"ಆಧ್ಯಾತ್ಮಿಕತೆಯು ಸಾಮಾಜಿಕ ಬದಲಾವಣೆಯನ್ನು ತರಬಲ್ಲದು. ಆಧ್ಯಾತ್ಮಿಕತೆಯಿಂದ ಸಾಮಾಜಿಕ ಜವಾಬ್ದಾರಿಯು ಉಂಟಾಗುತ್ತದೆ." - ಶ್ರೀ ಶ್ರೀ
ಶನಿವಾರ, ಜೂನ್ 30, 2012
ಶುಕ್ರವಾರ, ಜೂನ್ 29, 2012
ಮೌನ
29
2012............................... ಬೂನ್, ನಾರ್ತ್ ಕೆರೋಲಿನಾ
Jun

ಮೌನವು ನಮ್ಮ ಮಾತನ್ನು ಶುದ್ಧಗೊಳಿಸುತ್ತದೆ. ಅನೇಕವೇಳೆ ನಾವು ಮಾತನಾಡುವಾಗ ಏನಾಗುತ್ತದೆ, ನೀವು ಗಮನಿಸಿದ್ದೀರಾ? ನೀವು ಗಮನಿಸಬೇಕು. ನೀವು ಮಾತನಾಡುವಾಗ ನಿಮ್ಮ ಮಾತು ಇತರರ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ - ಅದನ್ನು ನೀವು ಗಮನಿಸಬೇಕು. ಹಲವಾರು ಸಾರಿ, ನಾವು ಇದನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ, ನಾವು ಬಡಬಡಿಸುತ್ತಾ ಹೋಗುತ್ತೇವೆ. ನಾವು ಕೇವಲ ನಾವು ಹೇಳಲು ಬಯಸುವುದನ್ನೆಲ್ಲಾ ಹೇಳಿ ನಿರಾಳವಾಗುತ್ತೇವೆ. ಇಲ್ಲ, ನಿಮ್ಮ ಮಾತು ಇತರರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ನೀವು ನೋಡಬೇಕು.
ಭಗವದ್ಗೀತೆಯಲ್ಲಿ ಒಂದು ಸುಂದರವಾದ ದ್ವಿಪದಿಯಿದೆ. ಅದು ಹೇಳುತ್ತದೆ, "ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯ ಹಿತಂ ಚ ಯತ್." ಜನರ ಮನಸ್ಸುಗಳನ್ನು ತಳಮಳ ಮಾಡದಿರುವ ಮತ್ತು ಸತ್ಯವಾದ ಮಾತುಗಳು. ದಯೆಯಿಂದ ಕೂಡಿದ ಹಾಗೂ ಹಿತವಾಗಿರುವ ಸತ್ಯ - ಅಂತಹ ಮಾತುಗಳನ್ನು ಆಡಬೇಕು. ಅದು ಮಾತಿನ ತಪಸ್ಸು ಎಂದು ಕರೆಯಲ್ಪಡುತ್ತದೆ.
ಅದೇ ರೀತಿಯಲ್ಲಿ ಶರೀರಕ್ಕೆ, ಮಿತಾಹಾರ, ಮಿತ ವ್ಯಾಯಾಮ, ಮಿತವಾದ ಕೆಲಸ ಮತ್ತು ಮಿತವಾದ ವಿಶ್ರಾಂತಿ. ಇದು ಶರೀರಕ್ಕಿರುವ ಒಂದು ಅಭ್ಯಾಸ, ಒಂದು ತಪಸ್ಸು. ಮಾತಿನ ತಪಸ್ಸೆಂದರೆ, ಇತರರ ಮನಸ್ಸನ್ನು ತಳಮಳ ಮಾಡದಿರುವ ಮಾತುಗಳನ್ನು ಮಾತ್ರ ಆಡುವುದು.
ನೋಡಿ, ಕೆಲವೊಮ್ಮೆ ನಾವು ಸರಿಯೆಂದು ನಾವು ಯೋಚಿಸುತ್ತೇವೆ ಹಾಗೂ ನಾವು ಸರಿಯಾಗಿರಬಹುದು; ನೀವು ಸತ್ಯವನ್ನು ಮಾತನಾಡುತ್ತಿರಬಹುದು, ಅದು ದಯೆಯಿಂದ ಕೂಡಿದುದಲ್ಲವಾಗಿರಬಹುದು, ಅದು ಇನ್ನೊಬ್ಬ ವ್ಯಕ್ತಿಗೆ ಒಳ್ಳೆಯದು ಕೂಡಾ ಆಗಿರಬಹುದು, ಆದರೆ ಅದು ಹಿತವಾಗಿಲ್ಲದೇ ಇದ್ದರೆ ಮತ್ತು ಅದು ಇನ್ನೊಬ್ಬ ವ್ಯಕ್ತಿಯ ಮನಸ್ಸನ್ನು ತಳಮಳಗೊಳಿಸಿದರೆ, ಆಗ ಅದು ಸಂಪೂರ್ಣವಾಗಿರುವುದಿಲ್ಲ. ಆದುದರಿಂದ ಇದೊಂದು ದೊಡ್ಡ ಕುಶಲತೆ ಮತ್ತು ಇದು ಬಹಳ ಸುಲಭದ ಕೆಲಸವಲ್ಲ - ಯಾರದ್ದಾದರೂ ಮನಸ್ಸನ್ನು ತಳಮಳಗೊಳಿಸದೇ ಅಥವಾ ಅವರಿಗೆ ನೋವನ್ನುಂಟುಮಾಡದೇ ಇರುವುದು.
ನೋಡಿ, ನೀವು ಯಾರಿಗೋ ಕೆಲವು ಶಬ್ದಗಳನ್ನು ಹೇಳುತ್ತೀರಿ ಮತ್ತು ಆ ವ್ಯಕ್ತಿಯು ಇಡೀ ದಿನ ಅಳುತ್ತಿರುತ್ತಾರೆ ಅಥವಾ ಅಶಾಂತರಾಗಿರುತ್ತಾರೆ, ಅದು ಒಳ್ಳೆಯದಲ್ಲ. ಆದುದರಿಂದ ಹಿತವಾದ, ಸತ್ಯವಾದ ಮತ್ತು ದಯೆಯಿಂದ ಕೂಡಿದ ಮಾತುಗಳನ್ನಾಡಿ. ಅದೇ ಸಮಯದಲ್ಲಿ, ಬಹಳ ಹಿತವಾದ ಸುಳ್ಳುಗಳನ್ನಾಡಬೇಡಿ. ನಾವು ಸತ್ಯವಾದ, ದಯೆಯಿಂದ ಕೂಡಿದ, ಹಿತವಾದ ಮತ್ತು ತಳಮಳಗೊಳಿಸದ ಮಾತುಗಳನ್ನಾಡಬೇಕು. ನಿಮ್ಮ ಹಿತವಲ್ಲದ ಮಾತುಗಳಿಂದ ಇತರರ ಮನಸ್ಸು ಹಾಗೂ ಹೃದಯಗಳನ್ನು ಜಜ್ಜಬೇಡಿ.
ನೀವು ಹೇಳಬಹುದು, "ನಾನು ಯಾರಿಗೂ ನೋವನ್ನುಂಟುಮಾಡಲು ಬಯಸುವುದಿಲ್ಲ ಆದರೆ, ನೋವನ್ನುಂಟುಮಾಡುವ ಶಬ್ದಗಳು ಹಾಗೇ ನನ್ನ ಬಾಯಿಯಿಂದ ಹೊರಬೀಳುತ್ತವೆ. ನಾನೇನು ಮಾಡಲಿ?" ಮೌನ, ಇದು ಸಹಾಯ ಮಾಡಬಹುದು. ನೀವು ಮೌನವನ್ನು ಪಾಲಿಸಿ. ಧ್ಯಾನ ಮತ್ತು ಮೌನ, ಇವುಗಳೆಲ್ಲಾ ಸಹಾಯಕವಾಗಬಹುದು.
ಕೆಲವೊಮ್ಮೆ, ಅವುಗಳೆಲ್ಲದರ ಹೊರತಾಗಿಯೂ ಅದು ಬಂದರೆ, ಅದು ಆದರೆ, ಆಗ ನಿಮಗೆ ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಆಗ ಕೇವಲ ಕ್ಷಮಾಪಣೆ ಕೇಳಿಕೊಳ್ಳಿ.
ಆದುದರಿಂದ ಅದು ಒಳ್ಳೆಯದು, ನೀವು ಮೌನವನ್ನು ಪಾಲಿಸುವಾಗ ಕ್ಷಮಾಪಣೆ ಕೇಳಿಕೊಳ್ಳಿ. ನನ್ನ ಯೋಚನೆಯಿಂದ, ಶಬ್ದಗಳಿಂದ ಅಥವಾ ಕಾರ್ಯಗಳಿಂದ ಯಾರಿಗಾದರೂ ನಾನೇನಾದರೂ ಮಾಡಿದ್ದರೆ ಅಥವಾ ನೋವನ್ನುಂಟುಮಾಡಿದ್ದರೆ, ನನಗೆ ಕ್ಷಮೆಯಿರಲಿ. ಅದು ನಮ್ಮನ್ನು ಕೆಸರು ಭೂಮಿಯಲ್ಲಿ ಹೂತು ಕೆಳಗೆ ಜಾರುವುದರಿಂದ ನಮ್ಮನ್ನು ಮೇಲೆತ್ತುತ್ತದೆ. ಸರಿಯೆಂದು ತೋರುತ್ತಿದೆಯೇ? ಹೌದು!
ನೋಡಿ, ಜೀವನದಲ್ಲಿ ಎಲ್ಲವೂ ಗುಲಾಬಿಯಂತೆ ಚೆನ್ನಾಗಿರುತ್ತದೆಯೆಂದು ನೀವು ಯೋಚಿಸಲು ಸಾಧ್ಯವಿಲ್ಲ; ಜೀವನದಲ್ಲಿ ಮುಳ್ಳುಗಳೂ ಇರುತ್ತವೆ. ಅಹಿತವಾದ ಕ್ಷಣಗಳು ಕೂಡಾ ಇರುತ್ತವೆ ಮತ್ತು ಅವುಗಳು ಬರುತ್ತವೆ, ಹೋಗುತ್ತವೆ. ನಾವು ಎಲ್ಲೂ ಸಿಕ್ಕಿಹಾಕಿಕೊಳ್ಳದೆ ಸುಮ್ಮನೇ ಮುಂದುವರಿಯಬೇಕು.
ಭಾನುವಾರ, ಜೂನ್ 17, 2012
ಪ್ರೀತಿಯಿಲ್ಲದ ಜೀವನಕ್ಕೆ ಯಾವುದೇ ಬೆಲೆಯಿಲ್ಲ
17
2012............................... ಹಾರ್ಲೆಮ್, ಹಾಲೆಂಡ್
Jun

(ಸಭಿಕರು: ಶಮನದ ಬಗ್ಗೆ ಮಾತನಾಡಿ; ನಾವು ಧ್ಯಾನ ಮಾಡೋಣ; ಆಯುರ್ವೇದದ ಬಗ್ಗೆ ಹೇಳಿ; ಮುಗ್ಗಟ್ಟಿನ ಬಗ್ಗೆ ಮಾತನಾಡಿ)
ನೋಡಿ, ಮುಗ್ಗಟ್ಟು ಎಂಬ ಶಬ್ದವು ನಿಮ್ಮ ಮುಖದ ಮೇಲೆ ನಗೆಯನ್ನು ತರುತ್ತಿದೆ; ಇದು ಏನೋ ಒಂದು ಬಹಳ ಏಕೈಕವಾದುದು, ಅಲ್ಲವೇ?! ಸಾಧಾರಣವಾಗಿ ಜನರು ಮುಗ್ಗಟ್ಟಿನ ಬಗ್ಗೆ ಮಾತನಾಡುವಾಗ ಅಳುತ್ತಿರುತ್ತಾರೆ, ಆದರೆ ಇಲ್ಲಿ ಇದು ವ್ಯತ್ಯಸ್ತವಾಗಿದೆ ಮತ್ತು ಇದುವೇ ಜೀವನ ಕಲೆ - ಪ್ರತಿಯೊಂದು ಸಮಸ್ಯೆಯನ್ನೂ ಒಬ್ಬನ ಪ್ರಯೋಜನಕ್ಕಾಗಿ ತಿರುಗಿಸುವುದು. ಪ್ರತಿಯೊಂದು ಸಮಸ್ಯೆಯನ್ನು ಒಂದು ಸವಾಲಾಗಿ, ಒಂದು ಅವಕಾಶವಾಗಿ ತೆಗೆದುಕೊಳ್ಳುವುದನ್ನೇ ನಾವು ಪ್ರಪಂಚದಲ್ಲಿ ಪ್ರಚಾರ ಮಾಡಬೇಕಾಗಿರುವುದು. ನಿಮಗೆ ಹಾಗೆ ಅನ್ನಿಸುತ್ತಿಲ್ಲವೇ? ನಿಮಗೆ ಗೊತ್ತಿದೆಯಾ, ಚೈನೀಸ್ ಭಾಷೆಯಲ್ಲಿ ಅವಕಾಶ ಹಾಗೂ ಸಮಸ್ಯೆ ಎರಡಕ್ಕೂ ಒಂದೇ ಪದವಿರುವುದು! ನೀವು ಸಮಸ್ಯೆ ಎಂದು ಹೇಳಿದರೆ, ಅದರರ್ಥ ಅವಕಾಶ ಎಂದು ಕೂಡಾ ಆಗುತ್ತದೆ.
ಬೇರೇನನ್ನು ಚರ್ಚಿಸಲು ನೀವು ಬಯಸುತ್ತೀರಿ?
(ಸಭಿಕರು: ಸ್ವಾತಂತ್ರ್ಯ; ಪ್ರೀತಿ; ನಿರ್ಣಯ ಮಾಡುವುದು ಹೇಗೆ; ಅವ್ಯವಸ್ಥೆ; ಅಂತರರಾಷ್ಟ್ರೀಯವಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ; ಫುಟ್ಬಾಲ್)
ಈಗ ನನಗೆ ಹೇಳಿ, ನನಗೆ ಇವುಗಳಲ್ಲಿ ಯಾವುದೇ ವಿಷಯದ ಬಗ್ಗೆಯೂ ಏನೂ ಗೊತ್ತಿಲ್ಲದೇ ಇದ್ದರೆ ಹೇಗೆ. ನನಗೆ ಫುಟ್ಬಾಲಿನ ಬಗ್ಗೆ ಏನೂ ತಿಳಿಯದು. ಭಾರತದಲ್ಲಿ ಫುಟ್ಬಾಲ್ ಅಷ್ಟೇನೂ ಜನಪ್ರಿಯವಾಗಿಲ್ಲ, ಜನಪ್ರಿಯವಾಗಿರುವುದು ಯಾವುದೆಂದರೆ, ಕ್ರಿಕೆಟ್. ನನಗೆ ಅದರ ಬಗ್ಗೆಯೂ ತಿಳಿದಿಲ್ಲ.
ಆದುದರಿಂದ ನನಗೆ ಇವುಗಳಲ್ಲಿ ಯಾವುದೇ ವಿಷಯಗಳ ಬಗ್ಗೆಯೂ ತಿಳಿದಿಲ್ಲ.
(ಸಭಿಕರು: ಪರವಾಗಿಲ್ಲ, ಕೇವಲ ಇಲ್ಲಿರುವುದಕ್ಕೆ ಚೆನ್ನಾಗಿದೆ!)
ನಿಮಗೆ ಗೊತ್ತಿದೆಯಾ, ನಾವು ನಮ್ಮ ಮಾತಿಗಿಂತ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಸುತ್ತೇವೆ; ನೀವಿದನ್ನು ಗಮನಿಸಿದ್ದೀರಾ? ನಮ್ಮ ಇರುವಿಕೆಯು ಬಹಳಷ್ಟನ್ನು ತಿಳಿಯಪಡಿಸುತ್ತದೆ. ಶಬ್ದಗಳು ಅವಶ್ಯಕ, ಆದರೆ ಶಬ್ದಗಳಿಗಿಂತಲೂ ನಮ್ಮ ಇರುವಿಕೆಯು ಹೆಚ್ಚು ಅವಶ್ಯಕ.
ಸಾಧಾರಣವಾಗಿ ನಾನೊಂದು ಉದಾಹರಣೆಯನ್ನು ನೀಡುತ್ತೇನೆ. ನೀವೊಂದು ವಿಮಾನದಿಂದ ಇಳಿಯುವಾಗ, ಗಗನಸಖಿಯರು, "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುತ್ತಾರೆ. ಆದರೆ ಅವರು ಅದನ್ನು ನಿಜವಾದ ಮನಸ್ಸಿನಿಂದ ಹೇಳುವುದಲ್ಲ. ಅದು ಕೇವಲ ತುಟಿಗಳಿಂದ ಬರುತ್ತದೆ. ಅವರ ಮನಸ್ಸು ಬೇರೆಲ್ಲೋ ಕೆಲಸ ಮಾಡುತ್ತಿರುತ್ತದೆ. ಆದರೆ ಅದೇ ಶಬ್ದಗಳು, ನಿಮಗೆ ಬಹಳ ಆತ್ಮೀಯರಾಗಿರುವ ಒಬ್ಬರಿಂದ, ನಿಮ್ಮ ತಾಯಿ, ಅಜ್ಜಿ, ಮಾವ, ಅಥವಾ ಅತ್ತೆಯಿಂದ ಬಂದರೆ, ಅದರೊಂದಿಗೆ ಸ್ವಲ್ಪ ಕಂಪನಗಳು, ಸ್ವಲ್ಪ ಭಾವನೆ ಇರುತ್ತದೆ. ನೀವದನ್ನು ಗಮನಿಸಿದ್ದೀರಾ?
ಮಗುವಾಗಿದ್ದಾಗ, ಈ ಆಯಾಮವು ನಮ್ಮೊಳಗಿತ್ತು - ಭಾವನೆಗಳು. ನಾವು ಹೇಳಿದುದೆಲ್ಲವೂ ಅಥವಾ ಮಾಡಿದುದೆಲ್ಲವೂ ಬಹಳ ವಿಶ್ವಾಸಾರ್ಹವಾಗಿತ್ತು. ಅದು ನೇರವಾಗಿ ಹೃದಯದಿಂದ ಬರುತ್ತಿತ್ತು. ಹೃದಯ ಮತ್ತು ಮನಸ್ಸು ಒಂದಾಗಿದ್ದವು. ಆದರೆ ನಾವು ದೊಡ್ಡವರಾದಂತೆ, ಎಲ್ಲೋ, ಹೇಗೋ, ಏನಾಯಿತೆಂದು ನಮಗೆ ಗೊತ್ತಿಲ್ಲ, ಆದರೆ ಇವುಗಳೆರಡರ ನಡುವಿನ ಕೊಂಡಿ ಕಳಚಿತು ಹಾಗೂ ನಾವು ಉದ್ದೇಶಪೂರ್ವಕವಲ್ಲದ ವಿಷಯಗಳನ್ನು ಹೇಳುತ್ತೇವೆ.
