ಶನಿವಾರ, ಡಿಸೆಂಬರ್ 1, 2012

ಪ್ರಾರ್ಥನೆಯ ಮಹತ್ವ

೦೧ ಡಿಸೆಂಬರ್ ೨೦೧೨
ಬೆಂಗಳೂರು, ಭಾರತ

ಭಿಕರು: ಗುರೂಜೀ, ಇಂದು ಕನಕದಾಸ ಜಯಂತಿ.
ಶ್ರೀಶ್ರೀರವಿಶಂಕರ್: ಭಾರತದಲ್ಲಿ ಒಬ್ಬ ಶ್ರೇಷ್ಠ ಸಂತನಿದ್ದನು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಒಬ್ಬ ಕುರಿ ಕಾಯುವವನಿದ್ದನು. ಅವನೇ ಕನಕದಾಸ.
ಹನ್ನೆರಡನೇ ಶತಮಾನದಲ್ಲಿ ಭಾರತದಾದ್ಯಂತ, ಅಷ್ಟೇ ಏಕೆ ಇಡೀ ವಿಶ್ವದಲ್ಲೇ, ಭಕ್ತಿಯ ಅಲೆಯು ವ್ಯಾಪಿಸಿತು. ಫ್ರಾನ್ಸೆಸ್ಕೋ ದ ಅಸೀಸಿ (ಅಸೀಸಿಯ ಸಂತ ಫ್ರಾನ್ಸಿಸ್ ಎಂದೇ ಪ್ರಖ್ಯಾತನಾಗಿರುವ ಒಬ್ಬ ಇಟಲಿಯ ಸಂತ), ಇನ್ನಿತರ ಎಲ್ಲ ಸಂತರು ಇದೇ ಕಾಲಮಾನ- 12ನೇ ಮತ್ತು 15ನೇ ಶತಮಾನದ ಮಧ್ಯ ಭಾಗದಲ್ಲಿದ್ದರು.
ಶ್ರೀಕೃಷ್ಣನ ಪರಮಭಕ್ತ ಕನಕದಾಸ. ಕನ್ನಡದಲ್ಲಿ ಹಲವಾರು ಕೀರ್ತನೆಗಳನ್ನು ರಚಿಸಿದ್ದಾನೆ. ಕರ್ನಾಟಕದ ಜನತೆಗೆ ಈ ಕೃತಿಗಳು ಚಿರಪರಿಚಿತ.
ಕತೆ ಹೀಗಿದೆ, ಬಡವ ಮತ್ತು ಕೆಳಜಾತಿಯವನೆಂಬ ಕಾರಣದಿಂದ ಅವನಿಗೆ ದೇವಸ್ಥಾನದೊಳಗೆ ಪ್ರವೇಶವಿರಲಿಲ್ಲ. ಅದಕ್ಕಾಗಿ ಅವನು ಹೊರಗೆ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದನು, ಏಕೆಂದರೆ ಶ್ರೀಮಂತರು ಮತ್ತು ಮೇಲ್ದರ್ಜೆಯವರಿಗೆ ಮಾತ್ರ ಗುಡಿಯ ಒಳಗೆ ಪ್ರವೇಶವಿತ್ತು.
ಒಮ್ಮೆ ದೇವಸ್ಥಾನದ ಗೋಡೆಯು ಬಿದ್ದು ಹೋಯಿತು, ಕೃಷ್ಣನ ಮೂರ್ತಿಯು ತಿರುಗಿ ಕನಕದಾಸನಿಗೆ ದರ್ಶನವನ್ನು ನೀಡಿತು. ಇನ್ನೊಂದು ಬದಿಯಲ್ಲಿ ಪೂಜೆ ಮಾಡುತ್ತಿದ್ದ ಜನರು ಅದನ್ನು  ಬೆರಗಾದರು. ಇದು ಸರ್ವರಿಗೂ ವಿದಿತವಾಗಿರುವಂತಹ ವಿಷಯ.
ಇಂದಿಗೂ, ಉಡುಪಿಯ ಕೃಷ್ಣನ ಮಂದಿರದಲ್ಲಿ, ಮಂದಿರವನ್ನು ಪ್ರವೇಶಿಸಿದಾಗ ದೇವರ ವಿಗ್ರಹವು ಇನ್ನೊಂದು ಕಡೆಗೆ ತಿರುಗಿರುವುದನ್ನು ನೀವು ಕಾಣಬಹುದು. ಅಲ್ಲೊಂದು ಕಿಂಡಿಯಿದೆ, ಅಲ್ಲಿಂದಲೇ ನೀವು ದೇವರ ಮೂರ್ತಿಯನ್ನು ನೋಡಬಹುದು. ಇದನ್ನು ಕನಕನ ಕಿಂಡಿಯೆಂದು ಕರೆಯುತ್ತಾರೆ, ಯಾವ ಸ್ಥಳದಿಂದ ಆತನು ನಿಂತು ಪ್ರಾರ್ಥಿಸಿದನೋ ಆ ಸ್ಥಳ.
ಅಂದಿನಿಂದ ಜಾತಿ ಮತ್ತು ದರ್ಜೆಗಳ ಭೇದವನ್ನು ಕೈಬಿಡಲಾಯಿತೆಂದು ಹೇಳುತ್ತಾರೆ.
ಜಾತಿಮತ ಭೇದದ ವಿರುದ್ಧ ಅನೇಕ ಜನರು ಹೋರಾಡಿದ್ದಾರೆ. ಈತ ಅವರಲ್ಲೊಬ್ಬ, ಮತ್ತು ಎಲ್ಲರಿಂದಲೂ ಆದರಿಸಲ್ಪಟ್ಟಂತಹವನು.
ಇದೇ ಕತೆ.

ಪ್ರ: ಗುರುದೇವ, ಹಿಂದೂ ಧರ್ಮದಲ್ಲಿ ಹಲವಾರು ವಿವಿಧ ಸ್ತೋತ್ರಗಳಿವೆ. ಕೆಲವು ದೇವಿಗೆ ಸಂಬಂಧಿಸಿದೆ, ಕೆಲವು ವಿಷ್ಣುವಿಗೆ ಸಂಬಂಧಿಸಿದೆ. ಪ್ರತಿಯೊಂದು ಸ್ತೋತ್ರದಲ್ಲೂ ನಿತ್ಯ ಪಠಣೆಯಿಂದ ಲಾಭವಾಗುವುದೆಂದು ಹೇಳಲಾಗುತ್ತದೆ. ಇವೆಲ್ಲವೂ ಒಂದೇ ವಿಧವಾಗಿ ಹೇಳುತ್ತದೆ, ಯಾವುದನ್ನು ಅನುಸರಿಸಬೇಕೆಂದು ನಾವು ಹೇಗೆ ತಿಳಿಯುವುದು?
ಶ್ರೀಶ್ರೀರವಿಶಂಕರ್: ನೋಡಿ, ಮೊದಲಿಗೆ ದೇವರು ಒಬ್ಬನೇ ಎಂದು ತಿಳಿಯಬೇಕು.  ಯಾವ ಹೆಸರಿನಿಂದ ಕರೆದರೂ, ಅವನೊಬ್ಬನೇ ಇರುವುದು. ಅದು ಒಂದು ವಿಷಯ.
ಎರಡನೆಯದಾಗಿ, ತನ್ನ ಸ್ತುತಿಯನ್ನು ಕೇಳಿ ದೇವರು ಪ್ರಸನ್ನನಾಗುವನೆಂಬುದು ಸುಳ್ಳು.
ನಿಮ್ಮ ಮನೆಯ ಕಿಟಕಿಗಳನ್ನು ತೆರೆದಾಗ ಸೂರ್ಯನ ಬೆಳಕು ಒಳಗೆ ಬರುವುದಲ್ಲವೇ? ಕಿಟಕಿಗಳನ್ನು ಮುಚ್ಚಿದ್ದರೆ, ಸೂರ್ಯನು ನಿಮ್ಮ ಮೇಲೆ ಸಿಟ್ಟಾಗುವನೆ? ಕಿಟಕಿಗಳನ್ನು ಮುಚ್ಚಿದ ಕೂಡಲೇ ಸೂರ್ಯನು ಬೆಳಕು ನೀಡುವುದನ್ನು ನಿಲ್ಲಿಸುವನೇ? ಇಲ್ಲ!
ನಾವು ಪ್ರಾರ್ಥನೆಯನ್ನು ಸಲ್ಲಿಸುವುದು ನಮ್ಮ ಸಂತೋಷಕ್ಕೋಸ್ಕರ. ನಮ್ಮ ಉದ್ಧಾರಕ್ಕಾಗಿ ನಾವು ಪ್ರಾರ್ಥಿಸುವುದು. ದೇವರನ್ನು ಪ್ರಸನ್ನಗೊಳಿಸಲು ಸ್ತುತಿಸುವುದಿಲ್ಲ.
ದೇವರು ಪ್ರಸನ್ನನಾಗುವೆನೆಂದು ಉಪವಾಸ ಮಾಡಿದರೆ ಅದು ಮೂರ್ಖತನ. ಅದು ಕೇವಲ ಮೌಢ್ಯವಷ್ಟೇ.
