ಶುಕ್ರವಾರ, ಜುಲೈ 26, 2013

ಅರ್ಥವಾಗದ್ದನ್ನು ಅರ್ಥ ಮಾಡಿಕೊಳ್ಳುವ ಪರಿ

ಬೂನ್, ನಾರ್ತ್ ಕೆರೋಲಿನಾ
ಜುಲೈ ೨೬, ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಸತ್ಯವು ವ್ಯಂಜನ ಮತ್ತು ಸ್ವರಗಳ ನಡುವೆ ಅಡಗಿದೆಯೆಂದು ನೀವು ಇವತ್ತು ಹೇಳಿದಿರಿ. ಅದು ಬಹಳ ಸುಂದರವಾಗಿದೆ. ಅದರ ಬಗ್ಗೆ ನೀವು ಇನ್ನೂ ಸ್ವಲ್ಪ ಹೆಚ್ಚು ಹೇಳಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಬೇರೆ ಬೇರೆ ಅಕ್ಷರಗಳು ಶರೀರದ ಬೇರೆ ಬೇರೆ ಭಾಗಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಶರೀರವು ಅಕ್ಷರಗಳ ಒಂದು ಮಾಲೆಯಿದ್ದಂತೆ, ಅದು ಅಕ್ಷರ ಮಾಲಿಕಾ ಎಂದು ಕರೆಯಲ್ಪಡುತ್ತದೆ. ನೀವೇ ಒಂದು ಮಾಲೆಯಾಗಿರುವಿರಿ; ಬೇರೆ ಬೇರೆ ಅಕ್ಷರಗಳು ಬೇರೆ ಬೇರೆ ಕೇಂದ್ರಗಳ ಮೇಲೆ ಪ್ರಭಾವ ಬೀರುತ್ತವೆ.

ಭಾಷೆಗಳಲ್ಲಿ ಅತ್ಯಂತ ಹಳೆಯದಾಗಿರುವ ಸಂಸ್ಕೃತವನ್ನು ಯಾವ ರೀತಿಯಲ್ಲಿ ಸಂಘಟಿಸಲಾಗಿದೆಯೆಂದರೆ, ಅದು ಡಾರ್ವಿನನ ವಿಕಾಸ ವಾದಕ್ಕೆ ಹೊಂದಿಕೆಯಾಗುತ್ತದೆ.

ಸಂಸ್ಕೃತ ಭಾಷೆಯ ಮೊದಲನೆಯ ಅಕ್ಷರವು ಅ ಆಗಿದೆ, ಅದನ್ನೇ ಪ್ರತಿಯೊಂದು ಮಗುವೂ ಹೇಳುವುದು. ಸ್ವರಗಳಲ್ಲಿ ಕಡೆಯದು ಅಃ ಆಗಿದೆ. ನೀವು ನಗುವಾಗ ಬರುವ ಶಬ್ದ ಯಾವುದು? ಅಹ ಹ ಹ! ಹೀಗೆ, ನಗುವಿನಲ್ಲಿ ಸಂಪೂರ್ಣ ಭಾಷೆಯು ಇದೆ, ಅ ದಿಂದ ಅಃ ವರೆಗೆ. ಸಂಸ್ಕೃತದಲ್ಲಿ, ಅಃ ಎಂಬುದು ಆಶ್ಚರ್ಯ ಮತ್ತು ನಗುವಿಗೆ ಬಳಸಲ್ಪಡುತ್ತದೆ. ನೀವು ಪ್ರಯತ್ನಿಸಿದರೂ ಕೂಡಾ, ಆ ಮತ್ತು ಹಾ ಇಲ್ಲದೆ ನಿಮಗೆ ನಗಲು ಸಾಧ್ಯವಿಲ್ಲ.

ಸಂಸ್ಕೃತ ಸ್ವರಗಳನ್ನು ನೀವು ಗಮನಿಸಿದರೆ; ಅ, ಆ, ಇ, ಈ, ಊ, ಔ; ಶಬ್ದವು ಹೇಗೆ ಉತ್ಪತ್ತಿಯಾಗುವುದೆಂದು ಗಮನಿಸಿ. ಅ ಎಂಬ ಶಬ್ದವು ಗಂಟಲಿನ ಬುಡದಲ್ಲಿ ಬರುತ್ತದೆ, ಆ ಎಂಬುದು ಇನ್ನೂ ಹೆಚ್ಚು ಬಹಿರ್ಮುಖವಾಗಿ ಬರುತ್ತದೆ. ಇ ಎಂಬುದು ಬಾಯಿಯ ಮೇಲ್ಭಾಗದಿಂದ ಬರುತ್ತದೆ ಮತ್ತು ಈ ಎಂಬುದು ಹೆಚ್ಚು ಬಹಿರ್ಮುಖವಾಗಿದೆ. ಊ ಎಂಬುದು ತುಟಿಗಳಿಗೆ ಬರುತ್ತದೆ ಮತ್ತು ಋ ಎನ್ನುವಾಗ ನಾಲಿಗೆ ತಿರುವುತ್ತದೆ. ಉಳಿದ ಅಕ್ಷರಗಳು ಐ, ಒ, ಔ, ಅಂ, ಅಃ.

ನೀವು ವ್ಯಂಜನಗಳ ಕಡೆಗೆ ಹೋದರೆ, ಅವುಗಳು ಕ, ಖ, ಗ, ಘ, ಙ ಮತ್ತು ಅವುಗಳು ಗಂಟಲಿನಿಂದ ಪ್ರಾರಂಭವಾಗುತ್ತವೆ.

