ಗುರುವಾರ, ಮಾರ್ಚ್ 7, 2013

ಆಗುಹೋಗುಗಳು ನಮ್ಮ ಯತ್ನದಲ್ಲಿಲ್ಲ

ಮಾರ್ಚ್ ೧೭, ೨೦೧೩
ಬೆಂಗಳೂರು

ಪ್ರಶ್ನೆ: ಗುರುದೇವ, ನಾನು ಶರಣಾಗತನಾದಾಗ ನನ್ನ ಬಗ್ಗೆ ಕಾಳಜಿ ವಹಿಸಲು ಗುರು ಅಥವಾ ದೇವರಿರುವರು ಎಂಬ ಸಂಪೂರ್ಣ ವಿಶ್ವಾಸದೊಂದಿಗೆ ಜೀವನವನ್ನು ಜೀವಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೀನದನ್ನು ಮಾಡಲು ಸಾಧ್ಯವೇ ಇಲ್ಲ! ನೀನು ಆ ಹೊರೆಯನ್ನು ಸುಮ್ಮನೇ ಹೊರಬೇಕು. "ಏನೆಲ್ಲಾ ಸಂಭವಿಸುವುದೋ, ಸಂಭವಿಸುವುದು", ಕೇವಲ ಅದನ್ನು ಹೇಳು ಮತ್ತು ಏನಾಗುವುದೋ ನೋಡು.
ನೀನು ವಿಶ್ವಾಸವನ್ನು ತರಲು ಪ್ರಯತ್ನಿಸುತ್ತಿದ್ದರೆ, ಅದು ಕೆಲಸ ಮಾಡುವುದೇ ಇಲ್ಲ. "ನಾನು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಲು ಬಯಸುತ್ತೇನೆ", ಯಾವ ನಂಬಿಕೆಯನ್ನು ನೀನು ಉಳಿಸಿಕೊಳ್ಳಲು ಬಯಸುವೆ? ನಿನ್ನ ನಂಬಿಕೆಯನ್ನು ಎಸೆದು ಬಿಡು! ನಿನ್ನ ನಂಬಿಕೆಯನ್ನು ಉಳಿಸಿಕೊಳ್ಳಲು ನೀನು ಪ್ರಯತ್ನಿಸುವುದು ಬಹಳ ದೊಡ್ಡ ಹೊರೆಯೆಂದು ನಾನು ಹೇಳುತ್ತೇನೆ. ಅದರ ಬದಲು, "ನನಗೆ ಚಿಂತೆಯಿಲ್ಲ" ಎಂದು ಹೇಳು!
ನಂಬಿಕೆಯಿದ್ದರೆ, ಅದಲ್ಲಿರುವುದು. ನಂಬಿಕೆಯಿಲ್ಲದಿದ್ದರೆ, ಅದಲ್ಲಿಲ್ಲ, ನಿನಗೇನು ಮಾಡಲು ಸಾಧ್ಯ? ಅದು ಅಷ್ಟೊಂದು ಸರಳವಾದುದು. ನಂಬಿಕೆ ಕೂಡಾ ಒಂದು ಉಡುಗೊರೆ. ನಿನ್ನ ತಲೆಯ ಮೇಲೆ ಅಥವಾ ನಿನ್ನ ಹೃದಯದ ಮೇಲೆ ನಂಬಿಕೆಯನ್ನು ಬಲವಂತವಾಗಿ ತುರುಕಲು ಪ್ರಯತ್ನಿಸುವುದು ನಿನಗೆ ಸಾಧ್ಯವಿಲ್ಲ.
ಕೆಲವೊಮ್ಮೆ, ತನ್ನೆಲ್ಲಾ ವಟಗುಟ್ಟುವಿಕೆಯೊಂದಿಗೆ ಮತ್ತು ತನ್ನೆಲ್ಲಾ ನಕಾರಾತ್ಮಕತೆಯೊಂದಿಗೆ ನಿಮ್ಮ ತಲೆಯು ನಂಬಿಕೆಯನ್ನು ತ್ಯಜಿಸುವಾಗ ಕೂಡಾ, ಆಗಲೂ ನಿಮ್ಮಲ್ಲಿರುವ ಏನೋ ಒಂದು ಕಲಕುವುದು ಮತ್ತು ಆ ದಿಕ್ಕಿನಲ್ಲಿ ನಿಮ್ಮನ್ನು ಎಳೆಯುವುದು. ಇದಾಗುವಾಗ ಕೇವಲ ಅದನ್ನು ಗುರುತಿಸಿ, ಮತ್ತು ಇದಾಗುತ್ತದೆ.
ಯಾರೋ ಒಬ್ಬರು ಹೇಳುತ್ತಾರೆ, "ನನಗೆ ಯಾವುದರಲ್ಲೂ ನಂಬಿಕೆಯಿಲ್ಲ", ಆದರೂ ಅವರು ಕುಳಿತುಕೊಂಡು ಧ್ಯಾನವನ್ನು ಮಾಡುತ್ತಾರೆ, ಮತ್ತು ನೀವು ಅವರಲ್ಲಿ, "ನೀವು ಯಾಕೆ ಧ್ಯಾನ ಮಾಡುತ್ತಿರುವಿರಿ?" ಎಂದು ಕೇಳಿದರೆ ಅವರು, "ಏನೋ ಒಂದು ಅದನ್ನು ಮಾಡುವಂತೆ ನನ್ನಲ್ಲಿ ಹೇಳುತ್ತಿದೆ" ಎಂದು ಹೇಳುತ್ತಾರೆ.
ಒಬ್ಬ ವ್ಯಕ್ತಿ ಹೇಳುತ್ತಾನೆ, "ನನಗೆ ಗುರುವಿನಲ್ಲಿ ನಂಬಿಕೆಯಿಲ್ಲ!" ಆದರೂ ಗುರುದೇವ ಬರುವಾಗ ಅವನು, "ನನಗೆ ಮಾಡಲು ಯಾವ ಕೆಲಸವೂ ಇಲ್ಲದಿರುವುದರಿಂದ, ನಾನಲ್ಲಿಗೆ ಹೋಗುತ್ತೇನೆ" ಎಂದು ಹೇಳುವನು ಮತ್ತು ಅವನಲ್ಲಿರುತ್ತಾನೆ. ಏನೋ ಒಂದು, ವ್ಯಕ್ತಿಯನ್ನು ಸೆಳೆಯುತ್ತದೆ, ಅವನು ವಿಮಾನ ನಿಲ್ದಾಣಕ್ಕೆ ಬರುವಂತೆ ಅಥವಾ ಸತ್ಸಂಗಕ್ಕೆ ಬರುವಂತೆ ಮಾಡುತ್ತದೆ. ಅದು ಯಾವುದು?
