ಮಂಗಳವಾರ, ಅಕ್ಟೋಬರ್ 30, 2012

ಪುರಾತನ ಜ್ಞಾನ

೩೦ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ಗುರುದೇವ, ನಾಳೆಯಿಂದ ನಾವು ಉಪನಯನದೊಂದಿಗೆ ವೈದಿಕ ಜ್ಞಾನ ಅಧಿವೇಶನವನ್ನು ಪ್ರಾರಂಭಿಸಲಿದ್ದೇವೆ. ಯುರೋಪಿನಿಂದ ಸುಮಾರು ನೂರು ಜನರು ನಮ್ಮೊಂದಿಗಿದ್ದಾರೆ. ಈ ವೈದಿಕ ಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಉಪಯೋಗಿಸಲ್ಪಡಬಹುದು ಎಂಬುದರ ಬಗ್ಗೆ ನೀವು ನಮಗೆ ಸ್ವಲ್ಪ ಮಾರ್ಗದರ್ಶನವನ್ನು ನೀಡುವಿರಾ?
ಶ್ರೀ ಶ್ರೀ ರವಿ ಶಂಕರ್: ನೋಡಿ, ವೈದಿಕ ಜ್ಞಾನವು ಅನಾದಿ ಕಾಲದಿಂದ ಇಲ್ಲಿದೆ. ಜ್ಞಾನವು ಯಾವಾಗ ಪ್ರಾರಂಭವಾಯಿತು ಎಂಬುದನ್ನು ಸ್ಥಿರವಾಗಿ ಹೇಳಲು ಸಾಧ್ಯವಿಲ್ಲ. ಅದು ಯಾವುದೇ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಲಿಲ್ಲ. ಅದು, ಜನರು ಧ್ಯಾನದಲ್ಲಿ ಆಳವಾಗಿ ಹೋದಾಗ ಸಿಕ್ಕಿದಂತಹದು. ಹಲವಾರು ಋಷಿಗಳು ಧ್ಯಾನ ಮಾಡಿದರು ಮತ್ತು ಧ್ಯಾನ ಮಾಡಿದಾಗ ಆಳವಾದ ಮೌನದಲ್ಲಿ ಅವರು ಏನೋ ಕೇಳಿಸಿಕೊಂಡರು. ತಾವು ಏನನ್ನೆಲ್ಲಾ ಕೇಳಿಸಿಕೊಂಡರೋ, ಅದನ್ನು ಅವರು ಹೇಳಲು ಶುರು ಮಾಡಿದರು ಮತ್ತು ಅದನ್ನು ಟಿಪ್ಪಣಿಸಿಕೊಳ್ಳುವಂತೆ ಯಾರಲ್ಲೋ ಕೇಳಿಕೊಂಡರು. ಇದು ನಂತರದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಮಾತಿನ ಮೂಲಕ ರವಾನಿಸಲ್ಪಟ್ಟಿತು- ಮೌಖಿಕ ಪದ್ಧತಿ. ಅದೇ ರೀತಿಯಲ್ಲಿ ಇತರ ಎಲ್ಲಾ ವಿವಿಧ ಶಾಸ್ತ್ರಗಳು; ಔಷಧಶಾಸ್ತ್ರ, ಅಂದರೆ ಆಯುರ್ವೇದ ಕೂಡಾ ಸಂಗ್ರಹಿಸಲ್ಪಟ್ಟಿತು.
ಆಯುರ್ವೇದವು ಹೇಗೆ ಹುಟ್ಟಿತೆಂಬುದು ನಿಮಗೆ ಗೊತ್ತಿದೆಯಾ? ಒಮ್ಮೆ ಮಧ್ಯಭಾರತದಲ್ಲಿ, ನೈಮಿಷಾರಣ್ಯವೆಂಬ ಒಂದು ಅರಣ್ಯವಿತ್ತು. ಆ ಅರಣ್ಯದಲ್ಲಿ ೮೪,೦೦೦ ಧ್ಯಾನಿಗಳು ಮತ್ತು ಸಂತರು ಒಟ್ಟುಸೇರಿದರು. ಅವರು ಚರ್ಚಿಸಿದರು, "ಬರಲಿರುವ ಎಲ್ಲಾ ಕಾಲದ ಸಮಾಜದ ಒಳಿತಿಗಾಗಿ ನಾವು ಏನಾದರೂ ಮಾಡಬೇಕು." ಇದು ಅವರ ಉದ್ದೇಶವಾಗಿತ್ತು. ಆದುದರಿಂದ ಅವರಂದರು, "ನಾವು ಧ್ಯಾನದೊಳಕ್ಕೆ ಹೋಗೋಣ ಮತ್ತು ಆಯುರ್ವೇದ; ಜೀವವಿಜ್ಞಾನದ ಜ್ಞಾನವನ್ನು ಸಂಗ್ರಹಿಸೋಣ."
ಆದರೆ ಎಲ್ಲರೂ ಆಳವಾದ ಧ್ಯಾನಕ್ಕೆ ಹೋದರೆ, ಅದನ್ನು ಬರೆಯಲು ಯಾರಿದ್ದಾರೆ. ಆದುದರಿಂದ ಅವರು ಆ ಕೆಲಸವನ್ನು ಒಬ್ಬರು ಋಷಿಗೆ ವಹಿಸಿದರು. ಆ ಒಬ್ಬರು ಋಷಿಯು ಹೇಳಿದರು, "ನಾನು ಎಚ್ಚರವಾಗಿದ್ದುಕೊಂಡು ಅದನ್ನೆಲ್ಲವನ್ನೂ ಬರೆಯುತ್ತೇನೆ. ನೀವೆಲ್ಲರೂ ಧ್ಯಾನ ಮಾಡಿ ಮತ್ತು ಆಳವಾದ ಧ್ಯಾನಕ್ಕೆ ಹೋದ ನಂತರ ನಿಮಗೆ ಏನೆಲ್ಲಾ ತಿಳಿಯುವುದೋ ಅದನ್ನೆಲ್ಲಾ ಹೇಳಿ."
