ಶುಕ್ರವಾರ, ಮಾರ್ಚ್ 22, 2013

ಜೀವನವೊ೦ದು ಶ್ರೀಮಂತ ಅನುಭವ

ಮಾರ್ಚ್ ೨೨, ೨೦೧೩
ಜರ್ಮನಿ

ಸ್ವಲ್ಪ ನೃತ್ಯ, ಸಂಗೀತ, ತತ್ವಜ್ಞಾನ, ವಿಜ್ಞಾನ, ಸೇವೆ ಮತ್ತು ಮೌನವಿರುವಾಗ ನಮ್ಮ ಜೀವನವು ಹೆಚ್ಚು ಶ್ರೀಮಂತವಾಗುವುದು. ಈ ಆರು ವಿಷಯಗಳು ನಮ್ಮ ಜೀವನವನ್ನು ಹೆಚ್ಚು ಶ್ರೀಮಂತವಾಗಿಸಬಲ್ಲವು. ಅವುಗಳಲ್ಲಿ ಯಾವುದಾದರೂ ಒಂದು ನಿಮಗೆ ತಪ್ಪಿಹೋದರೆ, ಆಗ ಜೀವನವು ಸಂಪೂರ್ಣವಲ್ಲ. ಇವತ್ತು, ನಾವು ಆಂತರಿಕ ಮೌನದ ಜೊತೆ ಮುಖಾಮುಖಿ ನಡೆಸೋಣ.
ಆಂತರಿಕ ಮೌನವು ಎಲ್ಲಾ ಸೃಜನಶೀಲತೆಯ ತಾಯಿಯಾಗಿದೆ, ಅಂತಃಸ್ಫುರಣೆಯ ಮೂಲವಾಗಿದೆ ಮತ್ತು ಚೈತನ್ಯದ ಉಗ್ರಾಣವಾಗಿದೆ ಹಾಗೂ ನಾವೆಲ್ಲರೂ ಇದನ್ನು ಹೊಂದಿದ್ದೇವೆ! ಒಂದೇ ಒಂದು ವಿಷಯವೆಂದರೆ, ನಾವದನ್ನು ಬಂಧಿಸಿದ್ದೇವೆ ಮತ್ತು ಬೀಗದ ಕೈಯನ್ನು ಮರೆತಿದ್ದೇವೆ. ಇದು, ನೀವು ನಿಮ್ಮ ಕಂಪ್ಯೂಟರಿನ ಪಾಸ್ ವರ್ಡನ್ನು ಕೆಲವೊಮ್ಮೆ ಹೇಗೆ ಮರೆಯುವಿರೋ ಹಾಗೆ. ಅದೇ ರೀತಿಯಲ್ಲಿ, ನಾವೆಲ್ಲರೂ, ನಮ್ಮ ಹೃದಯದಲ್ಲಿ ಈ ಅಗಾಧವಾದ ಸಿರಿವಂತಿಕೆಯಾದ ಮೌನವನ್ನು ಹೊಂದಿರುವೆವು, ಆದರೆ ಹೇಗೋ, ಅದನ್ನು ಹೇಗೆ ಸ್ಪರ್ಷಿಸಬೇಕೆಂಬುದನ್ನು ನಾವು ಮರೆತಿರುವೆವು. ಇದನ್ನು ತಿಳಿದುಕೊಳ್ಳಬೇಕಾಗಿದೆ.
ಇವತ್ತು ನಾವು ಸ್ವಲ್ಪ ನೃತ್ಯ, ಸ್ವಲ್ಪ ಸುಂದರವಾದ ಸಂಗೀತದಲ್ಲಿ ಪಾಲ್ಗೊಂಡೆವು; ಈಗ, ನಾವು ಸ್ವಲ್ಪ ತತ್ವಜ್ಞಾನವನ್ನು ಚರ್ಚಿಸಬೇಕು.
ನಮ್ಮ ಹೃದಯಕ್ಕೆ ಬಹಳ ಹತ್ತಿರವಾದ, ನಮ್ಮ ಜೀವನದಲ್ಲಿ ಬಹಳ ಪ್ರಿಯವಾದ ಯಾವುದನ್ನಾದರೂ ಚರ್ಚಿಸಲು ನಾವೊಂದು ಸೌಹಾರ್ದಯುತ ಮತ್ತು ಅನೌಪಚಾರಿಕ ವಾತಾವರಣದಲ್ಲಿರಬೇಕು. ನೀವೆಲ್ಲರೂ ಈಗ ಇಲ್ಲಿ ಹಾಯಾಗಿರುವಿರೇ? ನಮ್ಮ ಸುತ್ತಲೂ ಕುಳಿತಿರುವ ಜನರನ್ನು ಅಭಿವಂದಿಸಲು ನಾವು ೩೦ ಸೆಕೆಂಡುಗಳನ್ನು ತೆಗೆದುಕೊಳ್ಳೋಣ.
ಈಗ, ನೀವು ನಿಜವಾಗಿಯೂ ನಿಮ್ಮ ಪಕ್ಕದ ವ್ಯಕ್ತಿಗೆ ಅಭಿವಂದಿಸಿದಿರೇ? ಅಥವಾ ನೀವದನ್ನು ಕೇವಲ ಒಂದು ಔಪಚಾರಿಕತೆಯಾಗಿ ಮಾಡಿದಿರೇ? ಹೆಚ್ಚಾಗಿ, ನಾವು ಜೀವನದಲ್ಲಿ ಅದಲು ಬದಲು ಮಾಡಿಕೊಳ್ಳುವ ಈ ಕುಶಲೋಪರಿಗಳೆಲ್ಲವೂ ಒಂದು ಬಹಳ ಬಾಹ್ಯ ಮಟ್ಟದ್ದಾಗಿದೆ. ಉದಾಹರಣೆಗೆ, ಅನಾರೋಗ್ಯದಲ್ಲಿರುವ ಒಬ್ಬರನ್ನು ಭೇಟಿಯಾಗಲು ನೀವೊಂದು ಆಸ್ಪತ್ರೆಗೆ ಹೋಗುತ್ತೀರಿ ಮತ್ತು ನೀವು ಅವರಲ್ಲಿ, "ನೀವು ಹೇಗಿದ್ದೀರಾ?" ಎಂದು ಕೇಳುತ್ತೀರಿ. ಅವರು, "ನಾನು ಚೆನ್ನಾಗಿದ್ದೇನೆ" ಅನ್ನುತ್ತಾರೆ.
