ಭಾನುವಾರ, ಜುಲೈ 21, 2013

ನಿನ್ನಿನದನ್ನು ಮರೆತು ಇಂದಿನದರತ್ತ ಗಮನ ಹರಿಸಿ

ಮಾಂಟ್ರಿಯಾಲ್, ಕೆನಡ
೨೧ ಜುಲೈ ೨೦೧೩

ಪ್ರಶ್ನೆ: ಗುರುದೇವ, ಒಂದು ಮಾನವ ಆತ್ಮವು ಮೋಕ್ಷವನ್ನು ಪಡೆಯಲು ಹೆಚ್ಚಾಗಿ ಒಂದು ಅಥವಾ ಎರಡು ಮಿಲಿಯನ್ ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ನನಗೆ ಹೇಳಲಾಗಿದೆ. ಕ್ರಿಯೆ ಮತ್ತು ಧ್ಯಾನಗಳನ್ನು ಪ್ರತಿದಿನವೂ ಮಾಡುವುದರಿಂದ, ಈ ಮೋಕ್ಷವನ್ನು ಒಂದು ಜನ್ಮದಲ್ಲಿಯೇ ಪಡೆದುಕೊಳ್ಳಬಹುದು ಎಂಬುದು ನಿಜವೇ?

ಶ್ರೀ ಶ್ರೀ ರವಿ ಶಂಕರ್: ಎಲ್ಲವೂ ಯಾವುದೋ ವಿಚಿತ್ರವಾದ ಕರ್ಮದೊಂದಿಗೆ ಕೆಲಸ ಮಾಡುತ್ತದೆ. ನೀವು ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿ ಈ ಕ್ಷೇತ್ರದೊಳಕ್ಕೆ ನೋಡಬೇಕು.

ಒಂದು ಸುಂದರವಾದ ದ್ವಿಪದಿಯಿದೆ, ಅದು ಹೀಗೆಂದು ಹೇಳುತ್ತದೆ, "ಈ ಪ್ರಪಂಚವು ಎಲ್ಲಾ ಸಂಪತ್ತನ್ನು ಹೊಂದಿದೆ, ಬೇಕಾದುದೆಲ್ಲವೂ ಇದೆ, ಆದರೆ ಕರ್ಮವಿಲ್ಲದವನೊಬ್ಬನು ಅದನ್ನು ಪಡೆಯಲು ಸಾಧ್ಯವಿಲ್ಲ."

ಹಾಗಾಗಿ, ಏನನ್ನಾದರೂ ನೀನು ಪಡೆಯುವೆಯೋ ಅಥವಾ ಇಲ್ಲವೋ, ಅದೆಲ್ಲವೂ ಯಾವುದೋ ವಿಚಿತ್ರ ಕರ್ಮಗಳಿಗನುಸಾರವಾಗಿ ಕೆಲಸ ಮಾಡುತ್ತದೆ.

ಮನ್ನಣೆ, ಹಣ, ಅಧಿಕಾರ, ಸಂಬಂಧ, ಆರೋಗ್ಯ; ಎಲ್ಲವೂ ಸೃಷ್ಟಿಯಲ್ಲಿರುವ ಒಂದು ನಿಯಮದ ಮೇಲೆ ಅವಲಂಬಿಸಿದೆ. ಒಳ್ಳೆಯ ಕಾಲ ಬರುವಾಗ, ನಿಮ್ಮ ಅತ್ಯಂತ ಕೆಟ್ಟ ಶತ್ರು ನಿಮಗೆ ಸಹಾಯ ಮಾಡಲು ತೊಡಗುತ್ತಾನೆ ಮತ್ತು ಕೆಟ್ಟ ಕಾಲ ಬರುವಾಗ, ನಿಮ್ಮ ಅತ್ಯಂತ ಒಳ್ಳೆಯ ಸ್ನೇಹಿತ ಕೂಡಾ ಒಬ್ಬ ಶತ್ರುವಂತೆ ವರ್ತಿಸುತ್ತಾನೆ. ಈ ಎಲ್ಲಾ ಸಂಗತಿಗಳು ಆಗುವುದು ಯಾವುದೋ ಬಹಳ ವಿಚಿತ್ರ ಕರ್ಮಗಳಿಂದಾಗಿ. ಒಬ್ಬ ಬುದ್ಧಿವಂತ ವ್ಯಕ್ತಿಯು ಇದೆಲ್ಲದರಲ್ಲಿ ಸಿಕ್ಕಿಬೀಳುವುದಿಲ್ಲ. ಅವನು ಇನ್ನೂ ತನ್ನ ಪ್ರಯತ್ನ ಹಾಕುತ್ತಾ ಇರುತ್ತಾನೆ ಮತ್ತು ಮುಂದೆ ಸಾಗುತ್ತಾ ಇರುತ್ತಾನೆ.

