ಸೋಮವಾರ, ಜೂನ್ 11, 2012

ನಾನೆಸಗಿದೆನೆ೦ಬುದನ್ನು ಮನದಿ೦ದ ಕಿತ್ತೊಗೆದರೆ ಮಹಾಶಕ್ತಿ ನಿಮ್ಮದಾದೀತು


11
2012............................... ಬೆಂಗಳೂರು, ಕರ್ನಾಟಕ, ಭಾರತ
Jun

ನಾವು ಯಾವುದರಿಂದ ಕಂಗೆಡುತ್ತೇವೆ? ನಾವು ಪಕ್ಷಿಗಳೊಂದಿಗೆ ಅಥವಾ ಮೋಡಗಳೊಂದಿಗೆ ಅಥವಾ ಪ್ರಕೃತಿಯೊಂದಿಗೆ ಕಂಗೆಡುವುದಿಲ್ಲ. ನಾವು ಪರಿಸರದೊಂದಿಗೆ ಕಂಗೆಡುವುದಿಲ್ಲ. ಹಾಗಾದರೆ, ನಾವು ಯಾವುದರೊಂದಿಗೆ ಕಂಗೆಡುತ್ತೇವೆ? ನಾವು ನಮ್ಮ ಸುತ್ತಲಿನ ಜನರಿಂದ ಕಂಗೆಡುತ್ತೇವೆ. ನಮ್ಮ ಶತ್ರುಗಳು ನಮ್ಮನ್ನು ಕಂಗೆಡಿಸುತ್ತಾರೆ ಹಾಗೂ ನಮ್ಮ ಮಿತ್ರರು ಕೂಡಾ ನಮ್ಮನ್ನು ಕಂಗೆಡಿಸುತ್ತಾರೆ. ನಮ್ಮ ಮನಸ್ಸು ಒಂದೋ ನಮ್ಮ ಮಿತ್ರರಲ್ಲಿ ಅಥವಾ ನಮ್ಮ ಶತ್ರುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ನಾವು ದಿನವಿಡೀ ಒಂದೋ ನಮ್ಮ ಮಿತ್ರರ ಬಗ್ಗೆ ಅಥವಾ ನಮ್ಮ ಶತ್ರುಗಳ ಬಗ್ಗೆ ಯೋಚಿಸುತ್ತೇವೆ.
ನಾವು ಜನರಿಗೆ ಏನೇ ಕೆಟ್ಟದನ್ನು ಮಾಡದಿದ್ದಾಗಲೂ ಅವರು ನಮ್ಮ ಶತ್ರುಗಳಾಗುತ್ತಾರೆ. ಹಲವಾರು ಜನರಿಗೆ ಈ ಅನುಭವವಾಗಿದೆ. ನಾವು ಅವರಿಗೆ ಯಾವುದೇ ಕೆಟ್ಟದನ್ನು ಮಾಡುವುದಿಲ್ಲ; ಅವರೊಂದಿಗೆ ಅನುಚಿತವಾಗಿ ವರ್ತಿಸುವುದೂ ಇಲ್ಲ ಮತ್ತು ಹಾಗಿದ್ದರೂ ಅವರು ನಮ್ಮ ಶತ್ರುಗಳಾಗುತ್ತಾರೆ. ಇದು ತುಂಬಾ ಆಶ್ಚರ್ಯಕರ! ನಾವು ಯೋಚಿಸುತ್ತೇವೆ, "ಓಹ್! ಅವನು ಯಾಕೆ ನನ್ನ ಶತ್ರುವಾದ? ನಿನ್ನೆ ವರೆಗೆ ಅವನು ನನ್ನ ಮಿತ್ರನಾಗಿದ್ದನು".
ಅದೇ ರೀತಿಯಲ್ಲಿ, ಕೆಲವರಿಗೆ ನಾವು ಯಾವುದೇ ವಿಶೇಷ ಸಹಾಯವನ್ನು ಮಾಡುವುದಿಲ್ಲ, ಹಾಗಿದ್ದರೂ ಅವರು ನಮ್ಮ ಹತ್ತಿರದ ಮಿತ್ರರಾಗುತ್ತಾರೆ. ಅದಕ್ಕೇ ನಾನು ನಿಮಗೆ ಹೇಳುವುದು, ಇದು ಅಚ್ಚರಿದಾಯಕ ಮತ್ತು ನಿಗೂಢವಾದ ಕರ್ಮ - ಹೇಗೆ ಕೆಲವು ಜನರು ನಮ್ಮ ಶತ್ರುಗಳಾಗುತ್ತಾರೆ ಮತ್ತು ಕೆಲವರು ನಮ್ಮ ಮಿತ್ರರಾಗುತ್ತಾರೆ. ಆದುದರಿಂದ ನಾವೇನು ಮಾಡಬೇಕು? ನಾವು ನಮ್ಮ ಮಿತ್ರರು ಹಾಗೂ ಶತ್ರುಗಳು ಇಬ್ಬರನ್ನೂ ಒಂದು ಬುಟ್ಟಿಯಲ್ಲಿಟ್ಟು, ಒಳಗಿನಿಂದ ಸುಮ್ಮನೇ ಖಾಲಿಯಾಗಬೇಕು, ಆನಂದವಾಗಿರಬೇಕು. ಈ ಎಲ್ಲಾ ಘಟನೆಗಳು (ಜನರು ಮಿತ್ರರಾಗುವುದು ಹಾಗೂ ಶತ್ರುಗಳಾಗುವುದು) ಕೆಲವು ನಿಯಮಗಳಿಂದ ನಡೆಸಲ್ಪಡುತ್ತವೆ ಮತ್ತು ಅದು ಹೇಗೆ, ಎಲ್ಲಿಂದ ಬರುತ್ತದೆಯೆಂದು ನಮಗೆ ಗೊತ್ತಿಲ್ಲ. ನಮ್ಮ ಬಗೆಗಿನ ಒಬ್ಬರ ಭಾವನೆಯು ಯಾವಾಗ ಬದಲಾಗಬಹುದೆಂದೂ, ಅದು ನಮ್ಮ ಪರವಾಗಿರಬಹುದೇ ಅಥವಾ ನಮ್ಮ ಪರವಾಗಿರಲಿಕ್ಕಿಲ್ಲವೇ ಎಂಬುದನ್ನು ನಮಗೆ ಹೇಳಲು ಸಾಧ್ಯವಿಲ್ಲ. ನಮಗೆ ಅದು ಸಾಧ್ಯವೇ ಇಲ್ಲ. ಅದಕ್ಕೇ ನಾವು ನಮ್ಮ ಮೇಲೆ, ದೇವರ ಮೇಲೆ ಅಚಲವಾದ ನಂಬಿಕೆಯನ್ನಿರಿಸಬೇಕಾಗಿರುವುದು; ಸ್ನೇಹ ಮತ್ತು ಶತ್ರುತ್ವಗಳ ಮೇಲಲ್ಲ. ಮಿತ್ರರು ಮತ್ತು ಶತ್ರುಗಳ ಬಗ್ಗೆ ಯೋಚಿಸುತ್ತಾ ನಾವು ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
ನಿಮಗೆಲ್ಲಾ ಏನನ್ನಿಸುತ್ತದೆ?
