ಭಾನುವಾರ, ಜೂನ್ 10, 2012

ಧ್ಯಾನಿಸಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ


10
2012............................... ಬೆಂಗಳೂರು, ಕರ್ನಾಟಕ, ಭಾರತ
Jun

ಮ್ಮ ದೇಶವು ಋಷಿ ಮತ್ತು ಕೃಷಿಗಳ ನೆಲ. ನಮ್ಮ ಯಾವುದೇ ಪೂಜೆ ಪುನಸ್ಕಾರಗಳಲ್ಲಿ, ನಾವು ಮೊದಲು ’ಬೀಜ ವಾಪನ’ (ಬೀಜಗಳನ್ನು ಚಿಕ್ಕ ಮಣ್ಣಿನ ಮಡಕೆಗಳಲ್ಲಿ ಬಿತ್ತುವುದು) ಮತ್ತು ’ಅಂಕುರಾರ್ಪಣ’ (ಮೊಳಕೆಯ ಮೇಲೆ ನೀರು ಮತ್ತು ಹಾಲನ್ನು ಚಿಮುಕಿಸುವುದು) ಮಾಡುತ್ತೇವೆ. ಜೀವನ ಮತ್ತು ಪೂಜೆ ಬೇರೆಯಲ್ಲ. ನಮ್ಮ ಜೀವನವೇ ಒಂದು ಪೂಜೆ. ನಾವು ಎಲ್ಲಿ ನಡೆದರೂ ಅದು ಪ್ರದಕ್ಷಿಣೆಯಾಗುತ್ತದೆ. ನಾವು ಹಾಗೆ ಭಾವಿಸಬೇಕು. ಜೀವನದಲ್ಲಿ ಆ ಪವಿತ್ರತೆ ಬರಬೇಕು. ಪವಿತ್ರತೆ ಬಂದಾಗ ಮನಸ್ಸು ದೃಢವಾಗುತ್ತದೆ, ಬುದ್ಧಿ ತೀಕ್ಷ್ಣವಾಗುತ್ತದೆ ಮತ್ತು ಜೀವನದಲ್ಲಿ ಹುರುಪು, ಉತ್ಸಾಹ ಉಂಟಾಗುತ್ತದೆ. ಅದಕ್ಕೆ, ಭೂಮಿಯಲ್ಲಿ ಬೀಜ ಹಾಕಬೇಕಿದ್ದರೂ ಸರಿಯಾದ ಸಮಯ ನೋಡುವುದು, ಭಕ್ತಿಯಿಂದ ಬೀಜ ಹಾಕುವುದು.
ನಾವು ಹಿಂದಿನಿಂದಲೂ ಕೇಳುತ್ತಾ ಬಂದ ಶಬ್ದವೆಂದರೆ "ಅನ್ನದಾತಾ ಸುಖೀಭವ". ಹಿರಿಯರು ಊಟ ಮಾಡುವುದಕ್ಕಿಂತ ಮುಂಚೆ ತಟ್ಟೆಯಲ್ಲಿ ಊಟ ಬಡಿಸಿದ ಮೇಲೆ, ಕೈ ಮುಗಿದುಕೊಂಡು, "ಅನ್ನದಾತಾ ಸುಖೀಭವ" ಎಂದು ಬೇಡಿಕೊಳ್ಳುತ್ತಿದ್ದರು. ಇದರರ್ಥ, ಅನ್ನ ಕೊಟ್ಟವನು ಸುಖವಾಗಿರಲಿ ಎಂದು. ನಮಗೆ ಅನ್ನ ಕೊಡುವವರು ಯಾರು? ಮೊದಲಿಗೆ ರೈತ, ಎರಡನೆಯದಾಗಿ ವ್ಯಾಪಾರಿ, ಮೂರನೆಯದಾಗಿ ಮನೆಯ ಹೆಂಗಸು. ರೈತರು ಅನ್ನವನ್ನು ಬೆಳೆಯುತ್ತಾರೆ. ಅದನ್ನು ತಂದು ನಮಗೆ ಒದಗಿಸುವವರು ವ್ಯಾಪಾರಿಗಳು. ಅದಾದ ಮೇಲೆ ಇನ್ನೊಬ್ಬರು ಮನೆಯ ಹೆಂಗಸರು, ತಾಯಂದಿರು. ತಂದ ಉತ್ಪಾದನೆಯನ್ನು ಅಡುಗೆ ಮಾಡಿ ಇವರು ನಮಗೆ ಬಡಿಸುತ್ತಾರೆ. ಇವರು ಮೂವರೂ ಸುಖವಾಗಿರಲಿ. ಇವರಲ್ಲಿ ಯಾರಲ್ಲೇ ಕಣ್ಣು ನೀರು ಬಿದ್ದರೂ ನಮ್ಮ ಜೀವನ ಸರಿ ಹೋಗುವುದಿಲ್ಲ.
