ಬುಧವಾರ, ಮಾರ್ಚ್ 13, 2013

ವಿಶ್ಲೇಷಣೆ

ಬೆಂಗಳೂರು, ಭಾರತ
೧೩ ಮಾರ್ಚ್ ೨೦೧೩

ಲವು ಸಲ ನಾವು ನಮ್ಮನ್ನೇ ಅತಿಯಾಗಿ ವಿಶ್ಲೇಷಿಸುತ್ತೇವೆ. ನನಗೆ ಹೀಗಾಗುತ್ತಿದೆ, ಹಾಗೆ ಆಗುತ್ತಿಲ್ಲ; ಅಥವಾ ನನಗೆ ಇದು ಬೇಕು ಮತ್ತು ನನಗೆ ಅದು ಬೇಕು; ಅಥವಾ ನಾನಲ್ಲಿ ಏನು ಮಾಡಿದೆನೋ ಅದು ಬಹಳ ತಪ್ಪಾಗಿತ್ತು, ನಾನಿಲ್ಲಿ ಏನು ಮಾಡಿದೆನೋ ಅದು ಸರಿ, ಮೊದಲಾಗಿ ಯೋಚಿಸುತ್ತಿರುತ್ತೇವೆ. ನಾವು ನಮ್ಮದೇ ಬಗೆಗಿನ ಹಲವಾರು ಯೋಚನೆಗಳಲ್ಲಿ ಬಹಳಷ್ಟು ಸಿಕ್ಕಿಹಾಕಿಕೊಳ್ಳುತ್ತೇವೆ; ಇದನ್ನು ನಾವು ಮಾಡಬಾರದು.

ನೋಡಿ, ಗಾಳಿ ಬೀಸುವಾಗ ಏನಾಗುತ್ತದೆ? ಎಲ್ಲವೂ ಅದರೊಂದಿಗೆ ಒಯ್ಯಲ್ಪಡುತ್ತದೆ, ಅಲ್ಲವೇ? ಎಲ್ಲವೂ ಗಾಳಿಯೊಂದಿಗೆ ಹಾರಿಹೋಗುತ್ತದೆ. ಹೀಗೆ ಹಿಂದೆ ಏನೆಲ್ಲಾ ನಡೆಯಿತೋ; ಒಳ್ಳೆಯದಾಗಿದ್ದರೂ ಅಥವಾ ಕೆಟ್ಟದಾಗಿದ್ದರೂ, ಸರಿಯಾಗಿದ್ದರೂ ಅಥವಾ ತಪ್ಪಾಗಿದ್ದರೂ, ಹಿತಕರ ಅಥವಾ ಅಹಿತಕರ ಘಟನೆಗಳಾಗಿದ್ದರೂ, ಅದೆಲ್ಲವೂ ಸಂಭವಿಸಿತು ಮತ್ತು ಅದೆಲ್ಲವೂ ಈಗ ಹೋಗಿಯಾಯಿತು. ಹೇಗೆ ಗಾಳಿಯು ಬಂದು ಎಲ್ಲವನ್ನೂ ಹಾರಿಸುತ್ತದೆಯೋ, ಅದೇ ರೀತಿಯಲ್ಲಿ ಜೀವನದ ಎಲ್ಲಾ ಘಟನೆಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಮುಖ್ಯವಾದುದೇನೆಂದರೆ, ನೀವು ಎಲ್ಲೂ ಸಿಕ್ಕಿಹಾಕಿಕೊಳ್ಳಬಾರದು, ಮುಂದಕ್ಕೆ ಸಾಗಿ. ಕೇವಲ ಟೊಳ್ಳು ಮತ್ತು ಖಾಲಿಯಾಗಿ, ಹಾಗೂ ನಂತರ ನೀವು ಆನಂದವಾಗಿರುವಿರಿ.

ನನಗೆ ಹೇಳಿ, ಯಾವುದೇ ಸಮಸ್ಯೆಗಳೇ ಬಂದಿಲ್ಲದವರು ಯಾರಾದರೂ ಇದ್ದಾರೆಯೇ? ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳು ಬರುತ್ತವೆ.

ಸಂತೋಷವನ್ನು ಅನುಭವಿಸದೇ ಇರುವ ಯಾರಾದರೂ ಇರುವರೇ? ಪ್ರತಿಯೊಬ್ಬರೂ, ಒಂದಲ್ಲ ಒಂದು ಸಮಯದಲ್ಲಿ ಸಂತೋಷವನ್ನು ಅನುಭವಿಸಿರುತ್ತಾರೆ.

