ಶನಿವಾರ, ಜುಲೈ 20, 2013

ನೀವು ಚಿಂತಿಸುವುದೇಕೆ?

ಮಾಂಟ್ರಿಯಾಲ್, ಕೆನಡ
೨೦ ಜುಲೈ ೨೦೧೩

ಪ್ರಶ್ನೆ: ಗುರುದೇವ, ಬ್ರಹ್ಮ ಜ್ಞಾನವೆಂದರೇನು?

ಶ್ರೀ ಶ್ರೀ ರವಿ ಶಂಕರ್: ಇದುವೇ ಬ್ರಹ್ಮ ಜ್ಞಾನ. ನಾವು ಯಾವುದರ ಬಗ್ಗೆ ಮಾತನಾಡುತ್ತಿರುವೆವೋ ಅದೆಲ್ಲಾ ಬ್ರಹ್ಮ ಜ್ಞಾನ.

ಯಾವುದಕ್ಕೆ ನೀವು ಅಸ್ತಿತ್ವವಿಲ್ಲವೆಂದು ಹೇಳುವಿರೋ; ಅದು ಶಾಶ್ವತವಾಗಿ ಅಸ್ತಿತ್ವದಲ್ಲಿಲ್ಲ. ಸಮಯವನ್ನು - ಭೂತ, ವರ್ತಮಾನ ಮತ್ತು ಭವಿಷ್ಯಕಾಲಗಳನ್ನು ಮೀರಿದುದು ಸತ್ಯವಾಗಿದೆ. ಯಾವುದು ಸತ್ಯವಲ್ಲ? ಯಾವುದು ನಿನ್ನೆಯಿತ್ತೋ, ಆದರೆ ಇವತ್ತಿಲ್ಲವೋ, ಅದು ಸತ್ಯವಲ್ಲ. ಯಾವುದು ಇವತ್ತಿರುವುದೋ, ಯಾವುದು ನಾಳೆಯಿರಲಾರದೋ, ಅದು ಸತ್ಯವಲ್ಲ. ಸತ್ಯದ ವ್ಯಾಖ್ಯಾನವೆಂದರೆ, ಯಾವುದು ಕಾಲದಿಂದ ಪ್ರಭಾವಿತವಾಗದೇ ಇರುವುದೋ ಅದು.

ಆದಿ ಶಂಕರಾಚಾರ್ಯರನ್ನು ಹೀಗೆಂದು ಕೇಳಲಾಯಿತು, "ಸತ್ಯವೆಂದರೇನು?" ಅವರಂದರು, "ಯತ್ ತ್ರಿಕಾಲಾಬಾಧಿತ್ವಂ ತತ್ ಸತ್ಯಂ", ಅಂದರೆ, ಯಾವುದು ಕಾಲದಿಂದ - ಭೂತ, ವರ್ತಮಾನ, ಭವಿಷ್ಯ ಕಾಲದಿಂದ ಪ್ರಭಾವಿತವಾಗದೇ ಇರುವುದೋ ಅದು ಸತ್ಯ. ಕಾಲದಿಂದ ಪ್ರಭಾವಿತವಾಗುವ ಉಳಿದೆಲ್ಲವೂ ಮಾಯೆಯಾಗಿದೆ; ಅಂದರೆ ಅದಕ್ಕೆ ಒಂದು ಸಾಪೇಕ್ಷ ಅಸ್ತಿತ್ವವಿದೆ.

