ಶುಕ್ರವಾರ, ಮಾರ್ಚ್ 15, 2013

ಧ್ಯಾನ


ದೆಹಲಿ, ಭಾರತ
೧೫ ಮಾರ್ಚ್ ೨೦೧೩

ನಾವು ಕುಳಿತುಕೊಂಡು ನಮ್ಮೊಂದಿಗಿರುವುದರಲ್ಲಿಯೇ ಸ್ವಲ್ಪ ಸಮಯವನ್ನು ಕಳೆದರೆ, ಪ್ರತಿದಿನವೂ ಸ್ವಲ್ಪ ಸಮಯದವರೆಗೆ ನಮ್ಮಲ್ಲಿಯೇ ವಿಶ್ರಾಂತಿ ತೆಗೆದುಕೊಂಡರೆ, ಆಗ ಅದುವೇ ಧ್ಯಾನ.

ಮಾಡಲು ಬಹಳಷ್ಟಿದೆ, ನಾವು ಯಾಕೆ ಧ್ಯಾನ ಮಾಡಬೇಕು?

ಧ್ಯಾನವು ಶರೀರದಲ್ಲಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಾಣಶಕ್ತಿಯು ಹೆಚ್ಚಾಗುತ್ತದೆ, ಬುದ್ಧಿಯು ತೀಕ್ಷ್ಣವಾಗುತ್ತದೆ, ಇತರರೊಂದಿಗಿನ ನಮ್ಮ ಒಡನಾಟವು ಹೆಚ್ಚು ಆಹ್ಲಾದಕರವಾಗುತ್ತದೆ, ನಾವು ಹೇಗೆ ಮಾತನಾಡುವೆವು ಎಂಬುದರ ಮೇಲೆ ನಾವು ಹೆಚ್ಚು ನಿಯಂತ್ರಣವನ್ನು ಗಳಿಸುತ್ತೇವೆ, ಮನಸ್ಸಿನ ಸಂಕಲ್ಪಶಕ್ತಿಯು ಹೆಚ್ಚು ಶಕ್ತಿಶಾಲಿಯಾಗುತ್ತದೆ. ಆದುದರಿಂದ, ಅಷ್ಟೊಂದು ಲಾಭಗಳಿರುವಾಗ ಒಬ್ಬರು ಏನನ್ನಾದರೂ ಯಾಕೆ ಮಾಡಬಾರದು?

ಧ್ಯಾನವೆಂದರೆ ನಿಮ್ಮ ವಿಧಿಯನ್ನೇ ಬದಲಾಯಿಸಬಲ್ಲಂತಹುದು! ಇದು ಬಹಳ ಮುಖ್ಯವಾಗಿದೆ.

ಬಹಳ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ವಿಯಾಗದೇ ಇರುವ ಕೆಲವು ಜನರಿದ್ದಾರೆ. ಇದಾಗುತ್ತದೆ, ನೀವಿದನ್ನು  ನೋಡಿರುವಿರಾ? ಇದು ಯಾಕೆಂದರೆ, ಕಳೆದುಹೋಗಿರುವ ಯಾವುದೋ ಒಂದು ಅಂಶವಿರುತ್ತದೆ, ಬಲಹೀನವಾಗಿರುವ ಒಂದು ಕಂಪನ; ಒಂದು ಋಣಾತ್ಮಕ ಕಂಪನವು ನಮ್ಮೊಳಗಿರುತ್ತದೆ. ಈ ಋಣಾತ್ಮಕ ಕಂಪನವನ್ನು ತೆಗೆದುಹಾಕಲು ಧ್ಯಾನವು ಆವಶ್ಯಕವಾಗಿದೆ.

ನಾವು ಪ್ರತಿದಿನವೂ ಕೆಲವು ನಿಮಿಷಗಳವರೆಗೆ ಧ್ಯಾನ ಮಾಡಿದರೆ, ಆಗ ನಮಗೆ, ದೈವಿಕ ಪ್ರೇಮವು ನಮ್ಮ ಮೇಲೆ ಮಳೆಗರೆಯುವುದನ್ನು ಅನುಭವಿಸಲು ಸಾಧ್ಯವಾಗುವುದು.

