ಮಂಗಳವಾರ, ಜುಲೈ 30, 2013

ಧರ್ಮದಿಂದ ಆಧ್ಯಾತ್ಮದ ಕಡೆಗೆ

ಬಾಡ್ ಅಂತೋಗಸ್ಟ್, ಜರ್ಮನಿ
೩೦ ಜುಲೈ ೨೦೧೩

ಪ್ರಶ್ನೆ: ಧರ್ಮವು ನನ್ನ ಜೀವನದಲ್ಲಿ ಒಂದು ತಡೆಯಾಗಿದೆ. ನನಗೆ ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಪರವಾಗಿಲ್ಲ. ಧರ್ಮದಿಂದ ಆಧ್ಯಾತ್ಮದ ಕಡೆಗೆ ಸಾಗು. ನೀನೊಬ್ಬ ಆಧ್ಯಾತ್ಮಿಕ ಜೀವವಾಗಿರುವೆ ಮತ್ತು ಅಷ್ಟು ಸಾಕು. ಪ್ರತಿಯೊಂದು ಧರ್ಮವೂ ಕೆಲವು ಒಳ್ಳೆಯ ವಿಷಯಗಳನ್ನು ನೀಡುತ್ತದೆ. ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳಿಂದ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಮುಂದೆ ಸಾಗು. ನೀನು ಅದರೊಂದಿಗೆ ಸಿಕ್ಕಿಹಾಕಿಕೊಳ್ಳಬೇಕಾಗಿಲ್ಲ. ಚಿಂತಿಸಬೇಡ.

ನೀನು ಅನುಮತಿಸದೇ ಇದ್ದರೆ ಯಾವುದೂ ಒಂದು ತಡೆಯಾಗಲು ಸಾಧ್ಯವಿಲ್ಲ. ನೀನು, ನಿನ್ನದೇ ಆದ ಮನಸ್ಸು ಅದನ್ನೊಂದು ತಡೆಯನ್ನಾಗಿ ಮಾಡುವುದು. ಬಹುಶಃ ನೀನು ದೇವರ ವಿರುದ್ಧ ಪಾಪ ಮಾಡುತ್ತಿರುವೆಯೇನೋ ಎಂಬಂತಹ ಪಾಪಪ್ರಜ್ಞೆ ನಿನ್ನಲ್ಲಿರುವ ಕಾರಣದಿಂದ. ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ! ಸಂತೋಷವಾಗಿರುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ? ಪ್ರೇಮಮಯಿಯಾಗಿರುವುದು ಮತ್ತು ಪ್ರಪಂಚದಲ್ಲಿ ಒಳ್ಳೆಯದನ್ನು ಮಾಡುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ? ಸ್ಥಿರವಾಗುವುದು, ಶಾಂತವಾಗುವುದು ಮತ್ತು ಸಮರ್ಪಿತನಾಗಿರುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ?

ಜನರ ಮನಸ್ಸುಗಳೊಳಗೆ ತಪ್ಪಿತಸ್ಥ ಮನೋಭಾವ ಮತ್ತು ಪಾಪದ ಭಯಗಳನ್ನು ಪ್ರೇರಿತಗೊಳಿಸಲಾಗಿದೆ, "ಓ ಇದನ್ನು ಮಾಡಬೇಡ, ದೇವರು ನಿನಗೆ ಶಿಕ್ಷೆ ನೀಡುವನು." ಸಂಪೂರ್ಣ ಹತಾಶೆ ಮತ್ತು ಬಲಹೀನತೆಯ ಒಂದು ಭಾವವು ಬರುತ್ತದೆ.

ನಾನು ನಿಮಗೆ ಹೇಳುತ್ತೇನೆ ಕೇಳಿ, ನೀವೆಲ್ಲರೂ ವಜ್ರಗಳಂತೆ. ನೀವು ಆನಂದ ಮತ್ತು ಪ್ರೇಮಗಳ ಆಳವಾದ ಚೈತನ್ಯವಾಗಿರುವಿರಿ. ಯೋಗ ಮತ್ತು ಧ್ಯಾನಗಳನ್ನು ಮಾಡುವುದಕ್ಕಾಗಿ ದೇವರು ನಿಮ್ಮ ಮೇಲೆ ಕೋಪಗೊಳ್ಳನು. ಪೌರಾತ್ಯ ವಿಷಯಗಳು ಸೈತಾನಿಕವಾದವು, ದೇವರು ನಿಮ್ಮ ಮೇಲೆ ಕೋಪಗೊಳ್ಳುವನು ಎಂಬಂತಹ ಮಾತುಗಳನ್ನು ಹರಡುವ ಕೆಲವು ಜನರಿದ್ದಾರೆ. ಇದು ಬಹಳ ಮೂರ್ಖತನ!

