ಬುಧವಾರ, ಏಪ್ರಿಲ್ 3, 2013

ಮಹಾತ್ಮಾ ಗಾಂಧಿ ಬದುಕಿನ ಅಪರಿಚಿತ ಪ್ರಸ೦ಗಗಳು

ಅಟ್ಲಾಂಟಾ, ಜೋರ್ಜಿಯಾ
೩ ಎಪ್ರಿಲ್ ೨೦೧೩

ವತ್ತು ನನಗೆ, ಬಹಳಷ್ಟು ಪ್ರಶಸ್ತಿಗಳು ಹಾಗೂ ಉಡುಗೊರೆಗಳನ್ನು ಪಡೆಯುತ್ತಿರುವ ಒಬ್ಬ ಮಗುವಿನಂತೆ ಅನ್ನಿಸುತ್ತಿದೆ. ಇವತ್ತು ಉಡುಗೊರೆಗಳ ಒಂದು ದಿನವಾಗಿದೆ. "ನಮ್ಮೆಲ್ಲರಿಗೂ, ಜೀವನವೇ ದೇವರಿಂದ ಬಂದ ಒಂದು ಉಡುಗೊರೆಯಾಗಿದೆ" ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಈ ಉಡುಗೊರೆಯನ್ನು ನಾವು ಗೌರವಿಸೋಣ.
ಇವತ್ತು ನಾನು, ಈ ಪ್ರಶಸ್ತಿಯನ್ನು ಪಡೆಯಲು ನಾನು ಯೋಗ್ಯನೆಂದು ಆರಿಸಿ ಇದನ್ನು ನನಗೆ ನೀಡಿದ ಮೋರ್ ಹೌಸ್ ಕಾಲೇಜಿಗೆ, ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರಿಗೆ ಮತ್ತು ಎಲ್ಲಾ ಗಣ್ಯರಿಗೆ ಧನ್ಯವಾದವನ್ನರ್ಪಿಸುತ್ತೇನೆ.
ತಮ್ಮದೇ ಆದ ಮೌನವಾದ ರೀತಿಯಲ್ಲಿ, ತಮ್ಮ ಚಿಕ್ಕ ಮೂಲೆಗಳಲ್ಲಿ, ತಮ್ಮ ಸಮುದಾಯದಲ್ಲಿ, ಶಾಂತಿ ಮತ್ತು ಅಹಿಂಸೆಗಾಗಿ ನಿರಂತರವಾಗಿ ಕೆಲಸ ಮಾಡುವ ಎಲ್ಲರಿಗಾಗಿ ಈ ಪ್ರಶಸ್ತಿಯನ್ನು ನಾನು ಪುನಃ ಸಮರ್ಪಿಸುತ್ತೇನೆ.
ಸಾಮಾಜಿಕ ಪರಿವರ್ತನೆಗೆ, ಸಾಮಾಜಿಕ ನ್ಯಾಯಕ್ಕೆ ಶಾಂತಿ ಮತ್ತು ಅಹಿಂಸೆಗಳು ಒಂದು ಪ್ರೇರಕ ಶಕ್ತಿಯಾಗಿವೆಯೆಂದು ಅಂಗೀಕರಿಸಿರುವುದು ಗಮನಾರ್ಹವಾದುದು.
ಯುದ್ಧಕ್ಕಾಗಿ ಪದಕಗಳಿವೆ. ಯುದ್ಧಗಳಲ್ಲಿ ಹೋರಾಡುವವರು ಪದಕಗಳನ್ನು ಪಡೆಯುತ್ತಾರೆ. ಆದರೆ ಶಾಂತಿ ಮತ್ತು ಅಹಿಂಸೆಗಾಗಿ ಒಂದು ಪದಕವನ್ನು ಪಡೆಯುವುದೇ, ಸಮಾಜದ ದೃಷ್ಟಿಕೋನವನ್ನು ಬದಲಾಯಿಸುತ್ತದೆ.
ದುರದೃಷ್ಟವಶಾತ್, ಕಳೆದ ಹಲವಾರು ದಶಕಗಳಲ್ಲಿ, ಆಕ್ರಮಣಶೀಲತೆಯು ಹೆಮ್ಮೆಯೊಂದಿಗೆ ಜೋಡಿಕೊಂಡಿದೆ. ನಾವು ಈ ಪ್ರವೃತ್ತಿಯನ್ನು ತಿರುಗಿಸಲು ಇದು ಸಮಯವಾಗಿದೆ. ಅಹಿಂಸೆ ಮತ್ತು ಶಾಂತಿಯಲ್ಲಿ ಹೆಮ್ಮೆಯಿರಬೇಕು.
