ಭಾನುವಾರ, ಮೇ 27, 2012

ಬದುಕಿಗೆ ಗುರಿಯೊ೦ದಿರಬೇಕು


27
2012............................... ಬೆಂಗಳೂರು ಆಶ್ರಮ
May

ಬುದ್ಧಿವಂತರ ಲಕ್ಷಣವೆಂದರೆ ಅವರು ಕೆಟ್ಟ ಜನರಿಂದಲೂ ಒಳ್ಳೆಯ ಗುಣಗಳನ್ನು ಮೇಲೆ ತರುತ್ತಾರೆ. ಮೂರ್ಖರ ಲಕ್ಷಣವೆಂದರೆ ಅವರು ಸಂತರಲ್ಲೂ ಅಪರಾಧಿಯನ್ನು ಕಾಣುತ್ತಾರೆ. ಒಳ್ಳೆಯ ಜನರಲ್ಲೂ ಅವರು ತಪ್ಪು ಕಂಡುಹುಡುಕುತ್ತಾರೆ. ಬುದ್ಧಿವಂತರು ಒಬ್ಬ ಅಪರಾಧಿಯಲ್ಲೂ ವಾಲ್ಮೀಕಿಯನ್ನು (ಸಂತನಾದ ಒಬ್ಬ ದರೋಡೆಕೋರ ಮತ್ತು ರಾಮಾಯಣದ ಲೇಖಕ) ಕಾಣುತ್ತಾರೆ. ನಿಮ್ಮನ್ನು ಸ್ವತಃ ಪರೀಕ್ಷಿಸಿಕೊಳ್ಳಿ - ನಿಮ್ಮಲ್ಲಿ ಎಷ್ಟು ಬುದ್ಧಿವಂತಿಕೆಯಿದೆ ಮತ್ತು ಎಷ್ಟು ಮೂರ್ಖತನವಿದೆ, ಎಷ್ಟು ಸಲ ಇತರರಲ್ಲಿನ ಒಳ್ಳೆಯ ಗುಣಗಳನ್ನು ನೀವು ಹೊರತಂದಿದ್ದೀರಿ ಮತ್ತು ಎಷ್ಟು ಸಲ ನೀವು ಅವರಲ್ಲಿ ತಪ್ಪು ಕಂಡುಹುಡುಕಿದ್ದೀರಿ ಎಂಬುದನ್ನು ನೋಡಿ.
ಪ್ರಶ್ನೆ: ದೇವರು ಹುಟ್ಟಿದ್ದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅವನು ಹುಟ್ಟಿದ್ದರೆ, ಆಗ ಅವನು ದೇವರಲ್ಲ. ದೇವರೆಂದರೆ, ಯಾರು ಎಂದೂ ಹುಟ್ಟಿಲ್ಲವೋ ಮತ್ತು ಎಂದಿಗೂ ಸಾಯುವುದಿಲ್ಲವೋ ಅವನು.
ಪ್ರಶ್ನೆ: ನನ್ನ ಮಗನು ಹಲವಾರು ಶಿಬಿರಗಳನ್ನು ಮಾಡಿದ್ದಾನೆ, ಆದರೆ ಅವನು ಬದಲಾಗಲು ತಯಾರಿಲ್ಲ. ಪದೇ ಪದೇ ಹೇಳಿದರೂ ಅವನು ಕ್ರಿಯೆ ಮಾಡುವುದಿಲ್ಲ. ನಾನು ಏನು ಮಾಡಲಿ?
ಶ್ರೀ ಶ್ರೀ ರವಿಶಂಕರ್:
ಹೌದು, ಹದಿಹರೆಯದ ಕಾಲದಲ್ಲಿ ಮಕ್ಕಳನ್ನು ಸುಧಾರಿಸುವುದು ಸ್ವಲ್ಪ ಕಷ್ಟ. ತಾಳ್ಮೆಯಿಂದಿರು. ಯಾವುದೇ ಬದಲಾವಣೆಯೂ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಈ ಎಲ್ಲಾ ಶಿಬಿರಗಳನ್ನು ಮಾಡಿದ ಬಳಿಕ, ಅವನಲ್ಲಿ ಖಂಡಿತವಾಗಿ ಸ್ವಲ್ಪ ಬದಲಾವಣೆಯಾಗಿರುತ್ತದೆ.
