ಮಂಗಳವಾರ, ಮಾರ್ಚ್ 19, 2013

ಆಗುವುದೆ೦ಬ ಛಲದಿ೦ದ ಮುನ್ನುಗ್ಗಿ

ಮಾರ್ಚ್ ೧೯, ೨೦೧೩
ಸ್ಪ್ಲಿಟ್, ಕ್ರೊಯೇಷಿಯಾ

ನಾವು, "ನಮಸ್ಕಾರ", "ಹಲೋ", "ನೀವು ಹೇಗಿದ್ದೀರಿ?", "ಸ್ವಾಗತ" ಎಂದು ಹೇಳುವ ಮೂಲಕ ಜನರೊಂದಿಗೆ ಹಲವಾರು ಕುಶಲೋಪರಿಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅದು ಬಹಳ ಮೇಲ್ನೋಟದ್ದು. ಅದು ನಿಜವಾಗಿ ನಿಮ್ಮ ಹೃದಯದಿಂದ ಬರುವುದಿಲ್ಲ. ನೀವೊಂದು ವಿಮಾನದಿಂದ ಕೆಳಗಿಳಿಯುವಾಗ ಗಗನಸಖಿಯು, "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುವುದರ ಮೂಲಕ ಹೇಗೆ ಅಭಿನಂದಿಸುವಳೋ ಅದೇ ರೀತಿ. ಅವಳದನ್ನು ನಿಜವಾದ ಮನಸ್ಸಿನಿಂದ ಹೇಳುವುದಿಲ್ಲ. ಹಲವಾರು ಸಾರಿ ನಾವು, "ಸ್ವಾಗತ", "ನಮಸ್ಕಾರ", "ಶುಭರಾತ್ರಿ", ಇದೆಲ್ಲವನ್ನೂ ಹೇಳುತ್ತೇವೆ, ಆದರೆ ಅದು ತನ್ನ ಹಿಂದೆ ಯಾವುದೇ ಭಾವನೆಯನ್ನು ಒಯ್ಯುವುದಿಲ್ಲ. ಹೀಗಾದರೂ, ಅದೇ ಶಬ್ದಗಳು ನಿಮ್ಮಲ್ಲಿಗೆ ನಿಮಗೆ ಬಹಳ ಹತ್ತಿರದ ಅಥವಾ ನಿಮಗೆ ಬಹಳ ಪ್ರಿಯವಾದವರಿಂದ ಬರುವಾಗ, ಅದು ಸ್ವಲ್ಪ ಕಂಪನಗಳನ್ನು, ಸ್ವಲ್ಪ ಭಾವನೆಯನ್ನು ತನ್ನ ಹಿಂದೆ ಒಯ್ಯುತ್ತದೆ. ನಿಮ್ಮ ಅಜ್ಜಿಯು ನಿಮ್ಮಲ್ಲಿ, "ನಿನ್ನ ದಿನವು ಶುಭವಾಗಿರಲಿ" ಎಂದು ಹೇಳುವಾಗ, ಅದು ಗಗನಸಖಿಯು "ನಿನ್ನ ದಿನವು ಶುಭವಾಗಿರಲಿ" ಎಂದು ಹೇಳುವಂತೆ ಅಲ್ಲ. ಅದರಲ್ಲಿ ಸ್ವಲ್ಪ ಭಾವನೆಗಳಿರುತ್ತವೆ, ಸ್ವಲ್ಪ ಕಂಪನಗಳಿರುತ್ತವೆ, ಅಲ್ಲವೇ?