ಹೀಗೆ, ೮೪,೦೦೦ ಋಷಿಗಳು ಧ್ಯಾನ ಮಾಡಿದರು ಮತ್ತು ಒಬ್ಬರು ಋಷಿ ಭಾರದ್ವಾಜರು ಅದನ್ನೆಲ್ಲಾ ತಾಳೆಗರಿಗಳ ಮೇಲೆ ಬರೆದಿಟ್ಟರು. ಸಂಪೂರ್ಣ ಆಯುರ್ವೇದವು ಪ್ರಜ್ಞೆಯಿಂದ ಸಂಗ್ರಹಿಸ್ಪಟ್ಟದ್ದು ಹೀಗೆ ಮತ್ತು ಅದಕ್ಕಾಗಿಯೇ ಇವತ್ತು ಕೂಡಾ ಅದು ಕಾಲದ ಪರೀಕ್ಷೆಯನ್ನು ಎದುರಿಸಿ ನಿಂತಿದೆ.
ಯಾವುದೇ ಅಂಗಕ್ಕೆ ಅವರು ನಿಗದಿಪಡಿಸಿದ ಯಾವುದೇ ಮೂಲಿಕೆಯನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಇವತ್ತಿಗೂ ಕೂಡಾ ಅದು ಸತ್ಯದ ಸಾಕ್ಷ್ಯವಾಗಿ ನಿಂತಿದೆ.
ಅದೇ ರೀತಿಯಲ್ಲಿ ಸಂಗೀತ ವಿಜ್ಞಾನ ಕೂಡಾ ಸಂಗ್ರಹಿಸಲ್ಪಟ್ಟಿತು. ಸಂಗೀತದಲ್ಲಿ, ಏಳು ಸ್ವರಗಳಿವೆ, ’ಸ ರೆ ಗ ಮ ಪ ಧ ನಿ’ ಮತ್ತು ಈ ಏಳು ಸ್ವರಗಳು ಏಳು ಪ್ರಾಣಿಗಳೊಂದಿಗೆ ಸಂಬಂಧ ಹೊಂದಿದೆ. ಉದಾಹರಣೆಗೆ ದೊಡ್ಡದಾಗಿರುವ ಆನೆಯೊಂದಿಗೆ ’ನಿ’ ಎಂದು ಅದು ಹೇಳುತ್ತದೆ. ಒಂದು ಆನೆಯು ಶಬ್ದ ಮಾಡುವಾಗಲೆಲ್ಲಾ ಅಲ್ಲಿ ’ನಿ’ ಅಥವಾ ನಿಶಾದ (ಸಂಗೀತದಲ್ಲಿನ ಒಂದು ಶಬ್ದ ಅಥವಾ ಶ್ರುತಿ)ವಿರುತ್ತದೆ.
ಅದೇ ರೀತಿಯಲ್ಲಿ ಕೋಗಿಲೆಯು ’ಪ’ ಶಬ್ದವನ್ನು ಮಾಡುತ್ತದೆ. ಕೋಗಿಲೆಯು ಐದನೆಯ ಸ್ವರವಾದ ’ಪ’ ದಲ್ಲಿ ಹಾಡುತ್ತದೆ. ಅದೇ ರೀತಿಯಲ್ಲಿ ’ರೆ’ ಸ್ವರವು ವೃಷಭಕ್ಕೆ ಸೇರಿದೆ.
ಆದುದರಿಂದ ವಿವಿಧ ಪ್ರಾಣಿಗಳು ಶಬ್ದಗಳನ್ನು ಮಾಡುವಾಗ ’ಸ ರೆ ಗ ಮ ಪ ಧ ನಿ’ ಉತ್ಪತ್ತಿಯಾಗುತ್ತವೆ. ಆದರೆ ಮನುಷ್ಯರು ಮಾತ್ರ ಆ ಎಲ್ಲಾ ರಾಗಗಳಲ್ಲಿ ಹಾಡಬಲ್ಲರು. ಗಂಧರ್ವ ವೇದದಲ್ಲಿ ಸಂಗೀತದ ಬಗ್ಗೆ ಅತ್ಯುನ್ನತ ಜ್ಞಾನವಿದೆ. ಸಂಗೀತಗಾರರು ಇದನ್ನು ಕಲಿಯಬೇಕು. ಅದು ಬಹಳ ಆಸಕ್ತಿಕರವಾಗಿದೆ. ಪ್ರಧಾನವಾಗಿ ೭೨ ರಾಗಗಳಿವೆ ಮತ್ತು ಈ ೭೨ ರಾಗಗಳು ಹಲವಾರು ಸಂತತಿಗಳನ್ನು (೭೨ ಪ್ರಧಾನವಾದ ರಾಗಗಳಿಂದ ಪಡೆಯಲಾದ ವಿವಿಧ ಮರಿ ರಾಗಗಳ ಬಗ್ಗೆ) ಹೊಂದಿವೆ ಎಂದು ಹೇಳುತ್ತಾರೆ. ಖರ್ಹರ್ ಪ್ರಿಯಾ ಎಂಬ ಒಂದು ರಾಗವಿದೆ, ಅದಕ್ಕೆ ಎರಡು ಸಾವಿರ ಸಂತತಿಗಳಿವೆ.