ದೇವರನ್ನು ಪೂಜಿಸಿದಾಗ, ಪ್ರಾರ್ಥಿಸಿದಾಗ ವಿಶೇಷವಾದುದನ್ನು ನೀಡುವನೆಂದು ತಿಳಿಯಬೇಡಿ. ಹೌದು, ನೀವು ಪ್ರಾರ್ಥಿಸಿದರೆ, ಖಂಡಿತವಾಗಿಯೂ ಅದರ ಫಲವನ್ನು ಪಡೆಯುವಿರಿ ಏಕೆಂದರೆ ಅದು ಪ್ರಕೃತಿಯ ನಿಯಮ. ನೀವು ಕಿಟಕಿಗಳನ್ನು ತೆರೆದಾಗ ಸೂರ್ಯನ ಬೆಳಕು ನಿಶ್ಚಿತವಾಗಿ ಒಳಗೆ ಬರುವ ಹಾಗೆ, ಮತ್ತು ಅದರಿಂದ ನಿಮಗೆ ಲಾಭವಾಗುವುದು ಖಂಡಿತ.
ನೋಡಿ, ದೇವರು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ. ಹಾಗೆಯೇ ನಾವೂ ದೇವರನ್ನು ಪ್ರೀತಿಸಲು ಕಲಿಯುವುದೇ ನಿಜವಾದ ಭಕ್ತಿ ಮತ್ತು ಇದೇ ಪ್ರಾರ್ಥನೆಯ ಸಾರ.
ಪೂಜೆ ಎಂದರೆ ಯಾವುದು ಪರಿಪೂರ್ಣತೆಯಿಂದ ಮತ್ತು ಸಂಪೂರ್ಣವಾದುದರಿಂದ ಜನ್ಯವಾಗಿರುವುದೋ ಅದು. ನಮ್ಮ ಹೃದಯವು ಅತ್ಯಂತ ಧನ್ಯತೆ ಮತ್ತು ಆನಂದದಿಂದ ತುಂಬಿ ತುಳುಕಾಡುತ್ತಿರುವುದನ್ನು ವ್ಯಕ್ತಪಡಿಸಲು ಪೂಜೆಯನ್ನು ಮಾಡುತ್ತೇವೆ. ‘ಪ್ರಿಯ ದೇವ, ನಾನು ಅತ್ಯಂತ ಕೃತಜ್ಞ ಮತ್ತು ಅನುಗ್ರಹೀತನು. ನೀನೆಷ್ಟು ಸಮೃದ್ಧಿಯನ್ನು ದಯಪಾಲಿಸಿರುವೆ’ – ಇದನ್ನು ಪ್ರಕಟಗೊಳಿಸಲು ನಾವು ಪೂಜೆಯನ್ನು ಮಾಡುವುದು. ಇಂತಹ ಭಾವನೆಯು ನಮ್ಮಲ್ಲಿ ಉದಯಿಸಿದಾಗ ಕೆಲವು ಕಾರ್ಯಗಳು ಅನಿವಾರ್ಯವಾಗಿ ಒಂದಕ್ಕೊಂದು ಜೊತೆಗೂಡುತ್ತದೆ. ಯಾವುದೇ ಕ್ರಿಯೆ ಅಥವಾ ಕರ್ಮಕಾಂಡ (ಪೂಜಾ ಕ್ರಮ ಅಥವಾ ವಿಧಿ) ಇಲ್ಲದೇ ಗಾಢವಾದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ.
ಉದಾಹರಣೆಗೆ, ನಿಮ್ಮ ಆಪ್ತ ಗೆಳೆಯನನ್ನು ಭೇಟಿ ಮಾಡಿದಾಗ ನೀವು ಕೈಕುಲುಕಿ, ಬೆನ್ನು ತಟ್ಟಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತೀರ. ಇದು ಪಂಜಾಬಿನಲ್ಲಿ ಸರ್ವೇ ಸಾಮಾನ್ಯ. ಕೆಲವೊಮ್ಮೆ ಜೋರಾಗಿ ಗುದ್ದು ಬಿದ್ದು ನೀವು ನೋವಿನಿಂದ ಅಳುವಂತಾಗಬಹುದು! (ನಗೆ). ಹೀಗೆ, ಪರಸ್ಪರ ಪ್ರೀತಿಯನ್ನು ತೋರಿಸಲು ಯಾವುದಾದರೊಂದು ಕ್ರಿಯೆಯನ್ನು ಮಾಡುತ್ತೇವೆ. ಅಂತೆಯೇ, ಭಕ್ತನೊಬ್ಬ ದೇವರ ಭಕ್ತಿಯಲ್ಲಿ ಗಾಢವಾಗಿ ಮಿಂದು ತನ್ನ ಭಕ್ತಿಯನ್ನು ಅಭಿವ್ಯಕ್ತಪಡಿಸಲು ಕ್ರಿಯೆಯನ್ನು ಮಾಡುತ್ತಾನೆ. ಆದ್ದರಿಂದಲೇ ನಮ್ಮ ಪೂರ್ವಿಕರು ಪೂಜೆ ಮಾಡಲು ಅನೇಕ ವಿಧಿ-ವಿಧಾನಗಳನ್ನು ನಿಯಮಿಸಿರುವುದು.
ನೀವು ಪೂಜೆಯಲ್ಲಿ ದೇವರು ನಿಮಗೇನನ್ನು ನೀಡಿರುವನೋ ಅದನ್ನೇ ಅನುಕರಣೆ ಮಾಡುತ್ತಾ, ಹಿಂದಿರುಗಿಸುತ್ತೀರ. ದೇವರು ನಿಮಗೆ ಹೂಗಳನ್ನು ನೀಡಿದ್ದಾನೆ, ಅದಕ್ಕಾಗಿ ಹೂಗಳಂತೆ ನಮ್ಮ ಹೃದಯವು ಯಥೇಚ್ಛವಾಗಿ ಅವನೆಡೆಗೆ ವಿಕಸಿಸಲಿ ಎಂದು ಪ್ರಾರ್ಥಿಸುತ್ತಾ, ಅವುಗಳನ್ನು ದೇವರಿಗೆ ಪುನಃ ಅರ್ಪಿಸುತ್ತೀರ. ದೇವರು ನಮಗೆ ಜಲವನ್ನು ಕೊಟ್ಟಿದ್ದಾನೆ, ಆದ್ದರಿಂದ ನಾವು ಪೂಜೆಯಲ್ಲಿ ಅವನಿಗೆ ಜಲವನ್ನು ಅರ್ಪಿಸಿ, ಜಲದಂತೆ ನಾವೂ ಕೂಡ ನಮ್ರತೆಯನ್ನು ಹೊಂದಿದ್ದು ಸರ್ವರಿಗೂ ತಂಪನ್ನು ನೀಡಬೇಕೆಂದು ಭಾವಿಸುತ್ತೇವೆ. ಜಲದಂತೆ, ಜೀವನದಲ್ಲಿ ನಾವೂ ಸಹ ಆಧಾರವನ್ನು ಹೊಂದಿರಬೇಕು. (ಹೇಗೆ ಜಲವು ನಮ್ಮ ಬದುಕಿಗೆ ಮೂಲ ಧಾತು ಹಾಗೂ ಆಧಾರವಾಗಿರುವಂತೆ). ಹೀಗೆ ನಮ್ಮ ಜೀವನವೂ ರೂಪಗೊಳ್ಳಲೆಂದು ಪ್ರಾರ್ಥಿಸುತ್ತೇವೆ.
ದೇವರಿಗೆ ಅಕ್ಷತೆಯನ್ನು ಅರ್ಪಿಸುತ್ತೇವೆ ಏಕೆಂದರೆ ಅದು ನಿರಂತರ ಸಮೃದ್ಧಿಯ ಸಂಕೇತ. ಅಕ್ಕಿಯ ಕಾಳುಗಳು ಭಿನ್ನವಾಗುವುದಿಲ್ಲ. ದ್ರವ್ಯ ಮತ್ತು ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಪಡಿಸಲು ಸಾಧ್ಯವಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಅದರಂತೆ ಅಕ್ಷತೆಯೂ ಸಹ ಏಕೆಂದರೆ ಅದು ಎಂದೂ ವಿನಾಶ ಹೊಂದಲು ಅಥವಾ ಭಿನ್ನವಾಗಲು ಸಾಧ್ಯವಿಲ್ಲ. ನಾವು ಅನ್ನವನ್ನು ಸೇವಿಸಿದಾಗ ಶಕ್ತಿ ಮತ್ತು ಪೌಷ್ಠಿಕಾಂಶ ದೊರೆಯುತ್ತದೆ ಮತ್ತು ಅದು ನಮ್ಮ ದೇಹದಲ್ಲಿ ಹೀರಲ್ಪಡುತ್ತದೆ. ನಮ್ಮ ಸಾವಿನ ನಂತರ, ದೇಹವನ್ನು ದಹಿಸಿದಾಗ ಭೂಮಿಗೆ ಮರಳುತ್ತದೆ, ಅದೇ ಅಕ್ಕಿಯ ಕಾಳುಗಳು ಮತ್ತೆ ಭೂಮಿಯಲ್ಲಿ ಬೆಳೆದು ಆಹಾರವಾಗಿ ಸೇವಿಸಲು ಉತ್ಪನ್ನವಾಗುತ್ತದೆ. ದೇಹವು ಭಸ್ಮವಾದಾಗ, ಭಸ್ಮವು ಹಲವಾರು ಮೀನುಗಳಿಗೆ ಆಹಾರವಾಗುತ್ತದೆ ಮತ್ತು ಆ ಮೀನುಗಳು ಮುನುಷ್ಯರಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯು ಮತ್ತೆ ಮತ್ತೆ ಪ್ರಕೃತಿಯಲ್ಲಿ ನಡೆಯುತ್ತಿರುತ್ತದೆ. ಭೂಮಿಯಲ್ಲಿ ಶರೀರವನ್ನು ದಹಿಸಿದಾಗ, ಶರೀರವು ಪಂಚಭೂತಗಳಾಗಿ ವಿಲೀನವಾಗುವುದು.
