ಶನಿವಾರ, ಜುಲೈ 20, 2013

ಸೃಷ್ಟಿಯ ರಹಸ್ಯಗಳು

ಮಾಂಟ್ರಿಯಾಲ್, ಕೆನಡ
ಜುಲೈ ೨೦, ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಇತ್ತೀಚೆಗೆ ಹಿಗ್ಸ್-ಬೋಸನ್ ಕಣ ಎಂದು ಕರೆಯಲ್ಪಡುವ ಒಂದರ ಆವಿಷ್ಕಾರವಾಯಿತು. ಇದು ವಿಜ್ಞಾನಿಗಳನ್ನು ಶುದ್ಧ ಚೈತನ್ಯದ ಕಡೆಗೆ ಕೊಂಡೊಯ್ಯುತ್ತಿದೆಯೇ?

ಶ್ರೀ ಶ್ರೀ ರವಿ ಶಂಕರ್: ಅವರು ಎಲ್ಲಿ ದೇವ ಕಣವನ್ನು ಕಂಡುಹಿಡಿದರೋ ಆ ಸಂಸ್ಥೆಯಾದ ಸಿ.ಇ.ಆರ್.ಎನ್. (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್) ನ್ನು ನಾನು ಸಂದರ್ಶಿಸಿದೆ. ನಾವು ಅವರಿಗೆ ಯೋಗ ವಸಿಷ್ಠ ಪುಸ್ತಕ ಮತ್ತು ಕೆಲವು ಧ್ಯಾನ ಸಿ.ಡಿ. ಗಳನ್ನು ಉಡುಗೊರೆಯಾಗಿ ನೀಡಿದೆವು. ವಾಸ್ತವವಾಗಿ, ಆ ಸಂಸ್ಥೆಯ ಮುಖ್ಯಸ್ಥರು ನಮ್ಮ ವರ್ಲ್ಡ್ ಫಾರಮ್ ಫಾರ್ ಎಥಿಕ್ಸ್ ಇನ್ ಬ್ಯುಸಿನೆಸ್ ಸಮ್ಮೇಳನಕ್ಕೆ ಬಂದು ಮಾತನಾಡಿದರು.

ವಿಜ್ಞಾನಿಗಳು ಆಧ್ಯಾತ್ಮಕ್ಕೆ ಬಹಳ ಹತ್ತಿರವಾಗಿದ್ದಾರೆ, ಅವರು ಅದರಿಂದ ದೂರವಿಲ್ಲ. ಅವರೇನು ಹೇಳುತ್ತಿರುವರೋ ಅದು, ನಾವು ಹೇಳುತ್ತಾ ಬಂದಿರುವ ಅದೇ ವಿಷಯವಾಗಿದೆ. ಆ ಸಂಸ್ಥೆಯೊಂದಿಗೆ ೪೦ ವರ್ಷಗಳಿಂದ ಇದ್ದ ಜರ್ಮನಿಯ ಒಬ್ಬ ವಿಜ್ಞಾನಿಯು, ಈ ಎಲ್ಲಾ ವರ್ಷಗಳಲ್ಲಿ ತಾನು ವಸ್ತುವಿನ ಬಗ್ಗೆ ಅಧ್ಯಯನ ನಡೆಸಿರುವುದಾಗಿಯೂ, ತಿಳಿದುಬಂದುದೇನೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂದೂ ಹೇಳಿದರು. ವಸ್ತುವು ಅಸ್ತಿತ್ವದಲ್ಲಿಯೇ ಇಲ್ಲ! ಅಸ್ತಿತ್ವದಲ್ಲಿರುವುದು ಏನೆಂದರೆ ಕೇವಲ ಚೈತನ್ಯ, ಮತ್ತು ಇದೆಲ್ಲವೂ ಒಂದು ಭ್ರಮೆ ಮಾತ್ರ.

ಇದನ್ನೇ ಪವಿತ್ರ ಸಂಪ್ರದಾಯದ ಗುರುಗಳು ಸಾವಿರಾರು ವರ್ಷಗಳ ಮೊದಲು ಹೇಳಿದುದು, "ಇದೆಲ್ಲವೂ ಕೇವಲ ಮಾಯೆ, ಒಂದು ಭ್ರಮೆ, ಯಾಕೆಂದರೆ ಯಾವುದೂ ಅಸ್ತಿತ್ವದಲ್ಲಿಲ್ಲ; ಒಂದೇ ಒಂದು ವಿಷಯ ಅಸ್ತಿತ್ವದಲ್ಲಿರುವುದು." ಈಗ ವಿಜ್ಞಾನಿಗಳು ಅದನ್ನೇ ಹೇಳುತ್ತಿದ್ದಾರೆ.

