ಶುಕ್ರವಾರ, ಜುಲೈ 26, 2013

ಏಳು ಚಕ್ರಗಳು

ಬೂನ್, ನಾರ್ತ್ ಕೆರೋಲಿನಾ
ಜುಲೈ ೨೬, ೨೦೧೩

ಪ್ರಶ್ನೆ: ಗುರುದೇವ, ಲೈಂಗಿಕ ಶಕ್ತಿ ಮತ್ತು ಧ್ಯಾನದ ಶಕ್ತಿಯು ಒಂದೇ ಆಗಿದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಶರೀರದಲ್ಲಿರುವುದು ಒಂದೇ ಒಂದು ಶಕ್ತಿಯಾಗಿದೆ, ಆದರೆ ಬೇರೆ ಬೇರೆ ಚಕ್ರಗಳಲ್ಲಿ ಅದು ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತದೆ.

ಲೈಂಗಿಕ ಶಕ್ತಿ, ಪ್ರೇಮ ಶಕ್ತಿ, ಬೌದ್ಧಿಕ ಶಕ್ತಿ, ತೀಕ್ಷ್ಣತೆ, ಅರಿವು, ಕೋಪ; ಇವುಗಳೆಲ್ಲವೂ ಸಂಬಂಧ ಹೊಂದಿವೆ.

ನೀವು ಏಳು ಚಕ್ರಗಳ ಬಗ್ಗೆ ಕೇಳಿರಬಹುದು; ಅದು, ಒಂದು ಶಕ್ತಿ ಹಲವಾರು ರೂಪಗಳಲ್ಲಿ ತನ್ನನ್ನು ಪ್ರಕಟಪಡಿಸಿಕೊಳ್ಳುವುದಾಗಿದೆ.

ಮೊದಲನೆಯ ಚಕ್ರದಲ್ಲಿ, ಬೆನ್ನುಹುರಿಯ ಬುಡದಲ್ಲಿ, ಶಕ್ತಿಯು ಉತ್ಸಾಹ ಅಥವಾ ಜಡತ್ವವಾಗಿ ಪ್ರಕಟವಾಗುತ್ತದೆ.

ಅದೇ ಪ್ರಾಣ ಶಕ್ತಿಯು ಎರಡನೆಯ ಚಕ್ರಕ್ಕೆ ಬರುವಾಗ, ಅದು ಲೈಂಗಿಕ ಶಕ್ತಿ ಅಥವಾ ಸೃಜನಾತ್ಮಕ ಅಥವಾ ಪ್ರಜನನೀಯ (ಹುಟ್ಟಿಸಬಲ್ಲ) ಶಕ್ತಿಯಾಗಿ ಪ್ರಕಟವಾಗುತ್ತದೆ.

ಅದೇ ಶಕ್ತಿಯು ನಾಭಿ ಪ್ರದೇಶಕ್ಕೆ ಏರುತ್ತದೆ, ಅಂದರೆ ಮೂರನೆಯ ಚಕ್ರಕ್ಕೆ ಮತ್ತು ನಾಲ್ಕು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ. ಅದು ನಾಲ್ಕು ವಿವಿಧ ಭಾವನೆಗಳಿಗೆ ಸಂಬಂಧಿಸಿದೆ - ಲೋಭ, ಮಾತ್ಸರ್ಯ, ಉದಾರತೆ ಮತ್ತು ಸಂತೋಷ. ಅದಕ್ಕಾಗಿಯೇ ಈ ಎಲ್ಲಾ ನಾಲ್ಕು ಭಾವನೆಗಳು ಹೊಟ್ಟೆಯ ಮೂಲಕ ಚಿತ್ರಿಸಲ್ಪಟ್ಟಿರುವುದು.