ನಂತರ ಚ, ಛ, ಜ, ಝ, ಞ ಶಬ್ದವು ಬಾಯಿಯ ಕಡೆಗೆ ಚಲಿಸುತ್ತದೆ. ನಂತರ ಬರುವುದು, ತ, ಥ, ದ, ಧ, ನ, ಇವುಗಳು ಬರುವುದು ಹಲ್ಲುಗಳ ಚಲನೆಯ ಸಹಾಯದಿಂದ. ಕೊನೆಯ ಕೆಲವು ತುಟಿಗಳಿಂದ ಬರುತ್ತವೆ, ಪ, ಫ, ಬ, ಭ, ಮ.
ನೀವು ಗಮನಿಸಿದರೆ, ಈ ಎಲ್ಲಾ ಶಬ್ದಗಳು ಗಂಟಲಿನ ಬುಡದಿಂದ ಹೊರಮುಖವಾಗಿ ಚಲಿಸುತ್ತವೆ.

ಪ್ರಾಣಿ ಸಂಕುಲವನ್ನು ಕೂಡಾ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಪಕ್ಷಿಗಳು ಕ ಮತ್ತು ಚ ಶಬ್ದಗಳನ್ನು ಹೊರಹೊಮ್ಮುತ್ತವೆ. ಎರಡು ಪಕ್ಷಿಗಳು ಮಾತ್ರ, ಅಂದರೆ ಗಿಳಿ ಮತ್ತು ಮೈನಾ, ಇವುಗಳಿಗೆ ಮ ಎಂಬ ಶಬ್ದವನ್ನು ಕೂಡಾ ಬಳಸಲು ಸಾಧ್ಯವಿದೆ. ಇತರ ಎಲ್ಲಾ ಪಕ್ಷಿಗಳು ಕ ಮತ್ತು ಚ ಮಾತ್ರ ಬಳಸುತ್ತವೆ.

ಕಪ್ಪೆಗಳಂತಹ ಉಭಯಚರ ಪ್ರಾಣಿಗಳು, ತ, ಥ ಅಥವಾ ತ್ರ ಎಂಬಂತಹ ಶಬ್ದಗಳನ್ನು ಮಾಡುತ್ತವೆ.

ಹಸುಗಳು, ಕುರಿಗಳು, ಮೇಕೆಗಳು, ಕುದುರೆಗಳು, ಮೊದಲಾದಂತಹ ಸಸ್ತನಿಗಳು ಪ, ಫ, ಬ, ಭ, ಮ ಅಥವಾ ಮುಂದಿನ ವ್ಯಂಜನಗಳ ಗುಂಪನ್ನು ಬಳಸುತ್ತವೆ.

ಕೊನೆಯದಾಗಿ ಬರುವುದು, ಯ, ರ, ಲ, ವ, ಶ, ಷ ಗಳಂತಹ ಇತರ ಎಲ್ಲಾ ಅಕ್ಷರಗಳು.

ಆದ್ದರಿಂದ, ಅಕ್ಷರಗಳು ಮತ್ತು ಶಬ್ದಗಳು ವಿಕಾಸವಾದದ ಕ್ರಮದಲ್ಲಿಯೇ ಸಂಯೋಜಿಸಲ್ಪಟ್ಟಿವೆ; ಅಂದರೆ ಪಕ್ಷಿಗಳು, ಪ್ರಾಣಿಗಳು, ಸಸ್ತನಿಗಳು ಮತ್ತು ಮಾನವರು. ಅದು ಆಸಕ್ತಿಕರವಾಗಿಲ್ಲವೇ? ಅದು ಸಂಪೂರ್ಣವಾಗಿ ಆಕರ್ಷಕವಾದುದು.

ಇಂಗ್ಲೇಡ್‌ನಲ್ಲಿ ಒಂದು ಸಂಶೋಧನೆಯನ್ನು ಮಾಡಲಾಯಿತು; ಸಂಸ್ಕೃತ ಭಾಷೆಯು ನರ-ಭಾಷಾ ಕ್ರಿಯೆಗಳಿಗೆ ಬಹಳ ಸೂಕ್ತವಾದುದು ಎಂಬುದಾಗಿ. ಸಂಸ್ಕೃತದ ಮೂಲವನ್ನು ಹೊಂದಿದ ಜನರು ಗಣಿತ ಮತ್ತು ಲೆಕ್ಕಾಚಾರಗಳಲ್ಲಿ ಬಹಳ ಚುರುಕಾಗಿರುವುದು ಯಾಕೆಂದು ತಿಳಿಯಲು ಸುಮಾರು ಹತ್ತು ವರ್ಷಗಳಿಂದ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಸುಮಾರು ೬೦% ಸಂಸ್ಕೃತವನ್ನು ಅನುಸರಿಸುತ್ತದೆಯೆಂಬುದು ನಿಮಗೆ ಗೊತ್ತಿದೆಯೇ? ಇಂಗ್ಲಿಷ್ ಪದಗಳ ಮೂಲಗಳನ್ನು ನೀವು ನೋಡಿದರೆ, ಅವುಗಳಲ್ಲಿ ಹೆಚ್ಚಿನವು ಸಂಸ್ಕೃತ ಮೂಲದವು. ಸ್ವಸ ಎಂಬುದು ಸಿಸ್ಟರ್ ಆಗಿದೆ, ಭ್ರಾತ ಎಂಬುದು ಬ್ರದರ್ ಆಗಿದೆ, ಪಿತಾ ಎಂಬುದು ಫಾದರ್ ಮತ್ತು ಮಾತಾ ಎಂಬುದು ಮದರ್ ಆಗಿದೆ. ಇವುಗಳ ರೀತಿಯಲ್ಲಿ ನೀವು ಸಮಾಂತರಗಳನ್ನು ಎಳೆದರೆ, ಇಂಗ್ಲಿಷ್‌ನ ಮೂಲವು ಸಂಸ್ಕೃತ ಭಾಷೆಯೆಂಬುದು ನಿಮಗೆ ಮನದಟ್ಟಾಗುವುದು.

