ಶುಕ್ರವಾರ, ಮಾರ್ಚ್ 8, 2013

ಗುರು ತತ್ವ


ಬೆಂಗಳೂರು, ಭಾರತ
೮ ಮಾರ್ಚ್ ೨೦೧೩

ಪ್ರಶ್ನೆ: ಒಬ್ಬರು ಗುರುವಿನ ಜೊತೆಯಲ್ಲಿರುವಾಗ ಮತ್ತು ಪಥವನ್ನು ಅನುಸರಿಸುತ್ತಿರುವಾಗ ಕೂಡಾ ಶಾಸ್ತ್ರವಿಧಿಗಳಲ್ಲಿ ಭಾಗಿಯಾಗುವುದು ಅಥವಾ ನಡೆಸುವುದು ಆವಶ್ಯಕವೇ?

ಶ್ರೀ ಶ್ರೀ ರವಿ ಶಂಕರ್: ಗುರು ತತ್ವದ ಮೇಲೆ ನಿಮಗೆ ಅಚಲವಾದ ನಂಬಿಕೆಯಿದ್ದರೆ, ಆಗ ಬೇರೆ ಯಾವುದರ ಅಗತ್ಯವೂ ಇಲ್ಲ. ಆದರೆ, ನಿರ್ದಿಷ್ಟ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ನೀವು ಆಚರಿಸಬೇಕೆಂದು ನಿಮಗೆ ಅನ್ನಿಸಿದರೆ, ಆಗ ಅದು ಕೂಡಾ ಒಳ್ಳೆಯದೇ.

ಹಾಗೆಯೇ, ಗುರು ತತ್ವದಲ್ಲಿ ನಂಬಿಕೆಯಿಲ್ಲದೆಯೇ ಏನನ್ನಾದರೂ ಮಾಡಿದರೆ ಅದು ಯಾವುದೇ ಲಾಭಗಳನ್ನು ತರುವುದಿಲ್ಲ. ಗುರುವಿನ ಸಾನ್ನಿಧ್ಯವಿಲ್ಲದೆ, ಯಾವುದೇ ತಂತ್ರ ಅಥವಾ ಮಂತ್ರಗಳನ್ನು ಅಭ್ಯಾಸ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಿರದು. ನೀವು ನಿಮ್ಮನ್ನು ಗುರುವಿಗೆ ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡಿದ್ದರೆ, ಆಗ ಈ ಎಲ್ಲಾ ವಿಧಾನಗಳದ್ದು ಬಹಳ ಅಗತ್ಯ ಇಲ್ಲ. ಆದರೆ ನೀವು ಅದನ್ನು ಕೂಡಾ ಅಭ್ಯಾಸ ಮಾಡಲು ಇಚ್ಛಿಸಿದರೆ, ಅದರಲ್ಲೇನೂ ತೊಂದರೆಯಿಲ್ಲ.

ಇದಕ್ಕಾಗಿ, ಈ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ಸರಿಯಾಗಿ ಮಾಡಬಲ್ಲಂತಹ (ಧರ್ಮಗ್ರಂಥಗಳಿಂದ ಶಿಫಾರಸು ಮಾಡಲ್ಪಟ್ಟಂತೆ) ಒಬ್ಬರನ್ನು ನೀವು ಕಂಡುಹುಡುಕಬೇಕು ಮತ್ತು ಕೆಲವೊಮ್ಮೆ ನೀವು ನಿಜವಾಗಿ ಸ್ವಲ್ಪ ಕರ್ಮಕಾಂಡದಲ್ಲಿ (ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಂತಹ ಆಚರಣೆಗಳು ಮತ್ತು ಪವಿತ್ರ ಅಭ್ಯಾಸಗಳು) ಕೂಡಾ ತೊಡಗಬೇಕು; ವರ್ಷದಲ್ಲಿ ಒಂದು ಅಥವಾ ಎರಡು ಸಾರಿ. ನೀವು ಅವುಗಳನ್ನು ಅತಿಯಾಗಿ ಮಾಡಬೇಕೆಂದಿಲ್ಲ.

