ಶುಕ್ರವಾರ, ಜೂನ್ 15, 2012

ಸಂತೋಷಕ್ಕೂ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ


15
2012............................... ಬ್ರೂಕ್ಲಿನ್, ನೆದರ್ಲ್ಯಾಂಡ್ಸ್
Jun

 ಪ್ರತಿಷ್ಠಿತವಾದ ನಿಯೆನ್ರೋಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂದು ಮನತಟ್ಟುವ ಸಮಾರಂಭದಲ್ಲಿ ಶ್ರೀ ಶ್ರೀ ರವಿಶಂಕರ್ ಅವರಿಗೆ ಗೌರವ ಡಾಕ್ಟರೇಟನ್ನು ನೀಡಿ ಸನ್ಮಾನಿಸಲಾಯಿತು. ಸಭೆಯನ್ನುದ್ದೇಶಿಸಿ, ನಿಯೆನ್ರೋಡಿನ ಮುಖ್ಯಾಧಿಕಾರಿಗಳಾದ ಡಾ.ಮೌರಿಟ್ಸ್ ವಾನ್ ರೂಯಿಜೆನ್, ಎಫ್.ಆರ್.ಎಸ್.ಎ (ಫೆಲೋಸ್ ಆಫ್ ದ ರಾಯಲ್ ಸೊಸೈಟಿ ಆಫ್ ಆರ್ಟ್ಸ್) ಅವರು, "ಶ್ರೀ ಶ್ರೀ ಅವರು ಈ ಡಾಕ್ಟರೇಟನ್ನು ಸ್ವೀಕರಿಸಿದುದು ವಿಶ್ವವಿದ್ಯಾನಿಲಯಕ್ಕೊಂದು ದೊಡ್ಡ ಭಾಗ್ಯದ ಸಂಗತಿ"ಯೆಂದು ಹೇಳಿದರು. ಪ್ರಾರಂಭವಾದಂದಿನಿಂದ ತನ್ನ ೬೫ ವರ್ಷಗಳಲ್ಲಿ, ಈ ವಿಶ್ವವಿದ್ಯಾನಿಲಯವು ಈ ಡಾಕ್ಟರೇಟನ್ನು ಕೆಲವೇ ಕೆಲವು ವ್ಯಕ್ತಿಗಳಿಗೆ ನೀಡಿದೆ. ಅವರಲ್ಲಿ ನೆಲ್ಸನ್ ಮಂಡೇಲಾ, ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಬಿಲ್ ಗೇಟ್ಸ್ ಒಳಗೊಂಡಿದ್ದಾರೆ. ಶ್ರೀ ಶ್ರೀ ಅವರ ಕಾರ್ಯ ಮತ್ತು ಜೀವನವು, ವಿಶ್ವವಿದ್ಯಾನಿಲಯದ ಮೂರು ಮೂಲಭೂತ ಮೌಲ್ಯಗಳಾದ ನಾಯಕತ್ವ, ಉದ್ಯಮಶೀಲತೆ ಹಾಗೂ ಕಾರ್ಯಭಾರಗಳನ್ನು ಪ್ರತಿನಿಧೀಕರಿಸುತ್ತದೆ ಎಂದು ಅವರು ಸೇರಿಸಿದರು. ಶ್ರೀ ಶ್ರೀಯವರು ನಂತರ ಸಭೆಯನ್ನುದ್ದೇಶಿಸಿ ಈ ಕೆಳಗಿನ ಮಾತುಗಳನ್ನಾಡುತ್ತಾರೆ.
ಗೌರವಾನ್ವಿತ ಮುಖ್ಯಾಧಿಕಾರಿಗಳೇ, ಗೌರವಾನ್ವಿತ ಡೀನ್ ಅವರೇ, ಗೌರವಾನ್ವಿತ ಧರ್ಮದರ್ಶಿ ಮಂಡಳಿಯವರೇ ಮತ್ತು ಇಲ್ಲಿ ಸೇರಿದ ಎಲ್ಲಾ ಗೌರವಾನ್ವಿತರೇ, ನಿಯೆನ್ರೋಡ್ ವಿಶ್ವವಿದ್ಯಾನಿಲಯದಿಂದ ಈ ಡಾಕ್ಟರೇಟ್ ಪದವಿಯನ್ನು ಪಡೆಯಲು ನಾನು ತುಂಬಾ ಪುರಸ್ಕೃತನಾಗಿದ್ದೇನೆ. ಈ ವಿಶ್ವವಿದ್ಯಾನಿಲಯದ ಭಾಗವಾಗಿರಲು ನನ್ನನ್ನು ಆಯ್ಕೆ ಮಾಡಿದುದಕ್ಕಾಗಿ ನಾನು ನಿಮಗೆ ನನ್ನ ಮೆಚ್ಚುಗೆಯನ್ನು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡದೆಯೇ ನಾನು ಇವತ್ತು ಇಲ್ಲಿನ ವಿದ್ಯಾರ್ಥಿಯಾಗಿದ್ದೇನೆ.
ಶಿಕ್ಷಣಕ್ಕೆ ಮೂರು ಮುಖ್ಯವಾದ ಮಗ್ಗಲುಗಳಿವೆಯೆಂದು ನನಗನ್ನಿಸುತ್ತದೆ. ಒಂದನೆಯದು ಮಾಹಿತಿ, ಎರಡನೆಯದು ಅವಲೋಕನ ಮತ್ತು ಮೂರನೆಯದು ಅಂತಃಸ್ಫುರಣ. ಈ ವಿಶ್ವವಿದ್ಯಾನಿಲಯದಲ್ಲಿ ಈ ಎಲ್ಲಾ ಮಗ್ಗಲುಗಳಿವೆ ಎಂದು ತಿಳಿಯಲು ನನಗೆ ತುಂಬಾ ಸಂತೋಷವಾಗುತ್ತಿದೆ.
ಹೆಚ್ಚಾಗಿ ನಾವು ಶಿಕ್ಷಣದ ಬಗ್ಗೆ ಯೋಚಿಸುವಾಗ, ಅದು ಕೇವಲ ಮಾಹಿತಿಯ ಕಲೆಹಾಕುವಿಕೆಯೆಂದು ಯೋಚಿಸುತ್ತೇವೆ. ಅದು ಸಾಕಾಗುವುದಿಲ್ಲ. ನಿಮ್ಮಲ್ಲಿ ಮನಸ್ಸಿನ ತೀಕ್ಷ್ಣತೆಯಿರಬೇಕು, ಸುತ್ತಲೂ ನಡೆಯುತ್ತಿರುವುದನ್ನು ಅರಿತುಕೊಳ್ಳಲು ಬೇಕಾದಷ್ಟು ಜಾಗ್ರತೆ ಮತ್ತು ಚೂಪಾದ ಮನಸ್ಸು. ನೈತಿಕತೆಯೆಂದರೆ, ಒಳಗೆ ಆಳದಲ್ಲಿರುವ ಪ್ರಜ್ಞೆಗೆ ಕಿವಿಗೊಡುವುದು ಮತ್ತು ಸಾಮಾಜಿಕ ಒಡನಾಟಗಳಿಗೆ ಬರುವಾಗ, ಅದರ ಪ್ರಕಾರ ನಡೆಯುವುದು.