ನಿನ್ನೆ ಒಬ್ಬನು ನನ್ನಲ್ಲಿ ಹೇಳುತ್ತಿದ್ದನು, "ಗುರುದೇವ, ನನ್ನ ಸಹಪಾಠಿ ಮತಪರಿವರ್ತನೆಯಾದನು. ಅವನನ್ನು ಬಾಪ್ಟೈಸ್ (ನಾಮಕರಣ) ಮಾಡಲಾಯಿತು. ಈಗ ಅವನು ನನ್ನ ಮನೆಗೆ ಬರುವಾಗ, ಅವನು ಪ್ರಸಾದವನ್ನು ಕೂಡಾ ತೆಗೆದುಕೊಳ್ಳುವುದಿಲ್ಲ. ದೇವಸ್ಥಾನದಲ್ಲಿ ಒಂದು ಮದುವೆಗೆ ನಾನು ಅವನನ್ನು ಕರೆದರೆ ಅವನು ನನ್ನೊಂದಿಗೆ ದೇವಸ್ಥಾನಕ್ಕೆ ಬರುವುದಿಲ್ಲ, ಯಾಕೆಂದರೆ ತಾನೊಂದು ದೇವಸ್ಥಾನಕ್ಕೆ ಹೋದರೆ ತಾನು ಕ್ರಿಸ್ತನಿಗೆ ವಂಚನೆ ಮಾಡಿದಂತಾಗುತ್ತದೆಯೆಂದು ಅವನಂದುಕೊಳ್ಳುತ್ತಾನೆ. ನೀಡಲಾಗುವ ಆಹರವನ್ನು ಅವನು ಮುಟ್ಟುವುದು ಕೂಡಾ ಇಲ್ಲ" ಎಂದು.

ಇದು ಬಹಳ ಮೂರ್ಖತನ. ಇದೆಲ್ಲಾ ತಪ್ಪಾದ ಮಾಹಿತಿ. ಹೀಗೆಯೇ ಅವರಲ್ಲಿ ಪಾಪಪ್ರಜ್ಞೆ ಮತ್ತು ಭಯಗಳನ್ನು ತರುವುದು. ಇದು ತಪ್ಪು.

ನಾವು ಪ್ರತಿಯೊಂದು ಧರ್ಮವನ್ನೂ ಗೌರವಿಸಬೇಕು, ನಾವು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬೇಕು. ದೇವರು ನಿಮ್ಮ ಮೇಲೆ ಕೋಪಗೊಳ್ಳನು ಮತ್ತು ನೀವು ನರಕಕ್ಕೆ ಹೋಗಲಾರಿರಿ ಎಂಬುದರ ಬಗ್ಗೆ ನಾನು ನಿಮಗೆ ಖಾತರಿ ನೀಡಬಲ್ಲೆನು. ಹಾಗಾಗಿ ಅಂತಹ ವಿಷಯಗಳನ್ನು ಪ್ರೇರೇಪಿಸುವ ಜನರ ಬಗ್ಗೆ ಚಿಂತಿಸಬೇಡಿ. ದೃಢ ವಿಶ್ವಾಸದೊಂದಿಗೆ ಸಾಗಿ.

ಪ್ರಶ್ನೆ: ಇದು ನನಗೆ ಸರಿಯಾದ ಜಾಗವೇ? ಸಾಮಾನ್ಯ ಜೀವನಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ನನ್ನನ್ನು ಪ್ರೀತಿಸುವ ನನ್ನ ಪತಿಗೆ ಕೂಡಾ ಆರ್ಟ್ ಆಫ್ ಲಿವಿಂಗ್‌ನಲ್ಲಿನ ನನ್ನ ಚಟುವಟಿಕೆಗಳನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ. ನನಗೆ ಹುಚ್ಚು ಹಿಡಿಯುತ್ತಿದೆಯೆಂದು ಅವರಿಗೆ ಭಯವಾಗಿದೆ!

ಶ್ರೀ ಶ್ರೀ ರವಿ ಶಂಕರ್: ವಿಷಯಗಳನ್ನು ಸಂತುಲನದಲ್ಲಿರಿಸಿಕೋ. ಯಾರನ್ನೂ ಹೆದರಿಸಬೇಡ. ನೀನು ಜೀವನವನ್ನು ಸಂತುಲನಗೊಳಿಸಬೇಕು. ಜನರು ಅರ್ಥಮಾಡಿಕೊಳ್ಳುವಂತೆ ಮಾಡು.

ಇದು (ಆರ್ಟ್ ಆಫ್ ಲಿವಿಂಗ್) ಅತಿರೇಕವಲ್ಲ, ಇದೊಂದು ಸಾಮಾನ್ಯವಾದ ಜೀವನ; ಸಂತೋಷವಾಗಿರುವುದು, ಕೇಂದ್ರಿತರಾಗಿರುವುದು ಮತ್ತು ಆನಂದ ಹಾಗೂ ಸಂತೋಷಗಳ ಸಂದೇಶವನ್ನು ಹರಡುವುದು. ನಾವು ನಮ್ಮ ಅಭಿವ್ಯಕ್ತಿಯನ್ನು ಸುಧಾರಿಸಬೇಕಾಗಿದೆ.