ಕೆಲವೊಮ್ಮೆ ಜನರನ್ನುತ್ತಾರೆ, "ಓಹ್, ನಿಮಗೆ ಬಹಳ ಧನ್ಯವಾದಗಳು!" ವಿಶೇಷವಾಗಿ ಅಮೇರಿಕಾದಲ್ಲಿ ನೀವಿದನ್ನು ನೋಡಬಹುದು. ನೀವು ಯಾರಿಗಾದರೂ ಒಂದು ಲೋಟ ನೀರು ಕೊಟ್ಟರೆ ಅವರು, "ಓಹ್, ನಿಮಗೆ ಬಹಳ ಧನ್ಯವಾದಗಳು!" ಎಂದು ಹೇಳುತ್ತಾರೆ. ಒಂದು ಲೋಟ ನೀರು ಕೊಟ್ಟಿದ್ದಕ್ಕಾಗಿ ಒಬ್ಬರಿಗೆ ’ಬಹಳ’ ಧನ್ಯವಾದ ನೀಡಲು ಏನಿದೆ? ನೀವು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಬಾಯಾರಿಕೆಯಿಂದ ಸಾಯುತ್ತಿಲ್ಲ. ಅಲ್ಲಿ ಯಾರಾದರೂ ನಿಮಗೆ ನೀರನ್ನು ಕೊಟ್ಟರೆ ನೀವು, "ನಿಮಗೆ ಬಹಳ ಧನ್ಯವಾದಗಳು! ನೀವು ನನ್ನ ಜೀವವನ್ನು ರಕ್ಷಿಸಿದಿರಿ" ಎಂದು ಹೇಳಬಹುದು. ಸಂಗತಿ ಹಾಗಿಲ್ಲ. ಅಲ್ಲವೇ? ನೀವು "ಧನ್ಯವಾದಗಳು" ಎಂದು ಹೇಳಬಾರದೆಂದು ನಾನು ಹೇಳುತ್ತಿಲ್ಲ. ನಿಮ್ಮ ಮಾತುಗಳು ಮತ್ತು ಭಾವನೆಗಳ ನಡುವೆ ಕಳಚಿ ಹೋಗಿರುವ ಕೊಂಡಿಯ ಕಡೆಗೆ ನಿಮ್ಮ ಗಮನ ಹರಿಸಿ ಎಂದು ನಾನು ಹೇಳುತ್ತಿರುವುದು. ಅಲ್ಲಿಯೇ ವಿಶ್ವಾಸಾರ್ಹತೆಯ ಕೊರತೆ ಉಂಟಾಗುವುದು. ನಾವು ನಮ್ಮ ಒಡನಾಟದಲ್ಲಿ ವಿಶ್ವಾಸಾರ್ಹವಾಗಿಲ್ಲದೇ ಇರುವಾಗ, ಜೀವನವು ಬಹಳ ಮಂಕಾಗುತ್ತದೆ, ಒಣಗುತ್ತದೆ ಹಾಗೂ ಬೇಸರಿಕೆಯನ್ನುಂಟುಮಾಡುತ್ತದೆ.
ನಿಮಗೆ ಜೀವನದಲ್ಲಿ ಏನು ಬೇಕು? ನಿಮ್ಮಲ್ಲಿ ಎಲ್ಲಾ ಸೌಕರ್ಯಗಳೂ ಇವೆ ಎಂದು ಕಲ್ಪಿಸಿಕೊಳ್ಳಿ; ಮಲಗಲೊಂದು ಒಳ್ಳೆಯ ಹಾಸಿಗೆ, ತಿನ್ನಲು ಒಳ್ಳೆಯ ಆಹಾರ, ಆದರೆ ಪ್ರೀತಿಯಿಲ್ಲ, ಆತ್ಮೀಯತಾ ಭಾವನೆಯಿಲ್ಲ, ನಿಮ್ಮ ಕಾಳಜಿ ವಹಿಸುವವರಿಲ್ಲ. ನೀವು ಹೇಗೆ ಜೀವಿಸುತ್ತಿದ್ದೀರಿ ಅಥವಾ ನಿಮಗೇನಾಗುತ್ತಿದೆಯೆಂದು ಕಾಳಜಿ ವಹಿಸುವವರಿಲ್ಲ. ನೀವು ಈ ಭೂಮಿಯ ಮೇಲೆ ಜೀವಿಸಲು ಬಯಸುವಿರಾ?
ಪ್ರೀತಿಯಿಲ್ಲದಿದ್ದರೆ, ಆತ್ಮೀಯತಾ ಭಾವನೆಯಿಲ್ಲದಿದ್ದರೆ, ಜೀವನಕ್ಕೆ ಯಾವುದೇ ಬೆಲೆಯಿಲ್ಲ. ಇದು ಮಾನವ ಜೀವನದ ಅಥವಾ ಹೇಳುವುದಿದ್ದರೆ ಯಾವುದೇ ಜೀವನದ ಗುಣವಾಗಿದೆ. ನಾಯಿಗಳು, ಬೆಕ್ಕುಗಳು, ಹಸುಗಳು ಮತ್ತು ಕುದುರೆಗಳಲ್ಲೂ ಕೂಡಾ ಆ ಭಾವನೆಯಿದೆ. ನಿಮ್ಮ ಮನೆಯಲ್ಲೊಂದು ಕುದುರೆಯಿದ್ದರೆ ಮತ್ತು ನೀವು ಒಂದು ತಿಂಗಳು ಅಲ್ಲಿಲ್ಲದೇ ಇದ್ದರೆ, ನೀವು ಹಿಂದಿರುಗುವಾಗ ಕುದುರೆಯು ತನ್ನ ಪ್ರೀತಿಯನ್ನು ವ್ಯಕ್ತ ಪಡಿಸುತ್ತದೆ, ಅಲ್ಲವೇ? ಮಾನವನಾಗಿರುವುದು ಎಂದರೆ ನಮ್ಮ ಭಾವನೆಗಳೊಂದಿಗೆ ಜೋಡಿರುವುದು.
ಅದರರ್ಥ, ನಾವು ಆರ್ಟ್ ಆಫ್ ಲಿವಿಂಗಿನಲ್ಲಿ ಕರೆಯುವಂತೆ ’ಬ್ಲೂ ಸ್ಟಾರ್’ ಆಗಿರಬೇಕೆಂದಲ್ಲ. ಒಬ್ಬ ’ಬ್ಲೂ ಸ್ಟಾರ್’ ಎಂದರೆ ಯಾರು ಬಹಳ ಏರು-ಪೇರಾಗಿರುತ್ತಾರೋ, ಬುದ್ಧಿವಂತಿಕೆಯಿಲ್ಲದೆ, ಭಾವನೆಗಳಿಗೆ ಬಹಳವಾಗಿ ಒಳಗಾಗಿರುತ್ತಾರೋ ಅವರು. ಅದು ಕೂಡಾ ಒಳ್ಳೆಯದಲ್ಲ. ನಮ್ಮಲ್ಲಿ ಭಾವನೆಗಳು ಮತ್ತು ಬುದ್ಧಿಯ ನಡುವೆ ಒಂದು ಸಮತೋಲನವಿರಬೇಕು. ವೈಯಕ್ತಿಕ ಮತ್ತು ಸಾಮಾಜಿಕ ಜೀವನಗಳ ನಡುವೆ ಒಂದು ಸಮತೋಲನವಿರಬೇಕು.
ಕೇವಲ ತಮ್ಮ ಬಗ್ಗೆ ಮಾತ್ರ ಚಿಂತಿಸುವ ಜನರಿದ್ದಾರೆ. ತಮ್ಮ ಬಗ್ಗೆ ಚಿಂತಿಸದೇ ಇರುವ ಇನ್ನು ಕೆಲವರಿದ್ದಾರೆ. ಅವರು ಯಂತ್ರಗಳಂತೆ ಕೆಲಸ ಮಾಡುತ್ತಾರೆ ಹಾಗೂ ಅದರಲ್ಲಿ ಮುಳುಗಿ ಹೋಗುತ್ತಾರೆ. ಅವರು, ಜೀವನದ ಉದ್ದೇಶವೇನು ಎಂಬುದರ ಕಡೆಗೆ ಮತ್ತು ಜೀವನದಿಂದ ತಮಗೇನು ಬೇಕು ಎಂಬುದರ ಕಡೆಗೆ ಕೂಡಾ ನೋಡುವುದಿಲ್ಲ.
ಜೀವನ ಕಲೆಯು ಇವುಗಳೆರಡರ ನಡುವಿನ ಒಂದು ಸಮತೋಲನ - ಖಾಸಗಿ ಜೀವನ ಮತ್ತು ಸಾಮಾಜಿಕ ಜೀವನ. ನೀವು ನಿಮ್ಮ ಬಗ್ಗೆ, ನಿಮ್ಮ ಮನಸ್ಸಿನ ಬಗ್ಗೆ, ನಿಮ್ಮ ಶರೀರದ ಬಗ್ಗೆ, ನಿಮ್ಮ ಭಾವನೆಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ನೀವು ನಿಮ್ಮ ಸಮಾಜದ ಬಗ್ಗೆ ಕೂಡಾ ಕಾಳಜಿ ತೆಗೆದುಕೊಳ್ಳಬೇಕು. ಸಮಾಜದ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಿ ಮತ್ತು ಅದೇ ಸಮಯದಲ್ಲಿ ನಿಮ್ಮ ವೈಯಕ್ತಿಕ ಬೆಳವಣಿಗೆ ಅಥವಾ ಸ್ವಂತ ಅಭಿವೃದ್ಧಿಯ ಕಡೆಗೆ ನಿರ್ಲಕ್ಷ್ಯ ಮಾಡಬೇಡಿ.
ಮನೆಯಲ್ಲಾಗಲೀ ಅಥವಾ ಶಾಲೆಯಲ್ಲಾಗಲೀ, ನಮ್ಮ ಕಂಪನಾಂಶ ಮತ್ತು ಭಾವನಾತ್ಮಕ ಅಂಶಗಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸುವುದು ಹಾಗೂ ನಮ್ಮ ಭಾವನೆಗಳನ್ನು ಶುದ್ಧವಾಗಿ, ಸ್ಪಷ್ಟವಾಗಿ, ಮೆತ್ತಗೆ, ಮೃದುವಾಗಿ, ಸಂತೋಷವಾಗಿರಿಸುವುದು ಹೇಗೆ ಎಂದು ಯಾರೂ ಕಲಿಸುವುದಿಲ್ಲ. ಸಂತೋಷವಾಗಿರುವುದು ಹೇಗೆ ಎಂದು ಯಾರೂ ಕಲಿಸುವುದಿಲ್ಲ. ಅದು ನಮ್ಮ ಸ್ವಭಾವವೆಂದು ನಾವು ತಿಳಿದುಕೊಂಡು ಬಿಡುತ್ತೇವೆ. ಅದು ನಮ್ಮ ಸ್ವಭಾವವೆಂಬುದರಲ್ಲಿ ಸಂಶಯವಿಲ್ಲ, ಆದರೆ ಎಲ್ಲೋ ನಾವು ಅದನ್ನು ಕಳೆದುಕೊಂಡಿದ್ದೇವೆ. ಅಲ್ಲವೇ? ನಾನು ಹೇಳುತ್ತೇನೆ; ಅದಕ್ಕೂ ಷೇರು ಮಾರುಕಟ್ಟೆಗೂ ಯಾವುದೇ ಸಂಬಂಧವಿಲ್ಲ. ನೀವು ಬಹಳ ಬಡದೇಶಗಳಾದ ಭೂತಾನ, ಬಾಂಗ್ಲಾದೇಶಗಳಿಗೆ ಹೋದರೆ, ಅಲ್ಲಿನ ಜನರು ಬಹಳ ಸಂತೋಷವಾಗಿರುವುದನ್ನು ನೋಡಬಹುದು.
ಇತ್ತೀಚೆಗೆ, ಸಂಯುಕ್ತ ರಾಷ್ಟ್ರಗಳಲ್ಲಿ (ಯು.ಎನ್.) ಭೂತಾನದ ಪ್ರಧಾನ ಮಂತ್ರಿಗಳು ’ದ ಜಿ.ಡಿ.ಹೆಚ್.’ (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್) ಎಂಬ ಒಂದು ವಿಚಾರಗೋಷ್ಠಿಯನ್ನು ಮಾಡಿದರು. ಇದು, ಸಂತೋಷವನ್ನು ತರುವುದು ಹೇಗೆ ಎಂಬುದರ ಬಗ್ಗೆಯಾಗಿತ್ತು. ಇವತ್ತು, ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಕಳೆದ ಮೂವತ್ತು ವರ್ಷಗಳಿಂದ ನಾವು ಇದರ ಬಗ್ಗೆ ಮಾತನಾಡುತ್ತಿದ್ದೇವೆ. ಕೊನೆಯಲ್ಲಿ, ಮೂವತ್ತು ದೀರ್ಘ ವರ್ಷಗಳು ಅಥವಾ ಇನ್ನೂ ಹೆಚ್ಚಿನ ಕಾಲದ ಬಳಿಕ ಪ್ರಪಂಚದ ನಾಯಕರು ಮಾನವ ಸಂತೋಷದ ಬಗ್ಗೆ ಗಮನ ಹರಿಸಲು ಶುರು ಮಾಡಿರುವುದರಿಂದ ನನಗೆ ಬಹಳ ಸಂತೋಷವಾಗಿದೆ.
ಐವತ್ತು ವರ್ಷಗಳ ಹಿಂದೆ, ಜನರ ಆರೋಗ್ಯದ ಬಗ್ಗೆ ಸರಕಾರಗಳು ಕಾಳಜಿ ವಹಿಸುತ್ತಿರಲಿಲ್ಲ. ನಂತರ, ಅವರು ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿದರು. ಆಮೇಲೆ ಅವರು ಮಾನಸಿಕ ಆರೋಗ್ಯವನ್ನು ಸೇರಿಸಿದರು. ಅದರ ನಂತರ, ಅವರು ಆಧ್ಯಾತ್ಮಿಕ ಆರೋಗ್ಯವನ್ನು ಸೇರಿಸಿದರು. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ಹತ್ತು ವರ್ಷಗಳ ಹಿಂದೆ ಸೇರಿಸಿತು. ಈಗ, ಪ್ರಪಂಚದಾದ್ಯಂತದ ಸರಕಾರಗಳು ’ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್’ (=ಒಟ್ಟು ಸಾಂಸಾರಿಕ ಸಂತೋಷ) ಬಗ್ಗೆ ಮಾತನಾಡುತ್ತಿವೆ. ನಾನಿಲ್ಲಿರುವುದರ ಉದ್ದೇಶವೆಂದರೆ, ಹಾಲೆಂಡಿನಲ್ಲಿ ಸಂತೋಷದ ಒಂದು ಅಲೆಯನ್ನು ಸೃಷ್ಟಿಸುವುದು.
ನಾನೆಲ್ಲೇ ಹೋದರೂ ಜನರನ್ನುತ್ತಾರೆ, "ಗುರೂಜಿ, ದಯವಿಟ್ಟು ಇಲ್ಲಿರಿ. ನಾವು ಜೊತೆಯಲ್ಲಿರುವಾಗ ನಮಗೆಲ್ಲರಿಗೂ ಸಂತೋಷವಾಗುತ್ತದೆ". ನಾನನ್ನುತ್ತೇನೆ, "ನಾನಿಲ್ಲಿ ಇಲ್ಲದಿರುವಾಗ ಸಂತೋಷವಾಗಿಲ್ಲದೇ ಇರಲು ಇದೊಂದು ಸಮಜಾಯಿಷಿಯಲ್ಲ". ನನಗೆ ಗೊತ್ತು, ನಾನು ಬಂದು ಸಂತೋಷದ ಒಂದು ಅಲೆಯನ್ನು ಸೃಷ್ಟಿಸುತ್ತೇನೆ ಹಾಗೂ ಈ ಅಲೆಗಳನ್ನು ಹೊತ್ತೊಯ್ದು ಅವುಗಳನ್ನು ಎಲ್ಲೆಡೆ ಹರಡುವುದು ನಿಮ್ಮ ಜವಾಬ್ದಾರಿ. ಜೀವನ ಕಲೆ ಶಿಬಿರವನ್ನು ಮಾಡಿದ ಜನರು ಅಷ್ಟೊಂದು ಪರಿವರ್ತನೆಯನ್ನು ಹೊಂದುತ್ತಾರೆ. ನಾವು ನಮಗಾಗಿ ಸ್ವಲ್ಪ ಸಮಯವನ್ನು ವ್ಯಯಿಸಬೇಕು ಮತ್ತು ಧ್ಯಾನ ಮಾಡಬೇಕು ಹಾಗೂ ನಂತರ ನಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
ಇಲ್ಲಿರುವ ಪ್ರತಿಯೊಬ್ಬರೂ ಮುಂದಾಳುತ್ವವನ್ನು ವಹಿಸಿ, ಮಾರ್ಗದರ್ಶಕರಾಗಬೇಕೆಂದು ನಾನು ಬಯಸುತ್ತೇನೆ. ಮೊದಲನೆಯದಾಗಿ, "ಜೀವನದಲ್ಲಿ ನನ್ನ ಉದ್ದೇಶವು ಜನರಲ್ಲಿ ಸಂತೋಷವನ್ನು ಸೃಷ್ಟಿಸುವುದು" ಎಂಬ ಸಂಕಲ್ಪವನ್ನು ತೆಗೆದುಕೊಳ್ಳಿ. "ನನಗೆ ಸಾಧ್ಯವಾಗುವ ಯಾವುದೇ ಚಿಕ್ಕ ರೀತಿಯಲ್ಲಾದರೂ ನಾನು ನನ್ನ ಕೊಡುಗೆಯನ್ನೀಯೋಣ". ನೀವು ನಿಮ್ಮ ಸಮಯವನ್ನು, ಸಂಪನ್ಮೂಲಗಳನ್ನು, ಸಾಮರ್ಥ್ಯವನ್ನು ಅಥವಾ ನಿಮ್ಮ ಯೋಚನೆಗೆ ಬರುವ ಬೇರೆ ಯಾವುದನ್ನಾದರೂ ಕೊಡುಗೆಯಾಗಿ ನೀಡಬಹುದು. ಸೃಜನಾತ್ಮಕ ಕಲ್ಪನೆಗಳೊಂದಿಗೆ ಬನ್ನಿ ಮತ್ತು ಈ ಸಮಾಜವನ್ನು ಹೆಚ್ಚು ಸಂತೋಷಮಯವಾಗಿಸಲು ನಾವು ಏನು ಮಾಡಬಹುದು ಎಂದು ನೋಡಿ.
