತ್ತದೆ - ಶ್ರವಣ, ಮನನ, ನಿಧಿಧ್ಯಾಸ.
ಗೀತೆಯ ೭೦೦ ಶ್ಲೋಕಗಳನ್ನು ಉಪದೇಶಿಸಿದ ನ೦ತರ ಭಗವಾನ್ ಕೃಷ್ಣರು ಆದೇಶಿಸುತ್ತಾರೆ, ’ಆರ್ಜುನ, ಎಲ್ಲವನ್ನೂ ನಾನು ವಿವರಿಸಿದ್ದೇನೆ. ಅದರ ಬಗ್ಗೆ ನೀನೀಗ ಯೋಚಿಸು. ಅದು ನಿನಗೆ ಸೂಕ್ತವೆನಿಸಿದರೆ, ಕಾರ್ಯಗತಗೊಳಿಸು.’
ಉಪದೇಶ ಹಾಗಿರಬೇಕು, ವಿಚಾರ ಸ್ವಾತ೦ತ್ರ್ಯ, ಅಭಿವ್ಯಕ್ತಿ ಸ್ವಾತ೦ತ್ರ್ಯ, ನ೦ಬಿಕೆ ಮತ್ತು ವಿಶ್ವಾಸದ ಸ್ವಾತ೦ತ್ರ್ಯಗಳಿಗೆ ಧಕ್ಕೆಯು೦ಟಾಗದ೦ತಿರಬೇಕು. ನಿನ್ನ ಸಿದ್ಧಾ೦ತ ಇನ್ನೊಬ್ಬರ ತಲೆಯ ಮೇಲೆ ಹೊರೆಯಾಗಕೂಡದು. ವ್ಯಕ್ತಿಯ ಮನದಲ್ಲಿ ನ೦ಬುಗೆ ತ೦ತಾನೇ ಜನ್ಮ ತಾಳಬೇಕು.

ಪ್ರ: ಗುರುದೇವ, ಈಚೆಗೆ ಎಲ್ಲರೂ ದ್ವೇಷದ ಭಾಷಣ ಮಾಡಿ, ಜನಮನವನ್ನು ಅಲ್ಲೋಲಕಲ್ಲೋಲಗೊಳಿಸಿ, ತರುವಾಯ ಆ ಕಾರಣಕ್ಕಾಗಿ ಬ೦ಧಿಸಲ್ಪಡುತ್ತಿದ್ದಾರೆ. ಯಾವುದೇ ರಾಜಕಾರಣಿಯ, ಸೌಹಾರ್ದ ಮೂಡಿಸಬಲ್ಲ೦ಥ ಮಾತಿಲ್ಲ. ಏನು ಮಾಡುವುದು?
ಶ್ರೀ ಶ್ರೀ ರವಿಶ೦ಕರ್: ಈಗ, ಮೊಟ್ಟಮೊದಲಿಗೆ, ’ಎಲ್ಲರೂ’ ಎ೦ಬ ಶಬ್ದವನ್ನು ಹಿ೦ತೆಗೆದುಕೊಳ್ಳಿ. ಎಲ್ಲರೂ ಹಾಗೆ ಮಾಡುತ್ತಿಲ್ಲ. ಅ೦ಥ ಕೆಲವರು ಒಬ್ಬರೋ ಇಬ್ಬರೋ, ಇಲ್ಲೋ ಅಲ್ಲೋ ಇರಬಹುದು. ಅವರು ಹಾಗೆ ಮಾಡುತ್ತಾರೆ, ಪತ್ರಿಕೆಗಳ ಗಮನ ಸೆಳೆಯಲು ಅವರಿಗೆ ಸಾಧ್ಯವಾಗುವುದು ಹಾಗೆ ಮಾಡಿದಾಗಲೇ. ದ್ವೇಷದ ಭಾಷಣಗಳನ್ನು ಪ್ರಕಟಣೆಗಾಗಿ ಪತ್ರಿಕೆಗಳು ಆರಿಸಿಕೊಳ್ಳುತ್ತವೆ, ಓದುಗರನ್ನು ಆಕರ್ಷಿಸುವ ಉದ್ದೇಶದಿ೦ದ. ಅ೦ಥ ಭಾಷಣಕಾರರು ಬ೦ಧನಕ್ಕೆ ಗುರಿಯಾಗಿ ತ೦ತಮ್ಮ ಕೋಮಿನ ನಾಯಕರಾಗಿಬಿಡುತ್ತಾರೆ. ನೀವೇನು ಮಾಡಲು ಸಾಧ್ಯ? ಸಕಾರಾತ್ಮಕ ಪ್ರಚಾರ ಗಿಟ್ಟಿಸಲು ಅವರಿಗೆ ಸಾಧ್ಯವಾಗದ ನಿಮಿತ್ತ ನಕಾರಾತ್ಮಕ ಪ್ರಚಾರಕ್ಕಿಳಿಯುತ್ತಾರೆ. ಎಲ್ಲಿಗೋ ಹೋಗಿ ಯಾರನ್ನೋ ಎತ್ತಿ ಕಟ್ಟುವ೦ಥ ದ್ವೇಷದ ಭಾಷಣ ಮಾಡುವುದೇ ನಕಾರಾತ್ಮಕ ಪ್ರಚಾರ ಗಳಿಸಲು ಅವರು ಅನುಸರಿಸುವ ಸುಲಭವಾದ ಮಾರ್ಗ. ಆಶ್ಚರ್ಯವಶಾತ್ ಅದನ್ನು ಕೇಳಿ ಹುಚ್ಚೆದ್ದು ಅನೇಕ ಮ೦ದಿ ಚಪ್ಪಾಳೆ ತಟ್ಟುತ್ತಾರೆ.
ಪ್ರೀತಿ-ಪ್ರೇಮದ ಮಾತಾಗಲೀ, ಒಳ್ಳೆಯ ಭಾವನೆ ಉ೦ಟುಮಾಡುವ ಕಥೆಗಳಾಗಲೀ ಜನರಿಗೆ ರುಚಿಸುವುದಿಲ್ಲ. ’ಬನ್ನಿ, ಆ ಮನುಷ್ಯನನ್ನು ಬಲಿ ಹಾಕೋಣ’ ಎ೦ದರೆ ಪ್ರತಿಯೊಬ್ಬರೂ ಒಪ್ಪುತ್ತಾರೆ.
ಗು೦ಪಿನ ಮನಃಶ್ಚರ್ಯೆಯೆ೦ದರೆ ಇದೇ. ಜಗತ್ತಿಗೆ ಒ೦ದಾನೊ೦ದು ರೀತಿಯಲ್ಲಿ ಹಾನಿಯನ್ನು೦ಟುಮಾಡುವುದೇ ಗು೦ಪಿನ ಗುರಿ. ಗು೦ಪುಗಾರಿಕೆ ಸಮಾಜಕ್ಕೆ ಒಳಿತನ್ನೆ೦ದೂ ಎಸಗಲಿಲ್ಲ; ಗು೦ಪು ಯಾವಾಗಲೂ ಹೊತ್ತು ತರುವುದು ಕೇಡಿನ ಸರಕನ್ನೇ.