ಅವಲೋಕನ ಎಂಬುದು ಶಿಕ್ಷಣದ ಒಂದು ಬಹಳ ಮುಖ್ಯವಾದ ಮಗ್ಗಲು. ಹಲವಾರು ಶೈಕ್ಷಣಿಕ ಸಂಸ್ಥೆಗಳು ಇದಕ್ಕೆ ಸಾಕಷ್ಟು ಗಮನವನ್ನು ನೀಡಿಲ್ಲ. ಮೂರನೆಯ ಸಂಗತಿಯೆಂದರೆ ಅಂತಃಸ್ಫುರಣ ಸಾಮರ್ಥ್ಯ. ನೀವು ಹಿಂದೆ ತಿರುಗಿ ನೋಡಿದರೆ, ಕಾಲೇಜಿಗೆ ಹೋಗಿ ಪದವಿ ಪಡೆಯದ ದೊಡ್ಡ ವಿಜ್ಞಾನಿಗಳಿದ್ದುದು ಕಂಡುಬರುತ್ತದೆ. ಥೋಮಸ್ ಆಲ್ವಾ ಎಡಿಸನ್ ಇರಲಿ ಅಥವಾ ಆಲ್ಬರ್ಟ್ ಐನ್ಸ್ಟೀನೇ ಆಗಿರಲಿ, ಅವರು ಒಂದು ಅಂತಃಸ್ಫುರಣ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದರು. ಅವರೆಲ್ಲರಿಗೂ ಅಂತಃಸ್ಫುರಣ ಸಾಮರ್ಥ್ಯವಿತ್ತು. ಅದನ್ನು ಅವರು ತಮ್ಮೊಳಗೆ ಪೋಷಿಸಿದರು. ನನ್ನ ಪ್ರಕಾರ, ಆಧ್ಯಾತ್ಮಿಕತೆಯು ಇಲ್ಲಿಂದ ಶುರುವಾಗುತ್ತದೆ. ಆಧ್ಯಾತ್ಮವೆಂದರೆ ಯಾವುದು, ನೀವು ನಿಮ್ಮ ಅವಲೋಕನದೊಂದಿಗೆ, ನಿಮ್ಮ ಗ್ರಹಿಸುವ ಸಾಮರ್ಥ್ಯದೊಂದಿಗೆ  ಸಮಾಗಮಿಸಲು ಹಾಗೂ ನಿಮ್ಮ ಅಂತಃಸ್ಫುರಣ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗಿಸುತ್ತದೆಯೋ ಅದು. ಮನಸ್ಸು ಶಾಂತವಾಗಿರುವಾಗ ಅದಕ್ಕೆ ವಿಷಯಗಳನ್ನು ಚೆನ್ನಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಮನಸ್ಸು ಅಶಾಂತವಾಗಿರುವಾಗ, ನಮ್ಮ ಗ್ರಹಣ ಸಾಮರ್ಥ್ಯವೂ ಕೂಡಾ ಸಂಪೂರ್ಣವಾಗಿ ತೊಂದರೆಗೀಡಾಗಿರುತ್ತದೆ. ಆದುದರಿಂದ ಮನಸ್ಸು ಶಾಂತವಾಗಿರಬೇಕು, ಆಗ ಗ್ರಹಿಸುವ ಸಾಮರ್ಥ್ಯವು ಉತ್ತಮವಾಗುತ್ತದೆ, ಅವಲೋಕನೆಯು ಸಾಕಷ್ಟು ಹೆಚ್ಚು ಸ್ಪಷ್ಟವಾಗುತ್ತದೆ ಮತ್ತು ವ್ಯಕ್ತ ಪಡಿಸುವಿಕೆಯು ಹೆಚ್ಚು ಗ್ರಾಹ್ಯವಾಗುತ್ತದೆ.
ಆದುದರಿಂದ ಗ್ರಹಿಸುವಿಕೆ, ಅವಲೋಕನ ಮತ್ತು ವ್ಯಕ್ತಪಡಿಸುವಿಕೆ  - ಇವುಗಳು ನಮ್ಮ ಸುತ್ತಲಿರುವ ಪ್ರಪಂಚದೊಂದಿಗೆ ಸಂಪರ್ಕಿಸಲಿರುವ ಮೂರು ಮಾರ್ಗಗಳು.
ವ್ಯಾಪಾರವು ಸಂಪರ್ಕದ ಮೇಲೆ ಬಹಳ ಅವಲಂಬಿತವಾಗಿದೆ. ಸಂಪರ್ಕವು ಮುರಿದು ಬಿದ್ದಾಗ, ವ್ಯಾಪಾರವು ಮುರಿದು ಬೀಳುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೊಳಗೂ ಆಧ್ಯಾತ್ಮಿಕ ಜಾಗೃತಿಯ ಅಥವಾ ಆಧ್ಯಾತ್ಮಿಕ ಶಕ್ತಿಯ ಅಥವಾ ಬಲದ ಒಂದು ಅಂಶವಿದ್ದಾಗ ಮಾತ್ರ ಸಂಪರ್ಕವು ಉತ್ತಮವಾಗಲು ಸಾಧ್ಯ. ಪುನಃ, ನಾವು ಆಧ್ಯಾತ್ಮವೆನ್ನುವಾಗ, ಒಬ್ಬರು ಕುಳಿತುಕೊಂಡು ಏನೋ ಮಾಡುವುದು ಎಂದು ಮಾತ್ರ ನಾವು ಯೋಚಿಸುತ್ತೇವೆ - ಇಲ್ಲ, ಸಂಗತಿ ಹಾಗಿಲ್ಲ. ನಾವೆಲ್ಲರೂ ಪದಾರ್ಥ ಮತ್ತು ಚೈತನ್ಯದಿಂದ ಮಾಡಲ್ಪಟ್ಟಿದ್ದೇವೆ. ನಮ್ಮ ಶರೀರಗಳು ಕಾರ್ಬೋಹೈಡ್ರೇಟ್, ಪ್ರೊಟೀನ್, ಅಮಿನೋ ಆಸಿಡ್ ಗಳಿಂದ ಮಾಡಲ್ಪಟ್ಟಿವೆ. ನಮ್ಮ ಆತ್ಮ, ನಮ್ಮ ಮನಸ್ಸು ಸತ್ಯ, ಸಮಗ್ರತೆ, ಪ್ರಾಮಾಣಿಕತೆ, ಸೌಂದರ್ಯ, ಸಹಾನುಭೂತಿ, ಪ್ರೀತಿ, ಸಹಕಾರ ಮತ್ತು ಸೃಜನಶೀಲತೆಗಳಿಂದ ಮಾಡಲ್ಪಟ್ಟಿದೆ. ಈ ಎಲ್ಲಾ ಗುಣಗಳು ಆಧ್ಯಾತ್ಮಿಕತೆಯೆಂದು ಪರಿಗಣಿಸಲ್ಪಟ್ಟಿವೆ, ಅವುಗಳು ನಮ್ಮ ಆತ್ಮದ ಭಾಗಗಳಾಗಿವೆ.
