ಬುಧವಾರ, ಡಿಸೆಂಬರ್ 21, 2011

ದೈವತ್ವವನ್ನು ಹೊಂದುವ ಧ್ಯೇಯ ಎ೦ದೆ೦ದೂ ನಮ್ಮದಾಗಿರಲಿ

21
2011
Dec
ಬೆ೦ಗಳೂರು, ಕರ್ನಾಟಕ, ಭಾರತ


ಣಿಪುರದಿಂದ ಇಲ್ಲಿಗೆ ಇಬ್ಬರು ಶಿಕ್ಷಕರು ಬಂದಿದ್ದಾರೆ. ಅವರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ ಮತ್ತು ೫೦೦ ಉಗ್ರವಾದಿಗಳಲ್ಲಿ ಸುಧಾರಣೆಯನ್ನು ತಂದಿದ್ದಾರೆ.
ಬೆಂಗಳೂರು ಎಷ್ಟೊಂದು ಬೆಳೆದಿದೆಯೆಂದರೆ, ನಗರದ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಪ್ರಯಾಣಿಸಲು ಕೆಲವು ಗಂಟೆಗಳು ಬೇಕಾಗುತ್ತವೆ. ನಗರದ ದೂರದ ಜಾಗಗಳಿಂದ ಆಶ್ರಮಕ್ಕೆ ಬರಲು ಹಲವಾರು ಜನರು ಬಹಳಷ್ಟು ಸಮಯವನ್ನು ಕಳೆಯುತ್ತಾರೆ. ನಗರದ ವಿವಿಧ ಭಾಗಗಳಲ್ಲಿ ನಾವು ಸತ್ಸಂಗಗಳನ್ನು ಏರ್ಪಡಿಸಿದರೆ ಹಲವಾರು ಜನರಿಗೆ ಸಹಾಯಕವಾಗಬಹುದು ಎಂದು ನನಗನ್ನಿಸಿತು.
ನಮ್ಮ ಸತ್ಸಂಗಗಳಲ್ಲಿ ಒಂದು ನಿಯಮವಿದೆ. ನೀವು ನಿಮ್ಮ ಚಿಂತೆಗಳನ್ನು ಇಲ್ಲಿಗೆ ತರಬಹುದು, ಆದರೆ ನೀವು ಅವುಗಳನ್ನು ನಿಮ್ಮೊಂದಿಗೆ ಹಿಂದೊಯ್ಯಲು ಸಾಧ್ಯವಿಲ್ಲ. ನಿಮ್ಮೆಲ್ಲಾ ಚಿಕ್ಕ ವೈಯಕ್ತಿಕ ಚಿಂತೆಗಳನ್ನು ಬಿಟ್ಟುಬಿಡಿ. ಅದರ ಬದಲಾಗಿ, ದೇಶದ ಬಗ್ಗೆ ಚಿಂತಿಸಿ.
ಪ್ರಕೃತಿಯಲ್ಲಿ ಒಂದು ನಿಯಮವಿದೆ; ನೀವೊಂದು ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಂಡರೆ, ನಿಮ್ಮೆಲ್ಲಾ ಅವಶ್ಯಕತೆಗಳೂ ತಾವಾಗಿಯೇ ಪೂರೈಸಲ್ಪಡುತ್ತವೆ. ನೀವು ನಿರಂತರವಾಗಿ ನಿಮ್ಮದೇ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಯೋಚಿಸುತ್ತಾ ಇದ್ದರೆ, ನೀವೆಲ್ಲಿಗೂ ಹೋಗಲಾರಿರಿ.
ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ. ಅದು ಹೇಳುತ್ತದೆ, ಚಿಕ್ಕದಾಗಿರುವ ಯಾವುದರಲ್ಲಿಯೂ ಯಾವುದೇ ಆನಂದವಿಲ್ಲ. ಆನಂದವು ಯಾವತ್ತೂ ದೊಡ್ಡದರಲ್ಲಿ ಇರುವುದು. ಜೀವನವು ಯಾವತ್ತೂ ಆನಂದದ ಹುಡುಕಾಟದಲ್ಲಿ ಹರಿಯುತ್ತದೆ ಮತ್ತು ಅತ್ಯಂತ ಹೆಚ್ಚಿನ ಆನಂದವಿರುವುದು ದೈವತ್ವದಲ್ಲಿ. ನಾವು ಯಾವತ್ತೂ ದೈವತ್ವವನ್ನು ಪಡೆಯುವ ಗುರಿ ಹೊಂದಿರಬೇಕು. ನೀವು ಅತ್ಯಂತ ಹೆಚ್ಚಿನದಕ್ಕೆ ಗುರಿಯಿಟ್ಟರೆ, ನಿಮ್ಮ ಚಿಕ್ಕ ಬಯಕೆಗಳು ಹೇಗಿದ್ದರೂ ಈಡೇರುತ್ತವೆ.
