ಬುಧವಾರ, ಮಾರ್ಚ್ 13, 2013

ನಿಮ್ಮಲ್ಲಿರುವುದನ್ನು ಮಾತ್ರ ನಿಮಗೆ ನೀಡಲು ಸಾಧ್ಯ

ಬೆಂಗಳೂರು, ಭಾರತ
೧೩ ಮಾರ್ಚ್ ೨೦೧೩

ಪ್ರಶ್ನೆ: ಗುರುದೇವ, ನಿಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಸ್ವಾತಂತ್ರ್ಯವಿದೆಯೆಂದೂ ಮತ್ತು ನಿಮ್ಮದೇನಿದೆಯೋ ಅದನ್ನು ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲವೆಂದೂ ನೀವು ಹೇಳಿದಿರಿ. ಈಗ, ಯಾವುದಕ್ಕಾದರೂ ಇರುವ ನನ್ನ ಹಕ್ಕನ್ನು ಯಾರಾದರೂ ಕಿತ್ತುಕೊಂಡು ಹೋದರೆ, ಅದು ನನ್ನದೆಂದು ನಂಬುತ್ತಾ ನಾನು ಕಾಯುತ್ತಾ ಕುಳಿತುಕೊಳ್ಳಬೇಕೇ ಮತ್ತು ಅದು ನನ್ನ ಬಳಿಗೆ ಬರುವುದೇ ಅಥವಾ ನಾನು ಹೋರಾಡಬೇಕೇ?

ಶ್ರೀ ಶ್ರೀ ರವಿ ಶಂಕರ್:  ಮೊದಲನೆಯದಾಗಿ, ಒಬ್ಬರು ನಿನ್ನ ಹಕ್ಕುಗಳನ್ನು ತೆಗೆದುಕೊಂಡು ಹೋದರೆಂದು ನೀನು ನಂಬಿದರೆ, ನೀನು ನಿನ್ನ ಯೋಚನೆಯನ್ನು ತಿದ್ದಬೇಕು. ಅದು ನಿನ್ನ ಹಕ್ಕಾಗಿದ್ದರೆ, ಯಾರಿಗೂ ಅದನ್ನು ನಿನ್ನಿಂದ ದೂರ ಒಯ್ಯಲು ಸಾಧ್ಯವಿಲ್ಲ. ನೀನು ಎದ್ದುನಿಂತು ನಿನ್ನ ಹಕ್ಕುಗಳನ್ನು ತೆಗೆದುಕೊಳ್ಳಬೇಕು.

ಇದನ್ನು ನಾನು ಹಿಂದಿಯಲ್ಲಿ ಹೇಳಿರುವೆನು: ಯಾವುದರ ಮೇಲಾದರೂ ನಿಮಗಿರುವ ಅಧಿಕಾರದ ಭಾವನೆಯನ್ನು ಬಿಟ್ಟುಬಿಡಿ. ನನಗೆ ಯಾವುದರ ಮೇಲೆಯಾದರೂ ಅಧಿಕಾರವಿದೆಯೆಂದು ನೀವು ಹೇಳಿದರೆ, ಸುಮ್ಮನೆ ಅಧಿಕಾರವನ್ನು ಬಿಟ್ಟುಬಿಡಿ. ಇಲ್ಲಿ, ಅಧಿಕಾರ ಎಂಬುದು ಬಳಸುವ ಸರಿಯಾದ ಪದವಾಗಿರಬಹುದು. ನಾನೇನು ಹೇಳುತ್ತಿರುವೆನೆಂಬುದು ನಿಮಗೆ ಅರ್ಥವಾಗುತ್ತಿದೆಯೇ?

ನೋಡಿ, ನೀವು ನಿಮ್ಮ ಅಧಿಕಾರವನ್ನು ನಿಮ್ಮ ಪ್ರೀತಿಪಾತ್ರರಿಗೆ ಕೊಡುವಾಗ, ಅದು ಖಂಡಿತವಾಗಿಯೂ ನಿಮ್ಮ ಬಳಿಗೆ ತಿರುಗಿ ಬರುತ್ತದೆ.

