ಗುರುವಾರ, ಜುಲೈ 18, 2013

ಪ್ರತಿಫಲಾಪೇಕ್ಷೆ

ಜುಲೈ ೧೮, ೨೦೧೩
ಮಾಂಟ್ರಿಯಾಲ್, ಕೆನಡ

ಪ್ರಶ್ನೆ: ಕರ್ತೃತ್ವದ ಭಾವದಿಂದ ನಾನು ಹೇಗೆ ಮುಕ್ತನಾಗಬಹುದು?

ಶ್ರೀ ಶ್ರೀ ರವಿ ಶಂಕರ್:
ಸುಮ್ಮನೇ ಮಾಡುತ್ತಿರು, ಅದರ ಬಗ್ಗೆ ಚಿಂತಿಸಬೇಡ. ನನಗನಿಸುತ್ತದೆ, "ನಾನು ಕರ್ತೃವೇ ಅಥವಾ ಅಲ್ಲವೇ" ಎಂದು ಕುಳಿತುಕೊಂಡು ಯೋಚಿಸಲು ನಿನ್ನಲ್ಲಿ ಬಹಳ ಸಮಯವಿದೆಯೆಂದು. ನೀನು ಏನನ್ನು ಮಾಡಬೇಕೋ ಅದನ್ನು ಸುಮ್ಮನೆ ಮಾಡು.

ಪ್ರತಿಯೊಂದು ಕರ್ಮಕ್ಕೂ ಒಂದು ಪ್ರತಿಫಲವಿದೆ; ಹಿತವಾದದ್ದು, ಅಹಿತವಾದದ್ದು ಅಥವಾ ಮಿಶ್ರವಾದದ್ದು. ಕೇವಲ ಮೂರು ರೀತಿಯ ಪ್ರತಿಫಲಗಳು ಮಾತ್ರ ಇರುವುದು. ನೀವು ಕರ್ಮವನ್ನು ಮಾಡುವಾಗ, ಆ ಕರ್ಮವು ನಿಮಗೆ ಸ್ವಲ್ಪ ಧನಾತ್ಮಕ ಪ್ರತಿಫಲವನ್ನು ಅಥವಾ ಸ್ವಲ್ಪ ಋಣಾತ್ಮಕ ಪ್ರತಿಫಲವನ್ನು ಅಥವಾ ಸ್ವಲ್ಪ ಧನಾತ್ಮಕ ಮತ್ತು ಋಣಾತ್ಮಕ ಪ್ರತಿಫಲವನ್ನು ತರುತ್ತದೆ. ಈ ಎಲ್ಲಾ ಪ್ರತಿಫಲಗಳ ಪರಿಣಾಮವು ಕೆಲವು ಸಮಯದವರೆಗೆ ಮಾತ್ರ ಉಳಿಯುತ್ತದೆ. ಹಾಗಾಗಿ ಜ್ಞಾನಿಗಳು ಇದರ ಬಗ್ಗೆ ಚಿಂತಿಸುವುದಿಲ್ಲ. ಪ್ರತಿಯೊಂದು ಕರ್ಮದಲ್ಲೂ ಸ್ವಲ್ಪ ಧನಾತ್ಮಕವಾದುದು ಇದೆ ಮತ್ತು ಋಣಾತ್ಮಕವಾದುದು ಸ್ವಲ್ಪ ಇದೆ.

ಒಂದು ಕ್ರಿಯೆಯು ಶೇ. ೧೦೦ರಷ್ಟು  ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಒಂದು ಕ್ರಿಯೆಯಿಂದಾಗಿ ಅಭಿವೃದ್ಧಿಯಾಗುವ ಧನಾತ್ಮಕ ಅಂಶಗಳ ಕಡೆಗೆ ಗಮನ ಹರಿಸು. ಮತ್ತು ಕರ್ಮದ ಪರಿಣಾಮದ ಬಗ್ಗೆ ಚಿಂತಿಸಬೇಡ, ಸುಮ್ಮನೇ ಮುಂದುವರಿಯುತ್ತಿರು.

ನೀನೊಂದು ತಪ್ಪು ಕೆಲಸವನ್ನು ಮಾಡಿದ್ದರೆ, ಅದನ್ನು ಮುಂದಿನ ಸಾರಿ ಪುನರಾವರ್ತಿಸದೆ ಇರುವ ಒಂದು ಪಾಠವನ್ನು ಅದು ನಿನಗೆ ಕಲಿಸಿದೆ. ನೀನು ಸರಿಯಾದ ಕೆಲಸವನ್ನು ಮಾಡಿದ್ದರೆ, ಅದೇ ಸರಿಯಾದ ಕೆಲಸವನ್ನು ನೀನು ಹಲವಾರು ಸಲ ಮಾಡುವಂತೆ ಅದು ನಿನ್ನನ್ನು ಪ್ರೋತ್ಸಾಹಿಸುತ್ತದೆ.

