ಶುಕ್ರವಾರ, ಜುಲೈ 19, 2013

ನಿಮ್ಮ ನೈಜತೆಯನ್ನು ನೆನಪಿಸಿಕೊಳ್ಳಿ

ಮಾಂಟ್ರಿಯಲ್, ಕೆನಡಾ
೧೯ ಜುಲೈ, ೨೦೧೩

ಪ್ರಶ್ನೆ: ನೀವು ದಯವಿಟ್ಟು ನಮಗೆ ನಾರಾಯಣನ ಬಗ್ಗೆ ಹೇಳಬಲ್ಲಿರಾ? ನಾರಾಯಣ ಎಂದರೆ ಯಾರು ಮತ್ತು ಏನು?

ಶ್ರೀ ಶ್ರೀ ರವಿ ಶಂಕರ್: ನಾರಾಯಣನೆಂದರೆ ಒಬ್ಬ ವ್ಯಕ್ತಿಯಲ್ಲ. ನಾರಾಯಣ ಎಂದರೆ ಮಾನವ ನರವ್ಯೂಹದಲ್ಲಿರುವ ಪ್ರಜ್ಞೆಯಾಗಿದೆ.

ನಾರಾಯಣವು ಪ್ರಕಾಶದಿಂದ ಮಾಡಲ್ಪಟ್ಟಿದೆ; ಪ್ರಕಾಶದಿಂದ ಮಾಡಲ್ಪಟ್ಟಿರುವ ಒಂದು ಶರೀರ. ನೀವು ಸಂಪೂರ್ಣವಾಗಿ ಟೊಳ್ಳು ಮತ್ತು ಖಾಲಿಯಾಗುವಾಗ, ಆ ಬೆಳಕಿನ ಶರೀರವನ್ನು ನೀವು ನಿಮ್ಮೊಳಗೆ ಸಮ್ಮಿಳಿತಗೊಳಿಸುತ್ತೀರಿ, ಮತ್ತು ಅದುವೇ ನಾರಾಯಣ. ಅದಕ್ಕಾಗಿಯೇ ಭಾರತದಲ್ಲಿ ಯಾರಾದರೂ ಒಬ್ಬರು ಸನ್ಯಾಸಿಯನ್ನು ನೋಡುವಾಗ ಅವರು, "ನಮೋ ನಾರಾಯಣ" ಎಂದು ಹೇಳುವುದು. ಅಂದರೆ, ನಾನು ನಿನ್ನಲ್ಲಿರುವ ನಾರಾಯಣನನ್ನು ಆರಾಧಿಸುತ್ತೇನೆ ಎಂದು.

ಈಗ, ನಾರಾಯಣ ಎಲ್ಲಿರುವನು?

ನಾರಾಯಣನು ಒಬ್ಬ ರಾಜನಲ್ಲಿದ್ದಾನೆ, ಯಾಕೆಂದರೆ ಒಬ್ಬ ರಾಜನು ಸಾಮೂಹಿಕ ಪ್ರಜ್ಞೆಯಾಗಿರುವನು. ಅವನು ತನ್ನ ಬಗ್ಗೆಯೇ ಯೋಚಿಸುವ ಹಾಗಿಲ್ಲ, ಆದರೆ ಅವನು ಇಡೀ ದೇಶದ ಬಗ್ಗೆ ಮತ್ತು ಎಲ್ಲಾ ಜನರ ಬಗ್ಗೆ ಯೋಚಿಸಬೇಕು ಹಾಗೂ ಅವರನ್ನು ನೋಡಿಕೊಳ್ಳಬೇಕು. ಆದುದರಿಂದ, ಒಬ್ಬ ರಾಜನಿಗೆ ತನ್ನ ಸ್ವಂತ ಜನರ ಮೇಲಿರುವ ಪ್ರೇಮ ಮತ್ತು ಸಹಾನುಭೂತಿಗಳ ಕಾರಣದಿಂದಾಗಿ, ಅವನು ನಾರಾಯಣ; ಶುದ್ಧ ಪ್ರಕಾಶದ ಮಟ್ಟಕ್ಕೆ ಏರಿಸಲ್ಪಡುತ್ತಾನೆ.

