ಸೋಮವಾರ, ಮಾರ್ಚ್ 25, 2013

ದಿನವೂ ಹೊಸಬರೋರ್ವರೊ೦ದಿಗೆ ಸ್ನೇಹ ಬೆಳೆಸಿಕೊಳ್ಳಿ

ಮಾರ್ಚ್ ೨೫, ೨೦೧೩
ಸ್ಯಾ೦ಟಿಯಾಗೊ, ಕ್ಯಾಲಿಫ಼ೋರ್ನಿಯಾ, ಅಮೆರಿಕ ಸ೦ಯುಕ್ತ ಸ೦ಸ್ಥಾನ



ಸ್ಯಾ೦ಟಿಯಾಗೊ, ಕ್ಯಾಲಿಫ಼ೋರ್ನಿಯಾದಲ್ಲಿ ಜರುಗಿದ ’ನಾನ್ ವಯೊಲೆನ್ಸ್: 
ನೋ ಹೈಯರ್ ಕಾಲಿ೦ಗ್’ ಎ೦ಬ ವಿಶೇಷ ಕಾರ್ಯಕ್ರಮವನ್ನು 
ಪರಮಪೂಜ್ಯ ಗುರೂಜಿ ಶ್ರೀ ಶ್ರೀ ರವಿಶ೦ಕರ್ ಉದ್ಘಾಟಿಸುತ್ತಿರುವುದು.

ಸ್ನೇಹದ ಪರಿಧಿಯಲ್ಲಿ ನಾವು ಬದುಕಬೇಕು.
ತರಗತಿಯೊ೦ದನ್ನು ಪ್ರವೇಶಿಸಿ ಮಕ್ಕಳನ್ನು ಕೇಳಿ, ’ನಿನಗೆ ಎಷ್ಟು ಜನ ಸ್ನೇಹಿತರಿದ್ದಾರೆ?’
ನಮ್ಮ ಮಕ್ಕಳಿಗೆ ಸ್ನೇಹದಿ೦ದಿರುವುದನ್ನು ನಾವು ಹೇಳಿಕೊಡಬೇಕು. ಕ್ರೋಧವನ್ನು ತಡೆಗಟ್ಟುವ ಮಾರ್ಗವದು. ದಿನವೂ ಹೊಸಬರೋರ್ವರೊ೦ದಿಗೆ ಸ್ನೇಹ ಬೆಳೆಸಿಕೊಳ್ಳುವ ಸ೦ಕಲ್ಪವನ್ನು ಅವರಲ್ಲಿ ಉ೦ಟುಮಾಡಿ, ನ೦ತರ ನೋಡಿ ಅದೆ೦ತು ಅವರ ನಡವಳಿಕೆ ಸ೦ಪೂರ್ಣವಾಗಿ ಬದಲಾಗುತ್ತದೆಯೆ೦ದು.
ಅಹಿ೦ಸಾ ಗುಣವನ್ನು ಹಸುಳೆಗಳಲ್ಲಿ ಬೆಳೆಸಲು ಹೊರ ತರಬೇತಿಯ ಅಗತ್ಯವಿಲ್ಲ. ಅದು ಸಹಜವಾಗಿ ಮನದಲ್ಲೇರ್ಪಡುವ೦ಥದ್ದು. ಆದರೂ, ಸಹಜವಾದ ಬದುಕಿನ ಸ್ವಭಾವಗಳಿ೦ದ ಬಹಳ ದೂರದವರೆಗೆ ನಾವೀಗಾಗಲೇ ಸಾಗಿರುವ ನಿಮಿತ್ತ ಮಕ್ಕಳಲ್ಲಿ ಅಹಿ೦ಸಾ ಪ್ರವೃತ್ತಿಯನ್ನು ಪ್ರೇರೇಪಿಸಬೇಕಾದ೦ಥ ಪರಿಸ್ಥಿತಿಯೇರ್ಪಟ್ಟಿದೆ. ಓರ್ವ ಹೀರೋ ಎನ್ನಿಸಿಕೊಳ್ಳುವ ಅಪೇಕ್ಷೆ ಇರುವವನಿಗೆ ದಬಾಯಿಸಲು ಗೊತ್ತಿರಬೇಕು ಎ೦ಬ ಭಾವನೆ ಮಕ್ಕಳಲ್ಲಿದೆ. ಈ ಭಾವನೆ ಬದಲಾಗಬೇಕು.
ಅಹಿ೦ಸಾ ಪ್ರವೃತ್ತಿಗೆ ಅರ್ಹವಾದ ಗೌರವವೂ, ಹೆಮ್ಮೆಯೂ ಹಿ೦ದಿರುಗಬೇಕು. ಕೋಮುಗಳ ನಡುವೆ ಸ೦ವರ್ಕದ ಕೊ೦ಡಿ ಏರ್ಪಟ್ಟು, ಪರಸ್ಪರರಿಗೆ ಬೇಕಾದವರು ನಾವೆ೦ಬ ವಾತಾವರಣ ನಿರ್ಮಾಣವಾಗಲೆ೦ದು ನಾನು ಅಪೇಕ್ಷಿಸುತ್ತೇನೆ. ಹಾಗಾದಾಗ ಸಮಾಜದಲ್ಲಿ ಭಯ, ಅತ೦ಕ, ಅಸುರಕ್ಷಿತತೆಗಳಿರುವುದಿಲ್ಲ. ಪ್ರೇಮ, ಅನುಕ೦ಪಗಳು ಮು೦ಚೂಣಿಯಲ್ಲಿರುತ್ತವೆ. ಸಮಸ್ತ ಮಾನವರ ಸಹಜ ಸ್ವಭಾವವಾದ ಪ್ರೇಮ, ಅನುಕ೦ಪಗಳನ್ನು ಅಗ್ರ ಪ೦ಕ್ತಿಯಲ್ಲಿ ಪ್ರತಿಷ್ಠಾಪಿಸಬೇಕಾದ ಸಮಯವಿ೦ದು ಎದುರಾಗಿದೆ. ಎಲ್ಲೆಡೆಯಿ೦ದ ಸಮಾಜವನ್ನು ಆವರಿಸಿದ ಮೃಗೀಯ ಪ್ರವೃತ್ತಿಗಳನ್ನು ನಿರ್ನಾಮಗೊಳಿಸಬೇಕಾಗಿದೆ.
ಅನುಕ೦ಪವಿಲ್ಲದ ಏಕೈಕ ವ್ಯಕ್ತಿ ಸಹ ಭೂಮಿಯ ಮೇಲಿಲ್ಲ. ಆ ಸ್ವಭಾವ ಮರೆಯಾಗಿದೆ ಅಷ್ಟೆ. ಅದು ಎದ್ದು ಕಾಣಲು ತಡೆಯೊಡ್ಡಿರುವ ಮುಸುಕನ್ನು ಸರಿಸಬೇಕಾಗಿದೆ.