ಶುಕ್ರವಾರ, ಫೆಬ್ರವರಿ 8, 2013

ಆಧ್ಯಾತ್ಮದೊಂದಿಗೆ ವ್ಯಾಪಾರದ ಸಂಬಂಧವೇನು?

ಫೆಬ್ರವರಿ ೮, ೨೦೧೩
ಬೆಂಗಳೂರು, ಭಾರತ

ವೇದಿಕೆಯ ಮೇಲೆ ಹಾಗೂ ಸಭಾಂಗಣದಲ್ಲಿ ಉಪಸ್ಥಿತರಿರುವ ನನ್ನ ಆತ್ಮೀಯರೇ,

ಇವತ್ತು ನಾವೆಲ್ಲರೂ ಇಲ್ಲಿ ಸೇರಿರುವುದು ಎರಡು ಪ್ರಮುಖ ಉಪಕರಣಗಳಿಂದ. ಒಂದು ಕತ್ತರಿ ಮತ್ತೊಂದು ಸೂಜಿ. ಇಲ್ಲದಿದ್ದರೆ ನಾವಿಂದು ತೊಟ್ಟಿರುವ ಉಡುಪುಗಳನ್ನು ತೊಡಲಾಗುತ್ತಿರಲಿಲ್ಲ.

ಒಂದು ವಸ್ತ್ರವನ್ನು ಕತ್ತರಿಸಿ, ಮತ್ತು ಅದನ್ನು ಹೊಲಿಯಬೇಕಾಗುತ್ತದೆ; ಹೀಗೆ ಎಲ್ಲ ಸೂಟುಗಳು, ಪೈಜಾಮ-ಕುರ್ತಾಗಳು ಮತ್ತು ನಾವು ತೊಟ್ಟಿರುವ ಎಲ್ಲ ಉಡುಪುಗಳೂ ಅಸ್ತಿತ್ವಕ್ಕೆ ಬಂದಿರುವವು. ಇದೇ ರೀತಿ, ವ್ಯಾಪಾರ ಮತ್ತು ಆಧ್ಯಾತ್ಮ -  ಒಂದು ಕತ್ತರಿಸುತ್ತದೆ ಮತ್ತೊಂದು ಜೋಡಿಸುತ್ತದೆ, ಇವೆರಡೂ ಅತ್ಯವಶ್ಯಕ.

ಒಂದು ಬಟ್ಟೆಯನ್ನು ಬರೀ ಕತ್ತರಿಸಿ, ಹೊಲಿಯದೇ ಇರಲಾಗದು. ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗೆಯೇ, ಬಟ್ಟೆಯನ್ನು ಕತ್ತರಿಸದೇ ಹೊಲಿಯಲು ಸಾಧ್ಯವಿಲ್ಲ.

ಕೆಲವೊಮ್ಮೆ ಜನರು ನಮ್ಮನ್ನು ಕೇಳುವರು, ‘ವ್ಯಾಪಾರಕ್ಕೂ ಆಧ್ಯಾತ್ಮಕ್ಕೂ ಸಂಬಂಧವೇನೆಂದು? ವ್ಯಾಪಾರವೆಂದರೆ ಆಸಕ್ತಿ, ಮತ್ತು ಆಧ್ಯಾತ್ಮವೆಂದರೆ ವಿರಕ್ತಿ. ಅವೆರಡೂ ಪರಸ್ಪರ ವಿರುದ್ಧಾರ್ಥಕವಾಗಿದೆ.

ವ್ಯಾಪಾರ ಹೇಳುತ್ತದೆ, ‘ಆಕ್ರಮಣಕಾರಿಯಾಗಿ ಮುನ್ನುಗ್ಗಿ ಗಳಿಸು’, ಆಧ್ಯಾತ್ಮವೆನ್ನುವುದು, ‘ನಿನ್ನ ಸರ್ವಸ್ವವನ್ನೂ ತ್ಯಜಿಸು.’
ಮೇಲ್ನೋಟಕ್ಕೆ ಇವೆರಡೂ ಪರಸ್ಪರ ವಿರುದ್ಧಾರ್ಥಕವಾಗಿದೆಯೆಂದು ಅನಿಸಿದರೂ, ನಾವು ಹೇಳುವೆವು, ಅವು ಪೂರಕವಾಗಿವೆಯೆಂದು; ನಿಮ್ಮ ಒಳ ಉಸಿರು ಮತ್ತು ಹೊರ ಉಸಿರಿನಂತೆ. ನೀವು ಉಸಿರು ತೆಗೆದುಕೊಂಡಾಗ, ಅದು ಆಸಕ್ತಿ; ಅದನ್ನು ಬಹಳ ಹೊತ್ತು ಹಿಡಿದಿಟ್ಟುಕೊಳ್ಳಲು ನಿಮ್ಮಿಂದಾಗುವುದಿಲ್ಲ. ಅದನ್ನು ಹೊರಗೆ ಬಿಡಲೇ ಬೇಕು, ಆ ಹೊರಗೆ ಬಿಡುವ ಉಸಿರೇ ವೈರಾಗ್ಯ.

ನಮಗೆ ತಿಳಿದಿರುವಂತೆ, ನಿಮಗೆ ವ್ಯಾಪಾರ ಮಾಡಲು ಐದು ಅಂಶಗಳ ಅವಶ್ಯಕತೆಯಿದೆ.