ಜ್ಞಾನ, ಅನುಭೂತಿ ಮತ್ತು ಪ್ರೇಮ, ಈ ಮೂರು ಅಂಶಗಳು ಜೀವನದಲ್ಲಿ ಆವಶ್ಯಕವಾಗಿವೆ. ಒಂದು ಮಂದ ಮತ್ತು ನೀರಸವಾದ ಜೀವನವನ್ನು ಯಾರೂ ಇಷ್ಟಪಡುವುದಿಲ್ಲ. ಪ್ರತಿಯೊಬ್ಬರೂ ಸ್ವಲ್ಪ ರಸದಿಂದ ತುಂಬಿರುವ ಒಂದು ಜೀವನವನ್ನು ಬಯಸುತ್ತಾರೆ ಮತ್ತು ಅದುವೇ ಪ್ರೇಮವಾಗಿದೆ. ಆದರೆ ನಮ್ಮೊಳಗೆ ಧನಾತ್ಮಕ ಕಂಪನಗಳಿಲ್ಲದವರೆಗೆ ಅಥವಾ ಋಣಾತ್ಮಕ ಕಂಪನಗಳಿಂದ ನಾವು ತುಂಬಿರುವಲ್ಲಿಯವರೆಗೆ, ಪ್ರೇಮವನ್ನು ಅದರ ಮೂಲ ಸ್ವರೂಪದಲ್ಲಿ ಅನುಭವಿಸಲು ನಮಗೆ ಸಾಧ್ಯವಿಲ್ಲ. ನಾವು ಪ್ರೇಮವನ್ನು ಅದರ ವಿಕೃತ ಸ್ವರೂಪಗಳಲ್ಲಿ ಮಾತ್ರ ಅನುಭವಿಸಬಲ್ಲೆವು, ಅಂದರೆ ಕ್ರೋಧ, ದ್ವೇಷ, ಚಡಪಡಿಕೆ. ಅಲ್ಲಿಯ ವರೆಗೆ ಪ್ರೇಮವು ಈ ವಿಕೃತ ಸ್ವರೂಪಗಳಲ್ಲಿ ಪ್ರಕಟಗೊಳ್ಳುತ್ತದೆ.

ಈ ವಿಕೃತಿಗಳಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನವನ್ನು ನಾವು ಕಲಿಯಬೇಕು. ಒಮ್ಮೆ ಮನಸ್ಸು ಈ ವಿಕೃತಿಗಳಿಂದ ಮುಕ್ತವಾದರೆ, ಜೀವನದಲ್ಲಿ ಎಲ್ಲವೂ ಸರಿಯಾಗಲು ತೊಡಗುತ್ತದೆ.

ಇದೊಂದು ವೈಯಕ್ತಿಕವಾದ ಮಟ್ಟದಲ್ಲಿ. ಒಬ್ಬ ವ್ಯಕ್ತಿ ಬದಲಾದಾಗ ಮಾತ್ರ ಸಮಾಜವು ಬದಲಾಗಲು ಸಾಧ್ಯ. ಸಮಾಜವು ವ್ಯಕ್ತಿಗಳಿಂದ ಮಾಡಲ್ಪಟ್ಟಿದೆ, ಸರಿಯಾ?

ಹಾಗಾಗಿ ನಾವು ಒಳಕ್ಕೆ ಆಳವಾಗಿ ಹೋಗಬೇಕು, ಪ್ರತಿದಿನವೂ ಕೇವಲ ಕೆಲವು ನಿಮಿಷಗಳವರೆಗೆ ಮಾತ್ರ. ಬೆಳಗ್ಗೆ ಎದ್ದ ಬಳಿಕ, ಕೆಲಸ ಪ್ರಾರಂಭಿಸುವ ಮೊದಲು ಕೇವಲ ೧೦ ನಿಮಿಷಗಳವರೆಗೆ ಕುಳಿತುಕೊಳ್ಳಿ; ಸಂಜೆ ಎಲ್ಲಾ ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕ ನಾವೆಲ್ಲರೂ ಆಹಾರ ಸೇವಿಸುತ್ತೇವೆ, ಆದರೆ ಸೇವಿಸುವ ಮೊದಲು ಕೇವಲ ಸ್ವಲ್ಪ ಸಮಯದ ವರೆಗೆ ನಾವು ಕುಳಿತುಕೊಂಡು ಒಳಕ್ಕೆ ಆಳವಾಗಿ ಹೋಗಿ ನಮ್ಮಲ್ಲೇ ವಿಶ್ರಾಂತಿ ತೆಗೆದುಕೊಂಡರೆ, ಸಂಗತಿಗಳು ಬದಲಾಗಲು ತೊಡಗುತ್ತವೆ.

