ಸೋಮವಾರ, ಜೂನ್ 4, 2012

ಕರ್ಮದ ಮಾರ್ಗಗಳು ಅತಿ ವಿಚಿತ್ರ


04
2012............................... ಬೆಂಗಳೂರು ಆಶ್ರಮ
Jun

ಯಾರಿಗೂ ಯಾವುದೇ ತೊಂದರೆ ನೀಡದಿದ್ದರೂ ಅಥವಾ ಯಾವುದೇ ತಪ್ಪು ಮಾಡದಿದ್ದರೂ ಜನರು ನಿಮ್ಮ ಶತ್ರುಗಳಾದ ಅನುಭವ ನಿಮ್ಮಲ್ಲಿ ಎಷ್ಟು ಮಂದಿಗಾಗಿದೆ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಬಹಳ ಮಂದಿ! ಈಗ ನನಗೆ ಹೇಳಿ, ನೀವು ಯಾವುದೇ ದೊಡ್ಡ ಉಪಕಾರಗಳನ್ನು ಮಾಡಲಿಲ್ಲ, ಆದರೂ ಕೆಲವು ಜನರು ನಿಮ್ಮ ಸ್ನೇಹಿತರಾಗಿದ್ದಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವೂ ಆಗಿದೆ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಇದನ್ನು ನೋಡಿ! ನೀವು ಯಾರಿಗೂ ಯಾವುದೇ ತೊಂದರೆಯನ್ನೂ ನೀಡಲಿಲ್ಲ, ಆದರೂ ಜನರು ನಿಮ್ಮ ಶತ್ರುಗಳಾದರು ಮತ್ತು ನೀವು ಒಬ್ಬರಿಗೆ ಯಾವುದೇ ಒಳ್ಳೆಯದನ್ನು ಮಾಡದಿದ್ದರೂ ಅವರು ಒಳ್ಳೆಯ ಸ್ನೇಹಿತರಾದರು. ಇದೊಂದು ಬಹಳ ವಿಚಿತ್ರವಾದ ಕರ್ಮ. ಅದಕ್ಕೇ ಹೇಳಿರುವುದು ಕರ್ಮದ ಮಾರ್ಗಗಳು ಅಳೆಯಲು ಸಾಧ್ಯವಿಲ್ಲದವು ಎಂದು. "ಆಗಬೇಕಾಗಿರುವ ಕರ್ಮ ಮತ್ತು ಮಾಡುವ ಕರ್ಮಗಳ ನಡುವೆ ಬಹಳ ವ್ಯತ್ಯಾಸವಿದೆ". ಆಗ ಬೇಕಾದ ಘಟನೆಗಳು ಆಗುತ್ತಿರುತ್ತವೆ ಮತ್ತು ನಾವು ಮಾಡುವುದು ಬೇರೆ ವಿಷಯ. ಅದಕ್ಕಾಗಿಯೇ ಕರ್ಮದ ಮಾರ್ಗಗಳು ತುಂಬಾ ವಿಚಿತ್ರವಾಗಿವೆ. ಅದಕ್ಕಾಗಿಯೇ ನಾನು ನಿಮಗೆ ಹೇಳುವುದು, ನಿಮ್ಮೆಲ್ಲಾ ಮಿತ್ರರನ್ನು ಮತ್ತು ಶತ್ರುಗಳನ್ನು ಒಂದು ಪಕ್ಕಕ್ಕಿಟ್ಟು ವಿಶ್ರಾಮ ಮಾಡಿ; ವಿಶ್ರಾಂತಿ ತೆಗೆದುಕೊಳ್ಳಿ ಹಾಗೂ ಒಬ್ಬ ಈಶ್ವರನಲ್ಲಿ ವಿಶ್ವಾಸವನ್ನಿಡಿ.
