ಸೋಮವಾರ, ಡಿಸೆಂಬರ್ 26, 2011

ಧ್ಯಾನವು ಆತ್ಮವನ್ನು ಶುದ್ಧೀಕರಿಸುತ್ತದೆ

26
2011
Dec
ಬೆ೦ಗಳೂರು, ಕರ್ನಾಟಕ, ಭಾರತ

ನೀವು ದೇವರನ್ನು ನೋಡಲು ಬಯಸುತ್ತೀರಾ? ನಿಮ್ಮಲ್ಲಿ ಎಷ್ಟು ಮಂದಿ ದೇವರನ್ನು ನೋಡಲು ಬಯಸುತ್ತೀರಿ? ಅದು ಬಹಳ ಸಮಯ ತೆಗೆದುಕೊಳ್ಳುವುದಿಲ್ಲ. ಪ್ರಪಂಚವನ್ನು ನೋಡುವುದನ್ನು ನಿಲ್ಲಿಸಿ. ನೀವು ಪ್ರಪಂಚವನ್ನು ನೋಡಿದರೆ, ನಿಮಗೆ ದೇವರನ್ನು ನೋಡಲು ಸಾಧ್ಯವಿಲ್ಲ. ಒಂದೋ ನೀವು ದೇವರನ್ನು ನೋಡಬಹುದು ಅಥವಾ ನೀವು ಪ್ರಪಂಚವನ್ನು ನೋಡಬಹುದು. ನಿಮಗೆ ಎರಡನ್ನೂ ನೋಡಲು ಸಾಧ್ಯವಿಲ್ಲ. ನೀವು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ದೇವರನ್ನು ನೋಡಲು ಬಯಸುವುದಾದರೆ, ನಾನು ನಿಮಗೆ ಈ ಕೂಡಲೇ ತೋರಿಸುವೆನು: ವ್ಯತ್ಯಾಸಗಳನ್ನು ನೋಡುವುದನ್ನು ನಿಲ್ಲಿಸಿ. ಪ್ರಪಂಚವನ್ನು ನೋಡುವುದನ್ನು ನಿಲ್ಲಿಸಿ.
ಕ್ವಾಂಟಮ್ ಫಿಸಿಕ್ಸ್ ದೇವರನ್ನು ನೋಡಬಲ್ಲದು. ಇದೆಲ್ಲವೂ ಒಂದೆಂಬುದನ್ನು, ಎಲ್ಲವೂ ಒಂದರಿಂದಲೇ ಮಾಡಲ್ಪಟ್ಟಿವೆಯೆಂಬುದನ್ನು ತಿಳಿಯಿರಿ. ಅಲ್ಲಿ ಈ ವ್ಯಕ್ತಿಯಿದ್ದಾನೆ ಮತ್ತು ಆ ವ್ಯಕ್ತಿಯಿದ್ದಾನೆ ಎಂಬುದು ಒಂದು ಭ್ರಮೆ. ಅಲ್ಲಿ ಈ ವಸ್ತುವಿದೆ ಮತ್ತು ಆ ವಸ್ತುವಿದೆ ಎಂಬುದು ಒಂದು ಭ್ರಮೆ. ಎಲ್ಲಾ ವಸ್ತುಗಳು ಒಂದರಿಂದ ಮಾಡಲ್ಪಟ್ಟಿವೆ.
ನಾವೊಂದು ಹಾಲೋಗ್ರಾಮಿನಲ್ಲಿರುವಂತೆ. ಒಂದು ಪ್ರಕಾಶದ ಪುಂಜವು ಹಾಲೋಗ್ರಾಮನ್ನು ಉಂಟುಮಾಡುತ್ತದೆ. ಅದೊಂದು ವಸ್ತುವಿನಂತೆ ಕಾಣಿಸುತ್ತದೆ, ಆದರೆ ಅದೊಂದು ವಸ್ತುವಲ್ಲ, ಅದು ಕೇವಲ ಬೆಳಕಿನ ಆಟ ಮತ್ತು ಪ್ರದರ್ಶನ. ಈ ಸಂಪೂರ್ಣ ವಿಶ್ವವು ಬೆಳಕಿನ ಆಟ ಮತ್ತು ಪ್ರದರ್ಶನ, ಅದು ಬೇರೆ ಬೇರೆಯಾಗಿ ತೋರುತ್ತದೆ. ಈ ಗ್ರಹದಲ್ಲಿ ದೇವರಲ್ಲದೆ ಮತ್ತೇನೂ ಇಲ್ಲ.
ನೀವೊಂದು ಸಿನೆಮಾ ಪ್ರದರ್ಶನದಲ್ಲಿ ಕುಳಿತರೆ, ನೀವು ಪರದೆಯಲ್ಲಿ ಏನನ್ನೆಲ್ಲಾ ನೋಡುತ್ತೀರೋ ಅದು ಕೇವಲ ಬೆಳಕಿನ ಹಾದು ಹೋಗುವಿಕೆ, ಅಷ್ಟೆ. ಬೆಳಕು, ಒಂದು ಓಡುತ್ತಿರುವ ಫಿಲ್ಮಿನ ಮೂಲಕ ಹಾದುಹೋಗುತ್ತದೆ ಮತ್ತು ಬೇರೆ ಬೇರೆಯ ವಸ್ತುಗಳಾಗಿ, ಬೇರೆ ಬೇರೆಯ ಜನರಾಗಿ ಮತ್ತು ಬೇರೆ ಬೇರೆಯ ಘಟನೆಗಳಾಗಿ ಕಾಣಿಸುತ್ತದೆ. ಹೀಗೆ, ಸಂಪೂರ್ಣ ಪ್ರಪಂಚವು ಒಂದು ಪ್ರಜ್ಞೆಯ ಆಟ ಮತ್ತು ಪ್ರದರ್ಶನವಾಗಿದೆ. ಅಲ್ಲಿ ಯಾವುದೇ ಪದಾರ್ಥವಿಲ್ಲ ಮತ್ತು ಅಲ್ಲಿ ಯಾವುದೇ ಶಕ್ತಿಯಿಲ್ಲ. ಅಲ್ಲಿ ನೀನಿಲ್ಲ, ಅಲ್ಲಿ ನಾನಿಲ್ಲ, ಅಲ್ಲಿ ಇದಿಲ್ಲ, ಅಲ್ಲಿ ಅದಿಲ್ಲ. ಅದೆಲ್ಲವೂ ಕೇವಲ ಒಂದು.
ಅಷ್ಟೇ! ನೀವು ಸ್ಥಿರವಾಗಿ ಕುಳಿತುಕೊಳ್ಳಿ.
ಬೈಬಲಿನಲ್ಲಿ, "ಸ್ಥಿರವಾಗಿರು ಮತ್ತು ನಾನು ದೇವರು ಎಂಬುದನ್ನು ತಿಳಿ" ಎಂದು ಹೇಳಲಾಗಿದೆ. ವಿಭಿನ್ನತೆಗಳನ್ನು ನೋಡುವುದು ಮನಸ್ಸಾಗಿದೆ. ಬುದ್ಧಿಯು ವಿಭಿನ್ನತೆಗಳನ್ನು ಗ್ರಹಿಸುತ್ತದೆ. ಬುದ್ಧಿಯನ್ನು ಮೀರಿ ಸ್ಥಿರವಾಗಿರು. ಒಂದೇ ಒಂದು ಇರುವುದು. ನೀವು ಒಂದು ಎಂದು ಹೇಳಲು ಸಾಧ್ಯವಿಲ್ಲ, ಯಾಕೆಂದರೆ ಒಂದು ಎಂದು ಹೇಳಲು, ನಿಮ್ಮಲ್ಲಿ ಎರಡು ಇರಬೇಕಾಗುತ್ತದೆ. ಏನಾದರೊಂದು ಸಂಪೂರ್ಣವಾಗಿದೆಯೆಂದು ಹೇಳಲು, ನೀವು ಅದರ ಹೊರಗಡೆ ಇರಬೇಕಾಗುತ್ತದೆ ಮತ್ತು ಅದು ಸಂಪೂರ್ಣವಾಗಿದೆಯೆಂದು ಹೇಳಬೇಕಾಗುತ್ತದೆ. ಪ್ರಾಚೀನ ಜನರು ಎಷ್ಟು ಬುದ್ಧಿಶಾಲಿಗಳಾಗಿದ್ದರೆಂದರೆ ನಿಮಗೆ ಅಚ್ಚರಿಯಾಗುತ್ತದೆ. ಅವರಂದರು, ಅದ್ವೈತ; ಅಲ್ಲಿ ಎರಡಿಲ್ಲ.
ಒಂದು ಎಂದು ಹೇಳುವುದು ತಪ್ಪು. ಕೇವಲ ಎರಡಿದ್ದರೆ ಮಾತ್ರ ಒಂದು ಎಂದು ಹೇಳಬಹುದು. ಅದನ್ನು ವ್ಯಕ್ತಗೊಳಿಸಲಿರುವ ಅತ್ಯುತ್ತಮ ರೀತಿಯೆಂದರೆ, ಅಲ್ಲಿ ಎರಡಿಲ್ಲವೆಂಬುದು. ಇದನ್ನೇ ಅದ್ವೈತ ಎಂದು ಕರೆಯುವುದು, ಆದರೆ ದ್ವೈತವೆಂದರೆ ಎರಡು. ಇದು ಶುದ್ಧವಾದ ವಿಜ್ಞಾನದಂತೆ, ಕ್ವಾಂಟಮ್ ಫಿಸಿಕ್ಸಿನಂತೆ. ನೀವು ಅನುಭವಿಸಬಹುದು, ನೀವದನ್ನು ತಿಳಿಯಬಹುದು, ಆದರೆ ಪ್ರಾಯೋಗಿಕ ಜೀವನದಲ್ಲಿ, ನೀವು ಒಂದು ಮೆಟ್ಟಿಲು ಕೆಳಗೆ ಬರಬೇಕಾಗುತ್ತದೆ. ನೀವು ಸೃಷ್ಟಿಯಲ್ಲಿರುವ ದ್ವೈತವನ್ನು, ಅನೇಕತೆಯನ್ನು ಒಪ್ಪಿಕೊಳ್ಳಬೇಕಗುತ್ತದೆ. ಮೇಜು, ಕುರ್ಚಿ, ಛಾವಣಿ, ಬಾಗಿಲುಗಳೆಲ್ಲಾ ಇಲ್ಲಿ ಮರದಿಂದ ಮಾಡಲ್ಪಟ್ಟಿವೆ ಮತ್ತು ಅದೊಂದು ವಾಸ್ತವ. ಆದರೆ ನೀವು ಒಂದು ಬಾಗಿಲಾಗಿ ಕುರ್ಚಿಯನ್ನು ಮತ್ತು ಕುರ್ಚಿಯಾಗಿ ಒಂದು ಬಾಗಿಲನ್ನು ಬಳಸಲು ಸಾಧ್ಯವಿಲ್ಲ. ಆ ಹಂತದಿಂದ, ನೀವು ದ್ವೈತದಲ್ಲಿ  ಕಾರ್ಯಾಚರಣೆ ಮಾಡಬೇಕಾಗುತ್ತದೆ.
ಆದುದರಿಂದ, ರಸಾಯನ ಶಾಸ್ತ್ರದಲ್ಲಿರುವ ಆವರ್ತಕ ಕೋಷ್ಟಕ (ಪೀರಿಯಾಡಿಕ್ ಟೇಬಲ್) ಕೂಡಾ ನಿಜ ಮತ್ತು ಕ್ವಾಂಟಮ್ ಫಿಸಿಕ್ಸ್ ಕೂಡಾ ನಿಜ. ಎರಡೂ ಒಂದೇ ವಸ್ತುವಿನ ಬಗ್ಗೆ ಮಾತನಾಡುತ್ತವೆ.

