ಗುರುವಾರ, ಫೆಬ್ರವರಿ 7, 2013

ಅನುಸರಣೆಯಿರುವಲ್ಲಿ ಆನ೦ದವಿದೆ

೭ ಫೆಬ್ರುವರಿ ೨೦೧೩
ಬೆಂಗಳೂರು

ನಾವು ಏನನ್ನು ನೋಡುವೆವೋ ಅದು, ಏನಿರುವುದೋ ಅದರ ಕೇವಲ ಹತ್ತರಲ್ಲಿ ಒಂದು ಭಾಗದಷ್ಟು ಮಾತ್ರವಾಗಿದೆ.
ಸೂಕ್ಷ್ಮ ಸೃಷ್ಟಿಯು ಸ್ಥೂಲ ಸೃಷ್ಟಿಯನ್ನು ಆಳುತ್ತದೆ. ಸೂಕ್ಷ್ಮ ಸೃಷ್ಟಿಯು ಕೇವಲ ಕಂಪನಗಳಿಂದ ತುಂಬಿದೆ. ಸ್ಥೂಲವನ್ನು ಆಳುವುದು ಸೂಕ್ಷ್ಮವಾಗಿದೆ ಮತ್ತು ಎಲ್ಲಾ ಮಾಹಿತಿಯೂ ಸೂಕ್ಷ್ಮದಲ್ಲಿ ಹುದುಗಿದೆ.
ಇದು ಬಹಳ ಮೋಹಕವಾದುದು - ಆಕಾಶವು ಎಲ್ಲಾ ಮಾಹಿತಿ ಮತ್ತು ಚೈತನ್ಯವನ್ನು ಒಳಗೊಂಡಿದೆ.
ಸೂರ್ಯನು ಶಕ್ತಿಯ ಒಂದು ಮೂಲವೆಂದು ನಾವು ಹೇಳುತ್ತೇವೆ, ಆದರೆ ಸೂರ್ಯನ ಸುತ್ತಲಿರುವ ಆಕಾಶವು ಒಂದು ದಶಲಕ್ಷ ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ, ಮತ್ತು ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ.
ಮೂರು ರೀತಿಯ ಆಕಾಶಗಳಿವೆ:
೧. ಬಾಹ್ಯಾಕಾಶ
೨. ಆಲೋಚನೆಗಳು ಮತ್ತು ಭಾವನೆಗಳು ಸಾಗುವ ಮನಸ್ಸಿನ ಆಂತರಿಕ  ಆಕಾಶ ಮತ್ತು
೩. ಈ ಎರಡನ್ನು ಮೀರಿದ ಒಂದು ಆಕಾಶ; ನಿಶ್ಚಲವಾಗಿರುವ ಒಂದು ಆಕಾಶ.
ಆದುದರಿಂದ ನಿಮ್ಮೊಳಗೆ ಒಂದು ಶಕ್ತಿಯ ಮನೆಯಿದೆ. ನೀವೊಂದು ನಡೆದಾಡುವ ಶಕ್ತಿ ಮನೆಯಾಗಿರುವಿರಿ.

ಪ್ರಶ್ನೆ: ನನ್ನ ಅತ್ತೆಯೊಂದಿಗಿನ ನನ್ನ ಸಂಬಂಧವನ್ನು ಸುಧಾರಿಸಲು ದಯವಿಟ್ಟು ನನಗೆ ಕೆಲವು ಸಲಹೆಗಳನ್ನು ನೀಡಿ.
ಶ್ರೀ ಶ್ರೀ ರವಿ ಶಂಕರ್: ಕೇಳು, ನಿನ್ನ ತಾಯಿಗಾಗಿ ನಿನ್ನಲ್ಲೊಂದು ಬೇರೆಯ ಅಳತೆಗೋಲಿದೆ  ಮತ್ತು ನಿನ್ನ ಅತ್ತೆಗಾಗಿ ಬೇರೊಂದು ಅಳತೆಗೋಲಿದೆ. ಈಗ, ನೀನು ಯಾಕೆ ಹಾಗೆ ಮಾಡುವೆ?
ನಿನ್ನ ತಾಯಿಯು ನಿನಗೆ ಬೈಯುತ್ತಿದ್ದಾಗ, ಅದು ನಿನ್ನನ್ನು ನಿಜವಾಗಿ ತಟ್ಟಲಿಲ್ಲ. ನಿನ್ನ ತಾಯಿಯು ನಿನ್ನ ಮೇಲೆ ರೇಗಾಡುವಾಗ ಅಥವಾ ನಿನ್ನನ್ನು ಬೈಯುವಾಗ ನೀನು ದಪ್ಪ ಚರ್ಮದವಳಾಗುವೆ. ಆದರೆ ನಿನ್ನ ಅತ್ತೆಯು ನಿನ್ನನ್ನು ಬೈಯುವಾಗ, ಅದು ನಿನ್ನನ್ನು ಬಹಳ ಆಳವಾಗಿ ಅಲ್ಲಾಡಿಸುವುದು, ಅಲ್ಲವೇ?
ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಿದೆ? ಹೇಳಿ! ನಿಮ್ಮಲ್ಲಿ ಕೆಲವರಿಗೆ ಕೈಗಳನ್ನು ಮೇಲೆತ್ತಲು ನಾಚಿಕೆಯಾಗುತ್ತಿದೆ.
ನೋಡಿ, ನಾವು ಎರಡು ಮಾನದಂಡಗಳನ್ನು ಹೊಂದಿದ್ದೇವೆ, ಒಂದು ನಮ್ಮ ತಾಯಿಗೆ ಮತ್ತು ಒಂದು ನಮ್ಮ ಅತ್ತೆಗೆ. ನಿಮ್ಮ ತಾಯಿಯ ಕಡೆಗಿರುವ ಅದೇ ಮಾನದಂಡವನ್ನು ನೀವು ನಿಮ್ಮ ಅತ್ತೆಯ ಕಡೆಗೆ ಹೊಂದಿದ್ದರೆ, ಆಗ ಸಮಸ್ಯೆಯು ದೂರವಾಗುತ್ತದೆ.
ಎರಡನೆಯ ಸಲಹೆಯೆಂದರೆ, ಕೇವಲ ಅವಳೊಂದಿಗೆ ವಾದಿಸಬೇಡಿರಿ. ಅವಳನ್ನು ಪ್ರೀತಿಯಿಂದ ಗೆಲ್ಲಿರಿ. ಅವಳೇನೇ ಹೇಳಲಿ, ನೀವು ’ಹೌದು’ ಎಂದು ಹೇಳಿದರೆ, ನಿಮಗೇನಾಗುತ್ತದೆ?  ವಾದಗಳು ಮತ್ತು ಅಪಾರ್ಥಗಳು ಆಗುವುದು, ಎರಡೂ ಭಾಗದವರು ಜಗಳವಾಡಲು ಸಹಕರಿಸುವಾಗ. ಒಂದು ಭಾಗದವರು ಜಗಳವಾಡಲು ಸಹಕರಿಸದಿದ್ದರೆ, ಅಲ್ಲಿ ಯಾವುದೇ ವಾದಗಳಿರುವುದಿಲ್ಲ.
ನಿಮ್ಮ ಅತ್ತೆಯು, "ಇದು ಬಹಳ ಬಿಸಿಯಾಗಿದೆ" ಎಂದು ಹೇಳಿದರೆ, ನೀವು, "ಹೌದು ಅತ್ತೆ, ಅದು ಬಿಸಿಯಾಗಿದೆ" ಎಂದು ಹೇಳಿ.
