ಶುಕ್ರವಾರ, ಜೂನ್ 29, 2012

ಮೌನ


29
2012............................... ಬೂನ್, ನಾರ್ತ್ ಕೆರೋಲಿನಾ
Jun


ಮೌನವನ್ನು ಪಾಲಿಸುವುದು ಬಹಳ ಪ್ರಯೋಜನಕರ. ಕಡಿಮೆಯೆಂದರೆ ವರ್ಷದಲ್ಲಿ ಎರಡು ಸಾರಿ ನಾವಿದನ್ನು ಮಾಡಬೇಕು. ವರ್ಷದಲ್ಲಿ ಒಂದು ಸಾರಿ ಮಾಡಲೇಬೇಕು ಮತ್ತು ವರ್ಷದಲ್ಲಿ ಎರಡು ಸಾರಿ ಮಾಡುವುದು ಬಹಳ ಒಳ್ಳೆಯದು.
ಮೌನವು ನಮ್ಮ ಮಾತನ್ನು ಶುದ್ಧಗೊಳಿಸುತ್ತದೆ. ಅನೇಕವೇಳೆ ನಾವು ಮಾತನಾಡುವಾಗ ಏನಾಗುತ್ತದೆ, ನೀವು ಗಮನಿಸಿದ್ದೀರಾ? ನೀವು ಗಮನಿಸಬೇಕು. ನೀವು ಮಾತನಾಡುವಾಗ ನಿಮ್ಮ ಮಾತು ಇತರರ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ - ಅದನ್ನು ನೀವು ಗಮನಿಸಬೇಕು. ಹಲವಾರು ಸಾರಿ, ನಾವು ಇದನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ, ನಾವು ಬಡಬಡಿಸುತ್ತಾ ಹೋಗುತ್ತೇವೆ. ನಾವು ಕೇವಲ ನಾವು ಹೇಳಲು ಬಯಸುವುದನ್ನೆಲ್ಲಾ ಹೇಳಿ ನಿರಾಳವಾಗುತ್ತೇವೆ. ಇಲ್ಲ, ನಿಮ್ಮ ಮಾತು ಇತರರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ನೀವು ನೋಡಬೇಕು.
ಭಗವದ್ಗೀತೆಯಲ್ಲಿ ಒಂದು ಸುಂದರವಾದ ದ್ವಿಪದಿಯಿದೆ. ಅದು ಹೇಳುತ್ತದೆ, "ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯ ಹಿತಂ ಚ ಯತ್." ಜನರ ಮನಸ್ಸುಗಳನ್ನು ತಳಮಳ ಮಾಡದಿರುವ ಮತ್ತು ಸತ್ಯವಾದ ಮಾತುಗಳು. ದಯೆಯಿಂದ ಕೂಡಿದ ಹಾಗೂ ಹಿತವಾಗಿರುವ ಸತ್ಯ - ಅಂತಹ ಮಾತುಗಳನ್ನು ಆಡಬೇಕು. ಅದು ಮಾತಿನ ತಪಸ್ಸು ಎಂದು ಕರೆಯಲ್ಪಡುತ್ತದೆ.
ಅದೇ ರೀತಿಯಲ್ಲಿ ಶರೀರಕ್ಕೆ, ಮಿತಾಹಾರ, ಮಿತ ವ್ಯಾಯಾಮ, ಮಿತವಾದ ಕೆಲಸ ಮತ್ತು ಮಿತವಾದ ವಿಶ್ರಾಂತಿ. ಇದು ಶರೀರಕ್ಕಿರುವ ಒಂದು ಅಭ್ಯಾಸ, ಒಂದು ತಪಸ್ಸು. ಮಾತಿನ ತಪಸ್ಸೆಂದರೆ, ಇತರರ ಮನಸ್ಸನ್ನು ತಳಮಳ ಮಾಡದಿರುವ ಮಾತುಗಳನ್ನು ಮಾತ್ರ ಆಡುವುದು.
ನೋಡಿ, ಕೆಲವೊಮ್ಮೆ ನಾವು ಸರಿಯೆಂದು ನಾವು ಯೋಚಿಸುತ್ತೇವೆ ಹಾಗೂ ನಾವು ಸರಿಯಾಗಿರಬಹುದು; ನೀವು ಸತ್ಯವನ್ನು ಮಾತನಾಡುತ್ತಿರಬಹುದು, ಅದು ದಯೆಯಿಂದ ಕೂಡಿದುದಲ್ಲವಾಗಿರಬಹುದು, ಅದು ಇನ್ನೊಬ್ಬ ವ್ಯಕ್ತಿಗೆ ಒಳ್ಳೆಯದು ಕೂಡಾ ಆಗಿರಬಹುದು, ಆದರೆ ಅದು ಹಿತವಾಗಿಲ್ಲದೇ ಇದ್ದರೆ ಮತ್ತು ಅದು ಇನ್ನೊಬ್ಬ ವ್ಯಕ್ತಿಯ ಮನಸ್ಸನ್ನು ತಳಮಳಗೊಳಿಸಿದರೆ, ಆಗ ಅದು ಸಂಪೂರ್ಣವಾಗಿರುವುದಿಲ್ಲ. ಆದುದರಿಂದ ಇದೊಂದು ದೊಡ್ಡ ಕುಶಲತೆ ಮತ್ತು ಇದು ಬಹಳ ಸುಲಭದ ಕೆಲಸವಲ್ಲ - ಯಾರದ್ದಾದರೂ ಮನಸ್ಸನ್ನು ತಳಮಳಗೊಳಿಸದೇ ಅಥವಾ ಅವರಿಗೆ ನೋವನ್ನುಂಟುಮಾಡದೇ ಇರುವುದು.
