ಸೋಮವಾರ, ಮಾರ್ಚ್ 18, 2013

ಬದುಕಿಗೊ೦ದು ಪ್ರೇರಕ ಶಕ್ತಿ

ಝಗ್ರೇಬ್, ಕ್ರೊಯೇಷಿಯಾ
೧೮ ಮಾರ್ಚ್, ೨೦೧೩

ಹೃದಯದ ಭಾಷೆಯು ಶಬ್ದಗಳನ್ನು ಮತ್ತು ಭಾವನೆಗಳನ್ನು ಮೀರಿರುತ್ತದೆ.

ವಿಶ್ವದಲ್ಲಿ ನಾವು ತಿಳಿದಿರುವೆವೆಂದು ಯಾವುದನ್ನು ಅಂದುಕೊಂಡಿರುವೆವೋ ಅದು, ನಮಗೆ ಯಾವುದು ತಿಳಿದಿಲ್ಲವೋ, ಅದಕ್ಕೆ ಹೋಲಿಸಿದರೆ ಬಹಳ ಕಡಿಮೆ. ಯಾವುದು ನಮಗೆ ತಿಳಿದಿಲ್ಲವೋ ಅದು ಬಹಳಷ್ಟಿದೆ ಮತ್ತು ತಿಳಿಯದೇ ಇರುವುದಕ್ಕೆ ಧ್ಯಾನವು ಬಾಗಿಲಾಗಿದೆ. ಈ ಹೊಸ ಆಯಾಮದೊಂದಿಗೆ ಕೈಗಳನ್ನು ಕುಲುಕಿ.

ಧ್ಯಾನವು ಹಲವಾರು ಲಾಭಗಳನ್ನು ತರುತ್ತದೆ.

ಮೊದಲನೆಯದಾಗಿ, ಅದು ಬಹಳಷ್ಟು ಶಾಂತಿ ಮತ್ತು ಆನಂದವನ್ನು ತರುತ್ತದೆ. ಎರಡನೆಯದಾಗಿ, ಅದು ಎಲ್ಲರಿಗಾಗಿಯೂ ಅಪಾರ ಪ್ರೀತಿಯನ್ನು ತರುತ್ತದೆ. ಮೂರನೆಯದಾಗಿ, ಅದು ಸೃಜನಶೀಲತೆಯನ್ನು, ಅಂತಃಸ್ಫುರಣ ಸಾಮರ್ಥ್ಯವನ್ನು ಮತ್ತು
ಭೌತಿಕ ವಿಶ್ವವನ್ನು ಮೀರಿ ಇರುವುದರ ಬಗೆಗಿನ ಜ್ಞಾನವನ್ನು ತರುತ್ತದೆ.

ಶಿಶುಗಳಾಗಿ, ನಾವೆಲ್ಲರೂ ಕೆಲವು ವಿಶೇಷ ಕಂಪನಗಳನ್ನು ಹೊಂದಿದ್ದೆವು. ಪ್ರಪಂಚದ ಎಲ್ಲಿಯೇ ಇರುವ ಶಿಶುಗಳಾದರೂ ನಿಮ್ಮನ್ನು ಆಕರ್ಷಿಸುತ್ತಾರೆ. ಅವರಲ್ಲಿ ಒಂದು ನಿರ್ದಿಷ್ಟ ಶುದ್ಧತೆ, ಒಂದು ನಿರ್ದಿಷ್ಟ ಕಂಪನವಿದೆ. ಅವರು ಬಹಳ ವಿಶೇಷವಾದವರು. ನಾವು ದೊಡ್ಡವರಾಗಿ ಬೆಳೆದಂತೆ, ನಾವು ಮೂಲತಃ ಹುಟ್ಟುವಾಗ ಜೊತೆಯಲ್ಲಿದ್ದ ಆ ಚೈತನ್ಯದಿಂದ, ಆ ಶಕ್ತಿಯಿಂದ ಎಲ್ಲೋ ಬೇರ್ಪಟ್ಟೆವು.

ನಿಮಗೆಲ್ಲರಿಗೂ ಈ ಅನುಭವವಾಗಿದೆಯೇ - ಯಾವುದೇ ಕಾರಣವಿಲ್ಲದೆಯೇ ನಿಮಗೆ ಕೆಲವು ವ್ಯಕ್ತಿಗಳ ಕಡೆಗೆ ತಿರಸ್ಕಾರವುಂಟಾಗುತ್ತದೆ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೇ ನೀವು ಕೆಲವು ಜನರ ಕಡೆಗೆ ಸೆಳೆಯಲ್ಪಡುತ್ತೀರಿ? ಇದು ನಿಮಗೆ ಆಗಲಿಲ್ಲವೇ? ಪ್ರತಿದಿನವೂ ಇದು ಆಗುತ್ತದೆ; ಎಲ್ಲಾ ಸಮಯದಲ್ಲೂ. ಇದು ಯಾಕೆಂದರೆ ನಮ್ಮ ಸಂಪೂರ್ಣ ಜೀವನವು ಕಂಪನಗಳಿಂದಾಗಿದೆ.

ನಮ್ಮಲ್ಲಿ ಪ್ರತಿಯೊಬ್ಬರೂ ಹೊರಹೊಮ್ಮುವ ಒಂದು ನಿರ್ದಿಷ್ಟ ಕಂಪನವಿದೆ. ಪ್ರತಿಯೊಬ್ಬರೂ ಚೈತನ್ಯವನ್ನು ಹೊರಹೊಮ್ಮುತ್ತಿರುತ್ತಾರೆ. ನಮ್ಮ ಮನಸ್ಸು ಸಿಕ್ಕಿಹಾಕಿಕೊಂಡಿರುವಾಗ, ಚೈತನ್ಯವು ಋಣಾತ್ಮಕವಾಗುತ್ತದೆ. ಮನಸ್ಸು ಮುಕ್ತವಾಗಿರುವಾಗ, ಚೈತನ್ಯವು ಬಹಳ ಧನಾತ್ಮಕವಾಗಿರುತ್ತದೆ.