ನಾವು ನಮ್ಮ ಜೀವನವನ್ನು ಮೇಲ್ನೋಟದ ಹಂತದಲ್ಲಿ ಜೀವಿಸಿದರೆ, ಜೀವನವು ಬಹಳ ಶುಷ್ಕವೂ ನಿರಾಸಕ್ತಿದಾಯಕವೂ ಆಗುತ್ತದೆ. ಆದರೂ, ನಾವು ನಮ್ಮ ಹೃದಯದಿಂದ ಪರಸ್ಪರರೊಂದಿಗೆ ಬೆರೆಯುವಾಗ, ಅಲ್ಲಿ ಸ್ವಲ್ಪ ನಿಷ್ಕಪಟತೆಯಿರುತ್ತದೆ. ಆ ನಿಷ್ಕಪಟತೆಯು ಜೀವನವನ್ನು ಹೆಚ್ಚು ಸುಂದರ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುತ್ತದೆ. ನೀವದನ್ನು ಎಲ್ಲಾ ಸಮಯದಲ್ಲೂ ಮಾಡಲು ಸಾಧ್ಯವಾಗದೇ ಇರಬಹುದೆಂಬುದು ನನಗೆ ಅರ್ಥವಾಗುತ್ತದೆ, ಆದರೆ ನೀವದನ್ನು ದೈನಂದಿನ ಜೀವನದಲ್ಲಿ ಸ್ವಲ್ಪ ಸಮಯವಾದರೂ ಮಾಡಬೇಕು. ನಮ್ಮ ಮಾನವ ಅಸ್ತಿತ್ವಕ್ಕೆ ಬಹಳ ಕೇಂದ್ರವಾಗಿರುವ ಈ ಮಗ್ಗುಲಿನ ಕಡೆಗೆ ನಾವು ನೋಡುವಾಗ, ನಮ್ಮಲ್ಲಿ ಮತ್ತು ನಮ್ಮ ಪರಿಸರದಲ್ಲಿ ಒಂದು ದೊಡ್ಡ ಬದಲಾವಣೆಯಾಗುತ್ತದೆ.

ಎಲ್ಲವೂ ಆಗುವುದು ಕಂಪನಗಳ ಕಾರಣದಿಂದ. ನಾವು ಎಲ್ಲಾ ಸಮಯದಲ್ಲೂ ಕಂಪನಗಳನ್ನು ಹೊರಸೂಸುತ್ತಿರುತ್ತೇವೆ. ನಮ್ಮ ಕಂಪನಗಳು ಧನಾತ್ಮಕವಾಗಿದ್ದರೆ, ಆಗ ನಮ್ಮ ಸುತ್ತಲಿರುವ ಜನರು ಸಂತೋಷವಾಗಿರುತ್ತಾರೆ. ನಾವು ಸಂತೋಷವಾಗಿದ್ದರೆ, ಆಗ ಎಲ್ಲವೂ ನಮ್ಮ ಬಯಕೆಗನುಸಾರವಾಗಿ ನಡೆಯುತ್ತದೆ. ನಮ್ಮ ಕಂಪನಗಳು ಋಣಾತ್ಮಕವಾಗಿದ್ದರೆ, ಯಾರೂ ನಮ್ಮೊಂದಿಗೆ ವ್ಯವಹರಿಸಲು ಬಯಸುವುದಿಲ್ಲ ಮತ್ತು ನಾವು ನಮ್ಮಲ್ಲಿಯೇ ಸಂತೋಷವಾಗಿರುವುದಿಲ್ಲ.

ನಾವು ನಮ್ಮ ಕಂಪನಗಳನ್ನು ಧನಾತ್ಮಕವಾಗಿ ಮಾಡಿಕೊಳ್ಳಲು ಒಂದು ದಾರಿಯಿದೆ ಮತ್ತು ಅದುವೇ, ಉಸಿರಾಟದ ತಂತ್ರಗಳು, ಧ್ಯಾನ, ಜ್ಞಾನ ಹಾಗೂ ನಮ್ಮ ಅಸ್ತಿತ್ವದ ಪದರುಗಳಾದ ಶರೀರ, ಉಸಿರು, ಮನಸ್ಸು, ಬುದ್ಧಿ ಮೊದಲಾದವುಗಳ ಬಗ್ಗೆ ತಿಳಿಯುವುದರ ಮೂಲಕ. ಸ್ವಲ್ಪವೇ ಸ್ವಲ್ಪ ತಿಳುವಳಿಕೆಯೊಂದಿಗೆ ಮತ್ತು ನಮ್ಮಲ್ಲಿಯೇ ಆಳವಾಗಿ ವಿಶ್ರಾಮ ಮಾಡುವುದರೊಂದಿಗೆ, ನಮ್ಮ ಋಣಾತ್ಮಕ ಕಂಪನಗಳು ಬದಲಾಗಿ ಬಹಳ ಧನಾತ್ಮಕವಾಗುತ್ತವೆ.