ಪ್ರಶ್ನೆ: ಮಕ್ಕಳಿಗಾಗಿ ಆರ್ಟ್ ಎಕ್ಸೆಲ್ ಮತ್ತು ಯೆಸ್ ಶಿಬಿರಗಳನ್ನು ಆಯೋಜಿಸಿದ ನಂತರ, ತಮ್ಮ ಮಕ್ಕಳು, ಅವರಿಗೆ ಕಲಿಸಲಾದವುಗಳನ್ನು ಅಭ್ಯಾಸ ಮಾಡುತ್ತಿಲ್ಲವೆಂಬ ದೂರು ಅವರ ಹೆತ್ತವರಿಂದ ನಮಗೆ ಸಿಗುತ್ತಿದೆ. ಇದನ್ನು ನಾವು ಸಂಬೋಧಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಆಗಾಗ್ಗೆ ಅನುಸರಿಸುವ ತರಗತಿಗಳನ್ನು (ಫಾಲೋ ಅಪ್ ಸೆಶನ್) ನಡೆಸಬೇಕು. ಅವರು ಆಟಗಳನ್ನಾಡುವಂತೆ ಮಾಡಿ. ನಿಮ್ಮ ಕಡೆಯಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಹಾಕಿ. ಒಮ್ಮೆ ನೀವು ಒಂದು ಬೀಜವನ್ನು ಬಿತ್ತಿದ ಮೇಲೆ, ಆ ಬೀಜವು ಸರಿಯಾಗಿ ಬೆಳೆಯುತ್ತಿದೆಯೇ ಇಲ್ಲವೇ ಎಂಬುದನ್ನು ನೀವು ಪರೀಕ್ಷಿಸುವುದಿಲ್ಲವೇ?
ಪ್ರಶ್ನೆ: ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ಪವಾಡಗಳಾಗಲು ಸಾಧ್ಯವೇ?
ಶ್ರೀ ಶ್ರೀ ರವಿಶಂಕರ್:
ಹೌದು. ಬಹಳಷ್ಟು ಆಗುತ್ತವೆ.  ಹಲವಾರು ಜನರು ಅಂತಹ ಪವಾಡಗಳನ್ನು ತಮ್ಮ ಜೀವನದಲ್ಲಿ ಅನುಭವಿಸಿದ್ದಾರೆ.
ಪ್ರಶ್ನೆ: ಹತ್ತನೆಯ ತರಗತಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶಗಳು ಪ್ರಕಟಿಸಲ್ಪಟ್ಟಿವೆ. ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದವು. ವಿದ್ಯಾರ್ಥಿಗಳಿಗೆ ನೀವು ಯಾವ ಸಂದೇಶವನ್ನು ಕೊಡಲು ಬಯಸುತ್ತೀರಿ?
ಶ್ರೀ ಶ್ರೀ ರವಿಶಂಕರ್:
ಯಾರು ತೇರ್ಗಡೆಯಾಗಿದ್ದೀರೋ ಅವರು ಹೆಚ್ಚಿನ ಉತ್ಸಾಹದೊಂದಿಗೆ ಮುಂದೆ ಸಾಗಿ.  ತೇರ್ಗಡೆಯಾಗಿಲ್ಲದವರು, ನಿಮ್ಮ ಸಂತೋಷ ಮತ್ತು ಉತ್ಸಾಹಗಳನ್ನು ಕಳೆದುಕೊಳ್ಳಬೇಡಿ. ಒಂದು ದೊಡ್ಡದನ್ನೇನೂ ನೀವು ಕಳೆದುಕೊಂಡಿಲ್ಲ.
ಕೇವಲ ಒಂದು ಪರೀಕ್ಷೆಯನ್ನು ಪಾಸು ಮಾಡದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಮಾನಸಿಕವಾಗಿ ತುಂಬಾ ಕಂಗೆಡುತ್ತಾರೆ. ಒಂದು ಪರೀಕ್ಷೆಯನ್ನು ಪಾಸು ಮಾಡದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಹ ಹಲವಾರು ಘಟನೆಗಳಾಗಿವೆ.