ಹೊಗಳಿಕೆಯನ್ನು ಪಡೆಯದೇ ಇರುವ ಯಾರಾದರೂ ಇದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಹೊಗಳಲ್ಪಟ್ಟಿದ್ದಾರೆ. ಒಂದು ನಾಯಿ ಕೂಡಾ ಹೊಗಳಲ್ಪಡುತ್ತದೆ! ’ಎಷ್ಟೊಂದು ಒಳ್ಳೆಯ ನಾಯಿ’ ಎಂದು ಜನರು ಹೇಳುತ್ತಾರೆ.
ಟೀಕಿಸಲ್ಪಟ್ಟಿಲ್ಲದೇ ಇರುವ ಯಾರಾದರೂ ಇದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಟೀಕಿಸಲ್ಪಟ್ಟಿರುವರು, ಅಲ್ಲವೇ? ಎಲ್ಲರೂ ಟೀಕಿಸಲ್ಪಡುತ್ತಾರೆ.

ಹಾಗಾಗಿ, ಯಾರಾದರೂ ನಿಮ್ಮನ್ನು ಹೊಗಳಿದರೆ ಅಥವಾ ನಿಮ್ಮನ್ನು ಟೀಕಿಸಿದರೆ, ಅದು ಬಂದು ಹೋಗುವ ಗಾಳಿಯಂತೆ ಎಂಬುದನ್ನು ತಿಳಿಯಿರಿ. ಅವುಗಳು ಕೇವಲ, ಬಂದು ಹೋದ ಕೆಲವು ಹಾದುಹೋಗುವ ಯೋಚನೆಗಳಷ್ಟೇ. ನಿಮ್ಮ ಬಗ್ಗೆ ಜನರ ಮನಸ್ಸುಗಳಲ್ಲಿ ಯೋಚನೆಗಳು ಏಳುತ್ತವೆ ಮತ್ತು ಅವುಗಳು ಹೋಗುತ್ತವೆ. ಕೆಲವು ಒಳ್ಳೆಯ ಯೋಚನೆಗಳು ಮತ್ತು ಕೆಲವು ಕೆಟ್ಟ ಯೋಚನೆಗಳು. ಈಗ, ಜನರೇ ಇಲ್ಲಿ ಶಾಶ್ವತವಾಗಿಲ್ಲದಿರುವಾಗ, ಅವರ ಯೋಚನೆಗಳಿಗೆ ನೀವು ಯಾವ ಸ್ಥಿರತೆಯನ್ನು ಜೋಡಿಸಬಲ್ಲಿರಿ? ಅವರೇ ಶಾಶ್ವತವಾಗಿರರು ಅಂದ ಮೇಲೆ, ಅವರ ಅಭಿಪ್ರಾಯಗಳನ್ನು ಕಟ್ಟಿಕೊಂಡು ನೀವೇನು ಮಾಡಲಿದ್ದೀರಿ?

ಆದುದರಿಂದ, ಇಲ್ಲಿಅಲ್ಲಿಯ ಕೆಲವು ಯೋಚನೆಗಳ ಬಗ್ಗೆ ನೀವು ಯಾಕೆ ಚಿಂತಿಸುವಿರಿ? ನೀವು ಕೇವಲ ಜೀವನದಲ್ಲಿ ಮುಂದೆ ಸಾಗುತ್ತಾ ಇರಬೇಕು. ಏನೇ ಆದರೂ, ಸುಮ್ಮನೆ ಮುಂದೆ ಸಾಗುತ್ತಿರಿ, ಗಾಳಿಯಂತೆ. ಗಾಳಿಯು ಒಂದು ಜಾಗದಲ್ಲಿ ಯಾವತ್ತೂ ನಿಲ್ಲುವುದಿಲ್ಲ, ಅದು ಚಲಿಸುತ್ತಾ ಇರುತ್ತದೆ; ನೀರು ಹರಿಯುತ್ತಾ ಇರುತ್ತದೆ.

ಪ್ರಕೃತಿಯು ಹೇಗೆ ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದೋ, ಹಾಗೆಯೇ ಯೋಚನೆಗಳು ಕೂಡಾ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತವೆ; ಅವುಗಳು ಬರುತ್ತವೆ ಮತ್ತು ಅವುಗಳು ಹೋಗುತ್ತವೆ. ಕೆಲವೊಮ್ಮೆ ಅವುಗಳು ಹೊಗಳಿಕೆಯನ್ನು ಮತ್ತು ಕೆಲವೊಮ್ಮೆ ಟೀಕೆಯನ್ನು ತರುತ್ತವೆ. ಆದುದರಿಂದ ಹೊಗಳಿಕೆ ಮತ್ತು ಟೀಕೆಗಳು ಜೀವನದ ಭಾಗವಾಗಿವೆ. ನೀವು ಸುಮ್ಮನೆ ಮುಂದೆ ಸಾಗಿ. ಅದರಲ್ಲಿ ಸಿಕ್ಕಿಬೀಳಬೇಡಿ.

