ಶುಕ್ರವಾರ, ಮಾರ್ಚ್ 22, 2013

ನಾವೊಂದು ಅಂತಃ ಸಂಪರ್ಕವುಳ್ಳ ಜಗತ್ತಿನಲ್ಲಿ ವಾಸವಾಗಿದ್ದೇವೆ

ಸ್ಲೊವೇನಿಯಾ, ಯೂರೋಪ್
೨೨ ಮಾರ್ಚ್ ೨೦೧೩

(ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಸ್ಲೊವೇನಿಯಾದಲ್ಲಿ ವ್ಯವಹಾರೋದ್ಯಮ ನಾಯಕರ ಮತ್ತು ವೃತ್ತಿವೇತ್ತರ ಗುಂಪೊಂದರ ದಿ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಿಂಪೋಸಿಯಂ ಆನ್ ಎಥಿಕ್ಸ್ ಇನ್ ಬ್ಯುಸಿನೆಸ್ಸ್, ಎಂಬ ಸಮಾವೇಶದಲ್ಲಿ ಮಾತನಾಡಿದರು.

ಈ ವಾರ್ಷಿಕ ಸಮಾವೇಶದಲ್ಲಿ, ವ್ಯವಹಾರ ರಂಗ, ರಾಜನೀತಿ, ವ್ಯಾಸಂಗ, ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ ಸಂಸ್ಥೆಗಳ ನಾಯಕರು ಸೇರುತ್ತಾರೆ, ಅಲ್ಲಿ ಅವರು ಎಲ್ಲವನ್ನೂ ಒಳಗೊಂಡಂಥ ಮತ್ತು ಮುಂದುವರಿಯಬಲ್ಲಂಥ ಅಭಿವೃದ್ಧಿಯನ್ನು ಬೆಂಬಲಿಸುವ ಹೊಸ ನಾಯಕತ್ವ ವಿಧಗಳ ಕುರಿತು ಮಾತುಕತೆ ನಡೆಸುತ್ತಾರೆ. ಇದು ನಾಯಕತ್ವದ ಮನೋವೃತ್ತಿಯುಳ್ಳವರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಇಂದಿನ ಸವಾಲುಗಳೊಂದಿಗೆ ವ್ಯವಹರಿಸುವಲ್ಲಿ ನೀತಿಪರ ವ್ಯವಹಾರದ ಬೆಲೆಯ ಕುರಿತು ತಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಒಂದು ಮಂಚವನ್ನು ನೀಡುತ್ತದೆ.

ದಿ ವರ್ಲ್ಡ್ ಫೋರಂ ಫಾರ್ ಎಥಿಕ್ಸ್ ಇನ್ ಬ್ಯುಸಿನೆಸ್.ನ ಒಂದು ಹೆಜ್ಜೆಯಾಗಿದೆ ದಿ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಿಂಪೋಸಿಯಂ ಆನ್ ಎಥಿಕ್ಸ್ ಇನ್ ಬ್ಯುಸಿನೆಸ್ಸ್. ಈ ಫೋರಂ ಒಂದು ಜನ-ಹಿತಾಸಕ್ತಿಯ ನೋಂದಾಯಿತ ಪ್ರತಿಷ್ಠಾಪನೆಯಾಗಿದೆ, ಈ ಭೌಗೋಳೀಕೃತ ಜಗತ್ತಿನ ವ್ಯವಹಾರೋದ್ಯಮದಲ್ಲಿ ಕಡೆಗಣಿಸಲಾಗದOಥ ನೀತಿತತ್ತ್ವದ ಆಧಾರದವನ್ನು ಅನುಸರಿಸುವ ಮತ್ತು ದೃಢಪಡಿಸುವ ಗುರಿ ಇದರದಾಗಿದೆ.)

ಭಾಸದರೇ, ಮಹನೀಯರಾದ ಸ್ಲೊವೇನಿಯಾದ ರಾಷ್ಟ್ರಾಧ್ಯಕ್ಷರೇ ಮತ್ತು ಯೂರೋಪ್ ಪಾರ್ಲಿಮೆಂಟ್.ನ ಸದಸ್ಯರೇ, ಮತ್ತು ಸುವ್ಯವಹಾರ ಹಾಗೂ ವ್ಯಾಪಾರೋದ್ಯಮ ವೇದಿಕೆ, ನಿಮ್ಮೆಲ್ಲರಿಗೂ ಶುಭದಿನ. ನಾನುನಿಮ್ಮೆಲ್ಲರೊಂದಿಗೂ ಈ ಸುಂದರ ದಿನದಂದು ಈ ಸುಂದರ ಸ್ಥಳದಲ್ಲಿ ಇರಲು ಸಂತುಷ್ಟನಾಗಿದ್ದೇನೆ.

ನೀವು ಗಮನಿಸಿದ್ದೀರೇ, ಹೂಳೆಡೆ(ರುದ್ರಭೂಮಿ)ಯ ಸುತ್ತ ನಡೆದಾಗ, ನೀವು ಏನೋ ಬರೆದದ್ದನ್ನು ನೋಡುತ್ತೀರಿ: ಇಂಥಿಂಥವರು, ಇಂಥಿಥ ದಿನದಂದು ಜನಿಸಿದ್ದರು ಮತ್ತು ಇಂಥಿಂಥ ದಿನದಂದು ತೀರಿಕೊಂಡರು ಎಂದು. ಅವರು ಈ ಎರೆಡು ದಿನಗಳ ಮಧ್ಯೆ ಜೀವಿಸಿದರು ಎಂದು ಸೂಚಿಸುವುದಿಲ್ಲ!

ಜೀವನವು ಆದರಿಸಲ್ಪಡತಕ್ಕದ್ದು. ಸುವ್ಯವಹಾರ ಅಥವಾ ನೀತಿತತ್ತ್ವ ಎಂದರೆ ಕೇವಲ ಜನನ ಮತ್ತು ಮರಣದ ನಡುವಿನ ಆ ಸಮಯವನ್ನು ಆದರಿಸುವುದಾಗಿದೆ. ಇದು ನೀತಿತತ್ತ್ವದ ಮೂಲ ನಿಯಮವಾಗಿದೆ- ಇತರರು ನಮಗೆ ಏನನ್ನು ಮಾಡಬಾರದು ಎಂದು ನಮಗಿದೆಯೋ, ನಾವು ಅದನ್ನು ಇತರರಿಗೆ ಮಾಡುವುದಿಲ್ಲ.

