ಮಂಗಳವಾರ, ಡಿಸೆಂಬರ್ 20, 2011

ಜೀವನ ಪ್ರಫುಲ್ಲಿತವಾಗುವುದು ಪ್ರೇಮದಲ್ಲಿದ್ದಾಗಲೇ

20
2011
Dec
ಬೆ೦ಗಳೂರು, ಕರ್ನಾಟಕ, ಭಾರತ


ಪ್ರಶ್ನೆ: ಪಾಪ್ ಮತ್ತು ಟ್ವಿಟ್ಟರ್ ಪೀಳಿಗೆಯಲ್ಲಿ, ಜೀವನದ ಗೀತೆಯಾಗಿರುವ ಭಗವದ್ಗೀತೆಯನ್ನು ಜನಪ್ರಿಯಗೊಳಿಸುವುದು ಹೇಗೆ? ಗೀತೆಯ ಟ್ವಿಟ್ಟರ್ ರೂಪಾಂತರವನ್ನು ಕೂಡಾ ನಾವು ಪಡೆಯಬಹುದೇ?
ಶ್ರೀ ಶ್ರೀ ರವಿಶಂಕರ್: ಹೌದು, ಖಂಡಿತಾ! ಪ್ರತಿಯೊಂದು ಪೀಳಿಗೆಗೆ, ಪ್ರತಿಯೊಂದು ವಯೋಮಾನಕ್ಕೆ ಮತ್ತು ಪ್ರತಿಯೊಂದು ಮನೋಭಾವಕ್ಕೆ ನೀಡಲು ಗೀತೆಯಲ್ಲಿ ಏನಾದರೂ ಇದೆ.

ಪ್ರಶ್ನೆ: ಗುರೂಜಿ, ನಾನೊಬ್ಬ ಮನೋವಿಜ್ಞಾನಿ. ಆಧ್ಯಾತ್ಮವು ನನ್ನ ಜ್ಞಾನವನ್ನು ಹೆಚ್ಚಿಸಿ ಅದನ್ನು ಹೇಗೆ ಹೆಚ್ಚು ಸಮಗ್ರವನ್ನಾಗಿಸಬಹುದು ಎಂದು ನಾನು ತಿಳಿಯಲು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್: ಧ್ಯಾನವು ಹಲವಾರು ಮಾನಸಿಕ ಸಮಸ್ಯೆಗಳನ್ನು ಬದಲಾಯಿಸಬಲ್ಲದು. ಪ್ರಜ್ಞೆಯ ಬಗ್ಗೆ ಹೆಚ್ಚು ಆಳವಾಗಿ ಅಧ್ಯಯನ ಮಾಡು. ಭಗವದ್ಗೀತೆಯನ್ನು ಅಧ್ಯಯನ ಮಾಡು, ಯೋಗ ವಾಸಿಷ್ಠವನ್ನು ಅಧ್ಯಯನ ಮಾಡು ಮತ್ತು ಆಗ ನಿನಗೆ ಪ್ರಜ್ಞೆಯೆಂದರೇನು ಎಂಬುದರ ಬಗ್ಗೆ ಹೆಚ್ಚು ಅರ್ಥವಾಗುತ್ತದೆ. ಭಗವಾನ್ ಬುದ್ಧ ಮತ್ತು ಮಹಾವೀರರ ಬೋಧನೆಗಳನ್ನು ಓದು. ಅವರು ಪ್ರಜ್ಞೆಯ ವಿವಿಧ ಅಂಶಗಳ ಬಗ್ಗೆ ಮತ್ತು ಪ್ರಜ್ಞೆಯ ವಿವಿಧ ಘಟಕಗಳ ಬಗ್ಗೆ ಮಾತನಾಡಿದ್ದಾರೆ. ಅದು ಕೂಡಾ ಸಹಾಯಕವಾಗುತ್ತದೆ.

ಪ್ರಶ್ನೆ: ಗುರೂಜಿ, ನಾನು ದೇವರು ಎಂಬುದು ನನಗೆ ತಿಳಿದಿದೆ, ಆದರೆ ಅದು ನನಗೆ ಅನುಭವವಾಗುವುದಿಲ್ಲ. ಅದು ಯಾಕೆ ಹಾಗೆ?
ಶ್ರೀ ಶ್ರೀ ರವಿಶಂಕರ್: ನೀನು ಅದನ್ನು ಅನುಭವಿಸದೆ, ನಿನಗೆ ಅದನ್ನು ತಿಳಿಯಲು ಸಾಧ್ಯವಿಲ್ಲ. ನೀನು ಕೇವಲ ಯಾರೋ ಹಾಗೆ ಹೇಳುವುದನ್ನು ಕೇಳಿಸಿರುವೆ. ಆದರೆ ಅದು ಪರವಾಗಿಲ್ಲ. ಅದನ್ನು ನಿನ್ನ ಮನಸ್ಸಿನ ಹಿಂದೆ ಇಟ್ಟುಕೊಂಡಿರು ಮತ್ತು ಕೇವಲ ಸರಳವಾಗಿ ಹಾಗೂ ಸಹಜವಾಗಿ ಜೀವಿಸು. ಪ್ರೀತಿಯಲ್ಲಿರುವುದು ಮತ್ತು ಪ್ರೀತಿಯಿಂದ ವರ್ತಿಸುವುದು ಜೀವನದಲ್ಲಿನ ಅತ್ಯಂತ ಹೆಚ್ಚಿನ ಅರಳುವಿಕೆ ಎಂಬುದನ್ನು ತಿಳಿ.
ಎಲ್ಲಾ ಸಮಯದಲ್ಲಿ ಮತ್ತು ಎಲ್ಲೆಡೆಗಳಲ್ಲೂ ನೀವು ಪ್ರೀತಿಯನ್ನು ಅನುಭವಿಸದೇ ಇರಬಹುದು. ಹಲವಾರು ಸಾರಿ ನಾವು ಪ್ರೀತಿಯನ್ನು ಒಂದು ಭಾವನೆಯಾಗಿ ಅನುಭವಿಸಲು ಪ್ರಯತ್ನಿಸುತ್ತೇವೆ. ಪ್ರೀತಿಯು ಒಂದು ಭಾವನೆಯಲ್ಲ, ಅದು ನಮ್ಮ ಅಸ್ತಿತ್ವವೇ ಆಗಿದೆ. ಆದುದರಿಂದ, "ದೇವರೆಂದರೆ ಪ್ರೀತಿ" ಎಂಬುದನ್ನು, ’ಹೆಚ್ಚು ಭಾವನಾತ್ಮಕವಾಗಿ ಇರುವುದು’ ಎಂಬುದಾಗಿ ತೆಗೆದುಕೊಳ್ಳಬಾರದು. ನೀವು ದೇವರೆಂದು ಯಾರೋ ಹೇಳುವುದನ್ನು ಮಾತ್ರ ನೀವು ಕೇಳಿದ್ದೀರಿ, ಸರಿ ಇರಲಿ ಬಿಡಿ! ಕೇವಲ ನಿಮ್ಮ ಅನುಭವದ ಮೂಲಕ ಹಾದುಹೋಗಿ. ನೀವು ಯಾರೂ ಅಲ್ಲ, ನೀವೊಂದು ವಿಸ್ತಾರವಾದ ಅರಿವು; ಅಷ್ಟು ತಿಳಿದುಕೊಳ್ಳಿ. ಮೊದಲಿಗೆ, ನೀವು ಯಾವುದಲ್ಲ ಎಂಬುದನ್ನು ತಿಳಿದುಕೊಳ್ಳಿ, ನಂತರ ನೀವು ಏನಾಗಿರುವಿರಿ ಎಂಬುದು ಸ್ವಯಂಪ್ರೇರಿತವಾಗಿ ನಿಮಗೆ ತಿಳಿಯುತ್ತದೆ.

 ಪ್ರಶ್ನೆ: ಗುರೂಜಿ, ನಾನು ನಿಮ್ಮ ವ್ಯಸನಿಯಾಗಿದ್ದೇನೆ. ಅದೊಂದು ಸಮಸ್ಯೆಯೇ ಅಥವಾ ಭವಿಷ್ಯದಲ್ಲಿ ಅದು ಒಂದು ಸಮಸ್ಯೆಯನ್ನು ಸೃಷ್ಟಿಸಬಹುದೇ?
ಶ್ರೀ ಶ್ರೀ ರವಿಶಂಕರ್: ಚಿಂತಿಸಬೇಡ! ಕೇವಲ ನಿಶ್ಚಿಂತೆಯಿಂದಿರು.