ಮಾತ್ಸರ್ಯವೆಂಬುದು ಒಬ್ಬರು ಹೊಟ್ಟೆಯಲ್ಲಿ ಅನುಭವಿಸುವಂತಹ ಒಂದು ಭಾವನೆಯಾಗಿದೆ. ಉದಾರತೆಯನ್ನು ಒಂದು ದೊಡ್ಡ ಹೊಟ್ಟೆಯೊಂದಿಗೆ ಚಿತ್ರಿಸಲಾಗುತ್ತದೆ, ಉದಾಹರಣೆಗೆ ಸಾಂತಾ ಕ್ಲಾಸ್. ಸಂತೋಷವನ್ನು ಕೂಡಾ ಒಂದು ದೊಡ್ಡ ಹೊಟ್ಟೆಯೊಂದಿಗೆ ಚಿತ್ರಿಸಲಾಗುತ್ತದೆ, ಉದಾಹರಣೆಗೆ ಭಗವಾನ್ ಗಣೇಶ ಮತ್ತು ಲಾಫಿಂಗ್ ಬುದ್ಧ.

ಅದೇ ಭಾವನೆಯು ನಾಲ್ಕನೆಯ ಚಕ್ರಕ್ಕೆ, ಅಂದರೆ ಹೃದಯ ಚಕ್ರಕ್ಕೆ ಬರುತ್ತದೆ. ಮೂರು ವಿವಿಧ ಭಾವನೆಗಳಾಗಿ ಪ್ರಕಟವಾಗುತ್ತದೆ, ಅವುಗಳು ಪ್ರೇಮ, ದ್ವೇಷ ಮತ್ತು ಭಯ.

ಈ ಶಕ್ತಿಯು ಐದನೆಯ ಚಕ್ರಕ್ಕೆ ಏರುವಾಗ; ಅಂದರೆ ಗಂಟಲಿನ ಮಟ್ಟಕ್ಕೆ, ಅದು ದುಃಖ ಮತ್ತು ಕೃತಜ್ಞತೆಗಳನ್ನು ಸೂಚಿಸುತ್ತದೆ. ನೀವು ದುಃಖಿತರಾಗುವಾಗ ಗಂಟಲು ಕಟ್ಟುತ್ತದೆ ಮತ್ತು ನೀವು ಕೃತಜ್ಞತೆಯನ್ನು ಅನುಹವಿಸುವಾಗ ಕೂಡಾ ಗಂಟಲು ಕಟ್ಟುತ್ತದೆ.

ಅದೇ ಶಕ್ತಿಯು ನಂತರ ಹುಬ್ಬುಗಳ ನಡುವೆ ಆರನೆಯ ಚಕ್ರಕ್ಕೆ ಹೋಗುತ್ತದೆ ಮತ್ತು ಕೋಪ ಹಾಗೂ ಜಾಗರೂಕತೆಯಾಗಿ ಪ್ರಕಟವಾಗುತ್ತದೆ. ಕೋಪ, ಜಾಗರೂಕತೆ, ಜ್ಞಾನ ಮತ್ತು ವಿವೇಕ ಇವುಗಳೆಲ್ಲವೂ ಮೂರನೆಯ ಕಣ್ಣಿನ ಕೇಂದ್ರದೊಂದಿಗೆ ಸಂಬಂಧ ಹೊಂದಿವೆ.

ಅದೇ ಶಕ್ತಿಯು ಏಳನೆಯ ಚಕ್ರಕ್ಕೆ ಹೋಗುತ್ತದೆ; ತಲೆಯ ತುತ್ತ ತುದಿಯಲ್ಲಿ ಮತ್ತು ಸಂಪೂರ್ಣ ಆನಂದವಾಗಿ ಪ್ರಕಟವಾಗುತ್ತದೆ. ಅದಕ್ಕಾಗಿಯೇ ಯಾವುದೇ ಪವಿತ್ರ ಸ್ಥಳದಲ್ಲಿನ ಅನುಭವಗಳಲ್ಲಿ, ನೀವು ಸಂಪೂರ್ಣ ಆನಂದವನ್ನು ಅನುಭವಿಸುವಾಗ ಮನಸ್ಸು ಕೂಡಲೇ ತಲೆಯ ತುತ್ತತುದಿಗೆ ಹೋಗುವುದು. ಏನೋ ಒಂದು ತಲೆಯ ತುದಿಗೆ ಏರುತ್ತದೆ ಮತ್ತು ನೀವು ಪರಮಸುಖವನ್ನು ಅನುಭವಿಸುತ್ತೀರಿ.