ಇದರರ್ಥ, ನೀವು ನಿಮ್ಮ ಮಿತ್ರರಿಂದ ದೂರವಾಗಬೇಕೆಂದಾಗಲೀ ಅಥವಾ ಹೊಸ ಮಿತ್ರರನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದಾಗಲೀ ಅಲ್ಲ. ನಾನು ಹೇಳುತ್ತಿರುವುದು ಅದನ್ನಲ್ಲ. ಸ್ನೇಹಪರತೆಯು ನಮ್ಮ ಸ್ವಭಾವದಲ್ಲಿರಬೇಕು; ಪ್ರೀತಿಯು ನಮ್ಮ ಸ್ವಭಾವದಲ್ಲೇ ಇರಬೇಕು. ಎಷ್ಟಾದರೂ ನಾವು ಪ್ರೀತಿಯೇ ಆಗಿದ್ದೇವೆ! ಯಾರಾದರೊಬ್ಬರು ಬಂದು ನಮ್ಮ ಪಕ್ಕದಲ್ಲಿ ಕುಳಿತಾಗ, ನಾವು ಅವರಲ್ಲಿ ಮುಗುಳ್ನಕ್ಕು ಕೆಲವು ಮಾತುಗಳನ್ನಾಡುತ್ತೇವೆ. "ಹೇಗಿದ್ದರೂ, ಯಾರು ಸ್ನೇಹಿತ ಅಥವಾ ಯಾರು ಶತ್ರು, ಯಾರೊಂದಿಗೂ ಹಂಚಿಕೊಳ್ಳಲು ಏನೂ ಇಲ್ಲ" ಎಂದು ಯೋಚಿಸಿಕೊಂಡು, ಜೋಲು ಮುಖವನ್ನು ಹಾಕಿಕೊಂಡು ಎಲ್ಲರಲ್ಲೂ ಕೋಪಿಸಿಕೊಳ್ಳುತ್ತಾ ನಡೆಯಬೇಕೆಂಬುದು ಇದರ ಅರ್ಥವಲ್ಲ. ಇದು ಬುದ್ಧಿವಂತಿಕೆಯ ಲಕ್ಷಣವಲ್ಲ. ಇದು ಅಜ್ಞಾನ ಮತ್ತು ಮೂರ್ಖತನ. ನಾವು ನಮ್ಮ ಸುತ್ತಲಿರುವ ಎಲ್ಲರೊಂದಿಗೂ ಒಡನಾಡಬೇಕು ಮತ್ತು ಅದೇ ಸಮಯದಲ್ಲಿ ಒಳಗಿನಿಂದ ಕೇಂದ್ರಿತವಾಗಿರಬೇಕು. ನಿಮಗೆ ಅರ್ಥವಾಯಿತೇ? ನಾವು ಕೇಂದ್ರಿತವಾಗಿದ್ದಾಗ ನಮಗೆ ದುಃಖವಾಗುವುದಿಲ್ಲ, ಕೋಪ ಬರುವುದಿಲ್ಲ ಮತ್ತು ಸ್ವಾಮಿತ್ವದ (possessive) ಭಾವನೆ ಬರುವುದಿಲ್ಲ. ಆಗ ನಮಗೆ ಯಾವುದೇ ರೀತಿಯ ನಿರಾಶೆಯೂ ಆಗುವುದಿಲ್ಲ. ಇಲ್ಲದಿದ್ದರೆ ಹಲವಾರು ಸಾರಿ ಏನಾಗುತ್ತದೆ, ನಾವು ದುಃಖಗೊಳ್ಳುತ್ತೇವೆ - "ಓಹ್, ನೋಡು, ನಾನು ಅವನನ್ನು ಅಷ್ಟು ಒಳ್ಳೆಯ ಮಿತ್ರನನ್ನಾಗಿ ಮಾಡಿಕೊಂಡೆ ಮತ್ತು ಇವತ್ತು ಅವನು ನನ್ನಲ್ಲಿ ಮಾತನಾಡುವುದೂ ಇಲ್ಲ. ನಾನು ಅವನಿಗೆ ಅಷ್ಟೊಂದು ಸಹಾಯಗಳನ್ನು ಮಾಡಿದೆ ಮತ್ತು ಅವನು ನನ್ನ ವಿರುದ್ಧ ತಿರುಗಿ ನಿಂತಿದ್ದಾನೆ!" ಈ ಎಲ್ಲಾ ಯೋಚನೆಗಳನ್ನು ಮಾಡುವುದರಿಂದ, ನಾವು ವರ್ತಮಾನದಲ್ಲಿ ನಮಗಿರುವ ಸಮಯವನ್ನು ವ್ಯರ್ಥ ಮಾಡುತ್ತೇವೆ. ನಾವು ಇದನ್ನು ಮಾಡಬಾರದು, ಸರಿಯಾ!
ಜೀವನವು ಚಿಕ್ಕದು ಮತ್ತು ಈ ಚಿಕ್ಕ ಜೀವಮಾನದಲ್ಲಿ ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡಿ! ನಮ್ಮಲ್ಲಿ ತ್ಯಾಗ ಬುದ್ಧಿಯಿರಬೇಕು. ತ್ಯಾಗವು ನಮಗೆ ಮಹತ್ತಾದ ಶಕ್ತಿಯನ್ನು ನೀಡುತ್ತದೆ. ತ್ಯಾಗವು ನೀಡುವಂತಹ ಶಕ್ತಿಯನ್ನು ನಿಮಗೆ ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ. ನೀವು ತ್ಯಾಗ ಮಾಡಿದಾಗ ನಿಮಗೆ ಒಳ್ಳೆಯ ಶಕ್ತಿ ಬರುತ್ತದೆ ಮತ್ತು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ತ್ಯಾಗವನ್ನು, ಅದು ದೊಡ್ಡದಾಗಿದ್ದರೂ ಚಿಕ್ಕದಾಗಿದ್ದರೂ, ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಾರೆ. ಒಂದಲ್ಲ ಒಂದನ್ನು ತ್ಯಾಗ ಮಾಡದೇ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ಈ ಪ್ರಪಂಚದಲ್ಲಿಲ್ಲ. ಒಬ್ಬನು ಏನನ್ನಾದರೂ ತ್ಯಾಗ ಮಾಡಲೇ ಬೇಕು. ಎಲ್ಲಿ ಪ್ರೀತಿಯಿರುತ್ತದೋ, ಅಲ್ಲಿ ಏನಾದರೂ ತ್ಯಾಗವಿರಲೇಬೇಕು. ಒಬ್ಬಳು ತಾಯಿಯು ತನ್ನ ಮಗುವಿನ ಮೇಲಿರುವ ಪ್ರೀತಿಯಿಂದ ತನ್ನ ಸುಖಗಳನ್ನು ತ್ಯಾಗ ಮಾಡುತ್ತಾಳೆ. ಪ್ರತಿಯೊಬ್ಬಳು ತಾಯಿಯೂ ತನ್ನ ಮಗುವು ಚಿಕ್ಕದಿರುವಾಗ ರಾತ್ರಿಯಲ್ಲಿ ಎಚ್ಚರವಾಗಿರುತ್ತಾಳೆ ಮತ್ತು ಕಡಿಮೆ ನಿದ್ರಿಸುತ್ತಾಳೆ. ಅವಳ ಗಮನವೆಲ್ಲಾ, ಹಗಲು ಮತ್ತು ರಾತ್ರಿ, ಅವಳ ಮಗುವಿನ ಮೇಲಿರುತ್ತದೆ. ತನ್ನ ಮಕ್ಕಳಿಗಾಗಿ ಅವಳು ತನ್ನೆಲ್ಲಾ ಸುಖಗಳನ್ನು ಮರೆಯುತ್ತಾಳೆ.
ಅದೇ ರೀತಿಯಲ್ಲಿ, ಸಮಾಜಕ್ಕಾಗಿ ತ್ಯಾಗ ಮಾಡಲು ಬಯಸುವ ಜನರಿದ್ದಾರೆ. ಅಲ್ಲವೇ? ಒಬ್ಬ ತಂದೆಯು ಇಡಿಯ ಮನೆಗಾಗಿ ಹಣ ಗಳಿಸಲು ಕಷ್ಟ ಪಟ್ಟು ದುಡಿಯುವಂತೆ. ಅಲ್ಲದಿದ್ದರೆ ಅವನು ಯಾಕೆ ಅಷ್ಟೊಂದು ಸೆಣಸಾಡಬೇಕು ಮತ್ತು ಕಷ್ಟಪಟ್ಟು ದುಡಿಯಬೇಕು? ಯಾಕಾಗಿ? ಅವನು ಅದನ್ನು ಕೇವಲ ತನಗಾಗಿ ಮಾಡುವುದಿಲ್ಲ. ಅವನು ತನ್ನ ಕುಟುಂಬದ ಸುಖಕ್ಕಾಗಿ ತನ್ನ ಸ್ವಂತ ಸುಖಗಳನ್ನು ತ್ಯಾಗ ಮಾಡುತ್ತಾನೆ. ಅಲ್ಲವೇ? ಒಬ್ಬ ವ್ಯಕ್ತಿಯು ತನಗೊಬ್ಬನಿಗಾಗಿ ಅಷ್ಟೊಂದು ಕಷ್ಟಪಡಬೇಕಾದ ಅಗತ್ಯವಿಲ್ಲ. ಅಷ್ಟಾಗಿಯೂ, ಒಬ್ಬ ವ್ಯಕ್ತಿಗೆ ಎಷ್ಟು ಬೇಕು? ಅವನಿಗೆ ಕೇವಲ ಇರಲೊಂದು ಜಾಗ ಮತ್ತು ತಿನ್ನಲು ಸ್ವಲ್ಪ ಆಹಾರ, ಇಷ್ಟೇ ಬೇಕಾಗಿರುವುದು. ಈ ಅಗತ್ಯಗಳನ್ನು ಪೂರೈಸಲು ಸ್ವಲ್ಪವೇ ಸ್ವಲ್ಪ ಸಾಕಾಗಬಹುದು. ಇದಕ್ಕಾಗಿ ಒಬ್ಬನು ಬಹಳ ಕಷ್ಟ ಪಟ್ಟು ದುಡಿಯಬೇಕಾದ ಅಗತ್ಯವಿಲ್ಲ. ಅವನೊಬ್ಬ ಬುದ್ಧಿವಂತ ಮನುಷ್ಯನಾಗಿದ್ದರೆ, ಅವನು ಸ್ವಲ್ಪದರಲ್ಲಿ ಸಂತೋಷಗೊಳ್ಳುತ್ತಾನೆ ಮತ್ತು ತೃಪ್ತಿಗೊಳ್ಳುತ್ತಾನೆ. ಆದರೆ ತನ್ನ ಕುಟುಂಬ ಮತ್ತು ಸಮಾಜದ ಬಗೆಗಿರುವ ಜವಾಬ್ದಾರಿಗಳನ್ನು ಪೂರೈಸಲು ಒಬ್ಬನು ಕಷ್ಟಪಟ್ಟು ದುಡಿಯಬೇಕಾಗುತ್ತದೆ.