ನೋಡಿ, ನೀವು ಯಾರಿಗೋ ಕೆಲವು ಶಬ್ದಗಳನ್ನು ಹೇಳುತ್ತೀರಿ ಮತ್ತು ಆ ವ್ಯಕ್ತಿಯು ಇಡೀ ದಿನ ಅಳುತ್ತಿರುತ್ತಾರೆ ಅಥವಾ ಅಶಾಂತರಾಗಿರುತ್ತಾರೆ, ಅದು ಒಳ್ಳೆಯದಲ್ಲ. ಆದುದರಿಂದ ಹಿತವಾದ, ಸತ್ಯವಾದ ಮತ್ತು ದಯೆಯಿಂದ ಕೂಡಿದ ಮಾತುಗಳನ್ನಾಡಿ. ಅದೇ ಸಮಯದಲ್ಲಿ, ಬಹಳ ಹಿತವಾದ ಸುಳ್ಳುಗಳನ್ನಾಡಬೇಡಿ. ನಾವು ಸತ್ಯವಾದ, ದಯೆಯಿಂದ ಕೂಡಿದ, ಹಿತವಾದ ಮತ್ತು ತಳಮಳಗೊಳಿಸದ ಮಾತುಗಳನ್ನಾಡಬೇಕು. ನಿಮ್ಮ ಹಿತವಲ್ಲದ ಮಾತುಗಳಿಂದ ಇತರರ ಮನಸ್ಸು ಹಾಗೂ ಹೃದಯಗಳನ್ನು ಜಜ್ಜಬೇಡಿ.
ನೀವು ಹೇಳಬಹುದು, "ನಾನು ಯಾರಿಗೂ ನೋವನ್ನುಂಟುಮಾಡಲು ಬಯಸುವುದಿಲ್ಲ ಆದರೆ, ನೋವನ್ನುಂಟುಮಾಡುವ ಶಬ್ದಗಳು ಹಾಗೇ ನನ್ನ ಬಾಯಿಯಿಂದ ಹೊರಬೀಳುತ್ತವೆ. ನಾನೇನು ಮಾಡಲಿ?" ಮೌನ, ಇದು ಸಹಾಯ ಮಾಡಬಹುದು. ನೀವು ಮೌನವನ್ನು ಪಾಲಿಸಿ. ಧ್ಯಾನ ಮತ್ತು ಮೌನ, ಇವುಗಳೆಲ್ಲಾ ಸಹಾಯಕವಾಗಬಹುದು.
ಕೆಲವೊಮ್ಮೆ, ಅವುಗಳೆಲ್ಲದರ ಹೊರತಾಗಿಯೂ ಅದು ಬಂದರೆ, ಅದು ಆದರೆ, ಆಗ ನಿಮಗೆ ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಆಗ ಕೇವಲ ಕ್ಷಮಾಪಣೆ ಕೇಳಿಕೊಳ್ಳಿ.
ಆದುದರಿಂದ ಅದು ಒಳ್ಳೆಯದು, ನೀವು ಮೌನವನ್ನು ಪಾಲಿಸುವಾಗ ಕ್ಷಮಾಪಣೆ ಕೇಳಿಕೊಳ್ಳಿ. ನನ್ನ ಯೋಚನೆಯಿಂದ, ಶಬ್ದಗಳಿಂದ ಅಥವಾ ಕಾರ್ಯಗಳಿಂದ ಯಾರಿಗಾದರೂ ನಾನೇನಾದರೂ ಮಾಡಿದ್ದರೆ ಅಥವಾ  ನೋವನ್ನುಂಟುಮಾಡಿದ್ದರೆ, ನನಗೆ ಕ್ಷಮೆಯಿರಲಿ. ಅದು ನಮ್ಮನ್ನು ಕೆಸರು ಭೂಮಿಯಲ್ಲಿ ಹೂತು ಕೆಳಗೆ ಜಾರುವುದರಿಂದ ನಮ್ಮನ್ನು ಮೇಲೆತ್ತುತ್ತದೆ. ಸರಿಯೆಂದು ತೋರುತ್ತಿದೆಯೇ? ಹೌದು!
ನೋಡಿ, ಜೀವನದಲ್ಲಿ ಎಲ್ಲವೂ ಗುಲಾಬಿಯಂತೆ ಚೆನ್ನಾಗಿರುತ್ತದೆಯೆಂದು ನೀವು ಯೋಚಿಸಲು ಸಾಧ್ಯವಿಲ್ಲ; ಜೀವನದಲ್ಲಿ ಮುಳ್ಳುಗಳೂ ಇರುತ್ತವೆ. ಅಹಿತವಾದ ಕ್ಷಣಗಳು ಕೂಡಾ ಇರುತ್ತವೆ ಮತ್ತು ಅವುಗಳು ಬರುತ್ತವೆ, ಹೋಗುತ್ತವೆ. ನಾವು ಎಲ್ಲೂ ಸಿಕ್ಕಿಹಾಕಿಕೊಳ್ಳದೆ ಸುಮ್ಮನೇ ಮುಂದುವರಿಯಬೇಕು.