ಬಾಯಾರಿಕೆಯಿದ್ದರೆ ನಿಮಗೆ ನೀರು ಸಿಗುತ್ತದೆ. ಬಾಯಾರಿಕೆಯಿಲ್ಲದಿದ್ದರೆ ಒಬ್ಬನು ನೀರಿನ ಬಗ್ಗೆ ಚಿಂತಿಸುವುದಿಲ್ಲ. ಅದೇ ರೀತಿಯಲ್ಲಿ, ದೇವರನ್ನು ಪಡೆಯಲು, ಪರಮ ಸತ್ಯವನ್ನು ತಿಳಿಯಲು, ಜೀವನವೆಂದರೇನು ಎಂದು ತಿಳಿಯಲು, ನಾವು ಯಾರೆಂದು ತಿಳಿಯಲು ನಮ್ಮೊಳಗೆ ಒಂದು ಬಾಯಾರಿಕೆಯಿರಬೇಕು. ನೀವು ಗುರುವಿನ ಬಳಿಗೆ ಬರುವಾಗ, ನೀವು ಏನನ್ನಾದರೂ ಕೊಡಬೇಕು. ನೀವು ನನಗೆ ಹೂಗಳನ್ನು, ಹೂಮಾಲೆಗಳನ್ನು ಮತ್ತು ಶಾಲುಗಳನ್ನು ತರಬೇಕಾಗಿಲ್ಲ. ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ನೀಡಿ. ನೀವು ಸಂತೋಷವಾಗಿ ಹಿಂತಿರುಗಿ ಹೋದರೆ, ಆಗ ಅದು ನನ್ನ ಗುರುದಕ್ಷಿಣೆ. ನಾನು ಕೇವಲ ಸಿಹಿತಿಂಡಿಗಳನ್ನು, ಹಣ್ಣುಗಳನ್ನು ಮತ್ತು ಹೂಗಳನ್ನು ಪ್ರಸಾದವಾಗಿ ಕೊಡುವುದಿಲ್ಲ. ನಾನು ನಿಮಗೆ ಆಹ್ಲಾದಕರ ಮನಃಸ್ಥಿತಿಯನ್ನು ಪ್ರಸಾದವಾಗಿ ಕೊಡುತ್ತೇನೆ. ಜನರು ತಮ್ಮದೇ ಚಿಂತೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಸಮಾಜಕ್ಕಾಗಿ ಏನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ.
ಕನ್ನಡದಲ್ಲಿ ಒಂದು ಗಾದೆಯಿದೆ: "ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ ಹುಡುಕಿದಂತೆ". ನಾವು ಜೀವನದಲ್ಲಿ ಮಾಡುತ್ತಿರುವುದು ಇದನ್ನೇ. ನಮ್ಮ ಮನಸ್ಸಿನಲ್ಲಿ ಪ್ರಚಂಡವಾದ ಸಂಕಲ್ಪ ಶಕ್ತಿಯಿದೆ. ಹೀಗಿದ್ದರೂ, ನಾವು ಇದರ ಕಡೆಗೆ ನೋಡಿಯೇ ಇಲ್ಲ. ಧ್ಯಾನದಲ್ಲಿ ಸ್ವಲ್ಪ ಸಮಯ ಕಳೆಯುವುದರ ಬಗ್ಗೆ ನಾವು ಯಾವತ್ತೂ ಯೋಚಿಸಲೇ ಇಲ್ಲ. ನಾವು ಜೀವಮಾನವೆಲ್ಲಾ ಅಳುತ್ತಲೇ ಇರುತ್ತೇವೆ.
ನಾನು ಸುಮಾರು ೧೦ ವರ್ಷದವನಾಗಿದ್ದಾಗ, ರಾಜ್ಯಪಾಲರು ನನ್ನ ತಂದೆಯವರನ್ನು ಅವರ ಮನೆಯ ಒಂದು ಸಮಾರಂಭಕ್ಕೆ ಆಮಂತ್ರಿಸಿದ್ದರು. ನನ್ನ ತಂದೆಯವರು ನನ್ನೊಡನೆ ತಮ್ಮ ಜೊತೆಯಲ್ಲಿ ಹೋಗಲು ಹೇಳಿದರು. ಹೀಗಿದ್ದರೂ ನಾನಂದೆ, "ಅವರು ನನ್ನನ್ನು ಆಮಂತ್ರಿಸಿದರೆ, ನಾನು ಬರುತ್ತೇನೆ." ನಾನು ಅಲ್ಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಬಯಸಿದ್ದೆ. ನನ್ನ ತಂದೆಯವರು ಅಲ್ಲಿಗೆ ಒಂಟಿಯಾಗಿ ಹೋದರು. ೪ ವರ್ಷಗಳ ಬಳಿಕ, ಅದೇ ರಾಜ್ಯಪಾಲರು ನನ್ನನ್ನು ಆಮಂತ್ರಿಸಿದರು. ಒಬ್ಬ ಚಿಕ್ಕ ಹುಡುಗನಿದ್ದಾನೆ, ಆತನು ಧ್ಯಾನವನ್ನು ಬಹಳ ಚೆನ್ನಾಗಿ ಕಲಿಸುತ್ತಾನೆ ಎಂದು ಯಾರೋ ಅವರಿಗೆ ಹೇಳಿದ್ದರು. ನನ್ನ ತಂದೆಯವರು ಇದರ ಬಗ್ಗೆ ಬಹಳ ಆಶ್ಚರ್ಯಚಕಿತರಾದರು. ನಾನು ನಿಮಗೆ ಈ ಉದಾಹರಣೆಯನ್ನು ನೀಡುತ್ತಿರುವುದರ ಕಾರಣವೇನೆಂದರೆ, ಒಂದು ದೊಡ್ಡ ಕನಸನ್ನು ಇಟ್ಟುಕೊಳ್ಳಿ ಹಾಗೂ ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡಿ ಎಂದು ನಾನು ಎಲ್ಲಾ ಯುವಕರಿಗೆ ಹೇಳಲು ಬಯಸುತ್ತೇನೆ.
