ಗುರುವಾರ, ಡಿಸೆಂಬರ್ 22, 2011

ದೇವರಿಗೆ ನೀವೆ೦ದರೆ ಬಲು ಇಷ್ಟ


22
2011............................... ಬೆ೦ಗಳೂರು, ಕರ್ನಾಟಕ, ಭಾರತ
Dec


ಜೀವನ ಕಲೆ ಎಂದರೇನು?ಹಾಗಂದರೆ ಜೀವನದ ಸತ್ಯವನ್ನು ಅರ್ಥಮಾಡಿಕೊಳ್ಳುವುದು.ಮತ್ತೆ ಸತ್ಯ ಏನು?ಜೀವನವು ವಿರುದ್ಧಾತ್ಮಕ ಮೌಲ್ಯಗಳಿಂದ, ಏರು ಇಳಿತಗಳಿಂದ ತುಂಬಿದೆ.ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಿದ್ದರೂ, ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಿ.ಕಷ್ಟಕರ ಕಾಲದಲ್ಲಿ, ತ್ಯಾಗ ಮನೋಭಾವವಿರಲಿ, ಅದನ್ನು ಎದುರಿಸಿ, ಇದೂ ಬದಲಾಗುತ್ತದೆ ಎಂಬ ಜ್ಞಾನದೊಂದಿಗಿರಿ.ಸುಖಕಾಲದಲ್ಲಿ ಸೇವಾ ಮನೋಭಾವವಿರಲಿ ಮತ್ತು ಎಲ್ಲರನ್ನೂ ತಮ್ಮ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಮಾಡಿ.ಇದು ಮೊದಲನೆಯ ವಿಷಯಾಂಶ.
ಜನರನ್ನು ಅವರಿರುವಂತೆ ಸ್ವೀಕರಿಸಿ.ಜನ ನಮ್ಮಂತೆ ಇರಬೇಕೆಂದು ನಾವು ಅಪೇಕ್ಷಿಸುತ್ತೇವೆ.ನಿಮ್ಮಂಥವರನ್ನೇ ಯಾರನ್ನಾದರೂ ನೀವು ಪಡೆದಿದ್ದೀರಾ?ಅಂಥವರನ್ನು ನೀವು ಪತ್ತೆ ಮಾಡಿದರೆ ನಿಮಗೆ ಅವರೊಂದಿಗೆ ಐದು ನಿಮಿಷವೂ ಕಳೆಯಲಾಗುವುದಿಲ್ಲ, ಓಡಿ ಹೋಗ ಬಯಸುತ್ತೀರಿ.ಹಾಗಾಗಿ ಒಬ್ಬ ವ್ಯಕ್ತಿ ಹೇಗೆ ಇದ್ದರೂ ಅವರನ್ನು ಸ್ವೀಕರಿಸಿ.ಇದು ಎರಡನೆಯ ವಿಷಯಾಂಶ.
ಜೀವನದಲ್ಲಿ ಇನ್ನೊಂದು ಮಹತ್ತರವಾದ ವಿಷಯಾಂಶವೆಂದರೆ, ನಿಮ್ಮ ಮನಸ್ಸನ್ನು ಇತರರ ಅನಿಸಿಕೆ,ಮನೋಭಾವಗಳ ಕಾಲ್ಚೆಂಡಾಗದಿರುವಂತೆ ನೋಡಿಕೊಳ್ಳುವುದು. ನಾವು ಯಾವತ್ತೂ ಯೋಚಿಸುತ್ತೇವೆ ’ಅವರು ನನ್ನ ಬಗ್ಗೆ ಏನು ಅಂದುಕೊಳ್ಳಬಹುದು?ಇವರು ನನ್ನ ಬಗ್ಗೆ ಏನು ಯೋಚಿಸಬಹುದು?’ ನಿಜ ಏನೆಂದರೆ ಯಾರಿಗೂ ನಿಮ್ಮ ಬಗ್ಗೆ ಯೋಚಿಸಲು ಸಮಯವಿಲ್ಲ. ಎಲ್ಲರೂ ಅವರ ಪ್ರಪಂಚದಲ್ಲಿ ಮುಳುಗಿದ್ದಾರೆ.ನೀವು ಅನಾವಶ್ಯಕವಾಗಿ ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸಬಹುದು ಎಂದು ಚಿಂತಿಸುತ್ತೀರಿ.ಜನರಿಗೆ ನಿಮ್ಮ ಬಗ್ಗೆ ಏನು ಬೇಕಾದರೂ ಯೋಚಿಸುವ ಸ್ವಾತಂತ್ರ್ಯ ನೀಡಿ.ಅನಿಸಿಕೆಗಳು ಬದಲಾಗುತ್ತಿರುತ್ತವೆ.ಇದು ಮೂರನೆಯವಿಷಯಾಂಶ.