ನಿಮ್ಮಲ್ಲಿ ನಂಬಿಕೆಯಿಲ್ಲವೆಂಬುದಾಗಿ ನೀವು ನಿರ್ಧರಿಸಿರುವಿರಿ ಮತ್ತು ನಿಮ್ಮ ನಂಬಿಕೆಯನ್ನು ನಾಶಪಡಿಸಲು ಅಥವಾ ನಿಮ್ಮಲ್ಲಿ ಯಾವುದಾದರೂ ನಂಬಿಕೆಯಿರುವುದನ್ನು ಅಲ್ಲಗಳೆಯಲು ನೀವು ಕಷ್ಟಪಟ್ಟು ಪ್ರಯತ್ನಿಸಿದಿರಿ. ಆದರೂ, ಹೋಗಬಿಡಲು ನಿಮ್ಮನ್ನು ಬಿಡದ ಏನೋ ಒಂದು ಭಾವನೆ ಅಲ್ಲಿ ಬಂತು. ಅಲ್ಲಿ ನೀವು ಗುರುತಿಸಬೇಕು, "ಹೌದು, ನಂಬಿಕೆಯಿದೆ."
ಆದುದರಿಂದ, ನಂಬಿಕೆಯನ್ನು ಹೇರಲು ಸಾಧ್ಯವಿಲ್ಲ, ಅದು ಅಲ್ಲಿದೆ. ಒಮ್ಮೆ ಅದು ಬಂದರೆ, ಅದು ಉಳಿಯುತ್ತದೆ. ಅದು ಹೋದರೆ, ಅದು ನಿಮ್ಮನ್ನು ದುಃಖಿತರನ್ನಾಗಿಸುತ್ತದೆ. ನೀವು ದುಃಖಿತರಾದಾಗ, "ನಂಬಿಕೆಯು ಹೋಗಿದೆ, ಅದಕ್ಕಾಗಿಯೇ ನಾನು ದುಃಖಿತನಾಗಿರುವುದು" ಎಂಬುದನ್ನು ತಿಳಿಯಿರಿ, ಮತ್ತು ದುಃಖಿತರಾಗಲು ನೀವು ಬಯಸುವುದಿಲ್ಲ. ಆದುದರಿಂದ, "ನಾನು ದುಖಿತನಾಗಲು ಬಯಸುವುದಿಲ್ಲ" ಎಂದು ನೀವು ನಿರ್ಧರಿಸಿದ ಕ್ಷಣದಲ್ಲೇ ನಂಬಿಕೆಯು ಉಳಿಯುವುದು ಮುಂದುವರಿಯುತ್ತದೆ. ನಂಬಿಕೆಯು ಹೇಗಿದ್ದರೂ ಅಲ್ಲಿತ್ತು, ಅದು ಕೇವಲ ಪುನಃ ತಲೆದೋರುತ್ತದೆ.
ನಂಬಿಕೆಯನ್ನಿರಿಸಲು ನೀವು ಕಷ್ಟಪಟ್ಟು ಪ್ರಯತ್ನಿಸುವುದು ಒಂದು ಬಹಳ ಕಷ್ಟಕರವಾದ ಸಂಗತಿ. ಕೆಲವೊಮ್ಮೆ, ಕೇವಲ ದೇವರು ಅಥವಾ ಗುರುವಿನಿಂದಾಗಿ ತಾವು ತಮ್ಮ ನಂಬಿಕೆಯನ್ನಿರಿಸಿಕೊಳ್ಳುವುದೆಂದು ಜನರು ಭಾವಿಸುವರು; ದೇವರಿಗೋಸ್ಕರ ನೀವು ನಂಬಿಕೆಯನ್ನಿರಿಸುವುದೆಂದು. ನಿಮಗೆ ದೇವರಲ್ಲಿ ನಂಬಿಕೆಯಿಲ್ಲದಿದ್ದರೆ, ಅವನು ಅದರ ಬಗ್ಗೆ ಚಿಂತಿಸುವುದಿಲ್ಲವೆಂಬುದನ್ನು ನೆನಪಿನಲ್ಲಿಡಿ. ಅವನು, "ಸರಿ, ನಂಬಿಕೆಯಿಡಬೇಡ, ಅದರಿಂದೇನು? ನಾನಿಲ್ಲಿರುವೆನು! ನಾನಿಲ್ಲಿಲ್ಲವೆಂದು ನೀನು ಯೋಚಿಸುವುದಾದರೆ, ನೀನೇನು ಯೋಚಿಸಲು ಬಯಸುವೆಯೋ ಅದನ್ನು ಯೋಚಿಸಲು ನಿನಗೆ ಸ್ವಾತಂತ್ರ್ಯವಿದೆ" ಎಂದು ಹೇಳುತ್ತಾನೆ.
ಹಲವು ಜನರು ಹೇಳುತ್ತಾರೆ, "ಓ, ನಾನು ದೇವರನ್ನು ಅಷ್ಟೊಂದು ನಂಬುತ್ತೇನೆ." ನೀವು ಅಷ್ಟೊಂದು ನಂಬುತ್ತೀರಿ, ಅದರಿಂದೇನು? ಏನೆಲ್ಲಾ ಸಂಭವಿಸಬೇಕೋ, ಅದು ಸಂಭವಿಸುವುದು. ನಮ್ಮ ನಂಬಿಕೆಯು ಬಹಳ ಆಳವಿಲ್ಲದ್ದಾಗಿದೆ. ನಮ್ಮ ನಂಬಿಕೆಯು ಸುಖಕ್ಕಾಗಿ, ಚಿಕ್ಕ ವಿಷಯಗಳು ನೆರವೇರಬೇಕಾಗಿರುವುದಕ್ಕಾಗಿ ಇರುವುದು. ನಮ್ಮ ನಂಬಿಕೆಯು, ಪ್ರಧಾನವಾಗಿ, ನಮ್ಮ ಸ್ವಂತ ಆಕಾಂಕ್ಷೆಗಳನ್ನು ಪೂರೈಸುವುದಕ್ಕಾಗಿ ಇರುವುದು. ನಮ್ಮ ಆಕಾಂಕ್ಷೆಗಳು ನೆರವೇರಿದರೆ, ಆಗ ನಾವು, "ಓ, ನನ್ನಲ್ಲಿ ನಂಬಿಕೆಯಿದೆ" ಎಂದು ಹೇಳುತ್ತೇವೆ. ಅದು ಪೂರೈಸಲ್ಪಡದಿದ್ದರೆ ನಾವು, "ನನ್ನ ನಂಬಿಕೆಯು ಅಲ್ಲಾಡಿದೆ, ನನ್ನಲ್ಲಿ ನಂಬಿಕೆಯಿಲ್ಲ" ಎಂದು ಹೇಳುತ್ತೇವೆ. ಜೀವನವು ಆಕಾಂಕ್ಷೆಗಳಿಗಿಂತ ಎಷ್ಟೋ ಹೆಚ್ಚಿನದೆಂದು ನಾನು ಹೇಳುತ್ತೇನೆ, ಮತ್ತು ನಂಬಿಕೆಯು ಜೀವನಕ್ಕಿಂತಲೂ ಹೆಚ್ಚಿನದು.