ನೀನು ಮಾಡಿದ ಕೆಲಸದಲ್ಲಿ ನೀನು ಸುಧಾರಣೆ ಮಾಡಬಹುದಾದಂತಹ ಕೆಲವು ವಿಷಯಗಳಿವೆಯೆಂದು ನಿನಗೆ ಕಂಡುಬಂದರೆ, ಆಗ ನೀನು ಯಾವತ್ತೂ ಅದನ್ನು ಸುಧಾರಣೆಗೊಳಿಸಬಹುದು.

ಸುಮ್ಮನೇ ಮುಂದುವರೆ, "ನಾನು ಕರ್ತೃ" ಅಥವಾ "ನಾನು ಕರ್ತೃವಲ್ಲ" ಎಂದು ಹೇಳಬೇಡ. ಹೇಗಿದ್ದರೂ, ಒಂದು ಅರ್ಥದಲ್ಲಿ ಯಾರೂ ಒಬ್ಬ ಕರ್ತೃವಲ್ಲ ಮತ್ತು ಇನ್ನೊಂದು ಅರ್ಥದಲ್ಲಿ, ಹೌದು, ನೀನು ಕರ್ತೃವಾಗಿರುವೆ, ಯಾಕೆಂದರೆ ನಿನ್ನೊಳಗೆ ಎರಡಿವೆ.

ಉಪನಿಷತ್ತುಗಳಲ್ಲಿ ಒಂದು ಸುಂದರವಾದ ಕಥೆಯಿದೆ, ಅದು ಹೀಗೆಂದು ಹೇಳುತ್ತದೆ, ’ವಿಶ್ವವೆಂಬ ಈ ಮರದ ಮೇಲೆ ಎರಡು ಪಕ್ಷಿಗಳು ಕುಳಿತಿವೆ, ಒಂದು ಹಣ್ಣನ್ನು ಆಸ್ವಾದಿಸುತ್ತಿದೆ, ಇನ್ನೊಂದು ಸುಮ್ಮನೆ ನೋಡುತ್ತಿದೆ, ಒಂದು ಸಾಕ್ಷಿಯಂತೆ’. ಹೀಗೆ, ನಿಮ್ಮಲ್ಲಿ ಏನೂ ಮಾಡದಿರುವ ಒಂದು ಅಂಶವಿದೆ, ಅದು ಬಹಳಷ್ಟು ದೊಡ್ಡದು. ಮತ್ತು ನಿಮ್ಮಲ್ಲಿ ಎಲ್ಲವನ್ನೂ ಮಾಡುತ್ತಿರುವ ಒಂದು ಅಂಶವಿದೆ. ನಿಮ್ಮಲ್ಲಿ ಎರಡೂ ಇವೆ.

ಈಗ ನೀವು ಕೇಳಲೂಬಹುದು, ’ಹೇಗೆ?’ ಎಂದು.

ಒಂದು ಮಟ್ಟದಲ್ಲಿ, ನೀವು ಬದಲಾಗುತ್ತಿರುವಿರೆಂಬುದು ನಿಮಗೆ ಕಂಡುಬರುತ್ತದೆ. ನಿಮ್ಮ ಯೋಚನೆಗಳು ಬದಲಾಗುತ್ತಿವೆ, ನಿಮ್ಮ ಭಾವನೆಗಳು ಬದಲಾಗುತ್ತಿವೆ, ನಿಮ್ಮ ಶರೀರವು ಬದಲಾಗುತ್ತಿದೆ. ಆದರೂ ಇನ್ನೊಂದು ಆಳವಾದ ಮಟ್ಟದಲ್ಲಿ, ಬದಲಾಗದೇ ಇರುವಂತಹ ಏನೋ ಒಂದು ನಿಮ್ಮಲ್ಲಿದೆ; ಅದು ಹಾಗೇ ಇರುತ್ತದೆ. ಹಾಗಾಗಿ, ಅದು ಒಂದು ಅಥವಾ ಇನ್ನೊಂದಲ್ಲ, ಅದು ಎರಡೂ ಜೊತೆಯಲ್ಲೇ ಏಕಕಾಲದಲ್ಲಿ ಇರುವಂತಹದ್ದು.

ಆತ್ಮಗ್ಲಾನಿಯು ನಿಮ್ಮನ್ನು ತಿಂದುಹಾಕುವಾಗ ಅಥವಾ ಅಹಂಕಾರವು ನಿಮ್ಮ ತಲೆಯನ್ನು ಆವರಿಸುವಾಗ, ನೀವು ಕರ್ತೃವಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮಗಿದು ಅರ್ಥವಾಗುತ್ತಿದೆಯೇ?

