ಬೆಂಗಳೂರು, ಭಾರತ

ಪ್ರತಿಯೊಂದು ಯೋಚನೆಯೂ ಭೂತಕಾಲದ ಬಗ್ಗೆಯಾಗಿದೆ. ಮನಸ್ಸಿನಲ್ಲಿ ಏಳುವ ಈ ಯೋಚನೆಗಳು, ಪ್ರಜ್ಞೆಯ ಮೇಲೆ ಗತಕಾಲದ ಒಂದು ಪ್ರಕ್ಷೇಪಣೆಯಾಗಿದೆ. ಭೂತಕಾಲದಲ್ಲಿ ಏನೆಲ್ಲಾ ಸಂಭವಿಸಿದೆಯೋ, ಅದನ್ನೇ ನಾವು ಭವಿಷ್ಯದಲ್ಲಿ ಪ್ರಕ್ಷೇಪಿಸುತ್ತೇವೆ. ಆದುದರಿಂದ, ಮನಸ್ಸಿನಲ್ಲಿ ಬರುತ್ತಾ ಇರುವುದು ಭೂತಕಾಲದ ಯೋಚನೆಗಳಾಗಿವೆ. ’ಇದು ಒಳ್ಳೆಯದು, ಅದು ಒಳ್ಳೆಯದಲ್ಲ. ನನಗೆ ಇದು ಇಷ್ಟ, ನನಗೆ ಅದು ಇಷ್ಟವಿಲ್ಲ’.
ನೀವು ಮಾಡಬೇಕಾಗಿರುವುದು ಏನೆಂದರೆ, ಈ ಎಲ್ಲಾ ಯೋಚನೆಗಳನ್ನು ಮೂಟೆ ಕಟ್ಟಿ ಹೊರಕ್ಕೆಸೆಯುವುದು. ಕೇವಲ, ಈ ಎಲ್ಲಾ ಯೋಚನೆಗಳು ನಿಷ್ಪ್ರಯೋಜಕವೆಂದು ತಿಳಿದುಕೊಳ್ಳುವುದರಿಂದ ಮನಸ್ಸು ಮುಕ್ತವಾಗುತ್ತದೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?
ಇವತ್ತು, ಇಲ್ಲಿ ಕುಳಿತಿರುವ ನಿಮ್ಮಲ್ಲಿ ಕೆಲವರು ಇದನ್ನು ಅನುಭವಿಸುತ್ತಿದ್ದೀರಿ. ಇದು ಮೌನ ಸಂವಾದ ಎಂದು ಕರೆಯಲ್ಪಡುತ್ತದೆ. ನೀವು ಮೌನದೊಳಕ್ಕೆ ಆಳವಾಗಿ ಹೋದಾಗ ನೀವು ಇದನ್ನು ಅನುಭವಿಸುವಿರಿ.
ಅದೇನು? ಯೋಚನೆಗಳಿಲ್ಲದೆ ನಡೆಯುವ ಒಂದು ಸಂಪರ್ಕವನ್ನು ನೀವು ಅನುಭವಿಸುವಿರಿ; ಏನನ್ನೂ ಹೇಳದೆಯೇ, ಏನನ್ನು ತಿಳಿಯಪಡಿಸಲಾಗುತ್ತಿದೆಯೋ ಅದನ್ನು ಒಬ್ಬನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಪ್ರಶ್ನೆಗಳು ಮಾಯವಾಗುವುದು ಆಗಲೇ.