ಪ್ರಶ್ನೆ: ಹನುಮಾನ್ ಮತ್ತು ಅವನ ಜಾತಿಯು ಎಲ್ಲಿ ಮಾಯವಾಗಿ ಹೋಯಿತು? ಅವರು ಕೋತಿಗಳಾಗಿದ್ದರೇ ಅಥವಾ ಅವರು ಏನಾಗಿದ್ದರು? ಕೋತಿಗಳ ಒಂದು ಉಚ್ಛ ಜಾತಿಯು ಅದು ಹೇಗೆ ಹಾಗೆಯೇ ಮಾಯವಾಗಿ ಹೋಯಿತು?
ಶ್ರೀ ಶ್ರೀ ರವಿಶಂಕರ್:
ನೀನೊಬ್ಬ ಮಾನವ ಶಾಸ್ತ್ರಜ್ಞನ ಬಳಿ ಮಾತನಾಡಬೇಕು. ಅವರು ನಿನಗೆ ಚರಿತ್ರೆಯನ್ನು ನೀಡುವರು. ಪ್ರಪಂಚವೆಲ್ಲಾ ಬದಲಾವಣೆಯಾಗಿದೆ. ವಸ್ತುಗಳು ಬದಲಾಗುತ್ತಾ ಹೋಗುತ್ತವೆ. ಪ್ರಪಂಚದ ಬಗ್ಗೆಯಿರುವ ಒಂದೇ ಒಂದು ಬದಲಾಗದ ವಿಷಯವೆಂದರೆ, ಎಲ್ಲವೂ ಬದಲಾಗುತ್ತಿದೆಯೆಂಬುದು.

ಪ್ರಶ್ನೆ: ಪ್ರೀತಿಯ ಗುರೂಜಿ, ನಮ್ಮ ದೈನಂದಿನ ಜೀವನದಲ್ಲಿ ನಿಮ್ಮ ಇರುವಿಕೆಯನ್ನು ಇನ್ನೂ ಹೆಚ್ಚು ಅನುಭವಿಸುವುದು ಹೇಗೆಂಬುದರ ಬಗ್ಗೆ ನಮಗೆ ಸ್ವಲ್ಪ ಸಲಹೆಗಳನ್ನು ನೀಡಬಲ್ಲಿರಾ?
ಶ್ರೀ ಶ್ರೀ ರವಿಶಂಕರ್:
ಕೇವಲ ಸ್ಥಿರವಾಗಿರು; ಒಂದು ನಿಮಿಷ ಅಥವಾ ಅರ್ಧ ನಿಮಿಷಗಳ ಕಾಲವಾದರೂ.