ನೀವು ಏನಾದರೂ ಬಹಳ ಒಳ್ಳೆಯದನ್ನು ಮಾಡಿ, "ಓ, ನಾನಿದನ್ನು ಮಾಡಿದೆ, ನಾನಿದನ್ನು ಮಾಡಿದೆ" ಎಂದು ಹೇಳುವಾಗ, ಅದು ಕೂಡಾ ನಿಮ್ಮನ್ನು ಅಸಂತೋಷಗೊಳಿಸುತ್ತದೆ. ಏನೋ ಒಳ್ಳೆಯದನ್ನು ಮಾಡುವುದು ಕೂಡಾ ನಿಮ್ಮನ್ನು ಅಸಂತೋಷಗೊಳಿಸುತ್ತದೆ ಯಾಕೆಂದರೆ ನೀವು ಬಹಳಷ್ಟನ್ನು ಮಾಡುತ್ತೀರಿ ಮತ್ತು ನಂತರ ನೀವು, ಯಾರೂ ನಿಮ್ಮನ್ನು ಗುರುತಿಸುತ್ತಿಲ್ಲ, ಯಾರೂ ನಿಮ್ಮ ಮಾತನ್ನು ಕೇಳುವುದಿಲ್ಲ ಎಂದು ಹೇಳುತ್ತೀರಿ. ಹೀಗೆ ನಿಮ್ಮ ಒಳ್ಳೆಯ ಕೆಲಸಕ್ಕಾಗಿ ನೀವು ಗುರುತಿಸಲ್ಪಡದೇ ಇರುವುದು ನಿಮ್ಮನ್ನು ದುಃಖಿತರನ್ನಾಗಿಸುತ್ತದೆ, ಮತ್ತು ನೀವು ಏನಾದರೂ ತಪ್ಪು ಮಾಡಿದರೆ, ಅದು ಕೂಡಾ ನಿಮ್ಮ ಉತ್ಸಾಹವನ್ನು ತಿಂದುಹಾಕುತ್ತದೆ ಮತ್ತು ಒಂದು ಆತ್ಮಗ್ಲಾನಿಯನ್ನು ಸೃಷ್ಟಿಸುತ್ತದೆ. ಅಂತಹ ವಿಷಯಗಳು ಸಂಭವಿಸುವಾಗ, ನೀವು ಕರ್ತೃವಲ್ಲ ಎಂಬುದನ್ನು ತಿಳಿಯಿರಿ. ಆಗ ಒಬ್ಬ ಸಾಕ್ಷಿಯಾಗಿರಿ.

ಭೂಮಿಯ ಮೇಲೆ ಅತೀ ಘೋರ ಅಪರಾಧವನ್ನು ಮಾಡಿರುವ ಜನರು ಎಲ್ಲೋ ಒಳಗೆ ಆಳದಲ್ಲಿ, ’ಹೇ, ನಾನಿದನ್ನು ಮಾಡಲಿಲ್ಲ, ಇದು ಹೇಗೆ ಸಂಭವಿಸಿತು’ ಎಂದು ಯೋಚಿಸುತ್ತಾರೆ. ಅವರಿಗೆ ಅಚ್ಚರಿಯಾಗುತ್ತದೆ ಮತ್ತು ಆಘಾತವಾಗುತ್ತದೆ ಮತ್ತು ತಾವು ಕರ್ತೃವಲ್ಲ, ಅದು ಸುಮ್ಮನೇ ಸಂಭವಿಸಿತು ಎಂದು ಅವರಿಗನ್ನಿಸುತ್ತದೆ. ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಅಪರಾಧಿಗಳೊಂದಿಗೆ ನೀವು ಮಾತನಾಡಿದರೆ, ತಮ್ಮನ್ನು ಒಂದು ಕ್ರಿಯೆಯು (ಅಪರಾಧವು) ಹಿಡಿದುಕೊಂಡಿರುವುದು ಅವರಿಗೆ ಕಂಡುಬರುತ್ತದೆ ಎಂಬುದನ್ನು ನೀವು ನೋಡುವಿರಿ. ಅದೇ ರೀತಿಯಲ್ಲಿ, ಯಾವುದಾದರೂ ಶ್ರೇಷ್ಠ ಕೆಲಸವನ್ನು ಮಾಡಿರುವವರೊಬ್ಬರಿಗೆ ಕೂಡಾ, ಅದು ಸುಮ್ಮನೇ ಆಯಿತು; ಎಲ್ಲವೂ ಸರಿಯಾದ ಜಾಗದಲ್ಲಿ ಸೇರಿತೆಂದು ಅನ್ನಿಸುತ್ತದೆ. ಆ ಅಕರ್ತೃತ್ವವು ತನ್ನಲ್ಲೇ ಒಂದು ಅನುಭವವಾಗಿದೆ.

ನೀವು ಕೆಲಸಗಳನ್ನು ಮಾಡಬೇಕಾಗಿರುವಾಗ, ’ಓ, ನಾನು ಕರ್ತೃವಲ್ಲ’ ಎಂದು ಹೇಳಬೇಡಿ. ಆ ದಿಶೆಯಲ್ಲಿ ಹೋಗಬೇಡಿ. ಅದು ಕೇವಲ ನಿಮ್ಮನ್ನು ಹರಿದುಹಾಕೀತಷ್ಟೆ. ನೀವು ಯಾವುದಾದರೂ ಕೆಲಸದ ಮೇಲೆ ಗಮನ ಹರಿಸಬೇಕಾಗಿದ್ದರೆ, ಗಮನವಿಟ್ಟು ಸುಮ್ಮನೇ ಅದನ್ನು ಮಾಡಿ.