ನೀವು ಕುಳಿತುಕೊಳ್ಳುವಾಗ ಏನಾಗುತ್ತದೆ? ಈ ಎಲ್ಲಾ ಬೇಡದಿರುವ ವಿಷಯಗಳು ಮನಸ್ಸಿನಲ್ಲಿ ಬರುತ್ತವೆ, ಒಂದು ಗುಳ್ಳೆಯಂತೆ. ನೀವೊಂದು ಗುಳ್ಳೆಯ ಒಳಗಿದ್ದೀರಿ; ಅಲ್ಲಿ ನೀವು ಯೋಜನೆಗಳನ್ನು ಹಾಕುತ್ತಿರುತ್ತೀರಿ, ನಿಮ್ಮಲ್ಲಿ ಭವಿಷ್ಯಕ್ಕಾಗಿ ಯೋಚನೆಗಳಿರುತ್ತವೆ, ನಿಮ್ಮಲ್ಲಿ ಸ್ವಲ್ಪ ಉತ್ಕಟ ಇಚ್ಛೆಗಳಿರುತ್ತವೆ ಅಥವಾ ನೀವು ಭೂತಕಾಲದ ಬಗ್ಗೆ ಪಶ್ಚಾತ್ತಾಪ ಪಡುತ್ತಿರುತ್ತೀರಿ. ಭೂತಕಾಲದ ಅನುಭವಗಳು ಚಿತ್ರಗಳಂತೆ ಮನಸ್ಸಿಗೆ ಬರುತ್ತವೆ.

ಇದನ್ನು ನಿರ್ವಹಿಸುವುದು ಹೇಗೆ?

ಮೊದಲನೆಯದಾಗಿ, ವಿವೇಕ. ವಿವೇಕವೆಂದರೆ, ಇದೆಲ್ಲವೂ ಶಾಶ್ವತವಲ್ಲ; ಎಲ್ಲವೂ ತಾತ್ಕಾಲಿಕ ಎಂಬುದನ್ನು ನೆನಪಿಸಿಕೊಳ್ಳುವುದು. ನೀವೇ ಇಲ್ಲಿರುವುದಿಲ್ಲ ಎಂದಾದ ಮೇಲೆ, ನಿಮ್ಮ ಸ್ನೇಹಿತ, ಸ್ನೇಹಿತೆ, ಪ್ರತಿಷ್ಠೆ, ಗೌರವ, ಹಣ ಮತ್ತು ಇವುಗಳೆಲ್ಲಾ ಹೇಗಿರುತ್ತವೆ? ನಾವು ಒಂದು ದಿನ ಸಾಯುವೆವು ಮತ್ತು ಇವುಗಳನ್ನೆಲ್ಲಾ ಬಿಟ್ಟುಹೋಗುವೆವು. ಇವುಗಳಲ್ಲಿ ಯಾವುದೂ ಶಾಶ್ವತವಲ್ಲ; ಎಲ್ಲವೂ ತಾತ್ಕಾಲಿಕ.

ಈ ಅರಿವು ಒಳಗಿರುವ ಒಂದು ಆಳವಾದ ತಂತಿಯನ್ನು ಬಾರಿಸಿದಾಗ, ಮನಸ್ಸು ಒಂದು ಸಾಕ್ಷಿಯಾಗುತ್ತದೆ.
ನಾನು ಯಾಕೆ ಚಿಂತಿಸುತ್ತಿದ್ದೇನೆ? ಸುಮ್ಮನೆ ಮನಸ್ಸಿನಲ್ಲಿ ಚಿಂತಿಸುತ್ತಾ ಇರುವುದು ನನ್ನ ಮೂರ್ಖತನ! - ಅದು ವಿವೇಕವಾಗಿದೆ.

ಎರಡನೆಯದು ವೈರಾಗ್ಯ. "ಆದರೇನಂತೆ" ಎಂದು ಮತ್ತೆ ಮತ್ತೆ ಹೇಳಿ, "ಆದರೇನೆಂತೆ. ಸರಿ ಇದು ಹಾಗಿದೆ, ಆದರೇನಂತೆ?"
ವೈರಾಗ್ಯವು ನಿಮಗೆ ಮುಕ್ತಿಯನ್ನು ತರುತ್ತದೆ; ಅದು ನಿಮ್ಮನ್ನು ಸೂಕ್ಷ್ಮವನ್ನಾಗಿ ಮಾಡುತ್ತದೆ, ಅದು ನೀವು ಒಳಗಿನಿಂದ ಮುಕ್ತರಾಗುವಂತೆ ಮಾಡುತ್ತದೆ.

