ಭಾನುವಾರ, ಜುಲೈ 21, 2013

ಎಚ್ಚೆತ್ತುಕೊಳ್ಳಿ!

ಮಾಂಟ್ರಿಯಾಲ್, ಕೆನಡ
೨೧ ಜುಲೈ ೨೦೧೩

ಪ್ರಶ್ನೆ: ಗುರುದೇವ, ಈ ಜನ್ಮದಲ್ಲಿ ನೀವು ನಮ್ಮನ್ನು ಹುಡುಕಿದಿರಿ. ಆದರೆ ನೀವು ಈ ಭೂಮಿಗೆ ಬಹಳ ವಿರಳವಾಗಿ ಭೇಟಿ ನೀಡುವ ಕಾರಣ, ಅಥವಾ ಹಾಗೆಂದು ನಾನು ಯೋಚಿಸುವ ಕಾರಣ, ನಾವು ಮತ್ತೆ ಭೇಟಿಯಾಗುವರೆಗೆ ನಮಗೆಲ್ಲಾ ಏನು ಸಂಭವಿಸುತ್ತದೆ? ಹೇಗೋ ನಾವು ಹಿಂದಕ್ಕೆ ಜಾರುತ್ತೇವೆಯೇ? ನಾವು ಜ್ಞಾನದಲ್ಲಿ ಬೆಳೆಯುವುದು ಮುಂದುವರಿಯುವುದೇ?

ಶ್ರೀ ಶ್ರೀ ರವಿ ಶಂಕರ್: ಹಿಂದಕ್ಕೆ ಜಾರುವುದಿಲ್ಲ!

ಇದನ್ನೇ ನಾವು ಗುರು ಪೂರ್ಣಿಮೆಯಂದು ಆಚರಿಸುವುದು; ನಾವು ಹಿಂದೆ ತಿರುಗಿ, ನಾವು ಎಷ್ಟು ಬೆಳೆದಿರುವೆವು ಮತ್ತು ಹೇಗೆ ನಾವು ಪೂರ್ತಿ ಹಿಂದಕ್ಕೆ ಜಾರಲು ಸಾಧ್ಯವಿಲ್ಲವೆಂಬುದನ್ನು ನೋಡುತ್ತೇವೆ.

ನೀವು ೧೦ ಹೆಜ್ಜೆಗಳಷ್ಟು ಮುಂದಕ್ಕೆ ನಡೆದಿದ್ದರೆ, ನೀವು ೮ ಹೆಜ್ಜೆಗಳಷ್ಟು ಹಿಂದಕ್ಕೆ ಹೋಗಿರುವುದಾಗಿ ತೋರಲೂಬಹುದು, ಆದರೆ ಎಲ್ಲಾ ೧೦ ಹೆಜ್ಜೆಗಳಷ್ಟಲ್ಲ. ಮೇಲಾಗಿ, ನಿಮಗೆ ಯಾವುದು ಎಂಟು ಹೆಜ್ಜೆಗಳೆಂದು ಕಾಣಿಸುವುದೋ, ಅದು ನಾಲ್ಕೈದು ಅಥವಾ ಮೂರ್ನಾಲ್ಕು ಹೆಜ್ಜೆಗಳಾಗಿರಲೂಬಹುದು. ಆದರೆ ಪರವಾಗಿಲ್ಲ; ನಾನು ಚಿಂತಿಸುವುದಿಲ್ಲ, ನೀವು ಕೂಡಾ ಚಿಂತಿಸಬೇಕಾಗಿಲ್ಲ!

ಒಂದು ವಿಷಯವನ್ನು ನಾವು ನಿರ್ಧರಿಸಬೇಕು, "ಕೆಲಸ ಆಗುತ್ತಿರುವುದಾದರೂ ಅಥವಾ ಇಲ್ಲವಾದರೂ, ಕಡಿಮೆಪಕ್ಷ ನಾನು ನನ್ನ ಸಂತೋಷವನ್ನು ಕಳೆದುಕೊಳ್ಳದೇ ಇರುತ್ತೇನೆ! ನಾನು ಸಂತೋಷವಾಗಿರುತ್ತೇನೆ!"

ನೀವು ದುಃಖಿತರಾಗಿರುವುದರಿಂದ  ವಿಷಯಗಳು ಬದಲಾಗುವುದಿಲ್ಲ, ಖಂಡಿತವಾಗಿಯೂ. ನೀವೊಂದು ಯೋಜನೆ ಅಥವಾ ಯಾವುದೋ ಕೆಲಸವನ್ನು ಆರಂಭಿಸಿದಿರಿ, ಅದು ಆಗಲಿಲ್ಲ. ಕೇವಲ ಅದು ಆಗದೇ ಇರುವ ಕಾರಣಕ್ಕಾಗಿ ಕಡಿಮೆಪಕ್ಷ ನಿಮ್ಮಲ್ಲಿ ಈಗಾಗಲೇ ಏನಿದೆಯೋ ಅದನ್ನು ಕಳೆದುಕೊಳ್ಳಬೇಡಿ. ನಿಮ್ಮಲ್ಲಿ ಸ್ವಲ್ಪ ಸಂತೋಷವಿದೆ, ಇದನ್ನು ಅದಕ್ಕಾಗಿ ಕಳೆದುಕೊಳ್ಳಬೇಡಿ! ನೀವಿದನ್ನು ನೆನಪಿನಲ್ಲಿಟ್ಟುಕೊಂಡರೆ ಅಷ್ಟು ಸಾಕು!

