ಶನಿವಾರ, ಮಾರ್ಚ್ 16, 2013

ಜ್ಞಾನವೆಂದರೇನು?

ಮಾರ್ಚ್ ೧೬, ೨೦೧೩
ದಿಲ್ಲಿ, ಭಾರತ

(ಇಂಡಿಯಾ ಟುಡೇ ಕಾಂಕ್ಲೇವ್ ಎಂಬುದು ಇಂಡಿಯಾ ಟುಡೇ ಗುಂಪಿನ ಒಂದು ವಿಶಿಷ್ಠ ಕಾರ್ಯಕ್ರಮವಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಅದು ವಿಶ್ವದಾದ್ಯಂತದ ರಾಜಕೀಯ, ಆರ್ಥಿಕ, ವ್ಯಾಪಾರ, ಶೈಕ್ಷಣಿಕ, ತಂತ್ರಜ್ಞಾನ, ಕಲೆ ಮೊದಲಾದವುಗಳಲ್ಲಿ ಶ್ರೇಷ್ಠರಿಗೆ ಆತಿಥ್ಯವನ್ನು ನೀಡುವುದರ ಮೂಲಕ, ೨೧ನೇ ಶತಮಾನದ ಪ್ರಪಂಚಕ್ಕಾಗಿ ವಿಚಾರಗಳು, ತಂತ್ರಗಳು ಮತ್ತು ಪರಿಹಾರಗಳನ್ನು ಪರಿಶೋಧಿಸಲು  ಹಾಗೂ ಚರ್ಚಿಸಲು ಅವರಿಗೊಂದು ವೇದಿಕೆಯನ್ನು ಒದಗಿಸಿತು.

ಪರಮ ಪೂಜ್ಯ ಶ್ರೀ ಶ್ರೀ ರವಿ ಶಂಕರರನ್ನು ಇಂಡಿಯಾ ಟುಡೇ ಕಾಂಕ್ಲೇವ್ ೨೦೧೩ ಕ್ಕೆ ಉಪನ್ಯಾಸಕರಾಗಿ ಆಮಂತ್ರಿಸಲಾಯಿತು.  ಅದರ ಅನುವಾದ ಕೆಳಗಿನಂತಿದೆ.)

ಜ್ಞಾನವು ಕಾಲಾತೀತವಾದುದು!

ಸೂರ್ಯನು ಪುರಾತನ, ಆದರೆ ಇವತ್ತು, ಸೂರ್ಯನಿಂದ ಬರುವ ಕಿರಣಗಳು ತಾಜಾವಾದುವು. ಅದು ಹಳೆಯ ಅಥವಾ ಹಳಸಿದ ಕಿರಣಗಳಲ್ಲ. ಅದುವೇ ನೀರಿಗೂ ಅನ್ವಯಿಸುವುದು. ಗಂಗಾ ನದಿಯು ಬಹಳ ಪುರಾತನವಾದುದು, ಆದರೆ ಇವತ್ತಿನ ನೀರು ಬಹಳ ಬಹಳ ತಾಜಾವಾದುದು.

ಅದೇ ರೀತಿಯಲ್ಲಿ, ನಾನು ಹೇಳುವುದೇನೆಂದರೆ, ಜ್ಞಾನವೆಂದರೆ, ಯಾವುದು ನಮ್ಮ ಜೀವನಕ್ಕೆ ಅನ್ವಯವಾಗುವುದೋ ಅದು; ಹೊಸತು ಮತ್ತು ತಾಜಾವಾದುದು, ಆದರೂ ಪುರಾತನವಾದುದು. ಯಾವುದು ಜೀವನವನ್ನು ಮೇಲೆತ್ತಿ ಹಿಡಿಯುವುದೋ ಅದು ಜ್ಞಾನವಾಗಿದೆ.

ಅಜ್ಞಾನಿಗಳನ್ನು ಅಥವಾ ಅಂಧಾಭಿಮಾನದಿಂದ ಧಾರ್ಮಿಕರಾಗಿರುವವರನ್ನು ನೋಡಿ. ಬುದ್ಧಿಜೀವಿಗಳೆಂದು ಕರೆಯಲ್ಪಡುವವರು ಫ್ಯಾಷನ್ನಿಗಾಗಿ ನಾಸ್ತಿಕರಾಗಿರುತ್ತಾರೆ, ಮತ್ತು ಹಳತನ್ನೂ ಹೊಸತನ್ನೂ ಸೇರಿಸಿಕೊಂಡು ತಮ್ಮ ಜೀವನವನ್ನು ರೂಪಿಸಲು ತಿಳಿದಿರುವುದು ಜ್ಞಾನಿಗಳಿಗೆ.