ಪ್ರಶ್ನೆಗಳೆಂಬುದು ಗುರಿಯನ್ನು ತಲುಪಲಿರುವ ವಾಹನಗಳು ಮಾತ್ರ. ಪ್ರಶ್ನೆಗಳಿಗಿರುವ ಉತ್ತರಗಳು, ವಾಹನಕ್ಕಿರುವ ಇಂಧನದಂತೆ. ಆದುದರಿಂದ ಪ್ರಶ್ನೆಗಿರುವ ಉತ್ತರವು ಸಿಕ್ಕಿದಾಗ, ವಾಹನವು ಮುಂದಕ್ಕೆ ಚಲಿಸಲು ತೊಡಗುತ್ತದೆ. ಹೀಗಿದ್ದರೂ, ನಿಮ್ಮ ಗುರಿಯನ್ನು ನೇರವಾಗಿ ಕೂಡಾ ತಲುಪಲು ಸಾಧ್ಯವಿದೆ, ಪ್ರಶ್ನೆಗಳು ಮತ್ತು ಉತ್ತರಗಳನ್ನು ಉಪಯೋಗಿಸದೆಯೇ. ಹೇಗೆ? ಮೌನದಲ್ಲಿ ಕುಳಿತುಕೊಳ್ಳುವುದರಿಂದ. ಇದು ಮೌನದ ಮಹತ್ವವಾಗಿದೆ.
ಒಬ್ಬರು ಮೌನದಲ್ಲಿ ಕುಳಿತುಕೊಂಡಾಗ ಮತ್ತು ಒಂದು ಪ್ರಶ್ನೆಯು ಏಳುವಾಗ, ಪ್ರಶ್ನೆಯೊಂದಿಗೆ ಉತ್ತರ ಕೂಡಾ ಬರುತ್ತದೆ. ಅದು ನಿಮಗೆ ಆಗಿದೆಯೇ? ನಿಮ್ಮಲ್ಲಿ ಎಷ್ಟು ಮಂದಿಗೆ ಇದು ಅನ್ನಿಸುತ್ತದೆ?
(ಹಲವರು ತಮ್ಮ ಕೈಗಳನ್ನು ಎತ್ತುತ್ತಾರೆ)
ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ; ಒಂದು ಹಳೆಯದಾದರೂ ಹೊಸ ವಿಷಯ. ಈ ಪ್ರಶ್ನೆಗಳು ಮತ್ತು ಉತ್ತರಗಳೆಲ್ಲಾ ಯೋಚನೆಗಳಾಗಿವೆ ಮತ್ತು ಯಾವೆಲ್ಲಾ ಇತರ ಯೋಚನೆಗಳು ನಿಮಗೆ ಬರುತ್ತವೆಯೋ ಅವುಗಳನ್ನು ಸುಮ್ಮನೆ ಮೂಟೆ ಕಟ್ಟಿ ಬಿಟ್ಟುಬಿಡಿ. ಕೇವಲ ಮೌನಿಗಳಾಗಿ! ಆಗ ಮಾತ್ರ ಆಚರಣೆ ಸಾಧ್ಯ. ಆಗ ಉತ್ಸಾಹ ಏಳಬಹುದು ಮತ್ತು ನಂತರ ಪ್ರಜ್ಞೆಯು ಅರಳುತ್ತದೆ. ಇಲ್ಲದಿದ್ದರೆ, ಯೋಚನೆಗಳಲ್ಲಿ ನೀವು ಹೆಚ್ಚು ಹೆಚ್ಚು ಸಿಕ್ಕಿಹಾಕಿಕೊಂಡಷ್ಟೂ, ಪ್ರಜ್ಞೆಯು ಹೆಚ್ಚು ಹೆಚ್ಚು ಜಡತ್ವದ ಕಡೆಗೆ ಸಾಗುತ್ತದೆ.