ನಂತರ, ವೈದ್ಯ ನಾರಾಯಣ ಎಂದು ಹೇಳಲಾಗಿದೆ. ಒಬ್ಬ ವೈದ್ಯನು ನಾರಾಯಣನಾಗಿರುವನು. ತನ್ನ ರೋಗಿಗಳ ಶುಶ್ರೂಷೆ ಮಾಡುವಾಗ ಒಬ್ಬ ವೈದ್ಯನು, ತಾನು ಎಷ್ಟು ಸಂಪಾದಿಸುತ್ತಿರುವೆನು ಎಂಬುದಾಗಿ ಯೋಚಿಸುವುದಿಲ್ಲ. ಅವನ ಒಟ್ಟು ಕಾಳಜಿಯು ಆ ವ್ಯಕ್ತಿಯ ಯೋಗಕ್ಷೇಮದ ಕಡೆಗಿರುತ್ತದೆ. ನಾರಾಯಣನು ಪ್ರತಿಯೊಬ್ಬ ವೈದ್ಯನಲ್ಲೂ ಇರುತ್ತಾನೆ, ಪ್ರತಿಯೊಬ್ಬ ವೈದ್ಯನೂ ನಾರಾಯಣನಾಗಿರುವನು.

ಬೇರೆ ಯಾರು ನಾರಾಯಣನಾಗಿರುವರು?

(ಸಭಿಕರು ಹೇಳುತ್ತಾರೆ: ಗಂಡ)

ಹೌದು, ಅವನು ಸಂಪೂರ್ಣವಾಗಿ ಕುಟುಂಬಕ್ಕೆ ಬದ್ಧನಾಗಿದ್ದರೆ ಮತ್ತು ಅವನು ತನ್ನ ಪತ್ನಿಗಾಗಿ ಇರುವುದಾದರೆ, ಪತ್ನಿಯು ಅವನನ್ನು ನಾರಾಯಣನೆಂದು ಪರಿಗಣಿಸಬೇಕು! ಅವನು ತನ್ನನ್ನು ತಾನೇ ನಾರಾಯಣನೆಂದು ಘೋಷಿಸಲು ಸಾಧ್ಯವಿಲ್ಲ. (ನಗು) ಪತಿಯು ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾನೆ ಮತ್ತು ಅವನು ತನಗಾಗಿ ಏನನ್ನೂ ಬಯಸುವುದಿಲ್ಲ. ಅವನು ಎಲ್ಲರಿಗಾಗಿಯೂ ಬಯಸುತ್ತಾನೆ. ಹಾಗಾಗಿ ಅವನೊಬ್ಬ ನಾರಾಯಣ.

ಒಬ್ಬ ಸಂತನು ನಾರಾಯಣನಾಗಿರುವನು ಯಾಕೆಂದರೆ, ಒಬ್ಬ ಸಂತನು ಎಲ್ಲರ ಕಲ್ಯಾಣವನ್ನು ಬಯಸುತ್ತಾನೆ. ಒಬ್ಬ ವೈದ್ಯನು ನಾರಾಯಣ. ಒಬ್ಬ ನಿಸ್ವಾರ್ಥಿ ರಾಜನು ಒಬ್ಬ ನಾರಾಯಣ. ಗುರುವು ನಾರಾಯಣ. ಒಬ್ಬ ಶಿಕ್ಷಕನು ನಾರಾಯಣ. ಬರುವಂತಹ ಅತಿಥಿಯೂ ನಾರಾಯಣ ಯಾಕೆಂದರೆ ನಾರಾಯಣನು ಹಲವಾರು ರೂಪಗಳಲ್ಲಿ ಬರುತ್ತಾನೆ.

ನಿಮಗೆ ಅಗತ್ಯವಿರುವಾಗ, ಯಾವುದೇ ಸ್ವಾರ್ಥ ಉದ್ದೇಶವಿಲ್ಲದೆ ಸಹಾಯ ಮಾಡುವ ಯಾರೇ ಆದರೂ ಆಪತ್ ನಾರಾಯಣ ಎಂದು ಕರೆಯಲ್ಪಡುತ್ತಾನೆ. ಒಂದು ಸಮಸ್ಯೆಯಿರುವಾಗ ಬರುವ ಒಬ್ಬ ನಾರಾಯಣನು ಆಪತ್ ನಾರಾಯಣನಾಗಿರುವನು.