ಹೀಗೆಯೇ ಎಲ್ಲೆಡೆ ಸುಗಂಧವು ವ್ಯಾಪಿಸಲೆಂಬ ಭಾವನೆಯಿಂದ ಚಂದನವನ್ನು ಅರ್ಪಿಸುತ್ತೇವೆ. ಇಂದ್ರಿಯ ಅನುಭವಗಳು ಮತ್ತು ಸುಖವನ್ನು ನೀಡುವ ನಮ್ಮ ಎಲ್ಲಾ ಪಂಚೇಂದ್ರಿಯಗಳು – ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳಿಗೆ ನಿರ್ದಿಷ್ಟವಾದ ಇಂದ್ರಿಯ ಕಾರ್ಯಗಳಿವೆ. ಅವು ಕೆಲವು ವಸ್ತುಗಳೊಂದಿಗೆ ಜೊತೆಗೂಡಿದೆ. ಆದ್ದರಿಂದ ಈ ಪಂಚೇಂದ್ರಿಯಗಳಿಗೆ ಎಲ್ಲಾ ಸುಖ-ಸಂತೋಷವನ್ನು ನೀಡುವ ದ್ರವ್ಯಗಳನ್ನು ಹಾಗೂ ವಸ್ತುಗಳನ್ನೂ ಸಹ ಪೂಜೆಯ ಸಮಯದಲ್ಲಿ ಅರ್ಪಿಸುತ್ತೇವೆ. ಪೂಜೆಯ ವೇಳೆಯಲ್ಲಿ ಘಂಟೆಯನ್ನು ಹೊಡೆಯುತ್ತೇವೆ ಏಕೆಂದರೆ ಆ ಶಬ್ದದಿಂದ ನಮ್ಮ ಮನಸ್ಸು ಎಲ್ಲಾ ಯೋಚನೆಗಳಿಂದ ಮುಕ್ತವಾಗಿ, ಈ ಕ್ಷಣದಲ್ಲಿ ಸ್ಥಾಪಿತವಾಗುತ್ತದೆ. ಪೂಜೆಯ ವೇಳೆಯಲ್ಲಿ ಆ ಒಂದು ಶಬ್ದದಿಂದ, ಮನಸ್ಸು ಆ ನಾದದೊಂದಿಗೆ ಸಾಮರಸ್ಯ ಹೊಂದಿರುತ್ತದೆ. ಆದ್ದರಿಂದ ಪೂಜೆಯ ಸಮಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಏಕಮುಖವಾಗಿ ಹರಿಯಲು, ಅನೇಕ ಡೋಲುಗಳು, ಕಹಳೆಗಳು ಮತ್ತು ನಗಾರಿಗಳನ್ನೂ ಕೂಡ ನುಡಿಸುತ್ತೇವೆ. ಇಂತಹ ಭಾರಿ ಶಬ್ದದಿಂದ ಮನಸ್ಸು ಈ ಕ್ಷಣಕ್ಕೆ ಬರುತ್ತದೆ.
ಕರ್ಪೂರವನ್ನು ಉರಿಸಿ ದೇವರಿಗೆ ಆರತಿಯನ್ನು ಬೆಳಗುತ್ತೇವೆ. ಹೇಗೆ ಸೂರ್ಯ ಮತ್ತು ಚಂದ್ರರು ಭೂಮಿಯ ಸುತ್ತ ತಿರುಗುತ್ತಿರುವಂತೆ ದೇವರು ಮಾಡಿರುವನೋ, ಅದನ್ನು ಅನುಸರಿಸಿ, ಸಂತೋಷಪೂರಕವಾಗಿ, ನೀವೂ ಕೂಡ ಭಗವಂತನ ಮುಂದೆ ಚಿಕ್ಕ ಕರ್ಪೂರದ ಆರತಿಯನ್ನು ಬೆಳಗುತ್ತೀರ. ಇದೂ ಕೂಡ ದೇವರಿಂದ ನಮ್ಮ ಬಾಳಜ್ಯೋತಿಯು ವಿಮುಖವಾಗದಿರಲಿ, ಕೇಂದ್ರೀಕೃತವಾಗಲಿ ಹಾಗೂ ದೇವರ ಸುತ್ತ ತಿರುಗಲಿ ಎಂಬ ಪ್ರಾರ್ಥನೆಯ ಅಭಿವ್ಯಕ್ತಿಗಾಗಿ ರೂಢಿಸಿಕೊಂಡಿರುವುದು. ಇಂತಹ ಗಾಢವಾದ ಭಾವದೊಂದಿಗೆ ಆರತಿಯನ್ನು ಬೆಳಗುತ್ತೀರ.  ಇಡೀ ಭಾರತದಲ್ಲಿ ಎಲ್ಲರೂ ಆರತಿಯನ್ನು ಬೆಳಗುತ್ತಾರೆ ಆದರೆ ಅದರ ಹಿಂದಿರುವ ಗಾಢವಾದ ಅರ್ಥವನ್ನು ತಿಳಿದಿಲ್ಲ.
ಆರತಿಯೆಂದರೆ ಉನ್ನತವಾದ ಮತ್ತು ಶ್ರೇಷ್ಠವಾದ ಆನಂದ. ಅದು ಆನಂದದ ಉತ್ಕೃಷ್ಠ ಮೂಲ ದೈವವೆಂಬ ಅಂಶವನ್ನು ಸೂಚಿಸುತ್ತದೆ. ಹೀಗೆ ದೇವರಲ್ಲಿ ಅತ್ಯಂತ ಪ್ರೇಮ ಮತ್ತು ಭಕ್ತಿಯಿಂದ ನಮ್ಮ ಹೃದಯವು ತುಂಬಿ ತುಳುಕಾಡುತ್ತಿದ್ದು, ಶರೀರದ ಕಣಕಣವೂ ಅದರಲ್ಲಿ ಮೀಯುತ್ತಿದ್ದರೆ, ಅದು ನಿಜವಾದ ಆರತಿಯಾಗುವುದು. ಯಾವುದು ಪೂರ್ಣ ತೃಪ್ತಿಯನ್ನು ಕೊಡುವುದೋ, ಅದು ಆರತಿ. ಅದರಲ್ಲಿ ಎರಡು ಭಾಗಗಳಿವೆ: ‘ಆ’ ಮತ್ತು ‘ರತಿ’. ‘ರತಿ’ ಎಂದರೆ ಉಲ್ಲಾಸ, ಆನಂದ ಮತ್ತು ಭಾವೋತ್ಕರ್ಷತೆ. ನಾವು ಸಂಪೂರ್ಣ ಭಕ್ತಿ ಮತ್ತು ಆನಂದದಲ್ಲಿರುವಾಗ ಅದನ್ನು ಆರತಿ ಎನ್ನುವರು. ಆದ್ದರಿಂದ ಭಕ್ತಿಯ ಪರಮಾನಂದದಲ್ಲಿ ನಮ್ಮ ಜೀವನವು ತುಂಬಿರಲಿ, ದೃಷ್ಟಿ ಹರಿಸಿದೆಲ್ಲೆಡೆಯೂ ದೇವರನ್ನು ಕಾಣುವಂತಾಗಲಿ ಎಂಬ ಪ್ರಾರ್ಥನೆಯೊಂದಿಗೆ ಆರತಿಯನ್ನು ಬೆಳಗುತ್ತೇವೆ. ಇದಕ್ಕೆ ಪೂಜೆ ಎನ್ನುವುದು. ದೇವರನ್ನು ಹೊಗಳಲು ಅಥವಾ ಪ್ರಸನ್ನಗೊಳಿಸಲು ಪೂಜೆಯನ್ನು ಮಾಡುವುದಿಲ್ಲ.
ಆದರೆ ನಮ್ಮ ದೇಶದಲ್ಲಿ ದೇವರ ಮೂರ್ತಿಗೆ ಸಿಹಿಯನ್ನು ತಿನ್ನಿಸಿ ಅದರ ಮುಖವನ್ನೇ ಹಾಳು ಮಾಡಿದ್ದಾರೆ. ಆಮೇಲೆ ನಿಮಗೆ ಅದರ ಕಣ್ಣು, ಮೂಗು, ಬಾಯಿಗಳು ಕಾಣಿಸುವುದಿಲ್ಲ. ಅಷ್ಟೇ ಅಲ್ಲದೇ, ಭಯ ಮತ್ತು ಅಪರಾಧಪ್ರಜ್ಞೆಯಿಂದ ದೇವರ ಪ್ರತಿಯೊಂದು ಚಿತ್ರ ಅಥವಾ ವಿಗ್ರಹಕ್ಕೆ ಹೂಗಳನ್ನು ಅರ್ಪಿಸುತ್ತಾರೆ ಹೇಗೆಂದರೆ ಹನುಮಂತನಿಗೆ ಹೂಗಳನ್ನು ಅರ್ಪಿಸಿ ಶಿವನಿಗೆ ಅರ್ಪಿಸದಿದ್ದರೆ, ಶಿವನಿಗೆ ಕೋಪ ಬಂದು ದಂಡಿಸುವನು ಎಂದು. ಮನದಲ್ಲಿ ಎಲ್ಲ ಬಗೆಯ ಮೂಢನಂಬಿಕೆಗಳು ಏಳುವವು. ಅದಕ್ಕಾಗಿಯೇ ಹೇಳುವುದು ಯಾರಾದರೂ ಒಬ್ಬ ಇಷ್ಟದೇವತೆಯನ್ನು ಹೊಂದಿರಬೇಕೆಂದು. ಉಳಿದೆಲ್ಲ ದೇವರುಗಳು ಒಂದೇ ದೈವದ ಹಲವು ಸ್ವರೂಪಗಳು. ಸರ್ವರಲ್ಲೂ ಒಂದೇ ದೈವವನ್ನು ಕಾಣುವುದು ಮತ್ತು ಸರ್ವವೂ ಒಂದೇ ದೈವದ ಭಾಗವೆಂದು ಅರಿಯುವುದೇ ಮೂಲ ಉದ್ದೇಶ.