ತಮ್ಮ ಯೋಚನೆಗಳಲ್ಲಿ ಅತಿಯಾಗಿ ಸಿಕ್ಕಿಹಾಕಿಕೊಳ್ಳುವವರು ಜಡವಾಗುತ್ತಾರೆ ಅಥವಾ ಜೀವವಿಲ್ಲದಂತಾಗುತ್ತಾರೆ; ಅದರರ್ಥ ಅವರಲ್ಲಿ ಯಾವುದೇ ಉತ್ಸಾಹವಿಲ್ಲವೆಂದು. ಚಿಕ್ಕ ಮಕ್ಕಳನ್ನು ನೋಡಿ, ಅವರಲ್ಲೇನಿದೆ? ಅವರಲ್ಲಿ ಉತ್ಸಾಹ, ಆಚರಣೆಯ ಒಂದು ಭಾವ, ಪ್ರೀತಿ ಮತ್ತು ಒಳಗೊಂದು ಜೀವಂತಿಕೆ ಇದೆ. ಅವರಲ್ಲಿ ಬಹಳ ಕಡಿಮೆ ಯೋಚನೆಗಳಿರುತ್ತವೆ, ಅಲ್ಲವೇ? ಯಾವಾಗೆಲ್ಲಾ ನೀವು ಚಿಕ್ಕ ಮಕ್ಕಳನ್ನು ನೋಡುವಿರೋ, ಅವಾಗೆಲ್ಲಾ ಅವರ ಪ್ರಜ್ಞೆಯು ಉತ್ಸಾಹದಿಂದ ತುಂಬಿತುಳುಕುತ್ತಿದೆಯೇನೋ ಎಂಬಂತೆ ಕಾಣಿಸುತ್ತದೆ. ಮಹಾ ಶಿವರಾತ್ರಿಯಂತಹ ಈ ಎಲ್ಲಾ ಆಚರಣೆಗಳು ಇರುವುದು ಅದಕ್ಕಾಗಿಯೇ. ನೀವು ಬೇರೆ ಎಲ್ಲವನ್ನೂ ಬಿಟ್ಟುಬಿಡುವುದಕ್ಕಾಗಿ!
ಸುಮ್ಮನೇ ಎಲ್ಲವನ್ನೂ ಬಿಟ್ಟುಬಿಡಿ ಮತ್ತು ಶಿವ ತತ್ವದಲ್ಲಿ ಸಂಪೂರ್ಣವಾಗಿ ನಿಮ್ಮನ್ನು ಮುಳುಗಿಸಿಕೊಳ್ಳಿ. ಶಿವನಂತಾಗಿ, ಇದರರ್ಥ, ಮುಗ್ಧತೆಯ ಆ ಭಾವನೆಯಲ್ಲಿರಿ. ಮುಗ್ಧತೆಯೆಂದರೇನು? ಯಾವುದೇ ಯೋಚನೆಯಲ್ಲಿ ಸಿಕ್ಕಿಹಾಕಿಕೊಳ್ಳದೇ ಇರುವುದು, ಕೇವಲ ಸರಳವಾಗಿ ಮತ್ತು ಸಹಜವಾಗಿರುವುದು ಹಾಗೂ ಆತ್ಮದಲ್ಲಿ ಸಂಪೂರ್ಣವಾಗಿ ಮುಳುಗಿರುವುದು. ಸ್ವಲ್ಪ ಸಮಯದ ವರೆಗೆ, ಸಂಗೀತದಲ್ಲಿ ನಿಮ್ಮನ್ನು ಮುಳುಗಿಸಿಕೊಳ್ಳಿ.
ಸಂಗೀತ, ಪ್ರಾರ್ಥನೆಗಳು, ಮಂತ್ರಗಳನ್ನು ಪಠಿಸುವುದು, ಭಕ್ತಿ, ಶ್ರದ್ಧೆ, ಇವುಗಳೆಲ್ಲವೂ ಇದಾಗಲಿರುವ ಒಂದು ಮಾಧ್ಯಮವಾಗಿದೆ. ಒಬ್ಬರು ಗುರುವು ಒಂದು ಮಾಧ್ಯಮವಾಗಿರುವರು. ಪೂಜೆಯು ಒಂದು ಮಾಧ್ಯಮವಾಗಿದೆ. ಇವುಗಳೆಲ್ಲವೂ ನಮ್ಮನ್ನು ನಮ್ಮ ಆತ್ಮದ ಅರಿವಿಗೆ ತರುತ್ತವೆ.