ಮನೆಯಲ್ಲಾಗಲೀ ಶಾಲೆಯಲ್ಲಾಗಲೀ; ನಮ್ಮ ಚೈತನ್ಯವನ್ನು ಧನಾತ್ಮಕವಾಗಿಸುವುದು ಹೇಗೆಂಬುದನ್ನು ಯಾರೂ ನಮಗೆ ಕಲಿಸುವುದಿಲ್ಲ, ಅಲ್ಲವೇ? ನಕರಾತ್ಮಕತೆಯನ್ನು, ಕೋಪವನ್ನು, ಮಾತ್ಸರ್ಯವನ್ನು, ಲೋಭವನ್ನು, ನಿರಾಶೆಯನ್ನು, ಖಿನ್ನತೆಯನ್ನು ಧನಾತ್ಮಕ ಚೈತನ್ಯವಾಗಿ ನಾವು ಹೇಗೆ ಬದಲಾಯಿಸಬಹುದು ಎಂಬುದನ್ನು ನಾವು ಕಲಿಯಬೇಕಾಗಿದೆ, ಮತ್ತು ಅಲ್ಲಿಯೇ ಉಸಿರಾಟವು ಸಹಾಯ ಮಾಡುವುದು.

ಕೆಲವು ಉಸಿರಾಟದ ತಂತ್ರಗಳು ಮತ್ತು ಧ್ಯಾನದ ಮೂಲಕ ನಾವು ಋಣಾತ್ಮಕ ಚೈತನ್ಯವನ್ನು ಧನಾತ್ಮಕ ಚೈತನ್ಯವಾಗಿ ಬದಲಾಯಿಸಬಹುದು. ನಾವು ಧನಾತ್ಮಕವಾಗಿ ಮತ್ತು ಸಂತೋಷವಾಗಿರುವಾಗ, ನಾವು ನಮ್ಮ ಸುತ್ತಲೂ ಸಂತೋಷವನ್ನು ಹರಡುತ್ತೇವೆ. ಇದು ಒಂದು ಹಂತ; ಪ್ರಾಯೋಗಿಕವಾದ ಮತ್ತು ಅತ್ಯಂತ ಅಗತ್ಯವಿರುವ ಧ್ಯಾನದ ಲಾಭವಾಗಿದೆ.

ನಾನು ಹೇಳಿದಂತೆ, ಧ್ಯಾನದಿಂದ ಇತರ ಲಾಭಗಳಿವೆ. ನಾವು ಹೆಚ್ಚು ಸೃಜನಶೀಲರಾಗಲು, ಅಂತಃಸ್ಫುರಣ ಸಾಮರ್ಥ್ಯವನ್ನು ಹೊಂದಲು ಬಯಸುವಾಗ ಮತ್ತು ಐದರಿಂದ ಹತ್ತು ವರ್ಷಗಳ ಬಳಿಕ ನಮಗೆ ಏನಾಗಲಿದೆಯೆಂಬುದನ್ನು ನಾವು ತಿಳಿಯಲು ಬಯಸುವಾಗ, ಧ್ಯಾನವು ಅದಕ್ಕಿರುವ ಉತ್ತರವಾಗಿದೆ.

ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡಲು ಸ್ವಲ್ಪ ಹೆಚ್ಚು ಪ್ರಯತ್ನದ ಅಗತ್ಯವಿದೆ. ಅಂದರೆ, ಪ್ರಯತ್ನವಿಲ್ಲದ ಪ್ರಯತ್ನ (ಧ್ಯಾನ). ನಿಜವಾಗಿ, ಅದು ಪ್ರಯತ್ನ ಕೂಡಾ ಅಲ್ಲ. ಅದು ಕೇವಲ, ಸ್ವಲ್ಪ ಹೆಚ್ಚು ಸಮಯದ ವಿಷಯ. ನಾವು ಒಂದು ವಾರದ ಅಥವಾ ಹತ್ತು ದಿನಗಳ ಸಮಯವನ್ನು ತೆಗೆದುಕೊಂಡು, ನಮ್ಮ ಸ್ವಂತ ಜೀವನದ ಅತೀಂದ್ರಿಯ ಕ್ಷೇತ್ರಗಳ ಆಳಕ್ಕೆ ಹೋಗಬೇಕಾಗಿದೆ. ನಾನು ಹೇಳುತ್ತೇನೆ ಕೇಳಿ, ಅದು ನಿಮ್ಮನ್ನು ಬಹಳ ಸಮರ್ಥರನ್ನಾಗಿ, ಶಕ್ತಿಶಾಲಿಗಳನ್ನಾಗಿ, ಪ್ರಸನ್ನರನ್ನಾಗಿ ಮತ್ತು ತೃಪ್ತರನ್ನಾಗಿ ಮಾಡುತ್ತದೆ.