ಇವತ್ತು ಬೆಳಗ್ಗೆ ನಾವು ನೋಡಿದಂತೆ, ನಾಲ್ಕು ಹಂತಗಳ ವಾಣಿಯಿದೆ:

೧. ವೈಖರಿ ಎಂಬುದು ನಾವೆಲ್ಲರೂ ಈಗ ಸಂಪರ್ಕಕ್ಕೆ ಬಳಸುತ್ತಿರುವ ಮಾತಿನ ಹಂತ.

೨. ಮಧ್ಯಮ ಎಂಬುದು ವೈಖರಿಗಿಂತ ಸೂಕ್ಷ್ಮವಾಗಿದೆ. ಅಲ್ಲಿ ನಿಮಗೆ ಸಂಪರ್ಕಿಸಲು ಭಾಷೆಯ ಅಗತ್ಯವಿಲ್ಲ, ಆದರೆ ಕೇವಲ ಉದ್ದೇಶಗಳು ಅಥವಾ ಭಾವನೆಗಳು ಸಂಪರ್ಕಿಸಲು ಸಹಾಯ ಮಾಡುತ್ತವೆ. ಇದು ನೀವು, ನಿಮ್ಮ ಭಾಷೆ ಅರ್ಥವಾಗದ ಜನರೊಂದಿಗೆ ಸಂಪರ್ಕಿಸುವಂತೆ ಅಥವಾ ತಮಗೆ ಹಸಿವಾಗಿದೆಯೆಂದೋ, ನಿದ್ದೆ ಬರುತ್ತಿದೆಯೆಂದೋ ನಿಮ್ಮಲ್ಲಿ ಹೇಳಲು ತಗಾದೆ ತೆಗೆಯುವ ಮಕ್ಕಳೊಂದಿಗೆ ನೀವು ಸಂಪರ್ಕಿಸುವಂತೆ ಅಥವಾ ವಿವಿಧ ಸನ್ನೆಗಳ ಮೂಲಕ ಸಂಪರ್ಕಿಸುವಂತೆ. ಮಧ್ಯಮ ಎಂಬುದು ಮಾತಿಗಿಂತ ಸೂಕ್ಷ್ಮವಾಗಿದೆ. ಪ್ರಾಣಿಗಳು ಮತ್ತು ಮರಗಳು ಸಹ ಸಂಪರ್ಕಿಸಲು ಮಧ್ಯಮವನ್ನು ಬಳಸುತ್ತವೆ.

೩. ಪಶ್ಯಂತಿ ಎಂದರೆ ಎಲ್ಲಿ ನೀವು ಪದಗಳು ಅಥವಾ ಭಾಷೆಗಳಿಲ್ಲದೆಯೇ ಜ್ಞಾನವನ್ನು ಸುಲಭವಾಗಿ ಗುರುತಿಸುವಿರೋ ಅದು. ಅದು ಆಳವಾದ ಅಂತಃಸ್ಫುರಣೆಯಂತೆ. ಕೆಲವೊಮ್ಮೆ, ನೀವು ಧ್ಯಾನದಲ್ಲಿ ಆಳಕ್ಕೆ ಹೋದಾಗ, ನಿಮಗೆ ಯಾವುದಾದರೂ ಮಂತ್ರೋಚ್ಛಾರ ಅಥವಾ ಶಬ್ದಗಳು ಕೇಳಿಸಲೂಬಹುದು ಅಥವಾ ನಿಮಗೆ ಯಾವುದಾದರೂ ಉಪಾಯಗಳು ಸಿಗಲೂಬಹುದು.

ಭಾಷೆಯಿಲ್ಲದೆಯೇ ಉಪಾಯಗಳು ಬರುವಾಗ, ಅದು ಪಶ್ಯಂತಿ ಎಂದು ಕರೆಯಲ್ಪಡುತ್ತದೆ. ಒಬ್ಬ ದೃಷ್ಟಾ ಎಲ್ಲೋ ಆಳದಿಂದ ಅದನ್ನು ಸ್ವಲ್ಪ ಮಟ್ಟಿಗೆ ಗುರುತಿಸಬಹುದು. ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಪಶ್ಯಂತಿಯ ಮಟ್ಟದಿಂದ ಆಗುತ್ತವೆ.

೪. ಪರ, ಪಶ್ಯಂತಿಯನ್ನು ಮೀರಿದುದು, ಇದು ಸಾರ್ವತ್ರಿಕ ಭಾಷೆಯಾಗಿದೆ ಅಥವಾ ಎಲ್ಲಾ ಅಭಿವ್ಯಕ್ತಿಗಳ ಮೂಲವಾಗಿದೆ. ಆಳವಾದ ಸಮಾಧಿ ಅಥವಾ ಸಂಪೂರ್ಣ ಸ್ಥಿರತೆಯಲ್ಲಿ, ನೀವು ಪರದೊಂದಿಗೆ ಜೋಡಿರುತ್ತೀರಿ. ಯಾವುದೇ ಮೌಖಿಕ ಸಂಪರ್ಕದ ಅಗತ್ಯವಿರುವುದಿಲ್ಲ. ನಿಜವಾಗಿಯೂ, ನಿಜವಾದ ಸಂಪರ್ಕ ಆಗುವುದು ಪರದಿಂದ. ಅದು ಕೇವಲ ಸಂಪರ್ಕಿಸುವ ಕಂಪನವಾಗಿದೆ.