ಇವತ್ತು ಪ್ರಪಂಚದಲ್ಲಿ ಖಿನ್ನತೆಯೆಂಬ ದೊಡ್ಡ ಬೆದರಿಕೆಯು ಏಳುತ್ತಿದೆ; ಮಾನಸಿಕ ಖಿನ್ನತೆ, ನಂಬಿಕೆಯ ಕೊರತೆ ಅಥವಾ ನಂಬಿಕೆಯು ಮುರಿದು ಬೀಳುವುದು. ಜೀವನದಲ್ಲಿ ಆರ್ಥಿಕ ಮಗ್ಗಲುಗಳು ಮತ್ತು ಸಂಬಂಧಗಳ ಬಗ್ಗೆಯಿರುವ ಭಯ, ಅಭದ್ರತೆಗಳು ಕೂಡಾ ಹೆಚ್ಚಾಗುತ್ತಿವೆ. ಆದುದರಿಂದ, ಆಧ್ಯಾತ್ಮದ ಬಗ್ಗೆ ಹೆಚ್ಚು ಮಹತ್ವ ನೀಡುವುದು; ಅಂದರೆ ಆಂತರಿಕ ಶಕ್ತಿಯನ್ನು ಹೆಚ್ಚಿಸುವುದು, ನಮ್ಮ ಸಮಾಜದಲ್ಲಿನ ಮಾನವೀಯತೆಯಲ್ಲಿರುವ ವಿಶ್ವಾಸವನ್ನು ಪುನಃ ತರುವುದು, ನಮ್ಮ ಮನಸ್ಸನ್ನು ಪುನಃ, ನಮ್ಮ ಅಸ್ಥಿತ್ವದ ಉಸಿರಾಟದಂತಿರುವ ಸಹಾನುಭೂತಿ ಹಾಗೂ ಪ್ರೀತಿಯ ಕಡೆಗೆ ತಿರುಗಿಸುವುದು ಹೆಚ್ಚು ಪ್ರಧಾನವಾಗಿದೆ. ಒಂದು ಯಾಂತ್ರಿಕವಾಗಿ ಚಲಿಸುವ ಜೀವನದಿಂದ, ನಾವು ಉತ್ಸಾಹ, ಸಹಕಾರ ಮತ್ತು ಮಾನವೀಯತೆ ತುಂಬಿದ ಜೀವನದ ಕಡೆಗೆ ತಿರುಗುವುದು ಅಗತ್ಯವಾಗಿದೆ.
ನಿಯೆನ್ರೋಡ್ ವಿಶ್ವವಿದ್ಯಾನಿಲಯವು ಈಗಾಗಲೇ ಈ ಹೆಜ್ಜೆಯನ್ನು ತೆಗೆದುಕೊಂಡಿದೆ ಮತ್ತು ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿದೆಯೆಂದು ನನಗೆ ಸಂತೋಷವಾಗುತ್ತಿದೆ. ವ್ಯಾಪಾರ ಮತ್ತು ನೈತಿಕತೆಯ ಬಗ್ಗೆ ಒಂದು ಇಡಿಯ ವಿಭಾಗವಿದೆ ಎಂಬುದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಇದು ನಮ್ಮ ಸಮಾಜಕ್ಕೆ ಭರವಸೆಯನ್ನು ನೀಡಬಹುದು. ನಾರಾಯಣನಿದ್ದರೆ ಅಲ್ಲಿ ಲಕ್ಷ್ಮಿಯಿರಲೇಬೇಕು. ಅಂದರೆ, ಅಧ್ಯಾತ್ಮವಿರುವಾಗ, ಅಲ್ಲಿ ಸಂಪತ್ತು ಕೂಡಾ ಇರಲೇ ಬೇಕು.
ಇವತ್ತು ಯುರೋಪ್ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ನಾವು ಎದುರಿಸುತ್ತಿರುವ ಅಸ್ತವ್ಯಸ್ತತೆ ಕೂಡಾ, ಕೆಲವರ ಲೋಭದಿಂದಾಗಿ. ಅಲ್ಲವೇ? ನಾವು ಹಗರಣದ ಮೇಲೆ ಹಗರಣದ ಮೇಲೆ ಹಗರಣದ ಬಗ್ಗೆ ಕೇಳುತ್ತಿದ್ದೇವೆ ಯಾಕೆಂದರೆ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಭ್ರಷ್ಟಾಚಾರವು ಒಂದು ರೀತಿಯಲ್ಲಿ ಸ್ವೀಕರಿಸಲ್ಪಟ್ಟಿದೆ. ಕೆಲವು ದನಿಗಳು ಇದರ ವಿರುದ್ಧ ಮೇಲೆ ಬಂದರೂ, ಅವುಗಳು ಪುನಃ ಇಳಿಯುತ್ತವೆ ಮತ್ತು ಸಂಗತಿಗಳು ಮೊದಲಿದ್ದ ರೀತಿಯಲ್ಲೇ ಮುಂದುವರಿಯುತ್ತವೆ. ಅಲ್ಲಿಯೇ ಭ್ರಷ್ಟಾಚಾರದ ವಿರುದ್ಧ ಜಾಗೃತಿಯ ಒಂದು ದೊಡ್ಡ ಅಲೆಯು ಏಳಬೇಕಾಗಿರುವುದು.