ಹೆಚ್ಚಾಗಿ, ನಾವು ನಮ್ಮ ಅಧಿಕಾರವನ್ನು ಇತರರ ಮೇಲೆ ಬಲವಂತವಾಗಿ ಹೇರಲು ಬಯಸುತ್ತೇವೆ.

ಉದಾಹರಣೆಗೆ, ನಿಮಗೆ ನಿಮ್ಮ ಪತ್ನಿಯ ಮೇಲೆ ಅಧಿಕಾರವಿದೆ. ಆದರೆ, ನೀವು ನಿಮ್ಮ ಪತ್ನಿಯ ಮೇಲೆ ನಿಮ್ಮ ಅಧಿಕಾರವನ್ನು ಚಲಾಯಿಸದಿದ್ದರೆ, ಮತ್ತು ಬದಲಾಗಿ ಅವಳಿಗೆ ನಿಮ್ಮ ಅಧಿಕಾರವನ್ನು ಬಿಟ್ಟು ಕೊಟ್ಟರೆ, ಆಗ ಅದು ಸ್ವಾತಂತ್ರ್ಯವನ್ನು ತರುತ್ತದೆ.
ನಾನೇನು ಹೇಳುತ್ತಿರುವೆನೆಂದು ನಿಮಗೆ ತಿಳಿಯುತ್ತಿದೆಯೇ?

ನಿಮ್ಮ ಮಕ್ಕಳ ಮೇಲೆ ನಿಮಗೊಂದು ಹಕ್ಕಿದೆ. ನಾನೇನು ಹೇಳುತ್ತಿರುವೆನೆಂದರೆ, ನಿಮ್ಮ ಅಧಿಕಾರವನ್ನು ನಿಮ್ಮ ಮಕ್ಕಳ ಮೇಲೆ ಚಲಾಯಿಸಬೇಡಿ, ಬದಲಾಗಿ ನಿಮ್ಮ ಅಧಿಕಾರವನ್ನು ಅವರಿಗೆ ಕೊಡಿ. ಅದು ಅವರಿಗೆ ಸ್ವಾತಂತ್ರ್ಯವನ್ನು ತರುತ್ತದೆ.

ನೀವು ನಿಮ್ಮ ಪ್ರೀತಿಪಾತ್ರರ ಮೇಲೆ ನಿಮ್ಮ ಅಧಿಕಾರವನ್ನು ಚಲಾಯಿಸದೇ ಇದ್ದರೆ, ಆಗ ಅದು ಸ್ವಾತಂತ್ರ್ಯವನ್ನು ತರುತ್ತದೆ.
ನೀವೊಬ್ಬರು ಶಾಲಾ ಶಿಕ್ಷಕರೆಂದು ಇಟ್ಟುಕೊಳ್ಳಿ, ನಿಮಗೆ ಖಂಡಿತವಾಗಿಯೂ ಎಲ್ಲಾ ಮಕ್ಕಳ ಮೇಲೊಂದು ಅಧಿಕಾರವಿರುತ್ತದೆ. ಈಗ ನೀವು ಮಕ್ಕಳ ಮೇಲೆ ನಿಮ್ಮ ಅಧಿಕಾರ ಚಲಾಯಿಸಿದರೆ, ಅವರು ಓಡಿಹೋಗುವರು. ಸಾಧಾರಣವಾಗಿ ಸಂಭವಿಸುವುದು ಅದುವೇ ಅಲ್ಲವೇ?