ಯಾರಾದರೂ ಒಂದು ತಪ್ಪು ಮಾಡಿದರೆ, ಅವರು ಅದನ್ನು ಉದ್ದೇಶಪೂರ್ವಕವಾಗಿ ಮಾಡಿದರು ಎಂದು ಯೋಚಿಸಬೇಡಿ.ನೀವು ತಪ್ಪು ಮಾಡಿದಂತೆಯೇ, ಅವರೂ ತಪ್ಪು ಮಾಡಿದರು ಎಂದು ತಿಳಿದು ಮುನ್ನಡೆಯಿರಿ.ಇದು ನಾಲ್ಕನೆಯ ವಿಷಯಾಂಶ.
ವರ್ತಮಾನಾದಲ್ಲಿ ಬದುಕುವುದು ಐದನೇ ವಿಷಯಾಂಶ.  ನೀವು ಆಗಿಹೋದ ವಿಷಯಗಳನ್ನು ಹಿಡಿದಿಟ್ಟುಕೊಂಡರೆ,ನಿಮಗೂ ಸಂತೋಷದಿಂದ ಇರಲಾಗುವುದಿಲ್ಲ ಇನ್ನೊಬ್ಬರನ್ನೂ ಸಂತೋಷ ಪಡಿಸಲಾಗುವುದಿಲ್ಲ. ಮಗುವಿನಂತೆ ವರ್ತಮಾನ ಕ್ಷಣದಲ್ಲಿ ಬಾಳಿ.
ನಮ್ಮ ಜೀವನ ದೋಷಗಳಿಲ್ಲದೇ ನಿರ್ಮಲವಾಗಿರಬೇಕು.ಇದು ಹೇಗೆ ಸಾಧ್ಯ?ಇದು ದೈವಿಕತೆಯತ್ತ ನಮ್ಮ ಭಕ್ತಿಯಿಂದ ಸಾಧ್ಯ.
ನೀವು ಬೆಳಗ್ಗೆ ಎದ್ದಾಗ, ನಿಮ್ಮ ಅಂಗೈಯನ್ನು ನೋಡಿಕೊಂಡು ಹೇಳಿ, ’ನನ್ನ ಕೈಗಳಿಂದ ಯಾವುದೇ ತಪ್ಪಾಗದಿರಲಿ.ನನ್ನ ಕೈಗಳು ತುಂಬಿದ್ದು ಇತರರೊಂದಿಗೂ ಹಂಚಿಕೊಳ್ಳುವ ಸಾಮರ್ಥ್ಯವಿರಲಿ.’ ಇದು ನಮ್ಮ ದೇಶದ ಪ್ರಾಚೀನ ಪದ್ಧತಿ. ಬೆಳಗ್ಗೆ ಎದ್ದಾಗ  ನಿಮ್ಮ ಅಂಗೈಗಳನ್ನು ನೋಡಿಕೊಂಡು ಹೇಳಿ, ’ನನ್ನ ಕೈಗಳಿಂದ ಯಾವುದೇ ತಪ್ಪಾಗದಿರಲಿ. ನನ್ನ ಕೈಗಳು ತುಂಬಿದ್ದು ಇತರರೊಂದಿಗೂ ಹಂಚಿಕೊಳ್ಳುವ ಸಾಮರ್ಥ್ಯವಿರಲಿ.’ ಇದು ನಮ್ಮ ದೇಶದ ಪ್ರಾಚೀನ ಪದ್ಧತಿ.ಬೆಳಗ್ಗೆ ಎದ್ದಾಗ ಅಂಗೈಯನ್ನು ನೋಡಿಕೊಂಡು ಪ್ರಾರ್ಥಿಸುವುದು ’ಲಕ್ಷ್ಮಿಯು ನನ್ನ ಕೈಗಳಲ್ಲಿ ವಾಸಿಸಲಿ.ಈ ಕೈಗಳಿಂದ ನಾನು ಸಂಪತ್ತನ್ನು ತರುವಂತಾಗಲಿ.’
ಲಕ್ಷ್ಮಿಯ ಒಂದು ಕೈ ಕೆಳಮುಖವಾಗಿದೆ, ಇದು ಕೊಡುವುದನ್ನು ಸೂಚಿಸುತ್ತದೆ. ಇನ್ನೊಂದು ಕೈ ಅಭಯ ಹಸ್ತವನ್ನು ಸೂಚಿಸುತ್ತದೆ,  ಅಂದರೆ ದೈವಿಕತೆಯು ನಮ್ಮೊಂದಿಗಿದೆ ಮತ್ತು ನಾವು ನಿರ್ಭಯವಾಗಿರಬಹುದು ಎಂಬುದರ ಭರವಸೆ.
ಜೊತೆಗೆಯೇ ನಮ್ಮ ಕೈಗಳು ವಿದ್ಯೆ, ಜ್ಞಾನವನ್ನು ಪಡೆಯುವುದರಲ್ಲಿ ನಮಗೆ ಸಹಾಯವಾಗಲಿ ಎಂದು ಪ್ರಾರ್ಥಿಸುತ್ತೇವೆ.ಕೊನೆಯದಾಗಿ, ಮಂಗಳಕಾರವಾದ ಕಾರ್ಯಗಳು ಮಾತ್ರ ನನ್ನ ಕೈಗಳಿಂದ ನಡೆಯಲಿ ಎಂದು ಪ್ರಾರ್ಥಿಸುತ್ತೇವೆ.
