ಶುಕ್ರವಾರ, ಜೂನ್ 1, 2012

ಮೂರು ರೀತಿಯ ಭಕ್ತರು


01
2012............................... ಬೆ೦ಗಳೂರು, ಕರ್ನಾಟಕ, ಭಾರತ
Jun

ಮೂರು ರೀತಿಯ ಭಕ್ತರಿದ್ದಾರೆ.
ಮೊದಲನೆಯ ರೀತಿಯ ಭಕ್ತನೆಂದರೆ, "ದೇವರೇ ನನಗಿದನ್ನು ಕೊಡಿ", "ದೇವರೇ ನನಗದನ್ನು ಕೊಡಿ" ಎಂದು ಕೇಳುತ್ತಾ ಇರುವವನು.
ಎರಡನೆಯ ರೀತಿಯ ಭಕ್ತನೆಂದರೆ, ಯಾವತ್ತೂ ಕೃತಜ್ಞನಾಗಿರುವವನು, "ಧನ್ಯವಾದಗಳು ದೇವರೇ, ನೀವು ನನಗೆ ಇದನ್ನು ನೀಡಿದಿರಿ ಮತ್ತು ನೀವು ನನಗೆ ಅದನ್ನು ನೀಡಿದಿರಿ", ಭಾವುಕನಾಗಿರುವ, ಪ್ರಾರ್ಥನಾಪರನಾಗಿರುವ ಮತ್ತು ಕೃತಜ್ಞತೆಯಿಂದ ಅಳುತ್ತಾ ಇರುವ ಭಕ್ತ.
ಮೂರನೆಯ ರೀತಿಯ ಭಕ್ತನೆಂದರೆ, ಯಾವತ್ತೂ ಸಂತೋಷವಾಗಿರುವವನು, ನಗುತ್ತಾ, ಕುಣಿಯುತ್ತಾ ಮತ್ತು ಹಾಡುತ್ತಾ ಇರುವವನು - ಸಂತೋಷವಾಗಿರುವ ಭಕ್ತ.
ಎಲ್ಲಾ ಮೂವರು ಬೇರೆ ಬೇರೆ ರೀತಿಯ ಭಕ್ತರು ಮತ್ತು ಆದರೂ ಎಲ್ಲಾ ಮೂವರು ಪರಮೋಚ್ಛರು. ಒಬ್ಬನು ಇನ್ನೊಬ್ಬನಿಗಿಂತ ಉತ್ತಮವೆಂದಿಲ್ಲ. ಅದು ಹಾಗಿಲ್ಲ. ಒಬ್ಬ ಅಳುವ ಭಕ್ತ, ಒಬ್ಬ ನಗುವ ಭಕ್ತ ಮತ್ತು ಒಬ್ಬ ಕೇಳುತ್ತಾ ಇರುವ ಭಕ್ತ - ನೀವು ಯಾವ ವಿಭಾಗದಲ್ಲಿರುವಿರಿ, ಅದನ್ನು ನೀವಾಗಿಯೇ ಕಂಡುಕೊಳ್ಳಬಹುದು. ಎಲ್ಲಾ ಮೂವರ ಸ್ವಲ್ಪ ಅಂಶವು ನಿಮ್ಮಲ್ಲಿರುವ ಸಾಧ್ಯತೆಯಿದೆ. ಅದು ಕೂಡಾ ಸರಿ. ಆಗ ಅವನು ನಾಲ್ಕನೆಯ ರೀತಿಯ ಭಕ್ತನಾಗುತ್ತಾನೆ - ಎಲ್ಲಾ ಮೂವರ ಸ್ವಲ್ಪ ಅಂಶ ಇರುವವನು.
ಒಂದಲ್ಲ ಒಂದು ಕಡೆಯಲ್ಲಿ ಕೇವಲ ಮೋಜಿನಲ್ಲಿ ಮಾತ್ರ ಕಳೆದುಹೋಗುವವನಿಗೆ ಆಳವಾದ ಅನುಭವವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಆಳವಾದ ಅನುಭವವೂ ಕೂಡಾ ಅಗತ್ಯವಾದುದಾಗಿದೆ. ಅದಕ್ಕೇ ಸಂತ ಕಬೀರ ದಾಸನು ಹೇಳಿದುದು, "ಕಬೀರಾ ಹಸನಾ ದೂರ್ ಕರ್, ರೋನೆ ಸೆ ಕರ್ ಪ್ರೀತ್, ಬಿನ್ ರೋಯೆ ಕಿತ್ ಪಾಯಿಯೆ, ಪ್ರೇಮ್ ಪಿಯಾರಾ ಮೀತ್" (ಕಬೀರಾ ನಗುವುದ ಮಾಡು ದೂರ, ಅಳುವಿನೊಂದಿಗೆ ಮಾಡು ಪ್ರೇಮ, ಅಳದಿದ್ದಲ್ಲಿ ಪಡೆಯುವೆ ಹೇಗೆ, ಪ್ರಿಯವಾದವನ ಪ್ರೇಮ). ಆದರೆ ಕಬೀರನು ಹೇಳುತ್ತಿರುವ ಅಳು ಒಂದು ಬೇರೆ ರೀತಿಯದು, ಅದು ಗದ್ಗದಿತವಾಗಿ ಮತ್ತು ಆಭಾರಿಯಾಗಿ ಬರುವ ಅಳು. ಅದು ಒಬ್ಬನು, ಇದರ ಕೊರತೆಯಿದೆ, ಅದರ ಕೊರತೆಯಿದೆ, ಇದು ಆಗಲಿಲ್ಲ, ಅದು ಆಗಲಿಲ್ಲ ಎಂದು ಭಾವಿಸಿಕೊಂಡು ಅಳುವ ರೀತಿಯ ಅಳುವಲ್ಲ - ಅವನು ಈ ರೀತಿಯ ಪ್ರಾಪಂಚಿಕ ವಸ್ತುಗಳಿಗಾಗಿ ಅಥವಾ ಮಾಯೆಗಾಗಿ ಅಳುವುದನ್ನು ಉಲ್ಲೇಖಿಸಿ ಹೇಳುತ್ತಿಲ್ಲ. ಅತ್ಯಾನಂದದಿಂದ ಮತ್ತು ಭಕ್ತಿಯಿಂದ ಅಳುವವರನ್ನು ಕುರಿತು ಅವನು ಹೇಳುತ್ತಿದ್ದಾನೆ. ಆದುದರಿಂದ ಅದು ಕೂಡಾ ಬೇಕು.
ಆದರೆ ಸಂತೋಷವಾಗಿರುವ ಭಕ್ತರು ಜ್ಞಾನಿಗಳು ಯಾಕೆಂದರೆ, ದೇವರು ಇಲ್ಲಿಯೇ ಇದ್ದಾರೆಂದು ಅವರು ತಿಳಿದಿರುತ್ತಾರೆ - ಅವರು ನನ್ನೊಳಗಿದ್ದಾರೆ ಮತ್ತು ಅವರು ಈ ಕ್ಷಣದಲ್ಲಿಯೇ ಇದ್ದಾರೆ.
ಹೆಚ್ಚಾಗಿ ಜನರು ಯೋಚಿಸುವುದೇನೆಂದರೆ ದೇವರು ಬೇರೆಲ್ಲಿಯೋ ಇದ್ದಾರೆಂದು; ಅವರು ಹಿಂದೆ ಯಾವತ್ತೋ ಅಸ್ಥಿತ್ವದಲ್ಲಿದ್ದರು ಅಥವಾ ಭವಿಷ್ಯದಲ್ಲಿ ಯಾವತ್ತಾದರೂ ಬರಬಹುದು ಎಂದು. ದೇವರು ಇಲ್ಲಿಯೇ ಇದ್ದಾರೆ, ಈಗಲೇ ಇದ್ದಾರೆ, ಎಲ್ಲರೊಳಗೆ ಇದ್ದಾರೆ, ನನ್ನೊಳಗೆ ಇದ್ದಾರೆ ಎಂಬುದನ್ನು ಅವರು ಮರೆತು ಬಿಡುತ್ತಾರೆ. ಕೇವಲ ಇದು ಮನವರಿಕೆಯಾಗಬೇಕು. ಇದಕ್ಕಾಗಿ ಮಾತ್ರವೇ ನೀವು ಈ ಎಲ್ಲಾ ಕಸರತ್ತುಗಳನ್ನು, ಅಭ್ಯಾಸಗಳನ್ನು ಮಾಡುತ್ತಿರುವುದು. ಇಲ್ಲದಿದ್ದರೆ ದಿನವಿಡೀ ಈ ಅಭ್ಯಾಸಗಳನ್ನು ಮಾಡುವುದರ ಅರ್ಥವೇನು - ಪ್ರಾಣಾಯಾಮ, ಆಸನ, ಕೀರ್ತನೆ, ಭಜನೆ, ಸೇವೆ ಮಾಡುವುದು - ಇವುಗಳೆಲ್ಲದರ ಸಾರವೇನು? ದೇವರು ನನ್ನೊಳಗಿದ್ದಾರೆ, ಇಲ್ಲೇ ಮತ್ತು ಈಗಲೇ ಎಂಬುದನ್ನು ತಿಳಿಯಲು.
ಇವತ್ತಿಗೆ ಇಷ್ಟೇ! ಜಾಸ್ತಿ ಜ್ಞಾನದ ಮಾತುಗಳನ್ನು ಕೇಳುವುದರಿಂದ ಅಜೀರ್ಣವಾಗುತ್ತದೆ. ಅದನ್ನು ಜೀರ್ಣಿಸಲು ಕಷ್ಟವಾಗುತ್ತದೆ. ಕೇವಲ ಇಷ್ಟನ್ನು ಜೀರ್ಣಿಸಿಕೊಳ್ಳಿ. ಇವತ್ತು ಗುರೂಜಿಯು ಕೇವಲ ಒಂದೇ ಒಂದು ವಾಕ್ಯವನ್ನು ಮಾತನಾಡಿದರು - "ದೇವರು ಇಲ್ಲಿಯೇ, ಈಗಲೇ, ನನ್ನೊಳಗೆ ಮತ್ತು ಎಲ್ಲರೊಳಗೆ ಇದ್ದಾರೆ".