ಸ್ವಲ್ಪ ಪೂಜೆ ಮಾಡಿ, ಕೆಲವೊಮ್ಮೆ ಮನೆಯಲ್ಲಿ ದೇವರ ಮುಂದೆ ಒಂದು ದೀಪ ಹಚ್ಚಿ ಮತ್ತು ಕೆಲವೊಮ್ಮೆ ಧ್ಯಾನದಲ್ಲಿ ಮೌನವಾಗಿ ಕುಳಿತುಕೊಳ್ಳಿ. ಎಲ್ಲಾ ಅಭ್ಯಾಸಗಳಲ್ಲಿ ಧ್ಯಾನವು ಅತ್ಯುತ್ತಮವಾದುದಾಗಿದೆ.

ಪ್ರೀತಿ, ಧ್ಯಾನ ಮತ್ತು ಸಮರ್ಪಣೆಯ ಒಂದು ಭಾವವಿದ್ದರೆ, ಆಗ ಬೇರೆ ಎಲ್ಲವೂ ಸುಮ್ಮನೆ ಹಿಂಬಾಲಿಸುತ್ತವೆ.

ಕೆಲವೊಮ್ಮೆ ನಿಮ್ಮ ಮನೆಬಾಗಿಲುಗಳನ್ನು ಅಲಂಕರಿಸಲು ನೀವೊಂದು ತೋರಣವನ್ನು ಕಟ್ಟಬಹುದು. ಅದು ತೋರಣದ ಮಹತ್ವವಾಗಿದೆ. ಆದರೆ ಬಾಗಿಲುಗಳಿಲ್ಲದಿದ್ದರೆ, ಆಗ ಒಂದು ತೋರಣವನ್ನು ಕಟ್ಟುವುದರಲ್ಲಿ ಯಾವ ಅರ್ಥವಿದೆ?

ಪ್ರಶ್ನೆ: ಗುರುದೇವ, ಈ ಸೃಷ್ಟಿ, ಮಾಯೆ ಮತ್ತು ಜೀವನ್ಮರಣ ಚಕ್ರಗಳ ಉದ್ದೇಶವೇನು?

ಶ್ರೀ ಶ್ರೀ ರವಿ ಶಂಕರ್: ನೀನು ಕ್ರಿಕೆಟ್ ಆಡುವೆಯಾ?

ಈಗ, ನೀನು ಅದನ್ನು ಯಾಕೆ ಆಡುವೆ? ಪಿಚ್ಚಿನ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ನಿನ್ನ ಕೈಯಲ್ಲೊಂದು ಬ್ಯಾಟನ್ನು ಹಿದಿದುಕೊಂಡು ಓಡುವುದು ಎಷ್ಟು ಅರ್ಥಹೀನವಾದುದು!ಅಷ್ಟೊಂದು ಗಂಟೆಗಳನ್ನು ಅದಕ್ಕಾಗಿ ವ್ಯರ್ಥ ಮಾಡುವುದು ಯಾಕೆ?

ನೀವು ಮಾಡುವುದೇನೆಂದರೆ, ಚೆಂಡನ್ನು ಮೈದಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಎಸೆಯುವುದು ಅಷ್ಟೆ. ಇದನ್ನು ಮಾಡುವುದರಿಂದ ನಿಮಗೆ ನಿಜವಾಗಿ ಏನು ಸಿಗುತ್ತದೆ?

