ಗುರುವಾರ, ಡಿಸೆಂಬರ್ 8, 2011

ಆಸಕ್ತಿಯಿಟ್ಟು ಅವಲೋಕಿಸಿ ಜ್ಞಾನ ಸ೦ಪಾದಿಸಿ

08
2011
Dec
ಬೆ೦ಗಳೂರು ಆಶ್ರಮ, ಭಾರತ


ಪ್ರಶ್ನೆ: ’ಆಸಕ್ತಿ’ ಎಂಬುದರ ಅರ್ಥವು ಒಲವು ಅಥವಾ ಉದ್ದೇಶ ಎಂದಾಗಿದೆ. ’ನಿರಾಸಕ್ತಿ’ ಎಂಬುದರ ಅರ್ಥವು ಆಸಕ್ತಿ ಅಥವಾ ಒಲವು ಇಲ್ಲದಿರುವಿಕೆ ಎಂದಾಗಿದೆ. ಒಂದು ಕಾರ್ಯವನ್ನು ಮಾಡಲು ಆಸಕ್ತಿ ಅಥವಾ ಒಲವು ಇಲ್ಲದಿರುವಾಗ ಆ ಕಾರ್ಯವನ್ನು ಮಾಡುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ಈಗ ನಾನು ನಿನಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀನು ಬೆಳಗ್ಗೆ ಸ್ನಾನ ಮಾಡುವೆ. ನೀನು ಬಹಳ ಆಸಕ್ತಿಯೊಂದಿಗೆ ಸ್ನಾನ ಮಾಡುವೆಯಾ? ನೀನು ಬಹಳ ಆಸಕ್ತಿಯೊಂದಿಗೆ ಹಲ್ಲುಗಳನ್ನುಜ್ಜುವೆಯಾ? ಇಲ್ಲ. ಕೇವಲ ನೀನದನ್ನು ಮಾಡಬೇಕಾಗಿರುವುದರಿಂದ, ನೀನದನ್ನು ಮಾಡುವೆ! ಅದು ಸ್ವಾಭಾವಿಕ ಮತ್ತು ಪ್ರಯತ್ನವಿಲ್ಲದುದು. ಸ್ವಾಭಾವಿಕವಾಗಿರುವ ಯಾವುದಕ್ಕಾದರೂ ಪ್ರಯತ್ನ ಬೇಕಾಗುವುದಿಲ್ಲ. ಉದಾಹರಣೆಗೆ ನೀನು ಸ್ವಾಭಾವಿಕವಾಗಿ ನಗುವಾಗ ಅದು ಪ್ರಯತ್ನವಿಲ್ಲದ ನಗು, ಆದರೆ ನಿನ್ನಲ್ಲಿ ನಗಲು ಹೇಳಿದಾಗ, ಅದು ಕಷ್ಟದ ಕೆಲಸವಾಗುತ್ತದೆ.
ಪ್ರಯತ್ನದ ಅಗತ್ಯವಿರುವ ಒಂದು ಕೆಲಸ ಮಾಡುವುದು ’ಆಸಕ್ತಿ’ಯಾಗಿದೆ. ಸ್ವಾಭಾವಿಕವಾಗಿ ಬರುವ ಹಾಗೂ ನಿಮಗೆ ಆಂತರಿಕ ಶಾಂತಿಯನ್ನು ಕೊಡುವ ಒಂದು ಕೆಲಸವನ್ನು ಮಾಡುವುದು ’ನಿರಾಸಕ್ತಿ’ಯಲ್ಲಾಗಿದೆ.
ನಿಮಗೆ ನಾನೊಂದು ಉದಾಹರಣೆಯನ್ನು ಕೊಡುತ್ತೇನೆ: ಇಲ್ಲಿರುವ ಮಹಿಳೆಯರಲ್ಲಿ ನೀವು ಆಹಾರವನ್ನು ತಯಾರಿಸಲು ಹೇಳಿದರೆ, ಅವರಿಗೆ ಅದನ್ನು ಹೆಚ್ಚಿನ ಪ್ರಯತ್ನವಿಲ್ಲದೆಯೇ ತಯಾರಿಸಲು ಸಾಧ್ಯವಾಗಬಹುದು. ಅದೇ ಕೆಲಸವನ್ನು ಒಬ್ಬ ಗಂಡಸಿಗೆ ನೀಡಿದರೆ, ಅವನು ಅದೇ ಆಹಾರವನ್ನು ತಯಾರಿಸಲು ಒಂದು ಅಡಿಗೆ ಪುಸ್ತಕದ ಪುಟಗಳನ್ನು ಪುನಃ ಪುನಃ ತಿರುವಿ ಹಾಕುತ್ತಾನೆ. ಮಸಾಲೆಗಳು ಸರಿಯಾದ ಪ್ರಮಾಣದಲ್ಲಿವೆಯೇ ಎಂದು ಪರಿಶೀಲಿಸಲು ಅವನು ಆಹಾರವನ್ನು ರುಚಿ ನೋಡುತ್ತಾ ಇರಬಹುದು.
ಆದುದರಿಂದ, ಎಲ್ಲೆಲ್ಲಾ ಪ್ರಯತ್ನವನ್ನು ಹಾಕಲಾಗುತ್ತದೆಯೋ, ಅಲ್ಲಿ ಕೆಲಸವು ’ಆಸಕ್ತಿ’ಯೊಂದಿಗೆ ಮಾಡಲ್ಪಡುತ್ತದೆ ಮತ್ತು ಇದು ಉದ್ವಿಗ್ನತೆಗೆ ದಾರಿಮಾಡುತ್ತದೆ.
ಮೈಸೂರಿಗೆ ಹೋಗುವ ಬಗ್ಗೆ ನೀವು ಉದ್ವಿಗ್ನರಾಗಿರುವುದು ’ಆಸಕ್ತಿ’ಯಾಗಿದೆ; ಪ್ರಯತ್ನವಿಲ್ಲದೆಯೇ ಮೈಸೂರಿಗೆ ನಿಮ್ಮ ಕಾರನ್ನು ಚಲಾಯಿಸುವುದು ’ನಿರಾಸಕ್ತಿ’ಯಾಗಿದೆ.
