ಬುಧವಾರ, ಡಿಸೆಂಬರ್ 7, 2011

ಬದ್ಧತೆಯ ವಿನಾ ಬದುಕಿನಲ್ಲಿ ಸ್ಥಿರತೆ, ಹರ್ಷ ಮತ್ತು ಪ್ರಗತಿ ಇರುವುದಿಲ್ಲ

ಬೆ೦ಗಳೂರು, ಭಾರತ

೭ ಡಿಸೆಂಬರ್ ೨೦೧೧

ಪ್ರಶ್ನೆ: ಗುರೂಜಿ, ಶಿವಸೂತ್ರಗಳಲ್ಲಿ "ಜ್ಞಾನಂ ಬಂಧನಂ" ಎಂದು ನೀವು ಹೇಳಿರುವಿರಿ. ನಾನು ಗೊಂದಲಕ್ಕೊಳಗಾಗಿದ್ದೇನೆ; ಜ್ಞಾನವು ನಮ್ಮನ್ನು ಮುಕ್ತಗೊಳಿಸುವುದೇ ಅಥವಾ ನಮ್ಮನ್ನು ಬಂಧನದಲ್ಲಿ ಸಿಲುಕಿಸುವುದೇ?
ಶ್ರೀ ಶ್ರೀ ರವಿಶಂಕರ್: ನೋಡಿ, ಧ್ಯಾನದ ಬಳಿಕ ನೀವು ನಿಮ್ಮ ಶರೀರ ಮತ್ತು ಸುತ್ತಲಿನ ಪರಿಸರದ ಬಗ್ಗೆ ಅರಿವು ಮೂಡಿಸಿಕೊಂಡಾಗ, ನಿಮ್ಮ ಸೀಮಿತ ಮನಸ್ಸು, ಸೀಮಿತ ವಿಷಯಗಳ ಬಗ್ಗೆ ತಿಳುವಳಿಕೆ ಪಡೆದುಕೊಳ್ಳುತ್ತದೆ. ಒಂದು ಸಮಯದಲ್ಲಿ ನೀವು ಕೇವಲ ಚರಿತ್ರೆಯನ್ನು ಅಥವಾ ಗಣಿತವನ್ನು ಅಥವಾ ಭೌತಶಾಸ್ತ್ರವನ್ನು ಅಥವಾ ರಸಾಯನಶಾಸ್ತ್ರವನ್ನು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಒಂದು ಸಮಯದಲ್ಲಿ ನಿಮಗೆ ಕೇವಲ ಒಂದು ವಿಷಯವನ್ನು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಒಂದು ನಿರ್ದಿಷ್ಟ ವಿಷಯದ ಬಗೆಗಿನ ಜ್ಞಾನವು ನಿಮ್ಮ ಮನಸ್ಸನ್ನು, ವಿಶಾಲತೆಯಿಂದ ಒಂದು ಸೀಮಿತ ಜ್ಞಾನದ ಗೋಳಕ್ಕೆ ಸೀಮಿತಗೊಳಿಸುತ್ತದೆ. ಆ ಸೀಮಿತ ಜ್ಞಾನವು ಬಂಧನವಾಗಿದೆ.

ಪ್ರಶ್ನೆ: ನಾವು ನಮ್ಮ ಉದ್ದೇಶ ಮತ್ತು ಕೃತ್ಯಗಳಲ್ಲಿ ಪರಿಶುದ್ಧವಾಗಿದ್ದು, ಆಗಲೂ ಅದಕ್ಕೆ ವಿರುದ್ಧವಾಗಿ ಗ್ರಹಿಸಲ್ಪಟ್ಟು ದೂಷಿಸಲ್ಪಟ್ಟರೆ, ನಾವೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಕೇವಲ ಕಿರುನಗೆ ಬೀರಿ. ಇತರರು ದೂಷಿಸುವುದರ ಬಗ್ಗೆ ಚಿಂತಿಸಬೇಡಿ. ನೀವು ಸುಮ್ಮನೆಯೂ ಇರಬಾರದು. ನೀವು ಶಿಕ್ಷಣ ನೀಡಬೇಕು ಮತ್ತು ನಿರ್ಲಕ್ಷಿಸಬೇಕು.