ನನ್ನ ಪ್ರಕಾರ, ಆತ್ಮೀಯತೆಯ ಒಂದು ಭಾವವು ಕೊನೆಗೊಳ್ಳುವಲ್ಲಿ ಭ್ರಷ್ಟಾಚಾರವು ಶುರುವಾಗುತ್ತದೆ. ನಿಮ್ಮಲ್ಲಿ ಆತ್ಮೀಯತೆಯ ಒಂದು ಭಾವವಿರುವಾಗ, ಆ ಜನರೊಂದಿಗೆ ನೀವು ಭ್ರಷ್ಟರಾಗಿ ನಡೆದುಕೊಳ್ಳುವುದಿಲ್ಲ. ನೀವು ಯಾರನ್ನು ನಿಮಗೆ ಸೇರಿದವರು ಎಂದು ಅಂದುಕೊಳ್ಳುತ್ತೀರೋ, ಅವರಿಂದ ಲಂಚ ತೆಗೆದುಕೊಳ್ಳುವುದಾಗಲೀ, ಅವರಿಗೆ ಲಂಚ ಕೊಡುವುದಾಗಲೀ ಮಾಡುವುದಿಲ್ಲ. ಆತ್ಮೀಯತೆಯ ಆ ಭಾವವು ಕೊನೆಗೊಂಡಾಗ, ಆಗಲೇ ಭ್ರಷ್ಟಾಚಾರವು ಶುರುವಾಗುವುದು. ಇಂದಿನ ಪ್ರಪಂಚದಲ್ಲಿ, ತಂತ್ರಜ್ಞಾನವು ಪ್ರಪಂಚವನ್ನು ಒಂದು ಜಾಗತಿಕ ಹಳ್ಳಿಯಾಗಿ ಕುಗ್ಗಿಸಿದೆ. ನಾವು, "ಇದು ನನಗೆ ಸೇರಿದುದು ಮತ್ತು ಇದು ನನಗೆ ಸೇರಿದುದಲ್ಲ" ಎಂದು ಯೋಚಿಸುವ ಒಂದು ಪಂಥೀಯ ಮನೋಭಾವನೆಯನ್ನು  ಹೊಂದಲು ಸಾಧ್ಯವಿಲ್ಲ.
ಇಡಿಯ ಪ್ರಪಂಚವು ಒಂದು ಮಾನವ ಕುಟುಂಬವೆಂಬ ಒಂದು ವಿಶಾಲ ದೃಷ್ಟಿಕೋನವನ್ನು ನಾವು ಹೊಂದಿರಬೇಕು. ಇದರ ಕೊರತೆಯು ಅಷ್ಟೊಂದು ಕಲಹವನ್ನು ಸೃಷ್ಟಿಸಿದೆ. ಇಲ್ಲದಿದ್ದರೆ, ಜನಾಂಗ, ಧರ್ಮ, ಭಾಷೆಯ ಹೆಸರಿನಲ್ಲಿ ಯುದ್ಧದ ಮೇಲೆ ಯುದ್ಧ ಮಾಡುತ್ತಿದ್ದ ಮಧ್ಯಕಾಲೀನ ಯುಗಕ್ಕೆ ನಾವು ತಿರುಗಿ ಹೋಗುತ್ತೇವೆ. ನಮ್ಮನ್ನೇ ನಾವು ಗಮನಾರ್ಹವಾಗಿ ನಾಶಪಡಿಸಿಕೊಳ್ಳುತ್ತಿದ್ದೇವೆ.
ನಾನು ಹೇಳುತ್ತಿದ್ದಂತೆ, ಭಾರತದಲ್ಲಿ ಆಧ್ಯಾತ್ಮಿಕ ಜಾಗೃತಿಯು ಬಹಳ ಎತ್ತರದಲ್ಲಿದ್ದಾಗ, ಅದು ತನ್ನ ಆರ್ಥಿಕ ಬೆಳವಣಿಗೆಯ ಉತ್ತುಂಗದಲ್ಲಿತ್ತು. ಆಗ ಪ್ರಪಂಚದ ಜಿ.ಡಿ.ಪಿ.ಯ ೩೩%ವು ಭಾರತದ ಕೊಡುಗೆಯಾಗಿತ್ತು. ಲಾರ್ಡ್ ಮೆಕೊಲೇಯು ದೇಶದ ಉದ್ದಗಲಗಳನ್ನು ಸಂಚರಿಸಿದಾಗ, ಅವನಿಗೆ ಒಬ್ಬನೇ ಒಬ್ಬ ಬಡವ ಅಥವಾ ರೋಗಿ ಕಂಡುಬರಲಿಲ್ಲ. ಅಷ್ಟೊಂದು ಹೃದಯವಂತಿಕೆಯಿದ್ದಾಗ, ಅಷ್ಟೊಂದು ಸೇವಾಭಾವನೆಯಿದ್ದಾಗ ಮತ್ತು ಅಷ್ಟೊಂದು ಅತ್ಮೀಯತಾ ಭಾವನೆಯಿದ್ದಾಗ ಇದಾಗಿತ್ತು ವಿದ್ಯಮಾನಗಳ ಸ್ಥಿತಿ. ಇದು ಇಳಿಯಲು ತೊಡಗಿದಾಗ, ಲೋಭ, ಕ್ರೋಧ, ಮಾತ್ಸರ್ಯ ಮತ್ತು ದ್ವೇಷಗಳು ಸಮಾಜದಲ್ಲಿ ಅಧಿಕವಾಗಿ ಆರ್ಥಿಕತೆಯು ಬಹಳ ವೇಗವಾಗಿ ಇಳಿಮುಖವಾಯಿತು.
ಇದು ನಾವು ಚರಿತ್ರೆಯಿಂದ ಕಲಿಯಬೇಕಾದ ಪಾಠ. ನಾವು ನಮ್ಮ ಅಸ್ಥಿತ್ವದ ಒಳಗಿನಿಂದ ಜನರನ್ನು ಜೋಡಿಸಬೇಕು. ಸರಳವಾಗಿ ಹೇಳುವುದಾದರೆ, ನಾವು ಪುನಃ ಮಕ್ಕಳಂತಾಗಬೇಕು. ಬೆಳೆದ ರೋಬೋಟುಗಳಂತೆ ವರ್ತಿಸುವುದರಿಂದ, ನಮ್ಮ ಮುಗ್ಧತೆಯನ್ನು ಉಳಿಸಿಕೊಳ್ಳುವ ಮತ್ತು ಹಾಗಿದ್ದರೂ ಬಹಳ ಬುದ್ಧಿವಂತರಾಗಿರುವ ಒಂದು ಸ್ಥಿತಿಗೆ ನಾವು ಮರಳಿ ಬರಬೇಕು. ಚಿಕ್ಕದಾಗಿ ಹೇಳುವುದಾದರೆ, ಒಂದು ಹಿಂಸಾ-ರಹಿತ ಸಮಾಜ, ಒಂದು ಒತ್ತಡ-ರಹಿತ ಮನಸ್ಸು, ಒಂದು ರೋಗ-ರಹಿತ ಶರೀರ, ಒಂದು ತಡೆ-ರಹಿತ ಬುದ್ಧಿ, ಒಂದು ಆಘಾತ-ರಹಿತ ಸ್ಮರಣೆ ಮತ್ತು ಒಂದು ದುಃಖ-ರಹಿತ ಆತ್ಮ ಇವುಗಳು ಪ್ರತಿಯೊಬ್ಬ ಮನುಷ್ಯನ ಜನ್ಮಸಿದ್ಧ ಹಕ್ಕಾಗಿವೆ. ನಾವು ಈ ದೊಡ್ಡ ಕನಸನ್ನು ಕಾಣಬೇಕು ಮತ್ತು ಅದು ಸಾಧ್ಯವಾಗುವಂತೆ ಮಾಡಬೇಕು.