(ಉತ್ತರ: ಗುರುದೇವ, ಅದು ಮನೋರಂಜನೆಯ ಒಂದು ಮೂಲ)

ಹೌದು! ನಿನ್ನ ಮನೋರಂಜನೆಗಾಗಿ ನೀನು ಬ್ಯಾಟ್ ಮತ್ತು ಚೆಂಡಿನೊಂದಿಗೆ ಆಡುವಂತೆಯೇ, ಈ ಸಂಪೂರ್ಣ ಸೃಷ್ಟಿ ಇರುವುದು ಕೂಡಾ ದೇವರ ಮನೋರಂಜನೆಗಾಗಿ. ಅದಕ್ಕಾಗಿಯೇ, ಸಂಪೂರ್ಣ ಸೃಷ್ಟಿ ಮತ್ತು ಅದರಲ್ಲಿರುವ ಎಲ್ಲವೂ ದೇವರ ಲೀಲೆ (ದೇವರ ಆಟ) ಎಂದು ಹೇಳಲಾಗುವುದು.

ಪ್ರಶ್ನೆ: ಗುರುದೇವ, ಈ ಲೀಲೆಯು ಎಷ್ಟು ಕಾಲ ಮುಂದುವರಿಯಲಿದೆ?

ಶ್ರೀ ಶ್ರೀ ರವಿ ಶಂಕರ್: ಈಗ ಅದನ್ನು ಹೇಳುವುದು ಕಷ್ಟ. ಅದು ಯಾವಾಗ ಪ್ರಾರಂಭವಾಯಿತು ಎಂಬುದು ಯಾರಿಗೂ ಖಚಿತವಾಗಿ ತಿಳಿಯದು ಮತ್ತು ಆದುದರಿಂದ ಅದು ಯಾವಾಗ ಕೊನೆಯಾಗುವುದೆಂಬುದು ಯಾರಿಗೂ ತಿಳಿಯದು. ನೀನು ಈ ಲೀಲೆಯ ಒಂದು ಭಾಗವಾಗಿರುವಲ್ಲಿಯವರೆಗೆ, ಸುಮ್ಮನೆ ನಿನ್ನಲ್ಲೇ ಆನಂದಿಸು.

ನಾವೊಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವಾಗಲೇ ನಾವು, "ಇದು ಯಾವಾಗ ಕೊನೆಯಾಗುವುದು?" ಎಂದು ಕೇಳುವುದು. ಆದರೆ ನಾವು ಮೋಜು ಮಾಡುತ್ತಿರುವಾಗ ಅಥವಾ ನಮ್ಮಲ್ಲೇ ಆನಂದಿಸುತ್ತಿರುವಾಗ, "ಆನಂದವು ಯಾವಾಗ ಕೊನೆಯಾಗುವುದು?" ಎಂದು ನಾವು ಯಾವತ್ತೂ ಪ್ರಶ್ನಿಸುವುದಿಲ್ಲ.

ನಾವು ಹಾಗೆ ಮಾಡುತ್ತೇವೆಯೇ? ಇಲ್ಲ. ಹೀಗೆ ಜೀವನವು ಪ್ರಯಾಸಕರವಾಗಿ ಮತ್ತು ಒಂದು ಬಂಧನವಾಗಿ ತೋರುವಾಗ ಮಾತ್ರ ನಾವು ನಮ್ಮಲ್ಲೇ ಅಂದುಕೊಳ್ಳುತ್ತೇವೆ, "ಯಾವಾಗ ನಾವು ಇದರಿಂದ ಮುಕ್ತರಾಗುವೆವು?"

ಭವಿಷ್ಯದಲ್ಲಿ ಯಾವತ್ತೋ ನೀವು ಮುಕ್ತರಾಗುವಿರಿ ಎಂದು ಯೋಚಿಸಬೇಡಿ. ನೀವು ಈ ಕ್ಷಣದಲ್ಲೇ ಮುಕ್ತರಾಗಿರುವಿರಿ. ಸುಮ್ಮನೆ ಇದನ್ನು ಒಪ್ಪಿಕೊಳ್ಳಿ ಮತ್ತು ಮುಂದೆ ಸಾಗಿ.