1. ಸೂಕ್ತ ಪರಿಸರ

ನಿಮಗೇನಾದರೂ ಕಾಶ್ಮೀರಕ್ಕೋ, ಅಫ್ಘಾನಿಸ್ತಾನಕ್ಕೋ ಅಥವಾ ಇರಾಕ್‍ಗೆ ಹೋಗಿ ವ್ಯಾಪಾರ ಮಾಡಲು ಹೇಳಿದರೆ, ನಿಮ್ಮ ಮೊದಲ ಉತ್ತರ ಇಲ್ಲ ಎಂದಾಗಿರುತ್ತದೆ.
ಉದಾಹರಣೆಗೆ, ಛತ್ತೀಸ್‍ಘಡ್ ತೆಗೆದುಕೊಳ್ಳಿ. ಯಾರೋ ನಿಮ್ಮನ್ನು, ‘ಬಸ್ತರ್‍ನಲ್ಲಿ ಒಂದು ಫ್ಯಾಕ್ಟರಿಯನ್ನು ಹಾಕಿ’ ಎಂದರೆ, ನೀವು ಸಾಧ್ಯವಿಲ್ಲವೆನ್ನುವಿರಿ. ಏಕೆಂದರೆ ಅಲ್ಲಿ ಶಾಂತಿಯಿಲ್ಲ.
ಶಾಂತಿಯಿಲ್ಲದಿದ್ದರೆ ಸಮೃದ್ಧಿಯಿಲ್ಲ ಮತ್ತು ಸಮೃದ್ಧಿಯಿಲ್ಲದಿದ್ದರೆ ಶಾಂತಿಯಿಲ್ಲ. ಶಾಂತಿ ಮತ್ತು ಸಮೃದ್ಧಿ ಒಂದಕ್ಕೊಂದು ಸಂಬಂಧಪಟ್ಟಿದೆ. ಸಮೃದ್ಧಿಯಿಂದ ಶಾಂತಿ ವ್ಯಾಪಿಸುತ್ತದೆ (ಯಾವಾಗಲೂ ಅಲ್ಲ), ಮತ್ತು ಶಾಂತಿಯಿಂದ ಸಮೃದ್ಧಿಯುಂಟಾಗುತ್ತದೆ.
ದೇಶದ 612 ಜಿಲ್ಲೆಗಳಲ್ಲಿ, 205 ಜಿಲ್ಲೆಗಳು ನಕ್ಸಲೈಟರಿಂದ ಬಾಧಿತಗೊಂಡಿವೆ ಹಾಗೂ ಈ ಜಿಲ್ಲೆಗಳು ಬಡತನದ ಬೇಗೆಯಲ್ಲಿವೆ. ಏಕೆ? ಶಾಂತಿಯಿಲ್ಲ. ಉಳಿದೆಲ್ಲ ಜಿಲ್ಲೆಗಳು ಸಮೃದ್ಧವಾಗಿವೆ.
ಮೊದಲಿಗೆ ಶಾಂತಿಯನ್ನು ತರಬೇಕು ನಂತರ ಸಮೃದ್ಧಿಯು ಅನುಸರಿಸುವುದು.

2. ವ್ಯಾಪಾರದಲ್ಲಿ ಆಸಕ್ತಿ

ಆಸಕ್ತಿ ಇರಲೇಬೇಕು; ಸವಾಲುಗಳನ್ನು ಎದುರಿಸುವ ಆಸಕ್ತಿ. ವ್ಯಾಪಾರವು ಸದಾ ಅಪಾಯವನ್ನು ತೆಗೆದುಕೊಳ್ಳುವುದಾಗಿರುತ್ತದೆ. ವ್ಯಾಪಾರ ಮಾಡಲು ಸವಾಲನ್ನು ಸ್ವೀಕರಿಸುವ ಸಾಮರ್ಥ್ಯವಿರಬೇಕು.

3. ಬಂಡವಾಳ ಮತ್ತಿತರ ಅಂಶಗಳು

ನಿಮಗೆ ಆಸಕ್ತಿಯಿದೆ ಆದರೆ ಸಲಕರಣೆಗಳೇ ಇಲ್ಲದಿದ್ದರೆ ಆಗ ನೀವು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.

4. ಕೌಶಲ್ಯ

ನಿಮ್ಮ ಬಳಿ ಎಲ್ಲ ಸಲಕರಣೆಗಳು ಇವೆ, ಸ್ಥಳವೂ ಸೂಕ್ತವಾಗಿದೆ ಆದರೆ ಕೌಶಲ್ಯವಿಲ್ಲದಿದ್ದರೆ, ನೀವು ಯಶಸ್ವಿಯಗುವುದಿಲ್ಲ.

5. ಯಾವುದೋ ಅಮೂರ್ತವಾದುದು, ಅದೃಷ್ಟವೆನ್ನುವರು.

ಕೇವಲ ಸ್ವಪರಿಶ್ರಮದಿಂದ ಸಮೃದ್ಧಿಯನ್ನು ಹೊಂದುವುದಾದರೆ, ಅನೇಕ ಜನರು ಪರಿಶ್ರಮಪಟ್ಟರೂ ಏಳಿಗೆಯಾಗುವುದಿಲ್ಲಏಕೆ?

ಬೆಂಗಳೂರಿನ ಕಮರ್ಷಿಯಲ್ ರಸ್ತೆಗೆ ಹೋದರೆ, ಅಲ್ಲಿ ಕೆಲವು ಅಂಗಡಿಗಳು ಬಹಳ ಏಳಿಗೆ ಹೊಂದಿದೆ, ಆದರೆ ಅವುಗಳ ಪಕ್ಕದಲ್ಲಿರುವ ಅಂಗಡಿಗಳು ನಷ್ಟ ಅನುಭವಿಸುತ್ತಿದೆ.

ನಮ್ಮೊಂದಿಗೆ ವಾಣಿಜ್ಯ ಮಂಡಳಿಯೂ ಸಹಮತಿಸುವುದು.