ಪ್ರಶ್ನೆ: ಶರೀರವು ಮನಸ್ಸಿನೊಳಗಿದೆಯೆಂದೂ, ಮನಸ್ಸು ಶರೀರದ ಒಳಗೆಯಿಲ್ಲವೆಂದೂ  ನೀವು ಒಂದು ಸಾರಿ ಹೇಳಿದ್ದಿರಿ. ನೀವು ಹಾಗೆ ಹೇಳಿದುದರ ಅರ್ಥವೇನೆಂದು ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ಸಾಮಾನ್ಯ ಜನರಿಗೆ ನಾನೊಂದು ಬಹಳ ಸರಳವಾದ ಉದಾಹರಣೆಯನ್ನು ಕೊಡುತ್ತೇನೆ. ನೀವೊಂದು ಮೇಣದ ಬತ್ತಿಯನ್ನು ಉರಿಸಿ ಅದನ್ನು ಒಂದು ಲೋಟದೊಳಗೆ ಇಟ್ಟಾಗ, ಲೋಟದೊಳಗೆ ಆಮ್ಲಜನಕ ಇರುವಷ್ಟು ಹೊತ್ತು ಮಾತ್ರ ಜ್ವಾಲೆಯು ಉರಿಯುತ್ತದೆ. ಅದೇ ರೀತಿಯಲ್ಲಿ, ನೀವೊಬ್ಬ ವ್ಯಕ್ತಿಯನ್ನು ಒಂದು ಕೋಣೆಯಲ್ಲಿರಿಸಿ, ಅದನ್ನು ಬೀಗ ಹಾಕಿ ಮುಚ್ಚಿದರೆ, ಆ ಕೋಣೆಯಲ್ಲಿ ಆಮ್ಲಜನಕವಿರುವಷ್ಟು ಕಾಲ ಮಾತ್ರ ಅವರು ಬದುಕುಳಿಯುತ್ತಾರೆ. ಆದುದರಿಂದ ನಾವು ಜ್ವಾಲೆಗೆ ಸಮಾನ, ನಾವು ಆಮ್ಲಜನಕವನ್ನವಲಂಬಿಸಿ ಬದುಕುತ್ತೇವೆ. ನಮ್ಮ ಪ್ರಜ್ಞೆ, ನಮ್ಮ ಜೀವನ, ನಮ್ಮ ಮನಸ್ಸು ಆಮ್ಲಜನಕವನ್ನವಲಂಬಿಸಿ ಬದುಕುತ್ತದೆ; ಒಂದು ಜ್ವಾಲೆಯ ರೀತಿಯಲ್ಲೇ. ಶರೀರವು ಮೇಣದ ಬತ್ತಿಯ ಬತ್ತಿಯಂತೆ, ಮನಸ್ಸು ಅದರ ಸುತ್ತಲಿರುವ ಪ್ರಕಾಶದಂತೆ; ನಮಗೆ ಮನಸ್ಸನ್ನು ನೋಡಲಾಗದಿದ್ದರೂ ಸಹ. ನಾವು ಕರ್ಲಿಯನ್ ಫೊಟೋಗ್ರಫಿಯ ಮೂಲಕ ಫೊಟೋ ತೆಗೆದಾಗ, ಒಬ್ಬ ವ್ಯಕ್ತಿಯ ಪ್ರಭಾವಳಿಯನ್ನು ಅಳತೆ ಮಾಡಬಹುದು; ಒಬ್ಬ ಗಂಡಸು ಅಥವಾ ಹೆಂಗಸಿನ ಸುತ್ತಲಿರುವ ಶಕ್ತಿಯ ಕ್ಷೇತ್ರವನ್ನು ಅಳತೆ ಮಾಡಬಹುದು. ಇದನ್ನೇ ನಾನು ಮನಸ್ಸೆಂದು ಹೇಳುವುದು. ಮನಸ್ಸೆಂದರೆ ಶಕ್ತಿಯ ಮತ್ತು ಬುದ್ಧಿಯ ಒಂದು ಸಮೂಹವಲ್ಲದೆ ಬೇರೇನೂ ಅಲ್ಲ. ಅದೊಂದು ತರಂಗ ಪ್ರಕ್ರಿಯೆ, ನಿಮ್ಮ ಸುತ್ತಲಿನ ಕಂಪನಗಳ ಅಲೆ. ಶರೀರವು ಅರಾಮವಾಗಿರುವಾಗ, ಮನಸ್ಸು ವಿಸ್ತರಿಸುತ್ತದೆ. ಇದು ಸಾಧಾರಣವಾಗಿ ನಮ್ಮ ಅನಿಸಿಕೆ. ನೀವು ಸಂತೋಷವಾಗಿರುವಾಗ, ನಿಮಗಾಗುವ ಅನುಭವವೇನು? ನಿಮ್ಮಲ್ಲಿರುವ ಏನೋ ಒಂದು ವಿಸ್ತರಿಸುತ್ತಿದೆಯೆಂದು ನಿಮಗನಿಸುತ್ತದೆ, ಅಲ್ಲವೇ? ಮತ್ತು ನೀವು ಕಂಗೆಟ್ಟಾಗ, ನಿಮ್ಮಲ್ಲಿರುವ ಏನೋ ಒಂದು ಕುಗ್ಗುತ್ತಿರುವುದಾಗಿ ನೀವು ಕಂಡುಕೊಳ್ಳುತ್ತೀರಿ; ನಿಮ್ಮಲ್ಲಿನ ಶಕ್ತಿಯು ಕುಗ್ಗುತ್ತದೆ ಮತ್ತು ಆಗಲೇ ನಿಮಗೆ ಹಾಯಾಗಿಲ್ಲದಿರುವ ಅನುಭವವಾಗುವುದು. ಶಕ್ತಿಯು ವಿಸ್ತರಿಸಿದಾಗ, ನೀವು ಸಂತೋಷವನ್ನು, ಮೇಲಕ್ಕೇರಿದ ಅನುಭವವನ್ನು ಮತ್ತು ಹಾಯಾಗಿರುವ ಅನುಭವವನ್ನು ಪಡೆಯುತ್ತೀರಿ. ಈ ನಿರ್ದಿಷ್ಟ ಪ್ರಕ್ರಿಯೆಯು ಸೂಚಿಸುವುದೇನೆಂದರೆ, ನಮ್ಮ ಶರೀರವು ಮನಸ್ಸಿನೊಳಗಿದೆ ಮತ್ತು ಮನಸ್ಸು ಶರೀರದೊಳಗಲ್ಲ ಎಂದು.