ನೀವೊಂದು ವ್ಯಾಪಾರ ನಡೆಸುತ್ತಿದ್ದೀರೆಂದು ಕಲ್ಪಿಸಿಕೊಳ್ಳಿ, ಮತ್ತು ನಿಮ್ಮ ಉದ್ಯೋಗಿಗಳು ಯಾವುದೇ ನೀತಿತತ್ತ್ವ ಮತ್ತು ಶಿಸ್ತನ್ನು ಪಾಲಿಸುವುದಿಲ್ಲ. ನಿಮಗೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆಯೇ? ’ಖಂಡಿತ ಇಲ್ಲ!’ ಎಂಬುದು ಖಚಿತವಾದ ಉತ್ತರ.

ನಾವು ನಮ್ಮ ಸುತ್ತಲಿನ ಜನರು ಪ್ರಾಮಾಣಿಕರಾಗಿರಬೇಕು, ಸಮಗ್ರರು, ಜವಾಬ್ದಾರರು ಮತ್ತು ಸದಾಚಾರಿಗಳಾಗಿರಬೇಕು ಎಂದು ಅಪೇಕ್ಷಿಸುತ್ತೇವೆ. ನಾವು ಬ್ಯಾಂಕುಗಳು ಪ್ರಾಮಾಣಿಕವಾಗಿರಬೇಕು, ಹೊಣೆವಹಿಸುವಂಥದ್ದಾಗಿರಬೇಕು ಮತ್ತು ವಿಶ್ವಾಸಾರ್ಹವಾಗಿರಬೇಕು ಎಂದು ಅಪೇಕ್ಷಿಸುತ್ತೇವೆ. ಹೇಗಿದ್ದರೂ, ನಾವು ನಮ್ಮ ವ್ಯಾಪಾರ ಮಾಡುವಾಗ, ನಾವು ನೀತಿ-ನಿಯತ್ತನ್ನು ಪಾಲಿಸದೆ ಇದ್ದು, ಆದರೆ ಉಳಿದವರು ನಿಯತ್ತಿನಿಂದ ಇರಬೇಕು ಎಂದು ಅಪೇಕ್ಷಿಸಿದರೆ, ನಾವು ಒಳ್ಳೆಯ ಉದಾಹರಣೆ ವಹಿಸುತ್ತಿಲ್ಲ. ಮೂಲತಃ ಬದಲಾಗಿರಬೇಕಾದದ್ದು ಇದೇ- ಇತರರಿಂದ ನಮ್ಮ ಅಪೇಕ್ಷೆಗಳು ಮತ್ತು ನಮ್ಮ ಸ್ವಂತ ನಡವಳಿಕೆ.

ಕಮ್ಯೂನಿಸ್ಮ್(ಸಮತಾವಾದಿತ್ವ) ಇಳಿಮುಖವಾಗಲು ಸುಮಾರು ಹತ್ತು ವರ್ಷ ಕಾಲ ತೆಗೆದುಕೊಂಡಿತು, ಆದರೆ ಬಂಡವಾಳ ಪದ್ಧತಿ(ಕ್ಯಾಪಿಟಲಿಸ್ಮ್) ಕುಸಿಯಲು ಕೇವಲ ಸ್ವಲ್ಪ ತಿಂಗಳು ಸಾಕಾಯಿತು. ಏಕೆ? ಅದು ಕೇವಲ ಸ್ವಲ್ಪ ಮಂದಿಯ ದುರಾಸೆಯಿಂದ ಲೋಕದ ಮಿಲಿಯಗಟ್ಟಲೆ ಜನರು ನರಳಬೇಕಾಯಿತು.

ಮಾನವತೆ ಇಲ್ಲದೆ, ದಯೆಯಿಲ್ಲದೆ, ಜವಾಬ್ದಾರಿಯ ಒಂದು ಭಾವವಿಲ್ಲದೆ, ಯಾವುದೇ ತತ್ತ್ವ(’ಇಸ್ಮ್’) ಕೆಲಸಮಾಡುವುದಿಲ್ಲ. ಸಮತಾವಾದಿತ್ವ ನಡೆಯುವುದಿಲ್ಲ, ಬಂಡವಾಳಶಾಹಿ ನಡೆಯುವುದಿಲ್ಲ, ಮತ್ತು ಪ್ರತಿ ತತ್ತ್ವವೂ(’ಇಸ್ಮ್’) ನಮಗೆ ಮಾನವತೆ ಇಲ್ಲದಿದ್ದರೆ ಸೋತುಹೋಗುತ್ತದೆ. ಮಾನವತೆಯೊಂದಿಗೆ ವ್ಯವಹಾರ ಎಂಬುದನ್ನು ನಾನು ವ್ಯವಹಾರದಲ್ಲಿನ ನೀತಿತತ್ತ್ವ ಅಥವಾ ಸುವ್ಯವಹಾರ ಎಂದು ಕರೆಯುತ್ತೇನೆ.

ನಾವು ಭ್ರಷ್ಟಾಚಾರವನ್ನು ದಯೆಯೊಂದಿಗೆ ಬದಲಾಯಿಸಬೇಕು(ಮಾರ್ಪಡಿಸಬೇಕು). ನಾವು ಬದ್ಧತೆ ಮತ್ತು ವಿಶ್ವಾಸವನ್ನು ಪುನಃಸ್ಥಾಪಿಸಬೇಕು. ವಿಶ್ವಾಸವು ವ್ಯವಹಾರದ ಬೆನ್ಮೂಳೆಯಾಗಿದೆ.

ನಾವು ಇತರರು ನಮ್ಮ ವಿಶ್ವಾಸವನ್ನು ಉಳಿಸಬೇಕೆಂದು ಅಪೇಕ್ಷಿಸುತ್ತೇವೆ, ಆದರೆ ನಾವು ಅದನ್ನು ಉಳಿಸದಿದ್ದರೆ, ಆಗ ಅದು ನೀತಿಪರತೆಯ ಕೊರತೆಯಾಗಿದೆ. ಹಾಗಾಗಿ, ನಾವು ಇತರರು ನಮ್ಮ ವಿಶ್ವಾಸವನ್ನು ಉಳಿಸಬೇಕೆಂದು ಹೇಗೆ ಅಪೇಕ್ಷಿಸುತ್ತೇವೋ; ನಾವು ಅವರ ವಿಶ್ವಾಸವನ್ನು ಉಳಿಸಬೇಕು. ಆಗ ಎಲ್ಲರಿಗೂ ಬೇಕಾಗುವಂಥದ್ದು ಈ ಭೂಮಿಯ ಮೇಲೆ ಸಾಕಷ್ಟಿದೆ.

ಮಹಾತ್ಮಾ ಗಾಂಧಿ ಹೇಳಿದ್ದರು, ’ಈ ಭೂಮಿ ಪ್ರತಿಯೊಬ್ಬರ ಅಗತ್ಯ ಪೂರೈಸಲು ಬೇಕಾದುದನ್ನು ಸಾಕಷ್ಟು ಹೊಂದಿದೆ, ಆದರೆ ಪ್ರತಿಯೊಬ್ಬರ ದುರಾಸೆಗಳನ್ನು ಪೂರೈಸುವುದಕ್ಕಾಗಿ ಅಲ್ಲ.’