ಅವರು, "ಹಗಲೆಂದರೆ ರಾತ್ರಿ ಮತ್ತು ರಾತ್ರಿಯೆಂದರೆ ಹಗಲು" ಎಂದು ಹೇಳಿದರೆ, "ಹೌದು ಅತ್ತೆ, ನೀವು ಹೇಳುವುದು ಸರಿ. ನಾನು ನೀವು ಹೇಳುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ" ಎಂದು ಹೇಳಿ.
ಸ್ವಲ್ಪ ಕಾಲ ಅವರನ್ನು ಅನುಸರಿಸಿಕೊಂಡಿರಿ ಮತ್ತು ನಂತರ ನೀವವರನ್ನು ಜಯಿಸಬಲ್ಲಿರಿ ಎಂಬುದು ನಿಮಗೆ ಕಂಡುಬರುತ್ತದೆ.
ಆದುದರಿಂದ, ಅವರನ್ನು ಪ್ರೀತಿ ಮತ್ತು ಒಪ್ಪಿಗೆಯೊಂದಿಗೆ ಜಯಿಸಿ.
ನೋಡಿ, ನೀವು ಒಪ್ಪುವಾಗ, ಯಾರಾದರೂ ನಿಮ್ಮೊಂದಿಗೆ ಜಗಳವಾಡಲು ಹೇಗೆ ಸಾಧ್ಯ? ಒಳಗಿನಿಂದ ಮೃದುವಾಗಿ. ಇದು ಕುಶಲತೆ.
ಆದುದರಿಂದ ನೀವು ಮೊದಲು ಇದನ್ನು ಪ್ರಯತ್ನಿಸಿ ಮತ್ತು ನಂತರ ನನಗೆ ಹೇಳಿ.
ಅತ್ತೆ ಮತ್ತು ಸೊಸೆಯ ನಡುವಿನ ಈ ಸಮಸ್ಯೆಯು ಒಂದು ಪ್ರಾಚೀನವಾದ, ಅನಂತವಾದ  ಸಮಸ್ಯೆಯೆಂದು ನಾನು ಹೇಳುತ್ತೇನೆ.
ಆಶ್ರಮದಲ್ಲಿ ಒಂದು ಸಾಮಾನ್ಯ ನಿಯಮವಿದೆ; ನೀವು ನಿಮ್ಮ ಸಮಸ್ಯೆಗಳನ್ನು ಇಲ್ಲಿಗೆ ತರಬಹುದು, ಆದರೆ ನೀವು ಅವುಗಳನ್ನು ನಿಮ್ಮೊಂದಿಗೆ ಹಿಂದೆ ಕೊಂಡೊಯ್ಯುವಂತಿಲ್ಲ.
ಆದುದರಿಂದ ಒಬ್ಬಳು ಮಹಿಳೆಯು ಎದ್ದು ನಿಂತು ಹೇಳಿದಳು, "ಹಾಗಾದರೆ ನಾನು ನನ್ನ ಅತ್ತೆಯನ್ನು ಇಲ್ಲಿ ಬಿಟ್ಟು ಹೋಗಬಹುದೇ?"
ನಾನಂದೆ, "ಮೊದಲು ನಾನು ನಿನ್ನ ಅತ್ತೆಯನ್ನು ಕೇಳುತ್ತೇನೆ, ಅವಳ ಸಮಸ್ಯೆಯೇನೆಂದು."
ಜನರನ್ನು ಮತ್ತು ವಸ್ತುಗಳನ್ನು ತೊಲಗಿಸುವುದು ಉತ್ತರವಲ್ಲ, ಆದರೆ ಅವುಗಳೊಂದಿಗೆ ಕುಶಲತೆಯಿಂದ ವ್ಯವಹರಿಸುವುದು ಉತ್ತರವಾಗಿದೆ, ಮತ್ತು ಮೌನವು ಎಲ್ಲಾ ಕುಶಲತೆಗಳ ತಾಯಿಯಾಗಿದೆ - ಗೊಣಗುಟ್ಟುವ ಈ ಮನಸ್ಸನ್ನು ಕೆಲವು ನಿಮಿಷಗಳ ಆಳವಾದ ಧ್ಯಾನದೊಂದಿಗೆ ಮೌನಗೊಳಿಸುವುದು. ಆಗ ಎಲ್ಲವೂ ಬದಲಾಗುವುದು ಎಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರಶ್ನೆ: ಗುರುದೇವ, ನನಗೆ, ವಿಷಯಗಳನ್ನು ತಿರುಚುವ, ಅನೈತಿಕತೆಯಿಂದ ಕೂಡಿದ ಮತ್ತು ಕೆಲಸ ಮಾಡಲು ಬಹಳ ಕಷ್ಟವಾಗುವಂತಹ ಒಬ್ಬರು ಮೇಲಾಧಿಕಾರಿಯಿದ್ದಾರೆ. ನಾನೊಬ್ಬ ನಿಷ್ಠಾವಂತ ನೌಕರ. ಆದರೆ ನನಗೆ ನನ್ನ ಮೇಲಾಧಿಕಾರಿಯೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಪುನಃ ನಾನು ನಿನಗೆ ಹೇಳುತ್ತಿದ್ದೇನೆ, ಇದೆಲ್ಲವೂ ಕಂಪನಗಳ ವಿಷಯ.
ನೀನು ಗಮನಿಸಿರುವೆಯಾ, ಯಾವುದೇ ಕಾರಣವಿಲ್ಲದೆಯೇ, ಕೆಲವು ಜನರ ಬಗ್ಗೆ ನಿನಗೆ ತಿರಸ್ಕಾರವುಂಟಾಗುತ್ತದೆ ಮತ್ತು ಯಾವುದೇ ಕಾರಣವಿಲ್ಲದೆಯೇ ಕೆಲವು ಜನರ ಕಡೆಗೆ ನಿನಗೆ ಸೆಳೆತವುಂಟಾಗುತ್ತದೆ. ಅದು ಮಾತನಾಡುವುದು ನಮ್ಮ ಕಂಪನಗಳಾಗಿವೆ, ಜನರ ಮನಸ್ಸುಗಳನ್ನು ಬದಲಾಯಿಸುವುದು ನಮ್ಮ ಕಂಪನಗಳಾಗಿವೆ. ಯೋಚನೆಗಳು ಮತ್ತು ಭಾವನೆಗಳು ಬದಲಾಗುವುದು ಕಂಪನಗಳ ಮೂಲಕವಾಗಿದೆ. ಆದುದರಿಂದ ನೀನು ಶಕ್ತಿಶಾಲಿಯಾಗಿರು.
ಹಾಗೆಯೇ, ಮೇಲಾಧಿಕಾರಿಯು ಕಠೋರವಾಗಿದ್ದಷ್ಟೂ ನೀವು ಹೆಚ್ಚು ಕುಶಲರಾಗಬಹುದು. ಅದು ನೀವು ಮೊದಲೆಂದೂ ನೋಡಿರದ ಕುಶಲತೆಗಳನ್ನು ನಿಮ್ಮಿಂದ ಹೊರತರುತ್ತದೆ.
ನೇರವಾಗಿರುವುದು ಬಹಳ ಸುಲಭ, ಆದರೆ ಕುಶಲತಾಪೂರ್ವಕವಾಗಿ ನೀವು ನಿಜವಾಗಿ ಹೇಳಬಯಸುವುದನ್ನು ಹೇಳಲು ಸಾಧ್ಯವಾದರೆ ಅದು ಹೆಚ್ಚು ಮೆಚ್ಚುವಂತಹದ್ದು. ಆದುದರಿಂದ ನೀವು ಆ ಕುಶಲತೆಗಳನ್ನು ಬೆಳೆಸಿಕೊಳ್ಳಬಹುದು.