ಪ್ರ: ಗುರೂಜೀ, ತಪಸ್ವಿನಿಯರ ಬಗ್ಗೆ ಮಾತನಾಡುವಿರಾ?
ಶ್ರೀಶ್ರೀರವಿಶಂಕರ್: ಹೌದು, ಕೆಲವು ತಪಸ್ವಿನಿಯರಿದ್ದಾರೆ ಮತ್ತು ಇನ್ನೂ ಅನೇಕರಿಗೆ ಸ್ಥಳವಿದೆ. ಕೆಲವೇ ಕೆಲವು ತಪಸ್ವಿನಿ/ಯೋಗಿನಿಯರಿರುವುದು, ಬಹಳ ಇಲ್ಲ.
ಅಂತಹ ಶ್ರೇಷ್ಠ ಭಕ್ತರಲ್ಲೊಬ್ಬಳು ಮೀರಾ.
ತಮಿಳುನಾಡಿನಲ್ಲಿ ಅವೈಯ್ಯಾರ್ ಎಂಬ ಮಹಿಳೆಯೊಬ್ಬಳನ್ನು ತಮಿಳು ಸಾಹಿತ್ಯದ ಜನನಿಯೆಂದು ಸ್ಮರಿಸಲ್ಪಡುತ್ತಾಳೆ. ತಮಿಳನ್ನು ಅಭ್ಯಾಸ ಮಾಡುವವರಿಗೆ ಅವೈಯ್ಯಾರ್ ಅನ್ನು ಬಿಡಲು ಆಗದಲ್ಲವೇ? ಇಲ್ಲಿ ಎಷ್ಟು ಮಂದಿ ತಮಿಳಿನವರಿದ್ದಾರೆ? (ಸಭಿಕರಲ್ಲಿ ಕೆಲವರು ಕೈ ಎತ್ತುತ್ತಾರೆ)
(ಸಭಿಕರಲ್ಲೊಬ್ಬರು ಅವೈಯ್ಯಾರ್‍ನ ಕೃತಿ ‘ಅತಿಚುಡಿ’ ಯನ್ನು ಉಲ್ಲೇಖಿಸುತ್ತಾರೆ)
ಅತಿಚುಡಿ, ಇವು ಅಕ್ಷರಮಾಲೆಗಳಲ್ಲವೇ?
 ಹೇಗೆ ನಾವು ಎ ಫಾರ್ ಆಪಲ್, ಬಿ ಫಾರ್ ಬಾಲ್, ಸಿ ಫಾರ್ ಕ್ಯಾಟ್ ಎನ್ನುತ್ತೇವೆ; ಹಾಗೆಯೇ ಪ್ರತಿಯೊಂದು ಅಕ್ಷರಕ್ಕೂ ತರ್ಕವನ್ನಳವಡಿಸಿರುವಳು. ಹೀಗೆ ಬಾಲ್ಯದಾರಭ್ಯ ಪ್ರತಿಯೊಂದು ಅಕ್ಷರವನ್ನು ಮೌಲ್ಯಗಳೊಂದಿಗೆ ಕಲಿಸಲಾಗುತ್ತದೆ, ಇದನ್ನೇ ಆ ಬುದ್ಧಿವಂತ ಮಾತೆಯು ಮಾಡಿರುವುದು.
ಅವಳ ಕತೆಯು ಬಹಳ ರೋಚಕವಾಗಿದೆ. ಅವಳು ತುಂಬಾ ಸುಂದರವಾಗಿದ್ದಂತಹ ಯುವತಿ. ಅವಳ ಮಾತಾ-ಪಿತೃಗಳು ಅವಳು ಮದುವೆಯಾಗಬೇಕೆಂದು ಬಯಸಿದರು, ಅದರೆ ಅವಳಿಗೆ ಇಷ್ಟವಿರಲಿಲ್ಲ.
ರಾಜನು ಅವಳನ್ನು ನೋಡಿ ಬಯಸಿದನು. ಆಗಿನ ಕಾಲದಲ್ಲಿ ರಾಜನಿಗೆ ಉತ್ತಮವಾದುದನ್ನು ಪಡೆಯುವ ಅಧಿಕಾರವಿತ್ತು. ಅವಳು ಶ್ರೇಷ್ಠಳು. ಆದ್ದರಿಂದ ರಾಜನು ಅವಳನ್ನು ಮದುವೆಯಾಗಲು ಬಯಸಿದನು. ರಾಜನು ಕೇಳಿದಾಗ ಯಾರೂ ‘ಇಲ್ಲ’ ಎನ್ನಲಾಗುತ್ತಿರಲಿಲ್ಲ.
ಕತೆಯು ಹೀಗೆ ಮುಂದುವರೆಯುವುದು, ಅವಳು ಗಣೇಶನನ್ನು ಪ್ರಾರ್ಥಿಸಿದಳು. ಅವಳು ಗಣೇಶನ ಭಕ್ತೆ.
ಭಾರತದಲ್ಲಿ ನೀವು ವಿಶಿಷ್ಠವಾದ ದೇವರನ್ನು ಹೊಂದಿರಬಹುದು. ದೇವರು ಒಬ್ಬನೇ ಆದರೂ, ಇಷ್ಟದೇವತೆ ಎನ್ನುವುದೊಂದಿದೆ. ಪ್ರತಿಯೊಬ್ಬರೂ ತಮಗೆ ಇಷ್ಟವಾದ ದೇವರನ್ನು ಹೊಂದಿರಬಹುದು.
ನೋಡಿ, ಒಬ್ಬ ಅಲ್ಲಾಹ್, ಒಬ್ಬ ಪರಮಾತ್ಮನಿದ್ದಾನೆ ಆದರೆ ನಿಮಗೋಸ್ಕರ ಆ ದೇವರಿಗೆ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗ ಆ ನಾಮದೊಂದಿಗೆ ಆಪ್ತತೆಯ ಅನುಭವವಿರುವುದು.
ಅವಳ ಇಷ್ಟದೇವತೆಯಾದ ಗಣೇಶನನ್ನು ಪ್ರಾರ್ಥಿಸಿದಳು, ‘ನಾನು ವೃದ್ಧೆಯಾಗಬೇಕು’. ಆ ಕೂಡಲೇ ಅವಳ ಕೂದಲು ಬೆಳ್ಳಗಾದವು, ವೃದ್ಧೆಯಂತೆ ಕಂಡಳು. ರಾಜನು ಬಂದು ಅವಳನ್ನು ನೋಡಿದಾಗ, ಅವಳನ್ನು ವರಿಸಲಿಲ್ಲ. ಅವಳನ್ನು ಅವಳ ಪಾಡಿಗೆ ಬಿಡಲಾಯಿತು. ಇದು ಕತೆ.

ಪ್ರ: ಗುರೂಜೀ, ಸಮರ್ಪಣೆಯ ಬಗ್ಗೆ ತಿಳಿಸಿ. ಸಮರ್ಪಣೆಯಿಂದ ನಾನು ಸ್ವಲ್ಪ ಅಜ್ಞಾನಿಯಾಗುತ್ತಿರುವಂತೆ ತೋರುತ್ತದೆ. ಗತಕಾಲವನ್ನು ಸ್ಮರಿಸಿಕೊಂಡಾಗ, ನಾನು ಯಾವುದಾದರೊಂದು ನಿರ್ಣಯ ಅಥವಾ ಕ್ರಿಯೆಯನ್ನು ಮಾಡುವ ಅಗತ್ಯವಿದ್ದಾಗ, ಎಲ್ಲವನ್ನೂ ಗುರೂಜೀ ಮಾಡುವರೆಂದು ಯೋಚಿಸುತ್ತಿದ್ದೆ. ಆದ್ದರಿಂದ ಆ ಸಂದರ್ಭದಲ್ಲಿ ನಾನೇನು ಮಾಡಬೇಕಾಗಿತ್ತೋ ಅದನ್ನು ಮಾಡುವ ಬದಲು ಯಾವುದು ನಡೆಯಬೇಕಾಗಿರುವುದೋ ಅದು ನಡೆಯುವುದೆಂದು ನಂಬಿರುತ್ತಿದ್ದೆ.
ಆದ್ದರಿಂದ ಅಜ್ಞಾನಿಯಾಗದೇ ಯಾವ ರೀತಿಯ ಸಮರ್ಪಣೆಯನ್ನು ಮಾಡಬೇಕೆಂದು ದಯವಿಟ್ಟು ತಿಳಿಸಿ.