ಗ್ರಹಿಸುವವನು ಮತ್ತು ಗ್ರಹಿಸಲ್ಪಡುವ ವಸ್ತುವಿನ ನಡುವೆ ಒಂದು ನಿಕಟ ಸಂಬಂಧ ಇದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ನೀವಿಲ್ಲದಿದ್ದರೆ, ನಿಮಗೆ ಇಲೆಕ್ಟ್ರಾನನ್ನು ನೋಡಲು ಕೂಡಾ ಸಾಧ್ಯವಿಲ್ಲ, ಅದು ಅಸ್ತಿತ್ವದಲ್ಲಿಲ್ಲ. ಅಲ್ಲಿ ನೀವಿರುವುದರಿಂದ ಒಂದು ಇಲೆಕ್ಟ್ರೋನ್ ಮೇಲೆ ಪ್ರಭಾವ ಬೀರುತ್ತೀರಿ. ಹೀಗೆ, ದೃಷ್ಟಾ, ದೃಶ್ಯ ಮತ್ತು ದೃಷ್ಟಿಸುವ ಪ್ರಕ್ರಿಯೆ; ತಿಳಿಯುವವನು, ತಿಳುವಳಿಕೆಯ ವಸ್ತು ಮತ್ತು ತಿಳಿಯುವ ಪ್ರಕ್ರಿಯೆ; ಅವುಗಳೆಲ್ಲವೂ ಒಂದೇ. ಇದನ್ನೇ ನಾವು ಆಧ್ಯಾತ್ಮದಲ್ಲಿ ಹೇಳುತ್ತಾ ಬಂದಿರುವುದು.

ಅದೇ ವಿಷಯವನ್ನು ಒಬ್ಬ ವಿಜ್ಞಾನಿಯಿಂದ ಕೇಳುವುದು ಬಹಳ ಹರ್ಷದಾಯಕವಾಗಿತ್ತು. ಅವರು ಕೂಡಾ ಸಂತೋಷವಾಗಿ ಮತ್ತು ಆನಂದಪೂರ್ಣರಾಗಿದ್ದರು.

ವಿಜ್ಞಾನಿಗಳು, "ನಾವು ವಿಶ್ವದ ಬಗ್ಗೆ ಬಹಳಷ್ಟನ್ನು ಕಂಡುಹುಡುಕಿದ್ದೇವೆಂದು ನಾವು ಯೋಚಿಸಿದ್ದೆವು, ಆದರೆ ನಮಗೆ ಇನ್ನೂ ಹೆಚ್ಚಿನದು ತಿಳಿದಾಗ, ನಮಗೆ ತಿಳಿದಿಲ್ಲದೇ ಇರುವ ವಿಷಯಗಳು ಹಲವಾರಿವೆ ಎಂಬುದು ನಮಗೆ ಅರಿವಾಯಿತು; ಉದಾಹರಣೆಗೆ ಗಾಢ ವಸ್ತು ಮತ್ತು ಗಾಢ ಚೈತನ್ಯ" ಎಂದು ಹೇಳಿದರು. ಭಾರತ್ ಗ್ಯಾನ್ ನ ಮೂಲಕ, ಸೃಷ್ಟಿಯ ಬಗ್ಗೆ ಆರ್ಟ್ ಆಫ್ ಲಿವಿಂಗ್ ಪ್ರಕಟಿಸಿರುವ ದಿ ಕ್ರಿಯೇಶನ್ ಎಂಬ ಒಂದು ಪುಸ್ತಕವನ್ನು ನಾವು ಅವರಿಗೆ ಉಡುಗೊರೆಯಾಗಿ ನೀಡಿದೆವು.
ವೇದಗಳಲ್ಲಿ, ಸೃಷ್ಟಿಯ ಬಗ್ಗೆ ಒಂದು ಸ್ತೋತ್ರವಿದೆ. ಅದು ಈ ರೀತಿ ಸಾಗುತ್ತದೆ, ’ಆರಂಭದಲ್ಲಿ, ಕತ್ತಲಿನಿಂದ ಆವರಿಸಲ್ಪಟ್ಟ ಕತ್ತಲೆಯಿತ್ತು’. ಯಾವುದೇ ಪಂಡಿತನಿಗೂ ಅದನ್ನು ನಿಜವಾಗಿ ಅರ್ಥ ಮಾಡಿಕೊಳ್ಳಲು ಅಥವಾ ವ್ಯಾಖ್ಯಾನಿಸಲು ಸಾಧ್ಯವಾಗಲಿಲ್ಲ. ಈಗ, ಅದನ್ನೇ ವಿಜ್ಞಾನಿಗಳು ಹೇಳುತ್ತಿರುವುದು; ಒಂದು ಗಾಢ ವಸ್ತು ಮತ್ತು ಗಾಢ ಚೈತನ್ಯವಿದೆ.
ವಿಶ್ವದಲ್ಲಿ ವಸ್ತುಗಳು ಯಾಕೆ ಗೋಳಾಕಾರದಲ್ಲಿವೆ? ಅದು ಎಲ್ಲದರ ಸುತ್ತಲಿರುವ ಗಾಢ ವಸ್ತುವಿನ ಒತ್ತಡದಿಂದಾಗಿ, ಅದಕ್ಕಾಗಿಯೇ ನಮಗೆ ಎಲ್ಲವೂ ಗೋಳಾಕಾರದಲ್ಲಿ ಕಾಣಿಸುವುದು.