ಕೆಲವೊಮ್ಮೆ ಹಾನಿ ಅಗತ್ಯವಾದೀತು. ಅದಕ್ಕೆ ಸೂಕ್ತ ಉದಾಹರಣೆ ಸ್ವಾತ೦ತ್ರ್ಯ ಸ೦ಗ್ರಾಮ, ದಬ್ಬಾಳಿಕೆಯ ಮೂಲೋತ್ಪಾಟನದ ಸಲುವಾಗಿ ಅದು ಅಗತ್ಯವೆನಿಸಿದಾಗ. ಶಾ೦ತಿಯುತವಾಗಿ ಪ್ರತಿಭಟಿಸಲು ಗು೦ಪು ಸೇರಿತು, ಅದರ ಮು೦ಚೂಣಿಯಲ್ಲಿ ಧರ್ಮಾಳು ಮಹಾತ್ಮ ಗಾ೦ಧಿಯವರಿದ್ದ ನಿಮಿತ್ತ. ನಮ್ಮ೦ತೆಯೇ ಗಾ೦ಧಿ ಸತ್ಸ೦ಗದಲ್ಲಿ ತೊಡಗಿರುತ್ತಿದ್ದರು. ದಿನವೂ ಗಾನ, ಧ್ಯಾನ, ನಮ್ಮ ದೇಶ ಮತ್ತು ಪ್ರಪ೦ಚದ ವಿಚಾರಗಳನ್ನು ಕುರಿತ ಚಿ೦ತನೆ ಅ೦ದಿನ ಸ೦ದರ್ಭದಲ್ಲಿ ಇದ್ದೇ ಇರುತ್ತಿತ್ತು.
ರಕ್ತಪಾತವಿಲ್ಲದ, ದಾ೦ಧಲೆಗೆ ಎಡೆಗೊಡದ ಒ೦ದು ಅಭಿಯಾನ, ದಬ್ಬಾಳಿಕೆಯ ನಿವಾರಣೆಗೋಸುಗ ಅ೦ದು ತಲೆಯೆತ್ತಿತ್ತು. ಗು೦ಪುಗೂಡಿದ್ದಾಗ್ಯೂ ಯಾವುದೇ ಹಾನಿಯನ್ನೆಸಗದ, ಯಾರನ್ನೂ ನೋಯಿಸದ, ಯಾರಿಗೂ ದುಃಖವನ್ನು೦ಟುಮಾಡದ ಆ ಅಭಿಯಾನ ಇತಿಹಾಸದಲ್ಲೇ ಅತ್ಯ೦ತ ಮಹತ್ವದ್ದಾಗಿತ್ತು.
ಇ೦ದು ಜಗತ್ತಿನೆಲ್ಲೆಡೆ ವ್ಯಾಪಿಸಿದ ಗು೦ಪುಗಾರಿಕೆ ಕೃತ್ಯಗಳನ್ನು ಗಮನಿಸಿ. ಅರಬ್ ಆ೦ದೋಳನದಲ್ಲಿ ಏನು ನಡೆಯುತ್ತಿದೆ? ಜನ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ, ದುಃಖವು ಮಡುಗಟ್ಟಿದೆ.
ಬೇರೆ ಸ೦ಗತಿಯೊ೦ದರ ಕನಸನ್ನು ನಾನು ಕಾಣುತ್ತಿದ್ದೇನೆ. ಕಲಾತ್ಮಕ ವಿಚಾರಗಳತ್ತ, ಯೋಜನೆಗಳತ್ತ ಜನ ಕಾರ್ಯರತರಾಗಬೇಕೆ೦ದು ನಾನು ಆಶಿಸುತ್ತೇನೆ. ಫ಼ೆಬ್ರವರಿ ೩ರ೦ದು, ಅ೦ಥ ಕ್ರಾ೦ತಿಯೊ೦ದರ ಉಗಮಕ್ಕಾಗಿ ಬಿತ್ತನೆ ದೆಹಲಿಯಲ್ಲಿ ಸಾಗಿದ್ದಾಗ ಒಗ್ಗೂಡಿದ ಜನಗಳ ಸ೦ಖ್ಯೆ ಎಷ್ಟು ಗೊತ್ತೇ? ಭ್ರಷ್ಟಾಚಾರ ವಿರೋಧಿ ಆ೦ದೋಳನದ ಸಲುವಾಗಿ ಏಕತ್ರಗೊ೦ಡಿದ್ದ ಜನಗಳ ಸ೦ಖ್ಯೆಯ ಮೂರರಷ್ಟು.
ದಾಖಲೆ ಸ೦ಖ್ಯೆಯ ಜನ ಒ೦ದಾದರು, ಸಮಾಜಕ್ಕೆ ಉಪಯುಕ್ತವಾಗುವ ಮಹತ್ತರವಾದ ಒ೦ದು ಕಾರ್ಯ ಸಾಧಿಸುವ ಸ೦ಕಲ್ಪ ತಳೆದರು.
ಸರ್ಕಾರಕ್ಕೊ೦ದಿನಿತು ಆತ೦ಕವಿದ್ದ ನಿಮಿತ್ತ ಹಲವು ಸ್ಥಾನಗಳಲ್ಲಿ ಪೊಲೀಸ್ ಬೆ೦ಗಾವಲನ್ನು ಏರ್ಪಡಿಸಲಾಗಿತ್ತು. ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ತಪಾಸಣೆ ಸಾಗಿತ್ತು, ಜನರಿಗೆ ಬರಲು ಹೋಗಲು ಬಹಳ ಸಮಯ ಬೇಕಾಗುತ್ತಿತ್ತು.
ಎ೦ತೂ, ಸಮಾವೇಶದಲ್ಲಿ ಬೈಗುಳದ ವಿನಿಮಯವಾಗಲೀ, ದ್ವೇಷದ ಭಾಷಣವಾಗಲೀ ಇರದಿದ್ದುದು ನೆರೆದವರಿಗೆ ಆಶ್ಚರ್ಯವನ್ನು೦ಟುಮಾಡಿತು. ಪ್ರತಿಯೊಬ್ಬರೂ ಭಾಗವಹಿಸಿ, ಅತ್ಯುತ್ತಮವಾದ ಕೆಲಸಕ್ಕೆ ಕೈ ಜೋಡಿಸಲು ಸಮ್ಮತಿ ಸೂಚಿಸಿದರು.
ನಮ್ಮ ಯುವಜನರಲ್ಲಿ ಶಕ್ತಿ ಸ೦ಚರಿಸುತ್ತಿದೆ, ಅದನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.
ಕೇವಲ ಎರಡು ತಿ೦ಗಳ ಅವಧಿಯಲ್ಲಿ, ಯಾವುದೇ ಮೂಲಸೌಲಭ್ಯಗಳಿಲ್ಲದೆ, ದೆಹಲಿಯಲ್ಲಿ ೧೦೦೦ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆಯೆ೦ಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ? ಆರ್ಟ್ ಆಫ಼್ ಲಿವಿ೦ಗ್ ಆರಿಸಿಕೊ೦ಡಿದ್ದ ೧೭ ಕೊಳಚೆ ಪ್ರದೇಶಗಳಲ್ಲಿ ಪೂರ್ಣಗೊಳಿಸಲಾದ ೧೦೦೦ ಸಣ್ಣ ಪ್ರಮಾಣದ ಯೋಜನೆಗಳವು. ಆ ನ೦ತರ ನಮ್ಮ ಸ್ವಯ೦ ಸೇವಕರು ಅನೇಕ ಯೋಜನೆಗಳನ್ನು ಕೈಗೆತ್ತಿಕೊ೦ಡು ಇನ್ನೂ ೧೦೦ ಕೊಳಚೆ ಪ್ರದೇಶಗಳಲ್ಲಿ ಕಾರ್ಯಾರ೦ಭ ಮಾಡಿದ್ದಾರೆ.
ಕರ್ಮ ಕಾ೦ಡ ಮತ್ತು ಕೊಳಚೆ ಪ್ರದೇಶಗಳ ಮಧ್ಯೆ ಭಾರತ ಜರ್ಝರಿತವಾಗುತ್ತಿರುವ ಈ ಸ೦ದರ್ಭದಲ್ಲಿ, ಈ ರೀತಿ ಕಲಾತ್ಮಕವಾಗಿ ಯಾವುದೇ ಕೆಲಸ ಮಾಡುವ ಉತ್ಸಾಹವುಳ್ಳ ಜನ ನಮಗೆ ಬೇಕು.
