ಶುಕ್ರವಾರ, ಮೇ 31, 2013

ಜ್ಞಾನಾಕಾಶ

ಬೆಂಗಳೂರು, ಭಾರತ
೩೧ ಮೇ ೨೦೧೩

'ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್  II' (೯.೨)

ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುತ್ತಾನೆ, ‘ಈ ಜ್ಞಾನ ಪ್ರತ್ಯಕ್ಷವಾಗಿ ಅನುಭವಿಸಬೇಕಾದಂತಹುದು. ಇದನ್ನು ನೀನು ಇಂದು ಅನುಸರಿಸಿದರೆ, ನೀನು ಇದರ ಲಾಭಗಳನ್ನು ಹಲವಾರು ವರ್ಷಗಳ ನಂತರ ಪಡೆಯುವೆ ಎಂದಲ್ಲ, ಇಲ್ಲ! ನೀನು ತಕ್ಷಣ ಈ ಜ್ಞಾನದ ಫಲಗಳನ್ನು ಪಡೆಯುವೆ. ಹೇಗೆ? ನೀನು ಇದನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತೀಯಾ, ನೋವು ಅಥವಾ ಹಸಿವಿನ ಅನುಭವಗಳ ಹಾಗೆ’.

ನಿಮಗೆ ನಿದ್ರೆ ಬರುವ ಹಾಗೆ ಇದ್ದರೆ, ನೀನು ಯಾರನ್ನಾದರೂ ಕೇಳಬೇಕೇ,’ನನಗೆ ನಿದ್ರೆ ಬರುತ್ತಿದೆಯೇ?’ ಎಂದು. ನಿಮ್ಮ ಕಾಲಿನಲ್ಲಿ ನೋವಿದ್ದರೆ, ನೀವು ಹೋಗಿ ಆ ನೋವು ನಿಜವೇ ಅಥವಾ ಅಲ್ಲವೇ ಎಂದು ಯಾರನ್ನಾದರೂ ಕೇಳಬೇಕೆ? ಅದು ನಿಮ್ಮ ಅನುಭವದಲ್ಲೇ ಸ್ಪಷ್ಟವಾಗುತ್ತದೆ.

ಅದೇ ರೀತಿಯಲ್ಲಿ, ನೀವು ತಿಳಿಯುವುದೇನೆಂದರೆ ಈ ಜ್ಞಾನವು ಸಹ ಸ್ವತಃ-ಪ್ರಮಾಣವಾದುದು ಮತ್ತು ತಕ್ಷಣ ಅನುಭವಿಸಬಹುದಾದಂತಹುದು.

ಈಗ, ನೀವೆಲ್ಲರೂ ಸುದರ್ಶನ ಕ್ರಿಯೆ ಅಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವಿರಿ.  ನೀವು ಎಂದಿಗಾದರೂ  ಇವೆಲ್ಲ  ಲಾಭದಾಯಕವೇ ಎಂದು ಬೇರೆಯವರನ್ನು ಕೇಳಬೇಕಾಗಿದೆಯೇ?

ನೀವು ಧ್ಯಾನ ಮಾಡಿದಾಗ, ನೀವು ತಕ್ಷಣ ಅದರ ಲಾಭವನ್ನು ಅನುಭವಿಸುವಿರಿ. ನೀವು ಸುದರ್ಶನ ಕ್ರಿಯೆ ಮಾಡಿದಾಗ, ನೀವು ತಕ್ಷಣ ಅದರ ಲಾಭವನ್ನು ಅನುಭವಿಸುವಿರಿ, ಅಲ್ಲವೇ? ಅದೇ ರೀತಿ, ನಿಮಗೆ ಹಸಿವಾದಾಗ, ನೀವು ಅದನ್ನು ತಕ್ಷಣ  ಅನುಭವಿಸುವಿರಿ.

ನೀವು ಧ್ಯಾನ ಮಾಡುತ್ತಿರುವಾಗ, ನೀವು ತಕ್ಷಣ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ. ನಿಮ್ಮ ಮನಸ್ಸು ಅದೇ ಕ್ಷಣದಲ್ಲಿ ಶಾಂತಿಯುತವಾಗುವುದು.