ತಮ್ಮ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಂತಹ ವಿದ್ಯಾರ್ಥಿಗಳಿಗೆ ನನ್ನ ಸಂದೇಶವೇನೆಂದರೆ, ಅದೊಂದು ದೊಡ್ಡ ಸಂಗತಿಯಲ್ಲ. ಪ್ರತಿಯೊಂದು ಯಶಸ್ಸಿನ ಹಿಂದೆಯೂ ಅಲ್ಲೊಂದು ಸೋಲು ಅಡಗಿರುತ್ತದೆ ಮತ್ತು ಪ್ರತಿಯೊಂದು ಸೋಲಿನ ಹಿಂದೆಯೂ ಅಲ್ಲೊಂದು ಯಶಸ್ಸು ಅಡಗಿರುತ್ತದೆ. ಆದುದರಿಂದ, ಚಿಂತಿಸಬೇಡಿ, ಪುನಃ ಓದಲು ಶುರು ಮಾಡಿ ಮತ್ತು ಮುಂದೆ ಸಾಗಿ. ನೀವೊಂದು ವರ್ಷವನ್ನು ಕಳೆದುಕೊಂಡಿದ್ದೀರೆಂದು ಯೋಚಿಸಬೇಡಿ; ಅದೊಂದು ದೊಡ್ಡ ಸಂಗತಿಯಲ್ಲ. ಕೇವಲ ಒಂದು ಪರೀಕ್ಷೆಯನ್ನು ಪಾಸು ಮಾಡದಿರುವುದರಿಂದ, ನೀವು ಸಮಯವನ್ನು ವ್ಯರ್ಥ ಮಾಡಿದ್ದೀರೆಂದು ಯೋಚಿಸಬೇಡಿ. ಜೀವನವೇ ಒಂದು ಕಲಿಯುವ ಪ್ರಕ್ರಿಯೆ, ಒಂದು ಕಲೆ. ಜೀವನದ ಪ್ರತಿಯೊಂದು ಹಂತದಲ್ಲೂ, ಗೆಲುವು ಹಾಗೂ ಸೋಲುಗಳ ಮೂಲಕ ನಾವು ಪಾಠಗಳನ್ನು ಕಲಿಯುತ್ತೇವೆ. ಗೆಲುವು ಮತ್ತು ಸೋಲುಗಳಿಂದ  ಕಲಿಯಿರಿ, ನಿಮ್ಮ ಮನಸ್ಸನ್ನು ಸಮತೋಲನವಾಗಿರಿಸಿಕೊಳ್ಳಿ, ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳಬೇಡಿ ಮತ್ತು ಮುಂದೆ ಸಾಗುತ್ತಾ ಇರಿ.
ಹಲವಾರು ಕೈಗಾರಿಕೋದ್ಯಮಿಗಳಿದ್ದಾರೆ, ಅವರು ರಾಂಕ್ ಪಡೆದವರಲ್ಲ. ಎರಡನೆಯ ತರಗತಿಯಲ್ಲಿ ಅನುತ್ತೀರ್ಣರಾದ ಕೈಗಾರಿಕೋದ್ಯಮಿಗಳಿದ್ದಾರೆ, ಆದರೆ ಅವರು ದೊಡ್ಡ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ಸೂರತ್ (ಗುಜರಾತ್, ಭಾರತ) ಗೆ ಭೇಟಿ ನೀಡಿದಾಗ, ಎಂಟು ಉದ್ಯಮಿಗಳು - ಎಲ್ಲರೂ ಸಹೋದರರು, ನನ್ನನ್ನು ಪಾದಪೂಜೆಗೆ ಆಹ್ವಾನಿಸಿದರು. ತಮ್ಮ ಕುಟುಂಬದಲ್ಲಿ ಯಾರೂ ಎಂಟನೆಯ ತರಗತಿಯಾಚೆಗೆ ಓದಿಲ್ಲವೆಂದು ಅವರಂದರು. ಅವರಲ್ಲಿ ಹೆಚ್ಚಿನವರು ಎರಡರಿಂದ ನಾಲ್ಕನೆಯ ತರಗತಿಯ ವರೆಗೆ ಓದಿದ್ದರು. ಹೀಗಿದ್ದರೂ, ಪ್ರಪಂಚದಲ್ಲಿ ಮಾರಾಟವಾಗುವ ವಜ್ರಗಳ ಪೈಕಿ ಹತ್ತರಲ್ಲಿ ಒಂಭತ್ತು ಸೂರತ್ತಿನಿಂದ ಉತ್ಪತ್ತಿಯಾಗುತ್ತವೆಯೆಂದು ಅವರು ಹೇಳಿದರು. ಅವರು ಸರಿಯಾಗಿ ಓದಲಿಲ್ಲ, ಆದರೆ ದೊಡ್ಡ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ, ಸಾವಿರಾರು ಜನರಿಗೆ ನೌಕರಿಯನ್ನು ನೀಡಿದ್ದಾರೆ ಮತ್ತು ಸಂತೋಷವಾಗಿ ಜೀವಿಸುತ್ತಿದ್ದಾರೆ. ಆದುದರಿಂದ, ಕೇವಲ ಒಂದು ಪರೀಕ್ಷೆ ಪಾಸಾಗದಿರುವುದಕ್ಕಾಗಿ ಖಿನ್ನತೆಗೊಳಗಾಗಬೇಡಿ ಮತ್ತು ಯಾವುದೇ ಅತಿರೇಕದ ಹೆಜ್ಜೆಯನ್ನು ತೆಗೆದುಕೊಳ್ಳಬೇಡಿ.