ಆದುದರಿಂದ ಪ್ರತಿಯೊಬ್ಬ ಮನುಷ್ಯನೂ ಏನಾದರೊಂದು ತ್ಯಾಗ ಮಾಡುತ್ತಾನೆ. ಒಬ್ಬನು ಹೆಚ್ಚಿನ ತ್ಯಾಗ ಮಾಡಿದಷ್ಟೂ ಅವನಿಗೆ ಬರುವ ಶಕ್ತಿಯು ಹೆಚ್ಚಾಗುತ್ತದೆ. ಕೆಲವು ಜನರು ತಮ್ಮ ಸುಖಗಳನ್ನು ಮತ್ತು ಐಷಾರಾಮಗಳನ್ನು ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ, ಕೆಲವರು ತಮ್ಮ ಸಂಪತ್ತನ್ನು ತ್ಯಾಗ ಮಾಡಲು ಇಚ್ಛಿಸುತ್ತಾರೆ, ಕೆಲವರು ತಮ್ಮ ಸಂಬಂಧಗಳನ್ನು ತ್ಯಾಗ ಮಾಡಲು ಇಚ್ಛಿಸುತ್ತಾರೆ ಮತ್ತು ಕೆಲವರು ತಮ್ಮ ಆತ್ಮ-ಗೌರವ ಹಾಗೂ ಸಮಾಜದಲ್ಲಿ ತಮಗಿರುವ ಗೌರವಗಳನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇದರ ವಿರುದ್ಧ ಬದಿಯಲ್ಲಿ ನೀವು ನೋಡಿದರೆ, ಕೆಲವರಿಗೆ ತಮ್ಮ ಆತ್ಮಗೌರವವನ್ನು ಮತ್ತು ಸಮಾಜದಲ್ಲಿ ತಮಗಿರುವ ಗೌರವವನ್ನು ತ್ಯಾಗ ಮಾಡಲು ಅಥವಾ ಹೋಗಬಿಡಲು ಸಾಧ್ಯವಾಗುವುದಿಲ್ಲ. ಯಾರಾದರೂ ಅವರನ್ನು ಅವಮಾನಿಸಿದರೆ ಅವರು ಎಷ್ಟೊಂದು ತೊಂದರೆಗೀಡಾಗುತ್ತಾರೆ ಮತ್ತು ಕಂಗೆಡುತ್ತಾರೆ ಎಂದರೆ ಅವರು ಕುಸಿಯುತ್ತಾರೆ. ಅದು ಅವರ ಬಲಹೀನತೆ. ನಾವು ಇದನ್ನೆಲ್ಲಾ ಲಕ್ಷ್ಯವಿಟ್ಟು ನೋಡಬೇಕು.
ಆದುದರಿಂದ, ಮಹತ್ತಾದ ತ್ಯಾಗಗಳನ್ನು ಮಾಡುವವನೊಬ್ಬನು ಮಹತ್ತಾದ ಶಕ್ತಿಯನ್ನು ಗಳಿಸುತ್ತಾನೆ. ಒಬ್ಬ ವ್ಯಕ್ತಿಯಲ್ಲಿ ತ್ಯಾಗ ಮಾಡಲು ಏನೂ ಇಲ್ಲದಿದ್ದರೆ ಮತ್ತು ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆಂದು ಹೇಳಿದರೆ, ಅದು ಕೂಡಾ ಸರಿಯಲ್ಲ. ಎಲ್ಲವೂ ಇದ್ದುಕೊಂಡು ಮತ್ತು ಎಲ್ಲಾ ಕರ್ತವ್ಯಗಳನ್ನು ಹಾಗೂ ಜವಾಬ್ದಾರಿಗಳನ್ನು ಪೂರೈಸಿಕೊಂಡು, ಒಬ್ಬ ವ್ಯಕ್ತಿಗೆ ತನ್ನ ಮನಸ್ಸಿನಲ್ಲಿ ತ್ಯಾಗದ ಭಾವನೆಯಿರಬೇಕು (ತ್ಯಾಗ ಬುದ್ಧಿ). ಅದು ಉತ್ತಮ.
ನೋಡಿ, ಒಬ್ಬ ಸಂತನು ಯಾವತ್ತೂ ಹೇಳಬಹುದು, "ನನ್ನಲ್ಲಿ ಏನೂ ಇಲ್ಲ, ನನಗಾಗಿ ಒಂದು ಗುಡಿಸಲು ಕೂಡಾ ಇಲ್ಲ. ನಾನು ಅಷ್ಟೊಂದು ದೊಡ್ದ ತ್ಯಾಗವನ್ನು ಮಾಡಿದ್ದೇನೆ". ಆದರೆ ನಾನು ಅದನ್ನು ತ್ಯಾಗವೆಂದು ಪರಿಗಣಿಸುವುದಿಲ್ಲ, ಯಾಕೆಂದರೆ ಅವನಿಗೆ ಪೂರೈಸಲು ಯಾವುದೇ ಕರ್ತವ್ಯಗಳು ಅಥವಾ ಜವಾಬ್ದಾರಿಗಳಿಲ್ಲ. ಆದರೆ ಇನ್ನೊಂದು ಕಡೆಯಲ್ಲಿ, ಒಬ್ಬನು ಒಂದು ದೊಡ್ಡ ಅಶ್ರಮದ ಜವಾಬ್ದಾರಿಗಳನ್ನು ನೋಡಿಕೊಳ್ಳಬೇಕಾಗಿ ಮತ್ತು ಅಷ್ಟೊಂದು ಜನರಿರುವ ಸಂಸ್ಥೆಯನ್ನು ನಡೆಸಬೇಕಾಗಿ ಬಂದರೂ ಇದನ್ನೆಲ್ಲಾ ಒಂದು ತ್ಯಾಗ ಮತ್ತು ನಿಷ್ಕಾಮ ಭಾವನೆಯಿಂದ ಮಾಡಿದರೆ, ಆಗ ಅದು ಎಲ್ಲದರಲ್ಲಿ ಪರಮೋಚ್ಛವಾದ ಮಾರ್ಗ. ಇದು ಭಗವಾನ್ ಕೃಷ್ಣನ ರೀತಿ. ಅರ್ಜುನನು ಭಗವಾನ್ ಕೃಷ್ಣನಿಗೆ ಅಂದನು, "ನಾನು ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಹೋಗುತ್ತೇನೆ. ನಾನು ನನ್ನ ಪ್ರಿಯವಾದವರ ವಿರುದ್ಧ ಯುದ್ಧ ಮಾಡಲು ಬಯಸುವುದಿಲ್ಲ ಮತ್ತು ನಾನು ರಾಜ ಜೀವನದ ಐಷಾರಾಮಗಳನ್ನೂ ಆಸ್ವಾದಿಸಲು ಬಯಸುವುದಿಲ್ಲ. ನಾನು ಇದನ್ನೆಲ್ಲಾ ಯಾಕೆ ಮಾಡಬೇಕು? ಕೃಷ್ಣ, ನೀನು ಯುದ್ಧಕ್ಕೆ ಹೋಗಲು ಯಾಕೆ ನನ್ನನ್ನು ಬಲವಂತ ಮಾಡುತ್ತಿದ್ದೀಯಾ? ನನ್ನನ್ನು ಹೋಗಲು ಬಿಡು. ನಾನು ಹಿಮಾಲಯಕ್ಕೆ ಹೋಗಲು ಬಯಸುತ್ತೇನೆ". ಆಗ ಭಗವಾನ್ ಕೃಷ್ಣನು ಹೇಳಿದನು, "ಇಲ್ಲ, ನೀನು ಹಾಗೆ ಮಾಡಬಾರದು. ನೀನು ನಿನ್ನ ಧರ್ಮವನ್ನು ಬಿಟ್ಟುಬಿಡಬಾರದು. ಬದಲಾಗಿ ನೀನು ನಿನ್ನ ಕರ್ಮದ ಫಲಗಳಿಂದ ನಿನ್ನನ್ನು ಬಿಡಿಸಿಕೊಳ್ಳಬೇಕು".
ಎಲ್ಲವನ್ನೂ ಮಾಡಿ. ನಿಮ್ಮೆಲ್ಲಾ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಪೂರೈಸಿ. ಹಾಗಿದ್ದರೂ ತ್ಯಾಗದ ಒಂದು ಭಾವನೆಯೊಂದಿಗೆ ವೈರಾಗ್ಯದಿಂದಿರಿ. ದೇಶದ ಮುಂದಾಳುತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಿ ಮತ್ತು ಹೀಗಿದ್ದರೂ ನಿಷ್ಕಾಮ ಹಾಗೂ ತ್ಯಾಗದ ಭಾವನೆಯನ್ನು ನಿಮ್ಮ ಮನಸ್ಸಿನಲ್ಲಿರಿಸಿಕೊಳ್ಳಿ.