ಚಿಕ್ಕಪೇಟೆಯಲ್ಲೂ, ಒಂದು ಅಂಗಡಿಯು ಉತ್ತಮವಾಗಿ ವ್ಯಾಪಾರ ನಡೆಸುತ್ತಿದೆ ಮತ್ತು ಪಕ್ಕದ ಅಂಗಡಿಯು ದಿವಾಳಿಯಾಗುತ್ತಿದೆ.

ಒಂದು ಕಡೆ ಎಲ್ಲ ಆಭರಣಗಳ ಅಂಗಡಿ, ಒಂದು ಕಡೆ ಬಟ್ಟೆ ಅಂಗಡಿಗಳು, ಆದರೂ ಕೂಡ, ಒಂದೆಡೆ ವ್ಯಾಪಾರ ಉತ್ತಮವಾಗಿದೆ ಮತ್ತೊಂದೆಡೆ ನಷ್ಟವಾಗುತ್ತಿದೆ. ಇದು ಹೇಗೆ? ಯಾರಿಗೂ ಗೊತ್ತಿಲ್ಲ!

ಈ  ಅರಿವಿಲ್ಲದ ಕ್ಷೇತ್ರವೇ ಆಧ್ಯಾತ್ಮವೆಂಬುದು.

ನಾವು ನೋಡುವ ಇಡೀ ಲೌಕಿಕ ಜಗತ್ತು ಒಂದು ನಿರ್ದಿಷ್ಟವಾದ ಸ್ಪಂದನಾತ್ಮಕ ವಿಶ್ವದಿಂದ ನಡೆಯುತ್ತಿದೆ; ಅದು ನಾವು ನೋಡುವುದಕ್ಕಿಂತ ಬಹಳ ಸೂಕ್ಷ್ಮವಾಗಿದೆ. ಇಡೀ ವಿಶ್ವವು ಕಂಪನಗಳಿಂದ ಚಲಿಸುತ್ತಿದೆ.

ಎಷ್ಟೋ ಬಾರಿ ನೀವು ಯಾರನ್ನೋ ನೋಡಿದಾಗ ಅವರೊಂದಿಗೆ ಮಾತನಾಡುವ, ವ್ಯಾಪಾರ ಮಾಡುವ ಆಸೆಯಾಗುತ್ತದೆ; ಯಾರನ್ನೋ ನೋಡುತ್ತೀರ ಮತ್ತು ಕಾರಣವಿಲ್ಲದೇ ತಿರಸ್ಕಾರವುಂಟಾಗುತ್ತದೆ. ಅವರೊಂದಿಗೆ ವ್ಯಾಪಾರ ಮಾಡಲಿಚ್ಛಿಸುವುದಿಲ್ಲ. ಏಕೆ? ಇದಕ್ಕೆ ಕಾರಣ ನಿಮಗೇನೋ ಅನಿಸುತ್ತದೆ; ‘ನನಗೆ ಒಳ್ಳೆಯ ಸ್ಪಂದನೆ ಸಿಗುತ್ತಿಲ್ಲ’ ಎನ್ನುವಿರಿ.

ವಿಶ್ವವು  ಕಂಪನಗಳಿಂದ ನಡೆಯುತ್ತಿದೆ; ಸೂಕ್ಷ್ಮ ಜಗತ್ತಿನಿಂದ ನಡೆಯುತ್ತಿದೆ.

ಆದ್ದರಿಂದ, ಆಧ್ಯಾತ್ಮವು ಈ ಐದು ಅಂಶಗಳಿಗೆ ಸಂಬಂಧಿಸಿದೆ.

ಆಧ್ಯಾತ್ಮವು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ; ನಿಮ್ಮಲ್ಲಿರುವ ಕುಶಲತೆಯನ್ನು ಬೆಳಕಿಗೆ ತರುವುದು. ಸ್ವಲ್ಪ ಸಮಯದವರೆಗೆ ಶಾಂತತೆ ಹಾಗೂ ಮೌನ ನಿಮ್ಮ ಅಂತಃಸ್ಫುರಣೆಯನ್ನು ಜಾಗೃತಗೊಳಿಸಲು ಸಹಾಯಕವಾಗುವುದು.

ಬುದ್ಧಿವಂತಿಕೆ ಮತ್ತು ಅಂತಃಸ್ಫುರಣೆ -ಇವೆರಡೂ ಸಾಮರ್ಥ್ಯಗಳು ಆಧ್ಯಾತ್ಮದಿಂದ ಸಂಪನ್ನಗೊಳ್ಳುತ್ತವೆ.

ಪುನಃ, ಇಲ್ಲಿ ಆಧ್ಯಾತ್ಮವೆಂದರೆ ‘ಏನನ್ನೋ ಮಾಡುವುದಲ್ಲ’, ಬದಲಿಗೆ ‘ಶಾಂತ’ವಾಗಿರುವುದು. ಮನಸ್ಸನ್ನು ಶಾಂತವಾಗಲು ಬಿಡುವುದು; ಕೇಂದ್ರದಲ್ಲಿರುವುದು. ಆಂತರ್ಯದೊಳಗೆ ಆಳವಾಗಿ ಹೋಗುವುದು ಮತ್ತು ಜೀವನದ ಮೌಲ್ಯವನ್ನು ಸಂಪೂರ್ಣವಾಗಿ ಶ್ಲಾಘಿಸುವುದು; ಜೀವನವನ್ನು ಗೌರವಿಸುವುದು.

ಆಧ್ಯಾತ್ಮವು ಅಂತಃಸ್ಫುರಣೆಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತದೆ.

ನೋಡಿ, ನೀವು ಬಂಡವಾಳ ಹೂಡುವಾಗ, ಊಹಿಸುತ್ತೀರ, ಅಪಾಯವನ್ನು ತೆಗೆದುಕೊಳ್ಳುತ್ತೀರ. ಇಲ್ಲಿ ಅಂತಃಸ್ಫುರಣೆ ಮುಖ್ಯ. ಅಂತಃಸ್ಫುರಣೆಯೆಂದರೆ ಸೂಕ್ತ ಸಮಯದಲ್ಲಿ ಸೂಕ್ತ ಆಲೋಚನೆ, ಇದು ವ್ಯಾಪಾರದ ಯಶಸ್ಸಿಗೆ ಬಹಳ ಮುಖ್ಯವಾದ ಅಂಶ.