ಪ್ರಶ್ನೆ: ನಾನಿಲ್ಲಿ ಯಾಕಿರುವೆನು? ನಾನು ಈ ಕೋರ್ಸನ್ನು ಯಾಕೆ ಮಾಡಿದೆ? ನಾನು ಸಾಮಾನ್ಯವಾಗಿರುವೆನೇ?

ಶ್ರೀ ಶ್ರೀ ರವಿ ಶಂಕರ್: ಸಾಮಾನ್ಯತೆಗೆ ಹಲವಾರು ಮಾನದಂಡಗಳಿವೆ. ಒಂದು ಕೆಳಗಿನ ದರ್ಜೆಯಿಂದ, ನೀನು ಸಾಮಾನ್ಯನಾಗಿಲ್ಲದೇ ಇರಬಹುದು. ಒಂದು ಉನ್ನತ ದರ್ಜೆಯಿಂದ, ನೀನು ಸಾಮಾನ್ಯನಾಗಿರುವೆ. ಪುನಃ, ಇನ್ನೂ ಹೆಚ್ಚಿನ ಎತ್ತರದ ದರ್ಜೆಯಿಂದ ನೀನು ಸಾಮಾನ್ಯನಾಗಿಲ್ಲದೇ ಇದ್ದರೆ, ಆಗ ನೀನು ಎಷ್ಟೋ ಹೆಚ್ಚು ಎತ್ತರಕ್ಕೆ ಹೋಗುತ್ತಿರಬೇಕಾಗುತ್ತದೆ.

ಹಾಗಾಗಿ, ಸಾಮಾನ್ಯನೆಂದರೆ ನಿನ್ನ ಅರ್ಥದಲ್ಲಿ ಏನು? ನೀನು ಇಲ್ಲಿ ಏಕಿರುವೆ? ನೀನು ಈ ಪ್ರಶ್ನೆಯನ್ನು ಒಂದು ಇನ್ನೂ ದೊಡ್ಡದಾದ ಪ್ರಾಸಂಗಿಕತೆಯಲ್ಲಿ ಕೇಳಬೇಕು. ನಾನು ಇಲ್ಲಿ ಈ ಭೂಮಿಯ ಮೇಲೆ ಯಾಕಿರುವೆನು, ಅದೊಂದು ನಿಜವಾಗಿಯೂ ಅಮೂಲ್ಯವಾದ ಪ್ರಶ್ನೆ.

ನಾನು ಈ ಪ್ರಶ್ನೆಯನ್ನು ನಿನಗೆ ಬಿಡುತ್ತೇನೆ, ನೀನು ಅದನ್ನು ಇಟ್ಟುಕೊಳ್ಳಬೇಕು. ನಿನ್ನಲ್ಲಿ ನೀನೇ ಮತ್ತೆ ಮತ್ತೆ ಕೇಳಿಕೋ. ಅದು ನಿನ್ನನ್ನು ಒಬ್ಬ ಮಹಾನ್ ತತ್ವಜ್ಞಾನಿಯನ್ನಾಗಿ ಮಾಡುವುದು.

ಪ್ರಶ್ನೆ: ನನ್ನ ಸಹೋದ್ಯೋಗಿಗಳು ಯಾವತ್ತೂ ನನ್ನ ಚೈತನ್ಯವನ್ನು ತೆಗೆದುಹಾಕುತ್ತಾರೆ. ನನ್ನ ಚೈತನ್ಯವನ್ನು ಕಳೆದುಕೊಳ್ಳದೇ ಇರಲು ನಾನೇನು ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ಪರವಾಗಿಲ್ಲ, ಅವರಿಗೆ ಹೆಚ್ಚು ಕೊಡು! ಅವರೆಲ್ಲರೂ ನಿನ್ನಿಂದ ಎಷ್ಟನ್ನು ತೆಗೆದುಕೊಳ್ಳಬಲ್ಲರೋ ಅದಕ್ಕಿಂತ ಎಷ್ಟೋ ಹೆಚ್ಚು ಚೈತನ್ಯ ನಿನ್ನಲ್ಲಿದೆ. ನೀನು ನನ್ನ ಬೆಳಕನ್ನು ದೂರ ಒಯ್ಯುತ್ತಿರುವೆಯೆಂದು ಸೂರ್ಯ ಅಥವಾ ಚಂದ್ರ ಯಾವತ್ತೂ ಹೇಳುವುದಿಲ್ಲ! ನೀನು ಚೈತನ್ಯದ ಮೂಲವಾಗಿರುವೆ. ನಾನು ನಿನ್ನೊಂದಿಗಿದ್ದೇನೆ. ನಾನು ನಿನಗೆ ಚೈತನ್ಯದ ದೀರ್ಘಕಾಲಿಕ ಪೂರೈಕೆಯನ್ನು ನೀಡುತ್ತೇನೆ, ಚಿಂತಿಸಬೇಡ. ನಿನ್ನ ಗಮನವನ್ನು ಅಲ್ಲಿ ಹಾಕಬೇಡ, ಅದನ್ನು ಇಲ್ಲಿ ಹಾಕು. ಅದನ್ನು ನೀನು ಇಲ್ಲಿ ಹಾಕಿದರೆ ನಿನಗೆ ಹೆಚ್ಚು ಚೈತನ್ಯ ಸಿಗುತ್ತದೆ. ನೀನದನ್ನು ಅಲ್ಲಿ ಹಾಕಿದರೆ ಆಗ, ನಿನ್ನ ಚೈತನ್ಯವು ಬರಿದಾಗುತ್ತಿರುವುದಾಗಿ ನಿನಗೆ ಅನ್ನಿಸುತ್ತದೆ.