ನಾವು ಮಾಡುವ, ವೈಖರಿಯ ಮಟ್ಟದಿಂದ ಇರುವ ಇತರ ಎಲ್ಲಾ ಮಾತುಕತೆಗಳು ಇರುವುದು ಮನಸ್ಸನ್ನು ಕೆಲಸದಲ್ಲಿ ತೊಡಗಿಸಿಕೊಂಡಿರಲು ಮಾತ್ರ. ಮನಸ್ಸಿಗೆ ಪರದ ಮಟ್ಟದಲ್ಲಿರುವ ಸಂಪರ್ಕವನ್ನು ಕಲ್ಪಿಸಲು ಸಾಧ್ಯವಿಲ್ಲ, ಆತ್ಮವು ಮಾತ್ರ ಅದನ್ನು ಅರ್ಥಮಾಡಿಕೊಳ್ಳುತ್ತದೆ. ಪರ ಎಂಬುದು ಆತ್ಮದ ಭಾಷೆಯಾಗಿದೆ. ಮನಸ್ಸಿಗೆ ಸ್ವಲ್ಪ ಮನರಂಜನೆಯ ಅಗತ್ಯವಿರುತ್ತದೆ; ಮನಸ್ಸಿನ ಮನರಂಜನೆಯು ವೈಖರಿಯಾಗಿದೆ, ನಾವು ಮಾತನಾಡುವ ಭಾಷೆ.

ಪ್ರಶ್ನೆ: ಗುರುದೇವ, ದಯವಿಟ್ಟು ನೀವು ಶಬ್ದ/ಅಕ್ಷರ ಧ್ಯಾನದ ಬಗ್ಗೆ ಸ್ವಲ್ಪ ಹೆಚ್ಚು ಮಾತನಾಡುವಿರಾ?

ಶ್ರೀ ಶ್ರೀ ರವಿ ಶಂಕರ್: ನಾವು ಇವತ್ತು ಮಾಡಿದ್ದು ಅದೇ ಧ್ಯಾನ. ಅಲ್ಲಿ ನೀವು ಆ ಇಲ್ಲದೆ ಕಾ ಕ್ಕೆ ಹೋಗಲು ಸಾಧ್ಯವಿಲ್ಲ. ಎಲ್ಲಿಂದ ಶಬ್ದವು ಎದ್ದಿತೋ ಅದೇ ಮೂಲಕ್ಕೆ ನೀವು ಹೋದಿರಿ, ಸರಿಯಾ? ಆ ಸಮಯದಲ್ಲಿ ಏನಾಯಿತು? ಸ್ಥಿರತೆ! ಆ ಕ್ಷಣದಲ್ಲಿ ಮನಸ್ಸು ಸಂಪೂರ್ಣವಾಗಿ ಸ್ಥಿರವಾಯಿತು. ಹೀಗೆ, ಎಲ್ಲಿಂದ ಯೋಚನೆಯು ಬಂದಿತೋ ಆ ಮೂಲಕ್ಕೆ ನಾವು ಹೋದೆವು, ೨೫ ನಿಮಿಷಗಳು ಒಂದು ಕ್ಷಣದಂತೆ ಕಳೆದು ಹೋದವು. ನಿಮಗೆ ಇದೆಲ್ಲವೂ ತಿಳಿದಿರುವಾಗ, ನೀವು ಒಳಕ್ಕೆ ಆಳವಾಗಿ ಹೋಗಬಲ್ಲಿರಿ.
ಈ ವಿಷಯಗಳು ಯಾವುದೇ ಪುಸ್ತಕಗಳಲ್ಲಿ ಸಿಗುವುದಿಲ್ಲ; ಅದು ಅನುಭವದಿಂದಲೇ ಬರಬೇಕು, ಅದು ಬಹಳ ಪ್ರಧಾನವಾದುದು.

ಶಬ್ದವು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದರ ಬಗ್ಗೆ ಒಬ್ಬರು ಋಷಿಗಳು ಹೇಳಿದ ಒಂದು ಸುಂದರವಾದ ಪುರಾತನ ಮಾತಿದೆ; ಆತ್ಮ ಬುಧ್ಯ ಸಮೇತ್ಯುಕ್ತ. ಆತ್ಮವು ಬುದ್ಧಿಯೊಂದಿಗೆ ಕೂಡಿಕೊಂಡಾಗ ಮತ್ತು ಮನಸ್ಸಿನೊಂದಿಗೆ ಜೋಡಿಕೊಂಡಾಗ, ಶರೀರದಲ್ಲಿ  ಉಷ್ಣತೆ ಅಥವಾ ಚೈತನ್ಯದ ಉತ್ಪತ್ತಿಯಾಗುತ್ತದೆ. ಈ ಶಕ್ತಿಯು ಧ್ವನಿಪೆಟ್ಟಿಗೆಯ ಮೂಲಕ ವಾಯುವನ್ನು ಸಾಗಿಸುತ್ತದೆ ಮತ್ತು ನಿಧಾನವಾಗಿ ಶಬ್ದವು ಉತ್ಪತ್ತಿಯಾಗುತ್ತದೆ. ಈ ಯಾಂತ್ರಿಕ ವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಲು; ಶಬ್ದದ ಮೂಲಕ್ಕೆ ಹೋಗಲು, ಅದು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಬಹಳಷ್ಟು ಆತ್ಮವಿಮರ್ಶೆ ಮತ್ತು ಸ್ಥಿರತೆಯ ಅಗತ್ಯವಿರುತ್ತದೆ. ಅದು ಸ್ವಾರಸ್ಯವಾದುದು.