ಸೂರ್ಯನು ಗುಂಡಗೆ ಇರುವುದು ಯಾಕೆ? ಯಾಕೆಂದರೆ, ಸೂರ್ಯನ ಸುತ್ತಲಿರುವ ಗಾಢ ಚೈತನ್ಯವು ಎಷ್ಟು ಹೆಚ್ಚೆಂದರೆ, ಅದು ಸೂರ್ಯನನ್ನು ಅದುಮುತ್ತದೆ. ಅದು, ಒಂದು ನೀರಿನ ಬಾಟಲಿಯಲ್ಲಿರುವ ಅನಿಲದ ಕಣಗಳಂತೆ. ನೀವೊಂದು ಸೋಡಾ ಪಾನೀಯವನ್ನು ಅಲುಗಾಡಿಸಿದರೆ, ಗುಳ್ಳೆಗಳು ಉಂಟಾಗುತ್ತವೆ. ಅವುಗಳ ಸುತ್ತಲಿರುವ ನೀರಿನ ಒತ್ತಡದಿಂದಾಗಿ ಒಳಗಿರುವ ಗುಳ್ಳೆಗಳು ಗುಂಡಗಿರುತ್ತವೆ.

ಅದೇ ರೀತಿಯಲ್ಲಿ, ಈ ವಿಶ್ವವು ಕಾಣಿಸದಿರುವ ಗಾಢ ಚೈತನ್ಯವನ್ನು ಒಳಗೊಂಡಿದೆ. ನಿಮಗದನ್ನು ನೋಡಲು ಸಾಧ್ಯವಿಲ್ಲದಿರುವುದರಿಂದ ಅವರದನ್ನು ಗಾಢ ಚೈತನ್ಯವೆಂದು ಕರೆಯುತ್ತಾರೆ. ಈ ಗಾಢ ಚೈತನ್ಯದ ಇರುವಿಕೆಯ ಕಾರಣದಿಂದಾಗಿಯೇ, ನಕ್ಷತ್ರಗಳು ಮತ್ತು ಗ್ರಹಗಳನ್ನೊಳಗೊಂಡಂತೆ ಇತರ ಎಲ್ಲಾ ವಸ್ತುಗಳು ಗೋಳವಾಗಿರುವುದು. ಮೇಲಾಗಿ, ನಾವು ನೋಡುವ ಈ ನಕ್ಷತ್ರಗಳು, ಗ್ರಹಗಳು ಸೃಷ್ಟಿಯ ಕೇವಲ ೧೦% ನ್ನು ಮಾತ್ರ ರೂಪಿಸುತ್ತವೆ; ೯೦% ಗಾಢ ಚೈತನ್ಯ, ಗಾಢ ವಸ್ತುವಾಗಿದೆ ಮತ್ತು ಶಿವ ತತ್ವವೆಂದರೆ ಅದುವೇ.

ನಂತರ ವಿಜ್ಞಾನಿಗಳು, ಅವರ ಆವಿಷ್ಕಾರವು ದೇವಕಣವೆಂದು ಹೇಗೆ ಗುರುತಿಸಲ್ಪಟ್ಟಿತು ಎಂಬುದಾಗಿ ನನಗೆ ಹೇಳಿದರು.
ವಿಜ್ಞಾನಿಗಳು ಕಣಗಳ ದೇವರನ್ನು; ಅಂದರೆ ಎಲ್ಲಿಂದ ಇತರ ಎಲ್ಲಾ ಕಣಗಳು ಬಂದಿವೆಯೋ ಅದನ್ನು ಕಂಡುಹಿಡಿದಾಗ; ಕಣಗಳಲ್ಲೇ ಸೂಕ್ಷ್ಮವಾದುದರಲ್ಲಿ ಮೂರು ಐಸೋಟೋಪುಗಳು ಇರಲೇ ಬೇಕೆಂಬುದಾಗಿ ಅವರು ಕಂಡುಕೊಂಡರು. ಮೂರು ಐಸೋಟೋಪ್‌ಗಳಿಲ್ಲದೆ ವಸ್ತುವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಇದನ್ನೇ ಋಷಿಗಳು ಹೇಳಿದುದು, "ಸೃಷ್ಟಿಯು ಅಸ್ತಿತ್ವದಲ್ಲಿರಬೇಕಾದರೆ ಮೂರು ವಿಷಯಗಳು ಇರಲೇ ಬೇಕು - ಸತ್ವ, ರಜಸ್ ಮತ್ತು ತಮಸ್. ಇವುಗಳಲ್ಲಿ ಒಂದು ಇಲ್ಲವಾಗಿದ್ದರೆ ಕೂಡಾ, ವಸ್ತುಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ."