ನಿಮ್ಮ ಆಸಕ್ತಿಯನ್ನು ವಿರಕ್ತಿಯೊಂದಿಗೆ ಸರಿತೂಗಿಸಿದಾಗ ಅಂತಃಸ್ಫುರಣೆಯುಂಟಾಗುತ್ತದೆ; ನಿಮ್ಮ ಲಾಭವನ್ನು ಸೇವೆಯೊಂದಿಗೆ ಸರಿತೂಗಿಸಿದಾಗ; ಆಕ್ರಮಣಶೀಲತೆಯಿಂದ ವಸ್ತುಗಳನ್ನು ಪಡೆಯುವುದನ್ನು, ಸಮಾಜಕ್ಕೆ ಅನುಕಂಪದಿಂದ ಮರಳಿ ನೀಡುವುದರೊಂದಿಗೆ ಸರಿತೂಗಿಸಿದಾಗ ಅಂತಃಸ್ಫುರಣೆಯುಂಟಾಗುತ್ತದೆ.

ಆಕ್ರಮಣಶೀಲತೆಯೊಂದಿಗೆ ವ್ಯಾಪಾರ ನಡೆಸಲು ಉತ್ಸಾಹ ಇರಬಾರದೆಂದೇನಲ್ಲ, ಅಥವಾ ಬಹಳ ಶಾಂತ ಮತ್ತು ಮೃದು ಸ್ವಭಾವದವರಾಗಿರಬೇಕೆಂದಲ್ಲ.

ಮಾರಾಟಗಾರರಾಗಿ ನೀವು ಹೇಳುವಿರಿ, ‘ನನ್ನ ಉತ್ಪನ್ನ ಉತ್ತಮವಾಗಿದೆ ಆದರೆ ಇತರರ ವಸ್ತುಗಳೂ ಉತ್ತಮವಾಗಿವೆ’ ಆಗ ಅದು ಕೆಲಸ ಮಾಡುವುದಿಲ್ಲ.

ನೀವೆನ್ನಬಹುದು, ‘ನನ ಉತ್ಪನ್ನವೇ ಉತ್ತಮವಾದುದು’ ಆದರೆ ಅದೇ ವೇಳೆಗೆ ಇತರರನ್ನೂ ಅನುಕಂಪದಿಂದ ಕಾಣುವ, ನೈತಿಕತೆಯಿಂದ ಆದರಿಸುವುದೂ ಬಹಳ ಮುಖ್ಯ.

ಅಂತಃಸ್ಫುರಣೆ, ಬುದ್ಧಿವಂತಿಕೆಯ ತೀಕ್ಷಣತೆ, ಅರಿವು ಮತ್ತು ಸೂಕ್ಷ್ಮತೆ, ಅನುಕಂಪದೊಡನೆ ವೈರಾಗ್ಯ ಮತ್ತು ಆಸಕ್ತಿ ಇವೆಲ್ಲವೂ ಜೀವನವನ್ನು ಎಂಥ ಸಮಸ್ಥಿತಿಯಲ್ಲಿರಿಸುತ್ತದೆಯೆಂದರೆ, ವ್ಯಾಪಾರದಲ್ಲಿ ಲಾಭವಾಗಲಿ ನಷ್ಟವಾಗಲಿ, ನಮ್ಮ ಮುಗುಳ್ನಗೆಯನ್ನು ಸದಾ ಕಾದಿರಿಸುತ್ತದೆ. ಮುಗುಳ್ನಗೆಯೊಂದಿಗಿರುವುದೇ ಬಹಳ ಮುಖ್ಯ.

ನಿಮಗೆ ಏನೋ ನಷ್ಟವಾಗಿದ್ದರೆ, ಅದರೊಂದಿಗೆ ನಿಮ್ಮ ನಗೆಯನ್ನೂ ಏಕೆ ಕಳೆದುಕೊಳ್ಳುತ್ತೀರ?

ನೀವು ಷೇರ್ ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದ್ದರೆ, ನಿಮ್ಮ ಮುಗುಳ್ನಗೆಯನ್ನಾದಾರೂ ನಿಮ್ಮಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಅದು ಎರಡು ಪಟ್ಟು ನಷ್ಟವಾಗುತ್ತದೆ. ಮೂರನೆಯ ನಷ್ಟವೊಂದಾಗುವುದು, ಅದು ನಿಮ್ಮ ಆರೋಗ್ಯದ ಹಾನಿ.

ಸ್ವಹಿತಾಸಕ್ತಿ, ಪರಿಸರದ ಬಗ್ಗೆ ಹಾಗೂ ವ್ಯಾಪಾರದಲ್ಲಿ ನ್ಯಾಯಪರತೆಯ ಬಗ್ಗೆ ಕಾಳಜಿವಹಿಸುವುದು ಮುಖ್ಯ. ನಿಮ್ಮ ಕೆಳಗಿನವರು ನಿಮ್ಮನ್ನು ಮೋಸಗೊಳಿಸುವುದನ್ನು ಇಷ್ಟಪಡದ ಮೇಲೆ ನೀವೇಕೆ ಅವರನ್ನು ಮೋಸಗೊಳಿಸುವಿರಿ?

ನಿಮ್ಮ ಗ್ರಾಹಕರು ಅಥವಾ ಮಾರಾಟಗಾರರು ಮೋಸಗೊಳಿಸುವುದನ್ನು ಇಷ್ಟಪಡದ ಮೇಲೆ ನೀವೇಕೆ ಮೋಸಗೊಳಿಸುವಿರಿ?