ವಿವೇಕವೆಂದರೆ, ಯಾವುದು ನೀವು ತಿಳಿಯುವಂತೆ ಮಾಡುವುದೋ, ನಿಮ್ಮನ್ನು ಇನ್ನೂ ದೊಡ್ಡವರನ್ನಾಗಿ ಮಾಡುವುದೋ, ಇನ್ನೂ ದೊಡ್ಡದಾದುದೇನನ್ನೋ ತಿಳಿಯುವಂತೆ ಮತ್ತು ಚಿಕ್ಕ ಮನಸ್ಸಿನ ಆಟಗಳಲ್ಲಿ ಸಿಕ್ಕಿಬೀಳದಂತೆ ಮಾಡುವುದೋ ಅದು.

ಪ್ರಶ್ನೆ: ಗುರುದೇವ, ನಾನು ನನ್ನ ನಕಾರಾತ್ಮಕ ಮಾದರಿಗಳನ್ನು ಸುಲಭವಾಗಿ ಗುರುತಿಸಬಲ್ಲೆನು ಮತ್ತು ಸಾಕ್ಷಿಯಾಗಬಲ್ಲೆನು. ಹಾಗಿದ್ದರೂ, ಅವುಗಳನ್ನು ಮುರಿಯುವುದು ಬಹಳ ಕಷ್ಟ. ಒಬ್ಬರು ಈ ಮಾದರಿಗಳನ್ನು ಮುರಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಯಾವುದನ್ನೆಲ್ಲಾ ನೀನು ಪ್ರಯತ್ನದಿಂದ ಗಳಿಸುವೆಯೋ ಅದಕ್ಕೊಂದು ಸೀಮಿತವಾದ ವಯಸ್ಸಿದೆ ಮತ್ತು ಅದಿರುವುದು ಒಂದು ಸೀಮಿತವಾದ ಸಮಯದವರೆಗೆ. ಯಾವುದನ್ನುನೀನು ಪ್ರಯತ್ನವಿಲ್ಲದಿರುವಿಕೆಯಿಂದ ಗಳಿಸುವೆಯೋ ಅದು ಚಿರವಾದುದು ಮತ್ತು ಕಾಲಾತೀತವಾಗಿದೆ. ನಿನ್ನ ಪ್ರಶ್ನೆಗಿರುವ ಉತ್ತರವು ಈ ಉತ್ತರದಲ್ಲೆಲ್ಲೋ ಅಡಗಿದೆ; ನೀನು ಅದರೊಳಕ್ಕೆ ಅಗೆದು ನೋಡು. ನಾನು ನಿನಗೊಂದು ಸೂತ್ರವನ್ನು ನೀಡಿರುವೆನು. ಈ ಸೂತ್ರದಲ್ಲಿ, ಪ್ರಯತ್ನದಿಂದ ನೀನು ಸಾಧಿಸುವ ಯಾವುದಕ್ಕೇ ಆದರೂ, ಕಾಲದಿಂದ ಬಂಧಿತವಾಗಿರುವ ಮತ್ತು ಸೀಮಿತವಾಗಿರುವ ಒಂದು ಫಲಿತಾಂಶವಿರುವುದು; ಅದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಪ್ರಯತ್ನವಿಲ್ಲದಿರುವಿಕೆಯ ಮೂಲಕ ನೀನು ಪಡೆಯುವ ಯಾವುದೇ ಆದರೂ ಕಾಲಾತೀತವಾದುದೂ, ನೋವಿಲ್ಲದಿರುವುದೂ ಆಗಿದೆ.

ಪ್ರಶ್ನೆ: ನನ್ನ ಕಛೇರಿಯಲ್ಲಿ ಬಹಳ ನೈಪುಣ್ಯತೆಯುಳ್ಳವರೂ, ಯಶಸ್ವಿಯೂ ಆಗಿರುವ ಹಲವಾರು ಜನರು ನನಗೆ ಗೊತ್ತು. ಆದರೂ ಅವರು ಯೋಗ ಅಥವಾ ಧ್ಯಾನಗಳನ್ನು ಅಭ್ಯಾಸ ಮಾಡುವುದಿಲ್ಲ. ಕಾರ್ಯದಲ್ಲಿ ನೈಪುಣ್ಯತೆಯಿರಲು ಯೋಗವು ಒಂದು ಪೂರ್ವಾಪೇಕ್ಷಿತವಾದುದೇ? ಯೋಗವನ್ನು ಅಭ್ಯಾಸ ಮಾಡುವುದು ಒಬ್ಬನನ್ನು ಹೆಚ್ಚು ನಿಪುಣನನ್ನಾಗಿ ಹೇಗೆ ಮಾಡುತ್ತದೆ?

ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದು ಶಿಶುವೂ ಒಬ್ಬ ಯೋಗಿಯಾಗಿದೆ. ಒಂದು ಶಿಶುವು ಎಲ್ಲಾ ಯೋಗಾಸನಗಳನ್ನು ಮಾಡುತ್ತದೆ ಮತ್ತು ಆ ಎಲ್ಲಾ ಗುಣಗಳೂ ಅದರಲ್ಲಿದೆ.

ಈಗ, ಈ ವ್ಯಕ್ತಿಯು ಯಾವುದೇ ಒಳ್ಳೆಯ ಕೆಲಸಗಳನ್ನೂ ಮಾಡುವುದಿಲ್ಲ, ಆದರೂ ಅವನು ಆನಂದವಾಗಿದ್ದಾನೆ ಎಂದು ನೀವು ಹೇಳಲೂಬಹುದು! ನಿಮಗೆ ಹೇಗೆ ಗೊತ್ತು? ಅವನು ಹಿಂದೆ ಏನಾದರೂ ಒಳ್ಳೆಯದನ್ನು ಮಾಡಿರಲೂಬಹುದು; ಅವನ ಹಿಂದಿನ ಜನ್ಮದಲ್ಲಿ ಅವನೊಬ್ಬ ಯೋಗಿಯಾಗಿದ್ದಿರಲೂಬಹುದು. ಈಗ ಅವನು ಆ ಕಾರ್ಯಗಳ ಫಲವನ್ನು ಅನುಭವಿಸುತ್ತಿದ್ದಾನೆ ಅಷ್ಟೆ.
ಯೋಗವೆಂದರೆ ಕೇವಲ ಕೆಲವು ಆಸನಗಳನ್ನು ಮಾಡುವುದಲ್ಲ, ಅದು ನಿಮ್ಮನ್ನೇ ಅಸ್ತಿತ್ವದೊಂದಿಗೆ, ಸತ್ಯದೊಂದಿಗೆ, ಬ್ರಹ್ಮಾಂಡದ ಮನಸ್ಸು ಅಥವಾ ದೊಡ್ಡ ಮನಸ್ಸಿನೊಂದಿಗೆ ಐಕ್ಯಗೊಳಿಸುವ ಮನಸ್ಸಿನ ಒಂದು ಸ್ಥಿತಿಯಾಗಿದೆ.