ಮೌನವು, ಮಾತುಕತೆಯಲ್ಲಿ ಕುಶಲತೆಯನ್ನು ತರಬಲ್ಲದು.
ಕೋಪಗೊಳ್ಳುವ ಪ್ರತಿ ವ್ಯಕ್ತಿಯ ಬಳಿಯೂ ತಮ್ಮ ಕೋಪಕ್ಕೆ ಸ್ವಲ್ಪ ಸಮರ್ಥನೆ ಇರುತ್ತದೆ. ತಾವು ಸರಿಯೆಂದು ಅವರು ಯೋಚಿಸುತ್ತಾರೆ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ?
ಕೋಪದ ಹಿಂದೆ, ನ್ಯಾಯಕ್ಕಾಗಿ ಬೇಡಿಕೆ ಮತ್ತು ಅನ್ಯಾಯದ ಕಡೆಗೆ ಅಸಹನೆಯಿರುತ್ತದೆ. ಆದುದರಿಂದ ಕೋಪವು ಒಳ್ಳೆಯದು, ಅದು ಆವಶ್ಯಕವಾದುದು, ಆದರೆ ನೀವು ಎಚ್ಚೆತ್ತುಕೊಳ್ಳುವಂತೆ ಮಾಡಲು ಮಾತ್ರ. ಅದರ ನಂತರ ಕೋಪಕ್ಕೆ ಸೃಜನಶೀಲತೆಯ ಒಂದು ದಿಕ್ಕನ್ನು ನೀಡಬೇಕಾಗುತ್ತದೆ, ಇಲ್ಲವಾದರೆ ಅದೇ ಕೋಪವು ನಿಮ್ಮನ್ನು ಸುಟ್ಟುಹಾಕಬಲ್ಲದು.
ಮನೆಯಲ್ಲಿ ಒಂದು ಒಲೆಯಿರುವುದು ಒಳ್ಳೆಯದು. ಒಬ್ಬರ ಮನೆಯಲ್ಲಿ ಬೆಂಕಿಯಿರಬೇಕು, ಆದರೆ ಮನೆಗೆ ಬೆಂಕಿ ಹಿಡಿಯಬಾರದು.
ಕಳೆದ ಭಾನುವಾರ ನಾನು ದಿಲ್ಲಿಯಲ್ಲಿದ್ದೆ ಮತ್ತು ರಾಮ್ ಲೀಲಾ ಮೈದಾನದಲ್ಲಿ ಸುಮಾರು ೧೦೦,೦೦೦ ಯುವಜನರಿದ್ದರು. ನಾನಂದೆ, "ಕಡೆಗೂ ದೇಶದ ಎಲ್ಲಾ ಯುವಜನರು ಒಂದು ಅಪರಾಧದ ವಿರುದ್ಧ ಎದ್ದುನಿಂತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ದಿಲ್ಲಿಯ ಜನರಲ್ಲಿ ಬಹಳಷ್ಟು ಕ್ರೋಧವಿದೆ, ಆದರೆ ಈ ಕ್ರೋಧವು ಒಂದು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಬೇಕು."
ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಕ್ರೋಧವು ಆವಶ್ಯಕವಾಗಿದೆ, ಒಬ್ಬನು ಅನ್ಯಾಯದ ವಿರುದ್ಧ ಎದ್ದುನಿಲ್ಲಬೇಕು, ಆದರೆ ಆ ಕ್ರೋಧವನ್ನು ಕುಶಲತಾಪೂರ್ವಕವಾಗಿ ಪ್ರವಹಿಸಬೇಕು, ಇಲ್ಲವಾದರೆ ಅದು ಅವ್ಯವಸ್ಥೆಯನ್ನು ಸೃಷ್ಟಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಆತ್ಮಸಾಕ್ಷಾತ್ಕಾರದ ಸ್ಥಿತಿಯನ್ನು ಅನುಭವಿಸಲು ಗುರುವಿರುವುದು ಕಡ್ಡಾಯವೇ?
ಶ್ರೀ ಶ್ರೀ ರವಿ ಶಂಕರ್: ನೀನು ಈ ಪ್ರಶ್ನೆಯನ್ನು ಕೇಳುವುದು ಮತ್ತು ನಾನು ಅದಕ್ಕೆ ಉತ್ತರಿಸುವುದು ಆವಶ್ಯಕವೇ? ನೀನು ಪ್ರಶ್ನೆಯನ್ನು ಕೇಳಿರುವೆ, ಈಗ ನಾನು ಉತ್ತರಿಸಿದರೆ, ಆಗ ನಾವು ಸಿಕ್ಕಿಬೀಳುತ್ತೇವೆ! ತಿಳಿಯಿತೇ?
ನೀನೊಂದು ಪ್ರಶ್ನೆಯನ್ನು ಕೇಳಿದರೆ ಮತ್ತು ನನಗೆ ಅದರ ಉತ್ತರ ತಿಳಿದಿದೆಯೆಂದು ನೀನು ಯೋಚಿಸಿದರೆ, ಆಗ ನಾನು ಅದಾಗಲೇ ಒಬ್ಬ ಗುರುವಾದೆನು ಮತ್ತು ನೀನು ಅದಾಗಲೇ ಒಬ್ಬ ಶಿಷ್ಯನಾದೆ.
ಕೆಲವು ಜನರನ್ನುತ್ತಾರೆ, "ನಾನೊಬ್ಬ ಗುರುವಲ್ಲ" ಮತ್ತು ಇತರ ಕೆಲವರು ಹೇಳುತ್ತಾರೆ, "ನಾನೊಬ್ಬ ವಿದ್ಯಾರ್ಥಿಯಲ್ಲ". ಇದು, "ನಾನೊಬ್ಬ ವೈದ್ಯನಲ್ಲ, ಆದರೆ ಹೇಗಿದ್ದರೂ ನಾನು ನಿನಗೆ ಸ್ವಲ್ಪ ಔಷಧಿಯನ್ನು ನೀಡುವೆ" ಎಂದು ಹೇಳುವಂತೆ. ಅಥವಾ ಒಬ್ಬರು, "ನಾನೊಬ್ಬ ರೋಗಿಯಲ್ಲ, ಆದರೆ ನನಗೆ ಸ್ವಲ್ಪ ಔಷಧಿ ಬೇಕು" ಎಂದು ಹೇಳುವಂತೆ. ಈ ಎರಡೂ ವ್ಯಾಖ್ಯಾನಗಳಿಗೆ ಯಾವುದೇ ಅರ್ಥವಿಲ್ಲ.
ನೋಡಿ, ಸ್ವಲ್ಪ ಮಾರ್ಗದರ್ಶನದ ಅಗತ್ಯವಿದೆ. ಗುರುವೊಬ್ಬ ವ್ಯಕ್ತಿಯಲ್ಲ, ಅದು ಜ್ಞಾನ, ಅದೊಂದು ಪ್ರಕಾಶ, ಅದೊಂದು ಶಕ್ತಿ, ಅದು ಪ್ರೇಮ; ಇದೆಲ್ಲವೂ ಸೇರಿದುದು. ಆಧ್ಯಾತ್ಮದಂತಹ ಬಹಳ ಸೂಕ್ಷ್ಮವಾದುದೊಂದಕ್ಕೆ ಸ್ವಲ್ಪ ಮಾರ್ಗದರ್ಶನದ ಅಗತ್ಯವಿದೆ.