ಶ್ರೀಶ್ರೀರವಿಶಂಕರ್: ಸಂಕಲ್ಪ ಮತ್ತು ಸಮರ್ಪಣೆ ಎರಡೂ ಒಟ್ಟಿಗೆ ಸಾಗುತ್ತವೆ. ಒಮ್ಮೆ ನೀವು ನಿಮ್ಮ ಶೇಕಡ 100 ರಷ್ಟನ್ನು ನೀಡಿರುವರೋ ಇನ್ನೇನನ್ನೂ ಮಾಡಲು ಸಾಧ್ಯವಿಲ್ಲ, ಆಗ ಶರಣಾಗತರಾಗಬೇಕು.
ನಿಮ್ಮ ಕರ್ಮಗಳನ್ನು ನಿರ್ವಹಿಸಿದ ಮೇಲೆ, ಅದರ ಫಲಾಪೇಕ್ಷೆಯನ್ನು ಸಮರ್ಪಿಸಬೇಕು. ಆದರೆ ಕರ್ಮವನ್ನು ಮಾಡದೇ ಯಾವುದನ್ನೂ ಸಾಧಿಸಲಾಗದು. ನಾವು ಮಾಡಬೇಕಾಗಿರುವ ಕರ್ಮವನ್ನು 100% ರಷ್ಟು ನಿರ್ವಹಿಸಿದ ನಂತರ ಫಲಾಪೇಕ್ಷೆಯನ್ನು ಭಗವಂತನಿಗೆ ಸಮರ್ಪಿಸಬೇಕು. ಯಾವುದು ನಮಗೆ ಉತ್ಕೃಷ್ಟವಾದುದೋ ಅದೇ ನಡೆಯುವುದೆಂಬ ಭಾವದಿಂದ ಸಮರ್ಪಿಸಬೇಕು. ನಮ್ಮೆಲ್ಲ ಪರಿಶ್ರಮವನ್ನು ಹಾಕಿ ನಂತರ ಫಲಾಪೇಕ್ಷೆಯನ್ನು ಭಗವಂತನಿಗೆ ಸಮರ್ಪಿಸಬೇಕು. ನಾವು ಹೇಳುತ್ತಿರುವುದು ತಿಳಿಯಿತೇ?
ಸುಮ್ಮನೆ ಯೋಚಿಸುತ್ತಾ ಕುಳಿತಿರಬಾರದು, ‘ಹಾಂ, ನಾನು ಎಲ್ಲವನ್ನೂ ಸಮರ್ಪಿಸಿದ್ದೇನೆ, ಈಗ ಎಲ್ಲವೂ ತಂತಾನೆ ಕಾರ್ಯಗತವಾಗುವುದು.’
 ಅಂತಹ ಪರಿಪೂರ್ಣತೆಯ ಸ್ಥಿತಿಯು, ಸಿದ್ಧಾವಸ್ಥೆಯು, ಕಾಲಕ್ರಮೇಣ ಉಂಟಾಗುವುದು.
ನಿಮ್ಮ ಸಾಧನೆಯಲ್ಲಿ ನೀವು ಹೆಚ್ಚು ಬಲವಾದಷ್ಟು, ಯಾವುದೇ ತೀವ್ರತರವಾದ ಹಂಬಲ ಅಥವಾ ತಿರಸ್ಕಾರಗಳು ನಿಮ್ಮಲ್ಲಿ ಉಳಿಯದೇ, ಯಾವುದೇ ಆಸೆಗಳು ನಿಮ್ಮಲಿರದೇ ಇದ್ದಾಗ, ಅಂತಹ ಸ್ಥಿತಿಯನ್ನು ನೈಷ್ಕರ್ಮ ಸಿದ್ಧಿ (ಯಾವ ಕರ್ಮವನ್ನೂ ಮಾಡದೇ ಸಾಧಿಸುವ ಅಸಾಮಾನ್ಯ ಸಾಮಥ್ರ್ಯ) ಎನ್ನುವರು.
ಇದರ ಅರ್ಥ ಶ್ರಮವಹಿಸದೆಯೇ ನಿಮ್ಮ ಕೆಲಸ-ಕಾರ್ಯಗಳು ಮತ್ತು ನಿಮ್ಮ ಆಸೆಗಳು ಪೂರ್ಣಗೊಳ್ಳುವವು. ಆದರೆ ಆ ಸ್ಥಿತಿಯನ್ನು ತಲುಪುವ ತನಕ ನಾವು ಕರ್ಮಗಳನ್ನು ಮಾಡಲೇಬೇಕು.
ಸಿದ್ಧಾವಸ್ಥೆಯಲ್ಲಿ, ಆಳವಾದ ಭಕ್ತಿಯಲ್ಲಿ ನೀವೆಷ್ಟು ಬೆಳೆಯುವಿರೆಂದರೆ ಶ್ರಮವಹಿಸುವ ಅಥವಾ ಕಷ್ಟಪಡುವ ಅಗತ್ಯವಿರುವುದಿಲ್ಲ. ನೀವು ಯೋಚಿಸುವ ಮೊದಲೇ ನಿಮ್ಮ ಬಯಕೆಗಳು ಪೂರ್ಣಗೊಳ್ಳುವವು.
ಎಷ್ಟು ಮಂದಿಗೆ ಇಂತಹ ಅನುಭವವುಂಟಾಗಿದೆ? (ಸಭಿಕರಲ್ಲಿ ಅನೇಕ ಭಕ್ತರು ಕೈ ಎತ್ತುವರು) ನೋಡಿ, ಅದು ಖಂಡಿತವಾಗಿಯೂ ನಡೆಯುತ್ತಿದೆ.
ಈಗ, ಇಂತಹ ಸ್ಥಿತಿಯನ್ನು ಹೇಗೆ ಪಡೆಯುವುದು? ಆಧ್ಯಾತ್ಮದ ಪಥದಲ್ಲಿ ಮುಂದುವರೆದರೆ, ಆಳವಾಗಿ ಬೆಳೆಯುತ್ತಿದ್ದರೆ, ಸಂತೃಪ್ತರಾಗುತ್ತೇವೆ. ನಾವು ತೃಪ್ತರಾದಷ್ಟು ಸಿದ್ಧಿಗಳನ್ನು (ಅಸಾಮಾನ್ಯ ಸಾಮಥ್ರ್ಯಗಳು) ಪಡೆಯುತ್ತೇವೆ.
ಸಿದ್ಧಿಗಳೆಂದರೆ ಭೂತಕಾಲದ ಅಥವಾ ಭವಿಷ್ಯತ್ತಿನ ಬಗ್ಗೆಯಲ್ಲ. ವರ್ತಮಾನದಲ್ಲೇ ಪಡೆಯಬಹುದು. ಆದರೂ ಕೂಡ, ಆ ಸಾಮಥ್ರ್ಯಗಳು ವರ್ತಮಾನದಲ್ಲಿ ಮರೆಯಲ್ಲಿದ್ದು, ಪರದೆಯು ಕ್ರಮೇಣ ಸರಿಸುವುದು. ಪರದೆಯು ಮೇಲೆ ಹೋದಂತೆ ಅಂತಹ ಸಾಮಥ್ರ್ಯಗಳು ಶ್ರಮವಿಲ್ಲದೇ ನಮ್ಮಲ್ಲಿ ಆವಿರ್ಭವಿಸುವುದನ್ನು ಕಾಣಬಹುದು.

ಪ್ರ: ಗುರೂಜೀ, ಅನೇಕ ಜ್ಞಾನದ ಪುಸ್ತಕಗಳಲ್ಲಿ ಎಲ್ಲವೂ ಒಂದೇ ಪ್ರಜ್ಞೆಯೆಂದು, ನಾವು ಅದರದೊಂದು ಭಾಗವೆಂದು ಓದಿದ್ದೇನೆ. ಹಾಗಿದ್ದಲ್ಲಿ ಸಮರ್ಪಣೆಯೆಂದರೇನು? ನಾವೇನನ್ನು ಸಮರ್ಪಿಸಬೇಕು, ಒಂದೇ ಪ್ರಜ್ಞೆಯಿರುವಾಗ ಯಾರಿಗೆ ಸಮರ್ಪಿಸಬೇಕು?
ಶ್ರೀಶ್ರೀರವಿಶಂಕರ್: ಹೌದು, ಸರಿ.
ವಾಸ್ತವವಾಗಿ, ಏನನ್ನೂ ಸಮರ್ಪಿಸುವ ಅಗತ್ಯವಿಲ್ಲ. ಆದರೆ ಮನಸ್ಸಿಗೆ, ‘ನಾನು ಬೇರೆ, ನಾನು ಭಿನ್ನ, ನಾನು ಒಬ್ಬಂಟಿಗ’ ಎಂದೆನಿಸಿದಾಗ ಅದನ್ನು ಹೋಗಲಾಡಿಸಲು ಸರ್ಮಪಿಸಿ ಮತ್ತು ವಿಶ್ರಮಿಸಿ.