ನಂಬಿಕೆಯು ಉಳಿಯುತ್ತದೆ ಮತ್ತು ಸತ್ವ ಅಥವಾ ಪವಿತ್ರತೆ ಅಥವಾ ಸಾಮರಸ್ಯವು ನಿಮ್ಮಲ್ಲಿ ಉಂಟಾದಾಗ ಅದು ತಲೆದೋರುತ್ತದೆ. ನೀವು ಮಾಡಬಹುದಾದುದೇನೆಂದರೆ, ಸಾಮರಸ್ಯವನ್ನು ಇಟ್ಟುಕೊಳ್ಳುವುದು ಹಾಗೂ ಸರಿಯಾದ ವ್ಯಾಯಾಮ, ಆಹಾರ ಮತ್ತು ಜ್ಞಾನದ ಮೂಲಕ ನಿಮ್ಮ ಮನಸ್ಸನ್ನು ಸ್ಪಷ್ಟವಾಗಿಟ್ಟುಕೊಳ್ಳುವುದು. ಇದೆಲ್ಲವೂ ಆ ದಿಕ್ಕಿನಲ್ಲಿ ಬೆಳೆಯಲು ನಿಮಗೆ ಸಹಾಯ ಮಾಡುವುದು.

ಪ್ರಶ್ನೆ: ಗುರುದೇವ, ಮೊದಲು ಅಜ್ಞಾನವು ನನ್ನನ್ನು ಭಯಪಡುವಂತೆ ಮಾಡುತ್ತಿತ್ತು, ಆದರೆ ಈಗ, ಕೆಲವೊಮ್ಮೆ, ಜ್ಞಾನವು ನನಗೆ ಹೆಚ್ಚಿನ ಗೊಂದಲವನ್ನು ತರುತ್ತಿದೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಅದು ಒಳ್ಳೆಯದು! ಜ್ಞಾನದ ಉದ್ದೇಶವು ನಿಮ್ಮನ್ನು ಮತ್ತೆ ಮತ್ತೆ ಗೊಂದಲಪಡಿಸುವುದು. ಅದು ಸ್ಪಷ್ಟತೆಯನ್ನು ತರುವುದಕ್ಕಾಗಿಯಲ್ಲ. ಗೊಂದಲದ ಪ್ರತಿಯೊಂದು ಹಂತದಲ್ಲೂ, ನೀವು ಇನ್ನೂ ಒಂದು ಹೆಜ್ಜೆ ಮೇಲಕ್ಕೆ ನೆಗೆಯುವಿರಿ. ಆದುದರಿಂದ, ಚಿಂತಿಸಬೇಡಿ.
ಯಾವುದೇ ಗೊಂದಲವಿಲ್ಲದಿರುವಾಗ, ಅದು ಯಾವುದೇ ನೆಗೆತವಿರದ ಒಂದು  ಬೆಕ್ಕಿನ ನಡಿಗೆಯಂತೆ. ಆದರೆ ಕೆಲವೊಮ್ಮೆ, ಮೆಟ್ಟಿಲಿನಂತೆ, ಒಂದು ಮೆಟ್ಟಿಲನ್ನು ಬಿಟ್ಟು ಇನ್ನೊಂದು ಮೆಟ್ಟಿಲನ್ನೇರಿ, ಒಂದು ಮಟ್ಟ ಮೇಲೇರುವಿರಿ. ಆಗಲೇ ಗೊಂದಲವಾಗುವುದು. ಈಗ, "ಯಾವುದೇ ಗೊಂದಲವಿಲ್ಲದೆ, ನನ್ನ ಜೀವನದಲ್ಲಿ ನಾನು ಸ್ಪಷ್ಟವಾಗಿದ್ದರೆ, ಆಗ ಅಲ್ಲಿ ಯಾವುದೇ ಬೆಳವಣಿಗೆಯಿಲ್ಲವೆಂಬುದು ಇದರ ಅರ್ಥವೇ? ಅಥವಾ ನಾನು ಮುಂದುವರಿಯುತ್ತಿಲ್ಲವೇ? ನನಗೆ ಜ್ಞಾನದಿಂದ ಪ್ರಯೋಜನವಾಗುತ್ತಿಲ್ಲವೇ?" ಎಂದು ನನ್ನಲ್ಲಿ ಕೇಳಬೇಡಿ. ಹಾಗೇನೂ ಇಲ್ಲ! ನೀವೊಂದು ನೇರ ನಡಿಗೆಯಲ್ಲಿರುವಿರಿ, ಒಂದು ಸುಗಮ ನಡಿಗೆಯಲ್ಲಿರುವಿರಿ. ಅದಿಲ್ಲದಿರುವಾಗ ನೀವೊಂದು ರೋಲರ್ ಕೋಸ್ಟರ್ ಸವಾರಿಯಲ್ಲಿ; ಒಂದು ಉಬ್ಬುತಗ್ಗುಗಳಿರುವ ರಸ್ತೆಯಲ್ಲಿರುವಿರಿ, ಮತ್ತು ಅದು ಒಳ್ಳೆಯದು.

ಪ್ರಶ್ನೆ: ಗುರುದೇವ, ದಕ್ಷಿಣಾಮೂರ್ತಿಯ ಅರ್ಥವೇನು?