ಒಬ್ಬರು ನಿಮಗೆ ಒಂದು ಲೋಟ ನೀರು ತಂದುಕೊಡುವಾಗ ನೀವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳುತ್ತೀರಿ. ಆದರೆ ಅದನ್ನು ನಿಜವಾದ ಅರ್ಥದಲ್ಲಿ ಹೇಳಿರುವುದಿಲ್ಲ! ಒಂದು ಲೋಟ ನೀರು ಪಡೆದಾಗ ನೀವು, "ನಿಮಗೆ ಧನ್ಯವಾದಗಳು" ಎಂದು ಹೇಳಬಾರದೆಂದು ನಾನು ಹೇಳುತ್ತಿಲ್ಲ. ಆದರೆ, ಈ ಶಬ್ದಗಳು ನಿಜವಾದ ಭಾವವನ್ನು ಹೊಂದಿಲ್ಲವೆಂಬುದನ್ನು ನೀವು ಗಮನಿಸಬೇಕೆಂದು ನಾನು ಬಯಸುತ್ತೇನೆ. ಅವುಗಳು ಬಹುತೇಕ, ಒಬ್ಬಳು ಗಗನಸಖಿಯು ನಿಮಗೆ, "ನಿಮ್ಮ ದಿನವು ಶುಭವಾಗಿರಲಿ" ಎಂದು ಹಾರೈಸಿದಂತೆ.
ಹೇಗಾದರೂ, ಅದೇ ಶಬ್ದಗಳು ನಿಮಗೆ ಪ್ರಿಯವಾದ ಒಬ್ಬರ ಬಾಯಿಯಿಂದ ಬರುವಾಗ, ಅದು ಯಾವುದೋ ಕಂಪನಗಳನ್ನು ಹೊತ್ತು ತರುತ್ತದೆ ಮತ್ತು ಈ ಕಂಪನಗಳು ಶಬ್ದಗಳಿಗಿಂತ ಜಾಸ್ತಿ ತಿಳಿಯಪಡಿಸುತ್ತವೆ.
ನಮ್ಮಲ್ಲಿ ಧನಾತ್ಮಕ ಕಂಪನಗಳಿವೆ; ಆದರೆ ನಾವು ಒತ್ತಡದಲ್ಲಿದ್ದರೆ ಮತ್ತು ದುಃಖಿತರಾಗಿದ್ದರೆ, ನಾವು ಋಣಾತ್ಮಕ ಕಂಪನಗಳನ್ನು ಹೊರಸೂಸುತ್ತೇವೆ.
ಯಾವುದೇ ಕಾರಣವಿಲ್ಲದೆಯೇ ನಿಮಗೆ ಕೆಲವು ಜನರಿಂದ ತಪ್ಪಿಸಿಕೊಳ್ಳಬೇಕೆಂದು ಅನ್ನಿಸುತ್ತದೆ, ಇದನ್ನು ನೀವು ಗಮನಿಸಿದ್ದೀರಾ? ಮತ್ತೆ ಕೆಲವೊಮ್ಮೆ, ಯಾವುದೇ ಸ್ಪಷ್ಟ ಕಾರಣವಿಲ್ಲದೇ, ಬೇರೊಬ್ಬರೊಂದಿಗೆ ನಿಮಗೆ ಬಹಳ ಹಿತವೆನಿಸುತ್ತದೆ. ಇದು ಕಂಪನಗಳಿಂದಾಗಿ.
ಶಾಲೆಯಲ್ಲಾಗಲೀ ಮನೆಯಲ್ಲಾಗಲೀ, ನಮ್ಮ ಕಂಪನಗಳನ್ನು ಧನಾತ್ಮಕವಾಗಿಸುವುದು ಹೇಗೆಂದು ನಮಗೆ ಯಾರೂ ಕಲಿಸಿಲ್ಲ.
ನಿಮಗೆ ನಕಾರಾತ್ಮಕತೆಯ ಅನುಭವವಾಗುತ್ತಿರುವುದಾದರೆ, ನಿಮ್ಮೊಳಗಿನ ಆ ಋಣಾತ್ಮಕ ಕಂಪನಗಳೊಂದಿಗೆ ನೀವು ಜೀವಿಸುತ್ತೀರಿ. ನೀವು ಖಿನ್ನತೆಗೊಳಗಾಗಿರುವುದಾದರೆ, ಕೋಪ ಅಥವಾ ದುಃಖಗೊಂಡಿರುವುದಾದರೆ, ಈ ಭಾವನೆಗಳನ್ನು ನೀವು ನಿಮ್ಮೊಂದಿಗೆ ಒಯ್ಯುತ್ತೀರಿ. ಇದು ಯಾಕೆಂದರೆ, ಈ ಮನಸ್ಸನ್ನು ನಿರ್ವಹಿಸುವುದು ಹೇಗೆಂಬುದನ್ನು ಅಥವಾ ನಮ್ಮ ಕಂಪನವನ್ನು ಬಹಳ ಧನಾತ್ಮಕ ಮತ್ತು ಶೋಭೆಯುಳ್ಳದ್ದಾಗಿ ಬದಲಾಯಿಸುವುದು ಹೇಗೆಂಬುದನ್ನು ಯಾರೂ ನಮಗೆ ಹೇಳಿಲ್ಲ. ಇಲ್ಲಿಯೇ ಆರ್ಟ್ ಆಫ್ ಲಿವಿಂಗ್ ಆವಶ್ಯಕವಾಗಿರುವುದು. ಋಣಾತ್ಮಕತೆಯನ್ನು ಧನಾತ್ಮಕತೆಯಾಗಿ ಬದಲಾಯಿಸುವುದು ಹೇಗೆಂಬುದನ್ನು ಅದು ನಮಗೆ ಕಲಿಸುತ್ತದೆ. ಇದು, ಕೆಲವು ಅಭ್ಯಾಸಗಳ ಮೂಲಕ; ನಮ್ಮ ಉಸಿರು, ಮನಸ್ಸು, ಎಚ್ಚರಿಕೆ, ಬುದ್ಧಿಗಳನ್ನು ಬಳಸುವುದರ ಮೂಲಕ ಸಾಧ್ಯ.
ಸರಿ, ಈಗ ನಾನು ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ನೀವು ಬಯಸುವಿರಿ?