ಅದು ಹೇಗೆಂದರೆ ಮನೆಯಲ್ಲಿ ತಾಯಿಯಿರುವ ಭಾವ. ಆ ಭಾವವನ್ನು ಜಾಗೃತಗೊಳಿಸಲು, ಬಿಟ್ಟು ಬಿಡುವ ಕ್ರಿಯೆಯನ್ನು ಸಮರ್ಪಣೆ ಎನ್ನುವರು. ಅಷ್ಟೇ. ನಿಮಗೆ ಬೇಕೆನಿಸುವ ಯಾವ ವಸ್ತು/ವಿಷಯವನ್ನೂ ಸಮರ್ಪಿಸುವ ಅಗತ್ಯವಿಲ್ಲ. ತಿಳಿಯಿತೇ?
ಅದ್ದರಿಂದಲೇ ಆಧ್ಯಾತ್ಮದಲ್ಲಿ ಮೂರು ವಿಭಿನ್ನವಾದ ಪಥಗಳಿವೆ (ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ).
ಜ್ಞಾನಯೋಗದಲ್ಲಿ ನೀವು ಎಚ್ಚರಗೊಂಡು ತಿಳಿಯುತ್ತೀರಿ, ಎಲ್ಲವೂ ಒಂದೇ ವಸ್ತುವಿನಿಂದ ಮಾಡಲ್ಪಟ್ಟಿದೆ, ದ್ವೈತವಿಲ್ಲ. ಇದು ಜ್ಞಾನ.
ಆದರೆ ನೀವಿದನ್ನು ಮರೆತಾಗ, ದ್ವೈತದಲ್ಲಿ ಸಿಲುಕಿದಾಗ, ಯಾವುದನ್ನಾದರು ಹಿಡಿದುಕೊಂಡಿರುವಾಗ ಮತ್ತು ಅದು ನಿಮ್ಮ ಮೆದುಳಿಗೆ ಅತಿಯೆನಿಸಿದಾಗ, ತಾಳಲು ಸಾಧ್ಯವಾಗದೇ ಇದ್ದಾಗ, ಆಗ ನೀವು ಹೇಳುವುದು, ‘ನಾನದನ್ನು ಬಿಡುತ್ತೇನೆ’, ಅದು ಸಮರ್ಪಣೆ.
ಇದಕ್ಕೆ ಒಂದು ಉತ್ತಮವಾದ ಉದಾಹರಣೆಯೆಂದರೆ ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮ್ಮ ಸಾಮಾನುಗಳನ್ನು ಭುಜಗಳ ಮೇಲೆ ಹೊರುತ್ತೀರ. ಆಸನವು ಆರಾಮದಾಯಕವಾಗಿದ್ದರೂ ನಿಮ್ಮ ತಲೆಯ ಮೇಲೆ ಮತ್ತು ಭುಜಗಳ ಮೇಲೆ ಭಾರವನ್ನು ಹೊತ್ತುಕೊಂಡು ಹಿತಕರವಾಗಿರುವುದಿಲ್ಲ.
ಆಗ ಯಾರೋ ಹೇಳುತ್ತಾರೆ, ‘ಅಯ್ಯೋ, ಬಿಡಿ! ಆ ಸಾಮಾನುಗಳನ್ನು ಕೆಳಗಿಡಿ. ಹೇಗಿದ್ದರೂ ಈ ರೈಲು ನಿಮ್ಮನ್ನೂ ನಿಮ್ಮ ಸಾಮಾನುಗಳನ್ನು ಕರೆದೊಯ್ಯುತ್ತಿದೆ. ವಿಶ್ರಮಿಸಿ.’
ಅಂತಹ ಸಂಪೂರ್ಣ ವಿಶ್ರಾಮದ ಭಾವವನ್ನು ನೀಡುವುದು ಸಮರ್ಪಣೆ.

ಪ್ರ: ಗುರೂಜೀ, ನನ್ನ ಆಯ್ಕೆಯು ಸಂಪ್ರದಾಯಕ್ಕೆ ಭಿನ್ನವಾಗಿದ್ದರೆ ಏನು ಮಾಡುವುದು? ಜನರು, ’ನೀನು ಮದುವೆಯಾಗು, ಮಕ್ಕಳನ್ನು ಪಡೆ, ಆಸ್ತಿ ಮಾಡು ಇತ್ಯಾದಿ’ ಸಂಪ್ರದಾಯಬದ್ಧವಾಗಿ ನುಡಿಯುತ್ತಾರೆ. ನಾನು ಆ ಪಥದಿಂದ ಬೇರೆಡೆಗೆ ಹೋಗಲು ಬಯಸಿದರೆ, ನಾನು ತಪ್ಪೆಂದು ಸತತವಾಗಿ ಹೇಳುತ್ತಾರೆ. ನನಗೆ ಅದು ತಪ್ಪೆಂದೆನಿಸುವುದಿಲ್ಲ. ನನಗೆ ಸದಾ ಆಯ್ಕೆ ಮಾಡಿಕೊಳ್ಳುವಂತಿರಬೇಕು.  ಈ ಸಂದರ್ಭದಲ್ಲಿ ಹೇಗೆ ವರ್ತಿಸುವುದು?  ಪರಿವಾರದ ವಿರುದ್ಧ ಹಾಗೂ ಸಮಾಜದ ವಿರುದ್ಧ ನಡೆದರೂ ಹೇಗೆ ಸಂತೋಷದಿಂದಿರುವುದು ಮತ್ತು ಹೇಗೆ ಸ್ವಯಂ ಆಯ್ಕೆಗಳನ್ನು ಮಾಡಿಕೊಳ್ಳುವುದು?
ಶ್ರೀಶ್ರೀರವಿಶಂಕರ್: ಹೌದು, ಇದು ಬಹಳ ಕಠಿಣವಾದುದು. ಎಲ್ಲರೂ ಮಾಡುವುದನ್ನು ನೀವು ಮಾಡಲು ಇಷ್ಟಪಡುವುದಿಲ್ಲವೆಂದು ನಿಮ್ಮ ಮಾತಾ-ಪಿತೃಗಳಿಗೆ ಹೇಳಿ ಒಪ್ಪಿಸಬೇಕು.
ನಿಮಗೆ ಗೊತ್ತೇ, ಇವೆಲ್ಲಾ ವಿಷಯಗಳ ಬಗ್ಗೆ ಮುಕ್ತವಾದ ಮನಸ್ಸನ್ನು ಹೊಂದಿರುವುದು ಒಳ್ಳೆಯದು. ಕಠಿಣರಾಗಬೇಡಿ. ಮುಕ್ತವಾದ ಮನಸ್ಸನ್ನು ಹೊಂದಿದ್ದು, ಸ್ವಾಭಿಕವಾಗಿ ಕರ್ಮವನ್ನು ಮಾಡಿ. ಅದು ಉತ್ತಮವೆಂದು ಭಾವಿಸುತ್ತೇನೆ.
ಪತಿ-ಪತ್ನಿಯರಲ್ಲಿ ಮತ್ತು ಪರಿವಾರದಲ್ಲಿ, ಸ್ವಲ್ಪ ಮಟ್ಟಿಗೆ ರಾಜಿಯಾಗುವುದು ಅಗತ್ಯ. ‘ನನ್ನ ರೀತಿಯಲ್ಲೇ’ ನಡೆಯಬೇಕೆಂದು ಹೇಳಲಾಗುವುದಿಲ್ಲ. ಮಧ್ಯದ ಮಾರ್ಗವನ್ನು ಹಿಡಿಯಬೇಕು. ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಜೀವನದಲ್ಲಿ ಯಾವಾಗಲೂ ಸ್ವಲ್ಪ ರಾಜಿಯಾಗಬೇಕಾಗುತ್ತದೆ.
ಆದ್ದರಿಂದ ಮುಕ್ತಮನಸ್ಸನ್ನು ಹೊಂದಿರಿ.
ಏನೇ ಆಗಲಿ ನಿಮ್ಮ ಸುಖ-ಸಂತೋಷವನ್ನು ಕಳೆದುಕೊಳ್ಳಬೇಡಿ.
ಕೆಲವರು ಒಂಟಿಯಾಗಿದ್ದು, ವಿವಾಹವಾಗದೇ ಸಂತೋಷವಾಗಿರುವುದಿಲ್ಲ. ಇನ್ನು ಕೆಲವರು ವಿವಾಹಿತರಾಗಿದ್ದು, ಸಂತೋಷವಾಗಿರುವುದಿಲ್ಲ. ಆದ್ದರಿಂದ, ಈ ಎರಡೂ ಸನ್ನಿವೇಶಗಳೂ ಉತ್ತಮವಾಗಿಲ್ಲ. ನೀವು ವಿವಾಹಿತರಾಗಿರಲಿ ಅಥವಾ ಅವಿವಾಹಿತರಾಗಿರಲಿ, ಹೇಗೇ ಇರಲಿ ಸಂತೋಷವಾಗಿರಿ. ಅದು ಅತ್ಯವಶ್ಯಕ.
ಮಕ್ಕಳಿರದವರು ಹಗಲು-ರಾತ್ರಿ ಅಳುತ್ತಾ ದುಃಖತಪ್ತರಾಗಿರುತ್ತಾರೆ. ಮತ್ತು ಇನ್ನು ಕೆಲವರು ಮಕ್ಕಳಿದ್ದೂ ಸುಖವಾಗಿರುವುದಿಲ್ಲ.