ಕಳೆದ ಕೆಲವು ತಿಂಗಳುಗಳಲ್ಲಿ ನಾನು ಇಪ್ಪತ್ತು ನಗರಗಳಿಗೆ ಹಾಗೂ ಹದಿನಾಲ್ಕು ದೇಶಗಳಿಗೆ ಹೋಗಿದ್ದೇನೆ. ನಾನು ಜಪಾನಿಗೆ ಹೋದಾಗ, ಅಲ್ಲಿನ ಪ್ರಧಾನ ಮಂತ್ರಿಯು, ಜಪಾನಿನಲ್ಲಿ ಪ್ರತಿವರ್ಷವೂ ೩೦,೦೦೦ ಯುವ ಜನರು ಆತ್ಮಹತ್ಯೆ ಮಾಡುತ್ತಾರೆಂದು ನನ್ನಲ್ಲಿ ಹೇಳಿದರು. ಜನರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಹಣವಿಲ್ಲದೆಯಲ್ಲ. ಎಲ್ಲರ ಬಳಿಯೂ ಧಾರಾಳವಾಗಿ ಹಣವಿದೆ. ಎಲ್ಲರಲ್ಲೂ ಟಿವಿಗಳು, ವಾಹನಗಳು ಮತ್ತು ಸಾಕಷ್ಟು ಸಂಪತ್ತುಗಳಿವೆ. ಆದರೂ ಅಂತಹ ಒಂದು ದೇಶದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರು ಬಡವರಾಗಿರುತ್ತಿದ್ದರೆ ಇನ್ನೊಂದು ವಿಷಯವಾಗಿರುತ್ತಿತ್ತು. ಇಲ್ಲಿನ ಸಂಗತಿ ಅದಲ್ಲ. ಶ್ರೀಮಂತ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 
ಆದುದರಿಂದ ಅವರಂದರು, ಕೇವಲ ನನಗೆ ಮಾತ್ರ ಇದರ ಬಗ್ಗೆ ಏನಾದರೂ ಮಾಡಲು ಸಾಧ್ಯವೆಂದು. ನಾನಂದೆ, ಅಲ್ಲಿ ಸಂತೋಷದ ಅಲೆಯನ್ನು ತರಲಿರುವ ಮಾರ್ಗವೆಂದರೆ ಭಾರತದ ಆಧ್ಯಾತ್ಮಿಕ ಜ್ಞಾನವೊಂದೇ ಎಂದು. ಆದುದರಿಂದ ನಾವು ದೇಶದ ಹಲವಾರು ಭಾಗಗಳಲ್ಲಿ ಪಾರ್ಟ್ ೧ ಮತ್ತು ನವ ಚೇತನಾ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಅದೇ ರೀತಿಯಲ್ಲಿ ಹಲವಾರು ದೇಶಗಳಲ್ಲಿ ಇಂತಹ ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಅದು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿಲ್ಲ ಯಾಕೆಂದರೆ, ಆಧ್ಯಾತ್ಮದಲ್ಲಿ ಮತ್ತು ಮಾನವ ಮೌಲ್ಯಗಳಲ್ಲಿರುವ ಆಸಕ್ತಿಯ ಬೀಜವು ಜನರಲ್ಲಿದೆ. ಹೀಗಿದ್ದರೂ ಅದನ್ನು ಕಾಪಾಡುವುದು ಮತ್ತು ಅದು ಬೆಳೆಯುವಂತೆ ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಇರಿ. ಅವರು ಪರೀಕ್ಷೆಗಳಲ್ಲಿ ಸೋತರೆ ಅದೊಂದು ದೊಡ್ಡ ವಿಷಯವಲ್ಲ. ನಾವು ಚೆನ್ನಾಗಿ ಓದಬೇಕು, ಓದಿನಲ್ಲಿ ಆಸಕ್ತಿಯಿರಿಸಬೇಕು ಮತ್ತು ಜೀವನದಲ್ಲಿ ಸಮೃದ್ಧಿಯನ್ನು ಹೊಂದಬೇಕು.
ಪ್ರಶ್ನೆ: ನಾನು ಕಳೆದ ತಿಂಗಳು ನನ್ನ ತಾಯಿಯನ್ನು ಕಳೆದುಕೊಂಡೆ ಮತ್ತು ನೀವು ಹೇಳಿದ್ದೀರಿ ೨೦೧೨ ಎಲ್ಲರಿಗೂ ಒಳ್ಳೆಯದೆಂದು. ಇಲ್ಲಿರುವ ಒಳ್ಳೆಯ ಸಂಗತಿಯೇನು? ನನಗೆ ಅರ್ಥವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಜೀವನ ಮತ್ತು ಮೃತ್ಯು ಎಂಬುದು ತಪ್ಪಿಸಿಕೊಳ್ಳಲಾಗದಂತಹುದು. ಸಾವೆಂಬುದು ತಪ್ಪಿಸಿಕೊಳ್ಳಲಾಗದಂತಹುದು. ಕೆಲವೊಮ್ಮೆ ಅದು ಸ್ವಲ್ಪ ಬೇಗನೇ ಬರುತ್ತದೆ ಮತ್ತು ಅದು ಆಗುವಾಗಲೆಲ್ಲಾ, ಖಂಡಿತವಾಗಿಯೂ ಅದು ನೋವುಂಟುಮಾಡುತ್ತದೆ. ಆದುದರಿಂದ, ನಾವು ದುಃಖದಲ್ಲಿರುವಾಗ, ಒಂದು ಕಾರಣವನ್ನು ಹುಡುಕಲು ಪ್ರಯತ್ನಿಸುವುದರ ಬದಲು, ಪ್ರಾರ್ಥನೆ ಮಾಡಿಕೊಂಡು ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಅತ್ಯುತ್ತಮವಾದುದು. "ಇದು ಯಾಕಾಯಿತು? ದೇವರು ಯಾಕೆ ನನಗೆ ಈ ರೀತಿ ಮಾಡಿದರು? ದೇವರು ಯಾಕೆ ಕ್ರೂರಿಯಾಗಿದ್ದಾರೆ?" ಈ ರೀತಿಯ ಪ್ರಶ್ನೆಗಳಿಗೆ ಯಾವುದೇ ಉತ್ತರಗಳಿಲ್ಲ ಮತ್ತು ಯಾವುದೇ ಅರ್ಥವೂ ಇಲ್ಲ. ಸೃಷ್ಟಿಯಲ್ಲಿ ಎಲ್ಲಾ ಸಮಯದಲ್ಲೂ ಇಂತಹ ವಿಷಯಗಳು ಆಗುತ್ತಲೇ ಇರುತ್ತವೆ.