ಅದೇ ರೀತಿ, ನಿಮ್ಮ ಕೈಕೆಳಗೆ ೫೦ ನೌಕರರು ಕೆಲಸ ಮಾಡುತ್ತಿರುವರೆಂದು ಇಟ್ಟುಕೊಳ್ಳೋಣ ಮತ್ತು ನೀವು ಅವರ ಮೇಲೆ ನಿಮ್ಮ ಅಧಿಕಾರವನ್ನು ಚಲಾಯಿಸುತ್ತೀರಿ. ಆಗ ಕೆಲಸ ಮಾಡುವ ಸ್ಥಳವು ಅವರಿಗೆ ಹಿತಕರವಾಗಿರದು. ಆದುದರಿಂದ, ಬದಲಾಗಿ ನೀವು ನಿಮ್ಮ ಅಧಿಕಾರಗಳನ್ನು ಬಿಟ್ಟುಕೊಡಬೇಕು.

ತಮ್ಮ ಅಧಿಕಾರವನ್ನು ಯಾರು ಬಿಟ್ಟುಕೊಡಬಲ್ಲರು? ಯಾರಿಗೆ ಅವರೊಂದಿಗೆ ಒಂದು ಸಂಪೂರ್ಣ ಅಧಿಕಾರವಿರುವುದೋ ಅವರು ಮಾತ್ರ.

ಇದು ಒಂದು ದಾನ ನೀಡುವಂತೆ ಆದರೆ, ಇನ್ನೊಂದು, ಮೊದಲಿಗೆ ನಿಮ್ಮಲ್ಲಿಯೇ ಹಣವಿಲ್ಲದಿರುವಾಗ ದಾನ ಮಾಡಲು ಪ್ರಯತ್ನಿಸಿದಂತೆ.

ನೀವು ಹೇಳುತ್ತಿರುವುದೇನೆಂದರೆ, ’ನನ್ನಲ್ಲಿಯೇ ಹಣವಿಲ್ಲದಿರುವಾಗ ನಾನು ಹೇಗೆ ಕೊಡಲು ಸಾಧ್ಯ?’ ಎಂದು.
ನಾನು ಹೇಳುತ್ತಿರುವುದೇನೆಂದರೆ, ’ನೀವು ಸ್ವಲ್ಪ ದಾನ ಮಾಡಬೇಕು.’

ಹೀಗೆ, ಹಕ್ಕನ್ನು ಈಗಾಗಲೇ ನೀವು ಸಂಪೂರ್ಣವಾಗಿ ಸ್ವಂತದ್ದಾಗಿಸಿಕೊಂಡಿದ್ದರೆ ಮಾತ್ರ ನಿಮಗೆ ಅದನ್ನು ನೀಡಲು ಸಾಧ್ಯ. ತಿಳಿಯಿತೇ? ನೀನು ನಿನ್ನ ಹಕ್ಕುಗಳನ್ನು ನೀಡಲು ಸಾಧ್ಯವಾಗುವುದು ಯಾವಾಗ ಎಂದರೆ, ಅದು ನಿನ್ನದು ಎಂಬುದು ನಿನಗೆ ತಿಳಿದಿರುವಾಗ ಮಾತ್ರ. ಯಾರಾದರೂ ನಿನ್ನ ಹಕ್ಕುಗಳನ್ನು ಕಸಿದುಕೊಂಡಿರುವರು ಎಂದಾದರೆ, ಆಗ ನೀನು ಅವರೊಂದಿಗೆ ಹೋರಾಡಬೇಕು. ಆದರೆ, ಅದನ್ನು ನೀನು ಅವರಿಗೆ ನೀಡಿರುವೆಯಾದರೆ, ಆಗ ಅದೊಂದು ಬೇರೆ ವಿಷಯ. ಆಗ ಅದು ಪ್ರೀತಿ ಎಂದು ಕರೆಯಲ್ಪಡುತ್ತದೆ.