ಇದೆಲ್ಲವೂ ಕೇವಲ ಒಂದು ಆಟ ಮತ್ತು ಘಟನೆಗಳು ನಡೆಯುತ್ತಾ ಇರುತ್ತವೆ. ಮನಸ್ಸಿನಲ್ಲಿ ಹಲವಾರು ಯೋಚನೆಗಳು ಬರುತ್ತವೆ ಮತ್ತು ಹೋಗುತ್ತವೆ. ನಿಮ್ಮ ಮನಸ್ಸಿಗೆ ಬರುವ ಯೋಚನೆಗಳ ವಿಧಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಮನಸ್ಸಿನ ಕೆಲವು ಯೋಚನೆಗಳಿಂದಾಗಿ ನೀವು ಬಹಳ ಆತಂಕಗೊಳ್ಳುವಿರಿ. ಆದರೆ, ಯೋಚನೆಗಳು ಬರುತ್ತವೆ ಮತ್ತು ಹೋಗುತ್ತವೆ ಎಂಬುದನ್ನು ನೀವು ತಿಳಿದಿರಬೇಕು. ಆದುದರಿಂದ ಅದು ಯಾವುದೇ ಅರ್ಥವನ್ನು ಹೊಂದಿರುವುದಿಲ್ಲ. ನಾವು ನಮ್ಮ ಯೋಚನೆಗಳಿಗಿಂತ ಎಷ್ಟೋ ಹೆಚ್ಚು ದೊಡ್ಡವರಾಗಿರುವೆವು. ಆದುದರಿಂದ ಕೇವಲ ಇದನ್ನು ತಿಳಿದುಕೊಳ್ಳಿ ಮತ್ತು ವಿಶ್ರಾಮ ಮಾಡಿ.

ಪ್ರಶ್ನೆ: ಗುರುದೇವ, ಮುಸ್ಲಿಮರು ದೇವರನ್ನು ಅಲ್ಲಾಹ್ ಎಂದು ಮತ್ತು ಹಿಂದುಗಳು ಅವನನ್ನು ಭಗವಾನ್ ಎಂದು ಯಾಕೆ ಕರೆಯುತ್ತಾರೆ?

ಶ್ರೀ ಶ್ರೀ ರವಿ ಶಂಕರ್: ನೋಡು, ಬೇರೆ ಬೇರೆ ಜನರು ಬೇರೆ ಬೇರೆ ಭಾಷೆಗಳಲ್ಲಿ, ಅದೇ ಒಬ್ಬ ದೇವರಿಗೆ ಬೇರೆ ಬೇರೆ ಹೆಸರುಗಳನ್ನು ಬಳಸುತ್ತಾರೆ. ಬೇರೆ ಬೇರೆ ಧರ್ಮಗಳಲ್ಲಿ ಅವರು ಅವನನ್ನು ಬೇರೆ ಬೇರೆಯಾಗಿ ಅರ್ಥಮಾಡಿಕೊಳ್ಳುತ್ತಾರೆ. ನಿನಗೆ ಇದು ಅರ್ಥವಾಯಿತೇ?

ಒಬ್ಬನೇ ಒಬ್ಬ ದೇವರಿರುವುದು, ಇದನ್ನೇ ನಾವು ಯಾವತ್ತೂ ಹೇಳುವುದು.

ಒಂದು ಮಾತಿದೆ, ಅದು ಈ ರೀತಿಯಾಗಿದೆ, ’ಏಕಂ ಸತ್ ವಿಪ್ರ ಬಹುಧ ವದಂತಿ’ (ಅಂದರೆ, ಯಾವುದು ಒಂದು ಆಗಿರುವುದೋ ಅದು, ಪಂಡಿತರಿಂದ ಮತ್ತು ಜ್ಞಾನಿಗಳಿಂದ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ). ಇದನ್ನೇ ಯಾವತ್ತಿಗೂ ನಾವು
ಅರ್ಥಮಾಡಿಕೊಂಡಿರುವುದು. ಇದಕ್ಕಾಗಿಯೇ, ಭಾರತಕ್ಕೆ ಬಂದ ಯಾವುದೇ ಜಾತಿಯಾಗಿರಲಿ, ಅದು ಸ್ವಾಗತಿಸಲ್ಪಟ್ಟದ್ದು.