’ನಿರಾಸಕ್ತಿ’ಯೆಂದರೆ ಆಸಕ್ತಿಯಿಲ್ಲದಿರುವಿಕೆ ಅಥವಾ ಖಿನ್ನತೆಯಲ್ಲ; ಅದು ಕೇವಲ ಒಂದು ಪ್ರಯತ್ನವಿಲ್ಲದ ನಿಲುವು.

ಪ್ರಶ್ನೆ: ದಯವಿಟ್ಟು ನಮಗೆ ಸಂಜಯನ ಬಗ್ಗೆ ಹೇಳಿ. ಯಾಕೆಂದರೆ, ಅರ್ಜುನನಿಗಿಂತಲೂ ಮೊದಲು ಸಂಜಯನಿಗೆ ಕೃಷ್ಣ ಪರಮಾತ್ಮನನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ದಯವಿಟ್ಟು ಅವನ ದೂರದೃಷ್ಟಿಯ ಬಗ್ಗೆ ಕೂಡಾ ಹೇಳಿ.
ಶ್ರೀ ಶ್ರೀ ರವಿಶಂಕರ್: ನಾನಿದನ್ನು ಮಾಡಬೇಕು ಅಥವಾ ಇದು ಆಗುತ್ತದೆ ಎಂದು ಒಳಗಡೆ ಆಳದಲ್ಲಿ ಏನೋ ಒಂದು ಹೇಳುವ ದೃಢವಾದ ಅನಿಸಿಕೆಯನ್ನು ನೀವು ಅನುಭವಿಸಿರಬೇಕು. ಅಂತಹ ಒಂದು ಅಂತಃಸ್ಫುರಣ ಸಾಮರ್ಥ್ಯವು ನಿಮ್ಮಲ್ಲಿ ವರ್ಧಿಸಿದಾಗ, ಹಠಾತ್ತನೇ ಒಂದು ಸಮಯದಲ್ಲಿ ಆಂತರಿಕ ಕಣ್ಣು ಮಾಹಿತಿಯನ್ನು ಅನುಭವಿಸುವುದು ಮತ್ತು ಸಂಗ್ರಹಿಸುವುದು ಹಾಗೂ ಭವಿಷ್ಯದಲ್ಲಿ ಏನಾಗಬಹುದೆಂಬುದು ನಿಮಗೆ ತಿಳಿಯುತ್ತದೆ. ಮೊದಮೊದಲು ಅದು ಮಿನುಗುನೋಟವಾಗಿ ಬರುತ್ತದೆ.
ಪ್ರತಿಯೊಬ್ಬರಿಗೂ ಈ ಸಾಮರ್ಥ್ಯವಿದೆ. ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ, ಐದು ಜ್ಞಾನೇಂದ್ರಿಯಗಳ ಅಥವಾ ಬುದ್ಧಿಯ ಮೂಲಕ ಗ್ರಹಿಸದೆಯೇ, ಏನಾಯಿತು ಅಥವಾ ಏನಾಗುತ್ತದೆ ಎಂಬ ಚಿಕ್ಕ ಮಿನುಗುನೋಟವು ಕಾಣಿಸುತ್ತದೆ. ಇದಾಗುವುದು ಆರನೆಯ ಇಂದ್ರಿಯ ಜ್ಞಾನವು ಉದಯವಾಗುವಾಗ. ಸಂಜಯನಿಗೆ ಈ ಆರನೆಯ ಇಂದ್ರಿಯ ಜ್ಞಾನವು ಉಡುಗೊರೆಯಾಗಿ ಬಂದಿತ್ತು. ಅವನು ದೀರ್ಘ ಕಾಲದ ವರೆಗೆ ಧ್ಯಾನ ಮಾಡಿದ ಮತ್ತು ಧ್ಯಾನದ ಈ ಅವಸ್ಥೆಯಿಂದ, ಯುದ್ಧಭೂಮಿಯಲ್ಲಿ ಆಗುತ್ತಿದ್ದ ಎಲ್ಲವನ್ನೂ ಅವನು ನೋಡಿದ ಹಾಗೂ ಅದನ್ನು ಧೃತರಾಷ್ಟ್ರನಿಗೆ ವಿವರಿಸಲು ಪ್ರಾರಂಭಿಸಿದ.
ಇವತ್ತು, ಅಮೇರಿಕಾದಲ್ಲಿ ಹಲವಾರು ಆತ್ಮಗಳನ್ನು ಸಂಪರ್ಕಿಸುವವರು (ಸೈಕಿಕ್) ಇರುವುದು ನಿಮಗೆ ಕಂಡುಬರುತ್ತದೆ, ಆದರೆ ಅವರ ವಿವರಣೆಯು ಸಂಪೂರ್ಣವಾಗಿ ಸರಿಯಾಗಿರುವುದಿಲ್ಲ. ಅದು ಭಾಗಶಃ ಸರಿಯಾಗಿರುತ್ತದೆ, ಯಾಕೆಂದರೆ ಅವರು ನಿಜವಾಗಿ ಆ ಇರುವಿಕೆಯೊಂದಿಗೆ ಜೋಡುವುದಿಲ್ಲ ಮತ್ತು ಅವರದ್ದೇ ಮನಸ್ಸು ಕಾರ್ಯಕ್ಕಿಳಿಯುತ್ತದೆ. ಆದುದರಿಂದ ನೀವು ನಿಜವಾಗಿ ಟೊಳ್ಳು ಹಾಗೂ ಖಾಲಿಯಾಗಿರಬೇಕು ಮತ್ತು ಯಾವುದೇ ಕಡುಬಯಕೆಗಳು ಅಥವಾ ವಿರೋಧಗಳಿಂದ ಮುಕ್ತವಾಗಿರಬೇಕು. ಆಗ ಅಂತಃಸ್ಫುರಣವು ಹೆಚ್ಚು ಸ್ಪಷ್ಟವಾಗಿರುತ್ತದೆ.