ಸಾಧನೆ ಎಂಬುದರ ಅರ್ಥವೇನೆಂಬುದು ನಿಮಗೆ ತಿಳಿದಿದೆಯೇ? ಸಾಧನೆಯೆಂದರೆ, "ನಾನು ದೇವರಿಗೆ ಹತ್ತಿರವಾಗಿರುವೆನು. ನಾನು ಸಾರ್ವತ್ರಿಕ ಚೇತನಕ್ಕೆ ಹತ್ತಿರವಾಗಿರುವೆನು. ದೊಡ್ಡ ಮನಸ್ಸಿನೊಂದಿಗೆ ನನಗೊಂದು ಸಂಬಂಧವಿದೆ" ಎಂಬ ಭಾವನೆಯನ್ನು ಹೊಂದಿರುವುದು! ಕೇವಲ ಈ ಸಂಬಂಧ ಸಾಕು. ನೀವಿದನ್ನು ನೆನಪಿನಲ್ಲಿಟ್ಟುಕೊಂಡರೆ, ನೀವು ನಿಮ್ಮ ಸಾಧನೆಯಲ್ಲಿ ಯಶಸ್ವಿಯಾಗಿರುವಿರೆಂದು ಅರ್ಥ; ನೀವು ಹೆಚ್ಚಿಗೆ ಬೇರೇನನ್ನೂ ಮಾಡಬೇಕಾಗಿಲ್ಲ!

ನೀವು ನಿಮ್ಮ ಧ್ಯಾನವನ್ನು ಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ; ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ನಿಮಗೆ ಒಳ್ಳೆಯ ಮಾನಸಿಕ ಮತ್ತು ಶಾರೀರಿಕ ಯೋಗಕ್ಷೇಮವನ್ನು ನೀಡುವ ಧ್ಯಾನ, ಪ್ರಾಣಾಯಾಮ ಮತ್ತು ಎಲ್ಲವನ್ನೂ ಮಾಡಿ. ಆದರೆ ಆಧ್ಯಾತ್ಮಿಕವಾಗಿ, ನೀವದನ್ನು ಸುಮ್ಮನೇ ನಿಮ್ಮ ಕಡೆಯಿಂದ ತಿಳಿದುಕೊಳ್ಳಬೇಕು ಮತ್ತು ಅನುಭವಿಸಬೇಕು.

 "ವಿಶಾಲವಾದ ಮನಸ್ಸು ನನ್ನದಾಗಿದೆ, ನಾನು ದೇವರಿಗೆ ಸಂಬಂಧಪಟ್ಟವನು/ಳು, ಗುರುಸಂಪರ್ಕ ನನ್ನದಾಗಿದೆ. ಅಂತಿರ್ಪ ಸ್ಥಿತಿಗಳೆಲ್ಲವೂ ಒಂದೇ. ನನ್ನ ಸಹಜತೆ ನನಗೆ ತೃಪ್ತಿ ನೀಡಿದೆ" ಎಂದು ನೀವು ಭಾವಿಸಿಕೊಳ್ಳಬೇಕು.

ಕೆಲವು ವಿಷಯಗಳನ್ನು ಮನಸ್ಸು ಒಪ್ಪುತ್ತದೆ ಮತ್ತು ಕೆಲವು ವಿಷಯಗಳನ್ನು ಅದು ಒಪ್ಪುವುದಿಲ್ಲ. ಕೆಲವೊಮ್ಮೆ ನಿಮ್ಮ ಬುದ್ಧಿಗೆ, "ನಾನು ಸರಿ" ಎಂದು ಅನ್ನಿಸುತ್ತದೆ. ಅದಾಗಿರಬಹುದು, ಪರವಾಗಿಲ್ಲ, ಅದೆಲ್ಲವನ್ನೂ ನೀವು ಒಂದು ಬದಿಗೆ ಹಾಕಿ. ಕಾರ್ಯದ ಸೀಮಿತ ಕ್ಷೇತ್ರದಲ್ಲಿ, ಯಾವತ್ತೂ ಕೆಲವು ಕಾರ್ಯಗಳು ಇತರ ಕಾರ್ಯಗಳಿಗಿಂತ ಉತ್ತಮವಾಗಿರುತ್ತವೆ. ಕೆಲವೊಮ್ಮೆ ಅದು ಉತ್ತಮವೆಂದು ತೋರುತ್ತದೆ ಮತ್ತು ಕೆಲವೊಮ್ಮೆ ಅದು ಉತ್ತಮವಾಗಿರುತ್ತದೆ. ಎಲ್ಲಾ ಕಾರ್ಯಗಳಲ್ಲೂ ದೋಷಗಳು, ನ್ಯೂನತೆಗಳಿವೆ ಮತ್ತು ಎಲ್ಲಾ ಕಾರ್ಯಗಳಲ್ಲೂ ಲಾಭಗಳಿವೆ. ಪರಿಪೂರ್ಣವಾಗಿರಬಲ್ಲ ಒಂದೇ ಒಂದು ಕಾರ್ಯವೂ ಇಲ್ಲ. ಅದು ಹಾಗೆ ತೋರುತ್ತದೆ, ಆದರೆ ಯಾವುದು ತೋರುವುದೋ ಮತ್ತು ಯಾವುದು ಇರುವುದೋ, ಇವುಗಳು ಬಹಳ ವಿಭಿನ್ನವಾಗಿವೆ! ನಿಮ್ಮ ಪ್ರಧಾನ ಗುರಿಯೆಂದರೆ, ಜ್ಞಾನವನ್ನು ಇಟ್ಟುಕೊಳ್ಳುವುದು ಮತ್ತು ಅದನ್ನು ಊರುವುದು. ಆದುದರಿಂದ, ಆನಂದವನ್ನು ಕಳೆದುಕೊಳ್ಳಬೇಡಿ!