ಅತೀವ ಅಗತ್ಯವಿರುವ ಇಂತಹ ಕ್ಷಣದಲ್ಲಿ ನಂಬಿಕೆಯನ್ನು ದೃಢಗೊಳಿಸುವ ಬದಲು, ನಾವು ನಮ್ಮ ಸ್ವಂತ ನಂಬಿಕೆಯನ್ನು ಪ್ರಶ್ನಿಸಿದರೆ, ಅದು ನಮ್ಮನ್ನು ಎಲ್ಲಿಗೂ ಮುನ್ನಡೆಸುವುದಿಲ್ಲ. ಅದು ನಮ್ಮನ್ನು ಕೇವಲ ಖಿನ್ನತೆಯ ಕಡೆಗೆ, ಹೆಚ್ಚಿನ ಕಿರಿಕಿರಿಯೆಡೆಗೆ, ಪ್ರಕ್ಷುಬ್ಧತೆಯೆಡೆಗೆ ಮತ್ತು ಅಶಾಂತಿಯೆಡೆಗೆ  ಒಯ್ಯಬಹುದು. ಅದರ ಬದಲು, ಇದನ್ನು, ತಪ್ಪಿಸಲು ಸಾಧ್ಯವಿಲ್ಲದ ಒಂದು ಸಂಗತಿಯೆಂದು ಸ್ವೀಕರಿಸು.
ಪ್ರಶ್ನೆ: ನನಗೆ ನಿಮ್ಮ ಮೇಲೆ ಒಂದು ದೂರಿದೆ. ನಾನೇನೇ ಕೇಳಿದರೂ, ನೀವದನ್ನು ಕೂಡಲೇ ಕೊಡುತ್ತೀರಿ. ಇದು ನನ್ನನ್ನು ಹಾಳುಮಾಡಬಹುದೇ ಎಂದು ನಾನು ನಿಮ್ಮಲ್ಲಿ ಕೇಳಬಯಸಿದ್ದೆ.
ಶ್ರೀ ಶ್ರೀ ರವಿಶಂಕರ್:
ಒಳ್ಳೆಯದು. ನೀನು ಕೇಳಿದ್ದೆಲ್ಲವೂ ನಿನಗೆ ಸಿಗುತ್ತಿದೆಯೆಂಬುದು ನಿನಗೀಗ ತಿಳಿದಿರುವುದರಿಂದ, ದೊಡ್ಡದಾದವುಗಳನ್ನು ಕೇಳು ಮತ್ತು ಚಿಕ್ಕದಾದವುಗಳನ್ನಲ್ಲ. ನಿನಗಾಗಿ ಕೇಳಬೇಡ; ದೇಶಕ್ಕಾಗಿ ಕೇಳು, ಎಲ್ಲರಿಗಾಗಿ. ಧರ್ಮವು ಹೆಚ್ಚಾಗಲಿ ಮತ್ತು ಅಧರ್ಮವು ಕಡಿಮೆಯಾಗಲಿ ಎಂದು ಪ್ರಾರ್ಥಿಸು; ನ್ಯಾಯ ಹೆಚ್ಚಾಗಲಿ, ಅನ್ಯಾಯ ಕಡಿಮೆಯಾಗಲಿ, ಕೊರತೆ ಕಡಿಮೆಯಾಗಲಿ ಮತ್ತು ಸಮೃದ್ಧಿ ಹೆಚ್ಚಾಗಲಿ ಎಂದು. ಎಲ್ಲರ ಒಳಿತಿಗಾಗಿ ಪ್ರಾರ್ಥಿಸು.