(ಸಭಿಕರು: ಸೇವೆ; ಶಾಂತಿ; ಪ್ರೇಮ; ಸರಿಯಾದ ನಿರ್ಧಾರಗಳನ್ನು ಮಾಡುವುದು; ಅಂತಃಸ್ಫುರಣೆಯನ್ನು ಹೆಚ್ಚಿಸುವುದು; ಅಪರಾಧಿ ಪ್ರಜ್ಞೆ; ಮೋಹ; ವಿಶ್ರಾಮ; ಸಮಯ; ಕ್ಷಮಾಪಣೆ; ಭಯ; ಕರ್ಮ; ಬಯಕೆಗಳು; ಏಕತೆ; ವಿಶ್ವಾಸ; ಸಂತೋಷ; ಗುರು; ಶಿಕ್ಷಣ; ಪ್ರಕೃತಿ; ಪ್ರಾಮಾಣಿಕತೆ; ಸಾವು; ಧ್ಯಾನ; ಜ್ಞಾನ.)

ನನಗೆ ಹೇಳಿ, ನೀವು ನಿಜವಾಗಿಯೂ ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯಲು ಬಯಸುವಿರಾ? ನೀವೊಂದು ಗ್ರಂಥಾಲಯಕ್ಕೆ ಹೋದರೆ ಅಥವಾ ಗೂಗಲ್ ಮಾಡಿದರೆ, ಈ ವಿಷಯಗಳ ಬಗ್ಗೆ ನಿಮಗೆ ಎಲ್ಲಾ ಮಾಹಿತಿಯು ಸಿಗುವುದು.
ಈ ವಿಷಯಗಳಲ್ಲಿ ಯಾವುದರ ಬಗ್ಗೆಯೂ ನನಗೆ ಏನೂ ತಿಳಿದಿಲ್ಲದಿದ್ದರೆ? ನಾವು ಯಾವ ವಿಷಯದ ಬಗ್ಗೆ ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ?
ನಾಲ್ಕು ಮಟ್ಟಗಳ ಸಂಪರ್ಕವಿದೆಯೆಂಬುದು ನಿಮಗೆ ಗೊತ್ತಾ?
ಮೊದಲಿಗೆ, ತಲೆಯಿಂದ ತಲೆಗಿರುವ ಸಂಪರ್ಕವಿದೆ. ಎರಡನೆಯದಾಗಿರುವ ಸಂಪರ್ಕವೆಂದರೆ ತಲೆಯಿಂದ ಹೃದಯಕ್ಕಿರುವುದು. ಮೂರನೆಯದು ಹೃದಯದಿಂದ ಹೃದಯಕ್ಕಿರುವ ಸಂಪರ್ಕ, ಮತ್ತು ನಾಲ್ಕನೆಯದು ಆತ್ಮದಿಂದ ಆತ್ಮಕ್ಕಿರುವ ಸಂಪರ್ಕ.
ನೀವು ಗಮನಿಸಿದ್ದೀರಾ, ಕೆಲವೊಮ್ಮೆ, ಇಬ್ಬರು ವ್ಯಕ್ತಿಗಳು ಒಂದೇ ವಿಷಯವನ್ನು ಹೇಳುತ್ತಿರುತ್ತಾರೆ, ಆದರೆ ಅವರು ಮಾತನಾಡುವಾಗ, ಅವರು ವಾದಿಸುತ್ತಿರುವರೇನೋ ಎಂಬಂತೆ ತೋರುತ್ತದೆ. ಇದಾಗುವುದು ಯಾಕೆಂದರೆ, ಹೃದಯದಿಂದ ಬರುವ ಭಾವನೆಯ ಅಂಶ ಅಥವಾ ನಂಬಿಕೆ ಅಲ್ಲಿಲ್ಲ.
ನಾವು ನಮ್ಮ ಮಾತಿಗಿಂತ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಯಪಡಿಸುತ್ತೇವೆ. ನಾನು ಕುಳಿತುಕೊಂಡು ಪ್ರೇಮದ ಬಗ್ಗೆ ಒಂದು ಘಂಟೆಯ ಕಾಲ ಮಾತನಾಡಬಹುದು, ಆದರೆ ಕೇವಲ ಒಂದು ನೋಟವು ಆ ಒಂದು ಘಂಟೆಯ ಮಾತಿಗಿಂತ ಹೆಚ್ಚಿನದನ್ನು ತಿಳಿಯಪಡಿಸುವುದು. ಅಲ್ಲವೇ?
ನೀವು ಸುಮ್ಮನೇ ಮಕ್ಕಳ ಕಣ್ಣಿನೊಳಗೆ ನೋಡಿ, ಮತ್ತು ಅವುಗಳು ಪ್ರೇಮವನ್ನು ತಿಳಿಯಪಡಿಸುತ್ತವೆ. ನಿಮ್ಮ ಮನೆಯಲ್ಲಿರುವ ಒಂದು ನಾಯಿಮರಿ, ಒಂದು ನಾಯಿ ಸುತ್ತು ಸುತ್ತು ತಿರುಗುತ್ತದೆ ಮತ್ತು ತನ್ನೆಲ್ಲಾ ಪ್ರೀತಿಯನ್ನು ತಿಳಿಯಪಡಿಸುತ್ತದೆ. "ಓ, ನಾನು ನಿನ್ನನ್ನು ಬಹಳಷ್ಟು ಪ್ರೀತಿಸುತ್ತೇನೆ" ಎಂದು ಅದು ಹೇಳಬೇಕಾಗಿಲ್ಲ. ಒಂದು ಮಗು ಕೂಡಾ, "ಓ ಅಮ್ಮಾ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಬೇಕಾಗಿಲ್ಲ. ವಾಸ್ತವವಾಗಿ, ಪ್ರೇಮವನ್ನು ಶಬ್ದಗಳಲ್ಲಿ ಹೇಳುವುದು, ಪ್ರೇಮವನ್ನು ಕಡಿಮೆ ಮಾಡುತ್ತದೆ.
ಸಂತೋಷವಾಗಿರುವುದು ಹೇಗೆ ಎಂಬುದರ ಬಗ್ಗೆ ಮೂರು ಘಂಟೆಗಳ ಒಂದು ಉಪನ್ಯಾಸವನ್ನು ನೀಡಿದ ಒಬ್ಬರ ಬಗ್ಗೆ ನಾನು ಕೇಳಿದ್ದೆ. ಉಪನ್ಯಾಸದ ಕೊನೆಯಲ್ಲಿ, ಎಲ್ಲರೂ ಬಹಳ ಬೇಸರಗೊಂಡಿದ್ದರು, ಯಾಕೆಂದರೆ ಅವರು ಅತಿಯಾಗಿ ಮಾತನಾಡಿದ್ದರು. ಅವರು ಒಂದು ಘಂಟೆ ಮಾತನಾಡಬೇಕಾಗಿತ್ತು, ಆದರೆ ಅವರು ಮೂರು ಘಂಟೆಗಳ ವರೆಗೆ ಮಾತನಾಡಿದ್ದರು!
ವಿಷಯವೆಂದರೆ - ನಮ್ಮೆಲ್ಲರೊಳಗೆ ಆಳದಲ್ಲಿ ಏನೋ ಇದೆ. ನಮ್ಮೊಳಗಿರುವ ಈ ಮಗ್ಗುಲಿನೊಂದಿಗೆ ನಾವು ಸಂಪರ್ಕದಲ್ಲಿರುವಾಗ ನಾವು ವಿಶ್ವಾಸಾರ್ಹ, ಸಂತೋಷ ಮತ್ತು ಆನಂದಭರಿತರಾಗಿರುತ್ತೇವೆ. ನಮ್ಮೊಳಗೆ ಧನ್ಯತೆಯ ಒಂದು ಭಾವವಿರುತ್ತದೆ. ಧ್ಯಾನವೆಂದರೆ ನಮ್ಮೊಳಗಿರುವ ಆ ಆಳವಾದ ಮಗ್ಗುಲಿನ ಕಡೆಗೆ ಗಮನ ಹರಿಸುವುದು.
ನೋಡಿ, ಜೀವನವು ಬಹಳ ಚಿಕ್ಕದು; ೭೦-೮೦ ವರ್ಷಗಳ ಜೀವನವು ಬಹಳ ವೇಗವಾಗಿ ಹೋಗುತ್ತದೆ, ಅಲ್ಲವೇ? ಅರ್ಧದಷ್ಟು ಸಮಯವನ್ನು ನಾವು ನಿದ್ರಿಸುವುದರಲ್ಲಿ ಕಳೆಯುತ್ತೇವೆ ಮತ್ತು ಉಳಿದ ಸಮಯವನ್ನು ನಾವು ಬಚ್ಚಲುಮನೆಯಲ್ಲಿ, ಹೋಟೇಲುಗಳಲ್ಲಿ, ಟ್ರಾಫಿಕ್ ಜಾಮುಗಳಲ್ಲಿ, ದೂರುವುದರಲ್ಲಿ ಅಥವಾ ಚಿಂತಿಸುವುದರಲ್ಲಿ ಕಳೆಯುತ್ತೇವೆ; ಮತ್ತು ಜೀವನವು ಮುಗಿದುಬಿಡುತ್ತದೆ! ಅದಕ್ಕಾಗಿಯೇ ನಾನು ಹೇಳಿದುದು, ನಾವು ಈ ಆರು ವಿಷಯಗಳನ್ನು ಮರೆಯಬಾರದು. ಬೌದ್ಧಿಕವಾಗಿ ಉತ್ತೇಜಿಸುವ ತತ್ವಶಾಸ್ತ್ರ, ಸ್ವಲ್ಪ ಸಂಗೀತ, ಒಂದು ಸ್ವಲ್ಪ ನೃತ್ಯ, ವಿಜ್ಞಾನ ಮತ್ತು ಸೇವೆಗಳಲ್ಲಿ ಸಮಯವನ್ನು ಕಳೆಯಿರಿ.
ಹಾಗಾದರೆ ನಾನು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೀನಾ? ಯಾವುದಾದರೂ ವಿಷಯ ಉಳಿದಿದೆಯಾ?