ಹಲವು ಸಲ ಜನರು ತಮ್ಮನ್ನು ತಾವೇ ಅತಿಯಾಗಿ ವಿಶ್ಲೇಷಿಸುತ್ತಾರೆ. ಅವರು ಹಲವಾರು ವಿಷಯಗಳನ್ನು ಯೋಚಿಸುತ್ತಿರುತ್ತಾರೆ; ನಾನು ಚೆನ್ನಾಗಿದ್ದೇನೆ, ನಾನು ಚೆನ್ನಾಗಿಲ್ಲ, ನಾನು ಸರಿ, ನಾನು ತಪ್ಪು, ನನ್ನಲ್ಲಿ ಈ ಗುಣಗಳಿವೆ, ನನ್ನಲ್ಲಿ ಈ ಗುಣಗಳಿಲ್ಲ. ಮತ್ತು ಇದನ್ನು ಮಾಡುವುದರಿಂದ ಅವರು, ತಮ್ಮ ಬಗ್ಗೆಯೇ ಅತಿಯಾದ ನಕಾರಾತ್ಮಕ ವಿಶ್ಲೇಷಣೆಯಲ್ಲಿ ಸಿಕ್ಕಿಬೀಳುತ್ತಾರೆ. ಇನ್ನೊಂದು ಬದಿಯಲ್ಲಿ, ತಮ್ಮ ಬಗ್ಗೆ ಯೋಚಿಸದೆಯೇ ಇರುವ ಕೆಲವು ಜನರಿದ್ದಾರೆ. ಅವರು ಮದ್ಯಪಾನ ಮಾಡುತ್ತಾರೆ ಮತ್ತು ಸುಖವನ್ನು ಮಾತ್ರ ಹುಡುಕುತ್ತಿರುತ್ತಾರೆ. ಅವರು ಒಂದು ಕ್ಷಣ ಕೂಡಾ ಹಿಂತಿರುಗಿ ನೋಡಿ ತಮ್ಮ ಬಗ್ಗೆ ಚಿಂತನೆ ಮಾಡುವುದಿಲ್ಲ. ಇದಕ್ಕಾಗಿಯೇ, ಆರಂಭದಲ್ಲಿ ಒಬ್ಬ ಅನ್ವೇಷಕನಿಗೆ, ಮೊದಲು ನಿಂತು ತಾನು ಬಯಸುವುದು ಏನನ್ನು ಎಂಬುದರ ಬಗ್ಗೆ ಚಿಂತನೆ ನಡೆಸಲು ಹೇಳಲಾಗುವುದು.

ಆರ್ಟ್ ಆಫ್ ಲಿವಿಂಗ್ ಬೇಸಿಕ್ ಕೋರ್ಸ್‌ನಲ್ಲಿ, ನಾವು ಕೇಳುವ ಮೊದಲನೆಯ ಪ್ರಶ್ನೆಯೆಂದರೆ ಇದುವೇ. ’ನಿನಗೇನು ಬೇಕು? ನಿನ್ನ ಸಮಸ್ಯೆಗಳೇನು?’

ಅಂತರ್ಮುಖವಾಗಿ ಸಾಗಲಿರುವ ಮೊದಲ ಹೆಜ್ಜೆ ಆತ್ಮಾವಲೋಕನವಾಗಿದೆ.

’ನಿಮ್ಮನ್ನೇ ಕೇಳಿಕೊಳ್ಳಿ, ಜೀವನದಿಂದ ನಿಮಗೆ ಬೇಕಾಗಿರುವುದೇನು? ನಿಮ್ಮ ಬಗ್ಗೆಯೇ ಯೋಚಿಸಿ, ನಿಮಗೇನು ಬೇಕು?’ ಎಂದು ನಾವು ಶಿಬಿರಾರ್ಥಿಗಳಲ್ಲಿ ಹೇಳುತ್ತೇವೆ.

ಒಬ್ಬ ಅನ್ವೇಷಕನಿಗೆ ಇದು ಮೊದಲ ಹೆಜ್ಜೆಯಾಗಿದೆ. ಆದರೆ ನಿಮ್ಮ ಉಳಿದ ಜೀವನವಿಡೀ ನೀವು ನಿಮ್ಮಲ್ಲೇ, ’ನನಗೇನು ಬೇಕು’ ಎಂದು ಕೇಳುತ್ತಾ ಇದ್ದರೆ, ಆಗ ನಿಮ್ಮ ಮನಸ್ಸು ಕೊಳೆಯುವುದು ಮತ್ತು ನೀವು ಖಿನ್ನರಾಗುವಿರಿ.