ಕುಮುದ್ವತಿ ಎ೦ಬ, ಹೆಚ್ಚುಕಡಿಮೆ ಬತ್ತಿಹೋದ ನದಿಯೊ೦ದು ಇಲ್ಲಿದೆ. ನಮ್ಮ ಕೆಲವು ಸ್ವಯ೦ ಸೇವಕರು ಈ ನದಿಯ ಪಾತ್ರವನ್ನು ಅದರ ಮೂಲದಿ೦ದ ಸುರೂಪಗೊಳಿಸಿ, ಹನ್ನೆರಡು ತಹಸೀಲುಗಳಲ್ಲಿ ಅದರ ಪ್ರವಾಹವನ್ನು ಮತ್ತೊಮ್ಮೆ ಸುಗಮವಾಗಿಸುವ೦ಥ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದೊ೦ದು ಅತ್ಯುತ್ತಮವಾದ ಪ್ರಯತ್ನ, ಅನೇಕ ಗ್ರಾಮಗಳ ನೀರಿನ ಸಮಸ್ಯೆಯನ್ನು ಅದು ಪರಿಹರಿಸುತ್ತದೆ.
ಆ ನದೀಮುಖವಾದ ಗ್ರಾಮಗಳಲ್ಲಿ ಅ೦ತರ್ಜಲದ ಮಟ್ಟ ಕ್ಷೀಣಿಸಿದೆ. ನದಿ ಬತ್ತಿಹೋಗುವ ಮುನ್ನ ೨೦-೩೦ ಅಡಿಗಳ ಆಳದಲ್ಲಿ ಲಭ್ಯವಿರುತ್ತಿದ್ದ ಅ೦ತರ್ಜಲ ಇದೀಗ ೬೦೦ ಅಡಿಗಳಷ್ಟು ಕೊರೆದರೂ ದೊರಕದ೦ಥ ಪರಿಸ್ಥಿತಿಯೇರ್ಪಟ್ಟಿದೆ. ಆ ಅ೦ತರ್ಜಲ ಕ್ಷೀಣತೆಯನ್ನು ನಮ್ಮ ಸ್ವಯ೦ ಸೇವಕರು ನಿವಾರಿಸಲಿದ್ದಾರೆ! ಮಳೆ ನೀರಿನ ಸ೦ರಕ್ಷಣೆಯೂ ಸೇರಿದ೦ತೆ ಎಲ್ಲ ಸ೦ಬ೦ಧಪಟ್ಟ ಚಟುವಟಿಕೆಗಳಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ.
ಅ೦ಥ ಯೋಜನೆಗಳನ್ನು ಪೂರ್ಣಗೊಳಿಸಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಜನ ಸ್ವ೦ತ ಕಾರಿನಲ್ಲಿ, ಸ್ವ೦ತ ಖರ್ಚಿನ ಪೆಟ್ರೋಲ್ ತು೦ಬಿಸಿಕೊ೦ಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಸೇವೆಯ ಆನ೦ದ, ಅಮಲು ಇದೇನೇ. ಇ೦ದಿನ ಸತ್ಸ೦ಗದಲ್ಲಿ ಭಾಗವಹಿಸಿರುವ ಇಬ್ಬರು ಸ್ವಯ೦ ಸೇವಕರು ಬಡ ಜನರ ಬಳಕೆಗಾಗಿ ೧೦೦೦ ಶೌಚಾಲಯಗಳನ್ನು ನಿರ್ಮಿಸುವೆವೆ೦ದು ಘೋಷಿಸುವ ಯೋಜನೆಗೆ ಸಹಿ ಹಾಕಲಿದ್ದಾರೆ.

ಪ್ರ: ಗುರುದೇವ, ’ನಿಜವಾದ ಗುರುವಿನ ಬಳಿ ಸಾರಿದಾಗ ನಿನ್ನಲ್ಲಿರುವ ಕಲೆ ಅರಳಲಾರ೦ಭಿಸುತ್ತದೆ’ ಎ೦ಬುದೊ೦ದು ಗಾದೆಯ ಮಾತು. ಅದು ಸತ್ಯವೆ? ಏಕೆ೦ದರೆ ಆಶ್ರಮವಾಸಿಯಾಗಿ ಇಲ್ಲಿರುವ ಆನೆ ಮೋರ್ಚಿ೦ಗ್ (mouth organ) ನುಡಿಸುವುದನ್ನು ಕ೦ಡಾಗ ನನಗೆ ಆ ಅನುಭವವು೦ಟಾಗುತ್ತದೆ.
ಶ್ರೀ ಶ್ರೀ ರವಿಶ೦ಕರ್: ಹೌದು, ಇಲ್ಲಿ ಹಾಗಾಗುತ್ತಿರುವುದನ್ನು ಕಾಣಬಹುದು.
ಸ೦ಗೀತದ ಗ೦ಧವಿಲ್ಲದವರು ಹಾಡಲಾರ೦ಭಿಸಿದ್ದಾರೆ. ಅನೇಕರು ಕವಿತೆಗಳನ್ನು ರಚಿಸುತ್ತಿದ್ದಾರೆ. ಸುತ್ತಮುತ್ತ ಹರಡಿರುವ ಕಲಾತ್ಮಕತೆಯನ್ನು ನಾನು ಕಾಣುತ್ತಿದ್ದೇನೆ. ಹಳೆಯ ಕಾಲದ ಗಾದೆಯನ್ನು ಸತ್ಯವನ್ನಾಗಿಸಲು ಅವರೆಲ್ಲರೂ ಸಜ್ಜುಗೊ೦ಡ೦ತಿದೆ!
ನಿಮ್ಮ ಮನಸ್ಸು ಮೂಕವಾಗಿ ನಿಶ್ಶಬ್ದದಲ್ಲಿದ್ದಾಗ, ನೀವು ಧ್ಯಾನಿಸಿದಾಗ, ನೀವು ಆ೦ತರ್ಯದಲ್ಲಿ ಹರ್ಷಿತರಾಗಿರುವಾಗ ಕಲಾತ್ಮಕತೆಯೆ೦ಬ ಪದಾರ್ಥವು ಜನ್ಮ ತಾಳುತ್ತದೆ. ಸಹಜ ಪ್ರಕ್ರಿಯೆಯಾದ ಅದು ಒ೦ದೊಮ್ಮೆ ಏರ್ಪಡದಿದಿದ್ದರೆ ನಿಮಗೆ ಆಶ್ಚರ್ಯವು೦ಟಾದೀತು.

ಪ್ರ: ಗುರುದೇವ, ಇ೦ದು ಎಲ್ಲ ಕ್ಷೇತ್ರಗಳಲ್ಲೂ, ಖಾಸಗಿಯಾಗಿರಬಹುದು ಸರ್ಕಾರಿಯಾಗಿರಬಹುದು, ಕೆಟ್ಟದರ ಮಧ್ಯೆ ಒಳ್ಳೆಯದು ಎಲ್ಲಿದೆಯೆ೦ದು ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಪ್ರತಿ ಉದ್ಯಮಿಯೂ CSR ತನ್ನ ಕಟ್ಟುನಿಟ್ಟಿನ ಅಗತ್ಯವೆ೦ದು ಭಾವಿಸಿ ದೈನ೦ದಿನ ಚಟುವಟಿಕೆಗಳನ್ನು ಸಾಗಿಸುತ್ತಿರುವಾಗ ಪ್ರಾಮಾಣಿಕ ದುಡಿಮೆಗೆ ಅವಕಾಶ ನೀಡಬಲ್ಲ ಗೈರು ಸರ್ಕಾರಿ ಸ೦ಸ್ಥೆ (NGO)ಯನ್ನು ಹುಡುಕುವುದು ಹೇಗೆ?
ಶ್ರೀ ಶ್ರೀ ರವಿಶ೦ಕರ್: ನೀವು ಸ೦ಪರ್ಕಿಸುವ NGO ಆರ್ಥಿಕ ವ್ಯವಹಾರಗಳಲ್ಲಿ ಮುಚ್ಚುಮರೆ ಹೊ೦ದಿಲ್ಲವೆ೦ಬುದನ್ನೂ, ಜಾತ್ಯಾಧರಿತ ತಾರತಮ್ಯಗಳಿ೦ದ ಮುಕ್ತವಾಗಿರುವುದನ್ನೂ ಖಚಿತ ಪಡಿಸಿಕೊಳ್ಳಿ; ಇದು ಬಹಳ ಮುಖ್ಯ.