ಇದು ನಾವು ಪ್ರತಿ ಮುಂಜಾವಿನಲ್ಲಿ ಎದ್ದ ತತ್ಕ್ಷಣ ಮಾಡುವಂಥ ಪ್ರಾರ್ಥನೆ, ಇದು ವಾಸ್ತವವಾಗುವುದು ಇದು ನಿಮ್ಮ ಹೃದಯದಿಂದ ಬಂದಾಗ. ಇದು ಕೆಲವೊಮ್ಮೆ ನೆರವೇರದಿದ್ದರೂ,ನಾವು ಆದರೂ ದೇವರಲ್ಲಿ ನಮ್ಮನ್ನು ರಕ್ಷಿಸುವಂತೆ ಹಾಗೂ  ಮುಂದೆ ಹೀಗಾಗದಿರುವ ಹಾಗೆ ಖಾತ್ರಿಪಡಿಸುವಂತೆ ಪ್ರಾರ್ಥಿಸುತ್ತೇವೆ. ಭೂತಕಾಲವನ್ನು, ಹಿಂದೆ ನಡೆದದ್ದನ್ನು ಬಿಟ್ಟುಬಿಡುವುದೇ ನಿಜವಾದ ಅರ್ಪಣೆ.ದೈವಿಕತೆಗೆ, ದೇವರಿಗೆ ನಿಮ್ಮಿಂದ ಯಾವುದೇ ಉಡುಗೊರೆ ಬೇಕಾಗಿಲ್ಲ. ದೈವಿಕತೆಗೆ ಬೇಕಾಗಿರುವುದು ಕೇವಲ ನಿಮ್ಮ ಚಿಂತೆಗಳು.ನಿಮಗೆ ಇದರಿಂದ ಸಿಗುವ ಪ್ರಸಾದ ಮನಸ್ಸಿನ ಪ್ರಸನ್ನತೆ.ದೈವಿಕತೆಯು ನಿಮ್ಮನ್ನು ನಿಮ್ಮ ಪೋಷಕರಿಗಿಂತ ನೂರು ಪಾಲು ಹೆಚ್ಚು ಪ್ರೀತಿಸುತ್ತದೆ.ದೈವಿಕತೆಯು ನಿಮ್ಮನ್ನು ಅಕ್ಕರೆಯಿಂದ ಪ್ರೀತಿಸುತ್ತದೆ, ನಾನಿಲ್ಲಿಗೆ ಬಂದಿರುವುದು ಕೇವಲ ಇದನ್ನು ನಿಮಗೆ ಹೇಳುವುದಕ್ಕಾಗಿ.
ನಾವೆಲ್ಲರೂ ಒಂದು ದಿನ ನಿಧನರಾಗುತ್ತೇವೆ.ಎಲ್ಲಾ ಬೆಲೆಬಾಳುವ ವಸ್ತುಗಳನ್ನು ನಾವು ಲಾಕರ್ನಲ್ಲಿಟ್ಟು ಅದರ ಕೀಲಿಗಳನ್ನು ಭದ್ರವಾಗಿ ನಮ್ಮೊಂದಿಗೆ ಇಟ್ಟಿರಬಹುದು, ಆದರೆ ನಾವು ತೀರಿಕೊಂಡಾಗ ಆ ಲಾಕರ್, ಕೀಲಿಗಳೆರಡನ್ನೂ ಬಿಟ್ಟು ಹೋಗುತ್ತೇವೆ.ನಮ್ಮೊಂದಿಗೆ ಯಾವುದನ್ನು ತೆಗೆದುಕೊನ್ಡು ಹೋಗುವುದಿಲ್ಲ.
ನೀವು ಬಸ್ಸು, ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ ಅದನ್ನು ನಿಮ್ಮ ಮನೆ ಎಂದು ಪರಿಗಣಿಸುತ್ತೀರಾ? ಪ್ರಯಾಣದ ಸಮಯದಲ್ಲಿ ಅಲ್ಲಿರುವ ಸೌಲಭ್ಯಗಳನ್ನು ನೀವು ಮೆಚ್ಚಬಹುದು, ಆದರೆ ಅದನ್ನು ನಿಮ್ಮ ಮನೆ ಎಂದು ಭಾವಿಸಿದರೆ  ಏನಾಗುತ್ತದೆ? ನೀವು ನಿಮ್ಮ ಸ್ಟೇಷನ್(ಸೇರಬೇಕಾದ ಸ್ಥಳ) ತಲುಪಿದಾಗ, ನಿಮ್ಮನ್ನುಬಲವಂತವಾಗಿ ಕಳಿಸಲಾಗುತ್ತದೆ.  ನೀವು ಎಷ್ಟೇ ವಿರೋಧಿಸಿದರೂ ನಿಮ್ಮನ್ನು ಬಲದಿಂದ ಹೊರಗೆ ಕಳಿಸಲಾಗುತ್ತದೆ. ಅದು ನಿಮ್ಮ ರೈಲು/ವಿಮಾನವೆಂದು ನಿಮಗೆ ಹೇಳಲಾಗುವುದಿಲ್ಲ. ನಿಮ್ಮ ಕಾರನ್ನು ನೀವು ಚಲಿಸಬಹುದು,  ನೀವು ಗ್ಯಾರೇಜು ತಲುಪಿದ ಬಳಿಕ ಅದರಿಂದ ಹೊರ ಬರಬೇಕು.