ಅದನ್ನು ಹೇಳುವುದು ಮಾಡುವುದಕ್ಕಿಂತ ಸುಲಭವೆಂಬುದು ನನಗೆ ಗೊತ್ತು. "ಓ ಗುರುದೇವ, ನಿಮಗೆ ಇದು ಬಹಳ ಸುಲಭ, ನನಗೆ ಇದು ಸುಲಭವಲ್ಲ, ಇದು ಕಷ್ಟ" ಎಂದು ನೀವು ಹೇಳಲೂಬಹುದು. ನನಗದು ಬಹಳ ಚೆನ್ನಾಗಿ ಗೊತ್ತಿದೆ, ಆದರೂ ಕಡಿಮೆಪಕ್ಷ ಸಂತೋಷವನ್ನು ಇಟ್ಟುಕೊಳ್ಳಿ ಎಂದು ನಿಮಗೆ ಹೇಳಲಿರುವ ಪ್ರಲೋಭನೆಯನ್ನು ತಡೆಯಲು ನನಗೆ ಸಾಧ್ಯವಾಗುವುದಿಲ್ಲ!

ನೀವು ನಿಮ್ಮ ಸಂಬಂಧವನ್ನು ಕಳೆದುಕೊಂಡಿರಲೂಬಹುದು, ಆದರೆ ನಿಮ್ಮ ಮುಗುಳ್ನಗೆಯನ್ನು ಕಳೆದುಕೊಳ್ಳಬೇಡಿ! ಹೌದು, ನೀವು ಒಂದು ಸಂಬಂಧವನ್ನು ಕಳೆದುಕೊಂಡಿರಿ, ಪರವಾಗಿಲ್ಲ, ಅಲ್ಲಿ ಏಳು ಬಿಲಿಯನ್ ಜನರಿದ್ದಾರೆ! ಬೇರೊಬ್ಬರು ಬಂದು ನಿಮ್ಮನ್ನು ಕಂಡುಕೊಳ್ಳುವರು. ನೀವು ಮುಗುಳ್ನಗೆಯನ್ನಿರಿಸಿಕೊಂಡರೆ, ಆಗ ಬೇರೊಬ್ಬರು ನಿಮ್ಮ ಜೀವನದಲ್ಲಿ ಬರುವರು. ಇಲ್ಲದಿದ್ದರೆ, ಯಾರು ಬಂದು ಒಬ್ಬ ಖಿನ್ನ ವ್ಯಕ್ತಿಯೊಂದಿಗೆ ಗೆಳೆತನವನ್ನು ಮಾಡುತ್ತಾರೆ? ನೀವು ಖಿನ್ನರಾಗಿದ್ದರೆ ಅಥವಾ ಖಿನ್ನರಾದಂತೆ ಕಾಣಿಸಿದರೆ, ಆಗ ನಿಮಗೆ ಇನ್ನೊಬ್ಬ ಸ್ನೇಹಿತ ಅಥವಾ ಸ್ನೇಹಿತೆ ಸಿಗಲಾರರು! ಯಾರೂ ನಿಮ್ಮ ಕಡೆಗೆ ನೋಡರು ಅಥವಾ ಒಂದು ಉದ್ದನೆ ಮುಖವನ್ನು ಹೊಂದಿದ ವ್ಯಕ್ತಿಯಿಂದ ಮೋಹಿತರಾಗರು.