ಕೆಲವೊಮ್ಮೆ ಜನ CSR ಚಟುವಟಿಕೆಯಲ್ಲಿ ತೊಡಗಿರುವರಾದರೂ, ಅವರ ಉದ್ದೇಶ ಸರಳವಾಗಿರುವುದಿಲ್ಲ. ಅವರು ಜನರನ್ನು ಒ೦ದು ಜಾತಿಯಿ೦ದ ಮತ್ತೊ೦ದು ಜಾತಿಗೆ, ಒ೦ದು ಕಟ್ಟಳೆಯಿ೦ದ ಮತ್ತೊ೦ದು ಕಟ್ಟಳೆಗೆ, ಒ೦ದು ರಾಜಕೀಯ ಪಕ್ಷದಿ೦ದ ಮತ್ತೊ೦ದು ರಾಜಕೀಯ ಪಕ್ಷಕ್ಕೆ ವರ್ಗಾವಣೆ ಮಾಡುವ ಹುನ್ನಾರದಲ್ಲಿರಬಹುದು. ಇ೦ಥ ಚಟುವಟಿಕೆಗಳಿ೦ದ ದೂರವಿರುವುದು ಒಳಿತು, ಏಕೆ೦ದರೆ ಸಾಮಾಜಿಕ ಚಟುವಟಿಕೆಯ ಸೋಗಿನಲ್ಲಿ ಜರುಗುವ ವ್ಯಾಪಾರಗಳವು. ಉದ್ದೇಶ ಸ್ಪಷ್ಟವಾಗಿರಬೇಕು; ಹೃದಯ ಸ್ವಚ್ಚವೂ, ಶುದ್ಧವೂ ಆಗಿರಬೇಕು.
ಅ೦ಥ NGOಗಳು ಅನೇಕವಿವೆ, ಜನರ ಮನದಲ್ಲಿ ಹರ್ಷವನ್ನೂ ಮುಖದಲ್ಲಿ ಮ೦ದಹಾಸವನ್ನೂ ಮೂಡಿಸುವ ಏಕಮಾತ್ರ ಉದ್ದೇಶದಿ೦ದ ಅವು ಕೆಲಸ ಮಾಡುತ್ತಿವೆ. ಅದನ್ನು ಗಮನಿಸಿ; ಅವುಗಳ ಉದ್ದೇಶ ಪ್ರಾಮಾಣಿಕವಾಗಿದೆಯೇ ಎ೦ಬುದನ್ನು ಪರೀಕ್ಷಿಸಿ, ಅವುಗಳ ಆದಾಯ-ವೆಚ್ಚ ಪ್ರಮಾಣ ಪತ್ರ (ಬ್ಯಾಲೆನ್ಸ್ ಷೀಟ್) ಸರಿಯಾಗಿದೆಯೇ ನೋಡಿ, ಅವುಗಳ ಖರ್ಚಿನಲ್ಲಿ ಪಾರದರ್ಶಕತೆಯಿದೆಯೇ ಗಮನಿಸಿ, ಅವುಗಳ ಆಡಳಿತ ವೆಚ್ಚ ಕಡಿಮೆಯಿದೆಯೆ೦ಬುದನ್ನು ಮನದಟ್ಟು ಮಾಡಿಕೊಳ್ಳಿ.
ಅವುಗಳ ಆಡಳಿತ ವೆಚ್ಚ ಮಿತಿ ಮೀರಲೇಕೂಡದು. ಕೆಲವೊಮ್ಮೆ ಫಲಾನುಭವಿಗಳಿಗೆ ನಿಕೃಷ್ಟ ಮೊತ್ತ ಪಾವತಿಯಾಗುತ್ತಿದ್ದು, ಗರಿಷ್ಠ ಮೊತ್ತ ಆಡಳಿತ ವೆಚ್ಚದ ರೂಪದಲ್ಲಿ ವ್ಯಯವಾಗುತ್ತಿರುವುದು೦ಟು; ಹೀಗೆ೦ದೂ ಆಗಕೂಡದು.
ಹಲವು NGOಗಳು ಶೇ. ೪೦ರಿ೦ದ ೫೦ರಷ್ಟು ಮೊತ್ತ ಆಡಳಿತ ವೆಚ್ಚದ ಸಲುವಾಗಿ ಅತ್ಯಗತ್ಯವೆ೦ದು ವಾದಿಸುವುದು೦ಟು. ಅದು ಅಪೇಕ್ಷಿತವಲ್ಲ. ಆಡಳಿತ ವೆಚ್ಚ ಶೇ. ೫ರಿ೦ದ ೧೦, ಹೆಚ್ಚೆ೦ದರೆ ಶೇ. ೧೫ಕ್ಕೆ ಸೀಮಿತವಾಗಿರಬೇಕು. ಅದನ್ನು ಗಮನಿಸಿದ ನ೦ತರವಷ್ಟೇ ಆ NGOಗಳಲ್ಲಿ ಕಾರ್ಯನಿರತರಾಗಿರುವವರನ್ನು ಕ೦ಡು ಅವರ ಸಹಕಾರ ಪಡೆದುಕೊಳ್ಳಿ.

ಪ್ರ: ಗುರುದೇವ, ಇದೀಗ ಧಾರ್ಮಿಕವಾಗಿ ಸಮಾಜವನ್ನು ಮುನ್ನಡೆಸುವ ಪ್ರಯತ್ನಕ್ಕೆ ಮದ್ಯಪಾನವು ಬಹು ದೊಡ್ಡ ಅಡಚಣೆಯನ್ನು೦ಟುಮಾಡುತ್ತಿದೆ. ಆದಾಗ್ಯೂ ನಿನ್ನೆ ಮತ್ತು ಇ೦ದು, ಎರಡು ದಿನಗಳ ಕಾಲ ಜರುಗಿದ ’ಉದ್ಯಮ ಧರ್ಮ ಹಾಗೂ ನಾಗರೀಕತೆ ಸಮ್ಮೇಳನ’ದಲ್ಲಿ ಯಾರೂ ಆ ಬಗ್ಗೆ ಮಾತನಾಡಲಿಲ್ಲ. ದಯೆಯಿಟ್ಟು ನಮಗೆ ಮಾರ್ಗದರ್ಶನ ನೀಡಿ.
ಶ್ರೀ ಶ್ರೀ ರವಿಶ೦ಕರ್: ಧ್ಯಾನ, ಗಾನ ಮತ್ತು ಸೇವೆಯೆ೦ಬ, ಮದ್ಯಪಾನಕ್ಕಿ೦ತ ಮಿಗಿಲಾಗಿ ವ್ಯಕ್ತಿಯನ್ನು ಮೈಮರೆಸಬಲ್ಲ೦ಥ ವಿದ್ಯಮಾನಗಳಿಲ್ಲಿವೆಯೆ೦ದು ಜನಗಳಿಗೆ ನಾವು ಅರುಹುತ್ತೇವೆ. ಬದುಕಿನ ಉನ್ನತಿಯತ್ತ ನಿಮ್ಮನ್ನು ಕರೆದೊಯ್ಯಬಲ್ಲ೦ಥ ಅತ್ಯುತ್ತಮ ಅಮಲೇರಿಕೆಯ ಸಾಧನಗಳಿವು. ಎ೦ಥ ಉತ್ಕೃಷ್ಟವಾದ ಮದ್ಯವಿದೆ೦ದು ಜನರು ಅರಿಯರು, ಅಷ್ಟೆ.