ಜೀವನದ ಮೂಲಭೂತ ಹಾಗೂ ಕಟ್ಟಕಡೆಯ ಸತ್ಯವೆಂದರೆ ನೀವು ಎಲ್ಲವನ್ನೂ ಹಿಂದೆ ಬಿಟ್ಟುಹೋಗಬೇಕು.
ಇಬ್ಬರು ನಿಮ್ಮಲ್ಲಿ ಮಾನಸ ಸರೋವರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳೋಣ. ಒಬ್ಬರು ಅಲ್ಲಿಗೆ ಹೋಗಿದ್ದವರು ನಿಮಗೆ ತಮ್ಮ ಅನುಭವಗಳನ್ನು ಹೇಳುತ್ತಿದ್ದಾರೆ, ಹಾಗೂ ಮತ್ತೊಬ್ಬರು ತಮಗೆ ತಿಳಿದಿರುವಷ್ಟನ್ನೇ ಹೇಳುತ್ತಿದ್ದಾರೆ. ನೀವು ಯಾರನ್ನು ನಂಬುತ್ತೀರಿ?ನಿಖರವಾಗಿ ನೀವು ಅನುಭವವಿರುವವರನ್ನು ನಂಬುತ್ತೀರಿ. ಆದ್ದರಿಂದಲೇ ನಾನು ನಿಮಗೆ ಹೇಳುತ್ತಿದ್ದೇನೆ: ದೈವಿಕತೆ ನಿಮ್ಮನ್ನು ಗಾಢವಾಗಿ ಪ್ರೀತಿಸುತ್ತದೆ. ನೀವು ಭಯ ಅಥವಾ ಚಿಂತೆ ಪಡಬೇಕಾಗಿಲ್ಲ. ಜೀವನವನ್ನು ಮುಗುಳ್ನಗೆಯೊಂದಿಗೆ ಬಾಳಿ.ನಾನಿಲ್ಲಿಗೆ ಬಂದಿರುವುದು ಕೇವಲ ಇದನ್ನು ನಿಮಗೆ ಮನದಟ್ಟ ಮಾಡುವುದಕ್ಕಾಗಿ.ಪುಸ್ತಕಗಳು ಜ್ಞಾನ ಪಡೆಯಲು ಸಹಾಯ ಮಾಡಿದರೂ, ಅವು ಈ ಅರಿವನ್ನು ತರದಿರಬಹುದು. ಈ ಅರಿವು ಬೇರೂರುವುದು ನಾವು ಇದನ್ನು  ಅನುಭವಿಸಿದಾಗ ಮಾತ್ರ.
(ಸತ್ಸಂಗದಲ್ಲಿದ್ದ ಚಳಿಯ ಬಗ್ಗೆ ಮಾತನಾಡುತ್ತಾ) ಈ ಚಳಿಯಲ್ಲಿ ಪ್ರಯೋಜನವಾಗುವ ಒಂದು ಗುಟ್ಟು ನಿಮಗೆ ಹೇಳುತ್ತೇನೆ.ನೀವು ನಿಮ್ಮ ಹೆಬ್ಬೆರಳನ್ನು ಬೆಚ್ಚಗಿಟ್ಟುಕೊಂಡರೆ, ನಿಮಗೆ ಬೆಚ್ಚನೆ ಅನುಭವವಾಗುತ್ತದೆ.ಪ್ರಕೃತಿಯು ಆ ರೀತಿ ರಚಿಸಿದೆ.ನಿಮಗೆ ಚಳಿಯಾದಾಗ ನಿಮ್ಮ ಕೈಗಳನ್ನು ಕಟ್ಟಿಕೊಂಡು ಹೆಬ್ಬೆರಳುಗಳನ್ನು ಕಂಕುಳ ಸಂಧಿಯಲ್ಲಿ ನೀವು ಇಟ್ಟುಕೊಳ್ಳುವುದಿಲ್ಲವೇ? ನಾನು ಸ್ವಿಟ್ಜ಼ರ್ಲಂಡ್ ಅಥವಾ ನಾರ್ವೇಗೆ ಹೋದಾಗ ನಾನು ಯಾವುದೇ ಬೆಚ್ಚನೆ ಬಟ್ಟೆಗಳನ್ನು ಧರಿಸುವುದಿಲ್ಲ. ನಾನು ಆ ಹಿಮಗಟ್ಟುವ ಹವೆಯಲ್ಲಿ ಹೇಗೆ ಚಳಿ ಪಡುವುದಿಲ್ಲ ಎಂದು ಜನರು ಆಶ್ಚರ್ಯ ಪಡುತ್ತಾರೆ. ಚಳಿಯ ಹವಾಮಾನ ನನ್ನ ಮಿತ್ರ. ನನಗೆ ಅದರೊಂದಿಗೆ ಒಪ್ಪಂದ ಇದೆ! ಅದು ನನ್ನನ್ನು ಬಾಧಿಸುವುದಿಲ್ಲ.