ಪ್ರಶ್ನೆ: ಗುರೂಜಿ, ಪಾರ್ಟ್-೨ ಕೋರ್ಸ್, ತಲೆಯಿಂದ ಹೃದಯಕ್ಕಿರುವ ಒಂದು ಪಯಣವಾಗಿದೆ. ಅಧ್ಯಾತ್ಮದಲ್ಲಿ ತರ್ಕಕ್ಕಿರುವ ಸ್ಥಾನವೇನು?
ಶ್ರೀ ಶ್ರೀ ರವಿಶಂಕರ್: ತರ್ಕಕ್ಕೆ ಒಂದು ಬಹಳ ಪ್ರಧಾನವಾದ ಸ್ಥಾನವಿದೆ. ತರ್ಕದ ಮೂಲಕವೇ ನೀವು ಆಧ್ಯಾತ್ಮಕ್ಕೆ ಪ್ರವೇಶಿಸುವುದು. ತರ್ಕವು, ಯಾವುದು ಜೀವನ ಮತ್ತು ಯಾವುದು ಪ್ರಪಂಚವೆಂಬುದನ್ನು ಹಾಗೂ ನೀವು ನಿಮ್ಮ ಸಮಯವನ್ನು ಹೇಗೆ ವ್ಯರ್ಥ ಮಾಡುತ್ತಿರುವಿರಿ ಎಂಬುದನ್ನು ನೀವು ನೋಡುವಂತೆ ಮಾಡುತ್ತದೆ! ಇದೆಲ್ಲವೂ ತರ್ಕದ ಮೂಲಕ ಬರುತ್ತದೆ. ಒಂದು ತಾರ್ಕಿಕ ಮನಸ್ಸು, "ಇಲ್ಲ, ನಾನು ನನ್ನ ಸಮಯವನ್ನು ವ್ಯರ್ಥ ಮಾಡಬಾರದು. ಜೀವನವು ಚಿಕ್ಕದು, ಎಲ್ಲವೂ ನಶ್ವರ" ಎಂದು ಹೇಳುತ್ತದೆ.
ಹಿಂದಿನದ್ದರ ಬಗ್ಗೆ ಚಿಂತಿಸುವುದರಲ್ಲಿ ಮತ್ತು ಭವಿಷ್ಯದ ಬಗ್ಗೆ ಕೊರಗುವುದರಲ್ಲಿ ಯಾವುದೇ ಅರ್ಥವಿಲ್ಲ; ಇದು ತರ್ಕ.
ಆದುದರಿಂದ ತರ್ಕವು ಆಧ್ಯಾತ್ಮದೊಳಕ್ಕೆ ಹೋಗಲು ನಿಮಗೊಂದು ಮೆಟ್ಟಿಲು ನೀಡುತ್ತದೆ ಮತ್ತು ಆದುದರಿಂದ ತರ್ಕವು ಪ್ರಧಾನವಾದುದು. ಆದರೆ ಅದೊಂದು ಮೆಟ್ಟಿಲು ಮಾತ್ರ, ನೀವು ಮೆಟ್ಟಿಲಿನ ಮೇಲೆ ನಿದ್ರೆ ಮಾಡಲು ಸಾಧ್ಯವಿಲ್ಲ. ನೀವು ಮನೆಯನ್ನು ಪ್ರವೇಶಿಸಬೇಕು. ಆದುದರಿಂದ ಅದು, ಮನೆಯನ್ನು ಪ್ರವೇಶಿಸಲಿರುವ ಮೊದಲನೆಯ ಮೆಟ್ಟಿಲಾಗಿದೆ.