ನಿಮ್ಮ ಹಕ್ಕನ್ನು ಬೇರೊಬ್ಬರಿಗೆ ಬಿಟ್ಟುಕೊಡುವುದು ಪ್ರೀತಿಯ ಒಂದು ಪ್ರಕ್ರಿಯೆಯಾಗಿದೆ, ಆದರೆ ಯಾರಾದರೂ ನಿಮ್ಮ ಹಕ್ಕನ್ನು ಕಸಿದುಕೊಂಡಿರುವುದಾದರೆ, ಆಗ ನೀವು ಅದನ್ನು ಅವರಿಗೆ ನೀಡಿಯೇ ಇಲ್ಲ. ಆಗ ನೀವು ಹೋರಾಡಿ ಅದನ್ನು ಮರಳಿ ತೆಗೆದುಕೊಳ್ಳಬೇಕು. ನಿನಗಿದು ಅರ್ಥವಾಯಿತೇ?

ಈಗ ನೀನೇನು ಮಾಡುವೆ? ನಿನ್ನ ಹಕ್ಕುಗಳನ್ನು ಮರಳಿ ಪಡೆಯಲು ನೀನು ಕಾಯುವೆಯಾ?

ನಿನಗೊಂದು ಮನೆಯಿದ್ದು, ಕೆಲವು ರೌಡಿಗಳು ಬಂದು ನಿನ್ನಿಂದ ನಿನ್ನ ಆಸ್ತಿಯನ್ನು ಕಸಿದುಕೊಳ್ಳುತ್ತಾರೆಂದು ಇಟ್ಟುಕೊಳ್ಳೋಣ. ನಿನ್ನ ಆಸ್ತಿಯ ಮೇಲೆ ನಿನಗಿರುವ ಹಕ್ಕನ್ನು ನೀನು ಸುಮ್ಮನೆ ಬಿಟ್ಟುಕೊಡಬೇಕೇ? ಬೇಡವೆಂದು ನಾನು ಹೇಳುವೆನು. ನೀನು ಅವರ ವಿರುದ್ಧವಾಗಿ ಎದ್ದುನಿಲ್ಲಬೇಕು, ಒಬ್ಬರು ಒಳ್ಳೆಯ ವಕೀಲರನ್ನು ಕರೆದುಕೊಂಡು ಪೋಲೀಸರ ಬಳಿಗೆ ಹೋಗಬೇಕು ಮತ್ತು ನಿನ್ನ ಹಕ್ಕುಗಳನ್ನು ಮರಳಿ ಪಡೆಯಲು ಬೇಕಾಗಿರುವ ಎಲ್ಲವನ್ನೂ ಮಾಡಬೇಕು. ಆದರೆ ನೀನು ಸಾಯುವ ಮೊದಲು ಕಡಿಮೆಪಕ್ಷ ಯಾರಿಗಾದರೂ ಹಕ್ಕನ್ನು (ನಿನ್ನ ಆಸ್ತಿಯ) ಬಿಟ್ಟುಕೊಡು, ಇಲ್ಲದಿದ್ದರೆ ಅದು ಸರಕಾರಕ್ಕೆ ಹೋದೀತು ಅಥವಾ ಅದು ವಾರಸುದಾರರಿಲ್ಲದಾಗುವುದು. ಕಡಿಮೆಪಕ್ಷ, ಈ ಭೂಮಿಯನ್ನು ತೊರೆಯುವ ಮೊದಲು ನೀನು ನಿನ್ನ ಆಸ್ತಿಯ ಮೇಲಿನ ಹಕ್ಕನ್ನು ಯಾರಿಗಾದರೂ ಬಿಟ್ಟುಕೊಡು.

ಪ್ರಶ್ನೆ: ಗುರುದೇವ, ನನಗೆ ರಾತ್ರಿ ಕೆಟ್ಟ ಕನಸುಗಳು ಬೀಳುತ್ತವೆ ಮತ್ತು ಇದು ಆವಾಗಾವಾಗ ಬರುತ್ತವೆ. ನನಗೆ ಭಯವಾಗುತ್ತದೆ. ದಯವಿಟ್ಟು ಸಹಾಯ ಮಾಡಿ.