ಇದನ್ನೇ ಭಗವಂತ ಕೃಷ್ಣನು ಅರ್ಜುನನಿಗೆ ಹೇಳಿದುದು, "ಸಮಃ ಶತ್ರೌ ಚ ಮಿತ್ರೆ ಚ ತಥಾ ಮಾನಾಪಮಾನಯೋಃ ಶೀತೋಷ್ಣ-ಸುಖ-ದುಃಖೇಷು ಸಮಃ ಸಂಗವಿವರ್ಜಿತಃ". ನಿನ್ನ ಮನಸ್ಸಿನ ಸಮತೆಯನ್ನು ಕಳೆದುಕೊಳ್ಳಬೇಡ. ಯಾವಾಗ, ಎಲ್ಲಿ, ಏನಾಗುತ್ತದೆಯೆಂದು ನಿನಗೆ ಗೊತ್ತಿಲ್ಲ. ಯಾವಾಗ ಒಬ್ಬ ಸ್ನೇಹಿತನು ಶತ್ರುವಾಗುವನು ಮತ್ತು ಯಾವಾಗ ಒಬ್ಬ ಶತ್ರು ಸ್ನೇಹಿತನಾಗುವನು ಯಾವುದೂ ತಿಳಿಯದು ಈ ಪ್ರಪಂಚದಲ್ಲಿ. ಆದುದರಿಂದ ಪ್ರಾಮಾಣಿಕವಾಗಿ ವಿಶ್ರಾಮ ಮಾಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ಪ್ರಾಮಾಣಿಕವಾಗಿ ಧ್ಯಾನ ಮಾಡಿ.
ಪ್ರಶ್ನೆ: ಗುರೂಜಿ, ಹುಣ್ಣಿಮೆಯ ದಿನದಂದು ಗುರುವನ್ನು ಭೇಟಿಯಾಗುವುದು ಬಹಳ ಒಳ್ಳೆಯದೆಂದು ಹೇಳಲಾಗಿದೆ.
ಶ್ರೀ ಶ್ರೀ ರವಿಶಂಕರ್:
ಹೌದು. ಚಂದ್ರನು ಸಮುದ್ರದ ಮೇಲೆ ಪ್ರಭಾವ ಬೀರುತ್ತಾನೆಂಬುದು ನಿಮಗೆ ಗೊತ್ತಿದೆಯಾ? ಹುಣ್ಣಿಮೆಯ ದಿನ ಅಲೆಗಳು ಎತ್ತರಕ್ಕೇರುತ್ತವೆ. ಚಂದ್ರನು ನೀರಿನ ಮೇಲೆ ಪ್ರಭಾವ ಬೀರುತ್ತಾನೆ - ಇದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಶರೀರವು ನೀರಿನಿಂದ ಮಾಡಲ್ಪಟ್ಟಿದೆ. ನಮ್ಮ ಶರೀರದ ಸುಮಾರು ೬೦% ವು ನೀರಿನಿಂದ ಮಾಡಲ್ಪಟ್ಟಿದೆ ಮತ್ತು ಸಮುದ್ರದಂತೆ ಅದು ಉಪ್ಪಿನಂಶವನ್ನು ಹೊಂದಿದೆ. ಆದುದರಿಂದ ನಿಮ್ಮ ಶರೀರವು ಸಮುದ್ರ ನೀರಿನ ಒಂದು ಚಿಕ್ಕ ಕ್ಯಾಪ್ಸೂಲ್ ಆಗಿದೆ. ಆದುದರಿಂದ ಚಂದ್ರನು ಶರೀರದ ಮೇಲೆ ಪ್ರಭಾವ ಬೀರುತ್ತಾನೆ ಮತ್ತು ಶರೀರದ ಮೇಲೆ ಪ್ರಭಾವ ಬೀರುವುದೆಲ್ಲವೂ ಮನಸ್ಸಿನ ಮೇಲೆ ಕೂಡಾ ಪ್ರಭಾವ ಬೀರುತ್ತದೆ. ಅದಕ್ಕಾಗಿಯೇ ಮಾನಸಿಕ ಅಸ್ವಸ್ಥರನ್ನು ಲ್ಯುನಾಟಿಕ್ಸ್ (ಲ್ಯುನಾರ್=ಚಂದ್ರನಿಗೆ ಸಂಬಂಧಿಸಿದ) ಎಂದು ಕರೆಯುವುದು. ಆ ಶಬ್ದವೇ ಹೇಳುತ್ತದೆ, ಲ್ಯುನಾಟಿಕ್ಸ್ ಎಂದು.