ಪ್ರತಿದಿನವೂ ಒಬ್ಬ ವ್ಯಕ್ತಿಯು ಕುಳಿತುಕೊಂಡು ತನ್ನ ಬಗ್ಗೆ ಮಾತ್ರ ಯೋಚಿಸುತ್ತಾ ಇದ್ದರೆ, ಆಗ ಅವನು ಕೊಳೆತುಹೋಗುವನು. ನೀವು ಅಂತಹ ಜನರ ಮುಖಗಳನ್ನು ನೋಡಿದರೆ, ಅವರು ಬಹಳ ಬಿಳುಚಿದವರಾಗಿ ಮತ್ತು ಚಿಂತೆಗಳಿಂದ ತುಂಬಿರುವಂತೆ ಕಾಣಿಸುತ್ತಾರೆ. ತನ್ನ ಬಗ್ಗೆ ಮಾತ್ರ ಯೋಚಿಸುವ ಒಬ್ಬ ವ್ಯಕ್ತಿಯ ಮುಖದಿಂದ ಚಿಂತೆಯು ಹನಿಹನಿಯಾಗಿ ತೊಟ್ಟಿಕ್ಕುತ್ತಿರುತ್ತದೆ.

ಅಂತಹ ಜನರನ್ನು ನೋಡುವುದು, ನೀವು ಓಡಿಹೋಗಲು ಬಯಸುವಂತೆ ಮಾಡಬಹುದು! ಮತ್ತು ಜನರು ಅವರಿಂದ ದೂರ ಓಡಿಹೋಗುತ್ತಾರೆ. ಆಗ ಈ ವ್ಯಕ್ತಿಯು ತನ್ನಲ್ಲೇ ಯೋಚಿಸುತ್ತಾನೆ, ’ಓ, ನಾನೇನು ತಪ್ಪು ಮಾಡಿದೆ. ಜನರು ಯಾಕೆ ನನ್ನಿಂದ ದೂರ ಓಡುತ್ತಾರೆ?’

ಜನರು ಅಂತಹ ವ್ಯಕ್ತಿಗಳಿಂದ ದೂರ ಓಡುವುದು ಯಾಕೆಂದರೆ ಅವರ ಕಂಪನಗಳು ಅಷ್ಟೊಂದು ನಕಾರಾತ್ಮಕವಾಗಿರುತ್ತವೆ; ಅವರು ದುರ್ಗಂಧ ಬೀರುತ್ತಿರುವರೋ ಎಂಬಂತೆ. ಯಾರಾದರೊಬ್ಬರು ದುರ್ಗಂಧ ಬೀರುತ್ತಿದ್ದರೆ, ಅವನ ಅಥವಾ ಅವಳ ಸುತ್ತಲೂ ಜನರು ಕಾಯುತ್ತಾ ಕೂರುವರೇ? ಇಲ್ಲ, ಅವರು ಸುಮ್ಮನೆ ಓಡಿಹೋಗುವರು! ನೀವು ನಿಮ್ಮದೇ ಬಗ್ಗೆ ಮಾತ್ರ ಅಷ್ಟೊಂದು ಯೋಚಿಸಿದರೆ, ನಿಮ್ಮ ಕಡೆಗೆ ಯಾರು ಆಕರ್ಷಿತರಾಗುವರು?

ಒಂದು ಬದಿಯಲ್ಲಿ, ತನ್ನ ಬಗ್ಗೆ ಯೋಚಿಸದೇ ಇರುವ ಒಬ್ಬ ಅಜ್ಞಾನಿಯಿರುತ್ತಾನೆ ಮತ್ತು ಇನ್ನೊಂದು ಬದಿಯಲ್ಲಿ, ತನ್ನ ಬಗ್ಗೆ ಮಾತ್ರ ಯೋಚಿಸುವ ಒಬ್ಬ ವ್ಯಕ್ತಿಯಿರುತ್ತಾನೆ. ಎರಡೂ ಒಳ್ಳೆಯದಲ್ಲ. ಒಂದು ಬದಿಯಲ್ಲಿ, ಪಕ್ವವಾಗದಿರುವ; ಬಹಳ ಕಚ್ಚಾ ಆಗಿರುವ ಒಬ್ಬ ವ್ಯಕ್ತಿಯಿರುತ್ತಾನೆ ಮತ್ತು ಇನ್ನೊಂದು ಬದಿಯಲ್ಲಿ, ತನ್ನ ಬಗ್ಗೆಯೇ ಯೋಚಿಸುತ್ತಾ ಇರುವುದರಿಂದ ಮನಸ್ಸು ಕೊಳೆತುಹೋಗಿರುವ ಒಬ್ಬ ವ್ಯಕ್ತಿಯಿರುತ್ತಾನೆ. ಎರಡೂ ಒಳ್ಳೆಯದಲ್ಲ.