(ಸಭಿಕರು: ಸಾವು)

ಸಾವು ಅನಿವಾರ್ಯ. ಸಾವೆಂದರೆ ಮನಸ್ಸು ತನ್ನನ್ನು ತಾನು ಶರೀರದಿಂದ ಬೇರ್ಪಡಿಸಿಕೊಳ್ಳುವುದು ಮತ್ತು ಶರೀರ ಹಾಗೂ ಮನಸ್ಸಿನ ನಡುವಿನ ಕೊಂಡಿ; ಅಂದರೆ ಉಸಿರು ನಿಂತುಹೋಗುವುದಾಗಿದೆ. ಹೇಗಾದರೂ, ಥರ್ಮೋಡೈನಮಿಕ್ಸ್ ನಿಯಮದ ಪ್ರಕಾರ, ಪದಾರ್ಥ ಮತ್ತು ಚೈತನ್ಯವನ್ನು ಯಾವತ್ತೂ ನಾಶಪಡಿಸಲು ಸಾಧ್ಯವಿಲ್ಲವೆಂಬುದು ನಿಮಗೆ ಗೊತ್ತು. ಮನಸ್ಸು ಚೈತನ್ಯವಾಗಿದೆ, ಅದು ನಾಶವಾಗುವುದಿಲ್ಲ. ಆದುದರಿಂದ, ನೀವು ಶರೀರದಿಂದ ಬೇರೆಯಾದರೂ ಕೂಡಾ, ನೀವು ಇನ್ನೂ ಅಲ್ಲಿರುವಿರಿ. ನೀವು ಧ್ಯಾನದಲ್ಲಿ ಇನ್ನೂ ಹೆಚ್ಚು ಆಳಕ್ಕೆ ಹೋದ ಹಾಗೆ ನೀವು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಆಗ ನಿಮಗೆ, ನಿಮಗೆ ಸಾವೇ ಇಲ್ಲವೆಂಬುದು ಅರ್ಥವಾಗುತ್ತದೆ. ನೀವು ಕೇವಲ ಒಂದು ಶರೀರದಿಂದ ಇನ್ನೊಂದಕ್ಕೆ ಸಾಗುತ್ತಿರುತ್ತೀರಿ. ನಿಮ್ಮ ಸಾವಿನ ಭಯವು ದೂರವಾಗುತ್ತದೆ; ಅದು ಮಾಯವಾಗುತ್ತದೆ.

(ಸಭಿಕರು: ಮೋಹ )

ನೀವು ಮೋಹವನ್ನು ತೊಡೆದುಹಾಕಲು ಯಾಕೆ ಬಯಸುವಿರಿ? ಯಾಕೆಂದರೆ ಅದು ನಿಮಗೆ ನೋವನ್ನು ಕೊಡುತ್ತದೆ, ಸರಿಯಾ? ನೀವು ನಿಮ್ಮ ಮೋಹವನ್ನು ಯಾಕೆ ಇನ್ನೂ ದೊಡ್ಡದಾಗಿಸಬಾರದು? ನೀವು ನಿಮ್ಮ ಮಕ್ಕಳ, ಹೆತ್ತವರ, ಸಂಗಾತಿಯ, ಮಿತ್ರರ ಕಡೆಗೆ ಮೋಹಕ್ಕೊಳಗಾಗುವುದು ನಿಮಗೆ ಸ್ವಾಭಾವಿಕವಾದುದು; ಅದರಲ್ಲೇನೂ ತಪ್ಪಿಲ್ಲ. ಹೀಗಿದ್ದರೂ, ನೀವು ಸ್ವಾಮಿತ್ವ ಸ್ಥಾಪಿಸಬಾರದು. ನಿಮ್ಮ ಮೋಹವು ಸ್ವಾಮಿತ್ವವಾಗುವಾಗ, ನೀವು ಸಂಬಂಧಪಟ್ಟ ವ್ಯಕ್ತಿಗೆ ತೊಂದರೆ ಕೊಡುತ್ತಿರುತ್ತೀರಿ ಮತ್ತು ನೀವು ನಿಮಗೆ ಕೂಡಾ ತೊಂದರೆಯನ್ನು ತಂದುಕೊಳ್ಳಬಹುದು. ಆದುದರಿಂದ, ನಿಮ್ಮ ಮೋಹವನ್ನು ವಿಶಾಲಗೊಳಿಸಿ. ನೀವು ನಿಮ್ಮ ಮಕ್ಕಳ ಕಡೆಗೆ ಮೋಹಗೊಂಡಿರುವಂತೆಯೇ, ನೀವು ಇತರ ಮಕ್ಕಳ ಕಡೆಗೂ ಮೋಹಗೊಂಡಿರಬೇಕು. ಅದು ಒಂದೇ ಪ್ರಮಾಣದಲ್ಲಿರದಿದ್ದರೂ, ಅದು ಕನಿಷ್ಠಪಕ್ಷ ೫೦% ಅಥವಾ ಹೆಚ್ಚಿರಬಹುದು.