ಪ್ರಾಚೀನ ಕಾಲದಲ್ಲಿ, ಜನರು ಧ್ಯಾನದ ಈ ಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅವರು ಇದನ್ನೊಂದು ರಹಸ್ಯವಾಗಿ ಇಟ್ಟುಕೊಳ್ಳುತ್ತಿದ್ದರು ಮತ್ತು ಕೇವಲ ಕೆಲವೇ ವಿಶೇಷ ವ್ಯಕ್ತಿಗಳು ಇದನ್ನು ಹೊಂದಿದ್ದರು. ಸಾಧಾರಣವಾಗಿ ಇದನ್ನು ರಾಜಮನೆತನದವರಿಗೆ ಮತ್ತು ಹೆಚ್ಚಿನ ಬೌದ್ಧಿಕ ಮಟ್ಟ ಹೊಂದಿದ್ದ ಜನರಿಗೆ ಕೊಡಲಾಗುತ್ತಿತ್ತು. ನಾನು ವಿಭಿನ್ನವಾಗಿ ಯೋಚಿಸಿದೆ. ಇದು ಸಂಪೂರ್ಣ ಮಾನವಕುಲದ ಸ್ವತ್ತು ಮತ್ತು ಪ್ರತಿಯೊಬ್ಬ ಮನುಷ್ಯನೂ ಇದನ್ನು ಕಲಿಯಬೇಕೆಂದು ನಾನು ಯೋಚಿಸಿದೆ. ಇದು ಒಂದು ಸಂಸ್ಕೃತಿಯ, ಒಂದು ನಾಗರಿಕತೆಯ, ಒಂದು ಧರ್ಮದ ಅಥವಾ ಒಂದು ದೇಶದ ಸ್ವತ್ತಲ್ಲ. ಅದು ಸಂಪೂರ್ಣ ಮಾನವಕುಲಕ್ಕೆ ಸೇರಿದುದು. ನಾವು ನಂತರ ಇದನ್ನು ಜಗತ್ತಿನಲ್ಲಿ ಹರಡಲು ಶುರು ಮಾಡಿದೆವು ಮತ್ತು ಇವತ್ತು, ಪ್ರಪಂಚದ ಎಲ್ಲೆಡೆಗಳಲ್ಲಿ ಜನರು ಈ ಸುಂದರವಾದ ಜ್ಞಾನದಿಂದ ಲಾಭವನ್ನು ಪಡೆಯುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ, ನಾನು ಇಲ್ಲಿದ್ದಾಗ, ಬಹಳಷ್ಟು ಅನಿಶ್ಚಿತತೆಯಿತ್ತು. ಜನರು ಕೇಳುತ್ತಿದ್ದರು, "ಏನಾಗಬಹುದು, ನಾವೊಂದು ಬಹಳ ಯುವದೇಶವಾಗಿರುವೆವು."

ನಾನಂದೆ, "ಚಿಂತಿಸಬೇಡಿ, ದೇಶವು ಅಭಿವೃದ್ಧಿ ಹೊಂದುವುದು, ಅದು ಬಹಳ ಸ್ಥಿರವಾಗುವುದು."

ಇವತ್ತು ಪ್ರಪಂಚದ ಎಲ್ಲೆಡೆಗಳಲ್ಲಿ ಬಿಕ್ಕಟ್ಟಿದೆಯೆಂಬುದು ನನಗೆ ಗೊತ್ತು. ಪುನಃ ನಾನು ನಿಮಗೆ ಹೇಳುತ್ತಿದ್ದೇನೆ, ಚಿಂತಿಸಬೇಡಿ! ನಾವು ಈ ಕಷ್ಟಕಾಲವನ್ನು ಹಾದುಹೋಗುವೆವು, ಅಲ್ಲಿ ಬೆಳಕಿರುತ್ತದೆ.

ಎಲ್ಲಿ ಒಂದು ಬಿಕ್ಕಟ್ಟಿರುವುದೋ, ನಾನು ಅಲ್ಲಿಗೆ ಹೋಗಿ, "ಯಾವುದೇ ಬಿಕ್ಕಟ್ಟು ಇರಲಾರದು. ಸಂಗತಿಗಳು ಉತ್ತಮವಾಗುವುವು" ಎಂದು ಹೇಳುವುದು ನನ್ನ ಅಭ್ಯಾಸವಾಗಿ ಹೋಗಿದೆ ಎಂದು ನನಗನಿಸುತ್ತದೆ ಮತ್ತು ಅದು ಹಾಗೇ ಆಗುತ್ತದೆ. ಸಂಗತಿಗಳು ಉತ್ತಮವಾಗುತ್ತವೆ.

ಅಮೇರಿಕಾದಲ್ಲಿ, ೧೯೯೯ರಲ್ಲಿ, ಜನರು ಯೋಚಿಸಿದರು, ೨೦೦೦ದಲ್ಲಿ ಪ್ರಪಂಚ ಕೊನೆಯಾಗುವುದೆಂದು. ಜನರು ಹಾಲಿನ ಹುಡಿ ಮತ್ತು ಕಿರಾಣಿ ಸಾಮಾನುಗಳನ್ನು ತಮ್ಮ ನೆಲಮಾಳಿಗೆಯಲ್ಲಿ ಸಂಗ್ರಹಿಸಿಡುತ್ತಿದ್ದರು. ಅಮೇರಿಕಾದ ಪಶ್ಚಿಮ ತೀರದಲ್ಲಿ ವಾಸಿಸುತ್ತಿದ್ದ ಹಲವಾರು ಜನರು ತಮ್ಮ ಮನೆಗಳನ್ನು ಮಾರಿ ಕೊಲರಾಡೋಕ್ಕೆ ಹೋಗುತ್ತಿದ್ದರು. ನಾನು ಹಲವಾರು ನಗರಗಳಿಗೆ ಪ್ರಯಾಣಿಸಿದೆ ಮತ್ತು, "ಚಿಂತಿಸಬೇಡಿ, ಏನೂ ಆಗುವುದಿಲ್ಲ. ಎಲ್ಲವೂ ಎಂದಿನಂತಿರುವುದು" ಎಂದು ಹೇಳಿದೆ ಮತ್ತು ಅದು ಎಂದಿನಂತೆಯೇ ಇದೆ!