ಪ್ರತಿದಿನ ಕೇವಲ ೧೦ ನಿಮಿಷಗಳಕಾಲ ಕೆಲವು ವ್ಯಾಯಾಮಗಳನ್ನು, ಆಸನಗಳನ್ನು ಮಾಡಿ.೧೦ ನಿಮಿಷ ಪ್ರಾಣಾಯಾಮ ಮಾಡಿ.ಪ್ರಾಣಾಯಾಮ ಮನಸ್ಸನ್ನು ಶುದ್ಧಗೊಳಿಸುತ್ತದೆ.ಎಲ್ಲಾ ನೇತ್ಯಾತ್ಮಕತೆ ಇಲ್ಲದಾಗುತ್ತದೆ. ನೀವು ಇದನ್ನು ಅನುಭವಿಸಿದ್ದೀರ: ನೀವು ಕೆಲವರನ್ನು ನೋಡಿದಾಗ ನಿಮಗೆ ಅವರನ್ನು ಮಾತನಾಡಿಸುವ ಮನಸ್ಸಾಗುತ್ತದೆ. ಕೆಲವರೊಂದಿಗೆ ನಿಮಗೆ ಪರಿಚಯವಿಲ್ಲದಿದ್ದರೂ ನೀವು ಅವರಿಂದ ದೂರವಿರಲು ಬಯಸುತ್ತೀರಿ.ಹೀಗಾಗುವುದು ಶರೀರದಿಂದ ಪ್ರಸಾರವಾಗುತ್ತಿರುವ ಶಕ್ತಿಯಿಂದಾಗಿ.ನಮ್ಮ ಶರೀರದಿಂದ ಧನಾತ್ಮಕ ಶಕ್ತಿಯನ್ನು ಪ್ರಸರಿಸುವುದನ್ನು ಕಾದಿಡಲಿಕ್ಕಾಗಿ ನಾವು ಪ್ರಾಣಾಯಾಮ ಮತ್ತು ಧ್ಯಾನ ಮಾಡಬೇಕು, ಆಗ ನಮ್ಮ ಕೆಲಸ ಸುಗಮವಾಗಿ ಮತ್ತು ಸಹಜವಾಗಿ ನಡೆಯುತ್ತದೆ.ನಿಮಗೆ ಸಿಟ್ಟು ಅಥವಾ ಚಿಂತೆಯಿರುವಾಗ, ಬೇರೆಯವರಿಗೂ ನಿಮ್ಮ ಬಗ್ಗೆ ಅದೇ ಸಂವೇದನೆ ಉಂಟಾಗಬಹುದು.ಅವರು ನಿಮ್ಮಿಂದ ದೂರವಿರಲು ಬಯಸಬಹುದು.ಅವರು ನಿಮ್ಮಿಂದ ದೂರವಿರಲು ಬಯಸುವುದು ನಿಮಗೆ ವಿಚಿತ್ರವೆನಿಸಬಹುದು. ನಮ್ಮ ಶರೀರದ ಶಕ್ತಿಯನ್ನು ಹೇಗೆ ಮಾರ್ಪಡಿಸುವುದು ಎಂಬುದನ್ನು ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ನಮಗೆ ಹೇಳಿಕೊಡಲಾಗುವುದಿಲ್ಲ. ಆದ್ದರಿಂದಲೇ ಧ್ಯಾನ,  ಪ್ರಾಣಾಯಾಮ, ಸತ್ಸಂಗ ನಮ್ಮ ಪ್ರಜ್ಞೆಯನ್ನು ಮೇಲ್ಮಟ್ಟಕ್ಕೆ ಏರಿಸುವುದಕ್ಕಾಗಿ ಬಹಳ ಮುಖ್ಯ.
ಪರಿಸರವನ್ನು ಸ್ವಚ್ಚವಾಗಿಡಿ.ಗಿಡಮರಗಳನ್ನು ಬೆಳೆಸಿ, ರಕ್ಷಿಸಿ.ನಿಮ್ಮ ಶರೀರವನ್ನು ಸ್ವಚ್ಚವಾಗಿಡಿ.ಆಯುರ್ವೇದವನ್ನು ಬಳಸಿ.ವಾರಕ್ಕೆ ೩ರಿಂದ ೫ ತ್ರಿಫಲಾ ಗುಳಿಗೆ ಸೇವಿಸಿ.ಅದು ನಿಮ್ಮ ಜೀರ್ಣವ್ಯೂಹವನ್ನು ಶುಚಿಗೊಳಿಸುತ್ತದೆ.ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿದ್ದರೆ, ನಿಮ್ಮ ಮನಸ್ಸು ಚೆನ್ನಾಗಿರುತ್ತದೆ.
ನಿಮ್ಮ ಪಾದಗಳು ಬೆಚ್ಚಗಿರಬೇಕು, ನಿಮ್ಮ ಹೊಟ್ಟೆ ಮೃದುವಾಗಿರಬೇಕು ಮತ್ತು ತಲೆ(ಮನಸ್ಸು) ತಂಪಾಗಿರಬೇಕು. ಇದು ಆರೋಗ್ಯವಂತ ವ್ಯಕ್ತಿಯ ಲಕ್ಷಣ.ಅನಾರೋಗ್ಯ ಎಂದರೆ ನಿಮ್ಮ ಪಾದಗಳು ತಂಪಾಗಿದ್ದು, ತಲೆ ಬಿಸಿಯಾಗಿ ಮತ್ತು ಹೊಟ್ಟೆ ಕಲ್ಲಿನಂತಿರುವುದು.