ಪ್ರಶ್ನೆ: ನಮ್ಮ ಹಿಂದಿನ ಜನ್ಮಗಳ ಕರ್ಮಗಳು ಎಲ್ಲವನ್ನೂ ಆಳುತ್ತವೆಯೇ? ನಾವು ಈಗ ಏನೆಲ್ಲಾ ಮಾಡುತ್ತೇವೋ ಅದು ನಮ್ಮ ಜೀವನದಲ್ಲಿ ಯಾವುದೇ ಪ್ರಭಾವವನ್ನು ಬೀರುವುದಿಲ್ಲವೇ?
ಶ್ರೀ ಶ್ರೀ ರವಿಶಂಕರ್:
ಹಾಗೆಂದು ಯಾರು ಹೇಳಿದರು? ನೀವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಕೂಡಲೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀವು ನಿಮ್ಮ ಕೈಯನ್ನು ಬೆಂಕಿಗೊಡ್ಡಿದರೆ, ಅದು ಕೂಡಲೇ ಸುಟ್ಟುಹೋಗುತ್ತದೆ.
ಪ್ರಶ್ನೆ: ಒಬ್ಬ ಮನುಷ್ಯನಾಗಿ ಹುಟ್ಟಿದ ಬಳಿಕ, ನಾವು ಏನನ್ನಾದರೂ ಸಾಧಿಸಬೇಕಾಗಿದೆಯೇ? ಸಾಧಿಸುವವರ ಮತ್ತು ಸಾಧಿಸದಿರುವವರ ಕೊನೆಯ ಫಲಿತಾಂಶವೇನು? ಪ್ರತಿಯೊಬ್ಬ ವ್ಯಕ್ತಿಗೂ ಒಂದು ಗುರಿಯಿರುವುದರ ಅಗತ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್:
ಒಂದು ಗುರಿಯಿಲ್ಲದ ಜೀವನವು ಸಂತೋಷದಾಯಕವಾಗಿರದು. ಒಂದು ಗುರಿಯಿಲ್ಲದೆ, ಮನಸ್ಸು ಮತ್ತು ಬುದ್ಧಿಯು ಸರಿಯಾದ ದಿಕ್ಕಿನಲ್ಲಿ ಹೋಗಲಾರವು. ಆದುದರಿಂದ, ಜೀವನದಲ್ಲಿ ಒಂದು ಗುರಿಯಿರಬೇಕು, ಮತ್ತು ಗುರಿ ಹೇಗಿರಬೇಕೆಂದರೆ, ನಾವು ಅಭಿವೃದ್ಧಿ ಹೊಂದಬೇಕು ಹಾಗೂ ನಮ್ಮಿಂದಾಗಿ ಇತರರಿಗೆ ಸಹಾಯವಾಗಬೇಕು.
ಪ್ರಶ್ನೆ: ಬೆಂಗಳೂರು ಹವಾನಿಯಂತ್ರಿತ ನಗರವೆಂದು ಕರೆಯಲ್ಪಡುತ್ತಿತ್ತು. ಹೀಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇಲ್ಲಿ ಬೇಸಗೆಯಲ್ಲಿ ತುಂಬಾ ಬಿಸಿಯಾಗುತ್ತಿದೆ. ಇದು ಇದೇ ರೀತಿಯಲ್ಲಿ ಮುಂದುವರಿದರೆ, ನಮ್ಮ ಭವಿಷ್ಯವು ಹೇಗಾಗಬಹುದು?
ಶ್ರೀ ಶ್ರೀ ರವಿಶಂಕರ್:
ನಾನು ಕೂಡಾ ಇದರ ಬಗ್ಗೆ ಕಾಳಜಿ ಹೊಂದಿದ್ದೇನೆ. ನಾನು ಓದುತ್ತಿದ್ದ ಸಮಯದಲ್ಲಿ, ಫ್ಯಾನುಗಳ ಅಗತ್ಯವಿರಲಿಲ್ಲ. ೧೯೮೦ ರಲ್ಲಿ, ಉತ್ತರ ಭಾರತದಿಂದ ಕೆಲವು ಜನರು ಮತ್ತು ಕೆಲವು ಅಂತರರಾಷ್ಟ್ರೀಯ ಭಾಗಿಗಳು ಇಲ್ಲಿಗೆ ಬಂದಿದ್ದರು. ಅವರಿಗೆ ಒಂದು ಏರ್-ಕೂಲರ್ ಬೇಕಾಗಿತ್ತು. ನಾವು ನಗರದಲ್ಲಿ ಎಲ್ಲಾ ಕಡೆಗಳಲ್ಲೂ ಹುಡುಕಿದೆವು, ಆದರೆ ಒಂದೇ ಒಂದು ಕೂಲರ್ ಕೂಡಾ ಸಿಗಲಿಲ್ಲ. ಯಾವುದನ್ನು ಕೊಂಡುಕೊಳ್ಳುವವರಿಲ್ಲವೋ ಅದನ್ನು ತಾವು ಮಾರುವುದಿಲ್ಲವೆಂದು ಅಂಗಡಿ ಮಾಲೀಕರು ಹೇಳಿದರು. ಏರ್-ಕೂಲರ್ ಕೂಡಾ ಇರಲಿಲ್ಲ, ಹವಾ ನಿಯಂತ್ರಕಗಳೂ ಇರಲಿಲ್ಲ. ಇದು ತುಂಬಾ ಹಿಂದೆಯಾದುದಲ್ಲ.