ನೀವು ಒಂದು ಭೌತಿಕ ನೆಲೆಯ ಮೇಲೆ ಅದನ್ನು ನೋಡಿದರೂ ಕೂಡಾ, ಅದರಿಂದ ಹಲವಾರು ಲಾಭಗಳಿವೆ. "ಗುರುದೇವ, ನಾವು ಜೀವಿಸುತ್ತಿರುವುದು ಒಂದು ಐಹಿಕ ಪ್ರಪಂಚದಲ್ಲಿ, ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದ ಕಡೆಗೆ ಓಡುತ್ತಿದ್ದಾರೆ, ಧ್ಯಾನ ಮತ್ತು ಜ್ಞಾನಕ್ಕೆ ಸಮಯವೆಲ್ಲಿದೆ?" ಎಂದು ನೀವು ಹೇಳಬಹುದು. ಆದರೆ ನಾನು ಹೇಳುವುದೆಂದರೆ, ಇವತ್ತಿನ ಪರಿಸ್ಥಿತಿಗಳು ಮತ್ತು ಜೀವನಶೈಲಿಯಲ್ಲಿ ಕೂಡಾ, ಅತ್ಯಂತ ಪ್ರಯೋಜನಕಾರಿಯಾದುದು ಯಾವುದೆಂದರೆ, ಧ್ಯಾನ.

ಇವತ್ತಿನ ಪರಿಸ್ಥಿತಿಗಳಲ್ಲಿ ಕೂಡಾ ನಮಗೆ ತೃಪ್ತಿಯನ್ನು ನೀಡಬಲ್ಲಂತಹ, ನಮ್ಮ ಕೆಲಸದಲ್ಲಿ ನಮಗೆ ಸಹಾಯ ಮಾಡಬಲ್ಲಂತಹದ್ದು ಏನಾದರೂ ಇದ್ದರೆ, ಅದು ಧ್ಯಾನ ಮತ್ತು ಶ್ರದ್ಧೆ.

ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಾವು ಕೇಳಿದ್ದೇವೆ. ನೀವದನ್ನು ಕೇಳಿರುವಿರಿ, ಹೌದಾ? ಯಾವುದು ಕೆಲವು ಜಾಗಗಳಲ್ಲಿ ಇರುವುದೋ ಆದರೆ ಇತರ ಜಾಗಗಳಲ್ಲಿ ಇಲ್ಲವೋ ಅದು ದೇವರಾಗಿರಲು ಸಾಧ್ಯವಿಲ್ಲ.

ನೋಡಿ, ದೇವರ ಗುಣಗಳೇನು ಅಥವಾ ದೈವಿಕತೆ ಎಂದರೇನು? ಯಾವುದು ಇರುವುದೋ, ಯಾವುದು ಸರ್ವವ್ಯಾಪಿಯಾಗಿರುವುದೋ ಅದು. ಅದು ಎಲ್ಲೆಡೆಯೂ ಇದೆ. ಅದು ನಿಮ್ಮಲ್ಲಿ ಇಲ್ಲದಿರುವುದಾದರೆ, ಅದು ದೇವರಾಗುವುದೇ?

ದೇವರ ಮೊದಲ ಗುಣವೇನು? ಸರ್ವವ್ಯಾಪಿತ್ವ! ಆದುದರಿಂದ ದೇವರು ಕೆಲವು ಜಾಗಗಳಲ್ಲಿದ್ದು, ಕೆಲವು ಜಾಗಗಳಲ್ಲಿ ಇಲ್ಲದಿರಲು ಸಾಧ್ಯವೇ? ಇಲ್ಲ! ಸರ್ವವ್ಯಾಪಿಯೆಂದರೆ, ಎಲ್ಲೆಡೆಯೂ ಇರುವುದು ಎಂದು ಅರ್ಥ. ಹಾಗಾಗಿ ಅದು ನಿಮ್ಮೊಳಗಿದೆ; ನಿಮ್ಮಲ್ಲಿ, ಹೌದು! ಒಂದು ವಿಷಯ ಇತ್ಯರ್ಥವಾಯಿತು, ದೇವರು ನಿಮ್ಮೊಳಗಿದ್ದಾನೆ.

ಮುಂದಿನ ಗುಣವೆಂದರೆ, ಅವನು ಅನಾದಿ ಹಾಗೂ ಅನಂತ. ಅವನು ಇದ್ದನು, ಅವನು ಇದ್ದಾನೆ ಮತ್ತು ಅವನು ಯಾವತ್ತೂ ಇರುವನು. ಆದುದರಿಂದ, ದೇವರು ವರ್ತಮಾನದ ಕ್ಷಣದಲ್ಲಿ ಇರುವುದಾದರೆ, ಅವನು ಈಗ ಇರುವನೇ? ಹೌದು! ಅವನು ನಿಮ್ಮಲ್ಲಿರುವನು ಮತ್ತು ಅವನು ಈಗ ಇರುವನು.