ಬೆಳೆಯುವವರು ಚೆನ್ನಾಗಿ ಬೆಳೆಯುತ್ತಾರೆ, ಆದರೆ ವ್ಯಾಪಾರಿಗಳು ಸರಿಯಾಗಿ ಯೋಜನೆ ಮಾಡದೇ ಇದ್ದಲ್ಲಿ, ರೈತರಿಗೆ ಸರಿಯಾಗಿ ಬೆಲೆ ಕೊಟ್ಟು ಕೊಂಡುಕೊಳ್ಳದೇ ಇದ್ದಲ್ಲಿ, ಜನರಿಗೆ ತಲುಪಿಸದೇ ಇದ್ದರೆ, ಅವರು ದೊಡ್ಡ ತಪ್ಪು ಮಾಡುತ್ತಾರೆ. ಹಾಗೆಯೇ ಬೆಳೆಯುವವರು ನಮ್ಮ ನೆಲ, ಜಲವನ್ನು ವಿಷಪೂರಿತವಾಗದಂತೆ ನೋಡಿಕೊಳ್ಳಬೇಕು. ಈ ತಳಿಗಳನ್ನು ಮಾರ್ಪಡಿಸುವ ಬೆಳೆಯ (ಜಿ. ಯಮ್. ಕ್ರಾಪ್ = ಜೆನೆಟಿಕಲಿ ಮಾಡಿಫೈಡ್ ಕ್ರಾಪ್) ಕಡೆಗೆ ಹೋಗುವುದು ತುಂಬಾ ತಪ್ಪು. ಸಾವಯವ ಕೃಷಿ ಮಾಡಬೇಕು. ನಮ್ಮಲ್ಲಿ ಜೀರೋ ಬಜೆಟ್ ಕೃಷಿ ತುಂಬಾ ಜನ ಮಾಡ್ತಾ ಇದ್ದಾರೆ (http://www.artofliving.org/chemical-free-farming).
ಜೀರೋ ಬಜೆಟ್ ಕೃಷಿ ಮಾಡಬೇಕು. ದುಡ್ಡು ಕೊಟ್ಟು ಬೀಜಗಳನ್ನು ತರುತ್ತೇವೆ ಮತ್ತು ಅದಕ್ಕೆ ಕೀಟನಾಶಕಗಳಂತಹ ವಿಷಗಳನ್ನು ಹಾಕುತ್ತೇವೆ. ಹಾಗೆ ಮಾಡದೆ ನಮ್ಮ ಪುರಾತನವಾದ ಋಷಿ-ಕೃಷಿಗೆ ನಾವು ಹೋದರೆ, ರೈತರೂ ಚೆನ್ನಾಗಿರುತ್ತಾರೆ. ವ್ಯಾಪಾರಿಗಳೂ ದುರಾಸೆಯಿಲ್ಲದೆ ಸರಿಯಾಗಿ ವ್ಯಾಪಾರ ಮಾಡಿದರೆ, ಅವರೂ ಕೂಡಾ ಚೆನ್ನಾಗಿರುತ್ತಾರೆ. ಅದಾದ ನಂತರ ಮನೆಯ ಹೆಂಗಸು. ಆಕೆ ಚೆನ್ನಾಗಿ ಅಡುಗೆ ಮಾಡಿ ನಮಗೆ ಬಡಿಸುತ್ತಾಳೆ. ಆಕೆ ಖುಷಿಯಾಗಿದ್ದು ನಮಗೆ ಬಡಿಸಿದರೆ ನಮ್ಮ ಹೊಟ್ಟೆ ಸರಿಯಾಗಿರುತ್ತದೆ. ಮನೆಯಲ್ಲಿ ಅಡುಗೆ ಮಾಡುವವರು ಅಳುತ್ತಾ ಅಳುತ್ತಾ ಅಡುಗೆ ಮಾಡಿ ಬಡಿಸಿದರೆ, ನಾವೂ ಅಳುತ್ತಾ ಅಳುತ್ತಾ ಅದನ್ನು ಜೀರ್ಣ ಮಾಡಿಕೊಳ್ಳಬೇಕಾಗುತ್ತದೆ. ಮೈಕೈ ನೋವು, ಹೊಟ್ಟೆ ನೋವು, ತಲೆನೋವು ಎಲ್ಲಾ ಖಾಯಿಲೆಗಳು ಬರುತ್ತವೆ. ಆದ್ದರಿಂದ ಈ ಮೂವರೂ ಸುಖವಾಗಿರಲು "ಅನ್ನದಾತಾ ಸುಖೀಭವ" ಎಂದು ಪ್ರಾರ್ಥಿಸಬೇಕು. ದಿನವೂ ಇದನ್ನು ಪ್ರಾರ್ಥಿಸಿ ಆಮೇಲೆ ಊಟ ಮಾಡಬೇಕು.
ಬುದ್ಧಿವಂತರ ಲಕ್ಷಣವೇನು ಗೊತ್ತಾ? ಬುದ್ಧಿವಂತರ ಲಕ್ಷಣವೇನೆಂದರೆ, ತೀರಾ ಕೆಟ್ಟ ಮನುಷ್ಯನಲ್ಲೂ ಒಂದು ಒಳ್ಳೆಯ ಗುಣವನ್ನು ಹುಡುಕಿ ತೆಗೆಯುವುದು. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಒಳ್ಳೆಯ ಗುಣ ಎಲ್ಲೋ ಅಡಗಿದೆ. ಅದನ್ನು ಮೇಲೆತ್ತಿ ತರುವುದು. ಇದು ಬುದ್ಧಿವಂತರ ಲಕ್ಷಣ. ಒಬ್ಬ ಅಪರಾಧಿಯಲ್ಲೂ ಕೂಡಾ ಒಳ್ಳೆಯ ಗುಣಗಳನ್ನು ಹೊರಹೊಮ್ಮುವಂತೆ ಮಾಡುತ್ತಾರೆ. ಅವನಿಗೂ ಹೇಳುತ್ತಾರೆ, "ಹೋಯ್ತಪ್ಪ ಬಿಡು ಹಳೆಯದನ್ನು, ನೀನು ಏನೋ ಮಾಡಿದುದನ್ನು ಮಾಡಿದೆ. ಇನ್ನು ಮುಂದೆ ನಿನ್ನ ಜೀವನದಲ್ಲಿ ಒಳ್ಳೆಯದನ್ನು ಕಂಡುಕೋ, ನಿನ್ನಲ್ಲಿ ಒಳ್ಳೆಯದಿದೆ". ಹೀಗೆ ಹೇಳಿ ಅವನನ್ನು ಮೇಲೆತ್ತಲು ಪ್ರಯತ್ನಿಸುತ್ತಾರೆ. ಕೆಳಗೆ ಬಿದ್ದವರನ್ನೂ ಮೇಲೆತ್ತಲು ಪ್ರಯತ್ನಿಸುವುದು.