ಪ್ರಶ್ನೆ: ಗುರುದೇವ, ನಾವು ಕರ್ತೃಗಳಲ್ಲವೆಂದೂ, ನಮ್ಮ ಮೂಲಕ ಬೇರೆ ಯಾರೋ ಕಾರ್ಯ ನಿರ್ವಹಿಸುತ್ತಿರುವರೆಂದೂ, ನಾವು ಮಾಧ್ಯಮವೆಂದೂ ಭಗವದ್ಗೀತೆಯು ಹೇಳುತ್ತದೆ. ಭವಿಷ್ಯವು ಸ್ವತಂತ್ರ ಇಚ್ಛೆಯೆಂದೂ, ಆಗಿ ಹೋದುದು ವಿಧಿಯೆಂದೂ ನಾವು ಹೇಳುತ್ತೇವೆ. ಇದು ಸ್ವಲ್ಪ ವಿರೋಧಾತ್ಮಕವಾದುದು ಎಂದು ನನಗನಿಸುತ್ತದೆ. ದಯವಿಟ್ಟು ನೀವಿದನ್ನು ಸ್ಪಷ್ಟಪಡಿಸಬಲ್ಲಿರಾ?
ಶ್ರೀ ಶ್ರೀ ರವಿ ಶಂಕರ್: ಎರಡು ವಿಷಯಗಳಿವೆ: ಒಂದು ಕರ್ತೃ ಮತ್ತು ಇನ್ನೊಂದು ಭೋಗಿಸುವವನು ಹಾಗೂ ಅವರಿಬ್ಬರೂ ಜೊತೆಯಲ್ಲಿ ಸಾಗುತ್ತಾರೆ. ನೀನೊಬ್ಬ ಕರ್ತೃವಾಗಿದ್ದರೆ, ಆಗ ನೀನು ಭೋಗಿಸುವವನು ಕೂಡಾ ಆಗಿರುವೆ. ನೀನು ಕರ್ತೃವಾಗಿಲ್ಲದಿದ್ದರೆ, ಆಗ ನೀನು ಭೋಗಿಸುತ್ತಾ ಇರುವುದೂ ಇಲ್ಲ.
ಆದುದರಿಂದ, ನೀನು, "ನಾನಿದನ್ನು ಮಾಡಲಿಲ್ಲ" ಎಂದು ಹೇಳುವಾಗ, ಪರಿಣಾಮಗಳು ಮತ್ತು ಹಾಗೆಯೇ ಕ್ರಿಯೆಗಳಿಂದ ಬಾಧಿತನಾಗದೇ ಉಳಿಯುವ ಒಂದು ಮಗ್ಗಲು ನಿನ್ನಲ್ಲಿರುತ್ತದೆ ಹಾಗೂ ಎಲ್ಲವನ್ನೂ ಮಾಡುತ್ತಿರುವ ಮತ್ತು ಹಾಗೆಯೇ ಪರಿಣಾಮಗಳಿಂದ ಬಳಲುತ್ತಿರುವ ಅಥವಾ ಅವುಗಳನ್ನು ಆನಂದಿಸುತ್ತಿರುವ ಇನ್ನೊಂದು ಮಗ್ಗಲು ನಿನ್ನಲ್ಲಿರುತ್ತದೆ. ಹೀಗೆ, ನಿನ್ನೊಳಗೆ ಎರಡು ವಿಷಯಗಳಿರುತ್ತವೆ.
ಉಪನಿಷತ್ತಿನಲ್ಲಿ ಒಂದು ಸುಂದರವಾದ ಉಪಮೆಯಿದೆ.
ವಿಶ್ವದ ಈ ಮರದ ಮೇಲೆ ಎರಡು ಪಕ್ಷಿಗಳು ಕುಳಿತಿವೆ. ಒಂದು ಕರ್ಮದ ಫಲಗಳನ್ನು ಆನಂದಿಸುತ್ತಿದೆ ಮತ್ತು ಇನ್ನೊಂದು ಕೇವಲ ಅದಕ್ಕೆ ಸಾಕ್ಷಿಯಾಗುತ್ತಿದೆ. ಇದು ತತ್ವಜ್ಞಾನದ ಆಳವಾಗಿದೆ.