ನೀವೊಬ್ಬ ಸಂಗಾತಿಯನ್ನು ಹುಡುಕುತ್ತಿರುವಾಗ ನಿಮಗೆ ಬೇಕಾಗಿರುವುದೆಂದರೆ ಉತ್ಸಾಹ ಮತ್ತು ಮುಗುಳ್ನಗೆಗಳು.
ಈಗ, ನಿಮಗೊಂದು ನೌಕರಿಯಿಲ್ಲದೇ ಇರಲೂಬಹುದು. ಆದರೂ, ಅದು ಪರವಾಗಿಲ್ಲ. ಒಂದು ಉದ್ದನೆಯ ಮುಖವನ್ನು ಹೊಂದಿದ ಹಾಗೂ ಅಷ್ಟೊಂದು ಖಿನ್ನರಾದಂತೆ ಕಾಣಿಸುವವರೊಬ್ಬರಿಗೆ ಯಾರು ಒಂದು ನೌಕರಿಯನ್ನು ಕೊಡಲು ಬಯಸುವರು? ಜೀವನವು ಮುಂದುವರಿಯುವುದು. ನೀವು ಹಸಿದು ಸಾಯುವುದಿಲ್ಲ. ಎಲ್ಲವೂ ನಿಮ್ಮ ಬಳಿಗೆ ಬರುವುದು! ನೀವು ದೊಡ್ಡ ಮನಸ್ಸಿನೊಂದಿಗೆ, ವಿಶ್ವವ್ಯಾಪಿ ಚೇತನದೊಂದಿಗೆ ಸಂಬಂಧ ಜೋಡಿರುವಿರಿ. ನೀವು ಆಧ್ಯಾತ್ಮಿಕ ಪಥದಲ್ಲಿರುವಿರಿ.

"ಏನೇ ಬರಲಿ, ನಾನು ನಡೆಯುವೆನು! ನನ್ನ ಮಡಿಲಿಗೊಂದು ನೌಕರಿ ಬೀಳುವುದು. ಆದರೂ ಅದಕ್ಕಾಗಿ ನಾನು ಹುಡುಕುತ್ತಾ ಇರಬೇಕು!" ನೀವು ಹೀಗೆ ಮಾಡಿದರೆ, ಆಗ ಆರ್ಟ್ ಆಫ್ ಲಿವಿಂಗ್ ತನ್ನ ಧ್ಯೇಯದಲ್ಲಿ ಯಶಸ್ವಿಯಾಯಿತೆಂದಾಯಿತು!

ಮನೆಯಲ್ಲಿ ಯಾರೊಂದಿಗೋ ನಿಮಗೆ ಒಂದು ವಾದ ಅಥವಾ ಜಗಳವಾಯಿತೆಂದು ಇಟ್ಟುಕೊಳ್ಳೋಣ. ಆಗ ಮತ್ತೆ ಮುಗುಳ್ನಗಲು ತುಂಬಾ ಸಮಯ ತೆಗೆದುಕೊಳ್ಳಬೇಡಿ. ನಿಮ್ಮ ಜಗಳವು ಸೆಲ್ ಫೋನುಗಳಲ್ಲಿರುವ ಪ್ರಕ್ರಿಯೆಗಳಲ್ಲೊಂದರಂತೆ; ಅಂದರೆ ಆಡಿಯೋ, ವಿಡಿಯೋ, ಕ್ಯಾಮೆರಾಗಳಂತೆ ಇರಬೇಕು. ನಿಮ್ಮ ಸೆಲ್ ಫೋನ್ ಕ್ಯಾಮೆರಾ ಪ್ರಕ್ರಿಯೆಯಲ್ಲಿ ಬಹಳ ಹೊತ್ತು ಸಿಕ್ಕಿಬಿದ್ದಿರಲು ಸಾಧ್ಯವಿಲ್ಲ, ಅದನ್ನು ವೇಗವಾಗಿ ಬದಲಾಯಿಸಲು ಸಾಧ್ಯವಾಗಬೇಕು, ಸರಿಯಾ?

ಅದೇ ರೀತಿಯಲ್ಲಿ, ಮನಸ್ಸು ಜಗಳದ ಪ್ರಕ್ರಿಯೆಯಲ್ಲಿರಬಹುದು, ಆದರೆ ಮುಂದಿನ ನಿಮಿಷ, ಅದನ್ನು ಬದಲಾಯಿಸಿ!
ನಿಮ್ಮಲ್ಲಿ ಕೆಲವರಿಗೆ, ಇದೊಂದು ಎಂತಹ ದೊಡ್ಡ ಸಮಾಧಾನ - ಗುರುದೇವರು ಜಗಳ ಮಾಡಲು ಅನುಮತಿಯನ್ನು ನೀಡಿರುವರು! ಎದೆಯಿಂದ ಏನೋ ದೂರವಾಯಿತು!

ಚಿಂತಿಸಬೇಡಿ, ನೀವು ಜಗಳ ಮಾಡಲೇಬೇಕಾದರೆ, ಆಗ ಜಗಳ ಮಾಡಿ, ಆದರೆ ಹಿಂತಿರುಗಿ ಬನ್ನಿ ಮತ್ತು ಪುನಃ ಮುಗುಳ್ನಗಿ. ಬದಲಾಯಿಸಿ! ಅದನ್ನು ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ! ಎಲ್ಲಾ ಸಮಯವೂ ಹೌದೆನ್ನುತ್ತಾ, ನೀವು ತರಕಾರಿಗಳಂತೆ ಆಗಬೇಕೆಂದು ಮತ್ತು ದುರ್ಬಲರಾಗಿರಬೇಕೆಂದು ನಾನು ಬಯಸುವುದಿಲ್ಲ.