ಚಿಕ್ಕ ಮನಸ್ಸು ದೊಡ್ಡ ಮನಸ್ಸಿನೊಂದಿಗೆ ಒಂದಾಗುವುದು, ಇದುವೇ ಒಂದು ಆನಂದಕರ ಸಂಗತಿಯಾಗಿದೆ. ಅದನ್ನು ಮಾಡದಿರುವುದಕ್ಕಾಗಿ ನೀವೊಂದು ಎಳೆಯನ್ನು ಹುಡುಕಬೇಕಾಗಿಲ್ಲ. ನೀವು ಯೋಗ ಮಾಡದೇ ನಿಪುಣರಾಗಿರಲು ಬಯಸಿದರೆ, ಮುಂದುವರಿಯಿರಿ, ನಿಪುಣರಾಗಿರಿ. ಕಾರ್ಯದಲ್ಲಿನ ನಿಪುಣತೆಯು ಯೋಗದ ಒಂದು ಫಲಿತಾಂಶವಾಗಿದೆ ಮತ್ತು ಮೌನವು ಎಲ್ಲಾ ಪ್ರತಿಭೆಗಳ ತಾಯಿಯಾಗಿದೆ. ಕೆಲವು ಕ್ಷಣಗಳ ಆಳವಾದ ಮೌನವು ನಿಮ್ಮೊಳಗೆ ಹಲವಾರು ಪ್ರತಿಭೆಗಳನ್ನು ತರುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಕಳೆದ ಕೆಲವು ತಿಂಗಳುಗಳಿಂದ ನನಗೆ ಸಾಧನೆ, ಸತ್ಸಂಗ ಮತ್ತು ಸೇವೆಗಳು ಒಂದು ಹೋರಾಟವಾಗಿ ಹಾಗೂ ಒಂದು ಪ್ರಯತ್ನವಾಗಿ ಅನ್ನಿಸುತ್ತದೆ. ಅದನ್ನು ನಾನು ಮೊದಲ ಬಾರಿಗೆ ಮಾಡುತ್ತಿರುವೆನು ಎಂಬ ರೀತಿಯಲ್ಲಿ ನಾನದನ್ನು ಸಮೀಪಿಸಲು ಪ್ರಯತ್ನಿಸಿದೆ, ಆದರೂ ಅದು ಹಾಗೇ ಅನ್ನಿಸುತ್ತದೆ. ಈ ಭಾವನೆಯನ್ನು ಹಿಂದಿಕ್ಕಲು ನಾನು ಏನು ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ಪರವಾಗಿಲ್ಲ, ಸುಮ್ಮನೇ ವಿಶ್ರಾಮ ಮಾಡು ಮತ್ತು ಹೋಗಲು ಬಿಡು. ನೀನು ಯಾಕೆ ಹೋರಾಡುವೆ? ನೀನು ಈಗಾಗಲೇ ಇತರ ವಿಷಯಗಳೊಂದಿಗೆ ಹೋರಾಡುತ್ತಿರುವೆ, ಈಗ ನೀನು ಸಾಧನೆಯೊಂದಿಗೆ ಕೂಡಾ ಹೋರಾಡುತ್ತಿರುವೆಯಾ? ಸರಿ, ನಿಲ್ಲಿಸು, ಅದನ್ನು ಮಾಡಬೇಡ. ಒಂದು ದಿನ, "ಓ, ನಾನದನ್ನು ಮಾಡಬೇಕು" ಎಂದು ನಿನಗನ್ನಿಸುವುದು ನಿನಗೆ ಕಂಡುಬರುತ್ತದೆ! ಅದು, ನಿನಗೆ ಹಸಿವಾದಂತೆ ಅಥವಾ ಬಾಯಾರಿಕೆಯಾದಂತೆ ಅನ್ನಿಸಬಹುದು ಮತ್ತು ನಂತರ ಇದ್ದಕ್ಕಿದ್ದಂತೆ ನಿನಗೆ ಅದು ಅಗತ್ಯ ಅನ್ನಿಸುತ್ತದೆ.

ಅದೇ ರೀತಿಯಲ್ಲಿ, ನಿನ್ನ ಶರೀರ ಮತ್ತು ಮನಸ್ಸು ಬಳಲಿದಾಗ, ಅವುಗಳು ವಿಶ್ರಾಮ ಮಾಡಲು, ಜ್ಞಾನ ಮತ್ತು ವಿವೇಕಗಳೊಂದಿಗೆ ಯಾವುದೋ ಆಳವಾದ ಆಂತರಿಕ ಜಾಗದಲ್ಲಿ ವಿಶ್ರಾಂತಿ ಪಡೆಯಲು ಬಯಸುವುವು. ಜ್ವರತೆಯು ಮನಸ್ಸನ್ನು ಹಿಡಿದಿಟ್ಟುಕೊಂಡಿರುವಾಗ ನೀನು ಓಡಾಟ ಮಾಡುತ್ತಿರುತ್ತೀಯಾ. ಕೆಲವೊಮ್ಮೆ ನೀನು ಹೋಗಲು ಬಿಡಲು ಮತ್ತು ವಿಶ್ರಾಮ ಮಾಡಲು ಹಾಗೂ ಆಳವಾದ ಶಾಂತಿಯ ಒಂದು ಅನುಭವವನ್ನು ಹೊಂದಲು ಬಯಸುವೆ. ಆಗ ನೀನು ಸಾಧನೆಗೆ ತಿರುಗಿ ಬರುವೆ.