ನೀವು ಧ್ಯಾನದಲ್ಲಿ ಆಳಕ್ಕೆ ಹೋದಂತೆ ಮತ್ತು ಹೆಚ್ಚು ಹೆಚ್ಚು ತಿಳಿದುಕೊಂಡಂತೆ ಈ ವಿಷಯಗಳು ಸಂಭವಿಸುವುದನ್ನು ನೀವು ಕಂಡುಕೊಳ್ಳಬಹುದು. ಅದು ಬಹಳ ಒಳ್ಳೆಯ ಕೆಲಸವಾಗಿರಲಿ ಅಥವಾ ಇದುವರೆಗೆ ಮಾಡಿದ ಅತ್ಯಂತ ಕೆಟ್ಟ ಕೆಲಸವಾಗಿರಲಿ, ಎಲ್ಲೋ ಒಳಗೆ, ನಾನಿದನ್ನು ಮಾಡಲಿಲ್ಲ, ಅದು ಕೇವಲ ಸಂಭವಿಸಿತು ಎಂದು ನಿಮಗೆ ಅನ್ನಿಸುತ್ತದೆ.
ನಿಮಗೆ ಹಾಗೆ ಅನ್ನಿಸಿದೆಯೇ? ಇದು ನನಗೆ ಆಯಿತು, ನಾನಿದನ್ನು ಮಾಡಲಿಲ್ಲ. ಅದುವೇ ಇದು. ಹಾಗಾಗುವಂತೆ ಮಾಡುವುದು ಆ ಒಂದು ವಿಷಯವಾಗಿದೆ. ಇನ್ನೊಂದು ವಿಷಯವೆಂದರೆ, ನಾನು ಕರ್ತೃವಲ್ಲವೆಂದು ಅನ್ನಿಸುವುದು. ಈ ’ಮಾಡದಿರುವುದು’ ಎಂಬುದು ಸೂತ್ರಧಾರನಾಗಿದೆ.
ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಸಾಂಖ್ಯ ಯೋಗದ ಬಗ್ಗೆ ಓದಿರುವೆನು, ಆದರೆ ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗಿಲ್ಲ. ದಯವಿಟ್ಟು ವಿವರಿಸಿ. ಹಾಗೆಯೇ, ಲೌಕಿಕ ವ್ಯವಹಾರಗಳಲ್ಲಿ ಒಳಗೊಂಡಿರುವಾಗ ನಾವದನ್ನು ಅನುಸರಿಸಲು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿ ನಿಮಗದು ಸಾಧ್ಯ. ಎಚ್ಚೆತ್ತುಕೊಂಡು, ಇದೆಲ್ಲವೂ ಅಸ್ತಿತ್ವದಲ್ಲಿಲ್ಲ ಎಂಬುದನ್ನು ನೋಡುವುದು ಸಾಂಖ್ಯ ಯೋಗವಾಗಿದೆ. ಒಂದೇ ಒಂದು ಇರುವುದು ಮತ್ತು ಎಲ್ಲವೂ ಅದರ ಮೂಲಕ ಕೆಲಸ ಮಾಡುತ್ತದೆ. ಯೋಚನೆಗಳು ಕೂಡಾ ಏನೂ ಅಲ್ಲ, ಎಲ್ಲವೂ ಕೇವಲ ಕಂಪನಗಳಾಗಿವೆ ಎಂಬುದನ್ನು ನೋಡಿ.
ಸಾಂಖ್ಯ ಯೋಗವೆಂದರೆ ಆತ್ಮವು ಚಿರವಾದುದು ಎಂದು ಅರ್ಥ. ನನ್ನಲ್ಲೊಂದು ಅಂಶವಿದೆ, ಅದು ನಾಶವಾಗುವುದಿಲ್ಲ, ಕ್ಷೀಣಿಸುವುದಿಲ್ಲ ಅಥವಾ ಅದಕ್ಕೆ ವಯಸ್ಸಾಗುವುದಿಲ್ಲ ಎಂಬುದನ್ನು ತಿಳಿಯುವುದು. ನಾನು ಶರೀರವಲ್ಲ ಎಂಬುದನ್ನು ತಿಳಿದುಕೊಂಡು ವಿಶ್ರಾಮ ಮಾಡಿ.