ನಿಮ್ಮ ಮನಸ್ಸು ಬಹಳ ಸ್ಥಿರವಾಗಿರುವಾಗ, ನಿಮಗೆ ಎಲ್ಲಾ ಮಾರ್ಗದರ್ಶನವನ್ನು ಪಡೆಯಲು ಸಾಧ್ಯವಿದೆ. ಆದರೆ ಮನಸ್ಸು ಸ್ಥಿರವಾಗಿಲ್ಲದಿರುವಾಗ, ಯಾರ ಮನಸ್ಸು ಸಂಪೂರ್ಣವಾಗಿ ಸ್ಥಿರವಾಗಿರುವುದೋ ಅವರಿಂದ ಮಾರ್ಗದರ್ಶನವನ್ನು ಪಡೆಯುವುದು ಒಳ್ಳೆಯದು.

ಪ್ರಶ್ನೆ: ಗುರುದೇವ, ಕೃಷ್ಣ ಪರಮಾತ್ಮನಲ್ಲಿ ೧೬ ಗುಣಗಳಿವೆಯೆಂಬುದಾಗಿ ನೀವು ಉಲ್ಲೇಖಿಸಿರುವಿರಿ. ನನ್ನಲ್ಲಿ ಕೂಡಾ ಈ ಎಲ್ಲಾ ೧೬ ಗುಣಗಳು ಎಲ್ಲೋ ಇವೆಯೇ? ಹೌದಾದರೆ, ಅವುಗಳನ್ನು ನಾನು ಹೊರತರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹೌದು, ಪ್ರತಿಯೊಬ್ಬರಲ್ಲೂ ಈ ಎಲ್ಲಾ ೧೬ ಗುಣಗಳು ಇವೆ ಮತ್ತು ನೀವು ಹೆಚ್ಚು ಕೇಂದ್ರಿತರಾದಷ್ಟೂ, ನೀವು ಹೆಚ್ಚು ಅನುರಾಗ ಹಾಗೂ ಸಹಾನುಭೂತಿ ಹೊಂದಿದಷ್ಟೂ, ಅವುಗಳು ಹೆಚ್ಚು ಪ್ರಕಟವಾಗುತ್ತವೆ.

ಪ್ರಶ್ನೆ: ಗುರುದೇವ, ಇವತ್ತು ಭಾರತದಲ್ಲಿ ಎರಡು ಭಾಗಗಳಿವೆ, ಒಂದು ಗ್ರಾಮೀಣ ಭಾರತ ಮತ್ತು ಇನ್ನೊಂದು ನಗರ ಭಾರತ. ಇವುಗಳೆರಡರ ನಡುವೆ ಒಂದು ಸಂತುಲನವನ್ನು ತರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಗ್ರಾಮೀಣ ಭಾರತಕ್ಕೆ ತನ್ನದೇ ಆದ ಅನನ್ಯ ಗುಣಗಳಿವೆ, ಅದನ್ನು ಸಂರಕ್ಷಿಸಬೇಕಾಗಿದೆ ಮತ್ತು ಜನರ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಸಾಧಾರಣವಾಗಿ ಗ್ರಾಮೀಣ ಜನರ ಆತ್ಮಗೌರವವು ಕಡಿಮೆಯಾಗುತ್ತದೆ ಮತ್ತು ಅವರು ನಗರದ ಯುವಕರು ಏನು ಮಾಡುವರೋ ಅದನ್ನು ಅನುಕರಿಸಲು ಬಯಸುತ್ತಾರೆ, ಅದರ ಅಗತ್ಯವೇ ಇಲ್ಲ.
ನೀವವರಿಗೆ ತಮ್ಮ ಘನತೆ ಗೌರವಗಳನ್ನು ನೀಡಬೇಕು ಮತ್ತು ಅವರು ವಸ್ತ್ರ ಧರಿಸುವ ರೀತಿ ಹಾಗೂ ಅವರು ಸೇವಿಸುವ ಆಹಾರವೆಲ್ಲವೂ ಸರಿಯೆಂದು ಅವರಿಗೆ ಹೇಳಬೇಕು. ಅವರು ತಾವು ಬಯಸುವ ಯಾವುದೇ ಆರೋಗ್ಯಕರ ಅಭ್ಯಾಸಗಳನ್ನು ಬೇಕಾದರೂ ಅನುಸರಿಸಬಹುದು.
ನಾನು ಜಾರ್ಖಂಡ್ ಮತ್ತು ಚತ್ತೀಸ್ ಗಢದಲ್ಲಿ ಕೆಲವು ಬುಡಕಟ್ಟಿನ ಪ್ರದೇಶಗಳಿಗೆ ಹೋಗಿದ್ದೇನೆ ಮತ್ತು ಅವರು ತಮ್ಮ ಹಳ್ಳಿಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿರಿಸುವರೆಂಬುದನ್ನು ನೋಡಿ ನಿಮಗೆ ಅಚ್ಚರಿಯಾಗುತ್ತದೆ. ಅಲ್ಲೆಲ್ಲೂ ಯಾವುದೇ ಕಸವನ್ನು ಹಾಕಿರುವುದಿಲ್ಲ.
ಈ ಆದಿವಾಸಿ ಪ್ರದೇಶಗಳಲ್ಲಿ, ಅವರಿಗೆ ವಿದ್ಯುತ್ ಪೂರೈಕೆಯಿಲ್ಲ, ಆದರೆ ಅವರು ತಮ್ಮ ಚಿಕ್ಕ ಹಳ್ಳಿಗಳನ್ನು ಬಹಳ ಸ್ವಚ್ಛವಾಗಿರಿಸಿಕೊಂಡಿರುವರು. ಪ್ರತಿಯೊಂದು ಮನೆಯೂ ಬಹಳ ಸ್ವಚ್ಛವಾಗಿರಿಸಲ್ಪಟ್ಟಿದೆ. ನಿಮಗೆ ಅಲ್ಲಿ ಇಲ್ಲಿ ಚರಂಡಿಗಳು ಕಾಣಸಿಗುವುದಿಲ್ಲ, ಅದು ಯಾವುದೂ ಇಲ್ಲ.
ಅದು ಕಾಡಿನಂತಿದೆ. ನೀವು ನೋಡಿದರೆ, ಕಾಡು ಬಹಳ ಸ್ವಚ್ಛವಾಗಿರುತ್ತದೆ. ಹಲವಾರು ಪ್ರಾಣಿಗಳು ಸಾಯುವುದಾದರೂ ಸಹ ನಿಮಗೆ ಕಾಡಿನಲ್ಲಿ ನಿರ್ಜೀವ ಶರೀರಗಳು ಕಾಣಸಿಗುವುದಿಲ್ಲ. ಪ್ರಕೃತಿಯು ಹೇಗೋ ಒಂದು ಸಂತುಲನವನ್ನು ಉಳಿಸಿಕೊಳ್ಳುತ್ತದೆ.
ಅದೇ ರೀತಿಯಲ್ಲಿ, ಸಾಕ್ಷರತೆಯು ಬಹುತೇಕ ಸೊನ್ನೆಯಾಗಿರುವ ಆದಿವಾಸಿ ಪ್ರದೇಶಗಳು ಮತ್ತು ಆದಿವಾಸಿ ಜನರು, ಅವರಲ್ಲಿ ಪರಿಸರವನ್ನು ಸಂರಕ್ಷಿಸುವ ಹಾಗೂ ಸ್ವಚ್ಛತೆಯ ಆ ವಿವೇಕವಿದೆ, ಇದನ್ನು ನಗರದ ಜನರು ಕಲಿಯಬೇಕಾಗಿದೆ.