ಮೂರ್ಖರ ಲಕ್ಷಣವೇನು? ಮೇಲೆ ಕೂತವರ ಕಾಲೆಳೆದು ಕೆಳಗಿಳಿಸುವುದು. ಯಾರಾದರೂ ಒಳ್ಳೆಯವರಲ್ಲೂ ಹುಡುಕುವುದು, ಎಲ್ಲೋ ಒಂದು ಕಡೆ ಇವರಲ್ಲೂ ಹುಳುಕಿದೆ, ತಪ್ಪಿದೆ ಎಂದು. ಎಲ್ಲರಲ್ಲೂ ದೋಷ ಕಂಡುಹಿಡಿಯುವುದು, ಇದು ಮೂರ್ಖರ ಲಕ್ಷಣ.
ಹಾಗೇ ಒಳ್ಳೆಯ ಮಿತ್ರರು ಮತ್ತು ನಿಮ್ಮ ಶತ್ರುಗಳನ್ನು ನೀವು ಹೇಗೆ ಕಂಡುಹಿಡಿಯುತ್ತೀರಿ? ಮಿತ್ರರು ಯಾರು? ಯಾರ ಜೊತೆ ನೀವು ಹೋಗಿ ಕುಳಿತುಕೊಂಡು, ಅವರಲ್ಲಿ ನೀವು ನಿಮ್ಮ ಸಮಸ್ಯೆಯನ್ನು ಹೇಳಿಕೊಂಡರೆ, ನಿಮ್ಮ ಸಮಸ್ಯೆಯು ಚಿಕ್ಕದಾಗಿ ಅನಿಸುತ್ತದೆಯೋ, ಯಾರು ನಿಮ್ಮಲ್ಲಿ ಹುರುಪು ಉತ್ಸಾಹಗಳನ್ನು ತುಂಬಿ ಕಳುಹಿಸುತ್ತರೋ ಅವರು ನಿಮ್ಮ ನಿಜವಾದ ಮಿತ್ರರು. ಅವರ ಹತ್ತಿರ ಒಂದು ಹತ್ತು ನಿಮಿಷ ಮಾತನಾಡಿದ ಮೇಲೆ ನಿಮಗೆ, "ಅಯ್ಯೋ ದೇವರೇ, ಇದು ಇನ್ನೂ ತುಂಬಾ ದೊಡ್ಡದಪ್ಪಾ, ನಾನು ಚಿಕ್ಕದು ಅಂದುಕೊಂಡಿದ್ದೆ. ಇದು ಇನ್ನೂ ಕೆಟ್ಟದಿದೆ" ಅಂತ ಅನ್ನಿಸಿದರೆ, ಅವರು ನಮ್ಮ ಒಳ್ಳೆಯ ಮಿತ್ರರಲ್ಲ. ಅದಕ್ಕೆ, ನಾವೂ ನೋಡಬೇಕು, ನಾವು ಜನರಲ್ಲಿ ಉತ್ಸಾಹವನ್ನು, ನಮ್ಮ ಮಿತ್ರರಲ್ಲಿ ಹುರುಪನ್ನು ತುಂಬುತ್ತೇವೋ ಅಥವಾ ಅವರನ್ನು ಕೆಳಗೆಳೆಯುತ್ತೇವೋ ಎಂದು. ನಮಗೆ ಗೊತ್ತಿಲ್ಲದೆಯೇ ನಾವು ಇದನ್ನು ಮಾಡುತ್ತೇವೆ. ಇದರ ಬಗ್ಗೆ ಗಮನ ಕೊಡಬೇಕು. ಸರಿಯಾ?
ನಿಮಗೊಂದು ಒಳ್ಳೆಯ ಸುದ್ದಿಯಿದೆ. ಅಸ್ಸಾಮಿನ ಒಂದು ಸಾವಿರ ಉಗ್ರವಾದಿಗಳು ಜೀವನ ಕಲಾ ಶಿಬಿರವನ್ನು ಮಾಡಿದರು ಮತ್ತು ಶರಣಾಗತರಾಗಿದ್ದಾರೆ. ಅವರು ಇಲ್ಲಿಗೆ (ಬೆಂಗಳೂರು ಆಶ್ರಮ) ತರಬೇತಿಗಾಗಿ ಬರಲಿದ್ದಾರೆ. ಗೃಹಸಚಿವಾಲಯವು ಅವರನ್ನು ಇಲ್ಲಿಗೆ ಕಳುಹಿಸುತ್ತಿದೆ.