ಕೇವಲ ಇದನ್ನು ತಿಳಿದುಕೊಳ್ಳುವುದು ಮತ್ತು ಆತ್ಮನೊಳಗೆ ವಿಶ್ರಾಮ ಮಾಡುವುದು ಸಾಂಖ್ಯ ಯೋಗ ಎಂದು ಕರೆಯಲ್ಪಡುತ್ತದೆ.
ಪ್ರಶ್ನೆ: ಗುರುದೇವ, ಗುರು ಮತ್ತು ಶಿಷ್ಯನ ನಡುವಿನ ಸಂಬಂಧವು ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ಹೇಗೆ ಬೆಳೆಯಬೇಕೆಂಬುದನ್ನು ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿ ಶಂಕರ್: ನಿನ್ನೊಂದಿಗೆ ನಿನ್ನ ಸಂಬಂಧವೇನು? ನಿನ್ನಿಂದಲೇ ನೀನು ಏನ್ನನ್ನಾದರೂ ಅಡಗಿಸಿಡುವೆಯಾ? ಇಲ್ಲ, ಹಾಗೆ, ಅದುವೇ ಗುರು ಮತ್ತು ಶಿಷ್ಯರ ನಡುವಿನ ಸಂಬಂಧ.
ನೀನು ನಿನಗೇ ಏನಾಗಿರುವೆ? ನೀನೊಬ್ಬ ಮಗನೇ, ತಂದೆಯೇ, ಸಹೋದರನೇ? ನೀನು ನಿನಗೇ ಏನಾಗಿದ್ದೀಯಾ?
(ಉತ್ತರ: ನಾನು ಎಲ್ಲವೂ ಆಗಿರುವೆ)
ಹೌದು, ಹಾಗಾದರೆ ಗುರುವಿನೊಂದಿಗೂ ಹಾಗೆಯೇ.
ಪ್ರಶ್ನೆ: ಗುರುದೇವ, ನನ್ನ ಆಂತರಿಕ ಗುರಿಯನ್ನು, ನನ್ನ ನಿಜವಾದ ಅನುರಾಗವನ್ನು ನಾನು ಕಂಡುಕೊಳ್ಳುವುದು ಹೇಗೆ? ಅಥವಾ ಕೇವಲ ನಾನು ಹುಡುಕುವುದನ್ನು ನಿಲ್ಲಿಸಲೇ?
ಶ್ರೀ ಶ್ರೀ ರವಿ ಶಂಕರ್: ಅದೊಂದು ಒಳ್ಳೆಯ ಆಲೋಚನೆಯೆಂದು ನನಗನ್ನಿಸುತ್ತದೆ; ಹುಡುಕುವುದನ್ನು ನಿಲ್ಲಿಸು ಮತ್ತು ಕೇವಲ ವಿಶ್ರಾಮ ಮಾಡು. ಒಳಕ್ಕೆ ಆಳವಾಗಿ ಹೋಗು.
ನೋಡು, ಮನಸ್ಸಿನ ಸ್ವಭಾವವೆಂದರೆ ಹೊಸ ವಿಷಯಗಳ ಕಡೆಗೆ ಹೋಗುವುದು. ಹೊಸ ವಿಷಯಗಳು ಯಾವಾಗಲೂ ಹೊರಗೆ ಇರುತ್ತವೆ. ಆದುದರಿಂದ, ಮನಸ್ಸು ಹುಡುಕುತ್ತಾ ಹೊರಕ್ಕೆ ಹೋಗುತ್ತದೆ. ಹೀಗಿದ್ದರೂ, ಮನಸ್ಸು ಒಳಮುಖವಾದ ಪಯಣವನ್ನು ಪ್ರಾರಂಭಿಸಿದಾಗ, ಹೊಸ ವಿಷಯಗಳನ್ನು ಕೂಡಾ ಪುರಾತನವಾದುದೆಂದು ಅದು ಗುರುತಿಸಲು ಪ್ರಾರಂಭಿಸುತ್ತದೆ.