ಖಂಡಿತಾ ಈ ಆದಿವಾಸಿ ಪ್ರದೇಶಗಳಲ್ಲಿ ನಾವು ಹಲವಾರು ಶಾಲೆಗಳನ್ನು ಹೊಂದಿದ್ದೇವೆ. ಅಲ್ಲಿ ೩೦,೦೦೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಗಳು ಎಷ್ಟು ದೂರದ ಪ್ರದೇಶಗಳಲ್ಲಿವೆಯೆಂದರೆ, ಅಲ್ಲಿಗೆ ನೀವು ನಡಿಗೆಯ ಮೂಲಕ ಮಾತ್ರ ಹೋಗಲು ಸಾಧ್ಯ; ಅಲ್ಲಿ ಯಾವುದೇ ರಸ್ತೆಗಳಿಲ್ಲ. ಹಾಗೂ ಈ ಆದಿವಾಸಿ ಜನರಲ್ಲಿ ಎಷ್ಟೊಂದು ಸ್ಪಂದನವಿದೆ; ಒಂದು ನಿರ್ದಿಷ್ಟ ಆನಂದ; ಅದು ನಿಜಕ್ಕೂ ಗಮನಿಸಲು ಯೋಗ್ಯವಾದುದು.

ಪ್ರಶ್ನೆ: ನಾನು ಮೃದುವಾಗಿ ಮತ್ತು ನಮ್ರನಾಗಿ ಎರಡೂ ಆಗಿರುವುದು ಹಾಗೂ ಅದೇ ಸಮಯದಲ್ಲಿ ಅಧಿಕಾರಯುಕ್ತನಾಗಿರುವುದು  ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೀನದನ್ನು ಮಾಡಲು ಬಯಸುವೆಯಾ? ನಿನಗದನ್ನು ಮಾಡಲು ಸಾಧ್ಯವಿದೆ!
ಬಲಶಾಲಿಯಾಗಿರುವುದಕ್ಕಾಗಿ ನೀನು ಆಕ್ರಮಣಕಾರಿಯಾಗಿರಬೇಕಾಗಿಲ್ಲ ಮತ್ತು ಮೃದುವಾಗಿರುವುದಕ್ಕಾಗಿ ನೀನು ಬಲಹೀನನಾಗಿರಬೇಕಾಗಿಲ್ಲ. ಅವುಗಳು ವಿರುದ್ಧ ಗುಣಗಳೆಂದು ಮತ್ತು ಅವುಗಳಲ್ಲಿ ಒಂದನ್ನು ಮಾತ್ರ ನಾವು ಹೊಂದಿರಲು ಸಾಧ್ಯವೆಂದು ನಾವು ಯೋಚಿಸುತ್ತೇವೆ; ಇಲ್ಲ! ನಾನು ಹೇಳುವುದೇನೆಂದರೆ, ನಿಮಗೆ ಎರಡನ್ನೂ ಹೊಂದಿರಲು ಸಾಧ್ಯ. ನೀವು ವಿವೇಚನಾಯುಕ್ತ ಹಾಗೂ ಸಂವೇದನಾಶೀಲರಾಗಿರಲು ಸಾಧ್ಯ.
ಹೆಚ್ಚಾಗಿ ಸಂವೇದನಾಶೀಲರಾಗಿರುವ ಜನರು ವಿವೇಕಿಗಳಾಗಿರುವುದಿಲ್ಲ ಮತ್ತು ಯಾರು ಬಹಳ ವಿವೇಕಿಗಳಾಗಿರುವರೋ ಅವರು ಸಂವೇದನಾಶೀಲರಾಗಿರುವುದಿಲ್ಲ. ಆದರೆ ನಿಮ್ಮಲ್ಲಿ ವಿವೇಕ ಮತ್ತು ಸಂವೇದನಾಶೀಲತೆ ಎರಡನ್ನೂ ಜೋಡಿಸುವ ಮಹತ್ತರ ಸಾಮರ್ಥ್ಯವಿದೆ. ಕುಶಲತೆಯೆಂದರೆ ಅದು ಮತ್ತು ಧ್ಯಾನ ಇದಕ್ಕಿರುವ ಉತ್ತರವಾಗಿದೆ. ಧ್ಯಾನ ಮಾಡಿ!

ಪ್ರಶ್ನೆ: ಒಂದು ಜಪಮಾಲೆಯಲ್ಲಿ ೧೦೮ ಮಣಿಗಳಿರುವುದರ ಕಾರಣವೇನು? ಇದಕ್ಕೇನಾದರೂ ಮಹತ್ವವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಭಾರತೀಯ ಜ್ಯೋತಿಷ್ಯದ ಪ್ರಕಾರ ೧೨ ನಕ್ಷತ್ರ ಪುಂಜಗಳು ಮತ್ತು ಒಂಭತ್ತು ಗ್ರಹಗಳಿವೆ. ೧೨ ನಕ್ಷತ್ರ ಪುಂಜಗಳಲ್ಲಿ ಸಂಚರಿಸುವ ಒಂಭತ್ತು ಗ್ರಹಗಳು ೧೦೮ ವಿವಿಧ ರೀತಿಯ ಬದಲಾವಣೆಗಳನ್ನು ತರಬಲ್ಲವು. ಆದುದರಿಂದ ೧೦೮ ಮಣಿಗಳಿರುವುದು ಯಾವುದೇ ಬದಲಾವಣೆಗಳ ಯಾವುದೇ ಉಪದ್ರವಕಾರಿ ಪರಿಣಾಮಗಳನ್ನು ತೊಡೆದುಹಾಕುವುದಕ್ಕಾಗಿ.

ಪ್ರಶ್ನೆ: ಭಾರತದಂತಹ ಒಂದು ದೇಶದಲ್ಲಿ, ವಿಶೇಷವಾಗಿ ನಾನು ವಾಸಿಸುತ್ತಿರುವ ಮುಂಬೈಯಲ್ಲಿ ಎಷ್ಟೊಂದು ಅಸಮಾನತೆಯಿದೆಯೆಂದರೆ, ನನ್ನಲ್ಲೇನಿರುವುದೋ ಅದಕ್ಕಾಗಿ ನನಗೆ ಮುಜುಗರ ಹಾಗೂ ತಪ್ಪಿತಸ್ಥ ಭಾವನೆಯುಂಟಾಗುತ್ತದೆ. ಹಾಗಿದ್ದರೂ ನನಗೆ ಹಣ ಸಂಪಾದಿಸುವ ಮತ್ತು ಚೆನ್ನಾಗಿ ಜೀವಿಸುವ ಆಕಾಂಕ್ಷೆಯಿದೆ. ಈ ಎರಡು ವಿಷಯಗಳ ನಡುವೆ ರಾಜಿ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಒಂದಲ್ಲ ಒಂದು ಸೇವಾಕಾರ್ಯದಲ್ಲಿ ನಿನ್ನನ್ನು ತೊಡಗಿಸು. ಏನೋ ಒಂದು ನಿನ್ನನ್ನು ಚುಚ್ಚುತ್ತಿರುವುದು ಒಳ್ಳೆಯದು. ಸಮಾಜಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಲು ಅದುವೇ ನಿನ್ನನ್ನು ಪ್ರೇರೇಪಿಸುತ್ತದೆ. ನೀನು ಸಂಪಾದಿಸುವುದರಲ್ಲಿ ೨% ಅಥವಾ ೩%ವನ್ನು ದಾನಕ್ಕಾಗಿ ಮುಡಿಪಾಗಿಡು, ಯಾಕೆಂದರೆ ನಾವು ಸಂಪಾದಿಸುವುದೆಲ್ಲವನ್ನೂ ನಾವು ನಮಗಾಗಿಯೇ ಉಪಯೋಗಿಸಿದರೆ, ಆಗ ಅದು ಒಳ್ಳೆಯದಲ್ಲ. ನಾವು ಖಂಡಿತವಾಗಿಯೂ ಅಹಿತವನ್ನು ಅನುಭವಿಸುತ್ತೇವೆ. ಆದುದರಿಂದ ನಾವು ೧೦% ಅಥವಾ ೫%, ನಿಮಗೆಷ್ಟು ಸಾಧ್ಯವೋ ಅಷ್ಟನ್ನು ಸಾಮಾಜಿಕ ಕಾರಣಗಳಿಗಾಗಿ ಮುಡಿಪಾಗಿಡಬೇಕು ಮತ್ತು ಹೋಗಿ ಮಕ್ಕಳಿಗೆ ಹಾಗೂ ಕೊಳೆಗೇರಿಗಳಲ್ಲಿರುವ ಜನರಿಗೆ ಸಹಾಯ ಮಾಡಬೇಕು.
ಧಾರಾವಿಯಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿವೆ, ನೀನದರ ಭಾಗವಾಗಬಹುದು. ಈ ಚಿಕ್ಕ ಮಕ್ಕಳು ವಿದ್ಯಾವಂತರಾಗಿ ಬೆಳೆಯುವುದನ್ನು ನೋಡುವಾಗ ನಿನಗೆ ಅಪಾರ ತೃಪ್ತಿಯುಂಟಾಗುವುದು. ಒಂದು ಹಿತಕರವಾದ ಮನೆ ಮತ್ತು ಒಂದು ಒಳ್ಳೆಯ ಕಾರಿರುವುದರ ಬಗ್ಗೆ ನೀನು ತಪ್ಪಿತಸ್ಥ ಭಾವನೆ ಹೊಂದಬೇಕಾದ ಅಗತ್ಯವಿಲ್ಲ.

ಪ್ರಶ್ನೆ: ಬಹಳ ಭ್ರಷ್ಟವಾಗಿರುವ ಮತ್ತು ನಿಮ್ಮ ಎಲ್ಲಾ ವ್ಯವಹಾರಗಳ ಮೇಲೆ ಭ್ರಷ್ಟರು ಮೇಲುಗೈ ಹೊಂದುತ್ತಿರುವಾಗ,  ಒಂದು ವ್ಯಪಾರೀ ಜಗತ್ತಿನಲ್ಲಿ ನಲ್ಲಿ ಸ್ಪರ್ಧಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಒಬ್ಬ ವ್ಯಕ್ತಿಗೆ ಒಬ್ಬಂಟಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ, ಅದು ಕೂಡಾ ಒಬ್ಬ ವ್ಯಾಪಾರಿಗೆ. ಒಬ್ಬ ಸನ್ಯಾಸಿಗೆ ಅದು ಸುಲಭ, ಯಾಕೆಂದರೆ ಒಬ್ಬ ಸನ್ಯಾಸಿಗೆ ಕಳಕೊಳ್ಳಲು ಏನೂ ಇರುವುದಿಲ್ಲ, ಆದರೆ ಒಬ್ಬ ವ್ಯಾಪಾರಿಗೆ ಅದು ಕಷ್ಟ ಮತ್ತು ಅದಕ್ಕಾಗಿಯೇ ನಿಮಗೆ ನಾಗರಿಕ ಸಮಾಜದ ಅಗತ್ಯವಿರುವುದು. ನಾಗರಿಕ ಸಮಾಜವು ಒಂದು ಗುಂಪಿನಲ್ಲಿ ಒಟ್ಟಾದಾಗ, ಅವರು ಭ್ರಷ್ಟಾಚಾರದ ವಿರುದ್ಧ ಸುಲಭವಾಗಿ ಕ್ರಮ ಕೈಗೊಳ್ಳಬಹುದು.
ನಾನು ನಿಮಗೊಂದು ಉದಾಹರಣೆಯನ್ನು ಹೇಳುತ್ತೇನೆ. ಅದು ಏನಾಯಿತೆಂದರೆ, ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ, ಒಂದು ರಸ್ತೆಯು ಕೇವಲ ಕಾಗದದಲ್ಲಿ ಮಾತ್ರವಿತ್ತು, ಆದರೆ ವಾಸ್ತವವಾಗಿ ಅಲ್ಲಿ ಯಾವುದೇ ರಸ್ತೆಯಿರಲಿಲ್ಲ. ಹಾಗೆ ನಮ್ಮ ಆರ್ಟ್ ಆಫ್ ಲಿವಿಂಗಿನ ೫೦ ಯುವಕರು ಒಟ್ಟು ಸೇರಿ ಪುರಸಭಾಧ್ಯಕ್ಷರ ಕಛೇರಿಗೆ ಹೋದರು. ಅವರು ಮಾಡಿದ ಮೊದಲ ಕೆಲಸವೆಂದರೆ, ಪುರಸಭಾಧ್ಯಕ್ಷರಿಗೆ ಮುಗುಳ್ನಗೆಯನ್ನು ಬೀರಿದುದು. ಅವರೆಲ್ಲರೂ ಮುಗುಳ್ನಗೆಯೊಂದಿಗೆ ಪುರಸಭಾಧ್ಯಕ್ಷರ ಮುಂದೆ ಕುಳಿತರು ಮತ್ತು, "ಮೇಡಂ, ಈ ರಸ್ತೆಯನ್ನು ಯಾವಾಗ ಮಾಡಲಾಗುವುದೆಂದು ದಯವಿಟ್ಟು ನಮಗೆ ಹೇಳಿ. ದಯವಿಟ್ಟು ನಮಗೆ ದಿನಾಂಕವನ್ನು ನೀಡಿ. ನೀವು ದಿನಾಂಕವನ್ನು ಹೇಳುವವರೆಗೆ ನಾವು ಇಲ್ಲಿಂದ ಹೋಗುವುದಿಲ್ಲ" ಎಂದು ಹೇಳಿದರು.
ಪುರಸಭಾಧ್ಯಕ್ಷರು ನಡುಗಿ ಹೋದರು ಮತ್ತು ಅವರಂದರು, "ಹೌದು ಅದನ್ನು ಮಾಡಲಾಗುವುದು", ಮತ್ತು ೨೪ ಗಂಟೆಗಳಲ್ಲಿ ರಸ್ತೆಯು ಮಾಡಲ್ಪಟ್ಟಿತು.
ಅದೇ ರೀತಿಯಲ್ಲಿ ಹೈದರಾಬಾದಿನಲ್ಲಿ ಒಂದು ಕಾರ್ಖಾನೆಯನ್ನು ಮಾಡುತ್ತಿದ್ದ ಕೆಲವು ಯುವ ಉದ್ಯಮಿಗಳಿಗೆ ತಮ್ಮ ಕಾರ್ಖಾನೆಗೆ ಒಂದು ಪರವಾನಗಿ ಬೇಕಾಗಿತ್ತು ಮತ್ತು ಅವರು ಸಂಪರ್ಕಿಸಿದ ಪ್ರತಿಯೊಬ್ಬ ಪರಿಶೀಲನಾಧಿಕಾರಿಯೂ ಲಂಚವನ್ನು ಕೇಳುತ್ತಿದ್ದರು. ಈಗ ಇವರಂದರು, "ನೋಡಿ, ನಾವು ಯಾವುದೇ ಲಂಚವನ್ನು ಕೊಡುವುದೂ ಇಲ್ಲ ತೆಗೆದುಕೊಳ್ಳುವುದೂ ಇಲ್ಲವೆಂದು ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದೇವೆ. ನೀವು ನಮ್ಮನ್ನು ೫೦ ಸಲ ಬೇಕಾದರೂ ಇಲ್ಲಿಗೆ  ಬರಲು ಹೇಳಬಹುದು ಮತ್ತು ನಾವು ಬರುವೆವು, ಆದರೆ ನಾವು ಒಂದು ರೂಪಾಯಿ ಕೂಡಾ ಲಂಚ ಕೊಡುವುದಿಲ್ಲವೆಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ."