ಅದಕ್ಕಾಗಿಯೇ ನಮ್ಮ ಪೂರ್ವಿಕರು ಏಕಾದಶಿ (ಹಿಂದೂ ಪಂಚಾಂಗದ ಪ್ರಕಾರ  ಕೃಷ್ಣ ಮತ್ತು ಶುಕ್ಲ ಪಕ್ಷದ ಹನ್ನೊಂದನೆಯ ದಿನ)ಯಂದು ಉಪವಾಸ ಮಾಡಲು ಹೇಳಿದರು. ಅವರು ಇದನ್ನು ಯಾಕೆ ಹೇಳಿದರೆಂದರೆ, ಹೊಟ್ಟೆಯನ್ನು ಖಾಲಿಯಾಗಿರಿಸಿದಾಗ, ಶರೀರದಲ್ಲಿನ ವಿಷಪದಾರ್ಥಗಳು ಹೊರಟು ಹೋಗುತ್ತವೆ. ಉಪವಾಸವು ಶರೀರದ ಮೇಲೆ, ಶುದ್ಧಗೊಳಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ಅದು ಎಲ್ಲಾ ಜೀರ್ಣವಾಗದ ಆಹಾರ, ವಿಷ ಪದಾರ್ಥ ಮುಂತಾದವುಗಳನ್ನು ನಿವಾರಿಸಿ ಸ್ವಚ್ಛಗೊಳಿಸುತ್ತದೆ. ಆದುದರಿಂದ, ಹುಣ್ಣಿಮೆಗಿಂತ ಮೂರು ದಿನ ಮೊದಲು ನೀವು ಉಪವಾಸ ಮಾಡಿದರೆ, ಹುಣ್ಣಿಮೆಯ ದಿನ ನಿಮಗೆ ಯಾವುದೇ ರೋಗಗಳಿರುವುದಿಲ್ಲ - ಇದು ನಂಬಿಕೆ. ಪ್ರತಿ ಏಕಾದಶಿಯಂದೂ ನೀವು ಉಪವಾಸ ಮಾಡಲೇಬೇಕೆಂದೇನೂ ಇಲ್ಲ, ಆದರೆ ಒಂದು ವರ್ಷದಲ್ಲಿ ಕನಿಷ್ಠಪಕ್ಷ ಎರಡರಿಂದ ಮೂರು ದಿನ ನೀವು ಉಪವಾಸ ಮಾಡಿದರೆ ಒಳ್ಳೆಯದು.
ಪ್ರಶ್ನೆ: ನಾವು ನಿಮಗಿರುವಂತಹ ಕ್ಷಮತೆಯನ್ನು ಪಡೆಯುವುದು ಹೇಗೆ? ಅಥವಾ ನೀವು ಈ ಪೃಥ್ವಿಯಲ್ಲಿರುವುದು ಒಂದು ಬೇರೆ ಘಟನೆಯೇ? ನಾನು ನಿಮ್ಮಷ್ಟು ಶಕ್ತಿಶಾಲಿಯಾಗುವುದು ಹೇಗೆ? ಈ ಪ್ರಪಂಚದಲ್ಲಿ ಎಲ್ಲರೂ ಶಕ್ತಿಯನ್ನು ಪ್ರೀತಿಸುತ್ತಾರೆ.