ಹಳತಾದ ಬೇರುಗಳ ಮತ್ತು ಹೊಸತಾದ ಗೆಲ್ಲುಗಳ ಅಗತ್ಯವಿರುವ ಒಂದು ಮರದಂತೆ, ಜೀವನವು ಹೊಂದಿಕೊಳ್ಳುವ ಅಗತ್ಯವಿದೆ ಮತ್ತು ಸರಿಯಾಗಿ ಇದುವೇ ಪುರಾತನ ಜ್ಞಾನವಾಗಿದೆ.

ಋಗ್ವೇದದಲ್ಲಿನ ಎರಡನೆಯ ಸ್ತೋತ್ರ "ಅಗ್ನಿಃ ಪೂರ್ವೇಭಿರ್ ಋಷಿಭಿರ್ ಇದ್ಯೋ ನೂತನೈರ್ ಉತ" ಎಂದಾಗಿದೆ. ಪುರಾತನ ಮತ್ತು ನೂತನ, ಅವುಗಳು ಒಟ್ಟಿಗೆ ಅಸ್ಥಿತ್ವದಲ್ಲಿವೆ, ಮತ್ತು ಅದುವೇ ಜ್ಞಾನ.

ತಂತ್ರಜ್ಞಾನ ಮತ್ತು ವ್ಯಾಪಾರದಂತೆಯೇ, ಸಂಪ್ರದಾಯವನ್ನು ಮತ್ತೆ ಮತ್ತೆ ಪುನಶ್ಚೇತನಗೊಳಿಸುವ ಮತ್ತು ಪರಿಶೀಲಿಸುವ ಅಗತ್ಯವಿದೆ. ಇದು ಆವಶ್ಯಕ. ಮತ್ತು ಭಾರತದ ಶೋಭೆಯೆಂದರೆ, ನಮಗಿದನ್ನು ಮಾಡಲು ಸಾಧ್ಯವಾಯಿತು. ಪ್ರಾಚೀನ ಕಾಲದಿಂದಲೂ, ಸಂಪ್ರದಾಯದ ನಿರ್ದಿಷ್ಟ ಮಗ್ಗಲುಗಳನ್ನು ಧಕ್ಕೆಯಾಗದಂತೆ ಇಟ್ಟುಕೊಳ್ಳಲಾಯಿತಾದರೂ, ಸಮಯವು ಆಧುನಿಕ ದಿನದ ಅವಶ್ಯಕತೆಗಳ ಕಡೆಗೆ ಮತ್ತು ಒಬ್ಬನು ಎದುರಿಸಬೇಕಾದ ಜೀವನದ ಸವಾಲುಗಳ ಕಡೆಗೆ ಹರಿದಂತೆ ನಾವು ಬಹಳಷ್ಟು ಹೊಂದಿಕೊಂಡೆವು.

ನಿಜವಾಗಿ ಜ್ಞಾನವೆಂದರೇನು? ನಾವು ಯಾಕೆ ಜ್ಞಾನಿಗಳಾಗಿರಬೇಕು?

ಯಾರೂ ದುಃಖದಲ್ಲಿರಲು ಬಯಸುವುದಿಲ್ಲ. ಯಾರೂ ಅಶಾಂತರಾಗಲು ಬಯಸುವುದಿಲ್ಲ. ಯಾವುದು ನಮ್ಮನ್ನು ದುಃಖದಿಂದ ದೂರ ಕೊಂಡೊಯ್ಯುವುದೋ, ಯಾವುದು ನಮಗೊಂದು ಕನಸನ್ನು ನೀಡುವುದೋ, ಯಾವುದು ಜೀವನವನ್ನು ಶೋಭೆಯುಳ್ಳದ್ದಾಗಿಸುವುದೋ, ಯಾವುದು ವೈಯಕ್ತಿಕವಾದ ನಿಮ್ಮನ್ನು ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ವಿಶ್ವವ್ಯಾಪಿ ನಿಮ್ಮೊಂದಿಗೆ ಜೋಡಿಸುವುದೋ, ಮತ್ತು ಸಣ್ಣ ಪ್ರತಿಫಲಗಳು ತಾರದ ಅಪಾರ ಸಂತೃಪ್ತಿಯನ್ನು ಯಾವುದು ತರುವುದೋ  ಅದು ಜ್ಞಾನ, ಮತ್ತು ಅದು ಎಲ್ಲರಲ್ಲೂ ಲಭ್ಯವಿದೆ.