ಹೀಗೆ, ಸಂಗೀತ, ರಾಗ ಮತ್ತು ಶ್ರುತಿಗಳು ಹೇಗೆ ಹುಟ್ಟಿಕೊಂಡವು ಎಂಬುದು ಗಂಧರ್ವ ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದು ಬಹಳ ಆಸಕ್ತಿಕರವಾದುದು.
ಅದೇ ರೀತಿಯಲ್ಲಿ ಸ್ಥಾಪತ್ಯ ವೇದ ಎಂಬುದು, ಒಂದು ಮನೆಯನ್ನು ಹೇಗೆ ಕಟ್ಟುವುದು, ಅದು ಯಾವ ದಿಕ್ಕಿನಲ್ಲಿರಬೇಕು ಮತ್ತು ಇವುಗಳ ಪರಿಣಾಮಗಳೇನು ಎಂಬುದರ ಬಗ್ಗೆ ಮಾತನಾಡುತ್ತದೆ. ಆದರೆ ಈ ಗ್ರಂಥಗಳಲ್ಲಿ ಹಲವು ಮತ್ತು ಈ ಜ್ಞಾನವು ಇವತ್ತು ಪ್ರಪಂಚದಲ್ಲಿ ಕಾಣೆಯಾಗಿವೆ. ಮಧ್ಯಕಾಲ ಯುಗದಲ್ಲಿ ಯಾವತ್ತೋ, ಈ ಎಲ್ಲಾ ಗ್ರಂಥಗಳನ್ನು ಮತ್ತು ಸ್ಮಾರಕ ವಸ್ತುಗಳನ್ನು ಸುಟ್ಟು ಹಾಕಲಾಯಿತು. ಈ ಎಲ್ಲಾ ಜ್ಞಾನವನ್ನು ಪ್ರೋತ್ಸಾಹಿಸಲಾಗಲಿಲ್ಲ. ಅವುಗಳಲ್ಲಿ ಹಲವು ಕಳೆದುಹೋಗಿವೆ.

ಪ್ರಶ್ನೆ: ಗುರುದೇವ, ನಾವು ಕೂಡಾ ಇದೆಲ್ಲವನ್ನೂ ಸಂಗ್ರಹಿಸಲು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಹೌದು, ನಾವು ಕೂಡಾ ಇದನ್ನು ಸಂಗ್ರಹಿಸಬಹುದು. ಆದರೆ ಅಷ್ಟನ್ನು ಕಲಿ ಯುಗದಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಕಲಿ ಯುಗದಲ್ಲಿ ತಮೋಗುಣವು ಹೆಚ್ಚು ಪ್ರಚಲಿತವಾಗಿದೆ. ಅದಕ್ಕಾಗಿಯೇ, ಹೊಸ ವಿಷಯಗಳನ್ನು ಕಂಡುಹಿಡಿಯಲು ಸಾಧ್ಯವಾಗಲು ಹೆಚ್ಚು ಹೆಚ್ಚು ಜನರು ಧ್ಯಾನ ಮಾಡಬೇಕು. ವಾತಾವರಣದಲ್ಲಿ ಅತಿಯಾಗಿ ತಮಸ್ಸಿರುವಾಗ, ಅದನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಅದಕ್ಕಾಗಿಯೇ ಈ ಎಲ್ಲಾ ಯಜ್ಞಗಳು ಇಲ್ಲಿ ಆಗುತ್ತಿರುವುದನ್ನು ನೀವು ನೋಡುವುದು. ನಿಮಗೆ ಗೊತ್ತಾ, ಇಷ್ಟು ಪರಿಪೂರ್ಣತೆಯೊಂದಿಗೆ ಮತ್ತು ನಿಖರತೆಯೊಂದಿಗೆ ಈ ಯಜ್ಞಗಳನ್ನು ಭಾರತದ ಬೇರೆ ಎಲ್ಲೆಡೆಯಾದರೂ ಯಾರಾದರೂ ಮಾಡುವುದನ್ನು ನೀವು ಕಾಣುವುದು ಬಹಳ ಕಷ್ಟ.

ಪ್ರಶ್ನೆ: ಗುರುದೇವ, ’ರಾಮ್ ನಾಮ್ ಸತ್ಯ್ ಹೈ’ (ರಾಮನ ಹೆಸರು ಸತ್ಯವಾದುದು) ಎಂಬ ಶಬ್ದಗಳನ್ನು, ಒಬ್ಬ ವ್ಯಕ್ತಿಯು ಮರಣಹೊಂದಿದಾಗ ಮಾತ್ರ ಉಚ್ಛರಿಸುವುದು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಯಾಕೆಂದರೆ, ಯಾರಾದರೂ ಮರಣ ಹೊಂದಿದಾಗಲಾದರೂ ಜನರು ಅದನ್ನು ನೆನಪಿಸಿಕೊಳ್ಳಲೆಂದು. ಸಾಧಾರಣವಾಗಿ ಜನರು ಇದನ್ನು, ತಮಗೆ ಸಂಬಂಧ ಪಡದಿರುವವರು ಮರಣ ಹೊಂದಿದಾಗ ಉಚ್ಛರಿಸುತ್ತಾರೆ. ನಮ್ಮ ಸ್ವಂತದವರೊಬ್ಬರು ಅಥವಾ ನಮಗೆ ಸಂಬಂಧಪಟ್ಟವರೊಬ್ಬರು ಮರಣ ಹೊಂದಿದಾಗ, ನಾವಿದನ್ನು ನೆನಪಿಸಿಕೊಳ್ಳುವುದಿಲ್ಲ.