ನಿಮ್ಮ ದುಷ್ಕರ್ಮಗಳು ಹೋಗಬೇಕಾದರೆ ನೀವು ಪ್ರಾಣಾಯಾಮ ಮಾಡಬೇಕು.’ನಾಸ್ತಿ ತಪಃ ಪ್ರಾಣಾಯಾಮಾತ್ ಪರಂ’ - ಪ್ರಾಣಾಯಮಕ್ಕಿಂತ ಹೆಚ್ಚಿನ(ಶ್ರೇಷ್ಠವಾದ) ತಪಸ್ಸಿಲ್ಲ.
-ಧ್ಯಾನಾದೊಂದಿಗೆ ಪ್ರಜ್ಞೆಯು ಪರಿಶುದ್ಧವಾಗುತ್ತದೆ
-ಭಜನೆಯೊಂದಿಗೆ ಭಾವನೆಗಳು ಪರಿಶುದ್ಧಗೊಳ್ಳುತ್ತವೆ -ಸಂಗೀತವನ್ನು ಆಲಿಸಿ
-ಜ್ಞಾನದೊಂದಿಗೆ ಚಿತ್ತ(ಬುದ್ಧಿ) ಪರಿಶುದ್ಧವಾಗುತ್ತದೆ.(ಎಲ್ಲವೂ ಮತ್ತು ಎಲ್ಲರೂ ತಾತ್ಕಾಲಿಕ/ಅಶಾಶ್ವತ ಎಂಬ ಜ್ಞಾನ)
-ದಾನದೊಂದಿಗೆ ಸಂಪತ್ತು ಪರಿಶುದ್ಧಗೊಳ್ಳುತ್ತದೆ.-ನಿಮ್ಮ ಗಳಿಕೆಯ ೨-೩% ದಾನಕ್ಕಾಗಿ ಮೀಸಲಿಡಿ
-ತುಪ್ಪದೊಂದಿಗೆ ಆಹಾರ ಶುದ್ಧಗೊಳ್ಳುತ್ತದೆ.
ಒಬ್ಬ ಪ್ರಖ್ಯಾತ ಹೃದಯ ತಜ್ಞ ಒಮ್ಮೆ ನನಗೆ ಹೇಳಿದ್ದರು, ’ನಮ್ಮ ದೇಶದಲ್ಲಿ ಜನರು ಅನ್ನವನ್ನು ತುಪ್ಪವಿಲ್ಲದೇ ಸೇವಿಸಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ’. ತುಪ್ಪವು ಆಹಾರವನ್ನು ಸಂಕೀರ್ಣ ಶರ್ಕರಪಿಷ್ಟಗಳಿಗೆ(ಕಾರ್ಬೊಹೈಡ್ರೇಟ್) ಮಾರ್ಪಡಿಸುತ್ತದೆ ಮತ್ತು ಕೂಡಲೇ ಸಕ್ಕರೆಗೆ ಬದಲಾಗದಂತೆ ಇರಿಸುತ್ತದೆ. ಅದು ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ಶರೀರ ವ್ಯವಸ್ಥೆಗೆ ಬಹಳ ಪ್ರಯೋಜನಕರ.ಮಧುಮೇಹದಂಥ ಕಾಯಿಲೆಗಳು ಬರುವುದಿಲ್ಲ’.
ನಾನು ಹೇಳಿದೆ ’ನಮ್ಮ ಪ್ರಾಚೀನ ಋಷಿಗಳು ಇದನ್ನೇ ಹೇಳಿದ್ದರೆ!’.
ಅದಕ್ಕಾಗಿ ನಿಮ್ಮ ಆಹಾರದೊಂದಿಗೆ ಒಂದು ಚಮಚ ತುಪ್ಪ ಸೇವಿಸಿ
-ವ್ಯಾಯಾಮ ಮತ್ತು ಆಯುರ್ವೇದದೊಂದಿಗೆ ಶರೀರವು ಪರಿಶುದ್ಧಗೊಳ್ಳುತ್ತದೆ.
ನಿಮ್ಮಲ್ಲಿ ಎಷ್ಟು ಮಂದಿಗೆ ಭವ್ಯವಾದ ಮತ್ತು ಸಮೃದ್ಧ, ಹಿಂಸೆಯಿಂದ ಮುಕ್ತ ಭಾರತದ ಕನಸು ಇದೆ?ಇಲ್ಲಿರುವ ಎಲ್ಲ ಯುವಕರು ೬ ತಿಂಗಳಿಂದ ಒಂದು ವರ್ಷ ದೇಶಕ್ಕಾಗಿ ಮುಡಿಪಿಡಿ.ನಿಮ್ಮಲ್ಲೆಷ್ಟು ಮಂದಿ ಸಿದ್ಧರಾಗಿದ್ದೀರಿ?ದೇಶದಲ್ಲಿ ಬಹಳಷ್ಟು ಭ್ರಷ್ಟಾಚಾರವಿದೆ.ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳು ಇಳಿತ ಹೊಂದಿವೆ.ನಾವು ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು.ಇದು ಕೇವಲ ಅಧ್ಯಾತ್ಮಿಕಾತೆಯಿಂದ ಮಾತ್ರ ಸಾಧ್ಯ.