ಬೆಂಗಳೂರಿನ ಲಯನ್ಸ್ ಮತ್ತು ರೋಟರಿ ಕ್ಲಬ್ಬುಗಳನ್ನು ನೋಡಿ ನಾನು ಹೇಳುತ್ತಿದ್ದೆ, ನಾನೂ ಬೆಂಗಳೂರಿನಲ್ಲಿ ಅಂತಹ ಒಂದು ಗುಂಪನ್ನು ತೆರೆಯುತ್ತೇನೆ ಮತ್ತು ಅದನ್ನು ಪ್ರಪಂಚದಾದ್ಯಂತ ಕೊಂಡೊಯ್ಯುತ್ತೇನೆ ಎಂದು. ಇದನ್ನು ಕೇಳಿದ ಜನರು, ಈ ಮಗುವು ಸುಮ್ಮನೇ ಅರ್ಥವಿಲ್ಲದ ಮಾತುಗಳನ್ನಾಡುತ್ತಿರುವನೆಂದು ನಾನು ಹೇಳುತ್ತಿದ್ದುದನ್ನು ಸುಮ್ಮನೇ ನಿರ್ಲಕ್ಷಿಸುತ್ತಿದ್ದರು. ಪುನಃ, ಈ ಉದಾಹರಣೆಯನ್ನು ಕೊಟ್ಟಿರುವುದು, ನಮ್ಮ ಮನಸ್ಸು ಶುದ್ಧವಾಗಿದ್ದರೆ, ನಮ್ಮ ಉದ್ದೇಶಗಳು ಬಹಳ ಬೇಗನೇ ಈಡೇರುತ್ತವೆ ಎಂಬುದನ್ನು ತೋರಿಸಲು.
ನಮ್ಮ ದೇಶದಲ್ಲಿ ಒಂದು ಪದ್ಧತಿಯಿದೆ. ಯಾವಾಗೆಲ್ಲಾ ಒಂದು ಶುಭ ಕಾರ್ಯಕ್ರಮ ಜರಗುವುದೋ, ಆಗ ನಾವು ಹಿರಿಯರ ಆಶೀರ್ವಾದವನ್ನು ಕೋರುತ್ತೇವೆ. ಆಮಂತ್ರಣ ಪತ್ರಿಕೆಗಳಲ್ಲಿನ ವಿಳಾಸವು ಮನೆಯಲ್ಲಿನ ಅತ್ಯಂತ ಹಿರಿಯ ವ್ಯಕ್ತಿಯ ಹೆಸರಲ್ಲಿರುತ್ತದೆ. ಯಾಕೆಂದು ನಿಮಗೆ ತಿಳಿದಿದೆಯೇ? ನಾವು ಹಿರಿಯವರಾದಂತೆಲ್ಲಾ ಮತ್ತು ಪ್ರೌಢರಾದಂತೆಲ್ಲಾ, ನಾವು ತೃಪ್ತರಾಗಬೇಕು. ಒಬ್ಬ ತೃಪ್ತ ವ್ಯಕ್ತಿಯು ಯಾರನ್ನಾದರೂ ಆಶೀರ್ವದಿಸಿದಾಗಲೆಲ್ಲಾ, ಅದು ನಿಜವಾಗುತ್ತದೆ. ಹೀಗಿದ್ದರೂ, ಈ ದಿನಗಳಲ್ಲಿ ವಯಸ್ಸಾದಂತೆಲ್ಲಾ ಜನರು ಹೆಚ್ಚು ಹೆಚ್ಚು ಬಿಗುವಾಗುತ್ತಿದ್ದಾರೆ. ನಿಮಗೇನೂ ಬೇಕಾಗಿಲ್ಲವೆಂದು ನಿಮಗನ್ನಿಸುವಾಗ, ಇತರರ ಬಯಕೆಗಳನ್ನು ಈಡೇರಿಸುವ ಸಾಮರ್ಥ್ಯವು ನಿಮಗೆ ಸಿಗುತ್ತದೆ.