ಪ್ರಶ್ನೆ: ’ಶಿವ ಲಿಂಗ’ದ ಅರ್ಥವೇನು?
ಶ್ರೀ ಶ್ರೀ ರವಿಶಂಕರ್: ’ಲಿಂಗ’ವೆಂದರೆ ಸಂಕೇತ ಅಥವಾ ಗುರುತು. ಒಂದು ಮಗುವು ಗಂಡೋ ಹೆಣ್ಣೋ ಎಂಬುದನ್ನು ನೀವು ಒಂದು ಸಂಕೇತದಿಂದ ಗುರುತಿಸುತ್ತೀರಿ. ಪ್ರತ್ಯುತ್ಪಾದನಾ ಅಂಗವು ಕೂಡಾ ’ಲಿಂಗ’ವೆಂದು ಕರೆಯಲ್ಪಡುತ್ತದೆ ಯಾಕೆಂದರೆ, ಒಂದು ಮಗುವು ಹುಟ್ಟಿದಾಗ ಆ ಮಗುವಿನ ಲಿಂಗವನ್ನು ನೀವು ಗುರುತಿಸುವುದು ಅದರ ಮೂಲಕ.
ಆದುದರಿಂದ, ’ಲಿಂಗ’ವು ಬ್ರಹ್ಮಾಂಡ ಹಾಗೂ ಬ್ರಹ್ಮಾಂಡದ ಸೃಷ್ಟಿಕರ್ತನನ್ನು ಒಂದೇ ಆಗಿ ತೋರಿಸುವ ನಿರೂಪಣೆಯ ಒಂದು ಸಂಕೇತ.
ಅದು ’ಶಿವ’ ಮತ್ತು ’ಶಕ್ತಿ’, ಸೃಷ್ಟಿಯಲ್ಲಿರುವ ಎರಡು ತತ್ವಗಳು. ಮೌನವಾಗಿ ಪ್ರಕಟವಾಗಿಲ್ಲದಿರುವಿಕೆ ಮತ್ತು ಕ್ರಿಯಾತ್ಮಕ ಪ್ರಕಟವಾಗಿರುವಿಕೆ, ಇವುಗಳು ಜೊತೆಯಲ್ಲಿ ’ಶಿವ ಲಿಂಗ’ವಾಗಿ ಪ್ರತಿನಿಧೀಕರಿಸಲ್ಪಟ್ಟಿವೆ.
ಶಿವಲಿಂಗವು ಕೇವಲ ’ಶಿವ’ನಲ್ಲ, ಆದರೆ ಸಂಪೂರ್ಣತೆ; ಸಂಪೂರ್ಣ ಪರಬ್ರಹ್ಮ.

ಪ್ರಶ್ನೆ: ಹಾತೊರೆತ ಮತ್ತು ಲಾಲಸೆಗಳ ನಡುವಿನ ವ್ಯತ್ಯಾಸವೇನು? ನಾನು ಯಾವುದಕ್ಕಾದರೂ ಹಾತೊರೆಯುತ್ತಿರುವೆನೇ ಅಥವಾ ನನ್ನಲ್ಲಿ ಲಾಲಸೆಯಿದೆಯೇ ಎಂಬುದನ್ನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಲಾಲಸೆಯಿರುವುದು ತಾತ್ಕಾಲಿಕವಾದ, ಅಲ್ಪವಾದ ಮತ್ತು ಚಿಕ್ಕ ವಿಷಯಗಳಿಗಾಗಿ, ಆದರೆ ಹಾತೊರೆತವಿರುವುದು ದೊಡ್ಡದಾದ ಮತ್ತು ಶಾಶ್ವತವಾದ ವಿಷಯಗಳಿಗಾಗಿ. ಉದಾಹರಣೆಗೆ ನಿಮಗೆ ಸಕ್ಕರೆಯ, ಯಶಸ್ಸಿನ ಅಥವಾ ಸಂಭೋಗದ ಲಾಲಸೆಯಿರುತ್ತದೆ. ಆದರೆ ಹಾತೊರೆತವು ಪ್ರೇಮದೊಂದಿಗೆ ಸಂಬಂಧ ಹೊಂದಿದೆ. ನಿಮಗೆ ನಿಮ್ಮ ಹೃದಯದಲ್ಲಿ ಏನೋ ಅನುಭವವಾಗುತ್ತದೆ.

ಪ್ರಶ್ನೆ: ಮೂಢನಂಬಿಕೆಗಳ ಅರ್ಥ ಮತ್ತು ಮಹತ್ವವೇನು? ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಮತ್ತು ಅಭ್ಯಾಸ ಮಾಡಲು ಎಷ್ಟು ಪ್ರಾಮುಖ್ಯತೆಯನ್ನು ಕೊಡಬೇಕು?
ಶ್ರೀ ಶ್ರೀ ರವಿಶಂಕರ್: ಒಮ್ಮೆ ನೀನು ಮೂಢನಂಬಿಕೆ ಎಂದು ಹೇಳಿದ ಮೇಲೆ ಮುಗಿಯಿತು. ಅದನ್ನು ವಿಶ್ಲೇಷಿಸುವುದರ ಅಗತ್ಯವಿಲ್ಲ. ನೀನು ಹೋಗಿ ಒಂದು ಕಸದ ಬುಟ್ಟಿಯನ್ನು ವಿಶ್ಲೇಷಿಸುವುದಿಲ್ಲ. ಯಾವುದನ್ನು ನಾವು ಕಸವೆಂದು ಪರಿಗಣಿಸುತ್ತೇವೆಯೋ, ಹೋಗಿ ಅದನ್ನು ಕಸದ ಬುಟ್ಟಿಯಲ್ಲಿ ಹಾಕುತ್ತೇವೆ. ಅದಕ್ಕೇನಂತೆ!