ಶ್ರೀ ಶ್ರೀ ರವಿ ಶಂಕರ್: ಅಮೂರ್ತವೆಂದರೆ, ಯಾವುದಕ್ಕೆ ಆಕಾರವಿಲ್ಲವೋ ಮತ್ತು ಯಾವುದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲವೋ; ಯಾವುದನ್ನು ನೋಡಲು ಸಾಧ್ಯವಿಲ್ಲವೋ ಅದು ಎಂದು ಅರ್ಥ. ಪರಮಾತ್ಮ ಶಿವ, ಅನಂತ ಆಕಾಶದ ನಿರಾಕಾರ ಪ್ರಕಟನೆಯು, ಒಂದು ಆಕಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ಕಷ್ಟಸಾಧ್ಯ.
ಮೂರ್ತಿಯೆಂದರೆ ಯಾವುದಕ್ಕೆ ಒಂದು ಆಕಾರವಿರುವುದೋ ಮತ್ತು ಯಾವುದನ್ನು ನೋಡಬಹುದೋ ಅದು. ದಕ್ಷವೆಂದರೆ ಕುಶಲತಾಶೀಲರಾಗಿರುವುದು ಮತ್ತು ಸಮರ್ಥರಾಗಿರುವುದು.
ಆದುದರಿಂದ, ವ್ಯಕ್ತಪಡಿಸಲು ಸಾಧ್ಯವಿಲ್ಲದಿರುವ ದೈವಿಕತೆಯನ್ನು ಒಂದು ಬಹಳ ಕುಶಲತಾಪೂರ್ಣವಾದ ರೀತಿಯಲ್ಲಿ ವ್ಯಕ್ತಪಡಿಸುವಾಗ, ಅದು ದಕ್ಷಿಣಾ ಎಂದು ಕರೆಯಲ್ಪಡುತ್ತದೆ.
ನೋಡಿ, ನಮ್ಮೊಳಗಿರುವ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಿಲ್ಲ. ಹಲವಾರು ಸಾರಿ, ನಾವು ನಮ್ಮ ಭಾವನೆಗಳನ್ನು ಒಂದು ಹೂವನ್ನು ಅರ್ಪಿಸುವುದರ ಮೂಲಕ ವ್ಯಕ್ತಪಡಿಸುತ್ತೇವೆ. ಒಂದು ಹೂವನ್ನು ಅರ್ಪಿಸುವ ಕ್ರಿಯೆಯ ಮೂಲಕ, ನಾವು ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ, ಅಲ್ಲವೇ? ನಮ್ಮೊಳಗೆ ಆಳದಲ್ಲಿ ಏನಿದೆಯೋ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ನಾವು ನೀಡಬಹುದಾದುದು ಏನೂ ಇಲ್ಲ, ಆದರೂ ಏನನ್ನಾದರೂ ಕೊಡಲು ನಾವು ಪ್ರಯತ್ನಿಸುತ್ತೇವೆ. ಅದು ದಕ್ಷಿಣಾ ಎಂದು ಕರೆಯಲ್ಪಡುತ್ತದೆ.
ದಕ್ಷಿಣಾಮೂರ್ತಿಯೆಂದರೆ, ಯಾವುದನ್ನು ನೋಡಲು ಸಾಧ್ಯವಿಲ್ಲವೋ, ಆದರೂ ಅದನ್ನು ವ್ಯಕ್ತಪಡಿಸಲಾಗುವುದೋ ಅದು. ಯಾವುದು ಅಭಿವ್ಯಕ್ತಿಯನ್ನು ಮೀರಿದುದೋ, ಆದರೂ ಆಕಾರದ ಮೂಲಕ ವ್ಯಕ್ತಪಡಿಸಲಾಗುತ್ತಿರುವುದೋ ಅದು. ಅದು ಕಾಣಿಸುವುದಿಲ್ಲ, ಆದರೂ ಅದನ್ನು ನೋಡಲಾಗುತ್ತದೆ ಮತ್ತು ಎಲ್ಲವೂ ಅದರಿಂದಲೇ ಮಾಡಲ್ಪಟ್ಟಿದೆ. ಯಾವುದು ಅನಂತವೂ, ವ್ಯಕ್ತಪಡಿಸಲು ಅಥವಾ ಪ್ರಕಟಪಡಿಸಲು ಸಾಧ್ಯವಿಲ್ಲದುದೂ ಆಗಿದೆಯೋ, ಅದನ್ನು ಒಂದು ಆಕಾರದ ಮೂಲಕ ಬಹಳ ಕುಶಲತಾಪೂರ್ಣವಾಗಿ ವ್ಯಕ್ತಪಡಿಸಿದಾಗ, ಅದು ದಕ್ಷಿಣಾಮೂರ್ತಿ ಎಂದು ಕರೆಯಲ್ಪಡುತ್ತದೆ.
ಸೂರ್ಯ ಬಹಳ ದೊಡ್ಡದು ಮತ್ತು ನಮ್ಮಿಂದ ಹಲವಾರು ಮೈಲುಗಳಷ್ಟು ದೂರದಲ್ಲಿದೆ, ಆದರೆ ನೀವು ಸೂರ್ಯನನ್ನು ಒಂದು ಚಿಕ್ಕ ಕನ್ನಡಿಯನ್ನುಪಯೋಗಿಸಿ ನೋಡಿದರೆ, ನಿಮಗೆ ಸೂರ್ಯನ ಪ್ರತಿಬಿಂಬವು ಆ ಚಿಕ್ಕ ಗಾಜಿನ ತುಂಡಿನಲ್ಲಿ ಕಾಣಿಸುತ್ತದೆ. ವಾಸ್ತವವಾಗಿ ಸೂರ್ಯ ಅಷ್ಟೊಂದು ದೊಡ್ಡದಾಗಿದ್ದರೂ, ಸೂರ್ಯನ ಸಂಪೂರ್ಣ ಪ್ರತಿಬಿಂಬವನ್ನು ಕುಶಲತಾಪೂರ್ಣವಾಗಿ ಒಂದು ಕನ್ನಡಿಯಲ್ಲಿ ಹಿಡಿದು ನಿಮ್ಮ ಮನೆಯೊಳಗೆ ತರಲು ನಿಮಗೆ ಸಾಧ್ಯವಾಗುತ್ತದೆ. ಇದು ದಕ್ಷತೆಯೆಂದು ಕರೆಯಲ್ಪಡುತ್ತದೆ, ಮತ್ತು ಅದಕ್ಕಾಗಿಯೇ ಇದು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತದೆ.