ದರಿದ್ರ ನಾರಾಯಣ ಎಂದು ಕರೆಯಲ್ಪಡುವ ಇನ್ನೊಂದು ಶಬ್ದವಿದೆ. ಯಾರಲ್ಲಿ ಏನೂ ಇಲ್ಲವೋ, ಯಾರು ಬಡವನಾಗಿರುವನೋ ಅವನು ಹಣವಿಲ್ಲದ (ಲಕ್ಷ್ಮಿ) ಒಬ್ಬ ನಾರಾಯಣನಾಗಿರುವನು. ಹಾಗಾಗಿ ನೀವು ದಾನ ಮಾಡುವಾಗ, ಅವನು (ಬಡವ) ನಾರಾಯಣನೆಂಬಂತೆ ನೋಡಿ ಮತ್ತು ದಾನ ಮಾಡಿ. ಅವನು ಅಲ್ಲಿರುವ ಒಂದು ಹುಳುವಿನಂತೆ ಕಂಡು ದಾನ ಮಾಡಬೇಡಿ.

ಹೀಗೆ, ದಾನವನ್ನು ಕೂಡಾ ಪವಿತ್ರತೆಯ ಒಂದು ಭಾವನೆಯೊಂದಿಗೆ ಮಾಡಿ. ಕಡುಬಡವರನ್ನು ಮತ್ತು ಕಡಿಮೆ ಅದೃಷ್ಟಶಾಲಿಗಳನ್ನು ಕೂಡಾ ನಾರಾಯಣನೆಂಬಂತೆ ನೋಡಿ.

ಹೀಗೆ ನೀವು ಒಬ್ಬ ದುಃಖಿತನಾದ ವ್ಯಕ್ತಿಯಲ್ಲಿ, ಒಬ್ಬ ವ್ಯಕ್ತಿಯಲ್ಲಿ, ಒಬ್ಬ ಸಂತನಲ್ಲಿ, ಕುಟುಂಬದ ಯಜಮಾನನಲ್ಲಿ ಮತ್ತು ಒಬ್ಬ ರಾಜನಲ್ಲಿ ನಾರಾಯಣನನ್ನು ಕಾಣಬಹುದು. ಅವರೆಲ್ಲರೂ ನಾರಾಯಣ. ಎಲ್ಲೆಡೆಯೂ ನಾರಾಯಣನಿರುವನು.

ನಾರಾಯಣ ಉಪನಿಷತ್ತುಗಳಲ್ಲಿ ಬಹಳ ಸುಂದರವಾಗಿ ಹೀಗೆಂದು ಹೇಳಲಾಗಿದೆ, "ನಾರಾಯಣನು ಮುಂದೆ ಇರುವನು, ಹಿಂದೆ ಇರುವನು, ಬದಿಗಳಲ್ಲಿ ಇರುವನು, ಮೇಲೆ ಇರುವನು ಮತ್ತು ಕೆಳಗೆ ಇರುವನು. ನಾರಾಯಣನು ಎಲ್ಲೆಡೆಯೂ ಇರುವನು!"

ನಾರಾಯಣ ಪರೋಜ್ಯೋತಿಃ ಆತ್ಮನಾರಾಯಣಃ ಪರಃ

ನಾರಾಯಣನು ಬ್ರಹ್ಮನಾಗಿರುವನು (ದೈವಿಕತೆ). ನಾರಾಯಣನೆಂದರೆ ನಿಮ್ಮಲ್ಲಿರುವ ಆತ್ಮ. ನಾರಾಯಣನೆಂದರೆ ಪ್ರಕಾಶ. ಈ ಸಂಪೂರ್ಣ ವಿಶ್ವವು ಒಂದು ಕ್ಷೀರ ಸಾಗರದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಆ ಸಾಗರವು ನಾರಾಯಣ ಎಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರುದೇವ, ನನ್ನ ಲೈಂಗಿಕತೆಯ ಬಗ್ಗೆ ನಾನು ನನ್ನ ಹೆತ್ತವರೊಂದಿಗೆ ಪ್ರಾಮಾಣಿಕನಾಗಿರಲು ಬಯಸುತ್ತೇನೆ. ಆದರೂ ಅವರ ಪ್ರೇಮ ಮತ್ತು ಬೆಂಬಲಗಳನ್ನು ಕಳೆದುಕೊಳ್ಳುವೆನೆಂಬ ನನ್ನ ಭಯವು, ಅವರೊಂದಿಗೆ ಪ್ರಾಮಾಣಿಕನಾಗಿರುವುದರಿಂದ ನನ್ನನ್ನು ತಡೆಯುತ್ತಿದೆ. ನೀವು ಅನುರಾಗ, ವೈರಾಗ್ಯ ಮತ್ತು ಸಹಾನುಭೂತಿಗಳ ಬಗ್ಗೆ ಮಾತನಾಡಿದಿರಿ. ನಾನು ಸಹಾನುಭೂತಿಯಿಂದಿದ್ದು ನನ್ನ ಹೆತ್ತವರಿಗೆ ಭಾರವಾಗದಂತಿರಬೆಕೇ? ಇದು ನನಗೆ ಭಯವುಂಟುಮಾಡುತ್ತದೆ. ದಯವಿಟ್ಟು ನನಗೆ ಒಂದು ಪರಿಹಾರದತ್ತ ಮಾರ್ಗದರ್ಶನ ನೀಡಿ.