ಒಂದು ಪ್ರಯತ್ನವನ್ನು ಹಾಕಲು ನೀವು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿ ಮತ್ತು ನಂತರ ನೀವದನ್ನು ಬಿಟ್ಟುಬಿಡಿ.

ಮಹಾಭಾರತ ಯುದ್ಧವನ್ನು ತಡೆಯಲು ಶ್ರೀಕೃಷ್ಣ ಪರಮಾತ್ಮನು ಮೂರು ಸಲ ಹೋದನು ಎಂಬುದು ನಿಮಗೆ ಗೊತ್ತಿದೆಯೇ?

ಯಾರೋ ಒಬ್ಬರು ಶ್ರೀಕೃಷ್ಣ ಪರಮಾತ್ಮನಲ್ಲಿ, "ಹೇಗಿದ್ದರೂ ಯುದ್ಧವಾಗುತ್ತದೆಯೆಂಬುದು ನಿನಗೆ ತಿಳಿದಿತ್ತು ಎಂದಾದರೆ, ಶಾಂತಿ ಸಂಧಾನಕ್ಕಾಗಿ ನೀನು ಮೂರು ಸಲ ಯಾಕೆ ಹೋದೆ? ಎಲ್ಲಾ ಮೂರು ಸಾರಿಯೂ ನಿನ್ನ ಶಾಂತಿ ಸಂಧಾನಗಳು ಸೋತವು, ಹಾಗಾದರೆ ನೀನು ಯಾಕೆ ಹೋದೆ?" ಎಂದು ಕೇಳಿದರು. ಅದೊಂದು ಬಹಳ ಸಮಂಜಸವಾದ ಪ್ರಶ್ನೆ.

ಆಗ ಶೀಕೃಷ್ಣ ಪರಮಾತ್ಮನು ಹೀಗೆಂದು ಹೇಳಿದನು, "ನಾನು ಹೋಗದೇ ಇರುತ್ತಿದ್ದರೆ ಆಗ, ನೀನು ಶಾಂತಿ ಸಂಧಾನ ಮಾಡಬಹುದಾಗಿತ್ತು, ನೀನದನ್ನು ಯಾಕೆ ಮಾಡಲಿಲ್ಲ? ಎಂಬ ಪ್ರಶ್ನೆ ಬರುತ್ತಿತ್ತು."

ನಿನ್ನ ಕರ್ಮದ ಕಡೆಗೆ ನಿನಗೆ ನಿನ್ನ ಕರ್ತವ್ಯವಿದೆ, ನೀನು ಏನೆಲ್ಲಾ ಮಾಡಬೇಕೋ, ನೀನದನ್ನು ಮಾಡು!

ಶಾಂತಿ ಸಂಧಾನವು ಯಶಸ್ವಿಯಾಯಿತೆಂದು ಇಟ್ಟುಕೊಳ್ಳೋಣ, ಆಗ ಇಡೀ ಮಹಾಭಾರತವು ಮುಗಿಯುತ್ತಿತ್ತು ಮತ್ತು ಗೀತೆಯು ಬರುತ್ತಲೇ ಇರಲಿಲ್ಲ! ದೇವರ ಅಮರ ಹಾಡು (ಭಗವದ್ಗೀತೆ) ಅಸ್ತಿತ್ವಕ್ಕೇ ಬರುತ್ತಿರಲಿಲ್ಲ!