ದುರಾಸೆಯನ್ನು ಸೇವೆಗೆ, ಒಂದು ಸಾಮಾಜಿಕ ಹೊಣೆಗಾರಿಕೆಗೆ ಮಾರ್ಪಡಿಸಬೇಕಾಗಿದೆ. ವಸ್ತುಗಳನ್ನು ಉತ್ಪಾದಿಸುವುದು ಸಾಲದು, ನಾವು ಜನರನ್ನು ಈ ವಸ್ತುಗಳನ್ನು ಕೊಂಡುಕೊಳ್ಳುವಷ್ಟು ಸಶಕ್ತರನ್ನಾಗಿಸಬೇಕು. ನೀವು ಅತ್ಯುತ್ತಮ ಟಿ.ವಿ.ಸೆಟ್ಗಳನ್ನು ಉತ್ಪಾದಿಸುತ್ತೀರಿ, ಆದರೆ ಜನರು ಬಡವರಾಗಿದ್ದರೆ, ಅವರಿಗೆ ಅದನ್ನು ಕೊಂಡುಕೊಳ್ಳಲಾಗುವುದಿಲ್ಲ, ಆಗ ಅದು ನಿಮ್ಮನ್ನೂ ನಿಧಾನಿಸುತ್ತದೆ.

ನಾವೊಂದು ಅಂತಃ ಸಂಪರ್ಕಿತ, ಅಂತರ್ಸಂಬಂಧಿತ ಜಗತ್ತಿನಲ್ಲಿ ವಾಸವಾಗಿದ್ದೇವೆ. ನಮ್ಮ ಪ್ರತಿಯೊಂದು ಚಲನೆಯೂ ಈ ಸಮಾಜದ ಪ್ರತಿಯೊಬ್ಬರನ್ನೂ ಪ್ರಭಾವಿಸುತ್ತದೆ. ನಾವು ಏನನ್ನು ಒದಗಿಸುತ್ತೇವೋ ಅದು ಈ ಸಮಾಜದ ಬೆಳವಣಿಗೆ ಅಥವಾ ಅಳಿವನ್ನು ಪ್ರಭಾವಿಸುತ್ತದೆ ಎಂಬ ವರ್ತಮಾನದ ಅರಿವು ಇರುವುದರಿಂದ, ಅದು ಇಂದಿನ ವ್ಯವಹಾರ ಸಮುದಾಯದಲ್ಲಿ ಬಹಳ ಅಗತ್ಯವಾಗಿರುವ ಹೊಣೆಗಾರಿಕೆಯನ್ನು ತರುತ್ತದೆ.

ಇಂದಿನ ದಿನಗಳಲ್ಲಿ ಜನರು ಇನ್ನೂ ಹೆಚ್ಚು ಅರಿವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ನಾನು ಸಂತುಷ್ಟನಾಗಿದ್ದೇನೆ; ಅವರು ಅವ್ಯವಹಾರ(ನೀತಿರಹಿತ ವ್ಯವಹಾರ)ದ ಪರಿಣಾಮಗಳನ್ನು ನೋಡಿದ್ದಾರೆ. ನೀವು ಬಹಳ ಮೇಲಕ್ಕೇರಬಹುದು, ಆದರೆ ನಂತರ, ಒಂದಿಲ್ಲೊಂದು ದಿನ, ನೀವು ಸೆರೆಮನೆ ಸೇರುತ್ತೀರಿ.

ನಾನು ಒಂದು ಬಹಳ ಪ್ರಾಮಾಣಿಕ ವ್ಯಾಪಾರಿಯನ್ನು ಮಾತನಾಡಿಸಿದೆ, ಅವರು ಹೇಳಿದ್ದು, ’ಗುರೂಜಿ, ನಾನು ಅವ್ಯವಹಾರ ನಡೆಸಿದರೆ, ನನಗೆ ನಿದ್ದೆ ಬರುವುದಿಲ್ಲ. ನನಗೆ ನಿದ್ದೆ, ಮತ್ತು ನನ್ನ ಆರೋಗ್ಯ ಕಳೆದುಕೊಳ್ಳಲು ಇಷ್ಟವಿಲ್ಲ. ನನಗೆ ಒಳ್ಳೆಯ ನಿದ್ದೆ ಮತ್ತು ಒಳ್ಳೆಯ ಆರೋಗ್ಯ ಇರುವುದು ಸಾಧ್ಯವಾಗಲೆಂದು, ನಾನು ನೀತಿಬದ್ಧ ವ್ಯಾಪಾರ ಮಾಡುತ್ತೇನೆ.’

ತನ್ನ ಸ್ವಂತ ಒಳಿತಿಗಾಗಿ, ಒಳ್ಳೆಯ ನಿದ್ದೆ ಮತ್ತು ಕುಟುಂಬದೊಂದಿಗೆ ಉಲ್ಲಾಸಭರಿತ ರಜಾದಿನಗಳನ್ನು ಕಳೆಯಲಿಕ್ಕಾಗಿ, ಒಬ್ಬ ವ್ಯಕ್ತಿ ನೀತಿಬದ್ಧನಾಗಿರಬೇಕು. ಮತ್ತು ಅದು ಅಷ್ಟು ಯೋಗ್ಯವಾಗಿದೆ, ಇಲ್ಲದಿದ್ದರೆ ನಮಗೆ ಜೀವನದಲ್ಲಿ ಸಂತೋಷವೆ ಇಲ್ಲದಿದ್ದರೆ ನಾವು ಸಂಪಾದಿಸಿದ ಎಲ್ಲಾ ಹಣದಿಂದ ಏನು ಪ್ರಯೋಜನ.

ವ್ಯವಹಾರದ ಉದ್ದೇಶವೆಂದರೆ ಸುಖ ಮತ್ತು ಸಂತೋಷ. ವ್ಯವಹಾರ ನಿಮಗೆ ಸುಖ ಸಂತೋಷಗಳನ್ನು ತರದಿದ್ದರೆ, ನೀವು ಬಡತನಲ್ಲೇ ಇರುವುದು ಒಳ್ಳೆಯದು. ಹಣದ ಉದ್ದೇಶವೆಂದರೆ ಸುಖವನ್ನು ತರುವುದು. ನಾವು ನಮ್ಮ ಅಸ್ತಿತ್ವದ ಈ ಪ್ರಮುಖ, ಕೇಂದ್ರಬಿಂದುವನ್ನು ಅರ್ಥಮಾಡಿಕೊಳ್ಳದಿದ್ದರೆ, ನಾವು ದಡಸೇರುವ ಅವಕಾಶ ಕಳೆದುಕೊಳ್ಳುತ್ತೇವೆ. ವ್ಯವಹಾರವಿರುವುದು ವ್ಯಾಪಾರಕ್ಕಾಗಿಯಷ್ಟೇ ಅಲ್ಲ!