ಶ್ರೀ ಶ್ರೀ ರವಿ ಶಂಕರ್: ನೀವು ನಿಮಗೇ ಒಬ್ಬ ಸಲಿಂಗಕಾಮಿಯೆಂಬ ಗುರುತಿನ ಚೀಟಿ ಹಚ್ಚಬೇಕಾಗಿಲ್ಲ. ನೀವೊಂದು ಲೇಬಲ್ ಹಚ್ಚಬೇಕಾದ ಅಗತ್ಯವಿಲ್ಲ. ಇವುಗಳು ಬಂದು ಹೋಗುವ ಪ್ರವೃತ್ತಿಗಳು. ನೀವು ನಿಮಗೆ ದೈವಿಕ ಪ್ರಕಾಶವೆಂಬ ಲೇಬಲ್ ಹಚ್ಚಿಕೊಳ್ಳಬೇಕು. ನಿಮ್ಮ ಲೈಂಗಿಕತೆಯ ಬಗ್ಗೆ ಒಂದು ಲೇಬಲ್ ಹಚ್ಚಿಕೊಳ್ಳುವುದಕ್ಕಿಂತ ಈ ಲೇಬಲ್ ಎಷ್ಟೋ ಹೆಚ್ಚು ಉತ್ತಮವಾದುದು, ಯಾಕೆಂದರೆ ಮೊದಲನೆಯದು ಬದಲಾಗಲೂಬಹುದು.

ಹಲವಾರು ಜನರು ವಿವಾಹವಾಗುತ್ತಾರೆ ಮತ್ತು ನಂತರ ತಮ್ಮಲ್ಲಿ ಬೇರೆಯ ಪ್ರವೃತ್ತಿಗಳಿರುವುದನ್ನು ಅವರು ಕಂಡುಹಿಡಿಯುತ್ತಾರೆ. ಹಲವಾರು ಸಲಿಂಗಕಾಮಿ ವ್ಯಕ್ತಿಗಳಿಗೆ ಸ್ವಲ್ಪ ಸಮಯದ ಬಳಿಕ ಅವರ ಆಯ್ಕೆಗಳೂ ಬದಲಾಗುತ್ತವೆ.

ಹಲವಾರು ಸಲಿಂಗಕಾಮಿ ಜನರು ಮದುವೆಯಾಗಿ, ಜೀವನದಲ್ಲಿ ನೆಲೆನಿಲ್ಲುವುದನ್ನು ಮತ್ತು ಮಕ್ಕಳನ್ನು ಪಡೆಯುವುದನ್ನು ನಾನು ನೋಡಿರುವೆನು. ಇದರ ವಿರೋಧವಾಗಿ ನಡೆಯುವುದನ್ನೂ ನಾನು ನೋಡಿರುವೆನು. ಹಾಗಾಗಿ ಎಲ್ಲಾ ಸಾಧ್ಯತೆಗಳು ತೆರೆದಿವೆ. ಈಗಿನಿಂದಲೇ ನೀನು ನಿನಗೆ ಲೇಬಲ್ ಹಚ್ಚುವ ಅಗತ್ಯವೇನಿದೆ? ಉಭಯಲಿಂಗಿಗಳಾಗಿರುವವರೂ ಕೆಲವರಿದ್ದಾರೆ.

ನಿನ್ನ ಹೆತ್ತವರಿಗೆ ಹೇಳುವುದರಿಂದ ನೀನು ಏನನ್ನು ಸಾಧಿಸಲಿರುವೆ? ಅದು ಅವರನ್ನು ಹೆಚ್ಚು ಸಂತೋಷಪಡಿಸಲಿದೆಯೇ? ಅವರು ಸಂತೋಷಪಡರು ಎಂದಿರುವಾಗ, ಅದರ ಬಗ್ಗೆ ಅವರಿಗೆ ಹೇಳುವುದರಲ್ಲಿ ಅರ್ಥವೇನಿದೆ? ನೀನು ಅದರ ಬಗ್ಗೆ ಯೋಚಿಸು.