ಇನ್ನೊಬ್ಬರ ಮರಣದ ಸಮಯದಲ್ಲಿ ಎಲ್ಲರೂ, ದೇವರ ಹೆಸರು ಮಾತ್ರ ಇರುವ ಒಂದೇ ಒಂದು ಸತ್ಯ, ಇತರ ಎಲ್ಲವೂ ನಶ್ವರವಾದುದು ಮತ್ತು ಅವುಗಳು ಶಾಶ್ವತವಲ್ಲ ಎಂಬುದನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ಇದನ್ನು ಜನರು ತಿಳಿಯುವುದಕ್ಕಾಗಿ ಈ ಪದ್ಧತಿಯನ್ನು ಪ್ರಾರಂಭಿಸಲಾಯಿತು. ಇದು ಕೇವಲ ಉತ್ತರ ಭಾರತದಲ್ಲಿ ಮಾತ್ರ ಆಗುತ್ತದೆ, ದಕ್ಷಿಣ ಭಾರತದಲ್ಲಲ್ಲ. ದಕ್ಷಿಣದಲ್ಲಿ, ಯಾರಾದರೂ ಮರಣ ಹೊಂದಿದಾಗ ಮೌನವನ್ನಾಚರಿಸುತ್ತಾರೆ.

ಪ್ರಶ್ನೆ: ಗುರುದೇವ, ಹಲವು ಸಲ ಮನಸ್ಸು ಅಂತಃಸ್ಫುರಣೆಯ ದನಿಯನ್ನು ತುಳಿದುಹಾಕುತ್ತದೆ. ನಮ್ಮ ಅಂತಃಸ್ಫುರಣೆಯನ್ನು ವೃದ್ಧಿಪಡಿಸಿಕೊಳ್ಳಲು ನಾವೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ನಾವು ಸಂಪಾದಿಸಿಕೊಳ್ಳುವ ಮೂರು ರೀತಿಗಳ ಜ್ಞಾನವಿದೆ.
ಒಂದನೆಯ ರೀತಿಯ ಜ್ಞಾನವು ಇಂದ್ರಿಯ ಜನ್ಯ ಜ್ಞಾನ ಎಂದು ಕರೆಯಲ್ಪಡುತ್ತದೆ. ಇದು ಐದು ಇಂದ್ರಿಯಗಳಿಂದ ಬರುವ ಜ್ಞಾನ; ಕಣ್ಣುಗಳಿಂದ ನೋಡುವುದು, ಕಿವಿಗಳಿಂದ ಕೇಳುವುದು, ಮೂಗಿನಿಂದ ಆಘ್ರಾಣಿಸುವುದು, ನಾಲಿಗೆಯಿಂದ ರುಚಿ ನೋಡುವುದು ಮತ್ತು ಸ್ಪರ್ಶ. ಇದು ಅತ್ಯಂತ ಮೂಲಭೂತವಾದ ಜ್ಞಾನ.
ಇದಕ್ಕಿಂತ ಉನ್ನತವಾದುದೆಂದರೆ ಬುದ್ಧಿಯ ಮೂಲಕ ಪಡೆಯುವ ಜ್ಞಾನ. ಇದು ಬುದ್ಧಿ ಜನ್ಯ ಜ್ಞಾನ ಎಂದು ಕರೆಯಲ್ಪಡುತ್ತದೆ - ಬೌದ್ಧಿಕ ಜ್ಞಾನ.
ಇದಕ್ಕಿಂತಲೂ ಹೆಚ್ಚು ಉತ್ಕೃಷ್ಟವಾದುದೆಂದರೆ, ಒಳಗಿನಿಂದ ಬರುವ ಜ್ಞಾನ, ಪ್ರಯತ್ನವಿಲ್ಲದ ಅಂತಃಸ್ಫುರಣೆಯ ಮೂಲಕ; ಅಂದರೆ ನಮ್ಮ ಐದು ಇಂದ್ರಿಯಗಳ ಸಹಾಯವಿಲ್ಲದೆ. ಈ ಜ್ಞಾನವು ನಮ್ಮೊಳಗೆ ಆಳದಿಂದ ಅರಳುತ್ತದೆ.
ಹೀಗೆ, ಇವುಗಳು ಜ್ಞಾನದ ಮೂರು ಹಂತಗಳು. ಬುದ್ಧಿಯ ಮೂಲಕ ಗಳಿಸಿದ ಜ್ಞಾನವು ಇಂದ್ರಿಯಗಳ ಮೂಲಕ ಗಳಿಸಿದುದಕ್ಕಿಂತ ಉತ್ಕೃಷ್ಟವಾದುದು. ಅದಕ್ಕಿಂತಲೂ ಹೆಚ್ಚು ಉತ್ಕೃಷ್ಟವಾದುದು ಅಂತಃಸ್ಫುರಣೆಯಿಂದ ಗಳಿಸಿದ ಜ್ಞಾನ.
ನಾವು ಬೆಳೆದಂತೆ ಮತ್ತು ಪ್ರೌಢರಾದಂತೆ, ಜ್ಞಾನವು ಹೆಚ್ಚು ಸೂಕ್ಷ್ಮ ಮತ್ತು ಪರಿಷ್ಕೃತವಾಗುತ್ತದೆ, ಯಾಕೆಂದರೆ ಮನಸ್ಸು ಕೂಡಾ ಪ್ರೌಢವಾಗುತ್ತದೆ ಮತ್ತು ಹೆಚ್ಚು ಸೂಕ್ಷ್ಮವಾಗುತ್ತದೆ. ಮನಸ್ಸು ಕಡುಬಯಕೆಗಳು ಮತ್ತು ವಿರೋಧಗಳಿಂದ ಹೆಚ್ಚು ಹೆಚ್ಚು ಮುಕ್ತವಾಗುತ್ತದೆ ಹಾಗೂ ನಂತರ ನಮಗೆ ಸೂಕ್ಷ್ಮ ಜ್ಞಾನವು ಲಭ್ಯವಾಗುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ನಿಮ್ಮ ಭಕ್ತರಿಗೆ ಯಾವ ಆಧಾರದ ಮೇಲೆ ಫಲ ನೀಡುವಿರಿ? ಯಾಕೆಂದರೆ ನನಗೆ ಏನು ಸಿಕ್ಕಿದೆಯೋ ಅದರ ಹತ್ತು ಶೇಕಡಾ ಪಡೆಯಲು ಕೂಡಾ ನಾನು ಅರ್ಹನಲ್ಲ ಎಂದು ನನಗೆ ಅನಿಸುತ್ತದೆ. ನಿಮ್ಮ ಕಡೆಯಿಂದ ಲೆಕ್ಕಾಚಾರದಲ್ಲಿ ತಪ್ಪಾಗಿದೆಯೇ? 