ನಾವು ಮಕ್ಕಳಾಗಿ ಬೆಳೆಯುತ್ತಿದ್ದಾಗ, ನಾವು ಮಹಾತ್ಮಾ ಗಾಂಧಿಯವರ ಕಥೆಗಳೊಂದಿಗೆ ಬೆಳೆದೆವು. ನಾನು ನಿಮಗೆ ಇವತ್ತು, ಇನ್ನೂ ಜೀವಿಸಿರುವ ಮತ್ತು ತಮ್ಮ ಜೀವನದ ೧೧೮ ವರ್ಷಗಳನ್ನು ಸಂಪೂರ್ಣಗೊಳಿಸಿರುವ ನನ್ನ ಶಿಕ್ಷಕರ ಬಗ್ಗೆ ಹೇಳಲು ಬಯಸುತ್ತೇನೆ. ಈ ಸಜ್ಜನರು, ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದಾಗ ಅವರಿಗೆ ಧರ್ಮಗ್ರಂಥವಾದ ಭಗವದ್ಗೀತೆಯನ್ನು ಕಲಿಸಿದರು. ಅವರು ಮಹಾತ್ಮಾ ಗಾಂಧಿಯವರೊಂದಿಗೆ, ಅವರ ಬೋಧಕರಾಗಿ ಹಾಗೂ ಅವರ ಲೇಖಕರಾಗಿ ಕೂಡಾ ೪೦ ವರ್ಷಗಳ ವರೆಗಿದ್ದರು. ಅವರು ದಕ್ಷಿಣದ ಭಾಷೆಗಳಿಗೆ ಅನುವಾದಕರಾಗಿ ಮತ್ತು ಕಥಾ ಲೇಖಕರಾಗಿದ್ದರು. ಅವರ ಹೆಸರು ಪಂಡಿತ್ ಸುಧಾಕರ್ ಚತುರ್ವೇದಿ. ಅವರು ನಮಗೆ, ಮಹಾತ್ಮಾ ಗಾಂಧಿಯೊಂದಿಗಿನ ತಮ್ಮ ಘಟನೆಗಳನ್ನು ಅಥವಾ ಕಥೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಕೆಲವು ದಾಖಲಾಗಿಲ್ಲ, ಆದುದರಿಂದ ನಿಮಗೆ ಅವುಗಳು ಯಾವುದೇ ಪುಸ್ತಕಗಳಲ್ಲಿ ಸಿಗುವುದಿಲ್ಲ. ನಿಮಗೆ ಪ್ರೇರಣೆ ನೀಡಬಹುದಾದಂತಹ, ಅಂತಹ ಕೆಲವು ಕಥೆಗಳನ್ನು ನಾನು ಹೇಳಲು ಬಯಸುತ್ತೇನೆ.
ಒಂದು ಘಟನೆಯು, ಮಹಾತ್ಮಾ ಗಾಂಧಿಯವರು ಒಂದು ಚಿಕ್ಕ ರೈಲಿನಲ್ಲಿ ಡಾರ್ಜಿಲಿಂಗಿಗೆ ಬೆಟ್ಟ ಹತ್ತುತ್ತಿದ್ದಾಗ ಆಗಿತ್ತು. ಡಾರ್ಜಿಲಿಂಗ್ ಎಂಬುದು ಭಾರತದಲ್ಲಿರುವ ಒಂದು ಗಿರಿಧಾಮವಾಗಿದೆ ಮತ್ತು ಅಲ್ಲಿಗೆ ಹೋಗಲು ಚಿಕ್ಕ ರೈಲು ಇರುತ್ತದೆ. ಅದೊಂದು ನ್ಯಾರೋ ಗೇಜ್ ರೈಲಾಗಿದೆ. ಈಗ ಏನಾಯಿತೆಂದರೆ, ರೈಲು ಬೆಟ್ಟದ ಮೇಲೆ ಹತ್ತುತ್ತಿದ್ದಾಗ, ಎಲ್ಲೋ, ಇಂಜಿನು ಬೋಗಿಗಳಿಂದ ಬೇರ್ಪಟ್ಟಿತು. ಆದುದರಿಂದ ಇಂಜಿನು ಮುಂದೆ ಹೋಯಿತು ಮತ್ತು ಬೋಗಿಗಳು ಹಿಂದಕ್ಕೆ ಜಾರಲು ತೊಡಗಿದವು. ಸುಮ್ಮನೆ ಊಹಿಸಿಕೊಳ್ಳಿ, ಒಂದು ದೊಡ್ಡ ಬೆಟ್ಟದ ಭೂಪ್ರದೇಶದಲ್ಲಿ, ಬೋಗಿಗಳು ಹಿಂದಕ್ಕೆ ಜಾರುತ್ತಿವೆ, ಏನಾಗಬಹುದು? ಜನರು ಜೀವನ್ಮರಣದ ಮಧ್ಯೆಯಿದ್ದುದರಿಂದ, ಅಲ್ಲೊಂದು ದೊಡ್ಡ ಭೀತಿಯುಂಟಾಯಿತು. ಯಾವುದೇ ಕ್ಷಣದಲ್ಲಾದರೂ ಬೋಗಿಗಳು ಬೆಟ್ಟದಿಂದ ಕೆಳಕ್ಕೆ ಬೀಳಬಹುದಿತ್ತು ಮತ್ತು ಒಬ್ಬರಿಗೆ ಒಂದು ಎಲುಬಿನ ಚೂರನ್ನೂ ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಅದು ಹಿಮಾಲಯವಾಗಿತ್ತು.
