ಶುಕ್ರವಾರ, ಜೂನ್ 15, 2012

ವ್ಯಾಪಾರನೀತಿಯ ಬಗ್ಗೆ ವಿಶ್ವ ವೇದಿಕೆ


15
2012............................... ಅಂಸ್ಟೆಲ್ವೀನ್, ನೆದರ್ಲ್ಯಾಂಡ್ಸ್
Jun


ನೋಡೋಣ, ನಾವೆಲ್ಲರೂ ಈಗ ಇಲ್ಲಿದ್ದೇವೆಯೇ? ೧೦೦%?
ನಿಮಗೆ ಗೊತ್ತಿದೆಯಾ, ನಮ್ಮ ವರ್ತಮಾನವು, ಭೂತ ಮತ್ತು ಭವಿಷ್ಯಕಾಲವನ್ನು ಒಳಗೊಂಡಿದೆ. ಭವಿಷ್ಯದ ಬಗ್ಗೆಯಿರುವ ಆತಂಕ ಮತ್ತು ಭೂತಕಾಲದ ಬಗ್ಗೆಯಿರುವ ಪಶ್ಚಾತಾಪ, ಇವುಗಳೆಲ್ಲವೂ ವರ್ತಮಾನದ ಕ್ಷಣದಲ್ಲಿರುವುದು. ಈಗಿರುವ ಸವಾಲೆಂದರೆ, ನಮ್ಮ ಕೈಯಲ್ಲಿ ಭರವಸೆಯ ಪ್ರಕಾಶವನ್ನು ಹಿಡಿದುಕೊಂಡು ಈ ವಿರೋಧಾತ್ಮಕ ಪ್ರವಾಹಗಳ ಮೂಲಕ ತೇಲಿ ಹೋಗುವುದು ಹೇಗೆ ಎಂಬುದು. ಈಗ ನಾವು ಹಿಡಿದುಕೊಂಡಿರುವ ಭರವಸೆಯ ಪ್ರಕಾಶವು ಒಂದು ದೊಡ್ಡ ಬಿರುಗಾಳಿಗೆ ಸಿಲುಕಿಕೊಂಡಿದೆ. ಬಿರುಗಾಳಿಯ ಸುಳಿಯಿಂದ ಹೇಗಾದರೂ ಮಾಡಿ ನಾವು ಈ ಭರವಸೆಯೆಂದು ಕರೆಯಲ್ಪಡುವ ಪ್ರಕಾಶವನ್ನು ರಕ್ಷಿಸಬೇಕು.
ನಾನು ನಿಮಗೆ ೧೯೯೯ ರಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಲು ಬಯಸುತ್ತೇನೆ. ಕಳೆದ ಸಹಸ್ರಮಾನದ ಕೊನೆಯಲ್ಲಿ, ಡಿಸೆಂಬರ್ ೩೧, ೧೯೯೯ ರಂದು ಪ್ರಪಂಚವು ನಶಿಸಿ ಹೋಗುವುದೆಂಬ ವದಂತಿಗಳು ಇದ್ದವು. ಇದು ಯಾಕೆಂದರೆ, ಇನ್ನೂ ಹೆಚ್ಚಿನ ಪ್ರೋಗ್ರಾಂಗಳನ್ನು ತೆಗೆದುಕೊಳ್ಳಲು ಕಂಪ್ಯೂಟರುಗಳು ಯೋಜಿಸಲ್ಪಟ್ಟಿರಲಿಲ್ಲ. ಆದುದರಿಂದ ಎಲ್ಲವೂ ನಶಿಸಿ ಹೋಗಬಹುದೆಂದು. ಆದುದರಿಂದ, ಪ್ರಪಂಚದೆಲ್ಲೆಡೆಯಲ್ಲಿ ಮತ್ತು ಹೆಚ್ಚಾಗಿ ಉತ್ತರ ಅಮೆರಿಕಾದಲ್ಲಿ ಈ ಭಯವು ಹರಡಿತ್ತು. ಜನರು ತಮ್ಮ ನೆಲಮಾಳಿಗೆಗಳಲ್ಲಿ ಆಹಾರವನ್ನು ಕೂಡಾ ಸಂಗ್ರಹಿಸಿಡಲು ಪ್ರಾರಂಭಿಸಿದ್ದರು. ಅವರು ದಿನಸಿ ಮತ್ತು ಹಾಲಿನ ಹುಡಿಗಳನ್ನು ಖರೀದಿಸುತ್ತಿದ್ದರು. ಕೆನಡಾದಲ್ಲಿ ಹಾಲಿನ ಹುಡಿಯ ಕೊರತೆಯಾಗಿತ್ತು, ನೀವು ಕಲ್ಪಿಸಿಕೊಳ್ಳಬಲ್ಲಿರಾ? ಇದು ಯಾಕೆಂದರೆ, ಒಂದು ದೊಡ್ಡ ವಿಪತ್ತು ಸಂಭವಿಸುವುದೆಂಬ ನಿರೀಕ್ಷೆಯಲ್ಲಿ ಎಲ್ಲರೂ ಆಹಾರಗಳನ್ನು ಖರೀದಿಸುತ್ತಾ ತಮ್ಮ ಮನೆಗಳಲ್ಲಿ ಸಂಗ್ರಹಿಸಿದುದರಿಂದ. ಆ ಸಮಯದಲ್ಲಿ, ನಾನು ಎರಡೂವರೆ ತಿಂಗಳುಗಳಲ್ಲಿ ಸುಮಾರು ೧೦೦ ನಗರಗಳಿಗೆ ಬಿರುಸಿನ ಪ್ರಯಾಣವನ್ನು ಕೈಗೊಂಡೆ. ಬೆಳಗ್ಗೆ ನಾನು ಒಂದು ಜಾಗದಲ್ಲಿದ್ದರೆ, ಸಾಯಂಕಾಲ ಇನ್ನೊಂದು ಜಾಗದಲ್ಲಿರುತ್ತಿದ್ದೆ ಮತ್ತು "ಎಲ್ಲವೂ ಸರಿಹೋಗುತ್ತದೆ, ಚಿಂತಿಸಬೇಡಿ. ವ್ಯಾಪಾರವು ಎಂದಿನಂತಾಗುತ್ತದೆ, ದಯವಿಟ್ಟು ಚಿಂತಿಸಬೇಡಿ ಮತ್ತು ದಯವಿಟ್ಟು ನಿಮ್ಮ ನೆಲಮಾಳಿಗೆಗಳಲ್ಲಿ ವಸ್ತುಗಳನ್ನು ಸಂಗ್ರಹಿಸಬೇಡಿ. ಅದರ ಅಗತ್ಯವಿಲ್ಲ" ಎಂದು ಹೇಳುವುದೊಂದೇ ನನ್ನ ಸಂದೇಶವಾಗಿತ್ತು. ಎಲ್ಲಾ ಕಡೆಗಳಲ್ಲೂ ಅದೇ ಪ್ರಶ್ನೆಯು ಬರುತ್ತಿತ್ತು.
ಪುನಃ ಈ ವರ್ಷ, ಕಳೆದ ತಿಂಗಳಿನಲ್ಲಿ ನಾನು ೧೪ ದೇಶಗಳ ೨೦ ನಗರಗಳಲ್ಲಿ ಪ್ರಯಾಣಿಸಿದೆ ಮತ್ತು ಎಲ್ಲೆಡೆಗಳಲ್ಲಿಯೂ ಜನರು ಕೇಳುತ್ತಿದ್ದರು, "೨೦-೧೨-೨೦೧೨ ರಂದು ಈ ಪ್ರಪಂಚಕ್ಕೇನು ಸಂಭವಿಸಲಿದೆ? ಒಂದು ವಿಪತ್ತು ಸಂಭವಿಸಲಿದೆಯೆಂದು ನಾವು ಕೇಳಿದ್ದೇವೆ". ನಾನಂದೆ, "ಅದು ಕೇವಲ ಅಮೆರಿಕಾದ ಸಿನೆಮಾಗಳಲ್ಲಿ ಮಾತ್ರ. ಪ್ರಪಂಚವು ಕೊನೆಯಾಗುವುದಿಲ್ಲ. ಅದು ಕೊನೆಯಾಗುವುದಿದ್ದರೆ, ಅದು ಕೇವಲ ಸಿನೆಮಾಗಳಲ್ಲಿ ಮಾತ್ರ. ಎಲ್ಲವೂ ಎಂದಿನಂತಿರುತ್ತದೆ ಮತ್ತು ನೀವು ಹಾಗೇ ಮುಂದುವರಿಯಿರಿ".
ಪ್ರಳಯವು ಹತ್ತಿರದಲ್ಲೆಲ್ಲೂ ಇಲ್ಲವೆಂಬುದನ್ನು ಕೇಳಿಸಿಕೊಂಡಾಗ ನಮ್ಮಲ್ಲಿ ಒಂದು ರೀತಿಯ ಬಿಡುಗಡೆ ಹೊಂದಿದ ಭಾವನೆಯು ಬರುತ್ತದೆ. ಕುಳಿತುಕೊಂಡು ವಿಶ್ರಮಿಸಲು, ಚಹಾವನ್ನು ಆಸ್ವಾದಿಸಲು ಮತ್ತು ಟಿವಿ ನೋಡಲು ನಮಗೆ ಸಾಧ್ಯವಾಗುತ್ತದೆ.
ಒಂದು ಪರಿಸ್ಥಿತಿಗಿಂತಲೂ ಹೆಚ್ಚಾಗಿ, ಅದರ ಬಗ್ಗೆಯಿರುವ ಆತಂಕವು ಜನರನ್ನು ಕೊಲ್ಲುತ್ತದೆ. ಸಾವು ಬರಬೇಕಾಗಿರುವಾಗ ಅದು ಬರುತ್ತದೆ, ಆದರೆ ಸಾವಿನ ಭಯವು ಹೆಚ್ಚು ತೊಂದರೆಯನ್ನುಂಟುಮಾಡುತ್ತದೆ. ಅದು ಶಾಂತಿಯನ್ನು ದೂರ ಮಾಡುತ್ತದೆ. ಅದೇ ರೀತಿಯಲ್ಲಿ, ಬಡತನಕ್ಕಿಂತಲೂ ಹೆಚ್ಚಾಗಿ ಬಡತನದ ಭಯವು ಜನರನ್ನು ಕೊಲ್ಲುತ್ತದೆ.