ಪ್ರಕೃತಿಯು ಪ್ರತಿಯೊಬ್ಬ ಮನುಷ್ಯನ ಹೃದಯದ ಆಳದಲ್ಲಿ ಎಷ್ಟೊಂದು ಸಂಪತ್ತನ್ನಿರಿಸಿದೆ, ನಮಗೊಂದು ಪಾಸ್ ವರ್ಡ್ ಮಾತ್ರ ಬೇಕಾಗಿದೆ ಮತ್ತು ನಾನು ನಿಮಗೆ ಹೇಳುತ್ತಿರುವ ಹಾಗೂ ನೀವು ಎಲ್ಲರಿಗೂ ವರ್ಗಾಯಿಸಬಹುದಾದ (ಸ೦ಕೇತ ಪದ) ಶಬ್ದ ಇಲ್ಲಿದೆ, ಅದು ’ಚಿಂತಿಸಬೇಡಿ.’

ವಿಶ್ವದಲ್ಲಿ ಒಂದು ಶಕ್ತಿ, ಒಂದು ಬಲವಿದೆ. ಅದು ನಿಮ್ಮನ್ನು, ನಿಮ್ಮ ಹೆತ್ತವರು ಪ್ರೀತಿಸಿದುದಕ್ಕಿಂತಲೂ, ನಿಮ್ಮ ಮಿತ್ರರು ಪ್ರೀತಿಸಿದುದಕ್ಕಿಂತಲೂ ಅಥವಾ ನಿಮ್ಮ ಸಂಗಾತಿ ಪ್ರೀತಿಸಿದುದಕ್ಕಿಂತಲೂ ಹೆಚ್ಚು ಪ್ರೀತಿಸುತ್ತದೆ. ನಿಮ್ಮ ಬಗ್ಗೆ ಕಾಳಜಿ ವಹಿಸುವ ಒಂದು ಕ್ಷೇತ್ರ, ಒಂದು ಚೈತನ್ಯವಿದೆ. ನೀವು ಸುಮ್ಮನೇ ವಿಶ್ರಾಮ ಮಾಡಬೇಕು.

ನಮ್ಮ ಪ್ರಜ್ಞೆಯು ಬಹಳ ಹಳೆಯದು, ಬಹಳ ಪ್ರಾಚೀನವಾದುದು. ಥರ್ಮೋಡೈನಮಿಕ್ಸಿನ ಮೂರನೆಯ ನಿಯಮದ ಪ್ರಕಾರ, ಚೈತನ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಮನಸ್ಸು ಅಂತಹ ಒಂದು ಚೈತನ್ಯ. ಅದು ಒಂದು ದೀರ್ಘ ಸಮಯದಿಂದ ಅಲ್ಲಿದೆ ಮತ್ತು ಈ ಪ್ರಜ್ಞೆಯು ಹಲವಾರು ಸಂಸ್ಕಾರಗಳನ್ನು ತೆಗೆದುಕೊಳ್ಳುತ್ತದೆ. ಇದರ ಅಧ್ಯಯನ ಮಾಡುವುದು ಬಹಳ ಸ್ವಾರಸ್ಯವಾದುದು.

ನಾನು ಪ್ರಪಂಚದ ಸುತ್ತಲೂ ಪ್ರಯಾಣ ಮಾಡುವಾಗ, ನಾನು ಅಪರಿಚಿತರನ್ನು ಭೇಟಿಯಾಗುತ್ತಿರುವೆನೆಂದು ನನಗನಿಸುವುದಿಲ್ಲ. ಅವರು ನನ್ನ ಭಾಗ ಮತ್ತು ನನಗೆ ಅವರನ್ನು ತಿಳಿದಿದೆಯೆಂದು ನನಗನಿಸುತ್ತದೆ. ನಮಗೆ ಪರಸ್ಪರರ ಹೆಸರುಗಳು ತಿಳಿಯದೇ ಇರಬಹುದು, ಆದರೆ ನಮಗೆ ಪರಸ್ಪರರ ಆತ್ಮಗಳು ತಿಳಿದಿದೆ; ನಮಗೆ ಸಂಬಂಧದ ಅನುಭವವಾಗುತ್ತದೆ. ನಾವೆಲ್ಲರೂ ಒಂದು ಕುಟುಂಬಕ್ಕೆ ಸೇರಿದವರು, ನಾವೆಲ್ಲರೂ ಪರಸ್ಪರರನ್ನು ತಿಳಿದಿದ್ದೇವೆ ಎಂದು ನನಗೆ ಯಾವತ್ತೂ ಅನಿಸಿದೆ.

ನಾನು ನಿಮಗೆ ಹೇಳಲು ಬಯಸುವ ಇನ್ನೊಂದು ವಿಷಯವೆಂದರೆ, ಸಂಶಯಗಳ ಬಗ್ಗೆ. ಸಂಶಯಗಳು ಯಾವತ್ತೂ ಇರುವುದು ಧನಾತ್ಮಕವಾದುದರ ಬಗ್ಗೆ.

ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಿದರೆ, ನೀವೇನು ಹೇಳುತ್ತೀರಿ? "ನಿಜವಾಗಿ?"
ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ದ್ವೇಷಿಸುತ್ತೇನೆ" ಎಂದು ಹೇಳಿದರೆ, ನೀವು, "ನಿಜವಾಗಿ?" ಎಂದು ಯಾವತ್ತೂ ಹೇಳುವುದಿಲ್ಲ. ನಾವು ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ಸಂಶಯಿಸುತ್ತೇವೆ, ಆದರೆ ಒಬ್ಬರ ಅಪ್ರಾಮಾಣಿಕತೆಯನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಅದೇ ರೀತಿಯಲ್ಲಿ, ನೀವು ನಿಮ್ಮ ಸಾಮರ್ಥ್ಯಗಳನ್ನು ಸಂಶಯಿಸುತ್ತೀರಿ, ನೀವು ನಿಮ್ಮ ಬಲಹೀನತೆಗಳನ್ನು ಯಾವತ್ತೂ ಸಂಶಯಿಸುವುದಿಲ್ಲ, ಅಲ್ಲವೇ?