ಹಿಂಸಾರಹಿತವಾದ ಪ್ರಪಂಚವನ್ನು ನೋಡುವುದು ನನ್ನ ಕನಸು. ಒಂದು ಹಿಂಸಾ-ರಹಿತ ಸಮಾಜ, ರೋಗ-ರಹಿತ ಶರೀರ, ಗೊಂದಲ-ರಹಿತ ಮನಸ್ಸು, ತಡೆ-ರಹಿತ ಬುದ್ಧಿ, ಆಘಾತ-ರಹಿತ ನೆನಪು ಮತ್ತು ಒಂದು ದುಃಖ-ರಹಿತ ಆತ್ಮ ಇದು ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು. ಜನರ ಮನಸ್ಸುಗಳಲ್ಲಿ ಬಹಳಷ್ಟು ತಡೆಗಳಿವೆ. ನಾವು ತಡೆಗಳನ್ನು ನಿವಾರಿಸಬೇಕು. ಯುರೋಪಿನ ೩೦% ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಮತ್ತು ದಿನದಿಂದ ದಿನಕ್ಕೆ ಆತ್ಮಹತ್ಯೆಯ ಪ್ರಮಾಣವು ಹೆಚ್ಚಾಗುತ್ತಿದೆ. ನಾವೆಲ್ಲರೂ ಇದರ ಬಗ್ಗೆ ಏನಾದರೂ ಮಾಡಬೇಡವೇ? ಅದಕ್ಕೇ ನಾನು ಹೇಳುವುದು, ನಾವು ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಕೆಲವು ಪ್ರಾಚೀನ ಜ್ಞಾನವನ್ನು ಕೂಡಾ ಜೊತೆಗೂಡಿಸಬೇಕು. ಪ್ರಾಚೀನ ದಿನಗಳಲ್ಲಿದ್ದ ಜನರು ಹಲವಾರು ವಿಷಯಗಳನ್ನು ಅರಿತಿದ್ದರು. ನಾವು ಎರಡನ್ನೂ ಜೋಡಿಸಬೇಕು; ಹಿಂದಿನ ತಲೆಮಾರಿನ ಕೆಲವು ವಿಷಯಗಳು ಮತ್ತು ಈಗಿನ ತಲೆಮಾರಿನ ಕೆಲವು ವಿಷಯಗಳು. ಜೊತೆಯಲ್ಲಿ, ಈ ಪ್ರಪಂಚವನ್ನು ಬದುಕಲು ಒಂದು ಉತ್ತಮ ಜಾಗವಾಗುವಂತೆ ನಾವು ಮಾಡಬಹುದು.
ತಂತ್ರಜ್ಞಾನವು, ಪ್ರಪಂಚವು ಒಂದು ಗ್ರಾಮವಾಗಿ ಕುಗ್ಗುವಂತೆ ಮಾಡಿದೆ. ಒಂದು ಕುಟುಂಬವನ್ನಾಗಿ ಮಾಡುವುದು ಮಾನವೀಯತೆ ಮತ್ತು ಆಧ್ಯಾತ್ಮ. ನಮ್ಮ ಕಲ್ಪನೆಯು ಒಂದು ಪ್ರಾಪಂಚಿಕ ಕುಟುಂಬ. ನಾವು ಒಂದು ಕುಟುಂಬದ ಭಾಗ. ನಾವೆಲ್ಲರೂ ಒಂದು ಕುಟುಂಬದ ಭಾಗವೆಂದು ನೀವು ಅಂದುಕೊಂಡ ಕ್ಷಣ, ನಿಮ್ಮಲ್ಲಿ ಹೇಗೆ ಭಾವನೆಯು ಏಳುತ್ತದೆಯೆಂಬುದನ್ನು ನೋಡಿ. ನಿಮ್ಮಲ್ಲಿ ಸತ್ಯತೆಯು ಬರುತ್ತದೆ. ನೀವು ಸಹಜವಾಗುತ್ತೀರಿ. ನೀವು ಎಲ್ಲರೊಂದಿಗೂ ಆರಾಮವಾಗಿ ಬೆರೆಯುವಿರಿ. ನಿಮಗೆ ಭಯವಾಗುವುದಿಲ್ಲ, "ಓಹ್, ಆ ವ್ಯಕ್ತಿಯು ನನ್ನ ಬಗ್ಗೆ ಏನೆಂದು ಯೋಚಿಸಬಹುದು?" "ಆ ವ್ಯಕ್ತಿಯು ನನ್ನನ್ನು ಹೇಗೆ ತೂಗಿ ನೋಡಬಹುದು?" ಈ ಎಲ್ಲಾ ಆಶಂಕೆಗಳು ಬಿದ್ದುಹೋಗುತ್ತವೆ. ಅಲ್ಲಿ ಬಚ್ಚಿಡಲು ಏನೂ ಇಲ್ಲ. ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ಅಥವಾ ಇತರರಿಂದ ಏನನ್ನಾದರೂ ಬಚ್ಚಿಡಬೇಕೆಂದು ನಿಮಗನಿಸುವುದಿಲ್ಲ, ಯಾಕೆಂದರೆ ಅವರು ನಿಮ್ಮ ಕುಟುಂಬದವರು ಎಂದು ನಿಮಗೆ ತಿಳಿದಿರುತ್ತದೆ. ನಮಗೆ ರಕ್ಷಣೆ ಬೇಕೆಂದು ನಾವು ಹೇಳುವಾಗ, ಅಲ್ಲಿ ಭಯವಿದೆಯೆಂದು ಅದರರ್ಥ. ಭಯವಿರುವುದು ಯಾಕೆಂದರೆ, ಅಲ್ಲಿ ಆತ್ಮೀಯತೆಯ ಭಾವನೆಯಿಲ್ಲದಿರುವುದರಿಂದ.
ಇರಾಕಿನ ಪ್ರಧಾನ ಮಂತ್ರಿಗಳು ನನ್ನನ್ನು ಆಮಂತ್ರಿಸಿದರು. ನಾನು ಅಲ್ಲಿಗೆ ಹೋದಾಗ, ಅವರು ನನ್ನ ಸುರಕ್ಷತೆಗಾಗಿ ಹನ್ನೆರಡು ವಾಹನಗಳನ್ನು ನೀಡಿದರು. ಇದು ಸುಮಾರು ನಾಲ್ಕರಿಂದ ಐದು ವರ್ಷಗಳ ಮೊದಲು. ಯುದ್ಧವು ಆಗಷ್ಟೇ ಮುಗಿದಿತ್ತು. ಎರಡು ಟ್ಯಾಂಕರುಗಳಿದ್ದವು ಮತ್ತು ಸಾಮಾನ್ಯವಾಗಿ ಅರ್ಧ ಗಂಟೆಯಲ್ಲಿ ಕ್ರಮಿಸಬಹುದಾದ ಒಂದು ದೂರವನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾದವು. ನಾನು ಉಳಕೊಂಡಿದ್ದ ಹೋಟೇಲು ಕಾವಲುಗಾರರಿಂದ ಸುತ್ತುವರಿಯಲ್ಪಟ್ಟಿತ್ತು. ಅದು ಹಸಿರು ವಲಯವಾಗಿತ್ತು. ಅಲ್ಲಿ ಮೂರು ವಲಯಗಳಿದ್ದವು - ಹಸಿರು ವಲಯ, ಹಳದಿ ವಲಯ ಮತ್ತು ಕೆಂಪು ವಲಯ. ನಾನು ಭದ್ರತೆಯ ಬೇಲಿಯಲ್ಲಿರಲು ಇಲ್ಲಿಗೆ ಬಂದಿಲ್ಲವೆಂದು ಅಲ್ಲಿನ ಮಂತ್ರಿಗಳಿಗೆ ಹೇಳಿದೆ. ನಾನು ಹೋಗಿ ಜನರನ್ನು ಭೇಟಿಯಾಗಲು ಬಯಸುತ್ತೇನೆ. ಅವರಂದರು, "ಓಹ್, ಅದೊಂದು ಕೆಂಪು ವಲಯ; ನೀವಲ್ಲಿಗೆ ಹೋಗಲು ಸಾಧ್ಯವಿಲ್ಲ. ನೀವೊಬ್ಬರು ಪ್ರಮುಖವಾದ ವ್ಯಕ್ತಿ ಹಾಗೂ ಭಾರತದಿಂದ ಬಂದ ಅತಿಥಿ. ಅಲ್ಲಿಗೆ ಹೋಗಲು ನಿಮಗೆ ನಾವು ಅನುಮತಿ ನೀಡಲು ಸಾಧ್ಯವಿಲ್ಲ". ನಾನಂದೆ, "ನನಗೆ ನನ್ನ ಸ್ವಂತ ಭದ್ರತೆ ಇದೆ. ದಯವಿಟ್ಟು ನನ್ನನ್ನು ಹೋಗಲು ಬಿಡಿ" ಹಾಗೂ ಅಲ್ಲಿಗೆ ಹೋಗುವಂತೆ ನಾನು ಪಟ್ಟು ಹಿಡಿದೆ. ಮಾತನಾಡಲು ಬಯಸದೆ ಇರುವವರ ಜೊತೆ ಸಂಪರ್ಕಿಸಲು ನಾನು ಬಯಸಿದ್ದೆ. ಸರಕಾರವು ಬಹಳ ಆತಂಕಗೊಂಡಿತ್ತು ಆದರೆ ಒಬ್ಬ ಅತಿಥಿಯ ವಿನಂತಿಯನ್ನು ತಳ್ಳಿಹಾಕಲು ಅವರಿಗೆ ಸಾಧ್ಯವಾಗಲಿಲ್ಲ. ಆದುದರಿಂದ, ನಾನು ಅಲ್ಲಿಗೆ ಹೋಗಿ ಜನರನ್ನು ಭೇಟಿಯಾದೆ. ಮೊದಮೊದಲು ಜನರಲ್ಲಿ ಬಹಳಷ್ಟು ಕ್ರೋಧವಿತ್ತು. ನಾನು ಆದಿವಾಸಿ ಮುಖಂಡರನ್ನು ಭೇಟಿಯಾದೆ. ಶಿಯಾ ಮಂಡಳಿಯು ನನಗಾಗಿ ಒಂದು ಸತ್ಕಾರಕೂಟವನ್ನು ಆಯೋಜಿಸಿತು. ಅವರು ಬಹಳ ಕೃತಜ್ಞರಾಗಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರಿತ್ತು. ಅವರಂದರು, "ಗುರೂಜಿ, ಇದು ನಿಮ್ಮ ಎರಡನೆಯ ಮನೆ. ದಯವಿಟ್ಟು ನಮ್ಮ ಬಳಿಗೆ ತಿರುಗಿ ಬನ್ನಿ. ನಮ್ಮನ್ನು ಬಿಟ್ಟುಬಿಡಬೇಡಿ". ಅವರು ನನ್ನ ಭಾಷೆಯನ್ನು ಮಾತನಾಡುವುದಿಲ್ಲ, ನನ್ನ ಧರ್ಮಕ್ಕೆ ಸೇರಿದವರೂ ಅಲ್ಲ, ಆದರೆ ಅಲ್ಲಿ ಅಷ್ಟೊಂದು ಕಾಳಜಿ, ಪ್ರೀತಿ ಮತ್ತು ಆತ್ಮೀಯತೆಯ ಭಾವನೆಗಳಿದ್ದವು. ನಂತರ, ಇರಾಕಿನ ಪ್ರಧಾನ ಮಂತ್ರಿಗಳು, ಶಾಂತಿ ದೂತರಾಗುವ ತರಬೇತಿ ಪಡೆಯಲು ಐವತ್ತು ಯುವಜನರನ್ನು ಭಾರತಕ್ಕೆ ಕಳುಹಿಸಿದರು.
ಈ ಐವತ್ತು ಯುವಕರು ಬೆಂಗಳೂರಿಗೆ ಬಂದಿಳಿದರು. ಅವರು ಇಂಗ್ಲೀಷಿನ ಒಂದು ಶಬ್ದವನ್ನೂ ಮಾತನಾಡುವುದಿಲ್ಲ. ಅವರಿಗಾಗಿ ನಮ್ಮಲ್ಲಿ ಒಬ್ಬರು ಅನುವಾದಕರಿದ್ದರು. ಈ ಯುವಕರು ರಾತ್ರಿ ಬಹಳ ಹೊತ್ತಿನವರೆಗೆ ಎಚ್ಚರವಿರುತ್ತಿದ್ದರು ಹಾಗೂ ಯಾವುದೇ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಅವರು ತಮ್ಮೊಳಗೆ ಜಗಳವಾಡುತ್ತಿದ್ದರು.
ಆಶ್ರಮವು ಬಹಳ ಶಾಂತವಾಗಿರುತ್ತದೆ. ಅಲ್ಲಿನ ಜನರು ಇಂತಹ ಒಂದು ದೃಶ್ಯವನ್ನು ನೋಡಿರಲಿಲ್ಲ. ಅದು ಬಹಳ ಕಠಿಣವಾಗಿತ್ತು. ಅವರು ಬಹಳ ಮಾಂಸವನ್ನು ಕೂಡಾ ತಿನ್ನುತ್ತಾರೆ ಹಾಗೂ ಆಶ್ರಮದಲ್ಲಿ ನಾವು ಕೇವಲ ಸಸ್ಯಾಹಾರ ಮತ್ತು ಆರೋಗ್ಯಕರವಾದ ಆಹಾರವನ್ನು ಮಾತ್ರ ನೀಡುತ್ತೇವೆ. ಆದುದರಿಂದ, ಮೊದಲನೆಯ ದಿನವು ಕಷ್ಟಕರವಾಗಿತ್ತು. ಎರಡನೆಯ ದಿನವು ಅದಕ್ಕಿಂತ ಹೆಚ್ಚು ಕಷ್ಟಕರವಾಗಿತ್ತು. ಮೂರನೆಯ ದಿನವು ಸಹಿಸಲಸಾಧ್ಯವಾಗಿತ್ತು. ಅವರು ಓಡಿಹೋಗಲು ಬಯಸಿದರು. ನಾನು ಅವರೊಂದಿಗೆ ಮಾತನಾಡಿದೆ ಮತ್ತು ಹೇಗೋ ಅವರು ಉಳಕೊಂಡರು. ನಾಲ್ಕನೆಯ ದಿನ, ಬದಲಾವಣೆಯಾಯಿತು.
ಈ ಯುವಕರು ಮರಳಿ ಹೋದರು ಹಾಗೂ ಅವರಲ್ಲೊಬ್ಬನು ಸಚಿವಾಲಯದಲ್ಲಿ ಪ್ರಧಾನ ಮಂತ್ರಿಗೆ ಸಹಾಯ ಮಾಡುತ್ತಿದ್ದಾನೆಂದು ತಿಳಿಸಲು ನನಗೆ ಇವತ್ತು ಸಂತೋಷವಾಗುತ್ತಿದೆ. ಈ ಜನರು ನಗುವಿನಿಂದ ತುಂಬಿಹೋಗಿದ್ದಾರೆ. ಪ್ರಧಾನ ಮಂತ್ರಿಗಳು ನನ್ನಲ್ಲಿ ಕೇಳಿದರು, "ನೀವು ಅವರಿಗೆ ಏನು ಮಾಡಿದಿರಿ? ಒತ್ತಡದ ಪರಿಸ್ಥಿತಿಗಳ ನಡುವೆಯೂ ಅವರು ಎಲ್ಲಾ ಸಮಯದಲ್ಲೂ ನಗು ನಗುತ್ತಿರುತ್ತಾರೆ ಹಾಗೂ ಅಷ್ಟೊಂದು ಉತ್ಸಾಹದಿಂದ ತುಂಬಿಹೋಗಿದ್ದಾರೆ".
ಈ ಮುಂದಾಳುಗಳು ಶಾಂತಿದೂತರಾಗಿ ಹಿಂದಿರುಗಿದರು ಹಾಗೂ ಸಾವಿರಾರು ಜನರಿಗೆ, ಶಾಂತವಾಗಿರುವುದು ಹೇಗೆ, ತಮ್ಮೊಂದಿಗೆ ಮತ್ತು ಇತರರೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳುವುದು ಹೇಗೆ, ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಸಲು ಪ್ರಾರಂಭಿಸಿದರು. ಖಂಡಿತಾ, ಇದು ಸಾಗರದಲ್ಲಿ ಕೇವಲ ಒಂದು ಹನಿಯಷ್ಟೆ; ಎಲ್ಲವೂ ಪರಿವರ್ತನೆಯಾಯಿತೆಂದು ಹೇಳಲು ನನಗೆ ಸಾಧ್ಯವಿಲ್ಲ. ಇವತ್ತು ಕೂಡಾ ಇರಾಕಿನಲ್ಲಿ ಬಾಂಬ್ ಸ್ಫೋಟಗಳು ಆಗುತ್ತಿವೆ. ಇದು ಇಡಿಯ ಇರಾಕನ್ನು ಸಂಪೂರ್ಣವಾಗಿ ಪರಿವರ್ತನೆಗೊಳಿಸಿಲ್ಲ ಆದರೆ ಇದು, ಅಲ್ಲದಿದ್ದರೆ ಶಾಂತರಾಗಿರುವುದು ಹೇಗೆಂದು ತಿಳಿಯದೇ ಇದ್ದ ಅದೇ ಯುವಕರಲ್ಲಿ ಕೆಲವು ಮಹತ್ವಪೂರ್ಣ ಬದಲಾವಣೆಗಳನ್ನು ತಂದಿದೆ.
ಆದುದರಿಂದ, ಪ್ರಪಂಚಕ್ಕೆ ಈ ಜ್ಞಾನದ ಅಗತ್ಯವಿದೆಯೆಂದು ನನಗನ್ನಿಸುತ್ತದೆ - ತನ್ನೊಂದಿಗಿನ ಸಂಬಂಧವನ್ನು ಹಾಗೂ ಇತರರೊಂದಿಗಿನ ಸಂಬಂಧವನ್ನು ಉತ್ತಮಗೊಳಿಸುವುದು ಹೇಗೆಂಬುದು. ನಿಮಗೇನನ್ನಿಸುತ್ತದೆ?