ನಂತರ, ಅವನು ಎಲ್ಲರಿಗೂ ಸೇರಿರುವನು. ಆದುದರಿಂದ ಅವನು ನಿಮಗೆ ಸೇರಿರುವನೇ? ಹೌದು, ಅವನು ನಿಮಗೆ ಸೇರಿರುವನು. ಅವನು ಕೇವಲ ಹಿಂದೂಗಳಿಗೆ ಮಾತ್ರ ಸೇರಿದವನಾಗಿದ್ದರೆ ಮತ್ತು ಮುಸ್ಲಿಮರಿಗೆ ಅಲ್ಲದಿದ್ದರೆ, ಅಥವಾ ಮುಸ್ಲಿಮರಿಗೆ ಸೇರಿದವನಾಗಿದ್ದು ಸಿಖ್ಖರಿಗೆ ಅಲ್ಲದಿದ್ದರೆ, ಅಥವಾ ಸಿಖ್ಖರಿಗೆ ಸೇರಿದವನಾಗಿದ್ದು ಜೈನರಿಗೆ ಅಲ್ಲದಿದ್ದರೆ, ಆಗ ಅವನು ದೇವರಲ್ಲ.

ಎಲ್ಲರಿಗೂ ಸೇರಿದ ಒಬ್ಬನು ದೇವರಾಗಿರುವನು ಮತ್ತು ಅವನು ಸಮರ್ಥನಾಗಿರುವನು.

ಕೇವಲ ಈ ನಾಲ್ಕು ಸೂತ್ರಗಳ ಕಡೆಗೆ ನಿಮ್ಮ ಗಮನವನ್ನು ಒಯ್ಯುವುದರಿಂದ ನೀವು ಸುಲಭವಾಗಿ ಒಂದು ಆಳವಾದ ಧ್ಯಾನಕ್ಕೆ, ಸಮಾಧಿಗೆ ಜಾರುವಿರಿ.

ನಾಲ್ಕು ಸೂತ್ರಗಳು ಯಾವುವು? - ದೇವರು ಸರ್ವತ್ರನು, ಸರ್ವದಾನು, ಎಲ್ಲರಿಗೂ ಸೇರಿದವನು ಮತ್ತು ಅತ್ಯಂತ ಸಮರ್ಥನು. ದೇವರು ನನಗಾಗಿರುವನು. ಬೆಳಗ್ಗೆ ಮತ್ತು ಸಂಜೆ ಕೆಲವು ನಿಮಿಷಗಳ ವರೆಗೆ ಈ ಭಾವನೆಯೊಂದಿಗೆ ವಿಶ್ರಾಮ ಮಾಡುವ ಹಾಗೂ ಧ್ಯಾನ ಮಾಡುವ ಅಭ್ಯಾಸವನ್ನು ನಾವು ಬೆಳೆಸಿಕೊಂಡರೆ, ಆಗ ಪವಾಡಗಳಾಗಲು ಶುರುವಾಗುವುದನ್ನು ಮತ್ತು ಆಗಿಕೊಂಡೇ ಇರುವುದನ್ನು ನಾವು ಕಾಣುತ್ತೇವೆ. ಇದನ್ನೇ ನಾನು ನಿಮಗೆ ಹೇಳಲು ಬಯಸಿದುದು. ಇದನ್ನೇ ನಾನು ಶ್ರದ್ಧೆಯೆಂದು ಕರೆಯುವುದು.

ಯಾವುದು ಇದೆಯೋ ಆದರೆ ಕಾಣಿಸುವುದಿಲ್ಲವೋ ಅದು ಶ್ರದ್ಧೆಯಾಗಿದೆ.

ಇವತ್ತಷ್ಟೇ ಒಬ್ಬರು ನನ್ನಲ್ಲಿ, "ಗುರುದೇವ, ದೇವರನ್ನು ನೋಡಲು ಸಾಧ್ಯವಿಲ್ಲ, ಹಾಗಾದರೆ ದೇವರು ಇರುವರೆಂದು ನಾವು ಹೇಗೆ ಹೇಳಲು ಸಾಧ್ಯ?" ಎಂದು ಕೇಳಿದರು.

ನಾನಂದೆ, "ನೀನು ಯಾವತ್ತಾದರೂ ನಿನ್ನ ಮನಸ್ಸನ್ನು ನೋಡಿದ್ದೀಯಾ? ಅದು ಹಸುರೇ, ಹಳದಿಯೇ, ಕೆಂಪೇ; ಅದು ಯಾವ ಬಣ್ಣದ್ದು? ನೀನು ನಿನ್ನ ಮನಸ್ಸನ್ನು ಯಾವಾಗ ನೋಡಿದ್ದೀಯಾ?"