ಪ್ರಶ್ನೆ: ನಾನು ಕೋಪವನ್ನು ತಡೆಹಿಡಿಯಬೇಕೇ ಅಥವಾ ವ್ಯಕ್ತಪಡಿಸಬೇಕೇ?

ಶ್ರೀ ಶ್ರೀ ರವಿ ಶಂಕರ್: ಕೆಲವೊಮ್ಮೆ ವ್ಯಕ್ತಪಡಿಸು, ಕೆಲವೊಮ್ಮೆ ತಡೆಹಿಡಿ. ಅದಕ್ಕೆ ಯಾವುದೇ ಏಕೈಕ ಉತ್ತರವಿಲ್ಲ.
ನೀನದನ್ನು ಯಾವಾಗಲೂ ವ್ಯಕ್ತಪಡಿಸಲು ಸಾಧ್ಯವಿಲ್ಲ, ನೀನು ನಿನಗೆ ಮತ್ತು ನಿನ್ನ ಸುತ್ತಲಿರುವ ಇತರರಿಗೆ ಬಹಳಷ್ಟು ಹಾನಿಯನ್ನುಂಟುಮಾಡುವೆ. ಮತ್ತೆ, ನೀನದನ್ನು ಯಾವಾಗಲೂ ತಡೆಹಿಡಿಯಲು ಸಾಧ್ಯವಿಲ್ಲ, ಕೆಲವೊಮ್ಮೆ ನೀನದನ್ನು ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ನೀನು ಸ್ಫೋಟಗೊಳ್ಳುವೆ. ಹಾಗಾಗಿ ನಿನ್ನಲ್ಲಿ ಆ ಸರಿಯಾದ ಸಂತುಲನವಿರಬೇಕು.

ಬುದ್ಧಿವಂತಿಕೆಯೆಂದರೆ, ಅದನ್ನು ಯಾವಾಗ ವ್ಯಕ್ತಪಡಿಸಬೇಕು ಮತ್ತು ಅದನ್ನು ಯಾವಾಗ ತಡೆಹಿಡಿಯಬೇಕು ಎಂಬುದನ್ನು ತಿಳಿದಿರುವುದು.

ಪ್ರಶ್ನೆ: ಒಂದೆರಡು ಸಂಬಂಧಗಳಲ್ಲಿ ಸೋತ ಬಳಿಕ, ಇನ್ನೊಂದು ಸಂಬಂಧದಲ್ಲಿ ಇರಬೇಕೆಂಬ ಬಯಕೆಯನ್ನು ನಾನು ಜಯಿಸುವುದು ಹೇಗೆ? ನನಗೊಬ್ಬ ಸಂಗಾತಿಯಿದ್ದರೆ ಚೆನ್ನಾಗಿತ್ತೆಂದು ನಾನು ಇಚ್ಛಿಸುವಾಗ ನನಗೆ ಪಾಪಪ್ರಜ್ಞೆಯುಂಟಾಗುತ್ತದೆ, ಯಾಕೆಂದರೆ ಹಿಂದೆ ನಾನು ಸೋತಿರುವೆನು. 

ಶ್ರೀ ಶ್ರೀ ರವಿ ಶಂಕರ್: ಸರಿ, ನೀನು ಮಾಡಬಹುದಾದ ಎರಡು ಸಂಗತಿಗಳಿವೆ.

೧. ಅದು (ಸಂಬಂಧ) ನಿನಗಿರುವುದಲ್ಲ ಎಂದು ನಿನಗನ್ನಿಸಿದರೆ, ನೀನು ಮುಂದೆ ಸಾಗು, ಒಂದು ಸಿಂಹದಂತೆ ಒಬ್ಬನೇ ನಡೆ.

೨. ನಿನಗೆ ನಿಜವಾಗಿಯೂ ಅದರ ಅಗತ್ಯವಿದೆಯೆಂದು ನಿನಗನ್ನಿಸಿದರೆ, ಆಗ ನೀನು ಯಶಸ್ವಿಯಾಗುವಲ್ಲಿಯವರೆಗೆ ಮತ್ತೆ ಪ್ರಯತ್ನ ಮಾಡು. ನಿನ್ನ ಜೀವಮಾನವಿಡೀ ಪ್ರಯತ್ನಪಡುತ್ತಾ ಇರು, ನೀನು ಗೋರಿಗೆ ಹೋಗುವವರೆಗೆ. ನೀನು ಅದರ ಬಗ್ಗೆ ಅಷ್ಟೊಂದು ದೃಢವಾಗಿದ್ದರೆ, ನೀನು ಸ್ವರ್ಗದಲ್ಲಿ ಮತ್ತು ಅದರ ನಂತರ ಕೂಡಾ ಪ್ರಯತ್ನಿಸಬಹುದು.