ನೂರಮೂರು ಅಥವಾ ೧೦೪ ವರ್ಷಗಳವರೆಗೆ ಬದುಕಿದ ಒಬ್ಬರು ಯೋಗಿಯಿದ್ದರು. ಅವರು ಸುಮಾರು ಏಳೋ ಎಂಟೋ ವರ್ಷಗಳ ಹಿಂದೆ ತೀರಿಹೋದರು. ಅವರಿಗೆ ನಾದ ಬ್ರಹ್ಮ ಎಂಬ ಬಿರುದನ್ನು ನೀಡಲಾಗಿತ್ತು, ಯಾಕೆಂದರೆ ಅವರಿಗೆ ತಮ್ಮ ಶರೀರದ ಯಾವುದೇ ಭಾಗದಿಂದ ಬೇಕಾದರೂ ಒಂದು ಶಬ್ದವನ್ನು ಮಾಡುವುದು ಸಾಧ್ಯವಿತ್ತು. ನಾನು ಕೂಡಾ ಅವರನ್ನು ಒಮ್ಮೆ ಭೇಟಿಯಾಗಿದ್ದೆ. ತಮ್ಮ ಶರೀರದ ಬೇರೆ ಬೇರೆ ಭಾಗಗಳಿಂದ ನಿರ್ದಿಷ್ಟ ಶಬ್ದಗಳನ್ನು ಮಾಡುವುದು ಅವರಿಗೆ ಸಾಧ್ಯವಿತ್ತು.

ಅವರು ಯು.ಎಸ್.ಎ.ಗೆ ಕೂಡಾ ಹೋದರು ಮತ್ತು ವಿಜ್ಞಾನಿಗಳಿಗೆ ಬಹಳ ಆಶ್ಚರ್ಯವಾಯಿತು. ಅವರು ಇಲೆಕ್ಟ್ರೋಡುಗಳನ್ನು ಅವರ ಮೇಲೆ ಹಾಕಿ ಬಹಳಷ್ಟು ಪ್ರಯೋಗಗಳನ್ನು ಮಾಡಿದರು. ಅವರು ಹಿಮಾಲಯಗಳಲ್ಲಿ ಋಷಿಕೇಶದಲ್ಲಿ ವಾಸಿಸುತ್ತಿದ್ದರು ಮತ್ತು ಇದನ್ನು ಬಹಳ ದೀರ್ಘಕಾಲದಿಂದ ಅಭ್ಯಾಸ ಮಾಡಿದ್ದರು. ಅವರು ಭಾರಿಯಾದ, ಸ್ನಾಯುಭರಿತ ದೇಹವನ್ನು ಹೊಂದಿದ್ದರು ಮತ್ತು ಶರೀರದ ವಿವಿಧ ಭಾಗಗಳಿಂದ ಕ, ಚ, ಪ ಗಳಂತಹ ಶಬ್ದಗಳನ್ನು ಮಾಡಬಲ್ಲವರಾಗಿದ್ದರು. ಅದು ಆಸಕ್ತಿಕರವಾಗಿತ್ತು.

ಅವರೊಬ್ಬರು ಬಹಳ ಸಜ್ಜನರಾಗಿದ್ದರು. ಆದರೆ ಅವರು ತಮ್ಮ ಜ್ಞಾನವನ್ನು ಯಾರಿಗಾದರೂ ಕಲಿಸಿದರೆಂದು ನನಗನ್ನಿಸುವುದಿಲ್ಲ; ಅದು ಅವರೊಂದಿಗೆ ಹೋಯಿತು.

ಈ ಜಗತ್ತು ಅಚ್ಚರಿಗಳಿಂದ ತುಂಬಿದೆ. ಒಂದು ಸಮಯದಲ್ಲಿ, ನಾನು ಸುಮಾರು ೨೨ ಅಥವಾ ೨೫ ವರ್ಷ ವಯಸ್ಸಿನವನಾಗಿದ್ದಾಗ, ಇದನ್ನು ನಾನು ಅವರಿಂದ ಕಲಿಯಬೇಕು ಎಂದು ಅಂದುಕೊಂಡಿದ್ದೆ, ಆದರೆ ಆಗ ನನಗೆ ಮಾಡಲು ಇತರ ಹಲವಾರು ಕೆಲಸಗಳಿದ್ದವು.

ಈ ಭೂಗ್ರಹದಲ್ಲಿ ಜ್ಞಾನವು ಕೊನೆಯಿಲ್ಲದುದಾಗಿದೆ, ವಿಶೇಷವಾಗಿ ಅತೀಂದ್ರಿಯ ಜ್ಞಾನ. ನಾನು ಜಿನೇವಾದಲ್ಲಿ ಸಿ.ಇ.ಆರ್.ಎನ್. (ಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್)ಗೆ ಆಮಂತ್ರಿಸಲ್ಪಟ್ಟೆ. ಅಲ್ಲಿನ ವಿಜ್ಞಾನಿಗಳು ನನ್ನನ್ನು ಸ್ವಾಗತಿಸಿದರು ಮತ್ತು ನನಗೆ ದೇವಕಣ (ಗಾಡ್ ಪಾರ್ಟಿಕಲ್) ವನ್ನು ಮತ್ತು ಅವರದನ್ನು ಹೇಗೆ ಕಂಡುಹಿಡಿದರು ಎಂಬುದನ್ನು ತೋರಿಸಿದರು.