ನೀವು ತೃಪ್ತರಾದಾಗ, ನಿಮ್ಮ ಹೃದಯವು ಶುದ್ಧ ಹಾಗೂ ಸ್ಪಷ್ಟವಾಗಿರುವಾಗ, ಮತ್ತು ನೀವು ಯಾರ ಬಗ್ಗೆಯೂ ಕೆಟ್ಟ ಭಾವನೆಗಳನ್ನು ಹೊಂದದೇ ಇರುವಾಗ, ಇತರರನ್ನು ಗುಣಪಡಿಸುವ ಮತ್ತು ಹರಸುವ ಶಕ್ತಿಯನ್ನು ನೀವು ಗಳಿಸುತ್ತೀರಿ. ಅದು ಸಾಧ್ಯವಿದೆ. ತಮ್ಮೊಳಗಿರುವ ಕಂಪನಗಳನ್ನು ಸಂಪೂರ್ಣವಾಗಿ ಧನಾತ್ಮಕ ಶಕ್ತಿಯನ್ನಾಗಿ ಬದಲಾಯಿಸಿದ ಪಕ್ಷದಲ್ಲಿ, ಪ್ರತಿಯೊಬ್ಬರಿಗೂ ಇತರರನ್ನು ಗುಣಪಡಿಸಲು ಸಾಧ್ಯವಿದೆ.

ನಾವು ನಮ್ಮೊಳಗೆಯೇ ಶಾಂತಿಯನ್ನು ಕಂಡುಕೊಂಡಾಗ, ನಾವು ಶಾಂತಿಯನ್ನು ಪಸರಿಸುತ್ತೇವೆ. ನಮಗೆ ತಿಳಿದಿದೆಯೆಂದು ನಾವು ಏನನ್ನು ಅಂದುಕೊಳ್ಳುತ್ತೇವೋ, ಅದು ವಾಸ್ತವಿಕತೆಯ ಕೇವಲ ಒಂದು ಸಣ್ಣ ಭಾಗ ಮಾತ್ರ. ಹಲವಾರು ರಹಸ್ಯಗಳಿವೆ, ವಾಸ್ತವಿಕತೆಯ ಹಲವಾರು ಮಟ್ಟಗಳಿವೆ. ನೀವು ಸ್ವಲ್ಪ ಹೆಚ್ಚು ಕಾಲಾವಕಾಶ ಮಾಡಿಕೊಂಡರೆ, ನಾವು ಜ್ಞಾನದಲ್ಲಿ ಆಳಕ್ಕೆ ಹೋಗಬಹುದು, ಮತ್ತು ಜ್ಞಾನವಿರುವಾಗ, ಯಾವುದಕ್ಕೂ ನಿಮ್ಮ ಸಂತೋಷವನ್ನು ದೂರ ಸರಿಸಲು ಸಾಧ್ಯವಿಲ್ಲ.

ನಿನ್ನೆ ಜ಼ಗ್ರೇಬಿನಲ್ಲಿ ನಾನು, "ಉತ್ತಮ ಕ್ರೊಯೇಷಿಯಕ್ಕಾಗಿ ಸ್ವಯಂಸೇವಕರಾಗಿ" ಎಂಬ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದೆ. ಅಲ್ಲಿ ಸುಮಾರು ೨,೫೦೦ ಜನರಿದ್ದರು. ನಾನು ಅವರಲ್ಲಿ ಪ್ರತಿಯೊಬ್ಬರೂ, ಸಮಾಜವನ್ನು ಒಂದು ಉತ್ತಮ ಜಾಗವನ್ನಾಗಿ ಮಾಡುವುದಕ್ಕಾಗಿ ಪ್ರತಿದಿನವೂ ಒಂದು ಗಂಟೆ ಅಥವಾ ಒಂದು ವಾರದಲ್ಲಿ ಏಳು ಗಂಟೆಗಳನ್ನು ಕೊಡಬೇಕೆಂದು ಹೇಳಿದೆ. ಅದನ್ನೇ ನಾವು ಇಲ್ಲೂ ಸಹ ಮಾಡಬೇಕೆಂದು ನಿಮಗೆ ಅನ್ನಿಸುತ್ತಿಲ್ಲವೇ?