ನೀವು ಉತ್ತರ ಧ್ರುವಕ್ಕೆ ಹೋದರೆ, ನಿರಂತರವಾಗಿ ೨ ತಿಂಗಳು ಅಲ್ಲಿ ಕತ್ತಲೆಯಿರುತ್ತದೆ. ೨ ತಿಂಗಳುಗಳ ವರೆಗೆ ಸೂರ್ಯನು ಉದಯಿಸುವುದಿಲ್ಲ. ನವೆಂಬರ್ ೨೦ ರಂದು ಒಮ್ಮೆ ನಾನು ಅಲ್ಲಿಗೆ ಹೋಗಿದ್ದೆ ಮತ್ತು ನಾನು ಅವರಲ್ಲಿ ಕೇಳಿದೆ, "ಸೂರ್ಯನು ಯಾವಾಗ ಉದಯಿಸುತ್ತಾನೆ?" ಅವರು ಉತ್ತರಿಸಿದರು, "ಜನವರಿ ೨೦ ರಂದು!" ಸೂರ್ಯನು ೨ ತಿಂಗಳುಗಳ ವರೆಗೆ ಅಸ್ತಮಿಸುವುದಿಲ್ಲ ಕೂಡಾ. ಅಂತಹ ಜಾಗಗಳಲ್ಲಿ ಕೂಡಾ, ಜನರು ಸುದರ್ಶನ ಕ್ರಿಯೆಯನ್ನು ಮಾಡುತ್ತಿದ್ದಾರೆ. ನಾನು ವಿಮಾನ ನಿಲ್ದಾಣದಲ್ಲಿ ಇಳಿದಾಗ, ನನ್ನನ್ನು ಸ್ವೀಕರಿಸಲು ೧೦ ಜನರು ಬಂದಿದ್ದರು. ನಾನು ಅಲ್ಲಿಗೆ ಒಂದು ವಿಶ್ವವಿದ್ಯಾನಿಲಯದಲ್ಲಿ ಒಂದು ಭಾಷಣ ಮಾಡಲು ಹೋಗಿದ್ದೆ. ಅಲ್ಲಿನ ಜನರು ಧ್ಯಾನ ಮಾಡುವುದನ್ನು ಮತ್ತು "ಓಂ ನಮಃ ಶಿವಾಯ" ಎಂದು ಜಪಿಸುವುದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು.
ಅದೇ ರೀತಿಯಲ್ಲಿ, ನಾನು ದಕ್ಷಿಣ ಧ್ರುವದ ಒಂದು ದೂರದ ಊರಿಗೆ ಹೋದಾಗ, ಅಲ್ಲಿನ ಸತ್ಸಂಗದಲ್ಲಿ ಸುಮಾರು ೧೦೦೦ ಜನರಿದ್ದರು!
ಭಾರತದ ಆಧ್ಯಾತ್ಮಿಕ ಜ್ಞಾನವು ಪ್ರಪಂಚದ ಎಲ್ಲಾ ಮೂಲೆಗಳಿಗೂ ತಲಪಿದೆ. ಇದೆಲ್ಲವೂ ಸಾಧ್ಯವಾಗಿರುವುದು ಒಂದು ಸಕಾರಾತ್ಮಕ ಸಂಕಲ್ಪದಿಂದಾಗಿ. ಇದು ಯುವಜನರಿಗೆ ಒಂದು ಉದಾಹರಣೆಯಾಗಿದೆ. ದೊಡ್ಡ ಕನಸು ಕಾಣಿ!
ಮೊದಲನೆಯ ವಿಮಾನವನ್ನು ಭಾರತದಲ್ಲಿ ತಯಾರಿಸಲಾಯಿತು ಎಂಬುದು ನಿಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿಲ್ಲ? ಮೊದಲನೆಯ ವಿಮಾನವನ್ನು ಯಾರು ವಿನ್ಯಾಸಗೊಳಿಸಿದರು ಎಂಬುದು ನಿಮಗೆ ಗೊತ್ತಿದೆಯಾ? ರೈಟ್ ಸಹೋದರರಲ್ಲ, ಆದರೆ ಬೆಂಗಳೂರಿನ ಆನೇಕಲ್ ಜಿಲ್ಲೆಯ ಸುಬ್ರಾಯ ಶರ್ಮ ಶಾಸ್ತ್ರಿ ಎಂಬವರು. ಪಾರ್ಸಿ ಸಂಭಾವಿತರಾದ ಶ್ರೀ. ನವರೋಜಿಯವರು, ಮೊದಲನೆಯ ವಿಮಾನವನ್ನು ತಯಾರಿಸಲು ಅವರಿಗೆ ಬೆಂಬಲ ನೀಡಿದರು. ಅವರು ಅದನ್ನು ಮುಂಬೈಯ ಚೌಪಾಟಿ ಸಮುದ್ರತೀರದಲ್ಲಿ ೧೫ ನಿಮಿಷಗಳ ಕಾಲ ಹಾರಿಸಿದರು ಮತ್ತು ಬ್ರಿಟಿಷರು ಅವರಿಬ್ಬರನ್ನೂ ಜೈಲಿಗೆ ಹಾಕಿದರು. ೧೫ ವರ್ಷಗಳ ನಂತರ, ರೈಟ್ ಸಹೋದರರು ತಮ್ಮ ಮೊದಲನೆಯ ವಿಮಾನವನ್ನು ಹಾರಿಸಿದರು. ಇಬ್ಬರು ಭಾರತೀಯ ಸಂಭಾವಿತರು ಒಂದು ವಿಮಾನವನ್ನು ಹಾರಿಸಿದರು ಎಂಬುದು ಇಂಗ್ಲೇಂಡಿನ ವಾರ್ತಾಪತ್ರಿಕೆಗಳಲ್ಲಿ ಪ್ರಕಟವಾಯಿತು. ನಮಗೆ ನಮ್ಮ ಶಕ್ತಿಯ ಬಗ್ಗೆ ಅರಿವಿಲ್ಲ.