ಯುವಕರ ಈ ನಿರ್ಧಾರವನ್ನು ನೋಡಿ, ಅವರಿಗೆ ಬೇಕಿದ್ದ ಎಲ್ಲಾ ಹತ್ತು ಪರವಾನಗಿಗಳನ್ನೂ ಅವರು ನೀಡಿದರು. ಆ ಕೈಗಾರಿಕಾ ಉದ್ಯಾನದಲ್ಲಿ ಇತರರೆಲ್ಲರೂ ಅಚ್ಚರಿಗೊಂಡರು. ಅವರಂದರು, "ಈ ಪರವಾನಗಿಗಳನ್ನು ಪಡೆಯಲು ನಾವು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ ಮತ್ತು ನಮಗದು ಸಿಗಲಿಲ್ಲ, ಈ ಮೂರು ಹುಡುಗರಿಗೆ ಅದು ಹೇಗೆ ಎಲ್ಲಾ ಪರವಾನಗಿಗಳು ಸಿಕ್ಕವು?"
ಆದುದರಿಂದ, ಒಮ್ಮೆ ನಾವು ನಿರ್ಧಾರ ಹೊಂದಿದರೆ, ನಾವು ವ್ಯವಸ್ಥೆಯನ್ನು ಬದಲಾಯಿಸಬಹುದು, ನಾವೊಂದು ಬದಲಾವಣೆಯನ್ನು ತರಬಹುದು. ಯುವಕರಾಗಿ ನಿಮ್ಮ ಮನಸ್ಸಿನಲ್ಲಿ ಈ ನಿರ್ಧಾರ ಇರಬೇಕು, "ನಾನೊಂದು ಬದಲಾವಣೆಯನ್ನು ತರಲು ಸಾಧ್ಯವಿದೆ." ನೀವು, "ಪ್ರಪಂಚವು ಭ್ರಷ್ಟವಾಗಿದೆ ಮತ್ತು ಅದು ಬದಲಾಗದು ಹಾಗೂ ಯಾವುದೂ ಯಾವತ್ತೂ ಬದಲಾಗದು" ಎಂದು ಯೋಚಿಸಿದರೆ, ಆಗ ನಿಮ್ಮದೇ ಯೋಚನೆ ಮತ್ತು ನಿಮ್ಮದೇ ಕಂಪನವು ನಿಮ್ಮ ಸುತ್ತಲೂ ಈ ರೀತಿಯ ಪರಿಸ್ಥಿತಿಗಳನ್ನು ತರುವುದು. ಆದುದರಿಂದ ನೀವೊಂದು ಆದರ್ಶಾತ್ಮಕ ಕನಸನ್ನು ಹೊಂದಬೇಕು ಮತ್ತು ನಂತರ ಸಂಗತಿಗಳು ಆಗುತ್ತವೆಯೆಂಬುದು ನಿಮಗೆ ಕಂಡುಬರುವುದು.
ಪುನಃ ನಾನು ನಿಮಗೆ ಹೇಳುತ್ತಿದ್ದೇನೆ, ಭ್ರಷ್ಟಾಚಾರದ ವಿರುದ್ಧ ಒಂಟಿಯಾಗಿ ಹೋರಾಡುವುದು ಕಷ್ಟ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೀವು ಒಂದು ಗುಂಪಿನಲ್ಲಿ ಕೆಲಸ ಮಾಡಬೇಕು.

ಪ್ರಶ್ನೆ: ಕೆಲವೊಮ್ಮೆ ವರ್ಷಗಳ ಕಾಲದ ಪ್ರಯತ್ನವು ವಿಫಲತೆಯಲ್ಲಿ ಕೊನೆಯಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಏನು ಮಾಡುವುದು?
ಶ್ರೀ ಶ್ರೀ ರವಿ ಶಂಕರ್: ಕೇವಲ ಮುಂದೆ ಸಾಗುತ್ತಿರಿ. ಪ್ರತಿಯೊಂದು ಸೋಲು ಕೂಡಾ ಕಲಿಯಲಿರುವ ಒಂದು ಪಾಠವಾಗಿದೆ. ಧ್ಯಾನ ಮಾಡಿ. ಕೆಲವು ನಿಮಿಷಗಳ ಆಳವಾದ ಧ್ಯಾನವು ನಿಮ್ಮನ್ನು ನಿಮ್ಮೊಳಗೆ ಆಳದಲ್ಲಿರುವ ಅಂತಃಸ್ಫುರಣೆಯ ಸಾಗರದೊಂದಿಗೆ ಜೋಡಿಸುವುದು. ಪ್ರತಿಯೊಂದು ನಿರ್ಧಾರಕ್ಕೂ, ನೀವು ಆ ಅಂತಃಸ್ಫುರಣೆಯ ಆಂತರಿಕ ಮೂಲದೊಂದಿಗೆ ಸಂಪರ್ಕದಲ್ಲಿರುವುದು ಆವಶ್ಯಕವಾಗಿದೆ, ಆಗ ತಪ್ಪುವುದು ವಿರಳವಾಗುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಇತ್ತೀಚೆಗೆ ನಾನು ನೀವು, "ನಿಮ್ಮ ಬಂಧನ ಮತ್ತು ನಿಮ್ಮ ಮುಕ್ತಿಗೆ ನಿಮ್ಮದೇ ಮನಸ್ಸು ಜವಾಬ್ದಾರವಾಗಿರುವುದು" ಎಂದು ಹೇಳುವುದನ್ನು ಕೇಳಿದೆ. ನನಗೆ ಗೊಂದಲವಾಗಿದೆ, ಮುಕ್ತಿಗೆ ಮನಸ್ಸು ಜವಾಬ್ದಾರವಾಗುವುದು ಹೇಗೆ? ನಾನು ಮನಸ್ಸಿನಾಚೆಗೆ ಹೋಗಬೇಕಾಗಿಲ್ಲವೇ?
ಶ್ರೀ ಶ್ರೀ ರವಿ ಶಂಕರ್ : ಹೌದು, ಬಂಧನದ ಕಾರಣವು ಮನಸ್ಸು, ಅಲ್ಲವೇ? ನಿಮ್ಮಿಂದ ಶಾಂತಿಯನ್ನು ದೂರಕ್ಕೆ ಒಯ್ಯುವುದು ಮನಸ್ಸಿನಲ್ಲಿನ ತುಮುಲಗಳು. ಯಾವಾಗೆಲ್ಲಾ ನೀವು ಸಂತೋಷವಾಗಿ ಮತ್ತು ಶಾಂತರಾಗಿರುವಿರೋ, ಆಗ ನಿಮ್ಮ ಮನಸ್ಸು ನಿಮ್ಮ ಆತ್ಮದೊಂದಿಗೆ ಸಂಪರ್ಕದಲ್ಲಿರುತ್ತದೆ. ಯೋಚನೆಗಳು ಮತ್ತು ಭಾವನೆಗಳಿಂದ ನೀವು ಅಶಾಂತರಾಗಿರುವಾಗ, ಯಾವತ್ತೂ ಅಲ್ಲಿಯೇ ಇರುವ ಶಾಂತಿಯನ್ನು ನೋಡಲು ನೀವು ಅಸಮರ್ಥರಾಗುತ್ತೀರಿ.