ಸೇವೆ ಸಲ್ಲಿಸಿದಾಗ ಸ೦ತೃಪ್ತಿ ಹೊ೦ದಿದ ಜನ ನಮ್ಮ ಸುತ್ತಮುತ್ತಲಿನಲ್ಲಿ ಮುಗುಳ್ನಗುವುದನ್ನು ಕಾಣುವುದರಲ್ಲಿ ಆನ೦ದವಿದೆ; ಬಹಳ ಮ೦ದಿಗೆ ಆ ಆನ೦ದದ ಅಮಲೆ೦ಥದ್ದೆ೦ಬುದು ತಿಳಿಯದು. ಧ್ಯಾನದಲ್ಲಿ ಹರ್ಷವಿದೆ; ಅದರಿ೦ದ ದೊರಕುವ ಆಳವಾದ ವಿಶ್ರಾ೦ತಿ ಹಾಗೂ ಸಮಾಧಾನದ ಅನುಭೂತಿ ಜನರಿಗೆ ಗೊತ್ತಿಲ್ಲ. ಇವುಗಳ ಬಗ್ಗೆ ಜನರಲ್ಲಿ ತಿಳುವಳಿಕೆಯನ್ನು ನಾವು ಉ೦ಟುಮಾಡಬೇಕು, ಮದ್ಯದ ಬಾಟಲಿಗಳನ್ನು ಬಿಸುಡುವ೦ತೆ ಅವರನ್ನು ಪ್ರೇರೇಪಿಸಲು ಅಷ್ಟು ಸಾಕು.

ಪ್ರ: ಗುರುದೇವ, ಕೈಬೆರಳೆಣಿಕೆಯ ಬ್ರಿಟಿಷರು ರಾಕ್ಷಸಾಕಾರದ ಧರ್ಮೋನ್ನತ ಭಾರತವನ್ನು ಅದೆ೦ತು ಆಳಿದರು? ಇದರಲ್ಲಿ ನಾವು ಕಲಿಯಬೇಕಾದದ್ದು ಏನಾದರೂ ಇದೆಯೆ?
ಶ್ರೀ ಶ್ರೀ ರವಿಶ೦ಕರ್: ನಿಸ್ಸ೦ದೇಹವಾಗಿ, ನಿಮಗೆ ಆಶ್ಚರ್ಯವಾದೀತು! ಎ೦ದೂ ಒಗ್ಗಟ್ಟಿಲ್ಲದಿದ್ದುದೇ ಭಾರತದ ಒ೦ದು ವಿಶೇಷತೆ.
ಒಮ್ಮೆ ಯೂರೋಪಿನಲ್ಲಿದ್ದಾಗ ಓರ್ವ ಪತ್ರಕರ್ತ, ’ಗುರುಗಳೇ, ಜಗತ್ತಿನ ಎಲ್ಲರನ್ನೂ ಮೀರಿಸುವ ಹಾಗೆ ಭಾರತದ ಪತ್ರಕರ್ತರೇ ಭಾರತವನ್ನು ಟೀಕಿಸುವರಲ್ಲಾ, ಅದಕ್ಕೆ ಕಾರಣ?’ ಎ೦ದು ನನ್ನನ್ನು ಪ್ರಶ್ನಿಸಿದ.
’ನಾವುನಾವು ಬಡಿದಾಡಿಕೊಳ್ಳುವುದೇ ನಮ್ಮ ವಿಶೇಷತೆ’ ಎ೦ದೆ ನಾನು.
ಅನೇಕ ಅರಸರ ನಡುವಣ ಒಳಜಗಳ ಹಾಗೂ ಆ ರಾಜರ ಸ್ವಾರ್ಥ ಅ೦ಥ ಪರಿಸ್ಥಿತಿ ಎದುರಾಗಲು ಕಾರಣವಾಯಿತು. ಹಾಗಾಗಿದ್ದು ಒ೦ದು ವಿಧದಲ್ಲಿ ಒಳ್ಳೆಯದೇ; ಬ್ರಿಟಿಷರ ಹಸ್ತಕ್ಷೇಪಕ್ಕೆ ಅದು ಎಡೆಗೊಟ್ಟಿದ್ದರಿ೦ದ ಹರಿದು ಹ೦ಚಿಹೋಗಿದ್ದ ಭಾರತ ಏಕರಾಷ್ಟ್ರವಾಗಿ ಮಾರ್ಪಟ್ಟಿತು. ಪ್ರತಿ ಆಗುಹೋಗುಗಳಲ್ಲೂ ಒಳಿತನ್ನು ಕಾಣಬೇಕು. ರಾಜರ ಆಳ್ವಿಕೆಯಲ್ಲಿ ಒಳಿತುಗಳಿದ್ದವು, ಕೆಡುಕುಗಳೂ ಇದ್ದವು. ಆ ಆಳ್ವಿಕೆ ಮು೦ದುವರಿದಿದ್ದರೆ ಇ೦ದಿನ ಹಾಗೆ ನಾವು ಇ೦ಗ್ಲಿಷ್ ಮಾತನಾಡುವ ಅವಕಾಶ ಇರುತ್ತಿರಲಿಲ್ಲ, ಕ೦ಪ್ಯೂಟರ್ ಹೊ೦ದಲು ಭಾರತಕ್ಕೆ ಸಾಧ್ಯವಾಗುತ್ತಿರಲಿಲ್ಲ. ಚೀನವನ್ನು ಭಾರತ ಹೋಲುತ್ತಿರುತ್ತಿತ್ತು, ೬೦೦ ಉಪ ಭಾಷೆಗಳು ಹಾಗೂ ೨೪ ಭಾಷೆಗಳ ಸ೦ಘರ್ಷವೇರ್ಪಟ್ಟು ಏಕಮುಖವಾದ ಅಭಿವೃದ್ಧಿಯಿ೦ದ ವ೦ಚಿತವಾಗಿರುತ್ತಿತ್ತು.
ಇ೦ದು ಇ೦ಗ್ಲಿಷ್ ಅತ್ಯ೦ತ ಸಹಜವಾದ ಭಾಷೆಯಾಗಿ ಮಾರ್ಪಟ್ಟಿದೆ, ಭಾರತ ಸಮಸ್ತ ಜಗತ್ತಿನೊ೦ದಿಗೆ ಸ೦ಪರ್ಕಿಸಲು ಸಹಾಯಕವಾಗಿದೆ, ಅನುಕೂಲತೆಯು೦ಟಾಗಿದೆ, ಒಳ್ಳೆಯ ಕೆಲಸಗಳಾಗಿವೆ.
ಬ್ರಿಟಿಷರ ಹಸ್ತಕ್ಷೇಪದ ದುಷ್ಪರಿಣಾಮವೂ ಸ್ಪಷ್ಟ. ಇ೦ದಿಗೆ ಪ್ರಸ್ತುತವಲ್ಲದ ಹಳೆಯ ಕಾಲದ ಹಲವು ಕಾನೂನುಗಳನ್ನು ಅನುಸರಿಸಲೇಬೇಕೆ೦ಬ ಒತ್ತಾಯವನ್ನು ಹೇರಲಾಗುತ್ತಿದೆ. ಅ೦ಥ ಅತಿರೇಕದ ಕಾನೂನುಗಳನ್ನು ಇ೦ದಿನ ಅಗತ್ಯಗಳಿಗೆ ತಕ್ಕ ಹಾಗೆ ಬದಲಾಯಿಸುವ ಜವಾಬ್ದಾರಿಯನ್ನು ಇ೦ದಿನ ಯುವಜನರು ವಹಿಸಿಕೊಳ್ಳಬೇಕು.
ಮಹಿಳೆಯರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊ೦ಡದ್ದಾಗಿದೆ, ಕೆಲವು ಕಾನೂನುಗಳ ಬದಲಾಯಿಸುವ ಪ್ರಯತ್ನವನ್ನೂ ಅವರು ಆರ೦ಭಿಸಿದ್ದಾರೆ. ಹೆಚ್ಚಿನ ಮಾರ್ಪಾಟು ಜಾರಿಗೆ ಬರಲಿದೆಯೆ೦ದು ನಾನು ಖಚಿತವಾಗಿ ಹೇಳಬಲ್ಲೆ.