ಇತರರು ನಿಮಗಿಷ್ಟವಾದುದನ್ನು  ಮಾಡಲಿಛ್ಛಿಸುವುದಿಲ್ಲವೆಂದ ಮೇಲೆ, ನೀವೂ ಸಹ ಅದನ್ನು ಇನ್ನೊಬ್ಬರಿಗೆ ಮಾಡಬಾರದು. ಈ ಮೂಲ ವಿಷಯವೇ ನೈತಿಕತೆಯ ನಿಯಮ. ‘ನನ್ನನ್ನು ಯಾರೂ ಮೋಸಗೊಳಿಸಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಯಾರಿಗೂ ಮೋಸ ಮಾಡುವುದಿಲ್ಲ.’

ಈಗ ನೀವು, ‘ನೂರು ಪ್ರತಿಶತ ಸತ್ಯಪರರಗಿದ್ದು ವ್ಯಾಪಾರ ಮಾಡುವುದು ಹೇಗೆ ?’ ಎಂದು ಕೇಳಿದರೆ, ಅದು ಸಾಧ್ಯವೆಂದು ನಾವು ಹೇಳುವೆವು. ಅಂತಹ ಅನೇಕ ಉದಾಹರಣೆಗಳನ್ನು ಇಲ್ಲಿ ಕುಳಿತಿರುವವರಲ್ಲಿ ಕಾಣಬಹುದು. ಈ ಸಮಾವೇಶವು ಅಂತಹ ಧ್ಯೇಯಗಳನ್ನು ಜನರು ರೂಢಿಸಿಕೊಂಡಿರುವುದನ್ನು ಬೆಳಕಿಗೆ ತರುವುದು.  ಅದು ವ್ಯಾಪಾರದಲ್ಲಿ ಹೇಗೆ ನ್ಯಾಯಪರತೆಯು ಸಾಧ್ಯವೆಂಬುದನ್ನು ಉದಾಹರಣೆಯ ಮೂಲಕ ತಿಳಿಸುತ್ತದೆ.

ಸತ್ಯ ಹರಿಶ್ಚಂದ್ರರಾಗಲು ನಿಮ್ಮನ್ನು ಹೇಳುತ್ತಿಲ್ಲ.

ನಮ್ಮ ಪ್ರಾಚೀನ ಗ್ರಂಥಗಳಲ್ಲಿ, ವ್ಯಾಪಾರಸ್ಥರಿಗೆ ಸುಳ್ಳು ಹೇಳುವುದಕ್ಕೆ ಕೆಲವು ಮಿತಿಯಿರುತ್ತದೆ.

ಹೇಗೆಂದರೆ, ಒಬ್ಬ ಸಾಧು ಸುಳ್ಳು ಹೇಳಲೇಬಾರದು. ರಾಜನಾದವನು ತನ್ನ ರಾಜ್ಯದ ಸುರಕ್ಷತೆ ಮತ್ತು ಭದ್ರತೆಗಾಗಿ ಒಂದು ಪ್ರತಿಶತ ಸುಳ್ಳು ಹೇಳಬಹುದು. ವೈದ್ಯನು ಶೇಕಡ ಎರಡರಷ್ಟು ಸುಳ್ಳು ಹೇಳಬಹುದು. ಒಬ್ಬ ವ್ಯಕ್ತಿಯು ಮರಣಿಸುತ್ತಿರುವನೆಂದು ತಿಳಿದಿದ್ದರೂ, ‘ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ’ ಎನ್ನಬಹುದು. ಆದರೆ ಒಬ್ಬ ವ್ಯಾಪಾರಸ್ಥನು, ಮೂರು ಪ್ರತಿಶತ ಸುಳ್ಳು ಹೇಳಬಹುದು, ಅದಕ್ಕಿಂತ ಹೆಚ್ಚಿಗೆ ಇಲ್ಲವೆಂದು ತಿಳಿಸಲಾಗಿದೆ.

ಶೇಕಡ ಮೂರರಷ್ಟೆಂದರೆ ಆಹಾರದಲ್ಲಿ ಉಪ್ಪಿದ್ದಂತೆ. ಉಪ್ಪಿನಲ್ಲಿ ಆಹಾರ ಸೇವಿಸಲು ಸಾಧ್ಯವಿಲ್ಲ, ಆದರೆ ಆಹಾರದಲ್ಲಿ ಸ್ವಲ್ಪ ಉಪ್ಪು ಪರವಾಗಿಲ್ಲ. ಇವತ್ತು ಪರಿಸ್ಥಿತಿ ಹೇಗಿದೆಯೆಂದರೆ ಆಹಾರದಲ್ಲಿ ಉಪ್ಪಿರುವ ಬದಲು ಉಪ್ಪಿನಲ್ಲಿ ಆಹಾರವಿದೆ!

ಬೀರಬಲ್ಲನ ಕತೆಯೊಂದಿದೆ, ಅದನ್ನು ನಿಮ್ಮಲ್ಲಿ ಅನೇಕರು ಕೇಳಿರಬಹುದು.

ಒಮ್ಮೆ ಅಕ್ಬರನು ಸುಳ್ಳು ಹೇಳುವವರ ತಲೆಯನ್ನು ಕಡಿಯಲಾಗುವುದೆಂಬ ಕಾನೂನೊಂದನ್ನು ಹೊರಡಿಸಿದನು. ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು. ಇದನ್ನು ಕೇಳಿ, ಇಡೀ ದಿಲ್ಲಿಯು ನಡುಗಿತು; ಇ೦ದು ನಡುಗುತ್ತಿರುವ ಹಾಗೆ. ದಿಲ್ಲಿಯ ಇತಿಹಾಸವೇ ಕಂಪಿಸುವುದಿರಬೇಕು.

