ಮಂಗಳವಾರ, ಮೇ 8, 2012

ನೀವು ಏನನ್ನೂ ಕಲಿಯಬೇಕಾದುದಿಲ್ಲ


08
2012............................... ಮಾಂಟ್ರಿಯಲ್, ಕೆನಡ
May

ಪ್ರಾಚೀನ ದಿನಗಳಲ್ಲಿ, ಸಮಾಧಿಯಲ್ಲಿ ಕುಳಿತುಕೊಳ್ಳುತ್ತಿದ್ದವರಿಗೆ ರಾಜರು ಬೆಂಬಲ ನೀಡುತ್ತಿದ್ದರು. ಅವರ ಕೆಲಸವೆಂದರೆ, ಪ್ರತಿದಿನವೂ ಕೆಲವು ಗಂಟೆಗಳ ಕಾಲ ಸುಮ್ಮನೇ ಸಮಾಧಿಯಲ್ಲಿ ಕುಳಿತು ಸುತ್ತಲೂ ಸುಂದರವಾದ ಕಂಪನಗಳನ್ನು ಸೃಷ್ಟಿಸುವುದು. ಅವರು ಪುರೋಹಿತರು ಎಂದು ಕರೆಯಲ್ಪಡುತ್ತಿದ್ದರು - ಸಮಾಜಕ್ಕಾಗಿ, ಪಟ್ಟಣಕ್ಕಾಗಿ ಒಳ್ಳೆಯ ಕೆಲಸಗಳನ್ನು, ಪ್ರಯೋಜನಕಾರಿ ವಿಷಯಗಳನ್ನು ಮಾಡುವವರು. ಅವರು ಪ್ರತಿದಿನವೂ ಮಂತ್ರ ಪಠಿಸುತ್ತಿದ್ದರು ಮತ್ತು ಸಮಾಧಿಯಲ್ಲಿ ಕುಳಿತು ರೋಮಾಂಚಕಾರಿ ಸಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿಸುತ್ತಿದ್ದರು. ಆದರೆ ನಂತರ ಜನರು ಇದನ್ನೆಲ್ಲಾ ಮರೆತರು ಮತ್ತು ಈಗ ಇದು ಪೂರ್ತಿಯಾಗಿ ಹೋಗಿದೆ. ಅಂತಹ ಸಮಾಧಿಗೆ ನೀವು ಯಾವಾಗ ಹೋಗಬಲ್ಲಿರಿ? ನೀವು ಯಾವುದಕ್ಕಾಗಿಯೂ ಹಂಬಲಿಸದೇ ಇರುವಾಗ; ಯಾವುದೇ ಬಯಕೆಗಳೂ ಉಳಿದಿಲ್ಲವಾದಾಗ, ಆಗ ಸಮಾಧಿಯಾಗುತ್ತದೆ.
ಪ್ರಶ್ನೆ: ಪ್ರೀತಿಯ ಗುರೂಜಿ, ನಾವಿರುವ ಈ ಅಮೂಲ್ಯವಾದ ಜ್ಞಾನ ಸಂಪ್ರದಾಯದ ಮೂಲವೇನು? ಮತ್ತು ನಾವು ಎಷ್ಟು ಕಾಲ ಮುಂದುವರಿಯಲಿದ್ದೇವೆ?
ಶ್ರೀ ಶ್ರೀ ರವಿಶಂಕರ್:
ಅದರ ಮೂಲ ನನಗೆ ಗೊತ್ತಿಲ್ಲ. ಅದು ಸಾವಿರ ಸಾವಿರ ವರ್ಷಗಳಿಂದ ಇದೆ. ಅದು ಐದು, ಆರು, ಏಳು ಅಥವಾ ಹತ್ತು ಸಾವಿರಗಳಲ್ಲ, ಅಲ್ಲ! ಅದು ಸಾವಿರಾರು ವರ್ಷಗಳಿಂದ ಇದೆ; ನಮಗೆ ಗೊತ್ತಿಲ್ಲ. ಯಾರಿಗೂ ಗೊತ್ತಿಲ್ಲ. ಬಹುಶಃ ಪ್ರಜ್ಞೆಯಷ್ಟು ಹಳೆಯದು.
ಪ್ರಶ್ನೆ: ನಾನು ಬ್ರಹ್ಮನಾಗಿದ್ದರೆ, ನಾನು ಶಾಶ್ವತ ಉಪಸ್ಥಿತಿಯಾಗಿದ್ದರೆ, ನಾನು ಒಳಗಿನಿಂದ ಸಂಪೂರ್ಣವಾಗಿ ಮುಕ್ತನಾಗಿದ್ದರೆ, ನಾನು ಶುದ್ಧವಾದ ಪ್ರಜ್ಞೆಯಾಗಿದ್ದರೆ, ಅದನ್ನು ತಿಳಿಯಲು ಅಥವಾ ಅದನ್ನು ಅನುಭವಿಸಲು ನನಗೆ ಯಾಕೆ ಸಾಧ್ಯವಾಗುತ್ತಿಲ್ಲ?