ಈಗ ಸಂತೋಷವಾಗಿರು.

ಅದು ಕೆಲಸ ಮಾಡಿಲ್ಲದೇ ಇದ್ದರೆ, ನಿನ್ನನ್ನು ನೀನು ಹೆಚ್ಚು ದುಃಖಿತನನ್ನಾಗಿಸುವುದು ಯಾಕೆ? ಮತ್ತು ನೀನು ವಯೋಮಿತಿಯನ್ನು ದಾಟುತ್ತಿರುವುದಾದರೆ, ಏನಾದರೂ ಉತ್ತಮವಾದುದರ ಕಡೆಗೆ ಗಮನ ನೀಡು.

ಸಂಬಂಧವಿರುವುದು ಮಧ್ಯದ ಕೆಲವು ವರ್ಷಗಳಿಗೆ ಮಾತ್ರ.

ಸುಮ್ಮನೆ ನೋಡು, ನಿನ್ನ ಹದಿಹರೆಯದಲ್ಲಿ ನಿನಗೆ ಯಾವುದೇ ಸಂಬಂಧವಿರಲಿಲ್ಲ ಮತ್ತು ನಿನಗೆ ಯಾವುದೇ ಸಮಸ್ಯೆಯಿರಲಿಲ್ಲ.

ನೀನು ಸಂತೋಷವಾಗಿದ್ದೆ ಮತ್ತು ನಿನಗೆ ಬಹುಶಃ ೭೦ ವರ್ಷ ಕಳೆದ ಬಳಿಕ ನಿನಗೆ ಯಾವುದೇ ಸಂಬಂಧವಿರಲಾರದು.

ನಿನಗೊಂದು ಸಂಬಂಧವಿದ್ದರೂ ಕೂಡಾ, ಅದು ಕೇವಲ ಜಗಳ ಮಾಡಲಿಕ್ಕಾಗಿ ಇರುವುದು. ಅದರ ನಂತರ ಯಾವುದೇ ಸಂಬಂಧವಿರುವುದಿಲ್ಲ, ಅದೊಂದು ಒಡನಾಟದ ರೀತಿಯದ್ದಾಗಿರುವುದು. ಹಾಗಾಗಿ ಅದರಲ್ಲೇನಿದೆ ಮಹಾ?

ನಡುವೆಯಿರುವ ಜೀವನಕ್ಕಾಗಿ, ನಿನಗದು ಬೇಕೆಂದು ನಿನಗನ್ನಿಸಿದರೆ, ಆಗ ಅದನ್ನು ಹೊಂದು. ಅದು ಸರಿಹೋಗುತ್ತಿಲ್ಲವೆಂದು ನೀನು ಹೇಳುವುದಾದರೆ, ಆಗ ಮುಂದಕ್ಕೆ ಸಾಗು. ನಿನಗೆ ಬಹಳ ಆಸೆ ಹುಟ್ಟಿದರೆ, ಮತ್ತೊಮ್ಮೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರಯತ್ನಿಸು. ಅದು ಸರಿಹೋದರೆ, ಒಳ್ಳೆಯದು. ಇಲ್ಲದಿದ್ದರೆ, ಒಳ್ಳೆಯದು. ಯಾವ ರೀತಿಯಲ್ಲಾದರೂ ಅದು ಒಳ್ಳೆಯದು.

ಪ್ರಶ್ನೆ: ಅಚ್ಚುಮೆಚ್ಚಿನ ಗುರುದೇವ, ಸಾವಿನ ಬಳಿಕ ಅಂಗಗಳನ್ನು ದಾನ ಮಾಡುವುದರ ಬಗ್ಗೆ ನಿಮ್ಮ ಅನಿಸಿಕೆಯೇನು?

ಶ್ರೀ ಶ್ರೀ ರವಿ ಶಂಕರ್: ಅದು ಒಳ್ಳೆಯದು. ನಾವು ನಮ್ಮ ಅಂಗಾಂಗಗಳನ್ನು ದಾನ ಮಾಡಬಹುದು. ನಮ್ಮ ಅಂಗಾಂಗಗಳು ಬೇರೊಬ್ಬರ ನೆರವಿಗೆ ಬರಬಹುದಾದರೆ, ನಾವು ಸಂತೋಷಪಡಬೇಕು.