(ಸಭಿಕರು: ಸೇವೆ )

ಸೇವೆಯು ಆವಶ್ಯಕ. ನಾವೆಲ್ಲರೂ ಜೀವನದಲ್ಲಿ ಸ್ವಲ್ಪ ಸೇವೆಯನ್ನು ಮಾಡಬೇಕು. ಇತರರಿಗೆ ಸಹಾಯ ಮಾಡಲು, ಆನಂದ ತರಲು ಮತ್ತು ಇತರರಲ್ಲಿ ಒಂದು ನಗುವನ್ನು ತರಲು ನಮ್ಮಿಂದ ಏನೇನು ಸಾಧ್ಯವೋ ಅದನ್ನು ನಾವು ಮಾಡಬೇಕು.
ಸೇವೆಯು ನಿಮಗೆ ಅಪಾರ ತೃಪ್ತಿಯನ್ನು ತರುತ್ತದೆ. ನೀವು ಸೇವೆ ಮಾಡುವಾಗ, ನಿಮ್ಮ ಮೋಹವು ನಿಮ್ಮಲ್ಲಿ ದುಃಖವನ್ನು ಉಂಟುಮಾಡುವುದಿಲ್ಲ. ಒಬ್ಬರು ಹೆತ್ತವರಾಗಿ, ನೀವು ನಿಮ್ಮ ಮಕ್ಕಳ ಸೇವೆ ಮಾಡಲು ಇರುವಿರಿ; ಮಕ್ಕಳಾಗಿ, ನೀವು ನಿಮ್ಮ ಹೆತ್ತವರ ಸೇವೆ ಮಾಡಲು ಇರುವಿರಿ; ಒಬ್ಬರು ಸಂಗಾತಿಯಾಗಿ, ನೀವು ಪರಸ್ಪರರನ್ನು ಆಧರಿಸಲು ಇರುವಿರಿ. ಈ ಭಾವನೆಯೊಂದಿಗೆ, ಈ ಮನೋಭಾವದೊಂದಿಗೆ ನೀವು ಹೋಗುವಾಗ, ಜೀವನವು ಒಂದು ಬೇರೆಯ ಆಯಾಮವನ್ನು ತೆಗೆದುಕೊಳ್ಳುತ್ತದೆ.

(ಸಭಿಕರು: ಧ್ಯಾನ )

ಧ್ಯಾನವು ನಿಮ್ಮ ಶರೀರವನ್ನು ಬಲಪಡಿಸುವುದು. ಅದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಸುತ್ತದೆ, ನಿಮಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅದು ನಿಮ್ಮ ಮನಸ್ಸು ಬಹಳ ಕೇಂದ್ರಿತವಾಗಿರುವಂತೆ ಮಾಡುತ್ತದೆ ಮತ್ತು ಬುದ್ಧಿಯು ಬಹಳ ತೀಕ್ಷ್ಣವಾಗಲು ಸಹಾಯ ಮಾಡುತ್ತದೆ. ಅದು ನಿಮ್ಮ ಭಾವನೆಗಳು ಬಹಳಷ್ಟು ಒಳ್ಳೆಯದಾಗುವಂತೆ ಮಾಡುತ್ತದೆ, ನಿಮಗೆ ಒಳಗಿನಿಂದ ಬಹಳ ಚೆನ್ನಾಗಿ ಅನಿಸುತ್ತದೆ ಮತ್ತು ನಿಮ್ಮ ಕಂಪನಗಳು ಬಹಳ ಧನಾತ್ಮಕವಾಗುತ್ತವೆ. ಇವುಗಳು ಲಾಭಗಳಲ್ಲಿ ಕೆಲವು. ಇನ್ನೂ ಹಲವಾರಿವೆ. ಮತ್ತೆ, ಧ್ಯಾನದೊಂದಿಗೆ ಒಳ್ಳೆಯ ಅದೃಷ್ಟ ಕೂಡಾ ಬರುತ್ತದೆ.