ಸಂತ ಕಬೀರನು ಒಂದು ಸುಂದರವಾದ ಶ್ಲೋಕವನ್ನು ಹಾಡಿದನು, "ಜೂಟ್ ನ ಛೋಡಾ, ಕ್ರೋಧ್ ನ ಛೋಡಾ, ಸತ್ಯ ವಚನ್ ಕ್ಯೋಂ ಛೋಡ್ ದಿಯಾ; ಕ್ರೋಧ್ ನ ಛೋಡಾ, ಕಾಮ್ ನ ಛೋಡಾ, ನಾಮ್ ಜಪನ್ ಕ್ಯೋಂ ಛೋಡ್ ದಿಯಾ" (ಸುಳ್ಳನ್ನು ಬಿಡಲಿಲ್ಲ, ಕ್ರೋಧವನ್ನು ಬಿಡಲಿಲ್ಲ, ಸತ್ಯ ವಚನವನ್ನು ಯಾತಕೆ ಬಿಟ್ಟೆ; ಕ್ರೋಧವನ್ನು ಬಿಡಲಿಲ್ಲ, ಕೆಲಸವನ್ನು ಬಿಡಲಿಲ್ಲ, ನಾಮವನ್ನು ಜಪಿಸುವುದನ್ನು ಯಾತಕೆ ಬಿಟ್ಟೆ).
ಒಬ್ಬನ ಪ್ರಜ್ಞೆಯು ಯಾವಾಗ ದೇವರ ಹೆಸರಿನ ಜಪದಿಂದ ಪೂರ್ತಿಯಾಗಿ ಪಕ್ವವಾಗುವುದೋ ಆಗ ಮಾತ್ರ ಅವನು ಜಪವನ್ನು ಬಿಟ್ಟುಬಿಡಬೇಕು. ಜಪದಿಂದ ನೀವು ಅಜಪದ (ಮಂತ್ರವನ್ನು ಪುನರುಚ್ಛರಿಸಲು, ಸಾಧಾರಣವಾಗಿ ಬೇಕಾದ ಮಾನಸಿಕ ಪ್ರಯತ್ನವಿಲ್ಲದೆಯೇ ಮಾಡುವ ಜಪಾಭ್ಯಾಸ)  ಕಡೆಗೆ ಮುನ್ನಡೆಯಬೇಕು. ಆದರೆ ನೀವು ಜಪವನ್ನು ಮೊದಲೇ ಬಿಟ್ಟರೆ, ಆಗ ಅದು ತಪ್ಪು. ಉದಾಹರಣೆಗೆ, ನೀವು ಒಂದು ನಿಲ್ದಾಣದಲ್ಲಿ ಬಸ್ಸನ್ನು ಹತ್ತುತ್ತೀರಿ ಮತ್ತು ನೀವೆಲ್ಲಿಗೆ ಹೋಗಲು ಬಯಸುತ್ತೀರೋ ಅದನ್ನವಲಂಬಿಸಿ ನೀವು ಇನ್ನೊಂದು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುತ್ತೀರಿ. ಈಗ ನಿಮಗೆ, "ಹೇಗಿದ್ದರೂ ನಾನು ಬಸ್ಸಿನಿಂದ ಇಳಿಯಬೇಕಾಗಿರುವಾಗ, ಬಸ್ಸನ್ನು ಹತ್ತುವುದಾದರೂ ಯಾಕೆ?" ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಜನರು ಈ ರೀತಿ ಯೋಚಿಸುತ್ತಾರೆ. ಬಸ್ಸನ್ನು ಹತ್ತುವ ಮತ್ತು ಬಸ್ಸಿನಿಂದ ಇಳಿಯುವ ಜಾಗಗಳು ಬೇರೆ ಬೇರೆಯಾದವು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ಒಂದು ಜಾಗದಲ್ಲಿ ಹತ್ತುತ್ತೀರಿ ಮತ್ತು ಇನ್ನೊಂದು ಜಾಗದಲ್ಲಿ ಇಳಿಯುತ್ತೀರಿ. ಅದೇ ರೀತಿಯಲ್ಲಿ, ಜಪ ಮಾಡುವ ಮೊದಲಿನ ನಿಮ್ಮ ಪ್ರಜ್ಞೆಯ ಸ್ಥಿತಿ ಮತ್ತು ಜಪ ಮಾಡಿದ ನಂತರದ ನಿಮ್ಮ ಪ್ರಜ್ಞೆಯ ಸ್ಥಿತಿಯು ಬೇರೆ ಬೇರೆಯಾಗಿದೆ. ಆದುದರಿಂದ, ಜೀವನದ ಪ್ರವಾಹವು ಯಾವತ್ತೂ ಈ ದಿಕ್ಕಿನಲ್ಲಿ ಸಾಗಬೇಕು.
ಆದುದರಿಂದ, ತ್ಯಾಗವು ಮುಖ್ಯವಾದುದು. ತ್ಯಾಗವಿಲ್ಲದೆ, ಒಬ್ಬನ ಮನಸ್ಸು ತುಂಬಾ ಭಾರವಾಗುತ್ತದೆ. ಎಲ್ಲದರಿಂದ ನಿಷ್ಕಾಮ ಮತ್ತು ತ್ಯಾಗದ ಭಾವನೆಯಿರುವ ಒಬ್ಬ ವ್ಯಕ್ತಿಯು ತನಗೆ ಲಭಿಸಿದ ಯಾವುದೇ ಪ್ರಮಾಣದ ಹೊಗಳಿಕೆಗೂ ಮಾರುಹೋಗುವುದಿಲ್ಲ. ಅಂತಹ ಹೊಗಳಿಕೆಗಳು ಅವನ ಮನಸ್ಸನ್ನು ಪ್ರವೇಶಿಸುವುದಿಲ್ಲ. ಒಬ್ಬ ಜ್ಞಾನಿ, ತ್ಯಾಗಿ ಮತ್ತು ಭಕ್ತ, ಇವರು ಹೊಗಳಿಕೆ ಮತ್ತು ಮೆಚ್ಚುಗೆಗಳಿಂದ ತೊಂದರೆಗೊಳಗಾಗುವುದಿಲ್ಲ ಮತ್ತು ಮಾರುಹೋಗುವುದಿಲ್ಲ. ಇಲ್ಲದಿದ್ದರೆ, ಅದೇ ಹೊಗಳಿಕೆ ಮತ್ತು ಮೆಚ್ಚುಗೆಗಳು, ನಿಷ್ಕಾಮ  ಮತ್ತು ತ್ಯಾಗದ ಮನೋಭಾವನೆಯಿಲ್ಲದ ಒಬ್ಬನಿಗೆ ಭಾರವಾಗುತ್ತವೆ. ಪ್ರೀತಿ ಮತ್ತು ಮೆಚ್ಚುಗೆಗಳೂ ಭಾರವಾಗುವ ಸಾಧ್ಯತೆಯಿದೆ. ಹಾಗಾದಾಗ, ಅದರಿಂದ ದೂರ ಓಡುವ ಮೂಲಕ ಅವರು ಆ ಭಾರವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಲವಾರು ಪ್ರೇಮವಿವಾಹಗಳು ಮುರಿದು ಬಿದ್ದಿರುವುದು ಇದರಿಂದಾಗಿಯೇ. ಸಂಗಾತಿಗಳಲ್ಲೊಬ್ಬರು ಇನ್ನೊಬ್ಬರ ಕಡೆಗೆ ಅಷ್ಟೊಂದು ಪ್ರೇಮವನ್ನು ವ್ಯಕ್ತಪಡಿಸುತ್ತಾರೆ ಮತ್ತು ಇನ್ನೊಬ್ಬರಿಗೆ ಅದನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆ ಇನ್ನೊಬ್ಬ ವ್ಯಕ್ತಿಗೆ ಆಗ ಓಡಿಹೋಗಬೇಕೆಂದು ಅನಿಸುತ್ತದೆ  ಮತ್ತು ಅವರು ಓಡಿ ಹೋಗುತ್ತಾರೆ! ಎಷ್ಟು ಮಂದಿ ಈ ರೀತಿ ಆಗುವುದನ್ನು ನೋಡಿದ್ದೀರಿ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಹಲವು ಜನರು ನನ್ನ ಬಳಿ ಬಂದು ಹೇಳುತ್ತಾರೆ, "ನಾನು ಈ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ. ಆದರೂ ನಾನು ಯಾರನ್ನೆಲ್ಲಾ ಪ್ರೀತಿಸುತ್ತೇನೆಯೋ ಅವರು ನನ್ನಿಂದ ದೂರ ಓಡಿ ಹೋಗುತ್ತಾರೆ". ನಾನು ಅವರಿಗೆ ಹೇಳುತ್ತೇನೆ, "ಓಹ್! ಹಗಲು ರಾತ್ರಿ ಅಷ್ಟೊಂದು; ಅವರು ಬೇಸರಗೊಳ್ಳುವಷ್ಟು ಮತ್ತು ಕಿರಿಕಿರಿಗೊಳ್ಳುವಷ್ಟು ಪ್ರೀತಿಯನ್ನು ವ್ಯಕ್ತಪಡಿಸಬೇಡ. ಹೊರದೇಶಗಳಲ್ಲಿ ಅವರು ಮಾಡುವುದು ಇದನ್ನೇ. ಒಬ್ಬರು ಇನ್ನೊಬ್ಬರ ಹಿಂದೆ, "ಹನೀ, ಹನೀ" (ಅಂದರೆ ಜೇನುತುಪ್ಪ) ಎನ್ನುತ್ತಾ ಓಡುತ್ತಾರೆ, ಎಲ್ಲಾ ಸಮಯದಲ್ಲೂ. ನಂತರ ಏನಾಗುತ್ತದೆ? ಅವರು ಸಿಹಿಮೂತ್ರ ಖಾಯಿಲೆಯಿಂದ ಬಳಲುತ್ತಾರೆ! ಅವಾಗಾವಾಗ ಅವರು "ಹನೀ, ಹನೀ" ಎಂದು ಹೇಳುತ್ತಾರೆ ಮತ್ತು ಒಂದು ದಿನ ಅವರು ಬೇಸತ್ತು ಹೋಗುತ್ತಾರೆ ಹಾಗೂ, "ನನಗೆ ನಿನ್ನನ್ನು ಸಹಿಸಲಾಗದು" ಎಂದು ಹೇಳುತ್ತಾರೆ. ಒಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅತಿರೇಕಕ್ಕೆ ಹೋಗಬಾರದು.