ಅಲ್ಲಿನ ಹಿರಿಯ ವಿಜ್ಞಾನಿಗಳಲ್ಲೊಬ್ಬರು, ತಾವು ಪದಾರ್ಥಗಳ ಬಗ್ಗೆ ಕಳೆದ ೪೦ ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ, ಕಂಡುಕೊಂಡಿದ್ದೇನೆಂದರೆ ಅದು ಅಸ್ತಿತ್ವದಲ್ಲೇ ಇಲ್ಲವೆಂಬುದಾಗಿಯೂ ಹೇಳಿದರು. ಅವರು ಉಪ-ಪರಮಾಣು ಕಣಗಳು, ನ್ಯೂಟ್ರೋನುಗಳು, ಇಲೆಕ್ಟ್ರೋನುಗಳು, ಪ್ರೋಟೋನುಗಳು, ಮೊದಲಾದವುಗಳ ಮೇಲೆ ಕೆಲಸ ಮಾಡುತ್ತಿದ್ದರು. ಆದರೆ ತಿಳಿದುಬಂದದ್ದೇನೆಂದರೆ ಅವುಗಳು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು!

ಇದು, ಪುರಾತನ ತತ್ವಜ್ಞಾನಿಗಳು ಏನನ್ನು ಹೇಳುತ್ತಿದ್ದರೋ ಅದಕ್ಕೆ ಬಹಳಷ್ಟು ಸದೃಶವಾದುದಾಗಿದೆ; ಅಂದರೆ ಇದೆಲ್ಲವೂ ಏನೂ ಅಲ್ಲವೆಂದು. ಎಲ್ಲವೂ ಏನೂ ಅಲ್ಲ ಮತ್ತು ಏನೂ ಅಲ್ಲದಿರುವುದು ಎಲ್ಲವೂ ಆಗಿದೆ. ಆಕಾರವೆಂದು ನೀವು ನೋಡುವ ಎಲ್ಲವೂ ಏನೂ ಅಲ್ಲ ಮತ್ತು ಏನೂ ಅಲ್ಲವೆಂದು ನೀವು ಯಾವುದನ್ನು ನೋಡುವಿರೋ, ಅದುವೇ ಎಲ್ಲವನ್ನೂ ಮಾಡುತ್ತಿರುವುದು.

ಇದೊಂದು ಸುಂದರವಾದ ಸಂಗತಿಯಾಗಿದೆ; ಇಲ್ಲಿ ತಾವು ಬೇರೆ ಬೇರೆಯಲ್ಲವೆಂಬುದು ವಿಜ್ಞಾನಕ್ಕೂ ಆಧ್ಯಾತ್ಮಕ್ಕೂ ಮನವರಿಕೆಯಾಗುತ್ತದೆ. ತಾವು ಬೇರೆ ಬೇರೆಯೆಂದು ಯಾರು ಯೋಚಿಸುವರೋ ಅವರು ಮೂರ್ಖರು; ಅವರೊಂದು ನೂರು ವರ್ಷಗಳ ಹಿಂದೆ ಜೀವಿಸುತ್ತಿದ್ದಾರೆ, ಆದರೆ ಇವತ್ತಿನ ಯುಗದಲ್ಲಿ, ಅವುಗಳು ಒಂದೇ.

ನಾನು ವಿಜ್ಞಾನಿಗಳೊಂದಿಗೆ ಮೂರು ರೀತಿಯ ಆಕಾಶಗಳ ಬಗ್ಗೆ ಮಾತನಾಡಿದೆ:

೧) ಚಿತ್ತಾಕಾಶ, ಎಲ್ಲಿ ಎಲ್ಲಾ ಯೋಚನೆಗಳು ಮತ್ತು ಭಾವನೆಗಳು ತೇಲುತ್ತವೆಯೋ ಆ ಮಧ್ಯವರ್ತಿ ಆಕಾಶ ಅಥವಾ ಆಂತರಿಕ ಆಕಾಶ.

೨) ಚಿದಾಕಾಶ, ಯಾವುದು ಅಲ್ಲಿ ಇಲ್ಲಿ ಏಕೀಕೃತಗೊಂಡಂತೆ ಕಾಣಿಸುವುದೋ ಹಾಗೂ ವಸ್ತುವಿನಂತೆ ಕಾಣಿಸುವುದೋ ಆ ಶುದ್ಧವಾದ ಪ್ರಜ್ಞೆ ಅಥವಾ ಚೈತನ್ಯದ ಆಕಾಶ.

೩) ಭೂತಾಕಾಶ, ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ನಾವು ಯಾವುದರಲ್ಲಿ ನೋಡುತ್ತೇವೆಯೋ ಆ ಬಾಹ್ಯ ಆಕಾಶ.

ವಸ್ತುವೆಂದು ಯಾವುದು ಗೋಚರವಾಗುವುದೋ ಅದು ನಿಜವಾಗಿ ವಸ್ತುವಲ್ಲ, ಅದೆಲ್ಲವೂ ಒಂದು ಚೈತನ್ಯವಾಗಿದೆ ಮತ್ತು ಆ ಒಂದು ಕ್ಷೇತ್ರವು ಬ್ರಹ್ಮ ಎಂದು ಕರೆಯಲ್ಪಡುತ್ತದೆ ಹಾಗೂ ಎಲ್ಲರೂ ಅದುವೇ ಆಗಿರುವರು, ಎಲ್ಲವೂ ಅದುವೇ ಆಗಿರುವುದು.