ವಸ್ತುವು ಅಸ್ತಿತ್ವದಲ್ಲಿರಬೇಕಾದರೆ ಮೂರು ವಿಷಯಗಳು ಇರಲೇಬೇಕೆಂದು ವಿಜ್ಞಾನಿಗಳು ಹೇಳಿದರು.ವಿಜ್ಞಾನಿಗಳು ಆ ಮೂರನ್ನು ಇನ್ನೂ ತುಂಡರಿಸಿದಾಗ, ಅವುಗಳು ಕೇವಲ ಕಂಪನಗಳು ಎಂಬುದನ್ನು ಅವರು ಕಂಡುಕೊಂಡರು; ಅವರು ಕರೆದುದು ಹಾಗೆ, ಕಣಗಳ ದೇವರು ಎಂದು.

ಸಂಸ್ಥೆಯ ಮಾರ್ಕೆಟಿಂಗ್ ವಿಭಾಗವು, "ನೀವದನ್ನು ಕಣಗಳ ದೇವರು ಎಂದು ಕರೆದರೆ, ಅದು ಮಾರಾಟವಾಗಲಾರದು, ಸುಮ್ಮನೇ ಅದನ್ನು ದೇವಕಣ ಎಂದು ಕರೆಯಿರಿ" ಎಂದು ಹೇಳಿತು.

ಹೀಗೆ, ಮಾರ್ಕೆಟಿಂಗ್ ವಿಭಾಗವು, ’ಗಳ’ ಎಂಬುದನ್ನು ತೆಗೆದುಹಾಕಿ, "ದೇವಕಣದ ಆವಿಷ್ಕಾರವಾಯಿತು" ಎಂದು ಹೇಳಿತು. ನಂತರ ಮಾಧ್ಯಮಗಳು ಅದನ್ನು ಒಂದು ದೊಡ್ಡ ರೀತಿಯಲ್ಲಿ ತೆಗೆದುಕೊಂಡವು. ಇದನ್ನೇ ಅವರು ನನಗೆ ಹೇಳಿದ್ದು. ಇದು ಆಸಕ್ತಿಕರವಾದುದು.

ಈಗ, ಆ ಯಂತ್ರವನ್ನು ದುರಸ್ತಿಗೆಂದು ೧೮ ತಿಂಗಳುಗಳವರೆಗೆ ನಿಲ್ಲಿಸಲಾಗಿದೆ. ಅದೊಂದು, ಕೆಳಗಡೆ ನಿರ್ಮಿಸಲ್ಪಟ್ಟ, ೨೭ ಕಿಲೋಮೀಟರುಗಳಷ್ಟು ದೊಡ್ಡದಾದ ಸುರಂಗವಾಗಿದೆ; ಎರಡೂ ದಿಕ್ಕುಗಳಿಂದ ಒಂದು ಕಣವು ಬರುತ್ತದೆ ಮತ್ತು ಹೆಚ್ಚಿನ ವೇಗದಲ್ಲಿ ಅವುಗಳು ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೆ. ಅದು ಹಲವಾರು ಛಾಯಾಚಿತ್ರಗಳಲ್ಲಿ ಸೆರೆಹಿಡಿಯಲ್ಪಡುತ್ತದೆ.
ವಿಶ್ಲೇಷಣೆಯು ಹಲವು ವರ್ಷ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ; ನೂರಾರು, ಸಾವಿರಾರು ವಿಜ್ಞಾನಿಗಳು ಅದರ ಮೇಲೆ ಕೆಲಸ ಮಾಡುವರು. ಪ್ರಸ್ತುತದಲ್ಲಿ, ಸುಮಾರು ೩,೦೦೦ ವಿಜ್ಞಾನಿಗಳು, ಈ ಕಣಗಳನ್ನು ವಿಶ್ಲೇಷಣೆ ಮಾಡುತ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹಾಗಾದರೆ, ದೇವಕಣವೆಂದರೇನು? ಅದರರ್ಥ, ಕಣಗಳ ತಾಯಿಯೆಂದು. ಇದೆಲ್ಲವೂ ಬಹಳ ಆಸಕ್ತಿಕರವಾಗಿದೆ. ವಿಜ್ಞಾನಿಗಳು ಏನೆಲ್ಲಾ ಹೇಳಿರುವರೋ ಅದರೊಂದಿಗೆ ನೀವು ವೈದಿಕ ಜ್ಞಾನವನ್ನು ಹೋಲಿಸಬಹುದು, ಅದು ಆಶ್ಚರ್ಯಜನಕವಾಗಿ ಒಂದೇ ರೀತಿಯಾಗಿದೆ.