ಯಾಕೆಂದರೆ, ಹೆಸರು ಏನೇ ಆಗಿರಲಿ, ಅದು ಅದೇ ಒಬ್ಬ ದೇವರು ಎಂಬುದು ನಮಗೆ ತಿಳಿದಿತ್ತು.

ನಾವು ಯಾವತ್ತೂ ಜನರ ನಡುವೆ ಭೇದಭಾವ ಮಾಡಲಿಲ್ಲ. ನಮ್ಮ ದೇವರು ಮಾತ್ರ ಸರಿ ಮತ್ತು ಇತರರು ಯಾರನ್ನು ಆರಾಧಿಸುವರೋ ಅವರು ತಪ್ಪು ಎಂದು ನಾವು ಯಾವತ್ತೂ ಹೇಳಲಿಲ್ಲ. ಯಾರು ಹೀಗೆ ಹೇಳುವರೋ ಮತ್ತು ಬೇರೆ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವರೋ ಅವರು ತಪ್ಪು ಮಾಡುತ್ತಿದ್ದಾರೆ. ಅಂತಹ ಜನರು, "ನನ್ನ ದೇವರು ಮಾತ್ರ ನಿಜವಾದ ಸರಿಯಾದ ದೇವರು, ಇತರ ಎಲ್ಲಾ ದೇವರುಗಳು ತಪ್ಪು ಮತ್ತು ಅವರ ಚಿತ್ರಗಳನ್ನು ನೀವು ನಿಮ್ಮ ಮನೆಗಳಿಂದ ತೆಗೆದುಹಾಕಬೇಕು" ಎಂದು ಹೇಳುವ ಮೂಲಕ ಇತರರನ್ನು ದಾರಿತಪ್ಪಿಸುತ್ತಾರೆ. ಇದು ಬಹಳ ತಪ್ಪು.

ಪ್ರಶ್ನೆ: ಗುರುದೇವ, ನೀವು ನನ್ನ ಮುಂದೆ ಇರುವಾಗ, ಇದೆಲ್ಲವೂ ಒಂದು ಕನಸಿನಂತೆ, ಅವಾಸ್ತವಿಕವಾಗಿ ಕಾಣಿಸುತ್ತದೆ ಮತ್ತು ನೀವು ನನ್ನ ಮುಂದೆ ಇಲ್ಲದಿರುವಾಗ ಕೂಡಾ ಎಲ್ಲವೂ ಒಂದು ಕನಸಿನಂತೆ ತೋರುತ್ತದೆ. ಅದು ಯಾಕೆ ಹಾಗೆ?

ಶ್ರೀ ಶ್ರೀ ರವಿ ಶಂಕರ್: ಅದೆಲ್ಲವೂ ಒಂದು ಕನಸೆಂಬುದಾಗಿ ನೀನು ಅರ್ಥಮಾಡಿಕೊಂಡಿರುವುದು ಒಳ್ಳೆಯದು ಮತ್ತು ನೀನು ಈ ಕನಸಿನಿಂದ ಎಚ್ಚೆತ್ತುಕೊಳ್ಳಬೇಕು (ವಾಸ್ತವಿಕತೆಗೆ).

ಪ್ರಶ್ನೆ: ಗುರುದೇವ, ಮಹಾಶಿವರಾತ್ರಿಯ ಸಂದರ್ಭದಲ್ಲಿ ಸಂಕಲ್ಪವನ್ನು ತೆಗೆದುಕೊಳ್ಳುವುದರ ಮಹತ್ವವೇನು?