ನಾನೊಬ್ಬ ಕರ್ತೃವಲ್ಲ, ಇದೊಂದು ಅನುಭವವಾಗಿದೆ, ಕೆಲವೊಮ್ಮೆ ಇದು ಸುಮ್ಮನೇ ನಿಮ್ಮಲ್ಲಿ ಉದಯಿಸುತ್ತದೆ. ಮತ್ತು ನೀವು ಆತ್ಮಗ್ಲಾನಿಯಲ್ಲಿ ಅಥವಾ ದುರಹಂಕಾರದಲ್ಲಿ ಸುತ್ತುತ್ತಿರುವಾಗ ಇದು ನಿಮಗೊಂದು ನೆನಪು ಹುಟ್ಟಿಸುವಂತದ್ದು ಕೂಡಾ ಆಗಿದೆ.

ಪ್ರಶ್ನೆ: ನಮಗೆ ಯಾವುದರದ್ದಾದರೂ ಭಯವಿರುವಾಗ, ನಾವು ನಮ್ಮ ಭಯಗಳನ್ನು ಎದುರಿಸಬೇಕು ಎಂದು ನೀವು ಹೇಳುತ್ತೀರಿ. ಈ ಭಯಗಳನ್ನು ಎದುರಿಸಲಿರುವ ಧೈರ್ಯವು ನನಗೆ ಸಿಗುವುದು ಎಲ್ಲಿಂದ ಎಂಬುದು ನನ್ನ ಪ್ರಶ್ನೆಯಾಗಿದೆ. 

ಶ್ರೀ ಶ್ರೀ ರವಿ ಶಂಕರ್:
ನೀನು ಒಬ್ಬಂಟಿಯಲ್ಲ, ಮತ್ತು ನಿನ್ನನ್ನು ಪ್ರೀತಿಸುವ ಒಂದು ಸಾರ್ವತ್ರಿಕ ಶಕ್ತಿಯಿದೆ ಹಾಗೂ ಅದು ನಿನ್ನೊಂದಿಗಿದೆ ಎಂಬುದನ್ನು ತಿಳಿ. ನೀನು ಬಹಳ ಅಕ್ಕರೆಯಿಂದ ಪ್ರೀತಿಸಲ್ಪಡುತ್ತಿರುವೆ ಎಂಬುದನ್ನು ನೀನು ನೆನಪಿಸಿಕೊಂಡಾಗ, ಭಯವು ಮಾಯವಾಗುತ್ತದೆ. ನಿನ್ನೆಲ್ಲಾ ತೊಂದರೆಗಳು ಪ್ರಾರಂಭವಾಗುವುದು ಯಾಕೆಂದರೆ, ನೀನು ಬಹಳ ಅಕ್ಕರೆಯಿಂದ ಪ್ರೀತಿಸಲ್ಪಡುತ್ತಿರುವೆ ಎಂಬುದನ್ನು ನೀನು ನಂಬುವುದಿಲ್ಲ. ಅಲ್ಲೇ ಇಡೀ ಸಮಸ್ಯೆ ಪ್ರಾರಂಭವಾಗುವುದು ಮತ್ತು ಎಲ್ಲರನ್ನೂ ದೂರ ದೂಡುವ ರೀತಿಗಳಲ್ಲಿ ನೀನು ವರ್ತಿಸಲು ಪ್ರಾರಂಭಿಸುವೆ. ನೀನು ನಿನಗಾಗಿಯೇ ಒಂದು ದುಃಖವನ್ನು ಸೃಷ್ಟಿಸುವೆ, ಯಾಕೆಂದರೆ ನೀನು ನಿನ್ನನ್ನೇ ಸಂಶಯಿಸುವೆ; ನಾನು ಸಾಕಷ್ಟು ಒಳ್ಳೆಯವನೇ? ನಾನು ಪ್ರೀತಿಸಲ್ಪಡುತ್ತಿರುವೆನೇ?

ದೇವರು ನನ್ನನ್ನು ಪ್ರೀತಿಸುವನೇ ಅಥವಾ ಇಲ್ಲವೇ? ಜನರು ನನ್ನನ್ನು ಪ್ರೀತಿಸುವರೇ ಅಥವಾ ಇಲ್ಲವೇ? ಈ ರೀತಿಯ ಸಂಶಯಗಳು.