ಹಾಗಾಗಿ, ಶಕ್ತಿಯ ಮೇಲ್ಮುಖವಾದ ಚಲನೆ ಮತ್ತು ಕೆಳಮುಖವಾದ ಚಲನೆ ಇವುಗಳೆಲ್ಲವೂ ಜೀವನದಲ್ಲಿನ ಭಾವನೆಗಳಾಗಿವೆ.

http://www.artofliving.org/meditation/free-online-meditation

ಪ್ರಶ್ನೆ: ಗುರುದೇವ, ನಾನು ಪ್ರಾರ್ಥಿಸುವುದು ಹೇಗೆಂಬುದನ್ನು ಕಲಿಯಲು ಬಯಸುತ್ತೇನೆ. ಪ್ರಾಥಿಸುವುದು ಹೇಗೆಂಬುದರ ಬಗ್ಗೆ ನೀವು ಸ್ವಲ್ಪ ಹೇಳಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಪ್ರಾಥನೆಯೆಂಬುದು ಸ್ವಯಂಪ್ರೇರಿತವಾದುದು. ಅದು ಎರಡು ಸಂದರ್ಭಗಳಲ್ಲಿ ಆಗುತ್ತದೆ, ನೀವು ಬಹಳ ಕೃತಜ್ಞರಾಗಿ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ಮತ್ತು ನೀವು ಸಂಪೂರ್ಣವಾಗಿ ಅಸಹಾಯಕರಾಗಿ ಸಹಾಯಕ್ಕಾಗಿ ಬೇಡುವಾಗ.

ಪ್ರಾರ್ಥನೆಯು ಸುಮ್ಮನೇ ಆಗುತ್ತದೆ, ನಿಮಗದನ್ನು ಬೆಳೆಸಲು ಸಾಧ್ಯವಿಲ್ಲ. ಹೆಚ್ಚೆಂದರೆ ನೀವು ಏನು ಮಾಡಬಹುದೆಂದರೆ, ನಿಮ್ಮದೇ ಜೀವನದ ಕಡೆಗೆ ತಿರುಗಿ, ನೀವೆಲ್ಲಿದ್ದಿರಿ ಮತ್ತು ನೀವು ಹೇಗೆ ಸಾಗಿದಿರಿ ಎಂಬುದನ್ನು ನೋಡಬಹುದು.

ಪರ್ಯಾಯವಾಗಿ, ಇತರ ಜನರ ಜೀವನಗಳ ಕಡೆಗೆ ನೋಡಿ ಮತ್ತು ಈ ಭೂಮಿಯ ಮೇಲೆ ಎಷ್ಟೊಂದು ಜನರು ದುಃಖಿತರಾಗಿರುವರೆಂಬುದನ್ನೂ, ನೀವು ಎಷ್ಟೊಂದು ಅದೃಷ್ಟಶಾಲಿಗಳೆಂಬುದನ್ನೂ ನೋಡಿ! ಈ ಸೌಮ್ಯವಾದ ಅರಿವು, ನೀವು ಪ್ರಾರ್ಥನಾಪೂರ್ಣರಾಗಿರುವಂತೆ ಅಥವಾ ಕೃತಜ್ಞತಾಪೂರ್ಣರಾಗಿರುವಂತೆ ಮಾಡುವುದು.