ಪ್ರಶ್ನೆ: ನನ್ನ ಗುರುವಿನ ಬಗ್ಗೆ, ನನ್ನ ಧಾರ್ಮಿಕ ಪುಸ್ತಕದ ಬಗ್ಗೆ ಅಥವಾ ನನ್ನ ನಂಬಿಕೆಯ ಬಗ್ಗೆ ಜನರು ಟೀಕೆ ಮಾಡುವಾಗ, ಒಬ್ಬ ನಂಬಿಕೆಯುಳ್ಳವನಾಗಿ ನಾನು ಏನು ಮಾಡಬೇಕು? 
ಶ್ರೀ ಶ್ರೀ ರವಿಶಂಕರ್: ಕೇವಲ ಒಂದು ದೊಡ್ಡ ನಗುವನ್ನು ನೀಡು. ನೀನು ಅವರ ಅಜ್ಞಾನವನ್ನು ನೋಡಿ ನಗುತ್ತಿರುವುದಾಗಿ ಅವರಿಗೆ ಹೇಳು. ಅವರ ಮೇಲೆ ಕೋಪಗೊಳ್ಳುವುದಕ್ಕಿಂತ ಹೆಚ್ಚಿನ ಕೆಲಸವನ್ನು ಆ ಒಂದು ಹೇಳಿಕೆಯು ಮಾಡುತ್ತದೆ. ನೀವು ಆತ್ಮೀಯವೆಂದು ಪರಿಗಣಿಸುವ ಒಂದರ ವಿರುದ್ಧವಾಗಿ ಒಬ್ಬರು ಏನಾದರೂ ಹೇಳಿದರೆ, "ನಾನು ನಿನ್ನ ಅಜ್ಞಾನದ ಬಗ್ಗೆ ಕನಿಕರ ಪಡುತ್ತೇನೆ" ಎಂದು ಹೇಳಿ. ಅಷ್ಟೆ. ನಿಮಗೇನು ಮಾಡಲು ಸಾಧ್ಯ? ಒಬ್ಬರ ತಪ್ಪು ಯೋಚನೆಗಳನ್ನು ನಿಮಗೆ ಬಲವಂತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅವರು ಅದನ್ನು ಸ್ವೀಕರಿಸುವುದಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ, ಅವುಗಳನ್ನು ನಿರ್ವಹಿಸಲಿರುವ ಅತ್ಯುತ್ತಮ ಮಾರ್ಗವೆಂದರೆ ವ್ಯಂಗ್ಯ. ನಿಮ್ಮ ವ್ಯಂಗ್ಯವು ಒಂದು ಬಾಣದಂತೆ ಅವರ ಮನಸ್ಸಿನೊಳಗೆ ನಾಟುತ್ತದೆ ಮತ್ತು ಅವರು ತಮಗೆ ತಾವೇ ಸೃಷ್ಟಿಸಿರಬಹುದಾದಂತಹ ತಡೆಯನ್ನು ತುಂಡರಿಸುತ್ತದೆ. "ನಾನು ನಿಮ್ಮ ಅಜ್ಞಾನದ ಬಗ್ಗೆ ವಿಷಾದಿಸುತ್ತೇನೆ" ಎಂದು ಅವರಿಗೆ ಹೇಳಿ ಮತ್ತು ಅಷ್ಟು ಸಾಕು.
ನೋಡಿ, ಈಗ ರಷ್ಯಾದಲ್ಲಿ ಭಗವದ್ಗೀತೆಯನ್ನು ನಿಷೇಧಿಸಲು ಒಂದು ಪ್ರಯತ್ನ ನಡೆಯುತ್ತಿದೆ. ಇದು ರಷ್ಯಾದ ಜನತೆಯ ಮೇಲೆ ಮಾಡಿದ ಅನ್ಯಾಯವೆಂದು ನಾನು ಹೇಳಿದೆ. ನಾವು ಹೇಗಿದ್ದರೂ ಭಗವದ್ಗೀತೆಯ ಲಾಭವನ್ನು ಪಡೆಯುತ್ತಿದ್ದೇವೆ. ಆದರೆ ಭಗವದ್ಗೀತೆಯನ್ನು ನಿರಾಕರಿಸಿದುದು, ರಷ್ಯಾದ ಜನತೆಯ ಮೇಲೆ ಅವರದ್ದೇ ಜನರಿಂದ ಮಾಡಲ್ಪಟ್ಟ ಒಂದು ಅಕ್ಷಮ್ಯ ಅನ್ಯಾಯವಾಗಿದೆ. ನಾವು ಏನನ್ನೂ ಕಳಕೊಳ್ಳುವುದಿಲ್ಲ, ಆದರೆ ಅವರು ಕಳಕೊಳ್ಳುತ್ತಿದ್ದಾರೆ.

ಪ್ರಶ್ನೆ: ಗುರೂಜಿ, ಕೆಲವು ದಿನಗಳ ಹಿಂದೆ ನೀವು, ಅರ್ಜುನನ ಸ್ಥಾನ ಖಾಲಿಯಿದೆ ಎಂದು ಹೇಳಿದ್ದಿರಿ. ನಾನು ಆ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತೇನೆ. ನಾನು ಯೋಗ್ಯನೇ? ನಾನು ನಿಮಗೆ ನನ್ನ ಅರ್ಜಿಯನ್ನು ಹೇಗೆ ಕೊಡಬೇಕು ಗುರೂಜಿ?
ಶ್ರೀ ಶ್ರೀ ರವಿಶಂಕರ್: ಅದು ಈಗಾಗಲೇ ಮಾಡಿಯಾಯಿತು. ಈ ಪ್ರಶ್ನೆಯೇ ಒಂದು ಅರ್ಜಿ. ಈಗ, ನೀನು ಕೇಳಿಸಿಕೊಂಡ ಎಲ್ಲಾ ಜ್ಞಾನವನ್ನೂ ಅನ್ವಯಿಸುತ್ತಾ ಇರು.