ಸಾಮಾನ್ಯವಾಗಿ, ನಾವು ಅರ್ಧದಷ್ಟು ನಮ್ಮ ಆರೋಗ್ಯವನ್ನು ಹಣಸಂಪಾದನೆಯಲ್ಲಿ ವ್ಯಯಿಸುತ್ತೇವೆ, ಮತ್ತು ಆ ಆರೋಗ್ಯವನ್ನು ಮರಳಿ ಪಡೆಯುವ, ಯಾವುದು ಸಾಮಾನ್ಯವಾಗಿ ಆಗುವುದಿಲ್ಲವೋ, ಆ ಪ್ರಯತ್ನದಲ್ಲಿ ಅರ್ಧದಷ್ಟು ಸಂಪಾದನೆಯನ್ನು ವ್ಯಯಿಸುತ್ತೇವೆ. ನನ್ನ ಪ್ರಕಾರ ಇದು ಕೆಟ್ಟ ಆರ್ಥಿಕವ್ಯವಸ್ಥೆ.

ನಮ್ಮ ಆರೋಗ್ಯವು ಮುಖ್ಯ. ಜೀವದುಂಬಿದ ಆರೋಗ್ಯ, ಚೈತನ್ಯ ಮತ್ತು ಮನಸ್ಸನ್ನು ಹೊಂದಿರುವುದು ಬಹಳ ಮುಖ್ಯ. ಆ ಸರಿಯಾದ ಮನಃಸ್ಥಿತಿಯನ್ನು ಹೊಂದಿರಲು, ನೀತಿಬದ್ಧ ವ್ಯಾಪಾರ ಅನಿವಾರ್ಯ.

ನಾವು ನಮ್ಮ ಸುತ್ತಲೂ ನೋಡೋಣ. ನೀತಿಬದ್ಧವಾಗಿ ವ್ಯವಹಾರ ಮಾಡುವ ಆದರೂ ಒಳ್ಳೆಯ ಲಾಭ ಸಂಪಾದಿಸುವ ಜನರ ಉದಾಹರಣೆಗಳು ಸಾಕಷ್ಟಿವೆ.

ಸಾಮಾನ್ಯವಾಗಿ, ಯುವಜನರು ಹೇಳುತ್ತಾರೆ, ’ನೋಡು, ಒಬ್ಬ ಅವ್ಯವಹಾರ ನಡೆಸಿ ಮಿಲಿಯಗಟ್ಟಲೆ ಗಳಿಸಿದ್ದಾನೆ. ನಾನು ನೀತಿಬದ್ಧ ವ್ಯವಹಾರ ನಡೆಸುತ್ತಿದ್ದೇನೆ, ನನಗೆ ಬೆಳೆಯಲಾಗುತ್ತಿಲ್ಲ.’

ನಾನು ನಿಮಗೆ ಹೇಳುತ್ತೇನೆ, ಅದು ಶಾಂತಿಯನ್ನು ಕಳೆದುಕೊಳ್ಳುವ ಮತ್ತು ಗಲಭೆ ಅನುಭವಿಸುವಷ್ಟು ಬೆಲೆಯುಳ್ಳದ್ದಲ್ಲ. ಮತ್ತೆ ಒಂದು ದಿನ, ಖಂಡಿತವಾಗಿ, ಅವನು ತನ್ನ ಕೃತ್ಯಗಳ ಪ್ರತಿಫಲವನ್ನು ಪಡೆಯುತ್ತಾನೆ. ಭದ್ರವಾಗಿರುವುದು ಇದಕ್ಕಿಂತ ಒಳ್ಳೆಯದು. ನೀತಿಬದ್ಧ ವ್ಯಾಪಾರ ನಡೆಸಿ, ಒಳ್ಳೆಯ ನಿದ್ದೆ ಮತ್ತು ಪರಿವಾರದೊಂದಿಗೆ ಉಲ್ಲಾಸಭರಿತ ರಜಾದಿನಗಳನ್ನು ಕಳೆಯಿರಿ.

ನೀತಿಬದ್ಧ ವ್ಯಾಪಾರ ನಡೆಸಿ ಯಶಸ್ವಿಯಾಗಿರುವ ಜನರ ಉದಾಹರಣೆ ಹಲವು ಇವೆ. ಅನೈತಿಕ ವ್ಯವಹಾರ ಮಾರ್ಗಗಳಿಂದಲೇ ನಿಮಗೆ ಬಹಳ ಹಣ ಗಳಿಸುವುದು ಸಾಧ್ಯವೆಂದೇನೂ ಇಲ್ಲ. ಇದೊಂದು ಮಿಥ್ಯ ಕಲ್ಪನೆ. ಅಂಥ ವ್ಯವಹಾರವನ್ನು ಮಾಡಿರುವವರೆಲ್ಲರೂ ತಮ್ಮ ತಪ್ಪನ್ನು ಅತಿ ಶೀಘ್ರವಾಗಿ ಅರಿತಿದ್ದಾರೆ. ನೀವು ಎಲ್ಲಾ ಡಾಟ್ ಕಾಂ ಮತ್ತು ವಾಲ್ ಸ್ಟ್ರೀಟ್ ಕುಸಿತಗಳು, ಮತ್ತು ಅಂಥ ಹಲವು ವ್ಯವಹಾರಗಳು ಕಾಲಕಳೆಯುವುದರೊಳಗೆ ಲಯವಾಗಿರುವುದರ ಬಗ್ಗೆ ಕೇಳಿದ್ದೀರಿ. ಇದು ಜನರು ಎಚ್ಚರವಾಗಲೊಂದು ಘಂಟಾನಾದ, ತಮ್ಮೊಳಗೇ ನೋಡಿಕೊಳ್ಳಲು, ಮತ್ತು ನೀತಿಯ ತತ್ತ್ವಗಳನ್ನು ಅನುಸರಿಸುತ್ತ ಹೇಗೆ ಮುಂದುವರಿಯುವುದು ಎಂದು ನೋಡಿಕೊಳ್ಳುವುದಕ್ಕಾಗಿ.

ಸಹಾನುಭೂತಿ ಮತ್ತು ಬದ್ಧತೆ ಜೀವನದ ಅವಶ್ಯಕ ಅಂಶಗಳಾಗಿವೆ. ಇವು ಇಲ್ಲದೇ, ಜೀವನಕ್ಕೆ ಯಾವುದೇ ಆಕರ್ಷಣೆ ಇಲ್ಲ.  ಅಲ್ಲದೇ ನಿಮ್ಮ ವ್ಯವಹಾರದಲ್ಲಿ ಅಥವಾ ಉದ್ಯಮಶೀಲತೆಯಲ್ಲಿ, ಯಾವುದೇ ಕೆಲಸ ಕೈಗೆತ್ತಿಕೊಳ್ಳುತ್ತಿರಲು ನೀವು ಬಾಳ್ವಿಕೆಯುಳ್ಳ ಬೆಳವಣಿಗೆಯನ್ನು ಹೊಂದುವುದಿಲ್ಲ.