ನಾವು ನಮ್ಮ ಮನಸ್ಸನ್ನೇ ಯಾವತ್ತೂ ನೋಡಿಲ್ಲ, ಆದರೂ ನಮಗೊಂದು ಮನಸ್ಸಿದೆಯೆಂಬುದು ನಮಗೆ ತಿಳಿದಿದೆ. ನಾವು ಯಾವತ್ತಾದರೂ ಗಾಳಿಯನ್ನು ನೋಡಿದ್ದೀವಾ? ಇಲ್ಲ, ಆದರೆ ನಾವು ಅದನ್ನು ಅನುಭವಿಸಬಹುದು, ಸರಿಯಾ? ಗಾಳಿಯು ನಮ್ಮನ್ನು ಸುತ್ತುವರಿದಿದೆ, ಆದರೆ ನೀವದನ್ನು ನಿಜವಾಗಿ ಅನುಭವಿಸಲು ಬಯಸಿದರೆ, ಸುಮ್ಮನೆ ಹೋಗಿ ಒಂದು ಫ್ಯಾನಿನ ಕೆಳಗೆ ಕುಳಿತುಕೊಳ್ಳಿ ಮತ್ತು ನಿಮಗದರ ಅನುಭವವಾಗುತ್ತದೆ. ಅದೇ ರೀತಿಯಲ್ಲಿ, ದೇವರು ಎಲ್ಲೆಡೆಯೂ ಇದ್ದಾನೆ, ಆದರೆ ತಕ್ಷಣ ಗೋಚರವಾಗುವುದಿಲ್ಲ.

ನಾವು ದೇವರನ್ನು ಪ್ರೀತಿಸುತ್ತೇವೆ, ಆದರೆ ನಮ್ಮ ದೇಶವನ್ನಲ್ಲ - ಹೀಗಾಗಲು ಸಾಧ್ಯವಿಲ್ಲ. ಯಾರು ದೇವರನ್ನು ಪ್ರೀತಿಸುವರೋ ಅವರು ದೇಶಕ್ಕಾಗಿ ಕೂಡಾ ಭಕ್ತಿಯುಳ್ಳವರಾಗಿ ಉಳಿಯುತ್ತಾರೆ. ಆದುದರಿಂದ ನಮಗೆ ಯಾವೆಲ್ಲಾ ಕೆಲಸ ಅಥವಾ ಸೇವೆ ಮಾಡಲು ಸಾಧ್ಯವಿದೆಯೋ, ಅದನ್ನು ನಾವು ಮಾಡುತ್ತಾ ಇರಬೇಕು. ನಾವು ಸುಮ್ಮನೆ ಕುಳಿತುಕೊಂಡು ದಿನವಿಡೀ ಚಿಂತಿಸುತ್ತಾ ಇರುತ್ತೇವೆ ಮತ್ತು ಆಗುವುದೇನೆಂದರೆ, ನಾವು ನಮ್ಮ ಮನಸ್ಸು, ಶರೀರ ಎರಡನ್ನು ಕೂಡಾ ಹಾಳುಮಾಡಿಕೊಳ್ಳುತ್ತೇವೆ. ಆದುದರಿಂದ, ನಾವಿದನ್ನು ಮಾಡಬಾರದು. ನಾವು ಸಂತೋಷ, ಆನಂದ ಮತ್ತು ಉತ್ಸಾಹಗಳಿಂದ ತುಂಬಿರಬೇಕು.

ನಾವು ಗುರಿಯಿಡಬೇಕಾದುದು ಕಷ್ಟ ಮತ್ತು ದುಃಖಗಳಿಂದ ಮುಕ್ತವಾದ ಒಂದು ಹೃದಯವನ್ನು ಹೊಂದುವುದರ ಕಡೆಗೆ. ಜೀವನದಲ್ಲಿ, ನಾವು ಬಯಸುವ ಹಲವಾರು ಸಂಗತಿಗಳು ಆಗುತ್ತಾ ಇರುತ್ತವೆ ಮತ್ತು ನಾವು ಬಯಸದೇ ಇರುವ ಹಲವಾರು ಸಂಗತಿಗಳು ಕೂಡಾ ಆಗುತ್ತಾ ಇರುತ್ತವೆ. ಹಿತಕರ ಕ್ಷಣಗಳಿವೆ ಮತ್ತು ಅಹಿತಕರ ಕ್ಷಣಗಳಿವೆ. ಹೀಗೆ ಆಗದಿರುವ ಯಾರಾದರೂ ಇದ್ದಾರೆಯೇ, ಹೇಳಿ ನನಗೆ?