ಪ್ರಶ್ನೆ: ಪ್ರೀತಿಯ ಗುರೂಜಿ, ಪ್ರತಿದಿನವೂ ನಿಮ್ಮ ಸಾಧನೆ ಏನು? ನಮ್ಮಂತೆ ನೀವೂ, ಹಲವಾರು ಯೋಚನೆಗಳು, ಆತಂಕಗಳಂತಹ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತೀರಾ ಅಥವಾ ನೀವು ಎಲ್ಲಾ ಸಮಯದಲ್ಲೂ ನಿಮ್ಮ ಸ್ವಾಭಾವಿಕ ಸ್ಥಿತಿಯಲ್ಲಿ ಜೀವಿಸುತ್ತೀರಾ?
ಶ್ರೀ ಶ್ರೀ ರವಿಶಂಕರ್:
ತಮ್ಮ ಅನುಭವವನ್ನು ಹಂಚಿಕೊಳ್ಳಬಾರದೆಂದು ಒಬ್ಬ ಶಿಕ್ಷಕರಿಗೆ ಒಂದು ನೀತಿ ಸಂಹಿತೆಯಿದೆ. ಯಾಕೆಂದು ನಿಮಗೆ ಗೊತ್ತಿದೆಯಾ? ಯಾಕೆಂದರೆ ವಿದ್ಯಾರ್ಥಿಯು, "ಅದು ಹೇಗೆ ನನ್ನಲ್ಲಿ ಅದು ಇಲ್ಲ? ನಾನದನ್ನು ಪಡೆಯಬೇಕು" ಎಂದು ಯೋಚಿಸಲು ತೊಡಗುತ್ತಾನೆ. ಈ ಪಡೆಯುವ ಬಯಕೆ, ಈ ತನ್ನನ್ನು ಪ್ರಶ್ನಿಸುವಿಕೆ ಮುಂದುವರಿಯುತ್ತಾ ಹೋಗುತ್ತದೆ. ಅತ್ಯುತ್ತಮವಾದುದೆಂದರೆ, ಸುಮ್ಮನೇ ನಿಮ್ಮ ಅನುಭವದೊಂದಿಗಿರುವುದು. ಹಂತ ಹಂತವಾಗಿ ನೀವು ಯಾವತ್ತೂ ಪ್ರಗತಿ ಹೊದುವಿರಿ ಮತ್ತು ಎಲ್ಲವೂ ಧ್ಯಾನವಾಗಿರುವ ಒಂದು ಸಮಯವು ಬರುತ್ತದೆ.

ಪ್ರಶ್ನೆ: ನನ್ನಲ್ಲಿರುವ ಹಣದಿಂದ ಏನು ಮಾಡುವುದು? ನೀವು ನನಗೆ ಸ್ವಲ್ಪ ಸಲಹೆಯನ್ನು ನೀಡಬಲ್ಲಿರಾ?
ಶ್ರೀ ಶ್ರೀ ರವಿಶಂಕರ್:
ನೀನು ಸಂಕೀರ್ಣವಾದ ಒಂದು ಪ್ರಪಂಚದಲ್ಲಿ ಜೀವಿಸುತ್ತಿರುವೆ. ಒಂದಲ್ಲ ಒಂದು ರೀತಿಯಲ್ಲಿ, ನೀನು ಪ್ರಪಂಚದಲ್ಲಿ ಯಾವುದರ ಮೇಲೆಯೋ ಅವಲಂಬಿತನಾಗಿರುವೆ. ನೀನು ನಿನ್ನನ್ನು ಅಷ್ಟೊಂದು ಸಂಪೂರ್ಣವಾಗಿ ಬೇರೆಯಾಗಿರಿಸಲು ಸಾಧ್ಯವಿಲ್ಲ.
ಈಗ ನೋಡಿ, ಜರ್ಮನಿಯು ತನ್ನ ಕರೆನ್ಸಿಯನ್ನು ಡಚ್ ಮಾರ್ಕಿನಿಂದ ಯುರೋಕ್ಕೆ ಬದಲಾಯಿಸಿತು. ನೀವು, "ಇಲ್ಲ, ನಾನು ಯುರೋಕ್ಕೆ ಬರಲು ಬಯಸುವುದಿಲ್ಲ, ನಾನು ಅದೇ ಡಚ್ ಮಾರ್ಕನ್ನು ನನ್ನೊಂದಿಗೆ ಇಟ್ಟುಕೊಳ್ಳಲು ಬಯಸುತ್ತೇನೆ" ಎಂದು ಹೇಳಲು ಸಾಧ್ಯವಿಲ್ಲ.
ನಿಮಗೆ ಹಾಗೆ ಹೇಳಲು ಸಾಧ್ಯವಿಲ್ಲ ಮತ್ತು ನೀವು ಹಾಗೆ ಮಾಡಿರುತ್ತಿದ್ದರೆ, ನೀವು ದೊಡ್ಡ ಮೂರ್ಖರಾಗುತ್ತಿದ್ದಿರಿ. ಆದುದರಿಂದ ಪ್ರಪಂಚದಲ್ಲಿ ಆಗುತ್ತಿರುವುದರಿಂದ ಸಂಪೂರ್ಣ ಪ್ರತ್ಯೇಕೀಕರಣ ಅಥವಾ ರಕ್ಷಾಕವಚ ಇಲ್ಲ. ನೀವು ಜಾಣರಾಗಿದ್ದುಕೊಂಡು ಲೋಭಿಗಳಲ್ಲದೇ ಇರಬಹುದು. ಹೆಚ್ಚಾಗಿ, ಲೋಭಿಗಳಾಗಿರುವ ಜನರು ತೊಂದರೆಯಲ್ಲಿ ಸಿಲುಕುತ್ತಾರೆ. ಅವರು, "ನಿಮ್ಮ ಹಣವನ್ನು ಬಂಡವಾಳ ಹೂಡಿ ಮತ್ತು ನಿಮಗೆ ಅದರಿಂದ ೨೦೦% ಹಿಂದೆ ಸಿಗುತ್ತದೆ" ಎಂದು ಹೇಳುವ ಜಾಹೀರಾತುಗಳನ್ನು ನೋಡುತ್ತಾರೆ. ಅವರು ನಿಮಗೆ ಯಾಕೆ ೨೦೦% ಕೊಡುವರು ಎಂಬುದನ್ನು ನೀವು ವೈಜ್ಞಾನಿಕವಾಗಿ ಯೋಚಿಸುವುದಿಲ್ಲ. ನೀವು ಅದರ ಮೋಡದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ, "ಓ, ಅವರು ನನಗೆ ಬಹಳಷ್ಟು ಹಣವನ್ನು ಕೊಡಲಿದ್ದಾರೆ." ಆ ಕ್ಷಣದಲ್ಲಿ, ನೀವು ಅಷ್ಟೊಂದು ಕಳವಳಗೊಂಡಿರುವಾಗ, ಯಾವುದೇ ಬುದ್ಧಿಯೂ ನಿಮ್ಮ ತಲೆಗೆ ಹೊಕ್ಕುವುದಿಲ್ಲ. ಅದು ಅಷ್ಟೊಂದು ನಿಜವೆಂದು ನೀವು ಯೋಚಿಸುತ್ತೀರಿ, ನೀವು ಬಂಡವಾಳ ಹೂಡುತ್ತೀರಿ ಮತ್ತು ನೀವು ಎಲ್ಲಾ ಹಣವನ್ನು ಕಳೆದುಕೊಳ್ಳುತ್ತೀರಿ. ಹಲವಾರು ಜನರು ಹೀಗೆ ಮಾಡುವುದನ್ನು ನಾನು ನೋಡಿದ್ದೇನೆ ಮತ್ತು ಕೇವಲ ಲೋಭದಿಂದಾಗಿ, ಹಲವಾರು ಜನರು ತಮ್ಮೆಲ್ಲಾ ಸಂಪತ್ತನ್ನು ಕಳೆದುಕೊಂಡಿರುವುದರ ಬಗ್ಗೆ ಕೇಳಿದ್ದೇನೆ.
ಆದುದರಿಂದ ನಾವು, ಎಲ್ಲಿ ಬಂಡವಾಳ ಹೂಡಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳುವಷ್ಟು ಬುದ್ಧಿಶಾಲಿಗಳಾಗಿರಬೇಕು. ಅದನ್ನೆಲ್ಲಾ ನಾನು ನಿಮಗೆ ಹೇಳಲು ಸಾಧ್ಯವಿಲ್ಲ. ಅದು ನೀತಿನಿಯಮಕ್ಕೆ ವಿರುದ್ಧವಾದುದು. ಎಲ್ಲಿ ಸುರಕ್ಷಿತವೆಂದು ನಿಮಗೆ ಅನಿಸುತ್ತದೋ ನೀವು ಅಲ್ಲಿ ಬಂಡವಾಳ ಹೂಡಿ.