ನೀವು ಮಧ್ಯದ ದಾರಿಯನ್ನು ಸ್ವೀಕರಿಸಬೇಕು. ನಿಮ್ಮ ಬಗ್ಗೆ ಸ್ವಲ್ಪ ವಿಶ್ಲೇಷಿಸಿ, ಅದರ ಬಗ್ಗೆ ಚಿಂತನೆ ಮಾಡಿ ಮತ್ತು ನಂತರ ಅದನ್ನು ಬಿಟ್ಟು ಮುಂದೆ ಸಾಗಿ. ಸಿಕ್ಕಿಬೀಳಬೇಡಿ.

ನೀವು ಮುಂದೆ ಸಾಗಲು ಸಾಧ್ಯವಾಗುವುದಕ್ಕೋಸ್ಕರ, ನಾನು ನಿಮಗೆ ಹೇಳುತ್ತಿರುವುದೇನೆಂದರೆ, ಏನೆಲ್ಲಾ ಸಂಭವಿಸಿತೋ ಅದನ್ನು ಸುಮ್ಮನೆ ಬಿಟ್ಟುಬಿಡಿ ಮತ್ತು ಮುಂದೆ ಸಾಗಿ. ಸಂಭವಿಸಿದುದರ ಬಗ್ಗೆ - ನೀವೇನು ಮಾಡಿರುವಿರೋ ಅದರ ಬಗ್ಗೆಯಾಗಲೀ, ಇತರರು ಏನನ್ನು ಮಾಡಿದ್ದಾರೋ ಅದರ ಬಗ್ಗೆಯಾಗಲೀ ಕುಳಿತುಕೊಂಡು ಮರುಗಬೇಡಿ. ನೀವು ಮಾಡಿದುದರ ಬಗ್ಗೆ ನೀವು ಯೋಚಿಸುತ್ತಾ ಇದ್ದರೆ, ಆಗ ನಿಮಗೆ ಪಶ್ಚಾತ್ತಾಪವಾಗುತ್ತದೆ ಮತ್ತು ಇತರರು ಯಾವ ತಪ್ಪು ಮಾಡಿದರೋ ಅದರ ಬಗ್ಗೆ ನೀವು ಯೋಚಿಸಿದರೆ, ಆಗ ನಿಮಗೆ ಕೋಪವೂ, ಚಿಂತೆಯೂ ಉಂಟಾಗುತ್ತದೆ.

ಹೇಗಿದ್ದರೂ ನಿಮಗೆ ಯಾರ ಮೇಲೆಯೂ ನಿಯಂತ್ರಣವಿಲ್ಲ. ಈ ಪ್ರಪಂಚದಲ್ಲಿ ಯಾರಿಗೂ ಯಾವತ್ತೂ ಬೇರೊಬ್ಬರ ಮೇಲೆ ನಿಯಂತ್ರಣವಿದ್ದಿಲ್ಲ. ನೀವು ಒಬ್ಬರನ್ನು ನಿಯಂತ್ರಿಸುತ್ತಿರುವಿರೆಂದು ಅಥವಾ ಯಾರದ್ದಾದರೂ ನಿಯಂತ್ರಣದಲ್ಲಿ ಅಥವಾ ಪ್ರಭಾವದಲ್ಲಿ ನೀವಿರುವಿರೆಂದು ನೀವಂದುಕೊಂಡರೆ, ಆಗ ಅದು ಬಹಳ ತಪ್ಪಾದ ಒಂದು ಯೋಚನೆ.

ಈ ಪ್ರಪಂಚದಲ್ಲಿ ಎಲ್ಲವೂ ಪ್ರಕೃತಿಯ ನಿರ್ದಿಷ್ಟ ನಿಯಮಗಳಿಗನುಸಾರವಾಗಿ ನಡೆಯುತ್ತದೆ. ಹಾಗಾಗಿ, ಹಿಂದೆ ಏನೆಲ್ಲಾ ಸಂಭವಿಸಿದೆಯೋ, ಅದನ್ನು ಸುಮ್ಮನೆ ಭುಜಕೊಡವಿಕೊಂಡು ಮುಂದಕ್ಕೆ ಸಾಗಿ. ನಿಮ್ಮೊಳಗೆ ಶೇಖರವಾಗಿರುವ ಕೊಳೆಯನ್ನೆಲ್ಲಾ (ಭೂತಕಾಲದ) ನೀವು ಶುಚಿಗೊಳಿಸಿದಾಗ ನೀವು ಹಾಗೆಯೇ ಹೊಳೆಯಲು ತೊಡಗುವಿರಿ. ನೀವು ಬಹಳಷ್ಟು ಶಕ್ತಿವಂತರಾಗುತ್ತೀರಿ, ನಿಮ್ಮ ಪ್ರಜ್ಞೆಯು ಅರಳುತ್ತದೆ ಮತ್ತು ಸಂತೋಷ ಹರಿಯಲು ಶುರುವಾಗುತ್ತದೆ. ಆಗ ನಿಮಗೆ, ನೀವು ಜೀವಂತವಾಗಿರುವಿರಿ ಎಂದು ಹೇಳಲು ಸಾಧ್ಯ. ನಿಜವಾಗಿ ಜೀವನವೆಂದರೆ ಇದುವೇ.