ಶ್ರೀ ಶ್ರೀ ರವಿಶಂಕರ್:
ಯಾಕೆಂದರೆ ನಿನ್ನ ಮನಸ್ಸು ಹೊರಗಡೆಯಿದೆ. ನಿನಗೆ ಇದು ಬೇಕು, ನಿನಗೆ ಅದು ಬೇಕು, ನಿನಗೆ ಸೌಕರ್ಯ ಬೇಕು, ನಿನಗೆ ಸಂಬಂಧಗಳು ಬೇಕು, ನಿನಗೆ ೧೦೧ ಸಂಗತಿಗಳು ಬೇಕು ಮತ್ತು ನಿನ್ನ ಮನಸ್ಸು ಅದರಲ್ಲಿದೆ. ನೀನು ಒಳಗಡೆ ಹೇಗೆ ಹೋಗುವೆ? ಅದನ್ನು ನೀನು ಹೇಗೆ ಅನುಭವಿಸುವೆ? ಆದುದರಿಂದ ನೀನು ಬಯಕೆಗಳಿಂದ ಮುಕ್ತನಾಗಿ, "ನನಗೆ ಏನೂ ಬೇಡ, ನಾನು ತೃಪ್ತನಾಗಿದ್ದೇನೆ" ಎಂದು ಹೇಳಿದಾಗ, ನೀನು ಒಳಗಡೆ ಹೋಗುವೆ. ನೀವು, ನನಗೇನೂ ಬೇಡ ಎಂದು ಎರಡು ಪರಿಸ್ಥಿತಿಗಳಲ್ಲಿ ಹೇಳುತ್ತೀರಿ. ಒಂದು ನೀವು ನಿರಾಶೆಗೊಂಡಾಗ, "ನನಗೇನೂ ಬೇಡ! ನಾನು ಬಿಟ್ಟು ಕೊಡುತ್ತೇನೆ". ಆ ಅವಸ್ಥೆಯು ಕೆಲಸ ಮಾಡುವುದಿಲ್ಲ. ನೀವು, "ನಾನು ಬಿಟ್ಟು ಕೊಡುತ್ತೇನೆ, ಇನ್ನು ಇದನ್ನು ನಿರ್ವಹಿಸಲು ನನ್ನಿಂದ ಸಾಧ್ಯವಿಲ್ಲ" ಎಂದು ಹೇಳುವಾಗ, ಆ ನಿರಾಶೆಯ ಅವಸ್ಥೆಯು ಸಹಾಯ ಮಾಡುವುದಿಲ್ಲ. ನೀವು, "ಓ, ನಾನು ತುಂಬಾ ಸಂಪೂರ್ಣವಾಗಿದ್ದೇನೆ, ಪೂರ್ತಿಯಾಗಿದ್ದೇನೆ, ನನಗೇನೂ ಬೇಡ" ಎಂದು ಹೇಳುವಾಗ, ಸಂತೋಷವಾಗಿರುವ ಹಾಗೂ ಏನೂ ಬಯಕೆಗಳಿರದ ಆ ಅವಸ್ಥೆಯು ಮನಸ್ಸನ್ನು ಒಳಮುಖವಾಗಿ ತಿರುಗಿಸಬಲ್ಲದು. ಇದೊಂದು ಕ್ಯಾಚ್ ೨೨ ಪರಿಸ್ಥಿತಿ (ಅಂದರೆ ಒಂದನೆಯದನ್ನು ಬಗೆಹರಿಸದೆ ಎರಡನೆಯದನ್ನು ಮತ್ತು ಎರಡನೆಯದನ್ನು ಬಗೆಹರಿಸದೆ ಒಂದನೆಯದನ್ನು ಪಡೆಯಲು ಸಾಧ್ಯವಿಲ್ಲ) ಯಾಕೆಂದರೆ ನೀವು ಒಳಮುಖವಾಗಿ ತಿರುಗಿದಾಗ ಮಾತ್ರ ನೀವು ಹೇಳುತ್ತೀರಿ, "ನನಗೇನೂ ಬೇಡ". ಆದರೆ "ನನಗೇನೂ ಬೇಡ" ಎಂದು ಹೇಳದೆಯೇ ನಿಮಗೆ ಒಳಮುಖವಾಗಿ ಹೋಗಲು ಸಾಧ್ಯವಿಲ್ಲ. (ಶ್ರೀ ಶ್ರೀಯವರು ನಗುತ್ತಾರೆ) ಇದನ್ನು ನೀವು ಬಗೆಹರಿಸಬೇಕು, ನೀವಿದನ್ನು ಹೇಗೆ ಮಾಡುವಿರೆಂದು ನನಗೆ ಗೊತ್ತಿಲ್ಲ. ನಾನು