ಪ್ರಶ್ನೆ: ಭಾರತದಲ್ಲಿ ದೀರ್ಘ ಕಾಲದ ವರೆಗೆ ಅಷ್ಟೊಂದು ಆಧ್ಯಾತ್ಮಿಕ ಸಂಪತ್ತಿದ್ದರೂ, ಅದು ಹೇಗೆ ಅಷ್ಟು ವರ್ಷಗಳ ವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿ ದಾಳಿಗೊಳಗಾಯಿತು? ಇದಕ್ಕೆ ಒಂದು ಆಧ್ಯಾತ್ಮಿಕ ಮಹತ್ವವಿದೆಯೇ?
ಶ್ರೀ ಶ್ರೀ ರವಿಶಂಕರ್: ಹೌದು, ಬದಲಾವಣೆಯ ಚಕ್ರವು ನಿಯಂತ್ರಣ ಸಾಧಿಸುತ್ತದೆ. ಶರತ್ಕಾಲ ಬರುವಾಗ, ಎಲೆಗಳು ಬಣ್ಣ ಬದಲಾಯಿಸುತ್ತವೆ ಮತ್ತು ಚಳಿಗಾಲದಲ್ಲಿ ಎಲೆಗಳು ಮರಗಳಿಂದ ಉದುರುತ್ತವೆ, ಆದರೆ ಮರ ಉಳಿಯುತ್ತದೆ. ಅದೇ ರೀತಿಯಲ್ಲಿ, ಕಲಿಯುಗದಲ್ಲಿ ಒಂದು ಅವನತಿಯುಂಟಾಯಿತು. ಅದು ಬಹುತೇಕ ಪ್ರತಿಯೊಂದು ದೇಶಕ್ಕೂ ಆಯಿತು.
ನೀವು ಜಾಗತಿಕ ಸನ್ನಿವೇಶವನ್ನು ವೀಕ್ಷಿಸಿದರೆ, ಒಂದು ಕಾಲಘಟ್ಟದಲ್ಲಿ ಭಾರತವು ಉನ್ನತಿಯಲ್ಲಿತ್ತು ಮತ್ತು ನಂತರ ಅದು ಕುಸಿಯಿತು. ಅದರ ಮೊದಲು, ಮಂಗೋಲಿಯಾವು ಉನ್ನತಿಯಲ್ಲಿತ್ತು ಮತ್ತು ಮಂಗೋಲಿಯಾವು ಕುಸಿಯಿತು. ಮಂಗೋಲಿಯನ್ನರು ಯುರೋಪಿನ ವರೆಗೂ ಹೋಗಿದ್ದರು ಮತ್ತು ಅವರು ಭಾರತಕ್ಕೂ ಕೂಡಾ ಬಂದರು. ಮೊಘಲರು ಮಂಗೋಲಿಯಾದಿಂದ ಬಂದರು.
ಭಾರತವು ಒಂದು ಕಾಲದಲ್ಲಿ ಪ್ರಕಾಶಿಸುತ್ತಿತ್ತು. ಭಾರತದ ಪ್ರಭಾವವು ದಕ್ಷಿಣ ಅಮೇರಿಕಾದ ಪೆರುವಿನಷ್ಟು ದೂರದ ವರೆಗೆ ಹರಡಿತ್ತು. ಮೆಕ್ಸಿಕೋದಲ್ಲಿ ಶಿವಲಿಂಗಗಳು ಮತ್ತು ಗಣೇಶನ ವಿಗ್ರಹಗಳು ಸಿಕ್ಕಿದ್ದವು. ಮಹಾಭಾರತ ಸಮಯದಲ್ಲಿ ಭಾರತದ ಪ್ರಭಾವವು ಆಸ್ಟ್ರೇಲಿಯಾ, ನ್ಯೂಜ಼ೀಲ್ಯಾಂಡ್ ಮತ್ತು ಜಪಾನಿನ ವರೆಗೂ ಕೂಡಾ ಹೋಗಿತ್ತು. ಭಾರತವು ಎಲ್ಲಾ ಕಡೆಗಳಲ್ಲೂ ಇತ್ತು.
ಕೆನಡಾ ಪ್ರಾಂತ್ಯವಾದ ನೋವಾ ಸ್ಕೋಟಿಯಾ (ನವ ಕೋಶ)ವು ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿತ್ತು. ’ನವ’ ಎಂದರೆ ಒಂಭತ್ತು; ’ಕೋಶ’ ಎಂದರೆ ಸಮಯದ ಅಳತೆ. ಭಾರತ ಮತ್ತು ಕೆನಡಾ ಪ್ರಾಂತ್ಯವಾದ ನೋವಾ ಸ್ಕೋಟಿಯಾದ ನಡುವೆ ಒಂಭತ್ತು ಗಂಟೆಗಳ ವ್ಯತ್ಯಾಸವಿದೆ.
ಕ್ಯಾಲಿಫೋರ್ನಿಯಾವು ಕಪಿಲಾರಣ್ಯ ಎಂದು ಕರೆಯಲ್ಪಟ್ಟಿತ್ತು. ಭಾರತದಲ್ಲಿ ಹಗಲಾಗಿರುವಾಗ, ಕಪಿಲಾರಣ್ಯದಲ್ಲಿ ರಾತ್ರಿ. ಧಾರ್ಮಿಕ ಗ್ರಂಥಗಳು ಹೇಳುವುದು ಇದನ್ನೇ, ಹಾಗೂ ಇವತ್ತು ಕ್ಯಾಲಿಫೋರ್ನಿಯಾ ಮತ್ತು ಭಾರತದ ನಡುವೆ ಸರಿಯಾಗಿ ಹನ್ನೆರಡು ಗಂಟೆಗಳ ಸಮಯ ವ್ಯತ್ಯಾಸವಿದೆ.
ಹೀಗೆ, ಒಂದು ಕಾಲದಲ್ಲಿ ಈ ನಾಗರೀಕತೆಯು ಪ್ರಪಂಚದ ಎಲ್ಲೆಡೆಗಳಲ್ಲಿತ್ತು ಮತ್ತು ನಂತರ ಅದು ಕುಗ್ಗಿತು.
ಅದರ ನಂತರ ಇಂಗ್ಲೇಂಡ್ ಬಂತು. ಯುರೋಪಿನ ಉತ್ತರ ಭಾಗದ ಒಂದು ಚಿಕ್ಕ ದೇಶ, ಮತ್ತು ಅದರ ಪ್ರಭಾವವು ನ್ಯೂಜ಼ೀಲ್ಯಾಂಡಿನಿಂದ ದೂರದ ಕೆನಡಾದ ವರೆಗೂ  ಮತ್ತು ಅಮೇರಿಕಾದ ಮೂಲಕವೂ ಪ್ರಪಂಚದಾದ್ಯಂತ ಹರಡಿತು. ಸಂಪೂರ್ಣ ಆಫ್ರಿಕಾವು ವಶಗೊಳಿಸಲ್ಪಟ್ಟಿತು. ನಂತರ ಇಂಗ್ಲೇಡಿನ ಪ್ರಭಾವವೂ ಕೂಡಾ ಕುಗ್ಗಲು ಪ್ರಾರಂಭವಾಯಿತು ಮತ್ತು ಇವತ್ತು ಅದು ಇಂಗ್ಲೇಂಡಿನೊಂದಿಗೆ ಮಾತ್ರ ಇದೆ. ಬ್ರಿಟನ್ನಿನಲ್ಲಿ ಸೂರ್ಯನು ಅಸ್ತಮಿಸದೇ ಇದ್ದ ಒಂದು ಕಾಲವಿತ್ತು. ಆದರೆ ಅದು ಕೂಡಾ ಕೆಲವು ದಶಕಗಳ ವರೆಗೆ ಮಾತ್ರ ಉಳಿಯಿತು.
ಅದೇ ಸಮಯದಲ್ಲಿ ಪೋರ್ಚುಗೀಸರು ಸಂಪೂರ್ಣ ಬ್ರೆಝಿಲನ್ನು ವಸಾಹತೀಕರಣಗೊಳಿಸುತ್ತಿದ್ದರು. ಸ್ಪೈನ್ ದೇಶವು, ಇಡಿಯ ಲ್ಯಾಟಿನ್ ಮತ್ತು ದಕ್ಷಿಣ ಅಮೇರಿಕಾವನ್ನು ವಸಾಹತೀಕರಣಗೊಳಿಸಿತು. ಅವರ ಎಲ್ಲಾ ಸ್ಥಳೀಯ ಭಾಷೆಗಳು ಮಾಯವಾದವು ಮತ್ತು ದಕ್ಷಿಣ ಅಮೇರಿಕಾ ಹಾಗೂ ಮಧ್ಯ ಅಮೇರಿಕಾಗಳ ಇಡಿಯ ಭೂಖಂಡದಲ್ಲಿ ಸ್ಪ್ಯಾನಿಷ್ ಭಾಷೆಯು ಹರಡಿತು.
ಆದುದರಿಂದ ಸಮಯಕ್ಕೆ ಅದರದ್ದೇ ಆದ ಲಯವಿದೆ. ಈ ವಿಷಯಗಳು ಬರುತ್ತವೆ ಮತ್ತು ಹೋಗುತ್ತವೆ.

ಪ್ರಶ್ನೆ: ನನಗೆ ನಿಮ್ಮನ್ನು ನೋಡದೆ ಬಹಳ ಬೇಸರವಾಗುವಾಗ ಏನು ಮಾಡುವುದು?
ಶ್ರೀ ಶ್ರೀ ರವಿಶಂಕರ್: ಜ್ಞಾನವನ್ನು ಕೇಳು ಮತ್ತು ಸೇವೆಯಲ್ಲಿ ತೊಡಗು. ಸೃಜನಶೀಲನಾಗು ಮತ್ತು ಏನನ್ನಾದರೂ ಬರೆ. ನೀನು ಮಾಡಬಹುದಾದಂತಹ ಬಹಳಷ್ಟು ವಿಷಯಗಳಿವೆ. ಹಾತೊರೆಯುವಿಕೆ ಮತ್ತು ಪ್ರೀತಿ ಜೊತೆಯಲ್ಲಿ ಸಾಗುತ್ತವೆ. ಒಂದನ್ನು ಬಿಟ್ಟು ಇನ್ನೊಂದು ಉಳಿಯಲಾರದು.

ಪ್ರಶ್ನೆ: ಗುರೂಜಿ, ಒಬ್ಬ ವ್ಯಕ್ತಿಯು ಪುನರ್ಜನ್ಮ ಪಡೆಯುವಾಗ, ಹಿಂದಿನ ಜನ್ಮದಿಂದ ಹೊಸ ಜನ್ಮಕ್ಕೆ ಯಾವ ಜ್ಞಾನವು ಜೊತೆಯಲ್ಲಿ ಸಾಗುತ್ತದೆ?
ಶ್ರೀ ಶ್ರೀ ರವಿಶಂಕರ್: ಹಲವಾರು ವಿವಿಧ  ವಿಷಯಗಳು ಸಾಗಿಸಲ್ಪಡಬಹುದು. ತಿಳಿಯಲು ಯಾವುದೇ ಮಾನದಂಡವಿಲ್ಲ. ನಿಮ್ಮಲ್ಲಿರುವ ಅತ್ಯಂತ ಆಳವಾದ ಅಚ್ಚುಗಳು ಇನ್ನೂ ಮುಂದಕ್ಕೆ ಸಾಗಿಸಲ್ಪಡುತ್ತವೆ.

ಪ್ರಶ್ನೆ: ಗುರೂಜಿ, ವಿಜ್ಞಾನ ಭೈರವ ಎಂದರೇನು? ದಯವಿಟ್ಟು ಇದರ ಮೇಲೆ ಸ್ವಲ್ಪ ಪ್ರಕಾಶ ಬೀರಿ.
ಶ್ರೀ ಶ್ರೀ ರವಿಶಂಕರ್: ವಿಜ್ಞಾನ ಭೈರವ ಎಂದರೆ ಕಾಶ್ಮೀರಿ ಶೈವ ಧರ್ಮದ ಒಂದು ಅನನ್ಯ ಧರ್ಮಗ್ರಂಥ. ಕೇವಲ ಒಬ್ಬ ಯೋಗಿ ಅಥವಾ ಒಬ್ಬ ಬುದ್ಧಿಶಾಲಿಗೆ ಮಾತ್ರ ಅದರ ಸಾರವನ್ನು ಒದಗಿಸಲು ಸಾಧ್ಯ. ಈ ಪುಸ್ತಕದ ಮುಖ್ಯಾಂಶವೇನೆಂದರೆ, ಇದೆಲ್ಲವೂ ಪ್ರಜ್ಞೆಯಾಗಿದೆ ಮತ್ತು ಪ್ರಜ್ಞೆಯಿಂದ ಉದಯಿಸಿದೆ. ನಿನ್ನ ಇರುವಿಕೆಯ ಪ್ರತಿಯೊಂದು ಕಣವೂ ಪ್ರಜ್ಞೆಯಲ್ಲಿ ಎಚ್ಚರವಾಗಲು ಧ್ಯಾನದ ಮೂಲಕ ಪ್ರಜ್ಞೆಯ ಆಳಕ್ಕೆ ಧುಮುಕು. ಇದು ಅದರ ಮುಖ್ಯ ಸಾರ. ಕೇವಲ ಇದನ್ನು ತಿಳಿ!