ಪ್ರಶ್ನೆ: ಗುರುದೇವ, ಮಹಾ ವಿಸ್ಫೋಟದ (ಬಿಗ್ ಬ್ಯಾಂಗ್) ಒಂದು ಪ್ರಸ್ತುತ ಸಿದ್ಧಾಂತ ಹೇಳುವುದೇನೆಂದರೆ, ಅತ್ಯಂತ ಸಣ್ಣ ಬಿಂದುವೊಂದು ವಿಸ್ತರಿಸಲು ತೊಡಗಿದಾಗ ವಿಶ್ವವು ಪ್ರಾರಂಭವಾಯಿತೆಂದು. ವಿಜ್ಞಾನಕ್ಕೆ ಇನ್ನೂ ವಿವರಿಸಲು ಸಾಧ್ಯವಾಗದೇ ಇರುವ, ಈ ವಿಶ್ವದ ಗಡಿಗಳಾಚೆಗೆ ಇರುವುದೇನು? ಇದರ ಮೇಲೆ ನೀವು ಸ್ವಲ್ಪ ಪ್ರಕಾಶ ಬೀರಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ವಿಷಯಗಳು ಶುರುವಾದಾಗ, ಅದು ಪ್ರಾರಂಭವಾದಾಗ - ಇದು ರೇಖಾತ್ಮಕ ಚಿಂತನೆಯಾಗಿದೆ. ನೀನು ಯೋಗ ವಸಿಷ್ಠವನ್ನು ಓದಿದರೆ, "ಮರೀಚಿಕೆಯು ಯಾವಾಗ ಶುರುವಾಯಿತು?" ಎಂದು ನೀನು ಕೇಳುವೆ.

ಉತ್ತರವೆಂದರೆ, "ಯಾವುದೇ ಆರಂಭವಿರಲಿಲ್ಲ, ಅದು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ, ಯಾಕೆಂದರೆ ಅದು ಅಸ್ತಿತ್ವದಲಿಲ್ಲ!"

ಒಂದು ಮರೀಚಿಕೆಗೆ ಯಾವುದೇ ಆರಂಭವಿಲ್ಲ. ನೀರು ತುಂಬಿದ ಒಂದು ಗಾಜಿನ ಪಾತ್ರೆಯಲ್ಲಿ ನೀವೊಂದು ಪೆನ್ನನ್ನು ಇರಿಸಿದಾಗ, ಪೆನ್ನು ಬಾಗಿದಂತೆ ಕಾಣಿಸುತ್ತದೆ. ಪೆನ್ನು ಯಾವಾಗ ಬಾಗಿತೆಂದು ನೀನು ಕೇಳಿದರೆ? ಇಲ್ಲ, ಅದು ಬಾಗಿದಂತೆ ಕಾಣಿಸುವುದು ಮಾತ್ರ. ಅದೇ ರೀತಿಯಲ್ಲಿ, ಈ ವಿಶ್ವಕ್ಕೆ ಯಾವುದೇ ಆದಿಯಿಲ್ಲ, ಅದೊಂದು ಟೆನ್ನಿಸ್ ಚೆಂಡಿನಂತೆ - ಇದು ಗೋಳಾತ್ಮಕ ಚಿಂತನೆಯೆಂದು ಕರೆಯಲ್ಪಡುತ್ತದೆ.

ಒಂದು ಗೋಳಕ್ಕೆ ಯಾವುದೇ ಆರಂಭವಿಲ್ಲ; ಪ್ರತಿಯೊಂದು ಬಿಂದುವೂ ಒಂದು ಆರಂಭವಾಗಿದೆ ಮತ್ತು ಪ್ರತಿಯೊಂದು ಬಿಂದುವೂ ಒಂದು ಅಂತ್ಯವಾಗಿದೆ. ಅದೇ ರೀತಿಯಲ್ಲಿ, ಪ್ರಪಂಚದಲ್ಲಿ, ಪ್ರತಿಯೊಂದೂ ಹುಟ್ಟುತ್ತದೆ ಮತ್ತು ಪ್ರತಿಯೊಂದೂ ಸಮಾಪ್ತವಾಗುತ್ತದೆ, ಪ್ರತಿದಿನವೂ.