ನಾವು ಪ್ರಪಂಚದಲ್ಲಿ ವ್ಯವಹಾರಗಳ ಸ್ಥಿತಿಗತಿಗಳ ಬಗ್ಗೆ ಒಂದು ತಾಜಾ ನೋಟವನ್ನು ಹಾಯಿಸಬೇಕು. ಗಾಂಧೀಜಿಯವರು ಹೇಳಿದಂತೆ, "ಎಲ್ಲರ ಅವಶ್ಯಕತೆಗೆ ಬೇಕಾದಷ್ಟು ಇದೆ ಆದರೆ ಎಲ್ಲರ ಲೋಭಕ್ಕೆ ಬೇಕಾದಷ್ಟಲ್ಲ". ಇದೊಂದು ಬಹಳ ಪ್ರಸಿದ್ಧವಾದ ಹೇಳಿಕೆಯಾಗಿದೆ. ನಾವು ಸಮಾಜದಲ್ಲಿ ಲೋಭದಿಂದ ಉದಾರತೆಯ ಕಡೆಗೆ, ಸೌಹಾರ್ದತೆಯ ಕಡೆಗೆ ಮತ್ತು ಆತ್ಮೀಯತೆಯ ಕಡೆಗೆ ಸಾಗಬೇಕು. ಇವತ್ತಿನ ಆಧುನಿಕ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದು ಎಂದರೆ, ಆತ್ಮೀಯತಾ ಭಾವನೆಯ ಕೊರತೆ ಮತ್ತು ಕೌಟುಂಬಿಕ ಮೌಲ್ಯಗಳ ಕೊರತೆ. ಕುಟುಂಬದ ಒಳಗೂ ಕೂಡಾ ಅನುಬಂಧದ ಯಾವುದೇ ಭಾವನೆಯಿಲ್ಲ. ಇದರ ಪರಿಣಾಮವಾಗಿ ನಾವು, ಹಿಂಸೆ, ಒತ್ತಡ, ಒತ್ತಡಕ್ಕೆ ಸಂಬಂಧಿಸಿದ ರೋಗಗಳು ಮತ್ತು ಖಿನ್ನತೆಗಳಂತಹ ಸಾಮಾಜಿಕ ಹುಳುಕುಗಳನ್ನು ಎದುರಿಸುತ್ತಿದ್ದೇವೆ.
ಯುರೋಪಿನ ಜನತೆಯಲ್ಲಿ ೩೦%ದಷ್ಟು ಜನರು ಖಿನ್ನತೆಯನ್ನು ಎದುರಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆಯಾ? ಇತ್ತೀಚೆಗೆ ನಾನು ಜಪಾನಿನಲ್ಲಿದ್ದಾಗ, ಪ್ರತಿವರ್ಷವೂ ಅಲ್ಲಿ ೩೦,೦೦೦ ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂತು. ಈ ಅಂಕಿಅಂಶಗಳು ಗಾಬರಿಗೊಳಿಸುವಂತಹದು. ಸಾಕಷ್ಟು ಜಿ.ಡಿ.ಪಿ. ಹೊಂದಿದ, ಸಮೃದ್ಧಿ ಹೊಂದಿದ ಹಾಗೂ ಎಲ್ಲರಿಗೂ ತಿನ್ನಲು ಹಾಗೂ ಸುಖವಾಗಿ ಜೀವಿಸಲು ಬೇಕಾದಷ್ಟಿರುವ ಒಂದು ದೇಶದಲ್ಲಿ ಕೂಡಾ ಪ್ರತಿವರ್ಷವೂ ೩೦,೦೦೦ ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಗಾಬರಿಹುಟ್ಟಿಸುತ್ತದೆ. ಕಾರಣವೇನು? ಕಾರಣ ಎಲ್ಲಿದೆ? ಈ ಪರಿಸ್ಥಿತಿಯನ್ನು ನಾವು ಬದಲಾಯಿಸುವುದು ಹೇಗೆ? ನಾವೇನು ಮಾಡಬೇಕು? ಇವುಗಳು ನಮ್ಮನ್ನು ಇವತ್ತು ಬಹಳವಾಗಿ ಕಾಡುತ್ತಿರುವ ಕೆಲವು ಪ್ರಶ್ನೆಗಳು ಮತ್ತು ಅದು ನಮ್ಮನ್ನು ಕಾಡಬೇಕು. ನಾವು ಮನುಷ್ಯರು, ನಾವು ಒಬ್ಬರು ಇನ್ನೊಬ್ಬರೊಂದಿಗೆ ಅನುಬಂಧದಿಂದಿರಬೇಕು ಮತ್ತು ನಾವು ತೊಂದರೆಯಲ್ಲಿರುವಾಗ ಹಲವಾರು ಕೈಗಳು ಸಹಾಯ ಮಾಡಲು ಮುಂದೆ ಬರುತ್ತವೆ ಎಂಬ ಭದ್ರತೆಯ ಭಾವನೆಯನ್ನು ಹೊಂದಿರಬೇಕು. ಮೊದಲೇ ಇದ್ದಂತಹ ಈ ದೃಷ್ಟಿಕೋನವು ಒಮ್ಮೆ ಬದಲಾದ ಮೇಲೆ, ಪರಿಸ್ಥಿತಿಯು ಬದಲಾಗಲೇ ಬೇಕು.
ನೀವು ಪೂರ್ವ ಯುರೋಪ್ ರಾಷ್ಟ್ರಗಳಲ್ಲಿ ನೋಡಿದರೆ, ಕಮ್ಯುನಿಸ್ಟ್ ಯುಗದಲ್ಲಿ, ಜನರ ನಡುವೆ ಸಮುದಾಯ ಭಾವನೆಯ ಒಂದು ಭಾವವಿತ್ತು. ಅವರ ಬಳಿ ತಿನ್ನಲು ಬಹಳ ಕಡಿಮೆ ಆಹಾರವಿದ್ದಿರಬಹುದು ಅಥವಾ ಜೀವಿಸಲು ಬಹಳ ಕಡಿಮೆ ಸಾಮಗ್ರಿಗಳಿದ್ದಿರಬಹುದು, ಆದರೆ ಸಹಬಾಳ್ವೆಯ ಒಂದು ಭಾವನೆಯಿತ್ತು. ಜನರು ಬಂದು ಪರಸ್ಪರರಿಗೆ ಸಹಾಯ ಮಾಡುತ್ತಿದ್ದರು. ಒಂದು ಸ್ಪರ್ಧಾತ್ಮಕ ವ್ಯವಹಾರಿ ಪ್ರಪಂಚದಲ್ಲಿ ಈ ಮೌಲ್ಯಗಳು ನಾಶವಾಗುತ್ತಿವೆ, ನಾವು ತಿರುಗಿ ಈ ಮೌಲ್ಯಗಳತ್ತ ಹೋಗಬೇಕು. ಅವುಗಳು ಈಗಾಗಲೇ ನಾಶವಾಗಿವೆಯೆಂದು ನಾವು ಹೇಳಬಹುದು, ಮತ್ತು ನಾವು ಆ ಆತ್ಮೀಯತಾ ಭಾವದ ಕಡೆಗೆ ತಿರುಗಿ ಹೋಗಬೇಕು.
ಒಂದು ಸಂಸ್ಥೆಯೊಳಗೆಯೇ ಎಷ್ಟು ಮಂದಿ ಪರಸ್ಪರರೊಂದಿಗೆ ಬೆರೆಯುತ್ತಾರೆ? ಅಥವಾ ನಾವು ಯಾವುದೇ ಸಂಬಂಧವಿಲ್ಲದ ಭಾವನೆಯೊಂದಿಗೆ, ಕೇವಲ ಯಾಂತ್ರಿಕ ಘಟಕಗಳಂತೆ, ಯಂತ್ರಗಳಂತೆ ಕೆಲಸಕ್ಕೆ ಬಂದು ಹೋಗುತ್ತೇವೆಯೇ?
ಆಧ್ಯಾತ್ಮವು, ಸಂಪರ್ಕದ ಮತ್ತು ಆತ್ಮೀಯತೆಯ ಸರಪಳಿಯಲ್ಲಿ ಕಾಣೆಯಾದ ಈ ಅಂಶವನ್ನು, ಕಾಣೆಯಾದ ಈ ಕೊಂಡಿಯನ್ನು ಉತ್ತೇಜಿಸಬಹುದು. ಅದು, ನಾವು ಇವತ್ತು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು, ನಮ್ಮಲ್ಲಿ ಅನುರಾಗವನ್ನು, ಸಹಬಾಳ್ವೆಯನ್ನು, ಭರವಸೆಯನ್ನು ಮತ್ತು ವಿಶ್ವಾಸವನ್ನು ಪೋಷಿಸಬಹುದು. ನೋಡಿ, ಪ್ರಪಂಚವು, ನಾವು ಈಗ ಊಹಿಸಬಹುದಾದಕ್ಕಿಂತಲೂ ದೊಡ್ಡ ಪ್ರಕ್ಷುಬ್ಧತೆಯ ಮೂಲಕ ಹಾದು ಹೋಗಿದೆ - ಒಂದನೆಯ ಜಾಗತಿಕ ಯುದ್ಧ, ಎರಡನೆಯ ಜಾಗತಿಕ ಯುದ್ಧ, ಇವುಗಳು ಇನ್ನೂ ದೊಡ್ಡ ಪ್ರಕ್ಷುಬ್ಧ ಸ್ಥಿತಿಗಳಾಗಿದ್ದವು.
ಇವತ್ತು ಯುರೋಪಿನ ಅಥವಾ ಪ್ರಪಂಚದ ಬೇರೆ ಯಾವುದೇ ಜಾಗದ ಕರಾಳ ಆರ್ಥಿಕ ಭವಿಷ್ಯವು, ಆವತ್ತು ಯುದ್ಧವಿದ್ದ ಕಾಲದಲ್ಲಿದ್ದಷ್ಟು ಸವಾಲಿನದ್ದಲ್ಲ, ಖಂಡಿತಾ ಅಲ್ಲ. ಆದುದರಿಂದ ನಾವು ಜನರಿಗೆ, ಅವರು ಚೆನ್ನಾಗಿರುವರೆಂಬ ವಿಶ್ವಾಸವನ್ನು ಕೊಡುವುದು ಅಗತ್ಯವಾಗಿದೆ. ನಾವು ಈ ಸಂದೇಶವನ್ನು ಹರಡಬೇಕು, "ಹೇ, ನೀನು ಚೆನ್ನಾಗಿರುವೆ. ಬಾ, ನಾವು ಜೊತೆಯಲ್ಲಿ ನಡೆಯೋಣ".
ಇಲ್ಲಿ ನಾವು ಮಾಡಬೇಕಾಗಿರುವ ಎರಡು ವಿಷಯಗಳಿವೆಯೆಂಬುದನ್ನು ನೀವು ಕಾಣಬಹುದು. ಇತರರು ತಮಗೆ ಸಹಾಯ ಮಾಡಬೇಕೆಂದು, ಇತರರು ತಮಗೆ ನೀಡಬೇಕೆಂದು ನಿರೀಕ್ಷಿಸುವ ದೇಶಗಳಿವೆ ಮತ್ತು ಪಡೆಯುವುದು ತಮ್ಮ ಹಕ್ಕೆಂದು ಅವರು ತಿಳಿಯುತ್ತಾರೆ. ಇದೊಂದು ದೊಡ್ಡ ಸವಾಲು, ಒಂದು ದೊಡ್ಡ ಸಮಸ್ಯೆ.