ನಾವೆಲ್ಲರೂ ಸ್ವಲ್ಪ ಕೊಡುಗೆಯನ್ನು ನೀಡಬಹುದಾದಂತಹ  ಕೆಲವು ವಿಷಯಗಳು ಹೀಗಿವೆ:

ಮೊದಲನೆಯದಾಗಿ, ನಮಗೊಂದು ಒತ್ತಡಮುಕ್ತ ಮತ್ತು ಹಿಂಸಾಮುಕ್ತ ಸಮಾಜ ಬೇಕು. ಆತ್ಮೀಯರಾಗಿರುವುದು ಹೇಗೆ, ಸಹಕಾರಿಯಾಗಿರುವುದು ಹೇಗೆ ಎಂಬುದನ್ನು ನಾವು ಜನರಿಗೆ ಕಲಿಸಬೇಕಾಗಿದೆ ಮತ್ತು ಹಿಂಸಾತ್ಮಕ ಪ್ರವೃತ್ತಿಗಳನ್ನು ತೊಡೆದುಹಾಕಲು ಅವರಿಗೆ ಸಹಾಯ ಮಾಡಬೇಕು.

ಎರಡನೆಯದಾಗಿ, ನಾವು ಜನರಿಗೆ ವಿವಿಧ ರೀತಿಯ ವ್ಯಸನಗಳಿಂದ ದೂರವಾಗಲು ಸಹಾಯ ಮಾಡಬೇಕು. ಸುದರ್ಶನ ಕ್ರಿಯೆ ಮತ್ತು ಧ್ಯಾನಗಳ ನಿಯಮಿತ ಅಭ್ಯಾಸವು, ವ್ಯಸನಗಳಿಂದ ಹೊರಬರಲು ಜನರಿಗೆ ಸಹಾಯ ಮಾಡುವುವು.

ಮೂರನೆಯದಾಗಿ, ಭ್ರಷ್ಟಾಚಾರದಿಂದ ಮುಕ್ತವಾಗಿರುವ ಒಂದು ಸಮಾಜವು ನಮಗೆ ಬೇಕು. ಎಲ್ಲಿ ಆತ್ಮೀಯತೆಯ ಭಾವವು ಕೊನೆಯಾಗುವುದೋ ಅಲ್ಲಿಂದ ಭ್ರಷ್ಟಾಚಾರವು ಪ್ರಾರಂಭವಾಗುವುದಾಗಿದೆ.

ಜೊತೆಗೆ, ನಿಜವಾಗಿ ಸಹಾಯದ ಅವಶ್ಯಕತೆಯಿರುವ ಜನರ ಬಳಿಗೆ ನಾವು ತಲುಪಬೇಕಾಗಿದೆ. ಆದುದರಿಂದ, ನೀವೆಲ್ಲರೂ ಬೇರೆ ಬೇರೆ ಪ್ರದೇಶಗಳಲ್ಲಿ ೨೦ರಿಂದ ೩೦ ಜನರ ತಂಡಗಳನ್ನು ರೂಪಿಸಲು ಸಾಧ್ಯವಾದರೆ ಮತ್ತು ವಾರದಲ್ಲಿ ಏಳು ಗಂಟೆಗಳನ್ನು ನಗುತ್ತಾ ಸಮಾಜ ಸೇವೆ ಮಾಡುತ್ತಾ ಕಳೆಯಲು ಸಾಧ್ಯವಾದರೆ, ಆಗ ನಾವು ಸಂತೋಷದ ಅಲೆಗಳನ್ನು ಸೃಷ್ಟಿಸಬಹುದು.

ನೀವು ಪ್ರಶ್ನೆಗಳನ್ನು ಕೇಳುವ ಮೊದಲು ಇನ್ನೊಂದು ವಿಷಯ. ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಬಿಡಿ! ನೀವು ದೇಶದ ಬಗ್ಗೆ, ಕ್ರೊಯೇಷಿಯಾದ ಬಗ್ಗೆ, ಜಗತ್ತಿನ ಬಗ್ಗೆ ಚಿಂತಿಸಬೇಕೆಂದು ನಾನು ಬಯಸುತ್ತೇನೆ. ನಿಮ್ಮೆಲ್ಲಾ ವೈಯಕ್ತಿಕ, ಖಾಸಗಿ ಚಿಂತೆಗಳು ಮತ್ತು ದುಗುಡಗಳನ್ನು ನೀವು ನನಗೆ ನೀಡಿ.