ವಿಜ್ಞಾನಿಗಳು ಬಹಳ ಕುತೂಹಲಗೊಂಡರು. ಈ ಜ್ಞಾನವು ನಮಗೆ ಈ ತಲೆಮಾರಿನಲ್ಲಿ ಲಭ್ಯವಿರುವುದು ಬಹಳ ಸುಂದರವಾಗಿದೆ. ಇದು ಒಂದು ಲ್ಯಾಪ್‌ಟಾಪ್ ಹೊಂದಿರುವಷ್ಟೇ ಉತ್ತಮವಾದುದು.

ಸುಮ್ಮನೇ ಕಲ್ಪಿಸಿಕೊಳ್ಳಿ, ಕೆಲವು ತಲೆಮಾರುಗಳ ಹಿಂದೆ ಗೂಗಲ್ ಇರಲಿಲ್ಲ. ನೀವು ಏನನ್ನಾದರೂ ಕಲಿಯಬೇಕಾಗಿದ್ದರೆ, ನೀವೊಂದು ಗ್ರಂಥಾಲಯಕ್ಕೆ ಹೋಗಿ ಸೂಚಿಗಳನ್ನು ಮತ್ತು ಪುಟಗಳನ್ನು ಹುಡುಕಬೇಕಾಗಿತ್ತು. ಒಂದು ಗ್ರಂಥಾಲಯದಲ್ಲಿ ಸೂಚಿಯಲ್ಲಿ ಹುಡುಕಲು ಎರಡು ಗಂಟೆಗಳು ತೆಗೆದುಕೊಳ್ಳುತ್ತಿತ್ತು. ಇವತ್ತು, ಒಂದು ಗುಂಡಿಯನ್ನು ಅದುಮುವ ಮೂಲಕ ಪ್ರಪಂಚದಲ್ಲಿರುವ ಏನನ್ನು ಬೇಕಾದರೂ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಪಡೆಯಬಹುದು.

ಪ್ರಪಂಚದಲ್ಲಿನ ಎಲ್ಲಾ ಜ್ಞಾನವು ನಿಮ್ಮ ತೊಡೆಯ ಮೇಲೆ ಕೂಡಲೇ ಲಭ್ಯವಿರುವುದು ಈ ತಲೆಮಾರಿಗಿರುವ ಒಂದು ಬಹಳ ಅದೃಷ್ಟದ ವಿಷಯವಾಗಿದೆ. ನೀವು ಭೂಖಂಡಗಳಾಚಿನಿಂದ ಪುಸ್ತಕಗಳನ್ನು ಖರೀದಿಸಿ, ಅವುಗಳನ್ನು ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ಹಿಂದೆ ನೀವು ಅಮೇರಿಕಾದಲ್ಲಿದ್ದು, ನಿಮಗೆ ನಾರದ ಭಕ್ತಿ ಸೂತ್ರಗಳು ಬೇಕಾಗಿದ್ದರೆ, ನೀವು ಭಾರತದಿಂದ ಪುಸ್ತಕವನ್ನು ತರಿಸಬೇಕಾಗಿತ್ತು ಮತ್ತು ಅದನ್ನು ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಆದರೆ ಇವತ್ತು, ನಿಮ್ಮ ಬೆರಳುಗಳ ತುದಿಯಲ್ಲಿ ಎಲ್ಲವೂ ಕಾಣಿಸಿಕೊಳ್ಳುತ್ತದೆ.

ಅದೇ ರೀತಿಯಲ್ಲಿ, ಈ ಯುಗದಲ್ಲಿ ವಿಜ್ಞಾನವು ಆಧ್ಯಾತ್ಮದ ಭಾಷೆಯನ್ನೇ ಮಾತನಾಡುತ್ತಿರುವುದು ನಮ್ಮ ಅದೃಷ್ಟವಾಗಿದೆ. ಅದು ಆಧ್ಯಾತ್ಮವನ್ನು ದೃಢೀಕರಿಸುತ್ತಿದೆ. ಇದರರ್ಥ, ಯಾವುದೇ ತಲೆಮಾರು ಕೂಡಾ ಈ ಉನ್ನತವಾದ ಆಧ್ಯಾತ್ಮಿಕ ಜ್ಞಾನದಿಂದ ವಂಚಿತವಾಗಿಲ್ಲ.

ಪ್ರಶ್ನೆ: ಗುರುದೇವ, ಭಾರತದಲ್ಲಿನ ಭ್ರಷ್ಟಾಚಾರವು ಸಮಾಜಕ್ಕೆ ಮತ್ತು ಪರಿಸರಕ್ಕೆ ಶಾಶ್ವತವಾದ ಹಾನಿಯನ್ನುಂಟುಮಾಡುತ್ತಿದೆಯೆಂದು ತೋರುತ್ತದೆ. ಅದನ್ನು ಸರಿಪಡಿಸಬಹುದೇ? ಹೌದಾದರೆ, ಅಮೇರಿಕಾದಲ್ಲಿ ಜೀವಿಸುತ್ತಿರುವ ನನ್ನಂತಹ ಅನಿವಾಸಿಗಳು ಹಾನಿಯನ್ನು ಸರಿಪಡಿಸುವ ಪ್ರಯತ್ನದಲ್ಲಿ ಹೇಗೆ ಸಹಾಯ ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಏನನ್ನಾದರೂ ಮಾಡಲು ನಿನಗೆ ಆಸಕ್ತಿಯಿರುವುದಾದರೆ ಮತ್ತು ಜಾಗೃತಿಯನ್ನು ಹೇಗೆ ಸೃಷ್ಟಿಸಬಹುದು; ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಿನ್ನ ಪ್ರತಿಭೆಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೀನು ತಿಳಿಯಲು ಬಯಸುವುದಾದರೆ, ನೀನು ಖಂಡಿತವಾಗಿಯೂ ಇಲ್ಲಿರುವ ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರನ್ನು ಭೇಟಿಯಾಗಬೇಕು, ಅವರು ನಿನಗೆ ಮಾರ್ಗದರ್ಶನ ನೀಡಬಲ್ಲರು.