ಪ್ರಾಮಾಣಿಕತೆಯೆಂಬುದು ಒಂದು ವಿಷಯ. ಮೊದಲು ನೀನು ನಿನಗೆ ಪ್ರಾಮಾಣಿಕನಾಗಿರಬೇಕು. ಈ ಕ್ಷಣದಲ್ಲಿ ನಿನ್ನ ಸ್ಥಿತಿಯೇನು? ನಿನ್ನೊಂದಿಗೇ ಪ್ರಾಮಾಣಿಕನಾಗಿರು. ನೀನು ನಟಿಸಬೇಕಾಗಿಲ್ಲ ಮತ್ತು ನೀನು ಏನಾಗಿಲ್ಲವೋ ಅದಾಗಬೇಕಾಗಿಲ್ಲ, ಅದೇ ಸಮಯದಲ್ಲಿ, ಎಲ್ಲಿ ಜನರಿಗೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲವೋ ಅಲ್ಲಿ ಒಂದು ಬಾಂಬ್ ಹಾಕಬೇಕಾಗಿಲ್ಲ. ಕ್ರಮೇಣವಾಗಿ ಅವರಿಗೆ ಹೇಳು. ಅವರನ್ನು ಸಿದ್ಧಪಡಿಸು.

ನೀನು ಪರಿಸ್ಥಿತಿಯ ಅಧ್ಯಯನ ನಡೆಸಬೇಕು. ನಿನ್ನ ಹೆತ್ತವರು ಎಷ್ಟು ಸೂಕ್ಷ್ಮರಾಗಿರುವರು? ಅವರು ಈಗಾಗಲೇ ಎಷ್ಟು ಅಸಂತೋಷವಾಗಿರುವರು ಮತ್ತು ನೀನು ಅದನ್ನು ಹೇಳುವುದರಿಂದ ಅವರು ಇನ್ನೂ ಎಷ್ಟು ಹೆಚ್ಚು ಅಸಂತೋಷಗೊಳ್ಳುವರು?

ಅವರೊಂದಿಗೆ ಅಷ್ಟೊಂದು ಪ್ರಾಮಾಣಿಕನಾಗಿದ್ದು, ಅವರನ್ನು ದುಃಖಿತರನ್ನಾಗಿಸುವುದು ಸರಿಯೇ? ಈ ಎಲ್ಲಾ ಒಳಿತು-ಕೆಡುಕುಗಳ ಬಗ್ಗೆ ನೀನು ತೀರ್ಮಾನಿಸಬೇಕು.  

ನಿನ್ನ ಹೆತ್ತವರು ಮದುವೆಯಾಗುವಂತೆ ನಿನ್ನನ್ನು ಒತ್ತಾಯಪಡಿಸುತ್ತಿದ್ದಾರೆಂದು ಇಟ್ಟುಕೊಳ್ಳೋಣ. ಆಗ ನೀನು ಅವರಲ್ಲಿ, "ಇಲ್ಲ, ನನಗಿದರಲ್ಲಿ ಯಾವುದೇ ಆಸಕ್ತಿಯಿಲ್ಲ, ನನಗೆ ಬೇರೆಯದಾದ ಆಸಕ್ತಿಯಿದೆ" ಎಂದು ಹೇಳುವೆ. ಇಲ್ಲದಿದ್ದರೆ ನೀನು ಅವರಲ್ಲಿ ಯಾಕೆ ಹೇಳಬೇಕು? ಅಂತಹ ಸಮಯಗಳಲ್ಲಿ ಪ್ರಾಮಾಣಿಕನಾಗಿರು, ಇಲ್ಲದಿದ್ದರೆ ನೀನು ಇನ್ನೊಬ್ಬ ವ್ಯಕ್ತಿಯ (ಯಾರನ್ನು ಮದುವೆಯಾಗುವೆಯೋ ಅವರ) ಜೀವನವನ್ನು ದುಃಖಮಯವಾಗಿಸುವೆ. ನಿನ್ನ ತಾಯಿಗೆ ಈಗಾಗಲೇ ಬಹಳ ವಯಸ್ಸಾಗಿದ್ದು ಇತರ ಹಲವಾರು ವಿಷಯಗಳಿಂದ ಕಷ್ಟಪಡುತ್ತಿದ್ದರೆ ಹಾಗೂ ನೀನು ಕೇವಲ ಅತ್ಮಾಭಿಮಾನಕ್ಕೋಸ್ಕರ ಪ್ರಾಮಾಣಿಕತೆಯೊಂದಿದ್ದು ಅವರಲ್ಲಿ ಏನಾದರೂ ಹೇಳಿದರೆ ಮತ್ತು ಇದರಿಂದ ಅವರು ತಮ್ಮ ರಾತ್ರಿಯ ನಿದ್ರೆಯನ್ನು ಕಳೆದುಕೊಂಡು, ಅದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ, ಅದರಲ್ಲೇನು ಅರ್ಥವಿದೆ? ಅದು ಏನನ್ನು ಮಾಡಿದಂತಾಗುತ್ತದೆ?