ಪ್ರಶ್ನೆ: ಗುರೂಜಿ, ಸಂಬಂಧಗಳು ನಮ್ಮನ್ನು ಬಲಶಾಲಿಗೊಳಿಸುತ್ತವೆಯೇ ಅಥವಾ ಬಲಹೀನಗೊಳಿಸುತ್ತವೆಯೇ?
ಶ್ರೀ ಶ್ರೀ ರವಿಶಂಕರ್: ಅದು ಮನಸ್ಸನ್ನು ಅವಲಂಬಿಸಿದೆ. ಮನಸ್ಸನ್ನು ಅವಲಂಬಿಸಿಕೊಂಡು ಸಂಬಂಧವು ಶಕ್ತಿಯ ಅಥವಾ ಬಲಹೀನತೆಯ ರೂಪವನ್ನು ಪಡೆದುಕೊಳ್ಳಬಹುದು. ಮನಸ್ಸು ಬಲಶಾಲಿಯಾಗಿದ್ದರೆ, ಸಂಬಂಧಗಳು ನಮಗೆ ಒಂದು ಉಡುಗೊರೆಯಂತಾಗಬಹುದು. ಆದರೆ ಮನಸ್ಸು ಬಲಹೀನವಾಗಿದ್ದರೆ ಮತ್ತು ನಿಯಂತ್ರಣದಲ್ಲಿರದಿದ್ದರೆ, ಆಗ ಸಂಬಂಧಗಳು ಬಂಧನದಂತೆ ಅನ್ನಿಸಬಹುದು.

ಪ್ರಶ್ನೆ: ಗುರೂಜಿ, ನೀವು ಸೇವೆ, ಸಾಧನೆ ಮತ್ತು ಸತ್ಸಂಗಗಳ ಮೂಲಕ ಯೋಗ್ಯತೆಯನ್ನು  ಹೆಚ್ಚಿಸಿಕೊಳ್ಳಬೇಕೆಂದು ನಮಗೆ ಸಲಹೆ ನೀಡಿದ್ದಿರಿ. ನಾನು ಅದನ್ನೇ ಮಾಡಿದೆ. ಈಗ ನನ್ನಲ್ಲಿ ಹೆಚ್ಚಿನ ಯೋಗ್ಯತೆಯಿದೆಯೆಂದೂ, ಆದರೆ ಬಹಳ ಸ್ವಲ್ಪ ಮಾತ್ರ ಸಾಧಿಸಿರುವೆನೆಂದೂ ನನಗೆ ಅನ್ನಿಸುತ್ತಿದೆ. ಇದು ನನಗೆ ದುಃಖವನ್ನುಂಟುಮಾಡುತ್ತದೆ. ಎಲ್ಲಿ ತಪ್ಪಾಯಿತು?
ಶ್ರೀ ಶ್ರೀ ರವಿಶಂಕರ್: ಇಲ್ಲ! ನೀನು ನಿನ್ನ ಯೋಗ್ಯತೆಯನ್ನು ಹೆಚ್ಚಿಸುತ್ತಾ ಹೋಗು ಮತ್ತು ತನ್ನಿಂತಾನೇ ನಿನ್ನ ಬೆಲೆಯು ಹೆಚ್ಚಾಗುತ್ತದೆ. ಕೊಡುವವನು ಬಹಳಷ್ಟು ಕೊಡುತ್ತಿದ್ದಾನೆ, ಒಬ್ಬನು ಪಡೆದುಕೊಳ್ಳಬೇಕಾಗಿರುವುದು ಮಾತ್ರ. ಕೊಡುವವನು ಸಾವಿರ ಕೈಗಳಿಂದ ಕೊಡುತ್ತಿದ್ದಾನೆ, ಆದರೆ ನಿನ್ನಲ್ಲಿ ಕೇವಲ ಎರಡು ಕೈಗಳಿರುವುದು. ಎರಡು ಕೈಗಳಿಂದ ನೀನು ಎಷ್ಟನ್ನು ತೆಗೆದುಕೊಳ್ಳಲು ಸಾಧ್ಯ? ಅದಕ್ಕೇ ಹೇಳಿರುವುದು, ಪಡೆಯಲು ನಿನ್ನ ಜೋಳಿಗೆಯನ್ನು ತೆರೆದು ಹರಡು. ಯಾಕೆ? ಎಷ್ಟೊಂದು ಕೊಡಲ್ಪಡುತ್ತಿದೆಯೆಂದರೆ, ಅದು ನಿನ್ನ ಎರಡು ಕೈಗಳಲ್ಲಿ ಹಿಡಿಸುವುದಿಲ್ಲ. ನಿನಗೆ ತೆಗೆದುಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚು ನಿನಗೆ ಸಿಗುತ್ತಿದೆ ಎಂಬುದನ್ನು ತಿಳಿದುಕೋ. 

ಪ್ರಶ್ನೆ: ಜೀವನವು ಒಂದು ಕನಸಾಗಿದ್ದರೆ, ಈ ಕ್ಷಣದಲ್ಲಿ ಮತ್ತು ಈ ಸ್ಥಳದಲ್ಲಿ ಕನಸಿಗೆ ಸಾಕ್ಷಿಯಾಗುತ್ತಿರುವುದು ಯಾರು - ನಾನೇ ಅಥವಾ ಇಲ್ಲಿರುವ ಎಲ್ಲರೂ ಅದೇ ಕನಸನ್ನು ಕಾಣುತ್ತಿದ್ದಾರೆಯೇ ಅಥವಾ ಬೇರೊಂದು ಸಾಧ್ಯತೆಯಿದೆಯೇ?
ಶ್ರೀ ಶ್ರೀ ರವಿಶಂಕರ್: ಸರಿ, ನಿನ್ನೆಯ ತನಕ ಏನೆಲ್ಲಾ ಆಯಿತೋ, ಅದೊಂದು ಕನಸಾಗಿತ್ತಾ? ನೀನು ಕಾಲೇಜಿಗೆ ಹೋದೆ, ಮನೆಗೆ ಬಂದೆ, ಊಟ ಮಾಡಿದೆ, ನೀನು ಎಲ್ಲವನ್ನೂ ಮಾಡಿದೆ. ಇವತ್ತು, ಅದೊಂದು ಕನಸಿನಂತೆ ಕಾಣಿಸುತ್ತಿದೆಯೇ ಇಲ್ಲವೇ? ಅದೊಂದು ಕನಸಿನಂತೆ ಕಾಣಿಸುತ್ತದೆ, ಅಲ್ಲವೇ? ಅದು ಯಾರ ಕನಸು? ನಿನ್ನದೇ ಸ್ವಂತ ಕನಸು. ಅದೇ ರೀತಿಯಲ್ಲಿ, ಈಗಲೂ ಕೂಡಾ, ಅದು ನಿನ್ನದೇ ಸ್ವಂತ ಕನಸು. ಪ್ರತಿಯೊಬ್ಬರಿಗೂ ತಮ್ಮದೇ ಆದ ಬೇರೆಯ ಕನಸಿದೆ ಮತ್ತು ನಾವು ಒಬ್ಬರು ಇನ್ನೊಬ್ಬರ ಕನಸಿನಲ್ಲಿ ಇರಲು ಸಾಧ್ಯವಿದೆ.