ಪ್ರಶ್ನೆ: ಕೆಟ್ಟ ಚಟಗಳಿಂದ ನಾವು ಹೊರಬರುವುದು ಹೇಗೆ? ಕೆಲವೊಮ್ಮೆ ನಮ್ಮ ಹಿಂದಿನ ಸಂಸ್ಕಾರಗಳಿಂದ ಮನಸಿನಲ್ಲಿ ಅದೇ ಅನ್ನಿಸಿಕೆಗಳು ಬರುತ್ತಿರುತ್ತವೆ.
ಶ್ರೀ ಶ್ರೀ ರವಿಶಂಕರ್:
ಕೆಟ್ಟ ಚಟಗಳಿಂದ ಹೊರಬರಲು ಪ್ರಾಣಾಯಾಮ ಹೆಚ್ಚು ಮಾಡು.  ಇನ್ನೊಂದು, ನಿನ್ನ ಜೊತೆಗಿರುವವರನ್ನು ನೋಡು. ಯಾವ ರೀತಿಯ ಸಂಗದಲ್ಲಿ ನಾವಿರುತ್ತೇವೆ, ಅದರ ಮೇಲೆ ಅವಲಂಬಿಸಿರುತ್ತದೆ ಮತ್ತು ನಿನಗೆ ತುಂಬಾ ಬಿಡುವಿನ ವೇಳೆಯಿದ್ದರೂ ಕೆಟ್ಟ ಚಟಗಳು ಬರುತ್ತವೆ. ಯಾವುದಾದರೊಂದು ಕೆಲಸವನ್ನು ಹಚ್ಚಿಕೊಂಡು, ಜನಸೇವೆಯಲ್ಲಿ ನೀನು ಕಾಲ ಕಳೆದರೆ, ದುರಭ್ಯಾಸಗಳು ತನ್ನಷ್ಟಕ್ಕೆ ತಾವೇ ದೂರ ಹೋಗುತ್ತವೆ. ಸೇವೆ ಮಾಡುವುದರಲ್ಲಿ ನೀನು ತೊಡಗಿದರೆ ಅದು ದೂರ ಹೋಗುತ್ತದೆ.
ಪ್ರಶ್ನೆ: ಗುರೂಜಿ, ಗುರುವನ್ನು ಮಾಡಿಕೊಳ್ಳಬೇಕಾದರೆ ’ಗುರುದೀಕ್ಷೆ’ ತೆಗೆದುಕೊಳ್ಳಲೇ ಬೇಕಾ?
ಶ್ರೀ ಶ್ರೀ ರವಿಶಂಕರ್:
ನೋಡಪ್ಪಾ, ಗುರುವನ್ನು ಮಾಡಿಕೊಳ್ಳಬೇಕಾಗಿಲ್ಲ. ಎಲ್ಲಿ ನೀನು ಜೀವನಕ್ಕೆ ಒಂದು ಒಳ್ಳೆಯ ವಿಚಾರವನ್ನು ಕಲಿತುಕೊಳ್ಳುತ್ತೀಯೋ, ಅಲ್ಲಿ ಗುರು ತತ್ವ ಬಂದೇ ಬರುತ್ತದೆ. ತಾಯಿ ನಮಗೆ ಮೊದಲನೆಯ ಗುರು. ಹೌದಾ? ಮತ್ತೆ ನಾವು ದೊಡ್ಡವರಾಗುತ್ತಿದ್ದಂತೆ ನಮಗೆ ವಿದ್ಯೆ ಹೇಳಿ ಕೊಟ್ಟವರು, ಹಾಗೆಯೇ ಜೀವನದ ಒಂದೊಂದು ಹಂತದಲ್ಲೂ ನಮಗೆ ಒಂದು ಗುರು ಸಾನ್ನಿಧ್ಯ ಸಿಕ್ಕೇ ಸಿಗುತ್ತದೆ, ಗುರು ತತ್ವ ಇದ್ದೇ ಇರುತ್ತದೆ. ನಮ್ಮ ಮನಸ್ಸಿಗೆ, ಇಲ್ಲಿಂದ ನನ್ನ ಜೀವನ ಮುಂದುವರಿಯುವುದೆಂದು ಎಲ್ಲಿ ಅನಿಸುತ್ತದೆಯೋ, ಅಲ್ಲಿ ಗುರು ತತ್ವ ಸಿಕ್ಕಿದಂತಾಯಿತು, ಗುರುಗಳು ಸಿಕ್ಕಿದಂತಾಯಿತು.