ಪ್ರಶ್ನೆ: ಗುರೂಜಿ, ರೂಢಿಗಳಿಂದ ಪಾರಾಗಲು ಒಬ್ಬನು ಸಂಕಲ್ಪ ತೆಗೆದುಕೊಳ್ಳಬೇಕು ಎಂದು ನೀವು ಹೇಳಿರುವಿರಿ. ಸಂಕಲ್ಪವೆಂದರೇನು?
ಶ್ರೀ ಶ್ರೀ ರವಿಶಂಕರ್: ನಿಮ್ಮಲ್ಲಿ ಯಾವುದಾದರೂ ಕೆಟ್ಟ ಅಭ್ಯಾಸಗಳಿದ್ದರೆ, ನೀವೊಂದು ಸಂಕಲ್ಪವನ್ನು ತೆಗೆದುಕೊಳ್ಳಬಹುದು. ನಿಮಗೆ ನಕಾರಾತ್ಮಕವಾಗಿ ಮಾತನಾಡುವ ಅಭ್ಯಾಸವಿದ್ದರೆ, ಆಗ ನೀವು, "ಇವತ್ತು ನಾನು ನಕಾರಾತ್ಮಕವಾಗಿ ಮಾತನಾಡುವುದಿಲ್ಲ. ನಾನು ಯಾರ ಬಗ್ಗೆಯೂ ದೂರುವುದಿಲ್ಲ" ಎಂದು ಹೇಳಿ. ಇಂತಹ ಹೆಜ್ಜೆಗಳನ್ನು ತೆಗೆದುಕೊಳ್ಳುವುದರಿಂದ ಒಂದು ದೊಡ್ಡ ಬದಲಾವಣೆಯಾಗುತ್ತದೆ.
ನಿಮಗೆ ಅತಿಯಾಗಿ ತಿನ್ನುವ ಅಭ್ಯಾಸವಿದ್ದರೆ ಮತ್ತು ನೀವು, "ಸರಿ, ನಾನು ಒಂದು ವಾರದ ವರೆಗೆ ಅತಿಯಾಗಿ ತಿನ್ನುವುದಿಲ್ಲ. ನಾನು ಸ್ವಲ್ಪವೇ ತಿನ್ನುತ್ತೇನೆ" ಎಂಬ ಒಂದು ಹೆಜ್ಜೆಯನ್ನು ತೆಗೆದುಕೊಂಡರೆ, ಅದೊಂದು ಸಂಕಲ್ಪ.

ಪ್ರಶ್ನೆ: ವಿಷಯಗಳು, ನಾನಿದನ್ನು ಮಾಡಲು ಬಯಸುತ್ತೇನೆ ಎಂಬುದರಿಂದ ನಾನದನ್ನು ಮಾಡಬೇಕಾಗಿದೆ ಎಂಬುದಾಗಿ ಬದಲಾಗುವಾಗ, ಕೆಲಸ ಮಾಡಲು ಬಹಳ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಏನು ಮಾಡಬೇಕು? ನಾನು ಸೇವೆ ಮಾಡುವಾಗ ನನಗೆ ಈ ರೀತಿ ಆಗುತ್ತದೆ. 
ಶ್ರೀ ಶ್ರೀ ರವಿಶಂಕರ್: ಬದ್ಧತೆಯು ಆವಶ್ಯಕವಾದುದು. ಬದ್ಧತೆಯಿಲ್ಲದೆ ಜೀವನದಲ್ಲಿ ಸ್ಥಿರತೆ, ಸಂತೋಷ ಮತ್ತು ಪ್ರಗತಿಯಿರುವುದಿಲ್ಲ. ಆದುದರಿಂದ ನೀವೊಂದು ಕೆಲಸಕ್ಕೆ ಬದ್ಧರಾಗಿದ್ದರೆ, ನೀವದನ್ನು ಪೂರೈಸಬೇಕು.