ಕಬೀರನ ಒಂದು ಸುಂದರವಾದ ದ್ವಿಪದಿಯಿದೆ. ಅವನು ಹೀಗೆಂದು ಹೇಳಿದನು,

"ದುಃಖಿತರಾಗಿರುವಾಗ ಎಲ್ಲರೂ ಪ್ರಾರ್ಥಿಸುತ್ತಾರೆ, ಆದರೆ ಸಂತೋಷವಾಗಿರುವಾಗ, ಯಾರೂ ಪ್ರಾರ್ಥಿಸುವುದಿಲ್ಲ. ಸಂತೋಷವಾಗಿರುವಾಗ ಕೂಡಾ ಜನರು ಪ್ರಾರ್ಥಿಸಿದರೆ, ದುಃಖವು ಅವರನ್ನು ಯಾಕೆ ಸ್ಪರ್ಷಿಸುವುದು? ಅವರಿಗೆ ದುಃಖವು ಯಾಕೆ ಬರುವುದು?"

"ನನಗೆ ಮನಸ್ಸಿನಿಂದಾಗಿ ಅಚ್ಚರಿಯಾಗಿದೆ, ಜನರ ಈ ಪ್ರವೃತ್ತಿಯಿಂದಾಗಿ ನನಗೆ ಅಚ್ಚರಿಯಾಗಿದೆ."

ಅದು ನಿಜ, ನೀವು ಪ್ರಾರ್ಥಿಸುವುದನ್ನು ಮುಂದುವರಿಸಿದರೆ, ಆಗ ಅದು ಶರೀರ ಮತ್ತು ಮನಸ್ಸುಗಳನ್ನು ಸುಸಂಸ್ಕೃತಗೊಳಿಸುತ್ತದೆ. ಇಲ್ಲದಿದ್ದರೆ, ಕೆಲವೊಮ್ಮೆ ನೀವು ದುಃಖಿತರಾಗುವಾಗ, ನಿಮಗದು ಖಂಡಿತವಾಗಿಯೂ ಬೇಕಾಗುವುದು ಮತ್ತು ಅದರ ಕಡೆಗೆ ಬರುವಿರಿ.

ಪ್ರಶ್ನೆ: ಗುರುದೇವ, ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ, ಆದರೆ ನನ್ನಲ್ಲಿ ಸಂಶಯಶೀಲವಾದ ಒಂದು ಭಾಗವಿದೆ. ನಿಮ್ಮನ್ನು ಪ್ರೀತಿಸುವುದರ ಮಧ್ಯೆ ಮತ್ತು ಕೋರ್ಸುಗಳಿಗೆ ಹೆಚ್ಚಿನ ಜನರನ್ನು ಕರೆತರುವುದರ ಮಧ್ಯೆ ಕೆಲವೊಮ್ಮೆ ಅದು ಅಡ್ಡ ಬರುವುದೆಂದು ನನಗೆ ಭಯವಾಗುತ್ತದೆ. ಒಬ್ಬರು ಸಂಶಯಶೀಲತೆಯನ್ನು ಹೋಗಲಾಡಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ವಿಜ್ಞಾನ; ನೀನೊಬ್ಬ ವಿಜ್ಞಾನಿಯಾಗಿದ್ದರೆ, ನೀನು ಸಂಶಯಶೀಲ ಅಥವಾ ಸಿನಿಕನಾಗಿರಲು ಸಾಧ್ಯವಿಲ್ಲ. ನೀನು ತಥ್ಯಾತ್ಮಕವಾಗಿರುವೆ (ವಾಸ್ತವ ವಿಷಯ ಆಧಾರಿತ). ನಿನ್ನಲ್ಲಿ ತಿಳಿಯಲಿರುವ ಅನ್ವೇಷಣೆಯಿರುವುದು; ಜ್ಞಾನಕ್ಕಾಗಿರುವ ಅನ್ವೇಷಣೆಯು ಒಬ್ಬ ವಿಜ್ಞಾನಿಯಲ್ಲಿಯೂ ಒಬ್ಬ ಅನ್ವೇಷಕನಲ್ಲೂ ಒಂದೇ ಆಗಿರುವುದು.