ನೀವೊಬ್ಬ ಕೋಡಂಗಿ ಆಗಿದ್ದರೂ ಸಹ, ನೀವು ಪ್ರೀತಿಸಲ್ಪಡುತ್ತಿರುವಿರಿ ಮತ್ತು ಮೆಚ್ಚುಗೆಗೆ ಪಾತ್ರರಾಗಿರುವಿರಿ ಎಂಬುದನ್ನು ಸುಮ್ಮನೇ ಒಪ್ಪಿಕೊಳ್ಳಿ. ನೀವೊಬ್ಬ ವಿದೂಷಕನಾಗಿದ್ದರೂ ಸಹ, ನೀವು ಪ್ರೀತಿಸಲ್ಪಡುತ್ತೀರಿ ಮತ್ತು ಆನಂದಿಸಲ್ಪಡುತ್ತೀರಿ. ನೀವು ಹೇಗಿದ್ದರೂ ಜನರು ನಿಮ್ಮನ್ನು ಮೆಚ್ಚುತ್ತಾರೆ. ಸುಮ್ಮನೇ ಮುಂದುವರೆಯಿರಿ, ಕುಳಿತುಕೊಂಡು ನಿಮ್ಮ ಬಗ್ಗೆಯೇ ಚಿಂತಿಸುವುದರಲ್ಲಿ, ನಿಮ್ಮನ್ನೇ ಪರೀಕ್ಷಿಸುವುದರಲ್ಲಿ ಮತ್ತು ಪುನರ್ ಪರೀಕ್ಷೆ ನಡೆಸುವುದರಲ್ಲಿ ಅತಿಯಾಗಿ ಕಾಲವ್ಯಯ ಮಾಡಬೇಡಿ. ಸುಮ್ಮನೆ ಒಂದು ಕೆಲಸಕ್ಕೆ ಬದ್ಧರಾಗಿರಿ ಮತ್ತು ನೀವೇನನ್ನು ಮಾಡಬೇಕೋ ಅದನ್ನು ಮಾಡಿ ಹಾಗೂ ವೈರಾಗ್ಯದೊಂದಿಗೆ ಆಳವಾದ ವಿಶ್ರಾಂತಿಯನ್ನು ತೆಗೆದುಕೊಳ್ಳಿ.

ಮೂರು ವಿಷಯಗಳು ಆವಶ್ಯಕವಾಗಿವೆ, ಅನುರಾಗ, ವೈರಾಗ್ಯ ಮತ್ತು ಕರುಣೆ.

ನಿಮ್ಮಲ್ಲಿ ಅನುರಾಗವಿರುವಾಗ, ನೀವು ಚಿಂತಿಸುವುದಿಲ್ಲ. ನಿಮ್ಮಲ್ಲಿ ಅನುರಾಗವಿಲ್ಲದಿರುವಾಗಲೇ ನೀವು ಕುಳಿತುಕೊಂಡು ಚಿಂತಿಸುವುದು. ನಿಮ್ಮಲ್ಲಿ ಅನುರಾಗದ ಕೊರತೆಯಿರುವಾಗ ಹಿಂಜರಿಕೆ ಬರುತ್ತದೆ. ಅನುರಾಗವಿಲ್ಲದೆ ಜೀವನವು ತನ್ನೆಲ್ಲಾ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ ಮತ್ತು ನೀವು ಖಿನ್ನತೆಗೆ ಜಾರುತ್ತೀರಿ. ಅನುರಾಗವು ಆವಶ್ಯಕವಾಗಿದೆ; ಅನುರಾಗವನ್ನು ಆವಾಹನೆ ಮಾಡಿ.

ಅನುರಾಗ ಮಾತ್ರವಲ್ಲ, ವೈರಾಗ್ಯ ಕೂಡಾ ಆವಶ್ಯಕವಾಗಿದೆ. ನೀವು ಅನುರಾಗಿಗಳಾಗಿರಬೇಕೆಂದು ಜನರು ನಿಮಗೆ ಹೇಳುತ್ತಾರೆ, ಆದರೆ ನೀವು ವೈರಾಗ್ಯವನ್ನು ಕೂಡಾ ಹೊಂದಿರಬೇಕೆಂದು ನಾನು ನಿಮಗೆ ಹೇಳುತ್ತೇನೆ. ವೈರಾಗ್ಯವು ಹೆಚ್ಚಾಗಿ ಒಂದು ಖಿನ್ನತೆಯ ಅವಸ್ಥೆಯೆಂದು ಪರಿಗಣಿಸಲ್ಪಡುತ್ತದೆ. ಜನರು ಬಹಳ ಖಿನ್ನರಾಗಿ ಕಾಣಿಸುತ್ತಾರೆ ಮತ್ತು ಇದು ವೈರಾಗ್ಯವೆಂದು ಯೋಚಿಸುತ್ತಾರೆ. ಇದೊಂದು ಸಂಪೂರ್ಣವಾಗಿ ತಪ್ಪಾದ ತಿಳುವಳಿಕೆಯಾಗಿದೆ.