ಮುಲ್ಲಾ ನಸ್ರುದ್ದೀನನ ಒಂದು ಚಿಕ್ಕ ಕಥೆಯಿದೆ. ಮುಲ್ಲಾ ನಸ್ರುದ್ದೀನನು ಒಬ್ಬ ಬುದ್ಧಿವಂತ ಮೂರ್ಖ ವ್ಯಕ್ತಿಯಾಗಿದ್ದನು. ಅವನೊಬ್ಬ ರೈತನಾಗಿದ್ದನು. ಮುಲ್ಲಾನು ಬಹಳ ಬರಪೀಡಿತ ಪಟ್ಟಣವೊಂದರಲ್ಲಿ ವಾಸವಾಗಿದ್ದನು ಮತ್ತು ಸುಮಾರು ಆರು ವರ್ಷಗಳ ವರೆಗೆ ಅಲ್ಲಿ ಹೆಚ್ಚಿನ ಮಳೆಯಿರಲಿಲ್ಲ. ಮುಲ್ಲಾ ನಸ್ರುದ್ದೀನನು ಇದರ ಬಗ್ಗೆ ದೂರಿಕೊಂಡಿದ್ದನು ಮತ್ತು ದೂರುವುದು ಅವನಿಗೆ ಅಭ್ಯಾಸವಾಗಿತ್ತು. ಅವನು ದೂರುತ್ತಲೇ ಇದ್ದನು. ಕೊನೆಯದಾಗಿ, ಆ ಒಂದು ವರ್ಷ ಚೆನ್ನಾಗಿ ಮಳೆಯಾಯಿತು ಮತ್ತು ಉತ್ತಮ ಬೆಳೆಯಾಯಿತು. ಆದರೆ ಆಗಲೂ ಮುಲ್ಲಾ ಉದ್ದನೆಯ ಮುಖ ಮಾಡಿಕೊಂಡು ದೂರುತ್ತಲೇ ಇದ್ದನು. ಅವನ ಸ್ನೇಹಿತರು ಅವನಲ್ಲಿ ಕೇಳಿದರು, "ಮುಲ್ಲಾ, ಈ ವರ್ಷ ನಿನಗೆ ದೂರಲು ಏನೂ ಇಲ್ಲ, ಯಾಕೆಂದರೆ ನಿನ್ನ ಬಳಿ ಧಾರಾಳವಾಗಿದೆ, ಉತ್ತಮ ಬೆಳೆಯಾಗಿದೆ". ಆದರೆ ಮುಲ್ಲಾನು ಆಗಲೂ ದೂರಿಕೊಂಡು ಅಂದನು, "ಈಗ ನನಗೆ ಬಹಳಷ್ಟು ಕೆಲಸವಿದೆ. ಕಳೆದ ಆರು ವರ್ಷಗಳಿಂದ ನನಗೆ ಅಷ್ಟು ಕಷ್ಟ ಪಟ್ಟು ಕೆಲಸ ಮಾಡಿ ಅಭ್ಯಾಸವಿಲ್ಲ.  ಈ ವರ್ಷ ನಾನು ಕೆಲಸ ಮಾಡಬೇಕಾಗಿದೆ ಮತ್ತು ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ". ಕೆಲಸವಿಲ್ಲದಿರುವಾಗ, ಯಾರಾದರೂ ನಿಮಗೆ ಒದಗಿಸುತ್ತಾರೆಂದು ನೀವಂದುಕೊಳ್ಳುತ್ತೀರಿ; ಮತ್ತು ನಿಮಗೆ ಮಾಡಲು ಸಾಧ್ಯವಿರುವಂತಹದ್ದೇನಾದರೂ ಇರುವಾಗ, ಆಗಲೂ ಕೂಡಾ ಅದೊಂದು ದೊಡ್ಡ ಹೊರೆಯೆಂದು ನೀವಂದುಕೊಳ್ಳುತ್ತೀರಿ.
ನಿಮಗೆ ನೆನಪಿದ್ದರೆ, ಇದೇ ರೀತಿಯ ಪರಿಸ್ಥಿತಿಯು ಇಥಿಯೋಪಿಯಾದಲ್ಲಿ ಆಗಿತ್ತು. ಏಳು ವರ್ಷಗಳಷ್ಟು ದೀರ್ಘ ಕಾಲದ ವರೆಗೆ ಅಲ್ಲಿ ಬರವಿತ್ತು ಮತ್ತು ಇಥಿಯೋಪಿಯಾವು ಅಂತರರಾಷ್ಟ್ರೀಯ ಸಮುದಾಯದಿಂದ ಸಹಾಯ ಪಡೆಯಿತು. ಆದರೆ ಏಳನೆಯ ವರ್ಷದಲ್ಲಿ, ಆಲಿ ಸಾಕಷ್ಟು ಇದ್ದಾಗಲೂ, ಜನರು, ಸಹಾಯ ಪಡೆಯುವುದು ತಮ್ಮ ಹಕ್ಕೆಂದು ಯೋಚಿಸಿದರು ಮತ್ತು ಅವರು ಕೆಲಸಕ್ಕೆ ಹೋಗಲಿಲ್ಲ. ಇದೊಂದು ಸವಾಲು.
ಇಲ್ಲಿಯೇ ನಾವು ಜನರಿಗೆ ಶಿಕ್ಷಣ ನೀಡಬೇಕಾಗಿರುವುದು. ಒಂದು ಮಾದರಿ ಪಲ್ಲಟವಾಗಬೇಕು. ಇತರರು ತಮ್ಮನ್ನು ಆಧರಿಸಬೇಕೆಂದು ನಿರೀಕ್ಷಿಸುವ ದೇಶಗಳು ಮತ್ತು ಇತರರಿಂದ ಲಾಭ ಪಡೆಯುವ ಸಮುದಾಯಗಳು ತಮ್ಮದೇ ಕಾಲುಗಳ ಮೇಲೆ ನಿಲ್ಲುವಂತೆ ಹಾಗೂ ಸ್ವಾವಲಂಬಿಗಳಾಗುವಂತೆ ಅವರನ್ನು ಪ್ರೇರೇಪಿಸಬೇಕು. ಸಹಾಯ ಮಾಡಲು ಮುಂದೆ ಬರುವ ದೇಶಗಳು ಹೇಗಿದ್ದರೂ ಸಹಾಯ ಮಾಡಬೇಕು. ಅದು ಅವರಿಗೆ ಲಾಭವುಂಟುಮಾಡುವುದೆಂಬ ಕಾರಣಕ್ಕಾಗಿಯಲ್ಲ, ಆದರೆ ಸಹಾಯ ಹಸ್ತವನ್ನು ಚಾಚುವುದು ಮಾನವೀಯತೆಯಾದುದರಿಂದ. ಆದುದರಿಂದ ಇದೊಂದು ಎರಡು ರೀತಿಯ ಅನುಸಂಧಾನ. ಬಡವರಲ್ಲಿ ಆತ್ಮ-ವಿಶ್ವಾಸವನ್ನು ತುಂಬಬೇಕು ಮತ್ತು ಇದನ್ನೇ ಆಧ್ಯಾತ್ಮವು ಮಾಡುವುದು.
ಪುನಃ, ೧೯೯೯ ನೆಯ ಇಸವಿಗೆ ಹೋದರೆ, ಅದು, ಬೆಂಗಳೂರಿನ ಸುತ್ತಲಿನ ಸುಮಾರು ೫೦೦ ಯುವಜನರನ್ನು ನಾನು ನಮ್ಮ ಆಶ್ರಮಕ್ಕೆ ಆಮಂತ್ರಿಸಿದ ವರ್ಷ. ಅವರೆಲ್ಲರೂ ನಿರುದ್ಯೋಗಿಗಳಾದ ಯುವಜನರಾಗಿದ್ದರು.  ನಾನು, ಸಣ್ಣ ಪ್ರಮಾಣದ ಉದ್ಯಮಗಳ ಸಚಿವರನ್ನೂ, ಸಣ್ಣ ಪ್ರಮಾಣದ ಉದ್ಯಮಗಳ ನಿರ್ದೇಶಕರನ್ನೂ ಆಮಂತ್ರಿಸಿದೆ ಮತ್ತು ಅವರಲ್ಲಿ, ಆ ಸಮಯದಲ್ಲಿ ಸರಕಾರವು ಪರಿಚಯಿಸಿದ ಎಲ್ಲಾ ಯೋಜನೆಗಳನ್ನು ಯುವಜನರಿಗೆ ಪ್ರಸ್ತುತ ಪಡಿಸಲು ಮನವಿ ಮಾಡಿದೆ.