ನಿಮ್ಮ ಕಣ್ಣುಗಳು ಅಥವಾ ಇತರರಿಗೆ ಯಾವೆಲ್ಲಾ ಅಂಗಗಳು ಸಹಾಯಕವಾಗುವುವೋ ಅವುಗಳನ್ನು ದಾನ ಮಾಡಿ. ನೀವು ಇಲ್ಲಿ ಇಲ್ಲದೇ ಇದ್ದರೂ ಕೂಡಾ, ನಿಮ್ಮ ಕಣ್ಣುಗಳು, ಒಬ್ಬರಿಗೆ ನೋಡಲು ಸಹಾಯ ಮಾಡುತ್ತವೆ.

ಉದಾಹರಣೆಗೆ ನೀವು ಒಬ್ಬರಿಗೆ ಜ್ಞಾನವನ್ನು ಕೊಡುವಾಗ, ನೀವಿಲ್ಲದೇ ಇರುವಾಗಲೂ ಆ ಜ್ಞಾನವು ಮುಂದುವರಿಯುತ್ತದೆ. ತಲೆಮಾರುಗಳವರೆಗೆ ಜನರು ಅದನ್ನು ಆನಂದಿಸುವರು.

ಜ್ಞಾನ ಅಥವಾ ವಿವೇಕ ಉಳಿಯುವಷ್ಟು ಕಾಲ ಅಂಗಾಂಗಗಳು ಉಳಿಯದಿದ್ದರೂ ಸಹ, ಅವುಗಳು ಒಂದು ಅಲ್ಪಾವಧಿಯವರೆಗೆ ಬೇರೊಬ್ಬರಿಗೆ ಸಹಾಯ ಮಾಡಬಲ್ಲವು. ಉದ್ದೇಶವೇನೆಂದರೆ, ನಾವು ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಾಗುವುದಾದರೆ; ಬದುಕಿರುವಾಗವಾಗಲೀ ಅಥವಾ ಸಾವಿನ ಬಳಿಕವಾಗಲೀ; ನಾವದನ್ನು ಸುಮ್ಮನೆ ಮಾಡಬೇಕು.

ಪ್ರಶ್ನೆ: ಒಬ್ಬರನ್ನು ದ್ವೇಷಿಸುವುದನ್ನು ನಿಲ್ಲಿಸುವುದು ಸಾಧ್ಯವೆಂದು ನಿಮಗೆ ನಿಜವಾಗಿಯೂ ಅನ್ನಿಸುವುದೇ?

ಶ್ರೀ ಶ್ರೀ ರವಿ ಶಂಕರ್: ದ್ವೇಷಿಸುವುದನ್ನು ನಿಲ್ಲಿಸಬೇಡ, ಅವರನ್ನು ದ್ವೇಷಿಸುತ್ತಾ ಇರು. ಮೈ ಡಿಯರ್, ನಿನಗೆ ಯಾವುದು ಅತ್ಯಂತ ಸುಲಭವೆನ್ನಿಸುವುದೋ ಅದನ್ನು ಮಾಡು!

ಏನನ್ನಾದರೂ ಮಾಡುವುದು ನಿನಗೆ ತೊಂದರೆ ನೀಡುತ್ತಿರುವುದಾದರೆ ಮತ್ತು ಅದನ್ನು ಮಾಡುವುದು ನಿನಗೆ ಅಷ್ಟೊಂದು ಕಷ್ಟವೆನ್ನಿಸಿದರೆ, ಆಗ ಅದನ್ನು ಮಾಡುವುದು ಯಾಕೆ?

ನೀನು ಏನಾದರೂ ಕಷ್ಟವಾದುದನ್ನು ಮಾಡಿಯೂ ನೀನು ದುಃಖಿತನಾದರೆ, ಅದರಲ್ಲೇನಿದೆ ಅರ್ಥ? ಯಾವುದು ಸುಲಭವೋ ಮತ್ತು ಯಾವುದು ನಿನ್ನನ್ನು ಸಂತೋಷಗೊಳಿಸುವುದೋ ಅದನ್ನು ಮಾಡು.

ಒಬ್ಬರನ್ನು ಪ್ರತಿದಿನವೂ ದ್ವೇಷಿಸುವುದು ನಿನಗೆ ಆರಾಮದಾಯಕವಾಗಿದ್ದರೆ, ನಿನ್ನನ್ನು ಸಂತೋಷಗೊಳಿಸುವುದಾದರೆ, ಸುಮ್ಮನೆ ಅದನ್ನು ಮಾಡು! ನಾನು ಕೇವಲ ನಿನ್ನ ಸಂತೋಷದ ಬಗ್ಗೆ ಮಾತ್ರ ಕಳಕಳಿ ಹೊಂದಿದ್ದೇನೆ. ಒಬ್ಬರನ್ನು ದ್ವೇಷಿಸುವುದು ನಿನಗೆ ಸಂತೋಷವನ್ನೂ ಆನಂದವನ್ನೂ ನೀಡುವುದಾಗಿದ್ದರೆ, ಅದನ್ನು ಸುಮ್ಮನೆ ಪಾಪಪ್ರಜ್ಞೆಯಿಲ್ಲದೆ ಮಾಡು. (ನಗು)

ಸಂಗತಿ ಇದಲ್ಲ. ನೀನು ಯಾರನ್ನಾದರೂ ದ್ವೇಷಿಸುವಾಗ, ಅವರು ನಿನ್ನ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಾರೆ. ಅವರು ನಿನ್ನ ಪ್ರಜ್ಞೆಯಲ್ಲಿ ಒಂದು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾರೆ ಮತ್ತು ನಿಧಾನವಾಗಿ ನೀನು ಅವರಂತೆ ಆಗುವೆ. ನೀನು ಒಬ್ಬರನ್ನು ದ್ವೇಷಿಸಬಾರದು ಯಾಕೆಂದರೆ, ನೀನು ಅವರಂತಾಗಲು ಬಯಸುವುದಿಲ್ಲ. ಇದು ಕಾರಣ.