ಪರಮಾತ್ಮ ಶಿವನು ಆದಿ ಗುರುವೆಂದು ಕರೆಯಲ್ಪಡುತ್ತಾನೆ (ಆದಿಕಾಲದಿಂದಲೂ ಇರುವ ಮತ್ತು ಕಾಲಾತೀತನಾದ ಗುರು). ಅವನು ಎಲ್ಲವೂ ಆಗಿರುವನು ಮತ್ತು ಎಲ್ಲೆಡೆಯೂ ಇರುವನು, ಆದರೂ ಅವನು ಒಬ್ಬ ಗುರುವಿನ ರೂಪದಲ್ಲಿ ಬರುವನು. ಆದುದರಿಂದ, ಅನಂತತೆಯು ಒಬ್ಬ ಗುರುವಿನ ರೂಪದಲ್ಲಿ ಬರುವಾಗ, ಅವನು ದಕ್ಷಿಣಾಮೂರ್ತಿಯೆಂದು ತಿಳಿಯಲ್ಪಡುತ್ತಾನೆ.
ಪ್ರಾಚೀನ ಕಾಲದಿಂದ, ಗುರು ತತ್ವದ ಪ್ರಧಾನ ರೂಪವು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತದೆ. ನೋಡಿ, ಗುರುವು ಒಬ್ಬ ವ್ಯಕ್ತಿಯಲ್ಲ. ಒಬ್ಬ ಗುರುವಿನ ಶರೀರದಲ್ಲಿರುವುದು ಒಂದು ಶಕ್ತಿಯಾಗಿದೆ; ಆ ಶಕ್ತಿಯು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತದೆ. ಯಾವುದು ಪ್ರಕಟವಾಗಿಲ್ಲವೋ ಮತ್ತು ಆದರೂ ಪ್ರಕಟವಾಗುವುದೋ ಆ ದೈವಿಕತೆ, ಆ ಸರ್ವವ್ಯಾಪಿ, ಅನಂತ, ಮಾರ್ಗದರ್ಶನವನ್ನೀಯುವ ಜ್ಞಾನವಾಗಿದೆ ಅದು.
ಆದುದರಿಂದ ಪರಮಾತ್ಮ ಶಿವನು ದಕ್ಷಿಣಾಮೂರ್ತಿ; ಆದಿ ಗುರುವೆಂದು ಕರೆಯಲ್ಪಡುತ್ತಾನೆ. ಕಥೆಯು ಸಾಗುವುದು ಹೀಗೆ: ಪರಮಾತ್ಮ ಶಿವನು ಮೌನವಾಗಿ ಕುಳಿತನು. ಅವನನ್ನು, ಒಬ್ಬ ಯುವ ಬಾಲಕನಾಗಿ, ಹಿರಿಯ ಶಿಷ್ಯರು ಅವನ ಮುಂದೆ ಜ್ಞಾನಾಪೇಕ್ಷಿಗಳಾಗಿ ಕುಳಿತಿರುವುದಾಗಿ ಚಿತ್ರಿಸಲಾಗಿದೆ. ಅವರು ಅವನ ಮುಂದೆ ಕುಳಿತ ಕೂಡಲೇ, ಮೌನದಲ್ಲಿ, ಅವರೆಲ್ಲರೂ ಜ್ಞಾನವನ್ನು ಪಡೆದರು ಮತ್ತು ಅವರೆಲ್ಲರ ಪ್ರಶ್ನೆಗಳು ಮಾಯವಾದವು. ಅವನ ಪ್ರವಚನವು ಮೌನದಲ್ಲಾಗಿತ್ತು. ಅದರರ್ಥ, ಅವರ ಚೈತನ್ಯವು ಮೇಲೆತ್ತಲ್ಪಟ್ಟಿತು. ಅದು ಗುರು ತತ್ವ. ಎಲ್ಲಿಂದ ಎಲ್ಲಾ ಜ್ಞಾನವು ಪ್ರಾರಂಭವಾಯಿತೋ ಆ ಮೂಲ ಗುರುವು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತಾರೆ. ಆದುದರಿಂದ ಒಂದು ಬಹಳ ಕುಶಲತಾಪೂರ್ಣವಾದ ರೀತಿಯಲ್ಲಿ, ಅವ್ಯಕ್ತವಾದ ದೈವಿಕತೆಯು ವ್ಯಕ್ತಗೊಳಿಸಲ್ಪಡುತ್ತದೆ. ಅದು ದಕ್ಷಿಣಾಮೂರ್ತಿಯ ಸಂಪೂರ್ಣ ಸಾರವಾಗಿದೆ.

ಪ್ರಶ್ನೆ: ಗುರುದೇವ, ಕಾಳಿಯು ಶಿವನ ಮೇಲೆ ನಿಂತಿರುವುದರ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಕಾಳಿಯು ಅಗಾಧವಾದ ಪರಿವರ್ತಕ ಶಕ್ತಿಯ; ವಿನಾಶದ ಶಕ್ತಿಯ ಸಂಕೇತವಾಗಿದೆ. ಅದು ಶಿವ ತತ್ವದ ಮೇಲೆ ನಿಂತಾಗ, ಅದು ಭದ್ರಕಾಳಿಯಾಯಿತು, ಅಂದರೆ, ಪರೋಪಕಾರಿ ಫಲಿತಾಂಶಗಳನ್ನು ಮಾತ್ರ ತರುವ ಶಕ್ತಿ. ಇಡೀ ವಿಷಯವು ಸಾಂಕೇತಿಕವಾದುದಾಗಿದೆ; ಪರೋಪಕಾರಿ ಫಲಿತಾಂಶಗಳನ್ನು ಮಾತ್ರ ತರುವ ಶಕ್ತಿಯನ್ನು ಅದು ಸೂಚಿಸುತ್ತದೆ.