ನೀವು ಸಂತೋಷವಾಗಿರುವಾಗ, "ಇದು ನಿಜವೇ? ನಾನು ಕನಸು ಕಾಣುತ್ತಿರುವೆನೇ?" ಎಂದು ನೀವು ಕೇಳುತ್ತೀರಿ. ಆದರೆ ನೀವು ದುಃಖಿತರಾಗಿರುವಾಗ, "ಇದು ನಿಜವೇ?" ಎಂದು ನೀವು ಕೇಳುವುದಿಲ್ಲ. ನಿಮ್ಮ ಖಿನ್ನತೆಯ ಬಗ್ಗೆ ನೀವು ಬಹಳ ಖಚಿತವಾಗಿರುತ್ತೀರಿ. ನಾವು ನಮ್ಮ ಖಿನ್ನತೆಯನ್ನು ಯಾವತ್ತೂ ಸಂಶಯಿಸುವುದಿಲ್ಲ! ಹೀಗೆ, ಸಂಶಯವು ಯಾವತ್ತೂ ಧನಾತ್ಮಕವಾಗಿರುವ ವಿಷಯದ ಬಗ್ಗೆ ಇರುವುದು. ಋಣಾತ್ಮಕವಾದ ವಿಷಯವನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಒಬ್ಬ ಜ್ಞಾನಿಯು ಇದನ್ನು ತಿರುಗಿಸುತ್ತಾನೆ ಮತ್ತು ಋಣಾತ್ಮಕವಾದುದನ್ನು ಸಂಶಯಿಸಲು ತೊಡಗುತ್ತಾನೆ.

ಒಬ್ಬರು ಬಂದು ನಿಮ್ಮಲ್ಲಿ, ಇಂತಿಂತವರು ನಿಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದರು ಅಂತ ಹೇಳುತ್ತಾರೆಂದಿಟ್ಟುಕೊಳ್ಳೋಣ, ನೀವು ಕೂಡಲೇ ಅದನ್ನು ನಂಬುತ್ತೀರಿ. ಹಾಗೆ ಮಾಡಬೇಡಿ. "ಇಲ್ಲ, ನಾನು ಅದನ್ನು ನಂಬುವುದಿಲ್ಲ" ಎಂದು ಹೇಳಿ ಮತ್ತು ನೀವು ಆ ವ್ಯಕ್ತಿಯನ್ನು ಕರೆದು, "ನೀನು ಕೆಟ್ಟ ವಿಷಯಗಳನ್ನು ಹೇಳುವೆಯೆಂದು ಒಬ್ಬರು ಹೇಳುತ್ತಾರೆ, ಆದರೆ ನಾನು ಅದನ್ನು ನಂಬುವುದಿಲ್ಲ" ಎಂದು ಹೇಳಿ. ನೀವು ಹಾಗೆ ಹೇಳುವಾಗ, ಆ ವ್ಯಕ್ತಿಯು ನಿಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದ್ದರೂ ಕೂಡಾ, ಅವನ ಮನಸ್ಸು ಬದಲಾಗುವುದು.

ಒಬ್ಬ ವ್ಯಕ್ತಿಯು ಸಾಕಷ್ಟು ಸ್ಥಿತಿವಂತನಾಗಿಲ್ಲದಿದ್ದರೆ, ಅದು ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ. ಅಂತಹ ಹಲವಾರು ಪೀಡಿತ ಕುಟುಂಬಗಳು ಸಮುದಾಯ ಮತ್ತು ದೇಶದ ಮೇಲೆ ಪ್ರಭಾವ ಬೀರುತ್ತವೆ. ತಿಳುವಳಿಕೆ ಅಥವಾ ಜ್ಞಾನವು ವ್ಯಕ್ತಿಗಳಿಗೆ ಸಾಮರ್ಥ್ಯವನ್ನು ತರುತ್ತದೆ ಮತ್ತು ಏನೇ ಬಂದರೂ ಒಬ್ಬರು ಒಂದು ಮುಗುಳ್ನಗೆಯನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ! ಹೀಗೆ, ಆರ್ಟ್ ಆಫ್ ಲಿವಿಂಗ್ ಎಂಬುದು, ಮುಗುಳ್ನಗೆಯನ್ನು ತಾಜಾ ಮತ್ತು ಜೀವಂತಿಕೆಯಲ್ಲಿರಿಸುವುದು ಹೇಗೆ ಮತ್ತು ಸಮಾಜಕ್ಕೆ ಸೇವೆ ಮಾಡುತ್ತಾ ಇರುವುದು ಹೇಗೆ ಎಂಬುದರ ಬಗ್ಗೆಯಾಗಿದೆ. ಮುಗುಳ್ನಗುತ್ತಾ ಇರಿ ಮತ್ತು ಸೇವೆ ಮಾಡಿ!
ನಿಮ್ಮಲ್ಲಿರುವ ಯಾವುದೇ ಒತ್ತಡ ಅಥವಾ ಯಾವುದೇ ತೊಂದರೆಯನ್ನು ನಿಮ್ಮಿಂದ ದೂರ ಒಯ್ಯಲು ನಾನು ಬಂದಿರುವೆನು. ನಿಮ್ಮ ಮುಖದ ಮೇಲೆ ಒಂದು ದೊಡ್ಡ ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ. ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಹಿಂದಿರುಗಿ ಹೋಗಿ! ನಿಮ್ಮೆಲ್ಲಾ ಚಿಂತೆಗಳನ್ನು ಮತ್ತು ಒತ್ತಡಗಳನ್ನು ನನಗೆ ಕೊಡಿ. ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆಯಿದೆಯೆಂದು ಮತ್ತು ನೀವು ಒಬ್ಬಂಟಿಯೆಂದು ನಿಮಗೆ ಅನ್ನಿಸಿದಾಗಲೆಲ್ಲಾ, ನೀವು ಒಬ್ಬಂಟಿಯಲ್ಲವೆಂಬುದನ್ನು ತಿಳಿಯಿರಿ, ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನನಗೆ ಕೊಡಿ ಮತ್ತು ನೀವು ಮುಗುಳ್ನಗುವುದನ್ನು ಹಾಗೂ ಸೇವೆ ಮಾಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ.