ಪ್ರಶ್ನೆ: ಬೇರೆ ಬೇರೆ ಯೋಗ ತಂತ್ರಗಳನ್ನು ಮಿಶ್ರಗೊಳಿಸುವುದು ಸರಿಯೇ ಅಥವಾ ನಾವು ಒಂದು ದಾರಿಯನ್ನು ಕಂಡುಕೊಳ್ಳಬೇಕೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅವುಗಳನ್ನು ಮಿಶ್ರಗೊಳಿಸಬೇಡ, ಅದೊಂದು ಕಲಸುಮೇಲೋಗರವಾಗುತ್ತದೆ. ನಿನ್ನ ತಟ್ಟೆಯಲ್ಲಿ ಅಷ್ಟೊಂದು ಅದ್ಭುತವಾದ ಯೋಜನೆಯಿದೆ. ಎಲ್ಲವೂ ಒಂದೇ ವಿಚಾರರೇಖೆಯ ಮೇಲೆ ಆಧಾರಿತವಾದುದು, ಪ್ರಾಚೀನವಾದರೂ ಅಗಾಧವಾದ ಮತ್ತು ಹಾಗಿದ್ದರೂ ಆಧುನಿಕವಾದ ಒಂದು ತತ್ವಶಾಸ್ತ್ರ. ಹಾಗಾಗಿ ಕೇವಲ ಒಂದು ದಾರಿಯನ್ನು ಅನುಸರಿಸು. ಅದು ಅತ್ಯುತ್ತಮವಾದುದು.

ನಾನಿದನ್ನು ಬಹಳ ವರ್ಷಗಳ ನಂತರ ಹೇಳುತ್ತಿದ್ದೇನೆ, ಇಲ್ಲದಿದ್ದರೆ ನಾನು ಸಾಧಾರಣವಾಗಿ, ನಿಮಗೇನು ಇಷ್ಟವೋ ಅದನ್ನು ಮಾಡಿ ಎಂದು ಹೇಳುತ್ತೇನೆ. ಯಾಕೆಂದು ನಿಮಗೆ ಗೊತ್ತಾ? ಅಲ್ಲಿ ಇಲ್ಲಿ ಹೋಗಿ ತಮ್ಮ ಮನಸ್ಸನ್ನು ದೊಡ್ಡದಾಗಿ ಅಸ್ತವ್ಯಸ್ತ ಮಾಡಿಕೊಂಡು, ನಂತರ ನನ್ನ ಬಳಿಗೆ ಬರುವ ಹಲವಾರು ಜನರಿದ್ದಾರೆ. ಹಾಗಾಗಿ ಈಗ ನಾನು ಖಡಾಖಂಡಿತವಾಗಿ ಹೇಳಲು ಶುರು ಮಾಡಿದ್ದೇನೆ ಮತ್ತು ಹಾಗಾಗಿ ಅದನ್ನು ಮಾಡಬೇಡವೆಂದು ನಾನು ನಿನಗೆ ಹೇಳುತ್ತಿದ್ದೇನೆ.

ಅನೇಕ ಜನರು ಅಲ್ಲಿ ಇಲ್ಲಿ ಹೋದರು ಮತ್ತು ಅವರಿಗೆ ಈ ಜಪವನ್ನೋ ಅಥವಾ ಆ ತಂತ್ರವನ್ನೋ ಮಾಡಲು ಹೇಳಲಾಯಿತು ಹಾಗೂ ಆ ಬಳಿಕ ಅವರು ನಿಯಂತ್ರಣವಿಲ್ಲದೆಯೇ ನಡುಗತೊಡಗಿದರು. ಈ ಜನರಿಗೆ ಸಮಸ್ಯೆಗಳುಂಟಾದವು ಮತ್ತು ಆಸ್ಪತ್ರೆಗೆ ಹೋಗಬೇಕಾಯಿತು. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಅಂತಹ ಘಟನೆಗಳು ಸಂಭವಿಸಿವೆ. ಜನರಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಲೇಬೇಕಾಯಿತು ಮತ್ತು ಅವರಲ್ಲಿ ಕೆಲವರನ್ನು ಗುಣಪಡಿಸುವುದು ಬಹಳ ಕಷ್ಟವಾಯಿತು.