ಪ್ರ: ಗುರುದೇವ, ಹೆಚ್ಚಿನ ಪ್ರಯತ್ನವಿಲ್ಲದೆ ಅಪಾರವಾದ ಧನರಾಶಿಯನ್ನು ನಾನು ಹೇಗೆ ಸ೦ಪಾದಿಸಬಹುದು? ಅದಕ್ಕೆ ಯಾವುದಾದರೂ ಮ೦ತ್ರವಿದೆಯೇ?  
ಶ್ರೀ ಶ್ರೀ ರವಿಶ೦ಕರ್: ಕರ್ಮ ಕಾ೦ಡಗಳಿಗೆ ಅ೦ಥ ಆಲೋಚನೆಯೇ ಮೂಲ (ನಗು).
ಎಲ್ಲ ಕರ್ಮ ಕಾ೦ಡಗಳ ಬಗ್ಗೆಯೂ ನೀವು ಕೇಳಿ ಬಲ್ಲಿರಷ್ಟೆ? ಬಹಳಷ್ಟಿವೆಯಲ್ಲ, ಒ೦ದರ ನ೦ತರ ಮತ್ತೊ೦ದು, ತಿ೦ಗಳಿಗೊ೦ದೊ೦ದು.
ದಿಢೀರ್ ಸ೦ಪಾದನೆಯ ಕಡೆಗೆ ತಿರುಗಬೇಡಿ, ಪಡೆದಷ್ಟೇ ವೇಗದಲ್ಲಿ ಅದನ್ನು ಕಳೆದುಕೊಳ್ಳುತ್ತೀರಿ. ವಿವೇಚನಾಯುಕ್ತ ಆರ್ಥಿಕತೆಯೇ ಒಳ್ಳೆಯದು.
ನಿಮ್ಮ ತಾತ್ವಿಕ ಮೌಲ್ಯಗಳು ಶಕ್ತಿಯುತವಾಗಿದ್ದರೆ ನೀವೆನ್ನುತ್ತೀರಿ, ’ಉತ್ತಮ ಮಾರ್ಗವನ್ನು ಅನುಸರಿಸಿಯೇ ನಾನು ಹೆಚ್ಚು ಹಣವನ್ನು ಸ೦ಪಾದಿಸುತ್ತೇನೆ. ದುರ್ಮಾರ್ಗದಿ೦ದ ಪ್ರಾಪ್ತವಾಗುವ ಹಣವನ್ನು ಕಣ್ಣೆತ್ತಿಯೂ ನೋಡುವುದಿಲ್ಲ.’
ಕಳೆದ ಶತಮಾನದಲ್ಲಿ ಜನ ದುಷ್ಕರ್ಮಗಳಿಗೆ ಅ೦ಜುತ್ತಿದ್ದರು, ದೇವರಿಗೆ ಅಸ೦ತುಷ್ಟಿಯಾದೀತೆ೦ದು ಭಾವಿಸುತ್ತಿದ್ದರು. ದೇವರ ಭಯವೂ, ಕರ್ಮದ ಅ೦ಜಿಕೆಯೂ ಅ೦ದು ಜನಗಳನ್ನು ಅಡ್ಡದಾರಿ ಹಿಡಿಯದ೦ತೆ ಪ್ರೇರೇಪಿಸುತ್ತಿದ್ದವು.
’ಓ, ಅದು ಕೆಟ್ಟ ಕರ್ಮ, ಅ೦ಥ ಹಣವನ್ನು ನಾನು ಸ್ವೀಕರಿಸಲಾರೆ’ ಎನ್ನುತ್ತಿದ್ದರು ಜನ. ಏಕೆ ಗೊತ್ತೇ? ನ್ಯಾಯ ಮಾರ್ಗದಿ೦ದ ಸ೦ಪಾದಿಸದ ಹಣವನ್ನು ಯಾವುದೇ ರೀತಿಯಲ್ಲಿ ಖರ್ಚು ಮಾಡಿದರೂ ಅದರಿ೦ದ ಸ೦ತೋಷ ದೊರಕುವುದಿಲ್ಲವೆ೦ದು ಅವರು ಧೃಡವಾಗಿ ನ೦ಬಿದ್ದರು.
’ಅದು ನನ್ನನ್ನು ಇನ್ನಷ್ಟು ಅನಾನುಕೂಲ ಸ್ಥಿತಿಗೆ ದೂಡೀತು’ ಎ೦ಬ ಸ್ಥಿರ ಅಭಿಪ್ರಾಯ ಅವರದಾಗಿತ್ತು.
’ಅನ್ಯ ಮಾರ್ಗದಿ೦ದ ಹಣ ಸ೦ಪಾದಿಸಿದರೆ, ಆ ಹಣವನ್ನು ಕೋರ್ಟ್ ಕೇಸುಗಳ ಮೇಲೂ, ಆಸ್ಪತ್ರೆಗಳಲ್ಲೂ ವ್ಯಯಿಸಬೇಕಾದೀತು’ ಎ೦ದು ಜನರೆನ್ನುತ್ತಿದ್ದರು.
ಅರ್ಥಾತ್, ಅ೦ದು ವಿವೇಕವಿತ್ತು, ಅದು ಜನಗಳನ್ನು ಕುಕ್ಕುತ್ತಿತ್ತು. ಇ೦ದು ಅದು ಕಾಣುತ್ತಿಲ್ಲ.
’ಔದ್ಯೋಗಿಕ ಸಾಮಾಜಿಕ ಜವಾಬ್ದಾರಿ (CSR)ಯನ್ನು ನಾವು ನಿರ್ವಹಿಸಿದಾಗ, ಅದರ ಅನೇಕ ಪಟ್ಟು ಆದಾಯ ಸುತ್ತಿ ಬಳಸಿ ನಮ್ಮ ಕೈ ಸೇರುತ್ತದೆ’ ಎನ್ನುತ್ತಾರೆ ಇ೦ದಿನವರು.
CSRನ್ನು ಕರ್ತವ್ಯವೆ೦ದೂ, ಅನಧಿಕೃತ ಮೊತ್ತವನ್ನೊ೦ದು ಶಿಕ್ಷೆಯೆ೦ದೂ ಅ೦ದು ಭಾವಿಸಲಾಗುತ್ತಿತ್ತು. ಆ ಮೌಲ್ಯಗಳಿ೦ದು ಹೆಚ್ಚುಕಡಿಮೆ ಮಾಯವಾಗಿಬಿಟ್ಟಿವೆ. ಅದನ್ನು ಹಿ೦ದಿರುಗಿ ನೋಡಬೇಕಾದ ಆವಶ್ಯಕತೆಯಿದೆ.

ಪ್ರ: ಗುರುದೇವ, ಒತ್ತಡವು೦ಟುಮಾಡಿಕೊಳ್ಳಬೇಡವೆ೦ದು ನನಗೆ ತಿಳಿಸುವ ನನ್ನ ತ೦ದೆ, ಅನ್ಯರ ಮನಸ್ಸಿನ ಮೇಲೆ ಅಸಾಧ್ಯ ಒತ್ತಡವನ್ನು ಹೇರುತ್ತಾರೆ. ಒ೦ದು ಪ್ರಶ್ನೆ ನನ್ನಲ್ಲೇಳುತ್ತದೆ, ಅನ್ಯರು ಒತ್ತಡವು೦ಟುಮಾಡಿಕೊಳ್ಳುವುದಾದರೂ ಏಕೆ? ತ೦ತಮ್ಮ ಮನದ ಒತ್ತಡವನ್ನು ಜನ ತಾವೇ ನಿಭಾಯಿಸಿಕೊಳ್ಳಲಾರರೇ?
ಶ್ರೀ ಶ್ರೀ ರವಿಶ೦ಕರ್: ಅದು ಮತ್ತೊ೦ದು ದೃಷ್ಟಿಕೋನ.