ಶ್ರೀ ಶ್ರೀ ರವಿ ಶಂಕರ್: ಭಯಪಡಬೇಕಾದ ಅಗತ್ಯವಿಲ್ಲ. ರಾತ್ರಿ ಮಲಗುವ ಮೊದಲು ಕೇವಲ ಓಂ ನಮಃ ಶಿವಾಯ ಎಂದು ಅಥವಾ ಜೈ ಗುರುದೇವ್ ಎಂದು ಜಪಿಸು, ಅಥವಾ ನೀನು ಎರಡನ್ನೂ ಹೇಳಿ ನಂತರ ಮಲಗು.

ನೋಡಿ, ನಮ್ಮ ದೇಶದಲ್ಲಿ ಮತ್ತು ಪ್ರಪಂಚದ ಸುತ್ತಲಿರುವ ಇತರ ದೇಶಗಳಲ್ಲಿ, ಮಲಗುವ ಮೊದಲು ಮಕ್ಕಳು ಪ್ರಾರ್ಥನೆಗಳನ್ನು ಹೇಳುವಂತೆ ಮಾಡಲಾಗುತ್ತಿತ್ತು, ಅಲ್ಲವೇ? ಈ ದಿನಗಳಲ್ಲಿ ಯಾರಾದರೂ ಇದನ್ನು ಅನುಸರಿಸುವರೇ? ಇಲ್ಲಿರುವ ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಮಾಡುತ್ತೀರಿ?

(ಕೆಲವು ಜನರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನೋಡಿ, ಇಲ್ಲಿ ಕುಳಿತಿರುವವರಲ್ಲಿ ಕೆಲವೇ ಕೆಲವರು ಇದನ್ನು ಅನುಸರಿಸುತ್ತಾರೆ. ಮಲಗುವ ಮೊದಲು ನೀವೆಲ್ಲರೂ ಪ್ರಾರ್ಥಿಸಬೇಕು ಮತ್ತು ಮಕ್ಕಳು ಕೂಡಾ ಪ್ರಾರ್ಥಿಸುವಂತೆ ಮಾಡಬೇಕು. ಒಂದು ಶ್ಲೋಕವನ್ನು ಜಪಿಸಿ, ಅಥವಾ ನೀವು ಪೂಜಿಸುವ ಯಾವುದಾದರೂ ದೇವತೆಯ ಹೆಸರನ್ನು ಹೇಳಿ ಅಥವಾ ನಿಮಗೆ ನೀಡಲಾಗಿರುವ ದಿನಕ್ಕಾಗಿ ದೇವರಿಗೆ ಧನ್ಯವಾದಗಳನ್ನರ್ಪಿಸಿ.

ಸಂಸ್ಕೃತದಲ್ಲಿ ಮಾತ್ರ ಪ್ರಾರ್ಥನೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಪ್ರಾರ್ಥನೆಯನ್ನು ಹೇಳಿದರೂ ಆಗಬಹುದು. ದೇವರಿಗೆ ಸಂಸ್ಕೃತ ಮಾತ್ರವಲ್ಲ ತಿಳಿದಿರುವುದು. ಅವನಿಗೆ ನಿಮ್ಮ ಪ್ರಾದೇಶಿಕ ಭಾಷೆಗಳು ಕೂಡಾ ಅರ್ಥವಾಗುತ್ತವೆ.

ಆದುದರಿಂದ ಸುಮ್ಮನೆ ಪ್ರಾರ್ಥನೆ ಮಾಡಿ. ಮುಖ್ಯವೇನೆಂದರೆ, ಭಾವನೆ. ಆದುದರಿಂದ, ನೀವು ಮಲಗುವ ಮೊದಲು ನಿಮ್ಮ ಕೈಗಳನ್ನು ಜೋಡಿಸಿ ಪ್ರಾರ್ಥನೆ ಮಾಡಿ, ’ಈ ದಿನದ ಉಡುಗೊರೆಗಾಗಿ ನಿಮಗೆ ಧನ್ಯವಾದಗಳು ದೇವರೇ. ಇವತ್ತು ರಾತ್ರಿ ನಾನು ಚೆನ್ನಾಗಿ ನಿದ್ರಿಸುವಂತೆ ಮತ್ತು ನನ್ನ ನಾಳಿನ ದಿನವು ಒಳ್ಳೆಯದಾಗಿರುವಂತೆ ನನಗೆ ಆಶೀರ್ವಾದ ಮಾಡಿ.’