ಸರಕಾರದ ಬಳಿ ಸುಮಾರು ೨೮೦ ವಿವಿಧ ಯೋಜನೆಗಳಿದ್ದವು. ಇವುಗಳಿಗೆ ಸರಕಾರವು ಮೂಲಭೂತ ಸೌಕರ್ಯ ಮತ್ತು ಸ್ವಲ್ಪ ಆರಂಭಿಕ ಬಂಡವಾಳವನ್ನು ಕೂಡಾ ಕೊಡಲಿತ್ತು. ಜನರು ಕೇವಲ ಆ ಯೋಜನೆಗಳನ್ನು ತೆಗೆದುಕೊಳ್ಳಬೇಕಿತ್ತು. ಹೀಗೆ ನಮ್ಮಲ್ಲಿ ೫೦೦ ಯುವಜನರಿದ್ದರು ಮತ್ತು ೨೮೦ ಯೋಜನೆಗಳನ್ನು ಅವರಿಗೆ ಪ್ರಸ್ತುತ ಪಡಿಸಲಾಗಿತ್ತು. ಆಮೇಲೆ ಏನಾಯಿತೆಂದು ಗೊತ್ತಾ? ಯುವಜನರು, ಇವುಗಳಲ್ಲಿ ಯಾವುದೇ ಯೋಜನೆಯೂ ಕೆಲಸ ಮಾಡಲು ಹೇಗೆ ಸಾಧ್ಯವಿಲ್ಲವೆಂದು ಎಲ್ಲಾ ರೀತಿಯ ಕಾರಣಗಳನ್ನು ಕೊಟ್ಟರು. ನೀವು ಒಂದು ಯೋಜನೆಯ ಬಗ್ಗೆ ಉಲ್ಲೇಖಿಸಿದರೆ, ಅವರು, "ಇಲ್ಲ ಇದು ಕೆಲಸ ಮಾಡದು, ಇದು ಆಗಲು ಸಾಧ್ಯವಿಲ್ಲ" ಎಂದು ಹೇಳುತ್ತಿದ್ದರು. ಕೊನೆಯದಾಗಿ ಅವರಲ್ಲಿ, "ನಿಮಗೆ ಬೇಕಾಗಿರುವುದು ಏನು?" ಎಂದು ಕೇಳಿದಾಗ ಅವರಂದರು, "ನಮಗೊಂದು ಸರಕಾರಿ ನೌಕರಿಯನ್ನು ಕೊಡಿಸಿ. ನಮಗೆ ಪೋಲಿಸ್ ಅಥವಾ ಬಸ್ ಚಾಲಕ ಅಥವಾ ಕಂಡಕ್ಟರ್ ಆಗಬೇಕು. ನಮಗೆ ಯಾವುದಾದರೂ ಸರಕಾರಿ ನೌಕರಿಯನ್ನು ಕೊಡಿ". ನಾನಂದೆ, "ಸರಿ, ನಾಳೆ ನಾನು ಇದರ ಬಗ್ಗೆ ಏನಾದರೂ ಮಾಡುತ್ತೇನೆ". ಮಾರನೇ ದಿನ, ನಾನು ವೈ.ಎಲ್.ಟಿ.ಪಿ. (ದ ಯೂತ್ ಲೀಡರ್ಶಿಪ್ ಟ್ರೈನಿಂಗ್ ಪ್ರೋಗ್ರಾಂ) ಎಂದು ಕರೆದ, ಒಂದು ತಿಂಗಳ ಕೋರ್ಸಿಗೆ ಅವರನ್ನು ಸೇರಿಸಿದೆ. ಆ ಒಂದು ತಿಂಗಳ ಸಮಯದಲ್ಲಿ, ನಾವು ಅವರನ್ನು ಟ್ಯೂನ್ ಮತ್ತು ತರಬೇತಿ ಮಾಡಿದ ರೀತಿ ಹೇಗಿತ್ತೆಂದರೆ, ತಾವು ಎಲ್ಲಿ ತಪ್ಪಿದ್ದೇವೆಂಬುದನ್ನು ಅವರು ತಿಳಿಯುವಂತೆ ಮಾಡಿದೆವು ಮತ್ತು ಇದು ಒಂದು ದೊಡ್ಡ ಬದಲಾವಣೆಯನ್ನು ಮಾಡಿತು. ಆ ಯುವಜನರಲ್ಲಿ ಪ್ರತಿಯೊಬ್ಬರೂ ಇವತ್ತು ವಾಣಿಜ್ಯೋದ್ಯಮಿಗಳಾಗಿದ್ದಾರೆ ಹಾಗೂ ಅವರಲ್ಲಿ ಪ್ರತಿಯೊಬ್ಬರೂ ಸುಮಾರು ೩೦೦ ರಿಂದ ೫೦೦ ಜನರಿಗೆ ತಮ್ಮ ಕೈಕೆಳಗೆ ನೌಕರಿಯನ್ನು ನೀಡುತ್ತಿದ್ದಾರೆ. ಜನರಲ್ಲಿ ಇಂತಹ ಪರಿವರ್ತನೆಯನ್ನು ನೋಡಲು ಬಹಳ ಪುಳಕಿತವಾಗುತ್ತದೆ. ಕೇವಲ ಅವರ ಮನಃಸ್ಥಿತಿ ಮತ್ತು ಮನೋಭಾವನೆಯನ್ನು ಬದಲಾಯಿಸುವುದರ ಮೂಲಕ ಅವರು ವಾಣಿಜ್ಯೋದ್ಯಮಿಗಳಾದರು, ತಮ್ಮ ಕಾಲುಗಳ ಮೇಲೆ ನಿಂತರು, ಸ್ವಾವಲಂಬಿಗಳಾದರು ಮತ್ತು ಏನನ್ನೋ ಮಾಡಿದರು. ನಾವು ಈ ಕಾರ್ಯಕ್ರಮವನ್ನು ಭಾರತದಾದ್ಯಂತ ಹಾಗೂ ಆಫ್ರಿಕಾ, ದಕ್ಷಿಣ ಅಮೇರಿಕಾಗಳಲ್ಲಿ ಕೂಡಾ ಪ್ರಾರಂಭಿಸಿದ್ದೇವೆ. ಅದು ನಿಜಕ್ಕೂ ಸಾರ್ಥಕವಾಗುತ್ತಿದೆ.
ಆದುದರಿಂದ ನಾವೆಲ್ಲರೂ ಜನರಲ್ಲಿ ಒಂದು ಜಾಗೃತಿಯನ್ನು ಸೃಷ್ಟಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು; ಹಾನಿ ಅಥವಾ ಜಗತ್ತಿನ ಪ್ರಳಯ ಸಂಭವಿಸುವ ದಿನದ ಬಗ್ಗೆಯಲ್ಲ, ಆದರೆ ನಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ, ಪ್ರತಿಯೊಬ್ಬ ಮನುಷ್ಯನ ಒಳಗಿರುವ ಸುಪ್ತ ಶಕ್ತಿಯ ಬಗ್ಗೆ ಒಂದು ಜಾಗೃತಿ. ಪ್ರತಿಯೊಂದು ಸವಾಲು ಅಥವಾ ಪ್ರತಿಯೊಂದು ಬಿಕ್ಕಟ್ಟು ಒಂದು ಅವಕಾಶವಾಗಿದೆ. ಒಂದು ಉತ್ತಮ ಪ್ರಪಂಚಕ್ಕಾಗಿ ಮತ್ತು ಒಂದು ಜಾಗತಿಕ ಕುಟುಂಬಕ್ಕಾಗಿ, ಈ ಸವಾಲುಗಳನ್ನು ಅವಕಾಶಗಳನ್ನಾಗಿ ತಿರುಗಿಸುವುದೇ ಮಾದರಿ ಬದಲಾವಣೆ. ಇಡಿಯ ಪ್ರಪಂಚವನ್ನು ಒಂದು ಮಾನವ ಕುಟುಂಬವನ್ನಾಗಿ ನೋಡಿ ಮತ್ತು ಅತ್ಯುತ್ತಮವಾದುದೇನನ್ನು ನಾವು ಮಾಡಬಹುದು ಎಂದು ನೋಡಿ.
ಒಂದು ಕೊನೆಯ ವಿಷಯ ನಾನಿಲ್ಲಿ ಹೇಳಲು ಬಯಸುವುದೇನೆಂದರೆ - ನಾವಿಲ್ಲಿ ಎಂದೆಂದಿಗೂ ಇರುವುದಿಲ್ಲವೆಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ನಾವಿಲ್ಲಿರುವ ಕಾಲಾವಧಿಯು ಚಿಕ್ಕದು. ಅದೆಷ್ಟೇ ಆಗಿರಲಿ, ೮೦ರಿಂದ ೯೦ ವರ್ಷಗಳು ಅಥವಾ ೧೦೦ ವರ್ಷಗಳು ಅಥವಾ ಹೆಚ್ಚೆಂದರೆ ೧೧೦ ವರ್ಷಗಳು. ಈ ಸಮಯವನ್ನು ನಾವು ಅತ್ಯುತ್ತಮವಾಗಿ ಉಪಯೋಗಿಸೋಣ ಮತ್ತು ಮುಂಬರುವ ಪೀಳಿಗೆಗೆ ಅತ್ಯುತ್ತಮವಾದುದನ್ನು ಮಾಡೋಣ.
ಅಂದ ಹಾಗೆ, ಮಹಾತ್ಮಾ ಗಾಂಧಿಯೊಂದಿಗೆ ಕೆಲಸ ಮಾಡಿದ ನನ್ನ ಶಿಕ್ಷಕರು ಈಗಲೂ ಜೀವಿಸುತ್ತಿದ್ದಾರೆ ಮತ್ತು ಅವರಿಗೆ ೧೧೬ ವರ್ಷ ವಯಸ್ಸು.
ಆದುದರಿಂದ, ನಾವಿಲ್ಲಿರುವ ಅಲ್ಪಾವಧಿಯಲ್ಲಿ, ನಾವು ಭರವಸೆಯನ್ನು ತರೋಣ, ಒತ್ತಡ ಹಾಗೂ ಸಂಕಟವನ್ನು ಕಡಿಮೆ ಮಾಡೋಣ. ಬಹಳಷ್ಟು ಸಮಯ, ಹಣ ಮತ್ತು ಶಕ್ತಿಯನ್ನು ಬುದ್ಧಿಹೀನ ಸಂಘರ್ಷಗಳಲ್ಲಿ ವ್ಯಯಿಸುತ್ತಿರುವ ಜನರನ್ನು ಒಂದುಗೂಡಿಸೋಣ. ಒಂದು ಉತ್ತಮ ಪ್ರಪಂಚವನ್ನು ನಿರ್ಮಿಸೋಣ. ನಿಮಗೆ ಹಾಗೆ ಅನ್ನಿಸುತ್ತಿಲ್ಲವೇ? ನೀವೇನು ಹೇಳುತ್ತೀರಿ? ನಾವೆಲ್ಲರೂ ಅಂತಹ ಒಂದು ಕಲ್ಪನೆಯೊಂದಿಗೆ ಒಟ್ಟು ಸೇರೋಣವೇ?
ಒಂದು ಒತ್ತಡ-ರಹಿತ ಮತ್ತು ಹಿಂಸಾ-ರಹಿತ ಸಮಾಜ, ಒಂದು ರೋಗ-ರಹಿತ ಶರೀರ, ಗೊಂದಲ-ರಹಿತ ಮನಸ್ಸು, ತಡೆ-ರಹಿತ ಬುದ್ಧಿ, ಆಘಾತ-ರಹಿತ ನೆನಪು ಮತ್ತು ದುಃಖ-ರಹಿತ ಆತ್ಮ. ಇದನ್ನು ಮಾಡಲು ನಮಗೆ ಸಾಧ್ಯವೇ? ಮೊದಲು ನಮ್ಮಲ್ಲೊಂದು ಕಲ್ಪನೆಯಿರಬೇಕು - ಐಕ್ಯತೆಯಿಂದಿರುವ, ಆತ್ಮೀಯತಾ ಭಾವನೆಯಿರುವ ಹಾಗೂ ಎಲ್ಲಿ ಜನರು ಪರಸ್ಪರರ ಬಗ್ಗೆ ಕಾಳಜಿ ವಹಿಸುವರೋ ಅಂತಹ ಒಂದು ಸಮಾಜವನ್ನು ಸೃಷ್ಟಿಸುವುದು. ಕೆಲವು ನಿರ್ದಿಷ್ಟ ವಿಷಯಗಳನ್ನು ನಾವು ಲಘುವಾಗಿ ತೆಗೆದುಕೊಳ್ಳುತ್ತೇವೆ. ನಾವು ಯೋಚಿಸುತ್ತೇವೆ, "ಹೌದು, ಅದು ಹೇಗಿದ್ದರೂ ನನ್ನ ಸ್ವಭಾವದಲ್ಲಿದೆ, ನಾನು ಇತರರ ಬಗ್ಗೆ ಕಾಳಜಿ ವಹಿಸುತ್ತೇನೆ". ಆದರೆ ಅದು ಸಾಕಾಗುವುದಿಲ್ಲ, ಅದು ಕಾರ್ಯವಾಗಿ ಹರಿಯಬೇಕು.