ನೀನು ಬೇರೆ ವಿವಿಧ ತಂತ್ರಗಳನ್ನು ಮಾಡಲು ಯಾಕೆ ಬಯಸುವೆ, ಅದರಲ್ಲೇನಿದೆ ಅರ್ಥ?  ನಿನ್ನ ತಟ್ಟೆಯಲ್ಲಿ ಏನೋ ಒಂದು ಬಹಳ ಚೆನ್ನಾಗಿರುವುದು ಇದೆ. ಆದರೆ ನಿನಗೆ ಲಾಭವೇ ಸಿಗುತ್ತಿಲ್ಲವಾದರೆ, ಅದು ನಿನಗೆ ಸಹಾಯವನ್ನೇ ಮಾಡುತ್ತಿಲ್ಲವೆಂದು ನೀನು ನನಗೆ ಹೇಳು. ಆಗ ಎಲ್ಲಿಗೆ ಹೋಗಬೇಕು, ನಿನಗೆ ಯಾವುದು ಸಹಾಯ ಮಾಡಬಲ್ಲದು ಎಂಬುದನ್ನು ನಾನು ತೋರಿಸುವೆನು.

ಪ್ರಶ್ನೆ: ನನ್ನಲ್ಲಿ ಮತ್ತು ದೇವರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದರ ಬಗ್ಗೆ ಮರೆತುಬಿಡು!

ವಿಶ್ವಾಸವನ್ನು ಹೆಚ್ಚಿಸಲು ಪ್ರಯತ್ನಿಸಬೇಡ. ವಿಶ್ವಾಸವನ್ನು ಹೆಚ್ಚಿಸಲು ಬಯಸುವುದು ಸಮಸ್ಯೆಯಾಗಿದೆ. ನಿನಗೆ ಎಷ್ಟು ಬೇಕೋ ಅಷ್ಟು ನಿನ್ನಲ್ಲಿದೆ ಎಂಬುದನ್ನು ತಿಳಿ.

ನಿನ್ನ ಲೋಟವು ಎಷ್ಟು ದೊಡ್ಡದಿದೆಯೋ, ಅಷ್ಟು ಈಗಾಗಲೇ ಇದೆ. ವಿಶ್ರಾಮ ಮಾಡು ಮತ್ತು ನಿನ್ನ ಲೋಟವು ತುಂಬಿರುವುದು ನಿನಗೆ ಕಂಡುಬರುವುದು. ನಿನ್ನ ಲೋಟದ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಹಿಡಿಯಲು ನಿನಗೆ ಸಾಧ್ಯವಿಲ್ಲ.

ಹಲವು ಸಲ ಜನರು ನನ್ನಲ್ಲಿ ಅವರಿಗೆ ಆಶೀರ್ವಾದ ನೀಡುವಂತೆ ಕೇಳಿಕೊಳ್ಳುತ್ತಾರೆ. ನಾನವರಿಗೆ, "ನನ್ನ ಆಶೀರ್ವಾದವು ಯಾವತ್ತೂ ಇದೆ! ಆದರೆ ನೀವು, ಪಡೆಯುವುದಕ್ಕಾಗಿರುವ ನಿಮ್ಮ ಸಾಮರ್ಥ್ಯದ ಕಡೆಗೆ ನೋಡಬೇಕು. ನೀವು ನನ್ನ ಬಳಿಗೆ ಒಂದು ಚಿಕ್ಕ ಲೋಟದೊಂದಿಗೆ ಬಂದು, ಅದರಲ್ಲಿ ನಿಮಗೆ ೧೦ ಲೀಟರ್ ಹಾಲು ಬೇಕೆಂದು ಹೇಳಿದರೆ, ಅದು ಹೇಗೆ ಸಾಧ್ಯ?

ಹತ್ತು ಲೀಟರ್‌ಗಳಷ್ಟು ಹಿಡಿಯುವ ಒಂದು ಪಾತ್ರೆಯನ್ನು ನೀವು ಒಯ್ಯಬೇಕು. ಒಂದು ಚಾ ಲೋಟದಲ್ಲಿ ನೀವು ೧೦ ಲೀಟರ್‌ಗಳನ್ನು ತುಂಬಿಸಲು ಸಾಧ್ಯವಿಲ್ಲ" ಎಂದು ಹೇಳುತ್ತೇನೆ.

ಹಾಗಾಗಿ ನಿನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೋ ಮತ್ತು "ನನ್ನಲ್ಲಿ ಸಾಕಷ್ಟು ವಿಶ್ವಾಸವಿದೆ" ಎಂದು ನೀನು ಹೇಳುವಾಗ, ಅದು ತನ್ನಿಂತಾನೇ ಆಗುತ್ತಾ ಹೋಗುವುದು. "ನನ್ನಲ್ಲಿ ವಿಶ್ವಾಸವಿಲ್ಲ" ಎಂದು ಹೇಳಬೇಡ. ನಿನ್ನಲ್ಲಿ ಸಾಕಷ್ಟು ವಿಶ್ವಾಸವಿದೆ.