ಈಗ ನೀವು ಕೇಳಬಹುದು, ’ದಿನದ ಇಡೀ ೨೪ ಗಂಟೆಗಳ ಕಾಲವೂ ನಾನು ಸಂತೋಷವಾಗಿರಬಹುದೇ?’ ೨೪ ಗಂಟೆಗಳಲ್ಲದಿದ್ದರೂ, ಕನಿಷ್ಠಪಕ್ಷ ಒಂದು ಅಥವಾ ಎರಡು ಗಂಟೆಗಳ ಕಾಲವಾದರೂ ನೀವು ಸಂತೋಷವಾಗಿರಬಹುದು! ನಿಮಗೆ ಯಾವತ್ತೂ ನೀರಿನಲ್ಲಿ (ಸಂತೋಷ) ತೇಲುವ ಒಂದು ಮೀನಾಗಿರಲು ಸಾಧ್ಯವಾಗದೇ ಇರಬಹುದು, ಆದರೆ ಕನಿಷ್ಠಪಕ್ಷ ಸ್ವಲ್ಪ ಹೊತ್ತಿನ ವರೆಗೆ ನೀವೊಂದು ಸ್ನಾನವನ್ನಾದರೂ ಮಾಡಬಹುದು. ಜ್ಞಾನದ ಉದ್ದೇಶವೇ ಇದು.

ಭಗವದ್ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ,

’ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ I
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ II’  (೪.೩೮)

ಇದರರ್ಥ: ಜ್ಞಾನಕ್ಕಿಂತ ಶ್ರೇಷ್ಠವಾದ, ಪರಿಶುದ್ಧಕಾರಕವು ಇನ್ನೊಂದಿಲ್ಲ.

ಎಲ್ಲವೂ ತಾತ್ಕಾಲಿಕ. ಎಲ್ಲವೂ ಏನೂ ಅಲ್ಲ. ಇದೆಲ್ಲವೂ ಏನೂ ಅಲ್ಲ. ನೀವು ನೋಡುವ, ಸುತ್ತಲೂ ನಡೆದಾಡುತ್ತಿರುವ ಜನರೆಲ್ಲಾ ಪಂಚಭೂತಗಳಿಂದ ಮಾಡಲ್ಪಟ್ಟಿರುವ ಬೊಂಬೆಗಳು ಮಾತ್ರವೆಂಬುದನ್ನು ನೋಡಿ. ತಮ್ಮ ಕರ್ಮಗಳ ಮತ್ತು ಸಂಸ್ಕಾರಗಳ ಕಾರಣದಿಂದಾಗಿ ಅವರು ತಾವು ವರ್ತಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ತಮ್ಮ ನಕ್ಷತ್ರಗಳ ಪ್ರಭಾವದ ಕಾರಣದಿಂದಾಗಿ ಕೆಲವರು ಜೀವನದಲ್ಲಿ ಮೇಲೇರುತ್ತಿದ್ದರೆ, ಬೇರೆ ಯಾವುದೋ ನಕ್ಷತ್ರಗಳ ಪ್ರಭಾವದಿಂದಾಗಿ ಕೆಲವರು ಅವನತಿ ಹೊಂದುತ್ತಿದ್ದಾರೆ (ಜ್ಯೋತಿಷ್ಯದ ಬಗ್ಗೆ ಉಲ್ಲೇಖಿಸುತ್ತಾ).