ಶ್ರೀ ಶ್ರೀ ರವಿ ಶಂಕರ್: ನಾನು ಲೆಕ್ಕ ಹಾಕುವುದಿಲ್ಲ. ಲೆಕ್ಕ ಹಾಕುವ ತೊಂದರೆಯೇಕೆ? ನಾನು ಆರಾಮವಾಗಿರುತ್ತೇನೆ. ನೀನು ಕೂಡಾ ಆರಾಮವಾಗಿರುವುದು ಒಳ್ಳೆಯದು.
ನಮ್ಮ ಅರ್ಹತೆಗಿಂತ ಹೆಚ್ಚು ನಮಗೆ ಲಭಿಸಿದೆಯೆಂದು ನಮಗೆ ಅನ್ನಿಸಿದರೆ ಅದು ಒಳ್ಳೆಯದು. ಇದು ನಮ್ಮನ್ನು ಹೆಚ್ಚು ನಮ್ರವಾಗಿಸುತ್ತದೆ. ಅದು ನಮ್ಮ ತಲೆಯಿಂದ ಬೇಡಿಕೆಯನ್ನು ದೂರ ಮಾಡುತ್ತದೆ ಯಾಕೆಂದರೆ ಬೇಡಿಕೆಯು ಪ್ರೀತಿಯನ್ನು ನಾಶಗೊಳಿಸುತ್ತದೆ.
ಆದುದರಿಂದ, ನಮ್ಮ ಅರ್ಹತೆಗಿಂತ ಹೆಚ್ಚು ನಮಗೆ ಲಭಿಸಿದೆಯೆಂಬುದು ನಮಗೆ ತಿಳಿದಾಗ ನಾವು ಪ್ರೀತಿಯಲ್ಲಿರುತ್ತೇವೆ. ನಾವು ನಮ್ಮ ಜೀವನದಲ್ಲಿ ಕೃತಜ್ಞರಾಗಿರುತ್ತೇವೆ ಮತ್ತು ಇನ್ನೂ ಹೆಚ್ಚು ಬರುತ್ತದೆ. ನಾವು ಹೆಚ್ಚು ಕೃತಜ್ಞರಾದಷ್ಟೂ, ನಮ್ಮ ದಾರಿಯಲ್ಲಿ ಹೆಚ್ಚು ಬರುತ್ತದೆ. ಆದರೆ ನಾವು, "ಓ, ನಾನು ಅಷ್ಟೊಂದು ಮಾಡಿದೆ, ಆದರೆ ಸ್ವಲ್ಪ ಮಾತ್ರ ಸಿಕ್ಕಿತಷ್ಟೇ, ನಾನು ಇನ್ನೂ ಹೆಚ್ಚು ಪಡೆಯಲು ಅರ್ಹನಾಗಿರುವೆ" ಎಂದು ಹೇಳಿದರೆ, ಆ ರೀತಿಯಲ್ಲಿ ನಾವು ಯೋಚಿಸುವಾಗ ದೂರುವಿಕೆ, ಗೊಣಗುಟ್ಟುವಿಕೆ, ಕೋಪ ಮತ್ತು ನಿರಾಶೆ ಬರುತ್ತವೆ.
ಜೀವನದಲ್ಲಿ ಸಾಧಾರಣವಾಗಿ ನಮಗೇನೇ ಲಭಿಸಲಿ, ನಮ್ಮಲ್ಲಿ "ನನ್ನ ಅರ್ಹತೆಗಿಂತ ಹೆಚ್ಚು ನನಗೆ ಲಭಿಸಿದೆ" ಎಂಬ ಭಾವನೆಯಿರಬೇಕು. ಇದು ಮೊದಲನೆಯ ಅಂಶ. ಅದರರ್ಥ ನೀವು ಕೆಲಸ ಮಾಡಬಾರದೆಂದಲ್ಲ. ನೀವು ಕೆಲಸ ಮಾಡುತ್ತಿರಬೇಕು. ನೀವು ಕೆಲಸ ಮಾಡುತ್ತಿರುವಾಗ ನೀವು, "ನಾನೇನು ಮಾಡಬಲ್ಲೆನೆಂದು ನನಗನಿಸುವುದೋ ನನಗೆ ಅದಕ್ಕಿಂತ ಹೆಚ್ಚು ಸಾಮರ್ಥ್ಯವಿದೆ" ಎಂದು ಹೇಳಬೇಕು.