ಆದ್ದರಿಂದ ನಿಮ್ಮ ಸಂತೋಷವನ್ನು ಸಮಯ-ಸಂದರ್ಭಗಳಿಂದ ನಿಬರ್ಂಧಗೊಳಿಸಿ. ‘ನಾನು ಸುಂದರವಾಗಿ ಕಂಡಾಗ, ಆನಂದವಾಗಿರುತ್ತೇನೆ. ವಯಸ್ಸಾಗುತ್ತಿದ್ದರೆ ಸಂತೋಷವಾಗುವುದಿಲ್ಲ’ ಎಂದು ಯೋಚಿಸಬೇಡಿ. ‘ಏನೇ ಆಗಲಿ ನಾನು ಸಂತೋಷವಾಗಿರುತ್ತೇನೆ ಮತ್ತು ತೃಪ್ತನಾಗಿರುತ್ತೇನೆ’ ಎಂಬ ದೃಢಸಂಕಲ್ಪವಿರಲಿ.

ಪ್ರ: ಗುರುದೇವ, ಒಂದು ಸಂದರ್ಭವನ್ನು ಹೇಳಬಯಸುತ್ತೇನೆ. ನಾನೆಲ್ಲಿಗೋ ಹೋಗುತ್ತಿದ್ದು, ಎರಡು ಬಾಳೆಹಣ್ಣುಗಳನ್ನು ಕೊಂಡುಕೊಂಡೆ. ಒಂದನ್ನು ತಿಂದು, ಇನ್ನೊಂದನ್ನು ಇಟ್ಟುಕೊಂಡಿದ್ದೆ. ರಸ್ತೆಯಲ್ಲಿ ಭಿಕ್ಷುಕನೊಬ್ಬನ್ನನ್ನು ನೋಡಿ ಅವನಿಗೆ ಆ ಬಾಳೆಹಣ್ಣನ್ನು ಕೊಡಬೇಕೆಂದೆನಿಸಿತು. ಆದರೆ ಅದನ್ನು ನಂತರದ ಸಮಯಕ್ಕೆ ಇಟ್ಟುಕೊಳ್ಳಬಹುದೆಂದು ಇನ್ನೊಂದು ಆಲೋಚನೆಯು ಮೂಡಿತು. ಅದಕ್ಕಾಗಿ ಅದನ್ನು ನಂತರ ತಿನ್ನಲು ಇಟ್ಟುಕೊಂಡೆ. ನಾನೇನಾದರೂ ತಪ್ಪು ಮಾಡಿದೆನೆ? ಬಾಳೆಹಣ್ಣನ್ನು ಆ ಹಸಿದ ವ್ಯಕ್ತಿಗೆ ಕೊಡಬೇಕಾಗಿತ್ತೇ? 
ಶ್ರೀಶ್ರೀರವಿಶಂಕರ್: ಇದು ಹೀಗೆಯೇ ನಡೆಯುವುದು. ಅನೇಕರು ತುಂಬಾ ಆಹಾರ ಪದಾರ್ಥಗಳನ್ನು ಕೊಂಡುಕೊಂಡು ಫ್ರಿಡ್ಜ್‍ನಲ್ಲಿಟ್ಟುಕೊಳ್ಳುತ್ತಾರೆ. ಸ್ವಲ್ಪ ಕಾಲದ ನಂತರ ತೆಗೆದುನೋಡಿದಾಗ ಎಲ್ಲಾ ಕೊಳೆತಿರುತ್ತದೆ, ಅದನ್ನು ಆಚೆಗೆಸೆಯುತ್ತಾರೆ. ಎಷ್ಟು ಜನ ಹೀಗೆ ಮಾಡುತ್ತೀರ, ಫ್ರಿಡ್ಜ್‍ನಲ್ಲಿ ಶೇಖರಿಸಿ ನಂತರ ಎಸೆಯುವುದು?  (ಸಭಿಕರಲ್ಲಿ ಕೆಲವರು ಕೈ ಮೇಲೆತ್ತುತ್ತಾರೆ).
ವಿಶ್ವದಾದ್ಯಂತ ಇದೇ ಚಟವಿದೆ.
ನಿಮಗೆ ತಿಳಿದಿದೆಯೇ, ಎಸೆದಿರುವ ಆಹಾರದ ಮೂರನೆಯ ಒಂದು ಭಾಗ ಫ್ರಿಡ್ಜ್‍ನಿಂದ ಬರುತ್ತದೆ ಮತ್ತು ನಾಲ್ಕನೆಯ ಒಂದು ಭಾಗ ಅಂಗಡಿಗಳಿಂದ ಬರುತ್ತದೆ ಏಕೆಂದರೆ ಆ ಪದಾರ್ಥಗಳ ಎಕ್ಸ್‍ಪೈರಿ ಡೇಟ್ ಮುಗಿದಿರುತ್ತದೆ. ವಿಶ್ವದಲ್ಲಿ ಈ ಸಂಗ್ರಹಿಸುವ ಪ್ರವೃತ್ತಿಯಿದೆ.
ಸ್ವಾಭಾವಿಕತೆ ಇರಲಿ. ನಿಮಗೆ ಶೇಖರಿಸಬೇಕೆನಿಸಿದರೆ, ಶೇಖರಿಸಿ. ಕೊಡಬೇಕೆಂದರೆ ಕೊಡಿ. ಯಾರೋ ಹಸಿದಿರುವ ವ್ಯಕ್ತಿಗೆ ಕೊಡಬೇಕೆನಿಸಿದರೆ ಕೊಡಿ.
ನಿರ್ದಿಷ್ಟವಾದ ಅಭಿಪ್ರಾಯವನ್ನು ಹೊಂದಿರುವುದು ಬೇಡ. ‘ನಾನು ಯಾವಾಗಲೂ ಬಾಳೆಹಣ್ಣನ್ನು ನನ್ನ ಬಳಿಯೇ ಇಟ್ಟುಕೊಳ್ಳಬೇಕು. ಯಾರಿಗೂ ಕೊಡಬಾರದು.’ ಇದು ಸರಿಯಲ್ಲ. ಹಾಗೆಯೇ, ‘ನಾನು ಸದಾ ಕೊಡುತ್ತಿರಬೇಕು’ ಎನ್ನುವುದೂ ಸರಿಯಲ್ಲ. ಆರಾಮವಾಗಿರಿ, ಸಲೀಸಾಗಿ ತೆಗೆದುಕೊಳ್ಳಿ, ಕೆಲವೊಮ್ಮೆ ಶೇಖರಿಸಿ, ಕೆಲವೊಮ್ಮೆ ಕೊಡಿ.

ಪ್ರ: ಗುರುದೇವ, ನೆನ್ನೆ ಓರ್ವ ಮಹಿಳೆಯನ್ನು ಭೇಟಿ ಮಾಡಿದೆ. ಅವಳಿಗೆ 20 ವರ್ಷಗಳ ಹಿಂದೆ ಗುರುಗಳು ಸ್ವಪ್ನದಲ್ಲಿ ಕಾಣಿಸಿದರೆಂದು, ಸಮಾಜವನ್ನು ರಕ್ಷಿಸಲು ಜನಿಸಿರುವಳೆಂದು ತಿಳಿಸಿದಾಗಿ ಹೇಳಿದಳು. ಅಥ್ಲೀಟ್ ಅಲ್ಲದ್ದಿದ್ದರೂ, ಆ ಕನಸ್ಸು ಅವಳಿಗೆ ಐಪಿಎಸ್ (ಭಾರತೀಯ ಪೆÇೀಲೀಸ್ ಸರ್ವೀಸ್) ಗೆ ಸೇರಲು ಪ್ರೇರೇಪಿಸಿತಂತೆ. ಗುರುಗಳು ತರಬೇತಿಯಲ್ಲಿ ಬೆಂಬಲವಾಗಿದ್ದರೆಂದು ಹೇಳುತ್ತಾಳೆ. ಇಂದು ಅವಳು ಭಾರತದಲ್ಲಿ ಅತೀವ ಭಯಭಕ್ತಿಯನ್ನುಂಟು ಮಾಡುವ ಪೆÇೀಲೀಸ್ ಅಧಿಕಾರಿಗಳಲ್ಲಿ ಒಬ್ಬಳು.
ಹೀಗೇನಾದರೂ ನಿಜವಾಗಿಯೂ ನಡೆಯಬಹುದೇ? ಇಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿಯನ್ನು ಪ್ರೇರೇಪಿಸಬಹುದೇ?
ಶ್ರೀಶ್ರೀರವಿಶಂಕರ್: ನೋಡಿ, ಸ್ವಪ್ನಗಳಲ್ಲಿ ಐದು ವಿಧ.
ಮೊದಲನೆಯ ತರಹದ ಸ್ವಪ್ನವು ನಿಮ್ಮದೇ ಕಲ್ಪನೆಯ ಉತ್ಪ್ರೇಕ್ಷೆ. ನಿಮ್ಮ ಸ್ವಂತ ಆಸೆಗಳು ಮತ್ತು ಭಯಗಳನ್ನೇ ಸ್ವಪ್ನದಲ್ಲಿ ನೋಡುವಿರಿ.
ಎರಡನೆಯದಾಗಿ ಎಲ್ಲೋ ಹಿಂದೆ ಅನುಭವಿಸಿದ್ದು, ಸ್ವಪ್ನದ ರೂಪದಲ್ಲಿ ಕಾಣಿಸುವುದು.
ಮೂರನೆಯದಾಗಿ, ಅಂತರ್ದೃಷ್ಟಿ. ಭವಿಷ್ಯತ್ತಿನಲ್ಲಿ ಏನಾಗಬಹುದೆಂಬ ಸ್ವಪ್ನ.