ಹಾಗಾಗಿ, ಗೀತೆಯು ಬರಲೇ ಬೇಕು ಮತ್ತು ಯುದ್ಧವು ಆಗಲೇಬೇಕು ಎಂಬುದನ್ನು ಬಹಳ ಚೆನ್ನಾಗಿ ತಿಳಿದಿದ್ದರೂ ಸಹ ಶ್ರೀಕೃಷ್ಣ ಪರಮಾತ್ಮನು ಶಾಂತಿ ಸಂಧಾನಗಳಿಗಾಗಿ ಹೋದನು. ಇದು ಯಾಕೆಂದರೆ, ಅದು ನಮ್ಮ ಧರ್ಮದಲ್ಲಿದೆ, ನಮ್ಮ ಸ್ವಭಾವದಲ್ಲಿದೆ. ನಾವು ನಮ್ಮ ಪ್ರಯತ್ನಗಳನ್ನು ಹಾಕುತ್ತಾ ಇರಬೇಕು ಮತ್ತು ಪರಿಣಾಮಗಳಿಗೆ ಅಥವಾ ಫಲಿತಾಂಶಗಳಿಗೆ ಅಂಟಿಕೊಂಡಿರಬಾರದು.

ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಇದು ಬಹಳ ಸೂಕ್ಷ್ಮ ಯಾಕೆಂದರೆ ಮನಸ್ಸು ಒಂದಲ್ಲ ಒಂದು ರೀತಿಯಲ್ಲಿ ಮಾಯೆಯೊಳಕ್ಕೆ ಎಳೆಯಲ್ಪಡುತ್ತದೆ.

ನಿನ್ನೆ ನಿಮ್ಮಲ್ಲಿ ಕೆಲವರು ಗೋಡೆಯ ಮೇಲೆ ಕೆಲವು ವಿನ್ಯಾಸಗಳನ್ನು ಬರೆದಿರಿ. ಐದು ಅಥವಾ ಆರು ವರ್ಷಗಳ ಬಳಿಕ ಈ ಗೋಡೆಗೆ ಪುನಃ ಬಣ್ಣ ಬಳಿಯಬೇಕಾಗುವುದು. ಹಾಗೆ, ನೀವು ಮಾಡಿದ ಎಲ್ಲಾ ವಿನ್ಯಾಸಗಳ ಮೇಲೆ ಇನ್ನೊಂದು ಬಣ್ಣ ಬರುವುದು.

ಅದೇ ರೀತಿಯಲ್ಲಿ, ನೀವು ನಿಮ್ಮ ತೋಟದಲ್ಲಿ ಏನನ್ನಾದರೂ ಬೆಳೆಯುವಾಗ, ಜೊತೆಯಲ್ಲಿ ಕಳೆಗಳೂ ಬೆಳೆಯುತ್ತವೆ. ನೀವು ಹೋಗಿ ಅವುಗಳನ್ನು ಕೀಳುತ್ತೀರಿ. ಪುನಃ, ಕಳೆಗಳು ಬೆಳೆಯುವಾಗ ನೀವು, "ಓ, ನಾನು ಈಗಷ್ಟೇ ತೋಟವನ್ನು ಸ್ವಚ್ಛಗೊಳಿಸಿದ್ದೇನೆ ಮತ್ತು ಕಳೆಗಳು ಮತ್ತೆ ಬಂದಿವೆ" ಎಂದು ಹೇಳಲು ಸಾಧ್ಯವಿಲ್ಲ! ಇದು ಪ್ರಕೃತಿ.

ಶರೀರದ ಸ್ವಭಾವವೆಂದರೆ ಕೊಳೆಯಾಗುವುದು. ಸ್ನಾನ ಮಾಡಿದ ಬಳಿಕ ನೀವು, "ಇಡೀ ವರ್ಷಕ್ಕಾಗಿ ನಾನು ಸ್ನಾನ ಮಾಡಿದ್ದೇನೆ" ಎಂದು ಹೇಳಲು ಸಾಧ್ಯವಿಲ್ಲ! ನೀವು ಮತ್ತೆ ಮತ್ತೆ ಸ್ನಾನ ಮಾಡುತ್ತಾ ಇರಬೇಕಾಗುತ್ತದೆ.