ಶ್ರೀ ಶ್ರೀ ರವಿ ಶಂಕರ್: ಸಂಕಲ್ಪವೆಂದರೆ, ನಮ್ಮ ಪ್ರಜ್ಞೆಯನ್ನು ವಿಶ್ವಕ್ಕೆ; ಅನಂತತೆಗೆ ತೆಗೆದುಕೊಂಡು ಹೋಗುವುದು ಮತ್ತು ನಂತರ ಮನಸ್ಸನ್ನು ವರ್ತಮಾನದ ಕ್ಷಣಕ್ಕೆ ತರುವುದು ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ಆಕಾಂಕ್ಷಿಸುತ್ತಿರುವ ಏನೋ ಒಂದಕ್ಕಾಗಿ ಕೋರಿಕೆಯನ್ನು ಮಾಡುವುದು. ಸಂಕಲ್ಪವೆಂದರೆ ಅದು.

ಸಂಕಲ್ಪ ತೆಗೆದುಕೊಳ್ಳುವಲ್ಲಿ, ನೀವು ಏನನ್ನೋ ಇಡುತ್ತೀರಿ ಮತ್ತು ನಂತರ ನೀವು ಯಾವುದಕ್ಕಾಗಿಯಾದರೂ ಪ್ರಾರ್ಥಿಸುತ್ತೀರಿ. ಎಲ್ಲಾ ಯಜ್ಞಗಳು ಮತ್ತು ಪೂಜೆಗಳು ಸಂಕಲ್ಪ ತೆಗೆದುಕೊಳ್ಳುವುದರೊಂದಿಗೆ ಆರಂಭವಾಗುತ್ತವೆ.

ಯಜ್ಞವೆಂದರೆ, ಯಾವುದು ಎಲ್ಲರೂ ಒಟ್ಟು ಸೇರಿ ಮಾಡಲ್ಪಡುವುದೋ ಅದು. ಆದುದರಿಂದ ಎಲ್ಲರೂ ಅದರ ಒಂದು ಭಾಗವಾಗಿದ್ದಾರೆ. ಯಾವುದೇ ಸೇವೆಯನ್ನು ಮಾಡುವ ಯಾರೇ ಆದರೂ ಸ್ವಾಭಾವಿಕವಾಗಿ ಅದರ ಒಂದು ಭಾಗವಾಗುತ್ತಾರೆ.

ಯಜ್ಞಕ್ಕಾಗಿ ಯಾರಾದರೂ ಯಾವುದಾದರೂ ಸೇವೆ ಮಾಡುವಾಗ, ಅವರು ಯಜ್ಞದ ಭಾಗವಾಗುತ್ತಾರೆ. ಅವರು ಅಡುಗೆಶಾಲೆಯಲ್ಲಿ ಸೇವೆ ಮಾಡುತ್ತಿರುವರಾದರೂ ಅಥವಾ ಭಕ್ತರನ್ನು ನೋಡಿಕೊಳ್ಳುತ್ತಿರುವರಾದರೂ, ಆಗ ಕೂಡಾ ಅವರು ಯಜ್ಞದ ಒಂದು ಭಾಗವಾಗುತ್ತಾರೆ.

ಆದರೆ, ನಿಮ್ಮ ಮನಸ್ಸಿನಲ್ಲಿ ಯಾರಿಗಾಗಿಯಾದರೂ ಏನಾದರೂ ಆಶಯವಿದ್ದರೆ; ಒಬ್ಬರು ಮಿತ್ರರು ಅಥವಾ ಕುಟುಂಬದ ಸದಸ್ಯರಿಗಾಗಿ ಮತ್ತು ಪುಣ್ಯದಲ್ಲಿ ಸ್ವಲ್ಪ ಅವರಿಗೆ ಹೋಗಬೇಕೆಂದು ನೀವು ಬಯಸಿದರೆ, ಆಗ ನೀವು ಒಂದು ಸಂಕಲ್ಪವನ್ನು ತೆಗೆದುಕೊಳ್ಳಬಹುದು.