ನೀವು ಬಲಶಾಲಿಗಳು ಮತ್ತು ಮುಗುಳ್ನಗೆಯಿಂದಿರುವವರೂ, ಬಲಶಾಲಿಗಳು ಮತ್ತು ಸೂಕ್ಷ್ಮವಾಗಿರುವವರೂ, ವಿವೇಚನೆಯುಳ್ಳವರು ಮತ್ತು ಸಂವೇದನಾಶೀಲರೂ, ಎಲ್ಲವೂ ಒಂದೇ ಸಮಯದಲ್ಲಿ ಆಗಿರಬೇಕೆಂದು ನಾನು ಬಯಸುತ್ತೇನೆ.

ಬಹಳ ವಿವೇಚನಾಶೀಲರಾದ ಜನರಿದ್ದಾರೆ, ಆದರೂ ಅವರಿಗೆ ಅವಿವೇಕತನವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ನಿಮಗೆ ಅವಿವೇಕತನವನ್ನು ಸಹಿಸಲು ಸಾಧ್ಯವಾಗದಿದ್ದರೆ, ಆಗ ನೀವು ಈ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತೀರಿ, ಸರಿಯಾ? ಆದರೂ, ಸಂವೇದನಾಶೀಲರಾಗಿರುವ ಆದರೆ ವಿವೇಚನಾಶೀಲರಲ್ಲದ ಜನರಿದ್ದಾರೆ. ಅವರು ಎಷ್ಟೊಂದು ಸಂವೇದನಾಶೀಲರೆಂದರೆ, ಅವರು ಮಾತನಾಡುತ್ತಿರುವಾಗ ಯಾರಾದರೂ ಆಕಳಿಸಿದರೆ, "ನೋಡಿ, ನಾನು ಅವರಿಗೆ ಹೇಳುತ್ತಿರುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ" ಎಂದು ಅವರು ಹೇಳುವರು!

ಒಂದು ಕಡೆಯಲ್ಲಿ, ಆಕಳಿಕೆಯು ಒಂದು ವಿವಾಹ ವಿಚ್ಛೇದನದ ಕಾರಣವಾಯಿತೆಂಬುದು ನಿಮಗೆ ಗೊತ್ತಿದೆಯೇ?

ಪತ್ನಿಯೆಂದಳು, "ನಾನು ನನ್ನ ಗಂಡನೊಂದಿಗೆ ಮಾತನಾಡುವಾಗಲೆಲ್ಲಾ ಅವರು ಆಕಳಿಸಲು ತೊಡಗುತ್ತಾರೆ. ಅವರಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಅದು ನನ್ನ ವ್ಯಕ್ತಿತ್ವಕ್ಕೊಂದು ಅವಮಾನವಾಗಿದೆ. ಪ್ರತಿಸಲವೂ ನಾನು ಅವರೊಂದಿಗೆ ಮಾತನಾಡುವಾಗ, ಅವರು ಆಕಳಿಸಲು ತೊಡಗುತ್ತಾರೆ."

ಹೀಗೆ, ಬಹಳ ಸಂವೇದನಾಶೀಲರಾಗಿರುವ ಜನರು ವಿವೇಕಿಗಳಾಗಿರುವುದಿಲ್ಲ. ನೀವು ವಿವೇಕಿಗಳು ಮತ್ತು ಸಂವೇದನಾಶೀಲರು ಎರಡೂ ಆಗಿರಬೇಕೆಂದು ನಾನು ಬಯಸುತ್ತೇನೆ.

ಈಗ, ಹಿಂದೆ ಹೋಗಿ, "ಓ, ನಾನು ವಿವೇಕಿಯಾಗಿರುವೆನು ಮತ್ತು ಸಂವೇದನಾಶೀಲನಾಗಿಲ್ಲ" ಅಥವಾ "ನಾನು ಸಂವೇದನಾಶೀಲನಾಗಿರುವೆನು ಮತ್ತು ವಿವೇಕಿಯಲ್ಲ" ಎಂದು ಹೇಳಬೇಡಿ.
    
ಆ ಪಯಣದಲ್ಲಿ ಮತ್ತೆ ಹೋಗಬೇಡಿ. ಸುಮ್ಮನೇ ಅದನ್ನು ಮನಸ್ಸಿನಲ್ಲೆಲ್ಲೋ ಇಟ್ಟುಕೊಳ್ಳಿ; ಅದು ಅಲ್ಲಿ ಉಳಿಯುತ್ತದೆ.
ಆತ್ಮ-ಜ್ಞಾನವನ್ನು ಹೇಗೆ ಪಡೆಯಲಾಗುತ್ತದೆ? ಸಂಸ್ಕೃತದಲ್ಲಿ ಇದು ಪ್ರತ್ಯಭಿಜ್ಞ ಎಂದು ಕರೆಯಲ್ಪಡುತ್ತದೆ (ಇದು ಎಷ್ಟೊಂದು ಸುಂದರವಾದ ಶಬ್ದವೆಂದರೆ, ಬೇರೆ ಯಾವುದೇ ಭಾಷೆಯಲ್ಲೂ ಇದಕ್ಕೆ ಸಮಾನವಾದ ಶಬ್ದವಿಲ್ಲ).