ಪ್ರಶ್ನೆ: ಗುರೂಜಿ, ನಾನು ಸಂದೇಹದಲ್ಲಿರುವಾಗ ಅಥವಾ ಗೊಂದಲದಲ್ಲಿರುವಾಗ ಮತ್ತು ನನ್ನ ಪ್ರಶ್ನೆಯನ್ನು ಉತ್ತರಿಸಲು ಯಾರೂ ಇಲ್ಲದಿರುವಾಗ, ನನ್ನ ಸಂದೇಹಕ್ಕೆ ಉತ್ತರಿಸಲು ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಚೈನಾದಲ್ಲಿ ಒಂದು ಗಾದೆಯಿದೆ: ನೀವು ಗೊಂದಲಕ್ಕೊಳಗಾದಾಗ ಒಂದು ತಲೆದಿಂಬನ್ನು ತೆಗೆದುಕೊಂಡು ಹೋಗಿ ಮಲಗಿ. ಎಲ್ಲವೂ ಅದರಷ್ಟಕ್ಕೇ ಸರಿಯಾಗುವುದು.
ಸಂಶಯ ಬರುವುದು ಪ್ರಾಣ ಕಡಿಮೆಯಾಗುವುದರಿಂದ. ನಿನ್ನ ಪ್ರಾಣವನ್ನು ವರ್ಧಿಸು. ಭಸ್ತ್ರಿಕಾ ಮಾಡು, ನಿನ್ನ ಆಹಾರ ಮತ್ತು ವ್ಯಾಯಾಮದ ಕಡೆಗೆ ಗಮನ ಕೊಡು. ವ್ಯಾಯಾಮವು ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ ಮತ್ತು ಆಗ ಸಂಶಯಗಳೆಲ್ಲಾ ಮಾಯವಾಗುತ್ತವೆ.

ಪ್ರಶ್ನೆ: ದೇವರು ಮತ್ತು ಆತ್ಮಸಾಕ್ಷಾತ್ಕಾರ ಹೊಂದಿದ ಗುರುವಿನ ನಡುವೆಯಿರುವ ವ್ಯತ್ಯಾಸವೇನು?
ಶ್ರೀ ಶ್ರೀ ರವಿಶಂಕರ್: ನೀವು, ದೇವರೆಂದರೆ ಪ್ರೇಮವೆಂದು ಹೇಳಿದರೆ, ನಾವೆಲ್ಲರೂ ಅದರಿಂದ ಮಾಡಲ್ಪಟ್ಟಿದ್ದೇವೆ. ದೇವರು ಸೃಜನಾತ್ಮಕತೆಯಾದರೆ, ಪ್ರತಿಯೊಬ್ಬರಲ್ಲೂ ಸೃಜನಾತ್ಮಕತೆಯಿದೆ. ಮತ್ತೆ, ದೇವರು ಸಚ್ಚಿದಾನಂದ, ಅಂದರೆ ಸತ್ಯ, ಅಸ್ತಿತ್ವ ಮತ್ತು ಪ್ರಜ್ಞೆ. ನಿಮ್ಮಲ್ಲಿ ಪ್ರಜ್ಞೆಯಿದೆ ಮತ್ತು ನಿಮಗೆ ಅಸ್ತಿತ್ವವಿದೆ.
ಆತ್ಮವಿರುವಾಗ ಅಲ್ಲಿ ದೇವರಿದ್ದಾರೆ. ಆತ್ಮವಿಲ್ಲದಿದ್ದರೆ ಅಲ್ಲಿ ದೇವರಿಲ್ಲ. ಆದುದರಿಂದ ದೇವರೆಂದರೆ ಎಲ್ಲವನ್ನೂ ವ್ಯಾಪಿಸಿರುವ ಪ್ರಜ್ಞೆ. ದೇವರೆಂದರೆ ಆಕಾಶ ಮತ್ತು ನೀವು ಆ ಆಕಾಶದ ಒಂದು ಭಾಗ.
ಪ್ರಾಚೀನ ಉಪನಿಷತ್ತುಗಳಲ್ಲಿ ಒಂದು ಕಥೆಯಿದೆ. ಒಬ್ಬ ಬಾಲಕನು ತನ್ನ ತಂದೆಯಲ್ಲಿ ಕೇಳುತ್ತಾನೆ, "ಅಪ್ಪಾ, ದೇವರೆಂದರೇನು?"
ತಂದೆಯು ಬಾಲಕನನ್ನು ಮನೆಯಿಂದ ಹೊರಗೆ ಕರೆತಂದು ಹೇಳುತ್ತಾನೆ, "ನೋಡು! ಈ ಮನೆಯನ್ನು ಕಟ್ಟುವ ಮೊದಲು ಇಲ್ಲೇನಿತ್ತು?"
ಬಾಲಕನಂದ, "ಏನೂ ಇರಲಿಲ್ಲ, ಖಾಲಿ ಆಕಾಶ"
"ಹಾಗಾದರೆ, ಇವತ್ತು ಮನೆಯು ಎಲ್ಲಿ ನಿಂತಿದೆ?"
ಅವನನ್ನುತ್ತಾನೆ, "ಈ ಖಾಲಿ ಆಕಾಶದಲ್ಲಿ"
"ನಾಳೆ ಈ ಮನೆಯು ನಾಶವಾದರೆ ಏನು ಉಳಿಯುತ್ತದೆ?"
ಅವನಂದ, "ಆಕಾಶ!"
ಆಗ ತಂದೆಯು ಹೇಳಿದ, "ಅದು ದೇವರು!"