ನಿಮ್ಮದೇ ಜೀವನದ ಕಡೆಗೆ ನೋಡಿ, ಎಷ್ಟೊಂದು ಕಷ್ಟಗಳು ಬಂದಿವೆ ಮತ್ತು ಹೋಗಿವೆ, ಹಾಗೂ ನೀವು ಅವುಗಳಿಂದ ಹೊರಗೆ ಬಂದಿರುವಿರಿ. ಆ ಎಲ್ಲಾ ಕ್ಷಣಗಳು ಹೋಗಿವೆ. ಆ ಪರಿಸ್ಥಿತಿಗಳು ಮತ್ತು ಘಟನೆಗಳು ದಾಟಿಹೋಗಿವೆ, ಆದರೆ ನೀವು ಆ ಘಟನೆಗಳನ್ನು ನಿಮ್ಮ ಮನಸ್ಸಿನಲ್ಲಿ ಎಳೆದುಕೊಂಡು ಹೋಗುತ್ತಿರುತ್ತೀರಿ. ಅವುಗಳನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಮತ್ತು ನೀವು ಎಷ್ಟು ಶಾಂತಿ ಹಾಗೂ ವಿಶ್ರಾಮವನ್ನು ಅನುಭವಿಸುತ್ತೀರಿ ಎಂಬುದನ್ನು ನೋಡಿ.

ಯಾರಾದರೂ ಏನಾದರೂ ಕೆಟ್ಟದ್ದನ್ನು ಹೇಳಿದರೆ, ನೀವು ನಿಮ್ಮ ಮನಸ್ಸಿನಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಾ ಇರುತ್ತೀರಿ ಮತ್ತು ಚಡಪಡಿಸುತ್ತೀರಿ - ಅವನು ಹೀಗೆ ಮಾಡಿದನು, ಮತ್ತು ಆ ವ್ಯಕ್ತಿಯು ನನಗೆ ಮೋಸ ಮಾಡಿದನು. ಆದರೆ ನೋಡಿ, ಅವರು ಕೇವಲ ತಮ್ಮ ಸ್ವಭಾವಕ್ಕೆ ತಕ್ಕಂತೆ ವರ್ತಿಸಿದರು ಅಷ್ಟೆ! ಯಾರ ಸ್ವಭಾವವು ಮೋಸ ಮಾಡುವುದಾಗಿರುತ್ತದೆಯೋ, ಅವರು ಮೋಸ ಮಾಡುವರು. ಅವರು ಬೇರೆ ಏನನ್ನು ಮಾಡುವರು? ನಿಮಗೆ ಅವನು ಯಾಕೆ ಹೀಗೆ ಮಾಡಿದನು ಮತ್ತು ಅವನು ಯಾಕೆ ಹಾಗೆ ಮಾಡಿದನು ಎಂಬುದರ ಬಗ್ಗೆ ಚಿಂತಿಸುವುದರಿಂದ ಕೇವಲ ನಿಮ್ಮ ಮನಸ್ಸು ಹಾಳಾಗುವುದಷ್ಟೆ. ಇದು ಬುದ್ಧಿವಂತಿಕೆಯ ಒಂದು ಲಕ್ಷಣವಲ್ಲ. ಜ್ಞಾನ ಮತ್ತು ಬುದ್ಧಿವಂತಿಕೆಯ ಒಂದು ಲಕ್ಷಣ ಯಾವುದೆಂಬುದು ನಿಮಗೆ ತಿಳಿದಿದೆಯೇ? ಜ್ಞಾನದ ನಿಜವಾದ ಚಿಹ್ನೆಯೆಂದರೆ, ಒಳ್ಳೆಯ ಘಟನೆಗಳು ಬರುತ್ತವೆ, ಹೋಗುತ್ತವೆ ಮತ್ತು ಕೆಟ್ಟ ಘಟನೆಗಳು ಬರುತ್ತವೆ, ಹೋಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ನಾವು ಮುಂದೆ ಸಾಗಿದಂತೆ, ಈ ಘಟನೆಗಳಿಂದ ಇನ್ನೂ ಸುಂದರವಾಗಿ ನಾವು ಹೊರಬರುತ್ತೇವೆ. ನಾವು ಇನ್ನೂ ಹೆಚ್ಚು ಅರಳುತ್ತೇವೆ.

ಈ ಪ್ರಜ್ಞೆಯೊಂದಿಗೆ ನಾವು ಸಂಪರ್ಕದಲ್ಲಿರಬೇಕು ಮತ್ತು ಅದನ್ನು ನಮ್ಮೊಳಗೆ ಜೀವಂತವಾಗಿರಿಸಬೇಕು. ಯಾವುದೇ ಕಾರಣಕ್ಕಾಗಿಯಾದರೂ ನಿಮ್ಮ ಮುಗುಳ್ನಗೆಯನ್ನು ಕಳೆದುಕೊಳ್ಳಬೇಡಿ, ನಿಮ್ಮ ಉತ್ಸಾಹವನ್ನು ಇಳಿಯಲು ಬಿಡಬೇಡಿ, ಸುಮ್ಮನೆ ಮುಂದೆ ಸಾಗುತ್ತಾ ಇರಿ.