ಪ್ರತ್ಯಭಿಜ್ಞ ಎಂದರೆ ಗುರುತಿಸುವುದು. ಪ್ರತ್ಯಭಿಜ್ಞ ಹೃದಯಂ ಎಂದರೆ, ಹೃದಯವು ಆತ್ಮವನ್ನು ಗುರುತಿಸುವಿಕೆ. ಈ ಎಲ್ಲಾ ಜ್ಞಾನವಿರುವುದು ಅದರ ಬಗ್ಗೆಯೇ; ಈ ಸಂತುಲನ, ಈ ಧ್ಯಾನ, ನಾವು ಮಾತನಾಡಿದ ಮೂರು ವಿಷಯಗಳು; ಅಂದರೆ ಅನುರಾಗ, ವೈರಾಗ್ಯ ಮತ್ತು ಸಹಾನುಭೂತಿ. ಜ್ಞಾನವು ಬರುವುದು ಮಾಡುವುದರಿಂದಲ್ಲ, ಕೇವಲ ಗುರುತಿಸುವುದರಿಂದ.

ಉದಾಹರಣೆಗೆ, ಜನರು ಸಾಮಾನ್ಯವಾಗಿ ತಮ್ಮ ಕನ್ನಡಕಗಳನ್ನು ತಮ್ಮ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ ಮತ್ತು ನಂತರ ಅದಕ್ಕಾಗಿ ಸುತ್ತಲೂ ಹುಡುಕಲು ತೊಡಗುತ್ತಾರೆ. ಒಬ್ಬರು ಅವರಿಗೆ, "ಏ, ಅದು ನಿನ್ನ ತಲೆಯ ಮೇಲಿದೆ" ಎಂದು ಹೇಳುತ್ತಾರೆ!

ಆಗ ಅವರು, "ಓ, ಹೌದು" ಎಂದು ಹೇಳುತ್ತಾರೆ!

ಹಾಗಾಗಿ, ಜ್ಞಾನವು ಕೂಡಲೇ ತನ್ನ ಫಲವನ್ನು ನೀಡುತ್ತದೆ. ನೀವೇನೂ ಮಾಡಬೇಕಾಗಿಲ್ಲ; ನಡುವೆ ಯಾವುದೇ ಕರ್ಮವಿಲ್ಲ, ನಡುವೆ ಯಾವುದೇ ಕೃತ್ಯವಿಲ್ಲ.

ನೀವು ಕನ್ನಡಕವನ್ನು ಹುಡುಕುತ್ತಿದ್ದಿರಿ ಮತ್ತು ಅದು ಅಲ್ಲಿಯೇ ಇದೆಯೆಂಬುದು ನಿಮಗೆ ಫಕ್ಕನೇ ಅರಿವಾಯಿತು. ಹೀಗೆ, ನಿಮ್ಮ ಕನ್ನಡಕದ ಜ್ಞಾನವು ಕನ್ನಡಕದೊಂದಿಗೆ ಬಂತು. ನೀವದನ್ನು ಪಡೆದಿರಿ ಯಾಕೆಂದರೆ, ನಿಮ್ಮಲ್ಲದು ಈಗಾಗಲೇ ಇತ್ತು. ಜ್ಞಾನ ಮತ್ತು ಅದನ್ನು ಪಡೆಯುವುದರ  ನಡುವೆ ಯಾವುದೇ ದೂರವಿಲ್ಲ.

ಇದನ್ನು ನಾನು ಇನ್ನೂ ಹೆಚ್ಚು ಸ್ಪಷ್ಟ ಪಡಿಸುತ್ತೇನೆ. ನಿಮಗೆ ಆಪ್ಪಲ್ ಪೈಯ ಅರಿವಿದೆ ಎಂದು ಇಟ್ಟುಕೊಳ್ಳೋಣ. ಆಪ್ಪಲ್ ಪೈಯ ಬಗ್ಗೆ ನಿಮ್ಮ ಅರಿವು ಮತ್ತು ಅದನ್ನು ಪಡೆಯುವುದರ ಮಧ್ಯೆ ಒಂದು ದೂರವಿದೆ; ಅಂದರೆ, ಅದನ್ನು ಪಡೆಯುವುದು ಮತ್ತು ತಿನ್ನುವುದು.