ಆದರೆ ಪಡೆಯುವ ಸಂದರ್ಭ ಬಂದಾಗ, ನಮ್ಮ ನಿಜವಾದ ಅರ್ಹತೆಗಿಂತಲೂ ಹೆಚ್ಚನ್ನು ನಾವು ಪಡೆದಿರುವೆವೆಂಬುದು ನಮಗೆ ತಿಳಿದಿರಬೇಕು. ಅದು ನಮ್ಮನ್ನು ಒಂದು ಉನ್ನತವಾದ ಸ್ತರಕ್ಕೆ ಕರೆದೊಯ್ಯುವುದು, ವಿಶೇಷವಾಗಿ ಆಧ್ಯಾತ್ಮದಲ್ಲಿ. ಇದು ನಿಯಮವಾಗಿರಬೇಕು. ಮಾನವ ಹಕ್ಕುಗಳ ವಿಷಯಕ್ಕೆ ಬಂದಾಗಲೂ ಅದೇ ನಿಯಮವೆಂದು ನಾನು ಹೇಳುವುದಿಲ್ಲ. ಅಲ್ಲಿ ನಿಮ್ಮ ಹಕ್ಕುಗಳು ಗೌರವಿಸಲ್ಪಡದಿದ್ದರೆ, ಆಗ ನೀವು ನಿಮ್ಮ ಮಾನವ ಹಕ್ಕುಗಳನ್ನು ಕೇಳಬೇಕು. ಆದರೆ ನಿಮ್ಮ ಆಧ್ಯಾತ್ಮಿಕ ವಿಕಾಸಕ್ಕೆ ಬಂದಾಗ, "ದೇವರು ನನಗೆ ನನ್ನ ಅರ್ಹತೆಗಿಂತಲೂ ಹೆಚ್ಚನ್ನು ನೀಡಿದ್ದಾರೆ" ಎಂಬುದು ನಿಮಗೆ ತಿಳಿದಿರಬೇಕು. ದೈವತ್ವದ ತೀರ್ಮಾನ ಮತ್ತು ನ್ಯಾಯದಲ್ಲಿ ನಿಮಗೆ ನಂಬಿಕೆಯಿದೆಯೆಂಬುದನ್ನು ಅದು ಹೇಳುತ್ತದೆ.

ಪ್ರಶ್ನೆ: ಗುರುದೇವ, ಆರ್ಟ್ ಆಫ್ ಲಿವಿಂಗ್ ಈಗ ಬಹಳ ಪ್ರಖ್ಯಾತವಾಗಿದೆ, ಆದರೂ ನಮ್ಮ ಹೆತ್ತವರನ್ನು ಒಪ್ಪಿಸಲು ಕೆಲವೊಮ್ಮೆ ನಾವು ಬಹಳ ಕಷ್ಟವನ್ನು ಎದುರಿಸುತ್ತೇವೆ. ನಿಮ್ಮ ಸಮಯದಲ್ಲಿ, ನೀವು ನಿಮ್ಮ ಹೆತ್ತವರ ಸಮ್ಮತಿಯನ್ನು ಗೆದ್ದದ್ದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹೌದು. ಅದಕ್ಕಾಗಿ ನಾನು ಬಹಳ ಕಷ್ಟಪಡಬೇಕಾಯಿತು
ನಾನು ಗಡ್ಡವನ್ನು ಯಾಕೆ ಬೆಳೆಸಿದ್ದೇನೆಂಬುದು ನಿಮಗೆ ಗೊತ್ತೇ? ಇಲ್ಲವೇ?
ದಿಲ್ಲಿಯಲ್ಲಿ, ನಾನು ಕಲಿಸಲು ಪ್ರಾರಂಭಿಸಿದಾಗ, ಹಲವಾರು ಪ್ರಾಧ್ಯಾಪಕರು ಬರುತ್ತಿದ್ದರು, ಯಾಕೆಂದರೆ ಅವರು ನನ್ನ ಹೆಸರನ್ನು ಮತ್ತು ನಾನು ಧ್ಯಾನ ಕಲಿಸುತ್ತಿದ್ದೆನೆಂಬುದನ್ನು ಕೇಳಿದ್ದರು. ಆದರೆ ಅವರು ನಿಗದಿಪಡಿಸಿದ ಸ್ಥಳಕ್ಕೆ ಬಂದಾಗ ಅವರು, "ಗುರುದೇವ ಎಲ್ಲಿದ್ದಾರೆ?" ಎಂದು ಕೇಳುತ್ತಿದ್ದರು. ನಾನು ಹೇಳುತ್ತಿದ್ದೆ, "ನಾನು ಗುರುದೇವ."
ನಾನೊಬ್ಬ ಚಿಕ್ಕ ೧೯ ವರ್ಷ ವಯಸ್ಸಿನ ಹುಡುಗನಂತೆ ಕಾಣಿಸುತ್ತಿದ್ದೆ ಮತ್ತು ಇದರಿಂದಾಗಿ ಅವರು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ನಾನು ಮಾತನಾಡುವಾಗ ಅವರು ಇಲ್ಲಿ ಅಲ್ಲಿ ನೋಡುತ್ತಿದ್ದರು ಮತ್ತು ಅವರು, "ಓ, ಇವನೊಬ್ಬ ಚಿಕ್ಕ ಹುಡುಗ, ಏನನ್ನೋ ಮಾತನಾಡುತ್ತಿದ್ದಾನೆ" ಎಂದು ಯೋಚಿಸುತ್ತಿದ್ದರು. ಅವರು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಮತ್ತು ನನ್ನ ಕಡೆಗೆ ಗಮನವನ್ನೇ ಕೊಡುತ್ತಿರಲಿಲ್ಲ.
ಕೆಲವು ಮಂದಿ ಹೇಳುತ್ತಿದ್ದರು, "ಓ, ನೀವಾ ಗುರುದೇವ" ಮತ್ತು ಅವರು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಳ್ಳುತ್ತಿದ್ದರು.