ಆಕಾಶವು ದೇವರು. ಯಾವುದರಲ್ಲಿ ಇವತ್ತು ಎಲ್ಲವೂ ’ಇದೆ’ಯೋ; ಯಾವುದರಿಂದ ಎಲ್ಲವೂ ’ಬಂದಿರುವುದೋ’ ಮತ್ತು ಯಾವುದರಲ್ಲಿ ಎಲ್ಲವೂ ’ಕರಗು’ವುದೋ, ಅದು ದೇವರು. ಅದು ಪ್ರತಿಯೊಬ್ಬರ ಅಸ್ತಿತ್ವದ ಕೇಂದ್ರ ಸತ್ವ.
ದೇವರು ಪ್ರತಿಯೊಬ್ಬರಲ್ಲೂ ಇದ್ದಾರೆ, ಆದರೆ ನೀವು ಕೇಂದ್ರಿತವಾದಾಗ ಅಥವಾ ನೀವು ಆತ್ಮಸಾಕ್ಷಾತ್ಕಾರ ಹೊಂದಿದಾಗ ಅದರರ್ಥ, ಅಲ್ಲಿ ಆಕಾಶವಿದೆ ಆದರೆ ಕಿಟಿಕಿಯ ಮೂಲಕ ಕಾಣಿಸುವಂತೆ ಆಕಾಶವು ಕಾಣಿಸುತ್ತದೆ. ಕಿಟಿಕಿಯ ಹಿಂದೆ ಇರುವುದು, ಗೋಡೆಯ ಹಿಂದೆ ಇರುವ ಅದೇ ಆಕಾಶ. ಆದರೆ ಕಿಟಿಕಿಯ ಮೂಲಕ ಮಾತ್ರ ನಿಮಗೆ ಆಗಸವನ್ನು ನೋಡಲು ಸಾಧ್ಯ.

ಪ್ರಶ್ನೆ: ಗುರೂಜಿ, ಇವತ್ತು ದತ್ತ ಜಯಂತಿ. ದಯವಿಟ್ಟು ನಮಗೆ ದತ್ತಾತ್ರೇಯ ಪರಮಾತ್ಮನ ಬಗ್ಗೆ ಸ್ವಲ್ಪ ಹೇಳಿ!
ಶ್ರೀ ಶ್ರೀ ರವಿಶಂಕರ್: ಇವತ್ತು ಹನುಮಾನ್ ಜಯಂತಿ ಕೂಡಾ ಮತ್ತು ಇವತ್ತು ಪಿತಾಜಿಯ (ಗುರೂಜಿಯವರ ತಂದೆ) ಜನ್ಮದಿನ ಕೂಡಾ. ಅವರು ಇಲ್ಲಿ ಭೌತಿಕವಾಗಿ ಇಲ್ಲದಿರುವುದು ಇದು ಮೊದಲನೆಯ ವರ್ಷ, ಆದರೆ ಅವರ ಆತ್ಮವು ಇಲ್ಲಿದೆ.
ಜನ್ಮದಿನಗಳು ಇರುವುದು ಆಚರಿಸಲು ಮತ್ತು ಅವರಲ್ಲಿ ಯಾವ ಒಳ್ಳೆಯ ಗುಣಗಳಿದ್ದುವು ಎಂಬುದನ್ನು ನೆನಪಿಸಿಕೊಳ್ಳಲು.
ದತ್ತಾತ್ರೇಯನು ಸೃಷ್ಟಿಯಲ್ಲಿರುವ ಎಲ್ಲದರಿಂದಲೂ ಕಲಿತುಕೊಂಡನು. ಅತ್ರಿ ಋಷಿಗೆ ಮಕ್ಕಳಿರಲಿಲ್ಲ, ಆದುದರಿಂದ ಅವನು ದತ್ತನನ್ನು ದತ್ತು ತೆಗೆದುಕೊಂಡನು. ದತ್ತ ಎಂಬುದರ ಅರ್ಥ ಕೊಡಲ್ಪಟ್ಟದ್ದು, ತೆಗೆದುಕೊಳ್ಳಲ್ಪಟ್ಟದ್ದು ಅಥವಾ ಸ್ವೀಕರಿಸಲ್ಪಟ್ಟುದು. ಅದಕ್ಕಾಗಿಯೇ ಒಬ್ಬರು ಒಂದು ಮಗುವನ್ನು ಸಾಕುಮಗನನ್ನಾಗಿ ಸ್ವೀಕರಸುವಾಗ ’ದತ್ತ ಸ್ವೀಕಾರ’ ಎಂದು ಹೇಳುವುದು. ಹೀಗೆ ಅತ್ರಿ ಮತ್ತು ಅನಸೂಯ ಒಂದು ಮಗುವನ್ನು ದತ್ತು ಸ್ವೀಕರಿಸಿದರು. ಅವನು ದತ್ತಾತ್ರೇಯ ಎಂದು ಕರೆಯಲ್ಪಟ್ಟನು ಮತ್ತು ಅವನಲ್ಲಿ ಬ್ರಹ್ಮ ಶಕ್ತಿ, ವಿಷ್ಣು ಶಕ್ತಿ ಹಾಗೂ ಶಿವ ಶಕ್ತಿಗಳಿದ್ದವು.
ಹಲವರಲ್ಲಿ ರಚನಾತ್ಮಕ ಶಕ್ತಿಯಿರುತ್ತದೆ ಆದರೆ ಅವರಿಗೆ ಸಂರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲಸವನ್ನು ಪ್ರಾರಂಭಿಸುವುದರಲ್ಲಿ ಉತ್ತಮರಾಗಿರುವ ಜನರಿರುತ್ತಾರೆ, ಆದರೆ ಅವರು ಅದರೊಂದಿಗೆ ಮುಂದುವರಿಯುವುದಿಲ್ಲ. ಈ ಸೃಜನಶೀಲತೆಯು ಬ್ರಹ್ಮಶಕ್ತಿ. ನಿಮ್ಮಲ್ಲಿ ಬ್ರಹ್ಮಶಕ್ತಿಯಿದ್ದರೆ, ನಿಮಗೆ ವಿಷಯಗಳನ್ನು ರಚಿಸಲು ಸಾಧ್ಯವಾಗುತ್ತದೆ, ಆದರೆ ಅದನ್ನು ಉಳಿಸಿಕೊಳ್ಳುವುದು ಹೇಗೆಂಬುದು ನಿಮಗೆ ತಿಳಿದಿರುವುದಿಲ್ಲ.