ಪ್ರಶ್ನೆ: ಪ್ರೀತಿಯ ಗುರೂಜಿ, ನನಗೆ ಹೋಗ ಬಿಡಲು ಸಾಧ್ಯವಾಗುವುದಿಲ್ಲ. ಏನು ಮಾಡುವುದು?
ಶ್ರೀ ಶ್ರೀ ರವಿಶಂಕರ್:
ಹಿಡಿದಿಟ್ಟುಕೋ!
ಉಸಿರನ್ನು ಒಳಗೆಳೆದುಕೋ ಮತ್ತು ಹಿಡಿದಿಟ್ಟುಕೋ! ಎಷ್ಟು ಹೊತ್ತಿನ ವರೆಗೆ ನಿನಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವೆಂಬುದನ್ನು ನೋಡು. ಅಲ್ಲಿ ಯಾವುದೇ ಆಯ್ಕೆಯಿಲ್ಲ. ನಿನಗೆ ನಿನ್ನ ವಯಸ್ಸನ್ನು ನಿಲ್ಲಿಸಲು ಸಾಧ್ಯವಿದೆಯೇ? ಇಲ್ಲ! ನೀನು, "ಮುಂದಿನ ವರ್ಷದ ನಂತರ ನಾನು ೪೯ ವರ್ಷ ವಯಸ್ಸಿನವನಾಗುತ್ತೇನೆ" ಎಂದು ಹೇಳಲು ಸಾಧ್ಯವಿಲ್ಲ. ನೀನು ಹಾಗೆ ಹೇಳಲು ಸಾಧ್ಯವಿಲ್ಲ. "ನಾನು ಈ ವರ್ಷ ೪೯ ವರ್ಷದವನಾಗುತ್ತಿರುವುದಾದರೂ, ಮುಂದಿನ ವರ್ಷದ ವರೆಗೆ ನಾನು ಹಿಡಿದಿಟ್ಟುಕೊಳ್ಳುತ್ತೇನೆ. ನಾನು ೫೦ ವರ್ಷದವನಾಗಬೇಕೇ ಬೇಡವೇ ಎಂಬುದರ ಬಗ್ಗೆ ನಾನು ಯೋಚಿಸುತ್ತೇನೆ." ನಿಮ್ಮ ಜನ್ಮ ದಿನಾಂಕವನ್ನು ಬದಲಾಯಿಸುವ ಆಯ್ಕೆ ನಿಮಗಿದೆಯೇ? ಇಲ್ಲ! ನೀವದನ್ನು ಮಾಡಿದರೆ, ಅದು ನಿಜವಲ್ಲ. ನೀವದನ್ನು ಒಂದು ಪಾಸ್ ಪೋರ್ಟಿನಲ್ಲಿ ಮಾಡಬಹುದು, ಆದರೆ ಅದು ನಿಯಮಕ್ಕೆ ವಿರುದ್ಧವಾದುದು, ಅದು ಸರಿಯಲ್ಲ. ನೀವೊಂದು ನಿರ್ದಿಷ್ಟ ದಿನದಂದು ಹುಟ್ಟಿರುವಿರಿ ಮತ್ತು ಅಷ್ಟೆ.

ಪ್ರಶ್ನೆ: ನಾನು ಯಾವಾಗಲೂ ಪ್ರೀತಿಸಲ್ಪಡುವುದಕ್ಕಾಗಿ ಹುಡುಕಾಡುತ್ತಿರುತ್ತೇನೆ. ನಾನು ಪ್ರೀತಿಸಲ್ಪಡುತ್ತಿದ್ದೇನೆ ಮತ್ತು ನಾನು ಪ್ರೀತಿಸಲ್ಪಡಲು ಯೋಗ್ಯನೆಂಬುದನ್ನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಮೈ ಡಿಯರ್, ನಾನು ಹಲವಾರು ಸಾರಿ ಹೇಳಿದ್ದೇನೆ, ನೀನೇ ಪ್ರೀತಿ! ಪ್ರೀತಿಗಾಗಿ ಹುಡುಕಬೇಡ, ಆದರೆ ಪ್ರೀತಿಯನ್ನು ನೀಡು. ನೀನು ನೀಡಲು ಪ್ರಾರಂಭಿಸಿದಾಗ, ಅದು ಹಲವು ಪಟ್ಟು ಜಾಸ್ತಿಯಾಗಿ ನಿನ್ನಲ್ಲಿಗೆ ತಿರುಗಿ ಬರುತ್ತದೆ.

ಪ್ರಶ್ನೆ: ಪ್ರೀತಿಯ ಗುರೂಜಿ, ಇತ್ತೀಚೆಗೆ ನನ್ನ ತಂದೆ ತೀರಿ ಹೋದರು. ನನ್ನ ತಾಯಿಯು ಒಬ್ಬಂಟಿಯಾಗಿದ್ದಾರೆ, ನಿಶ್ಯಕ್ತಿಯಿಂದಿದ್ದಾರೆ ಹಾಗೂ ಜೀವನದಲ್ಲಿ ಯಾವುದೇ ಗುರಿಯಿಲ್ಲದೆ ಅಸ್ತವ್ಯಸ್ತವಾಗಿದ್ದಾರೆ. ಅವರಿಗೆ ಸಹಾಯ ಮಾಡಲು ನಾನೇನು ಮಾಡಬಹುದು?
ಶ್ರೀ ಶ್ರೀ ರವಿಶಂಕರ್:
ಜ್ಞಾನವು ಸಹಾಯ ಮಾಡುತ್ತದೆ! ಜ್ಞಾನದ ಬಗ್ಗೆ ಅವಳೊಂದಿಗೆ ಮಾತನಾಡು. ಅವಳೊಂದಿಗೆ ಕುಳಿತುಕೊಂಡು ಸ್ವಲ್ಪ ಜ್ಞಾನವನ್ನು ಓದು. ಧರ್ಮಗ್ರಂಥಗಳು, ಕೆಲವು ಕಥೆಗಳು ಅಥವಾ ಯೋಗ ವಾಸಿಷ್ಠವನ್ನು ಓದು. ಅದಕ್ಕಿಂತ ಹೆಚ್ಚಾಗಿ, ಕೇವಲ ನೀನು ಅವಳ ಜೊತೆಯಲ್ಲಿರುವುದರಿಂದಲೇ ಮೇಲೆತ್ತುವಿಕೆಯು ಆಗುತ್ತದೆ. ಸಮಯವು ಒಂದು ದೊಡ್ಡ ವೈದ್ಯ. ನಿಜವಾಗಿ, ಸಮಯವೊಂದೇ ಅತ್ಯಂತ ದೊಡ್ಡ ವೈದ್ಯನಾಗಿರುವುದು.