ಅಂದ ಹಾಗೆ, ನಾನು ನೆದರ್ಲ್ಯಾಂಡ್ಸಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ, ಯಾಕೆಂದರೆ ವಿಕೋಪ ಪರಿಹಾರಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ನೆದರ್ಲ್ಯಾಂಡ್ಸ್ ಒಂದು. ಎಲ್ಲೇ ಯಾವುದೇ ವಿಕೋಪವೇ ಸಂಭವಿಸಲಿ, ಸಮಾಜಕ್ಕೆ ಸಹಾಯ ಮಾಡಲು ಮುಂದೆ ಬರುವುದು ಹಾಲೆಂಡ್. ಇದು ನೆದರ್ಲ್ಯಾಂಡ್ಸಿನ ಸಮಾಜ ಮತ್ತು ಸಂಸ್ಕೃತಿಗಳಲ್ಲಿ ಬಹಳಷ್ಟು ಅಂತರ್ಗತವಾಗಿದೆ. ಎಲ್ಲಾದರೂ ಸುನಾಮಿಯಾಗಿರಲಿ ಅಥವಾ ಭೂಕಂಪವಾಗಿರಲಿ, ಅಲ್ಲಿಗೆ ನೆದರ್ಲ್ಯಾಂಡ್ಸಿನಿಂದ ಸಹಾಯ ತಲಪುವುದನ್ನು ನೀವು ಕಾಣಬಹುದು. ಎಲ್ಲಾ ಸಹಾಯದೊಂದಿಗೆ ಕೆ.ಎಲ್.ಎಮ್. ಅಲ್ಲಿಗೆ ಹೋಗುತ್ತದೆ. ನಮ್ಮ ಸ್ವಯಂಸೇವಕರು ಅದಾಗಲೇ ಅಲ್ಲಿರುತ್ತಾರೆ. ಆರ್ಟ್ ಆಫ್ ಲಿವಿಂಗ್ ಹೇಗಿದ್ದರೂ ಅಲ್ಲಿರುತ್ತದೆ ಮತ್ತು ಅವರು ಯಾವಾಗಲೂ ಹಲವಾರು ಸರಕಾರೇತರ ಸಂಸ್ಥೆಗಳು ಹಾಗೂ ಹಲವಾರು ಸರಕಾರಗಳೊಂದಿಗೆ ಕೆಲಸ ಮಾಡುತ್ತಾರೆ. ವಿಕೋಪವುಂಟಾದಾಗಲೆಲ್ಲಾ ಕೆ.ಎಲ್.ಎಮ್. ಹಾಲೆಂಡಿನಿಂದ ತನ್ನ ಸೌಹಾರ್ದತೆ, ಸಹಾನುಭೂತಿ ಮತ್ತು ಸೇವೆಯನ್ನು ತರುತ್ತದೆ.
ಹಾಲೆಂಡ್ ಇನ್ನೊಂದು ಹೆಜ್ಜೆಯನ್ನು ಕೂಡಾ ತೆಗೆದುಕೊಂಡು ಒಂದು ಅನಾಹುತವನ್ನು ತಡೆಗಟ್ಟಬೇಕೆಂದು ನನಗನಿಸುತ್ತದೆ. ಸಮುದಾಯಗಳ ನಡುವಿರುವ ಅಪನಂಬಿಕೆ ಮತ್ತು ಹೆಚ್ಚುತ್ತಿರುವ ಅಂತರವನ್ನು ತಡೆಗಟ್ಟುವುದು. ಇಲ್ಲಿ ಪುನಃ ನಾನು ಹೇಳುವುದೇನೆಂದರೆ, ಹಾಲೆಂಡ್ ಎದುರಿಸುತ್ತಿರುವ ಸವಾಲುಗಳಲ್ಲೊಂದು ಯಾವುದೆಂದರೆ, ಮುಖ್ಯವಾಹಿನಿ ಮತ್ತು ವಲಸಿಗ ಸಮುದಾಯಗಳ ನಡುವೆ ಹೆಚ್ಚುತ್ತಿರುವ ಅಂತರ. ತಮ್ಮನ್ನು ಹಾಲೆಂಡಿನ ಸಂಸ್ಕೃತಿ ಮತ್ತು ನೈತಿಕತೆಗಳೊಂದಿಗೆ ಒಂದುಗೂಡಿಸಿಕೊಳ್ಳಬೇಕೆಂದೂ, ತಾವು ತಮ್ಮ ಮೂಲವನ್ನು ಕಳೆದುಕೊಳ್ಳುವೆವೆಂದು ಭಯ ಪಡಬಾರದೆಂದೂ ನಾನು ವಲಸಿಗ ಸಮುದಾಯದವರಲ್ಲಿ ವಿನಂತಿಸಿಕೊಳ್ಳುತ್ತೇನೆ. ನೀವು ನಿಮ್ಮ ಬೇರುಗಳನ್ನು ಕಾಪಾಡಿಕೊಳ್ಳಬಹುದು, ಆದರೆ ನಿಮ್ಮ ದೃಷ್ಟಿಯನ್ನು ವಿಶಾಲವಾಗಿಸಿ, ನಿಮ್ಮ ಮನೋಭಾವವನ್ನು ವಿಶಾಲವಾಗಿಸಿ ಹಾಗೂ ನೀವಿರುವ ಜಾಗಕ್ಕೆ ನಿಮ್ಮನ್ನು ಸಮೀಕರಿಸಿ. ಮುಖ್ಯವಾಹಿನಿ ಸಮುದಾಯದವರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, ವಿವಿಧತೆಯ ಬಗ್ಗೆ ಭಯ ಪಡಬೇಡಿ. ವಿವಿಧತೆಯು ಒಂದು ಬೆದರಿಕೆಯಲ್ಲ, ಬದಲಾಗಿ ಅದು ಆಚರಿಸಲ್ಪಡಬೇಕು. ವಿವಿಧತೆಯನ್ನು ಸಮೀಕರಿಸುವುದು ಮತ್ತು ಗುರುತಿಸುವುದು ಹಾಗೂ ಅವರೊಂದಿಗೆ ಸಹಕರಿಸುವುದು, ಇವುಗಳು, ಇಲ್ಲಿ ಯುಗಗಳಿಂದ ಸಮರಸದಿಂದಿದ್ದ ಸಮಾಜಕ್ಕೆ ಇನ್ನೂ ಹೆಚ್ಚಿನ ಸಾಮರಸ್ಯವನ್ನು ತರಬಹುದು. ಇವುಗಳು, ಇಲ್ಲಿ ಆಗುವುದನ್ನು ನಾನು ಕಾಣಲು ಬಯಸುವ ಸಂಗತಿಗಳು. ನಾನು, ಬಹು-ಸಾಂಸ್ಕೃತಿಕತೆ, ಬಹು-ಧಾರ್ಮಿಕ ಹಾಗೂ ಬಹು-ಸಾಂಸ್ಕೃತಿಕ ಹಬ್ಬಗಳ ಒಬ್ಬ ದೊಡ್ದ ಅಭಿಮಾನಿ ಹಾಗೂ ಪ್ರವರ್ತಕ. ನಾವು ಇಂತಹ ಹಬ್ಬಗಳನ್ನು ಪ್ರತಿಯೊಂದು ವಲಯದಲ್ಲೂ, ಪ್ರತಿಯೊಂದು ಜಾಗದಲ್ಲೂ ಹೆಚ್ಚು ಹೆಚ್ಚಾಗಿ ಮಾಡಬೇಕು. ಇದು ಜನರಿಗೆ ಪರಸ್ಪರ ಒಡನಾಡಲು, ಬೆರೆಯಲು ಮತ್ತು ಪರಸ್ಪರರ ಬಗ್ಗೆ ತಿಳಿಯಲು ಒಂದು ಅವಕಾಶವನ್ನು ತರುತ್ತದೆ.
ಈ ವರ್ಷದ ಮೊದಲಲ್ಲಿ, ಜರ್ಮನಿಯ ಬ್ಯಾಡ್ ಆಂಟೊಗಾಸ್ಟಿನಲ್ಲಿ ನಮ್ಮದೊಂದು ಕಾರ್ಯಕ್ರಮವಿತ್ತು. ನಾವು ಇಸ್ರೇಲಿನ ಮಹಿಳೆಯರ ಒಂದು ಗುಂಪು ಹಾಗೂ ಪ್ಯಾಲೆಸ್ತೀನಿನ ಮಹಿಳೆಯರ ಒಂದು ಗುಂಪನ್ನು ಹತ್ತಿರ ತಂದೆವು. ಎರಡೂ ಗುಂಪಿನವರು ಬಂದರು ಮತ್ತು ನಾವು ಅವರನ್ನು ಒಂದು ಮನೆಯಲ್ಲಿ ಇರಿಸಿದೆವು. ನಾವು ಅವರನ್ನು ಜರ್ಮನಿಗೆ ಬೇರೆ ಬೇರೆಯಾಗಿ ಕರೆತಂದೆವು ಮತ್ತು ಅವರನ್ನು ಒಂದು ಮನೆಯಲ್ಲಿ ಇರಿಸಿದೆವು. ಮೊದಲನೆಯ ದಿನ ಆದ ಮಾತಿನ ಚಕಮಕಿ ಮತ್ತು ಬೆಂಕಿ ಬಿರುಗಾಳಿಯನ್ನು ನೀವು ನೋಡಬೇಕಿತ್ತು. ಆದರೆ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಆದುದರಿಂದ ಅವರು ಅಲ್ಲಿ ಉಳಕೊಂಡರು. ನಮ್ಮ ಸಂಯೋಜಕರು ಮತ್ತು ನಮ್ಮ ಶಿಕ್ಷಕರು ಕೂಡಾ ಅಲ್ಲಿದ್ದರು. ಮೊದಲಿಗೆ ಈ ಮಹಿಳೆಯರು ತಮ್ಮ ಅಸಂತೋಷ ಮತ್ತು ಕೋಪವನ್ನು ವ್ಯಕ್ತಪಡಿಸಿದರು. ಆದರೆ ಒಮ್ಮೆ ಸಿಟ್ಟನ್ನು ಹೊರಹಾಕಿದ ಮೇಲೆ ಅವರು ಪರಸ್ಪರ ಹತ್ತಿರವಾಗಲು ತೊಡಗಿದರು. ಅವರು ಒಬ್ಬರು ಇನ್ನೊಬ್ಬರ ಬಗ್ಗೆ ಮೆಚ್ಚುಗೆ ತೋರಲು ಪ್ರಾರಂಭಿಸಿದರು ಹಾಗೂ ಅವರು ಬಹಳ ಉತ್ತಮ ಸ್ನೇಹಿತೆಯರಾಗಲು ತೊಡಗಿದರು. ಇದನ್ನು ಆ ವಲಯದ ಮಾಧ್ಯಮದಲ್ಲಿ ವಿಸ್ತಾರವಾಗಿ ಪ್ರಸಾರ ಮಾಡಲಾಯಿತು.