ಪ್ರಶ್ನೆ: ಶ್ರೀ ಶ್ರೀಯವರೆ, ದಯವಿಟ್ಟು ನಮಗೆ ಕ್ಷಮೆಯ ಬಗ್ಗೆ ತಿಳಿಸಿ. ನಾವು ಕ್ಷಮಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕ್ಷಮಿಸಬೇಡ, ಅದನ್ನು ಹಿಡಿದಿಟ್ಟುಕೋ! ಯಾರಿಗೆ ನಷ್ಟ? ಸಂಭವಿಸಿದ ಒಂದು ಘಟನೆ, ಅದು ಸಂಭವಿಸಿತು! ಅದು ನಿನ್ನ ತಪ್ಪಿದ್ದಿರಲಿ ಅಥವಾ ಬೇರೆ ಯಾರದ್ದೋ ತಪ್ಪಿದ್ದಿರಲಿ, ಅದು ಆಗಿ ಹೋಯಿತು. ಹೇಗಾದರೂ, ನೀನದನ್ನು ಹಿಡಿದಿಟ್ಟುಕೊಂಡಿದ್ದರೆ, ಆಗ ನೀನು ದುಃಖಿಸುತ್ತಿರುವೆ.
ನಿನ್ನ ಮೂಲಕ ಒಂದು ತಪ್ಪು ನಡೆಯುವ ಒಂದು ಸ್ಥಾನದಲ್ಲಿ ನೀನಿರುವುದಾಗಿ ಕಲ್ಪಿಸಿಕೋ. ಬೇರೊಬ್ಬರು ನಿನ್ನನ್ನು ಕ್ಷಮಿಸದೇ ಇದ್ದರೆ, ನಿನ್ನನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ನಿನ್ನ ಜೀವಮಾನವಿಡೀ ನಿನ್ನನ್ನು ಹೊಣೆಗಾರನನ್ನಾಗಿಸಿದರೆ, ನಿನಗೆ ಹೇಗನ್ನಿಸಬಹುದು? ನಿನಗೆ ಬಹಳ ಕೆಟ್ಟದನ್ನಿಸಬಹುದು, ಅಲ್ಲವೇ?
ನೀನು ಒಬ್ಬ ವ್ಯಕ್ತಿಯನ್ನು ಕ್ಷಮಿಸುವುದು ಅವರಿಗಾಗಿಯಲ್ಲ, ಆದರೆ ನಿನ್ನ ಸ್ವಂತ ಮನಸ್ಸಿಗಾಗಿ, ನೀನು ನಿನ್ನ ಮನಸ್ಸನ್ನು ರಕ್ಷಿಸಲು ಸಾಧ್ಯವಾಗುವುದಕ್ಕಾಗಿ. ನೋಡು, ಜೀವನದಲ್ಲಿ, ಕೆಲವು ಹಿತಕರ ವಿಷಯಗಳು ನಡೆಯುತ್ತವೆ, ಕೆಲವು ಅಹಿತಕರ ವಿಷಯಗಳು ನಡೆಯುತ್ತವೆ. ಕೆಲವು ವಿಷಯಗಳು ಆಗಬೇಕೆಂದು ನಾವು ಬಯಸುತ್ತೇವೆ, ಕೆಲವು ವಿಷಯಗಳು ಜೀವನದಲ್ಲಿ ಆಗಬೇಕೆಂದು ನಾವು ಬಯಸುವುದಿಲ್ಲ. ಏನೆಲ್ಲಾ ಸಂಭವಿಸಿತೋ, ಅದು ಸಂಭವಿಸಿತು; ಮುಗಿಯಿತು! ನೀನದನ್ನು ಹಿಂದಕ್ಕೆ ಹಾಕಿ ಮುಂದೆ ಸಾಗು - ಅದು ಬಹಳ ಮುಖ್ಯವಾದುದು. ನಿನ್ನ ಸ್ವಂತ ಮನಸ್ಸನ್ನು ರಕ್ಷಿಸುವುದಕ್ಕಾಗಿ ಮಾತ್ರ ಅದನ್ನು ಮಾಡು.
ವಾಸ್ತವವಾಗಿ, ನೀನೊಂದು ವಿಶಾಲ ದೃಷ್ಟಿಕೋನದಿಂದ ನೋಡಿದರೆ, ಒಂದು ಪರಿಸ್ಥಿತಿಯಲ್ಲಿ  ಪ್ರತಿಯೊಬ್ಬ ಅಪರಾಧಿಯೂ ಒಬ್ಬ ಅಜ್ಞಾನದ ಬಲಿಪಶುವಾಗಿದ್ದಾನೆ ಎಂಬುದು ನಿನಗೆ ಕಂಡುಬರುತ್ತದೆ. ವಿಷಯಗಳನ್ನು ನೀನು ಈ ದೃಷ್ಟಿಯಿಂದ ನೋಡುವಾಗ, ನೀನು ತನ್ನಿಂತಾನೇ ಸಹಾನುಭೂತಿಯನ್ನು ಹೊಂದುವೆ. ಸೆರೆಮನೆಗಳಲ್ಲಿ ನಾವು ಕಲಿಸುವಾಗ ಇದನ್ನು ನಾವು ಆ ಖೈದಿಗಳಲ್ಲಿ ನೋಡಿದ್ದೇವೆ. ಸೆರೆಮನೆಗಳಲ್ಲಿ ಖಂಡನೆಗೊಳಗಾಗಿರುವ  ಈ ಜನರು ಒಳ್ಳೆಯವರು, ಆದರೆ ಅಜ್ಞಾನದಿಂದಾಗಿ, ಅರಿವಿನ ಕೊರತೆಯಿಂದಾಗಿ, ಅವರೊಂದು ತಪ್ಪನ್ನು ಮಾಡಿದರು.
ನಿಮ್ಮ ಜೀವನವನ್ನು ಹೆಚ್ಚು ಶ್ರೀಮಂತವಾಗಿಸಲು, ನೀವು ಈ ಬೇರೆ ಬೇರೆ ಜಾಗಗಳಲ್ಲಿ ಐದು ದಿನಗಳನ್ನು ಕಳೆಯಬೇಕೆಂದು ನಾನು ಸಲಹೆ ನೀಡುತ್ತೇನೆ:
೧. ಮಕ್ಕಳೊಂದಿಗೆ ಶಾಲೆಯಲ್ಲಿ
೨. ಶಾಲೆಯಲ್ಲಿ ಒಬ್ಬ ಶಿಕ್ಷಕರಾಗಿ. ನೀವು ಮಕ್ಕಳಿಗೆ ಕಲಿಸುವಾಗ, ಕಲಿಸುವುದೆಂದರೆ ಏನು ಎಂಬುದು ನಿಮಗೆ ತಿಳಿಯುತ್ತದೆ. ಒಬ್ಬ ಶಿಕ್ಷಕರ ಪಾತ್ರವು ನಿಮ್ಮನ್ನು ಬಹಳ ಶ್ರೀಮಂತರನ್ನಾಗಿ ಮಾಡುತ್ತದೆ.
೩. ಒಂದು ಮಾನಸಿಕ ಆಸ್ಪತ್ರೆಯಲ್ಲಿ. ನೀವು ಮಾನಸಿಕವಾಗಿ ಅಸ್ವಸ್ಥರಾದ ಜನರೊಂದಿಗಿರುವಾಗ, ಅದು ಕೂಡಾ ಹೊರಗಿನ ಪ್ರಪಂಚದಲ್ಲಿರುವುದಕ್ಕೆ ಸಮಾನವಾದುದು ಎಂಬುದು ನಿಮಗೆ ತಿಳಿಯುತ್ತದೆ. ಜನರು ತಮಗೇನು ಬೇಕೋ ಅದನ್ನು ಸುಮ್ಮನೇ ಹೇಳಿಬಿಡುತ್ತಾರೆ. ಒಮ್ಮೆ ನಿಮಗೆ ಈ ಅನುಭವವಾದ ಮೇಲೆ, ಯಾರಿಗೂ ನಿಮ್ಮನ್ನು ದುಃಖಪಡಿಸಲು ಸಾಧ್ಯವಿಲ್ಲ.
೪. ಒಂದು ಸೆರೆಮನೆಯಲ್ಲಿ. ನೀವು ಆ ಖೈದಿಗಳೊಂದಿಗಿರುವಾಗ, ಒಬ್ಬ ನಿರಪರಾಧಿಯ ನೋವು ಮತ್ತು ದುಃಖ ನಿಮಗೆ ಅರ್ಥವಾಗುವುದು.
೫. ಒಂದು ಹೊಲದಲ್ಲಿ. ನೀವು ರೈತರೊಂದಿಗಿರುವಾಗ; ಮಣ್ಣು ಅಗೆದುಕೊಂಡು, ಬೀಜಗಳನ್ನು ಬಿತ್ತಿಕೊಂಡು, ಕೆಸರಿನಲ್ಲಿ ಕೆಲಸ ಮಾಡಿಕೊಂಡು, ಕೇವಲ ಅಲ್ಲಿರುವುದು, ನಿಮ್ಮನ್ನು ಯಾವುದೋ ತಿಳಿಯದ ರೀತಿಯಲ್ಲಿ ಶ್ರೀಮಂತವಾಗಿಸುತ್ತದೆ.
ಮತ್ತೆ ಒಂದು ದಿನ, ನೀವು ಕೇವಲ ನೀವಾಗಿಯೇ, ಪ್ರಕೃತಿಯೊಂದಿಗೆ ಕಳೆಯಬೇಕು.