ವೈರಾಗ್ಯವು ನಿಮ್ಮನ್ನು ಕೇಂದ್ರೀಕೃತಗೊಳಿಸುತ್ತದೆ. ಅದು ನಿಮ್ಮ ಮುಗುಳ್ನಗು ಮತ್ತು ಸಮಚಿತ್ತತೆಯನ್ನು ಕಾಪಾಡುತ್ತದೆ. ಅದು ಬುದ್ಧಿಯನ್ನು ಸ್ವಸ್ಥವಾಗಿಯೂ ಭಾವನೆಗಳನ್ನು ಸಮತೋಲನದಲ್ಲಿಯೂ ಇಟ್ಟುಕೊಳ್ಳುತ್ತದೆ. ನಿಮ್ಮಲ್ಲಿ ವೈರಾಗ್ಯವಿರುವಾಗ ನೀವು, ಯಾರಲ್ಲಾದರೂ ಯಾರ ಬಗ್ಗೆಯಾದರೂ ದೂರುವುದನ್ನು ನಿಲ್ಲಿಸುವಿರಿ. ಪ್ರಪಂಚವು ಅದಿರುವ ರೀತಿಯಲ್ಲೇ ಇದೆ, ನೀವು ಜನರ ಅಥವಾ ಪರಿಸ್ಥಿತಿಗಳ ಬಗ್ಗೆ ದೂರುವುದಿಲ್ಲ ಮತ್ತು ನೀವು ನಿಮ್ಮ ಬಗ್ಗೆಯೇ ದೂರುವುದಿಲ್ಲ. ಇದು ವೈರಾಗ್ಯವಾಗಿದೆ.
ಹಲವು ಸಲ ನಾವು, ನಾವು ಅತ್ಯಂತ ಹೆಚ್ಚು ಪ್ರೀತಿಸುವವರನ್ನು ಒಳಗೊಂಡಂತೆ ಇತರರ ಬಗ್ಗೆ ದೂರುತ್ತೇವೆ. ನಾವು ಇನ್ನೊಬ್ಬ ವ್ಯಕ್ತಿಯು ರಕ್ಷಣಾತ್ಮಕವಾಗುವಂತೆ ಅಥವಾ ಅವರು ವಿವರಣೆಗಳನ್ನು ನೀಡುವಂತೆ ಮಾಡುತ್ತೇವೆ. ಅದು ಎಷ್ಟೊಂದು ದೊಡ್ಡ ತಲೆನೋವು!

ಮೊದಮೊದಲು ನಾನು ಇದರಿಂದ ಪ್ರಭಾವಿತನಾಗುತ್ತಿದ್ದೆ. ಜನರು, "ನೀವು ನನ್ನ ಕಡೆಗೆ ನೋಡುವುದಿಲ್ಲ" ಎಂದು ಅಥವಾ "ನೀವು ನನ್ನೊಂದಿಗೆ ಮಾತನಾಡುವುದಿಲ್ಲ" ಎಂದು ಅಥವಾ "ನಿಮಗೆ ನನ್ನ ಮೇಲೆ ಕೋಪವೇ?" ಎಂದು ಹೇಳುತ್ತಿದ್ದರು. ಓ ದೇವರೇ! ಈ ದಿನಗಳಲ್ಲಿ ನಾನು ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನೀವು ಹಾಗೆ ಯೋಚಿಸುವುದಾದರೆ, ಇರಲಿ ಬಿಡಿ. ಹಾಗೇ ಇರಲಿ. ಪರವಾಗಿಲ್ಲ! ನಿಮ್ಮದೇ ಭಾವನೆಗಳಿಂದಾಗಿ ನೀವು ಸ್ವಲ್ಪ ಹೊಡೆತವನ್ನು ತಿಂದಾಗ, ಎಲ್ಲೋ ಅದು ನಿಮ್ಮನ್ನು ಬಲಶಾಲಿಯಾಗಿಸುತ್ತದೆ.

ಅದೆಲ್ಲವೂ ಗಮನವನ್ನು ಬಯಸುವ ಒಂದು ವಿಷಯವಷ್ಟೆ. ನೀವು ಗಮನವನ್ನು ನೀಡುತ್ತೀರಿ ಮತ್ತು ಅವರು ಸರಿಯಾಗಿರುತ್ತಾರೆ. ಶಿಶುಗಳಂತೆಯೇ - ನೀವು ಅವರ ಕಡೆಗೆ ಗಮನ ಹರಿಸದಿದ್ದರೆ, ಕೇವಲ ನಿಮ್ಮ ಗಮನವನ್ನು ಸೆಳೆಯುವುದಕ್ಕಾಗಿ ಅವರು ಹಠ ಮಾಡುತ್ತಾರೆ. ನೀವಿದನ್ನು ಗಮನಿಸಿದ್ದೀರಾ? ನಿಮ್ಮ ಮನೆಯಲ್ಲಿ ಅತಿಥಿಗಳಿರುವಾಗ ಮತ್ತು ನೀವು ಅವರೊಂದಿಗೆ ಮಾತನಾಡುವುದರಲ್ಲಿ ವ್ಯಸ್ತರಾಗಿರುವಾಗ, ಅದೇ ಸಮಯಕ್ಕೆ ಮಕ್ಕಳು ತಾವು ಬರೆದ ಚಿತ್ರಗಳನ್ನು ನಿಮಗೆ ತೋರಿಸಲು ಬಯಸುವುದು. ಅವರು ಅದನ್ನು ನಿಮಗೆ ಈಗಾಗಲೇ ಹತ್ತು ಸಾರಿ ತೋರಿಸಿರುತ್ತಾರೆ. ಆದರೆ ನೀವೊಂದು ಮುಖ್ಯವಾದ ಮಾತುಕತೆಯಲ್ಲಿರುವಾಗ, ಅವರು ಬಂದು ನಿಮಗೆ ತೊಂದರೆಯನ್ನುಂಟುಮಾಡುತ್ತಾರೆ! ಈ ಮಗುವು ಸುಮ್ಮನಿತ್ತಲ್ಲಾ, ಒಮ್ಮೆಲೇ ಏನಾಯಿತೆಂದು ನೀವು ಅಚ್ಚರಿಪಡುತ್ತೀರಿ!