ಹೀಗೆ ಅಲ್ಲೆಲ್ಲಾ ಸುತ್ತಲೂ ಭೀತಿಯಿದ್ದಾಗ, ಮಹಾತ್ಮಾ ಗಾಂಧಿಯವರು ಪತ್ರಗಳನ್ನು ಉಕ್ತಲೇಖನ (ಡಿಕ್ಟೇಷನ್) ಮಾಡುತ್ತಿದ್ದರು ಮತ್ತು ಅವರು ನನ್ನ ಶಿಕ್ಷಕರಿಗೆ ಅಂದರು; ಅವರು ಅವರನ್ನು  ಬೆಂಗಳೂರಿ ಅಂತ ಕರೆಯುತ್ತಿದ್ದರು, ಯಾಕೆಂದರೆ ಅವರು ಬೆಂಗಳೂರಿನವರಾಗಿದ್ದರು; "ಬೆಂಗಳೂರಿ, ಉಕ್ತಲೇಖನ ತೆಗೆದುಕೋ."
ನನ್ನ ಶಿಕ್ಷಕರಂದರು, "ಬಾಪು (ತಂದೆ, ಮಹಾತ್ಮಾ ಗಾಂಧಿಯವರನ್ನು ಉದ್ದೇಶಿಸಿ), ಏನಾಗುತ್ತಿದೆಯೆಂಬುದು ನಿಮಗೆ ತಿಳಿದಿದೆಯೇ? ನಾವು ಬದುಕುಳಿಯದೇ ಇರಲೂಬಹುದು. ನಾವು ಜೀವನ ಮತ್ತು ಮರಣದ ನಡುವೆ ಇದ್ದೇವೆ. ಬೋಗಿಗಳು ಹಿಂದಕ್ಕೆ ಚಲಿಸುತ್ತಿವೆ ಮತ್ತು ಅದನ್ನು ನಿಲ್ಲಿಸಲು ಏನೂ ಇಲ್ಲ, ಹಾಗೂ ಅದು ವೇಗವನ್ನು ಗಳಿಸುತ್ತಿದೆ."
ಆಗ ಮಹಾತ್ಮಾ ಗಾಂಧಿಯವರು ಏನು ಹೇಳಿದರೆಂಬುದು ನಿಮಗೆ ತಿಳಿದಿದೆಯೇ? ಅವರಂದರು, "ನಾವು ಬದುಕುಳಿದೆವೆಂದು ಇಟ್ಟುಕೊಳ್ಳೋಣ, ನಾವು ಈ ಎಲ್ಲಾ ಸಮಯವನ್ನೂ ವ್ಯರ್ಥ ಮಾಡಿದಂತಾಗುತ್ತದೆ. ನಾವು ಸತ್ತರೆ, ನಾವು ಸಾಯುತ್ತೇವೆ. ಆದರೆ ನಾವು ಬದುಕುಳಿದರೆ, ನಾವು ಅಷ್ಟೊಂದು ಸಮಯವನ್ನು ಹಾಳು ಮಾಡಿರುತ್ತೇವಲ್ಲವೇ? ಆದುದರಿಂದ, ಬನ್ನಿ, ಉಕ್ತಲೇಖನ ತೆಗೆದುಕೊಳ್ಳಿ."
ನಡುಗುವ ಕೈಗಳೊಂದಿಗೆ ನನ್ನ ಶಿಕ್ಷಕರು ಉಕ್ತಲೇಖನ ತೆಗೆದುಕೊಳ್ಳುತ್ತಿದ್ದರು.