ಪ್ರಶ್ನೆ: ಗುರೂಜಿ, ನಿನ್ನೆ ನೀವು ಮೂರು ರೀತಿಯ ಸಂಕಷ್ಟಗಳ ಬಗ್ಗೆ ಮಾತನಾಡಿದಿರಿ. ಅವುಗಳಲ್ಲಿ ಮಾನವ ನಿರ್ಮಿತ ಸಂಕಷ್ಟಗಳು ಮತ್ತು ಕರ್ಮದ ಸಂಕಷ್ಟಗಳಿವೆ. ಆದರೆ ಕೆಲವು ನನ್ನನ್ನು ನಿಜವಾಗಿ ಗೊಂದಲಕ್ಕೀಡುಮಾಡುತ್ತವೆ, ಉದಾಹರಣೆಗೆ ಬಾಲ-ಕಾರ್ಮಿಕ ಮತ್ತು ಬಂಧಿತ-ಕಾರ್ಮಿಕ. ಅವರನ್ನು ನಾವು ಯಾವ ವಿಭಾಗದಲ್ಲಿರಿಸಬಹುದು - ಮಾನವ ನಿರ್ಮಿತವೇ ಅಥವಾ ಕರ್ಮದಿಂದುಂಟಾದುದರಲ್ಲಿಯೇ?
ಶ್ರೀ ಶ್ರೀ ರವಿಶಂಕರ್: ಅದು ಎರಡರ ಮಿಶ್ರಣವಾಗಿರಲೂಬಹುದು, ಅದರಲ್ಲಿ ಸ್ವಲ್ಪ ಅವರ ಕರ್ಮವಾಗಿರಬಹುದು ಮತ್ತು ಸ್ವಲ್ಪ ನಾವೇ ಮಾಡಿದುದಾಗಿರಬಹುದು. ಅದಕ್ಕೇ ನಾನು ಹೇಳುವುದು, "ಗಹನ ಕರ್ಮಣೋ ಗತಿಃ." ಕರ್ಮದ ಪರಿಣಾಮಗಳು ಎಷ್ಟೊಂದು ಸಂಕೀರ್ಣವಾದುದೆಂದರೆ, ಅತೀ ಹೆಚ್ಚು ಬುದ್ಧಿಶಾಲಿ ವ್ಯಕ್ತಿಗಳಿಗೂ ಅದನ್ನು ವಿಶ್ಲೇಷಿಸಲು ಅಸಾಧ್ಯ. ಎಲ್ಲದರಲ್ಲೂ ಸ್ವಲ್ಪ ಈ ನಿಜಾಂಶ ಹಾಗೂ ಆ ನಿಜಾಂಶಗಳು ಇರುತ್ತವೆ. ಒಂದು ಮಗುವು ತನ್ನ ಕರ್ಮದಿಂದಾಗಿ ಅಂತಹ ಒಂದು ಮನೆಯಲ್ಲಿ ಹುಟ್ಟಿತು ಎಂಬುದು ಕೂಡಾ ಒಂದು ಸತ್ಯ ಮತ್ತು ಒಬ್ಬ ಸಂವೇದನೆಗಳಿಲ್ಲದ ವ್ಯಕ್ತಿಯು ಆ ಮಗುವಿಗೆ ಸಹಾಯ ಮಾಡುವುದರ ಬದಲು, ಅವನನ್ನು ಒಂದು ಕಾರ್ಮಿಕನಾಗುವ ಪರಿಸ್ಥಿತಿಗೆ ತಂದನು - ಈ ಮಾನವ ನಿರ್ಮಿತ ಸಂಕಷ್ಟ ಕೂಡಾ ಒಂದು ಸತ್ಯ.