ಆದ್ದರಿಂದ ಅದೇ ರೀತಿಯಲ್ಲಿ, ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುತ್ತಾನೆ, ’ನೀನು ಈ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸಬಹುದು. ಈ ಜ್ಞಾನವು ಸಂತೋಷವನ್ನು ಮತ್ತು ದುಃಖದಿಂದ ಮುಕ್ತಿಯನ್ನು ತರುತ್ತದೆ. ಮತ್ತು ಈ ಜ್ಞಾನವು ಖಂಡಿತವಾಗಿ ಅನುಸರಿಸುವ ಅರ್ಹತೆ ಹೊಂದಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅಭ್ಯಸಿಸುವುದು ಸುಲಭ ಮತ್ತು ಅದೇ ಸಮಯದಲ್ಲಿ ಈ ಜ್ಞಾನವು ಶಾಶ್ವತ ಮತ್ತು ಬದಲಾಗದಂತಹುದು’.

ನೀವು ಕೇವಲ ಒಮ್ಮೆ ಧ್ಯಾನ ಮಾಡಿದರೂ, ಆ ಧ್ಯಾನದ ಫಲ ಸಾರ್ವಕಾಲಿಕ ಮತ್ತು ಶಾಶ್ವತ.

ನೀವು ಯಾವುದೇ ಒಳ್ಳೆಯ ಕೆಲಸ ಮಾಡಿದಾಗ, ಅದರ ಫಲಗಳು ನಿಮ್ಮೊಂದಿಗೆ ಉಳಿಯುವುದು. ಆದ್ಧರಿಂದ ಈ ಜ್ಞಾನವು ಸಾರ್ವಕಾಲಿಕ ಮತ್ತು ಶಾಶ್ವತ.

ಒಮ್ಮೆ ಈ ಜ್ಞಾನವನ್ನು ಪಡೆದ ನಂತರ, ಇದು ನಿಮ್ಮೊಂದಿಗೆ ಎಂದೆಂದಿಗೂ ಉಳಿಯುವುದು. ಇದು, ನೀವು ಒಮ್ಮೆ ಬೈಸಿಕಲ್ ಚಾಲನೆ ಕಲಿತರೆ, ನಿಮ್ಮ ಜೀವಾವಧಿ ಬೈಸಿಕಲ್ ಚಾಲನೆ ತಿಳಿದಿರುವ ಹಾಗೆ. ನೀವು ಮತ್ತೆ ಮತ್ತೆ ಕಲಿಯುವ ಅಗತ್ಯವಿಲ್ಲ. ಅದೇ ರೀತಿಯಲ್ಲಿ, ನೀವು ಒಮ್ಮೆ ಹಲ್ವ ತಯಾರಿಸುವುದನ್ನು ಕಲಿತರೆ, ನಿಮ್ಮ ಸಂಪೂರ್ಣ ಜೀವಾವಧಿ ಅದನ್ನು ತಿಳಿದಿರುವ ಹಾಗೆ. ನೀವು ಅದನ್ನು ಪದೇ ಪದೇ ಕಲಿಯುವ ಅಗತ್ಯವಿಲ್ಲ.

ಆದ್ದರಿಂದ ಕೃಷ್ಣ ಪರಮಾತ್ಮ ಹೇಳುತ್ತಾನೆ, ‘ಈಗ ನಾನು ನಿನಗೆ ಕೊಡುವದರಲ್ಲಿರುವ ಈ ಜ್ಞಾನವು ಸನಾತನ ಮತ್ತು ಕಾಲಾತೀತವಾದುದು’.

ಅವನು ನಂತರ ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ,

‘ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ I
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ II' (೯.೩)

ಅವನು ಹೀಗೆಂದು ಹೇಳುತ್ತಾನೆ, 'ನಾನು ನಿನಗೆ ಈಗ ಕಾಣಪಡಿಸುವ ಸರ್ವೋಚ್ಛ ಜ್ಞಾನದ ಮೇಲೆ ನಂಬಿಕೆ ಇಲ್ಲದವರು, ನನ್ನನು ಹೊಂದಲಾಗುವುದಿಲ್ಲ.’

ಇದರ ಅರ್ಥ ಅಂತಹ ಜನರಿಗೆ ಆತ್ಮ ಜ್ಞಾನ ಸಾಧ್ಯವಾಗುವುದಿಲ್ಲ ಎಂದು.