ಪ್ರಶ್ನೆ: ಪ್ರಸ್ತುತದಲ್ಲಿ ಭೂಮಿಯು ಒಳಗಾಗುತ್ತಿರುವ ಕೆಲವು ಬದಲಾವಣೆಗಳ ಬಗ್ಗೆ ದಯವಿಟ್ಟು ನಮಗೆ ಹೇಳಿ.

ಶ್ರೀ ಶ್ರೀ ರವಿ ಶಂಕರ್: ಹೌದು, ಭೂಮಿಯು ನಿರಂತರವಾಗಿ ಬದಲಾಗುತ್ತದೆ. ಆದರೆ ಮಾನವ ಕುಲವು ಪರಿಸರದೊಂದಿಗೆ ಏನು ಮಾಡಿದೆಯೋ ಅದು ದುರದೃಷ್ಟಕರ. ಗಣಿಗಳನ್ನು ಮಾಡಲು, ಭೂಮಿಯ ಆಳದಿಂದ ಸಂಗ್ರಹಿಸಲು ನಾವು ಹಲವಾರು ಡೈನಾಮೈಟುಗಳನ್ನು ಹಾಕಿದ್ದೇವೆ. ಭೂಕಂಪಗಳು, ಸುನಾಮಿ ಮತ್ತು ಈ ಎಲ್ಲಾ ವಿಪತ್ತುಗಳು ಶುರುವಾಗಿರುವ ಕಾರಣ ಇದುವೇ. ಆದುದರಿಂದ, ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ನಾವು ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮತ್ತು ನಮ್ಮ ಭೂಮಿಯನ್ನು ನೋಡಿಕೊಳ್ಳದಿದ್ದರೆ, ಅದು ನಮಗೆ ಹೆಚ್ಚು ಹೆಚ್ಚು ಸವಾಲುಗಳನ್ನು ಸೃಷ್ಟಿಸುವುದು.
ನೋಡಿ, ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಲೇಬೇಕಾದ ಕೆಲವು ವಿಷಯಗಳಿವೆ.

೧. ಪರಿಸರ: ನಾವು ನಮ್ಮ ಹೊಲಗಳಿಗೆ ಎಷ್ಟೊಂದು ರಾಸಾಯನಿಕಗಳನ್ನು ಹಾಕುತ್ತೇವೆಂದರೆ, ನಾವು ಬೆಳೆಯುವ ಆಹಾರವು, ನಾವು ಸೇವಿಸುವುದಕ್ಕೆ ಅನರ್ಹವಾಗಿದೆ. ನಿಮ್ಮಲ್ಲಿ ಎಷ್ಟು ಮಂದಿಗೆ ನಿಮ್ಮ ಶರೀರದಲ್ಲಿ ನೋವುಗಳಿವೆ? ಯಾಕೆಂಬುದು ನಿಮಗೆ ಗೊತ್ತಿದೆಯಾ? ನಾವು ತಿನ್ನುವ ಆಹಾರವು ಹಲವಾರು ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಹೊಂದಿದೆ. ಕೇವಲ ತರಕಾರಿಗಳು ದೊಡ್ಡದಾಗಿ ಬೆಳೆಯುವಂತೆ ಮಾಡಲು, ನಾವು ನಮ್ಮ ಶರೀರಕ್ಕೆ ಒಳ್ಳೆಯದಲ್ಲದಿರುವ ಹಲವಾರು ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತೇವೆ. ಭೂಮಿಯು ಸಾವಯವವಾಗಬೇಕೆಂದು ನಾನು ಬಯಸುತ್ತೇನೆ.