ಅದು ಹೊಸತಲ್ಲ, ಆದರೆ ಬಹಳ ಪರಿಚಿತವಾದುದು ಮತ್ತು ಪುರಾತನವಾದುದು ಎಂದು ಅನ್ನಿಸುವಲ್ಲಿಯವರೆಗೆ ನಿಮಗೊಂದು ಹೊಸ ಅನುಭವವಿರುತ್ತದೆ. ಅದಕ್ಕಾಗಿಯೇ ಅದು ನಿತ್ಯ ನೂತನ ಎಂದು ಕರೆಯಲ್ಪಡುವುದು, ಅದರರ್ಥ ಯಾವತ್ತೂ ಹೊಸತಾಗಿರುವುದು ಮತ್ತು ಹಾಗಿದ್ದರೂ ಅದು ಸನಾತನವೂ ಆಗಿದೆ. ಅಂದರೆ, ಅನಾದಿ ಕಾಲವನ್ನೂ ಮೀರಿ ಉಳಿದಿರುವುದು.
ಆತ್ಮ, ಪ್ರಜ್ಞೆಯು ನಿತ್ಯ ನೂತನವಾಗಿದೆ. ಪ್ರತಿಕ್ಷಣವೂ ಅದು ಹೊಸತಾಗಿದೆ, ಆದರೂ ಅದು ಅತ್ಯಂತ ಪುರಾತನವಾದುದು, ಸೂರ್ಯನಂತೆ.
ಇವತ್ತು ಸೂರ್ಯನು ಬಹಳ ಹೊಸತು. ತಾಜಾವಾಗಿರುವ ಸೂರ್ಯನ ಕಿರಣಗಳು ಬರುತ್ತಿವೆ. ಹಳೆಯದಾದ, ಹಳಸಿದ ಅಥವಾ ಪುರಾತನ ಸೂರ್ಯನ ಕಿರಣಗಳನ್ನು ನೀವು ಪಡೆಯುವುದಿಲ್ಲ. ಹಾಗಿದ್ದರೂ, ಸೂರ್ಯನು ಹೊಸತೇ? ಇಲ್ಲ, ಸೂರ್ಯ ಪುರಾತನವಾದುದು. ಅದೇ ರೀತಿಯಲ್ಲಿ, ನದಿಗಳು ಪುರಾತನವಾದುದು, ಆದರೆ ನದಿಯಲ್ಲಿರುವ ನೀರು ಸಂಪೂರ್ಣವಾಗಿ ತಾಜಾ ಮತ್ತು ಹೊಸತು.
ಚಂದ್ರ ಪುರಾತನವಾದುದು, ಹಾಗಿದ್ದರೂ ಚಂದ್ರನ ಕಿರಣಗಳು ಯಾವತ್ತೂ ತಾಜಾವಾದುದು.
ನಮ್ಮ ಆತ್ಮವೂ ಹಾಗೆಯೇ. ಅದು ನಿತ್ಯ ನೂತನವಾದುದು ಮತ್ತು ಹಾಗಿದ್ದರೂ ಪುರಾತನವಾದುದು. ಅದೊಂದು ವಿರೋಧಾಭಾಸ, ನಿತ್ಯನೂತನ ಮತ್ತು ಹಾಗಿದ್ದರೂ ಪುರಾತನ.
ಪ್ರಶ್ನೆ: ಗುರುದೇವ, ನಾನು ಒಬ್ಬಂಟಿಯಾಗಿ ಜೀವಿಸುತ್ತೇನೆ. ನಾನು ನನ್ನ ಕುಟುಂಬದೊಂದಿಗೆ ಜೀವಿಸುತ್ತಿಲ್ಲ. ನನಗೀಗ ೭೬ ವರ್ಷ ವಯಸ್ಸು. ನನ್ನ ಕೊನೆಯ ಉಸಿರಿನ ವರೆಗೆ ನಾನು ನಿಮ್ಮದೇನನ್ನೋ ನನ್ನೊಂದಿಗಿರಿಸಲು ಬಯಸುತ್ತೇನೆ. ನೀವು ನನಗೆ ಏನನ್ನಾದರೂ ನೀಡಲೇಬೇಕು! ನೀವು ನನಗೆ ಏನನ್ನು ನೀಡುವಿರಿ?