ವಿಷ್ಣುಶಕ್ತಿಯೆಂದರೆ ಸಂರಕ್ಷಿಸುವುದು. ವ್ಯವಸ್ಥಾಪಕರಾಗಿರುವ ಹಲವಾರು ಜನರಿದ್ದಾರೆ. ಅವರಿಗೆ ರಚಿಸಲು ಸಾಧ್ಯವಿಲ್ಲ, ಆದರೆ ಏನಾದರೂ ರಚಿಸಲ್ಪಟ್ಟಿದ್ದರೆ ಮತ್ತು ಅವರಿಗೆ ನೀಡಲಾಗಿದ್ದರೆ, ಅದನ್ನು ನಿರ್ವಹಿಸುವ ಕೆಲಸವನ್ನು ಅವರು ಅತ್ಯುತ್ತಮವಾಗಿ ಮಾಡುತ್ತಾರೆ. ಆದುದರಿಂದ ಒಬ್ಬನಲ್ಲಿ ವಿಷ್ಣುಶಕ್ತಿ ಕೂಡಾ ಇರಬೇಕು; ನೀವು ರಚಿಸಿರುವುದನ್ನು ನೋಡಿಕೊಳ್ಳಲಿರುವ ಶಕ್ತಿ.
ನಂತರ ಇರುವುದು ಶಿವಶಕ್ತಿ; ಪರಿವರ್ತನೆಯನ್ನು ಅಥವಾ ಹೊಸತನವನ್ನು ತರುವುದು. ಹಲವರು ಕೇವಲ ನಡೆಸಿಕೊಂಡು ಬರಬಲ್ಲರು, ಆದರೆ ಒಂದು ಬದಲಾವಣೆ ಬೇಕಾದಾಗಲೆಲ್ಲಾ, ಒಂದು ಪರಿವರ್ತನೆಯನ್ನು ತರುವುದು ಹೇಗೆಂಬುದು; ಅದನ್ನು ಇನ್ನೊಂದು ಹಂತಕ್ಕೆ ಒಯ್ಯುವುದು ಹೇಗೆಂಬುದು ಅವರಿಗೆ ತಿಳಿದಿರುವುದಿಲ್ಲ. ಆದುದರಿಂದ ಶಿವಶಕ್ತಿ ಕೂಡಾ ಆವಶ್ಯಕವಾಗಿದೆ!
ನಿಮ್ಮಲ್ಲಿ ಎಲ್ಲಾ ಮೂರು ಶಕ್ತಿಗಳಿರುವಾಗ, ಅದು ಗುರುಶಕ್ತಿ! ಒಬ್ಬರು ಗುರು ಅಥವಾ ಒಬ್ಬರು ಮಾರ್ಗದರ್ಶಕರಿಗೆ ಎಲ್ಲಾ ಮೂರು ಶಕ್ತಿಗಳು ತಿಳಿದಿರಬೇಕು.
ದತ್ತಾತ್ರೇಯನಲ್ಲಿ ಈ ಎಲ್ಲಾ ಮೂರು ಒಬ್ಬನಲ್ಲೇ ಇತ್ತು. ಅದರರ್ಥ ಅವನು ಗುರು ಶಕ್ತಿಯ ಸಂಕೇತವಾಗಿದ್ದಾನೆ. ಮಾರ್ಗದರ್ಶಕನ, ಸೃಷ್ಟಿಯ, ಸಂರಕ್ಷಣೆಯ ಮತ್ತು ಪರಿವರ್ತನೆಯ ಶಕ್ತಿ, ಎಲ್ಲವೂ ಒಬ್ಬನಲ್ಲಿ! ದತ್ತಾತ್ರೇಯನು ಪ್ರತಿಯೊಂದರಿಂದಲೂ ಕಲಿತುಕೊಂಡನು. ಅವನು ಸಂಪೂರ್ಣ ಸೃಷ್ಟಿಯನ್ನು ಗಮನವಿಟ್ಟು ನೋಡಿದನು ಮತ್ತು ಅವನು ಪ್ರತಿಯೊಂದರಿಂದಲೂ ಸ್ವಲ್ಪ ಪಾಠವನ್ನು ಕಲಿತನು.
ಶ್ರೀಮದ್ ಭಾಗವತಂನಲ್ಲಿ ಹೇಳಲಾಗಿದೆ: ಅವನು ಒಂದು ಹಂಸವನ್ನು ಹೇಗೆ ನೋಡಿದನೆಂಬುದು ಮತ್ತು ಹಂಸದಿಂದ ಹೇಗೆ ಏನನ್ನೋ ಕಲಿತನೆಂಬುದು ಬಹಳ ಆಸಕ್ತಿಕರವಾಗಿದೆ; ಕಾಗೆಯಿಂದ ಏನನ್ನೋ ಕಲಿತನು; ಮರಗಳಿಂದ ಮತ್ತು ಅವನು ಒಬ್ಬಳು ವಯಸ್ಸಾದ ಸ್ತ್ರೀಯಿಂದಲೂ ಏನನ್ನೋ ಕಲಿತನು. ಅವನಿಗೆ ಜ್ಞಾನವು ಎಲ್ಲಾ ಬದಿಗಳಿಂದಲೂ ಹರಿಯುತ್ತಿತ್ತು. ಅವನ ಮನಸ್ಸು ಮತ್ತು ಹೃದಯಗಳು ಜ್ಞಾನವನ್ನು ಪಡೆಯಲು ಹಾಗೂ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬಹಳಷ್ಟು ತೆರೆದಿದ್ದವು.