ಸಮಾಜದಲ್ಲಿರುವ ಎಲ್ಲರೂ ಹರಸಲ್ಪಡಲಿ, ಎಲ್ಲರೂ ಸಂತೋಷವಾಗಿರಲಿ ಮತ್ತು ಆರಾಮವಾಗಿರಲಿ, ದೇಶದಲ್ಲಿರುವ ಎಲ್ಲರೂ ಹರಸಲ್ಪಡಲಿ ಎಂಬ ಸಂಕಲ್ಪ ಅಥವಾ ಉದ್ದೇಶದೊಂದಿಗೆ ಜೀವನದಲ್ಲಿ ಮುಂದೆ ಸಾಗಿ. ದೇಶದಲ್ಲಿ ಆಗುತ್ತಿರುವ ಈ ಎಲ್ಲಾ ಅಪರಾಧಗಳು ನಿಲ್ಲಲಿ.

ಇವತ್ತು ಭಾರತವು ಎದುರಿಸುತ್ತಿರುವ ಅನ್ಯಾಯ, ಭ್ರಷ್ಟಾಚಾರ, ಹಿಂಸೆ ಮತ್ತು ಈ ಎಲ್ಲಾ ಸಮಸ್ಯೆಗಳ ವಿರುದ್ಧ ನಾವು ಹೋರಾಡುವೆವು. ಈ ಹಿಂಸಾತ್ಮಕ ಪ್ರವೃತ್ತಿಯನ್ನು ನಮ್ಮ ಸಮಾಜದಿಂದ ಬೇರು ಸಮೇತ ಕಿತ್ತು ಹಾಕಬೇಕು. ಇದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಮತ್ತು ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವು ಒಟ್ಟಾಗಿ ಕೆಲಸ ಮಾಡಬೇಕು, ಆಗ ಸಂಗತಿಗಳು ಬದಲಾಗಲು ತೊಡಗುವುದನ್ನು ನೀವು ಕಾಣುವಿರಿ. ನೀವೇನು ಹೇಳುವಿರಿ?
ಸರಿ, ನನಗೆ ಹೇಳಿ, ನಿಮ್ಮಲ್ಲಿ ಯಾವುದೆಲ್ಲಾ ಚಿಕ್ಕ ಬಯಕೆಗಳಿವೆಯೋ ಅವುಗಳೆಲ್ಲಾ ಸಾಕಾರವಾಗುತ್ತಿವೆ ಎಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಈಗ ನಾವು ಇನ್ನೂ ದೊಡ್ಡದಾದ ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು; ಇನ್ನೂ ದೊಡ್ಡದಾದ ಒಂದು ಆಶಯವನ್ನು ಹೊಂದಬೇಕು. ನಿಮ್ಮ ಚಿಕ್ಕ ಆಶಯಗಳು ಖಂಡಿತವಾಗಿಯೂ ನೆರವೇರುತ್ತವೆ, ಆದರೆ ಈಗ ದೇಶದ ಬಗ್ಗೆ ಯೋಚಿಸಿ.
ಈ ಜ್ಞಾನವು ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಇದೆ. ನಿಮಗೆ ಗೊತ್ತಾ, ಭಾರತವು ಆಧ್ಯಾತ್ಮದ ಉತ್ತುಂಗದಲ್ಲಿದ್ದಾಗ, ನಾವು ಆರ್ಥಿಕವಾಗಿ ಕೂಡಾ ಬಹಳ ಸಮೃದ್ಧವಾಗಿದ್ದೆವು ಎಂಬುದು? ಇವತ್ತು ನಾವು ಆಧ್ಯಾತ್ಮದಲ್ಲಾಗಲೀ ಆರ್ಥಿಕವಾಗಿಯಾಗಲೀ ಉನ್ನತಿಯಲ್ಲಿಲ್ಲ. ಬಂಗಾರದ ಪಕ್ಷಿಯಾಗಿರುವ ಹಿಂದಿನ ಹಿರಿತನಕ್ಕೆ ಈ ದೇಶವನ್ನು ನಾವು ಪುನಃ ತರಬೇಕಾಗಿದೆ. ಇದು ನನ್ನ ಕನಸಾಗಿದೆ.

ಭಾರತದ ಜ್ಞಾನವು ಪ್ರಪಂಚದ ಎಲ್ಲಾ ಮೂಲೆಗಳಲ್ಲಿರುವ ಜನರನ್ನು ತಲುಪಬೇಕು ಮತ್ತು ಅವರ ದುಃಖ ಹಾಗೂ ನೋವುಗಳಿಂದ ಅವರನ್ನು ಮುಕ್ತಗೊಳಿಸಬೇಕು. ಇದು ಈಗಾಗಲೇ ಆಗುತ್ತಿದೆ. ನಾನು ನನ್ನ ಕೊಡುಗೆಯನ್ನು ಹೇಗೆ ನೀಡಬಹುದು, ಇದರ ಬಗ್ಗೆಯೇ ನಾವೆಲ್ಲರೂ ಯೋಚಿಸಲು ತೊಡಗಬೇಕಾದುದು.