ಪ್ರೀತಿಯೆಂಬುದು ಜೀವನದ ಸಾರ, ಜೀವನದ ಗುರಿ ಹಾಗೂ ಜೀವನದ ಆರಂಭ ಕೂಡಾ. ಜೀವನವು ಪ್ರೀತಿಯಿಂದಾಗಿ ಶುರುವಾಯಿತು, ಜೀವನವು ಪ್ರೀತಿಯಿಂದಾಗಿ ಉಳಕೊಂಡಿದೆ. ಪ್ರೀತಿಯಿಲ್ಲದಿದ್ದರೆ, ಯಾರಿಗೂ ಉಳಿಯಲು ಸಾಧ್ಯವಿಲ್ಲ. ನೋಡಿ, ನೀವು ಒಂದು ಮಗುವಾಗಿದ್ದಾಗ, ನೀವು ಸ್ವಂತಂತ್ರವಾಗಿರಲಿಲ್ಲ. ಪ್ರತಿಯೊಂದು ಮಗುವೂ ಅವಲಂಬಿಯಾಗಿರುತ್ತದೆ, ಆದರೆ ಅವಲಂಬಿಯೆಂದು ನಿಮಗನ್ನಿಸಲಿಲ್ಲ ಯಾಕೆಂದರೆ ಅಲ್ಲಿ ನಿಮ್ಮ ತಾಯಿಯ ಪ್ರೀತಿಯಿತ್ತು. ಅದು ನೀವು ಅವಳ ಭಾಗವಾಗಿರುವಂತೆ ಮಾಡುತ್ತದೆ. ನೀವು ಬೆಳೆದಾಗ, ನೀವು ಜೀವನದಲ್ಲಿ ಪ್ರೀತಿಯನ್ನು ಹುಡುಕುತ್ತೀರಿ. ನೀವು ಅದನ್ನು ಸಂಬಂಧಗಳಲ್ಲಿ ಹುಡುಕುತ್ತೀರಿ, ನಿಮ್ಮ ಮಕ್ಕಳಲ್ಲಿ ಹುಡುಕುತ್ತೀರಿ, ನಿಮ್ಮ ಹಿರಿಯರಲ್ಲಿ ಹುಡುಕುತ್ತೀರಿ; ಎಲ್ಲೆಡೆಗಳಲ್ಲಿಯೂ. ನಿಮಗೆ ವಯಸ್ಸಾದಾಗ ಕೂಡಾ ನೀವು ನಿರಾವಲಂಬಿಯಾಗಿರಲಾರಿರಿ, ಯಾರಾದರೂ ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ ಮತ್ತು ಅಲ್ಲಿ ಸಾಕಷ್ಟು ಪ್ರೀತಿಯಿದೆ. ನೀವು ವಸ್ತು ದೃಷ್ಟಿಕೋನದಾಚೆಯಿಂದ ನೋಡಿದಾಗ, ಇದನ್ನು ಎಲ್ಲರಿಗೂ ತರುವ ಒಂದು ಆಧ್ಯಾತ್ಮಿಕ ಶಕ್ತಿಯಿರುವುದು; ಒಂದು ಚೈತನ್ಯವಿರುವುದು ನಿಮಗೆ ಕಾಣಿಸುತ್ತದೆ. ಅದೇ ಶಕ್ತಿ; ನೀವದನ್ನು ಹೇಗೆ ಬೇಕಾದರೂ ಕರೆಯಿರಿ; ಒಬ್ಬನ ಅಥವಾ ಇನ್ನೊಬ್ಬನ ಮೂಲಕ, ನಾವು ಪ್ರೀತಿ ಅಥವಾ ಕಾಳಜಿ ಎಂದು ಕರೆಯುವ ಈ ಸುಂದರವಾದ ಕಂಪನವನ್ನು ನಿಮಗೆ ತರುತ್ತದೆ. ನಾವು ಅದರಿಂದ ಮಾಡಲ್ಪಟ್ಟಿದ್ದೇವೆ. ನಾವು ಜೀವನದಲ್ಲಿ ಯಾವುದನ್ನು ಹುಡುಕುತ್ತಿದ್ದೇವೆಯೋ ಆ ವಸ್ತುವಿನಿಂದ ನಾವು ಮಾಡಲ್ಪಟ್ಟಿದ್ದೇವೆ. ಧ್ಯಾನವೆಂದರೆ, ನಾವೆಲ್ಲರೂ ಯಾವುದರಿಂದ ಬಂದಿದ್ದೇವೆಯೋ ಅದರಲ್ಲಿ ವಿಶ್ರಾಮ ಮಾಡುವುದು ಅಥವಾ ವಿಶ್ರಾಂತಿ ಪಡೆಯುವುದು. ಅದು ನಮ್ಮ ಮೂಲಸ್ಥಾನಕ್ಕೆ ತಿರುಗಿ ಬರುವುದು. ಅಷ್ಟೇ! ಯಾವ ಮೂಲದಿಂದ ಈ ಸಂಪೂರ್ಣ ಸೃಷ್ಟಿಯು ಜಿಗಿದು ಬಂತೋ ಅದು ಅಳೆಯಲು ಸಾಧ್ಯವಿಲ್ಲದುದು, ಅನಂತವಾದುದು, ಬಹಳ ಸುಂದರವಾದುದು ಹಾಗೂ ಅಗಾಧವಾದುದು. ಅದು ಏನೆಂದು ವಿವರಿಸಲು ಕೂಡಾ ನನಗೆ ಸಾಧ್ಯವಿಲ್ಲ.
ನಾವು ಪ್ರೀತಿಯ ಬಗ್ಗೆ ಅಧಿಕವಾಗಿ ಮಾತನಾಡಬಾರದು ಯಾಕೆಂದರೆ ಅದು ವ್ಯಕ್ತಪಡಿಸಲು ಸಾಧ್ಯವಿಲ್ಲದುದು, ನಿಜವಾಗಿ! ನನಗೆ ಆಸಕ್ತಿದಾಯಕವಾಗಿ ಕಾಣುವ, ನನ್ನ ವೀಕ್ಷಣೆಯಲ್ಲೊಂದು ಏನೆಂದರೆ, ಪೂರ್ವದಲ್ಲಿ ಪ್ರೀತಿಯನ್ನು ಅಷ್ಟೊಂದು ವ್ಯಕ್ತಪಡಿಸುವುದಿಲ್ಲ. ಅವರಿಗೆ ಪ್ರೀತಿಯಿರುತ್ತದೆ ಆದರೆ ಅದನ್ನು ವ್ಯಕ್ತಪಡಿಸುವುದಿಲ್ಲ. ಯಾರಿಗಾದರೂ, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಲು ಅವರಿಗೆ ನಾಚಿಕೆಯಾಗುತ್ತದೆ. ಅವರು ಬಹಳ ನಾಚಿಕೊಳ್ಳುತ್ತಾರೆ ಮತ್ತು ಸಾಧಾರಣವಾಗಿ ಈ ಶಬ್ದಗಳನ್ನು ಹೇಳುವುದಿಲ್ಲ.
ನನ್ನ ತಾಯಿಯು ನನ್ನನ್ನು ಬಹಳ ಪ್ರೀತಿಸಿದರು ಎಂದು ನನಗೆ ತಿಳಿದಿದೆ ಮತ್ತು ನಾನು ಅವರನ್ನು ಪ್ರೀತಿಸಿದೆ. ಆದರೆ ಒಂದು ಸಲವೂ ಅವರು ನನಗೆ, "ಓಹ್, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಲಿಲ್ಲ ಮತ್ತು ನಾನೂ ಅವರಿಗೆ ಹೇಳಲಿಲ್ಲ. ನಾವು ಈ ಶಬ್ದಗಳನ್ನು ಹೇಳಲೇ ಇಲ್ಲ. ಸಾಧಾರಣವಾಗಿ ಭಾರತದಲ್ಲಿ ನಾವು, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂಬ ಶಬ್ದಗಳನ್ನು ಹೇಳುವುದಿಲ್ಲ; ನಾವು ಹೇಳುವುದೇ ಇಲ್ಲ. ಗಂಡ ಮತ್ತು ಹೆಂಡತಿಯ ನಡುವೆ ಕೂಡಾ, ನಾವು ಭಾವನೆಗಳನ್ನು ಶಬ್ದಗಳಾಗಿ ಮಾಡಿ ತೋರಿಸುವುದಿಲ್ಲ. ಅದೇ ಸಮಯದಲ್ಲಿ ಅಮೇರಿಕಾದಲ್ಲಿ, ಇದು ತದ್ವಿರುದ್ಧವಾಗಿದೆ. ಒಬ್ಬರು ಕುಳಿತಿದ್ದರೂ ಅಥವಾ ನಿಂತಿದ್ದರೂ ಅವರು, "ಓಹ್, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ ಡಿಯರ್", "ಓಹ್ ನನ್ನ ಹನೀ, ನಾನು ನಿನ್ನನ್ನು ಪ್ರೀತಿಸುತ್ತೇನೆ ಹನೀ" ಎಂದು ಹೇಳುತ್ತಾ ಇರುತ್ತಾರೆ. ಬೆಳಗ್ಗಿನ ಚಹಾದಿಂದ ಹಿಡಿದು, ನೀವು ಮಲಗಲು ಹೋಗುವ ವರೆಗೆ ಅದನ್ನು ಲಕ್ಷ ಸಾರಿ ಪುನರುಚ್ಛರಿಸುತ್ತಾ ಇರುತ್ತೀರಿ.
ನನಗನಿಸುತ್ತದೆ ಅಲ್ಲೆಲ್ಲೋ ಒಂದು ಮಧ್ಯ ದಾರಿಯಿರಬೇಕು. ನೋಡಿ, ಭಾರತದಲ್ಲಿ, ಹಳ್ಳಿಗಳಲ್ಲಿ, ಜನರು ಪ್ರೀತಿಸುತ್ತಿರಬಹುದು ಆದರೆ ಅವರು ಯಾವತ್ತೂ ಅದನ್ನು ಹೇಳುವುದಿಲ್ಲ, ಅವರು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದಿಲ್ಲ. ಪ್ರೀತಿಯೆಂಬುದು ನೆಲದಲ್ಲಿ ಬಿತ್ತಿದ ಒಂದು ಬೀಜದಂತಿರಬೇಕು. ಆದರೆ ನೀವು ಅದನ್ನು ತುಂಬಾ ಆಳದಲ್ಲಿ ಬಿತ್ತಿದರೆ, ಅದು ಮೊಳಕೆಯೊಡೆಯಲಾರದು ಮತ್ತು ನೀವದನ್ನು ಮಣ್ಣಿನ ಮೇಲ್ಮೈಯಲ್ಲಿ ಇಟ್ಟರೆ, ಆಗಲೂ ಅದು ಮೊಳಕೆಯೊಡೆಯಲಾರದು, ಅದಕ್ಕೆ ಬೇರುಗಳು ಬರಲಾರವು.
ಅದು ಅಮೇರಿಕಾದಲ್ಲಿರುವಂತೆಯೂ ಇರಬಾರದು, ದೂರಪ್ರಾಚ್ಯದಲ್ಲಿರುವಂತೆಯೂ ಇರಬಾರದು. ಆದರೆ ಎಲ್ಲೋ ನಡುವೆ ಇರಬೇಕು. ಅದು ಒಳ್ಳೆಯದು. ಆದುದರಿಂದ ನೀವು ವ್ಯಕ್ತಪಡಿಸಿ, ಆದರೆ ನೀವು ನಿಮ್ಮ ಸಂಗಾತಿಯನ್ನು ಮೊದ ಮೊದಲು "ಹನೀ, ಹನೀ, ಹನೀ" ಎಂದು ಕರೆದು ನಂತರ ಸಿಹಿಮೂತ್ರ ಬರಿಸುವಷ್ಟು ಹೆಚ್ಚು ವ್ಯಕ್ತಪಡಿಸಬಾರದು. ನೀವು, "ನಾನು ನಿನ್ನನ್ನು ಬಿಟ್ಟು ಜೀವಿಸಿರಲಾರೆ" ಎಂದು ಶುರು ಮಾಡುತ್ತೀರಿ ಮತ್ತು ನಂತರ, "ನಾನು ನಿನ್ನನ್ನು ಸಹಿಸಲಾರೆ" ಎಂದು ಹೇಳುತ್ತೀರಿ. ಇದು ಅನೇಕವೇಳೆ ಆಗುತ್ತದೆ. ಆದುದರಿಂದ ನಾವೊಂದು ನಡುಮಾರ್ಗವನ್ನು ಬಳಸಬೇಕೆಂದು ನನಗನ್ನಿಸುತ್ತದೆ. ಸ್ವಲ್ಪ ವ್ಯಕ್ತಪಡಿಸಿ ಆದರೆ ಬಹಳವಾಗಿಯಲ್ಲ.
ಅದೇ ಸಮಯದಲ್ಲಿ, ಬೇಡಿಕೆಯು ಪ್ರೀತಿಯನ್ನು ನಾಶಗೊಳಿಸುತ್ತದೆ. ಬೇಡಿಕೆಯನ್ನಿಡಬೇಡಿ. ಸಾಧಾರಣವಾಗಿ ಸಂಗಾತಿಗಳು ಕೇಳುತ್ತಾರೆ, "ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತೀಯಾ?" ಅವರು ಇದನ್ನು ಪರಸ್ಪರರಿಗೆ ಕೇಳುತ್ತಾ ಇರುತ್ತಾರೆ. "ನೀನು ಈ ದಿನಗಳಲ್ಲಿ ನನ್ನನ್ನು ಪ್ರೀತಿಸುತ್ತಿಲ್ಲ. ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತೀಯಾ?" ನೀವು ಈ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದಾಗ, ಅವರಿಗೆ ನಿಮ್ಮ ಮೇಲೆ ಸ್ವಲ್ಪ ಪ್ರೀತಿಯಿದ್ದರೆ, ಅದು ಕೂಡಾ ಹೊರಟು ಹೋಗುತ್ತದೆ. "ಓಹ್ ದೇವರೇ, ಈ ವ್ಯಕ್ತಿಯನ್ನು ನಾನು ನಿಜವಾಗಿ ಪ್ರೀತಿಸುತ್ತೇನೆಂದು ನಾನು ಅವರಿಗೆ ಸಾಬೀತುಪಡಿಸಬೇಕು". ತಮಗೆ ನಿಮ್ಮ ಬಗ್ಗೆಯಿರುವ ಭಾವನೆಗಳನ್ನು ಸಾಬೀತುಪಡಿಸುವುದು ಒಬ್ಬರಿಗೆ ಬಹಳ ದೊಡ್ಡ ಹೊರೆಯಾಗುತ್ತದೆ ಯಾಕೆಂದರೆ, ಭಾವನೆಗಳು ವ್ಯಕ್ತಪಡಿಸಲು ಸಾಧ್ಯವಿಲ್ಲದಂತಹವು. ನೀವು ಹೇಗೆಯೇ ವ್ಯಕ್ತಪಡಿಸಿದರೂ, ಆಗಲೂ ಅದು ಅವ್ಯಕ್ತವಾಗಿಯೇ ಉಳಿಯುತ್ತದೆ. ಮೊದಲೇ ಒಬ್ಬ ವ್ಯಕ್ತಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುತ್ತಿರುತ್ತದೆ ಮತ್ತು ಅದರ ಮೇಲೆ, ಅದನ್ನು ವ್ಯಕ್ತಪಡಿಸಬೇಕೆಂದು ನೀವು ಬೇಡಿಕೆಯನ್ನೊಡ್ಡುತ್ತೀರಿ. ಆಗ ಅವರು ಯೋಚಿಸಲು ಶುರು ಮಾಡುತ್ತಾರೆ, "ಓಹ್ ದೇವರೇ, ಇದೊಂದು ದೊಡ್ಡ ತಲೆನೋವು". ಹಲವಾರು ಸಂಬಂಧಗಳು ಮುರಿದು ಬೀಳುವುದು ಹಾಗೂ ಸ್ವಲ್ಪ ನಂತರ ಸೋತು ಹೋಗುವುದು ಹೀಗೆಯೇ. ನಾನು ನಿಮಗೆ ಅನುಸರಿಸಲು ಒಂದು ಸುಂದರವಾದ ತಂತ್ರವನ್ನು ಕೊಡುತ್ತೇನೆ - ಒಬ್ಬರಿಗೆ ನಿಮ್ಮ ಮೇಲಿರುವ ಪ್ರೀತಿಯು ಕಡಿಮೆಯಾಗುತ್ತಿರುವುದು ನಿಮಗೆ ತಿಳಿದರೆ, ನೀವು ಅವರನ್ನು ಕೇಳಬೇಕು, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುತ್ತೀಯಾ? ನನಗೆ ನಿಜವಾಗಿ ಅದರ ಅರ್ಹತೆಯಿಲ್ಲ, ನೀನು ನನ್ನನ್ನು ಬಹಳ ಪ್ರೀತಿಸುತ್ತಿ!" ಆಗ ಅವರು ಹೆಚ್ಚು ಎತ್ತರಕ್ಕೇರಿದ ಅನುಭವ ಹೊಂದುತ್ತಾರೆ ಮತ್ತು ಹೆಚ್ಚು ಸಂತೋಷಗೊಳ್ಳುತ್ತಾರೆ.
ನೀವು ತೃಪ್ತರಾಗಿದ್ದರೆ ಜನರು ನಿಮ್ಮೊಂದಿಗಿರಲು ಇಷ್ಟಪಡುತ್ತಾರೆ. ನೀವು ಹತಾಶರಾಗಿದ್ದರೆ ಅಥವಾ ಕೊರತೆಯನ್ನನುಭವಿಸುತ್ತಿದ್ದರೆ, ಜನರು ನಿಮ್ಮಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ. ಇದು ನನ್ನ ವೀಕ್ಷಣೆ, ನಿಮಗೇನನ್ನಿಸುತ್ತದೆ?
ಹಾಗಾದರೆ, ನಾನು ನೀವು ಹೇಳಿದ ಎಲ್ಲಾ ವಿಷಯಗಳನ್ನು ಸಂಬೋಧಿಸಿದ್ದೇನೆಯೇ? ಏನಾದರೂ ಬಾಕಿಯಾಗಿದೆಯೇ? ಯಾವುದಕ್ಕಾದರೂ ಗಮನ ಕೊಡಲಿಲ್ಲವೇ?
(ಸಭಿಕರು: ಮೌನ)
ಹಾಗಿದ್ದರೆ ನಾವು ಎಲ್ಲ ವಿಷಯವನ್ನೂ ಮಾತನಾಡಿದೆವು, ಸರಿ!
ಪ್ರಶ್ನೆ: ಈ ತಡೆಯು ಬರುವುದು ಎಲ್ಲಿಂದ?
ಶ್ರೀ ಶ್ರೀ ರವಿಶಂಕರ್: ಒಂದು ರೀತಿಯ ಅಸುರಕ್ಷತೆ, ಒಂದು ರೀತಿಯ ಅಹಿತ ಅಥವಾ ಭೂತಕಾಲದ ನೆನಪು. ಆದುದರಿಂದ ನೀವು ತಡೆಯನ್ನು ಗಮನಿಸಿದಾಗ, ಅದರ ಮೂಲಕ ಹಾದು ಹೋಗುವ ಸಂಕಲ್ಪವನ್ನು ತೆಗೆದುಕೊಳ್ಳಿ. ನೋಡಿ, ಅತ್ಯಂತ ಕೆಟ್ಟ ಸಂಗತಿಯೆಂದರೆ, ತಡೆಯನ್ನು ನೀವು ಗಮನಿಸದೆ ಮತ್ತು ಗುರುತಿಸದೆ ಇರುವುದು. ಒಮ್ಮೆ ನೀವು ಅದನ್ನು ಗಮನಿಸಿದರೆ ಮತ್ತು ಗುರುತಿಸಿದರೆ, ನೀವು ಖಂಡಿತವಾಗಿ ಅದರ ಮೂಲಕ ಹಾದುಹೋಗುವಿರಿ. ನೀವು ಬುದ್ಧಿವಂತರಲ್ಲವೆಂದು ಯೋಚಿಸಬೇಡಿ. ನಿಮ್ಮಲ್ಲಿ ಸಾಕಷ್ಟು ಬುದ್ಧಿವಂತಿಕೆಯಿದೆ. ನಿಮಗೆ ಸ್ವಲ್ಪ ಒತ್ತಾಯದ ಅಗತ್ಯವಿದೆ ಮತ್ತು ಅದಕ್ಕಾಗಿಯೇ ನಾನು ಸುತ್ತಲೂ ಸಂಚರಿಸುತ್ತಾ ಇರುವುದು. ನಿಮಗೊಂದು ಬೆಂಬಲದ ಗುಂಪು ಬೇಕು. ಹೇಗೆಂದರೆ, ಮದ್ಯಪಾನವು ಕೆಟ್ಟದೆಂದು ಹಲವರಿಗೆ ತಿಳಿದಿದ್ದರೂ ಅವರು ಅದರೊಳಗೆ ಬೀಳುತ್ತಾರೆ ಮತ್ತು ಅದಕ್ಕಾಗಿ ಈ ಎ.ಎ.(ಅಲ್ಕೊಹಾಲಿಕ್ಸ್ ಅನಾನಿಮಸ್) ಗ್ರೂಪ್ ಎಂಬುದೊಂದಿದೆ. ಅಲ್ಲಿ ಜನರು ಅವರಿಗೆ ಅಗತ್ಯವಾದ ಆ ಸ್ವಲ್ಪ ಬೆಂಬಲವನ್ನು ನೀಡುತ್ತಾರೆ.