ಪ್ರಶ್ನೆ: ಗುರುದೇವ, ಮೂಲಭೂತ ಸೌಕರ್ಯಗಳ ರಚನೆ ಮತ್ತು ವ್ಯವಸ್ಥೆಗಳನ್ನು ಸೃಷ್ಟಿಸುವುದರ ಮೂಲಕ ಶಾಂತಿಯನ್ನು ಸೃಷ್ಟಿಸಲು ಜಗತ್ತು ಬಿಲಿಯಗಟ್ಟಲೆ ಡಾಲರುಗಳನ್ನು ವ್ಯಯಿಸುತ್ತಿದೆ. ಆದರೂ, ಹೃದಯವನ್ನು ತಲುಪಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಮಾನವರ ಮನಸ್ಸು ತಿಳಿಯದು. ಜಗತ್ತಿನಲ್ಲಿ ಶಾಂತಿಯ ನಿಮ್ಮ ಕರೆಗೆ ಓಗೊಡುವುದಕ್ಕಾಗಿ ನನ್ನ ಕಲ್ಪನೆಯೆಂದರೆ, ಮನಸ್ಸು ಮತ್ತು ಹೃದಯಗಳ ಈ ಜ್ಞಾನವನ್ನು ಜಗತ್ತಿನಲ್ಲಿ ಎಲ್ಲರಿಗೂ ತಲಪಿಸುವಂತೆ ಮಾಡುವುದು. ಹಾಗಾಗಿ ನಾವು ನಿಮ್ಮೊಂದಿಗೆ ಸಂಯುಕ್ತ ರಾಷ್ಟ್ರಗಳಿಗೆ, ಹಿಂಸೆಯಿಂದ ಜನರು ನರಳಾಡುತ್ತಿರುವ ಎಲ್ಲಾ ಪ್ರದೇಶಗಳಿಗೆ ಹೋಗಬಹುದು. 

ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು, ಒಳ್ಳೆಯದು, ಒಳ್ಳೆಯದು. ಫೆಬ್ರವರಿ ೩ ರಂದು ಭಾರತದ ನವದೆಹಲಿಯಲ್ಲಿ, ೧೦ ವಿವಿಧ ಸಂಯುಕ್ತ ರಾಷ್ಟ್ರ ಸಂಸ್ಥೆಗಳೊಂದಿಗೆ ನಾನು, ’ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಅದೊಂದು ಬಹಳ ಯಶಸ್ವಿ ಪ್ರಾರಂಭವಾಗಿತ್ತು, ಮತ್ತು ಅಂತಹ ಒಂದು ವಾತಾವರಣವನ್ನು ಸೃಷ್ಟಿಸಲು ನಾವು ಯುನಿಸೆಫ್ ಹಾಗೂ ಹಲವಾರು ಇತರ ಸಂಯುಕ್ತ ರಾಷ್ಟ್ರ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವೆವು.

ಇಲ್ಲಿ ಸ್ಪ್ಲಿಟ್ ನಲ್ಲಿರುವ ನಿಮ್ಮಲ್ಲಿ ಹಲವರು ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಾಗಿ ಈ ಸಂದೇಶವನ್ನು ಕ್ರೊಯೇಷಿಯಾದಲ್ಲಿ ಹರಡಬೇಕೆಂಬುದು ನನ್ನ ಇಚ್ಛೆಯಾಗಿದೆ. ನೀವು ಭಾರತಕ್ಕೆ ಬರುವಂತೆ ಆಹ್ವಾನಿಸಲೂ ನಾನು ಬಯಸುತ್ತೇನೆ. ನೀವು ಭಾರತಕ್ಕೆ ಬರುವಾಗ, ನೀವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಬಹುದು, ಧ್ಯಾನಗಳನ್ನು ಮಾಡಬಹುದು ಮತ್ತು ಇನ್ನೂ ಆಳವಾದ ಅನುಭವಗಳನ್ನು ಪಡೆಯಬಹುದು. ಜೊತೆಗೆ, ನೀವು ಆಯುರ್ವೇದದ ಅನುಭವವನ್ನು ಕೂಡಾ ಪಡೆಯಬಹುದು.