ಹೀಗೆ ನೀವು ಇಂತಹ ಕೆಲವು ಸಾಲುಗಳನ್ನು ಹೇಳಬಹುದು ಅಥವಾ, ನೀವು ಸುಮ್ಮನೆ ದೇವರನ್ನು ನೆನಪಿಸಿಕೊಂಡು, ನಿಮಗೆ ತಿಳಿದಿರುವ ಯಾವುದೇ ದೇವರ ಹೆಸರನ್ನು ಜಪಿಸಬಹುದು. ನೀವು ನಿಮ್ಮ ದೇವತೆಯ ಅಥವಾ ನಿಮ್ಮ ಗುರುವಿನ ಅಥವಾ ಯಾವುದೇ ಸಂತರ ಹೆಸರನ್ನು ಜಪಿಸಬಹುದು. ಪ್ರಾಥನೆ ಮಾಡಿ ಮತ್ತು ಎಲ್ಲವನ್ನೂ ಅವರಿಗೆ ಸಮರ್ಪಿಸಿ ನಿದ್ದೆ ಮಾಡಿ.

ಪ್ರಾಚೀನ ದಿನಗಳಲ್ಲಿ, ಮಕ್ಕಳು ತಮ್ಮ ತಾಯಿ ಮತ್ತು ತಂದೆಯರನ್ನು ಪ್ರಾರ್ಥಿಸುತ್ತಿದ್ದರು ಮತ್ತು ನಂತರ ನಿದ್ರಿಸುತ್ತಿದ್ದರು. ಆದರೆ ಈ ದಿನಗಳಲ್ಲಿ ಮಕ್ಕಳಿಗೆ ತಮ್ಮ ಹೆತ್ತವರ ಕಡೆಗೆ ಅಂತಹ ಭಕ್ತಿಯಿಲ್ಲ.

ಹೆತ್ತವರು ದಿನವಿಡೀ ಪರಸ್ಪರರೊಂದಿಗೆ ಜಗಳವಾಡುತ್ತಾ ಇದ್ದರೆ, ಆಗ ಮಕ್ಕಳಿಗೆ ಅವರನ್ನು ಪ್ರಾರ್ಥಿಸಬೇಕೆಂದು ಅನ್ನಿಸಲು ಹೇಗೆ ಸಾಧ್ಯ? ಅವರು ಯೋಚಿಸುತ್ತಾರೆ, ’ಹೆತ್ತವರು ಪರಸ್ಪರರೊಂದಿಗೆ ಜಗಳವಾಡುತ್ತಾ ಇರುತ್ತಾರೆ, ಅವರನ್ನು ನಾವು ದೇವರೆಂದು ನೋಡಲು ಹೇಗೆ ಸಾಧ್ಯ?’

ನೀವು ದೇವರನ್ನು ಅಥವಾ ಇತರ ಯಾವುದೇ ದೇವತೆಯನ್ನು ನಂಬುವುದಿಲ್ಲವಾದರೆ, ಆಗಲೂ ಪರವಾಗಿಲ್ಲ. ದೇವರನ್ನು ನಂಬಬೇಕೆಂದು ಯಾವುದೇ ಒತ್ತಾಯವಿಲ್ಲ. ಅಂತಹ ಸಂದರ್ಭದಲ್ಲಿ, ಕೆಲವು ಕ್ಷಣಗಳವರೆಗೆ ನಿಮ್ಮೊಂದಿಗೆಯೇ ಮೌನವಾಗಿ ಕುಳಿತುಕೊಳ್ಳಿ ಮತ್ತು ಮನಸ್ಸನ್ನು ಮೌನವಾಗಿಸಿ. ಸುಮ್ಮನೆ ನಿಮಗೆ ನೀವೇ ಹೀಗೆಂದು ಜ್ಞಾಪಿಸಿಕೊಳ್ಳಿ, ’ನನ್ನ ಆತ್ಮವು ಶಾಶ್ವತವಾದುದು ಮತ್ತು ನಾನು ಪರಿಶುದ್ಧನು.’