ಪ್ರಶ್ನೆ: ರಾಹು ಕಾಲದಲ್ಲಿ ಯಾವುದೇ ಪೂಜೆ ಮಾಡಬಾರದೆಂದು ಹೇಳುತ್ತಾರೆ. ಆದರೆ, ಆಶ್ರಮದಲ್ಲಿ ಪ್ರತೀ ಭಾನುವಾರದ ಸತ್ಸಂಗವನ್ನು ರಾಹುಕಾಲದಲ್ಲೇ ಯಾಕೆ ಇಟ್ಟುಕೊಳ್ಳುತ್ತೀರೆಂದು ಗೊತ್ತಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ನೋಡಿ, ರಾಹುಕಾಲದಲ್ಲಿ ಪೂಜೆ ಮಾಡಬಾರದೆಂದೇನೂ ಇಲ್ಲ. ರಾಹುಕಾಲದಲ್ಲಿ ಪೂಜೆ ಮಾಡಿದರೆ ಇನ್ನೂ ಒಳ್ಳೆಯದು. ಮದುವೆ ಮಾಡುವುದು, ಗೃಹಪ್ರವೇಶ ಮಾಡುವುದು ಇವುಗಳನ್ನೆಲ್ಲಾ ಮಾಡಬೇಡಿ. ಪ್ರಾಪಂಚಿಕವಾದ ಯಾವ ಕೆಲಸವನ್ನೂ ರಾಹುಕಾಲದಲ್ಲಿ ಮಾಡಬೇಡಿ ಎಂದು ಹೇಳುತ್ತಾರೆಯೇ ಹೊರತು, ದೇವರ ಸ್ಮರಣೆ, ನಾಮಸ್ಮರಣೆ, ಸತ್ಸಂಗ ಇವೆಲ್ಲಾ ರಾಹುಕಾಲದಲ್ಲಿ ಮಾಡಿದರೆ ಇನ್ನೂ ಒಳ್ಳೆಯದು. ಗ್ರಹಣದಲ್ಲಿ, ರಾಹುಕಾಲದಲ್ಲಿ ಇವುಗಳನ್ನೆಲ್ಲಾ ಮಾಡಬೇಕು. ಸತ್ಸಂಗ ಮಾಡಲು ಎಲ್ಲಾ ಕಾಲವೂ ಒಳ್ಳೆಯದೇ. ಅದಕ್ಕೆ ಒಳ್ಳೆಯದು ಕೆಟ್ಟದು ಎಂದೆಲ್ಲಾ ಏನೂ ಇಲ್ಲ. ಪರೋಪಕಾರ ಮಾಡಬೇಕಾದರೂ ಭಗವಂತನ ನಾಮಸ್ಮರಣೆ ಮಾಡಬೇಕಾದರೂ ಯಾವ ಸಮಯವನ್ನೂ ನೋಡಬೇಕಾಗಿಲ್ಲ. ಇಪ್ಪತ್ತನಾಲ್ಕು ಗಂಟೆಗಳೂ ಒಳ್ಳೆಯದೇ.
ಪ್ರಶ್ನೆ: ಒಳ್ಳೆಯ ಜನರ ಸಂರಕ್ಷಣೆಯು ಪೋಲೀಸರ ಕರ್ತವ್ಯವೇ ಅಥವಾ ನಾಗರಿಕರ ಕರ್ತವ್ಯವೇ?
ಶ್ರೀ ಶ್ರೀ ರವಿಶಂಕರ್:
ಅದು ಪ್ರತಿಯೊಬ್ಬ ಮಾನವನ ಕರ್ತವ್ಯ. ನೀವು ನಿಜವಾಗಿ ಪೋಲೀಸರನ್ನು ಮೆಚ್ಚಬೇಕು.
ನಾನು ಜಾರ್ಖಂಡಿನಲ್ಲಿದ್ದಾಗ, ಅಲ್ಲಿನ ಇನ್ಸ್ಪೆಕ್ಟರ್ ಜನರಲ್ (ಐ.ಜಿ.) ನನ್ನನ್ನು ನೋಡಲು ಬಂದಿದ್ದರು. ಅವರ ಕಣ್ಣುಗಳಲ್ಲಿ ನೀರಿತ್ತು. ಅವರಂದರು, "ಗುರೂಜಿ, ಕಳೆದ ವರ್ಷದಲ್ಲಿ ನಾನು ನನ್ನ ಇನ್ನೂರು ಜನರನ್ನು ಕಳೆದುಕೊಂಡೆ. ನಾನು ಹೆಚ್ಚು ಪೋಲೀಸರನ್ನು ನೇಮಿಸುವಾಗ, ನನಗೆ ಅವರ ಕುಟುಂಬದವರನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಯಾಕೆಂದರೆ, ನಕ್ಸಲೀಯರ ಸಮಸ್ಯೆಯಿಂದ ನನ್ನ ಜನರಿಗೆ ನಾಳೆ ಏನಾಗಬಹುದೆಂಬುದು ನನಗೆ ತಿಳಿಯದು".
ಪೋಲೀಸರು ಒಳ್ಳೆಯ ಜನರು. ಅವರು ತಮ್ಮ ಜೀವನ ಮತ್ತು ಸಮಯವನ್ನು ತ್ಯಾಗ ಮಾಡುತ್ತಿದ್ದಾರೆ. ಅವರಿಗೆ ಹಬ್ಬಗಳನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ರಾತ್ರಿಯಾದರೂ ಹಗಲಾದರೂ ಅವರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅವರ ವೈಯಕ್ತಿಕ ಜೀವನಗಳು ತುಂಬಾ ಸಮಸ್ಯೆಗಳಿಂದ ಕೂಡಿವೆ. ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ, ಆದರೆ ಅದೊಂದು ಕೃತಜ್ಞತೆ ಪಡೆಯದೆ ಮಾಡುವ ಕೆಲಸ.