ಭಾರತದಲ್ಲಿ, ಇದಕ್ಕೆ ವಿರುದ್ಧ. ಜನರು ಪ್ರೀತಿಯನ್ನು ಯಾವತ್ತೂ ವ್ಯಕ್ತಪಡಿಸುತ್ತಿರಲಿಲ್ಲ. ನೀವು ಭಾರತದ ಹಳ್ಳಿಗಳಿಗೆ ಹೋದರೆ, ಅವರು ಪ್ರೀತಿಯನ್ನು ವ್ಯಕ್ತಪಡಿಸುವುದೇ ಇಲ್ಲವೆಂಬುದು ನಿಮಗೆ ತಿಳಿಯುತ್ತದೆ. ಅವರು ಅದನ್ನು ತಮ್ಮ ಹೃದಯಗಳಲ್ಲಿ ಇರಿಸುತ್ತಾರೆ, ಆದರೆ ಅವರು ಅದನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಹೊರದೇಶಗಳಲ್ಲಿ ಅವರು ಪ್ರೀತಿಯನ್ನು ಎಷ್ಟು ವ್ಯಕ್ತಪಡಿಸುತ್ತಾರೆಂದರೆ, ಅದು ಹಾಗೇ ಮಾಯವಾಗಿಬಿಡುತ್ತದೆ! ಅದು ಉಳಿಯುವುದಿಲ್ಲ.
ಪ್ರೀತಿಯನ್ನು ಒಂದು ಬೀಜದಂತೆ ಬಿತ್ತಬೇಕು. ನೀವು ಬೀಜವನ್ನು ಭೂಮಿಯಲ್ಲಿ ತುಂಬಾ ಆಳದಲ್ಲಿ ಬಿತ್ತಿದರೆ, ಆಗ ಅದು ಮೊಳಕೆಯೊಡೆಯಲಾರದು. ನೀವು ಒಂದು ಬೀಜವನ್ನು ನೆಲದಲ್ಲಿ ಹತ್ತು ಅಡಿಗಳಷ್ಟು ಆಳದಲ್ಲಿ ಬಿತ್ತಿದರೆ, ಅದು ಸಾಯಬಹುದು. ಇದು ಭಾರತದ ಹಳ್ಳಿಗಳಲ್ಲಿನ ಪರಿಸ್ಥಿತಿ. ತಮ್ಮ ಜೀವಮಾನವಿಡೀ ಜೊತೆಯಲ್ಲಿದ್ದುಕೊಂಡು ಕಳೆಯುವ ದಂಪತಿಗಳಿದ್ದಾರೆ, ಆದರೂ ಅವರು, ತಮಗೆ ಪರಸ್ಪರರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ. ನಗರಗಳಲ್ಲಿನ ಮತ್ತು ಹೊರದೇಶಗಳಲ್ಲಿನ  ಪರಿಸ್ಥಿತಿಯು ಇದಕ್ಕೆ ತದ್ವಿರುದ್ಧವಾಗಿದೆ. ಅಲ್ಲಿ ಅವರು ಆವಾಗಾವಾಗ, "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುತ್ತಾ ಇರುತ್ತಾರೆ ಮತ್ತು ಇದರಿಂದಾಗಿ, ಪ್ರೀತಿಯು ಸೋಲುತ್ತದೆ. ನಂತರ ಸಂಬಂಧವು "ಕ್ಷಮಿಸು" ಅಥವಾ "ಧನ್ಯವಾದಗಳು" ಎಂದು ಹೇಳುವಂತೆ ಔಪಚಾರಿಕವಾಗುತ್ತದೆ.
ಒಬ್ಬರು ಸುಮ್ಮನೇ ನಿಮಗೆ ಒಂದು ಲೋಟ ನೀರನ್ನು ನೀಡುತ್ತಾರೆ ಮತ್ತು ನೀವು, "ಬಹಳ ಧನ್ಯವಾದಗಳು!" ಎಂದು ಹೇಳುತ್ತೀರಿ. ಬಹಳ ಧನ್ಯವಾದಗಳು ಎಂದು ಹೇಳುವುದರ ಅರ್ಥವೇನು? ಲೋಟವು ಮೇಜಿನ ಮೇಲಿತ್ತು ಮತ್ತು ಅವರು ಅದನ್ನು ಹೆಕ್ಕಿ ನಿಮಗೆ ಕೊಟ್ಟರು ಹಾಗೂ ನೀವು, "ಬಹಳ ಧನ್ಯವಾದಗಳು" ಎಂದು ಹೇಳುತ್ತೀರಿ. ಹೌದು, ನೀವು ಮೂರು ದಿನಗಳ ಕಾಲ ನೀರಿಲ್ಲದೆ ಒಂದು ಮರುಭೂಮಿಯಲ್ಲಿದ್ದು, ಆಗ ಯಾರಾದರೂ ಬಂದು ನಿಮಗೆ ಒಂದು ಲೋಟ ನೀರು ಕೊಟ್ಟಿರುತ್ತಿದ್ದರೆ ಮತ್ತು ನೀವು, "ಬಹಳ ಧನ್ಯವಾದಗಳು" ಎಂದು ಹೇಳಿರುತ್ತಿದ್ದರೆ,  ಆಗ ಅದರಲ್ಲಿ ಸ್ವಲ್ಪ ಪ್ರಾಮಾಣಿಕತೆ ಇರುತ್ತದೆ.
ನಾವು ನಮ್ಮದೇ ಮನೆಯಲ್ಲಿ ಬಹಳ ಔಪಚಾರಿಕವಾಗಿರುತ್ತೇವೆ. ಮನೆಯಲ್ಲಿನ ಯಾರಾದರೊಬ್ಬರು ನಮಗೆ ಒಂದು ಲೋಟ ನೀರು ಅಥವಾ ತಿನ್ನಲೇನಾದರೂ ಕೊಟ್ಟಾಗ ನಾವು, "ಬಹಳ ಧನ್ಯವಾದಗಳು!" ಎಂದು ಹೇಳಿದರೆ, ಆಗ ಅದರಲ್ಲಿ ಯಾವುದೇ ಅರ್ಥವಿಲ್ಲ.
ನಾವಾಡುವ ಶಬ್ದಗಳು ನಮ್ಮ ಭಾವನೆಯ ಆಳವನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಗುರಿಯನ್ನು ಹೊಂದಿರಬೇಕು. ಶಬ್ದಗಳು ಭಾವನೆಗಳ ಆಳವನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದರೆ ಭಾವನೆಗಳನ್ನು, ನಿಖರವಾದ ಶಬ್ದಗಳಿಂದ ಹೊದಿಸಿ, ನಂತರ ವ್ಯಕ್ತಗೊಳಿಸಬೇಕು. ಇಲ್ಲದಿದ್ದರೆ, ಒಬ್ಬನ ನಿಜವಾದ ಭಾವನೆಗಳನ್ನು ತಿಳಿಸುವುದು ಬಹಳ ಕಷ್ಟ. ಹೀಗಾಗಿಯೇ ನಾವು ಉಪಯೋಗಿಸುವ ಪದಗಳು ಮುಖ್ಯವಾದುವು ಮತ್ತು ಭಾಷೆಯು ಉಪಯೋಗಿಸಲ್ಪಡಬೇಕಾದುದು ಹೀಗೆಯೇ.
ಕನ್ನಡದಲ್ಲಿ ಒಂದು ಬಹಳ ಸುಂದರವಾದ ಪದ್ಯವಿದೆ. ಅದು ಹೇಳುತ್ತದೆ, "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು". ಭಗವಾನ್ ಶಿವನು ಸಾಧಾರಣವಾಗಿ ಬಹಳ ಶಾಂತನಾಗಿಯೂ ಮೌನವಾಗಿಯೂ ಇರುತ್ತಾನೆ. ಆದರೆ ನಿಮ್ಮ ಮಾತು ಹೇಗಿರಬೇಕೆಂದರೆ, ಭಗವಾನ್ ಶಿವನೂ ತಲೆಯಲ್ಲಾಡಿಸಿ, "ಹೌದು, ಅದು ನಿಜ! ಅದು ಸರಿ" ಎಂದು ಹೇಳಬೇಕು. ನಿಮ್ಮ ಮಾತು ಭಗವಾನ್ ಶಿವನೂ ಒಪ್ಪುವಂತಿರಬೇಕು.
ಪ್ರಶ್ನೆ: ಗುರೂಜಿ, ಪ್ರೀತಿಯು ಚೇತನದ ಮಟ್ಟದಲ್ಲಿ ಮಾತ್ರ ನೆಲಸುವುದಾದರೆ, ಆಗ ಸಂಬಂಧಗಳ ಅಗತ್ಯವೇನು?