ಬೆಂಗಳೂರಿನಲ್ಲಿ ನಾವು ಜಗತ್ತಿನಲ್ಲಿ ಅತ್ಯುತ್ತಮವಾದ ಆಯುರ್ವೇದ ಆಸ್ಪತ್ರೆಯನ್ನು ಹೊಂದಿದ್ದೇವೆಂಬುದು ನಿಮಗೆ ತಿಳಿದಿದೆಯೇ? ಅಲೋಪತಿಯಲ್ಲಿ ಚಿಕಿತ್ಸೆಯಿಲ್ಲದ, ಉಬ್ಬಿರುವ ರಕ್ತನಾಳಗಳಂತಹ ಸಮಸ್ಯೆಗಳನ್ನು ಅದು ಗುಣಪಡಿಸಬಲ್ಲದು. ಹಾಗೆಯೇ, ದಂತ ಚಿಕಿತ್ಸೆಯು ಬಹಳ ಚೆನ್ನಾಗಿದೆ. ನೋವಿಲ್ಲದೆಯೇ, ಒಂದು ಹನಿ ರಕ್ತ ಮತ್ತು ಅರಿವಳಿಕೆಯಿಲ್ಲದೆಯೇ ವೈದ್ಯರು ನಿಮ್ಮ ಹಲ್ಲುಗಳನ್ನು ಕೀಳಬಲ್ಲರು; ಅದೂ ಸಾಮಾನ್ಯ ವೆಚ್ಚದ ಐದರಲ್ಲಿ ಒಂದು ಅಥವಾ ಹತ್ತರಲ್ಲಿ ಒಂದು ಭಾಗದಷ್ಟು ವೆಚ್ಚದಲ್ಲಿ. ಆಯುರ್ವೇದ ಚಿಕಿತ್ಸೆಯು ಬಹಳ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ್ದಾಗಿದೆ. ಪ್ರಾಚೀನ ವೈದ್ಯಕೀಯ ವಿಜ್ಞಾನಗಳಿಂದ ನೀವು ಕಲಿಯಬಹುದಾದ ವಿಷಯಗಳು ಹಲವಾರಿವೆ.

ನೀವು ಹೋಗುವ ಮೊದಲು, ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಕೊಡಿ, ಮತ್ತು ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಹೋಗಿ.

ಪ್ರಶ್ನೆ: ಇಲ್ಲಿರುವುದಕ್ಕಾಗಿ ಮತ್ತು ನೀವು ಹೇಳಿರುವ ಅಮೂಲ್ಯವಾದ ವಿಷಯಗಳಿಗಾಗಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸಲು ಬಯಸುತ್ತೇನೆ. ’ಸಮಾಜ ಸೇವೆ’ ಎಂದು ನೀವು ಹೇಳಿದಾಗ ನೀವು ಉದ್ದೇಶಿಸಿದುದು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನೇ ಅಥವಾ ರೆಡ್ ಕ್ರಾಸಿನಲ್ಲಿ ಅಥವಾ ಅದಕ್ಕೆ ಸಮಾನವಾದುದರಲ್ಲಿ ಸ್ವಯಂಸೇವೆ ಮಾಡುವಂತೆ ಸೇವೆ ಮಾಡುವುದನ್ನೇ?

ಶ್ರೀ ಶ್ರೀ ರವಿ ಶಂಕರ್: ಹೌದು. ಏನೆಲ್ಲಾ ಮತ್ತು ಎಲ್ಲೆಲ್ಲಾ ಅದರ ಅಗತ್ಯವಿರುವುದೋ ಹಾಗೂ ಯಾವೆಲ್ಲಾ ರೀತಿಯಲ್ಲಿ ಅದರ ಅಗತ್ಯವಿದೆಯೋ ಹಾಗೆ.