ಅದೇ ರೀತಿಯಲ್ಲಿ, ಮನಸ್ಸನ್ನು ಜ್ಞಾನದೊಳಕ್ಕೆ ಊರಬೇಕಾದ ಅಗತ್ಯವಿದೆ. ಅದು ಸುಲಭವಾಗಿ ಈ ನಾಲ್ಕು ಜ್ಞಾನದ ಸ್ತಂಭಗಳಿಂದ ಹೊರಕ್ಕೆ ಜಾರಬಹುದು; ವಿವೇಕ, ವೈರಾಗ್ಯ, ಸ್ವ-ನಿಯಂತ್ರಣ ಮತ್ತು ನಿಮ್ಮಲ್ಲಿರುವುದನ್ನು ಗೌರವಿಸುವುದು. ಮತ್ತು ನಂತರ, ಮೋಕ್ಷವನ್ನು ಬಯಸುವುದು!

ಹಾಗಾಗಿ ಜ್ಞಾನವನ್ನು ಮರಳಿ ಮತ್ತೆ ಮತ್ತೆ ಪಡೆಯುತ್ತಾ ಇರಿ! ಹೇಗಿದ್ದರೂ ಎಲ್ಲವೂ ಅಲ್ಲಿದೆ ಎಂಬುದು ನಿಮಗೆ ಇದ್ದಕ್ಕಿದ್ದಂತೆ ಕಂಡುಬರುತ್ತದೆ.

ಈಗ, ನೀವು ಅದರಿಂದ ಜಾರುವಾಗ, ಆಗಲೂ ನೆನಪಿಟ್ಟುಕೊಳ್ಳಿ ಅದು ಇನ್ನೊಂದು ಹಂತವೆಂದು.

ಇದೆಲ್ಲವನ್ನೂ ತಿಳಿದುಕೊಂಡು, ಆಗಲೂ ನೀನು ಸಿಕ್ಕಿಬಿದ್ದಿರುವೆಯೆಂದಿಟ್ಟುಕೊಳ್ಳೋಣ (ಮಾಯೆಯಲ್ಲಿ). ಆಗ, ನೀನು ಸಿಕ್ಕಿಬಿದ್ದಿರುವೆಯೆಂದು ಬೇಸರಪಡಬೇಡ; ಅದು ಕೂಡಾ ಪ್ರಕೃತಿಯ ಭಾಗ. "ಓ, ನಾನು ಜ್ಞಾನವನ್ನು ಅಳವಡಿಸಿಕೊಳ್ಳಲಿಲ್ಲ" ಅಥವಾ "ಒಂದೋ ಬೇರೊಬ್ಬರು ತಪ್ಪಾಗಿರುವರು ಅಥವಾ ನಾನು ತಪ್ಪು" ಎಂದು ಹೇಳಬೇಡ. ಈ ಪ್ರವೃತ್ತಿಯು ನಮ್ಮ ಸಮಾಜದಲ್ಲಿ, ನಮ್ಮ ಜೀವನದಲ್ಲಿ ಒಂದು ದೀರ್ಘ ಕಾಲದಿಂದ ಇದೆ. ನಾವು ಅದರಿಂದ ಹೊರಕ್ಕೆ ಬರಬೇಕು. ಹಲವು ಸಾರಿ ನೀವು ಅದರಿಂದ ಹೊರಬರುತ್ತೀರಿ ಮತ್ತು ಕೆಲವೊಮ್ಮೆ ನೀವು ಅದರಲ್ಲಿ ಸಿಕ್ಕಿಬೀಳುತ್ತೀರಿ, ಸರಿಯಾ? ಅದರಿಂದ ಹೊರಬನ್ನಿ ಮತ್ತು ವಿಷಯಗಳನ್ನು ಅವುಗಳಿರುವಂತೆಯೇ ನೋಡಿ! ಈ ಕ್ಷಣದಲ್ಲಿ, ಅದು ಇರುವುದೇ ಹಾಗೆ, ಯಾಕೆಂದರೆ ಇರುವುದೆಲ್ಲವೂ ಈ ಕ್ಷಣವೇ!