ಪ್ರಶ್ನೆ: ಈ ಗ್ರಹದಲ್ಲಿ ಬಿಲಿಯಗಟ್ಟಲೆ ವರ್ಷಗಳ ಮೊದಲು ಮಾನವ ಜೀವನವು ಅಸ್ತಿತ್ವದಲ್ಲಿತ್ತೇ?

ಶ್ರೀ ಶ್ರೀ ರವಿ ಶಂಕರ್: ಯಾರಿಗೆ ಗೊತ್ತು? ನನಗೆ ತಿಳಿಯದು!

ನಾನು ನಿನಗೆ ಹೇಳಬಹುದಾದ ಒಂದು ವಿಷಯವೆಂದರೆ, ಪ್ರಾಚೀನ ಜನರು ಮಾಡಿರುವ ಪಂಚಾಂಗವು ಬಹಳ ಪರಿಪೂರ್ಣವಾಗಿದೆ.

ಆ ದಿನಗಳಲ್ಲಿ, ಅವರಲ್ಲಿ ದೂರದರ್ಶಕಗಳಾಗಲೀ ಅಥವಾ ಈ ಎಲ್ಲಾ ಅತ್ಯಾಧುನಿಕ ಉಪಕರಣಗಳಾಗಲೀ ಇರಲಿಲ್ಲ. ಪ್ರತಿಯೊಂದು ನಕ್ಷತ್ರದ, ಗ್ರಹಗಳ ಚಲನೆ ಮತ್ತು ಸಮಯ-ನಿರ್ಧಾರವನ್ನು ಅಳೆಯುವುದು ಅವರಿಗೆ ಹೇಗೆ ಸಾಧ್ಯವಾಯಿತು? ಪ್ರತಿಯೊಂದೂ ಅಷ್ಟೊಂದು ಕರಾರುವಕ್ಕಾಗಿದೆ. ನಿಜವಾಗಿ ಅದು ಪ್ರತಿ ನಿಮಿಷದವರೆಗೂ ಕರಾರುವಕ್ಕಾಗಿದೆ. ಅದು ವಿಸ್ಮಯಕಾರಿಯಾದುದು. ಯಾವಾಗ ಮತ್ತು ಯಾವ ಸಮಯದಲ್ಲಿ ಗ್ರಹಣವು ಪ್ರಾರಂಭವಾಗುವುದು, ಯಾವ ನಿಮಿಷದಲ್ಲಿ ಅದು ಕೊನೆಯಾಗಲಿದೆ, ಇನ್ನೊಂದು ನೂರು ವರ್ಷಗಳಲ್ಲಿ ಅದು ಪ್ರಪಂಚದ ಯಾವ ಭಾಗದಲ್ಲಿರುವುದು ಎಂಬುದನ್ನು ಅವರು ಲೆಕ್ಕ ಹಾಕಿ ನಿಮಗೆ ಹೇಳುತ್ತಿದ್ದರು. ಅಷ್ಟೊಂದು ಲೆಕ್ಕಾಚಾರ ಮಾಡಲಾಗಿದೆ.

ಖಗೋಳಶಾಸ್ತ್ರದ ನಿಖರತೆ ಮತ್ತು ಪ್ರಾಚೀನ ಜನರು ಯಾವುದರ ಮೂಲಕ ಪಂಚಾಂಗವನ್ನು ಲೆಕ್ಕ ಹಾಕಿ ಮಾಡಿದರೋ ಅದನ್ನು ನೋಡಿದರೆ ನೀವು ಬೆಚ್ಚಿಬೀಳುವಿರಿ.

ಪ್ರಶ್ನೆ: ಗುರುದೇವ, ಕಳೆದ ಕೆಲವು ವರ್ಷಗಳಲ್ಲಿ ಸುನಾಮಿಗಳು, ಭೂಕಂಪಗಳು, ಸುಂಟರಗಾಳಿಗಳು ಮತ್ತು ನೆರೆಗಳಂತಹ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿರುವಂತೆ ಕಾಣಿಸುತ್ತದೆ. ಸಾಧನೆ, ಧ್ಯಾನ ಅಥವಾ ಯಜ್ಞಗಳ ಮೂಲಕ ಈ ಸಂಭವಗಳನ್ನು ಸಂಪೂರ್ಣವಾಗಿ ನಿವಾರಿಸಲು ಯಾವುದಾದರೂ ದಾರಿಯಿರುವುದೇ?