ಪ್ರಾರ್ಥನೆಯು ಆರಂಭವಾಗಿದೆ ಮತ್ತು ಧ್ಯಾನವು ಅದರ ಪರಾಕಾಷ್ಠೆ ಆಗಿದೆ. ಪ್ರಾರ್ಥನೆಯು, ನೀಡಲ್ಪಟ್ಟ ಎಲ್ಲದಕ್ಕೂ ದೇವರಿಗೆ ಧನ್ಯವಾದಗಳನ್ನರ್ಪಿಸುವುದಾಗಿದೆ ಮತ್ತು ಧ್ಯಾನವು, ಅಲ್ಲಿರುವುದಾಗಿದೆ; ದೇವರು ಏನು ಹೇಳುತಿರುವರೋ ಅದನ್ನು ಕೇಳಲು ಸಿದ್ಧರಾಗಿರುವುದು. ಧ್ಯಾನವು ಒಂದು ಪ್ರೌಢ ರೂಪದ ಪ್ರಾಥನೆಯಾಗಿದೆ.

ನಾನು ನಿಮ್ಮನ್ನು ಪ್ರಾರ್ಥನೆ ಮಾಡುವುದರಿಂದ ನಿರುತ್ಸಾಹಗೊಳಿಸುತ್ತಿಲ್ಲ. ಪ್ರಾರ್ಥನೆಯು ಧ್ಯಾನಕ್ಕಿಂತ ಮುಂಚಿತವಾಗಿ ಆಗಬಹುದು. ನೀವು ಪ್ರಾರ್ಥಿಸಿ, ನಂತರ ಕುಳಿತುಕೊಂಡು ಧ್ಯಾನ ಮಾಡಬಹುದು.
 
ಪ್ರಶ್ನೆ: ಗುರುದೇವ, ಅತ್ಯಂತ ಧನಾತ್ಮಕವಾದ ಜಾಗಗಳಲ್ಲಿ ಕೂಡಾ ಮತ್ತು ಕೆಲವೊಮ್ಮೆ ಪ್ರಾರ್ಥಿಸುವಾಗ ಕೂಡಾ ಭಯಾನಕವಾದ ಹಾಗೂ ಕೆಟ್ಟ ಯೋಚನೆಗಳು ಯಾಕೆ ಬರುತ್ತವೆಯೆಂದು ನನಗೆ ಅಚ್ಚರಿಯಾಗುತ್ತದೆ. ದಯವಿಟ್ಟು ಸಹಾಯ ಮಾಡಿ. 

ಶ್ರೀ ಶ್ರೀ ರವಿ ಶಂಕರ್: ಚಿಂತಿಸಬೇಡ. ಯೋಚನೆಗಳು ಯೋಚನೆಗಳಷ್ಟೇ. ಈ ಯೋಚನೆಗಳು ಬರುತ್ತಿವೆಯೆಂಬ ಅರಿವು ನಿನ್ನಲ್ಲಿರುವವರೆಗೆ ನೀನು ಬಹಳ ಸುರಕ್ಷಿತನಾಗಿರುವೆ, ಯಾಕೆಂದರೆ ಈ ಯೋಚನೆಗಳು ಬರುತ್ತವೆ ಮತ್ತು ಹೋಗುತ್ತವೆ.
ಹಲವಾರು ಕಾರಣಗಳಿಂದಾಗಿ ನಕಾರಾತ್ಮಕ ಯೋಚನೆಗಳು ಬರುತ್ತವೆ:

೧. ಶರೀರದಲ್ಲಿ ಒಳ್ಳೆಯ ರಕ್ತಪರಿಚಲನೆಯ ಕೊರತೆಯಿಂದ ಮತ್ತು ಸರಿಯಾದ ಉಸಿರಾಟ ಇಲ್ಲದಿರುವುದರಿಂದ ಅಥವಾ ಮೆದುಳಿಗೆ ಸಾಕಷ್ಟು ಆಮ್ಲಜನಕದ ಪೂರೈಕೆಯಿಲ್ಲದಿರುವುದರಿಂದ.