ಸಹಭಾವ(ಬಂಧುತ್ವ-ಭಾವ) ಕೊನೆಗೊಂಡಲ್ಲಿ ಭ್ರಷ್ಟಾಚಾರ ಆರಂಭಗೊಳ್ಳುತ್ತದೆ.  ’ನಮ್ಮವರು’ ಅಂತ ಅನಿಸಿದವರೊಂದಿಗೆ ಯಾರೂ ಭ್ರಷ್ಟರಾಗಿರಲು ಸಾಧ್ಯವಿಲ್ಲ. ನಾವೆಲ್ಲರೂ ಜೊತೆಯಾಗಿ ಇದಕ್ಕಾಗಿ ಶ್ರಮಿಸಬೇಕು.ನಾವು ಒಂದು ದಿವ್ಯ ಸಮಾಜವನ್ನು ನಿರ್ಮಿಸಬೇಕು.ನಮ್ಮ ಮುಂದಿನ ಪೀಳಿಗೆಗಳಿಗೆ ನಮಗಿಂತ ಒಳ್ಳೆಯ ಸಮಾಜ ದೊರೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು.  ನಮ್ಮ ಮಕ್ಕಳಿಗೆ ಒಂದು ಇನ್ನೂ ಧರ್ಮಶೀಲವಾದ(ನ್ಯಾಯಬದ್ಧವಾದ), ಹೃದಯವಂತಿಕೆಯ ಮತ್ತು ಬಂಧುತ್ವದಿಂದ ಕೂಡಿದ ಸಮಾಜವನ್ನು ಒದಗಿಸಬೇಕು.
ಬೆಂಗಳೂರು ಹಿರಿಯ ನಾಗರಿಕರಿಗೆ ಒಂದು ಅಭದ್ರ ಸ್ಥಳವಾಗಿದೆ.ಅವರ ಮೇಲೆ ಬಹಳ ಹಲ್ಲೆಗಳು ನಡೆಯುತ್ತಿವೆ.ನಾವು ನಿರ್ಭಯಾರಾಗಿ ಬದುಕಬಹುದಾದಂಥ ಸಮಾಜವನ್ನು ನಿರ್ಮಿಸಬೇಕು. ಒಮ್ಮೆ ಪೋಲೀಸ್ ಅಧಿಕಾರಿಗಳು ಹಲವು ರೌಡಿಗಳನ್ನು ಸಂಸ್ಕರಿಸಲಿಕ್ಕಾಗಿ(ಸುಧಾರಿಸಾಲಿಕ್ಕಾಗಿ) ಆಶ್ರಮಕ್ಕೆ ಕರೆತಂದಿದ್ದರು. ೩ ದಿನಗಳೊಳಗೆ ಸಂಪೂರ್ಣ ಪರಿವರ್ತನೆ ಇತ್ತು.
ಬೆಂಗಳೂರಿನ ೪೦ ಸ್ಲಮ್(ಕೊಳಗೇರಿ)ಗಳಲ್ಲಿ ಬಹಳಷ್ಟು ಕೆಲಸ ನಡೆಯುತ್ತಿದೆ. ಅಲ್ಲಿ ಬಹಳ ಪರಿವರ್ತನೆಯಾಗಿದೆ.ಒಂದು ಗುಂಪು ಮಾಡಿಕೊಂಡು ಒಂದು ರವಿವಾರ ಒಂದು ಕೊಳಗೇರಿಗೆ ಭೇಟಿ ನೀಡಿ.ಅವರಿಗೆ ಶಿಕ್ಷಣ ಕೊಡಿ, ಕೆಲವು ಭಜನೆಗಳನ್ನು ಹಾಡಿ ಪ್ರಸಾದ ವಿತರಿಸಿ.
ನಮ್ಮ ದೇಶ ಈ ಸ್ಥಿತಿಯಲ್ಲಿರುವುದು ಕೆಟ್ಟವರಿಂದಾಗಿ ಅಲ್ಲ, ಆದರೆ ಒಳ್ಳೆಯವರು ಮೌನವಾಗಿದ್ದು ಅದರ ಬಗ್ಗೆ ಏನೇ ಮಾಡದಿರುವುದರಿಂದ. ಕೆಟ್ಟವರ ಸಂಖ್ಯೆ ಸ್ವಲ್ಪವಿದೆಯಷ್ಟೇ.