ದಿನದಲ್ಲಿ ಒಂದು ಗಂಟೆಯನ್ನು ನಾವು ದೇಶಕ್ಕಾಗಿ ನೀಡಬಲ್ಲೆವಾದರೆ, ಅಥವಾ ವಾರದಲ್ಲಿ ಏಳು ಗಂಟೆಗಳನ್ನು ನಾವು ನಮ್ಮ ದೇಶಕ್ಕಾಗಿ ತೆಗೆದಿರಿಸಬಲ್ಲೆವಾದರೆ, ನಮ್ಮ ದೇಶದ ಜನರಲ್ಲಿ ನಾವು ಬಹಳಷ್ಟು ಬದಲಾವಣೆ ಮತ್ತು ಅರಿವನ್ನು ತರಬಹುದು.

ಪ್ರಶ್ನೆ: ಗುರುದೇವ, ನನ್ನ ಹೆಸರು ಅಕ್ರಂ ಮತ್ತು ನಾನು ೭ ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಮುಗಿಸಿ ಬಂದಿರುವೆನು. ನಾನು ನನ್ನ ಜೀವನವನ್ನು ಸಂಪೂರ್ಣ ಅಂಧಕಾರದ ಒಂದು ನರಕವಾಗಿ ನೋಡಿದೆನು. ನಾನು ನನ್ನನ್ನೇ ಮತ್ತೆ ಪ್ರೀತಿಸುವಷ್ಟು ಅದೃಷ್ಟಶಾಲಿಯಾಗಿ ನೋಡುವ ಒಂದು ಸಮಯ ಬರುವುದು ಎಂದು ನಾನು ಆಶಿಸುತ್ತಿದ್ದೆ. ನಾನು ಖಿನ್ನನಾಗಿದ್ದೆ ಮತ್ತು ಜೈಲಿನಲ್ಲಿ ಒಬ್ಬ ಮದ್ಯವ್ಯಸನಿಯಾಗಿದ್ದೆ. ಒಂದು ದಿನ ನಾನು ಶ್ರೀಯುತ ಶರ್ಮಾ ಅವರನ್ನು ಭೇಟಿಯಾದೆ. ಅವರು ಒಂದು ಕೋರ್ಸನ್ನು ನಡೆಸುತ್ತಿದ್ದರು. ಅವರು ನನ್ನನ್ನು ಜೊತೆಗೆ ಕರೆದುಕೊಂಡು ಹೋದರು ಮತ್ತು ಕೋರ್ಸ್ ಮಾಡುವಂತೆಯೂ ನನ್ನಲ್ಲಿ ಹೇಳಿದರು. ಅವರು ನಾನು ಕೋರ್ಸ್ ಮಾಡುವಂತೆ ಮಾಡಿದರು ಮತ್ತು ಅದರ ನಂತರ, ಜೀವನದ ನಿಜವಾದ ಸಾರವೇನು ಎಂಬುದು ನನಗೆ ತಿಳಿಯಿತು. ನಾನು ನಿಜವಾಗಿಯೂ ನಿಜವಾದ ಜೀವನ ಕಲೆಯನ್ನು ಆ ದಿನ ಕಲಿತೆ ಮತ್ತು ನಾನು ಅನುಕ್ರಮವಾಗಿ ಹಲವಾರು ಕೋರ್ಸುಗಳನ್ನು ಮಾಡಿದೆ. ಒಬ್ಬರು ನಿಜವಾದ ಗುರುವನ್ನು ವೈಯಕ್ತಿಕವಾಗಿ ನೋಡುವ ಅವಕಾಶವು ನನಗೆ ಸಿಕ್ಕಿದುದಕ್ಕಾಗಿ ಇವತ್ತು ನನಗೆ ಸಂತೋಷವಾಗುತ್ತಿದೆ. ದೇವರು ನಿಮ್ಮನ್ನು ಹರಸಲಿ!

ಶ್ರೀ ಶ್ರೀ ರವಿ ಶಂಕರ್: ಬಹಳ ಒಳ್ಳೆಯದು. ಈಗ ನೀನೊಬ್ಬ ಶಿಕ್ಷಕ ಕೂಡಾ ಆಗಬೇಕು! ಒಬ್ಬ ಶಿಕ್ಷಕನಾಗು ಮತ್ತು ಎಲ್ಲರಿಗೂ ಆಶೀರ್ವಾದಗಳನ್ನು ತಾ.