೨. ಒಳ್ಳೆಯ ಶೌಚಕ್ರಿಯೆಯ ಕೊರತೆಯಿಂದ. ನಿಮಗೆ ಮಲಬದ್ಧತೆಯಾದರೆ, ನಕಾರಾತ್ಮಕ ಯೋಚನೆಗಳು ಬರುವುದನ್ನು ನೀವು ಗಮನಿಸಬಹುದು.

೩. ಪ್ರಾಣವು ಕಡಿಮೆಯಾಗಿರುವುದರಿಂದ ಅಥವಾ ಶಕ್ತಿಯಿಲ್ಲದಿರುವುದರಿಂದ.

ಇದಕ್ಕಿರುವ ಪರಿಹಾರಗಳೆಂದರೆ:

೧. ಪರಿಚಲನೆಯನ್ನು ಸುಧಾರಿಸುವುದು: ಎದ್ದೇಳಿ, ನಿಮ್ಮ ವ್ಯಾಯಾಮವನ್ನು ಮಾಡಿ, ಹಾಡಿ, ನೃತ್ಯ ಮಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಮಾಡಿ; ಇವುಗಳೆಲ್ಲವೂ ಸಹಾಯ ಮಾಡುವುವು.

೨. ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ ಸ್ವಲ್ಪ ಶುದ್ಧೀಕರಣ ಮಾಡಿ. ನೀವು ಶ್ರೀ ಶ್ರೀ ಯೋಗ ಹಂತ-೨ ನ್ನು ಮಾಡಿಲ್ಲದೇ ಇದ್ದರೆ ನೀವದನ್ನು ಮಾಡಬೇಕು. ಅಲ್ಲಿ ಕುಂಜಲ (ಗಂಟಲು ಮತ್ತು ಹೊಟ್ಟೆಯನ್ನು ಶುಚಿಗೊಳಿಸುತ್ತದೆ) ಮತ್ತು ಶಂಖ ಪ್ರಕ್ಷಾಳನ (ಬಾಯಿಯಿಂದ ಗುದದವರೆಗೆ ಇಡೀ ಪ್ರಾಥಮಿಕ ಕಾಲುವೆಯನ್ನು ಶುಚಿಗೊಳಿಸುತ್ತದೆ) ಗಳ ಮೂಲಕ ನೀವು ನೀರನ್ನು ಕುಡಿಯಲು ಮತ್ತು ನಿಮ್ಮ ಇಡೀ ವ್ಯವಸ್ಥೆಯನ್ನು ಶುದ್ಧೀಕರಿಸಲು ಕಲಿಯುತ್ತೀರಿ.

ನೀವು ಬಹಳಷ್ಟು ನೀರನ್ನು ಕುಡಿದು ಒಂದು ಗುಂಪಿನ ವ್ಯಾಯಾಮಗಳನ್ನು ಮಾಡುವಾಗ, ನೀರು ನಿಮ್ಮ ಶರೀರವನ್ನು ಶುಚಿಗೊಳಿಸುವುದು ಮತ್ತು ಸಂಪೂರ್ಣ ವ್ಯವಸ್ಥೆಯನ್ನು ತೊಳೆದುಬಿಡುವುದು. ಇದೇ ಕಾರಣಕ್ಕಾಗಿಯೇ ಯೋಗಿಗಳು ಪ್ರಾಚೀನ ಕಾಲದಿಂದಲೂ ಈ ಕ್ರಿಯೆಗಳನ್ನು ಸಲಹೆ ಮಾಡಿದುದು. ಇದು ಹಲವಾರು ಜನರಿಗೆ ಯೋಚನೆಗಳನ್ನು ಹೋಗಲಾಡಿಸುವುದರಲ್ಲಿ ಸಹಾಯ ಮಾಡಿದೆ.