ನಿಮ್ಮ ಸಂಕಲ್ಪವನ್ನಿರಿಸಿ. ನಿಮಗಾಗಿ ನೀವು ಏನನ್ನೂ ಬಯಸದೇ ಇದ್ದಾಗ, ನಿಮಗೆ ಆಶೀರ್ವದಿಸುವ ಸಾಮರ್ಥ್ಯವು ಲಭಿಸುತ್ತದೆ.
ಇವತ್ತು, ದೇಶದಲ್ಲಿ ಹಲವಾರು ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ದೊಡ್ಡ ಸವಾಲುಗಳ ಬಗ್ಗೆ ಯೋಚಿಸಿ. ನಮ್ಮ ದೇಶಕ್ಕಾಗಿ, ನಮ್ಮ ಸಮಾಜಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಲು ಎಲ್ಲಾ ಯುವಜನರು ಹಾಗೂ ಹಿರಿಯರು ಒಟ್ಟಾಗಿ ಬರಬೇಕೆಂದು ನಾನು ಬಯಸುತ್ತೇನೆ. ಈ ಉದ್ದೇಶಕ್ಕಾಗಿ ನಿಮ್ಮ ಜೀವನದ ಒಂದು ವರ್ಷವನ್ನು ಮೀಸಲಿಡಲು ನಿಮ್ಮಲ್ಲಿ ಎಷ್ಟು ಜನರು ಸಿದ್ಧರಿದ್ದೀರಿ? ಒಂದು ವರ್ಷದ ವರೆಗೆ, ನಿಮ್ಮ ಬಗ್ಗೆ ಚಿಂತಿಸಬೇಡಿ. ನಮ್ಮ ದೇಶದ ಬಗ್ಗೆ, ರಾಜ್ಯದ ಬಗ್ಗೆ ಮತ್ತು ನಗರದ ಬಗ್ಗೆ ಚಿಂತಿಸಿ.
ಸತ್ಸಂಗವು ಉತ್ಸಾಹ ಮತ್ತು ಆನಂದವನ್ನು ತರುತ್ತದೆ, ಸಾಧನೆಯು ಆಂತರಿಕ ಶಕ್ತಿಯನ್ನು ತರುತ್ತದೆ ಮತ್ತು ಸೇವೆಯು ತೃಪ್ತಿಯನ್ನು ತರುತ್ತದೆ. ನಿಮ್ಮ ಸುತ್ತುಮುತ್ತಲಿನ ಪರಿಸರವನ್ನು ಶುಚಿಗೊಳಿಸಲು ಒಂದು ಭಾನುವಾರದಂದು ೨ ಗಂಟೆಗಳ ಕಾಲ ಎಲ್ಲರೂ ಸೇರಿ ಕೆಲಸ ಮಾಡಿ. ಸಮಾಜದಲ್ಲಿನ ಭಿನ್ನತೆಗಳನ್ನು ತೆಗೆದು ಹಾಕಲು ನಾವು ಒಟ್ಟು ಸೇರಿ ಕೆಲಸ ಮಾಡಬೇಕು. ನಾವೆಲ್ಲರೂ ದೇವರಿಗೆ ಸೇರಿದವರು ಮತ್ತು ನಮ್ಮೆಲ್ಲರಲ್ಲೂ ಅದೇ ದೈವತ್ವವು ಇದೆ. ಹಿಂಸಾ-ರಹಿತ ಮತ್ತು ಒತ್ತಡ-ರಹಿತ ಸಮಾಜಕ್ಕಾಗಿ ನಾವು ಹಂಬಲಿಸಬೇಕು.