ಆದ್ದರಿಂದ ಅವನು ಹೇಳುತ್ತಾನೆ, ‘ಇಂತಹ ನಂಬಿಕೆ-ಇಲ್ಲದವರು ನನ್ನನ್ನು ತಲುಪಲು ಸಾಧ್ಯವಾಗುವುದಿಲ್ಲ ಮತ್ತು ಅವರು ಪದೇ ಪದೇ ಜನನ ಮತ್ತು ಮರಣದ ಚಕ್ರದಲ್ಲಿ ಸುತ್ತುತ್ತಿರುವರು’.

ನೋಡಿ, ಜ್ಞಾನದ ಮಾರ್ಗಕ್ಕೆ ಬರದ ಒಬ್ಬ ವ್ಯಕ್ತಿ ಜಗತ್ತಿನ ಗೊಂದಲಗಳಲ್ಲಿ ಸಿಕ್ಕಿಕೊಂಡಿರುತ್ತಾನೆ. ಇದು ಸತ್ಯವಲ್ಲವೆ? ಅವನು ಜೀವನದ ದೈನಂದಿನ ಹೋರಾಟಗಳಲ್ಲಿ ಅಷ್ಟು ಸಿಕ್ಕಿಕೊಂಡಿರುತ್ತಾನೆ.

ಅದೇ ದೂರುಗಳು, ಅದೇ ಸಮಸ್ಯೆಗಳು;  ಅದೇ ಕಥೆ ಪ್ರತಿದಿನ ಪುನರಾವರ್ತನೆಯಾಗುತ್ತದೆ.

ಯಾರ ಜೀವನವು ಜ್ಞಾನರಹಿತವಾಗಿದ್ದು, ಯಾವುದೇ ವೈಜ್ಞಾನಿಕ ಮೇಲ್ನೋಟ ಹೊಂದಿಲ್ಲದಿರುವುದೋ, ಅಥವಾ ಯಾವುದೇ ಹೆಚ್ಚಿನ ಉದ್ದೇಶ ಹೊಂದಿಲ್ಲದಿರುವುದೋ, ಅವನಿಗೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ.

ಇಂತಹ ಜನರು ಏನು ಮಾಡುವರು? ಅವರು ಜನರೊಂದಿಗೆ ರಾಗ ದ್ವೇಷಗಳಲ್ಲಿ ಸಿಕ್ಕಿಹಾಕಿಕೊಳ್ಳುವರು. ಅವರು ಪ್ರೀತಿಸಿದವರೊಂದಿಗೇ ಜಗಳವಾಡುವರು ಮತ್ತು ನಂತರ ಜಗಳವಾಡಿದವರನ್ನೇ ಪ್ರೀತಿಸುವರು. ಅವರ ಸ್ನೇಹಿತರು ಶತ್ರುಗಳಾಗುತ್ತಾರೆ  ಮತ್ತು ಶತ್ರುಗಳು ಸ್ನೇಹಿತರಾಗುತ್ತಾರೆ.

ನೀವು ಗಮನಿಸಿರಬೇಕು, ನೀವು ಏನು ತಪ್ಪು ಮಾಡದಿದ್ದರೂ ಸಹ ನಿಮ್ಮ ಸುತ್ತಲಿನ ಜನರು ನಿಮ್ಮ ಶತ್ರುಗಳಾಗುವರು ಎಂದು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

(ಹಲವರು ತಮ್ಮ ಕೈಗಳನ್ನು ಮೇಲೆತ್ತಿದರು)

ನೋಡಿ, ಬಹುತೇಕ ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತಿದರು!