ಇಂದು ವಿಶ್ವಸಂಸ್ಥೆಯೂ ಒಪ್ಪಿಕೊಂಡಿರುವುದೇನೆಂದರೆ ಹೆಚ್ಚು ಆದ್ಯ/ಮುಖ್ಯವಾಗಿರುವುದು ಜಿ.ಡಿ.ಪಿ.(ಗ್ರಾಸ್ ಡೊಮೆಸ್ಟಿಕ್ ಪ್ರೊಡುಕ್ಷನ್ ಎಂಬ ದೇಶದ ಒಟ್ಟು ಉತ್ಪನ್ನದ ಒಂದು ಅಳತೆ) ಅಲ್ಲ, ಆದರೆ ಜಿ.ಡಿ.ಎಚ್.(ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನೆಸ್ಸ್ ಎಂಬ ದೇಶದ ಒಟ್ಟು ಸಂತುಷ್ಟಿಯ ಅಳತೆ) ಮುಖ್ಯ. ನಮಗೆ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ; ಸಂತೋಷವು ಒಂದು ಮುಖ್ಯ ವಿಷಯ.

ಭುತಾನ್.ನಂಥ ಒಂದು ಸಣ್ಣ ದೇಶ ಈ ಸಂತುಷ್ಟಿ ಸೂಚಿ ಅನುಕ್ರಮಣಿಕೆಯಲ್ಲಿ ಮೇಲಿನ ಸ್ಥಾನವನ್ನು ಹೊಂದಿದೆ. ನೀವು ಆ ದೇಶವನ್ನು ಸುತ್ತಿ, ಅಲ್ಲಿನ ಜನರು ದೊಡ್ಡ ಮುಗುಳ್ನಗೆಯೊಂದಿಗೆ ಅಷ್ಟೊಂದು ಸಂತೋಷ ಮತ್ತು ತೃಪ್ತಿಯಿಂದ ಇದ್ದಾರೆ, ಆದರೂ ಅವರು ಸಂಪನ್ನತೆಯತ್ತ ಸಾಗುತ್ತಿದ್ದಾರೆ. ಸ್ಲೊವೇನಿಯಾಗೆ ಅಂಥ ಒಂದು ಸಾಧ್ಯತೆ ಇದೆ; ಎರಡು ಮಿಲಿಯ ಜನರಿರುವ ಒಂದು ಪುಟ್ಟ ದೇಶ, ನನಗೆ ಕಾಣುತ್ತದೆ ಇದು ನಿರ್ವಹಿಸಲು ಸುಲಭವಾಗಿದೆ (ನಾನು 1.2 ಬಿಲಿಯ ಜನರಿರುವ ದೇಶದವನಾಗಿರುವುದರಿಂದ).

ಮಾನ್ಯ ರಾಷ್ಟ್ರಾಧ್ಯಕ್ಷರು ನನ್ನ ಮಾತನ್ನು ಒಪ್ಪದಿರಬಹುದು. ಅದು ಸುಲಭವೆಂದು ನಾನು ಹೇಳುತ್ತಿರುವುದು ಇನ್ನೊಂದು ಪರಿದೃಶ್ಯ(ಮುನ್ನೋಟ)ದಿಂದ; ಜನರನ್ನು ನೀತಿತತ್ತ್ವದಲ್ಲಿ ಸಂಸ್ಕರಿಸಲು, ಸಂತೋಷದ ಈ ಅರಿವನ್ನು ತರಲು ಮತ್ತು ಈ ದೇಶದಲ್ಲಿ ಸಂತೋಷದ ಒಂದು ಲಹರಿಯೆಬ್ಬಿಸುವುದು ಸುಲಭ. ಇದು ಸಾಧ್ಯ.

ನಾನು ನಿಮ್ಮೊಂದಿಗೆ ಜಪಾನ್.ನ ಬಗ್ಗೆ ಒಂದು ವಿಷಯ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅದೊಂದು ಅತ್ಯುನ್ನತ ದೇಶ. ಹೇಗಿದ್ದರೂ, ಪ್ರತಿ ವರ್ಷ ಸುಮಾರು 3೦,೦೦೦ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಬಹಳ ದೊಡ್ಡ ಸಂಖ್ಯೆ.

ಹಾಗಾಗಿ, ಕಳೆದ ಮೇ ತಿಂಗಳಿನಲ್ಲಿ ನಾನು ಜಪಾನ್.ನ ಪ್ರಧಾನಿಯನ್ನು ಭೇಟಿಯಾದಾಗ ಅವರು ನನಗೆ ಹೇಳಿದರು, ’ಗುರೂಜಿ, ಆರ್ಥಿಕವಾಗಿ ನಾವು ಸಮೃದ್ಧರಾಗಿದ್ದೇವೆ. ಯುವಕರಿಗೆ ಮನೆಯಲ್ಲಿ ಎರಡು ಕಾರ್.ಗಳಿವೆ; ಅವರಿಗೆ ಏನೇ ಅಗತ್ಯವಿದ್ದರೂ ನಾವು ಒದಗಿಸಲು ಸಿದ್ಧರಾಗಿದ್ದೇವೆ. ಹೇಗಿದ್ದರೂ, ಹಣದಿಂದ ಒದಗಿಸಲಾಗದ ಏನೋ ಒಂದಿದೆ. ಇಲ್ಲಿ ಈ ಸಮೃದ್ಧಿ ಇದ್ದರೂ, ನಮ್ಮ ಯುವಕರು ಖಿನ್ನತೆಯಲ್ಲಿದ್ದಾರೆ. ಸುಮಾರು ಎರಡು ಮಿಲಿಯ ಯುವಕರು ಖಿನ್ನತೆಯಲ್ಲಿದ್ದಾರೆ, ಇವರಲ್ಲಿ 3೦,೦೦೦ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಇದಕ್ಕೆ ಉತ್ತರವಿಲ್ಲ. ನಾವು ಮಾಡಬಹುದಾದುದು ಏನಿದೆ?’