ಅವಲೋಕನವು ಬುದ್ಧಿವಂತಿಕೆಯನ್ನು ತರುತ್ತದೆ ಮತ್ತು ಅವಲೋಕಿಸಲು ನಿಮ್ಮಲ್ಲಿ ಸಂವೇದನಾಶೀಲತೆಯಿರಬೇಕು. ನೀವು ನಿಮ್ಮದೇ ಪ್ರಪಂಚದಲ್ಲಿ ಸಿಲುಕಿಹಾಕಿಕೊಂಡಿದ್ದರೆ, ನಿಮ್ಮ ಸುತ್ತಲಿರುವವರಿಂದ ನಿಮಗೆ ಬರುವ ಸಂದೇಶಗಳಿಗೆ ನೀವು ಸ್ಪಂದಿಸುವುದಿಲ್ಲ. ಜನರು ತಮ್ಮದೇ ವಿಷಯಗಳಲ್ಲಿ ಸಿಲುಕಿಹಾಕಿಕೊಂಡಿರುವಾಗ ಅವರು ಇನ್ನೊಬ್ಬ ವ್ಯಕ್ತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಅವರ ಗ್ರಹಿಕೆಯು ತಪ್ಪೆಂಬುದು ನಿಮಗೆ ತಿಳಿದಿರುವಾಗಲೂ, ಅಂತಹ ಜನರು ತಮ್ಮ ಗ್ರಹಿಕೆಯು ಖಂಡಿತವಾಗಿ ಸರಿಯೆಂದು ಕೂಡಾ ನಂಬುತ್ತಾರೆ.
ಮುಲ್ಲಾ ನಾಸಿರುದ್ದೀನನ ಒಂದು ಕಥೆಯಿದೆ. ಮುಲ್ಲಾ ನಾಸಿರುದ್ದೀನನು ತಾನು ಸತ್ತಿರುವೆನೆಂದು ಅಂದುಕೊಂಡನು ಮತ್ತು ಈ ಸಂಗತಿಯನ್ನು ಬಹಳ ಒಪ್ಪಿಕೊಂಡಿದ್ದನು. ತಾನು ಸತ್ತಿರುವೆನೆಂಬ ವಾದದೊಂದಿಗೆ ಅವನು ಎಲ್ಲವನ್ನೂ ನಿರಾಕರಿಸಲು ತೊಡಗಿದನು. ಅವನ ಪತ್ನಿಯು ಅವನಲ್ಲಿ ಏನಾದರೂ ಹೇಳಿದರೆ, ಅವನನ್ನುತ್ತಿದ್ದನು, "ಸತ್ತು ಹೋದ ಒಬ್ಬ ವ್ಯಕ್ತಿಯು ಹೇಗೆ ಉತ್ತರಿಸಲು ಸಾಧ್ಯ?"
ಅವಳು ಅವನಲ್ಲಿ ಏನಾದರೂ ಕೆಲಸ ಮಾಡಲು ಹೇಳಿದರೆ, ಅವನನ್ನುತ್ತಿದ್ದ, "ಸತ್ತು ಹೋದ ಒಬ್ಬ ವ್ಯಕ್ತಿಯು ಹೇಗೆ ಏನನ್ನಾದರೂ ಮಾಡಬಲ್ಲ?"
ಕೊನೆಗೆ ಅವನ ಪತ್ನಿಗೆ ಸಾಕಾಗಿ ಹೋಯಿತು ಮತ್ತು ಅವನನ್ನು ಒಬ್ಬ ಮನೋರೋಗ ತಜ್ಞನಲ್ಲಿಗೆ ಕರೆದುಕೊಂಡು ಹೋದಳು. ಬಹಳಷ್ಟು ಚರ್ಚೆಯ ಬಳಿಕ ಮನೋರೋಗ ತಜ್ಞನು ಮುಲ್ಲಾನಲ್ಲಿ ಕೇಳಿದನು, "ಈಗ ನನಗೆ ಹೇಳು ಮುಲ್ಲಾ, ಶವದಲ್ಲಿ ರಕ್ತವಿರುತ್ತದೆಯೇ?"
ಮುಲ್ಲಾ ಹೇಳಿದ, "ಇಲ್ಲ, ರಕ್ತವು ನೀರಾಗುತ್ತದೆ."
ಈಗ ಮನೋರೋಗತಜ್ಞನ ಮುಖವು ಬೆಳಗಿತು ಮತ್ತು ಆತನು ಒಂದು ಸೂಜಿಯನ್ನು ತೆಗೆದುಕೊಂಡು ಮುಲ್ಲಾನ ಕೈಗೆ ಚುಚ್ಚಿದನು. ರಕ್ತವು ಹೊರಬಂತು. "ನೋಡು ಮುಲ್ಲಾ, ರಕ್ತ ಬರುತ್ತಿದೆ, ಆದುದರಿಂದ ನೀನು ಜೀವಂತವಾಗಿರುವೆ!" ಎಂದು ಮನೋರೋಗತಜ್ಞನು ಹೇಳಿದನು.
ಆಗ ಮುಲ್ಲಾನು ಒಸರುತ್ತಿರುವ ರಕ್ತವನ್ನು ನೋಡಿ ಹೇಳಿದನು, "ನೀನು ನಿನ್ನ ತರ್ಕದಿಂದ ನನ್ನನ್ನು ಮೂರ್ಖನನ್ನಾಗಿಸಬಹುದೆಂದು ಯೋಚಿಸುತ್ತಿರುವೆ. ಸತ್ತ ಜನರಲ್ಲಿಯೂ ರಕ್ತವಿರುತ್ತದೆ ಎಂಬುದನ್ನು ಇವತ್ತು ನಾನು ಕಂಡುಹಿಡಿದೆ!"