ನಾನು ಹೇಳುವುದೇನೆಂದರೆ, ಸಂಪೂರ್ಣವಾಗಿ ವಿರುದ್ಧಾತ್ಮಕ ದೃಷ್ಟಿಕೋನವುಳ್ಳ ಜನರನ್ನು ಹತ್ತಿರ ತಂದು, ಅವರು ಪರಸ್ಪರ ಒಡನಾಡಲು ಹಾಗೂ ಸಂತೋಷಪಡಲು ಪ್ರೋತ್ಸಾಹಿಸುವಂತಹ ಧೈರ್ಯದ ಹೆಜ್ಜೆಯನ್ನು ನಾವು ತೆಗೆದುಕೊಳ್ಳಬೇಕು.
ಪ್ರಶ್ನೆ: ಮನೆಯಲ್ಲಿ ಊಟದ ಮೇಜಿನಲ್ಲಿ, ನಾವೆಲ್ಲರೂ ನಮ್ಮ ಮಕ್ಕಳೊಂದಿಗೆ ಕುಳಿತುಕೊಳ್ಳುತ್ತೇವೆ ಮತ್ತು ಅವರಿಗೆ ಒಳ್ಳೆಯ ವಿಷಯಗಳನ್ನು ಕಲಿಸುತ್ತೇವೆ. ಆದರೆ ವ್ಯವಹಾರದ ವಿಷಯ ಬಂದಾಗ, ಲೋಭತನ ಮತ್ತು ಸ್ವಾರ್ಥದ ಕ್ರಿಯೆಗಳನ್ನು, "ಇದು ಕೇವಲ ವ್ಯವಹಾರ, ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡ" ಎಂಬ ಮಾತುಗಳೊಂದಿಗೆ ಸುಲಭವಾಗಿ ವಿವರಿಸಲಾಗುತ್ತದೆ. ಈ ವಿರೋಧಾಭಾಸವನ್ನು ನಾವು ವಿವರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ವ್ಯವಹಾರವು ಔಪಚಾರಿಕವಾದುದು ಮತ್ತು ಕುಟುಂಬವು ಅನೌಪಚಾರಿಕವಾದುದು, ಆದರೆ ವ್ಯವಹಾರವು ವೈಯಕ್ತಿಕವಾಗಿಲ್ಲದಿರಲು ಸಾಧ್ಯವಿಲ್ಲ. ಮಾನವ ಸ್ಪರ್ಷ, ವೈಯಕ್ತಿಕ ಸ್ಪರ್ಷ ಅಲ್ಲಿರಬೇಕಾದ ಅಗತ್ಯವಿದೆ, ಆದರೆ ಅದೇ ಸಮಯದಲ್ಲಿ ನಾವು ಭಾವುಕತೆಯಿಂದ ವ್ಯವಹಾರ ಮಾಡಬಾರದು; ಇದರ ಬಗ್ಗೆ ನಾವು ಬಹಳ ಸ್ಪಷ್ಟವಾಗಿರಬೇಕು.
ವ್ಯವಹಾರವನ್ನು ನಿಮ್ಮ ತಲೆಯಿಂದ ಮಾಡಬೇಕು ಮತ್ತು ಜೀವನವನ್ನು ನಿಮ್ಮ ಹೃದಯದಿಂದ ಜೀವಿಸಬೇಕು, ಅಂದರೆ, ಸಂಬಂಧವು ಹೃದಯದೊಂದಿಗಿರಬೇಕು. ಇವುಗಳನ್ನು ನೀವು ವಿರುದ್ಧವಾಗಿ ಮಾಡಿದರೆ, ಎರಡೂ ಅಸ್ತವ್ಯಸ್ತವಾಗುತ್ತವೆ. ಆದರೆ ಅದರರ್ಥ, ನೀವು ನಿಮ್ಮ ವ್ಯವಹಾರದಲ್ಲಿ ನಿರ್ದಯವಾಗಿರಿ ಎಂದಲ್ಲ. ನೀವು ನಿಮ್ಮ ಆತ್ಮಸಾಕ್ಷಿಯನ್ನು ಕೇಳಬೇಕು, ಅದು ತುಂಬಾ ಮುಖ್ಯ.
ಪ್ರಶ್ನೆ: ನೈತಿಕ ಜಾಗೃತಿ ಬರುವುದು ಹೃದಯದಿಂದಲೋ ಅಥವಾ ಮನಸ್ಸಿನಿಂದಲೋ?
ಶ್ರೀ ಶ್ರೀ ರವಿಶಂಕರ್:
ನೈತಿಕತೆಯು ಹೃದಯ ಮತ್ತು ಮನಸ್ಸುಗಳ ಒಂದು ಸಂಯೋಗ. ಅದು ಎರಡರ ನಡುವೆಯೂ ಸಂಪರ್ಕ ಕಲ್ಪಿಸುತ್ತದೆ.
ಪ್ರಶ್ನೆ: ಹಾಗಾದರೆ ಒಬ್ಬನು ಭಾಗಶಃವಾಗಿ ಹೃದಯದಿಂದಲೂ ಕೂಡಾ ವ್ಯವಹಾರವನ್ನು ನಡೆಸಬಹುದಾ?
ಶ್ರೀ ಶ್ರೀ ರವಿಶಂಕರ್:
ಭಾಗಶಃ ಹೌದು, ಆದರೆ ಭಾವುಕವಾಗಿಯಲ್ಲ. ಅದರಲ್ಲಿ ಮಾನವೀಯತೆಯ ಮತ್ತು ಭಾವನೆಗಳ ಛಾಯೆ ಕೂಡಾ ಸ್ವಲ್ಪ ಇರಬೇಕು. ನೈತಿಕತೆ ಎಂಬುದು ಸೇತುವೆ, ನಿಮ್ಮ ಹೃದಯವೇನು ಹೇಳುತ್ತದೆ ಮತ್ತು ನಿಮ್ಮ ತಲೆಯು ಯಾವುದನ್ನು ಸರಿಯೆಂದು ಹೇಳುತ್ತದೆ - ಇವುಗಳ ಸಂಯೋಜನೆ.
ಪ್ರಶ್ನೆ: ಸಭೆಯ ಬಳಿಕ ನಾನು ನಿಮಗೆ ನನ್ನ ವ್ಯವಹಾರಿ ಹೃದಯದ ಒಂದು ತುಂಡನ್ನು ಕೊಡಬಹುದೇ? ಅದು ಕೇವಲ ಒಂದು ನಿಮಿಷ ತೆಗೆದುಕೊಳ್ಳಬಹುದಷ್ಟೇ.
ಶ್ರೀ ಶ್ರೀ ರವಿಶಂಕರ್: 
ಸರಿ, ಖಂಡಿತಾ.
ಪ್ರಶ್ನೆ ಕೇಳಿದವನು: ಅದು ಒಳ್ಳೆಯದು, ಧನ್ಯವಾದಗಳು.
ಪ್ರಶ್ನೆ: ಇಂದು ನೈತಿಕ ಅಸ್ಥಿರತೆಯು ಹೆಚ್ಚಿದೆಯೇ? ಸರಿ ಮತ್ತು ತಪ್ಪುಗಳ ವ್ಯಾಖ್ಯಾನವು ಹೆಚ್ಚು ಅಸ್ಪಷ್ಟವಾಗಿದೆಯೇ? ಅದುವೇ ಸಮಸ್ಯೆಯ ಭಾಗವಾಗಿರುವುದೇ?
ಶ್ರೀ ಶ್ರೀ ರವಿಶಂಕರ್:
ಸರಿ ಮತ್ತು ತಪ್ಪುಗಳು ಯಾವಾಗಲೂ ಸಾಪೇಕ್ಷವಾದುದು. ಯಾವುದು ನಿಮಗೆ ಬಹುಶಃ ಒಂದು ಅಲ್ಪಕಾಲಾವಧಿಯ ನಷ್ಟದೊಂದಿಗೆ, ದೀರ್ಘಕಾಲಾವಧಿಯ ಲಾಭವನ್ನು ಕೊಡುತ್ತದೆಯೋ ಅದು ಒಳ್ಳೆಯದು. ಯಾವುದು ನಿಮಗೆ ಅಲ್ಪಕಾಲಾವಧಿಯ ಲಾಭವನ್ನೂ, ಆದರೆ ದೀರ್ಘಕಾಲಾವಧಿಯ ನಷ್ಟವನ್ನೂ ಕೊಡುತ್ತದೆಯೋ ಅದು ಒಳ್ಳೆಯದಲ್ಲ. ಇದೊಂದು ಮಾನದಂಡವಾಗಬಹುದು.
ನಿಮಗೆ ಸರಿ ಮತ್ತು ತಪ್ಪುಗಳ ನಡುವೆ ಒಂದು ಸರಳವಾದ ಮಾನದಂಡ ಬೇಕಾಗಿದ್ದರೆ - ಯಾವುದು ನಿಮಗೆ ಅಲ್ಪಕಾಲಾವಧಿಯಲ್ಲಿ ನೋವನ್ನು ತರುತ್ತದೆ ಮತ್ತು ದೀರ್ಘಕಾಲಾವಧಿಯಲ್ಲಿ ಸಂತೋಷವನ್ನು ತರುತ್ತದೆ, ಅದು ಒಳ್ಳೆಯದು; ಹಾಗೂ ಯಾವುದು ನಿಮಗೆ ಅಲ್ಪಕಾಲಾವಧಿಯಲ್ಲಿ ಸಂತೋಷವನ್ನು ತರುತ್ತದೆ, ಆದರೆ ದೀರ್ಘಕಾಲಾವಧಿಯಲ್ಲಿ ನೋವನ್ನು ತರುತ್ತದೆ, ಅದು ಒಳ್ಳೆಯದಲ್ಲ.
ನೀವು ರಾತ್ರಿ ಕಳೆಯುವುದರೊಳಗಡೆ ಕೋಟ್ಯಾಧಿಪತಿಯಾಗಬಹುದು, ಆದರೆ ಉಳಿದ ಜೀವಮಾನವನ್ನು ನೀವು ಜೈಲಿನಲ್ಲಿ ಸರಳುಗಳನ್ನೆಣಿಸುತ್ತಾ ಕಳೆಯಬೇಕಾಗಿ ಬಂದರೆ, ಆಗ ಅದು ಸರಿಯಲ್ಲ.