ಆದುದರಿಂದ, ಎಲ್ಲೆಡೆಗಳಲ್ಲಿ ನಮ್ಮ ಸುದರ್ಶನ ಕ್ರಿಯೆ ಗುಂಪಿದೆ. ಈ ಗುಂಪು ಯಾಕಿದೆಯೆಂದರೆ, ಅಭ್ಯಾಸಗಳನ್ನು ಒಂಟಿಯಾಗಿ ಮಾಡಲು ನಿಮಗೆ ಉದಾಸೀನವಾಗುವುದಿದ್ದರೆ, ನೀವದನ್ನು ಒಂದು ಗುಂಪಿನಲ್ಲಿ ಮಾಡಬಹುದು ಹಾಗೂ ಇದು ಸಹಾಯಕವಾಗುತ್ತದೆ. ಅದೇ ರೀತಿ ವ್ಯಾಯಾಮ ಕೂಡಾ; ಜಿಮ್ ಇರುವುದು ಏತಕ್ಕೆ? ಮನೆಯಲ್ಲಿ ಎಲ್ಲರಿಗೂ ವ್ಯಾಯಾಮ ಮಾಡಬಹುದು, ಜಿಮ್ ಗೆ ಯಾಕೆ ಹೋಗಬೇಕು? ಇದು ಯಾಕೆಂದರೆ, ಮನೆಯಲ್ಲಿ ಅದನ್ನು ಮಾಡಲು ನಿಮಗೆ ಬಹಳ ಉದಾಸೀನವಾಗುತ್ತದೆ, ಆದರೆ ನೀವು ಒಂದು ಜಿಮ್ ಗೆ ಹೋದಾಗ, ಅಲ್ಲಿ ನಿಮಗೆ ಜೊತೆಯಲ್ಲಿ ವ್ಯಾಯಾಮ ಮಾಡಲು ಹಲವು ಜನರಿರುತ್ತಾರೆ ಹಾಗೂ ಅಲ್ಲೊಬ್ಬ ತರಬೇತುದಾರನಿದ್ದರೆ, ಇನ್ನೂ ಸುಲಭವಾಗುತ್ತದೆ ಯಾಕೆಂದರೆ, ತರಬೇತುದಾರನು ನಿಮ್ಮನ್ನು ಪ್ರೋತ್ಸಾಹಿಸುತ್ತಾನೆ ಮತ್ತು ಅದು ನೀವು ಅದರೊಳಗೆ ಹೋಗಲು ಸಹಾಯಕವಾಗುತ್ತದೆ.
ಸಂಸ್ಕೃತದಲ್ಲಿ ಒಂದು ಪ್ರಾಚೀನ ಗಾದೆಯಿದೆ, "ನೀವು ಜವಾಬ್ದಾರಿಯನ್ನು ಹೊರಬೇಕಾಗಿ ಬಂದಾಗ ನೀವದನ್ನು ಒಂಟಿಯಾಗಿ ಮಾಡಿ ಆದರೆ ನೀವು ಕಲಿಯಲು ಮತ್ತು ಅಭ್ಯಾಸ ಮಾಡಲು ಬಯಸಿದಾಗ, ಇತರರೊಂದಿಗೆ ಮಾಡಿ" - ಏಕಸ್ ತಪಸ್ವಿ ದ್ವಿರ್ ಅಧ್ಯಾಯಿ.
ನಿಮಗೇನಾದರೂ ಸಮಸ್ಯೆ ಅಥವಾ ಏನಾದರೂ ನಕಾರಾತ್ಮಕತೆಯಿದ್ದರೆ, ಅದರ ಬಗ್ಗೆ ಟಾಮ್, ಡಿಕ್ ಮತ್ತು ಹ್ಯಾರಿಯೊಡನೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನಿಮ್ಮ ಸಮಸ್ಯೆಗಳನ್ನು ಸುತ್ತಲೂ ಹರಡುವುದರಿಂದ ಅವರು ಕೇವಲ, "ಓಹ್, ಈ ವ್ಯಕ್ತಿಯು ಯಾವತ್ತೂ ಭೀಕರವಾಗಿ, ನಕಾರಾತ್ಮಕವಾಗಿ ಇರುತ್ತಾನೆ" ಎಂದು ನಿಮಗೆ ಹಣೆಪಟ್ಟಿ ಕಟ್ಟುವಂತಾಗುತ್ತದೆ. ಅವರು ಮೇಲಕ್ಕೆತ್ತಲ್ಪಟ್ಟ ಭಾವನೆ ಪಡೆಯುವುದಿಲ್ಲ. ಆದುದರಿಂದ ನಿಮ್ಮ ನಕಾರಾತ್ಮಕತೆ ಮತ್ತು ನಿರಾಶೆಗಳ ಬಗ್ಗೆ ಮಾತನಾಡುವುದರಿಂದ ನಿಮಗೆ ಯಾವುದೇ ಸಹಾಯವಾಗುವುದಿಲ್ಲ, ಅವುಗಳು ಹೊರಟು ಹೋಗುವುದಿಲ್ಲ. ಸಾಧಾರಣವಾಗಿ ಜನರು, ಎಲ್ಲಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿರುತ್ತದೆಯೋ ಅಲ್ಲಿ ಬಿಟ್ಟು ಬೇರೆ ಎಲ್ಲರೊಡನೆ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆ.
ನಿಮಗೊಂದು ಅನಾರೋಗ್ಯವಿದ್ದರೆ, ನೀವು ವೈದ್ಯರಲ್ಲಿ ಮಾತ್ರ ಮಾತನಾಡಬೇಕು; ಅವರಿಗೆ ಅದರ ಬಗ್ಗೆ ಏನಾದರೂ ಮಾಡಲು ಸಾಧ್ಯವಿದೆ. ನಿಮ್ಮ ಅನಾರೋಗ್ಯದ ಬಗ್ಗೆ ಫೋನಿನಲ್ಲಿ ನಿಮ್ಮ ಮಿತ್ರರಿಗೆ ಅರ್ಧ ಗಂಟೆಗಳ ಕಾಲ ವಿವರಿಸುವುದರಲ್ಲಿ ಅರ್ಥವಿಲ್ಲ, ಯಾಕೆಂದರೆ ಅವರು ನಿಮಗಾಗಿ ಏನೂ ಮಾಡಲು ಸಾಧ್ಯವಿಲ್ಲ. ಕೇವಲ ಫೋನ್ ಕಂಪೆನಿಗೆ ಇದರಿಂದ ಲಾಭ. ನಾನು ಹೇಳುವುದೇನೆಂದರೆ, ಪ್ರಪಂಚದಲ್ಲಿನ ಜನರು ತಮ್ಮ ಮಿತ್ರರಿಗೆ ಫೋನಿನಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ, ಫೋನ್ ಕಂಪೆನಿಗಳ ಆದಾಯವು ಕಡಿಮೆಯೆಂದರೆ ೪೦% ದಷ್ಟು ಕಡಿಮೆಯಾಗಬಹುದು. ಎಲ್ಲರೊಡನೆ ನಿಮ್ಮ ಸಮಸ್ಯೆಯ ಬಗ್ಗೆ ಮಾತನಾಡುವುದರ ಅಗತ್ಯವಿಲ್ಲ. ನಿಮಗೆ ಸಮಸ್ಯೆ ಅಥವಾ ಕಷ್ಟವಿದ್ದರೆ, ಅದನ್ನು ಸಹಿಸಿ ಮತ್ತು ಅದು ಹಾದು ಹೋಗುತ್ತದೆ. ನೀವು ಏನನ್ನಾದರೂ, ಉದಾಹರಣೆಗೆ ಪಿಯಾನೋ ಅಥವಾ ವಯೋಲಿನ್ ಏನನ್ನಾದರೂ ಅಭ್ಯಾಸ ಮಾಡಲು ಬಯಸಿದಾಗ, ಯಾರಾದರೂ ಜೊತೆಯಲ್ಲಿರುವುದು ಯಾವತ್ತಿಗೂ ಒಳ್ಳೆಯದು, ಸರಿಯಾ!
ಆದುದರಿಂದ ಸಂಗೀತ ಅಥವಾ ಓದು ಅಥವಾ ಜಿಮ್ ಅಥವಾ ಯೋಗ ಮತ್ತು ಧ್ಯಾನ, ಯಾವುದೇ ಆಗಿರಲಿ, ಅದನ್ನು ಗುಂಪಿನಲ್ಲಿ ಮಾಡುವುದು ಒಳ್ಳೆಯದು.
ಇವತ್ತು ಬೆಳಗ್ಗೆ ನಮ್ಮಲ್ಲಿ ಸುಮಾರು ೯೦೦ ಜನರು ಪ್ರಾಣಾಯಾಮ ಮತ್ತು ಧ್ಯಾನ ಮಾಡಿದರು. ನಾನು ಅವರಲ್ಲಿ ಕೇಳಿದೆ, "ನಮ್ಮಲ್ಲಿ ಎಷ್ಟು ಕೇಂದ್ರಗಳಿವೆ?" ಮತ್ತು ಅವರಂದರು, "ಹಾಲೆಂಡಿನಲ್ಲಿ ನಮ್ಮದು ಐದು ಕೇಂದ್ರಗಳಿವೆ". ಆಗ ನಾನವರಿಗೆ, ಅದು ಸಾಲದು ಎಂದು ಹೇಳಿದೆ. ನಮ್ಮ ಕೇಂದ್ರಗಳು ಎಲ್ಲೆಡೆ ಇರಬೇಕು. ಜನರು ಒಟ್ಟು ಸೇರಿ, ಉಸಿರಾಟದ ವ್ಯಾಯಾಮಗಳನ್ನು ಮತ್ತು ಯೋಗಾಭ್ಯಾಸಗಳನ್ನು ಮಾಡಲು ಪ್ರಾರಂಭಿಸಬೇಕು ಮತ್ತು ಅದು ಅವರ ಚೈತನ್ಯವನ್ನು ಮೇಲೆತ್ತುತ್ತದೆ. ನೀವು ಇದನ್ನು ಒಪ್ಪುವುದಿಲ್ಲವೇ?
ಎಲ್ಲಿ ಬಂದು ಜನರು ಸಂತೋಷಗೊಳ್ಳುವರೋ ಅಂತಹ ಹೆಚ್ಚು ಹೆಚ್ಚು ಜಾಗಗಳನ್ನು ಸೃಷ್ಟಿಸಲು ನಿಮ್ಮಲ್ಲಿ ಎಷ್ಟು ಮಂದಿಗೆ ಆಸಕ್ತಿಯಿದೆ? ಸಂತೋಷದ ಕೇಂದ್ರಗಳು!
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಜನರು ವಾರಕ್ಕೊಮ್ಮೆ ಜೊತೆಯಲ್ಲಿ ಬಂದು, ಜೊತೆಯಲ್ಲಿ ಹಾಡಿ, ಜೊತೆಯಲ್ಲಿ ತಿಂದು, ಆತ್ಮೀಯತೆಯ ಒಂದು ಭಾವನೆಯನ್ನು ಹೊಂದಿ, ಪರಸ್ಪರರನ್ನು ಮೇಲೆತ್ತುವ ಸಂತೋಷದ ಕೇಂದ್ರಗಳನ್ನು ನೀವೆಲ್ಲರೂ ಸೃಷ್ಟಿಸಬೇಕು. ಆದುದರಿಂದ, ಸಮಾಜದಲ್ಲಿ ಸಂತೋಷವನ್ನು ಸೃಷ್ಟಿಸಲು ನೀವೆಲ್ಲರೂ ಮುಂದಾಳುಗಳಾಗಿ.
ನಾನು ನಿಜವಾಗಿಯೂ ಹಾಲೆಂಡಿನಲ್ಲಿ ಸಂತೋಷದ ಅಲೆಗಳನ್ನು ತರಲು ಬಯಸುತ್ತೇನೆ. ನಾವು ಪ್ರತಿಯೊಂದು ಹಳ್ಳಿಯನ್ನೂ ತಲಪಬೇಕು ಹಾಗೂ ಮುಂದಿನ ಒಂದು ವರ್ಷದಲ್ಲಿ ಹಾಲೆಂಡಿನಲ್ಲೆಲ್ಲೂ ಯಾರೂ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಆರ್ಟ್ ಆಫ್ ಲಿವಿಂಗಿನ ಯಶಸ್ಸು, ಪ್ರೋಜ಼್ಯಾಕಿನ ಮಾರಾಟದಲ್ಲಾಗುವ ಕುಸಿತದಿಂದ ಅಳೆಯಲ್ಪಡುತ್ತದೆ. ಹಾಲೆಂಡಿನ ಔಷಧಿಗಳ ಅಂಗಡಿಗಳಿಂದ ಪ್ರೋಜ಼್ಯಾಕ್ ಹೊರಹೋಗಬೇಕೆಂಬ ಗುರಿಯನ್ನು ನಾವು ಇಟ್ಟುಕೊಳ್ಳಬೇಕು, ಯಾಕೆಂದರೆ ಅಲ್ಲಿ ಅದನ್ನು ಕೊಳ್ಳುವವರು ಯಾರೂ ಇರುವುದಿಲ್ಲ. ಇದನ್ನು ನಮ್ಮ ಕಲ್ಪನೆಯನ್ನಾಗಿ ಇರಿಸಿ - ಯಾರೊಬ್ಬರಿಗೂ ಹೋಗಿ ಪ್ರೋಜ಼್ಯಾಕನ್ನು ಕೊಂಡುಕೊಳ್ಳಬೇಕಾದ ಅಗತ್ಯವಿಲ್ಲ. ನಾವಿದನ್ನು ಮಾಡೋಣವೇ? ಆದುದರಿಂದ ನಾವು ಈ ದಿಕ್ಕಿನಲ್ಲಿ ಚಲಿಸಬೇಕು. ನಮ್ಮ ಗುರಿಯು ಪ್ರೋಜ಼್ಯಾಕಿನ ಮಾರಾಟವನ್ನು ಕೆಳತರುವುದಾಗಿದೆ.
ಶನಿವಾರ, ಜೂನ್ 16, 2012
ನಿಮ್ಮ ಆತ್ಮದ ಒಂದು ಇಣುಕುನೋಟ
ಆಂಟ್ವೆರ್ಪ್, ಬೆಲ್ಜಿಯಂ
೧೬ ಜೂನ್ ೨೦೧೨
ಜೀವನವೆಂದರೇನು? ನಾವಿಲ್ಲಿ ಎಷ್ಟು ಕಾಲ ಜೀವಿಸಲಿದ್ದೇವೆ? ಜೀವನದ ಸತ್ಯವೇನು?
ಇದರ ಮೇಲೆ ನಾವು ಸ್ವಲ್ಪ ಬೆಳಕು ಚೆಲ್ಲಬೇಕು ಮತ್ತು ನಾವದನ್ನು ಮಾಡುವಾಗ, ತಾತ್ಪರ್ಯವು ಧ್ಯಾನಿಸುವದಾಗುತ್ತದೆ.
ನೋಡಿ, ನಮ್ಮೆಲ್ಲಾ ದೇವಾಲಯಗಳಲ್ಲಿ ಇದನ್ನೇ ನಮಗೆ
ತೋರಿಸಲಾಗಿರುವುದು; ದೇವರು ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಸ್ಥಿರವಾಗಿ ಧ್ಯಾನದಲ್ಲಿ ಕುಳಿತಿರುವುದು. ಆ ಧ್ಯಾನವನ್ನು ನಾವೆಲ್ಲರೂ ಮಾಡಬೇಕು ಯಾಕೆಂದರೆ
ಜೀವನದಲ್ಲಿ ಧ್ಯಾನಕ್ಕೆ ಬಹಳಷ್ಟು ಪ್ರಾಮುಖ್ಯತೆಯಿದೆ.
ಭಗವಾನ್ ಬುದ್ಧನು ಹೀಗೆಂದು ಹೇಳಿದನು, "ಜೀವನದಲ್ಲಿ ಶೋಕ ಮತ್ತು ದುಃಖಗಳಿವೆ, ಆದರೆ ದುಃಖದಿಂದ ಹೊರಬರಲು ಅಲ್ಲೊಂದು ದಾರಿಯಿದೆ."
ಭಗವಾನ್ ಮಹಾವೀರನು ಹೀಗೆಂದು ಹೇಳಿದನು, "ಆತ್ಮದಲ್ಲಿ ವಿಶ್ರಾಂತಿ ಮಾಡು; ಆತ್ಮದ ಸ್ವಭಾವವು ಆನಂದವಾಗಿದೆ."
ಈ ಎರಡೂ ಸಂದೇಶಗಳಿಗಿರುವ ದಾರಿಯು ಧ್ಯಾನವಾಗಿದೆ.
ದುಃಖವನ್ನು ಕಡಿಮೆಗೊಳಿಸುವುದು ಮತ್ತು ಸಂತೋಷದ ಪ್ರಾಪ್ತಿ, ಇವುಗಳೆರಡೂ ಧ್ಯಾನದ ಮೂಲಕ ಸಂಭವಿಸುವುದು.
(ಸಭಿಕರಲ್ಲಿ ಯಾರೋ ಒಬ್ಬರು ತಮ್ಮ ವಾಹನ
ನಿಲುಗಡೆಯ ಜಾಗವನ್ನು ಬದಲಾಯಿಸಬೇಕೆಂದು ಒಬ್ಬ ಸ್ವಯಂಸೇವಕನು ಘೋಷಿಸುತ್ತಾನೆ.)