ಆದುದರಿಂದ ನಂತರ ಸ್ವಲ್ಪ ವಯಸ್ಸಾಗಿರುವಂತೆ ಮತ್ತು ಪ್ರೌಢನಂತೆ ಕಾಣುವುದಕ್ಕಾಗಿ ನಾನು ಗಡ್ಡ ಬೆಳೆಸಲು ಶುರು ಮಾಡಿದೆ. ನಾನು ಬೆಂಗಳೂರಿಗೆ ಬಂದಾಗ, ನನಗೆ ಗಡ್ಡವಿರುವುದನ್ನು ನೋಡಿ ನನ್ನ ತಾಯಿಗೆ ಸಂತೋಷವಾಗಲಿಲ್ಲ. ಅವರು ಭಾನುವಿನಲ್ಲಿ ಹೇಳುತ್ತಿದ್ದರು, "ನೀನು ಅವನಲ್ಲಿ ಗಡ್ಡ ಬೋಳಿಸುವಂತೆ ಹೇಳು", ಮತ್ತು ಭಾನು ಉತ್ತರಿಸುತ್ತಿದ್ದಳು, "ಇಲ್ಲ! ನಾನು ಹೇಳುವುದಿಲ್ಲ, ನೀನು ಅವನಿಗೆ ಹೇಳು." ಹೀಗೆ ಅವರಿಬ್ಬರೂ ಸಂಭಾಷಣೆ ಮಾಡುತ್ತಿದ್ದರು ಮತ್ತು ನಾನಿದನ್ನು ಪಕ್ಕದ ಕೋಣೆಯಿಂದ ಕೇಳಿಸಿಕೊಳ್ಳುತ್ತಿದ್ದೆ (ನಗು).
ಅವರು ಹೇಳುತ್ತಿದ್ದರು, "ಅವನಿಗೆ ಏನನ್ನೂ ಹೇಳಬೇಡ, ಅವನು ಬಹಳ ಸಮಯದ ಬಳಿಕ ಮನೆಗೆ ಹಿಂತಿರುಗಿ ಬಂದಿದ್ದಾನೆ. ಅವನಿಗೆ ಅಸಮಾಧಾನ ಮಾಡಬೇಡ. ಅವನೇನು ಮಾಡಲು ಬಯಸುವನೋ ಅದನ್ನು ಮಾಡಲಿ ಬಿಡು." ಹೀಗೆ, ಅವರಿಬ್ಬರಿಗೂ ಆ ಸಮಯದಲ್ಲಿ ನನಗೆ ಗಡ್ದವಿರುವುದು ಇಷ್ಟವಿರಲಿಲ್ಲ. ಆದರೆ ನಾನದನ್ನು ಇಟ್ಟುಕೊಳ್ಳಬೇಕಿತ್ತು, ಇಲ್ಲದಿದ್ದರೆ ಜನರು ನನ್ನನ್ನು ಒಬ್ಬ ಶಿಕ್ಷಕನಾಗುವ ವಯಸ್ಸಿನವನು ಎಂದು ಪರಿಗಣಿಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು, "ಓ, ಅವನೊಬ್ಬ ಚಿಕ್ಕ ಹುಡುಗ." ನಾನು ಹೇಗಿದ್ದರೂ ಮೊದಲಿನಿಂದಲೇ ಒಂದು ಮಗುವಿನಂತಿದ್ದೆ (ನಗು). ಆದುದರಿಂದ ನಾನೊಂದು ಗಡ್ಡವನ್ನು ಇಟ್ಟುಕೊಳ್ಳಬೇಕಾಯಿತು, ಮತ್ತು ಒಮ್ಮೆ ನಾನದನ್ನು ಇಟ್ಟುಕೊಂಡ ಬಳಿಕ, ನಾನದನ್ನು ಯಾವತ್ತಿಗೂ ಇಟ್ಟುಕೊಂಡೆ.
ಇದು ಇರುವ ಕಥೆ.

ಪ್ರಶ್ನೆ: ಗುರುದೇವ, ನಮ್ಮ ಹತ್ತು ಇಂದ್ರಿಯಗಳ ಮೇಲೆ ವಿಜಯವನ್ನು ಗಳಿಸುವುದು ಹೇಗೆ (ಐದು ಕರ್ಮೇಂದ್ರಿಯಗಳು: ಬಾಯಿ, ಕೈಗಳು, ಕಾಲುಗಳು, ವಿಸರ್ಜನಾಂಗ ಮತ್ತು ಜನನೇಂದ್ರಿಯಗಳು ಹಾಗೂ ಐದು ಜ್ಞಾನೇಂದ್ರಿಯಗಳು: ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ - ಇವುಗಳನ್ನು ಉದ್ದೇಶಿಸಿ)?
ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ನಿನ್ನನ್ನು ಕಾರ್ಯನಿರತನನ್ನಾಗಿರಿಸು. ನೀನು ನಿನ್ನನ್ನು ಆಲಸಿಯಾಗಿರಿಸಿದರೆ, ಆಗ ನಿನ್ನ ಇಂದ್ರಿಯಗಳು ನಿನ್ನನ್ನು ಸ್ವಾಧೀನಪಡಿಸುವುವು. ನಿನ್ನನ್ನು ಕಾರ್ಯನಿರತನನ್ನಾಗಿರಿಸು, ಅದು ಮುಖ್ಯವಾದುದು. ಜೀವನದಲ್ಲಿ ಒಂದು ದೊಡ್ಡ ಗುರಿಯನ್ನಿರಿಸು, ಆಗ ನಿನಗೆ ಈ ಸಮಸ್ಯೆಯಿರಲಾರದು.