ನಾನು ಹೇಳುತ್ತೇನೆ ಕೇಳಿ, ಇದಕ್ಕೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ. ಹಳ್ಳಿಗಳಲ್ಲಿ ಅನಕ್ಷರಸ್ಥರ ನಡುವೆ ಕೂಡಾ ನಿಮಗೆ ಜ್ಞಾನಿಗಳು ಸಿಗುತ್ತಾರೆ; ಬಹುಶಃ ಇನ್ನೂ ಹೆಚ್ಚು. ತಮ್ಮ ಮನೆಗಳನ್ನು ಹೇಗೆ ನೋಡಿಕೊಳ್ಳಬೇಕೆಂಬುದು ಅವರಿಗೆ ತಿಳಿದಿರುತ್ತದೆ, ತಮ್ಮ ಅಕ್ಕಪಕ್ಕದವರೊಡನೆ ಸಾಮರಸ್ಯವನ್ನಿಟ್ಟುಕೊಳ್ಳುವುದು ಹೇಗೆಂಬುದು ಅವರಿಗೆ ತಿಳಿದಿರುತ್ತದೆ, ಜನರನ್ನು ಒಗ್ಗೂಡಿಸುವುದು ಹೇಗೆಂಬುದು ಮತ್ತು ಜೀವನದಲ್ಲಿ ಆಚರಣೆಯನ್ನು ತರುವುದು ಹೇಗೆಂಬುದು ಅವರಿಗೆ ತಿಳಿದಿರುತ್ತದೆ.

ಜ್ಞಾನವೆಂದರೆ, ಯಾವುದು ಜೀವನದಲ್ಲಿ ಆಚರಣೆಯನ್ನು ತರುವುದೋ, ಯಾವುದು ನಿಮ್ಮ ಮುಖದ ಮೇಲೆ ಒಂದು ಮುಗುಳ್ನಗೆಯನ್ನು ತರುವುದೋ ಅದು. ಯಾವುದು ನಿಮ್ಮನ್ನು ಆರೋಗ್ಯವಂತರನ್ನಾಗಿರಿಸುವುದೋ ಮತ್ತು ಜೀವನದಲ್ಲಿ ನಿಮ್ಮ ಮುಂದೇನಿದೆ ಎಂಬುದನ್ನು ನೋಡಲಿರುವ ಅಂತಃಸ್ಫುರಣಾ ಸಾಮರ್ಥ್ಯವನ್ನು ನೀಡುವುದೋ ಅದು.

ಯೋಚನೆಯ ಬಗ್ಗೆ ನಾವು ಮಾತನಾಡುತ್ತಿದ್ದುದರಿಂದ, ಇನ್ನೂ ಒಂದು ವಿಷಯವನ್ನು ನಾನು ಸೇರಿಸಲು ಬಯಸುತ್ತೇನೆ. ಯೋಚನೆಯು ಮನೆಯ ಒಂದು ಕಾವಲುಗಾರನಂತೆ ಎಂದು ನನಗನ್ನಿಸುತ್ತದೆ. ಭಾವನೆಗಳು ಯೋಚನೆಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದೆ. "ನಾನು ಸಂತೋಷವಾಗಿದ್ದೇನೆ" ಎಂದು ನೀವು ಯೋಚಿಸಬಹುದು ಅಥವಾ ನೀವು ನಿಮ್ಮೆಲ್ಲಾ ಗಮನವನ್ನು ಆ ಯೋಚನೆಯ ಕಡೆಗೆ ಹಾಕಬಹುದು, ಆದರೆ ಭಾವನೆಗಳು ಬರುವಾಗ, ಅಷ್ಟೇ, ಅವುಗಳು ಎಷ್ಟೊಂದು ರಭಸದಿಂದ ನುಗ್ಗುತ್ತವೆಯೆಂದರೆ ನೀವು ನಿಮ್ಮೊಂದಿಗಿರಿಸಿದ್ದ ಎಲ್ಲಾ ಯೋಚನಾ ಪ್ರಕ್ರಿಯೆಯೂ ಹಾಗೆಯೇ ಮಾಯವಾಗಿಬಿಡುತ್ತದೆ.