ಶ್ರೀ ಶ್ರೀ ರವಿಶಂಕರ್: ಪ್ರಜ್ಞೆಯು ತನ್ನನ್ನು ವ್ಯಕ್ತಿಯ ಮೂಲಕ ವ್ಯಕ್ತಪಡಿಸುತ್ತದೆ ಮತ್ತು ಸಂಬಂಧಗಳು ಬೇರೆ ಬೇರೆ ವ್ಯಕ್ತಿಗಳ ನಡುವೆ ಆಗುತ್ತವೆ. ನಿಮಗೆ ಯಾವುದೇ ಸಂಬಂಧದ ಅಗತ್ಯವಿಲ್ಲವೆಂದು ಅನ್ನಿಸಿದರೆ, ಆಗ ನೀವು ಯಾವುದೇ ಸಂಬಂಧವನ್ನು ಬಲವಂತವಾಗಿ ಸ್ಥಾಪಿಸಲು ಸಾಧ್ಯವಿಲ್ಲ. ನೀನು ಸಂಬಂಧಗಳ ಅಗತ್ಯದ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿರುವುದರ ನಿಜಾಂಶವೇನೆಂದರೆ ನಿನಗೆಲ್ಲೋ ಸಂಬಂಧಗಳು ಬೇಕೆಂದು ಅನ್ನಿಸುತ್ತಿದೆ. ಇಲ್ಲದಿದ್ದರೆ ಆ ಪ್ರಶ್ನೆಯು ಏಳುತ್ತಲೇ ಇರಲಿಲ್ಲ.
ನೀವು ನಿಮ್ಮೊಂದಿಗೇ ಸೆಣಸಾಡುತ್ತಿರುತ್ತೀರಿ ಮತ್ತು ಸಂಬಂಧಗಳು ಬೇಕೆಂದು ಅನಿಸುತ್ತದೆ, ಆದರೂ ನಿಮ್ಮ ಅಹಂಕಾರವು ಮಧ್ಯೆ ಬರುತ್ತದೆ ಮತ್ತು "ಓಹ್, ನನಗೆ ಯಾವುದೇ ಸಂಬಂಧಗಳು ಬೇಡ" ಎಂದು ನಿಮಗೆ ಅನಿಸುತ್ತದೆ ಅಥವಾ ಸಂಬಂಧಗಳು ಬೇಕೇ ಬೇಡವೇ ಎಂಬುದರ ಬಗ್ಗೆ ನಿಮಗೆ ಖಚಿತವಾಗಿ ತಿಳಿದಿರುವುದಿಲ್ಲ. ಅದಕ್ಕೇ ನಾನು ಹೇಳುವುದು, ಸಂಬಂಧಗಳು ನಿಂತರೂ ಅಥವಾ ಮಾಸಿ ಹೋದರೂ ನೀವು ಅದರಿಂದ ಬಾಧಿತರಾಗಬಾರದು. ನೀವು ಸುಮ್ಮನೇ ನಿಮ್ಮಲ್ಲೇ ವಿಶ್ರಾಮ ಮಾಡಿ. ನೀವು ಧ್ಯಾನ ಮಾಡುವಾಗ ಎಲ್ಲವನ್ನೂ ಬದಿಗಿಟ್ಟು ಸುಮ್ಮನೇ ನಿಮ್ಮಲ್ಲೇ ವಿಶ್ರಾಂತಿ ಪಡೆಯಿರಿ ಮತ್ತು ಪ್ರಪಂಚದಲ್ಲಿ ಇತರರೊಂದಿಗೆ ವ್ಯವಹರಿಸುವಾಗ ಅಥವಾ ಒಡನಾಡುವಾಗ, ಅವರೊಂದಿಗೆಲ್ಲಾ ಒಳ್ಳೆಯ ಸಂಬಂಧಗಳನ್ನು ರೂಪಿಸಿಕೊಳ್ಳಿ.
ಪ್ರಶ್ನೆ: ಗುರೂಜಿ, ಒಬ್ಬನು, ಆಕರ್ಷಣೆಯಿಂದ ತನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಒಬ್ಬನು, ಆಕರ್ಷಣೆಯಿಂದ ತನ್ನನ್ನು ರಕ್ಷಿಸಿಕೊಳ್ಳಬೇಕೆಂಬ ಯೋಚನೆಯೇ ಅದರ ಮೇಲೆ ತಡೆಯನ್ನು ಹಾಕುತ್ತದೆ. ಇದನ್ನು ಈ ರೀತಿಯಲ್ಲಿ ಅರ್ಥ ಮಾಡಿಕೊಳ್ಳಿ. ಅದು ಒಳ್ಳೆಯದು. ಒಂದು ಕಾರಿನಲ್ಲಿ ಬ್ರೇಕುಗಳಿರಬೇಕು; ಇಲ್ಲದಿದ್ದರೆ ನೀವು ಒಂದು ದಿನ ತೊಂದರೆಯಲ್ಲಿ ಬೀಳುತ್ತೀರಿ, ಸರಿಯಾ. ಜೀವನವು ಪ್ರೀತಿಯಿಂದ ತುಂಬಿದೆಯೆಂಬ ದೃಢವಾದ ನಂಬಿಕೆಯನ್ನಿಟ್ಟುಕೊಳ್ಳಿ. ನಾವು ಪ್ರೀತಿಯನ್ನು ಹೆಚ್ಚಿಸುವ ಒಂದು ಪ್ರಯತ್ನವನ್ನು ಮಾಡಲು ಸಾಧ್ಯವಿಲ್ಲ, ಆದರೆ ನೀವು ಒತ್ತಡ ರಹಿತರಾದ ಕ್ಷಣದಲ್ಲಿ, ಪ್ರೀತಿಯು ತನ್ನಷ್ಟಕ್ಕೆ ತಾನೇ ನಿಮ್ಮಲ್ಲಿ ಪ್ರಕಟವಾಗುತ್ತದೆ. ಇದಕ್ಕಾಗಿ ಎರಡು ವಿಷಯಗಳು ಇರುವುದರ ಅಗತ್ಯವಿದೆ - ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಮ.
ಪ್ರಶ್ನೆ: ಗುರೂಜಿ, ಕೆಲವೊಮ್ಮೆ, ನಾನು ಬಾಗಿಲಿನ ಕರೆಗಂಟೆ ಕೇಳಿ ಬಾಗಿಲು ತೆರೆಯುವಾಗ ನೀವು ನನ್ನ ಬಾಗಿಲಿನ ಎದುರು ನಿಂತಿರುವುದನ್ನು ನೋಡಬೇಕೆಂದು ನಾನು ಬಯಸುತ್ತೇನೆ. ನನ್ನ ಫೋನ್ ಬಾರಿಸಿದಾಗ ಅದು ನೀವಾಗಿರಬೇಕೆಂದೂ, ನಾನು ನಿಮ್ಮ ಸ್ವರ ಕೇಳಬೇಕೆಂದೂ ಬಯಸುತ್ತೇನೆ. ಸಾಧನೆಯನ್ನು ನಿಯಮಿತವಾಗಿ ಮಾಡುವವರೊಬ್ಬರಿಗೆ, ಎಲ್ಲವೂ ಸಾಧ್ಯವಿದೆ. ಆದುದರಿಂದ ನನ್ನ ಆಸೆಯು ಈಡೇರುವುದಕ್ಕಾಗಿ ನಾನು ಕಾಯಬಹುದೇ?