ಅಷ್ಟಾವಕ್ರ ಗೀತೆಯಲ್ಲಿ, ’ಅಹೋ ಅಹಂ ನಮೋ ಮಹಿಯಮ್’ ಎಂದು ಹೇಳಲಾಗಿದೆ. ಇದರರ್ಥ, ’ನಾನು ನನಗೇ ತಲೆಬಾಗಿ ನಮಸ್ಕರಿಸುವೆನು’ ಎಂದು. ನಮ್ಮೊಳಗೆ ಪಶ್ಚಾತ್ತಾಪದ ಯಾವುದೇ ಭಾವನೆಯಿಲ್ಲದಿರುವಾಗ ಮಾತ್ರ ನಾವು ಹೀಗೆನ್ನಲು ಸಾಧ್ಯ.

ಈ ರೀತಿಯಲ್ಲಿ ಯೋಚಿಸಿಕೊಂಡು, ನಿಮ್ಮೊಳಗೆಯೇ ಸುಮ್ಮನೆ ವಿಶ್ರಾಮ ಮಾಡಿ. ಕಡಿಮೆಪಕ್ಷ ನೀವು ಇಷ್ಟಾದರೂ ಮಾಡಬೇಕು. ಆದುದರಿಂದ, ಸ್ವಲ್ಪ ಸಮಯ ಧ್ಯಾನ ಮಾಡಿ ಮತ್ತು ನಂತರ ನಿದ್ರಿಸಿ. ಆಗ ನಿಮಗೆ ಕೆಟ್ಟ ಕನಸುಗಳು ಬೀಳವು ಮತ್ತು ನಿಮಗೆ ಒಳ್ಳೆಯ ಗುಣಮಟ್ಟದ ನಿದ್ರೆಯು ಬರುವುದು.

ಪ್ರಶ್ನೆ: ಭಗವಾನ್ ಬ್ರಹ್ಮನಿಗೆ ಉತ್ತರ ಭಾರತವನ್ನು ಹೊರತುಪಡಿಸಿ ಬೇರೆಲ್ಲೂ ದೇವಾಲಯವಿಲ್ಲ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಭಗವಾನ್ ಬ್ರಹ್ಮನಿಗೆ ಯಾವುದೇ ದೇವಾಲಯವಿಲ್ಲ ಯಾಕೆಂದರೆ ಅವನು ತನ್ನ ಕೆಲಸವನ್ನು ಮುಗಿಸಿರುವನು ಮತ್ತು ಈಗಾಗಲೇ ಪ್ರಪಂಚವನ್ನೂ ಸೃಷ್ಟಿಸಿರುವನು. ಅವನ ಕೆಲಸವು ಮಾಡಿ ಆಗಿರುವಾಗ, ಜನರು ಯಾಕೆ ಅವನನ್ನು ಪೂಜಿಸುವರು?

ನೋಡು, ದೇವಸ್ಥಾನಗಳನ್ನು ಸಾಕಷ್ಟು ನಂತರ ಮಾಡಲಾಯಿತು. ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಭಗವಾನ್ ಮಹೇಶ್ವರ ಎಲ್ಲರೂ ಒಂದೇ ಆಗಿರುವ ವಿವಿಧ ಚೈತನ್ಯಗಳು. ’ಬ್ರಹ್ಮ ಶಿವೋಮೇಯ ಅಸ್ತು ಸದಾಶಿವ’  ಎಂದು ಹೇಳಲಾಗಿದೆ (ಭಗವಾನ್ ಶಿವನಿಗೆ ಅರ್ಪಿಸಲಾಗಿರುವ ಒಂದು ಹಿಂದೂ ಪೌರಾಣಿಕ ಗ್ರಂಥವಾದ ’ಲಿಂಗ ಪುರಾಣ’ ದ ಶ್ಲೋಕಗಳಿಂದ).