ಪ್ರಶ್ನೆ: ಪ್ರೀತಿಯ ಗುರೂಜಿ, ಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು, ಕರ್ಮದ ಬಂಧನವನ್ನು ಬದಲಾಯಿಸಲು ಸಾಧ್ಯವಿರುವುದು ಕೇವಲ ಕೃಪೆಗೆ ಮಾತ್ರ ಎಂದು ನೀವು ಹೇಳುತ್ತೀರಿ. ಕೃಪೆಯೆಂದರೇನು ಮತ್ತು ಯಾವ ಕ್ರಿಯೆಯು ಕೃಪೆಯನ್ನು ತರಬಲ್ಲದು?
ಶ್ರೀ ಶ್ರೀ ರವಿಶಂಕರ್:
ವಿಕಸನೀಯವಾದ ಎಲ್ಲಾ ಕ್ರಿಯೆಗಳು ಮತ್ತು ಜೀವನವನ್ನು ಆಧರಿಸುವ ಎಲ್ಲವೂ. ನಿಸ್ವಾರ್ಥತೆಯಿಂದ ಕೂಡಿದ ಸೇವೆ. ನಾನು ಸ್ವಲ್ಪ ಸೇವೆ ಮಾಡುತ್ತೇನೆ ಮತ್ತು ಪ್ರತಿಫಲವಾಗಿ ನನಗೇನು ಸಿಗುತ್ತದೆ ಎಂದು ಯೋಚಿಸುವುದು - ಇದಲ್ಲ. ಅದು ಸೇವೆಯೆಂದು ಕರೆಯಲ್ಪಡುವುದಿಲ್ಲ. ಸೇವೆಯೆಂದರೆ, ಪ್ರತಿಫಲವಾಗಿ ಏನನ್ನಾದರೂ ಬಯಸದೆಯೇ ಮಾಡುವ ಒಂದು ಕ್ರಿಯೆ. ಈ ಕ್ರಿಯೆಯು ಬಹಳ ಪ್ರಮುಖವಾದುದು. ಸೇವೆಯು ನಮ್ಮ ಕರ್ಮವನ್ನು ಶುದ್ಧಗೊಳಿಸುತ್ತದೆ.
ಭಾರತದಲ್ಲಿ ಒಂದು ಗಾದೆಯಿದೆ, "ಅನ್ನದ ಮೇಲೆ ಒಂದು ಚಮಚ ತುಪ್ಪವು ಅನ್ನವನ್ನು ಶುದ್ಧಗೊಳಿಸುತ್ತದೆ." ಯಾಕೆಂದು ನಿಮಗೆ ಗೊತ್ತಿದೆಯಾ? ಇದು ಯಾಕೆಂದರೆ, ನೀವು ಅನ್ನವನ್ನು ಹಾಗೆಯೇ ಊಟ ಮಾಡಿದರೆ, ಅದು ಬಹಳ ವೇಗವಾಗಿ ಜೀರ್ಣವಾಗುತ್ತದೆ ಮತ್ತು ಬಹಳ ಬೇಗನೇ ಸಕ್ಕರೆಯಾಗುತ್ತದೆ. ಅನ್ನವನ್ನು ಆ ರೀತಿಯಲ್ಲಿ ಊಟ ಮಾಡುವ ಹಲವರು ಸಿಹಿಮೂತ್ರ ರೋಗಿಗಳಾಗುತ್ತಾರೆ.
ನನ್ನಲ್ಲಿ ಒಬ್ಬರು ಹೃದಯರೋಗ ತಜ್ಞರು ಹೇಳಿದರು, ನೀವು ಧಾನ್ಯಗಳನ್ನು ಸೇವಿಸುವಾಗಲೆಲ್ಲಾ ಅದರೊಂದಿಗೆ ಸ್ವಲ್ಪ ಕೊಬ್ಬನ್ನೂ ಸೇವಿಸಬೇಕು. ಅದರ ಮೇಲೆ ಒಂದು ಚಮಚ ತುಪ್ಪವನ್ನು ಹಾಕಿ ತಿನ್ನುವುದರಿಂದ, ಜೀರ್ಣಕ್ರಿಯೆಯು ನಿಧಾನವಾಗುತ್ತದೆ. ಅದು ಸಂಕೀರ್ಣವಾದ ಕಾರ್ಬೋಹೈಡ್ರೇಟುಗಳಾಗುತ್ತದೆ ಮತ್ತು ಶರೀರದಲ್ಲಿನ ಸಕ್ಕರೆಯ ಅಂಶವನ್ನು ಸಂತುಲನದಲ್ಲಿಡಲು ಸಹಾಯ ಮಾಡುತ್ತವೆ ಹಾಗೂ ಇದು ಹೃದಯವು ಆರೋಗ್ಯಕರವಾಗಿ ಕೆಲಸ ನಿರ್ವಹಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪ್ರಾಚೀನ ಜನರು ಇದನ್ನು ಹೇಳಿದುದು, "ಒಂದು ಚಮಚ ತುಪ್ಪವು ಅನ್ನವನ್ನು ಶುದ್ಧಗೊಳಿಸುತ್ತದೆ."
ಜ್ಞಾನವು ಬುದ್ಧಿಯನ್ನು ಶುದ್ಧಗೊಳಿಸುತ್ತದೆ. ಜ್ಞಾನವು ಬುದ್ಧಿಯನ್ನು ಶುದ್ಧಗೊಳಿಸುವುದೆಂಬುದನ್ನು ನಿಮ್ಮಲ್ಲಿ ಎಷ್ಟು ಮಂದಿ ಅನುಭವಿಸಿದ್ದೀರಿ? ಎಲ್ಲಾ ಕೋಪ, ಆಸೆಗಳು, ಇತರ ಜನರ ಬಗ್ಗೆಯಿರುವ ತಿರಸ್ಕಾರಗಳು, ಎಲ್ಲವೂ ಮಾಯವಾಗುತ್ತವೆ.
ಸಂಗೀತವು ಭಾವನೆಗಳನ್ನು ಶುದ್ಧಗೊಳಿಸುತ್ತದೆ. ದಾನವು ನೀವು ಸಂಪಾದಿಸುವ ಹಣವನ್ನು ಶುದ್ಧಗೊಳಿಸುತ್ತದೆ. ನೀವು ಸಂಪಾದಿಸುವುದರಲ್ಲಿ ಕಡಿಮೆಪಕ್ಷ ಮೂರರಿಂದ ನಾಲ್ಕು ಶೇಕಡಾವನ್ನು ದಾನವಾಗಿ ನೀಡಬೇಕು. ನಾವು ಸಂಪಾದಿಸುವುದನ್ನೆಲ್ಲವನ್ನೂ ನಾವು ನಮಗಾಗಿಯೇ ಖರ್ಚು ಮಾಡಿದರೆ, ಅದು ಶುದ್ಧವಾದ ಹಣ ಅಥವಾ ಒಳ್ಳೆಯ ಹಣವೆಂದು ಪರಿಗಣಿಸಲ್ಪಡುವುದಿಲ್ಲ. ದಾನವು ಹಣವನ್ನು ಶುದ್ಧಗೊಳಿಸುತ್ತದೆ ಮತ್ತು ನಂತರ ಉಳಿದ ಹಣದಲ್ಲಿ ನೀವು ಆನಂದಪಡಬಹುದು. ಇಲ್ಲದಿದ್ದರೆ, ಉಳಿದ ಹಣವು ಸುಮ್ಮನೇ ಆಸ್ಪತ್ರೆಗಳಿಗೆ ಮತ್ತು ಇತರ ವಿಷಯಗಳಿಗೆ ಖರ್ಚಾಗಿ ಹೋಗುತ್ತದೆ.
ಪ್ರಾರ್ಥನೆಯು ಹೃದಯವನ್ನು ಶುದ್ಧಗೊಳಿಸುತ್ತದೆ.
ಧ್ಯಾನವು ಆತ್ಮವನ್ನು ಶುದ್ಧಗೊಳಿಸುತ್ತದೆ.
ಆಯುರ್ವೇದ, ತ್ರಿಫಲವು ಶರೀರವನ್ನು ಶುದ್ಧಗೊಳಿಸುತ್ತದೆ ಮತ್ತು ಕರುಳನ್ನು ಶುಚಿಗೊಳಿಸುತ್ತದೆ. ನಾವು ಯಾವಾಗಲೂ ನಮ್ಮ ಶರೀರದೊಳಕ್ಕೆ ಆಹಾರವನ್ನು ತುರುಕುತ್ತಿರುತ್ತೇವೆ, ಆದರೆ ಕೆಲವೊಮ್ಮೆ ನಾವು ಶರೀರವನ್ನು ಶುದ್ಧಗೊಳಿಸಬೇಕು. ರಾತ್ರಿ ಮಲಗುವ ಮುನ್ನ ನಾಲ್ಕು ಅಥವಾ ಐದು ಮಾತ್ರೆಗಳನ್ನು ತೆಗೆದುಕೊಂಡರೆ, ಬೆಳಗ್ಗೆ ನಿಮ್ಮ ಹೊಟ್ಟೆಯು ಪೂರ್ತಿಯಾಗಿ ಶುದ್ಧವಾಗುತ್ತದೆ. ಆದುದರಿಂದ, ಆಯುರ್ವೇದ, ಯೋಗ, ಪ್ರಾಣಾಯಾಮ ಮತ್ತು ವ್ಯಾಯಾಮಗಳು ಶರೀರವನ್ನು ಶುದ್ಧಗೊಳಿಸುತ್ತದೆ. ಪ್ರಾಣಾಯಾಮವು ಸಂಪೂರ್ಣ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ; ಶರೀರ-ಮನಸ್ಸು ಸಂಕೀರ್ಣವನ್ನು. ಅದಕ್ಕೇ, ಸುದರ್ಶನ ಕ್ರಿಯೆಯ ಬಳಿಕ ನಿಮಗೆ ಬಹಳ ಶುಚಿಯಾಗಿರುವ ಅನಿಸಿಕೆ ಬರುವುದು. ಅದು ನಿಮ್ಮ ಎಲ್ಲಾ ಕರ್ಮಗಳನ್ನು ಶುಚಿಗೊಳಿಸುತ್ತದೆ, ಅದು ಆ ಸ್ಪಷ್ಟತೆಯನ್ನು ತರುತ್ತದೆ.