ಶ್ರೀ ಶ್ರೀ ರವಿಶಂಕರ್: ಹೌದು, ಖಂಡಿತವಾಗಿ. ನಾನೊಂದು ವಿಷಯ ಹೇಳುತ್ತೇನೆ. ಒಂದು ದಿನ, ನಾನು ಆಶ್ರಮದಿಂದ ಹೊರಟೆ ಮತ್ತು ಒಬ್ಬನೇ ಒಬ್ಬ ವ್ಯಕ್ತಿಯು ನನ್ನ ಜೊತೆಯಲ್ಲಿದ್ದ. ನಾವು ಸುಮ್ಮನೇ ಸದ್ದಿಲ್ಲದೇ ಹೊರಟೆವು ಮತ್ತು ಯಾರಿಗೂ ನಾವೆಲ್ಲಿಗೆ ಹೋದೆವೆಂಬುದು ತಿಳಿಯಲಿಲ್ಲ.  ನಾವು ದೂರದ ಒಂದು ಹಳ್ಳಿಗೆ ಹೋದೆವು. ದಾರಿಯಲ್ಲಿ ಒಂದು ಚಿಕ್ಕ ಮನೆಯ ಹೊರಗೆ ನಾನು ಕಾರು ಚಾಲಕನೊಡನೆ ಕಾರನ್ನು ನಿಲ್ಲಿಸಲು ಹೇಳಿದೆ. ನಾನು ಮನೆಯ ಒಳಗಡೆ ಹೋದೆ ಮತ್ತು ಅಲ್ಲಿ ಒಳಗಡೆ ಒಬ್ಬ ವ್ಯಕ್ತಿಯು ಕುಳಿತಿದ್ದನು. ಅವನೊಬ್ಬ ಸರಳವಾದ ರೈತನಾಗಿದ್ದನು. ಅವನಿಗೆ ತನಗಾಗಿ ಕೇವಲ ಒಂದು ಚಿಕ್ಕ ಹೊಲವಿತ್ತು. ಅವನ ಬಳಿ ಒಂದು ಚಿಕ್ಕ ಟಿವಿಯಿತ್ತು. ಅದರಲ್ಲಿ ಅವನು ನನ್ನ ಕಾರ್ಯಕ್ರಮವನ್ನು ನೋಡಿದ್ದನು. ಆ ಕಾರ್ಯಕ್ರಮವನ್ನು ನೋಡಿದ ಬಳಿಕ, ಅವನಿಗೆ ನನ್ನನ್ನು ಭೇಟಿಯಾಗಲು ಅತೀವವಾದ ಬಯಕೆಯುಂಟಾಗಿತ್ತು. ಅವನು ಯೋಚಿಸುತ್ತಿದ್ದನು, "ನಾನು ಗುರೂಜಿಯನ್ನು ಭೇಟಿಯಾಗುವುದು ಹೇಗೆ? ಬೆಂಗಳೂರಿಗೆ ಪ್ರಯಾಣಿಸಲು ಬೇಕಾದಷ್ಟು ಹಣ ನನ್ನಲ್ಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನಾನು ಗುರೂಜಿಯನ್ನು ಭೇಟಿಯಾಗಬೇಕು" ಮತ್ತು ನಾನು ಹೋಗಿ ಅವನ ಮನೆಯ ಬಾಗಿಲಿನ ಮುಂದೆಯೇ ನಿಂತೆನು! ಅವನಿಗೆ ಎಷ್ಟೊಂದು ಆಘಾತವಾಯಿತೆಂದರೆ, ಅವನು ತನ್ನ ಮಂಡಿಗಳನ್ನೂರಿ ಅಳಲು ಪ್ರಾರಂಭಿಸಿದನು. ಅವನೊಬ್ಬ ಸರಳವಾದ ರೈತನಾಗಿದ್ದನು; ಅವನು ತನ್ನ ಹೊಲದಲ್ಲಿ ಕೇವಲ ಟೊಮೆಟೋಗಳನ್ನು ಮಾತ್ರ ಬೆಳೆದಿದ್ದನು. ಅವನ ಹೊಲವು ವಿಸ್ತೀರ್ಣದಲ್ಲಿ ಅರ್ಧ ಎಕರೆಗಿಂತಲೂ ಕಡಿಮೆಯಿತ್ತು. ಅವನಿಗೊಂದು ಪುಟ್ಟ ಕುಟುಂಬವಿತ್ತು.
ಅದೇ ರೀತಿಯಲ್ಲಿ, ಒಂದು ದಿನ ನಾನು ಈ ಒಂದು ಶಾಲೆಗೆ ಹೋಗಿ ಅಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರಿಗೂ ತರಗತಿಗಳನ್ನು ತೆಗೆದುಕೊಂಡೆನು. ಸುಮಾರು ಒಂದರಿಂದ ಎರಡು ಗಂಟೆಗಳ ವರೆಗೆ ನಾನು ಅವರೊಂದಿಗೆ ಮಾತನಾಡಿದೆನು. ಅವರೆಲ್ಲರೂ ಬಹಳ ಉತ್ತೇಜಿತರಾದರು ಮತ್ತು ಉತ್ಸಾಹದಿಂದ ತುಂಬಿಹೋದರು. ಅದೊಂದು ಹಳ್ಳಿಯಲ್ಲಿನ ಒಂದು ಚಿಕ್ಕ ಶಾಲೆಯಾಗಿತ್ತು ಮತ್ತು ಶಿಕ್ಷಕರೆಲ್ಲಾ ತುಂಬಾ ಗಂಭೀರವಾಗಿ ಕಾಣಿಸುತ್ತಿದ್ದರು. ಆದುದರಿಂದ ನಾನು ಅವರೊಡನೆ ಮಾತನಾಡಿದೆ, ಅವರಿಗೆ ಸ್ವಲ್ಪ ಪ್ರೋತ್ಸಾಹವನ್ನು ನೀಡಿದೆ ಮತ್ತು ಅವರೆಲ್ಲರೂ ನಗಲು ಪ್ರಾರಂಭಿಸಿದರು. ಜ್ಞಾನವು ಮಾಡುವುದು ಇದನ್ನೇ. ಜ್ಞಾನವನ್ನು ಕೇಳುವುದು ಮತ್ತು ಅದನ್ನು ಒಬ್ಬನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ಸಾಹ ಮತ್ತು ಆನಂದಗಳು ತಮ್ಮಷ್ಟಕ್ಕೆ ತಾವೇ ಬರುತ್ತವೆ.
ಆದುದರಿಂದ ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆಯಿದೆ!
ಒಂದು ಸಲ ಕಿಶೋರ್ ದಾ ಮತ್ತು ನಾನು ಅಸ್ಸಾಂನಿಂದ ಅರುಣಾಚಲ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದೆವು. ನಾವು ಅಸ್ಸಾಂನ ಒಂದು ಹಳ್ಳಿಯನ್ನು ದಾಟುತ್ತಿದ್ದಂತೆ, ನಾನು ಒಂದು ಮನೆಯ ಹೊರಗೆ ಕಾರನ್ನು ನಿಲ್ಲಿಸಲು ಹೇಳಿದೆ. ನಾನು ಕಿಶೋರ್ ದಾನೊಂದಿಗೆ ಮನೆಯೊಳಗೆ ಹೋದೆ ಮತ್ತು ಅವನೊಡನೆ ಆ ಮನೆಯಲ್ಲಿದ್ದ ಹೆಂಗಸಿಗೆ ೭೦೦ ರೂಪಾಯಿಗಳನ್ನು ಕೊಡಲು ಹೇಳಿದೆ. ಆ ಹೆಂಗಸಿನ ಗಂಡನಿಗೆ ಒಂದು ಶಸ್ತ್ರಚಿಕಿತ್ಸೆ ಆಗಬೇಕಾಗಿದ್ದಿತು. ಅದಕ್ಕೆ ಅವಳು ೨೧೦೦ ರೂಪಾಯಿಗಳನ್ನು ಭರಿಸಬೇಕಾಗಿದ್ದಿತು. ಆದರೆ ಅವಳಲ್ಲಿ ಕೇವಲ ೧೪೦೦ ರೂಪಾಯಿಗಳಿದ್ದವು. ಅವಳ ಬಳಿ ಶಸ್ತ್ರಚಿಕಿತ್ಸೆಗೆ ಬೇಕಾದಷ್ಟು ಹಣವಿರಲಿಲ್ಲ. ಆದುದರಿಂದ ಅವಳು ತನ್ನ ದೇವರ ಕೋಣೆಯಲ್ಲಿ, ದೇವರಲ್ಲಿ ಹಣವನ್ನು ಕೇಳುತ್ತಾ ಕುಳಿತಿದ್ದಳು. ಅವಳ ಮನೆಯಲ್ಲಿ, ಕಾಳಿ ಮಾತೆ ಮತ್ತು ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರಗಳನ್ನೊಳಗೊಂಡ ಒಂದು ಚಿಕ್ಕ ದೇವರ ಕೋಣೆಯಿತ್ತು. ಅವಳು ಅಲ್ಲಿ ಅವರ ಮುಂದೆ ಕುಳಿತುಕೊಂಡು, ದೇವರಲ್ಲಿ ಹಣಕ್ಕಾಗಿ ಪ್ರಾರ್ಥಿಸುತ್ತಿದ್ದಳು.  ಅವಳಿಗೆ ಬೇಕಾದ ಹಣವು ಅವಳಿಗೆ ಸಿಕ್ಕಿತು. ನಾನು ಕೂಡಾ ಅವಳನ್ನು ಭೇಟಿಯಾಗಿ ಅವಳೊಂದಿಗೆ ಸ್ವಲ್ಪ ಸಮಯ ಕಳೆದೆ.
ನಾನು ಹೇಳುವುದೇನೆಂದರೆ - ಈ ಸಂಪೂರ್ಣ ವಿಶ್ವವು ಒಂದು ಶಕ್ತಿಯಿಂದ ಸೃಷ್ಟಿಸಲ್ಪಟ್ಟಿದೆ ಮತ್ತು ನಡೆಸಲ್ಪಡುತ್ತಿದೆ. ಅದು ಒಂದು ತತ್ವದಿಂದ ಮಾಡಲ್ಪಟ್ಟಿದೆ. ನಾನು ಅದೇ ತತ್ವದಿಂದ ಮಾಡಲ್ಪಟ್ಟಿದ್ದೇನೆ ಮತ್ತು ನೀವು ಕೂಡಾ ಅದೇ ತತ್ವದಿಂದ ಮಾಡಲ್ಪಟ್ಟಿದ್ದೀರಿ. ಆದುದರಿಂದ, ನೀವು ಯಾರಿಗೇ ತಲೆಬಾಗಿದರೂ ಅಥವಾ ಪ್ರಾರ್ಥಿಸಿದರೂ, ಅದು ಅದೇ ಮೂಲವನ್ನು ತಲಪುತ್ತದೆ.