ಶ್ರೀ ಶ್ರೀ ರವಿ ಶಂಕರ್: ಜನರು ಈ ಹಲವಾರು ಡೈನಮೈಟ್‌ಗಳನ್ನು ಭೂಮಿಯ ಅಡಿಗೆ ಹಾಕುತ್ತಿರುವಾಗ, ಬೆಟ್ಟಗಳನ್ನು ಕೊರೆಯುತ್ತಿರುವಾಗ ಮತ್ತು ಗಣಿಗಾರಿಕೆ ಮಾಡುತ್ತಿರುವಾಗ, ಭೂಮಿಯು ಪ್ರತಿಕ್ರಿಯಿಸುತ್ತದೆ. ನಾವು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು. ಜನರು ಪ್ರಕೃತಿಯ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿಲ್ಲ. ಅಷ್ಟೊಂದು ಮರಗಳನ್ನು ಕಡಿಯುತ್ತಿರುವುದು; ಜಲ ಯೋಜನೆ ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟುಗಳನ್ನು ಕಟ್ಟಬಾರದ ಜಾಗಗಳಲ್ಲಿ ಕಟ್ಟುತ್ತಿರುವುದು ಸುನಾಮಿಗಿರುವ ಕಾರಣಗಳಲ್ಲೊಂದು ಎಂದು ಹೇಳಲಾಗುತ್ತದೆ.

ಹಾಗಾಗಿ, ಇದು ಪ್ರಕೃತಿಯ ಕೋಪವಾಗಿದೆ, ಅದು ಒಂದು ವಿಷಯ.

ಎರಡನೆಯದಾಗಿ, ಕೆಲವೊಮ್ಮೆ ನಿಮಗದನ್ನು ತಡೆಯಲು ಸಾಧ್ಯವಿಲ್ಲ; ಸೃಷ್ಟಿ ಮತ್ತು ನಾಶಗಳು ಪ್ರಕೃತಿಯ ಭಾಗವಾಗಿವೆ, ಮತ್ತು ಸಮಯವು ಒಂದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ, ಪ್ರಕೃತಿಯು ಈ ಚಕ್ರಗಳಿಗೆ ಒಳಗಾಗುತ್ತದೆ.

ನಿಮಗೆ ಗೊತ್ತೇ, ನಮ್ಮ ಸೌರ ಮಂಡಲವು ಹಲವಾರು ಕಪ್ಪು ಕುಳಿ (ಬ್ಲ್ಯಾಕ್ ಹೋಲ್) ಗಳಿಂದ ಸುತ್ತುವರಿಯಲ್ಪಟ್ಟಿದೆಯೆಂದು ವಿಜ್ಞಾನಿಗಳು ಹೇಳಿರುವರೆಂದು?

ನಮ್ಮ ಸೂರ್ಯನು ಅವುಗಳ ಮೂಲಕ ಹಾದುಹೋಗುತ್ತಿದೆ, ಎಲ್ಲಾ ಕಪ್ಪು ಕುಳಿಗಳಿಂದ ತಪ್ಪಿಸಿಕೊಳ್ಳುತ್ತಾ; ಅದು ಯಾವುದೇ ಸಮಯದಲ್ಲಿ ಬೇಕಾದರೂ ಸೆಳೆಯಲ್ಪಡಬಹುದು. ಕಪ್ಪು ಕುಳಿಗಳು ಬಹಳಷ್ಟು ಹತ್ತಿರ ಬರುತ್ತವೆ ಮತ್ತು ನಂತರ ಸೂರ್ಯ ದೂರ ಸಾಗುತ್ತದೆ ಹಾಗೂ  ಕಪ್ಪು ಕುಳಿಗಳು ದೂರಕ್ಕೆ ಸಾಗುತ್ತವೆ. ಸೂರ್ಯನು ಒಳಕ್ಕೆಳೆದುಕೊಳ್ಳಲ್ಪಟ್ಟಾಗ, ಸಂಪೂರ್ಣ ಸೌರ ಮಂಡಲವು  ಶೂನ್ಯವಾಗಿ ಬಿಡುತ್ತದೆ.

ಇದೆಲ್ಲವನ್ನೂ ಸುಮ್ಮನೇ ಊಹಿಸಿಕೊಳ್ಳಿ, ಕ್ಷಣಮಾತ್ರದಲ್ಲಿ ಎಲ್ಲವೂ ಶೂನ್ಯವಾಗುವುದು ಮತ್ತು ಅದು ಯಾವುದೇ ಕ್ಷಣ ಬೇಕಾದರೂ ಆಗಬಹುದು! ನಿಮಗೆ ಭಯವಾಗುವುದಿಲ್ಲವೇ? ನೀವೆಲ್ಲರೂ ಸಂತೋಷವಾಗಿರುವಿರಿ! ಎಲ್ಲವೂ ಒಂದು ಕುಳಿಯೊಳಕ್ಕೆ ಎಳೆಯಲ್ಪಡುವುದು ಎಂಬುದನ್ನು ಕೇಳಿಸಿಕೊಂಡು ನೀವು ಸಂತೋಷವಾಗಿದ್ದೀರಿ. ಏನೂ ಉಳಿಯಲಾರದು, ಏನೂ!