ನಿಮಗೆ ಗೊತ್ತಾ, ಭಾರತದಲ್ಲಿ ಕೆಲವು ಬಹಳ ಪುರಾತನವಾದ ವ್ಯವಸಾಯ ತಂತ್ರಗಳಿವೆ. ಅವುಗಳನ್ನು ನಾನು ಈಗ ಭಾರತದಲ್ಲಿ ಬಹಳ ಹುರುಪಿನಿಂದ ಪ್ರಚಾರ ಮಾಡುತ್ತಿದ್ದೇನೆ.  ಅದು ಬಹಳಷ್ಟು ಬದಲಾವಣೆಯನ್ನು ತಂದಿದೆ. ಅದು ಶೂನ್ಯ ಬಂಡವಾಳದೊಂದಿಗೆ ಉತ್ಪಾದನೆಯನ್ನು ಸುಮಾರು ಮೂರೂವರೆ ಪಟ್ಟುಗಳಷ್ಟು ಹೆಚ್ಚಿಸಿದೆ. ನಾವದನ್ನು ಶೂನ್ಯ - ಬಂಡವಾಳ ವ್ಯವಸಾಯವೆಂದು ಕರೆಯುತ್ತೇವೆ. ರೈತನು ಹಣವನ್ನು ಸಾಲವಾಗಿ ಪಡೆಯಬೇಕಾಗಿಲ್ಲ, ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ಹಾಕಬೇಕಾಗಿಲ್ಲ. ಕೇವಲ ನಿರ್ದಿಷ್ಟ ಪ್ರಾಕೃತಿಕ ವಸ್ತುಗಳಿಂದ, ನಿರ್ದಿಷ್ಟವಾದ ಗಿಡಗಳು ಮತ್ತು ಪ್ರಾಕೃತಿಕ ಗೊಬ್ಬರಗಳಿಂದ ಅವನು ತರಕಾರಿಗಳು ಹಾಗೂ ಧಾನ್ಯಗಳನ್ನು ಒಂದು ಬಹಳ ಕಡಿಮೆ ವೆಚ್ಚದಲ್ಲಿ, ಒಂದು ಉತ್ತಮ ಗುಣಮಟ್ಟದಲ್ಲಿ ಮತ್ತು ಒಂದು ಉತ್ತಮ ಪ್ರಮಾಣದಲ್ಲಿ ಬೆಳೆಯಬಹುದು. ಇಲ್ಲಿ ಕ್ರೊಯೇಷಿಯಾದಲ್ಲಿ ವ್ಯವಸಾಯ ಮಾಡಲು ಬಯಸುವ ಯಾರೊಂದಿಗಾದರೂ ಈ ಜ್ಞಾನವನ್ನು ಹಂಚಿಕೊಳ್ಳಲು ಆರ್ಟ್ ಆಫ್ ಲಿವಿಂಗಿಗೆ ಸಂತೋಷವಿದೆ. ನಾವೊಂದು ಮಾದರಿ ಹೊಲವನ್ನು; ಕಡಿಮೆ ವೆಚ್ಚದ ಮತ್ತು ಉತ್ತಮ ಉತ್ಪಾದನೆಯ ಒಂದು ಹೊಲವನ್ನು ಹೇಗೆ ಮಾಡಬಹುದು ಎಂಬುದನ್ನು ಅವರೊಂದಿಗೆ ಹಂಚಿಕೊಳ್ಳಲು ಮತ್ತು ಅವರಿಗೆ ತೋರಿಸಲು ನಾವು ಇಷ್ಟಪಡುತ್ತೇವೆ.

ನಿಮಗೆ ಗೊತ್ತಾ, ಮೊದಲು ೪೦,೦೦೦ ರೂಪಾಯಿಗಳನ್ನು ಪಡೆಯುತ್ತಿದ್ದ ಮತ್ತು ಈಗ ಒಂದು ವರ್ಷದೊಳಗೆ ೪,೦೦,೦೦೦ ರೂಪಾಯಿಗಳನ್ನು ಪಡೆಯಲು ತೊಡಗಿದ ರೈತರ ಒಂದು ದಾಖಲೆ ನಮ್ಮಲ್ಲಿದೆ. ಸಾವಯವ ಕೃಷಿಯೊಂದಿಗೆ, ಅವರಿಗೆ ೧೦ ಪಟ್ಟು ಹೆಚ್ಚು ವರಮಾನ ಗಳಿಸಲು ಸಾಧ್ಯವಾಯಿತು, ಅದು ಕೂಡಾ ಒಂದು ಕಡಿಮೆ ವೆಚ್ಚದಲ್ಲಿ.

೨. ಭ್ರಷ್ಟಾಚಾರ: ಇದೊಂದು ಬಹಳ ದೊಡ್ಡ ಸಮಸ್ಯೆ. ಪ್ರಪಂಚದ ಎಲ್ಲೆಡೆಗಳಲ್ಲಿ ಭ್ರಷ್ಟಾಚಾರವಿದೆ. ಇಲ್ಲಿ ಕ್ರೋಯೇಷಿಯಾದಲ್ಲಿ ಅದು ಹೇಗಿದೆಯೆಂಬುದು ನನಗೆ ತಿಳಿಯದು, ಆದರೆ ಭಾರತದಲ್ಲಿ, ಅದೊಂದು ದೊಡ್ಡ ಸಮಸ್ಯೆ. ಏಷಿಯಾ ಭೂಖಂಡದಲ್ಲಿ ಕೂಡಾ.

ಆತ್ಮೀಯತೆಯ ಭಾವವು ಎಲ್ಲಿ ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಆರಂಭವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಯಾರೂ, ತಾವು ಯಾರೊಂದಿಗೆ ಸಂಬಂಧ ಹೊಂದಿದ್ದೇವೆಂದು ಅಂದುಕೊಳ್ಳುವರೋ ಅವರೊಂದಿಗೆ ಭ್ರಷ್ಟರಾಗಿರುವುದಿಲ್ಲ.

ಯಾರನ್ನು ತಮ್ಮ ಸ್ವಂತದವರಲ್ಲವೆಂದು ಅಂದುಕೊಳ್ಳುತ್ತಾರೋ ಕೇವಲ ಅವರಿಂದ ಮಾತ್ರ ಒಬ್ಬರು ಲಂಚ ಕೇಳುತ್ತಾರೆ, ಅಲ್ಲವೇ? ನಾವಿದನ್ನು ಬದಲಾಯಿಸಬೇಕಾಗಿದೆ. ನಾವು, ಒಂದು ಉನ್ನತ ಆತ್ಮೀಯತಾ ಭಾವವನ್ನು ಸೃಷ್ಟಿಸಬೇಕಾಗಿದೆ.

ಇಲ್ಲಿ ಕ್ರೊಯೇಷಿಯಾದಲ್ಲಿರುವ ಎಲ್ಲರೂ, "ನಾನು ಲಂಚ ಕೊಡುವುದೂ ಇಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ" ಎಂಬ ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡರೆ; ಕಡಿಮೆ ಪಕ್ಷ ಒಂದು ವರ್ಷದ ಮಟ್ಟಿಗೆ, ದೇಶದ ಸಂಪೂರ್ಣ ಮುಖವು ಬದಲಾಗುವುದನ್ನು ನೀವು ನೋಡುವಿರಿ. ನಾವಿದನ್ನು ಮಾಡಬಲ್ಲೆವೇ? ಇಲ್ಲಿರುವ ನಾವೆಲ್ಲರೂ, ದೇಶದಲ್ಲಿರುವ ಇತರ ಎಲ್ಲರೊಂದಿಗೂ ಮಾತನಾಡೋಣ.