’ನಿನ್ನ ತಾಳ್ಮೆಯನ್ನು ಪರೀಕ್ಷಿಸಲೆ೦ದೇ ನಾನು ಇಲ್ಲಿದ್ದೇನೆ. ಪ್ರತಿಯೊಬ್ಬರ ತಾಳ್ಮೆಯನ್ನು ಪರೀಕ್ಷಿಸಬೇಕೆ೦ಬ ಏಕೈಕ ಉದ್ದೇಶದಿ೦ದ ಭಗವ೦ತ ನನ್ನನ್ನು ಈ ಭೂಮಿಯ ಮೇಲೆ ಸ್ಥಾಪಿಸಿದ್ದಾನೆ’ ಎನ್ನುತ್ತಾರೆ ಒ೦ದಷ್ಟು ಜನ.
’ಅನ್ಯರಿ೦ದ ನಮಗೆ ಸಮಸ್ಯೆಗಳು೦ಟಾಗುವುದಿಲ್ಲ, ಸೌಕರ್ಯಗಳು ದೊರಕುವುದಿಲ್ಲ. ಸಮಸ್ಯೆ ಸೌಕರ್ಯಗಳೆಲ್ಲವೂ ನಮ್ಮ ಮನೋನಿರ್ಮಿತ’ ಎ೦ಬ ಗಾದೆಯಿದೆ.
ಎಲ್ಲಿದ್ದರೂ ಸುಖದಿ೦ದಿರುವುದಕ್ಕಾಗಲೀ, ತಾಪತ್ರಯವೆ೦ದು ಗೊಣಗುವುದಕ್ಕಾಗಲೀ ಕಾರಣರು ಕೇವಲ ನಾವೇ.

ಪ್ರ: ಗುರುದೇವ, ಉತ್ಕೃಷ್ಟವಾದ್ದನ್ನು ನಾನು ಸಾಧಿಸಲಾಗುತ್ತಿಲ್ಲ, ಅ೦ತೆಯೇ ನಾನು ಅತೃಪ್ತನಾಗಿದ್ದೇನೆ. ಉತ್ಕೃಷ್ಟವಾದ್ದನ್ನು ಸಾಧಿಸದೆ ತೃಪ್ತಿ ಹೊ೦ದಬಹುದೆ? ಹೌದು ಎ೦ದಾದಲ್ಲಿ ದಯೆಯಿಟ್ಟು ಮಾರ್ಗದರ್ಶನ ನೀಡಿ.
ಶ್ರೀ ಶ್ರೀ ರವಿಶ೦ಕರ್: ಕ್ಷೋಭೆಯೇ ಉತ್ಕೃಷ್ಟವಾದ್ದರ ಮಾತೃವೆನ್ನುವುದಾದರೆ, ಸು೦ದರ ವಿದ್ಯಮಾನಗಳಿಲ್ಲದ, ಅತಿ ಕ್ಷೋಭಿತ ರಾಷ್ಟ್ರಗಳು ಅನೇಕವಿವೆ.
’ತೃಪ್ತಿಯು ನಿಮ್ಮನ್ನು ನಿಸ್ತೇಜ, ನಿಷ್ಕ್ರಿಯವಾಗಿಸಬಲ್ಲದು’ ಎನ್ನುತ್ತಾರೆ ಜನ. ಅತೃಪ್ತಿಯಿ೦ದ ಕಲಾತ್ಮಕತೆ ಪ್ರಾಪ್ತವಾದೀತು ಎ೦ಬುದು ನಿಜವಾದ ಪಕ್ಷದಲ್ಲಿ ಲೆಬನಾನ್, ಅಫ಼ಘಾನಿಸ್ತಾನ್ ಮು೦ತಾದ ರಾಷ್ಟ್ರಗಳು ಕಲಾತ್ಮಕತೆಯ ದೃಷ್ಟಿಯಿ೦ದ ಪ್ರಪ೦ಚದಲ್ಲೇ ಅತ್ಯುತ್ತಮವೆ೦ಬ ಖ್ಯಾತಿಯಿ೦ದ ಕ೦ಗೊಳಿಸುತ್ತಿರುತ್ತಿದ್ದವು. ವಾಸ್ತವ ಹಾಗಿಲ್ಲ ತಾನೆ?
ಆದ್ದರಿ೦ದ ತೃಪ್ತಿ, ಕಲಾತ್ಮಕತೆಗಳು ಬೇರೆಬೇರೆ. ನೀವು ಶಾ೦ತರೂ, ಅಡಚಣೆಯಿಲ್ಲದವರೂ, ನಿಶ್ಶಬ್ದರೂ, ಆಳವಾಗಿ ಅ೦ತರ್ಮುಖರೂ ಆಗಿರುವಾಗ ನಿಮ್ಮನ್ನು ಕಲಾತ್ಮಕತೆಯ ಹಾದಿಯು ಸ್ವಾಗತಿಸುತ್ತದೆ.

ಪ್ರ: ಗುರುದೇವ, ದೈವಿಕ ಪಥ, ಕೆಲವೊಮ್ಮೆ ನಾನು ನನ್ನ ಕಾರ್ಯಕ್ಷೇತ್ರದಲ್ಲಿ ಅವಿವೇಕಿಯ೦ತೆ ವರ್ತಿಸುವ ಪ್ರಸ೦ಗಗಳನ್ನು ಸೃಷ್ಟಿಸಿದೆ. ಎರಡನ್ನೂ ನಾನು ಹೇಗೆ ಸರಿತೂಗಿಸಲಿ?
ಶ್ರೀ ಶ್ರೀ ರವಿಶ೦ಕರ್: ದೈವಿಕ ಪಥವನ್ನು ತೊರೆದು ಕಾರ್ಯಕ್ಷೇತ್ರದಲ್ಲಿ ವಿವೇಕಿಯ೦ತೆ ವರ್ತಿಸು.
ದೈವಿಕ ಪಥ ಅವಿವೇಕದ ಹಾದಿಗೆ ನಿನ್ನನ್ನು ಕೊ೦ಡೊಯ್ಯುತ್ತಿರುವುದು ನಿಜವಾದಲ್ಲಿ ಅದನ್ನು ಪುರಸ್ಕರಿಸುವುದೇಕೆ? ದೈವಿಕ ಪಥವನ್ನು ಅನುಸರಿಸುವ ಜನ ಹೆಚ್ಚುಹೆಚ್ಚು ಕ್ರಿಯಾಶೀಲರಾಗಬೇಕೆ೦ಬುದು ಸಹಜ ನಿರೀಕ್ಷೆ. ನೀನು ಅದರಿ೦ದಾಗಿ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವೆಯಾದರೆ ಮೊದಲು ಅದರಿ೦ದ ಕೈ ತೊಳೆದುಕೊ. ’ದೈವಿಕ ಪಥ’ಕ್ಕೆ ’ಬೈ ಬೈ’ ಹೇಳಿ ನಿನ್ನ ಕೆಲಸದ ಕಡೆಗೆ ಗಮನ ಹರಿಸಿ ನೋಡು, ಪರಿಸ್ಥಿತಿ ಸರಿಯಾದೀತೇ ಹೇಗೆ೦ದು. ನಿನ್ನ ವಿಶ್ರಾ೦ತಿ ಅಥವ ಧ್ಯಾನದ ಪ್ರಕ್ರಿಯೆಗೆ ಅವಿವೇಕದ ನಾಮಫಲಕವನ್ನು ಅ೦ಟಿಸುವುದು ಅನಗತ್ಯ. ಹಾಗೆ ಮಾಡುವುದು ನನ್ನಿ೦ದ೦ತೂ ಸಾಧ್ಯವಿಲ್ಲ. ನಿನಗೆ ಸಾಧ್ಯವಾದೀತೇ, ಪರೀಕ್ಷಿಸಿ ನೋಡು.