ಹೀಗಿದ್ದರೂ, ನಿಮ್ಮ ಹುಬ್ಬುಗಳ ಮೇಲೆ ಕನ್ನಡಕ ಕೂತಿದೆ ಎಂಬುದನ್ನು ತಿಳಿಯುವಲ್ಲಿ, ಆ ಅರಿವೇ ಫಲವಾಗಿತ್ತು. ಆ ಅರಿವು ಕೂಡಲೇ ನಿಮಗೆ ಫಲಿತಾಂಶವನ್ನು ಕೂಡಾ ನೀಡಿತು. ಮಧ್ಯೆ ಯಾವುದೇ ಕೃತ್ಯವಿರಲಿಲ್ಲ.

ಗುರು ವಾಣಿ, ಜ್ಞಾನದ ಮಾತುಗಳು ಎಂದರೆ, ನೀವು ಮಾತುಗಳನ್ನು (ಜ್ಞಾನ) ಕೇಳಿಸಿಕೊಳ್ಳುತ್ತೀರಿ ಮತ್ತು ಕೂಡಲೇ ನೀವದನ್ನು ಪಡೆಯುತ್ತೀರಿ. ಅದರ ಬಗ್ಗೆ ನೀವು ಏನನ್ನಾದರೂ ಮಾಡಬೇಕಾಗಿಲ್ಲ.

ನೋಡಿ, ನೀವು ಸುಂದರವಾಗಿದ್ದೀರಿ; ನೀವು ಸುಂದರವಾಗಿರುವಿರೆಂಬುದನ್ನು ನೀವು ತಿಳಿಯಲು ನೀವೇನೂ ಮಾಡಬೇಕಾಗಿಲ್ಲ, ತಿಳಿಯಿತೇ?

ಇಲ್ಲಿಯವರೆಗೆ, ನಾನು ನಿಮಗೆ ಇವೆಲ್ಲವನ್ನೂ ಮಾಡಲು ಹೇಳುತ್ತಿದ್ದೆ; ಪ್ರಾಣಾಯಾಮ, ಸತ್ಸಂಗ, ಭಜನೆ ಮಾಡಿ, ಭಕ್ತಿಯಿರಲಿ ಎಂದು. ಈಗ ನಾನು ನಿಮಗೆ ಸಂಪೂರ್ಣವಾಗಿ ವಿಭಿನ್ನವಾದುದೇನನ್ನೋ ಹೇಳುತ್ತಿದ್ದೇನೆ! ಏನು? ಸುಮ್ಮನೇ ಎಚ್ಚೆತ್ತುಕೊಳ್ಳಿ!
ನೀವು ಹೇಗೆ ಎಚ್ಚೆತ್ತುಕೊಳ್ಳುವಿರಿ? ಇದೊಂದು ಪ್ರಶ್ನೆಯಲ್ಲ. ನೀವು ನಾನು ಹೇಳುವುದನ್ನು ಕೇಳಿಸಿಕೊಂಡಿರಿ, ನೀವು ಈಗಾಗಲೇ ಎಚ್ಚೆತ್ತುಕೊಂಡಿರುವಿರಿ!

ಒಬ್ಬರು ನಿದ್ರಿಸುತ್ತಿದ್ದಾರೆ ಮತ್ತು ನೀವು, "ಏ, ಬಾ ಏಳು" ಎಂದು ಹೇಳುತ್ತೀರಿ. ಅವರದನ್ನು ಕೇಳಿಸಿಕೊಂಡಾಗ, ಅವರು ಅದಾಗಲೇ ಎಚ್ಚರವಾಗಿರುತ್ತಾರೆ, ಸರಿಯಾ? ಅದುವೇ ಇದು, ಕೂಡಲೇ! ಸಿದ್ಧಿ, ಅಂದರೆ ಅದನ್ನು ಪಡೆಯುವುದು ಮತ್ತು ಅದನ್ನು ತಿಳಿಯುವುದರ ನಡುವೆ ಯಾವುದೇ ಅಂತರವಿಲ್ಲ. ಅಷ್ಟೇ!

ಈಗ ನೋಡಿ, ಅದು ನಿಮಗೆ ಒಳಗೆ ಎಷ್ಟೊಂದು ದೊಡ್ಡ ಸಮಾಧಾನವನ್ನು ಕೊಡುತ್ತದೆ! ಫಕ್ಕನೇ ನೀವು, "ನಾನು ಏನನ್ನೂ ಮಾಡಬೇಕಾಗಿಲ್ಲ" ಎಂದು ಯೋಚಿಸುತ್ತೀರಿ.

ಯಾರೋ ಒಬ್ಬರು ನೀವು ಸುಂದರವಾಗಿರುವಿರೆಂದು ಹೇಳಿದ್ದಾರೆ, ಈಗ ನೀವು ಯಾವುದೇ ಮೇಕಪ್ ಮಾಡಬೇಕಾಗಿಲ್ಲ, ನೀವು ಸುಂದರವಾಗಿರುವಿರಿ; ನೀವು ಸುಮ್ಮನೇ ಅದನ್ನು ನಂಬಬೇಕು.