ಇದುವೇ ಜನರೊಂದಿಗೆ ಆಗುವುದು. ಅವರು ತಮ್ಮ ಪರಿಕಲ್ಪನೆಗಳ ಬಗ್ಗೆ ದೃಢವಾಗಿ ನಂಬಿರುತ್ತಾರೆ ಮತ್ತು ಒಂದು ಚಿಕ್ಕ ಪ್ರಪಂಚದಲ್ಲಿ ಜೀವಿಸುತ್ತಾರೆ ಹಾಗೂ ಅಷ್ಟೇ ಎಂದು ಯೋಚಿಸುತ್ತಾರೆ! ನಾವು ಆ ಪ್ರಪಂಚದಾಚೆಗೆ ನೋಡಬೇಕು.

ಪ್ರಶ್ನೆ: ಸ್ವಾರ್ಥತೆ ಮತ್ತು ನಿಸ್ವಾರ್ಥತೆಯ ನಡುವಿನ ಸರಿಯಾದ ಸಂತುಲನವು ಯಾವುದೆಂದು ನಾವು ನಿರ್ಧರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಅದು ನಿಮ್ಮ ಮೇಲೆ ಅವಲಂಬಿಸಿದೆ. ಬೇಕಾಗಿರುವುದು ಏನು ಎಂಬುದನ್ನು ನೀವು ನೋಡಬೇಕು. ನಿಮ್ಮ ಪ್ರಜ್ಞೆಗೆ ಏನೆಲ್ಲಾ ಮಾಡಲು ಸಾಧ್ಯವಿದೆಯೋ, ಅಷ್ಟನ್ನು ನೀವು ಮಾಡಿ. ನೀವು ಧರಿಸಿರುವ ಅಂಗಿಯನ್ನು ದಾನ ಮಾಡಲು ನಿಮಗೆ ಸಾಧ್ಯವಿಲ್ಲ, ಆದರೆ ನಿಮ್ಮ ಬಳಿ ಎರಡು ಇಡ್ಲಿಗಳಿದ್ದು ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಯು ಹಸಿದಿರುವನೆಂದು ಊಹಿಸಿಕೊಳ್ಳಿ, ನೀವು ಅವನೊಂದಿಗೆ ಒಂದು ಇಡ್ಲಿಯನ್ನು ಹಂಚಿಕೊಳ್ಳುವಿರಿ. ಅಲ್ಲವೇ? ಅದು ಯಾಕೆಂದರೆ, ಅದು ನಿಮ್ಮಲ್ಲಿ ಅಂತರ್ಗತವಾಗಿದೆ.
ನೀವು ವಿಶಾಲಮನಸ್ಸಿನವರಾದಾಗ ಮತ್ತು ನಿಮ್ಮ ಗಮನವು ವಿಸ್ತೃತವಾದಾಗ, ನಿಮ್ಮನ್ನು ಹಂಚಿಕೊಳ್ಳುವ ಸಾಮರ್ಥ್ಯವು ನಿಮ್ಮಲ್ಲಿ ಹೆಚ್ಚಾಗಿರುತ್ತದೆ.
ನಿಮ್ಮ ಜೇಬಿನಲ್ಲಿ ೫೦೦ ರೂಪಾಯಿಗಳಿದ್ದು, ಯಾರೋ ಒಬ್ಬರಿಗೆ ಅದರ ಅಗತ್ಯವಿದೆ ಎಂದು ಊಹಿಸಿಕೊಳ್ಳಿ. ನೀವು ಅವರೊಂದಿಗೆ ಅದನ್ನು ಹಂಚಿಕೊಳ್ಳುವುದಿಲ್ಲವೇ? ನೀವು ಹಂಚಿಕೊಳ್ಳುವಿರಿ ಯಾಕೆಂದರೆ, ನಿಮ್ಮ ಬಳಿ ಹೆಚ್ಚು ಹಣವಿದೆಯೆಂಬುದು ಅಥವಾ ಅದನ್ನು ಗಳಿಸುವ ಸಾಮರ್ಥ್ಯ ನಿಮಗಿದೆಯೆಂಬುದು ನಿಮಗೆ ತಿಳಿದಿದೆ. ಆದರೆ ನಿಮಗೆ ಆ ಹಣವು ನಿಮ್ಮ ಬಸ್ಸಿನ ಖರ್ಚಿಗೆ ಬೇಕಾಗಿದ್ದರೆ, ಆಗ ನೀವು ಮೊದಲು ನಿಮ್ಮ ಬಗ್ಗೆ ಕಾಳಜಿ ವಹಿಸುವಿರಿ, ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ’ಆಪದ್ಧರ್ಮ’ ಎಂದು ಕರೆಯಲ್ಪಡುತ್ತದೆ. ವಿಮಾನದಲ್ಲಿ ಹೇಳುತ್ತಾರೆ, "ಮೊದಲು ಆಮ್ಲಜನಕದ ಮುಖವಾಡವನ್ನು ನೀವು ಹಾಕಿಕೊಳ್ಳಿ ಮತ್ತು ನಂತರ ನಿಮ್ಮ ಪಕ್ಕದಲ್ಲಿರುವ ಮಗುವಿಗೆ ಹಾಕಿ." ಇದು ಯಾಕೆಂದರೆ ನೀವು ಅಲ್ಲಿ ಇಲ್ಲದಿದ್ದರೆ, ಮಗುವಿಗೆ ಮುಖವಾಡವನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ಸಂನ್ಯಾಸಿಗೆ ಅಥವಾ ಚಪಲಗಳಿಂದ ಸಂಪೂರ್ಣವಾಗಿ ಮುಕ್ತರಾದವರಿಗೆ ಪರವಾಗಿಲ್ಲ, ಆದರೆ ನೀವು ಒಂದು ಕುಟುಂಬದ ಪಾಲಕರಾಗಿದ್ದರೆ, ಆಗ ನೀವು ಆಪದ್ಧರ್ಮವನ್ನು ಅನುಸರಿಸಬೇಕು.