ನೀವು ಸಂಕಲ್ಪವನ್ನು ತೆಗೆದುಕೊಳ್ಳುವಾಗ, ನೀವು ನಿಮ್ಮ ಹೆಸರನ್ನು ತೆಗೆದುಕೊಳ್ಳುತ್ತೀರಿ ಮತ್ತು ಮನಸ್ಸಿನಲ್ಲಿಯೇ ನಿಮ್ಮ ಇಚ್ಛೆಯನ್ನು ಅಥವಾ ಯಾವ ವ್ಯಕ್ತಿಗಾಗಿ ನೀವು ಸ್ವಲ್ಪ ಪುಣ್ಯವನ್ನು ಬಯಸುವಿರೋ ಅವರನ್ನು ಸ್ಮರಿಸುತ್ತೀರಿ ಮತ್ತು ನಂತರ ಅವರು (ಪುರೋಹಿತರು)ನಿಮಗಾಗಿ ಮಾಡುವ ಕೆಲವು ಶಾಸ್ತ್ರಗಳಿವೆ. ಹೀಗೆ, ಅದು ಕೂಡಾ ಸಾಧ್ಯವಿದೆ.

ಈ ಪದ್ಧತಿಯು ಹಲವಾರು ವರ್ಷಗಳಿಂದ ಇತ್ತು. ಇದನ್ನು ಮಾಡುವುದರಿಂದ ಒಬ್ಬರು ಒಂದು ವಿಶೇಷ ಲಾಭವನ್ನು ಪಡೆಯುವರೆಂದಲ್ಲ. ಯಜ್ಞದಲ್ಲಿ ಭಾಗವಹಿಸುವ ಮತ್ತು ಶ್ರದ್ಧೆಯಿರುವ ಪ್ರತಿಯೊಬ್ಬರೂ ಲಾಭ ಗಳಿಸುವರು. ಆದರೆ ನೀವದನ್ನು ಒಂದು ವಿಶೇಷ ಸಂಕಲ್ಪದೊಂದಿಗೆ ಮಾಡಲು ಬಯಸಿದರೆ, ಅದಕ್ಕಾಗಿ ಕೂಡಾ ಒಂದು ವ್ಯವಸ್ಥೆ ಮಾಡಲಾಗಿದೆ.

ಪ್ರಶ್ನೆ: ಗುರುದೇವ, ಮನಸ್ಸಿನಲ್ಲಿ, ಬುದ್ಧಿಯಲ್ಲಿ ಅಥವಾ ನೆನಪಿನಲ್ಲಿ ಸಂಸ್ಕಾರಗಳು ಉಳಿಯದಂತೆ ಮಾಡಲು ಪ್ರತಿದಿನವೂ ಅನುಸರಿಸಬೇಕಾದ ತಂತ್ರವೇನು?

ಶ್ರೀ ಶ್ರೀ ರವಿ ಶಂಕರ್: ಕೇವಲ ವಿಶ್ರಾಮ ಮಾಡು, ಸಹಜವಾಗಿರು. ಈ ಸಂಸ್ಕಾರವು ನನ್ನ ಮನಸ್ಸಿನಲ್ಲಿ ಉಳಿಯುವುದನ್ನು ನಾನು ಬಯಸುವುದಿಲ್ಲ ಎಂದು ನೀನು ಹೇಳಿದರೆ, ಆಗ ನೀನು ಆ ಸಂಸ್ಕಾರವನ್ನು ಇನ್ನೂ ಹೆಚ್ಚು ಬಲಶಾಲಿಯನ್ನಾಗಿ ಮಾಡುವೆ. ಅದು ಅಲ್ಲಿದ್ದರೆ, ಅದು ಅಲ್ಲಿದೆ ಮತ್ತು ಅದು ಅಲ್ಲಿ ಇಲ್ಲದೇ ಇದ್ದರೆ, ಅದು ಅಲ್ಲಿಲ್ಲ. ಆದುದರಿಂದ ಸುಮ್ಮನೆ ವಿಶ್ರಾಮ ಮಾಡು. ಯಾವುದೆಲ್ಲಾ ಸರಿಯಾದುದೋ ಅದು ಉಳಿಯುವುದು ಎಂಬುದನ್ನು ನೀನು ಕಾಣುವೆ.