ಎರಡನೆಯದಾಗಿ, ನಿನ್ನಲ್ಲಿ ತಾಳ್ಮೆಯಿರಬೇಕು ಮತ್ತು ನೀನು ಏನನ್ನು ತಿನ್ನುವೆಯೋ, ಕುಡಿವೆಯೋ ಅದರ ಮೇಲೆ ನಿಗಾ ವಹಿಸು.

ಪ್ರಶ್ನೆ: ಗುರುದೇವ, ಒಂದು ಕರ್ಮದ ಅಚ್ಚು ನಮ್ಮ ಮನಸ್ಸಿನಲ್ಲಿ ಒಮ್ಮೆ ಮೂಡಿದರೆ, ನಂತರ ಅದನ್ನು ತೆಗೆದುಹಾಕಲು, ’ನಾನು ಈ ಮನಸ್ಸಲ್ಲ ಮತ್ತು ನಾನು ಏನಾಗಿರುವೆನೋ ಅದನ್ನು ಮುಟ್ಟಲು ಅಥವಾ ಅದರ ಮೇಲೆ ಪ್ರಭಾವ ಬೀರಲು ಕರ್ಮಕ್ಕೆ ಸಾಧ್ಯವಿಲ್ಲ’  ಎಂದು ತಿಳಿಯುವ ಅನುಭವವಿದ್ದರೆ ಸಾಕೇ ಅಥವಾ ಇದನ್ನು ತಿಳಿದ ಬಳಿಕ ಮರುಗಿ ನನ್ನನ್ನು ನಾನೇ ತಿದ್ದಿಕೊಳ್ಳುವುದರ ಅವಶ್ಯಕತೆಯಿದೆಯೇ?
ಶ್ರೀ ಶ್ರೀ ರವಿ ಶಂಕರ್: ಇಲ್ಲ, ಇದನ್ನು ತಿಳಿದರೆ ಅಷ್ಟೇ ಸಾಕು. ನೀನು ಕ್ಷಮೆ ಕೇಳಬೇಕು ಮತ್ತು ನಿನ್ನನ್ನು ನೀನು ತಿದ್ದಿಕೊಳ್ಳಬೇಕು, ಆದರೆ ಇದನ್ನು ತಿಳಿಯುವುದು ಕೂಡಾ ಬಹಳ ಮುಖ್ಯವಾದುದು.

ಪ್ರಶ್ನೆ: ಭಗವದ್ಗೀತೆಯಲ್ಲಿ, ಕೃಷ್ಣ ಪರಮಾತ್ಮನು ಅರ್ಜುನನಲ್ಲಿ, "ಆದಿತ್ಯರಲ್ಲಿ ನಾನು ವಿಷ್ಣು, ವೇದಗಳಲ್ಲಿ ನಾನು ಸಾಮವೇದ, ದೇವತೆಗಳಲ್ಲಿ ನಾನು ಇಂದ್ರ ಮತ್ತು ರುದ್ರರಲ್ಲಿ ನಾನು ಶಂಕರ" ಎಂದು ಹೇಳುತ್ತಾನೆ. ಅವನು ಯಾಕೆ ಒಂದರ ಮೇಲೆ ಇನ್ನೊಂದಕ್ಕಿಂತ ಹೆಚ್ಚು ಆದ್ಯತೆಯನ್ನು ಕೊಡುತ್ತಾನೆ? 
ಶ್ರೀ ಶ್ರೀ ರವಿ ಶಂಕರ್: ಅವನು ಯಾವತ್ತೂ, "ನಾನು ಶ್ರೇಷ್ಠನು" ಎಂದು ಹೇಳಿದನು. ಆದುದರಿಂದ ಅವನು ಶ್ರೇಷ್ಠವಾದುದರ ಕಡೆಗೆ ಹೋಗುತ್ತಾನೆ. ವೇದಗಳಲ್ಲಿ ಸಾಮವೇದವನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ ಯಾಕೆಂದರೆ ಅದು ಸಂಗೀತದಿಂದ ಕೂಡಿದುದು. ಅದು ಎಲ್ಲಾ ಸಂಗೀತ, ತಾಳ, ಪ್ರೇಮ ಮತ್ತು ಭಕ್ತಿಗಳ ತಾಯಿಯಾಗಿದೆ. ಆದುದರಿಂದ ಕೃಷ್ಣನು ಒಂದರ ಮೇಲೆ ಇನ್ನೊಂದಕ್ಕಿಂತ ಹೆಚ್ಚು ಆದ್ಯತೆಯನ್ನು ನೀಡುತ್ತಾನೆ.
ಇವುಗಳು ಅವನ ಆದ್ಯತೆಗಳು. ಇತರ ವಿಷಯಗಳು ಕಡಿಮೆ ಪ್ರಾಮುಖ್ಯತೆಯುಳ್ಳವು ಅಥವಾ ಒಳ್ಳೆಯದಲ್ಲವೆಂದು ಅವನು ಹೇಳುವುದಿಲ್ಲ. ಇಲ್ಲ, ಇಲ್ಲವೇ ಇಲ್ಲ! ಅವನು ಕೇವಲ, "ನಾನು ಇದು" ಎಂದು ಹೇಳುತ್ತಾನೆ. ಅದು ಹೇಗೆಂದರೆ, ಕೆಲವೊಮ್ಮೆ ನೀವು ಒಂದು ಹೋಟೆಲಿಗೆ ಹೋಗಿ ಕೆಲವು ತಿಂಡಿಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು "ನನಗಿದು ಇಷ್ಟ" ಎಂದು ಹೇಳುವ ಹಾಗೆ. ಅದರರ್ಥ ನಿಮಗೆ ಇತರ ತಿಂಡಿಗಳು ಇಷ್ಟವಿಲ್ಲವೆಂದಲ್ಲ.