ಈ ಕ್ಷಣದಲ್ಲಿ, ಅಹಿತಕರವಾದ ಸಂಗತಿಗಳು ಆಗುತ್ತಿರಲಿ ಅಥವಾ ಹಿತಕರವಾದ ಸಂಗತಿಗಳು ಆಗುತ್ತಿರಲಿ, ನಾನು ಅದಕ್ಕೊಂದು ಸಾಕ್ಷಿಯಾಗಿದ್ದೇನೆ. ಮತ್ತು ನನ್ನ ಮನಸ್ಸು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದೆ, ಅದು ಕೂಡಾ ಆಗುವಿಕೆಯ ಒಂದು ಭಾಗವಾಗಿದೆ; ನಾನು ಅದಕ್ಕೆ ಕೂಡಾ ಸಾಕ್ಷಿಯಾಗಿದ್ದೇನೆ. ಪರಿಸ್ಥಿತಿಯಿಂದ ನೀವು ಮೇಲಕ್ಕೆ ಏಳುವುದು ಹೀಗೆಯೇ!
ಯೋಗ ಸೂತ್ರಗಳನ್ನು ಸ್ಥಾಪಿಸಿದ ಮಹಾಋಷಿ ಪತಂಜಲಿ ಹೀಗೆಂದು ಹೇಳಿದರು, ’ಸ ತು ದೀರ್ಘ ಕಾಲ ನೈರಂತರ್ಯ ಸತ್ಕಾರಸೇವಿತೋ ದೃಢ ಭೂಮಿಃ’.

ನೀವು ಪ್ರಾಣಾಯಾಮ, ಧ್ಯಾನ ಮತ್ತು ಜ್ಞಾನಗಳನ್ನು ಒಂದು ದೀರ್ಘಕಾಲದವರೆಗೆ ಅಭ್ಯಸಿಸಬೇಕು. ಸಂಪೂರ್ಣ ಜೀವನವೇ ಒಂದು ಅಭ್ಯಾಸವಾಗಿದೆ ಮತ್ತು ನೀವು ಗೌರವದೊಂದಿಗೆ ಅಭ್ಯಸಿಸಿದಾಗ, ಈ ಜ್ಞಾನವು ನಿಮ್ಮಲ್ಲಿ ಚೆನ್ನಾಗಿ ದೃಢವಾಗಿ ಸ್ಥಾಪನೆಯಾಗುತ್ತದೆ.

ಪ್ರಶ್ನೆ: ಗುರುದೇವ, ಇಲ್ಲಿಯವರೆಗೆ, ಧ್ಯಾನ ಮಾಡುವಾಗ ಒಳಮುಖವಾಗಿ ಹೋಗಲು ಸಾಧ್ಯವಾಗಲು ನಾವು ನಮ್ಮ ಕಣ್ಣುಗಳನ್ನು ಮುಚ್ಚಿದ್ದೆವು. ಧ್ಯಾನಗಳ ಸಂದರ್ಭದಲ್ಲಿ ನಮ್ಮ ಕಣ್ಣುಗಳನ್ನು ಅರ್ಧ ತೆರೆದಿರುವುದರ ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ಹಲವು ಸಲ, ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿದಾಗ, ನಿಮಗೆ ನಿಮ್ಮ ಮಾನಸಿಕ ಕಲ್ಪನೆಗಳೊಳಕ್ಕೆ ಹೋಗುವ ಅಥವಾ ಒಂದು ಕನಸಿನೊಳಕ್ಕೆ ಹರಿದುಹೋಗುವ ಅಥವಾ ಕೆಲವೊಮ್ಮೆ ನಿದ್ದೆಗೆ ಜಾರುವ ಪ್ರವೃತ್ತಿಯಿರುತ್ತದೆ. ಯೋಗದ ಪರಿಭಾಷೆಯಲ್ಲಿ ಇದು ಮನೋರಾಜ್ಯ ಎಂದು ಕರೆಯಲ್ಪಡುತ್ತದೆ.