ನಿಮಗೆ ಗೊತ್ತಿದೆಯಾ, ನಿಮ್ಮ ಭಾವನೆಗಳು ಯೋಚನೆಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯೆಂಬುದನ್ನು ನೀವು ಕಾಣುವಿರಿ. ಪರಿಸ್ಥಿತಿಗಳು ನಿಮ್ಮ ಮೇಲೆ ಅಧಿಕಾರ ಚಲಾಯಿಸುತ್ತವೆ; ನೀವು, "ನಾನು ಸಂತೋಷವಾಗಿರಲು ಬಯಸುತ್ತೇನೆ" ಅಥವಾ "ನಾನು ಸಂತೋಷವಾಗಿದ್ದೇನೆ" ಎಂದು ಹೇಳಲು ಪ್ರಯತ್ನಿಸಿದರೂ ಕೂಡಾ, ಅಚಾನಕ್ಕಾಗಿ ಭಾವನೆಗಳ ಒಂದು ಬರಸಿಡಿಲು ಎರಗುತ್ತದೆ, ಅಥವಾ ಶಕ್ತಿ ಬರುತ್ತದೆ ಮತ್ತು ಈ ಎಲ್ಲಾ ಯೋಚನೆಗಳು ಮಾಯವಾಗುತ್ತವೆ.

ಆದುದರಿಂದ ನಾವು ನಮ್ಮ ಜೀವನದ ಹಲವಾರು ಅಂತಸ್ತುಗಳಲ್ಲಿ ಕೆಲಸ ಮಾಡಬೇಕು ಮೊದಲನೆಯದು ಪರಿಸರ, ನಂತರ ಶರೀರ, ಉಸಿರು - ಉಸಿರೆಂಬುದು, ಮನಸ್ಸು ಮತ್ತು ಶರೀರಗಳ ನಡುವಿನ ಕೊಂಡಿಯಾಗಿದೆ. ನಂತರ ಮನಸ್ಸು; ಯೋಚನೆಗಳು. ನಂತರ ಭಾವನೆಗಳು; ಅವುಗಳು ಮನಸ್ಸಿಗಿಂತ ಹೆಚ್ಚು ಸೂಕ್ಷ್ಮ ಮತ್ತು ಹೆಚ್ಚು ಶಕ್ತಿಶಾಲಿಯಾದವು. ನಂತರ ಅದರಿಂದಾಚೆಗೆ ಬರುವುದು, ಚೈತನ್ಯ ವಲಯ; ಅದು ಸಕಾರಾತ್ಮಕತೆ, ತೇಜಸ್ಸು, ನೀವಾಗಿರುವ ಆತ್ಮ.

ಈ ಎಲ್ಲಾ ತಂತ್ರಗಳು; ಧ್ಯಾನ, ಕ್ರೈಸ್ತ ಸಂಪ್ರದಾಯದಲ್ಲಿರುವಂತಹ ವಿಚಾರಶೀಲ ಪ್ರಾರ್ಥನೆ ಅಥವಾ ಬೌದ್ಧರ ಝೆನ್ ಧ್ಯಾನ, ಇದೆಲ್ಲವೂ ಇರುವುದು ಯೋಚನೆಯನ್ನು ದಾಟಿಹೋಗಿ, ಎಲ್ಲಿಂದ ಇತರ ಎಲ್ಲವೂ ನಡೆಯುವುದೋ ಆ ಹಂತವನ್ನು ತಲಪುವುದಕ್ಕಾಗಿ, ಮತ್ತು ಅದು ಮನೆ ಮಾಲೀಕರನ್ನು ಭೇಟಿಯಾಗುವಂತೆ. ಒಮ್ಮೆ ಮನೆ ಮಾಲೀಕರನ್ನು ಭೇಟಿಯಾದರೆ, ನಂತರ ಕಾವಲುಗಾರನು ಮಾಲೀಕನು ಹೇಳುವುದನ್ನು ಕೇಳುವನು.