೩. ಒಳ್ಳೆಯ ಸಂಗವನ್ನು ಇಟ್ಟುಕೊಳ್ಳಿ. ಸಂಗವೂ ಕೂಡಾ ನಿಮ್ಮ ಶಕ್ತಿಯನ್ನು ಕೆಳಕ್ಕೆಳೆಯಬಲ್ಲದು.

ಇದೆಲ್ಲದರ ಹೊರತಾಗಿ, ನಿಮಗೆ ನಕಾರಾತ್ಮಕ ಯೋಚನೆಗಳು ಬಂದರೆ ಚಿಂತಿಸಬೇಡಿ, ಅವುಗಳು ಹೇಗೆ ಬರುತ್ತವೆಯೋ ಹಾಗೇ ಹೋಗುತ್ತವೆ. ನೀವು ಅವುಗಳ ಬಗ್ಗೆ ಭಯಭೀತರಾದರೆ, ಅವುಗಳು ನಿಮ್ಮೊಂದಿಗೆ ಉಳಿಯುವುವು. ನೀವು ಭಯಪಡದೇ ಇದ್ದರೆ, ಅವುಗಳು ಸುಮ್ಮನೇ ನಿಮ್ಮನ್ನು ಬಿಟ್ಟುಹೋಗುತ್ತವೆ.

ಪ್ರಶ್ನೆ: ಗುರುದೇವ, ಒಬ್ಬ ಸಾಕ್ಷಿಯಾಗು ಎಂದು ನಾವು ಹೇಳುವಾಗ, ನಿಜವಾಗಿ ಅದರ ಅರ್ಥವೇನು? ಸರಿಯಾದ ಕೃತ್ಯ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ಒಬ್ಬ ಸಾಕ್ಷಿಯಾಗಿರುವುದು ಮತ್ತು ಭಾಗಿಯಾಗುವುದರ ಮಧ್ಯೆ ನಾವು ಸಂತುಲನವನ್ನಿರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಹೆದ್ದಾರಿಯ ಪಕ್ಕದಲ್ಲಿ ನಿಂತುಕೊಂಡು ಹೋಗುತ್ತಿರುವ ಕಾರುಗಳನ್ನೆಲ್ಲಾ ನೋಡಿದರೆ ಅಥವಾ ನೀನು ಭೋಜನಶಾಲೆಯಲ್ಲಿ ಕುಳಿತು ಎಲ್ಲರೂ ತಿನ್ನುತ್ತಿರುವುದನ್ನು ನೋಡಿದರೆ, ಅದು ಒಬ್ಬ ಸಾಕ್ಷಿಯಾಗಿರುವುದಾಗಿದೆ.

ಅದರರ್ಥ, ಭಾಗಿಯಾಗದಿರುವುದು, ಆದರೆ ಏನಾಗುತ್ತಿದೆಯೆಂಬುದನ್ನು ಸುಮ್ಮನೆ ಗಮನವಿಟ್ಟು ನೋಡುವುದಾಗಿದೆ.

ಅದೇ ರೀತಿಯಲ್ಲಿ, ನೀನು ಈಗಾಗಲೇ ನಿನ್ನೊಳಗೆ ಬರುವ ಹಲವಾರು ಯೋಚನೆಗಳಿಗೆ ಸಾಕ್ಷಿಯಾಗಿರುವೆ. ಎಲ್ಲಾ ಯೋಚನೆಗಳಲ್ಲಿ ನೀನು ಭಾಗಿಯಾಗುವುದಿಲ್ಲ; ಇಲ್ಲದಿದ್ದರೆ ನೀನು ಹುಚ್ಚನಾಗುವೆ.