ಪುನಃ, ವೈದ್ಯಕೀಯ ವಿಜ್ಞಾನದ ಮೂಲಕ, ಇತರ ಸಾಕ್ಷ್ಯಗಳಿವೆ. ನೀವು ’ಫ್ಯಾಂಟಮ್ ಲಿಂಬ್ಸ್’ ಬಗ್ಗೆ ಕೇಳಿದ್ದೀರಾ? ಒಬ್ಬರ ಕೈಯನ್ನು ಕತ್ತರಿಸಿ ತೆಗೆಯಲಾಗಿದ್ದರೂ ಅವರಿಗೆ ಕೈಯಿಲ್ಲದ ಪ್ರದೇಶದಲ್ಲಿ ತುರಿಕೆಯ ಮತ್ತು ನೋವಿನ ಅನುಭವವಾಗುತ್ತದೆ ಹಾಗೂ ಅದು ಕೈಗಿಂತಲೂ ದೊಡ್ಡದಾಗಿರುವಂತೆ ಅವರಿಗೆ ಅನ್ನಿಸುತ್ತದೆ. ಇದು ಕೂಡಾ, ನಮ್ಮ ಶರೀರವು ಮನಸ್ಸೆಂದು ಕರೆಯಲ್ಪಡುವ ಪ್ರಭೆಯೊಳಗಿದೆ ಎಂಬುದನ್ನು ಸೂಚಿಸುತ್ತದೆ.
ನಿಮಗೆ ಗೊತ್ತಾ, ಆಧ್ಯಾತ್ಮವು ಬಹಳ ಅಮೂರ್ತವಾದುದು ಮತ್ತು ವ್ಯಾಪಾರವು ಅಷ್ಟೊಂದು ಸಾಕಾರವಾದ (ಮೂರ್ತ) ವಿಷಯ. ಅಲ್ಲವೇ? ಅವುಗಳು ಬಹಳ ವ್ಯತಿರಿಕ್ತವಾದವು, ಆದರೂ ಬಹಳ ಪೂರಕವಾದವು.
ಪ್ರಶ್ನೆ: ಜೀವನದ ಮೂಲಭೂತ ವಿಷಯಗಳು ಅರಿವು, ಆತ್ಮೀಯತೆ ಮತ್ತು ಬದ್ಧತೆಯೆಂದು ನೀವು ಹೇಳಿದ್ದೀರಿ. ನಮ್ಮ ಆಡಳಿತ ವಿದ್ಯಾರ್ಥಿಗಳಿಗಿರುವ ಮೂಲಭೂತ ವಿಷಯಗಳೇನು? ವೇದ ಸಾಹಿತ್ಯ ಮತ್ತು ವಿಜ್ಞಾನದ ಒಬ್ಬ ಪದವೀಧರನಾಗಿ, ಶಿಕ್ಷಣದ ಕಡೆಗಿರುವ ಸಮಗ್ರತಾ ಮಾರ್ಗವೇನು ಎಂಬುದು ನಿಮಗೆ ತಿಳಿದಿರಬಹುದು. ದಯವಿಟ್ಟು ನಮಗೆ ಇದರ ಬಗ್ಗೆ ಸ್ವಲ್ಪ ಹೇಳಿ.
ಶ್ರೀ ಶ್ರೀ ರವಿಶಂಕರ್:
ಅರಿವು, ಆತ್ಮೀಯತೆ ಮತ್ತು ಬದ್ಧತೆ - ಇವುಗಳು ಜಾಗತಿಕವಾದವು. ನೀವಿದನ್ನು ಯಾವುದೇ ಕ್ಷೇತ್ರಕ್ಕಾದರೂ ಅನ್ವಯಿಸಬಹುದೆಂದು ನನಗನ್ನಿಸುತ್ತದೆ; ಕೇವಲ ಆಧ್ಯಾತ್ಮಿಕ, ವ್ಯಾಪಾರ ಅಥವಾ ರಾಜಕೀಯದಲ್ಲಲ್ಲ. ಈ ಮೂರು ಮಗ್ಗಲುಗಳನ್ನು ಎಲ್ಲಿ ಬೇಕಾದರೂ ಅನ್ವಯಿಸಬಹುದು.
ಬದ್ಧತೆಯಿಲ್ಲದೆ ಪ್ರಪಂಚದಲ್ಲಿ ಯಾವುದೂ ಕೆಲಸ ಮಾಡುವುದಿಲ್ಲ. ಕೆಲಸ ಮಾಡಿದರೆ, ಆಗ ಅದು ಕೇವಲ ದೇವರ ಕೃಪೆ ಅಷ್ಟೆ. ಅದು ಕೇವಲ, ದೇವರು ನಿಮ್ಮ ಮೂಲಕ ಕೆಲಸ ಮಾಡುವುದು.
ಒಮ್ಮೆ ಯಾರೋ ಹೇಳಿದರು, "ದೇವರ ಬಳಿ ನಿಯಂತ್ರಣವಿದೆ ಆದರೆ ಅವರು ನಮಗೆ ಅದನ್ನು ಹೆಚ್ಚು ವ್ಯಕ್ತಪಡಿಸಬೇಕು". ನಾವು ನಿಯಂತ್ರಿಸುತ್ತಿದ್ದೇವೆಂದು ನಾವು ಯೋಚಿಸುವಾಗ ಅದು ಅಷ್ಟು ವ್ಯಕ್ತವಾಗುವುದಿಲ್ಲ. ಆತ್ಮೀಯತೆಯ ಭಾವನೆಯು, ನಾವು ಕೆಲಸ ಮಾಡುವ ರೀತಿ ಮತ್ತು ನಾವು ನಮ್ಮ ಪರಿಸರವನ್ನು ತಿಳಿದುಕೊಳ್ಳುವ ರೀತಿಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರುತ್ತದೆ. ನಾವಿರುವ ಪರಿಸರದ ಬಗ್ಗೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದುದರಿಂದ, ಆ ಸಬಲೀಕರಣ, ನಮ್ಮ ಸ್ವಂತ ಪರಿಸರದ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಆ ಧೋರಣೆಯು ಎಲ್ಲಾ ಬದಲಾವಣೆಗಳನ್ನೂ ಮಾಡುತ್ತದೆ. ಅದು ನಿಮಗೆ ಬಹಳ ಸಂತೋಷ ನೀಡಬಲ್ಲದು ಮತ್ತು ನೀವು ಇನ್ನೂ ಹೆಚ್ಚಿನ ಕಾರ್ಯಗಳನ್ನು ನೆರವೇರಿಸುವಂತೆ ನಿಮಗೆ ಸ್ಫೂರ್ತಿ ನೀಡಬಲ್ಲದು. ಆದರೆ ನಿಮ್ಮಲ್ಲಿ ಆ ಧೋರಣೆಯ ಕೊರತೆಯಿದ್ದರೆ, ಆಗ ನೀವು ಒಂದು ಮೂಲೆಗೆ ಜಾರಿಕೊಳ್ಳುತ್ತೀರಿ ಮತ್ತು ಹೆಚ್ಚು ಖಿನ್ನತೆಯನ್ನು ಅನುಭವಿಸುತ್ತೀರಿ.