ಈ ದಿನಗಳಲ್ಲಿ, ಇದು ಯಾವ ಪರಿಸ್ಥಿತಿ ತಲುಪಿದೆಯೆಂದರೆ, ಎಲ್ಲರಿಗೂ ಹವಾ-ನಿಯಂತ್ರಕಗಳ ಅಗತ್ಯವಿದೆ. ನಾವು ಬಹಳಷ್ಟು ಮರಗಳನ್ನು ಕಡಿಯುತ್ತಿದ್ದೇವೆ. ಸರೋವರಗಳು ಬತ್ತಿ ಹೋಗುತ್ತಿವೆ. ನಾವು ನಮ್ಮ ಸರೋವರಗಳ ಬಗ್ಗೆ ಜಾಗ್ರತೆ ವಹಿಸಿರುತ್ತಿದ್ದರೆ ಮತ್ತು ಅಷ್ಟೊಂದು ಮರಗಳನ್ನು ಕಡಿಯದೇ ಇರುತ್ತಿದ್ದರೆ, ಇಂತಹ ಒಂದು ಪರಿಸ್ಥಿತಿ ಬರುತ್ತಿರಲಿಲ್ಲವೆಂದು ನನಗನಿಸುತ್ತದೆ.
ಪ್ರಶ್ನೆ: ಧರ್ಮವೆಂದರೇನು?
ಶ್ರೀ ಶ್ರೀ ರವಿಶಂಕರ್:
ಧರ್ಮವೆಂದರೆ ನಿಮ್ಮನ್ನು ಆಧರಿಸುವಂಥಹದ್ದು, ನೀವು ಬೀಳುವುದರಿಂದ ನಿಮ್ಮನ್ನು ತಡೆಯುವುದು ಮತ್ತು ನೀವು ಮೇಲೆ ಬರಲು ಸಹಾಯ ಮಾಡುವಂಥಹದ್ದು.
ಪ್ರಶ್ನೆ: ಗುರೂಜಿ, ಜೀವನವು ಅನಂತವಾದುದೆಂದೂ, ನಾವಿಲ್ಲಿಗೆ ಪುನಃ ಪುನಃ ಬರುತ್ತಿರಬೇಕಾಗುತ್ತದೆಯೆಂದೂ ನೀವು ಹೇಳಿದ್ದೀರಿ. ಒಬ್ಬನಿಗೆ ಒಬ್ಬರು ಗುರುವಿದ್ದರೆ, ಅವರು ಜೀವನ ಮತ್ತು ಮೃತ್ಯುವಿನ ಚಕ್ರದಿಂದ ಬಿಡುಗಡೆ ಹೊಂದುತ್ತಾರೆಂದು ಕೂಡಾ ಹೇಳಲಾಗಿದೆ. ಹೀಗಿದ್ದರೂ, ನಾವು ಬರುತ್ತಿರಬೇಕಾಗುತ್ತದೆಯೆಂದು ನೀವು ಹೇಳಿದ್ದೀರಿ. ಹಾಗಾದರೆ, ನಾವು ಬರುತ್ತಿರುತ್ತೇವೆಯೇ ಅಥವಾ ಬಿಡುಗಡೆ ಹೊಂದುತ್ತೇವೆಯೇ?
ಶ್ರೀ ಶ್ರೀ ರವಿಶಂಕರ್:
ಎರಡೂ ಸರಿ. ನಾನು ಬರುತ್ತಾ ಇರುತ್ತೇನೆ. ನೀನು ಬರಬೇಕೆಂದೇನೂ ಕಡ್ಡಾಯವಿಲ್ಲ; ಈಗಲೇ ಬಿಡುಗಡೆ ಹೊಂದು.
ಪ್ರಶ್ನೆ: ಸಮಾಜವು ಪ್ರಾಮಾಣಿಕವಾಗಿ ಕೆಲಸ ಮಾಡುವವನೊಬ್ಬನಿಗೆ ತೊಂದರೆ ಕೊಡುತ್ತಿರುತ್ತದೆ, ಇದು ಯಾಕಾಗುತ್ತದೆ? ಅವನು ತನಗಾಗಿ ಏನೂ ಬಯಸದೇ ಸಮಾಜಕ್ಕಾಗಿ ಕೆಲಸ ಮಾಡಲು ಬಯಸಿದರೂ, ಸಮಾಜವು ಅವನಿಗೆ ತೊಂದರೆ ನೀಡುವುದು ಯಾಕೆ?