ನೋಡಿ, ಇಲ್ಲಿ ನಮ್ಮಲ್ಲಿ ನಲುವತ್ತು ಲಕ್ಷ ಜನರಿದ್ದಾರೆ. ಭಾರತಕ್ಕೆ ಹೋಲಿಸಿದರೆ ಅದು ಅಷ್ಟೊಂದು ದೊಡ್ಡದಲ್ಲ. ನಾನು ಯಾವ ನಗರದಿಂದ ಬಂದಿರುವೆನೋ ಅಲ್ಲಿ, ಬೆಂಗಳೂರಿನಲ್ಲಿ ಈಗ ನಾವು ಎಂಭತ್ತು ಲಕ್ಷ ಜನರನ್ನು ಹೊಂದಿದ್ದೇವೆ, ಅಂದರೆ ಕ್ರೊಯೇಷಿಯಾದ ಜನಸಂಖ್ಯೆಯ ದುಪ್ಪಟ್ಟು. ಆದುದರಿಂದ, ಜನರು ಭಾಗವಹಿಸುವಾಗ, ಕ್ರೊಯೇಷಿಯಾವನ್ನು ಒಂದು ಬಹಳ ಆದರ್ಶ ರಾಜ್ಯವನ್ನಾಗಿ ನೀವು ಮಾಡಬಲ್ಲಿರಿ ಎಂಬುದರ ಬಗ್ಗೆ ನನಗೆ ಬಹಳ ವಿಶ್ವಾಸವಿದೆ.

ಒಬ್ಬರಿಗೆ ಲಂಚ ತೆಗೆದುಕೊಳ್ಳುವುದರ ಕಡೆಗೆ ತೀವ್ರ ಬಯಕೆಯಿದ್ದರೆ, ಒಂದು ವರ್ಷದ ವರೆಗೆ ಕಾಯಿರಿ, ನೀವದನ್ನು ನಂತರ ಮಾಡಬಹುದು. ನೀವೆಲ್ಲರೂ, ಒಂದು ವರ್ಷದ ವರೆಗೆ, ನೀವು ಲಂಚ ಕೊಡುವುದೂ ಇಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ ಎಂಬ ಈ ಪ್ರತಿಜ್ಞೆಯನ್ನು ತೆಗೆದುಕೊಂಡರೆ, ಅದೊಂದು ದೊಡ್ಡ ಬದಲಾವಣೆಯನ್ನು ಮಾಡುವುದು.

ಯಾವುದೇ ಕಾನೂನು ಭ್ರಷ್ಟಾಚಾರವನ್ನು ಹೋಗಲಾಡಿಸದು. ಅದು ಹೃದಯದಿಂದ ಬರಬೇಕು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಅರಳುತ್ತಿರುವಾಗ, ಸಮಾಜದಲ್ಲಿರುವ ದುಷ್ಟ ಅಂಶಗಳು ದೂರ ಹೋಗುತ್ತವೆ. ಹೊಸದಾಗಿ ಚುನಾಯಿಸಲ್ಪಟ್ಟ ಕರ್ನಾಟಕ ವಿಧಾನಸಭಾ ಸದಸ್ಯರು ಭ್ರಷ್ಟಾಚಾರ ಮುಕ್ತರಾಗಿರಲೆ೦ದು ನೀಡಿದ ಕರೆಗೆ ಲಿ೦ಕ್: http://www.siliconindia.com/blogs/blogs_new.php?D67w2GYto10Dh4CV79KAEa84rsv8OPHJ+8r90GZd171314698

೩. ವ್ಯಸನ: ಜನರು ಹಲವಾರು ವಿಷಯಗಳ ವ್ಯಸನದಲ್ಲಿ ಬಿದ್ದಿದ್ದಾರೆ; ಅಶ್ಲೀಲತೆಯ ವ್ಯಸನ, ಮದ್ಯಪಾನದ ವ್ಯಸನ, ಮಾದಕ ದ್ರವ್ಯಗಳ ವ್ಯಸನ. ಅವರು ಈ ವ್ಯಸನಗಳಿಂದ ಹೊರಬರಲು ನಾವು ಅವರಿಗೆ ಸಹಾಯ ಮಾಡಬೇಕು.

ಇಲ್ಲಿರುವ ಮತ್ತು ಜಗತ್ತಿನ ಇತರ ಕಡೆಗಳಲ್ಲಿರುವ ಸೆರೆಮನೆಗಳು ಜನರಿಂದ ತುಂಬಿರುವುದು ಈ ವ್ಯಸನಗಳ ಕಾರಣದಿಂದ. ಖಂಡಿತಾ, ನಾವು ಇಲ್ಲಿನ ಸೆರೆಮನೆಗಳಲ್ಲಿ ಈಗಾಗಲೇ ಕೆಲಸವನ್ನು ಮಾಡುತ್ತಿದ್ದೇವೆ, ಆದರೆ ಜನರು ಸೆರೆಮನೆಯೊಳಕ್ಕೆ ಹೋಗದಿರಲು ನಾವು ಅವರಿಗೆ ಸಹಾಯ ಮಾಡಬೇಕು. ಆದುದರಿಂದ ನಾವೆಲ್ಲರೂ ಒಂದು ಅಪರಾಧ-ಮುಕ್ತ, ಹಿಂಸಾ-ಮುಕ್ತ ಸಮಾಜದ ಬಗ್ಗೆ ಕನಸು ಕಾಣಬಹುದು ಮತ್ತು ಅದರ ಕಡೆಗೆ ಕೆಲಸ ಮಾಡಬಹುದು.