ಶ್ರೀ ಶ್ರೀ ರವಿಶಂಕರ್:
ಅತ್ಯಂತ ದೊಡ್ಡ ಶಕ್ತಿಯೆಂದರೆ ವಿಶ್ರಾಂತಿ; ಆಳವಾದ ವಿಶ್ರಾಂತಿ ಮತ್ತು ಪ್ರೇಮ. ಈ ಎರಡು ವಿಷಯಗಳು ಜೀವನದಲ್ಲಿದ್ದರೆ, ಆಗ ಉಳಿದುದೆಲ್ಲವೂ ಬರುತ್ತವೆ. ಅದು ಆಗುತ್ತದೆ. ನೋಡು, ಈಗ ನೀನು ನನಗೆ ಸೇರಿದವನು ಮತ್ತು ನಾನು ನಿನಗೆ ಸೇರಿದವನು, ಹೀಗಿರುವಾಗ ನೀನು ಸಮೃದ್ಧಿಯನ್ನು ಅನುಭವಿಸಬೇಕು. ನಿನ್ನಲ್ಲಿ ಎಲ್ಲವೂ ಇದೆ ಹಾಗೂ ಯಾವುದೇ ಕೊರತೆಯಿಲ್ಲವೆಂಬುದನ್ನು ತಿಳಿ. ನೀನು ನಿನ್ನಲ್ಲಿಯೇ ಯಾವುದಾದರೂ ದೋಷ ಅಥವಾ ಕುಂದನ್ನು ಕಂಡಾಗ, ಧ್ಯಾನ ಮಾಡು ಮತ್ತು ನಿನ್ನ ಸಾಧನೆಯನ್ನು ಮಾಡು. ನಿನ್ನ ಅಭ್ಯಾಸಗಳ ಮೂಲಕ ನೀನು ಅದರಿಂದ ಹೊರಬರುವೆ.
ಪ್ರಶ್ನೆ: ಗುರೂಜಿ, ಸಮರ್ಪಣೆಯೆಂದರೇನು ಮತ್ತು ಯಾವುದರ ಬಗ್ಗೆ ಸಮರ್ಪಣೆಯನ್ನಿರಿಸಿಕೊಳ್ಳಬೇಕು?
ಶ್ರೀ ಶ್ರೀ ರವಿಶಂಕರ್: ನೋಡಿ, ನಿಮಗೆ, "ನಮ್ಮಲ್ಲೊಂದು ದುರ್ಗುಣವಿದೆ, ದುಃಖವಿದೆ, ನೋವಿದೆ, ಪೀಡೆಯಿದೆ" ಎಂದು ಅನ್ನಿಸಿದರೆ, ಅವುಗಳನ್ನೆಲ್ಲಾ ಸಮರ್ಪಣೆ ಮಾಡಿ, ಮತ್ತು ವಿಶ್ರಾಮ ಮಾಡಿ. ಹೇಗೆಂದರೆ, ಮನೆಯಲ್ಲಿ ಒಂದು ಮಗು ಆಟವಾಡುತ್ತಿರುತ್ತದೆ. ಅದಕ್ಕೆ ತಿಳಿದಿರುತ್ತದೆ, ಮನೆಯಲ್ಲಿ ತಂದೆ-ತಾಯಿ ಇದ್ದಾರೆಂದು. ಮಗುವಿಗೆ ಧೈರ್ಯ ಬರುತ್ತದೆ. ಅದು ಸ್ವಲ್ಪ ದೂರ ಹೋಗಿ ಆಟ ಆಡುತ್ತದೆ. ತೊಂದರೆ ಆದರೆ ಬಂದು ತಾಯಿಯ ಮಡಿಲಿನಲ್ಲಿ ಕುಳಿತುಕೊಳ್ಳುತ್ತದೆ. ಖುಷಿಯಾದರೂ ತಾಯಿಯ ಮಡಿಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ. ಇದಕ್ಕೆ ನಾವು ಸಮರ್ಪಣೆಯೆನ್ನುತ್ತೇವೆ. ನಮ್ಮಲ್ಲಿ ಏನಿದ್ದರೂ ಅದನ್ನು ನಾವು ಪರಮಾತ್ಮನಿಗೆ ಸಮರ್ಪಣೆ ಮಾಡುವುದು. ಅವಗುಣಗಳಿದ್ದರೆ ಅವುಗಳನ್ನೂ ನಾವು ಅವನಿಗೆ ಸಮರ್ಪಣೆ ಮಾಡುವುದು, ಗುಣವಿದ್ದರೆ ಅದನ್ನೂ ಸಮರ್ಪಣೆ ಮಾಡುವುದು. ಇದು ಬಹಳ ಅವಶ್ಯವಾಗಿದೆ. ಆಗ ಮನಸ್ಸು ಹಗುರವಾಗಿರುತ್ತದೆ. ಇಲ್ಲದಿದ್ದರೆ, ನಾವು ತಪ್ಪು ಮಾಡಿದೆವೆಂದು ಅದನ್ನು ತಲೆಯಲ್ಲಿ ಹೊತ್ತುಕೊಂಡು ಹೋದರೆ, ಖಾಯಿಲೆಗಳು ಬರಲು ಶುರುವಾಗುತ್ತದೆ. ಏನಾದರೂ, ಆದದ್ದನ್ನೆಲ್ಲಾ ಸಮರ್ಪಣೆ ಮಾಡಿ ವಿಶ್ರಾಮ ಮಾಡುತ್ತಾ ಬಂದರೆ ನಮ್ಮಿಂದ ತಪ್ಪು ಆಗುವುದೇ ಇಲ್ಲ. ಹಾಗಾಗುತ್ತದೆ ಪರಿಸ್ಥಿತಿ.
ಪ್ರಶ್ನೆ: ಬಲಿ ಕೊಡುವುದನ್ನು ದೇವರ ಕೆಲಸವೆಂದು ಅಂದುಕೊಳ್ಳುತ್ತಾರೆ. ಅವರಿಗೆ ಹೇಗೆ ತಿಳುವಳಿಕೆ ನೀಡುವುದು?
ಶ್ರೀ ಶ್ರೀ ರವಿಶಂಕರ್:
ಅವರು ಮೂರ್ಖ ಜನರು. ಅದು ತಪ್ಪು.  ಅವರಿಗೆ ಹೇಳಬೇಕು, ಬಲಿ ಕೊಡುವುದು ಪಶುತ್ವವನ್ನು, ಪಶುವನ್ನಲ್ಲ ಎಂದು.
ಪ್ರಶ್ನೆ: ಗುರೂಜಿ, ನಿಃಸಂಕಲ್ಪೋ ಭವ ಅಂದರೆ ಸಂಕಲ್ಪ ಶೂನ್ಯನಾಗು ಎಂದು ಹೇಳಲಾಗುತ್ತದೆ. ನಾನೊಬ್ಬ ವ್ಯಸ್ತ ಕಾರ್ಯನಿರ್ವಾಹಕ. ಸಂಕಲ್ಪವಿಲ್ಲದೆಯೇ ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನೋಡು, ಎರಡು ವಿಷಯಗಳಿವೆ, ಪ್ರವೃತ್ತಿ ಮತ್ತು ನಿವೃತ್ತಿ. ಅವುಗಳೆರಡನ್ನು ಮಿಶ್ರಗೊಳಿಸಬೇಡ.