ನಾವು ಅಲ್ಲೊಂದು ಯೋಜಿತ ಕಾರ್ಯ ಹಮ್ಮಿಕೊಂಡೆವು, ಸಂತೋಷದ ಅಲೆಗಳನ್ನೆಬ್ಬಿಸುತ್ತಾ, ಜನರನ್ನು ಒಟ್ಟುಗೂಡಿಸುತ್ತ ನಡೆದೆವು. ’ಬನ್ನಿ ನಾವು ಜೊತೆಯಾಗಿ ಉಸಿರಾಡೋಣ, ಜೊತೆಯಾಗಿ ಹಾಡೋಣ, ಮತ್ತು ಜೊತೆಯಾಗಿ ಧ್ಯಾನ ಮಾಡೋಣ.’

ಕೇವಲ ಸ್ವಲ್ಪ ನಿಮಿಷಕಾಲ ಮನಸ್ಸನ್ನು ಶಾಂತವಾಗಿಸಿ ಮತ್ತೆ ತನ್ನೊಳಗೇ ಆಳ ಹೋಗುವುದರಿಂದ; ತನ್ನೊಳಗಿನ ಆಳದಲ್ಲಿ ಒಂದು ಅತ್ಯಂತ ಸುಂದರ ಸ್ಥಳವಿದೆ ಎಂದು ಅರಿಯುವುದರಿಂದ ಒಂದು ದೊಡ್ಡ ಬದಲಾವಣೆ ಸಾಧ್ಯವಿದೆ. ಇದು ಹಲವಾರು ಜೀವಗಳನ್ನು ಆತ್ಮಹತ್ಯೆಯ ಅಂಚಿನಿಂದ, ಮತ್ತು ಖಿನ್ನತೆಗೊಳಗಾಗುವುದರಿಂದ ಕಾಪಾಡುತ್ತದೆ.

ಜರ್ಮನಿಯಲ್ಲಿ, ಶೇಕಡಾ 4೦ರಷ್ಟು ಶಾಲಾ ಶಿಕ್ಷಕರು ಖಿನ್ನರಾಗಿದ್ದಾರೆ; ಇದು ಗಾಬರಿಪಡಿಸುವ ವಿಷಯ. ಕಲ್ಪಿಸಿ, ಒಬ್ಬ ಆನಂದದಿಂದಿರುವ ಮಗುವೊಂದು ಪಾಠಶಾಲೆಗೆ ಹೋಗಿ, ಒಬ್ಬ ಬಹಳ ಖಿನ್ನ ಶಿಕ್ಷಕನನ್ನು ಪಡೆಯುತ್ತದೆ; ಶಾಲೆಯಿಂದ ಹೊರಬರುವ ಆ ಮಗುವಿನಿಂದ ನೀವೇನು ಅಪೇಕ್ಷಿಸುತ್ತೀರಿ? ಇದು ದುರದೃಷ್ಟಕರ.

ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದುದೆಂದರೆ ವಿಜಯದ ಚಿಹ್ನೆಗಳಲ್ಲಿ ಒಂದು ವಿಶ್ವಾಸಭರಿತ ಮುಗುಳ್ನಗೆಯಾಗಿದೆ. ನಾವು ಯಾವುದೇ ಸವಾಲುಗಳನ್ನು ಎದುರಿಸಬಹುದು ಎಂಬ ವಿಶ್ವಾಸ! ಈ ವಿಶ್ವಾಸ ಮತ್ತು ಒಂದು ಮುಗುಳ್ನಗೆ ನನಗೆ ವಿಜಯದ ಒಂದು ಸೂಚಕವಾಗಿದೆ.

ನಿಮ್ಮ ಬಳಿ ಒಂದು ದೊಡ್ಡ ಮೊತ್ತ ಬ್ಯಾಂಕ್.ನಲ್ಲಿದ್ದು, ನಿಮ್ಮ ಮುಖ ಕಳೆಗುಂದಿದ್ದು, ಸಂಪೂರ್ಣವಾಗಿ ಸುಸ್ತಾಗಿ ಮತ್ತು ಖಿನ್ನರಾಗಿದ್ದರೆ, ಆ ಹಣದಿಂದ ಯಾವ ಒಳಿತಿದೆ? ಜನರು ಬಹಳ ಹಣ ಗಳಿಸುತ್ತಾರೆ, ಬ್ಯಾಂಕ್.ನಲ್ಲಿಟ್ಟು, ನಂತರ ತೀರಿಕೊಳ್ಳುತ್ತಾರೆ. ಇದು ರಾತ್ರಿಯೆಲ್ಲಾ ಹಾಸಿಗೆಯನ್ನು ಸಜ್ಜಾಗಿಸಿ, ನಂತರ ಮಲಗಲು ಸಮಯ ಇಲ್ಲದಂತೆ. ನೀವು ಮಲಗಲು ಹೋದಾಗ, ಆಗಲೇ ಹೋಗಿಬಿಟ್ಟಿದ್ದೀರಿ. ನಿಖರವಾಗಿ ಇದೇ ಇಂದು ನಡೆಯುತ್ತಿರುವುದು.

ಜನರು ತಮ್ಮ ಜೀವನ ಪೂರ್ತಿ ಬ್ಯಾಂಕ್.ನಲ್ಲಿ ಹಣವಿಡಲಿಕ್ಕಾಗಿ ದುಡಿಯುತ್ತಾರೆ, ಮತ್ತೆ ತೀರಿಕೊಳ್ಳುತ್ತಾರೆ, ಮತ್ತವರ ಮಕ್ಕಳು ಅದೇ ಹಣಕ್ಕಾಗಿ ಕಿತ್ತಾಡುತ್ತಾರೆ. ಭಾರತದಲ್ಲಿ ಮತ್ತು ಹಲವು ಬೇರೆ ಸ್ಥಳಗಳಲ್ಲಿ, ಸುಮಾರು ಶೇಕಡಾ 9೦ರಷ್ಟು ನ್ಯಾಯಾಲಯದ ಮೊಕದ್ದಮೆಗಳು ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಇರುತ್ತವೆ. ನನಗೆ ಸ್ಲೊವೇನಿಯದ ಬಗ್ಗೆ ತಿಳಿದಿಲ್ಲ.

ಕಷ್ಟಪಟ್ಟು ಗಳಿಸಿದ ಹಣ ಅಥವಾ ಸ್ವಂತ ಹಣದ ಬಗ್ಗೆ ನೀವು ಅಷ್ಟೊಂದು ಮೊಕದ್ದಮೆಗಳನ್ನು ನೋಡುವುದಿಲ್ಲ. ಕೇವಲ ಪಿತ್ರಾರ್ಜಿತ ಆಸ್ತಿಯ ಬಗ್ಗೆಯೇ ಜನರು ಜಗಳವಾಡುವುದು. ಬದುಕುವ ರೀತಿ ಇದೇ? ವ್ಯವಹಾರದಲ್ಲಿ ಯಶಸ್ಸು ಅಂದರೆ ಇದೇ? ಮತ್ತೆ ಯಶಸ್ಸಿಲ್ಲದೇ ಇದ್ದರೆ, ವ್ಯವಹಾರ ನಡೆಸುವುದರ ಅರ್ಥ ಏನು?