ಶಿವ ಎಂಬುದು ಅತೀಂದ್ರಿಯ ಸ್ಥಿತಿಯಾಗಿದೆ; ಅದರರ್ಥ ಯಾರು ಪ್ರಪಂಚಕ್ಕೆ ಕೇವಲ ಪರೋಪಕಾರವನ್ನು ಮತ್ತು ಒಳ್ಳೆಯದನ್ನು ತರುವರೋ ಅವರು ಎಂದು. ಆದುದರಿಂದ, ಅಗಾಧವಾದ ವಿನಾಶಕಾರಿ ಶಕ್ತಿ ಕಾಳಿಯು ಕ್ರೋಧದಲ್ಲಿದ್ದಾಗ; ಆ ಕ್ಷಣದಲ್ಲಿ, ಶಿವನು ಬಂದು ಮಲಗಿದನು. ಅವಳು ಅವನ ಮೇಲೆ ಹೆಜ್ಜೆಯಿಟ್ಟಾಗ, ಕಾಳಿಯ ಶಕ್ತಿಯು ನಿಯಂತ್ರಿಸಲ್ಪಟ್ಟಿತು, ಸರಿಯಾದ ಮಾರ್ಗದಲ್ಲಿ ಪ್ರವಹಿಸಲ್ಪಟ್ಟಿತು ಮತ್ತು ಪರೋಪಕಾರಿಯಾಯಿತು. ಆದುದರಿಂದ, ಅಲ್ಲಿ ವಿನಾಶವಿದ್ದರೂ ಕೂಡಾ, ಅದು ಪರೋಪಕಾರಿಯಾಗಿರಬೇಕು.
ನೋಡಿ, ಹಳೆಯ ಕಟ್ಟಡಗಳನ್ನು ಕೆಡವಲು ಬಯಸುವಾಗ, ನೀವೇನು ಮಾಡುವಿರಿ? ನೀವು ಕಟ್ಟಡದ ಕೆಳಗೆ ಡೈನಮೈಟನ್ನು ಹಾಕುವಿರಿ, ಮತ್ತು ನಂತರ ಕಟ್ಟಡವು ಕೆಡವಲ್ಪಡುವುದು, ಅಲ್ಲವೇ? ಹೊಸದೇನನ್ನೋ ಸೃಷ್ಟಿಸಲು ಒಬ್ಬರು ಒಂದನ್ನು ನಾಶ ಮಾಡುತ್ತಾರೆ. ಆದುದರಿಂದ ಒಂದು ಒಳ್ಳೆಯ ಉದ್ದೇಶಕ್ಕಾಗಿ, ಪರೋಪಕಾರಕ್ಕಾಗಿ ನಾಶ ಮಾಡುವುದು, ಕ್ರೋಧದಿಂದ, ಮಾತ್ಸರ್ಯದಿಂದ, ದ್ವೇಷದಿಂದ ಮತ್ತು ಅಜ್ಞಾನದಿಂದ ನಾಶ ಮಾಡುವುದಕ್ಕಿಂತ ಬಹಳ ವ್ಯತ್ಯಸ್ತವಾಗಿದೆ. ಅದು, ಒಂದು ಪರಮಾಣು ನಾಶವಾಗುವಾಗ ಉತ್ಪನ್ನವಾಗುವಾಗ ಪರಮಾಣು ಶಕ್ತಿಯಂತೆ. ಹೀಗಾದರೂ, ಶಕ್ತಿಯನ್ನು ಸರಿಯಾಗಿ ಪ್ರವಹಿಸದಿದ್ದರೆ ಅಥವಾ ಉಪಯೋಗಿಸದಿದ್ದರೆ, ಅದು ಬಹಳ ವಿನಾಶಕಾರಿಯಾಗಬಹುದು. ಅದನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದಾಗ, ಅದು ವಿದ್ಯುತ್, ಪ್ರಕಾಶ ಮತ್ತು ಹಲವು ಸೌಕರ್ಯಗಳನ್ನು ತರುವುದಕ್ಕಾಗಿ ಬಳಸಲ್ಪಡುತ್ತದೆ.
ಅದುವೇ ವಿದ್ಯುತ್ತಿಗೂ ಅನ್ವಯಿಸುತ್ತದೆ. ನಿಜವಾಗಿ ನೋಡಿದರೆ, ಅದೊಂದು ವಿನಾಶಕಾರಿ ಶಕ್ತಿಯಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಶಕ್ತಿ ಎಲ್ಲಿ ಉತ್ಪನ್ನವಾಗುವುದೋ, ಅದರೊಂದಿಗೆ ನೀವು ಸಂಪರ್ಕಕ್ಕೆ ಬಂದರೆ, ನೀವು ನಾಶವಾಗಲು ಸಮಯವೇ ಬೇಡ. ಆದರೆ, ವಿದ್ಯುತ್ ಶಕ್ತಿಯು ಒಂದು ಉಪಕಾರಿ ಉದ್ದೇಶಕ್ಕಾಗಿ ಬಳಸಲ್ಪಟ್ಟಾಗ; ತಂತಿಗಳು ಮತ್ತು ಟ್ರಾನ್ಸ್ಫ಼ಾರ್ಮರುಗಳ ಮೂಲಕ; ಅದು ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಅದು ಜನರಿಗೆ ಸಿಗುವಂತೆ ಹಾಗೂ ಪ್ರಯೋಜನಕಾರಿಯಾಗುವಂತೆ ಮಾಡುತ್ತದೆ. ಅದೇ ರೀತಿಯಲ್ಲಿ, ಕಾಳಿಯ ಶಕ್ತಿಯು ವಿನಾಶಕಾರಿ ಶಕ್ತಿಯಾಗಿತ್ತು; ಕೆಟ್ಟ ವಿಷಯಗಳನ್ನು ನಾಶ ಮಾಡಲು ಅದು ತೋರ್ಪಟ್ಟಾಗ, ಅದು ಬಹಳ ಶಕ್ತಿಶಾಲಿಯಾಗಿತ್ತು. ಆದುದರಿಂದ, ವಿಶ್ವವನ್ನು ಸಂರಕ್ಷಿಸುವುದಕ್ಕಾಗಿ, ಅದನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಲು ಮತ್ತು ಅದನ್ನು ಪರೋಪಕಾರಿಯಾಗುವಂತೆ ಮಾಡಲು ಶಿವನು ಮಲಗಿದನು.