ಪ್ರಶ್ನೆ: ಒಬ್ಬ ಮುಂದಾಳುವಾಗಿ ನಾನು ಯುವಜನರಲ್ಲಿ ಕಿಡಿಯನ್ನು ಜಾಗೃತಗೊಳಿಸುವುದು ಹೇಗೆ? ನೀವು ಹೇಳುತ್ತಿದ್ದಂತಹ ರೀತಿಯ, ಸರಕಾರಿ ನೌಕರಿ ಬಯಸುವ ಯುವಜನರು - ಅಂತಹ ಅನೇಕರನ್ನು ನಾನು ಎದುರಿಸುತ್ತೇನೆ ಹಾಗೂ ಅವರನ್ನು ಎಚ್ಚರಿಸಲು ಗುಂಡಿಯನ್ನು ಹುಡುಕುತ್ತಿದ್ದೇನೆ.
ಶ್ರೀ ಶ್ರೀ ರವಿಶಂಕರ್:
ನೀನು ಅವರನ್ನು ಎಂಟು ದಿನಗಳ ಕಾಲ ಯಾವುದಾದರೂ ಜಾಗದಲ್ಲಿ ಒಂದುಗೂಡಿಸಿ ಇರಿಸಬಲ್ಲೆಯಾದರೆ, ಕೆಲಸ ಮಾಡಿದಂತಹ ಎಲ್ಲಾ ಉಪಾಯಗಳನ್ನೂ ನಾನು ನಿನಗೆ ಹೇಳಿಕೊಡಬಲ್ಲೆ ಹಾಗೂ ಅದು ಅವರಿಗೂ ಕೆಲಸ ಮಾಡಬಹುದು. ನಾನು ನಮ್ಮ ಶಿಕ್ಷಕರಲ್ಲೊಬ್ಬರನ್ನು ಕಳುಹಿಸಬಲ್ಲೆ ಹಾಗೂ ನೀನು ಪರಿವರ್ತನೆಯನ್ನು ಹೇಗೆ ತರಬಹುದೆಂಬುದನ್ನು ಅವರು ನಿನ್ನೊಂದಿಗೆ ಹಂಚಬಲ್ಲರು. ಅದಕ್ಕೆ ಕಡಿಮೆಯೆಂದರೆ ಎಂಟು ದಿನಗಳು ಬೇಕಾಗಬಹುದು, ಪ್ರತಿದಿನವೂ ಕೆಲವು ಗಂಟೆಗಳು.
ಪ್ರಶ್ನೆ: ನಾನು ವ್ಯಾಪಾರೋದ್ಯಮದಲ್ಲಿ ಕೆಲಸ ಮಾಡುತ್ತೇನೆ ಹಾಗೂ ನಾನು ಉದ್ಯಮದಲ್ಲಿ ಬಹಳಷ್ಟು ಸ್ಪರ್ಧೆಯನ್ನು ಹಾಗೂ ತಮ್ಮ ಲಾಭಾಂಶವನ್ನು ಸುಧಾರಿಸುವುದಕ್ಕಾಗಿ ಮಾರುಕಟ್ಟೆಯ ಪಾಲನ್ನು ಪಡೆಯಲು ಹಲವಾರು ಕಂಪೆನಿಗಳು ಹೋರಾಡುವುದನ್ನು  ನೋಡುತ್ತೇನೆ. ಕೊನೆಯಲ್ಲಿ, ಮೂಲತಃ ಭ್ರಷ್ಟಾಚಾರದ ಪರಿಕಲ್ಪನೆಯಿಂದಾಗಿ ಬಹಳಷ್ಟು ಒತ್ತಡ ಹಾಗೂ ದುಷ್ಕೃತ್ಯಗಳು ಹುಟ್ಟಿಕೊಳ್ಳುವುದನ್ನು ನಾನು ನೋಡುತ್ತೇನೆ. ಆದುದರಿಂದ, ಭ್ರಷ್ಟಾಚಾರದ ಬಗ್ಗೆ ನಿಮ್ಮ ಅನಿಸಿಕೆಗಳು ಹಾಗೂ ಬೇರೆ ಬೇರೆ ಸ್ತರಗಳಲ್ಲಿ ಅದರೊಂದಿಗೆ ವ್ಯವಹರಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಲು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್:
ನಾನು ಭ್ರಷ್ಟಾಚಾರದ ವಿರುದ್ಧ ಭಾರತ (ಐ.ಎ.ಸಿ. - ಇಂಡಿಯಾ ಅಗೈನ್ಸ್ಟ್ ಕರಪ್ಷನ್) ದ ಸ್ಥಾಪಕ ಸದಸ್ಯನಾಗಿದ್ದೇನೆ ಹಾಗೂ ರಷ್ಯಾದಲ್ಲಿ ಕೂಡಾ ನಾವು ಭ್ರಷ್ಟಾಚಾರದ ವಿರುದ್ಧ ಒಂದು ಸಂಘವನ್ನು ರೂಪಿಸಿದ್ದೇವೆ.
ಎಲ್ಲಿ ಆತ್ಮೀಯತೆಯ ಭಾವನೆ ಕೊನೆಗೊಳ್ಳುವುದೋ ಅಲ್ಲಿ ಭ್ರಷ್ಟಾಚಾರವು ಶುರುವಾಗುತ್ತದೆ. ಪುನಃ, ಯಾವಾಗ ಆಧ್ಯಾತ್ಮಿಕ ಅಂಶವು ಮುಗಿಯುವುದೋ ಸರಿಯಾಗಿ ಅಲ್ಲಿಯೇ ಭ್ರಷ್ಟಾಚಾರವು ತನ್ನ ಕ್ಷೇತ್ರವನ್ನು ಪ್ರಾರಂಭಿಸುವುದು. ಯಾರೂ, ತಮಗೆ ಸೇರಿದವರು ಎಂದು ಅಂದುಕೊಳ್ಳುವ ಒಬ್ಬರೊಡನೆ ಭ್ರಷ್ಟರಾಗಿ ನಡೆದುಕೊಳ್ಳುವುದಿಲ್ಲ ಅಥವಾ ಅವರಿಂದ ಲಂಚ ತೆಗೆದುಕೊಳ್ಳುವುದಿಲ್ಲ. ಒಂದು ಕಚೇರಿಯಲ್ಲಿ ಕುಳಿತಿರುವ ಒಬ್ಬ ಅಧಿಕಾರಿಯು ತನ್ನ ಬಂಧುಬಾಂಧವರಲ್ಲಿ ಅಥವಾ ತನ್ನದೇ ಮಿತ್ರರಲ್ಲಿ ಲಂಚ ಕೇಳುವುದಿಲ್ಲ. ಯಾರೊಂದಿಗೆ ತನಗೇನೂ ಸಂಬಂಧವಿಲ್ಲವೆಂದು ಅವನಂದುಕೊಳ್ಳುತ್ತಾನೋ ಅವರಲ್ಲಿ ಅವನು ಲಂಚ ಕೇಳಲು ಶುರು ಮಾಡುತ್ತಾನೆ. ಆದುದರಿಂದ ನಾವು ಆತ್ಮೀಯತೆಯ ಭಾವನೆಯನ್ನು ಸೃಷ್ಟಿಸಬೇಕು ಹಾಗೂ ಅದಕ್ಕಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಅಗತ್ಯವಾಗಿದೆ - ಶಿಕ್ಷಣ!
ಎರಡನೆಯದಾಗಿ, ಸ್ಪರ್ಧೆಯು ಕೆಟ್ಟದಲ್ಲ ಆದರೆ ಅನೈತಿಕ ಸ್ಪರ್ಧೆಯು ಸಮರ್ಥನೀಯವಲ್ಲ. ಇದು ಅಗತ್ಯವಾಗಿದೆ.
ಆಹಾರದಲ್ಲಿ ಎಷ್ಟು ಉಪ್ಪಿರುತ್ತದೋ ಅಷ್ಟು ’ಸುಳ್ಳು’ಗಳನ್ನು ವ್ಯವಹಾರದಲ್ಲಿ ಬಳಸಬಹುದು ಎಂದು ಒಂದು ಪ್ರಾಚೀನ ಅನಿಸಿಕೆಯು ಹೇಳುತ್ತದೆ. ’ಸುಳ್ಳು’ಗಳು ಎಂಬುದು ಸ್ವಲ್ಪ ಬಲವಾದ ಶಬ್ದವಾಗಿರಬಹುದು, ಆದರೆ ಮೂಲತಃ ಇದರ ಅರ್ಥವೇನೆಂದರೆ, ಒಬ್ಬ ವ್ಯಾಪಾರಿಯು ತನ್ನ ಉತ್ಪನ್ನವು ಅತ್ಯುತ್ತಮವಾದುದಲ್ಲ ಎಂದು ಚೆನ್ನಾಗಿ ತಿಳಿದಿದ್ದರೂ, ಅದು ಪ್ರಪಂಚದಲ್ಲೇ ಅತ್ಯುತ್ತಮವಾದುದು ಎಂದು ಹೇಳಬಹುದು. ಅಷ್ಟು ಅವಕಾಶವಿದೆ ಮತ್ತು ಹಾಗಿದ್ದರೂ ಅದನ್ನು ನೈತಿಕತೆಯೆಂದು ಭಾವಿಸಬಹುದು - ನಿಮ್ಮ ವಸ್ತುವು ಎರಡನೆಯ ಅಥವಾ ಮೂರನೆಯ ಉತ್ತಮವಾದುದೆಂದು ತಿಳಿದಿದ್ದರೂ ಸಹ ಅದನ್ನು ಅತ್ಯುತ್ತಮವಾದುದೆಂದು ಹೇಳಿಕೊಳ್ಳುವುದು. ನೀವು, "ನನ್ನಲ್ಲಿ ಈ ಉತ್ಪನ್ನವಿದೆ, ಆದರೆ ಇದು ಅತ್ಯುತ್ತಮವಾದುದೆಂಬುದರ ಬಗ್ಗೆ ನನಗೆ ಖಚಿತವಿಲ್ಲ. ಬೇರೆ ಉತ್ತಮ ಉತ್ಪನ್ನಗಳಿರಲೂಬಹುದು" ಎಂದು ಹೇಳಿದರೆ, ಆಗ ನೀವು ಒಳ್ಳೆಯ ಮಾರಾಟಗಾರನಾಗಲಾರಿರಿ. ಆದುದರಿಂದ, ಕೆಲಸದಲ್ಲಿ ಆ ಸ್ವಲ್ಪ ಕುಶಲತೆಗೆ ಅವಕಾಶವಿದೆ, ಆದರೆ ಆ ಕುಶಲತೆಯು, ಆಹಾರದಲ್ಲಿ ಸಹಿಸಲು ಸಾಧ್ಯವಾಗುವಷ್ಟು ಪ್ರಮಾಣದ ಉಪ್ಪಿನಷ್ಟು ಮಾತ್ರ ಇರಬೇಕು. ಆಹಾರದಲ್ಲಿ ಅಧಿಕವಾಗಿ ಉಪ್ಪಿದ್ದರೆ ನಿಮಗೆ ಅದನ್ನು ತಿನ್ನಲು ಸಾಧ್ಯವಿಲ್ಲ ಹಾಗೂ ಉಪ್ಪಿಲ್ಲದಿದ್ದರೂ ಕೂಡಾ ಅದು ಸ್ವಾದಿಷ್ಟವಾಗಿರುವುದಿಲ್ಲ. ಇದು ವೈದಿಕ ಕಾಲದ ಒಂದು ಪ್ರಾಚೀನ ಚಿಂತನೆ. ಆದರೆ ಇದು ಒಬ್ಬ ಸಮಾಜ ಸೇವಕಕನಿಗೆ ಅಥವಾ ಬುದ್ಧಿಜೀವಿಗೆ ಅಥವಾ ಒಬ್ಬ ರಾಜನಿಗೂ ಸಹ ಅನ್ವಯಿಸುವುದಿಲ್ಲ; ಕೇವಲ ಒಬ್ಬ ವ್ಯಾಪಾರಿಗೆ ಸ್ವಲ್ಪವೇ ಸ್ವಲ್ಪ ಅವಕಾಶವಿದೆ.