ವಿಶ್ವಾಸವು ವ್ಯವಹಾರದ ಬೆನ್ಮೂಳೆ. ಯಶಸ್ಸು ವ್ಯವಹಾರದ ಗುರಿ. ನಾವು ಇವೆರಡನ್ನು, ಯಶಸ್ಸು ಮತ್ತು ವಿಶ್ವಾಸಗಳನ್ನು ಕಳೆದುಕೊಂಡರೆ, ಅದು ಯಾವುದಕ್ಕೂ ಬಾರದ ಅತೃಪ್ತಿಕರ ವ್ಯವಹಾರ, ಅದು ನಿಮಗೆ ಇನ್ನೂ ಖಾಯಿಲೆ ತರುತ್ತದೆ.

ಇದೆಲ್ಲದರ ಸಾರಾಂಶವೆಂದರೆ, ವ್ಯವಹಾರವು ಒಂದು ನಿರ್ದಿಷ್ಟ ಮಟ್ಟದ ಸಮಗ್ರತೆ, ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ ಅಥವಾ ನೀತಿಬದ್ಧತೆ ಇಲ್ಲದೆ ನಡೆಯಲು ಆಗುವುದಿಲ್ಲ. ಇದು ಅಸಾಧ್ಯ. ನಾವು ನಮ್ಮ ಕಡೆಯಿಂದ ಒಂದು ಪ್ರಾರಂಭ ಮಾಡಿದಾಗ, ನಾವು ನಮ್ಮ ಸುತ್ತ ಕೆಲಸ ಮಾಡುವವರಿಗೆ ಅದನ್ನೇ ಮಾಡಲು ಒಂದು ಮಾದರಿ ಸೃಷ್ಟಿಸುತ್ತೇವೆ.

ವಿಶ್ವಾಸವು ಅಗತ್ಯ. ಇಂದು ಜನರು ಬ್ಯಾಂಕ್.ನಲ್ಲಿ ತಮ್ಮ ಹಣವನ್ನಿಡಲೂ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಹಿಂದೆ, ಜನರು ವ್ಯಾಪರದಲ್ಲಿ ಭರವಸೆ ಕಳೆದುಕೊಳ್ಳುತ್ತಿದ್ದರು; ನಿಧಾನವಾಗಿ ಅದು ಬ್ಯಾಂಕ್.ಗಳನ್ನೂ ನುಸುಳಿಕೊಂಡಿದೆ. ಅಂಥ ಭಯ ಮತ್ತು ಅನಿಶ್ಚಿತತೆ ಈ ಸಮಾಜವನ್ನು ವಶಪಡಿಸಿಕೊಂಡಿವೆ.ಇದು ಮುಂದುವರಿದರೆ, ಆಗ ಅಪರಾಧ ಮತ್ತು ಹಿಂಸೆ ಏರುತ್ತವೆ.

ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ನೀತಿಬದ್ಧತೆಗಳು ಈ ಸಮಾಜದಲ್ಲಿ ಅಪರಾಧ ಮತ್ತು ಹಿಂಸಾಚಾರವನ್ನು ತಡೆಯಬಲ್ಲವು.

ವ್ಯವಹಾರಗಳಲ್ಲಿ ಕಾರ್ಪೊರೇಟ್ ಸೋಶ್ಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್.ಆರ್.- ಔದ್ಯೋಗಿಕ ನಿಗಮಗಳ ಸಾಮಾಜಿಕ ಹೊಣೆಗಾರಿಕೆ), ಪಡೆಯಬೇಕಾದದ್ದು ಮತ್ತು ಪಡೆಯದಿರ ತಕ್ಕದ್ದರ ನಡುವಿನ ಅಂತರವನ್ನು ತುಂಬಿ, ಮತ್ತೆ ಅದರ ಮೂಲಕ ಸಮಾಜದಲ್ಲಿನ ಹಿಂಸೆ ಮತ್ತು ಅಪರಾಧಗಳನ್ನು ತಡೆಯಬಹುದು. ಇಲ್ಲವಾದರೆ, ನಾವು ಒಂದು ಸ್ಫೋಟಕದ ಮೇಲೆ ಕುಳಿತ್ತಿದ್ದೇವೆ.

ಸಮಾಜದ ಒಂದು ಭಾಗ ಯಾವುದೇ ಕ್ಷಣದಲ್ಲಿ ಬೀದಿಗಿಳಿದು ಅನಾಹುತವನ್ನು ಉಂಟುಮಾಡಬಹುದು; ಅಂಥ ಸಮಯದಲ್ಲಿ ವ್ಯವಹಾರ ಸಮುದಾಯವು ಇದ್ದುದರಲ್ಲಿ ಅತಿ ಹೆಚ್ಚು ಅನುಭವಿಸುತ್ತದೆ. (ನಾವಿದನ್ನು ದಿನಗಟ್ಟಲೆ, ವಾರಗಟ್ಟಲೆಯೂ ಇರಬಹುದು, ಪ್ಯಾರಿಸ್.ನಲ್ಲಿ ನಡೆಯುತ್ತಿರುವುದನ್ನು ನೋಡಿದ್ದೇವೆ. ಸಮಾಜದ ಒಂದು ಭಾಗ ರೋಷಾವೇಶದಿಂದ ಎಗರಾಡುತ್ತಿತ್ತು, ಮತ್ತು ಎಲ್ಲಾ ವ್ಯಾವಹಾರಗಳನ್ನು ಮುಚ್ಚಲಾಗಿತ್ತು; ಆ ಎರಡು ವಾರಗಳಲ್ಲಿ ಪ್ಯಾರಿಸ್.ನಲ್ಲಿ ಮಿಲಿಯಗಟ್ಟಲೆ ನಷ್ಟವಾಗಿತ್ತು.)

ನಾವು ಒಂದು ಪ್ರತ್ಯೇಕ (ಏಕಾಂತ) ಸಮಾಜದಲ್ಲಿ ವಾಸವಾಗಿಲ್ಲ. ನಾವು ಇಡಿಯ ಒಂದು ಭಾಗವಾಗಿದ್ದೇವೆ, ಇದರಲ್ಲಿ ರಾಜಕಾರಣಿಗಳು, ವ್ಯವಹಾರ ಮತ್ತು ಧರ್ಮ ಕೂಟಗಳು, ಸರಕಾರೇತರ ಸಂಸ್ಥೆಗಳು(ಎನ್.ಜಿ.ಒ.), ನಾವೆಲ್ಲ ಇಲ್ಲಿ ಜೊತೆಗೂಡಬೇಕು. ನಾವೆಲ್ಲರೂ ಒಂದು ಇನ್ನೂ ಒಳ್ಳೆಯ ಸಮಾಜ, ಒಂದಿನ್ನೂ ಒಳ್ಳೆಯ ದೇಶವನ್ನು ನಿರ್ಮಿಸುವುದಕ್ಕಾಗಿ ಕೆಲಸ ಮಾಡಬೇಕು. ಇದಕ್ಕೆ, ನಾವೆಲ್ಲ ನಮ್ಮನ್ನು ಬದ್ಧಗೊಳಿಸಬೇಕು.