ನಾವು ಗಮನ ಹರಿಸಬೇಕಾದ ಎರಡು ಮನೋಭಾವನೆಗಳಿವೆ. ಒಂದು, ನೀವು ಒಳಮುಖವಾಗಿ ಹೋಗುವಾಗ (ನಿವೃತ್ತಿ), ಎಲ್ಲವೂ ಚೆನ್ನಾಗಿದೆ ಮತ್ತು ನನಗೇನೂ ಬೇಡವೆಂದು ನೀವು ಅಂದುಕೊಳ್ಳಬೇಕು. ಅದು ಧ್ಯಾನವೆಂದು ಕರೆಯಲ್ಪಡುತ್ತದೆ.
ನೀವು ಹೊರ ಬಂದು ಕೆಲಸ ಮಾಡಬೇಕಾಗಿ ಬಂದಾಗ (ಪ್ರವೃತ್ತಿ), ಚಿಕ್ಕ ವಿವರಗಳಲ್ಲೂ ಕೂಡಾ  ಪರಿಪೂರ್ಣತೆಯನ್ನು ಹುಡುಕಿ. ನಿಮ್ಮ ಸಂಪೂರ್ಣ ಗಮನವನ್ನು ಹಾಕಿ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಭಗವಂತ ರಾಮ ಮತ್ತು ಭಗವಂತ ಕೃಷ್ಣನ ಜೀವನದ ಸಂದೇಶವು ಇದೇ. ನೀವು ಹೊರಬಂದು ಕೆಲಸ ಮಾಡಬೇಕಾಗಿ ಬಂದಾಗ (ಪ್ರವೃತ್ತಿ), ಚಿಕ್ಕ ವಿವರಗಳಲ್ಲೂ ಪರಿಪೂರ್ಣತೆಯನ್ನು ಹುಡುಕಿ. ಯಾವಾಗೆಲ್ಲಾ ನಿಮಗೆ ಅಪೂರ್ಣತೆಯು ಕಂಡುಬರುತ್ತದೋ, ಆವಾಗೆಲ್ಲಾ ನೀವು ಅದನ್ನು ಹೇಗೆ ಸರಿಪಡಿಸಬಲ್ಲಿರಿ ಎಂಬುದರ ಬಗ್ಗೆ ಗಮನ ಹರಿಸಬೇಕು. ನೀವು ನಿವೃತ್ತರಾಗಬೇಕಾದಾಗ ಹೇಳಿ, "ಎಲ್ಲವೂ ಸರಿಯಾಗಿದೆ" ಎಂದು. ಈ ಮನೋಭಾವವು ನೀವು ಧ್ಯಾನದಲ್ಲಿ ಆಳಕ್ಕೆ ಹೋಗಲು ಸಹಾಯ ಮಾಡುತ್ತದೆ. ಇದು ನಿವೃತ್ತಿಯ ಪಥ. ಅದಕ್ಕಾಗಿಯೇ ಪ್ರವೃತ್ತಿ ಮತ್ತು ನಿವೃತ್ತಿಯ ನಡುವಿನ ವ್ಯತ್ಯಾಸವನ್ನು ತಿಳಿದವನಿಗೆ ಸಾತ್ವಿಕ ಬುದ್ಧಿಯಿರುವುದೆಂದು ಹೇಳುವುದು. ಅವನು ಬುದ್ಧಿವಂತನೆಂದು ಕರೆಯಲ್ಪಡುತ್ತಾನೆ.
ಬುದ್ಧಿವಂತನ ಇನ್ನೊಂದು ಲಕ್ಷಣವೇನು? ಅವನು ಒಬ್ಬ ಕೆಟ್ಟ ವ್ಯಕ್ತಿಯಲ್ಲೂ ಒಳ್ಳೆತನವನ್ನು ಕಾಣಲು ಸಮರ್ಥನಾಗಿರುತ್ತಾನೆ; ಎಲ್ಲರಲ್ಲೂ ಅವನು ಒಳ್ಳೆಯತನವನ್ನು ಕಾಣುತ್ತಾನೆ. ನೀವೊಂದು ಸೆರೆಮನೆಗೆ ಹೋಗಿ ಮತ್ತು ಅತ್ಯಂತ ದೊಡ್ಡ ಅಪರಾಧಿಯಲ್ಲೂ ನಿಮಗೆ ಏನೋ ಒಳ್ಳೆಯದು ಕಂಡುಬರುತ್ತದೆ. ತಪ್ಪಿತಸ್ಥನಲ್ಲಿ ಒಳ್ಳೆಯದನ್ನು ಕಾಣುವುದು ಬುದ್ಧಿವಂತಿಕೆಯ ಲಕ್ಷಣ.