ಆ ಮಟ್ಟದಿಂದ ನಾವು ಬೆಳೆದಿಲ್ಲ, ನಾವು ಯಾವತ್ತೂ ಜನರಿಂದ ಗಮನವನ್ನು ಬಯಸುತ್ತೇವೆ, ಮತ್ತು ಈ ಗಮನಕ್ಕಾಗಿ ನಾವು ಇತರರಲ್ಲಿ ಒತ್ತಡವನ್ನು ಸೃಷ್ಟಿಸುತ್ತೇವೆ.

ಹೀಗೆ ವೈರಾಗ್ಯದೊಂದಿಗೆ, ನಿಮ್ಮಲ್ಲಿ ಗಮನದ ಕೊರತೆಯೂ ಇರುವುದಿಲ್ಲ, ನಿಮ್ಮಲ್ಲಿ ಯಾವುದೇ ಒತ್ತಡವೂ ಇರುವುದಿಲ್ಲ. ನೀವು ಕುಳಿತುಕೊಂಡು ಗಮನಕ್ಕಾಗಿ ಹಾತೊರೆಯುವುದಿಲ್ಲ. ವೈರಾಗ್ಯವು ಆವಶ್ಯಕವಾಗಿದೆ.

ನಿಜಕ್ಕೂ ಲಾಭದಾಯಕವಾದಂತಹ ಇನ್ನೊಂದು ವಿಷಯವೆಂದರೆ ಕರುಣೆ. ನಿಮ್ಮಲ್ಲಿ ಕರುಣೆಯಿರುವಾಗ ಅದು ನಿಮ್ಮನ್ನು ಮುಂದೂಡುತ್ತದೆ, ಅದು ನಿಮ್ಮನ್ನು ಪ್ರೇರೇಪಿಸುತ್ತದೆ. ತಪ್ಪನ್ನು ಮಾಡುವವರಿಗಾಗಿ ನಿಮ್ಮಲ್ಲಿ ಕರುಣೆಯಿರುವಾಗ, ನಿಮಗೆ ಅವರ ಬಗ್ಗೆ ದ್ವೇಷವಾಗಲೀ ಅಥವಾ ಅವರ ಕಡೆಗೆ ಕಹಿ ಭಾವನೆಯಾಗಲೀ ಉಂಟಾಗುವುದಿಲ್ಲ. ಕರುಣೆಯು ಅನುರಾಗ ಮತ್ತು ವೈರಾಗ್ಯವನ್ನು ಸುಗಮಗೊಳಿಸುತ್ತದೆ ಹಾಗೂ ಅವುಗಳನ್ನು ಸಮತೋಲನಗೊಳಿಸುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಮ್ಮ ಜೀವಮಾನವಿಡೀ ನಾವು ನಮ್ಮ ಸಂಬಂಧಗಳಲ್ಲಿ ಪ್ರೀತಿಗಾಗಿ ಹುಡುಕಾಡುತ್ತಿರುತ್ತೇವೆ ಮತ್ತು ಹಾಗಿದ್ದರೂ ಈ ಪ್ರೀತಿಯು ಬಹಳ ತಾತ್ಕಾಲಿಕವಾಗಿದೆ. ಸರ್ವಶ್ರೇಷ್ಠ ಪ್ರೀತಿ ಅಥವಾ ಯಾವತ್ತೂ ದೂರ ಹೋಗದಿರುವ ಪ್ರೀತಿ ಯಾವುದು?

ಶ್ರೀ ಶ್ರೀ ರವಿ ಶಂಕರ್:
ನೀವು ಪ್ರೀತಿಯೆಂದು ಕರೆಯಲ್ಪಡುವ ಸಾಮಗ್ರಿಯಿಂದ ಮಾಡಲ್ಪಟ್ಟಿದ್ದೀರಿ. ನೀವು ಯಾವುದನ್ನು ಅಲ್ಲಿ ಇಲ್ಲಿ ಹುಡುಕಾಡುತ್ತಿರುವಿರೋ ಅದುವೇ ನೀವಾಗಿರುವಿರಿ. ಒಳಮುಖವಾಗಿ ತಿರುಗಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ. ಯಾರಿಂದಲೂ ನಿಮಗೆ ಪ್ರೀತಿ ಬೇಕಾಗಿಲ್ಲ ಮತ್ತು ಅದರ ಮೂಲವು ನೀವಾಗಿರುವಿರಿ ಎಂಬುದನ್ನು ನೀವು ಕಂಡುಕೊಂಡಾಗ, ಆಗ ನೀವು ನೀಡುವುದನ್ನು ಪ್ರಾರಂಭಿಸುವಿರಿ. ನೀವು ಧಾರಾಳವಾಗಿ ನೀಡುವುದನ್ನು ಪ್ರಾರಂಭಿಸಿದಾಗ, ಅದು ಧಾರಾಳವಾಗಿ ನಿಮ್ಮ ಕಡೆಗೆ ಮರಳಿ ಬರುತ್ತದೆ.