ಶ್ರೀ ಶ್ರೀ ರವಿಶಂಕರ್:
ಈ ದಿನಗಳಲ್ಲಿ ಅದು ಈ ರೀತಿ ಆಗುತ್ತಿದೆ. ಅದು ಮುಂದೆಯೂ ಇದೇ ರೀತಿಯಲ್ಲಿ ಮುಂದುವರಿಯಬೇಕೆಂಬ ನಿಯಮವೇನೂ ಇಲ್ಲ. ಒಂದು ದೊಡ್ಡ ಕೆಲಸವನ್ನು ಮಾಡಲು, ನೀವು ನಿಮ್ಮ ಕಡೆಯಿಂದ ಏನಾದರೂ ತ್ಯಾಗ ಮಾಡಬೇಕು. ನೀವು, "ನಾನು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇನೆ, ಆದರೆ ಜನರು ಯಾಕೆ ನನ್ನನ್ನು ಟೀಕಿಸುತ್ತಿದ್ದಾರೆ?" ಎಂದು ಯೋಚಿಸಲು ಸಾಧ್ಯವಿಲ್ಲ. ಅದು ಅವರ ಸ್ವಭಾವ. ಒಂದು ಮುಳ್ಳಿನ ಸ್ವಭಾವವೆಂದರೆ ಚುಚ್ಚುವುದು ಮತ್ತು ಒಂದು ಹೂವಿನ ಸ್ವಭಾವವೆಂದರೆ ಸುವಾಸನೆಯನ್ನು ಹರಡುವುದು. ಪ್ರಪಂಚದಲ್ಲಿ ಮುಳ್ಳುಗಳು ಮತ್ತು ಹೂಗಳು ಎರಡೂ ಇವೆ. ಹೂವು ಮುಳ್ಳಿನಲ್ಲಿ, "ನೀನು ಯಾಕೆ ಚುಚ್ಚುವೆ?" ಎಂದು ಕೇಳಿದರೆ, ಮುಳ್ಳು "ಅದು ನನ್ನ ಸ್ವಭಾವ" ಎಂದು ಉತ್ತರಿಸಬಹುದು.
ಪ್ರಶ್ನೆ: ಒಂದು ವ್ಯಾಪಾರವನ್ನು ನೋಡಿಕೊಳ್ಳುವ ಹುದ್ದೆಗೆ ನನ್ನನ್ನು ಭಾರತದಲ್ಲಿ ನಿಯುಕ್ತಿಗೊಳಿಸಲಾಗಿದೆ ಹೀಗಿದ್ದರೂ, ಭಾರತದಲ್ಲಿ ಜೀವಿಸಲು ನನಗೆ ಅಷ್ಟು ಹಿತವಾಗುವುದಿಲ್ಲ. ನಾನೇನು ಮಾಡಲಿ?
ಶ್ರೀ ಶ್ರೀ ರವಿಶಂಕರ್:
ಕೆಲವೊಮ್ಮೆ ಕೆಲವು ವಿಷಯಗಳು ನಮಗೆ ಇಷ್ಟವಾಗುವುದಿಲ್ಲ, ಆದರೆ ಅದೊಂದು ವೃತ್ತಿಯಾಗಿದ್ದರೆ, ನೀನದನ್ನು ಮಾಡಬೇಕಾಗಬಹುದು. ಮನಸ್ಸಿನೊಂದಿಗೆ ಹೋಗಬೇಡ ಯಾಕೆಂದರೆ ಮನಸ್ಸಿಗೆ ಕೆಲವೊಮ್ಮೆ ಅವುಗಳನ್ನು ಮಾಡಲು ಇಷ್ಟವಾಗುತ್ತದೆ ಮತ್ತು ಕೆಲವೊಮ್ಮೆ ಅವುಗಳನ್ನು ಮಾಡಲು ಇಷ್ಟವಾಗುವುದಿಲ್ಲ. ನೀನು ನಿನ್ನ ಅಭ್ಯಾಸಗಳನ್ನು, ಧ್ಯಾನವನ್ನು, ಸತ್ಸಂಗವನ್ನು ಮತ್ತು ಸೇವೆಯನ್ನು ಮಾಡುತ್ತಾ ಇದ್ದರೆ, ನೀನು ನಿನ್ನನ್ನೇ ಎಲ್ಲೇ ಬೇಕಾದರೂ ಹಾಯಾಗಿರುವಂತೆ ಮಾಡಬಹುದು. ನಮಗೆ ಯಾವುದರ ಕಡೆಗೂ ತಿರಸ್ಕಾರ ಅಥವಾ ಕಡುಬಯಕೆ ಇರಬಾರದು. ಅದು ನಿಜವಾದ ಯೋಗ.