ಚಾಂದನಿ ಚೌಕದಲ್ಲಿ ಎಲ್ಲ ವ್ಯಾಪಾರಸ್ಥರು ನೆರೆದಿದ್ದರು. ‘ನಾವೆಲ್ಲರೂ ಗಲ್ಲು ಶಿಕ್ಷೆಗೊಳಗಾಗಬೇಕಾಗುವುದು ಏಕೆಂದರೆ ನಾವು ಸದಾ ನಮ್ಮ ಉತ್ಪನ್ನವೇ ಉತ್ತಮವೆಂದು, ಹಾಗಿಲ್ಲವೆಂದು ತಿಳಿದಿದ್ದರೂ, ಹೇಳುತ್ತೇವೆ. ಈಗ ಈ ಕಾನೂನು ನಮಗೆ ಆತ್ಮಹತ್ಯೆಯಂತಾಗಿದೆ.’

ನಂತರ ಜ್ಯೋತಿಷಿಗಳ ಸರದಿ ಬಂತು. ಅವರು ಇನ್ನೂ ಹೆಚ್ಚು ಚಿಂತಿತರಾಗಿದ್ದರು, ಏಕೆಂದರೆ ಅವರು ಊಹಿಸಿ ಭವಿಷ್ಯ ನುಡಿಯುತ್ತಿದ್ದರು, ಏನಾದರು ಕೆಡುಕಾದರೆ ಅವರೇನು ಮಾಡಬಲ್ಲರು? ಆದ್ದರಿಂದ ಜ್ಯೋತಿಷಿಗಳು ಕಷ್ಟದಲ್ಲಿ ಸಿಲುಕಿದ್ದರು.

ಅರ್ಚಕರು ಕಷ್ಟದಲ್ಲಿದ್ದರು, ವೈದ್ಯರು ಕಷ್ಟದಲ್ಲಿದ್ದರು, ಎಲ್ಲರೂ ಚಿಂತಿತರಾದರು ಏಕೆಂದರೆ ಈ ಕಾನೂನು ಅಸಂಬದ್ಧವಾಗಿದೆ. ನಂತರ ಅವರು, ‘ಬೀರಬಲ್, ನೀನೇ ನಮಗೆ ಸಹಾಯ ಮಾಡಬಲ್ಲೆ’ ಎಂದು ಕೇಳಿಕೊಂಡರು.

ಆದ್ದರಿಂದ ಬೀರಬಲ್ ರಾಜನ ಅರಮನೆಗೆ ಹೋದನು. ಕಾವಲುಗಾರರು ಅವನನ್ನು ತಡೆದು, ‘ಎಲ್ಲಿಗೆ ಹೋಗುತ್ತಿರುವೆ?’ ಎಂದು ಕೇಳಿದರು.

ಅವನು, ‘ನಾನು ನೇಣುಗಂಬವೇರುತ್ತಿರುವೆ, ನನ್ನನ್ನು ನೇಣು ಹಾಕುವರು’ ಎಂದನು. ಅದು ಸುಳ್ಳಾಗಿತ್ತು, ಏಕೆಂದರೆ ಅರಮನೆಯಲ್ಲಿ ಬಹಳ ಪ್ರಿಯವಾದ ವ್ಯಕ್ತಿಯನ್ನೇಕೆ ರಾಜನು ಶೂಲಕ್ಕೇರಿಸುವನು?

ಆದ್ದರಿಂದ ಅವನನ್ನು ರಾಜನ ಸಮ್ಮುಖದಲ್ಲಿ ನಿಲ್ಲಿಸಿ ಅವನು ಸುಳ್ಳು ಹೇಳಿದನೆಂದು ಹೇಳಲಾಯಿತು. ಈಗ, ಅವನನ್ನು ಶೂಲಕ್ಕೇರಿಸಿದರೆ ಅವನು ಹೇಳಿದ್ದು ನಿಜವಾಗುತ್ತಿತ್ತು. ನಿರಪರಾಧಿಯನ್ನು ಶಿಕ್ಷಿಸುವುದರಿಂದ ರಾಜನಿಗೆ ಕಳಂಕ ಬರುವುದು. ಅವನನ್ನು ಶಿಕ್ಷಿಸದಿದ್ದರೆ, ಕಾನೂನು  ಅಪ್ರಚಲಿತವಾಗುತ್ತಿತ್ತು.

ರಾಜನು ಗೊಂದಲಕ್ಕೀಡಾದನು. ಎಲ್ಲ ಪಂಡಿತರನ್ನು, ಮಂತ್ರಿಗಳನ್ನು ಕರೆದು ಕೇಳಿದನು. ನಂತರ ಬೀರಬಲ್ ಹೇಳಿದನು, ‘ಇದೇ ಅದು! ನೀವು ಏನು ನುಡಿಯುವಿರೋ ಅದು ಸತ್ಯವಲ್ಲ, ಉದ್ದೇಶವೇ ಸತ್ಯ.’

ಆದ್ದರಿಂದ ವ್ಯಾಪಾರಸ್ಥರು ಸ್ವಲ್ಪ ಸುಳ್ಳು ಹೇಳಬಹುದು ಇಲ್ಲದಿದ್ದರೆ ಯಾರೂ ಮಾರಲು ಸಾಧ್ಯವಾಗುವುದಿಲ್ಲ. ಯಾವ ವ್ಯಾಪಾರವೂ ಉಳಿಯುವುದಿಲ್ಲ. ಇವೆಲ್ಲ ನೈತಿಕತೆಯ ನಿಯಮಾವಳಿಗಳು.