ಪ್ರಶ್ನೆ: ಪ್ರೀತಿಯ ಗುರೂಜಿ, ಎಲ್ಲಾ ಬಯಕೆಗಳು ಮತ್ತು ಕರ್ಮಗಳು ತೊರೆದುಹೋಗುವ ವರೆಗೆ ಆತ್ಮವು ಪುನಃ ಪುನಃ ಪುನರ್ಜನ್ಮ ಪಡೆಯುತ್ತಿರಬೇಕೇ? ಹುಟ್ಟು ಮತ್ತು ಸಾವಿನ ಈ ಚಕ್ರದಿಂದ ಹೊರಬರಲಿರುವ ದಾರಿ ಯಾವುದು? ಆತ್ಮ ಸಾಕ್ಷಾತ್ಕಾರವೊಂದೇ ಇರುವ ದಾರಿಯೇ?
ಶ್ರೀ ಶ್ರೀ ರವಿಶಂಕರ್:
ಸರಿ! ದಾಹವನ್ನು ತಣಿಸಲಿರುವ ಒಂದೇ ದಾರಿಯೆಂದರೆ, ಏನನ್ನಾದರೂ ಕುಡಿಯುವುದು. ಹಸಿವನ್ನು ಹೋಗಲಾಡಿಸಲಿರುವ ಒಂದೇ ದಾರಿಯೆಂದರೆ, ಏನನ್ನಾದರೂ ತಿನ್ನುವುದು. ಅದೇ ರೀತಿಯಲ್ಲಿ, ಈ ಚಕ್ರದಿಂದ ಹೊರಬರಲಿರುವ ಒಂದೇ ದಾರಿಯೆಂದರೆ ಆತ್ಮ ಸಾಕ್ಷಾತ್ಕಾರ ಅಥವಾ ಧ್ಯಾನ. ಸಂಪೂರ್ಣ ತೃಪ್ತಿ!

ಪ್ರಶ್ನೆ: ಮೊದಲಿನ ಒಂದು ತಪ್ಪನ್ನು ಮನದಲ್ಲಿಟ್ಟುಕೊಂಡು ಜನರು ಯಾಕೆ ಪ್ರತಿಭೆಯನ್ನು ಕಡೆಗಣಿಸುತ್ತಾರೆ?
ಶ್ರೀ ಶ್ರೀ ರವಿಶಂಕರ್:
ನೀನು ನಿನ್ನದೇ ಪ್ರಶ್ನೆಗೆ ಉತ್ತರ ನೀಡಿರುವೆ. ನಿನ್ನಲ್ಲಿ ಪ್ರತಿಭೆಯಿದೆ, ಆದರೆ ನೀನೊಂದು ತಪ್ಪನ್ನು ಮಾಡಿದಾಗ, ಅವರು ಶಂಕಿಸುತ್ತಾರೆ ಯಾಕೆಂದರೆ, ಪ್ರತಿಯೊಂದು ತಪ್ಪು ಕೂಡಾ ಒಂದು ಸಂಸ್ಥೆಗೆ ಅಥವಾ ಒಬ್ಬ ವ್ಯಕ್ತಿಗೆ ಸಾಕಷ್ಟು ವೆಚ್ಚ ತರಿಸಬಹುದು. ಆದುದರಿಂದ, ತಪ್ಪಾಗಲಾರದೆಂದು ಮತ್ತು ನೀನು ನಿನ್ನ ಪ್ರತಿಭೆಯನ್ನು ಬಹಳ ಚೆನ್ನಾಗಿ ಉಪಯೋಗಿಸುವೆಯೆಂದು ನೀನವರಿಗೆ ಪುನಃ ನಂಬಿಕೆ ನೀಡಬೇಕಾಗಬಹುದು. ಈ ದಿನಗಳಲ್ಲಿ ಜನರು ಅಷ್ಟೊಂದು ಅಪಾಯ ತೆಗೆದುಕೊಳ್ಳಲು ಬಯಸುವುದಿಲ್ಲ.

ಪ್ರಶ್ನೆ: ಗುರೂಜಿ, ಜ್ಞಾನದ ಪಥದಲ್ಲಿ ಅನುಸರಿಸಬೇಕಾದ ಒಂದು ಸರಿಯಾದ ದಾರಿಯಿದೆಯೇ? ನಮ್ಮ ಜೀವನದಲ್ಲಿ ಪ್ರಮುಖರಾಗಿರುವ ವ್ಯಕ್ತಿಗಳ ಬಗ್ಗೆ, ನಮ್ಮ ಮನಸ್ಸನ್ನು ಪೀಡಿಸುವ ಯೋಚನೆಗಳು ಮತ್ತು ನೆನಪುಗಳ ಬಗ್ಗೆ ನಾವೇನು ಮಾಡುವುದು?
ಶ್ರೀ ಶ್ರೀ ರವಿಶಂಕರ್:
ಕಳೆದುಹೋದ ಕಾಲವು ಹೇಗಿದ್ದರೂ ಅದರ ಬಗ್ಗೆ ಚಿಂತಿಸಬೇಡಿ. ವರ್ತಮಾನದಲ್ಲಿ, ನಿಮ್ಮ ಮುಗ್ಧತೆಯಲ್ಲಿ ನಂಬಿಕೆಯನ್ನಿರಿಸಿ. ವರ್ತಮಾನದ ಕ್ಷಣದಲ್ಲಿ ನೀವು ಮುಗ್ಧರಾಗಿರುವಿರಿ. ಹಿಂದೆ ನಡೆದು ಹೋದ ತಪ್ಪುಗಳಾದುದು ನಿಮ್ಮ ಅಜ್ಞಾನದಿಂದಾಗಿ. ಆದರೆ ವರ್ತಮಾನದ ಕ್ಷಣದಲ್ಲಿರುವ ವಾಸ್ತವವೆಂದರೆ, ನೀವು ಮುಗ್ಧರು.