ಅವರು ನನಗೆ ಹೇಳುತ್ತಿದ್ದರು, "ಈ ವಯಸ್ಸಾದ ವ್ಯಕ್ತಿಯನ್ನು ನೋಡು, ಅವರು ತಮ್ಮ ಜೀವನದ ಒಂದು ಕ್ಷಣವನ್ನೂ ವ್ಯರ್ಥ ಮಾಡಲಾರರು."
ನಿಮ್ಮೊಂದಿಗೆ ನಾನು ಹಂಚಲು ಬಯಸುವ ಇನ್ನೊಂದು ಕಥೆಯಿದೆ. ಒಮ್ಮೆ ಗಾಂಧಿಯವರ ಧೋತಿ, ಅಂದರೆ ಅವರ ಬಟ್ಟೆಯು ಹರಿದಿತ್ತು ಮತ್ತು ಯಾರೋ ಅಂದರು, "ಬಾಪು, ನಿಮ್ಮ ಧೋತಿಯು ಹರಿದಿದೆ." ಹಾಗೆ ಗಾಂಧಿಯವರು ಬಚ್ಚಲುಮನೆಯೊಳಗೆ ಹೋಗುತ್ತಾರೆ ಮತ್ತು ಅವರ ಬಟ್ಟೆಯನ್ನು ಸ್ವಲ್ಪ ಸರಿಹೊಂದಿಸುತ್ತಾರೆ ಮತ್ತು ನಂತರ ಹೇಳುತ್ತಾರೆ, "ನೋಡೀಗ, ಮತ್ತು ಅದು ಎಲ್ಲಿ ಹರಿದಿದೆಯೆಂದು ನನಗೆ ಹೇಳು? ಅದು ಹರಿಯಲು ಇನ್ನೂ ಬಹಳಷ್ಟು ಉಳಿದಿದೆ." ಹೀಗೆ ಸಂಪನ್ಮೂಲಗಳನ್ನು ವ್ಯರ್ಥ ಮಾಡದಿರುವುದು; ಸ್ವಭಾವತಃ ಗ್ರಾಹಕನಾಗದಿರುವುದು ಅವರ ಕಲ್ಪನೆಯಾಗಿತ್ತು. ಎಲ್ಲರ ಅವಶ್ಯಕತೆಗೆ ಬೇಕಾದಷ್ಟಿದೆ, ಆದರೆ ಎಲ್ಲರ ಲೋಭಕ್ಕೆ ಬೇಕಾದಷ್ಟಲ್ಲ - ಇದು ಅವರು ನೀಡುತ್ತಿದ್ದ ಸಂದೇಶವಾಗಿತ್ತು.
ಗಾಂಧಿಯವರಿಗೆ ಅಷ್ಟೊಂದು ಮೃದುವಾದ; ಒಂದು ಮಗುವಿಗಿದ್ದಂತಹ ಹೃದಯ; ಒಂದು ಮಗುವಿನ ಮುಗ್ಧತೆಯಿತ್ತು. ಇವತ್ತು ಬೇಕಾಗಿರುವುದೇನೆಂದರೆ ಗಾಂಧಿಯವರ ಮುಗ್ಧತೆ, ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಶೌರ್ಯ, ಸತ್ವ, ಬದ್ಧತೆ ಮತ್ತು ದೃಷ್ಟಿ. ಈ ಎರಡು ವಿಷಯಗಳು ಒಟ್ಟಾಗಿ ಸೇರಿದರೆ, ನಾವಿಂದು ಇರುವ ಪರಿಸ್ಥಿತಿಗೆ ಉತ್ತರವಾಗಿದೆ.
ಇವತ್ತಿನ ಸನ್ನಿವೇಶದಲ್ಲಿ ಗಾಂಧಿಯವರ ತತ್ವಗಳು ಮಾತ್ರವಾಗಿ ಕೆಲಸ ಮಾಡಬಲ್ಲವೆಂದು ನಾನು ಹೇಳುವುದಿಲ್ಲ. ನೀವು ಉಪವಾಸ ಮಾಡುತ್ತಿರುವುದಾದರೆ ಜನರು, "ನೀವು ಉಪವಾಸ ಮಾಡುತ್ತಿರಿ, ಪರವಾಗಿಲ್ಲ. ನೀವು ಪ್ರಪಂಚಕ್ಕೆ ಅಷ್ಟು ಒಳ್ಳೆಯದನ್ನು ಮಾಡಬಹುದು" ಎಂದು ಹೇಳುವರು.