ಬುದ್ಧಿವಂತ ವ್ಯಕ್ತಿಯು ಅತ್ಯಂತ ಕೆಟ್ಟ ಜನರಲ್ಲೂ ಏನೋ ಒಳ್ಳೆಯದನ್ನು ಕಂಡುಹಿಡಿಯುತ್ತಾನೆ, ಆದರೆ ಒಬ್ಬ ಮೂರ್ಖ ವ್ಯಕ್ತಿಯು ಅತ್ಯುತ್ತಮ ಜನರಿಂದಲೂ ಏನೋ ಕೆಟ್ಟದನ್ನು ಕೆದಕಿ ತೆಗೆಯುತ್ತಾನೆ ಮತ್ತು ಹೀಗೆ ಮಾಡುವ ಜನರಿದ್ದಾರೆ.
ಅಮೇರಿಕಾದಲ್ಲಿ ಯಾರೋ ಒಬ್ಬನು, ರಾಮಕೃಷ್ಣ ಪರಮಹಂಸರು ಹುಚ್ಚರು ಎಂಬ ಪುಸ್ತಕವನ್ನು ಬರೆದನು. ಅವನು, ಅವರಲ್ಲಿ ಹಲವಾರು ನಕಾರಾತ್ಮಕತೆಗಳಿದ್ದವು, ಸ್ವಾಮಿ ವಿವೇಕಾನಂದರಲ್ಲಿ ಇಷ್ಟು ನಕಾರಾತ್ಮಕ ಗುಣಗಳಿವೆ ಮತ್ತು ಎಲ್ಲಾ ಹಿಂದೂ ಸಂತರಲ್ಲಿ ಒಂದಲ್ಲ ಒಂದು ಕೆಟ್ಟ ಗುಣಗಳಿವೆ ಎಂದು ಕೂಡಾ ಸಾಬೀತುಪಡಿಸಿದನು. ಅವನು ಅದನ್ನು ಒಂದು ಪಠ್ಯಪುಸ್ತಕವನ್ನಾಗಿ ಮಾಡಿದ್ದಾನೆ. ಇದು ಮೂರ್ಖತನದ ಒಂದು ಲಕ್ಷಣ, ಒಳ್ಳೆಯ ಜನರಲ್ಲಿ ಏನಾದರೂ ಕೆಟ್ಟದನ್ನು ಹುಡುಕುವುದು. ಒಬ್ಬ ಬುದ್ಧಿವಂತ ವ್ಯಕ್ತಿಯ ಲಕ್ಷಣವೆಂದರೆ, ಒಬ್ಬ ಕೆಟ್ಟ ವ್ಯಕ್ತಿಯನ್ನು ಕೂಡಾ ಮೇಲೆತ್ತುವುದು.