ಪ್ರಶ್ನೆ: ಕೆಲವೊಮ್ಮೆ ’ಕೆಳಮಟ್ಟ’ದ ವ್ಯಕ್ತಿಗಳು ಏನನ್ನೋ ಬಯಸುತ್ತಾರೆ ಮತ್ತು ಈ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳ ಬಾಗಿಲುಗಳನ್ನು ಬಡಿಯುತ್ತಾರೆ ಹಾಗೂ ನಂತರ ಅಲ್ಲಿ ಯಾವುದೇ ಪ್ರವೇಶವಿಲ್ಲದಂತಾಗುತ್ತದೆ. ಸ್ಫೂರ್ತಿ ಮತ್ತು ಪ್ರೇರಣೆಗಳಿರುವ ಜನರು ವಿಶೇಷವಾಗಿ ಈ ಸಾಂಸ್ಥಿಕ ಮಟ್ಟದಲ್ಲಿ ಸಂಪರ್ಕ ಹೊಂದುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಕೆಲವೊಮ್ಮೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅಥವಾ ಒಂದು ಬದಲಾವಣೆಯನ್ನು ತರಲು, ಒಬ್ಬಂಟಿಯಾಗಿ ಕೆಲಸ ಮಾಡಲು ಸಾಧ್ಯವಾಗದೇ ಬರಬಹುದು, ಅದು ಬಹಳ ಕಷ್ಟದಾಯಕವಾಗಬಹುದು. ಅದೊಂದು ಕಷ್ಟದ ಕೆಲಸ. ನೀವು ಹಲವಾರು, ಸಮಾನವಾದ ಮನಸ್ಸುಳ್ಳವರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ನಿಮಗೊಂದು ಶಕ್ತಿ ಬೇಕು, ನಿಮ್ಮ ಕಲ್ಪನೆಯನ್ನು ಸಮರ್ಥಿಸುವ ಜನರು ನಿಮ್ಮ ಹಿಂದಿರಬೇಕು. ಆದುದರಿಂದ ನೀವು ಪ್ರತಿಯೊಬ್ಬರಲ್ಲೂ ನಿಮ್ಮ ಕಲ್ಪನೆಯನ್ನು ಬಿತ್ತಬೇಕು ಹಾಗೂ ನಂತರ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಾವು ಬಯಸುವ ಈ ಬದಲಾವಣೆಗಳನ್ನು ತರುವಲ್ಲಿ  ಸಾಮೂಹಿಕ ಪ್ರಯತ್ನವು ಉತ್ತಮವಾಗಿ ಕೆಲಸ ಮಾಡುತ್ತದೆ. ಒಬ್ಬಂಟಿಯಾಗಿ ನಮಗೆ ಮಾಡಲು ಸಾಧ್ಯವಾಗದೇ ಹೋಗಬಹುದು, ಇದೊಂದು ಕಷ್ಟದ ಕೆಲಸ.
ಪ್ರಶ್ನೆ: ಪ್ರಪಂಚದಾದ್ಯಂತ ನಿಮಗಿರುವ ಅಗಾಧವಾದ ಪ್ರಭಾವದೊಂದಿಗೆ, ಯುವಜನರೊಂದಿಗೂ ಉದ್ಯಮಗಳ ಮುಖಂಡರೊಂದಿಗೂ ಮುಂದಾಳುತ್ವದ ಮಟ್ಟದಲ್ಲಿ ನೀವು ಬಹಳ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ನಾನು ನೋಡುತ್ತೇನೆ. ಆದರೆ ನನ್ನಂತಹ ಒಬ್ಬ ಹಳೆಯ ವ್ಯಾಪಾರಿ, ನಿಮ್ಮ ಸ್ಫೂರ್ತಿದಾಯಕ ಮಾತನ್ನು ಕೇಳುತ್ತೇನೆ, ಆದರೆ ಈ ಕೋಣೆಯಿಂದ ಹೊರ ಹೋಗುವಾಗ ನಾನು ನನ್ನ ಕೆಟ್ಟ ಹಳೆಯ ಮಾರ್ಗಗಳಿಗೆ ಹಿಂದಿರುಗುತ್ತೇನೆ. ಭಾರತದಾದ್ಯಂತ ಹಾಗೂ ಪ್ರಪಂಚದಾದ್ಯಂತ ಶಾಲಾಮಟ್ಟದಲ್ಲಿ ಸಂಪೂರ್ಣ ನೈತಿಕ ಬೋಧನೆಯನ್ನು ತರುವಲ್ಲಿ ನಾವು ನಿಮ್ಮ ಪ್ರಭಾವವನ್ನು ಉಪಯೋಗಿಸಬಹುದೇ?
ಶ್ರೀ ಶ್ರೀ ರವಿಶಂಕರ್:
ಇಲ್ಲಿಗೆ ಬರುವ ಸ್ವಲ್ಪ ಮೊದಲು, ಬೆಂಗಳೂರು ಆಶ್ರಮದಲ್ಲಿ ಸೇರಿ, ಒಂದು ವಾರ ಇಡೀ ಅಲ್ಲಿದ್ದ ಸುಮಾರು ೨೦೦೦ ಯುವಜನರೊಂದಿಗೆ ನಾನು ಸ್ಕೈಪ್ ಮುಖಾಂತರ ಮಾತನಾಡಿದೆ. ಅವರಲ್ಲಿದ್ದ ಉತ್ಸಾಹದ ಪ್ರಮಾಣವು ಅಸಾಮಾನ್ಯವಾಗಿತ್ತು. ನಾನು ಪ್ರಪಂಚದಾದ್ಯಂತ ಹಲವಾರು ಶಿಕ್ಷಕರನ್ನು ಸೃಷ್ಟಿಸುತ್ತಿದ್ದೇನೆ. ಉದಾಹರಣೆಗೆ ಅರ್ಜೆಂಟೀನಾದಲ್ಲಿ ನಮ್ಮದೊಂದು ದೊಡ್ಡ ನೆಲೆಯಿದೆ. ನೈಟ್ ಕ್ಲಬ್ಬುಗಳು ಹೇಗೆ ಪರಿವರ್ತನೆ ಹೊಂದುತ್ತಿವೆ ಹಾಗೂ ಯುವಜನರು ಮದ್ಯವಿಲ್ಲದೇ, ಡ್ರಗ್ಸ್ ಇಲ್ಲದೇ, ಧೂಮಪಾನವಿಲ್ಲದೇ ಹೇಗೆ ನೈಟ್ ಕ್ಲಬ್ಬುಗಳಿಗೆ ಹೋಗುತ್ತಾರೆ, ಬದಲಾಗಿ ಸಾಫ್ಟ್ ಡ್ರಿಂಕ್ಸ್ ತೆಗೆದುಕೊಳ್ಳುತ್ತಾರೆ, ನರ್ತಿಸುತ್ತಾರೆ, ಹಾಡು ಹೇಳುತ್ತಾರೆ ಮತ್ತು ಭಾವಪರವಶರಾಗುತ್ತಾರೆ ಎಂಬುದನ್ನು ಎರಡು ವಾರ ಮೊದಲು ನೀವು ವಾರ್ತಾಪತ್ರಿಕೆಗಳಲ್ಲಿ ಓದಿರಬಹುದು. ಇದು ಅರ್ಜೆಂಟೀನಾದ ನೈಟ್ ಕ್ಲಬ್ಬುಗಳಲ್ಲಿ ಆಗುತ್ತಿದೆ. ನ್ಯೂಯೋರ್ಕಿನಲ್ಲಿ ಕೂಡಾ ’ಯೋಗಾ ರೇವ್ ಪಾರ್ಟಿ’ ಎಂಬುದನ್ನು ಶುರು ಮಾಡಿದ್ದಾರೆ. ಜನರು ಬಂದು ಯೋಗ ಮತ್ತು ಧ್ಯಾನ ಮಾಡುತ್ತಾರೆ ಹಾಗೂ ಶಾಂತರಾಗುತ್ತಾರೆ.
ಸಾವಿರಾರು ಯುವಜನರು ನೈಟ್ ಕ್ಲಬ್ಬುಗಳಲ್ಲಿ, ಪರಸ್ಪರರ ಮುಖದ ಮೇಲೆ ಬಾಟಲಿಗಳನ್ನು ಎಸೆಯದೇ, ತಮ್ಮ ಕಣ್ಣುಗಳನ್ನು ಮುಚ್ಚಿ ಕುಳಿತುಕೊಂಡು ಸಂತೋಷವಾಗಿರುವುದನ್ನು ನೀವು ಊಹಿಸಬಲ್ಲಿರಾ? ಈ ಪರಿವರ್ತನೆಯು ಆಗುತ್ತಿದೆ. ಆದರೆ ಖಂಡಿತವಾಗಿ, ಇದು ಇನ್ನೂ ತ್ವರಿತ ಗತಿಯಲ್ಲಿ ಆಗಬೇಕೆಂದು ನಾನು ಬಯಸುತ್ತೇನೆ. ಎಲ್ಲೆಡೆಗಳಲ್ಲೂ ಸ್ವಯಂಸೇವಕರಿದ್ದಾರೆ. ಇದರ ಎಲ್ಲಾ ಪ್ರಶಂಸೆಗಳನ್ನು ನಾನು, ಹಗಲು ರಾತ್ರಿ ಕೆಲಸ ಮಾಡುತ್ತಿರುವ ಸ್ವಯಂಸೇವಕರಿಗೆ ಕೊಡಲು ಬಯಸುತ್ತೇನೆ. ಅವರಿಗೆ ತಮ್ಮೊಳಗೆ ಸಂತೋಷ ಲಭಿಸಿತು ಹಾಗೂ ಅದನ್ನು ಇತರರಲ್ಲಿ ತರಲು ಅವರು ಬಯಸಿದರು. ಇದು ಅತೀ ದೊಡ್ಡ ಪ್ರೇರೇಪಣೆಯ ಅಂಶವಾಗಿತ್ತು.