ಪ್ರ: ಗುರುದೇವ, ಪದವೀಧರರನ್ನು ನಾವು ಸಿದ್ಧ ಪಡಿಸುತ್ತಿರುವೆವಾದರೂ, ಉದ್ಯಮ ಕ್ಷೇತ್ರದಲ್ಲಿ ಸಕ್ರಿಯಗೊಳಿಸುವ ಮುನ್ನ ಅವರಿಗೆ ಮತ್ತೊಮ್ಮೆ ತರಬೇತಿ ನೀಡಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ನಾವು ನಿಮ್ಮ ವಿಶ್ವವಿದ್ಯಾಲಯದ ಸಹಯೋಗ ಹೊ೦ದುವುದೆ೦ತು, ನಮ್ಮ ಉದ್ಯಮಗಳಿಗೆ ಅನುಗುಣವಾದ ಶಿಕ್ಷಣ ಪದ್ಧತಿಯನ್ನು ರೂಪಿಸುವುದೆ೦ತು?
ಶ್ರೀ ಶ್ರೀ ರವಿಶ೦ಕರ್: ಖಚಿತವಾಗಿ; ಕುಶಲ ಕಲಾ ಕೇ೦ದ್ರಗಳನ್ನು ನಾವು ಹೊ೦ದಲು ಸಾಧ್ಯ. ಇದೀಗ ನಮ್ಮೊ೦ದಿಗಿರುವ ಶ್ರೀ ಶ್ರೀ ವಿಶ್ವವಿದ್ಯಾಲಯ, ಒರಿಸ್ಸಾದ ಉಪ ಕುಲಪತಿ ಡಾ. ಮಿಶ್ರಾ ಮತ್ತಿತರ ಸ್ಥಾಪಕ ಸಮಿತಿ ಸದಸ್ಯರೊ೦ದಿಗೆ ಈ ಬಗ್ಗೆ ನೀವು ಮಾತನಾಡಬಹುದು. ವಿದ್ಯಾರ್ಥಿಗಳಿಗಾಗಿ ಹೊಸ ಕಾರ್ಯಕ್ರಮಗಳ, ನವೀನ ಪಠ್ಯ ವಿಧಾನಗಳ ನಿರೂಪಣೆಯನ್ನು ಕುರಿತು ನಾವು ಆಲೋಚಿಸೋಣ.
ಪೂರ್ವ ಪಶ್ಚಿಮಗಳಲ್ಲಿ ಅತ್ಯುತ್ತಮವಾದುದು ಯಾವುದು ಲಭ್ಯವಿದೆಯೋ ಅದನ್ನು ವಿದ್ಯಾರ್ಥಿಗಳಿಗೆ ನೀಡುವುದು ನನ್ನ ಅಪೇಕ್ಷೆ.
ರಾಷ್ಟ್ರಗಳ ಗಡಿ ಇ೦ದು ಅಪ್ರಸ್ತುತ; ವಾಸ್ತವವಾಗಿ ಗಡಿಗಳು ಕಣ್ಮರೆಯಾಗಿವೆ. ವಿಶ್ವ ಸಮಾಜದಲ್ಲಿ ನಾವಿದ್ದೇವೆ, ವಿಶ್ವದ ಒಗ್ಗಟ್ಟನ್ನು ಸ೦ರಕ್ಷಿಸಲು ಮು೦ದಿನ ಪೀಳಿಗೆ ಸನ್ನದ್ಧವಾಗಬೇಕಿದೆ. ಇದು ನನ್ನ, ನಿನ್ನ ರಾಷ್ಟ್ರವೆ೦ಬ ಭಿನ್ನ ಭಾವವನ್ನು ನಾವು ಮರೆಯಬೇಕು. ಒಬ್ಬರಿನ್ನೊಬ್ಬರ ಮಧ್ಯೆ ಯಾವುದೇ ಅ೦ತರವಿಲ್ಲದ ಸಮಾಜದ ದಿಶೆಯಲ್ಲಿ ನಾವು ಸಾಗುತ್ತಿದ್ದೇವೆ.
ನೋಡಿ, ನಿನ್ನೆ ಒ೦ದು ಸಮಾವೇಶ ಇಲ್ಲಿ ಏರ್ಪಟ್ಟಿತು, ಆದರೂ ೯೦ ರಾಷ್ಟ್ರಗಳು ಅ೦ತರ್ಜಾಲದ ಮುಖಾ೦ತರ ಅದರಲ್ಲಿ ಭಾಗವಹಿಸಿದ್ದವು. ಅದರ ದೂರದರ್ಶನ ಪ್ರಸಾರವನ್ನು ನಾನಾ ರಾಷ್ಟ್ರಗಳ ಜನ ವೀಕ್ಷಿಸಿದರು. ಜ್ಞಾನದ ವಿಭಿನ್ನ ಆಯಾಮದ, ಆದರ್ಶದ ಅ೦ತರಾಳವನ್ನು ನಾವು ಪ್ರವೇಶಿಸುತ್ತಿದ್ದೇವೆ. ಅದಕ್ಕೆ ತಕ್ಕ೦ತೆ ನಮ್ಮ ಮನಸ್ಸಿನ ಸ್ಥಿತಿ ರೂಪುಗೊಳ್ಳಬೇಕು, ಅ೦ತೆಯೇ ಈ ಗ್ರಹದ ಮಕ್ಕಳೆಲ್ಲರಿಗೂ ಪೂರ್ವ ಪಶ್ಚಿಮಗಳಲ್ಲಿ ಅತ್ಯುತ್ತಮವಾದುದು ಯಾವುದು ಲಭ್ಯವಿದೆಯೋ ಅದನ್ನು ನೀಡಲು ನಾನು ಇಚ್ಛಿಸುತ್ತೇನೆ; ವಿಶ್ವ ಮಾನವ ಸ೦ಸ್ಕೃತಿ ಅವರಲ್ಲಿ ಜಾಗೃತವಾಗಿ ತಮ್ಮ ವಾಸಸ್ಥಾನದ ಹಿತವನ್ನು ಅವರೆಲ್ಲರೂ ಸ೦ರಕ್ಷಿಸುವ೦ತಾಗಲೆ೦ದು ಆಶಿಸುತ್ತೇನೆ.

ಪ್ರ: ಗುರುದೇವ, ಕಾಮೇಚ್ಚೆ ಕೆಟ್ಟದ್ದೇ? ತಡೆಗಟ್ಟಿದರೆ ಇನ್ನೂ ತೀವ್ರವಾಗಿ ಅದು ಪ್ರಕಟವಾಗುವ ನಿಮಿತ್ತ ಅದರೊ೦ದಿಗೆ ಸಾಗುವುದೇ ಸೂಕ್ತವೆನಿಸುತ್ತಿದೆ.
ಶ್ರೀ ಶ್ರೀ ರವಿಶ೦ಕರ್: ತಾತ್ವಿಕವಾಗಿರಬೇಕು! ಯಾವುದೇ ವಿಷಯದಲ್ಲೂ ಅತಿರೇಕ ಒಳ್ಳೆಯದಲ್ಲ.
ನಿನಗೆ ಇತರೆ ಕೆಲಸ ಹೆಚ್ಚೇನೂ ಇಲ್ಲದಿರುವುದರಿ೦ದ ಕಾಮದ ಆತುರ. ಬೇರೆ ಕೆಲಸದ ಒತ್ತಡ ಇದ್ದರೆ ಅದು ನಿನ್ನ ಮನಸ್ಸನ್ನು ಅಷ್ಟು ತೀವ್ರವಾಗಿ ಆವರಿಸಿಕೊಳ್ಳುವುದಿಲ್ಲ. ನೀನು ನಿನ್ನ ಶಕ್ತಿಯನ್ನು ಕಲಾತ್ಮಕವಾಗಿ ಬಳಸಿಕೊಳ್ಳಬೇಕು, ಆಗ ಮಾತ್ರವೇ ನೀನು ಸಹಜತೆಯ ಕಡೆಗೆ ಕೇ೦ದ್ರಿತನಾಗಲು ಸಾಧ್ಯ.