ಪರವಾಗಿಲ್ಲ; ಜೀವನವು ಅಡಚಣೆಗಳಿಂದಲೇ ತುಂಬಿದೆ. ನಾವು
ಮಾಡಬೇಕಾದುದು ಇದನ್ನೇ; ನಾವು ಮುಂದೆ ಸಾಗುತ್ತಾ
ಇರಬೇಕು. ನಾವು ಎಲ್ಲೋ ನಿಲ್ಲಿಸುತ್ತೇವೆ ಮತ್ತು ನಂತರ ನಾವು ಮತ್ತೆ ಸಾಗುತ್ತೇವೆ.
ಈಗ, ನೀವೊಂದು ತಪ್ಪಾದ ಜಾಗದಲ್ಲಿ ನಿಲ್ಲಿಸಿದರೆ, ನೀವದನ್ನು ಕೂಡಲೇ ಸರಿಸಬೇಕಾಗುತ್ತದೆ ಮತ್ತು
ನೀವು ಸರಿಯಾದ ಜಾಗದಲ್ಲಿ ನಿಲ್ಲಿಸಿದರೆ, ನಿಮಗೆ ಸ್ವಾತಂತ್ರ್ಯವಿರುತ್ತದೆ; ನಿಮಗೆ ಬೇಕಾದಾಗ ನೀವದನ್ನು ಅಲ್ಲಿಂದ ಸಾಗಿಸಬಹುದು.
ಅದೇ ರೀತಿಯಲ್ಲಿ, ನೀವು ನಿಮ್ಮ ಮನಸ್ಸನ್ನು
ಕೂಡಾ ಯಾವ ರೀತಿಯಲ್ಲಿ ನಿಲ್ಲಿಸಬೇಕೆಂದರೆ, ಅದೊಂದು ಸುರಕ್ಷಿತವಾದ ಜಾಗದಲ್ಲಿರಬೇಕು.
ನೀವು ನಿಮ್ಮ ಮನಸ್ಸನ್ನು ನಿಮ್ಮದೇ ಗ್ಯಾರೇಜಿನಲ್ಲಿ
ನಿಲ್ಲಿಸಿರುವುದಾದರೆ, ಅದನ್ನು ಯಾವಾಗ
ಸಾಗಿಸಬೇಕೆಂದು ಯಾರೂ ನಿಮಗೆ ಹೇಳಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಮನಸ್ಸನ್ನು ಬೇರೊಬ್ಬರ ಗ್ಯಾರೇಜಿನಲ್ಲಿ
ನಿಲ್ಲಿಸಿದರೆ, ಅವರು ನಿಮ್ಮ ಬೆನ್ನು
ಹತ್ತುವರು. ಆಗಲೂ ನೀವು ಸಾಗಿಸದಿದ್ದರೆ, ಪೋಲೀಸರು ಬರುವರು.
ಅದೇ ರೀತಿಯಲ್ಲಿ, ನಿಮ್ಮ ಜೀವನದ ಅಧಿಕಾರವನ್ನು ಬೇರೊಬ್ಬರ ಕೈಗೆ
ನೀಡಬೇಡಿ. ನೀವದನ್ನು ಕೊಟ್ಟರೆ, ಇದುವೇ ಆಗುವುದು.
ನಿಮಗೆ ಯಾವುದೇ ಸ್ವಾತಂತ್ರ್ಯವಿರಲಾರದು. ನೀವು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೀರಿ.
ಮತ್ತು ನೀವು ಸ್ವಾತಂತ್ರವನ್ನು ಕಳೆದುಕೊಂಡಾಗ, ನೀವು ಕಳೆದುಕೊಳ್ಳುವ ಮುಂದಿನ ವಿಷಯಗಳೆಂದರೆ ಪ್ರೀತಿ ಮತ್ತು ಸಹಾನುಭೂತಿ, ಯಾಕೆಂದರೆ ಒತ್ತಡಕ್ಕೆ ಸಿಲುಕಿರುವ ಒಬ್ಬರಿಗೆ
ತಮ್ಮ ಸಹಾನುಭೂತಿ ಅಥವಾ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ.
ಹಾಗಾಗಿ, ನಿಮ್ಮನ್ನು ಓಡಿಸುವ, ಮನಸ್ಸೆಂದು ಕರೆಯಲ್ಪಡುವ ಕಾರಿನ ಬಗ್ಗೆ ಕಾಳಜಿ
ವಹಿಸಿ.
ಮನಸ್ಸು ನಿಮ್ಮನ್ನು ಚಲಾಯಿಸುವ ಬದಲಾಗಿ ನೀವು
ಮನಸ್ಸನ್ನು ಚಲಾಯಿಸಬೇಕು. ನಿಮಗೇನು ಅನ್ನಿಸುತ್ತದೆ? ಅದು ಸರಿಯೇ?
ಜ್ಞಾನವು ಏನು ಮಾಡುತ್ತದೆ? ಜ್ಞಾನವು, ನೀವು ಮನಸ್ಸನ್ನು ಹೇಗೆ ಚಲಾಯಿಸಲು ಬಯಸುವಿರೋ
ಹಾಗೆ ಚಲಾಯಿಸುವಂತೆ ಸಶಕ್ತಗೊಳಿಸುತ್ತದೆ. ಅಲ್ಲದಿದ್ದರೆ, ನೀವು ವಾಹನ ಚಲಾಯಿಸುವ ಸೀಟಿನಲ್ಲಿರುವುದಿಲ್ಲ, ಮನಸ್ಸು ಚಲಾಯಿಸುತ್ತಿರುತ್ತದೆ. ಅದು ತಾನಾಗಿಯೇ
ಹೋಗುವಂತಹ ಒಂದು ಸ್ವಯಂಚಾಲಿತ ಕಾರು ಆಗಿರುತ್ತದೆ. ನೀವು ಎಡಕ್ಕೆ ಹೋಗಲು ಬಯಸುತ್ತೀರಿ ಮತ್ತು ಕಾರು
ಬಲಕ್ಕೆ ಹೋಗುತ್ತಿದೆಯೆಂದು ಅಚ್ಚರಿಪಡುತ್ತಾ ಕುಳಿತಿರುತ್ತೀರಿ ಮತ್ತು ನೀವು ಅಸಹಾಯಕರಾಗುತ್ತೀರಿ.
ನಮ್ಮಲ್ಲಿ ಹೆಚ್ಚಿನವರ ಜೀವನವಿರುವುದು ಹೀಗೆಯೇ.
ನಾವೇನು ಮಾಡುತ್ತಿರುವೆವೆಂದು ನಮಗೆ ತಿಳಿಯದು, ನಮಗೇನು ಬೇಕೆಂಬುದು ನಮಗೆ ತಿಳಿಯದು ಮತ್ತು ನಾವೆಲ್ಲಿಗೆ ಹೋಗುತ್ತಿರುವೆವೆಂಬುದು
ನಮಗೆ ತಿಳಿಯದು. ಕಾರು ಸುಮ್ಮನೇ ಹೋಗುತ್ತಿದೆ ಮತ್ತು ನಾವು ಹಿಂದೆ ಕುಳಿತುಕೊಂಡು, "ನಾನು ಎಡಕ್ಕೆ ಹೋಗಲು ಬಯಸುತ್ತೇನೆ"
ಎಂದು ಹೇಳುತ್ತಿರುತ್ತೇವೆ ಹಾಗೂ ಕಾರು ಬಲಕ್ಕೆ ಹೋಗುತ್ತದೆ. ಹೀಗೆ ಆಗುತ್ತಿಲ್ಲವೇ?
ನಾವು ಬೇರೆ ಯಾವುದರಿಂದಲೋ ಚಲಾಯಿಸಲ್ಪಡುತ್ತಿದ್ದೇವೆ.
ಆದುದರಿಂದ ನಾವು, "ಹಿಂದೆ ಕುಳಿತುಕೊಳ್ಳುವುದರಿಂದ ನಾನು ಚಾಲಕನ ಸೀಟಿಗೆ ಹೇಗೆ ಜಿಗಿಯಬಹುದು, ಆ ನೆಗೆತವನ್ನು ನಾನು ಹೇಗೆ ಮಾಡಬಹುದು"
ಎಂಬುದರ ಕಡೆಗೆ ನೋಡಬೇಕಾಗಿದೆ, ಮತ್ತು ಅದುವೇ ಆಧ್ಯಾತ್ಮಿಕತೆಯಾಗಿದೆ. ಅದುವೇ ಎಲ್ಲಾ ಧರ್ಮಗ್ರಂಥಗಳ ಸಾರವಾಗಿದೆ.
ನೀವು ಭಗವದ್ಗೀತೆಯನ್ನು ಓದಿದರೆ, ಆಗ ನಿಮಗೆ ತಿಳಿಯುವುದು ಇದುವೇ. ಕಾಲಾನಂತರದಲ್ಲಿ, ನಿಮಗೆ ಕೇಳಿಸುವುದು ಇದೇ ಸಾರ, ನಿಮ್ಮ ಆತ್ಮವು ಅವಿನಾಶಿ; ಆತ್ಮದಲ್ಲಿ ವಿಶ್ರಾಂತಿ ಮಾಡಿ. ಇದು ಸಾರವಾಗಿದೆ. ಇದೇ ವಿಷಯವು, ಅಂದರೆ ಆತ್ಮವು ಅವಿನಾಶಿಯೆಂಬುದಾಗಿ ಭಗವದ್ಗೀತೆಯ
ಎರಡನೆಯ ಅಧ್ಯಾಯದಲ್ಲಿ ಕೃಷ್ಣ ಪರಮಾತ್ಮನಿಂದ ಹೇಳಲ್ಪಟ್ಟಿದೆ.
ನೀವು ಹೇಳಲೂಬಹುದು, "ಸರಿ, ಅದೆಲ್ಲಾ ಒಳ್ಳೆಯದು, ಇದನ್ನು ನಾವು ಓದಿದ್ದೇವೆ, ಇದನ್ನು ಅರ್ಥ ಮಾಡಿಕೊಂಡಿದ್ದೇವೆ, ಆದರೆ ಗುರುದೇವ ಇದನ್ನೇ ಜೀವನದಲ್ಲಿ ಬಳಸಲು
ನಾವು ಅಸಮರ್ಥರಾಗಿರುವುದು."
ಇದನ್ನು ನಾನು ಇಲ್ಲಿ ಕುಳಿತಿರುವ ಎಲ್ಲಾ
ವೃದ್ಧರನ್ನು ಸಂಬೋಧಿಸಿ ಹೇಳುತ್ತಿದ್ದೇನೆ. ನಿಮಗೆ ವಯಸ್ಸಾಗಿದೆಯೆಂದು ಯಾವತ್ತಾದರೂ ನಿಮಗೆ ಅನ್ನಿಸಿದೆಯೇ? ಇಲ್ಲಿ ಕುಳಿತಿರುವ ಎಲ್ಲಾ ತಾಯಂದಿರು, ವೃದ್ಧರು ಉತ್ತರಿಸಿ. ನಿಮಗೆ ವಯಸ್ಸಾಗಿದೆಯೆಂದು
ನಿಮಗೆ ಯಾವತ್ತಾದರೂ ಅನ್ನಿಸಿದೆಯೇ? ಇಲ್ಲ! ತನಗೆ ವಯಸ್ಸಾಗಿದೆಯೆಂದು ಒಬ್ಬನಿಗೆ ಯಾವತ್ತೂ ಅನ್ನಿಸುವುದಿಲ್ಲ.
ನಮ್ಮ ಚಿಕ್ಕ ಮಕ್ಕಳು ದೊಡ್ಡವರಾಗಿದ್ದಾರೆ, ಆದರೆ ನಾವಿನ್ನೂ ಹಾಗೆಯೇ ಇದ್ದೇವೆಂದು ನಮಗನ್ನಿಸುತ್ತದೆ.
ನಮಗನ್ನಿಸುವುದು ಹೀಗೆ; ನಮಗೆ ವಯಸ್ಸಾಗದಿರುವುದು ಮಾತ್ರವಲ್ಲ, ನಾವು ಹಾಗೆಯೇ ಇದ್ದೇವೆ ಎಂದು - ಇದು ಆತ್ಮದ ಒಂದು ಇಣುಕುನೋಟವಾಗಿದೆ.
ನೋಡಿ, ನಮ್ಮೊಳಗೆ ಯಾವತ್ತೂ ಬದಲಾಗದೇ ಇದ್ದ ಏನೋ
ಒಂದಿದೆ. ಶರೀರವು ಬದಲಾಗಿದೆ, ಮನಸ್ಸು ಬದಲಾಗಿದೆ ಮತ್ತು ಬುದ್ಧಿಯು ಬದಲಾಗಿದೆ, ಆದರೆ ಮನಸ್ಸಿನಲ್ಲಿ ಬದಲಾಗದಿರುವ ಏನೋ ಒಂದಿದೆ.
ಅಲ್ಲಿ ಇಲ್ಲಿ ನಮಗೆ ಇದರ ಒಂದು ಚಿಕ್ಕ ಇಣುಕುನೋಟವು ಸಿಗುತ್ತದೆ. ಆದರೆ ನೀವು ಧ್ಯಾನ ಮಾಡುವಾಗ ಇದು
ಸಾಕಷ್ಟು ಉತ್ತಮವಾಗಿ ಅರ್ಥವಾಗುತ್ತದೆ. ಆಗ ನಿಮ್ಮ ಮುಖದಲ್ಲಿ ಎಂತಹ ಒಂದು ನಗೆ ಬರುವುದೆಂದರೆ, ಯಾರಿಗೂ ಅದನ್ನು ಅಳಿಸಿಹಾಕಲು ಸಾಧ್ಯವಾಗದು.
ನಾವಿಲ್ಲಿರುವುದು ಇದೇ ಮೊದಲ ಸಾರಿಯಲ್ಲ.
ನಾವಿಲ್ಲಿ ಹಲವಾರು ಸಾರಿ ಇದ್ದೆವು, ಹಲವಾರು ಸಾರಿ ಭೇಟಿಯಾಗಿರುವೆವು; ಹಲವಾರು ಸಾರಿ ನಾವು ಜನ್ಮ ತಾಳಿರುವೆವು.
ನನಗದು ತಿಳಿದಿದೆ, ಬಹುಶಃ ನಿಮಗದು
ತಿಳಿಯದು. ನಿಮಗದು ತಿಳಿದಿದ್ದರೂ ಅಥವಾ ತಿಳಿಯದೇ ಇದ್ದರೂ, ನಾವು ಮೊದಲು ಭೇಟಿಯಾಗಿರುವೆವು; ನಾವು ಮೊದಲು ಬಂದಿರುವೆವು ಎಂಬುದು ನನಗೆ
ತಿಳಿದಿದೆ. ನಿಮಗೆ ನೆನಪಿಲ್ಲ, ನೀವು ಮರೆತುಬಿಟ್ಟಿರುವಿರಿ.
ನಮ್ಮ ಜೀವನವು ಅನಂತವಾದುದು. ಅದು ಇಲ್ಲಿಗೇ
ಮುಗಿಯುವುದಿಲ್ಲ. ಇದರ ನಂತರ, ನಾವು ಮತ್ತೆ ಬರುವೆವು. ನಾವು ಅನಂತವೂ, ಚಿರಸ್ಥಾಯಿಯೂ ಆಗಿರುವೆವು; ಶಾಶ್ವತವಾಗಿರುವ ಒಂದು ಅಂಶವು ನಮ್ಮಲ್ಲಿದೆ.
ನನಗೇನೂ ಸಂಭವಿಸಿಲ್ಲ, ನನ್ನಲ್ಲೇನೂ ಬದಲಾಗಿಲ್ಲವೆಂಬುದನ್ನು
ನೀವು ಅರಿತಾಗ ಇದರ ಒಂದು ಚಿಕ್ಕ ಇಣುಕುನೋಟವು ಅನುಭವವಾಗುತ್ತದೆ.
ಧ್ಯಾನದಲ್ಲಿ ಆಳಕ್ಕೆ ಹೋಗಿ; ಬೇರೆಲ್ಲವೂ ಬರುತ್ತಾ ಹೋಗುತ್ತಾ ಇರುವುದು; ಆದರೆ ಒಬ್ಬರು ಧ್ಯಾನ ಮಾಡಬೇಕು.
ಪ್ರಶ್ನೆ: ಜೀವನದ ಮೂಲ ಯಾವುದು? ಜೀವನವು ಹೇಗೆ ಆರಂಭವಾಯಿತು? ಜನಸಂಖ್ಯೆಯು ಹೆಚ್ಚುತ್ತಾ ಹೋಗುವುದು ಹೇಗೆ? ಆತ್ಮಗಳು ವಿಭಜಿಸಲ್ಪಡುತ್ತಿವೆಯೇ?
ಶ್ರೀ ಶ್ರೀ ರವಿ ಶಂಕರ್: ಪ್ರಾಚೀನ ಕಾಲದಿಂದ ಬಳಸಲ್ಪಡುತ್ತಿರುವ ಎರಡು
ಪದಗಳಿವೆ. ಒಂದು ಅನಾದಿ ಎಂದು ಕರೆಯಲ್ಪಡುತ್ತದೆ, ಅಂದರೆ ಆರಂಭವಿಲ್ಲದುದು ಮತ್ತು ಇನ್ನೊಂದು
ಅನಂತ ಅಂದರೆ ಕೊನೆಯಿಲ್ಲದುದು.
ನೀನು ನನಗೊಂದು ನೇರವಾದ ಗೆರೆಯನ್ನು ತೋರಿಸಿ, ಅದು ಎಲ್ಲಿಂದ ಆರಂಭವಾಯಿತು ಎಂದು ನನ್ನಲ್ಲಿ
ಕೇಳಿದರೆ, ಅದು ಇಲ್ಲಿಂದ ಆರಂಭವಾಯಿತು
ಮತ್ತು ಇಲ್ಲಿ ಕೊನೆಯಾಯಿತು; ಅಥವಾ ಅದು ಈ ಬದಿಯಿಂದ ಆರಂಭವಾಯಿತು ಮತ್ತು ಆ ಬದಿಯಲ್ಲಿ ಕೊನೆಯಾಯಿತು
ಎಂದು ನಾನು ಹೇಳಬಹುದು. ಆದರೆ ನೀನು ನನಗೊಂದು ಗೋಲವನ್ನು ತೋರಿಸಿ, ಗೋಲದ ಆರಂಭ ಬಿಂದು ಎಲ್ಲಿದೆ ಎಂದು ನನ್ನಲ್ಲಿ
ಕೇಳಿದರೆ, ನಾನೇನು ಹೇಳಲು
ಸಾಧ್ಯ?
ನಾನು ನಿನಗೊಂದು ಟೆನ್ನಿಸ್ ಚೆಂಡನ್ನು ಕೊಡುವೆನು
ಮತ್ತು ಅದರ ಆರಂಭ ಬಿಂದು ಎಲ್ಲಿದೆಯೆಂದು ನೀನು ನನಗೆ ಹೇಳು. ಅದರಲ್ಲೇನಾದರೂ ಅರ್ಥವಿದೆಯೇ? ಇಲ್ಲ!