ಪ್ರಶ್ನೆ: ನಿರ್ದಿಷ್ಟ ಜನರಿಂದ ನಿಯಂತ್ರಣಕ್ಕೊಳಗಾಗದ ಒಂದು ವಿಕೇಂದ್ರೀಕೃತ ಪ್ರಪಂಚ ಬರಲಿದೆಯೇ?
ಶ್ರೀ ಶ್ರೀ ರವಿಶಂಕರ್: ಪ್ರಪಂಚದಲ್ಲಿ ಸಾಕಷ್ಟು ಶಿಕ್ಷಣವಿರುವಾಗ ಹಾಗಾದರೆ ಒಳ್ಳೆಯದು. ಜನರು ನೈತಿಕತೆಯಲ್ಲಿ ಶಿಕ್ಷಣ ಪಡೆದಾಗ, ಅದರ ಫಲವಾಗಿ ವಿಕೇಂದ್ರೀಕೃತ ಪ್ರಪಂಚ ಉಂಟಾಗುತ್ತದೆ. ಜನರು ಬಹಳ ಆಧ್ಯಾತ್ಮಿಕರಾಗಿರುವಾಗ ಅದು ಸಹಜವಾಗಿ ಉಂಟಾಗುವ ಒಂದು ಫಲಿತಾಂಶವಾಗಿರುತ್ತದೆ. ಹಳೆಯ ಭಾರತದ ಧರ್ಮಗ್ರಂಥಗಳಲ್ಲಿ ಹೇಳಿರುವುದು ಕೂಡಾ ಇದನ್ನೇ ಆಗಿದೆ.
ಪ್ರತಿಯೊಬ್ಬರೂ ಜ್ಞಾನದಲ್ಲಿ ಜೀವಿಸುತ್ತಿದ್ದ ಒಂದು ಕಾಲದಲ್ಲಿ ಒಬ್ಬ ರಾಜನ ಅವಶ್ಯಕತೆಯಿರಲಿಲ್ಲ, ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಅಲ್ಲಿ ಪೋಲೀಸರ, ಸೈನಿಕರ ಅಥವಾ ಸೇನೆಯ ಅಗತ್ಯವಿರಲಿಲ್ಲ. ವ್ಯಾಪಾರಿಗಳ ಅಗತ್ಯವೂ ಇರಲಿಲ್ಲ ಯಾಕೆಂದರೆ, ಜೀವನದ ಪ್ರತಿಯೊಂದು ಮಗ್ಗುಲಿನಲ್ಲಿಯೂ ಎಲ್ಲವೂ ಧಾರಾಳವಾಗಿತ್ತು.
ಆದರೆ ಅದು ಆ ರೀತಿ ಇಲ್ಲದಿರುವಾಗ ಮತ್ತು ಪ್ರಪಂಚದಲ್ಲಿ ಎಲ್ಲಾ ಮಟ್ಟದಲ್ಲಿಯೂ; ಸಾಮಾಜಿಕ ಮಟ್ಟದಲ್ಲಿ, ಆರ್ಥಿಕ ಮಟ್ಟದಲ್ಲಿ, ರಾಜಕೀಯ ಮಟ್ಟದಲ್ಲಿ, ಧಾರ್ಮಿಕ ಮಟ್ಟದಲ್ಲಿ ಮತ್ತು ಶೈಕ್ಷಣಿಕ ಮಟ್ಟದಲ್ಲಿ; ವ್ಯತ್ಯಾಸಗಳಿರುವಾಗ ಈ ಶ್ರೇಣಿಗಳು ಉಂಟಾಗುತ್ತವೆ.
ಪ್ರಾಚೀನ ವೈದಿಕ ಪದ್ಧತಿಯಲ್ಲಿ ಒಂದು ಗ್ರಂಥವಿದೆ. ಅದು, ಒಬ್ಬನ ಕರ್ತವ್ಯವೇನು ಮತ್ತು ಒಬ್ಬನ ಅಧಿಕಾರವೇನು ಎಂಬುದನ್ನು ಕ್ರೋಢೀಕರಿಸಿ ಹೇಳುತ್ತದೆ. ಅದು ಹೇಳುತ್ತದೆ, ಅಧಿಕಾರವನ್ನು ಪ್ರಯೋಗಿಸಬೇಡ, ಆದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಮಾಡಲು ಕರ್ತವ್ಯವಿದೆ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಮಾಡಿದರೆ, ಆಗ ಒಬ್ಬನು ಯಾವುದನ್ನೂ ನಿಯಂತ್ರಿಸಬೇಕಾದ ಅಗತ್ಯವಿರುವುದಿಲ್ಲ. ಆದರೆ ಜನರು ತಮ್ಮ ಕರ್ತವ್ಯದಲ್ಲಿ ಸೋತಾಗ ಅಧಿಕಾರವು ನಿಯಂತ್ರಣ ಸಾಧಿಸುತ್ತದೆ. ಇದೊಂದು ಸಹಜವಾದ ಪ್ರಕ್ರಿಯೆ.
ಕೋಸ್ಟಾರಿಕಾದಲ್ಲಿ ಪೋಲೀಸರಿಲ್ಲ.
ನಿಮಗೆ ನೆನಪಿದ್ದರೆ, ಕೆಲವು ದಶಕಗಳ ಮೊದಲು ಬೆಂಗಳೂರು ಅಥವಾ ಮೈಸೂರಿನಲ್ಲಿ ಸಂಚಾರ ನಿಯಮಗಳ ಯಾವುದೇ ಉಲ್ಲಂಘನೆಯೂ ಅಥವಾ ಯಾವುದೇ ಅಪರಾಧಗಳೂ ನಡೆಯುತ್ತಿರಲಿಲ್ಲ. ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ಮೊದಲು ಪೋಲೀಸರ ಅಗತ್ಯವಿರಲಿಲ್ಲ. ನಿಮಗೆ ಕಷ್ಟದಲ್ಲಿ ಇಲ್ಲೊಬ್ಬ ಅಲ್ಲೊಬ್ಬ ಪೋಲೀಸ್ ಕಾಣಸಿಗುತ್ತಿದ್ದ. ಇದು ಬಹಳ ಹಿಂದಿನದಲ್ಲ. ನಲುವತ್ತರಿಂದ ಐವತ್ತು ವರ್ಷಗಳ ಹಿಂದೆ, ಮೈಸೂರಿನಲ್ಲಿ ಒಂದೇ ಒಂದು ಹೋಟೇಲಿತ್ತು. ಪ್ರತಿಯೊಂದು ಮನೆಯೂ ಅತಿಥಿ ಗೃಹವಾಗಿತ್ತು. ಜನರು ತಮ್ಮ ಮನೆಗಳನ್ನು ಅತಿಥಿಗಳಿಗಾಗಿ ತೆರೆದಿಡುತ್ತಿದ್ದರು. ಅತಿಥಿಗಳು ಬಂದು ಉಚಿತವಾಗಿ ಉಳಿದುಕೊಳ್ಳುತ್ತಿದ್ದರು. ಅವರು ಅತಿಥಿಗಳಿಗೆ ಸೇವೆ ಮಾಡುತ್ತಿದ್ದರು ಮತ್ತು ಅವರನ್ನು ದೇವರಂತೆ ನೋಡಿಕೊಳ್ಳುತ್ತಿದ್ದರು. ಅವರು ಅತ್ಯುತ್ತಮವಾದ ಅಡಿಗೆಯನ್ನು ಮಾಡಿ ಅವರಿಗೆ ಅರ್ಪಿಸುತ್ತಿದ್ದರು ಮತ್ತು ಯಾವುದೇ ಉಡುಗೊರೆಗಳನ್ನೂ ತೆಗೆದುಕೊಳ್ಳಲು ಅವರು ಒಪ್ಪುತ್ತಿರಲಿಲ್ಲ. ಯಾರು ಬೇಕಾದರೂ ಹೋಗಿ ಯಾರ ಮನೆಯಲ್ಲಾದರೂ ಉಳಕೊಳ್ಳಲು ಸಾಧ್ಯವಾಗಲು ಜನರು ತಮ್ಮ ಮನೆಯ ಛಾವಣಿಯಲ್ಲಿ ಟೆಂಟುಗಳನ್ನು ಹಾಕಿ ಅದರಲ್ಲಿ ಹಾಸಿಗೆಗಳನ್ನು  ಹಾಸುತ್ತಿದ್ದರು. ಇವತ್ತು, ಅದು ಸಂಪೂರ್ಣವಾಗಿ ಮಾಯವಾಗಿದೆ. ಅದು ಈಗ ಇಲ್ಲದಿರುವುದು ಅಪರಾಧದ ಕಾರಣದಿಂದ. ಜನರು ತಮ್ಮ ಮನೆಯ ಬಾಗಿಲುಗಳನ್ನು ತೆರೆಯಲು ಹೆದರುತ್ತಾರೆ.
ಆದುದರಿಂದ, ಆ ರೀತಿಯ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯು ಉದಯಿಸುವಾಗ, ಅಧಿಕಾರವು ವೈಯಕ್ತಿಕ ಕರ್ತವ್ಯವಾಗಿ ಬದಲಾಗುತ್ತದೆ. ಅಪರಾಧವು ಹೆಚ್ಚಾಗುವಾಗ, ಅಧಿಕಾರವು ಬರುತ್ತದೆ ಮತ್ತು ಅಧಿಕಾರವು ಇನ್ನೂ ಹೆಚ್ಚಿನ ಅಪರಾಧವನ್ನು ಸೃಷ್ಟಿಸುತ್ತದೆ. ಇದೊಂದು ವಿಷವರ್ತುಲ. ಎಲ್ಲವನ್ನೂ ನಿಯಂತ್ರಿಸುವ ಜನರು, ಸಮಾಜದಲ್ಲಿ ಹುಟ್ಟುವ ಎಲ್ಲದರ ಕಾರಣವಾಗುತ್ತಾರೆ. ಅದೇ ಸಮಯದಲ್ಲಿ, ಸಮಾಜದಲ್ಲಿ ಅಪರಾಧಗಳಿದ್ದರೆ ನೀವು ಅಧಿಕಾರದಿಂದ ದೂರವುಳಿಯಲು ಸಾಧ್ಯವಿಲ್ಲ. ಆದರೆ ಪ್ರಶ್ನೆಯೇನೆಂದರೆ ಅಧಿಕಾರಿಯಾಗುವುದು ಯಾರು?
ಪ್ರಜಾಪ್ರಭುತ್ವವೆಂಬುದು ಅತ್ಯಂತ ಸುಂದರವಾದ ವಿಷಯ. ಆದರೆ ಪ್ರಜಾಪ್ರಭುತ್ವದ ದುರುಪಯೋಗವಾಗುವುದು, ಅಪರಾಧಿಗಳು ಸಂಸತ್ತಿಗೆ ಆಯ್ಕೆಯಾಗಿ, ಅವರು ಶಾಸಕರಾದಾಗ. ಯಾರು ಕಾನೂನನ್ನು ಉಲ್ಲಂಘಿಸುತ್ತಾರೋ ಅವರು ಒಂದು ಯೋಜನೆಯ ಕಾನೂನು ತಯಾರಕರಾಗುತ್ತಾರೆ.  ಸರ್ವಾಧಿಕಾರವು ಇನ್ನೂ ಕೆಟ್ಟದು, ಯಾಕೆಂದರೆ ಅಲ್ಲಿ ಯಾವುದೇ ಹೊಣೆಗಾರಿಕೆಯಿರುವುದಿಲ್ಲ. ಆದರೆ ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಈ ದೊಡ್ಡ ಸಮಸ್ಯೆಯಿದೆ. ಹಣದಿಂದ, ಇತರ ಸಹಾಯಗಳಿಂದ ಮತ್ತು ಜನಶಕ್ತಿಯಿಂದ ಮತಗಳನ್ನು ಖರೀದಿಸಬಹುದು.
ಆದುದರಿಂದ ನಾವು ವ್ಯವಸ್ಥೆಯ ಕಡೆಗೆ ನೋಡಬೇಕು. ಪ್ರತಿಯೊಂದು ವ್ಯವಸ್ಥೆಯಲ್ಲೂ ಸ್ವಲ್ಪ ಒಳ್ಳೆಯದಿದೆ ಮತ್ತು ಕೆಲವು ಗಂಭೀರವಾದ ನ್ಯೂನತೆಗಳಿವೆ. ಅಧಿಕಾರವನ್ನು ಕಡಿಮೆಗೊಳಿಸಿದರೆ ಅರಾಜಕತೆಯು ತಲೆದೋರಬಹುದು. ಸರಿಯಾದ ದೃಷ್ಟಿ, ಸರಿಯಾದ ಪ್ರಮಾಣ ಮತ್ತು ಸರಿಯಾದ ಕೈಗಳಲ್ಲಿ ಇಲ್ಲದಿದ್ದರೆ ಅಧಿಕಾರವು ಜನರ ಸ್ವಾತಂತ್ರ್ಯವನ್ನು ನಿಗ್ರಹಿಸಬಹುದು ಮತ್ತು ಪ್ರಗತಿಗೆ ತಡೆಯನ್ನೊಡ್ಡಬಹುದು.
ಅಧಿಕಾರವು ಅರಾಜಕತಾವಾದಿಯ ಮೇಲೆ ಬಿದ್ದಾಗ ಅಥವಾ ಸಮಾಜವಾದಿಗೆ ಯಾವುದೇ ಅಧಿಕಾರ ಸಿಗದಿದ್ದಾಗ, ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ, ಕೆಲವು ತೃತೀಯ ಜಗತ್ತಿನ ದೇಶಗಳಲ್ಲಿ ತಲೆದೋರುವ ಪ್ರಗತಿಯ ಕೊರತೆಯುಂಟಾಗುವುದು ಬಹಳಷ್ಟು ರಾಜಕಾರಣಗಳಿಂದ. ಒಂದು ರಸ್ತೆಯನ್ನು ಮಾಡಲು, ಅದು ಸಂಸತ್ತಿನ ಮೂಲಕ ಹೋಗಬೇಕು ಮತ್ತು ಹಲವಾರು ಹಂತಗಳ ಮೂಲಕ ಹಾದು ಹೋಗಬೇಕು, ಯಾಕೆಂದರೆ ಯಾರೂ ಅಧಿಕಾರವನ್ನು ತೆಗೆದುಕೊಳ್ಳಲು, ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡಲು ಬಯಸುವುದಿಲ್ಲ. ಎಲ್ಲವೂ ಮುಂದೂಡಲ್ಪಡುತ್ತದೆ ಅಥವಾ ತಡ ಮಾಡುವ ಒಂದು ರೀತಿಯ ಪ್ರವೃತ್ತಿಯಿರುತ್ತದೆ. ಸಂಗತಿಗಳು ಚಲಿಸುವುದೇ ಇಲ್ಲ. ಆದುದರಿಂದ, ಒಬ್ಬ ಬಲಶಾಲಿ ನಾಯಕನ ಅಗತ್ಯವಿದೆ.
ಅದೇ ಸಮಯದಲ್ಲಿ, ನಿಜವಾಗಿ ಬೇಕಾದುದೇನೆಂದರೆ ಜ್ಞಾನ. ತನಗೆ ಜನರ ಮೇಲೆ ಅಧಿಕಾರವಿದೆ ಎಂದು ಯೋಚಿಸುವ ಬದಲು, ಜನರ ಸೇವಕನಾಗುವುದು.
ಒಬ್ಬ ವ್ಯಾಪಾರಿಯಾಗಿರಲಿ, ರಾಜಕಾರಣಿಯಾಗಿರಲಿ ಅಥವಾ ಒಬ್ಬ ಅಧಿಕಾರಿಯಾಗಿರಲಿ, ಅವರೆಲ್ಲರೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು; ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡರನ್ನೊಳಗೊಂಡಂತೆ ಎಲ್ಲರೂ. ತನಗೆ ಜನರ ಮೇಲೆ ನಿಯಂತ್ರಣವಿದೆ, ತಮಗೆ ಜನರ ಮೇಲೆ ಅಧಿಕಾರವಿದೆ ಎಂದು ಅವರಂದುಕೊಂಡರೆ, ಆಗ ಅದೊಂದು ವಿಪತ್ತಾಗುತ್ತದೆ. ಅವರು ಜನರಿಗೆ ಒಳ್ಳೆಯದಕ್ಕಿಂತ ಹೆಚ್ಚು ತೊಂದರೆಯನ್ನುಂಟುಮಾಡುತ್ತಾರೆ.
ಹಲವು ಸಾರಿ ಒಂದು ನಿರ್ದಿಷ್ಟ ಗುಂಪಿನ ಧಾರ್ಮಿಕ ಮುಖಂಡನು, ನೀವೆಲ್ಲರೂ ಈ ಒಂದು ನಿರ್ದಿಷ್ಟ ಪಾರ್ಟಿಗೆ ಅಥವಾ ಈ ಕೆಲವು ನಿರ್ದಿಷ್ಟ ಜನರಿಗೆ ಮತ ನೀಡಬೇಕು ಎಂಬ ಹೊಡೆತ ನೀಡುತ್ತಾನೆ. ಇದು ಬಹಳ ತಪ್ಪು. ಇದು ಜನರಿಂದ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು. ಹಲವು ಸಾರಿ ಉತ್ತರ ಪೂರ್ವದಲ್ಲಿ ನೀವೊಂದು ಯೋಗ ಶಿಬಿರವನ್ನು ನಡೆಸಲು ಬಯಸಿದರೆ, ಧಾರ್ಮಿಕ ಸಂಸ್ಥೆಯ ಮುಖಂಡನು ಯೋಗ ಶಿಬಿರವನ್ನು ನಡೆಸಲು ಅನುಮತಿ ನೀಡಬೇಕಾಗುತ್ತದೆ, ಮತ್ತು ಜನರು ಯೋಗ ಮಾಡುತ್ತಿರುವುದು ಅವರಿಗೆ ತಿಳಿದರೆ, ಆಗ ಅವರು ಜನರಲ್ಲಿ ಬಹಳಷ್ಟು ಅಪರಾಧ ಪ್ರಜ್ಞೆಯನ್ನು ಸೃಷ್ಟಿಸುತ್ತಾರೆ. "ನೀನೊಬ್ಬ ಪಾಪಿ; ನೀನು ಪೈಶಾಚಿಕ ವಿಷಯಗಳಿಗೆ ಹೋಗುತ್ತಿರುವೆ." ಇದನ್ನು ಮಾಡಬಾರದು.
ಅದಕ್ಕಾಗಿಯೇ ಪ್ರಾಚೀನ ಕಾಲದಲ್ಲಿ, ಈ ದೇಶದ ಪ್ರಾಚೀನ ಜನರು ಒಂದು ಬಹಳ ಭಿನ್ನವಾದ ಮಾರ್ಗವನ್ನು ಅನುಸರಿಸಿದ್ದರು.ಅವರು ಯಾವತ್ತೂ ಅಧಿಕಾರವನ್ನು ಒತ್ತಿ ಹೇಳಲಿಲ್ಲ. ಅವರು ಕೇವಲ ತ್ಯಾಗದ ಬಗ್ಗೆ ಮಾತನಾಡಿದರು.
ಹಲವು ಸಾರಿ ಜನರು ನನ್ನಲ್ಲಿ ಕೇಳುತ್ತಾರೆ, ಕೆಥೋಲಿಕ್ಸಿನಲ್ಲಿ ಅಥವಾ ಇಸ್ಲಾಂನಲ್ಲಿರುವಂತೆ ಹಿಂದೂ ಧರ್ಮದಲ್ಲಿ ಇಡಿಯ ದೇಶಕ್ಕೆ ಒಬ್ಬರು ಪೋಪ್ ಯಾಕೆ ಇಲ್ಲ ಎಂದು. ನಾನಂದೆ, ರಚನೆಯೇ ಹೇಗಿದೆಯೆಂದರೆ, ಅದು ಬಹಳ ಭಿನ್ನವಾಗಿದೆ. ಅದು ಒಂದು ಅಧಿಕಾರವೆಂಬಂತೆ ಅಲ್ಲ; ಅದೊಂದು ಸ್ಫೂರ್ತಿ.
ಯಾರೂ ನನಗೆ, ನೀವು ಇವತ್ತಿನ ಒಬ್ಬರು ಸಂತರು ಎಂಬ ಒಂದು ಪದವಿಯನ್ನು ಕೊಡಬೇಕಾಗಿರಲಿಲ್ಲ. ಅದೆಲ್ಲವೂ ಒಬ್ಬರ ಕಾರ್ಯದಿಂದ ಆಗುವುದು. ನೀವು ನಿಮ್ಮ ಮಾತಿನಂತೆ ನಡೆದುಕೊಂಡಾಗ, ನೀವೊಬ್ಬರು ಸ್ಫೂರ್ತಿಯುತ ಮಾದರಿಯಾಗುವಿರಿ. ಯಾರೂ ಮಹಾತ್ಮಾ ಗಾಂಧಿಗೆ ಒಂದು ಅಧಿಕಾರವನ್ನು ಕೊಡಲಿಲ್ಲ, ಆದರೆ ಅವರ ಜೀವನವೇ ಹಲವರಿಗೆ ಆ ಪಥದಲ್ಲಿ ನಡೆಯಲು ಸ್ಫೂರ್ತಿಯಾಯಿತು. ಅದೇ ರೀತಿಯಲ್ಲಿ ಅರೊಬಿಂದೋರೊಡನೆ, ಯಾರೂ ಅವರೊಡನೆ, "ಇವತ್ತಿನಿಂದ ನಿಮಗೆ ಈ ಅಧಿಕಾರವಿದೆ" ಎಂದು ಹೇಳಲಿಲ್ಲ. ಇಲ್ಲ! ಆದರೆ ಅವರ ಮಾತುಗಳು ಹಲವರ ಮೇಲೆ ಅಷ್ಟೊಂದು ಪ್ರಭಾವ ಬೀರಿದವು.