ಪುರಾತನ ವ್ಯವಸ್ಥೆಯಲ್ಲಿ ಇದನ್ನು ಸುಂದರವಾಗಿ ಹೇಳಲಾಗಿದೆ:

’ಸತ್ಯಂ ಬ್ರೂಯಾತ್  ಪ್ರಿಯಂ ಬ್ರೂಯಾತ್  ನ ಬ್ರೂಯಾತ್ ಸತ್ಯಂ ಅಪ್ರಿಯಂ’

ಸತ್ಯವನ್ನು ಮಾತನಾಡು, ಆದರೆ ಹಿತಕರವಾದ ಸತ್ಯವನ್ನು ಮಾತನಾಡು. ಅಹಿತಕರವಾದ ಸತ್ಯವನ್ನು ಮಾತನಾಡಬೇಡ ಮತ್ತು ಹಿತಕರವಾದ ಸುಳ್ಳುಗಳನ್ನು ಮಾತನಾಡಬೇಡ. ಒಂದು ಹಿತಕರವಾಗಿರಲೂಬಹುದು, ಆದರೆ ಅದೊಂದು ಸುಳ್ಳಾಗಿದ್ದರೆ ಅದನ್ನು ಮಾತನಾಡಬೇಡ. ಅಹಿತಕರವಾದ ಸತ್ಯವನ್ನು ಅಥವಾ ಹಿತಕರವಾದ ಸುಳ್ಳುಗಳನ್ನು ಮಾತನಾಡಬೇಡ. ಇದು ಪ್ರಾಚೀನ ಪಥವಾಗಿದೆ. ಪರಿಪೂರ್ಣವಾದ ಸಂತುಲನ.

ಹಾಗಾಗಿ ನೀನು ಅವರಿಗೆ ಹೇಳಲು ಬಯಸುವುದಾದರೆ ಹಾಗೂ ಅದು ಯಾವುದಾದರೂ ಉದ್ದೇಶವನ್ನು ಈಡೇರಿಸುವುದಾದರೆ, ನಿನ್ನ ವಿವೇಕವನ್ನು ಬಳಸಿ ಅವರನ್ನು ಸಾವಧಾನವಾಗಿ ಸಿದ್ಧಪಡಿಸು.

ಶಾರೀರಿಕ ಪ್ರಜ್ಞೆಯಿಂದ ಮೇಲಕ್ಕೇಳಿ. ನೀವು ಪ್ರಕಾಶವಾಗಿರುವಿರಿ ಎಂಬುದನ್ನು ತಿಳಿಯಿರಿ. ನೀವು ಮಿನುಗುವ ಪ್ರಜ್ಞೆಯಾಗಿರುವಿರಿ. ನಿಮ್ಮ ಶರೀರದ ಪ್ರತಿಯೊಂದು ಜೀವಕೋಶವೂ ಪ್ರಜ್ಞೆ, ಪ್ರಕಾಶ, ಪ್ರೇಮ ಮತ್ತು ಜೀವದಿಂದ ಜಾಗೃತವಾಗಿದೆ. ಅದರ ಕಡೆಗೆ ಗಮನ ನೀಡಿ.

ಪ್ರಶ್ನೆ: ಭಕ್ತಿಯೆಂಬುದು ಜ್ಞಾನೋದಯದ ಒಂದು ಆವಶ್ಯಕ ಭಾಗವಾಗಿದೆ ಯಾಕೆ? ವೈರಾಗ್ಯ ಮತ್ತು ಭಕ್ತಿಗಳ ನಡುವೆ ಸಂಘರ್ಷವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಭಕ್ತಿಯೆಂಬುದು ಜೀವನದ ರಸವಾಗಿದೆ.