ಹಾಗಾಗಿ ಅದೇ ರೀತಿಯಲ್ಲಿ, ಮೂರು ವಿಷಯಗಳು ಶಾಶ್ವತವಾಗಿವೆ: ಒಂದನೆಯದು
ಜೀವನ, ಇನ್ನೊಂದು ಪದಾರ್ಥ
ಮತ್ತು ಮೂರನೆಯದು, ನೀವು ದೇವರು ಅಥವಾ
ಆತ್ಮ ಎಂದು ಕರೆಯುವ ಸರ್ವೋಚ್ಛ ಶಕ್ತಿ. ಈ ಮೂರು ವಿಷಯಗಳು ಆರಂಭವಾಗುವುದೂ ಇಲ್ಲ, ಅಂತ್ಯವಾಗುವುದೂ ಇಲ್ಲ, ಆದರೆ ಅವುಗಳ ಕ್ರಮಪಲ್ಲಟನೆ ಮತ್ತು ಸಂಯೋಜನೆಗಳು
ಈ ಸಂಪೂರ್ಣ ವಿಶ್ವವನ್ನು ಮಾಡುತ್ತದೆ.
ಹಾಗಾದರೆ, ಹೊಸ ಆತ್ಮಗಳು ಬರುತ್ತಿರುವುದು ಹೇಗೆ? ನಿನಗೆ ಗೊತ್ತಾ, ನಶಿಸಿ ಹೋಗುತ್ತಿರುವ ಹಲವಾರು ಜೀವಜಾತಿಗಳಿವೆ.
ಹಲವಾರು ಹಾವುಗಳು ಮತ್ತು ಚೇಳುಗಳಿದ್ದವು, ಅವುಗಳೆಲ್ಲಾ ಮಾಯವಾಗಿವೆ ಮತ್ತು ಈಗ ಜನರಾಗಿ ಬಂದಿವೆ.
ಭೂಮಿಯ ಮೇಲೆ ಹಲವಾರು ಎಮ್ಮೆಗಳು ಮತ್ತು ಕತ್ತೆಗಳಿದ್ದವು, ಅವುಗಳೆಲ್ಲಾ ಮಾಯವಾಗಿವೆ. ಒಂದನೊಂದು ಕಾಲದಲ್ಲಿ
ಪ್ರತಿಯೊಂದು ಭೂಖಂಡದಲ್ಲೂ ಮಂಗಗಳಿದ್ದವು, ಅವುಗಳು ಈಗ ಎಲ್ಲಿವೆ? ನಿಮಗೆ ಆಂಟ್ವೆರ್ಪ್ನಲ್ಲಿ ಯಾವುದೂ ಕಾಣಸಿಗುವುದಿಲ್ಲ.
ನನಗೆ ಹಾಗೆ ಅನ್ನಿಸುವುದಿಲ್ಲ. ಹೀಗೆ, ಆತ್ಮಗಳು ಹಲವಾರಿವೆ, ಅವುಗಳು ಹಲವಾರು ರೂಪಗಳನ್ನು ತೆಗೆದುಕೊಳ್ಳುತ್ತವೆ ಹಾಗೂ ಅವುಗಳು ಬರುತ್ತವೆ, ಹೋಗುತ್ತವೆ.
ಐದು ರಹಸ್ಯಗಳಿವೆ ಮತ್ತು ಅವುಗಳಲ್ಲೊಂದು
ಸೃಷ್ಟಿಯ ರಹಸ್ಯವಾಗಿದೆ. ಅದರ ಬಗ್ಗೆ ಹೆಚ್ಚಿನದನ್ನು ತಿಳಿಯಲು, ನೀವು ಧ್ಯಾನದಲ್ಲಿ ಆಳಕ್ಕೆ ಹೋಗಬೇಕು.
ಪ್ರಶ್ನೆ: ಕೋಪವನ್ನು ನಿಯಂತ್ರಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನಿನಗೆ ಕೋಪ ಯಾಕೆ ಬರುವುದೆಂದು ನಿನಗೆ ಗೊತ್ತೇ? ಅದು ಯಾಕೆಂದರೆ, ನೀನು ಪರಿಪೂರ್ಣತೆಯನ್ನು ಬಯಸುವೆ ಅಥವಾ ನಿರ್ದಿಷ್ಟ
ವಿಷಯಗಳು ಒಂದು ನಿರ್ದಿಷ್ಟ ರೀತಿಯಲ್ಲಿರಬೇಕೆಂದು ನೀನು ಬಯಸುವೆ. ಎಲ್ಲವೂ ಆ ರೀತಿ ಇರಲು ಸಾಧ್ಯವಿಲ್ಲವೆಂಬುದು; ಅದನ್ನು ಎದುರಿಸೋಣ, ಇದು ಜೀವನವೆಂಬುದು ನಿನಗೆ ತಿಳಿದಾಗ ಅಚಾನಕ್ಕಾಗಿ
ಮೆದುಳು ವಿಶ್ರಮಿಸಲು ತೊಡಗುತ್ತದೆ.
ನೀನು ಕೋಪಗೊಳ್ಳುವುದು ನಿನಗೆ ಯಾವುದೇ ರೀತಿಯಲ್ಲಿಯೂ
ಸಹಾಯ ಮಾಡುವುದಿಲ್ಲ. ಅದು ಕೆಲಸವಾಗುವಂತೆ ಮಾಡುವುದಿಲ್ಲ, ಅಲ್ಲವೇ? ಆದರೆ ನೀನು ಕೋಪವನ್ನು ತೋರಿಸಿದರೆ ಮತ್ತು
ಅದು ಕೆಲಸ ಮಾಡಿದರೆ ಅದು ಒಳ್ಳೆಯದು, ಆಗ ಅದನ್ನು ಉಪಯೋಗಿಸು. ಅದರಲ್ಲೇನೂ ತಪ್ಪಿಲ್ಲ.
ಕೋಪವನ್ನು ಒಂದು ಆಯುಧದಂತೆ ಬಳಸುವುದರಲ್ಲೇನೂ
ತಪ್ಪಿಲ್ಲ, ಆದರೆ ಅದು ನಿಮ್ಮದೇ ಮನಃಶಾಂತಿಯನ್ನು ಕತ್ತರಿಸುತ್ತಿದ್ದರೆ, ಆಗ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ನೀವು
ಜ್ಞಾನವನ್ನು ಬಳಸಬೇಕು.
ಅಪರಿಪೂರ್ಣತೆಗೆ ಕೂಡಾ ಸ್ವಲ್ಪ ಜಾಗ ಕೊಡುವುದು
ಬುದ್ಧಿವಂತಿಕೆಯಾಗಿದೆ.
ಒಂದು ಮನೆಯಲ್ಲಿ, ನೀವೊಂದು ಕಸದಬುಟ್ಟಿಯನ್ನು ಇಡುವುದಿಲ್ಲವೇ? ಹೌದು, ನೀವು ಇಡುತ್ತೀರಿ. ಹೀಗೆ ಕಸದಬುಟ್ಟಿಗೆ ಕೂಡಾ
ಒಂದು ಜಾಗವಿದೆ. ಅದೇ ರೀತಿಯಲ್ಲಿ, ಅಪರಿಪೂರ್ಣತೆಗೆ ಸ್ವಲ್ಪ ಜಾಗ ಕೊಡಿ. ಇದರಿಂದ ಕನಿಷ್ಠಪಕ್ಷ ನಿಮ್ಮ ಮನಸ್ಸಾದರೂ
ಶಾಂತವಾಗಿರುವುದು.
ನಿಮ್ಮ ಮನಸ್ಸನ್ನು ಅಶಾಂತವಾಗಿಟ್ಟುಕೊಳ್ಳುವುದರಲ್ಲಿ
ಏನಿದೆ ಅರ್ಥ? ಪ್ರಪಂಚದಲ್ಲಿ ಎಲ್ಲಾ
ರೀತಿಯ ಜನರಿದ್ದಾರೆ.
ಆರ್ಟ್ ಆಫ್ ಲಿವಿಂಗ್ನಲ್ಲಿ ನಾನೊಂದು ನಿಯಮವನ್ನು
ಮಾಡಿದ್ದೇನೆ, ಯಾರನ್ನೂ ದೂರ ಕಳಿಸದೇ
ಇರುವುದು. ಜನರು ಹೇಗಿರುವರೋ ಹಾಗೆಯೇ ಅವರನ್ನು ಸ್ವೀಕರಿಸುವುದು. ಇದರಿಂದಾಗಿ, ನಾನೀಗ ಸಿಕ್ಕಿಹಾಕಿಕೊಂಡಿದ್ದೇನೆ! ಎಷ್ಟೊಂದು
ವಿವಿಧ ರೀತಿಯ ಜನರು ಆರ್ಟ್ ಆಫ್ ಲಿವಿಂಗ್ಗೆ ಬರುತ್ತಾರೆ, ಮತ್ತು ನಾನು ಎಲ್ಲರಿಗೂ ಜಾಗ ಮಾಡುತ್ತೇನೆ.
ನಿಮಗೆ ಗೊತ್ತಾ, ಸಮಾಜವು ೧೨ ರೀತಿಯ ಜನರಿಂದ ಮಾಡಲ್ಪಟ್ಟಿದೆ, ಯೇಸುಕ್ರಿಸ್ತನ ದೇವದೂತರಿಂದ ಮಾತ್ರವಲ್ಲ.
ಅವುಗಳು ಯಾವುವು? ನಾಲ್ಕು ಒಳ್ಳೆಯ, ನಾಲ್ಕು ಮಧ್ಯಮ ಮತ್ತು ನಾಲ್ಕು ನಿರಾಶಾಜನಕವಾದುದು.
ನಿರಾಶಾಜನಕ ಜನರು, ನೀವು ನಿಮ್ಮಲ್ಲಿರುವ
ಸತ್ವಗುಣವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತಾರೆ. ನಿರಾಶಾಜನಕ ಜನರ ಮುಂದೆ, ನಿಮ್ಮ ಮನಸ್ಸು ಶಾಂತವಾಗಿರಬೇಕು. ಸಾಧಾರಣವಾದ
ಜನರು ನಿಮ್ಮಲ್ಲಿರುವ ಕುಶಲತೆಗಳನ್ನು ಹೊರತರುತ್ತಾರೆ ಮತ್ತು ಒಳ್ಳೆಯ ಜನರು ಯಾವಾಗಲೂ ನಿಮಗೆ ಸಹಾಯ
ಮಾಡುತ್ತಾರೆ.
ಹೀಗೆ ಈ ೧೨ ವಿಧದ ಜನರು ಸಮಾಜದಲ್ಲಿ ಯಾವತ್ತೂ
ಇರುತ್ತಾರೆ. ನಾವವರನ್ನು ಅವರಿರುವಂತೆಯೇ ಸ್ವೀಕರಿಸಬೇಕು ಮತ್ತು ಮುಂದೆ ಸಾಗಬೇಕು.
ಯಾರೋ ನನ್ನಲ್ಲಿ ಕೇಳಿದರು, "ಗುರುದೇವ, ನೀವು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರಬೇಕಾದರೆ, ಭ್ರಷ್ಟ ಜನರು ಯಾಕೆ ನಿಮ್ಮ ಆಶ್ರಮಕ್ಕೆ ಬರುತ್ತಿದ್ದಾರೆ? ನೀವು ಪ್ರಾಮಾಣಿಕತೆ ಮತ್ತು ಸತ್ಯಗಳ ಒಂದು
ಪ್ರತೀಕವಾಗಿರುವಿರಿ, ಈ ಭ್ರಷ್ಟ ಜನರು
ಯಾಕೆ ನಿಮ್ಮ ಬಳಿಗೆ ಬರುತ್ತಿದ್ದಾರೆ?"
ನಾನಂದೆ, "ಎಲ್ಲಾ ಭ್ರಷ್ಟ ಜನರು ನನ್ನ ಬಳಿಗೆ ಬರಬೇಕೆಂದು
ನಾನು ಬಯಸುತ್ತೇನೆ. ಅವರು ನನ್ನ ಬಳಿಗೆ ಬಂದರೆ ಮಾತ್ರ ಅವರು ಉತ್ತಮರಾಗಲು ಸಾಧ್ಯ."
ಹಾಗಾಗಿ ನಾನು ಯಾರಿಗೂ ನನ್ನ ಬಾಗಿಲನ್ನು
ಮುಚ್ಚುವುದಿಲ್ಲ. ನಾನು ನಿಮಗೂ ಅದನ್ನೇ ಹೇಳುತ್ತಿದ್ದೇನೆ, ಅಪರಿಪೂರ್ಣ ಜನರಿದ್ದಾರೆ, ಅವರು ನಿಮ್ಮ ಸಹನೆ ಪರೀಕ್ಷಿಸುತ್ತಾರೆ ಮತ್ತು
ನೀವು ಕೋಪಗೊಳ್ಳುವಂತೆ ಮಾಡುತ್ತಾರೆ. ಅವರು ನಿಮ್ಮನ್ನು ಶಕ್ತಿಶಾಲಿಗಳನ್ನಾಗಿ ಮಾಡುವುದಕ್ಕೋಸ್ಕರ
ಇರುವರೆಂಬುದನ್ನು ತಿಳಿಯಿರಿ. ನೀವು ನೋಡಬೇಕಾದುದೇನೆಂದರೆ, ನೀವು ನಿಮ್ಮ ಸಮಚಿತ್ತತೆಯನ್ನು ಹೇಗೆ ಇಟ್ಟುಕೊಳ್ಳಬಹುದು
ಮತ್ತು ಹಾಗಿದ್ದೂ, ಅವರೆಲ್ಲಿರುವರೋ
ಅಲ್ಲಿಂದ ಅವರೆಲ್ಲಿ ಇರಬಹುದೋ ಅಲ್ಲಿಗೆ ಒಯ್ಯಲು ಅವರಿಗೆ ನೀವು ಹೇಗೆ ಸಹಾಯ ಮಾಡಬಹುದು ಎಂದಾಗಿದೆ.
ಪ್ರಶ್ನೆ: ಗುರುದೇವ, ಯಾರಾದರೂ ನಿಮ್ಮೊಂದಿಗೆ ಕೋಪಗೊಂಡರೆ? ನೀವೇನು ಮಾಡುವಿರಿ?
ಶ್ರೀ ಶ್ರೀ ರವಿ ಶಂಕರ್: ಓ, ನಿನಗೆ ಗೊತ್ತಾ, ನಾನು ನಿನಗಿಂತ ಸ್ವಲ್ಪ ದೊಡ್ಡವನಾಗಿದ್ದಾಗ, ನಾನು ಧ್ಯಾನ ಕಲಿಸುತ್ತಿದ್ದೆ, ಮತ್ತು ಅಲ್ಲೊಬ್ಬರು ವಯಸ್ಸಾದ ವ್ಯಕ್ತಿಯಿದ್ದರು.
ಅವರೊಬ್ಬ ಧ್ಯಾನದ ಶಿಕ್ಷಕರಾಗಿದ್ದರು. ಅವರು ಧ್ಯಾನವನ್ನು ಕಲಿಸುತ್ತಿದ್ದರು, ಆದರೆ ಹಲವಾರು ಜಾಹೀರಾತುಗಳ ಹೊರತಾಗಿಯೂ ಜನರು
ಅವರ ಬಳಿಗೆ ಹೋಗುತ್ತಿರಲಿಲ್ಲ. ನಾನು ಸುಮ್ಮನೆ ಕುಳಿತುಕೊಳ್ಳುತ್ತಿದ್ದೆ ಮತ್ತು ಜನರು ಬಂದು ನನ್ನಿಂದ
ಕಲಿಯಲು ಬಯಸುತ್ತಿದ್ದರು. ನಂತರ ಒಂದು ದಿನ, ಅವರು ಅಸಮಾಧಾನ ಮತ್ತು ಕೋಪಗೊಂಡರು. ಅವರು ಬಹಳ ಕೋಪದೊಂದಿಗೆ ನನ್ನ ಬಳಿಗೆ
ಬಂದರು. ಅವರು ಎಲ್ಲಾ ರೀತಿಯಾಗಿ ಹೇಳಲು ಶುರು ಮಾಡಿದರು. ನಾನು ಸುಮ್ಮನೆ ಒಂದು ಲೋಟದಲ್ಲಿ ಸ್ವಲ್ಪ
ನೀರು ತೆಗೆದುಕೊಂಡು ಹೋಗಿ ಅವರ ಮುಂದೆ ಇಟ್ಟೆ.
ನಾನಂದೆ, "ದಯವಿಟ್ಟು ನೀರು ಕುಡಿಯಿರಿ. ನೀವು ನಿಮಗೇ
ಬಳಲಿಕೆಯುಂಟು ಮಾಡುತ್ತಿರುವಿರೆಂದು ನನಗನ್ನಿಸುತ್ತಿದೆ" ಮತ್ತು ನಂತರ ಅವರು ಸುಮ್ಮನೆ ಬಹಳ
ಮೌನವಾದರು. ಅದರ ನಂತರ ಅವರಿಗೆ ಒಂದು ಶಬ್ದವನ್ನೂ ಮಾತನಾಡಲಾಗಲಿಲ್ಲ.
ಅವರ ಕುತ್ತಿಗೆಯ ನರಗಳೆಲ್ಲಾ ಬಹಳ ಬಿಗಿಗೊಳ್ಳುವುದನ್ನು
ಮತ್ತು ಅವರ ಶರೀರವು ಬಹಳ ಬಿಗಿಗೊಳ್ಳುವುದನ್ನು ನಾನು ನೋಡಿದೆ. ಅವರಿಗೆ ಏನಾದರೂ ಆಗಬಹುದೆಂದು ನಾನು
ಯೋಚಿಸಿದೆ. ನಾನೇನೂ ತಪ್ಪು ಮಾಡಿರಲಿಲ್ಲ, ಆದರೆ ಅವರು ಅಷ್ಟೊಂದು ಕೋಪಗೊಂಡಿದ್ದರು, ಯಾಕೆಂದರೆ ಜನರು ನನ್ನ ಮುಂದೆ ಕುಳಿತುಕೊಂಡು
ಧ್ಯಾನ ಕಲಿಯಲು ಬರುತ್ತಿದ್ದರು ಎಂಬ ಕಾರಣಕ್ಕಾಗಿ. ಹೀಗೆ, ಅವರು ಹೇಗೆ ಕೋಪಗೊಂಡರು ಎಂಬುದನ್ನು ನಾನು
ಸುಮ್ಮನೆ ನೋಡಿದೆ.
ನಿಮಗೆ ಗೊತ್ತಾ, ಈ ಎಲ್ಲಾ ೫೬ ವರ್ಷಗಳಲ್ಲಿ ನಾನು ಯಾವತ್ತೂ
ಒಂದು ಕೆಟ್ಟ ಪದವನ್ನೂ ಹೇಳಿಲ್ಲ. ಈಗಿನವರೆಗೆ, ನಾನು ಯಾರ ವಿರುದ್ಧವೂ ಯಾವುದೇ ಅವಾಚ್ಯ ಶಬ್ದವನ್ನು ಬಳಸಿಲ್ಲ, ಅದು ಬರುವುದೇ ಇಲ್ಲ. ನಾನು ಚಿಕ್ಕವನಾಗಿದ್ದಾಗ
ಕೂಡಾ, ನಾನು ಯಾವತ್ತೂ
ಯಾವುದೇ ಅವಾಚ್ಯ ಶಬ್ದವನ್ನು ಬಳಸಲಿಲ್ಲ. ಯಾಕೆಂದು ನನಗೆ ತಿಳಿಯದು, ಬಹುಶಃ ಅದು ಈ ಶರೀರ ಮತ್ತು ಮನಸ್ಸಿನ ರಚನೆಯಿರಲೂಬಹುದು.