ನಮ್ಮ ಜೀವನಗಳು ಈ ಗ್ರಹದ ಮೇಲೆ ಇಷ್ಟು ಕಿರು ಕಾಲದ್ದಾಗಿದೆ. ನಿಮ್ಮ ಸ್ವಂತ ಜೀವನದ ಆರ್ಥಿಕ ವ್ಯವಸ್ಥೆಯನ್ನು ನೋಡಿ; ನೀವು 8೦ ವರ್ಷಕಾಲ ಬದುಕುತ್ತೀರಿ ಅಂದುಕೊಳ್ಳಿ, ಆ 8೦ ವರ್ಷಗಳನ್ನು ನೀವು ಹೇಗೆ ಕಳೆಯುತ್ತೀರಿ? ನೀವಿದರ ಬಗ್ಗೆ ಯೋಚಿಸಿದ್ದೀರೇ?

ಎಂಭತ್ತು ವರ್ಷದ ಒಂದು ಜೀವನದಲ್ಲಿ,ನೀವು 4೦ ವರ್ಷಗಳನ್ನು ಹಾಸಿಗೆಯಲ್ಲಿ ನಿದ್ದೆ ಮಾಡುತ್ತಾ ಕಳೆಯುತ್ತೀರಿ. ಇದು ಸುಮಾರು ಅರ್ಧದಷ್ಟು ಸಮಯ. ನಿಮ್ಮ ಆರೋಗ್ಯ ಕೆಟ್ಟಿದ್ದರೆ, ಇದಕ್ಕೆ ನೀವಿನ್ನೂ ಕೆಲವು ವರ್ಷ ಸೇರಿಸಬಹುದು.
ಒಂದು ದಿನಕ್ಕೆ ನೀವು 2 ಗಂಟೆಗಳಷ್ಟು ಸಮಯ ಆಹಾರಕ್ಕಾಗಿ ಕಳೆಯುತ್ತೀರಿ- ಬೆಳಗ್ಗಿನ ತಿಂಡಿ, ಮಧ್ಯಾನ ಮತ್ತು ರಾತ್ರಿಯ ಊಟ; ನೀವು ಸುಮಾರು ಎಂಟು ವರ್ಷ ಕಾಲ ತಿನ್ನುತ್ತಾ ಕಳೆಯುತ್ತೀರಿ.

ಇದೇ ರೀತಿ, ಎಂಟರಿಂದ ಹತ್ತು ವರ್ಷ ನೀವು ಸ್ನಾನ ಮತ್ತು ಶೌಚಾಲಯದಲ್ಲಿ ಕಳೆಯುತ್ತೀರಿ.

ನೀವು ನ್ಯೂ ಯಾರ್ಕ್ ಅಥವಾ ಫ್ರಾಂಕ್ಫರ್ಟ್.ನಂಥ ದೊಡ್ಡ ಪಟ್ಟಣದಲ್ಲಿ ವಾಸವಾಗಿದ್ದರೆ, ನೀವು ಸುಮಾರು 1೦ರಿಂದ 15 ವರ್ಷಗಳ ಕಾಲ ವಾಹನ ಸಂಚಾರ ನಿಲುಗಡೆಗಳಲ್ಲಿ, ಆಮೇಲೆ ಕೆಲಸದಲ್ಲಿ ಕಳೆಯುತ್ತೀರಿ.

ನಮ್ಮ ಜೀವನವನ್ನು ನಾವು ಹೇಗೆ ಕಳೆಯುತ್ತೇವೆ ಎಂದು ನೀವು ವಿಮರ್ಶಿಸಿದರೆ, ನಿಮಗೆ ತಿಳಿಯುತ್ತದೆ ನಾವು ಹೆಚ್ಚೆಂದರೆ ಎರಡು ಅಥವಾ ಮೂರು ವರ್ಷಗಳ ಕಾಲ ನಮ್ಮ ಜೀವನವನ್ನು ಸಂತೋಷವಾಗಿ ಕಳೆಯುತ್ತೇವೆ. ಇಂಥ ಸಮಯಗಳಲ್ಲಿ ನಾವು ನಮ್ಮ ಜೀವನವನ್ನು ವಾಸ್ತವವಾಗಿ ಬಾಳುತ್ತಿದ್ದೇವೆ. ಉಳಿದದ್ದೆಲ್ಲ ಬದುಕನ್ನು ಬಾಳುವುದಕ್ಕಾಗಿ ತಯಾರಿಯಷ್ಟೆ.

ಜೀವನದಲ್ಲಿ ಹೃದಯ ತುಂಬುವಿಕೆ, ಮಿಡಿತ ಉಂಟಾಗುವುದು ಒಂದು ಬದ್ಧತೆಯಿಂದ. ನಾವು ನಮ್ಮ ಸಂಪಾದನೆಯ ಒಂದು ಭಾಗವನ್ನು ಇತರರ ಸಹಾಯಕ್ಕಾಗಿ, ಕಾರ್ಪೊರೇಟ್ ಸೋಶ್ಯಲ್ ರೆಸ್ಪಾನ್ಸಿಬಿಲಿಟಿ. ಗೆ ನೀಡಬಹುದು. ಈ ಸಮಾಜದಿಂದ ನಾವು ಏನನ್ನಾದರೂ ಪಡೆಯಬೇಕು ಎನ್ನುವುದಕ್ಕಿಂತ, ಈ ಸಮಾಜಕ್ಕೆ ನಾವು ಹೇಗೆ ಸಹಾಯ ಒದಗಿಸಬಹುದು ಎಂದು ನಾವು ಯೋಚಿಸಬೇಕು.

ಪ್ರತಿ ವ್ಯವಹಾರ ಕೇಂದ್ರ, ಪ್ರತಿ ವಾಣಿಜ್ಯೋದ್ಯಮಿಯು ಇನ್ನು ಹೆಚ್ಚು ನಗುಮುಖಗಳಿರುವ ಒಂದು ಶಾಂತಿ-ಸಮೃದ್ಧ ಸಮಾಜವನ್ನು ಹೇಗೆ ಬೆಳೆಸುವುದು ಎಂದು ಯೋಚಿಸಿದರೆ, ಆಗ ನಮಗೆ ಆರೋಗ್ಯಪೂರ್ಣ ಮತ್ತು ಸಂತುಷ್ಟ ಜೀವನದ ಒಂದು ಯುಗವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.