ಪೂರ್ವ ಮತ್ತು ಪಶ್ಚಿಮಗಳನ್ನು ಜೊತೆಗೂಡಿಸುವ ಕಲ್ಪನೆಯೊಂದಿಗೆ ನಾವು ಒರಿಸ್ಸಾದಲ್ಲಿ ಶ್ರೀ ಶ್ರೀ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ. ಪೂರ್ವದಲ್ಲಿ ಅತ್ಯುತ್ತಮವಾದುದು ಮತ್ತು ಪಶ್ಚಿಮದಲ್ಲಿ ಅತ್ಯುತ್ತಮವಾದುದು ಅಲ್ಲಿ ಒಂದುಸೇರಲಿದೆ. ಎಲ್ಲಾ ಬೇರೆ ಬೇರೆ ಕ್ಷೇತ್ರಗಳಲ್ಲಿ - ಸಾಂಪ್ರದಾಯಿಕ ಕ್ಷೇತ್ರವಾದ ಆಯುರ್ವೇದ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಅತ್ಯುತ್ತಮ ರೀತಿಯ ಶಿಕ್ಷಣವನ್ನು ಒದಗಿಸುವುದು ಇದರ ಕಲ್ಪನೆ. ನಾವು ಈಗಾಗಲೇ ಗೋವಾದಲ್ಲಿ ಒಂದು ಆಡಳಿತ ಶಾಲೆ(ಬ್ಯುಸಿನೆಸ್ ಸ್ಕೂಲ್) ಯನ್ನು ಪ್ರಾರಂಭಿಸಿದ್ದೇವೆ ಮತ್ತು ಅದು ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ. ಪ್ರಾಚೀನತೆ ಮತ್ತು ಆಧುನಿಕತೆಗಳನ್ನು ಹೇಗೆ ವಿವಾಹ ಮಾಡಿ ಒಂದುಗೂಡಿಸಬಹುದು ಹಾಗೂ ಪ್ರತಿ ಪ್ರಪಂಚದ ಅತ್ಯುತ್ತಮವಾದುದನ್ನು ನಮ್ಮ ಹೊಸ ಪೀಳಿಗೆಗೆ ಹೇಗೆ ನೀಡಬಹುದು ಎಂಬ ಕಲ್ಪನೆಯನ್ನು ಕೊಡುವುದು ಇಲ್ಲಿರುವ ಉದ್ದೇಶ.
ಇದರೊಂದಿಗೆ, ಒತ್ತಡ-ರಹಿತ ಮತ್ತು ಹಿಂಸಾ-ರಹಿತ ಸಮಾಜವನ್ನು ಸೃಷ್ಟಿಸುವ ಕನಸು ನನಗಿದೆ; ಎಲ್ಲಿ ಎಲ್ಲರೂ ಹೆಚ್ಚು ನಗುವರೋ ಅಂತಹ ಒಂದು ನ್ಯಾಯವಾದ ಸಮಾಜ. ಇವತ್ತು, ಜಿ.ಡಿ.ಪಿ. (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್ = ಒಟ್ಟು ದೇಶೀಯ ಉತ್ಪನ್ನ) ಯಿಂದ ಜಿ.ಡಿ.ಹೆಚ್ (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ = ಒಟ್ಟು ದೇಶೀಯ ಸಂತೋಷ) ನ ಕಡೆಗೆ ಗಮನ ಹರಿಯುತ್ತಿರುವುದರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಇದು ತುಂಬಾ ಮುಖ್ಯವಾದುದು. ಯುರೋಪಿನ ಜನತೆಯಲ್ಲಿ ಸುಮಾರು ೩೦% ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೆಚ್ಚಿನ ಜಿ.ಡಿ.ಪಿ.ಯಿದ್ದು, ಜನರ ಮುಖದಲ್ಲಿ ನಗುವಿಲ್ಲದಿದ್ದರೆ ಅದರಿಂದೇನೂ ಪ್ರಯೋಜನವಿಲ್ಲ. ಜನರು ಜಿ.ಡಿ.ಹೆಚ್.ನ್ನು ಗಣನೆಗೆ ತರುವುದು ನಮಗೆ ಬೇಕಾಗಿದೆ; ಅಂದರೆ ಸಂತೋಷ ಪಡುವುದು.
ಸಂತೋಷ ಹೊಂದುವುದಕ್ಕೆ, ದೇಶದ ಸಮೃದ್ಧಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ನಾವು ನೋಡಿದ ಇನ್ನೊಂದು ಸಿದ್ಧಾಂತ. ಭೂತಾನ ಮತ್ತು ಬಾಂಗ್ಲಾದೇಶಗಳಂತಹ ದೇಶಗಳು, ಭಾರತ ಅಥವಾ ಚೈನಾ ಅಥವಾ ಯು.ಎಸ್.ಎ. ಗಳಂತಹ ದೇಶಗಳಿಗಿಂತ ಎಷ್ಟೋ ಹೆಚ್ಚು ಸಂತೋಷದಿಂದಿವೆ. ನಾವು ಕಳೆದುಕೊಂಡಿರುವ ಯಾವುದು ಈ ದೇಶಗಳಲ್ಲಿವೆ? ಅದನ್ನೀಗ ನಾವು ಪರಿಶೋಧಿಸಬೇಕು ಮತ್ತು ಸಮಾಜದಲ್ಲಿ ಈ ಸಂತೋಷದ ಅಲೆಯನ್ನು ತರಬೇಕು; ಕೇವಲ ಸಮೃದ್ಧಿಶೀಲ ಸಮಾಜವನ್ನು ನೋಡಲಲ್ಲ, ಆದರೆ ಹೆಚ್ಚು ಸಂತೋಷಭರಿತವಾದ ಸಮಾಜವನ್ನು ನೋಡಲು.