ಜನರು ಹಾಗೂ ರಾಜಕಾರಣಿಗಳು ಕೂಡಾ ಪೋಲೀಸರನ್ನು ಬೈಯುತ್ತಾರೆ. ಅವರು ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಅವರು ಕಾನೂನು ಮತ್ತು ವ್ಯವಸ್ಥೆಯನ್ನು ಸಂರಕ್ಷಿಸುತ್ತಿದ್ದಾರೆ ಎಂಬುದನ್ನೂ ನೀವು ತಿಳಿಯಬೇಕು. ಅವರು ಲಂಚ ತೆಗೆದುಕೊಳ್ಳುವುದು ಎಲ್ಲಾ ಮಾಡಬಹುದು, ಆದರೆ ಅದು ಬೇರೆ ವಿಷಯ. ಎಲ್ಲರೂ ಕೆಟ್ಟವರಲ್ಲ. ಆದರೆ, ಸಾಧಾರಣವಾಗಿ ಜನರು ಪೋಲೀಸರೆಂದರೆ ಅವರು ಕೆಟ್ಟವರೆಂದು ಹೇಳುತ್ತಾರೆ. ಅವರು ಆ ರೀತಿ ಯೋಚಿಸಬಾರದು. ಅವರು ಕೃತಜ್ಞತೆ ಪಡೆಯದೆ ಮಾಡುತ್ತಿರುವ ಕೆಲಸಕ್ಕೆ ನಾವು ಅವರಿಗೆ ಕೃತಜ್ಞರಾಗಿರಬೇಕು.
ಕಳೆದ ಹದಿನೈದು ವರ್ಷಗಳಿಂದ ನಾನು ಪೋಲೀಸರ ಸಮಸ್ಯೆಗಳನ್ನು ಕೇಳುತ್ತಾ ಇದ್ದೇನೆ. ಅವರು ಒಳ್ಳೆಯ ಕೆಲಸವನ್ನು ಮಾಡಲೂ ಬೇಕು, ಹಾಗೂ ಎಲ್ಲರಿಂದಲೂ ಬೈಗುಳವನ್ನೂ ತಿನ್ನುತ್ತಾರೆ. ಆದುದರಿಂದ, ನಾವು ಪೋಲೀಸರನ್ನು  ನಮ್ಮಿಂದ ಬೇರೆಯವರು ಎಂದು ತಿಳಿದುಕೊಳ್ಳಬಾರದು.  ಅವರು ನಮ್ಮಲ್ಲೊಬ್ಬರು. ಅವರು ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಅನುಭವಿಸುತ್ತಾ ನಮಗೆ ರಕ್ಷಣೆ ಕೊಡಲು ನಿಂತಿದ್ದಾರೆ. ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು ಮತ್ತು ಅವರನ್ನು ನಿಂದಿಸಬಾರದು.
ಪ್ರಶ್ನೆ: ತಾಯಿಯ ಪಾದಗಳು ಮತ್ತು ಗುರುವಿನ ಪಾದಗಳ ನಡುವಿರುವ ದೂರವೆಷ್ಟು?
ಶ್ರೀ ಶ್ರೀ ರವಿಶಂಕರ್:
ದೂರವಿದೆಯಾ? ತಾಯಿಯಲ್ಲಿ ಸ್ವಲ್ಪ ಸ್ವಾರ್ಥವಿರಲೂಬಹುದು ಆದರೆ ಗುರುವಿನಲ್ಲಿಲ್ಲ.
ಪ್ರಶ್ನೆ: ಗುರೂಜಿ, ಜನರಲ್ಲಿ ವಿವಿಧ ರೀತಿಯ ಭಯಗಳಿರುತ್ತವೆ, ಉದಾಹರಣೆಗೆ ಕತ್ತಲಿನ ಭಯ, ಎತ್ತರದ ಭಯ. ಅವುಗಳೇನು? ಅವುಗಳು ಎಲ್ಲಿಂದ ಬರುತ್ತವೆ? ಅತೀ ಮುಖ್ಯವಾಗಿ, ಅವುಗಳಿಂದ ಹೊರಬರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಬೇರೆ ಬೇರೆ ಅಭಿಪ್ರಾಯಗಳಿವೆಯೆಂಬುದನ್ನು ನಾವು ತಿಳಿಯಬೇಕು. ಜನರು ಹೀಗೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಎಲ್ಲಾ ರೀತಿಯ ಜನರಿದ್ದಾರೆ. ಸುಮ್ಮನೇ ನಿಮ್ಮ ಅಂತಃಸ್ಫುರಣವನ್ನು ನಂಬಿ ಮತ್ತು ಆ ಕ್ಷಣದಲ್ಲಿ ಆ ದಾರಿಯಲ್ಲಿ ಸಾಗಿ, ಸರಿಯಾ.
ಪ್ರಶ್ನೆ: ಪ್ರೀತಿಯ ಗುರೂಜಿ, ಸಮಾಜ ಸೇವೆ ಮತ್ತು ರಾಜನೀತಿಯ ನಡುವೆ ಯಾವ ರೀತಿಯ ಸಂಬಂಧವಿರಬೇಕು? ರಾಜಕಾರಣಿಗಳು ಸಮಾಜ ಸೇವೆಯನ್ನು ಇಷ್ಟಪಡುವುದಿಲ್ಲ ಮತ್ತು ಸಮಾಜ ಸೇವಕರು ಕೂಡಾ ರಾಜನೀತಿಯೊಳಗೆ ಹೊಕ್ಕಲು ಬಯಸುವುದಿಲ್ಲವೆಂಬುದನ್ನು ಹಲವು ಸಾರಿ ನೋಡಬಹುದು.
ಶ್ರೀ ಶ್ರೀ ರವಿಶಂಕರ್:
ಹಾಂ, ಅದು ಸರಿ. ಇಬ್ಬರೂ ಸೇರಿ ಕೆಲಸ ಮಾಡಬೇಕು. ಸಮಾಜ ಸೇವಕರು ಮತ್ತು ರಾಜಕಾರಣಿಗಳು ಇಬ್ಬರೂ ಸೇರಿ ಕೆಲಸ ಮಾಡಿದರೆ ಸಫಲತೆಯು ಸಿಗುತ್ತದೆ.