ಶಿವನು ಯಾವತ್ತೂ, ಯಾವುದು ಸಂಪೂರ್ಣ ಜಗತ್ತಿಗೆ; ಸಂಪೂರ್ಣ ವಿಶ್ವಕ್ಕೆ ಒಳ್ಳೆಯದೋ ಅದನ್ನು ಮಾಡುತ್ತಾನೆ; ಅವನು ವಿಷವನ್ನು ಕೂಡಾ ಕುಡಿದನು. ಒಂದು ಪೌರಾಣಿಕ ಕಥೆಯಿದೆ. ದೇವತೆಗಳು ಮತ್ತು ಅಸುರರು ಕ್ಷೀರ ಸಾಗರವನ್ನು ಕಡೆಯುತ್ತಿದ್ದಾಗ, ಮೊದಲು ಬಂದದ್ದೇನೆಂದರೆ, ವಿಷವಾಗಿತ್ತು. ವಿಷವು ಮೇಲೆ ಬಂದಾಗ, ಅದನ್ನು ತೆಗೆದುಕೊಂಡು ಕುಡಿದವನೆಂದರೆ ಶಿವ. ಅವನು ವಿಷವನ್ನು ಕುಡಿದುದರಿಂದ, ಅವನ ಗಂಟಲು ನೀಲಿಯಾಯಿತು. ಆದುದರಿಂದ ಅವನು ನೀಲಕಂಠನೆಂದು ಕರೆಯಲ್ಪಡುತ್ತಾನೆ; ನೀಲಿ ಗಂಟಲಿನೊಂದಿಗಿನ ಸುಂದರನಾದವನು. ಹಿಂದೂ ಪುರಾಣದಲ್ಲಿ ಕಥೆ ಸಾಗುವುದು ಹೀಗೆ.
ಕಾಳಿಯೆಂದರೆ ಜ್ಞಾನವೆಂಬ ಅರ್ಥ ಕೂಡಾ ಇದೆ; ಪರಿವರ್ತನೆಯ ಜ್ಞಾನ. ಕಾಳಿಯು ಸೌಭಾಗ್ಯದ ಮೇಲೆ; ಶಿವನ ಔದಾರ್ಯದ ಮೇಲೆ ನಿಂತಾಗ, ಅದು ಜಗತ್ತಿಗೆ ಒಳ್ಳೆಯದನ್ನು ತಂದಿತು. ಹೀಗೆ, ಅದೇ ಶಕ್ತಿಯು ಬಹಳ ಪರೋಪಕಾರಿಯಾಯಿತು ಮತ್ತು ಕಾಳಿಯು ನಂತರ ಎಂಥಹ ಪರೋಪಕಾರಿ ಹರಸುವವಳಾದಳೆಂದರೆ, ಅವಳು ವಿಶ್ವಕ್ಕೆ ಜ್ಞಾನವನ್ನು ನೀಡಿ ಹರಸಿದಳು. ಆದುದರಿಂದ ಅವಳು ಭದ್ರಕಾಳಿ ಎಂದು ಕೂಡಾ ಕರೆಯಲ್ಪಡುತ್ತಾಳೆ; ಯಾವತ್ತೂ ಒಳ್ಳೆಯದನ್ನು ಮಾಡುವವಳು.

ಪ್ರಶ್ನೆ: ಪ್ರೀತಿಯ ಗುರುದೇವ, ಪ್ರತಿಯೊಂದು ನಿರಾಕಾರವೂ ಶಿವನಾಗಿದ್ದರೆ ಮತ್ತು ಪ್ರತಿಯೊಂದು ಸಾಕಾರವೂ ಶಕ್ತಿಯಾಗಿದ್ದರೆ, ಸಾಕಾರವೂ ನಿರಾಕಾರವೂ ಎರಡೂ ಆಗಿರುವ ಉಸಿರು ಎಂಬುದೇನು?
ಶ್ರೀ ಶ್ರೀ ರವಿ ಶಂಕರ್: ಹೌದು, ನಿರಾಕಾರವು ಶಿವ ಮತ್ತು ಸಾಕಾರವು ಶಕ್ತಿ. ನೀನದನ್ನು ಯಾವುದೇ ರೀತಿಯಲ್ಲಿ ಬೇಕಾದರೂ ನಿರೂಪಿಸಬಹುದು.
ಪ್ರಾಣವು ಮುಖ್ಯಪ್ರಾಣವೆಂದು ಕೂಡಾ ತಿಳಿಯಲ್ಪಡುತ್ತದೆ. ಹನುಮಂತನು ಪ್ರಾಣದೊಂದಿಗೆ ಸಂಬಂಧ ಹೊಂದಿದ್ದಾನೆ, ವಾಯುವು ಪ್ರಾಣದೊಂದಿಗೆ ಸಂಬಂಧ ಹೊಂದಿದೆ, ಓಂಕಾರವು ಪ್ರಾಣದೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ವಿಶ್ವದಲ್ಲಿ ಎಲ್ಲವೂ ಪ್ರಾಣವಾಗಿದೆ. ನಾವು ಪ್ರಾಣದ ಒಂದು ಸಾಗರದಲ್ಲಿದ್ದೇವೆ ಮತ್ತು ಪ್ರಾಣವು ಶಿವ ಹಾಗೂ ಶಕ್ತಿ ಇಬ್ಬರೂ ಆಗಿದೆ.
ಶಿವ ಮತ್ತು ಶಕ್ತಿಯರ ನಡುವೆ ನಿನಗೆ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಾಗದಂತಹ ಒಂದು ಸಂದರ್ಭ ಬರುತ್ತದೆ. ಸೀಮೆಯು ಮಾಯವಾಗುತ್ತದೆ, ಅದು ಅದೃಶ್ಯವಾಗುತ್ತದೆ. ಶಿವ ಮತ್ತು ಶಕ್ತಿಯರು ಒಂದಾಗುತ್ತಾರೆ. ಆಗಲೇ ಅದು ಬ್ರಹ್ಮನ್ ಎಂದು ಕರೆಯಲ್ಪಡುವುದು, ಅದರರ್ಥ, ಅದೆಲ್ಲವೂ ಒಂದೇ; ಎರಡನೆಯದು ಇಲ್ಲವೆಂದು.
ಅದ್ವೈತವೆಂದರೆ, ಎರಡನೆಯದಿಲ್ಲ, ಎರಡು ಎಂಬುದಿಲ್ಲವೆಂದು (ಒಂದು ಎಂದು ಎಣಿಸಬೇಕಾದರೆ ಕೂಡಾ, ಅಲ್ಲಿ ಎರಡಿರಬೇಕು. ಅದಕ್ಕಾಗಿಯೇ, "ಎರಡಿಲ್ಲ, ಕೇವಲ ಒಂದಿರುವುದು" ಎಂದು ಹೇಳಲಾಗಿರುವುದು). ಅದು ಚೈತನ್ಯದ ಒಂದು ಕ್ಷೇತ್ರ. ಅದಕ್ಕಿಂತ ಹೊರತಾದುದು ಯಾವುದೂ ಅಸ್ತಿತ್ವದಲ್ಲಿಲ್ಲ. ಅದ್ವೈತವೆಂದರೆ ಎರಡಿಲ್ಲದ; ಅದು ವಿಶ್ವದಲ್ಲಿನ ಎರಡಿಲ್ಲದ ಶಕ್ತಿ. ಇದು ಅತ್ಯುನ್ನತ ಜ್ಞಾನ, ಅಂದರೆ; ಎರಡಿಲ್ಲದಿರುವಿಕೆ, ಎರಡು ವಿಷಯಗಳಿಲ್ಲ. ಸಂಪೂರ್ಣ ವಿಶ್ವವು ಒಂದು ವಿಷಯದಿಂದ ಮಾಡಲ್ಪಟ್ಟಿದೆ.