ಅದರೊಂದಿಗೆ, ಮಾರ್ಟಿನ್ ಲೂಥರ್ ಕಿಂಗ್ ಜಗತ್ತಿಗೆ ತೋರಿಸಿದ ಹೃದಯ ಮತ್ತು ಬದ್ಧತೆಯು ನಿಮ್ಮಲ್ಲಿ ಬೇಕು. ಆಗ ಅದು ಸಂಪೂರ್ಣವಾಗುತ್ತದೆ. ನಂತರ ಸಾಮಾಜಿಕ ನ್ಯಾಯ ಮತ್ತು ಇವತ್ತಿನ ಪ್ರಪಂಚದಲ್ಲಿ ಹೆಚ್ಚಿನ ಅಗತ್ಯವಿರುವ ಕ್ರಾಂತಿಯು ಮುಂದೆ ಬರುತ್ತದೆ. ಅದು ಇವತ್ತಿನ ಯುವಜನತೆಯಿಂದ ಮುಂದಕ್ಕೆ ಬರಬೇಕು. ಇಲ್ಲಿ ಕುಳಿತಿರುವ ನೀವೆಲ್ಲರೂ; ನೀವು ಅಹಿಂಸೆಗಾಗಿ ಎದ್ದು ನಿಲ್ಲಬೇಕು.
ಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ, ಕಳೆದ ವರ್ಷದಲ್ಲಿ ಮಾತ್ರವಾಗಿ, ಹತ್ತು ದಶಲಕ್ಷ ಹಿಂಸೆಯ ಘಟನೆಗಳು ದಾಖಲಾಗಿವೆ. ಮಕ್ಕಳ ವಿರುದ್ಧ ಹಿಂಸೆ, ಮಹಿಳೆಯರ ವಿರುದ್ಧ ಹಿಂಸೆ, ಜಾತಿಗಳ ವಿರುದ್ಧ ಹಿಂಸೆ, ಧಾರ್ಮಿಕ ಗುಂಪುಗಳ ವಿರುದ್ಧ ಹಿಂಸೆ, ಮೊದಲಾದವು. ಸಮಾಜದಲ್ಲಿ ಅಸಹನೆಯು ಬೆಳೆಯುತ್ತಿದೆ. ಆದರೆ ನಾವು ಭೀತಿಗೊಳಗಾಗಬೇಕಿಲ್ಲ, ಯಾಕೆಂದರೆ ಸತ್ಯ ಮತ್ತು ಅಹಿಂಸೆಯು ಯಾವತ್ತೂ ಜಯಶಾಲಿಯಾಗುವುವು. ನಾವು ಮಾಡಬೇಕಾಗಿರುವುದೇನೆಂದರೆ, ಅಹಿಂಸೆಯ ಶತಕೋಟಿ ಕ್ರಿಯೆಗಳನ್ನು ಸೃಷ್ಟಿಸುವುದು. ಪ್ರತಿಯೊಂದು ಹಿಂಸಾತ್ಮಕ ಕ್ರಿಯೆಗೂ, ನಾವು ನೂರು ಅಹಿಂಸಾತ್ಮಕ ಕ್ರಿಯೆಗಳನ್ನು ಸೃಷ್ಟಿಸಬೇಕು. ಅಹಿಂಸೆಯ ಧ್ವನಿಯು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಕೇಳಬೇಕು. ಇದುವೇ ನಮಗೆ ಬೇಕಾಗಿರುವುದು.
ಇವತ್ತು ನಾವೆಲ್ಲರೂ ಹಾಡಿದೆವು, "ಜಗತ್ತಿನಲ್ಲಿ ನಾವು ನೋಡಲು ಬಯಸುವ ಬದಲಾವಣೆಯು ನಾವಾಗಿರುವೆವು" ಎಂದು. ಆದುದರಿಂದ ಬದಲಾವಣೆಯು ಇಲ್ಲಿಂದಲೇ, ನಾವೆಲ್ಲಿರುವೆವೋ ಅಲ್ಲಿಂದಲೇ; ನಮ್ಮಲ್ಲಿ ಪ್ರತಿಯೊಬ್ಬರಿಂದಲೂ ಶುರುವಾಗುತ್ತದೆ.
ನನ್ನ ಶಿಕ್ಷಕರು ಹೇಳುತ್ತಿದ್ದ, ಮಹಾತ್ಮಾ ಗಾಂಧಿಯವರ ಇನ್ನೊಂದು ಘಟನೆ.