ನಿಮಗೆ ಹಲವಾರು ತಂತ್ರಗಳನ್ನು ಕೊಡುತ್ತಿದ್ದೇನೆ, ಇದನ್ನು ಮಾಡು, ಅದನ್ನು ಮಾಡು, ಅದನ್ನು ಮಾಡು ಮತ್ತು ಅದನ್ನು ಮಾಡು, ಆದರೆ ನೀವು ಅದನ್ನು ಹೇಗೆ ಮಾಡುವಿರೆಂದು ನನಗೆ ಗೊತ್ತಿಲ್ಲ. (ಶ್ರೀ ಶ್ರೀಯವರು ನಗುತ್ತಾರೆ) ನೀವು ನಿಮ್ಮನ್ನೇ, "ನನಗೇನೂ ಬೇಡ. ನಾನು ಸಂಪೂರ್ಣ, ನಾನು ತೃಪ್ತನಾಗಿದ್ದೇನೆ" ಎಂದು ಹೇಳುವಂತಹ ಸಂತೋಷವಾಗಿರುವ ಪರಿಸ್ಥಿತಿಗೆ ಕರೆತರಬೇಕು. ಆಗ ಮನಸ್ಸು ಪರಮಾನಂದದಲ್ಲಿ ನೆನೆಯುತ್ತದೆ.
ಪ್ರಶ್ನೆ: ನಾನು ನಿಮ್ಮೊಂದಿಗಿದ್ದೇನೆ ಎಂದು ನೀವು ಹೇಳಿದ್ದೀರಿ. ಅದರರ್ಥ ನಿಮಗೆ ನನ್ನೆಲ್ಲಾ ಯೋಚನೆಗಳು, ಕ್ರಿಯೆಗಳು, ಆಸೆಗಳು ಮತ್ತು ಭಯಗಳು ತಿಳಿದಿವೆಯೆಂದೇ? ಪ್ರತಿದಿನ, ರಾತ್ರಿಯಲ್ಲಿ, ಮನೆಯಲ್ಲಿ, ನನ್ನ ನೌಕರಿಯಲ್ಲಿ ಮತ್ತು ಎಲ್ಲೆಡೆಯಲ್ಲೂ, ಎಲ್ಲಾ ಸಮಯದಲ್ಲೂ ನೀವು ಅಕ್ಷರಶಃ ನನ್ನೊಳಗಿದ್ದೀರಾ? ಹಾಗಿದ್ದರೆ ಅದು ತಿಳಿಯಲು ತುಂಬಾ ಹಾಯಾಗಿದೆ ಮತ್ತು ನಾನು ನನ್ನ ಯೋಚನೆಗಳು ಮತ್ತು ಕಾರ್ಯಗಳನ್ನು ನೋಡಲು ಪ್ರಾರಂಭಿಸುವುದು ಒಳ್ಳೆಯದು.
ಶ್ರೀ ಶ್ರೀ ರವಿಶಂಕರ್:
ನೀನು ಯಾಕೆ ಎಲ್ಲಾ ರಹಸ್ಯಗಳನ್ನು ತಿಳಿಯಲು ಬಯಸುತ್ತೀ? ಅದನ್ನೆಲ್ಲಾ ನಾನು ನಿನಗೆ ಹೇಳುವುದಿಲ್ಲ. ಹೌದು, ಕೆಲವೊಮ್ಮೆ ನೀನು ನೋಡುತ್ತಿರುವೆ ಮತ್ತು ಕೆಲವೊಮ್ಮೆ ನೀನು ನಿನ್ನ ಕಣ್ಣುಗಳನ್ನು ಮುಚ್ಚುವೆ.
ಪ್ರಶ್ನೆ: ಹಲವಾರು ಪ್ರಾದೇಶಿಕ ಸಂಪ್ರದಾಯಗಳು, ಪ್ರಜ್ಞೆಯ ಉನ್ನತ ಅವಸ್ಥೆಗಳನ್ನು ತಲಪಲು ನಿರ್ದಿಷ್ಟ ಗಿಡಮೂಲಿಕೆಗಳನ್ನು ಮತ್ತು ಗಿಡಗಳನ್ನು ತಿನ್ನುವುದನ್ನು ಅಥವಾ ಕುಡಿಯುವುದನ್ನು ಒಳಗೊಂಡ ಸಮಾರಂಭಗಳನ್ನು ನಡೆಸುತ್ತವೆ. ವೇದಾಂತದಲ್ಲಿ ಇದಕ್ಕೆ ಸರಿ ಸಮಾನವಾದುದು ಇದೆಯೇ? ಮತ್ತು ಈ ಅಭ್ಯಾಸವು ಹಾನಿಕಾರಕವೇ ಅಥವಾ ಪ್ರಯೋಜನಕರವೇ?