ನೀನು ಹಲವಾರು ವಿಷಯಗಳನ್ನು ಮಾಡಬಹುದು; ನಿನ್ನ ತವರೂರಿನಲ್ಲಿ, ಹಳ್ಳಿಗಳಲ್ಲಿ ನಿನ್ನ ಸುತ್ತಲಿರುವ ಜನರೊಂದಿಗೆ ಜಾಗೃತಿಯನ್ನು ಸೃಷ್ಟಿಸಬಹುದು ಮತ್ತು ಅವರಿಗೆ ಅರ್ಥವಾಗುವಂತೆ ಮಾಡಬಹುದು. ಭಾರತವು ಈಗ ವಂಚನೆಗಳು ಮತ್ತು ಕೊಳಚೆಗಳ ನಡುವೆ ಸಾಗುತ್ತಿದೆ, ಹಾಗೂ ಸರಕಾರವು ಬಡತನವನ್ನು ಉಳಿಸಿಕೊಳ್ಳಲು ಬಯಸುತ್ತಿದೆ; ಹಾಗಾಗಿ ಅವರು ಸುಮ್ಮನೆ ಜನರಿಗೆ ಉಡುಗೊರೆಗಳನ್ನು ನೀಡಿ, ಅವರಿಂದ ಮತಗಳನ್ನು ಖರೀದಿಸುತ್ತಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ಬರಿದಾಗಿದ್ದ ನಾಲ್ಕು ನದಿಗಳನ್ನು ಪುನಶ್ಚೇತನಗೊಳಿಸಿದ್ದಾರೆ; ಕರ್ನಾಟಕದಲ್ಲಿ ಒಂದು ಮತ್ತು ಮಹಾರಾಷ್ಟ್ರದಲ್ಲಿ ಮೂರು. ನದಿಗಳು ಬತ್ತಿಹೋಗಿದ್ದವು ಮತ್ತು ನಮ್ಮ ಸ್ವಯಂಸೇವಕರು ಕಷ್ಟಪಟ್ಟು ಕೆಲಸ ಮಾಡಿದರು, ಹೂಳೆತ್ತಿದರು, ಎಲ್ಲಾ ಕಡ್ಡಿಕಸವನ್ನು ತೆಗೆದರು ಹಾಗೂ ಈ ನದಿಗಳು ಮತ್ತೆ ಹರಿಯುವಂತೆ ಮಾಡಿದರು. ಲಕ್ಷಾಂತರ ಡಾಲರ್‌ಗಳೊಂದಿಗೆ ಯಾವುದನ್ನು ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲವೋ ಅದನ್ನು ಕೆಲವು ಸಾವಿರ ಡಾಲರ್‌ಗಳೊಂದಿಗೆ ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ಸೇವೆಯಂತೆ ಮಾಡಿದರು. ಈಗ, ಈ ಎಲ್ಲಾ ಜಾಗಗಳಲ್ಲೂ ನೀರಿದೆ ಮತ್ತು ಗ್ರಾಮಸ್ಥರು ಬಹಳ ಸಂತೋಷವಾಗಿದ್ದಾರೆ.

ಕರ್ನಾಟಕದಲ್ಲಿ ನಾವು ಸುಮಾರು ೨೩೦ ಗ್ರಾಮಗಳಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು ೩೦೦-೪೦೦ ಗ್ರಾಮಗಳಲ್ಲಿ ಈ ನದಿಗಳ ಕೆಲಸ ಪೂರೈಸಿದ್ದೇವೆ.

ಹಿಮಾಲಯಗಳ ಪ್ರದೇಶದಲ್ಲಿ ನೆರೆ ಬಂದಾಗ, ಆರು ಯೆಸ್ ಪ್ಲಸ್ ಶಿಕ್ಷಕರು ಅಲ್ಲಿ ಹೇಗೆ ಒಂದು ಪರಿವರ್ತನೆಯನ್ನು ತಂದರು ಎಂಬುದರ ಬಗ್ಗೆ ರೆಡಿಫ್ ಅಂತರ್ಜಾಲ ತಾಣದಲ್ಲಿ ಒಂದು ಲೇಖನ ಬಂದಿತ್ತು. ಈ ಹುಡುಗಿಯರು ಕಸವನ್ನು ತೆಗೆದು, ರಸ್ತೆಗಳನ್ನು ಮಾಡಿದರು ಮತ್ತು ಇದುವರೆಗಿನವುಗಳಲ್ಲಿ ಅತ್ಯಂತ ಕೆಟ್ಟ ನೆರೆಯಿಂದ ಪೀಡಿತರಾದ ಜನರಿಗೆ ಆಹಾರ ಹಾಗೂ ಇತರ ಸಾಮಗ್ರಿಗಳನ್ನು ನೀಡಿದರು.

ಅಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಆರ್ಟ್ ಆಫ್ ಲಿವಿಂಗ್ ಸಾಕಷ್ಟು ಸಕ್ರಿಯವಾಗಿದೆ.