ಪ್ರಶ್ನೆ: ಇತರರಲ್ಲಿ ನಾನು ಸೌಂದರ್ಯ ಮತ್ತು ಪ್ರತಿಭೆಗಳನ್ನು ನೋಡುವಾಗ, ನನ್ನ ಮನಸ್ಸು ಅವರನ್ನು ಕೆಳತಳ್ಳಲು ತೊಡಗುತ್ತದೆ ಅಥವಾ ಅಸೂಯೆ ಪಡುತ್ತದೆ. ನಾನು ನನ್ನಲ್ಲಿಯೇ ಸಂಪೂರ್ಣನಾಗಿದ್ದೇನೆ, ಮತ್ತೆ ಯಾಕೆ ಮನಸ್ಸು ಕೊರತೆಯಲ್ಲಿ ಸುತ್ತುತ್ತದೆ?  

ಶ್ರೀ ಶ್ರೀ ರವಿ ಶಂಕರ್:
ಒಂದು ದಿನ ಎಲ್ಲರೂ ಸಾಯಲಿದ್ದರೆ ಎಂಬುದನ್ನು ಬಹುಶಃ ನೀನು ಅರ್ಥಮಾಡಿಕೊಂಡಿಲ್ಲ. ಆ ಎಲ್ಲಾ ಸುಂದರ ಜನರು, ಅವರು ಕೂಡಾ ಸಾಯಲಿದ್ದಾರೆ. ಹಿಂದೆ ಜೀವಿಸುತ್ತಿದ್ದವರೆಲ್ಲರೂ ಸುಂದರವಾಗಿದ್ದರು, ಮತ್ತು ಯುದ್ಧಗಳನ್ನು ಮಾಡಿ ಅವರೆಲ್ಲರೂ ಸಾವನ್ನಪ್ಪಿದರು. ನೀನು ಯಾರ ಬಗ್ಗೆ ಅಸೂಯೆ ಪಡುತ್ತಿರುವೆಯೋ ಅವರು ಕೂಡಾ ಸಾಯಲಿದ್ದಾರೆ. ಎದ್ದೇಳು ಮತ್ತು ನೋಡು, ಅಸೂಯೆ ಎಲ್ಲಿದೆ? ಸೌಂದರ್ಯವೆಂದರೇನು? ಸೌಂದರ್ಯವೆಂದು ಕರೆಯಲ್ಪಡುವುದು ಕೇವಲ ಚರ್ಮದಷ್ಟು ಆಳವುಳ್ಳದ್ದೆಂದು ನಾವು ಯೋಚಿಸುತ್ತೇವೆ, ಅದು ಸೌಂದರ್ಯವಲ್ಲ. ಸೌಂದರ್ಯವು ನಮ್ಮದೇ ಚೇತನದ ಸ್ವಭಾವವಾಗಿದೆ. ನೀವು ಸಂತೋಷವಾಗಿ ಮತ್ತು ತೃಪ್ತರಾಗಿರುವಾಗ, ನಿಮ್ಮೊಳಗೆ ಉದಯಿಸುವ ಪ್ರಜ್ಞೆ ಅಥವಾ ಜೀವದ ಗುಣವು ನಿಜವಾದ ಸೌಂದರ್ಯವಾಗಿದೆ, ಬಾಹ್ಯ ಸ್ವರೂಪವಲ್ಲ.

ಪ್ರಶ್ನೆ: ನಮ್ಮ ಕರ್ಮವನ್ನು ಕರಗಿಸಲಿರುವ ಅತ್ಯಂತ ಶ್ರೇಷ್ಠ ವಿಧಾನ ಯಾವುದು?

ಶ್ರೀ ಶ್ರೀ ರವಿ ಶಂಕರ್:
ಕೇವಲ ಕರ್ಮವನ್ನು ಮಾಡುತ್ತಿರು. ಚಿಂತಿಸಬೇಡ, ಕರ್ಮವು ಭೂತಕಾಲದ್ದು. ಜ್ಞಾನ, ಅರಿವು, ಧ್ಯಾನ ಮತ್ತು ಒಳ್ಳೆಯ ಕೆಲಸ, ಇವುಗಳು ಭೂತಕಾಲದ ಕರ್ಮವನ್ನು ಅಳಿಸಿಹಾಕುತ್ತವೆ. ಜಾಗೃತವಾಗಿರುವುದು ಮತ್ತು ಭೂತಕಾಲವು ಆಗಿಹೋಯಿತು; ಯಾವುದೋ ಕಾರಣಕ್ಕಾಗಿ ಅದು ಸಂಭವಿಸಿತು ಎಂಬುದನ್ನು ತಿಳಿದಿರುವುದು; ಈ ಜ್ಞಾನದ ಅರಿವೇ ಹಿಂದಿನ ಕರ್ಮವನ್ನು ಅಳಿಸಿಹಾಕುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡು, ಏನಾದರೂ ಒಳ್ಳೆಯದನ್ನು ಮಾಡು.