ಇತರರು ನಿಮಗೇನು ಮಾಡಬಾರದೋ, ಅದನ್ನು ನೀವು ಇತರರಿಗೆ ಮಾಡಬೇಡಿ.

ಪ್ರಪಂಚವು ಹೋಳುಗಳಲ್ಲಿಲ್ಲ. ಸಮಾಜವು ಬಿಗಿಯಾದ ಕಕ್ಷೆಗಳಲ್ಲಿಲ್ಲ, ಆಧ್ಯಾತ್ಮ ಮತ್ತು ನೈತಿಕತೆಯು ಮಾನವನ ಅವಿಭಾಜ್ಯ ಅಂಗ.

ಚಾರಿತ್ರ್ಯವನ್ನು ಬೆಳೆಸುವುದು ಆಧ್ಯಾತ್ಮ, ಯಾರಿಗೆ ತಾನೆ ಸಚ್ಚರಿತ್ರರು ತಮ್ಮ ಕೆಲಸದಲ್ಲಿ ಬೇಕಿಲ್ಲ? ವ್ಯಾಪಾರವೆಂದರೆ ಜನರು, ಅಲ್ಲವೇ? ಜನರೊಡನೆ ನಿಮ್ಮ ಕೆಲಸವಿರುವುದು ಮತ್ತು ನಿಮ್ಮಲ್ಲಿ ಕೆಲಸ ಮಾಡುವವರು ಸಂದರ್ಭಗಳಲ್ಲಿ ಪ್ರಾಮಾಣಿಕತೆ, ಸತ್ಯತೆ, ನೇರ ಸ್ವಭಾವ ಮತ್ತು ಕೌಶಲ್ಯದಿಂದ ನಿಭಾಯಿಸುವುದು ನಿಮಗೆ ಬೇಡವೇ?

ಪ್ರತಿಯೊಂದು ವ್ಯಾಪಾರ ಮತ್ತು ಸಂಸ್ಥೆಯಲ್ಲಿ ಕಠಿಣ ಸನ್ನಿವೇಶಗಳು ಬರುತ್ತವೆ. ಅದನ್ನು ನಿಭಾಯಿಸಲು ಕೌಶಲ್ಯ ಬೇಕು. ಇವೆಲ್ಲವೂ ನಮ್ಮ ಆಂತರ್ಯದ ಸ್ಥಾನದಿಂದ ಬರುತ್ತದೆ, ಅದನ್ನು ಆಧ್ಯಾತ್ಮದ ಸ್ಥಾನವೆನ್ನುವರು.

ಆದ್ದರಿಂದ ಆಧ್ಯಾತ್ಮ, ವ್ಯಾಪಾರ, ರಾಜಕೀಯ, ಸೇವಾ ಚಟುವಟಿಕೆಗಳು ಎಲ್ಲವೂ ಸಮಗ್ರ ಜೀವನವನ್ನು ರೂಪಿಸುತ್ತದೆ. ಇವುಗಳಲ್ಲಿ ಯಾವುದಾದರೊಂದು ಇಲ್ಲವಾದರೂ, ಆನಂದವಲ್ಲ, ಅವ್ಯವಸ್ಥೆಯುಂಟಾಗುವುದು.

ಭಾರತದಲ್ಲಿ ವ್ಯಾಪಾರೋದ್ಯಮವನ್ನು ಕೆಲವು ಕ್ಷೇತ್ರಗಳಲ್ಲಿ ಇನ್ನೂ ಬಳಸದೇ ಇದ್ದು, ಅವುಗಳನ್ನು ನಿಮ್ಮೆಲ್ಲರ ಗಮನಕ್ಕೆ ತರಲಿಚ್ಛಿಸುತ್ತೇನೆ. ಅವುಗಳಲ್ಲಿ ಒಂದು ಪ್ರವಾಸೋದ್ಯಮ. ಭಾರತದಲ್ಲಿ ಜನರು ಭೇಟಿ ನೀಡಲು ಬಯಸುವ ಅನೇಕ ಪ್ರವಾಸೀ ತಾಣಗಳಿವೆ, ಹಲವಾರು ಪ್ರಾಚೀನ ಸ್ಥಳಗಳಿವೆ. ಆದರೆ ಪ್ರವಾಸೋದ್ಯಮವನ್ನು ಹೆಚ್ಚು ಅಧ್ಯಯನ ಮಾಡಿಲ್ಲ.

ಮತ್ತೊಂದು ಕ್ಷೇತ್ರ, ಉಡುಪುಗಳು. ಇಲ್ಲಿ ಭಾರತದಲ್ಲಿ ಉಡುಪುಗಳು ಬಹಳ ವಿಶಿಷ್ಠವಾಗಿವೆ.

ಮೂರನೆಯದು ಆಹಾರದ ಉದ್ಯಮ. ಭಾರತದಲ್ಲಿ ಪ್ರವಾಸ ಮಾಡಿದರೆ, ಪ್ರತಿ ಮೈಲಿ ಅಥವಾ ಕಿಲೋಮೀಟರ್‍ಗಳಿಗೂ ವಿವಿಧ ಬಗೆಯ ತಿನಿಸುಗಳನ್ನು ನೋಡಬಹುದು.   ಒಮ್ಮೆ ಕುತೂಹಲದಿಂದ ನಾವು, ‘ಭಾರತದಲ್ಲಿ ಸಸ್ಯಾಹಾರ ಮೇಳವನ್ನು ಆಯೋಜಿಸೋಣ’ ಎಂದೆವು. ನಿಮಗೆ ಗೊತ್ತೇ, 5600 ಬಗೆಯ ಭಕ್ಷ್ಯಗಳನ್ನು ತಯಾರಿಸಿದ್ದರು. ಏಳು ಟನ್‍ಗಳಷ್ಟು ಬಗೆ ಬಗೆಯ ತಿನಿಸುಗಳನ್ನು ಸ್ವಯಂಸೇವಕರು ತಯಾರಿಸಿದ್ದರು.