ಈಗ, ನೀವು ಮುಂದುವರಿಸುತ್ತಾ ಹೀಗೆಂದು ಹೇಳಬಹುದು, "ಇಲ್ಲ, ನಾನು ಸುಂದರವಾಗಿಲ್ಲ, ನೋಡಿ ನನ್ನ ಮೂಗು ಬಾಗಿದೆ, ನನ್ನ ಹುಬ್ಬುಗಳು ಚಿಕ್ಕದಾಗಿವೆ. ನಾನೊಂದು ಪೆಡಿಕ್ಯೂರ್ ಅಥವಾ ಮೆನಿಕ್ಯೂರ್‌ಗೆ ಹೋಗಬೇಕು. ನನ್ನ ಹುಬ್ಬುಗಳನ್ನು ತೆಗೆಯಬೇಕು ಮತ್ತು ಚೆನ್ನಾಗಿ ಕಾಣಿಸಲು ಏನಾದರೂ ಮಾಡಬೇಕು."

ನಾನು ಹೇಳುತ್ತೇನೆ, ’ಹೇ, ನೀನು ಸುಂದರವಾಗಿರುವೆ!" ಮುಗಿಯಿತು! ನೀವು ಹೋಗಿ ಆ ಪ್ಯಾಕ್ ಅಥವಾ ಫೌಂಡೇಶನ್ ಹಾಕಬೇಕಾಗಿಲ್ಲ!

ನೀವು ಸುಂದರವಾಗಿಲ್ಲವೆಂದು ಮತ್ತು ನೀವು ಬ್ಯೂಟಿಶಿಯನ್ ಹತ್ತಿರ ಹೋಗಿ, ಫೌಂಡೇಶನ್ ಹಾಕಿ, ನಂತರ ಅದರ ಮೇಲೆ ನಿಮ್ಮ ಕೆನ್ನೆಯನ್ನು ಕೆಂಪಗಾಗಿಸಲು ಗುಲಾಬಿ ಬಣ್ಣವನ್ನು ಹಾಕಿ, ಇಲ್ಲಿ ಸ್ವಲ್ಪ ಹಸಿರು, ಅಲ್ಲಿ ನೀಲಿ ಹಾಗೂ ಕಣ್ಣುಗಳ ಮೇಲೆ ಏನೋ ಮಿನುಗುವುದನ್ನು ಹಾಕಿದರೆ ಮಾತ್ರ ನೀವು ಸುಂದರವಾಗಿ ಕಾಣಿಸುವಿರೆಂದು ನೀವು ಯೋಚಿಸುವುದಾದರೆ, ಆಗ ನಾನು ನಿಮಗೆ ಏನು ಹೇಳಲು ಸಾಧ್ಯ?

ಸರಿ, ಹಾಗೆ ಮಾಡಿ!

ನೋಡಿ, ಇದುವೇ ಜನರ ಮನಸ್ಸಿನಲ್ಲಿ ನಡೆಯುತ್ತಿರುವುದು. ಮಾಡುವುದರಲ್ಲಿನ ಅವರ ನಂಬಿಕೆಯು ಎಷ್ಟು ಬಲವಾಗಿದೆಯೆಂದರೆ, ಅವರು ಸುಂದರವಾಗಿರುವರೆಂದು ಯಾರಾದರೂ ಅವರಿಗೆ ಹೇಳಿದರೂ ಕೂಡಾ ಅದನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

"ಇಲ್ಲ, ಮೊದಲು ನಾನು ಹೋಗಿ ಕೂದಲು ಕತ್ತರಿಸಿಕೊಳ್ಳಬೇಕು, ನಂತರ ಟೈ ಧರಿಸಬೇಕು ಮತ್ತು ನಂತರ ಮತ್ತೆ ಸ್ವಲ್ಪ ಮಿನುಗುವ ವಸ್ತುಗಳನ್ನು ಹಾಕಿ ನಾನು ಚೆನ್ನಾಗಿ ಕಾಣಿಸಬೇಕು" ಎಂದು ಅವರು ಹೇಳುತ್ತಾರೆ.

ನೀವು ಅದನ್ನೆಲ್ಲಾ ಮಾಡಬಾರದೆಂದು ನಾನು ಹೇಳುತ್ತಿಲ್ಲ, ಅದು ಪರವಾಗಿಲ್ಲ. ನೀವು ಹೊರಗಿನಿಂದ ಚೆನ್ನಾಗಿಯೂ, ಮೃದುವಾಗಿಯೂ ಇರುವುದಾಗಿ ಅನ್ನಿಸುವಂತೆ ಮಾಡುವ ಉತ್ಪನ್ನಗಳನ್ನು ಬಳಸಲು ನೀವು ಇಚ್ಛಿಸುವುದಾದರೆ; ಒಳಗಡೆ ಕೂಡಾ ನೀವು ಬಹಳ ಮೃದುವಾಗಿಯೂ ಚೆನ್ನಾಗಿಯೂ ಇರುವಿರಿ ಎಂಬುದನ್ನು ನೆನಪಿಡಿ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

Focus on responsibility of this day, this moment