ಆಗ ನೀವು ಒಂದು ನೌಕರಿ, ಒಬ್ಬ ಸಂಗಾತಿ, ಒಬ್ಬ ಆತ್ಮ ಸಂಗಾತಿಯನ್ನು ಕಂಡುಹುಡುಕುವ ಬಗ್ಗೆ ಚಿಂತಿಸಬೇಕಾಗಿಲ್ಲ; ನೀವು ಚಿಂತಿಸಬೇಕಾಗಿ ಬರುವುದಿಲ್ಲ. ನಿಜವಾಗಿ, ಎಲ್ಲರೂ ಇಡೀ ಒಂದು ಆತ್ಮ ಸಂಗಾತಿಯ ಒಳಕ್ಕೆ ವಿಲೀನವಾಗುವರು; ಎಲ್ಲವೂ ವಿಲೀನವಾಗುವುದು, ಮುಕ್ತಾಯವಾಗುವುದು.

ಪ್ರಶ್ನೆ: ಗುರುದೇವ, ನಾವು ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವಂತೆ  ನಮ್ಮ ಕುಲಕ್ಕೆ ಒಂದು ಅಪಾಯವಿದೆಯೆಂದು ನನಗನ್ನಿಸುತ್ತದೆ. ಈ ಪ್ರಾಚೀನ ಜ್ಞಾನದಿಂದ ನಾವು ಸಂಪರ್ಕ ಕಡಿದುಕೊಳ್ಳುತ್ತಿದ್ದೇವೆಯೇ? ಹಾಗಿದ್ದಲ್ಲಿ, ನಾವು ಅದರ ಬಗ್ಗೆ ಏನು ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ವಾಸ್ತವವಾಗಿ, ನೀವು ವಿಜ್ಞಾನಕ್ಕೆ, ಕಣ ಭೌತಶಾಸ್ತ್ರ ಅಥವಾ ಗಣಿತಕ್ಕೆ ಇನ್ನೂ ಹೆಚ್ಚು ಹತ್ತಿರ ಹೋದಷ್ಟೂ ನೀವು ಪ್ರಾಚೀನ ಜನರ ಜ್ಞಾನ, ಅಂದರೆ ವೇದಾಂತಕ್ಕೆ ಬಹಳ ಹತ್ತಿರ ಹೋಗುತ್ತೀರಿ. ನೀವು ವೇದಾಂತಕ್ಕೆ ಎಷ್ಟು ಹತ್ತಿರ ಬರುತ್ತೀರೆಂದರೆ, ನಿಮಗದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ, ಯಾಕೆಂದರೆ ಅದು ಯಥಾರ್ಥದಲ್ಲಿ ಇದನ್ನೇ ಹೇಳುತ್ತದೆ.

ಪ್ರಶ್ನೆ: ವಿಜ್ಞಾನದ ಈಗಿನ ಸಿದ್ಧಾಂತಗಳ ಪ್ರಕಾರ, ಭೂಮಿಯ ವಯಸ್ಸು ಸುಮಾರು ೪ ಬಿಲಿಯನ್ ವರ್ಷಗಳಷ್ಟು ಎಂದು ಅಂದಾಜು ಮಾಡಲಾಗಿದೆ. ಹೀಗಿದ್ದರೂ, ವೇದಗಳ ಪ್ರಕಾರ, ಭೂಮಿಯ ವಯಸ್ಸು ಬೇರೆಯಾಗಿದೆ. ಈ ವ್ಯತ್ಯಾಸವನ್ನು ನೀವು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಪಾಶ್ಚಾತ್ಯ ವಿಜ್ಞಾನದ ಪ್ರಕಾರ ಅದು ೪ ಬಿಲಿಯನ್ ವರ್ಷಗಳೇ? ಅಲ್ಲ, ವಿಜ್ಞಾನದ ಪ್ರಕಾರ ಅದು ೧೨.೮ ಬಿಲಿಯನ್ ವರ್ಷಗಳು ಮತ್ತು ವೈದಿಕ ಜ್ಞಾನದ ಪ್ರಕಾರ ಅದು ಸುಮಾರು ೧೯ ಬಿಲಿಯನ್ ವರ್ಷಗಳು.