ಪ್ರಶ್ನೆ: ಗುರುದೇವ, ನಾನು ಸಿಕ್ಕಿಹಾಕಿಕೊಂಡಿರುವೆನೆಂದು ನನಗನ್ನಿಸುತ್ತದೆ. ಆರ್ಟ್ ಆಫ್ ಲಿವಿಂಗಿನ ಜ್ಞಾನವನ್ನು ಹರಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ನಿನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ನೀನು ಮಾಡಬೇಕಾಗಿಲ್ಲ. ನಿನಗೆ ಮಾಡಲು ಸಾಧ್ಯವಾಗದೇ ಇರುವುದನ್ನು ನೀನು ಮಾಡಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ನಿನಗೆ ಯಾವುದನ್ನೆಲ್ಲಾ ಮಾಡಲು ಸಾಧ್ಯವಿದೆಯೋ, ನೀನು ಮಾಡಬೇಕು. ಇದು ಯಾಕೆಂದರೆ, ನಾವು ಸೇವೆ ಮಾಡುವಾಗ, ಅದು ಇತರ ಜನರಿಗೆ ಒಳ್ಳೆಯದನ್ನು ಮಾಡುತ್ತದೆ, ಮತ್ತು ಅದು ನಮಗೆ ಅಪಾರ ತೃಪ್ತಿಯನ್ನು ಕೂಡಾ ತರುತ್ತದೆ.
ಸರಿ, ನೀವು ಹೋಗುವ ಮೊದಲು, ನಿಮ್ಮೆಲ್ಲಾ ಚಿಂತೆಗಳನ್ನು ನೀವು ನನಗೆ ಕೊಡಬೇಕೆಂದು ನಾನು ಬಯಸುತ್ತೇನೆ. ನೀವೊಂದು ದೊಡ್ಡ ನಗುವಿನೊಂದಿಗೆ ಮನೆಗೆ ಹೋಗಬೇಕೆಂದು ನಾನು ಬಯಸುತ್ತೇನೆ. ಯಾವಾಗೆಲ್ಲಾ ನೀವು ಖಿನ್ನರಾಗಿರುವಿರೆಂದು, ದುಃಖದಲ್ಲಿರುವಿರೆಂದು, ಸಂತೋಷವಾಗಿ ಅಥವಾ ಚೆನ್ನಾಗಿಲ್ಲವೆಂದು ನಿಮಗೆ ಅನ್ನಿಸುವುದೋ, ನೀವು ಒಬ್ಬಂಟಿಯಲ್ಲವೆಂಬುದನ್ನು ನೆನಪಿಸಿಕೊಳ್ಳಿ! ನಾನು ನಿಮ್ಮೊಂದಿಗಿದ್ದೇನೆ! ಮತ್ತು ಇಡೀ ಆರ್ಟ್ ಆಫ್ ಲಿವಿಂಗ್ ಕುಟುಂಬ ನಿಮ್ಮೊಂದಿಗಿದೆ.
ನನ್ನ ಕನಸೆಂದರೆ, ಎಲ್ಲರನ್ನೂ ಒಂದು ದೊಡ್ಡ ನಗುವಿನೊಂದಿಗೆ ನೋಡುವುದು ಮತ್ತು ಸಂಪೂರ್ಣ ಪ್ರಪಂಚವನ್ನು ಒಂದು ಕುಟುಂಬವಾಗಿ ನೋಡುವುದು. ಒಂದು ಹಿಂಸಾ-ಮುಕ್ತ, ಒತ್ತಡ-ಮುಕ್ತ ಮತ್ತು ಸಂತೋಷವಾದ ಸಮಾಜವನ್ನು ಮಾಡಲು ನೀವೆಲ್ಲರೂ ನನ್ನೊಂದಿಗೆ ಈ ಕನಸಿನಲ್ಲಿ ಸೇರಿಕೊಳ್ಳಬೇಕೆಂದು ನಾನು ಬಯಸುತ್ತೇನೆ.