ಪ್ರಶ್ನೆ:   ನಮ್ಮ ದೇಶದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಿವೆ. ದಯವಿಟ್ಟು ನಮಗೆ ಅವುಗಳ ಮಹತ್ವವನ್ನು ತಿಳಿಸಿ.
ಶ್ರೀ ಶ್ರೀ ರವಿಶಂಕರ್:
ಹನ್ನೆರಡು ತಿಂಗಳುಗಳಿವೆ. ಜ್ಯೋತಿಯೆಂದರೆ ಪ್ರಕಾಶ, ಹನ್ನೆರಡು ತಿಂಗಳುಗಳಿಗೆ ಸರಿಯಾಗಿ ಸೂರ್ಯನ ಬೇರೆ ಬೇರೆ ಹನ್ನೆರಡು ಹೆಸರುಗಳೂ ಇವೆ. ಅದಕ್ಕಾಗಿ ಹನ್ನೆರಡು ಜ್ಯೋತಿರ್ಲಿಂಗಗಳ ಬಗ್ಗೆಯೂ ಹೇಳಲಾಗಿದೆ. ಯಾವುದೇ ಸಂಖ್ಯೆಯಿದ್ದರೂ, ಆ ಸಂಖ್ಯೆ ಯಾಕೆ ಎಂದು ಕೇಳುವಿರಿ ಅಲ್ಲವೇ? ಐದಿದ್ದರೆ, ಐದು ಯಾಕೆ? ಎಂಟಿದ್ದರೆ, ಎಂಟು ಯಾಕೆ? ಇವೆ ಹನ್ನೆರಡು ಜ್ಯೋತಿರ್ಲಿಂಗಗಳು. ನಮ್ಮ ದೇಶವನ್ನು ಒಗ್ಗೂಡಿಸಲು, ಅಲ್ಲಲ್ಲಿ ಒಂದೊಂದು ಜ್ಯೋತಿರ್ಲಿಂಗವನ್ನು ಸ್ಥಾಪಿಸಿದರು. ಈ ರೀತಿಯಲ್ಲಿ ಜನರು ಈ ಎಲ್ಲಾ ವಿವಿಧ ಜಾಗಗಳಿಗೆ ಹೋಗುವರು ಮತ್ತು ಅವರು ದೇಶದ ಮೂಲಕ ಪ್ರಯಾಣಿಸುವಾಗ, ನಮ್ಮ ದೇಶವು ಒಂದೆಂಬುದು ಅವರಿಗೆ ಮನವರಿಕೆಯಾಗುತ್ತದೆ.
ಪ್ರಶ್ನೆ: ಗುರೂಜಿ, ತಂತ್ರವೆಂದರೇನು? ಇದರ ಬಗ್ಗೆ ಸ್ವಲ್ಪ ಹೇಳಿ. ಕೆಲವರು ಇದನ್ನು ನಕಾರಾತ್ಮಕವೆಂದು ಹೇಳುತ್ತಾರೆ.
ಶ್ರೀ ಶ್ರೀ ರವಿಶಂಕರ್:
ನಾನು ಮೊದಲು ಕೂಡಾ ಇದರ ಬಗ್ಗೆ ಬಹಳ ಮಾತನಾಡಿದ್ದೇನೆ. ಇದರಲ್ಲಿ ಮಾಟ ಮಂತ್ರವೆಂದು ಕೂಡಾ ಮಾಡುತ್ತಾರೆ. ಆದರೆ ನಾನು ಹೇಳುವುದೇನೆಂದರೆ, ಯಾರು ಸತ್ಸಂಗಕ್ಕೆ ಬರುತ್ತಾರೋ ಯಾರು ಜ್ಞಾನದಲ್ಲಿರುತ್ತರೋ ಅವರನ್ನು ಈ ಮಾಟ ಮಂತ್ರವು ಏನೂ ಮಾಡಲು ಸಾಧ್ಯವಿಲ್ಲ. ಚಿಂತೆ ಮಾಡಬೇಡಿ.
ಪ್ರಶ್ನೆ: ಗುರೂಜಿ, ಧ್ಯಾನವು ನಮ್ಮ ಭಾಗ್ಯವನ್ನು ಬೆಳಗುತ್ತದೆಯೆಂದು ನೀವು ಹೇಳುತ್ತೀರಿ. ಅದು ಹೇಗೆ ಸಾಧ್ಯ?
ಶ್ರೀ ಶ್ರೀ ರವಿಶಂಕರ್:
ಧ್ಯಾನವು ನಿಮ್ಮ ಕಂಪನಗಳನ್ನು ಧನಾತ್ಮಕವನ್ನಾಗಿಸುತ್ತದೆ. ನಿಮ್ಮ ಕಂಪನಗಳು ಹೆಚ್ಚು ಧನಾತ್ಮಕವಾಗಿದ್ದಷ್ಟೂ ನಿಮ್ಮ ಜೀವನದಲ್ಲಿ ಭಾಗ್ಯವು ಹೆಚ್ಚುತ್ತಾ ಹೋಗುತ್ತದೆ. ಅದು ಸ್ವಾಭಾವಿಕ.
ಪ್ರಶ್ನೆ: (ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಹೌದು, ಹೌದು. ಆಧ್ಯಾತ್ಮಿಕತೆಯು ಎಲ್ಲಾ ಸಮಯದಲ್ಲೂ ಆತ್ಮದೊಂದಿಗೆ ಉಳಿದುಕೊಳ್ಳುತ್ತದೆ.