ಪ್ರಶ್ನೆ: ಗುರೂಜಿ, ಒಂದು ಹೆಸರಿನ ಪ್ರಾಧಾನ್ಯತೆಯೇನು? ಏನೂ ಇಲ್ಲದಿದ್ದರೆ, ಮತ್ತೆ ಯಾಕೆ ಸ್ವಾಮಿಗಳು ಮತ್ತು ಋಷಿಗಳು, ಸ್ವಾಮಿಗಳು ಮತ್ತು ಋಷಿಗಳಾದ ಬಳಿಕ ಒಂದು ಹೊಸ ಹೆಸರನ್ನು ಪಡೆಯುತ್ತಾರೆ?
ಶ್ರೀ ಶ್ರೀ ರವಿಶಂಕರ್: ಅದೊಂದು ಪ್ರಾಚೀನ ಸಂಪ್ರದಾಯ. ಹೆಸರೆಂಬುದು ಒಂದು ಸ್ಫೂರ್ತಿ. ಸ್ವಾಮಿಗಳು ಮತ್ತು ಋಷಿಗಳು ಒಂದು ಹೊಸ ಹೆಸರನ್ನು ಪಡೆಯುತ್ತಾರೆ ಯಾಕೆಂದರೆ, ಯಾರೋ ಒಬ್ಬರು ಆಗಿರುವುದರಿಂದ ನಿಜವಾಗಿ ಯಾರೂ ಅಲ್ಲದಾಗುವ ಒಂದು ಹೊಸ ಅಧ್ಯಾಯ ಅವರ ಜೀವನದಲ್ಲಿ ಆರಂಭವಾಗುತ್ತದೆ.

ಪ್ರಶ್ನೆ: ಗುರೂಜಿ, ಬಹಳ ನಕಾರಾತ್ಮಕವಾಗಿರುವ ಒಬ್ಬರನ್ನು ನಾನು ಪ್ರೀತಿಸುತ್ತಿದ್ದರೆ ಮತ್ತು ಆ ವ್ಯಕ್ತಿಯನ್ನು ಬದಲಾಯಿಸಲು ನಾನು ಅಸಮರ್ಥನೆಂಬ ಭಾವನೆ ನನ್ನಲ್ಲಿದ್ದರೆ, ನಾನೇನು ಮಾಡಲು ಸಾಧ್ಯ?
ಶ್ರೀ ಶ್ರೀ ರವಿಶಂಕರ್: ಭರವಸೆಯನ್ನು ಕಳೆದುಕೊಳ್ಳಬೇಡ. ಸ್ವಲ್ಪ ಸಮಯ ಕಾದುನೋಡು, ಸ್ವಲ್ಪ ಹೆಚ್ಚು ಪ್ರಯತ್ನ ಮಾಡು. ಅವರು ಬದಲಾದರೆ ಒಳ್ಳೆಯದು, ಆದರೆ ಅವರು ಬದಲಾಗದಿದ್ದರೆ, ಆಗ ಸುಮ್ಮನೇ ಮುಂದೆ ಸಾಗು.