ನೀನು ಪ್ರಪಂಚದಲ್ಲಿ ಯಾರನ್ನಾದರೂ ಪ್ರೀತಿಸಲು ಯಾಕೆ ಬಯಸುವೆ? ಪ್ರೀತಿಯಿಲ್ಲದ ಒಂದು ಜೀವನವನ್ನು ಕಲ್ಪಿಸಿಕೋ. ಅದೊಂದು ಯಂತ್ರಮಾನವ ಇದ್ದಂತೆ. ಭಕ್ತಿಯು ರುಚಿಯನ್ನು ಸೇರಿಸುತ್ತದೆ ಮತ್ತು ಜೀವನವನ್ನು ಇನ್ನೂ ಹೆಚ್ಚು ಶ್ರೀಮಂತವಾಗಿಸುತ್ತದೆ.

ಪ್ರಶ್ನೆ: ಎಲ್ಲಿ ಕ್ವಾಂಟಮ್ ಭೌತಶಾಸ್ತ್ರವು ಕೊನೆಯಾಗುವುದೋ ಅಲ್ಲಿಂದ ವೇದಾಂತವು ಆರಂಭವಾಗುವುದೆಂದು ನೀವು ಇತ್ತೀಚೆಗೆ ಹೇಳಿದ್ದಿರಿ. ಇದರ ಬಗ್ಗೆ ನೀವು ಇನ್ನೂ ವಿವರವಾಗಿ ಮಾತನಾಡಬಲ್ಲಿರೇ? ಭವಿಷ್ಯದಲ್ಲಿ ಯಾವತ್ತಾದರೂ ವಿಜ್ಞಾನಕ್ಕೆ ಪ್ರಜ್ಞೆಯನ್ನು ಅರಿತುಕೊಳ್ಳಲಾಗುವುದೇ?

ಶ್ರೀ ಶ್ರೀ ರವಿ ಶಂಕರ್: ಹೌದು. ನಾವು ಪ್ರಜ್ಞೆಯನ್ನು ಅರಿತುಕೊಳ್ಳಲು ಬಯಸುವುದಾದರೆ, ನಾವು ವಸ್ತುವಿನಿಂದ ಪ್ರಾರಂಭಿಸಬೇಕು. ಮೊದಲು ಮೂಲವಸ್ತುಗಳನ್ನು ತಿಳಿದುಕೊಳ್ಳಿ. ವಿಶ್ವವು ಪಂಚಭೂತಗಳಿಂದ ಮಾಡಲ್ಪಟ್ಟಿದೆ: ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ. ಇಲ್ಲಿಂದ ನೀವು ಪ್ರಜ್ಞೆಯನ್ನು ತಿಳಿದುಕೊಳ್ಳಬಹುದು.

ಸಂಪೂರ್ಣ ಪಯಣವು ವಸ್ತುವಿನಿಂದ ಚೈತನ್ಯದ ಕಡೆಗೆ ಇರುವುದಾಗಿದೆ. ವಾಸ್ತವವಾಗಿ, ಇದು ವಿಜ್ಞಾನ ಮತ್ತು ಅದು ಆಧ್ಯಾತ್ಮಿಕತೆ ಎಂದು ಹೇಳುವುದು ತಪ್ಪು. ಅದು ಒಂದೇ.

ಪ್ರಶ್ನೆ: ಸಾವಿನ ಬಳಿಕ ನಾವು ನಮ್ಮ ಮನಸ್ಸನ್ನು ತೊಡೆದುಹಾಕುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನದನ್ನು ತೊಡೆದುಹಾಕಲು ಸಾಧ್ಯವೇ ಇಲ್ಲ. ಮನಸ್ಸನ್ನು ತೊಡೆದುಹಾಕುವುದು ಹೇಗೆಂಬುದನ್ನು ನೀನು ತಿಳಿಯಲು ಬಯಸುವುದಾದರೆ, ನೀನೊಂದು ಶರೀರವನ್ನು ಹೊಂದಿರುವಾಗ ಮಾತ್ರ ಅದಾಗಲು ಸಾಧ್ಯ. ಆ ನಂತರ ಮನಸ್ಸನ್ನು ತೊಡೆದುಹಾಕಲು ನಿನಗೆ ಸಾಧ್ಯವಿಲ್ಲ.