ಆದ್ದರಿಂದ, ಜನರು ಜೀವನದಲ್ಲಿ ಒಂದರ ನಂತರ ಇನ್ನೊಂದು ಇಂತಹ ಘಟನೆಗಳಲ್ಲಿ ಹಾದು ಹೋಗುವರು, ಮತ್ತು ಅಂತಿಮವಾಗಿ ತಮ್ಮ ಸಾವನ್ನು ಭೇಟಿಮಾಡುವರು. ಅವರು ಹುಟ್ಟು ಮತ್ತು ಸಾವಿನ ಪುನರಾವರ್ತನದಿಂದ ಬಳಲುವರು, ಮತ್ತು ಯಾವುದೇ ರೀತಿಯ ಶಾಶ್ವತವಾದ ಸಂತೋಷ ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಭೌತಿಕ ಪ್ರಪಂಚದಲ್ಲಿ ಕಾಣಬಹುದಾದಂತಹ ಯಾವುದೇ ನಿಜವಾದ ಸಂತೋಷ ಇಲ್ಲ. ನೀವು ವಿಶ್ವದಲ್ಲಿ ಸಂತೋಷವನ್ನು ಎಷ್ಟು ಹೆಚ್ಚು ಹುಡುಕಿಕೊಂಡು ಹೋಗುವಿರೋ, ನಿಮಗೆ ಅಷ್ಟೇ ಹೆಚ್ಚಿನ ದುಃಸ್ಥಿತಿ ಕಾಣುವುದು.

ಆದ್ದರಿಂದ ಈ ಜ್ಞಾನದಲ್ಲಿ ನಂಬಿಕೆ ಹೊಂದಿಲ್ಲದವನಿಗೆ ಮತ್ತು ತನ್ನ ಜೀವನದಲ್ಲಿ ಯಾವುದೇ ರೂಪದ ಭಕ್ತಿ ಇಲ್ಲದವನಿಗೆ ಇನ್ನೇನಿದೆ. ಸೃಷ್ಟಿಯಲ್ಲಿ ಎಲದಕ್ಕೂ ಜೀವ ಕೊಡುವ, ಮತ್ತು ಪ್ರೇಮದ ಕುರುಹುವಾಗಿರುವ ಮಹಾ ಶಕ್ತಿಯ ಮೇಲೆ ನಂಬಿಕೆ ಇಲ್ಲದವನಿಗೆ, ಅವನ ಜೀವನದಲ್ಲಿ ಏನು ಉಳಿದಿರುತ್ತದೆ? ಅವನ ಜೀವನ ಎಷ್ಟು ಬರಡು.

ಅಂತಹ ವ್ಯಕ್ತಿ ಯಾವಾಗಲೂ ತನ್ನ ಆಸೆಗಳ ಹಿಂದೆ ಓಡುತ್ತಿರುವನು ಮತ್ತು ಏನಾದರೂ ಒಂದು ಬಯಸುತ್ತಿರುವನು.  ಆದ್ದರಿಂದ ಅವನಿಗೆ ಏನಾದರೂ ಬೇಕಾದ್ದು ದೊರೆಯದಿದ್ದರೆ  ದುಃಖಿತನಾಗುವನು, ಮತ್ತು ಅದು ಲಭಿಸಿದ ಮೇಲೆ ಕೂಡ  ದುಃಖಿತನಾಗಿರುವನು. ಇದರ ಅರ್ಥವೇ ಮೃತ್ಯು-ಸಂಸಾರ (ವಸ್ತು ಪ್ರಪಂಚದಲ್ಲಿ ಎಲ್ಲವೂ ತಾತ್ಕಾಲಿಕವಾಗಿರುವ, ನಿರಂತರವಾಗಿ ಬದಲಾಗುತ್ತಿರುವ ಮತ್ತು ಮೃತ್ಯುವಿಗೆ ಆಹುತಿಯಾಗುವ ಅಂಶವನ್ನು ಉಲ್ಲೇಖಿಸಿ).

ಅದರಿಂದಲೇ ಕೃಷ್ಣ ಭಗವಂತ ಹೇಳುವನು, 'ಜೀವನದಲ್ಲಿ ನಂಬಿಕೆ ಮತ್ತು ಭಕ್ತಿ ಇಲ್ಲದಿರುವ ವ್ಯಕ್ತಿ ನನ್ನನ್ನು ಹೊಂದಲು ಸಾಧ್ಯವಿಲ್ಲ. ಇಂತಹ ಜನರು ಶಾಶ್ವತ ದೈವತ್ವವಾದ ನನ್ನನು ಹೊಂದಲು ವಿಫಲಗೊಳ್ಳುವರು ಮತ್ತು ಈ ಸಾವಿನ ಪ್ರಪಂಚಕ್ಕೆ (ಅರ್ಥಾತ್ ಎಂದಿಗೂ ಬದಲಾವಣೆಯಾಗುವ ವಸ್ತು ಪ್ರಪಂಚ) ಮತ್ತೆಮತ್ತೆ ಹಿಂದಿರುಗುವರು'