ಮನೋರಾಜ್ಯವೆಂದರೆ, ಮನಸ್ಸು ತನ್ನದೇ ಆದ ರಾಜ್ಯವನ್ನು ಸೃಷ್ಟಿಸಲು ಆರಂಭಿಸಿ ಅದರಲ್ಲಿ ಸುತ್ತುತ್ತಾ ಇರುವ ಒಂದು ಸ್ಥಿತಿ; ಅದು ಸಂಘರ್ಷದಲ್ಲಿಯೂ ಆಗಿರಬಹುದು ಅಥವಾ ಖುಷಿಯಲ್ಲಿಯೂ ಆಗಿರಬಹುದು. ನೀವು ಯೋಚಿಸುತ್ತಾ, ಕಲ್ಪನೆ ಮಾಡಿಕೊಳ್ಳುತ್ತಾ ಅಥವಾ ನಿಮಗೆ ಸಂತೋಷ ನೀಡುವ ಇಲ್ಲವೇ ದುಃಖ ನೀಡುವ ಯಾವುದನ್ನಾದರೂ ಪುನರ್ ಸೃಷ್ಟಿ ಮಾಡುತ್ತಾ ನಿಮ್ಮದೇ ಆದ ಮನಸ್ಸಿನಲ್ಲಿ ಕುಳಿತುಕೊಳ್ಳುತ್ತೀರಿ.

ಒಂದೋ ನೀವು, ಎಲ್ಲರೂ ನಿಮ್ಮ ವಿರೋಧವಾಗಿರುವರು, ಇಡೀ ಪ್ರಪಂಚವೇ ನಿಮ್ಮ ವಿರೋಧವಾಗಿರುವುದು; ನಿಮ್ಮ ಅತ್ತೆ, ಮಾವ, ಗಂಡ ಅಥವಾ ಸ್ನೇಹಿತ; ಎಲ್ಲರೂ ನಿಮ್ಮ ಹಿಂದೆ ಬಿದ್ದಿದ್ದಾರೆ ಎಂದು ಯೋಚಿಸುತ್ತೀರಿ, ಅಥವಾ ನಿಮ್ಮ ಮನಸ್ಸು, ನೀವು ಒಬ್ಬರನ್ನು ಹೇಗೆ ಒಪ್ಪಿಸಬೇಕು ಅಥವಾ ಮೆಚ್ಚಿಸಬೇಕು ಎಂದು ಯೋಚಿಸುತ್ತದೆ. ಈ ರೀತಿಯ ವಿಷಯಗಳು ಮನಸ್ಸಿನಲ್ಲಿ ಆಗುತ್ತಾ ಇರುತ್ತವೆ.

ನಿಮ್ಮ ಮನಸ್ಸು ಮನೋರಾಜ್ಯದಲ್ಲಿ ಸಿಕ್ಕಿಹಾಕಿಕೊಂಡಾಗ, ಧ್ಯಾನದ (ಕಣ್ಣು ಮುಚ್ಚಿದ) ಸಂದರ್ಭಗಳಲ್ಲಿ ಅದು ಇನ್ನೂ ಹೆಚ್ಚು ತಿಳಿದುಬರುತ್ತದೆ.

ನೀವು ಕಣ್ಣುಗಳನ್ನು ಅರ್ಧ ತೆರೆದಿರುವ ಈ ಧ್ಯಾನದಲ್ಲಿ, ಮನೋರಾಜ್ಯಕ್ಕೆ ಜಾರಲು ನಿಮಗೆ ಬಹಳ ಕಡಿಮೆ ಅವಕಾಶವಿರುತ್ತದೆ; ಒಂದು ಬೇರೆ ಗುಣಮಟ್ಟದ ಧ್ಯಾನವಾಗಲು ಶುರುವಾಗುತ್ತದೆ.

ಪ್ರಶ್ನೆ: ಗುರುದೇವ, ಶಿವ ತತ್ವ ಮತ್ತು ಕೃಷ್ಣ ಪ್ರಜ್ಞೆಗಳ ನಡುವಿನ ವ್ಯತ್ಯಾಸವೇನು?

ಶ್ರೀ ಶ್ರೀ ರವಿ ಶಂಕರ್: ಶಿವ ತತ್ವವು ಒಂದು ಸಿದ್ಧಾಂತವಾಗಿದೆ, ಅದಕ್ಕೆ ಯಾವುದೇ ಭೌತಿಕ ರೂಪವಿಲ್ಲ. ಕೃಷ್ಣನೆಂದರೆ ಮಾನವ ರೂಪದಲ್ಲಿ ಶಿವ ತತ್ವವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ ಒಬ್ಬನು. ಕೃಷ್ಣನು ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದನು. ಅವನು ೫,೧೧೪ ವರ್ಷಗಳ ಮೊದಲು ಜೀವಿಸಿದ್ದನು.