ನೀವು ಒಂದು ಹೆಜ್ಜೆ ಕೆಳಗೆ ಬಂದಾಗ; ಅದು ಕ್ವಾಂಟಮ್ ಫಿಸಿಕ್ಸಿನಂತೆ. ಇನ್ನೂ ಒಂದು ಹೆಜ್ಜೆ ಕೆಳಗೆ ಬಂದರೆ, ಆಗ ಅದು ರಸಾಯನ ಶಾಸ್ತ್ರದಲ್ಲಿನ ಆವರ್ತಕ ಕೋಷ್ಟಕದಂತೆ. ನಿಮಗೆ ಆವರ್ತಕ ಕೋಷ್ಟಕ ತಿಳಿದಿದೆಯೇ? ನಿಮ್ಮಲ್ಲಿ ವಿವಿಧ ಮೂಲ ಅಂಶಗಳಿರುತ್ತವೆ, ವಿವಿಧ ಮಗ್ಗಲುಗಳು; ಇವುಗಳೆಲ್ಲವೂ ವಿವಿಧ ದೇವ ದೇವತೆಯರು.

ಪ್ರಶ್ನೆ: ಕೃಷ್ಣನು, "ಧರ್ಮಕ್ಕೆ ವಿರುದ್ಧವಾಗಿರದ ಬಯಕೆಯು ನಾನಾಗಿರುವೆನು" ಎಂದು ಹೇಳುತ್ತಾನೆ. ಧರ್ಮ ಸಮ್ಮತವಾದ ಮತ್ತು ಧರ್ಮಕ್ಕೆ ವಿರೋಧವಾದ ಬಯಕೆಗಳು ಯಾವುವೆಂದು ಗುರುತಿಸುವುದು ಹೇಗೆಂದು ನೀವು ನಮಗೆ ದಯವಿಟ್ಟು ತಿಳಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಸಾಮಾನ್ಯವಾಗಿರುವ, ಸಹಜವಾಗಿರುವ ಮತ್ತು ನಿಮ್ಮಲ್ಲಿ ಯಾವುದೇ ತಪ್ಪಿತಸ್ಥ ಭಾವನೆಯನ್ನಾಗಲೀ ಭಯವನ್ನಾಗಲೀ ಅಥವಾ ಅಹಿತವನ್ನಾಗಲೀ ಉಂಟುಮಾಡದ ಬಯಕೆಗಳು ಅಥವಾ ನಿಮ್ಮನ್ನು ನಿಮ್ಮ ಸಹಜತೆಯಿಂದ ದೂರ ಕೊಂಡೊಯ್ಯದ ಬಯಕೆಗಳು ಧರ್ಮವೆಂದು ಕರೆಯಲ್ಪಡುತ್ತವೆ. ನಿಮ್ಮನ್ನು ಅಲುಗಾಡಿಸುವ, ಉರಿಸುವ ಅಥವಾ ನಿಮ್ಮಲ್ಲಿ ಅಹಿತವನ್ನುಂಟುಮಾಡುವ ಯಾವುದೇ ಆಗಲಿ; ಆ ಬಯಕೆಯಲ್ಲಿರುವ ಅಹಿತಕರ ಭಾವನೆಯು, ಅದು ಧರ್ಮವಲ್ಲವೆಂಬುದನ್ನು ಸೂಚಿಸುತ್ತದೆ. ಅದು ಧರ್ಮವಾದರೆ, ಅದು ಬಹಳ ಹಿತಕರವಾಗಿರುತ್ತದೆ. ಅದು ಧರ್ಮವಲ್ಲದಿದ್ದರೆ, ಆಗ ಆ ಬಯಕೆಯಲ್ಲಿ ಭಯ, ತಪ್ಪಿತಸ್ಥ ಮನೋಭಾವ ಅಥವಾ ಅಹಿತಕರ ಭಾವನೆಯಿರುತ್ತದೆ.

ಪ್ರಶ್ನೆ: ನಿಜವಾದ ಸೇವೆ ಯಾವುದು? ನನ್ನ ಪ್ರತಿಯೊಂದು ಕ್ರಿಯೆಯೂ ಹೇಗೆ ಸೇವೆಯಾಗಬಲ್ಲದು?
ಶ್ರೀ ಶ್ರೀ ರವಿ ಶಂಕರ್: ಸೇವೆಯೆಂದರೆ, ಅವನಂತೆ ಮಾಡುವುದು. ’ಅವನು’ ಎಂದರೆ, ಸೃಷ್ಟಿಕರ್ತ. ಅವನು ನಿಮಗಾಗಿ ಎಲ್ಲವನ್ನೂ ಮಾಡುತ್ತಾನೆ ಮತ್ತು ಅವನು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದುದರಿಂದ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆಯೇ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದು; ಇದು ಸೇವೆಯೆಂದು ಕರೆಯಲ್ಪಡುತ್ತದೆ.
ಖಂಡಿತವಾಗಿಯೂ ಅಲ್ಲೊಂದು ಪ್ರತಿಫಲವಿದೆ. ನಿಸ್ಸಂಶಯವಾಗಿ ಅದರಿಂದ ಒಂದು ಲಾಭವಿದೆ, ಆದರೆ ನೀವು ಪ್ರತಿಫಲವನ್ನು ನಿರೀಕ್ಷಿಸುವಾಗ, ಅದು ಸೇವೆಯಾಗುವುದಿಲ್ಲ. ಏನನ್ನೂ ನಿರೀಕ್ಷಿಸದೆಯೇ, ಏನನ್ನೂ ಬಯಸದೆಯೇ, ಕೇವಲ ಮಾಡುವುದಕ್ಕೋಸ್ಕರ ಮಾಡುವುದು ಸೇವೆಯೆಂದು ಕರೆಯಲ್ಪಡುತ್ತದೆ.