ಅಹಮದಾಬಾದ್‍ನಲ್ಲಿ ಅನ್ನ ಬ್ರಹ್ಮ ಕಾರ್ಯಕ್ರಮವನ್ನು ಆಯೋಜಿಸಿದ್ದೆವು ಮತ್ತು ತಯಾರಿಸಿದ್ದ ಬಹಳಷ್ಟು ಭಕ್ಷ್ಯಗಳನ್ನು ಹಿಂದೆಂದೂ ಕೇಳಿರಲಿಲ್ಲ.

ನೀವು ತ್ರಿಪುರಾಗೆ ಹೋದರೆ, ಸಾಮಾನ್ಯ ಜನರಿಗೆ ತಿಳಿಯದ ಸುಮಾರು 40ರಿಂದ 50 ತರಹದ ಭಕ್ಷ್ಯಗಳಿರುವುದು. ಹಾಗೆಯೇ, ಕರ್ನಾಟಕದಲ್ಲೂ, ಕೆಲವು ವಿಶೇಷ ಭಕ್ಷ್ಯಗಳಿವೆ, ಒಬ್ಬಟ್ಟು, ಚಟ್ನಿಪುಡಿ, ಗೊಜ್ಜು, ವಿಳ್ಳೆಕಾಯಿ, ಜನರು ಇವುಗಳನ್ನು ಇಷ್ಟಪಡುವರು.

ಆಹಾರ ಉದ್ಯಮವನ್ನು ಸಾಧ್ಯವಾದಷ್ಟು ಉತ್ತಮವಾಗಿ ಪ್ರಚಾರಪಡಿಸಿಲ್ಲ.

ನಾಲ್ಕನೆಯ ಕ್ಷೇತ್ರ, ಆಭರಣಗಳು.

ನಂತರ 5000 ವರ್ಷಗಳಷ್ಟು ಪುರಾತನವಾದ ಆಯುರ್ವೇದ ವೈದ್ಯಶಾಸ್ತ್ರ; ಆಯುರ್ವೇದ ಮತ್ತು ಗಿಡಮೂಲಿಕೆಗಳು, ಶಿರೋಧಾರ ಮತ್ತು ಅಭ್ಯಂಗ ಮಾಲೀಶು ಇತ್ಯಾದಿಗಳು ಪ್ರವರ್ಧಮಾನವಾಗುತ್ತಿವೆ.

ಆಯುರ್ವೇದ ಸುವ್ಯವಸ್ಥಿತ ಶಾಸ್ತ್ರ. ಇದನ್ನು 21ನೇ ಶತಮಾನದ ವೈದ್ಯಶಾಸ್ತ್ರವೆನ್ನಬಹುದು. ಇದನ್ನು ಹಲವಾರು ಜನರು ಮೆಚ್ಚಿಕೊಂಡಿದ್ದು ವಿಶ್ವದಾದ್ಯಂತ ಸ್ಪಾಗಳಲ್ಲಿ ಬಹಳ ಯಶಸ್ವಿಯಾಗುತ್ತಿದೆ. ಆದರೆ ಇದನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಬೇಕು.

ನಂತರ, ಯೋಗ, ಆಧ್ಯಾತ್ಮ ಮತ್ತು ವೇದಾಂತದ ಜ್ಞಾನ.

ಏಳನೆಯದು ಮಾಹಿತಿ ಮತ್ತು ತಂತ್ರಜ್ಞಾನದ ಉದ್ಯಮ. ಭಾರತವು ಇವತ್ತು ಪ್ರಖ್ಯಾತಿಯಾಗಿರುವುದು ಇದರಿಂದ. ಮಾಹಿತಿ ಮತ್ತು ತಂತ್ರಜ್ಞಾನದಿಂದ ಪ್ರಾರಂಭವಾಗಿ, ಯೋಗ ಮತ್ತು ಧ್ಯಾನವೂ ಇಡೀ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಹೊಂದಿದೆ. ಯು.ಎಸ್. ದೇಶವೊಂದರಲ್ಲೇ, ಯೋಗ, 27 ಬಿಲಿಯನ್ ಡಾಲರ್ ಉದ್ಯಮವಾಗಿದೆಯೆಂದು ತಿಳಿಸಲಾಗಿದೆ.

ಕರ್ನಾಟಕದ ವಾಣಿಜ್ಯ ಮತ್ತು ಉದ್ಯಮ ಮಂಡಳಿಯು ಇವೆಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಬಹುದು. ಇವತ್ತು ರಷ್ಯಾ, ನೇಪಾಳ ಮತ್ತು ಇನ್ನೂ ಅನೇಕ ದೇಶಗಳಿಂದ ಆಗಮಿಸಿರುವ ವ್ಯಾಪಾರಸ್ಥರು ನಮ್ಮೊಂದಿಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕುಳಿತು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಹೇಗೆ ಸಮೃದ್ಧಿಯನ್ನು ತರಬಹುದೆಂದು ಸಮಾಲೋಚಿಸಿದರೆ ಒಳ್ಳೆಯದು, ನಮಗೆ ಮತ್ತು ನಿಮಗಷ್ಟೇ ಅಲ್ಲ, ಎಲ್ಲರಿಗೂ ಒಳಿತಾಗುವುದು.

ಈ ಕೆಲವು ಮಾತುಗಳೊಂದಿಗೆ, ನಾವು ನಿಮ್ಮೆಲ್ಲರನ್ನು ಮತ್ತೊಮ್ಮೆ ಅಭಿನಂದಿಸುತ್ತೇವೆ. ದೇವರು ನಿಮ್ಮೆಲ್ಲರನ್ನೂ ಹರಸಲಿ.