ಕೃಷ್ಣನು ಭೂಮಿಯ ಮೇಲೆ ನಡೆದಾಡಿದನು, ಆದರೆ ಅವನು ಶಿವ ತತ್ವವನ್ನು ತನ್ನದಾಗಿಸಿಕೊಂಡನು. ಅವನು ಟೊಳ್ಳು ಮತ್ತು ಖಾಲಿಯಾಗಿದ್ದನು, ಮತ್ತು ನಂತರ ಅವನು ಕಾಲದಿಂದ ಕಾಲಕ್ಕೆ ಶಿವ ತತ್ವವನ್ನು ಸಂಪೂರ್ಣವಾಗಿ ಪ್ರತಿಪಾದಿಸಿದನು.

ಪ್ರಶ್ನೆ: ನನ್ನ ಕುಟುಂಬದೊಂದಿಗೆ ಹೊರತುಪಡಿಸಿ ಬೇರೆ ಎಲ್ಲೆಡೆಯಲ್ಲೂ ಒಂದು ಆರ್ಟ್ ಆಫ್ ಲಿವಿಂಗ್ ಅನುಭವವನ್ನು ಹೊಂದಲು ನನಗೆ ಸಾಧ್ಯವಾಗುತ್ತದೆ. ಯಾಕೆಂದು ನೀವು ದಯವಿಟ್ಟು ವಿವರಿಸಬಲ್ಲಿರಾ ಮತ್ತು ನಾನು ಅದರಿಂದ ಹೊರಬರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಕೆಲವೊಮ್ಮೆ, ಕೆಲವು ಜಾಗಗಳಲ್ಲಿ ಕೆಲವು ಜನರು ಇತರ ಜನರಿಗಿಂತ ಹೆಚ್ಚು ನಿಮ್ಮನ್ನು ಪ್ರಚೋದಿಸುವರು. ಅದು ನಿನ್ನ ತಪಸ್ಸು, ನಿನ್ನ ಸಾಧನೆ. ಅಲ್ಲಿರು, ಓಡಿಹೋಗಬೇಡ, ಅಲ್ಲಿಯೇ ನಿನ್ನ ಪರೀಕ್ಷೆ ನಡೆಯುತ್ತಿರುವುದು. ಅದೊಂದು ಪರೀಕ್ಷೆ, ಹಾಗೆಯೇ ಒಂದು ಅಭ್ಯಾಸ ಕೂಡಾ. ನೀನು ಅದನ್ನು ತಾಳಬೇಕು.

ನಿನಗೆ ಅತ್ಯಾವಶ್ಯವಿರುವ ಶಕ್ತಿಯನ್ನು ತರುವುದು ಜ್ಞಾನದ ಮೂರನೆಯ ಸ್ತಂಭವಾಗಿದೆ - ಷಟ್ ಸಂಪತ್ತಿ (ಆರು ರೀತಿಯ ಸಂಪತ್ತುಗಳು).

ಪ್ರಶ್ನೆ: ಗುರುದೇವ, ಶಕ್ತಿ ಕ್ರಿಯೆಯ ಲಾಭಗಳೇನು? ಅದು ಕೇವಲ ಶರೀರದ ಮಟ್ಟದಲ್ಲಿ ಮಾತ್ರವೇ ಅಥವಾ ಅದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆಯೇ?

ಶ್ರೀ ಶ್ರೀ ರವಿ ಶಂಕರ್: ಎರಡೂ. ನಿಮ್ಮ ಚೇತನಕ್ಕೆ ಲಾಭಕರವಾಗುವ ಯಾವುದೇ ಆದರೂ ಖಂಡಿತವಾಗಿಯೂ ಶರೀರಕ್ಕೂ ಲಾಭಕರವಾಗಿರುತ್ತದೆ. ಶರೀರವು ಆರೋಗ್ಯಕರವೂ, ಬಲಶಾಲಿಯೂ ಆಗಿದ್ದರೆ, ಅದು ಚೇತನ ಮತ್ತು ಮನಸ್ಸಿನ ಮೇಲೆ ಕೂಡಾ ಪ್ರತಿಫಲಿಸುತ್ತದೆ.