ನನ್ನ ಶಿಕ್ಷಕರು ಮಹಾತ್ಮಾ ಗಾಂಧಿಯವರೊಂದಿಗೆ ಯೆರ್ವಾಡಾ ಜೈಲಿನಲ್ಲಿದ್ದರು. ಅಲ್ಲಿ ಅವರಲ್ಲಿ ಕೇವಲ ಮೂವರಿದ್ದರು, ಮಹಾತ್ಮಾ ಗಾಂಧಿ, ಮಹಾತ್ಮಾ ಗಾಂಧಿಯವರ ಪತ್ನಿ ಕಸ್ತೂರ್ಬಾ ಗಾಂಧಿ ಮತ್ತು ನನ್ನ ಶಿಕ್ಷಕರು. ಈ ಘಟನೆಯು ಕಸ್ತೂರ್ಬಾ ಗಾಂಧಿಯವರ ಕೊನೆಯ ದಿನದ್ದಾಗಿದೆ. ಅವರು ತಮ್ಮ ಮರಣ ಶಯ್ಯೆಯಲ್ಲಿದ್ದರು, ಮತ್ತು ಮಹಾತ್ಮಾ ಗಾಂಧಿಯವರು ಕೋಣೆಯಿಂದ ಹೊರಬರುತ್ತಾರೆ ಮತ್ತು ಅವರು ಹೇಳುತ್ತಾರೆ, "ಬೆಂಗಳೂರಿ, ಇವತ್ತು ನನ್ನ ಪರೀಕ್ಷೆಯ ದಿನವಾಗಿದೆ. ಇವತ್ತು, ನಾನು ನನ್ನ ಸಮಚಿತ್ತತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು, ಎಲ್ಲರನ್ನೂ ನಾನು ಒಂದೇ ರೀತಿಯಲ್ಲಿ ಹೇಗೆ ನೋಡಬಹುದು ಎಂದು ನೋಡುವ ದಿನವಾಗಿದೆ. ಇವತ್ತು ನನ್ನ ಪರೀಕ್ಷೆಯ ದಿನವಾಗಿದೆ.''
ಅವರು ಈ ಮಾತುಗಳನ್ನು ಹೇಳುತ್ತಿದ್ದಂತೆ, ಕಣ್ಣೀರ ಹನಿಗಳು ಅವರ ಕಣ್ಣುಗಳಿಂದ ಕೆಳಗೆ ಹರಿಯುತ್ತಿದ್ದವು. ನನ್ನ ಶಿಕ್ಷಕರಂದರು, "ನಾನವರನ್ನು ಮೊದಲು ಯಾವತ್ತೂ ಅಂತಹ ಸ್ಥಿತಿಯಲ್ಲಿ ನೋಡಿರಲಿಲ್ಲ. ಆದರೆ ಆ ಕಣ್ಣೀರ ಹನಿಗಳು ಎಲ್ಲವನ್ನೂ ಹೇಳಿದವು."
ಮಹಾತ್ಮಾ ಗಾಂಧಿಯವರು ಹೇಳಿದರು, "ಇವತ್ತು, ನಾನು ನನ್ನ ೪೦ ವರ್ಷಗಳ ಕಾಲದ ಸಂಗಾತಿಗೆ ವಿದಾಯ ಹೇಳಬೇಕಾಗಿದೆ. ಅವಳು ನನ್ನ ಶಕ್ತಿಯಾಗಿದ್ದಳು, ಅವಳು ನನ್ನ ಸ್ಫೂರ್ತಿಯಾಗಿದ್ದಳು ಮತ್ತು ನನ್ನೆಲ್ಲಾ ಕೊಳೆಯನ್ನು, ನನ್ನೆಲ್ಲಾ ಬಲಹೀನತೆಗಳನ್ನು ತೆಗೆದುಕೊಂಡು, ಅದನ್ನು ನುಂಗಿ ನನ್ನ ಪಕ್ಕ ನಿಂತವಳು ಅವಳಾಗಿದ್ದಳು. ಈಗ, ಇವತ್ತು ನಾನು ನನ್ನನ್ನು ಸಮಚಿತ್ತತೆಯಲ್ಲಿರಿಸಿಕೊಳ್ಳಬೇಕಾಗಿದೆ. ಇವತ್ತು ನನ್ನ ಆಧ್ಯಾತ್ಮಿಕತೆಯ ಪರೀಕ್ಷೆಯಾಗಿದೆ."