ರವಿವಾರ ಕೇವಲ ೨ ಘಂಟೆಗಳ ಕಾಲ ಒಂದು ಗುಂಪು ಮಾಡಿಕೊಂಡು ನಿಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಿ.ಇಂಥ ಜ್ಞಾನ ಮತ್ತು ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ನೀಡಿ.ಎಲ್ಲಾ ವೈದ್ಯರು ಒಂದು ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿ.ನಿಮ್ಮಿಂದ ಉತ್ಕ್ರುಷ್ಟವಾಗಿ ಮಾಡಲು ಸಾಧ್ಯವಾದುದನ್ನು ನೀವು ಮಾಡಿ.ನಿಮ್ಮ ಶಕ್ತಿಯನ್ನು ಮೀರಿ ನೀವು ಮಾಡಬೇಕಾಗಿಲ್ಲ.
ಪ್ರ: ಗುರೂಜಿ ಮುಕ್ತಿ ಎಂಬುದನ್ನು ವಿವರಿಸುವಿರಾ..ನಾವು ಈ ಜನ್ಮದಲ್ಲಿ ಅದನ್ನು ಹೇಗೆ ಪಡೆಯುವುದು?
ಶ್ರೀ ಶ್ರೀ:
ಮುಕ್ತಿಗಾಗಿ ಹಂಬಲವಿರುವುದು ಮೊದಲ ಹೆಜ್ಜೆ.
ಎರಡನೆಯದು- ಯಾವುದು ಶಾಶ್ವತ ಮತ್ತು ಯಾವುದು ಸದಾ ಪರಿವರ್ತನೆಯನ್ನು ಹೊಂದಿದ್ದು ಎಂಬುದನ್ನು ತಿಳಿಯುವುದು.ನಿಮಗೆ ಎಲ್ಲವೂ ಬದಲಾಗುತ್ತಿದೆ ಎಂದು ತಿಳಿದಾಗ, ಅದು ಒಂದು ಬದಲಾವಣೆ ಹೊಂದದ ಆಧಾರ ಅಂಶ ಇರುವುದರಿಂದ. ಈ ಅರಿವು ನಿಮಗೆ ಮೊದಲು ಬರುತ್ತದೆ.ನಂತರ ನಿಮ್ಮ ಅರಿವಿಲ್ಲದೆಯೇ ನೀವು ಸ್ವಾತಂತ್ರ್ಯ ಮತ್ತು ಪ್ರೇಮದ ಸಂವೇದನೆಯನ್ನು ಅನುಭವಿಸುತ್ತೀರಿ.ಇದೆಲ್ಲವೂ ನಿಮ್ಮಲ್ಲಿ ಬಹಳ ಸ್ವಯಂಪ್ರೇರತವಾಗಿ ಮತ್ತು ಸ್ವಾಭಾವಿಕವಾಗಿ ಉಂಟಾಗುತ್ತದೆ.
ಪ್ರ: ಗುರೂಜಿ, ಮಾಂಸಾಹಾರ ಸೇವಿಸುವವರು ಬಹಳ ಜನರಿದ್ದಾರೆ. ಅವರು ದುಷ್ಕರ್ಮವನ್ನು ಸಂಗ್ರಹಿಸುತ್ತಿಲ್ಲವೇ, ಅವರು ಮಾಡುತ್ತಿರುವುದು ಪಾಪವಲ್ಲವೇ?
ಶ್ರೀ ಶ್ರೀ:
ಆಧ್ಯಾತ್ಮಿಕ ಏಳಿಗೆಗೆ ಮಾಂಸಾಹಾರ ಸೂಕ್ತವಲ್ಲ. ನೀವು ಜಗತ್ತಿನಲ್ಲಿ ನೋಡಿರಬಹುದು, ಜನರು ಎಲ್ಲಿಯಾದರೂ ಅಧ್ಯಾತ್ಮಿಕ ಪಥದಲ್ಲಿ ಹೆಜ್ಜೆಯಿಟ್ಟ ನಂತರ, ಅವರು ತಾವಾಗಿಯೇ ಮಾಂಸಾಹಾರ ಸೇವನೆ ನಿಲ್ಲಿಸಿದ್ದಾರೆ.
ಇವತ್ತು ಅಮೇರಿಕಾ, ರಶ್ಶ್ಯಾ, ಪೋಲಾಂಡ್ ಮತ್ತು ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರು ಸಸ್ಯಾಹಾರಿಗಳಿಗೆ ಬದಲಾಗಿದ್ದಾರೆ.ಸುಮಾರು ೩೦ ವರ್ಷಗಳ ಹಿಂದೆ ನಾನು ಬೇರೆ ದೇಶಗಳಿಗೆ ಹೋಗುತ್ತಿದ್ದಾಗ, ಅಲ್ಲಿ ಸಸ್ಯಾಹಾರಿಗಳು ಅಪರೂಪವಾಗಿದ್ದರು.ಆದರೂ ಈಗ ಎಲ್ಲಾ ಕಡೆಯಲ್ಲೂ ಬಹಳ ಸಸ್ಯಾಹಾರಿಗಳಿದ್ದಾರೆ.ನಮ್ಮ ದೇಶದಲ್ಲಿ 5600 ಬಗೆಯ ಸಸ್ಯಾಹಾರಿ ತಿನಿಸುಗಳಿವೆ.ನಾವು ಅದನ್ನು ಜನಪ್ರಿಯಗೊಳಿಸಬೇಕು.