ನಾಲ್ಕನೆಯದು, ನಿಮಗೆ ಸಂಬಂಧಪಡದೇ, ನೀವಿರುವ ಸ್ಥಳಕ್ಕೆ ಸಂಬಂಧಿಸಿರುತ್ತದೆ. ನೀವು ಒರಿಸ್ಸಾದ ಹೋಟಲ್ ಒಂದರಲ್ಲಿ ಹೋಗಿ ಮಲಗುತ್ತೀರ ಅಥವಾ ಅಲ್ಲಿ ಯಾರದೋ ಮನೆಯಲ್ಲಿ ತಂಗುತ್ತೀರ, ಆಗ ನಿಮ್ಮ ಸ್ವಪ್ನದಲ್ಲಿ ಒರಿಯಾ ಭಾಷೆಯನ್ನು ಕೇಳುತ್ತೀರ. ಈ ರೀತಿಯ ಅನುಭವವಾಗಿದೆಯೇ?
ಬಂಗಾಳಕ್ಕೆ ಹೋಗಿ, ಅಲ್ಲಿ ನಿದ್ರಿಸಿದಾಗ ಬಂಗಾಳಿ ಭಾಷೆಯನ್ನು ನಿಮ್ಮ ಸ್ವಪ್ನದಲ್ಲಿ ಕೇಳಬಹುದು. ಇದು ನಾಲ್ಕನೆಯ ಬಗೆ.
ಐದನೆಯದು ಇವೆಲ್ಲದರ ಮಿಶ್ರಣ. ಬಹುತೇಕ ಸ್ವಪ್ನಗಳು 90% ರಷ್ಟು ಈ ಬಗೆಯದು. ಸ್ವಲ್ಪ ಅಂತಃಸ್ಫುರಣೆ, ಸ್ವಲ್ಪ ಅದು, ಸ್ವಲ್ಪ ಇದು ಸೇರಿರುತ್ತದೆ. ಆದ್ದರಿಂದ, ನಿಮ್ಮ ಸ್ವಪ್ನಗಳ ಮೇಲೆ ಹೆಚ್ಚು ಅವಲಂಬಿತರಾಗುವುದು ಬೇಡ.
ಖಂಡಿತವಾಗಿಯೂ, ಕೆಲವು ಅಂತಃಸ್ಫುರಣೆಯ ಸ್ವಪ್ನಗಳಿರುವುದು. ಆದರೆ ಕೆಲವು ವೇಳೆ, ನಿಮ್ಮ ಭಯ ಮತ್ತು ಹಂಬಲವೇ ಈ ರೂಪದಲ್ಲಿ ಬರಬಹುದು. ನಾವು ಹೇಳುತ್ತಿರುವುದು ತಿಳಿಯುತ್ತಿದೆಯೇ? ಸಂಪೂರ್ಣವಾಗಿ ಅಲಕ್ಷಿಸಲಾಗದು, ಅದೇ ವೇಳೆಗೆ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲೂ ಆಗದು.
ಆದ್ದರಿಂದ ನೀವದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದನ್ನು ಯೋಗಮಾಯೆ ಎನ್ನುವರು. ಸಾಧಕನಿಗೆ ಇವು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆಗ ಅವನಿಗೆ ಮತ್ತಷ್ಟು ಮಾರ್ಗದರ್ಶನದ ಅವಶ್ಯಕತೆಯಿರುತ್ತದೆ. ನೀವು ಧ್ಯಾನ ಮಾಡಿದಾಗ, ಜ್ಞಾನವನ್ನು ಅನುಸರಿಸಿದಾಗ, ಇವೆಲ್ಲವನ್ನೂ ದಾಟಬಹುದು.

ಪ್ರ: ಗುರುದೇವ, ನಮ್ಮ ಪ್ರಯಾಣವು ಮೂರ್ತದಿಂದ ಅಮೂರ್ತದೆಡೆಗೆ ಸಾಗಬೇಕಾಗಿರುವಾಗ, ಗುರುವಿನ ಜೊತೆಯಿರುವುದು ಎಷ್ಟು ಮುಖ್ಯ? ಹಿರಿಯ ಸಾಧಕರೂ ಕೂಡ ಗುರುಗಳ ಹಿಂದೆ ಓಡಾಡುವುದನ್ನು ಗಮನಿಸುತ್ತೇವೆ. ಆದ್ದರಿಂದ ಜ್ಞಾನದಲ್ಲಿದ್ದರೆ ಸಾಕೆ ಅಥವಾ ಗುರುಗಳ ಸಾನಿಧ್ಯವನ್ನು ಅನುಭವಿಸಿದರೆ ಸಾಕೆ ಅಥವಾ ನಿಮ್ಮ ಹಿಂದೆ ಓಡಬೇಕೆ?
ಶ್ರೀಶ್ರೀರವಿಶಂಕರ್: ನೋಡಿ ಇಲ್ಲಿ ಯಾರೂ ನನ್ನ ಹಿಂದೆ ಇಲ್ಲ. ಎಲ್ಲರೂ ನನ್ನ ಮುಂದಿದ್ದಾರೆ. ನಿಮಗೇನು ಇಷ್ಟವೋ ಅದನ್ನೇ ಮಾಡಿ.  ನಾನೇನನ್ನೂ ಬಯಸುವುದಿಲ್ಲ. ನೀವು ಒಂದು ಸ್ಥಳದಲ್ಲೇ ಇದ್ದು, ತೃಪ್ತರಾಗಿದ್ದರೆ, ಒಳ್ಳೆಯದು. ಅಪರಾಧಿ ಮನೋಭಾವ ಬೇಡ. ನಿಮ್ಮನ್ನು ಮತ್ತಷ್ಟು ಸಮಸ್ಯೆಗಳಿಗೆ ಒಡ್ಡಲು ಬಯಸುವುದಿಲ್ಲ. ನಿಮ್ಮ ಹೃದಯವು ಓಡಲು ಹೇಳಿ, ನಿಮ್ಮ ಮನಸ್ಸು ಓಡಬೇಡವೆಂದು ಹೇಳಿದರೆ, ನೀವಾಗ ಗೊಂದಲಕ್ಕೆ ಸಿಕ್ಕಿಕೊಳ್ಳುತ್ತೀರ. ಆದ್ದರಿಂದ, ನಾನು ನಿಮ್ಮ ಹೃದಯದ ಅಥವಾ ಮನದ ಪಕ್ಷವನ್ನು ಸೇರಲು ಬಯಸುವುದಿಲ್ಲ ಏಕೆಂದರೆ ಎರಡೂ ಮುಖ್ಯ. ಏನು ಮಾಡಬೇಕೆಂದು ನೀವು ನಿರ್ಧರಿಸಿ. ಕೆಲವೊಮ್ಮೆ ಒಂದನ್ನು ಗೆಲ್ಲಿಸಿ, ಇನ್ನೊಮ್ಮೆ ಇನ್ನೊಂದನ್ನು ಗೆಲ್ಲಿಸಿ. ಇದೇ ಜೀವನ. ಎಲ್ಲವೂ ಒಪ್ಪಂದವೇ ಆಗಿದೆ.
ಕೇವಲ ಇಷ್ಟು ತಿಳಿದುಕೊಳ್ಳಿ, ಒಂದು ಶಕ್ತಿಯಿದೆ ಮತ್ತು ಚಮತ್ಕಾರ ನಡೆಯುತ್ತದೆ. ಚಮತ್ಕಾರ ನಡೆಯಲು ಅವಕಾಶ ಮಾಡಿಕೊಡಿ.

ಪ್ರ: ಗುರುದೇವ, ನೀವೆನ್ನುತ್ತೀರ ಆಯ್ಕೆ ನಿಮ್ಮದು ಆಶೀರ್ವಾದ ನನ್ನದೆಂದು. ನಿಮ್ಮ ವಿಶಾಲವಾದ ದೃಷ್ಟಿಕೋನಕ್ಕೆ ನಮ್ಮ ಆಯ್ಕೆಯು ಸರಿಹೊಂದದ್ದಿದ್ದರೆ ಹೇಗೆ ತಿಳಿಯುವುದು, ಅದನ್ನು ಹೇಗೆ ತಿದ್ದಿಕೊಳ್ಳುವುದು? ನಿಮ್ಮ ದಾರಿಗೆ ಕರೆದುಕೊಳ್ಳಲು ಜವಾಬ್ದಾರಿ ತೆಗೆದುಕೊಳ್ಳುವಿರಾ?
ಶ್ರೀಶ್ರೀರವಿಶಂಕರ್:  (ನಗುತ್ತಾ) ಎಲ್ಲವೂ ನನ್ನ ದಾರಿಯೇ. ನಿಮಗೆ ಉತ್ತಮವಾದುದೇ ಆಗಲೆಂದು ಹಾರೈಸುವೆ. ನೀವೇ ಆಯ್ಕೆ ಮಾಡಿಕೊಳ್ಳಬೇಕೆಂದು ನಾನು ಬಯಸುವೆ. ನಾನು ನಿರ್ಧರಿಸುವುದಲ್ಲ. ನೀವೇ ಆಯ್ದುಕೊಳ್ಳಬೇಕು ಏಕೆಂದರೆ ನಿಮ್ಮ ಪ್ರತಿಯೊಂದು ಆಯ್ಕೆಯೊಂದಿಗೆ ನೀವು ಬೆಳೆಯುತ್ತೀರ.