ಎಲ್ಲಾ ಯುವಜನರಿಗೆ: ದೊಡ್ಡ ಕನಸು ಕಾಣಿ, ಅದನ್ನು ದೇವರಿಗೆ ಅರ್ಪಿಸಿ ಮತ್ತು ಅದಕ್ಕಾಗಿ ನಿಮ್ಮ ಪ್ರಯತ್ನವನ್ನು ಹಾಕಿ. ಪ್ರತಿದಿನವೂ ಧ್ಯಾನ ಮಾಡಿ. ಅದು ನಿಮಗೆ ಅಗಾಧವಾದ ಆಂತರಿಕ ಶಕ್ತಿಯನ್ನು ನೀಡುತ್ತದೆ. ಅದು ನಿಮಗೆ ಒಳ್ಳೆಯ ಆರೋಗ್ಯ, ಶಾಂತ ಮನಸ್ಸು, ಸುಧಾರಿತ ಅಂತಃಸ್ಫುರಣ ಶಕ್ತಿಗಳು, ತೀಕ್ಷ್ಣ ಬುದ್ಧಿಯನ್ನು ನೀಡುತ್ತದೆ ಮತ್ತು ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದರಲ್ಲಿ ಯಶಸ್ವಿಯಾಗುವಿರಿ. ಎಲ್ಲದಕ್ಕಿಂತ ಹೆಚ್ಚಾಗಿ, ಅದು ನಿಮಗೆ ತೃಪ್ತಿಯನ್ನು ನೀಡುತ್ತದೆ.
ಡಿಸೆಂಬರ್ ೨೮ರಂದು, ರಷ್ಯಾದಲ್ಲಿ ಭಗವದ್ಗೀತೆಯನ್ನು ನಿಷೇಧಿಸುವುದರ ಬಗ್ಗೆ ತೀರ್ಪು ಬರಲಿದೆ. ರಷ್ಯಾದ ಒಕ್ಕೂಟವು ನನಗೆ ಎರಡು ಗೌರವಗಳನ್ನು ನೀಡಿದೆ. ನಾನಂದೆ, ಈ ಎರಡೂ ಗೌರವಗಳನ್ನು ನಾನು ಅವರಿಗೆ ಹಿಂತಿರುಗಿಸುವೆನು ಎಂದು. ಕಳೆದ ೫೦೦೦ ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನೂ ಗೌರವಿಸುತ್ತಿರುವ ಹಾಗೂ ಆರಾಧಿಸುತ್ತಿರುವ, ಭಾರತದ ಒಂದು ಧರ್ಮಗ್ರಂಥವನ್ನು ಅವರು ಗೌರವಿಸದಿದ್ದರೆ, ರಷ್ಯಾದ ಈ ಗೌರವಗಳೊಂದಿಗೆ ನಾನೇನು ಮಾಡಲಿ? ಭಗವದ್ಗೀತೆಯು ಯಾವತ್ತೂ ಎಲ್ಲಿಯೂ ಯಾವುದೇ ಉಗ್ರವಾದಿಯನ್ನೂ ಸೃಷ್ಟಿಸಿಲ್ಲ, ಅದು ಶಾಂತಿಯನ್ನು ಮಾತ್ರ ತಂದಿದೆ  ಎಂಬ ಸಂದೇಶವನ್ನು ನಾನು ಈಗಾಗಲೇ ಕಳುಹಿಸಿದ್ದೇನೆ. ಈ ಅಸಹನೆಯ ಕಲ್ಪನೆಯನ್ನು ಸಹಿಸಬಾರದು.

ಪ್ರಶ್ನೆ: ನಾನು ನನ್ನ ಜೀವನದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದ್ದೇನೆ. ಇದಕ್ಕಿರುವ ಪರಿಹಾರವೇನು?
ಶ್ರೀ ಶ್ರೀ ರವಿಶಂಕರ್: ಜೀವನವೆಂಬುದು ಒಂದು ನದಿಯಂತೆ. ಅಲ್ಲಿ ನೋವು ಮತ್ತು ಸಂತಸ ಎರಡೂ ಇದೆ. ಸಮಯ ಕಳೆದಂತೆ, ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಮಿತ್ರರಾಗುತ್ತಾರೆ. ಇದೆಲ್ಲವೂ ಆಗುತ್ತಾ ಇರುತ್ತದೆ. ನೀನು ನೋವನ್ನು ಅನುಭವಿಸಿರುವೆಯೆಂದು ದುಃಖ ಪಡಬೇಡ. ಮುಂದೆ ಸಾಗು. ಹಿಂದಿನದ್ದನ್ನು ಬಿಟ್ಟು ಮುಂದೆ ಸಾಗು. ದೇವರು ಯಾವತ್ತೂ ನಿನ್ನೊಂದಿಗಿದ್ದಾರೆ.

ಪ್ರಶ್ನೆ: ಗುರೂಜಿ, ಉತ್ತಮ ಭಾರತಕ್ಕಾಗಿ ನೀವೊಂದು ಉತ್ತಮ ರಾಜಕೀಯ ಪಕ್ಷವನ್ನು ರೂಪಿಸಬಲ್ಲಿರಾ?