ಮುಂದಿನ ಎರಡು ಶ್ಲೋಕಗಳಲ್ಲಿ, ಅವನು ಹೇಳುತ್ತಾನೆ,

‘ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ I
ಮತ್‌ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ II' (೯.೪)

'ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ I
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ II' (೯.೫)

ಕೃಷ್ಣ ಭಗವಂತ ಹೇಳುವನು. ‘ಓ ಅರ್ಜುನ, ಈ ಇಡೀ ಸೃಷ್ಟಿ ನನ್ನ ಅಭಿವ್ಯಕ್ತಿಯಾಗಿದೆ. ಆದರೂ ನಾನು ಅವ್ಯಕ್ತ ಮತ್ತು ನಿರಾಕಾರ. ಈ ಸಂಪೂರ್ಣ ಸೃಷ್ಟಿ (ರೂಪ ಒಳಗೊಂಡಿರುವ) ನನ್ನಿಂದ ಬಂದಿರುವುದು (ಆ ಸೂಕ್ಷ್ಮ ನಿರಾಕಾರದ ದೈವತ್ವ). ಈ ಸೃಷ್ಟಿಯಲ್ಲಿ  ಕಾಣುವ ಎಲ್ಲವೂ ನನ್ನಿಂದ ಬಂದಿರುವುದು. ಎಲ್ಲಾ ಪಂಚಭೂತಗಳು (ಪ್ರಕೃತಿಯ ಐದು ಮೂಲಭೂತ ಅಂಶಗಳು) - ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ ನನ್ನಲ್ಲಿ ವಾಸಿಸುತ್ತವೆ ಮತ್ತು ನನ್ನಿಂದ ಸೃಷ್ಟಿಯಾಗಿವೆ. ಆದರೂ ನಾನು ಅವುಗಳಲ್ಲಿ ಇಲ್ಲ.

ಇದು ‘ಈ ಬಟ್ಟೆ ನನಗೆ ಸೇರಿದ್ದು ಆದರೂ ನಾನು ಬಟ್ಟೆ ಅಲ್ಲ’ ಎಂಬ ನಿಮ್ಮ ಹೇಳಿಕೆಯನ್ನು  ಹೋಲುತ್ತದೆ. ನೋಡಿ, ನೀವು ಬಟ್ಟೆ ಒಳಗೆ ಇರುವಿರಿ ಮತ್ತು ಬಟ್ಟೆ ನಿಮ್ಮನ್ನು ಆವರಿಸುತ್ತದೆ, ಆದರೂ ನೀವು ಧರಿಸಿದ ಬಟ್ಟೆ ಅಲ್ಲ.

ಇದೇ ರೀತಿಯಲ್ಲಿ, ಕೃಷ್ಣ ಪರಮಾತ್ಮ ಹೇಳುತ್ತಾನೆ, ‘ಈ ಐದು ಅಂಶಗಳು ನನ್ನಿಂದ ಜನಿಸಿವೆ ಮತ್ತು ನನ್ನಲ್ಲಿ ವಾಸಿಸುತ್ತವೆ, ಆದರೂ ನಾನು ಅವುಗಳಲ್ಲಿ ಇಲ್ಲ. 

ಇದು ’ಪ್ರಕೃತಿಯ ಐದು ಅಂಶಗಳು ಪರಮಾತ್ಮನಿಂದಲೇ ಬಂದಿರುವುದು, ಆದರೂ ಪರಮಾತ್ಮನು ದಿವ್ಯ ಪ್ರಜ್ಞೆಯಾಗಿದ್ಧು ಪ್ರಕೃತಿಯ ಐದು ಅಂಶಗಳಿಗೆ ಅಥವಾ ಅಂಶಗಳಿಂದ ಸೀಮಿತವಾಗಿಲ್ಲ’ ಎಂದು ಸೂಚಿಸುತ್ತದೆ.

ಇದನ್ನೇ ಕೃಷ್ಣ ಪರಮಾತ್ಮ ಇಲ್ಲಿ ಹೇಳುತ್ತಾನೆ ಮತ್ತು ಇದು ಒಂದು ದೊಡ್ಡ ರಹಸ್ಯ.