ಪ್ರಶ್ನೆ: ಗುರುದೇವ, ಯಾವುದೇ ಭಯವಿಲ್ಲದೆಯೇ; ಕಳೆದುಕೊಳ್ಳುವ ಭಯ, ಸಾವಿನ ಭಯ, ಸೋಲಿನ ಭಯ, ತಿಳಿದುದರ ಮತ್ತು ತಿಳಿಯದಿರುವುದರ ಬಗ್ಗೆಯಿರುವ ಭಯ; ಇವುಗಳಿಲ್ಲದೆಯೇ ನಾನು ಈ ಪ್ರಪಂಚದಲ್ಲಿ ಹೇಗೆ ಬದುಕಬಹುದು?
ಶ್ರೀ ಶ್ರೀ ರವಿ ಶಂಕರ್: ಭಯವೆಂದರೆ ಪ್ರೀತಿಯು ತಲೆಕೆಳಗಾಗಿ ನಿಂತಿರುವುದು.
ಪ್ರೀತಿಯಿದ್ದರೆ, ಆಗ ಅಲ್ಲಿ ಯಾವುದೇ ಭಯವಿರುವುದಿಲ್ಲ ಮತ್ತು ಭಯವಿದ್ದರೆ, ಆಗ ಅಲ್ಲಿ ಪ್ರೀತಿಯಿರುವುದಿಲ್ಲ.
ನೋಡು, ಭಯ, ಪ್ರೀತಿ ಮತ್ತು ದ್ವೇಷ ಇವುಗಳೆಲ್ಲವೂ ಒಂದೇ ಚೈತನ್ಯದಿಂದ ಮಾಡಲ್ಪಟ್ಟಿವೆ. ಒಬ್ಬ ವ್ಯಕ್ತಿಯಲ್ಲಿ ದ್ವೇಷವಿರುವಾಗ, ಅವನು ಯಾವುದಕ್ಕೂ ಭಯಪಡುವುದಿಲ್ಲ.
ಒಬ್ಬ ವ್ಯಕ್ತಿಯಲ್ಲಿ ಆಳವಾದ ಪ್ರೀತಿಯಿರುವಾಗ ಕೂಡಾ ಅಲ್ಲಿ ಯಾವುದೇ ಭಯವಿರುವುದಿಲ್ಲ. ಅದು ಒಂದು ಶಕ್ತಿಯು ಈ ಮೂರು ರೂಪಗಳಲ್ಲಿ ಪ್ರಕಟಗೊಳ್ಳುವುದಾಗಿದೆ - ಪ್ರೀತಿ, ದ್ವೇಷ ಮತ್ತು ಭಯ.
ಫೆಬ್ರುವರಿ ೨, ೨೦೧೩ ರಂದು ನಾನು ತಿಹಾರ್ ಜೈಲಿಗೆ ಭೇಟಿ ನೀಡಿದೆ ಮತ್ತು ನಾನು ಆರ್ಟ್ ಆಫ್ ಲಿವಿಂಗಿನ ಕುಶಲತೆ ತರಬೇತಿ ಕೇಂದ್ರವೊಂದನ್ನು, ಒಂದು ಕ್ಯಾಂಟೀನನ್ನು ಮತ್ತು ಒಂದು ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದೆ. ಅಲ್ಲಿ ನಡೆದಿರುವ ಸುಧಾರಣೆಯ ಪ್ರಮಾಣವು ನಿಜಕ್ಕೂ ಹೃದಯಸ್ಪರ್ಶಿಯಾದುದು. ಕಠೋರ ಅಪರಾಧಿಗಳಾಗಿದ್ದ ಈ ಜನರು ಹೇಗೆ ಬದಲಾದರು ಎಂಬುದು ನೋಡಲು ಯೋಗ್ಯವಾದುದು. ಅವರು ಸಂಗೀತವನ್ನು, ಚಿತ್ರಕಲೆಯನ್ನು ಮತ್ತು ಹೊಸ ವಿಷಯಗಳನ್ನು ಕಲಿಯುವುದನ್ನು ಆಸ್ವಾದಿಸಲು ತೊಡಗಿದ್ದಾರೆ. ನಾನವರಲ್ಲಿ ಅಂದೆ, ಹೋಟೇಲು ಮತ್ತು ಕುಶಲತೆ ತರಬೇತಿ ಕೇಂದ್ರಗಳನ್ನು ಉಪಯೋಗಿಸಿ, ಆದರೆ ಆಸ್ಪತ್ರೆಯನ್ನು ಉಪಯೋಗಿಸಬೇಡಿ ಎಂದು.
ಒಂದು ಸಮಾಜದ ಆರೋಗ್ಯವು, ಆಸ್ಪತ್ರೆಗಳಲ್ಲಿರುವ ಖಾಲಿ ಹಾಸಿಗೆಗಳಿಂದ ಮತ್ತು ಜೈಲುಗಳಲ್ಲಿರುವ ಖಾಲಿ ಕೋಣೆಗಳಿಂದ ಸೂಚಿಸಲ್ಪಡುತ್ತದೆ. ಇವತ್ತು, ಕೇವಲ ೬೦೦೦ ಸಾಮರ್ಥ್ಯವಿರುವ ಸೆರೆಮನೆಯಲ್ಲಿ ೧೨೦೦೦ ಜನರಿದ್ದಾರೆ. ಆದುದರಿಂದ ಜನರು ಸೆರೆಮನೆಗಳೊಳಕ್ಕೆ ಹೋಗುವುದಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಲು ನಾವು ಅವುಗಳ ಹೊರಗಿನಿಂದ ಕೂಡಾ ಕೆಲಸ ಮಾಡಬೇಕಾಗಿದೆ. ನಾವು ಮಾನವೀಯ ಮೌಲ್ಯಗಳ ಒಂದು ಅಲೆಯನ್ನು ಮತ್ತು ಆತ್ಮೀಯತೆಯ ಒಂದು ಭಾವವನ್ನು ತಂದಾಗ ಇದಾಗಲು ಸಾಧ್ಯವಿದೆ.
ಸೆರೆಮನೆಗಳಲ್ಲಿರುವ ಈ ಜನರು ಸುಂದರ ಜನರಾಗಿರುವರು, ಆದರೆ ಅಪರಾಧವನ್ನೆಸಗಿದಾಗ ಅವರಲ್ಲಿ ಯಾವುದೇ ಭಯವಿರಲಿಲ್ಲ ಯಾಕೆಂದರೆ ದ್ವೇಷವು ಅವರನ್ನು ಸ್ವಾಧೀನಪಡಿಸಿಕೊಂಡಿತು.
ಅದಕ್ಕಾಗಿಯೇ, ಜನರು ತಮ್ಮನ್ನು ಸೇವಾ ಕಾರ್ಯಗಳನ್ನು ಮಾಡುವುದರಲ್ಲಿ ಮತ್ತು ಉಜ್ಜಾಯೀ ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡುವುದರಲ್ಲಿ ತೊಡಗಿಸಿಕೊಂಡರೆ, ಒಬ್ಬರು ಅನುಭವಿಸುವ ಭಯ, ಆತಂಕ ಮತ್ತು ಒತ್ತಡಗಳಂತಹ ಅದೇ ಚೈತನ್ಯವು ಮಗುಚಿ, ಎಲ್ಲರ ಕಡೆಗೂ ಪ್ರೀತಿ ಮತ್ತು ಸಹಾನುಭೂತಿಯಾಗುತ್ತದೆ.