ಪ್ರಶ್ನೆ: ಗುರೂಜಿ, ಒಳ್ಳೆಯ ಮಿತ್ರ ಯಾರು?
ಶ್ರೀ ಶ್ರೀ ರವಿಶಂಕರ್: ಯಾರೊಂದಿಗೆ ಕುಳಿತುಕೊಂಡು ಸ್ವಲ್ಪ ಮಾತನಾಡಿದಾಗ ನಿಮಗೆ ನಿಮ್ಮ ಸಮಸ್ಯೆಗಳು ಹಗುರವಾದಂತೆ ಅನ್ನಿಸುವುದೋ ಅವನು ಒಳ್ಳೆಯ ಮಿತ್ರ. ಯಾರ ಬಳಿಗೆ ನೀವು ಒಂದು ಚಿಕ್ಕ ಸಮಸ್ಯೆಯನ್ನು ತೆಗೆದುಕೊಂಡು ಹೋಗಿ, ಅವನನ್ನು ಬೀಳ್ಕೊಂಡು ಹೊರಟಾಗ ಅದು ಬಹಳಷ್ಟು ದೊಡ್ಡದಾಗಿ ಕಾಣಿಸುವುದೋ ಅವನು ಅಷ್ಟೊಂದು ಒಳ್ಳೆಯ ಮಿತ್ರನಲ್ಲ.

ಪ್ರಶ್ನೆ: ನನಗೆ ಕೆಲವು ಜನರೊಂದಿಗೆ ಸಂಬಂಧದ ಅನುಭವವಾಗುತ್ತದೆ ಮತ್ತು ಕೆಲವು ಜನರೊಂದಿಗೆ  ಸಂಬಂಧದ ಅನುಭವವಾಗುವುದಿಲ್ಲ. ಯಾಕೆ ಹಾಗೆ?
ಶ್ರೀ ಶ್ರೀ ರವಿಶಂಕರ್: ಪರವಾಗಿಲ್ಲ. ನಿನ್ನ ವ್ಯಕ್ತಿತ್ವವನ್ನು ವಿಶಾಲವಾಗಿಸುತ್ತಾ ಇರು ಮತ್ತು ಒಂದು ದಿನ ನಿನಗೆ ಎಲ್ಲರ ಜೊತೆಗೂ ಸಂಬಂಧದ ಅನುಭವವಾಗುತ್ತದೆ. ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗು.

ಪ್ರಶ್ನೆ: ಗುರೂಜಿ, ಸತ್ಯದ ಪಥವು ಪರಮೋಚ್ಛವಾದುದು ಎಂಬುದು ನನಗೆ ತಿಳಿದಿದೆ. ಹೀಗಿದ್ದರೂ, ಒಬ್ಬನು ವ್ಯಾಪಾರದಲ್ಲಿ ಸ್ವಲ್ಪ ಸುಳ್ಳು ಹೇಳಬೇಕಾಗುತ್ತದೆ.
ಶ್ರೀ ಶ್ರೀ ರವಿಶಂಕರ್: ಹೌದು! ವ್ಯಾಪಾರದಲ್ಲಿ ಒಬ್ಬನು ಸ್ವಲ್ಪ ಮಟ್ಟಿಗೆ ಸುಳ್ಳುಗಳನ್ನು ಹೇಳಬಹುದು; ಆಹಾರದಲ್ಲಿ ಎಷ್ಟು ಉಪ್ಪಿರುವುದೋ ಅಷ್ಟು. ನೀನು ಬಹಳ ಸುಳ್ಳುಗಳನ್ನು ಹೇಳಿದರೆ, ನೀನು ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆ, ಮತ್ತು ನೀನು ಉಪ್ಪನ್ನೇ ಸೇರಿಸದಿದ್ದರೆ, ನಿನಗೆ ಆಹಾರವನ್ನು ತಿನ್ನಲು ಸಾಧ್ಯವಾಗದು. ಆದುದರಿಂದ ಸುಳ್ಳುಗಳು ಒಂದು ನಿರ್ದಿಷ್ಟ ಮಿತಿಯನ್ನು ಮೀರಿದರೆ, ವಿಷಯಗಳು ಗಂಭೀರವಾಗಿ ತಪ್ಪಾಗಿ ಪರಿಣಮಿಸಬಹುದು.
ಒಂದು ಉತ್ಪನ್ನವನ್ನು ಮಾರುವಾಗ, ಅದೊಂದು ದ್ವಿತೀಯ ದರ್ಜೆಯ ಉತ್ಪನ್ನವೆಂದು ಚೆನ್ನಾಗಿ ತಿಳಿದಿದ್ದರೂ, ಅದು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸರಿಯಾಗಿ ತಿಳಿಯದೇ ಇದ್ದರೂ, ಅದನ್ನು ಉತ್ತಮ ದರ್ಜೆಯದೆಂದು ದಾಟಿಸುತ್ತೀಯಾ, ಅದು ಪರವಾಗಿಲ್ಲ.
ಒಬ್ಬ ಧಾರ್ಮಿಕ ವ್ಯಕ್ತಿಗೆ, ಒಬ್ಬರು ಗುರುವಿಗೆ, ಒಬ್ಬ ಸಂತನಿಗೆ ಮತ್ತು ಒಬ್ಬ ಶಿಕ್ಷಕನಿಗೆ ಸುಳ್ಳು ಹೇಳುವುದನ್ನು ಖಡಾಖಂಡಿತವಾಗಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಅದು ಹೇಗಿದ್ದರೂ ಆಗುವುದಿಲ್ಲ! ಒಬ್ಬ ರಾಜನಿಗೆ, ಸ್ವಲ್ಪ ಸುಳ್ಳುಗಳು ಸ್ವೀಕಾರಾರ್ಹವಾಗಿದೆ ಮತ್ತು ಒಬ್ಬ ವ್ಯಾಪಾರಿಗೆ, ಸ್ವಲ್ಪ ಹೆಚ್ಚು ಸುಳ್ಳುಗಳು ಪರವಾಗಿಲ್ಲ. ಆದುದರಿಂದ ಒಬ್ಬ ವ್ಯಾಪಾರಿಯು, ಆಹಾರದಲ್ಲಿ ಎಷ್ಟು ಉಪ್ಪಿರಬೇಕೋ ಅಷ್ಟೇ ಪ್ರಮಾಣದ ಸುಳ್ಳುಗಳನ್ನು ಹೇಳಬಹುದು.

ಪ್ರಶ್ನೆ: ನಾಳೆಯಿಂದ ಶಿಕ್ಷಕರ ತರಬೇತಿ ಶಿಬಿರವು ಪ್ರಾರಂಭವಾಗಲಿದೆ. ಶಿಕ್ಷಕರಾಗುವುದರ ಬಗ್ಗೆ ದಯವಿಟ್ಟು ನೀವು ಸ್ವಲ್ಪ ಹೇಳುವಿರಾ?
ಶ್ರೀ ಶ್ರೀ ರವಿಶಂಕರ್: ಶಿಕ್ಷಕರಾಗುವುದೆಂದರೆ, ನೀವು ನಿಮ್ಮನ್ನು ತೊಡಗಿಸಿಕೊಳ್ಳಲಿರುವ  ಒಂದು ಬಹಳ ಶ್ರೇಷ್ಠ ಕೆಲಸವಾಗಿದೆ. ನೀವದನ್ನು ಆನಂದಿಸುವಿರಿ ಎಂಬ ವಿಶ್ವಾಸ ನನಗಿದೆ. ಅದೊಂದು ಜೀವನ ಪರಿವರ್ತಿಸುವ ಅನುಭವವಾಗಿದೆ.

ಪ್ರಶ್ನೆ: ಮೋಕ್ಷವೆಂಬುದು ಸಾವಿನ ಮೊದಲಿನ ಮನಸ್ಸಿನ ಸ್ವಾದವೇ ಅಥವಾ ಒಬ್ಬನಿಗೆ ಸಾವಿನ ಬಳಿಕ ಮೋಕ್ಷ ಪ್ರಾಪ್ತಿಯಾಗುವುದೇ?
ಶ್ರೀ ಶ್ರೀ ರವಿಶಂಕರ್: ಜೀವಿಸಿರುವಾಗಲೇ ಒಬ್ಬನು ಸತ್ತಂತೆ ಇರುವುದು ಮೋಕ್ಷವಾಗಿದೆ. ನೀವು ಜೀವಿಸಿರುವಾಗ ಮನಸ್ಸು ಸಾಯುವುದು, ಇದು ಮೋಕ್ಷವಾಗಿದೆ.

ಪ್ರಶ್ನೆ: ಗುರುವಿನ ಭೌತಿಕ ಉಪಸ್ಥಿತಿಗಾಗಿ ಹಾತೊರೆಯುವುದು ತಪ್ಪೇ?
ಶ್ರೀ ಶ್ರೀ ರವಿಶಂಕರ್: ನೀನದನ್ನು ಯಾಕೆ ವಿಮರ್ಶಿಸುವೆ? ಏನಿದೆಯೋ, ಅದು ಒಳ್ಳೆಯದು.