ಪ್ರಶ್ನೆ: ಜ್ಯೋತಿಷ್ಯವನ್ನು ಕಲಿಯುವುದು ಮೌಲಿಕವಾದುದೇ? ಯಾವತ್ತಾದರೂ ನಾವು ಸಾಕಷ್ಟನ್ನು ತಿಳಿದುಕೊಳ್ಳುವೆವೇ?
ಶ್ರೀ ಶ್ರೀ ರವಿಶಂಕರ್:
ಜ್ಯೋತಿಷ್ಯವು ಒಂದು ವಿಜ್ಞಾನ. ಆದರೆ ಒಂದು ರೀತಿಯಲ್ಲಿ, ಅದೊಂದು ಕಳೆದುಹೋದ ವಿಜ್ಞಾನ. ಸಂಪೂರ್ಣ ಜ್ಞಾನವು ಲಭ್ಯವಿಲ್ಲ. ಇರುವ ಜ್ಞಾನವು ೭೦ರಿಂದ ೮೦ ಶೇಕಡಾದಷ್ಟು. ಅದರಿಂದ ಅವರು ಸ್ವಲ್ಪ ಭವಿಷ್ಯವನ್ನು ನುಡಿಯಲು ಸಮರ್ಥರಾಗಿದ್ದಾರೆ. ಆದರೆ ಜ್ಯೋತಿಷಿಗಳು ಯಾವಾಗಲೂ ಒಂದು ಷರತ್ತನ್ನು ಹಾಕುತ್ತಾರೆ. ದೊಡ್ಡದೊಂದು ಶಕ್ತಿಯು ಹಿಂದೆ ಅಡಗಿದೆ, ಒಂದು ಉನ್ನತ ಶಕ್ತಿ, ಅದು ಇದೆಲ್ಲವನ್ನೂ ತಳ್ಳಿಹಾಕಬಹುದು. ಯಾಕೆಂದರೆ ಆ ಉಚ್ಛ ಶಕ್ತಿಯು, ಆ ಭವ್ಯ ಶಕ್ತಿಯು ಸ್ವತಂತ್ರವಾದುದು ಮತ್ತು ಅದುವೇ ದೈವತ್ವ, ದೈವಿಕ ಅನುಗ್ರಹ. ದೈವಿಕ ಅನುಗ್ರಹವು ಯಾವುದೇ ಸಮಯದಲ್ಲಿ ಯಾವುದನ್ನಾದರೂ ಬದಲಾಯಿಸಬಲ್ಲದು.

ಪ್ರಶ್ನೆ: ನನ್ನ ಪತ್ನಿಯು ನನ್ನೊಂದಿಗೆ, ಯಾವುದೇ ಕಾರಣವಿಲ್ಲದೆಯೇ ಒಂದು ಕೆಟ್ಟ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅದೊಂದು ಸವಾಲು! ಅವಳು ಕಾರಣವಿಲ್ಲದೆಯೇ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದಾದರೆ, ನೀನು ಅವಳಿಗೊಂದು ಕಾರಣವನ್ನು ಕೊಡುವುದಾಗಿ ಅವಳಿಗೆ ಹೇಳು!

ಪ್ರಶ್ನೆ: ಅಷ್ಟಾವಕ್ರ ಗೀತೆಯಲ್ಲಿ, ನೀವು ಹೇಳುತ್ತೀರಿ ಜೀವನವು ಮೂರು ವಿಷಯಗಳಿಂದ ರೂಪುಗೊಂಡಿದೆ: ಬೀಜಗಳು, ಮೊಟ್ಟೆಗಳು ಮತ್ತು ಆಕಾಶದಿಂದ ಎಂದು. ಜೀವನವು ಆಕಾಶದಿಂದ ರೂಪುಗೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಎಲ್ಲವೂ ಅಕಾಶದಲ್ಲಿ ಬರುತ್ತದೆ, ಆಕಾಶದಲ್ಲಿ ಉಳಿಯುತ್ತದೆ ಮತ್ತು ಆಕಾಶದಲ್ಲಿ ವಿಲೀನವಾಗುತ್ತದೆ. ನೀನು ಆಕಾಶವನ್ನು ಅಧ್ಯಯನ ಮಾಡಬೇಕು. ಆಗ, ಆಕಾಶವಲ್ಲದೆ ಬೇರೇನೂ ಅಸ್ತಿತ್ವದಲ್ಲಿಲ್ಲವೆಂಬುದು ನಿನಗೆ ತಿಳಿಯುತ್ತದೆ. ಎಲ್ಲವೂ ಆಕಾಶದಲ್ಲಿ ರೂಪುಗೊಳ್ಳುತ್ತದೆ.

ಪ್ರಶ್ನೆ: ಪ್ರೀತಿಯ ಗುರೂಜಿ, ಕಳೆದ ಮೂರು ವರ್ಷಗಳಲ್ಲಿ ನಾನು ಹಲವಾರು ತಪ್ಪುಗಳನ್ನು ಮಾಡಿರುವೆನೆಂದು ಮತ್ತು ಅದರ ಪರಿಣಾಮಗಳಿಂದ ನಾನು ಬಳಲಬೇಕಾಗುತ್ತದೆ ಎಂದು ನನಗನಿಸುತ್ತದೆ ಹಾಗೂ ನಾನು ಭಯಭೀತನಾಗಿದ್ದೇನೆ. ಈ ಪರಿಣಾಮಗಳನ್ನು ಇಲ್ಲದಂತೆ ಮಾಡಲು ನಾನೇನಾದರೂ ಮಾಡಬಹುದೇ?
ಶ್ರೀ ಶ್ರೀ ರವಿಶಂಕರ್:
ನೀನು ಈಗ ಸರಿಯಾದ ಮಾರ್ಗದಲ್ಲಿರುವುದೇ, ಪರಿಣಾಮಗಳನ್ನು ಕಡಿಮೆ ಮಾಡುತ್ತಿದೆ, ಮತ್ತು ಪರಿಣಾಮದ ಬಗ್ಗೆಯಿರುವ ನಿನ್ನ ಸಮ್ಮತಿಯೇ ಒಂದು ಪರಿಹಾರವಾಗಿದೆ. ಅದು ತಿರುಗಿ ನಿನ್ನನ್ನು ಒಂದು ಉನ್ನತವಾದ ಪೀಠಕ್ಕೆ ಏರಿಸುತ್ತದೆ.

ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಮೂರು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಆದರೆ ನನ್ನ ಮೇಲ್ವಿಚಾರಕರು ಯೋಚಿಸದೆಯೇ ನನ್ನ ವೃತ್ತಿಯನ್ನು ಕೊನೆಗೊಳಿಸಿದ್ದಾರೆ. ಈಗ ನಾನು ನಿರುದ್ಯೋಗಿಯಾಗಿದ್ದೇನೆ ಮತ್ತು ಜೀವನದಲ್ಲಿ ನನ್ನ ಕನಸನ್ನು ಕಳಕೊಂಡಿದ್ದೇನೆ. ನನ್ನ ಮೇಲಧಿಕಾರಿಯ ಬಗ್ಗೆಯಿರುವ ನಕಾರಾತ್ಮಕ ಭಾವನೆಗಳನ್ನು ನಿರ್ವಹಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಕೇಳು, ಕುಳಿತುಕೊಂಡು ಹಿಂದಿನದರ ಬಗ್ಗೆ ವ್ಯಥೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಎಚ್ಚೆತ್ತುಕೋ! ಪೂರ್ತಿ ಶಕ್ತಿಯೊಂದಿಗೆ ಮುಂದಕ್ಕೆ ಸಾಗು.
ನೀನು ಒಂದು ನೌಕರಿಯನ್ನು ಕಳೆದುಕೊಂಡಿದ್ದರೇನಂತೆ?! ಪ್ರಪಂಚದಲ್ಲಿ ದಶಲಕ್ಷ ಇತರ ನೌಕರಿಗಳಿವೆ. ನೀನು ಇನ್ನೊಂದನ್ನು ತೆಗೆದುಕೊಳ್ಳಬಹುದು. ಈ ನೌಕರಿಯಲ್ಲಿ ನಿನಗೆ ಸ್ವಲ್ಪ ಕಡಿಮೆ ಸಂಬಳ ಬಂದರೆ ಮತ್ತು ಅಲ್ಲಿ ನಿನಗೆ ಹೆಚ್ಚು ಸಿಕ್ಕಿದ್ದರೆ ಚಿಂತಿಸಬೇಡ, ಮುಂದಕ್ಕೆ ಸಾಗು!
ಜೀವನವು, ಕುಳಿತುಕೊಂಡು ಹಿಂದೆ ಆಗಿ ಹೋದುದರ ಬಗ್ಗೆ ವ್ಯಥೆಪಡುತ್ತಾ,  ನಿನ್ನ ಶಕ್ತಿ ಮತ್ತು ನಿನ್ನ ಸಮಯವನ್ನು ಹಾಳು ಮಾಡುವುದಕ್ಕಿಂತ ಎಷ್ಟೋ ಹೆಚ್ಚು ಅಮೂಲ್ಯವಾದುದು. ಅದು, ವರ್ತಮಾನದಲ್ಲಿ ನಿನ್ನದೇ ತಪ್ಪುಗಳಿಂದ ಆಗಿದ್ದಿರಬಹುದು ಅಥವಾ ಅಂದು ನೀನು ನಿನ್ನ ತಪ್ಪುಗಳನ್ನು ಗುರುತಿಸಿಕೊಳ್ಳುವುದರಲ್ಲಿ ಅಸಮರ್ಥನಾಗಿದ್ದಿರಬಹುದು. ಅದು ಕಳೆದ ಒಂದು ಜನ್ಮದ ಕಾರಣದಿಂದಲೂ ಇದ್ದಿರಬಹುದು, ಆದರೆ ಚಿಂತಿಸಬೇಡ. ಕಳೆದುದನ್ನು ವಿಶ್ಲೇಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಮುಂದಿನದನ್ನು ನೋಡಬೇಕು ಮತ್ತು ಸುಮ್ಮನೇ ಮುನ್ನಡೆಯಬೇಕು. ಯಾವ ಕಾರಣಕ್ಕಾಗಿಯೂ ನಿನ್ನ ಉತ್ಸಾಹವನ್ನು ಕಳೆದುಕೊಳ್ಳಬೇಡ.

ಪ್ರಶ್ನೆ: ಕೆಲವು ದಿನಗಳ ಹಿಂದೆ ನೀವು ಸತ್ವದ ಬಗ್ಗೆ, ನೀರು ಅತ್ಯುತ್ತಮವಾದ ವಾಹಕ ಎಂಬುದರ ಬಗ್ಗೆ ಮಾತನಾಡುತ್ತಿದ್ದಿರಿ. ಸತ್ವ ಶಕ್ತಿಯ ಮಟ್ಟವನ್ನು ಅಳೆಯಲು ಯಾವುದಾದರೂ ಮಾರ್ಗವಿದೆಯೇ?
ಶ್ರೀ ಶ್ರೀ ರವಿಶಂಕರ್:
ಶಕ್ತಿಯ ಮಟ್ಟಗಳನ್ನು ಅಳೆಯಲು ಯಾವುದಾದರೂ ಮಾರ್ಗವಿರಲೇಬೇಕು. ನಮ್ಮ ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಲ್ಲೊಬ್ಬರು ಒಬ್ಬ ವಿಜ್ಞಾನಿ ಕೂಡಾ ಆಗಿದ್ದಾರೆ. ಅವರು ಶಕ್ತಿಯ ಕಂಪನಗಳನ್ನು ಅಳೆಯಲು ಒಂದು ಸಾಧನವನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವರು ಒಬ್ಬ ವ್ಯಕ್ತಿಯು ಧ್ಯಾನ ಮಾಡುವ ಮೊದಲು ಹಾಗೂ ನಂತರ, ಆ ವ್ಯಕ್ತಿಯಲ್ಲಿ ಶಕ್ತಿಯನ್ನು ಅಳೆಯುತ್ತಾರೆ ಮತ್ತು ಆತನ ಪ್ರಭಾವಳಿಯು ಒಂದು ನಿರ್ದಿಷ್ಟ ಪ್ರಮಾಣದ ದೂರದಷ್ಟು ಹೆಚ್ಚಾಗಿರುವುದನ್ನು ಕಂಡುಕೊಳ್ಳುತ್ತಾರೆ. ಹೀಗೆ ಇದು ಬಹಳ ಆಸಕ್ತಿಕರವಾಗಿದೆ.

ಪ್ರಶ್ನೆ: ಪ್ರೀತಿಯ ಗುರೂಜಿ, ಶರೀರವು ಭೌತಿಕವಾಗಿ ಗಾಯಗೊಂಡಾಗ ಒಬ್ಬರು ಸಾಯುತ್ತಾರೆ ಮತ್ತು ಆತ್ಮವು ಶರೀರವನ್ನು ಬಿಟ್ಟುಹೋಗುತ್ತದೆ. ಆತ್ಮವು ಶರೀರದೊಂದಿಗೆ ಅಷ್ಟೊಂದು ಸಡಿಲವಾದ ಸಂಬಂಧವನ್ನು ಹೊಂದಿದೆಯೇ? ನೋವಾಗದೆಯೇ ಆತ್ಮವು ಹೋಗಬಲ್ಲದೇ?
ಶ್ರೀ ಶ್ರೀ ರವಿಶಂಕರ್:
ಆತ್ಮವು ಗಾಯಗೊಳ್ಳುವುದಿಲ್ಲ. ಅದು ಮುಂದಕ್ಕೆ ಸಾಗುತ್ತದೆ. ನೀವು ಆಕಾಶಕ್ಕೆ ಗಾಯಗೊಳಿಸಲು ಅಥವಾ ನೋಯಿಸಲು ಸಾಧ್ಯವಿಲ್ಲ. ನೀವು ಗಾಳಿಗೆ ಗಾಯಗೊಳಿಸಲು ಸಾಧ್ಯವಿಲ್ಲ. ನೀವು ಸೃಷ್ಟಿಯಲ್ಲಿ ಸೂಕ್ಷ್ಮವಾಗಿ ಹೋದಷ್ಟೂ, ಅಲ್ಲಿ ಗಾಯಗೊಳ್ಳುವಂತಹುದು ಏನೂ ಇಲ್ಲ. ನೀವದನ್ನು ವಿಭಜಿಸಲು ಸಾಧ್ಯವಿಲ್ಲ. ಅದು ವಿಸ್ಮಯಕಾರಿ.