ಅವರೆಲ್ಲರೂ ಇದೂ ಅದೂ ಮಾಡುತ್ತಾ, ಇಲ್ಲಿ ಅಲ್ಲಿ ಓಡಾಡುತ್ತಿದ್ದಾರೆ, ಆದರೆ ಒಂದು ದಿನ ಎಲ್ಲವೂ ಕೊನೆಯಾಗುವುದು. ಹಾಗಾಗಿ ನೀವು ಕೇವಲ, ಅವರೇನು ಮಾಡುತ್ತಿರುವರೋ ಅದನ್ನು ಅವರು ಮಾಡಲು ಬಿಡಿ. ಅದರಿಂದ ನಿಮಗೇನಾಗಬೇಕು? ನೀವು ಸಂತೋಷವಾಗಿ ಜೀವಿಸುವುದನ್ನು ಮುಂದುವರಿಸಬೇಕು. ಇದರ ಬಗ್ಗೆ ನಾವು ಮತ್ತೆ ಮತ್ತೆ ನಮಗೆ ಜ್ಞಾಪಿಸಿಕೊಳ್ಳಬೇಕಾಗಿದೆ. ನೀವು ಸಮಾಜದಲ್ಲಿ ನಡೆಯುತ್ತಿರಬೇಕಾದರೆ, ಈ ಧೂಳು ನಿಮ್ಮ ಮೇಲೆ ಎಷ್ಟೇ ಸಲ ಶೇಖರವಾಗಲಿ, ಅದನ್ನು ಸುಮ್ಮನೆ ಕೊಡವಿ ಮುಂದೆ ಸಾಗಿ. ಯಾವುದೆಲ್ಲಾ ನಿಮ್ಮದಾಗಿರುವುದೋ ಅದು ಖಂಡಿತವಾಗಿಯೂ ನಿಮ್ಮ ಬಳಿಗೆ ಬರುವುದು!

ಈಗ, ಇದನ್ನು ತಿಳಿದಿರುವುದರ ಅರ್ಥ, ನೀವು ಯಾವುದೇ ಪ್ರಯತ್ನವನ್ನು ಹಾಕದೆ, ಏನೂ ಮಾಡದೆ ಮನೆಯಲ್ಲಿ ಸುಮ್ಮನೆ ಕುಳಿತಿರಬೇಕೆಂದಲ್ಲ. ನೀವು ಮನೆಯಲ್ಲಿ ಕುಳಿತುಕೊಂಡು, ’ಓ ಗುರುದೇವ, ದಯವಿಟ್ಟು ನನಗೆ ಮದುವೆ ಮಾಡಿಸಿ. ದಯವಿಟ್ಟು ನನಗೆ ಒಬ್ಬ ವಧು ಅಥವಾ ವರನನ್ನು ಕಂಡುಹುಡುಕಿ’ ಎಂದು ಹೇಳಿದರೆ, ಇಲ್ಲ! ನೀವು ಕೂಡಾ ಒಂದು ಪ್ರಯತ್ನವನ್ನು ಮಾಡಲೇಬೇಕು.

ನೀವೊಂದು ದುಃಖದ ಮುಖ ಹೊತ್ತು ಕುಳಿತರೆ, ನಿಮ್ಮನ್ನು ಯಾರು ಮದುವೆಯಾಗುತ್ತಾರೆ! ಕಡಿಮೆಪಕ್ಷ ಮುಗುಳ್ನಗಿ ಮತ್ತು ಉಲ್ಲಾಸದಿಂದಿರಿ. ಅದಕ್ಕಾಗಿಯೇ ನಾನು ಇಲ್ಲಿ ಒಂದು ವೈವಾಹಿಕ ವಿಭಾಗವನ್ನು ತೆರೆದಿರುವುದು (ನಗು). ಆದರೆ ಅದರ ಪ್ರಗತಿ ತುಂಬಾ ನಿಧಾನವಾಗಿದೆ! ನೀವೆಲ್ಲರೂ ಬಂದು ಅಲ್ಲಿ ವಿಷಯಗಳು ಚಲಿಸುವಂತೆ ಮಾಡಿ.

ವೈವಾಹಿಕ ಕಚೇರಿಯಲ್ಲಿ ಹೋಗಿ ಕುಳಿತುಕೊಳ್ಳಿ ಮತ್ತು ನಿಮಗಾಗಿ ಯಾರನ್ನಾದರೂ ಬೇಗನೇ ಕಂಡುಹುಡುಕುವಂತೆ ಅಲ್ಲಿನ ನೌಕರವರ್ಗದವರಲ್ಲಿ ಹೇಳಿ. ಅತಿಯಾಗಿ ಆಯ್ಕೆಮಾಡುವವರಾಗಬೇಡಿ. ನಿಮಗೆ ಯಾರು ಸಿಗುವರೋ ಅವರನ್ನು ಆಯ್ಕೆ ಮಾಡಿ, ಅಷ್ಟೇ! ನಂತರ ಎಲ್ಲವೂ ಚೆನ್ನಾಗಿರುವುದು.