ಪ್ರಶ್ನೆ: ವಾಣಿಜ್ಯೋದ್ಯಮಿಗಳಿಗೆ ಅಂತಃಸ್ಫುರಣವು ಮುಖ್ಯವಾದುದು, ಯಾಕೆಂದರೆ ಅದು ಸ್ಪರ್ಧಾತ್ಮಕ ಅನುಕೂಲಗಳನ್ನು ಪಡೆಯಲು ಅನನ್ಯ ಸಂಪನ್ಮೂಲಗಳನ್ನು ಸೃಷ್ಟಿಸುತ್ತದೆ. ಒಂದು ದೃಷ್ಟಿಯಿಂದ, ನಾವು ಹೇಳುವುದೇನೆಂದರೆ, ಅನನ್ಯ ಸಾಮರ್ಥ್ಯ ಹೊಂದಿದ ಸಂಪನ್ಮೂಲಗಳಲ್ಲಿ ಬಂಡವಾಳ ಹೂಡುವ ಕಂಪನಿಗಳು ಪ್ರಯೋಜನವನ್ನು ಪಡೆಯುತ್ತವೆ. ನಾವು ಎಲ್ಲಾ ಕಡೆಗಳಲ್ಲೂ ಆಧ್ಯಾತ್ಮವನ್ನು ಹರಡಿದರೆ, ಆಗ ಅದರಲ್ಲಿರುವ ಅನನ್ಯತೆಯೇನು ಮತ್ತು ಆಗಲೂ ನಾವು ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಾವೆಲ್ಲರೂ ನಿದ್ರಿಸುತ್ತೇವೆ, ನಾವೆಲ್ಲರೂ ಒಳ್ಳೆಯ ಊಟವನ್ನು ಮಾಡುತ್ತೇವೆ ಮತ್ತು ಒಂದು ಒಳ್ಳೆಯ ನಸುನಿದ್ದೆ ತೆಗೆದುಕೊಳ್ಳುತ್ತೇವೆ. ಎಲ್ಲರೂ ಬಹಳ ಒಳ್ಳೆಯದಾಗಿ ಮತ್ತು ಆಳವಾಗಿ ನಿದ್ರಿಸಿದರೆ, ಅವರೆಲ್ಲರೂ ಒಂದೇ ರೀತಿ ಆಗುವರೇ? ಇಲ್ಲ! ಪ್ರತಿಯೊಬ್ಬರೂ ಒಂದು ಒಳ್ಳೆಯ ಊಟವನ್ನು ಮಾಡಿದರೆ, ಅವರೆಲ್ಲರೂ ತಮ್ಮನ್ನು ಒಂದೇ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆಯೇ? ಇಲ್ಲ! ಆದರೂ ಪ್ರತಿಯೊಬ್ಬರಿಗೂ ಒಂದು ಒಳ್ಳೆಯ ನಿದ್ರೆ ಮಾಡುವ ಅಧಿಕಾರವಿದೆ ಮತ್ತು ಪ್ರತಿಯೊಬ್ಬರಿಗೂ ಒಳ್ಳೆಯ ಸಂಗೀತ ಕೇಳುವ, ವಿಶ್ರಾಮ ಮಾಡುವ ಹಾಗೂ ಸಂತೋಷವಾಗಿರುವ ಅಧಿಕಾರವಿದೆ.
ಸಂತೋಷವಾಗಿರುವುದು, ನೀವು ಅನನ್ಯವಾಗಿರುವುದರಿಂದ ನಿಮ್ಮನ್ನು ತಡೆಯುವುದಿಲ್ಲ. ಸೂರ್ಯನು ಒಂದು ಕಿಟಿಕಿಯ ಮೂಲಕ ಒಳಬಂದರೆ, ಇನ್ನೊಂದು ಕಿಟಿಕಿಯಿಂದ ಯಾವುದೇ ರೀತಿಯಲ್ಲಿ ಕಡಿಮೆ ಬರುತ್ತದೆಯೆಂದು ಅಲ್ಲ. ಆಧ್ಯಾತ್ಮವೆಂದರೆ ಹಾಗೆ - ಇನ್ನೊಬ್ಬರು ಸೂರ್ಯನ ಕಿರಣಗಳನ್ನು ಆಸ್ವಾದಿಸಿದರೆ ತಮಗೆ ಕಡಿಮೆಯಾದೀತು ಎಂದು ಚಿಂತೆ ಮಾಡದೆಯೇ ಸಂಪೂರ್ಣ ಸೂರ್ಯಕಿರಣವನ್ನು ಆಸ್ವಾದಿಸಲು ಪ್ರತಿಯೊಬ್ಬರೂ ಅಧಿಕಾರ ಹೊಂದಿದ್ದಾರೆ. ಪ್ರಕೃತಿಯು ಧಾರಾಳವಾಗಿದೆ ಮತ್ತು ಆಧ್ಯಾತ್ಮವು ನಮ್ಮ ಜೀವನಕ್ಕೆ ಮೂಲಭೂತವಾಗಿರುವುದು. ಆದುದರಿಂದ ಪ್ರತಿಯೊಬ್ಬರೂ ತಮ್ಮ ಕೋಪವನ್ನು ಹಿಡಿತದಲ್ಲಿಡುವುದು ಹೇಗೆ ಎಂಬುದನ್ನು ಕಲಿಯಬಹುದು. ಪ್ರತಿಯೊಬ್ಬರೂ ಉದ್ಧಾರವಾದ ಅನುಭವವನ್ನು ಪಡೆಯುವುದು ಹೇಗೆಂಬುದನ್ನು ಕಲಿಯಬಹುದು. ಉತ್ಸಾಹಿಗಳಾಗಿರಲು ಪ್ರತಿಯೊಬ್ಬರಿಗೂ ಅಧಿಕಾರವಿದೆ. ಉತ್ಸಾಹವೆಂಬುದು ಕೇವಲ ಕೆಲವು ಜನರ ಆಸ್ತಿಯಲ್ಲ ಮತ್ತು ಇತರರು ವಿಷಯಗಳ ಬಗ್ಗೆ ನಿರುತ್ಸಾಹಿಗಳಾಗಿರಬೇಕೆಂದಿಲ್ಲ. ಇಲ್ಲ! ಪ್ರತಿಯೊಬ್ಬರೂ  ತಮ್ಮದೇ ಆದ ರೀತಿಯಲ್ಲಿ ಉತ್ಸಾಹಿಗಳಾಗಿ, ಅನನ್ಯವಾಗಿ ಮತ್ತು ಸೃಜನಶೀಲರಾಗಿ ಇರಬಹುದು ಮತ್ತು ಆಧ್ಯಾತ್ಮವೆಂದರೆ ಪ್ರತಿಯೊಬ್ಬ ಮನುಷ್ಯನ ಬೆಳವಣಿಗೆಯನ್ನೂ ಆಧರಿಸುವಂತಹದ್ದು.