ಶ್ರೀ ಶ್ರೀ ರವಿಶಂಕರ್: ಒಬ್ಬ ಸುಧಾರಕನು ಒಬ್ಬ ಆಡಳಿತಗಾರನಾಗಲು ಸಾಧ್ಯವಿಲ್ಲ ಮತ್ತು ಒಬ್ಬ ಆಡಳಿತಗಾರನು ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ. ಆದರೆ, ಒಳ್ಳೆಯ ಜನರು ರಾಜಕೀಯಕ್ಕೆ ಬರಬೇಕೆಂದು ನಾನು ಬಯಸುತ್ತೇನೆ. ನಾನು ಒಂದು ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರೆ, ಎಲ್ಲಾ ಒಳ್ಳೆಯ ಜನರು ಒಂದು ಪ್ರದೇಶದಲ್ಲಿ ಸೇರುತ್ತಾರೆ. ಅದು ಸಮಾಜಕ್ಕೆ ಒಳ್ಳೆಯದಲ್ಲ. ಒಳ್ಳೆಯ ಜನರು ಎಲ್ಲಾ ಕಡೆಗಳಲ್ಲಿರಬೇಕೆಂದು ನಾನು ಬಯಸುತ್ತೇನೆ. ಒಳ್ಳೆಯ ಮತ್ತು ಕೆಟ್ಟ ಜನರನ್ನು ವಿಭಜಿಸಲು ನಾನು ಬಯಸುವುದಿಲ್ಲ. ಪ್ರತಿಯೊಂದು ಪಕ್ಷದಲ್ಲೂ ಒಳ್ಳೆಯ ಜನರಿದ್ದಾರೆ ಮತ್ತು ಅವರಿಗೆ ಒಂದು ಅವಕಾಶವನ್ನು ನೀಡಬೇಕು. ಒಳ್ಳೆಯ ಜನರು ಮೇಲೆ ಬರಬೇಕು ಮತ್ತು ಅವರು ಕಷ್ಟಪಟ್ಟು ಕೆಲಸ ಮಾಡಬೇಕು.

ಪ್ರಶ್ನೆ: ಗುರೂಜಿ, ನಾನು ಹಲವಾರು ಜನರಿಗೆ ಕೋರ್ಸ್ ಮಾಡಲು ಹೇಳುತ್ತೇನೆ, ಆದರೆ ನನ್ನ ಗಂಡನು ಅದನ್ನು ಮಾಡಲು ಬಯಸುವುದಿಲ್ಲ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನಿನ್ನ ಗಂಡನ ಸ್ನೇಹಿತನು ಕೋರ್ಸನ್ನು ಮಾಡುವಂತೆ ಮಾಡು ಮತ್ತು ಅವನು ನಿನ್ನ ಗಂಡನನ್ನು ಕೋರ್ಸಿಗೆ ಕರೆದುತರುವಂತೆ ಮಾಡು. ನೀನು ಮಾವಿನಹಣ್ಣಿನ ಮೇಲೆ ಒಂದು ಕಲ್ಲನ್ನೆಸೆಯಬೇಡ. ನೀನು ರೆಂಬೆಗೆ ಹೊಡೆ ಮತ್ತು ಮಾವಿನಹಣ್ಣು ಬೀಳುತ್ತದೆ. ಪರೋಕ್ಷ ತಂತ್ರಗಳನ್ನು ಬಳಸು!

ಪ್ರಶ್ನೆ: ಗುರೂಜಿ, ನಿಮ್ಮ ಗುರಿಯೇನು?
ಶ್ರೀ ಶ್ರೀ ರವಿಶಂಕರ್: ನನ್ನ ಗುರಿಯೆಂದರೆ, ನಿನ್ನ ಮುಖದಲ್ಲಿ ಒಂದು ಅಮರವಾದ ಮುಗುಳ್ನಗೆಯನ್ನು  ನೋಡುವುದು. ಭಕ್ತಿಯಿಂದ ತುಂಬಿದ ಹಿಂಸಾ-ರಹಿತ ಸಮಾಜವನ್ನು ನೋಡಲು ನಾನು ಬಯಸುತ್ತೇನೆ.

ಪ್ರಶ್ನೆ: ಆಧ್ಯಾತ್ಮದೊಂದಿಗೆ ದೇಶದ ಬೆಳವಣಿಗೆಯು ಆಗಬಲ್ಲದೇ?