ಹೇಗಿದ್ದರೂ ಇದೆಲ್ಲವೂ ಕೇವಲ ಕೆಲವು ದಿನಗಳ ವರೆಗೆ ಮಾತ್ರ ಉಳಿಯಲಿರುವುದು, ಅದು ಹಿತಕರವಾಗಿರಲಿ ಅಥವಾ ಅಹಿತಕರವಾಗಿರಲಿ. ಬಹಳ ಬೇಗನೇ ಜೀವನವು ಮುಗಿಯುವುದು. ಒಂದು ದಿನ ನಾವೆಲ್ಲರೂ ಈ ಪ್ರಪಂಚಕ್ಕೆ ವಿದಾಯ ಹೇಳಬೇಕಾಗುತ್ತದೆ. ಯಾರೂ ಶಾಶ್ವತವಾಗಿ ಉಳಿಯುವುದಿಲ್ಲ. ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಲು ನೀವು ೬೦ ವರ್ಷಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನವೇನು?

ಅರವತ್ತು ವರ್ಷ ವಯಸ್ಸಿನ ಸಜ್ಜನರೊಬ್ಬರು ನನ್ನ ಬಳಿಗೆ ಬಂದು ಹೇಳಿದರು, ’ಗುರುದೇವ, ದಯವಿಟ್ಟು ನನಗೆ ಒಬ್ಬರನ್ನು ಹುಡುಕಿಕೊಡಿ. ನನ್ನ ಆತ್ಮಸಂಗಾತಿಯು ಎಲ್ಲಾದರೂ ಇರುವರೇ?’

ನಾನು ಅವರಿಗೆ ಅಂದೆ, ’ಅಷ್ಟೊಂದು ವರ್ಷಗಳ ಹುಡುಕಾಟದ ಬಳಿಕವೂ ನಿಮಗೆ ನಿಮ್ಮ ಆತ್ಮ ಸಂಗಾತಿ ಲಭಿಸಿಲ್ಲವಾದರೆ, ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಕಾಯಬೇಕು. ಬಹಳ ಕಾಲವಲ್ಲ, ಕೇವಲ ಇನ್ನೊಂದು ೨೦ ವರ್ಷಗಳು. ಪರಿಪೂರ್ಣತೆಯ ಆ ಹಂತವು ಇನ್ನೂ ನಿಮ್ಮಲ್ಲಿ ಕಾಣಿಸುತ್ತಿಲ್ಲ ಮತ್ತು ಅದು ನಿಮ್ಮ ಆತ್ಮ ಸಂಗಾತಿಯಿಂದಲೂ ಗುರುತಿಸಲ್ಪಡಬೇಕು’ (ನಗು).

ನಾವು ಇತರರಲ್ಲಿ ಎಲ್ಲವನ್ನೂ ಪರಿಪೂರ್ಣವಾಗಿ ನೋಡಲು ಬಯಸುತ್ತೇವೆ, ಆದರೆ ನಾವು ನಮ್ಮ ಕಡೆಗೆ ನೋಡಿಕೊಳ್ಳಲು ಮರೆತುಬಿಡುತ್ತೇವೆ. ನಾವು ನಮ್ಮ ಬಗ್ಗೆ ಚಿಂತನೆ ಮಾಡುವುದಿಲ್ಲ. ನಿಮ್ಮ ಬಗ್ಗೆ ಚಿಂತನೆ ಮಾಡಿ, ಆದರೆ ನಂತರ ವಿಶ್ಲೇಷಣೆಯಲ್ಲಿ ಅತಿಯಾಗಿ ಸಿಕ್ಕಿಹಾಕಿಕೊಳ್ಳಬೇಡಿ. ಅದನ್ನು ಅತಿಯಾಗಿ ಮಾಡಬೇಡಿ. ನಿಮ್ಮಲ್ಲಿ ಕೆಲವು ಒಳ್ಳೆಯ ಗುಣಗಳಿವೆ ಮತ್ತು ಕೆಲವು ಅಷ್ಟೊಂದು ಒಳ್ಳೆಯದಲ್ಲದ ಗುಣಗಳಿವೆ, ಅದು ಪರವಾಗಿಲ್ಲ. ಸುಮ್ಮನೆ ಮುಂದಕ್ಕೆ ಸಾಗುತ್ತಾ ಇರಿ. ಕೆಲವು ವಿಷಯಗಳು ಚೆನ್ನಾಗಿರುತ್ತವೆ, ಕೆಲವು ಚೆನ್ನಾಗಿರುವುದಿಲ್ಲ ಮತ್ತು ಅದು ದೊಡ್ಡ ವಿಷಯವಲ್ಲ. ನೀವು ಸುಮ್ಮನೇ ಮುಂದಕ್ಕೆ ಸಾಗುತ್ತಾ ಇರಬೇಕು.