ಹೀಗೆ, ಜೀವನದಲ್ಲಿ ನೀವು ವೈಯಕ್ತಿಕವಾಗಿ ನಿಮ್ಮ ಕಡೆಗೆಯೇ ಗಮನ ಕೊಡುವ, ವೀಕ್ಷಿಸುವ, ಅರ್ಥ ಮಾಡಿಕೊಳ್ಳುವ ಮತ್ತು ನಿಮ್ಮೊಳಗೆ ಏನಾಗುತ್ತಿದೆಯೆಂದು ನೋಡುವ ಈ ಕ್ಷಣಗಳು ನಿಮ್ಮ ಜೀವನದಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ನೀವು ಯಾರು? ನಿಮಗೇನು ಬೇಕು? ಮತ್ತು ನೀವೇನನ್ನು ತಿಳಿಯಪಡಿಸಲು ಬಯಸುವಿರಿ? ಇದನ್ನು ಗಮನಿಸುವುದು, ಒಂದು ವ್ಯತ್ಯಾಸವನ್ನುಂಟುಮಾಡುತ್ತದೆ.
ನಿಮಗೆ ಗೊತ್ತಾ, ಶಾಲೆಯಲ್ಲಾಗಲೀ ಮನೆಯಲ್ಲಾಗಲೀ, ನಕಾರಾತ್ಮಕ ಭಾವನೆಗಳನ್ನು ತೊಡೆದು ಹಾಕುವುದು ಹೇಗೆಂಬುದನ್ನು ಅಥವಾ ಕೇಂದ್ರಿತರಾಗಿರುವುದು ಹೇಗೆಂಬುದನ್ನು ಅಥವಾ ಎಲ್ಲರೊಂದಿಗೂ ಆತ್ಮೀಯತೆಯ ಭಾವದಿಂದಿರುವುದು ಹೇಗೆಂಬುದನ್ನು ಯಾರೂ ಕಲಿಯುವುದಿಲ್ಲ. ಇದುವೇ ನಮಗಿಂದು ನಿಜವಾಗಿ ಬೇಕಾಗಿರುವುದು. ನಾವು ಸಮುದಾಯಗಳನ್ನು ತಲಪಬೇಕಾಗಿದೆ. ಸಮುದಾಯಗಳು ಇನ್ನು ಮುಂದೆ ಪ್ರತ್ಯೇಕವಾದ ಗುಂಪುಗಳಾಗಿ ಉಳಿಯಲು ಸಾಧ್ಯವಿಲ್ಲ. ಪ್ರತಿಯೊಂದು ಸಮುದಾಯವೂ ಬಂದು ಇತರ ಸಮುದಾಯಗಳೊಂದಿಗೆ ಕೈಕುಲುಕಬೇಕಾಗಿದೆ.
ಐಕೆಡಾ ಸ್ಥಾಪನೆಯು ಇಲ್ಲಿ ಭಾಗವಹಿಸುತ್ತಿದೆ ಮತ್ತು ವಿವಿಧ ಸಮುದಾಯಗಳನ್ನು ಹತ್ತಿರ ತರುವಂತಹ ಅಷ್ಟೊಂದು ಒಳ್ಳೆಯ ಕೆಲಸವನ್ನು ಹಲವಾರು ದೇಶಗಳಲ್ಲಿ ಅವರು ಮಾಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ.
ಬುದ್ಧನ ಬೋಧನೆಗಳು, ಯೇಸುಕ್ರಿಸ್ತನ ಬೋಧನೆಗಳು ಮತ್ತು ಕೃಷ್ಣನ ಬೋಧನೆಗಳು, ಅವುಗಳೆಲ್ಲವೂ ಒಂದು ವಿಷಯದ ಕಡೆಗೆ ಬೊಟ್ಟು ಮಾಡುತ್ತವೆ; ಏನೆಂದರೆ ನಾವೆಲ್ಲರೂ ಪ್ರೇಮದಿಂದ ಮಾಡಲ್ಪಟ್ಟಿದ್ದೇವೆ ಮತ್ತು ನಾವು ಪ್ರೇಮವೇ ಆಗಿದ್ದೇವೆ. ನಾವಿದನ್ನು ಜೀವಿಸೋಣ. ನಾವು ಇದಕ್ಕೊಂದು ಅಭಿವ್ಯಕ್ತಿಯನ್ನು ಕಂಡುಕೊಳ್ಳೋಣ. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇರುವ ಈ ಚೈತನ್ಯವನ್ನು ಗುರುತಿಸೋಣ.