ಆ ಹೆಂಗಸಿಗೆ ನನ್ನ ಪರಿಚಯವಿರಲಿಲ್ಲ ಮತ್ತು ಈ ಘಟನೆಯು ಸುಮಾರು ೨೦ ವರ್ಷಗಳ ಮೊದಲು ನಡೆಯಿತು. ಆ ಸಮಯದಲ್ಲಿ ಕಾರಿನಲ್ಲಿ ನಾವು ಕೇವಲ ನಾಲ್ಕರಿಂದ ಐದು ಮಂದಿಯಿದ್ದೆವು. ನಾವು ಆ ಹೆಂಗಸನ್ನು ಭೇಟಿಯಾದಾಗ, ಆಕೆಯು ಬಹಳ ಶಕ್ತಿಯುತವಾದ ಹಾಗೂ ಆಳವಾದ ಭಕ್ತಿಯನ್ನು ಹೊಂದಿದ್ದಳು ಎಂಬುದು ನಮಗೆ ತಿಳಿಯಿತು. ಆದುದರಿಂದ ನಾವು ದೇವರನ್ನು ಮನಃಪೂರ್ವಕವಾಗಿ ಕರೆದರೆ, ನಾವು ಬಯಸಿದುದೆಲ್ಲವೂ ಆಗಲು ತೊಡಗುತ್ತದೆ. ಇದು ನಿಮ್ಮಲ್ಲಿ ಅನೇಕರ ಜೊತೆ ಆಗಿರಬಹುದು. ಆಗಿಲ್ಲವೇ? ಹಲವಾರು ಜನರ ಜೀವನಗಳಲ್ಲಿ ಹಲವಾರು ಪವಾಡಗಳು ನಡೆದಿವೆ. ನೋಡಿ! ಅದು ಇಲ್ಲಿರುವ ಎಲ್ಲರೊಂದಿಗೂ ಆಗಿದೆ (ಸಭಿಕರ ಕಡೆಗೆ ತೋರಿಸುತ್ತಾ). ಇದು ಆಶ್ಚರ್ಯಕರವಲ್ಲ. ಅದು ಆಗುತ್ತಲೇ ಇರುತ್ತದೆ; ಅದೊಂದು ದೊಡ್ಡ ಸಂಗತಿಯಲ್ಲ. ಅದು ಆಗದೇ ಇದ್ದರೆ, ಆಗ ಅದು ಏನೋ ಆಶ್ಚರ್ಯಕರವಾದುದು. ಕೆಲವೊಮ್ಮೆ ಒಂದು ಪವಾಡ ಸಂಭವಿಸದಿದ್ದರೆ, ಆಗ ಅದು ನಿಜವಾಗಿ ಅಚ್ಚರಿಯ ವಿಷಯ! ಹೌದು, ಕೆಲವು ಪವಾಡಗಳು ಕೂಡಲೇ ಆಗುತ್ತವೆ ಮತ್ತು ಕೆಲವು ಸಮಯ ತೆಗೆದುಕೊಳ್ಳುತ್ತವೆ.
ಪ್ರಶ್ನೆ: ಗುರೂಜಿ, ತ್ಯಾಗವು ಒಬ್ಬ ವ್ಯಕ್ತಿಗೆ ಮಹತ್ತಾದ ಶಕ್ತಿಯನ್ನು ತರುತ್ತದೆ ಎಂದು ನೀವು ಹೇಳಿದ್ದೀರಿ. ಆದರೆ ತ್ಯಾಗ ಮಾಡಲು ಸಾಧ್ಯವಾಗುವುದಕ್ಕೆ ಒಬ್ಬನಿಗೆ ಆಂತರಿಕ ಶಕ್ತಿಯ ಅಗತ್ಯವಿಲ್ಲವೇ?
ಶ್ರೀ ಶ್ರೀ ರವಿಶಂಕರ್: ಹೌದು, ತ್ಯಾಗವು ಮಹತ್ತಾದ ಶಕ್ತಿಯನ್ನು ತರುತ್ತದೆ ಮತ್ತು ತ್ಯಾಗಗಳನ್ನು ಮಾಡಲು ಸಾಧ್ಯವಾಗುವುದಕ್ಕೆ ಬೇಕಾದ ಆಂತರಿಕ ಶಕ್ತಿಯು ಜ್ಞಾನದಿಂದ ಬರುತ್ತದೆ. ಅಜ್ಞಾನವು, ನಿಮಗೆ ತ್ಯಾಗ ಮಾಡಲು ಬೇಕಾದ ಶಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಅದು ಜ್ಞಾನದ ಮೂಲಕ ಮಾತ್ರ ಬರಲು ಸಾಧ್ಯ. ಸುಮ್ಮನೇ ಇದನ್ನು ಗಮನಿಸಿ.
ನೀವು ಈ ಜ್ಞಾನದ ಮಾತನ್ನು ಸ್ವಲ್ಪ ಸಮಯದ ಹಿಂದೆ ಕೇಳಿಸಿಕೊಂಡಿರಿ ಮತ್ತು ಶಕ್ತಿ, ಧೈರ್ಯಗಳನ್ನು ಪಡೆದಿರಿ. ಅಲ್ಲವೇ? ಅದು ಕೂಡಲೇ ಆಗುತ್ತದೆ, ಬಹುಮಟ್ಟಿಗೆ ತಕ್ಷಣವಾಗಿ.
ಪ್ರಶ್ನೆ: ಗುರುದೇವ, ವೈ.ಎಲ್.ಟಿ.ಪಿ. ಕಾರ್ಯಕ್ರಮದ ಮೂಲಕ ನಮ್ಮ ಪ್ರದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಈ ಚಳವಳಿಯ ಗುರಿಯೇನು? ಒಬ್ಬ ಯುವಾಚಾರ್ಯ (ಯುವ ಮುಂದಾಳು) ನಾಗಿ ನಾನು ನನ್ನ ಕೆಲಸದಲ್ಲಿ ಯಾವ ಧ್ಯೇಯವನ್ನು ಅಥವಾ ಗುರಿಯನ್ನು ಇಟ್ಟುಕೊಳ್ಳಬೇಕು?
ಶ್ರೀ ಶ್ರೀ ರವಿಶಂಕರ್: ಶ್ರೇಯಸ್ಸು (ತನ್ನ ಸ್ವಂತ ಪ್ರಗತಿ) ಮತ್ತು ಪ್ರೇಯಸ್ಸು (ಸಮಾಜದಲ್ಲಿರುವ ಇತರರ ಪ್ರಗತಿ). ನಿಮ್ಮ ಸ್ವಂತ ಪ್ರಗತಿ ಮತ್ತು ಸಮಾಜದ ಪ್ರಗತಿ, ಎರಡೂ ಜೊತೆಯಲ್ಲಿ ಆಗಬೇಕು. ಅವುಗಳು ಒಂದರ ನಂತರ ಇನ್ನೊಂದರಂತೆ ಆಗಲು ಸಾಧ್ಯವಿಲ್ಲ. ಅವುಗಳು ಜೊತೆಯಲ್ಲೇ ಆಗಬೇಕು. ಅದು ವೈ.ಎಲ್.ಟಿ.ಪಿ. ಯ ಗುರಿ.
ನೀವು ನಿಮ್ಮ ಜೀವನದ ಒಂದು ವರ್ಷ ಅಥವಾ ಒಂದೂವರೆ ವರ್ಷವನ್ನು ದೇಶಕ್ಕಾಗಿ ಕೊಡಬೇಕು. ಆಗ, ನಿಮ್ಮ ಪ್ರಗತಿಯು ಇನ್ನೂ ಹೆಚ್ಚಾಗುತ್ತದೆ ಎಂಬುದನ್ನು ನೀವು ತಿಳಿಯುತ್ತೀರಿ! ನಾವು ಒಂದು ಕಟ್ಟಡವನ್ನು ಹೆಚ್ಚು ಎತ್ತರಕ್ಕೆ ಕಟ್ಟಲು ಬಯಸಿದಷ್ಟೂ, ಅದರ ಅಡಿಪಾಯ ಹಾಕಲು ನಾವು ಇನ್ನೂ ಹೆಚ್ಚು ಆಳಕ್ಕೆ ಅಗೆಯಬೇಕಾಗುತ್ತದೆ.  ಜೀವನದಲ್ಲಿ ನೀವು ಎತ್ತರದ ಸ್ಥಾನವನ್ನು ತಲಪಲು ಆಶಿಸಿದಷ್ಟೂ ಹೆಚ್ಚಿನ ತ್ಯಾಗಗಳನ್ನು ನೀವು ಮಾಡಬೇಕಾಗುತ್ತದೆ. ಸುಮ್ಮನೇ ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ನೀವು ಎತ್ತರಕ್ಕೇರಲು ಸಾಧ್ಯವಿಲ್ಲ. ನೀವು ಸ್ವಲ್ಪ ಕಷ್ಟ ಪಟ್ಟು ಕೆಲಸ ಮಾಡಬೇಕಾಗುತ್ತದೆ ಮತ್ತು ಆ ಕಠಿಣ ಪರಿಶ್ರಮವು ಖಂಡಿತವಾಗಿ ಫಲವನ್ನು ಕೊಡುತ್ತದೆ.