ಒಬ್ಬ ಸಂಶಯಶೀಲ ವ್ಯಕ್ತಿಯು ಮಧ್ಯೆಯಿರುವವನೊಬ್ಬ; ಅವನೊಬ್ಬ ನಿಜವಾದ ವಿಜ್ಞಾನಿಯೂ ಆಗಿರುವುದಿಲ್ಲ ಮತ್ತು ಒಬ್ಬ ಸಂಪೂರ್ಣ ಕಲಾವಿದನೂ ಆಗಿರುವುದಿಲ್ಲ; ಎಲ್ಲೋ ಮಧ್ಯೆ ನೇತಾಡುತ್ತಿರುವವನು. ಪಕ್ವವೂ ಆಗಿರುವುದಿಲ್ಲ, ಪಕ್ವ-ಪೂರ್ವದ ಮೊಗ್ಗಿನ ಹಂತದಲ್ಲಿಯೂ ಇರುವುದಿಲ್ಲ, ಎಲ್ಲೋ ನಡುವೆ. ಕೇವಲ ಇದನ್ನು ತಿಳಿದುಕೋ ಮತ್ತು ಮುಂದೆ ಸಾಗು.

ಸಂಶಯಶೀಲತೆ ಸ್ವಲ್ಪ ಸಮಯದವರೆಗೆ ಉಳಿದರೆ ಪರವಾಗಿಲ್ಲ, ಆದರೆ ಅದು ದೀರ್ಘಕಾಲದವರೆಗೆ ಉಳಿದರೆ, ಅದು ಸಿನಿಕತನವಾಗುತ್ತದೆ ಮತ್ತು ಜೀವನದಿಂದ ಸಂಪೂರ್ಣ ಸಂತೋಷ ಹಾಗೂ ವಿನೋದಗಳನ್ನು ತೆಗೆದುಹಾಕುತ್ತದೆ. ನನಗನ್ನಿಸುವುದು ಹಾಗೆ.

ಪ್ರಶ್ನೆ: ಗುರುದೇವ, ಚಕ್ರಗಳು ಮತ್ತು ನಮ್ಮ ಮನಸ್ಸಿನ ನಡುವೆಯಿರುವ ಸಂಬಂಧವೇನು?

ಶ್ರೀ ಶ್ರೀ ರವಿ ಶಂಕರ್: ಚಕ್ರಗಳು ಭೌತಿಕ ಕ್ಷೇತ್ರದಲ್ಲಿವೆ. ಮನಸ್ಸು ಕೇವಲ ಚೈತನ್ಯವಾಗಿದೆ; ಯೋಚನೆಗಳು ಚೈತನ್ಯವಾಗಿದೆ. ನೀವು ನಿಮ್ಮ ಗಮನವನ್ನು ಚಕ್ರಗಳ ಮೇಲೆ ಹಾಕುವಾಗ, ಅವುಗಳು ನಿಯಂತ್ರಿಸಲ್ಪಡುತ್ತವೆ, ಸಕ್ರಿಯಗೊಳಿಸಲ್ಪಡುತ್ತವೆ ಮತ್ತು ಸುಪ್ತ ಚೈತನ್ಯವು ಬಿಡುಗಡೆಯಾಗುತ್ತದೆ.

ಪ್ರಶ್ನೆ: ಶಕ್ತಿ ಕ್ರಿಯೆಯ ಸಂದರ್ಭದಲ್ಲಿ ನನಗೆ, ನಾನು ಪ್ರೇಮವಾಗಿದ್ದೇನೆಂಬ ಅನುಭವವಾಯಿತು. ಮೌನದ ಶಿಬಿರದಲ್ಲಿ ನನಗೆ, ನಾನು ಟೊಳ್ಳು ಮತ್ತು ಖಾಲಿಯಾಗಿರುವೆನೆಂಬ ಅನುಭವವಾಯಿತು. ಈ ಎರಡು ಅನುಭವಗಳ ಮಧ್ಯೆಯಿರುವ ಸಂಬಂಧವೇನು?