ಯೇಸುಕ್ರಿಸ್ತನ ಸಂದೇಶವು, "ನೀವು ಪ್ರೇಮವಾಗಿರುವಿರಿ ಮತ್ತು ದೇವರೆಂದರೆ ಪ್ರೇಮ" ಎಂದಾಗಿದೆ. ಅಂತರ್ಧರ್ಮ ಸಮುದಾಯಕ್ಕೆ ಇಂದು, ಛಿದ್ರಗೊಂಡ ಸಮುದಾಯಗಳನ್ನು ಒಟ್ಟಾಗಿಸುವ ಮತ್ತು ಹಿಂಸೆಯಲ್ಲಿ ತೊಡಗಿರುವ ಆ ಎಲ್ಲಾ ಜನರನ್ನು ತಲಪುವ  ಒಂದು ದೊಡ್ದದಾದ ಪಾತ್ರವನ್ನು ನಿರ್ವಹಿಸಲಿದೆ. ಇದು ಮನೆಯಲ್ಲಿನ ಹಿಂಸಾಚಾರವನ್ನು ಮತ್ತು ಸಾಮಾಜಿಕ ಹಿಂಸಾಚಾರವನ್ನು ಒಳಗೊಂಡಿದೆ. ಹಾಗೆಯೇ, ತನ್ನ ಕಡೆಗೆಯೇ ಹಿಂಸಾತ್ಮಕವಾಗಿರುವುದು - ಇದು ಪರಿಗಣಿಸಬೇಕಾಗಿರುವ ಒಂದು ವಿಷಯವಾಗಿದೆ.
ಹಲವು ಜನರು ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಯಾಕೆಂದರೆ ಅವರು ತಮ್ಮ ಕಡೆಗೆಯೇ ಬಹಳ ಕಠಿಣವಾಗಿರುತ್ತಾರೆ. ಇವತ್ತು ಜಗತ್ತಿನಲ್ಲಿ ಸಾವಿರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಖಿನ್ನತೆಯು ಅಷ್ಟೊಂದು ದೊಡ್ಡ ನಷ್ಟವನ್ನುಂಟುಮಾಡುತ್ತದೆ. ಈ ಪರಿಸ್ಥಿತಿಗಳಲ್ಲಿ, ನಾವೆಲ್ಲರೂ ನಮ್ಮ ಧ್ವನಿಯನ್ನು ಏರಿಸಿ ಅಹಿಂಸೆಯ ಕಡೆಗೆ ಕೆಲಸ ಮಾಡಬೇಕಾಗಿದೆ.
ಸ್ವಲ್ಪ ಸಮಯದ ಹಿಂದೆ, ನಾನು ದಕ್ಷಿಣ ಅಮೇರಿಕಾ; ಮೆಕ್ಸಿಕೋದಲ್ಲಿದ್ದೆ. ಟ್ರಾಫಿಕ್ ದೀಪದ ಬಳಿ ಇಬ್ಬರು ಟ್ಯಾಕ್ಸಿ ಚಾಲಕರ ನಡುವೆ ಒಂದು ವಾದವಾಯಿತು. ಅವರಿಬ್ಬರೂ ಕಾರಿನಿಂದ ಹೊರಬಂದು ಪರಸ್ಪರರಿಗೆ ಗುಂಡಿಕ್ಕಿದರು. ಟ್ಯಾಕ್ಸಿಗಳಲ್ಲಿ ಪ್ರಯಾಣಿಕರು ಕುಳಿತಿದ್ದರು ಮತ್ತು ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಚಾಲಕರು ಹೋಗಿಬಿಟ್ಟಿದ್ದರು.
ಅಸಹಿಷ್ಣುತೆ ಮತ್ತು ಒತ್ತಡಗಳ ಕಡೆಗೆ ಗಮನ ಕೊಡಬೇಕಾಗಿದೆ.
ನಾವೆಲ್ಲರೂ ಒಂದುಗೂಡೋಣ ಮತ್ತು ಈ ವರ್ಷ, ಒಂದು ಶತಕೋಟಿ ಅಹಿಂಸಾತ್ಮಕ ಕ್ರಿಯೆಗಳನ್ನು, ಗೆಳೆತನದ ಕ್ರಿಯೆಗಳನ್ನು ಮತ್ತು ಸಹಾನುಭೂತಿಯ ಕ್ರಿಯೆಗಳನ್ನು ಸೃಷ್ಟಿಸೋಣ. ನಾವು ಅನುವಂಶಿಕವಾಗಿ ಪಡೆದಿರುವ ಜಗತ್ತಿಗಿಂತ ಉತ್ತಮವಾದ ಒಂದು ಜಗತ್ತನ್ನು ನಮ್ಮ ಮಕ್ಕಳು ಪಡೆಯಬೇಕು.