ಶ್ರೀ ಶ್ರೀ ರವಿಶಂಕರ್: ಖಂಡಿತಾ. ಆಧ್ಯಾತ್ಮದೊಂದಿಗೆ ಮಾತ್ರ ದೇಶದ ಬೆಳವಣಿಗೆಯಾಗಲು ಸಾಧ್ಯ. ಮಹಾತ್ಮಾ ಗಾಂಧಿಯು ಆಳವಾದ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಅವರು ಪ್ರತಿದಿನವೂ ಭಗವದ್ಗೀತೆಯನ್ನು ಓದುತ್ತಿದ್ದರು. ಗಾಂಧೀಜಿಗೆ ಭಗವದ್ಗೀತೆಯನ್ನು ಕಲಿಸಿದವರು ನನ್ನ ಶಿಕ್ಷಕರು. ಅವರು ಇನ್ನೂ ಬದುಕಿದ್ದಾರೆ ಮತ್ತು ಅವರಿಗೆ ೧೧೩ ವರ್ಷ ವಯಸ್ಸು. ಗಾಂಧೀಜಿಯವರು ಪ್ರತಿದಿನವೂ ಸತ್ಸಂಗಗಳನ್ನು ನಡೆಸುತ್ತಿದ್ದರು. ಅದರೊಂದಿಗೆ ಅವರು ಒಂದು ಚಳುವಳಿಯನ್ನು ಹುಟ್ಟು ಹಾಕಿದರು. ಶ್ರೀ ಅಣ್ಣಾ ಹಜ಼ಾರೆಯವರು ಉಪವಾಸ ಮಾಡುತ್ತಿದ್ದಾಗ ಆದ ಭಜನೆಗಳನ್ನು ಮಾಡಿದುದು ಆರ್ಟ್ ಆಫ್ ಲಿವಿಂಗಿನ ಜನರು. ಅವರು ಪ್ರತಿದಿನವೂ ಭಜನೆಗಳನ್ನು ಹಾಡುತ್ತಿದ್ದರು.

ಪ್ರಶ್ನೆ: ಗುರೂಜಿ, ಭ್ರಷ್ಟಾಚಾರದ ವಿರುದ್ಧ ಭಾರತ ಚಳವಳಿಯಲ್ಲಿ ನಿಮ್ಮ ಪಾತ್ರವೇನು?
ಶ್ರೀ ಶ್ರೀ ರವಿಶಂಕರ್: ನಾನು ಸ್ಥಾಪಕ ಸದಸ್ಯನಾಗಿದ್ದೆ. ನಾನು ಯಾಕೆ ಉಪವಾಸ ಮಾಡಲಿಲ್ಲವೆಂದು ನನ್ನಲ್ಲಿ ಕೇಳಲಾಗಿತ್ತು. ನಾನು ಪ್ರತಿಭಟಿಸುವುದಿಲ್ಲ, ಆದರೆ ನಾನು ಚಳವಳಿಯನ್ನು ಬೆಂಬಲಿಸುತ್ತೇನೆ ಎಂದು ನಾನು ಉತ್ತರಿಸಿದೆ. ನಾನು ಪ್ರತಿಭಟನೆಗೆ ಕುಳಿತರೆ, ೧೫೦ ದೇಶಗಳ ರಾಯಭಾರಿ ಕಛೇರಿಗಳ ಮುಂದೆ ತಳಮಳವುಂಟಾಗಬಹುದು. ಇದು ನಮ್ಮ ದೇಶಕ್ಕೆ ಒಂದು ಕೆಟ್ಟ ಹೆಸರನ್ನು ತರಬಹುದು. ನನಗೆ ಅಣ್ಣಾ ಹಜ಼ಾರೆಯವರು ೩೦ ವರ್ಷಗಳಿಂದ ಗೊತ್ತು. ಅವರು ದಿಲ್ಲಿಗೆ ಬಂದಾಗ, ಅವರನ್ನು ಅಲ್ಲಿ ಯಾರಿಗೂ ತಿಳಿಯದು ಎಂದು ಅವರಂದರು. ನಾನಂದೆ, ನೀವು ಕುಳಿತುಕೊಳ್ಳಿ ಮತ್ತು ಜನರಿಗೆ ಗೊತ್ತಾಗುತ್ತದೆ ಎಂದು. ಅವರು ಬಹಳ ಒಳ್ಳೆಯ ವ್ಯಕ್ತಿ, ಬಹಳ ಸಮರ್ಪಿತರು.

ಪ್ರಶ್ನೆ: ಗುರೂಜಿ, ಸಾಧನೆ, ಸೇವೆ ಮತ್ತು ಸತ್ಸಂಗ ಮಾಡುವಾಗ, ಎಲ್ಲಾ ಸಮಯದಲ್ಲೂ ನಾನು ಸಂತೋಷವಾಗಿರುತ್ತೇನೆ. ಆದರೆ, ನಾನು ಕೆಲಸ ಮಾಡಲು ಪ್ರಾರಂಭಿಸುವಾಗ ನನ್ನ ಮನಸ್ಸು ಜಾರುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ಕೆಲಸದ ಪ್ರಾಮುಖ್ಯತೆಯನ್ನು ನಾನು ತಿಳಿಯಲು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್: ಎರಡೂ ಅವಶ್ಯಕವಾಗಿವೆ. ನಾವು ಶರೀರ ಮತ್ತು ಮನಸ್ಸು ಎರಡರ ಕಡೆಗೂ ಗಮನ ನೀಡಬೇಕು.