ಶ್ರೀ ಶ್ರೀ ರವಿ ಶಂಕರ್: ನೀನು ಅನುಭವಿಸುವವನಾಗಿರುವೆ; ಅನುಭವಗಳು ಬರುತ್ತವೆ ಮತ್ತು ಹೋಗುತ್ತವೆ.

ಪ್ರಶ್ನೆ: ಗುರುದೇವ, ನನ್ನ ಸ್ನೇಹಿತೆಯು ಕೆಲವು ವಾರಗಳ ಹಿಂದೆ ಒಂದು ಅಪಘಾತದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಳು ಮತ್ತು ಅವಳು ಜರ್ಜರಿತಳಾಗಿದ್ದಾಳೆ. ಪ್ರೀತಿಪಾತ್ರರೊಬ್ಬರು, ವಿಶೇಷವಾಗಿ ಒಬ್ಬರು ಹೆತ್ತವರಂತಹವರ ನಷ್ಟವನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ನೀವು ದಯವಿಟ್ಟು ಕೆಲವು ಮಾತುಗಳನ್ನಾಡಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಕೇವಲ ಮಾತನಾಡುವುದರಿಂದ ಸಹಾಯವಾಗಲಾರದು. ನಿನ್ನ ಇರುವಿಕೆ, ನೀನು ಸುಮ್ಮನಿರುವುದು, ನಿನ್ನ ಮೌನ ಮತ್ತು ಅವರಿಗೆ ಶಾಂತಿಪೂರ್ಣವಾದ ಕಂಪನಗಳನ್ನು ನೀಡುವುದು ಸಹಾಯ ಮಾಡುವುದು. "ಓ, ಪಾಪ, ನಿನಗೆ ಹೀಗೆ ಆಗಬಾರದಿತ್ತು" ಎಂದು ಹೇಳಬೇಡ. ಅದು ಸಹಾಯ ಮಾಡದು. ಸಹಾಯ ಮಾಡುವುದು ಯಾವುದೆಂದರೆ ನಿನ್ನ ಮೌನವಾದ ಇರುವಿಕೆ ಮತ್ತು ಪ್ರಾರ್ಥನೆಗಳು.

ಪ್ರಶ್ನೆ: ಈ ಕಳೆದ ಮೂರು ದಿನಗಳು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಪ್ರಧಾನವಾಗಿದ್ದವು ಎಂದು ಒಬ್ಬರು ಹೇಳಿದರು. ಅವುಗಳ ಮಹತ್ವವನ್ನು ನೀವು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಪ್ರಾಧಾನ್ಯತೆಯನ್ನು ಕೊಡುವುದು ನೀನು. ನಿನಗೆ ಯಾವುದಾದರೂ ಪ್ರಧಾನವೆಂದು ಕಂಡುಬಂದರೆ, ಆಗ ಅದು ಪ್ರಧಾನ. ಜ್ಯೋತಿಷಿಗಳು ನಿಮ್ಮಲ್ಲಿ, "ಇದು ಬಹಳ ಪ್ರಧಾನವಾದುದು, ಅದು ಬಹಳ ಪ್ರಧಾನವಾದುದು" ಎಂದು ಹೇಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ, ಯಾಕೆಂದರೆ ನೀನು ಆ ದಿನದಂದು ಇನ್ನೂ ಹೆಚ್ಚು ಲಕ್ಷ್ಯವಿಡಬೇಕೆಂದು. ಮತ್ತು ಅವರೊಂದು ಒಳ್ಳೆಯ ಕೆಲಸವನ್ನು ಮಾಡುತ್ತಾರೆ. ನೀನು ಇಲ್ಲಿರುವಾಗ, ಲಕ್ಷ್ಯವಿಟ್ಟಿರುವುದು ಬಹಳ ಪ್ರಧಾನವಾದುದು, ಈಗಲೇ ಮತ್ತು ಇಲ್ಲಿಯೇ.