ಆದರೆ ನಾನು ಹೇಳುತ್ತಿರುವುದೇನೆಂದರೆ, ಯಾರಾದರೂ ನಿಮ್ಮ ಮೇಲೆ ಕೋಪಗೊಂಡಾಗ, ನೀವೇನು ಮಾಡಬಹುದೆಂದರೆ, ಒಂದೋ ನೀವು ಕೋಪಗೊಳ್ಳಬಹುದು ಅಥವಾ ನೀವು
ಸುಮ್ಮನೆ ಮೌನವಾಗಬೇಕು. ಸುಮ್ಮನೆ ಅವರನ್ನು ನೋಡಿ ಮತ್ತು ನಂತರ ಅವರಿಗೆ, "ಶಾಂತಿ" ಎಂದು ಹೇಳಿ.
ಪ್ರಶ್ನೆ: ಗುರುದೇವ, ನಾವು ದಿನವೂ ಹಿಂಸೆಯ, ರಕ್ತಪಾತದ ಮತ್ತು ಜನರು ನರಳುತ್ತಿರುವ ಚಿತ್ರಗಳನ್ನು
ನೋಡುತ್ತೇವೆ. ಆ ಜನರಿಗೆ ಸಹಾಯ ಮಾಡಲು ನಾವೇನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ಅದನ್ನು ಜ್ಞಾನದ ಮೂಲಕ ಮಾತ್ರ ಮಾಡಲು ಸಾಧ್ಯ.
ಪ್ರಪಂಚದಲ್ಲಿನ ಈ ಸಮಸ್ಯೆಯನ್ನು ನಾವು ಎದುರಿಸಲು ಸಾಧ್ಯವಾಗುವುದು ಜ್ಞಾನದ ಮೂಲಕವಾಗಿದೆ. ಅದಕ್ಕಾಗಿಯೇ
ನಾವು ಆರ್ಟ್ ಆಫ್ ಲಿವಿಂಗ್ ಮತ್ತು ಐ.ಎ.ಹೆಚ್.ವಿ.ಗಳನ್ನು ಪ್ರಾರಂಭಿಸಿದುದು.
ನಿಮಗೆ ಗೊತ್ತಾ, ದಿನವಿಡೀ ಕುಳಿತುಕೊಂಡು ಧ್ಯಾನ ಮಾಡುವುದರಿಂದ
ನಾನು ಬಹಳ ಸಂತೋಷಗೊಳ್ಳುವೆನು. ನಾನು ಸಂತೋಷವಾಗಿ ಒಂದು ಜಾಗದಲ್ಲಿರಬಹುದಾಗಿತ್ತು. ನಾನು ಪ್ರಪಂಚದ
ಎಲ್ಲೆಡೆಗೂ ಹೋಗುವುದು ಯಾಕೆ? ಅದು ಯಾಕೆಂದರೆ, ಜನರ ದುಃಖವು ಕಡಿಮೆಯಾಗಲೆಂದು. ನಾನೊಂದು ಸಂಸ್ಥೆಯನ್ನು ರೂಪಿಸಿದುದು ಯಾಕೆ? ಅದು ಯಾಕೆಂದರೆ, ಇತರರು ತಮ್ಮಲ್ಲಿಯೇ ಶಾಂತಿಯಿಂದಿರಲು ಅವರಿಗೆ
ಸಹಾಯ ಮಾಡಲು ನಮಗೆ ಸಾಧ್ಯವಾಗಲೆಂದು. ಅದಕ್ಕಾಗಿಯೇ ನಮ್ಮಲ್ಲಿ ಸೇವೆ, ಸಾಧನೆ ಮತ್ತು ಸತ್ಸಂಗಗಳಿರುವುದು. ಈ ಎಲ್ಲಾ
ಮೂರೂ ಜೊತೆಯಲ್ಲಿರಬೇಕು.
ನಾನು ಸಂಪೂರ್ಣ ಪ್ರಪಂಚವನ್ನು ಒಂದು ಕುಟುಂಬವಾಗಿ
ನೋಡುತ್ತೇನೆ ಮತ್ತು ಪ್ರತಿಯೊಬ್ಬರೂ ನನ್ನ ಭಾಗವಾಗಿರುವರು ಎಂಬುದು ನನಗೆ ತಿಳಿದಿದೆ. ಹಾಗಾಗಿ, ನಾನೇನು ಮಾಡಬೇಕೋ ಅದನ್ನು ನಾನು ಮಾಡುತ್ತಾ
ಇರುವೆನು. ಅದೇ ರೀತಿಯಲ್ಲಿ, ನಿಮಗೇನು ಮಾಡಲು ಸಾಧ್ಯವೋ ಅದನ್ನು ನೀವು ಮಾಡುತ್ತಾ ಇರಿ, ಮತ್ತು ಎಲ್ಲವನ್ನೂ ನಿಯಂತ್ರಿಸುವ ಒಂದು ದೊಡ್ಡ
ಶಕ್ತಿಯಿದೆ ಎಂಬುದನ್ನು ತಿಳಿಯಿರಿ. ಅದರ ಬಗ್ಗೆ ಒತ್ತಡವನ್ನು ಅನುಭವಿಸಬೇಡಿ.
ಪ್ರಶ್ನೆ: ಗುರುದೇವ, ನಾವೊಬ್ಬ ಭಯೋತ್ಪಾದಕನನ್ನು ಪ್ರೀತಿಸಬೇಕಾದುದು
ಯಾಕೆ?
ಶ್ರೀ ಶ್ರೀ ರವಿ ಶಂಕರ್: ನೀವು ಭಯೋತ್ಪಾದಕರನ್ನು ಪ್ರೀತಿಸಬೇಕೆಂದು
ನಾನು ಹೇಳುತ್ತಿಲ್ಲ. ನೀವು ಭಯೋತ್ಪಾದಕರನ್ನು ಸ್ವೀಕರಿಸಬೇಕು. ನೀವು ಅವನನ್ನು ಅಥವಾ ಅವಳನ್ನು ಸ್ವೀಕರಿಸಿದಾಗ
ಮಾತ್ರ ನಿಮಗೆ ಅವನಲ್ಲಿ ಅಥವಾ ಅವಳಲ್ಲಿ ಒಂದು ಪರಿವರ್ತನೆಯನ್ನು ತರಲು ಸಾಧ್ಯ.
ಇವರು ತಪ್ಪು ಮಾರ್ಗದರ್ಶನ ಹೊಂದಿದ ಜನರಾಗಿರುವರು.
ಅವರಿಗೆ ಪ್ರೀತಿ, ಸಹಾನುಭೂತಿ ಮತ್ತು
ಅಹಿಂಸೆಗಳಲ್ಲಿ ಶಿಕ್ಷಣ ಪಡೆಯುವ ಒಂದು ಅವಕಾಶ ದೊರೆಯಲಿಲ್ಲ. ಆದುದರಿಂದ ನಾವು ಅವರಿಗಾಗಿ ಕಲಿಯಲು
ಬಾಗಿಲುಗಳನ್ನು ತೆರೆಯಬೇಕು ಮತ್ತು ನಾವು ಅವರ ಕಡೆಗೆ ಸಹಾನುಭೂತಿಯನ್ನು ಹೊಂದಬೇಕು. ಇದನ್ನೇ ನಾನು
ಹೇಳುತ್ತಿರುವುದು.
ಅವರಿಗೆ ಈ ಶಿಕ್ಷಣ ದೊರಕಿರುತ್ತಿದ್ದರೆ, ಅವರು ಯಾವತ್ತೂ ಭಯೋತ್ಪಾದಕರಾಗಿರುತ್ತಿರಲಿಲ್ಲ.
ಇದು ನಮ್ಮ ಅನುಭವ, ಯಾಕೆಂದರೆ ನಾವು
ಸೆರೆಮನೆಯಲ್ಲಿ ಕೋರ್ಸುಗಳನ್ನು ಕಲಿಸಿದಾಗ ಅವರಂದರು, "ನಮಗೆ ಈ ಜ್ಞಾನವಿರುತ್ತಿದ್ದರೆ, ನಾವು ಮೊದಲೇ ಸುದರ್ಶನ ಕ್ರಿಯೆ ಮಾಡಿರುತ್ತಿದ್ದರೆ, ನಮ್ಮ ಜೀವನವು ಭಿನ್ನವಾಗಿರುತ್ತಿತ್ತು."
ಪ್ರಶ್ನೆ: ಜ್ಞಾನೋದಯವಾದ ಸ್ಥಿತಿ ಹೇಗಿರುತ್ತದೆ? ಆ ಸಮಯದಲ್ಲಿ ಒಬ್ಬರಿಗೆ ಹೇಗೆ ಅನ್ನಿಸುತ್ತದೆ? ಆಗಲೂ ಒಬ್ಬರಿಗೆ ಪ್ರಪಂಚದಲ್ಲಿನ ತಮ್ಮೆಲ್ಲಾ
ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಮತ್ತೆ ಒಂದು ಮಗುವಿನಂತೆ. ಮತ್ತು ಹೌದು, ಒಬ್ಬರಿಗೆ ಏನನ್ನು ಬೇಕಾದರೂ ನಿರ್ವಹಿಸಲು
ಸಾಧ್ಯವಿದೆ, ಸಾಮಾನ್ಯದಂತೆ.
ಪ್ರಶ್ನೆ: ಒಬ್ಬರು ನಿಜವಾಗಿಯೂ ಜ್ಞಾನೋದಯವನ್ನು
ಹೊಂದಿರುವರೇ ಅಥವಾ ಅದು ಸುಳ್ಳಾದ ಜ್ಞಾನೋದಯವೇ ಎಂಬುದನ್ನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಸುಳ್ಳು ಜ್ಞಾನೋದಯವೆಂದು ಕರೆಯಲ್ಪಡುವುದು
ಯಾವುದೂ ಇಲ್ಲ. ಜ್ಞಾನೋದಯವು ನಿಮ್ಮ ಸ್ವಭಾವದಲ್ಲಿದೆ. ಭತ್ತದ ಒಳಗೆ ಅಕ್ಕಿಯಿರುವಂತೆಯೇ, ನಿಮ್ಮೊಳಗೆ ಜ್ಞಾನವಿದೆ, ನೀವು ಕೇವಲ ಸಿಪ್ಪೆಯನ್ನು ತೆಗೆಯಬೇಕಷ್ಟೆ.
ಒಮ್ಮೆ ಸಿಪ್ಪೆಯು ತೆಗೆಯಲ್ಪಟ್ಟರೆ, ನೀವು ಶರೀರವಲ್ಲವೆಂಬುದು, ಆದರೆ ಅನಂತತೆಯೆಂಬುದು ನಿಮ್ಮ ಅನುಭವಕ್ಕೆ
ಬರುತ್ತದೆ. ಮನಸ್ಸು ಸಂತೋಷವಾಗಿರುತ್ತದೆ, ತೃಪ್ತವಾಗಿರುತ್ತದೆ ಮತ್ತು ನೀವು ಯಾರನ್ನಾದರೂ ಹರಸಿದರೆ ಅದು ಈಡೇರುತ್ತದೆ.
ಪ್ರಶ್ನೆ: ಗುರುದೇವ, ನನ್ನ ಕಾರ್ಯಾಲಯದಲ್ಲಿನ ಅಕ್ಷಮತೆಯನ್ನು ನಿವಾರಿಸಲು
ನಾನು ಬಳಸಬೇಕಾದ ಕಾರ್ಯವಿಧಾನಗಳು ಯಾವುವು? ಗ್ರಾಹಕರ ನಿರೀಕ್ಷೆಯನ್ನು ನಿಭಾಯಿಸಲು ಅಸಮರ್ಥರಾಗಿರುವ
ಅನೇಕ ಜನರು ನನ್ನೊಂದಿಗಿದ್ದಾರೆ. ಕೆಲವೊಮ್ಮೆ ಇದು ನಿಜಕ್ಕೂ ನನಗೆ ಕೋಪ ಬರುವಂತೆ ಮಾಡುತ್ತದೆ.
ಶ್ರೀ ಶ್ರೀ ರವಿ ಶಂಕರ್: ಜನರು ಯಾಕೆ ತಮ್ಮ ಕೆಲಸಗಳನ್ನು ಚೆನ್ನಾಗಿ
ನಿರ್ವಹಿಸುವುದಿಲ್ಲ ಅಥವಾ ನಿಧಾನವಾಗಿ ಕಲಿಯುತ್ತಾರೆಂಬುದು ನಿನಗೆ ಗೊತ್ತಿದೆಯೇ? ಇದು ಯಾಕೆಂದರೆ ಅವರ ಮನಸ್ಸು ಅಸ್ಪಷ್ಟವಾಗಿರುವುದರಿಂದ.
ಅವರು ಚೆನ್ನಾಗಿ ವಿಶ್ರಾಂತಿ ತೆಗೆದುಕೊಂಡಿಲ್ಲ. ಅವರೊಳಗೆ ಯಾವುದೇ ಭದ್ರತೆಯಿಲ್ಲ ಮತ್ತು ಅವರು ಸಂತೋಷವಾಗಿಲ್ಲ.
ಅವರಿಗೆ ಧ್ಯಾನವನ್ನು ಕಲಿಸು. ಅವರು ಧ್ಯಾನ ಮಾಡುವಾಗ, ಅವರು ಸ್ವಲ್ಪ ಉಸಿರಾಟದ ವ್ಯಾಯಾಮ ಮತ್ತು
ಧ್ಯಾನ ಮಾಡುವಾಗ, ಅವರಿಗೆ ಪ್ರಶಾಂತತೆ, ಸಂತೋಷ ಮತ್ತು ಶಾಂತಿ ಸಿಗುತ್ತದೆ ಹಾಗೂ ನಂತರ
ಬಹಳಷ್ಟು ಉತ್ತಮವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಗುವುದು.
ಊಟ ಮತ್ತು ಧ್ಯಾನ; ಇದನ್ನು ನಿನ್ನ ಕಂಪೆನಿಯ ಭಾಗವನ್ನಾಗಿ ಮಾಡು.
ಸ್ವಲ್ಪ ಧ್ಯಾನದೊಂದಿಗೆ ಮನಸ್ಸು ನಿರಾಳವಾಗುತ್ತದೆ ಮತ್ತು ಅದು ತೀಕ್ಷ್ಣವೂ, ಜಾಗರೂಕವೂ, ಕೆಲಸ ಮಾಡಲು ಹೆಚ್ಚು ಚೈತನ್ಯಭರಿತವೂ ಆಗುತ್ತದೆ.
ಅದು ಕೆಲಸ ಮಾಡುವುದು ಹೀಗೆ.
ಹೀಗೆ ಧ್ಯಾನವು ಖಂಡಿತವಾಗಿಯೂ ಹೆಚ್ಚಿನ ಉತ್ಪಾದಕತೆಯನ್ನು
ತರಲು ಸಹಾಯ ಮಾಡುತ್ತದೆ.
ಪ್ರಶ್ನೆ: ನಾವು ಪ್ರೇಮ ವೈಫಲ್ಯದ ನೋವಿನಿಂದ
ಹೊರಬಂದು ನಿಜವಾದ ಪ್ರೇಮವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಓ, ನಿನ್ನ ಹೃದಯ ಒಡೆದಿದ್ದರೆ, ಜೀವನವನ್ನು ಒಂದು ವಿಶಾಲ ಚಿತ್ರದಂತೆ ನೋಡು.
ಒಬ್ಬರು ನಿನ್ನ ಹೃದಯವನ್ನು ಒಡೆಯುವ ಮೊದಲೂ ಕೂಡಾ ನೀನು ಜೀವಂತವಾಗಿದ್ದೆ, ಈಗ ಕೂಡಾ ನೀನು ಜೀವಂತವಾಗಿರುವೆ ಮತ್ತು ಜೀವನವು
ಮುಂದುವರಿಯುವುದು.
ಈ ಭೂಮಿಯ ಮೇಲೆ ಏಳು ಬಿಲಿಯನ್ ಜನರಿದ್ದಾರೆ
ಮತ್ತು ಅಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಹೃದಯಗಳನ್ನು ಒಡೆಯುವ ಅಭ್ಯಾಸವಿರುವ ಒಬ್ಬರಲ್ಲಿ ನೀನು
ಸಿಕ್ಕಿಬಿದ್ದೆ. ಹಾಗಾಗಿ ಚಿಂತಿಸಬೇಡ, ಮುಂದೆ ಸಾಗು.
ನಿನಗೆ ಗೊತ್ತಾ, ಜನರು ಬರುತ್ತಾರೆ, ಅವರು ನಿನ್ನ ಜೀವನದಲ್ಲಿ ತಮ್ಮ ಪಾತ್ರವನ್ನು
ವಹಿಸುತ್ತಾರೆ ಮತ್ತು ಅವರು ಹೋಗುತ್ತಾರೆ. ಇದು ಪ್ರಪಂಚವಾಗಿದೆ. ನಿನಗೆ ತೊಂದರೆ ಪಡಿಸುತ್ತಾ ಇರುವ
ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ವಿಷಯಕ್ಕೆ ಸಿಕ್ಕಿಬೀಳಬೇಡ. ಮುಕ್ತನಾಗು!
ಪ್ರಶ್ನೆ: ಗುರುದೇವ, ಪಾಪ ಪ್ರಜ್ಞೆಯನ್ನು ನಿವಾರಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಯಾವಾಗೆಲ್ಲಾ ಒಂದು ತಪ್ಪು ನಡೆಯಿತೋ ಆ ಕ್ಷಣದಲ್ಲಿ
ನಿಮ್ಮಲ್ಲಿ ತಿಳುವಳಿಕೆಯಿರಲಿಲ್ಲ, ನಿಮಗೆ ಅರಿವಿರಲಿಲ್ಲ. ನಿಮ್ಮ ಮನಸ್ಸು ದೊಡ್ಡದಾಗಿರಲಿಲ್ಲ. ನೀವು ನಿಮ್ಮ
ಚಿಕ್ಕ ಮನಸ್ಸಿನಲ್ಲಿದ್ದಿರಿ. ಹೀಗೆ ಇದನ್ನು ಒಪ್ಪಿಕೊಂಡು ಮುಂದೆ ಸಾಗಿ. ಮತ್ತೆ, ಸುದರ್ಶನ ಕ್ರಿಯೆ ಮತ್ತು ಧ್ಯಾನವು, ಇದನ್ನು ತೊಲಗಿಸಲು ನಿಮಗೆ ಸಹಾಯ ಮಾಡುವುದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)