ಅವನು ಇಲ್ಲಿ ಏನು ಹೇಳುತ್ತಾನೆ ಎಂದರೆ, 'ನಾನು ನೀವು ನೋಡಲಾರದ ನಿರಾಕಾರದ ಅಂಶ ಮತ್ತು ನಿಮ್ಮ ನೋಟದಲ್ಲಿ ಕಾಣುವ ಎಲ್ಲವನ್ನು ಮೀರಿರುವೆನು’.

ಉದಾಹರಣೆಗೆ, ಒಂದು ಮರವಿದೆ ಮತ್ತು ಅಮೃತವು ಮರದ ಕಾಂಡದ ಒಳಗೆ ಇದ್ದರೆ, ನೀವು ಮರವನ್ನು ಮಾತ್ರ ನೋಡಬಹುದು ಅಮೃತವನ್ನಲ್ಲ.

ಅದರಿಂದ ಇಲ್ಲಿ, ಕೃಷ್ಣ ಪರಮಾತ್ಮ ಹೇಳುತ್ತಾನೆ, 'ಈ ಸೃಷ್ಟಿಯಲ್ಲಿ ವೈವಿಧ್ಯತೆ ಉಗಮಿಸುವ (ದೈವಿಕ) ಅಮೃತ ನಾನು. ಎಲ್ಲಾ ಮರಗಳು, ಎಲೆಗಳು ಮತ್ತು ಅವುಗಳಲ್ಲಿ  ಇರುವ ಹಣ್ಣುಗಳ ಹಿಂದಿನ ಕಾರಣ ನಾನೇ.  ಅದೇ ರೀತಿಯಲ್ಲಿ, ನೀವು ವ್ಯಕ್ತಿಯ ದೇಹ ನೋಡಬಹುದೇ ಹೊರತು  ಆತನ ಆತ್ಮವನ್ನಲ್ಲ. ಆತ್ಮವು ನಿರಾಕಾರ ಮತ್ತು ಆ ಆತ್ಮವು ನಾನೇ ಆಗಿರುವೆನು'.

ಜೀವಶಕ್ತಿ ನಮ್ಮೊಳಗಿನ ಪ್ರತಿ ಕಣದಲ್ಲೂ ಇರುತ್ತದೆ. ಜೀವಶಕ್ತಿ ವ್ಯಕ್ತಿಯ ದೇಹ ಬಿಟ್ಟ ಕ್ಷಣದಲ್ಲಿ,  ಅವನು ಸತ್ತ ಎಂದು ಘೋಷಿಸಲಾಗುತ್ತದೆ.

ಉದಾಹರಣೆಗೆ, ನಿಮ್ಮ ಚರ್ಮದ ಒಂದು ಸಣ್ಣ ಭಾಗ ಸುಟ್ಟಾಗ, ಆದು ನಿಧಾನವಾಗಿ ಸಾಯುತ್ತದೆ ಮತ್ತು ಎಲ್ಲಾ ಸಂವೇದನೆ ಇಲ್ಲದಾಗುತ್ತದೆ. ಆ ಸುಟ್ಟ ಭಾಗದಲ್ಲಿ ನಿಮಗೆ ಸ್ಪರ್ಶಜ್ಞಾನ ಇರುವುದಿಲ್ಲ ಏಕೆಂದರೆ ಅದರಲ್ಲಿ ಜೀವಶಕ್ತಿ ಇಲ್ಲದಿರುವುದಿಂದ.
ಈ ಸೃಷ್ಟಿಯಲ್ಲಿ ಜೀವನ ಇರುವುದು ಪ್ರಜ್ಞೆಯಿಂದ. ಆದ್ದರಿಂದ ಕೃಷ್ಣ ಪರಮಾತ್ಮ ಹೇಳುವನು, ‘ನಾನು ಈ ಇಡೀ ಸೃಷ್ಟಿಯಲ್ಲಿ ಎಲ್ಲ ಜೀವಗಳನ್ನು  ಸಮರ್ಥಿಸುವ ಜೀವಾಧಾರಕ ಪ್ರಜ್ಞೆಯಾಗಿ ಅಭಿವ್ಯಕ್ತವಾಗಿರುವೆನು. ಇದು ನೀವು ತಿಳಿಯಲೇಬೇಕಾಗಿರುವ ಒಂದು ದೊಡ್ಡ ರಹಸ್ಯ’.