ಪ್ರಶ್ನೆ: ಪ್ರೀತಿಯ ಗುರುದೇವ, ಸರಕಾರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಒಬ್ಬಳು ಸ್ನೇಹಿತೆಯಿದ್ದಾಳೆ. ಕಳೆದ ಏಳು ತಿಂಗಳುಗಳಿಂದ ಅವಳು ತನ್ನ ವೇತನವನ್ನು ಪಡೆದಿಲ್ಲ, ಆದರೂ ಅವಳಿನ್ನೂ ನಗುತ್ತಿದ್ದಾಳೆ. ಇದನ್ನು ನಿಮಗೆ ತಿಳಿಯಪಡಿಸಬೇಕೆಂದು ಅವಳು ನನ್ನಲ್ಲಿ ಕೇಳಿಕೊಂಡಿದ್ದಾಳೆ ಗುರುದೇವ. 

ಶ್ರೀ ಶ್ರೀ ರವಿ ಶಂಕರ್: ಹೌದು, ನನಗಿದು ತಿಳಿದಿದೆ. ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಜನರು, ಇಡೀ ವರ್ಷ ತಮ್ಮ ವೇತನ ಪಡೆದಿಲ್ಲವೆಂಬುದು ಬಹಳ ಆಶ್ಚರ್ಯಕರವಾದುದು. ಅವರು ತಮ್ಮ ಬಿಲ್ಲುಗಳನ್ನು ಹೇಗೆ ಪಾವತಿಸುವರು? ಅದೇ ರೀತಿ ಕೆಲವು ವಿಮಾನಸಂಸ್ಥೆಗಳಲ್ಲಿ ಕೂಡಾ ಇದೇ ಸ್ಥಿತಿಯಿದೆ.

ವಿಮಾನಸಂಸ್ಥೆಗಳ ಕೆಲವು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೂ ಕೂಡಾ ಅವರಿಗೆ ಎಂಟರಿಂದ ಒಂಭತ್ತು ತಿಂಗಳುಗಳವರೆಗೆ ವೇತನ ಸಿಗಲಿಲ್ಲವೆಂಬುದನ್ನು ತಿಳಿದು ನನಗೆ ಆಶ್ಚರ್ಯವಾಯಿತು. ಇದು ಸಂಪೂರ್ಣ ಬೇಜವಾಬ್ದಾರಿಯಾಗಿದೆ. ಈ ಜನರಿಗೆ ತಮ್ಮ ನೌಕರಿಯನ್ನು ಬಿಡಲು ಸಾಧ್ಯವಿಲ್ಲ ಯಾಕೆಂದರೆ, ಇನ್ನೊಂದು ನೌಕರಿ ಪಡೆಯಲು ತಮಗೆ ಸಾಧ್ಯವಿದೆಯೇ ಇಲ್ಲವೇ ಎಂಬುದು ಅವರಿಗೆ ತಿಳಿಯದು. ಹಾಗಾಗಿ, ಬೇಗನೇ, ಒಂದಲ್ಲ ಒಂದು ದಿನ ತಮಗೆ ವೇತನ ಸಿಗುವುದೆಂಬ ಭರವಸೆಯಿಂದ ಅವರು ಕೆಲಸ ಮಾಡುತ್ತಿರುತ್ತಾರೆ. ಅವರು ಬೇಗನೇ ತಮ್ಮ ವೇತನ ಪಡೆಯಲೆಂದು ನಾವೆಲ್ಲರೂ ಪ್ರಾರ್ಥಿಸೋಣ.