ಪ್ರಶ್ನೆ: ಗುರುದೇವ, ಮನುಕುಲದ ವಿಕಾಸದಲ್ಲಿ ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಪಾತ್ರವೇನು? ಬೇಗನೇ ವಿಲಕ್ಷಣತೆಯು ಬರುವುದೆಂದು ವಿಜ್ಞಾನಿಗಳು ಹೇಳುತ್ತಾರೆ; ಅಂದರೆ ಕೃತಕ ಬುದ್ಧಿಮತ್ತೆಯು ಮಾನವ ಬುದ್ಧಿಮತ್ತೆಯನ್ನು ಮೀರಿ ಭೂಮಿಯನ್ನು ಆಳುವ ಒಂದು ಕಾಲ. ನಾವು ಚಿಂತಿಸಬೇಕೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ನೀವು ಅದರ ಬಗ್ಗೆ ಕಳವಳಗೊಳ್ಳಬೇಕಾದ ಅಗತ್ಯವೇ ಇಲ್ಲ. ನನಗಿರುವ ಒಂದೇ ಕಳವಳವೆಂದರೆ ಜನರು ಯಾಕೆ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸುತ್ತಿಲ್ಲವೆಂದು. ಪ್ರತಿಯೊಬ್ಬರಿಗೂ ಬುದ್ಧಿಶಕ್ತಿಯನ್ನು ದಯಪಾಲಿಸಲಾಗಿದೆ ಮತ್ತು ಅತ್ಯಂತ ದೊಡ್ಡ ಸಮಸ್ಯೆಯೆಂದರೆ, ಅವರದನ್ನು ಬಳಸುವುದಿಲ್ಲ!

ಪ್ರಶ್ನೆ: ಪ್ರೀತಿಯ ಗುರುದೇವ, ಆತ್ಮ ಮತ್ತು ವರ್ತಮಾನದ ಕ್ಷಣಗಳ ನಡುವೆ ಒಂದು ಗುಪ್ತವಾದ ಪ್ರಬಲ ಸಂಪರ್ಕವಿದೆಯೆಂಬುದಾಗಿ ನಾನು ಕೇಳಿದ್ದೇನೆ. ನೀವು ದಯವಿಟ್ಟು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಹೌದು, ಆತ್ಮವು ಯಾವಾಗಲೂ ಇದೆ, ಮತ್ತು ಇದು ನಿಮ್ಮ ಉಡುಗೊರೆಯಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಕೊನೆಯಲ್ಲಿ ದೇವರೇ ಕರ್ತೃವಾದರೆ, ಒಂದು ಜೀವಿಯು ಕರ್ಮ ಅಥವಾ ಕರ್ಮದ ಫಲಗಳಿಗೆ ಜವಾಬ್ದಾರವಾಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೋಡು, ಕರ್ತೃತ್ವವು ಫಲಾನುಭವದೊಂದಿಗೆ ಹೋಗುತ್ತದೆ. ನೀನು ಕರ್ತೃವಲ್ಲದಿದ್ದರೆ, ನೀನು ಪರಿಣಾಮವನ್ನು ಅನುಭವಿಸುವುದೂ ಇಲ್ಲ. "ನಾನು ಕರ್ತೃವಲ್ಲ, ದೇವರು ನಾನು ಹೆಚ್ಚು ಆಹಾರ ತಿನ್ನುವಂತೆ ಮಾಡಿದರು, ಆದರೆ ನನಗೆ ಹೊಟ್ಟೆ ನೋಯುತ್ತಿದೆ" ಎಂದು ನೀನು ಹೇಳುವಂತಿಲ್ಲ.

ನಾನು ಹೇಳುವುದೇನೆಂದರೆ, "ದೇವರಿಗೆ ಹೊಟ್ಟೆ ನೋಯುತ್ತಿದೆ. ನೀನೆಲ್ಲಿರುವೆ ನಡುವೆ?" ನೀನು ತಿಂದಿರುವುದಾದರೆ, ನಿನಗೆ ಹೊಟ್ಟೆ ನೋಯುತ್ತಿದೆ; ದೇವರು ತಿಂದಿರುವುದಾದರೆ, ಆಗ ಹೊಟ್ಟೆ ನೋಯುವುದು ಕೂಡಾ ದೇವರಿಗೆ. ಅಜೀರ್ಣತೆಯಿಂದ ಬಳಲುತ್ತಿರುವುದು ನೀನಲ್ಲ. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ?