ಶ್ರೀ ಶ್ರೀ ರವಿ ಶಂಕರ್: ಈ ಎಲ್ಲಾ ಜನರು ನನ್ನ ಕುಟುಂಬವಾಗಿರುವರು, ಅವರೀಗ ನಿಮ್ಮವರು ಕೂಡಾ ಆಗಿರುವರು. ಈಗ ನೀವು ಸಂಪೂರ್ಣ ಪ್ರಪಂಚವನ್ನು ಹೊಂದಿರುವಿರಿ.
ನೋಡಿ, ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ತೊಡಗಬೇಡಿ. ನೀಡಲಾಗುತ್ತಿರುವ ಜ್ಞಾನವನ್ನು ಸ್ವೀಕರಿಸಿ. ನನ್ನ ಬಟ್ಟೆಯ ಕೆಲವು ತುಂಡುಗಳು ಅಥವಾ ನನ್ನ ಯಾವುದಾದರೂ ವಸ್ತುವನ್ನು ಪಡೆಯುವುದರ ಬಗ್ಗೆ ಚಿಂತಿಸಬೇಡಿ. ಅದನ್ನು ಬಿಟ್ಟುಬಿಡಿ.
ಬಹಳಷ್ಟು ಆಳವಾದ ಜ್ಞಾನವನ್ನು ನೀಡಲಾಗುತ್ತಿದೆ. ಜ್ಞಾನವನ್ನು ಸ್ವೀಕರಿಸಿ, ಯಾಕೆಂದರೆ ಅದು ನಿಮ್ಮೊಂದಿಗೆ ಹಲವಾರು ಜನ್ಮಗಳ ವರೆಗೆ ಉಳಿಯುತ್ತದೆ.
ಪ್ರಶ್ನೆ: ಪ್ರೀತಿಯ ಗುರುದೇವ, ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಿಗೆ ನಿಮ್ಮೊಂದಿಗೆ ಬಹಳ ಹತ್ತಿರದಲ್ಲಿರಲು ಹಾಗೂ ಆಗಾಗ್ಗೆ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಶಿಕ್ಷಕರಲ್ಲದೇ ಇರುವ ನಮಗಿಂತ ಅವರು ಹೆಚ್ಚು ಅದೃಷ್ಟಶಾಲಿಗಳಲ್ಲವೇ?
ಶ್ರೀ ಶ್ರೀ ರವಿ ಶಂಕರ್: ನೋಡಿ, ಶಿಕ್ಷಕರಾಗಿರುವವರು ಶಿಕ್ಷಕರಾಗಿಲ್ಲದೇ ಇರುವವರಿಗಿಂತ ಹೆಚ್ಚು ಅದೃಷ್ಟಶಾಲಿಗಳು, ಯಾಕೆಂದರೆ ಅವರಿಗೆ ನನ್ನ ಪಕ್ಕದಲ್ಲಿರಲು ಸಾಧ್ಯವಾಗುತ್ತದೆ ಎಂಬ ರೀತಿಯಲ್ಲಿ ಯೋಚಿಸಬೇಡಿ. ಇಲ್ಲಿರುವ ಎಲ್ಲರೂ ಬಹಳ ಅದೃಷ್ಟಶಾಲಿಗಳು. ನಿಮ್ಮಲ್ಲಿ ಕೆಲವರು ಹತ್ತಿರದಲ್ಲಿರುತ್ತೀರಿ ಮತ್ತು ಕೆಲವರು ದೂರದಲ್ಲಿರುತ್ತೀರಿ. ಆದರೆ, ಕೆಲವರು ಇತರರಿಗಿಂತ ಭಾಗ್ಯಶಾಲಿಗಳೆಂದು ಇದರ ಅರ್ಥವಲ್ಲ. ಎಲ್ಲರೂ ನನಗೆ ಸೇರಿದವರು.