ಪ್ರಶ್ನೆ: ಜೀವನದಲ್ಲಿ ಬಹಳ ಗೊಂದಲವಿದೆ.
ಶ್ರೀ ಶ್ರೀ ರವಿಶಂಕರ್:
ಅದಕ್ಕೆ ಸ್ವಲ್ಪ ಸಮಯವನ್ನು ಕೊಡು. ಗೊಂದಲವು ತನ್ನಷ್ಟಕ್ಕೆ ತಾನೇ ದೂರವಾಗುತ್ತದೆ. ನಮ್ಮ ಮನಸ್ಸು ಚಂಚಲವಾಗಿದ್ದಾಗ, ನಮ್ಮ ನಿರ್ಧಾರಗಳೆಲ್ಲಾ ತಪ್ಪೆಂದು ನಮಗೆ ಅನಿಸುತ್ತದೆ. ನಾವು ಬೇರೇನನ್ನೋ ಮಾಡಬೇಕಿತ್ತೆಂದು ನಮಗನ್ನಿಸುತ್ತದೆ.
ಪ್ರಶ್ನೆ: ನಾವು ಅಹಂಕಾರವನ್ನು  ನಿವಾರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಸಹಜತೆಯಿಂದಿರಿ. ಎಲ್ಲರೊಂದಿಗೂ ಸ್ನೇಹದಿಂದಿರಿ. ನಾವು ಸಹಜವಾಗಿದ್ದರೆ, ಅಹಂಕಾರವು ತನ್ನಷ್ಟಕ್ಕೆ ತಾನೇ ಮಾಯವಾಗುತ್ತದೆ. ಅಹಂಕಾರವೆಂದರೆ, ನಮ್ಮ ಮತ್ತು ಬೇರೆಯವರ ಮಧ್ಯೆ ಒಂದು ಕೃತ್ರಿಮವಾದ ಗೋಡೆ ಕಟ್ಟಿಕೊಳ್ಳುವುದು ಮತ್ತು ನಾವು ಹೇಳಿದ್ದೇ ಸರಿ ಅಂದುಕೊಳ್ಳುವುದು. ಇದರಿಂದ ನಮಗೂ ತೊಂದರೆಯಾಗುತ್ತದೆ, ಬೇರೆಯವರಿಗೂ ತೊಂದರೆಯಾಗುತ್ತದೆ. ನಾವು ಸಹಜತೆಯಿಂದಿದ್ದು, ಎಲ್ಲರೂ ನಮ್ಮವರೆಂಬ ಭಾವನೆಯಿಂದ, ತಪ್ಪಾದರೆ ತಪ್ಪು ಸರಿಯಾದರೆ ಸರಿ ಎಂಬ ತೆರೆದ ಮನಸ್ಸಿನಿಂದಿದ್ದುಬಿಟ್ಟರೆ, ಯಾವ ರೀತಿಯ ಒತ್ತಡವೂ ನಮ್ಮ ತಲೆಯ ಮೇಲಿರುವುದಿಲ್ಲ. ಮನಸ್ಸು ಒಂದು ಥರಾ ಹಗುರವಾಗಿರುತ್ತದೆ, ಆರಾಮವಾಗಿರುತ್ತದೆ. ಅದಕ್ಕೇ, ಅಹಂಕಾರದ ವಿರುದ್ಧವಾಗಿ ಸಹಜತೆಯಿರುತ್ತದೆ. ಮಗುವಿನಂತೆ ಸಹಜವಾಗಿದ್ದು ಬಿಡುವುದು. ಆಗ ಕಾರ್ಯಸಿದ್ಧಿಯಾಗುತ್ತದೆ. ನಾವು ನೆನೆಸಿದ್ದೆಲ್ಲಾ ತನ್ನಷ್ಟಕ್ಕೆ ತಾನೇ ಆಗುತ್ತದೆ.
ಪ್ರಶ್ನೆ: ಗುರೂಜಿ, ನಾನು ಬಯೋಟೆಕ್ನಾಲಜಿಯಲ್ಲಿ ಎಮ್.ಟೆಕ್. (ಸ್ನಾತಕೋತ್ತರ ಪದವಿ) ಮಾಡಿದ್ದೇನೆ. ನಾನು ಸಾವಯವ ಕೃಷಿಯ ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ದೇನೆ. ನಾನು ಸಾವಯವ ಕೃಷಿಯನ್ನು ಒಂದು ವೃತ್ತಿಯನ್ನಾಗಿ ತೆಗೆದುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಈ ದಿನಗಳಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ. ಸಾವಯವ ಕೃಷಿಯ ಉತ್ಪನ್ನಗಳ ವಿತರಣೆಯು ಸರಿಯಾಗಿದ್ದರೆ, ಅದು ಸಹಾಯ ಮಾಡಬಹುದು. ಅದಕ್ಕೇ ನಾವು ’ಶ್ರೀ ಶ್ರೀ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸಯನ್ಸಸ್’ ಎಂಬ ಸಂಸ್ಥೆಯನ್ನು ತೆರೆದಿರುವುದು. ಅವರೊಂದಿಗೆ ಮಾತನಾಡು. ನಾವು ಖಂಡಿತವಾಗಿ ಅದರ ಬಗ್ಗೆ ಏನನ್ನಾದರೂ ಮಾಡಬಹುದು.