ಪ್ರಶ್ನೆ: ಭಗವಾನ್ ಕೃಷ್ಣನಿಗೆ ಹಲವಾರು ರೂಪಗಳಿವೆ, ಸೌಮ್ಯ, ಸುಂದರ, ಅನಂತ, ಸಹಾನುಭೂತಿಯ, ಆದರೆ ನಾವು ಯಾವಾಗಲೂ ಅವನನ್ನು ಮನಮೋಹನನಾಗಿ (ಅತ್ಯಂತ ಆಕರ್ಷಕ) ಪೂಜಿಸುವುದು ಯಾಕೆ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ನೀವು ಗುಜರಾತಿಗೆ ಹೋದರೆ, ಅವನು ರಣ್ ಚೋಡ್ ರಾಯ್ ಆಗಿ ಪೂಜಿಸಲ್ಪಡುತ್ತಾನೆ. ಕೆಲವರು ಅವನನ್ನು ಬಾಲಕೃಷ್ಣನಾಗಿ ಪೂಜಿಸುತ್ತಾರೆ. ನಿಮಗೆ ಇಷ್ಟಬಂದ ರೂಪದಲ್ಲಿ ನೀವು ಅವನನ್ನು ಪೂಜಿಸಬಹುದು. "ಒಬ್ಬರು ನನ್ನನ್ನು ಯಾವ ರೂಪದಲ್ಲಿ ಪೂಜಿಸುತಾರೋ ಅವರ ಬಳಿಗೆ ನಾನು ಆ ರೂಪದಲ್ಲಿ ಹೋಗುತ್ತೇನೆ" ಎಂದು ಭಗವಾನ್ ಕೃಷ್ಣನು ಹೇಳುತ್ತಾನೆ. ನಾವು ಈಗ ಭಗವಾನ್ ಕೃಷ್ಣ ಎಂದು ಹೇಳುತ್ತೇವೆ ಆದರೆ ಕೃಷ್ಣನ ಕಾಲದಲ್ಲಿ, ಅವನಿಗೆ ಅಷ್ಟೊಂದು ಕೆಟ್ಟ ಮಾತುಗಳನ್ನಾಡುತ್ತಿದ್ದ ಜನರಿದ್ದರು. ಆ ಕಾಲದಲ್ಲಿ ಕೆಲವೇ ಕೆಲವು ಜನರು ಅವನನ್ನು ಅರ್ಥ ಮಾಡಿಕೊಂಡಿದ್ದರು. ಭಗವಾನ್ ಕೃಷ್ಣನೇ ಹೇಳುತ್ತಾನೆ, "ಅವಜನಂತಿ ಮಂ ಮುಧಾ ಮನುಸಿಂ ತನುಂ ಅಸ್ರಿತಂ; ಪರಂ ಭವಂ ಅಜನಂತೋ ಮಮ ಭೂತ-ಮಹೇಶ್ವರಂ". ಈ ಮೂರ್ಖ ಜನರು ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ; ಅವರು ನನ್ನನ್ನು ಈ ಶರೀರವೆಂದುಕೊಂಡಿದ್ದಾರೆ. ಆವರಿಗೆ ನನ್ನ ಅತೀಂದ್ರಿಯ ಸ್ವಭಾವದ ಬಗ್ಗೆ ತಿಳಿಯದು; ನಾನೊಬ್ಬ ಕೇವಲ ಮನುಷ್ಯನೆಂದು ಜನರಂದುಕೊಂಡಿದ್ದಾರೆ. ಅವನು ಇದನ್ನು ಹೇಳುತ್ತಿದ್ದನು! ಅದಕ್ಕೇ ಹೇಳುವುದು ದೇವರು ಎಲ್ಲೆಡೆಯೂ ಇದ್ದಾರೆ, ಈ ವಿಶ್ವದ ಪ್ರತಿಯೊಂದು ಕಣದಲ್ಲಿಯೂ ಇದ್ದಾರೆ, ನಿನ್ನಲ್ಲಿ, ನನ್ನಲ್ಲಿ ಮತ್ತು ಎಲ್ಲರಲ್ಲೂ ಇದ್ದಾರೆ ಎಂದು; ಯಾಕೆಂದರೆ ಅವನು ಪ್ರತಿಯೊಬ್ಬನಲ್ಲೂ ಇದ್ದಾನೆ, ಹೀಗಾಗಿಯೇ ಅವನು ಪರಮಾತ್ಮನಾಗಿರುವುದು.