ಈ ಸಂಪೂರ್ಣ ತತ್ವಜ್ಞಾನವನ್ನು ನಾವು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆಂದು ನನಗನ್ನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವಿದೆ ಮತ್ತು ನಿರ್ದಿಷ್ಟ ಸಂಗತಿಗಳು ಅವನ ಶಕ್ತಿಯನ್ನು ಮೀರಿದುದಾಗಿದೆ. ಜೀವನವು ಎರಡರ ಸಮ್ಮಿಶ್ರಣವಾಗಿದೆ; ನಿಮ್ಮ ಸ್ವತಂತ್ರ ಇಚ್ಛೆ ಮತ್ತು ಯಾವುದು ಪೂರ್ವನಿರ್ಧಾರಿತವೋ ಅದು. ಕೆಲವು ಸಂಗತಿಗಳು ನಿಮ್ಮ ನಿಯಂತ್ರಣದಲ್ಲಿವೆ ಮತ್ತು ಬೇರೆ ಕೆಲವು ಸಂಗತಿಗಳು ಅಲ್ಲ. ಯಾವುದೂ ನನ್ನ ನಿಯಂತ್ರಣದಲ್ಲಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ ಮತ್ತು ಎಲ್ಲವೂ ನನ್ನ ನಿಯಂತ್ರಣದಲ್ಲಿದೆಯೆಂದು ಕೂಡಾ ನೀವು ಹೇಳಲು ಸಾಧ್ಯವಿಲ್ಲ, ಎರಡೂ ಸರಿಯಲ್ಲ.

ಉದಾಹರಣೆಗೆ, ಮಳೆ ಬರುವುದೇ ಅಥವಾ ಇಲ್ಲವೇ ಎಂಬುದರ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಹಾಗಿದ್ದರೂ, ಮಳೆ ಬರುತ್ತಿದ್ದರೆ, ಒದ್ದೆಯಾಗಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಮಳೆ ಬರುವುದು ವಿಧಿಯಾಗಿದೆ, ಆದರೆ ಒದ್ದೆಯಾಗದಿರುವುದು ನಿಮ್ಮ ಸ್ವತಂತ್ರ ಇಚ್ಛೆಯಾಗಿದೆ. ಒಂದು ರೈನ್‌ಕೋಟ್ ಹಾಕಿಕೊಳ್ಳಿ ಅಥವಾ ಒಂದು ಛತ್ರಿ ಹಿಡಿದುಕೊಳ್ಳಿ ಮತ್ತು ನೀವು ಒದ್ದೆಯಾಗದೇ ಇರುತ್ತೀರಿ.

ಪ್ರಶ್ನೆ: ಪ್ರೀತಿಯ ಗುರುದೇವ, ಜ್ಞಾನೋದಯವನ್ನು ಹೊಂದುವ ಬಯಕೆಯು, ಜ್ಞಾನೋದಯಕ್ಕಿರುವ ಒಂದು ಅಡ್ಡಿಯೇ? ಜ್ಞಾನೋದಯವನ್ನು ಹೊಂದುವ ಬಯಕೆಯು ಒಂದು ಕೆಟ್ಟ ವಿಷಯವೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅದೊಂದು ಅಡ್ಡಿಯಾಗಬೇಕೆಂದೇನೂ ಇಲ್ಲ. ಅದರ ಬಗ್ಗೆಯಿರುವ ಜ್ವರತೆಯು ಒಂದು ಅಡ್ಡಿಯಾಗಬಲ್ಲದು, ಆದರೆ ಬಯಕೆ ಪರವಾಗಿಲ್ಲ. ಅದು ಈಗಾಗಲೇ ಅಲ್ಲಿದ್ದರೆ, ಆಗ ನೀನೇನು ಮಾಡುವುದು?