ಪ್ರಶ್ನೆ: ಹಲವು ಜನರು ನಿಮ್ಮಲ್ಲಿ ವೈಯಕ್ತಿಕವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಇತರರು ಶ್ರದ್ಧೆಯೊಂದಿಗೆ ಪ್ರಾರ್ಥಿಸುತ್ತಾರೆ. ನಾನು ಯಾವಾಗಲೂ ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಬೇಕೇ ಅಥವಾ ನಾನು ನನ್ನ ಕಣ್ಣುಗಳನ್ನು ಮುಚ್ಚಿ ಪ್ರಾಮಾಣಿಕವಾಗಿ ನಿಮ್ಮಲ್ಲಿ ಪ್ರಾರ್ಥಿಸಿದರೆ, ನೀವು ಅದನ್ನು ಕೇಳಿಸಿಕೊಂಡು ನನ್ನ ಪ್ರಶ್ನೆಗಳಿಗೆ ಉತ್ತರಿಸುವಿರೇ?

ಶ್ರೀ ಶ್ರೀ ರವಿ ಶಂಕರ್: ನಿನ್ನ ಕೆಲಸ ಆಗುತ್ತಿದೆಯೇ? ಅದುವೇ ಅದನ್ನು ಹೇಳುತ್ತದೆ.

ನಿನಗೆ ಬರೆಯಬೇಕೆಂಬ ಅನಿವಾರ್ಯತೆಯ ಅನುಭವವಾದರೆ, ಆಗ ಬರೆ. ಅಭಿವ್ಯಕ್ತಿಯ ಕ್ಷೇತ್ರವು ಅನಂತವಾಗಿದೆ.

ಪ್ರಶ್ನೆ: ನಿಮಗೆ ಕಡೆಯ ಸಾರಿ ಶೋಕ ಅಥವಾ ದುಃಖದ ಅನುಭವವಾದುದು ಯಾವಾಗ ಮತ್ತು ಅದನ್ನು ಹೋಗಲು ಬಿಡುವಾಗಿನ ನಿಮ್ಮ ಅನುಭವವೇನಾಗಿತ್ತು?

ಶ್ರೀ ಶ್ರೀ ರವಿ ಶಂಕರ್: ಪ್ರತಿಸಲವೂ ಯಾರಾದರೂ ದುಃಖದಲ್ಲಿರುವುದನ್ನು ನಾನು ನೋಡುವಾಗ, ನನಗೆ ಅದರ ಅನುಭವವಾಗುತ್ತದೆ. ಅವರಿಗಾಗಿ ನನ್ನಲ್ಲಿ ದುಃಖವುಂಟಾಗುತ್ತದೆ. ಅವರು ಎಷ್ಟೋ ಹೆಚ್ಚು ಸಂತೋಷವಾಗಿರಬಹುದಾಗಿತ್ತು. ಯಾವುದೇ ಕಾರಣವಿಲ್ಲದೆಯೇ ಅವರು ದುಃಖಿತರಾಗಿದ್ದಾರೆ.

ಹಿಮಾಲಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಸುನಾಮಿಯು ಬಹಳ ದುರಂತಮಯವಾಗಿತ್ತು. ನಮ್ಮ ಆರ್ಟ್ ಆಫ್ ಲಿವಿಂಗ್‌ನ ಸ್ವಯಂಸೇವಕರು ಅಲ್ಲಿದ್ದಾರೆ ಮತ್ತು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಅವರು ಆಹಾರ, ಬಟ್ಟೆ, ಆಶ್ರಯ ಮತ್ತು ವೈದ್ಯಕೀಯ ಆರೈಕೆಯನ್ನು ನೀಡುತ್ತಿದ್ದಾರೆ. ಸೇನೆ ಮತ್ತು ಪೋಲಿಸ್ ನಮ್ಮ ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ನಾವು ಸೇನೆಯ ಜನರು ಬಳಲುತ್ತೇವೆ, ಆದರೆ ಈ ಸ್ವಯಂಸೇವಕರು, ಯುವ ಹುಡುಗರು ಮತ್ತು ಹುಡುಗಿಯರು ಬೆಳಗ್ಗಿನಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಅವರೊಂದು ಮುಗುಳ್ನಗೆಯೊಂದಿಗೆ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.

ಅವರೆಲ್ಲರೂ ಸಂಪೂರ್ಣವಾಗಿ ಅಚ್ಚರಿಗೊಂಡರು! ಅಷ್ಟೊಂದನ್ನು ನೀವು ಒಂದು ಮುಗುಳ್ನಗೆಯೊಂದಿಗೆ ಮಾಡಲು ಹೇಗೆ ಸಾಧ್ಯ? ನಮ್ಮ ಸ್ವಯಂಸೇವಕರು ಅವರಿಗೆ ಧ್ಯಾನವನ್ನು ಕೂಡಾ ಕಲಿಸಿದರು.