ಶ್ರೀ ಶ್ರೀ ರವಿಶಂಕರ್:
ಹೌದು, ಆಯುರ್ವೇದವು ಒಂದು ವಿಜ್ಞಾನ, ಅದರಲ್ಲಿ ಖಂಡಿತವಾಗಿ ಹಲವಾರು ಮಂತ್ರ ಔಷಧಿಗಳಿವೆ; ಕೆಲವು ಮೂಲಿಕೆಗಳು ಶಾಂತತೆಯ ಒಂದು ಅವಸ್ಥೆಯನ್ನು ಉತ್ತೇಜಿಸುತ್ತವೆ. ಆದರೆ ಅವುಗಳ ಮೇಲೆ ಅವಲಂಬಿಸುವುದು ಪುನಃ  ಬಂಧನವಾಗಿದೆ, ಆದುದರಿಂದ ವೇದಾಂತವು ಅದನ್ನು ಎಸೆದು ಬಿಡುತ್ತದೆ. ಆಯುರ್ವೇದ ಮತ್ತು ಯೋಗ, ಇವುಗಳೆರಡೂ ಖಂಡಿತವಾಗಿ, ನಿಮ್ಮನ್ನು ತುಂಬಾ ಶಾಂತಗೊಳಿಸಿ ಆಳಕ್ಕೆ ಕರೆದೊಯ್ಯುವ ಮೂಲಿಕೆಗಳ ಬಗ್ಗೆ ಮಾತನಾಡುತ್ತವೆ. ಆದರೆ, ಜನರು ಉಪಯೋಗಿಸುವ ಈ ಮೂಲಿಕೆಗಳಲ್ಲಿ, ಈ ಔಷಧಿಗಳಲ್ಲಿ ಹೆಚ್ಚಿನವುಗಳು ನಮ್ಮ ವ್ಯವಸ್ಥೆಗೆ ಹಾನಿಕಾರಕವಾಗಿವೆ. ಅವುಗಳು ಮಾಡುವ ಒಳಿತಿಗಿಂತಲೂ ಹೆಚ್ಚು ಹಾನಿಕಾರಕ. ಈ ಎಲ್ಲಾ ವಿನೋದದ ಮದ್ದುಗಳು, ಖಂಡಿತವಾಗಿ ಇಲ್ಲ! ಅದು ಸುಮ್ಮನೇ ನಿಮ್ಮ ಶರೀರವನ್ನು ನಾಶಪಡಿಸುತ್ತದೆ. ಅದು ತಾತ್ಕಾಲಿಕವಾಗಿ ನಿಮಗೆ, ನಿಮ್ಮನ್ನು ಐಹಿಕದಿಂದ ಹೊರ ತೆಗೆದು ಸೂಕ್ಷ್ಮತೆಯ ಅನುಭವವೆಂಬಂತೆ ಕಂಡುಬರುವ ಸ್ವಲ್ಪ ಉನ್ನತ ಅವಸ್ಥೆಯನ್ನು ನೀಡಬಹುದು. ಆದರೆ ನಾನು ಅದನ್ನು ಸೇವಿಸಿ ನೋಡಲಿಲ್ಲ, ಯಾವತ್ತೂ ಇಲ್ಲ. ಜನರು ಹೀಗೆ ಹೇಳುತ್ತಾರೆ, ಆದರೆ ನಾನು ಅದನ್ನು ಶಿಫಾರಸು ಮಾಡುವುದಿಲ್ಲ ಯಾಕೆಂದರೆ ಇದನ್ನೆಲ್ಲಾ ಉಪಯೋಗಿಸುವ ಜನರನ್ನು ನಾನು ನೋಡುತ್ತೇನೆ; ಮರಿಜುವಾನ ಅಥವಾ ಅಫೀಮು ಮತ್ತು ಅವುಗಳನ್ನೆಲ್ಲಾ ಸೇದುವವರು. ಅವರ ಮುಖವನ್ನು ನೋಡಿ, ಅಲ್ಲಿ ಆನಂದವಿಲ್ಲ, ಅಲ್ಲಿ ಕಳೆಯಿಲ್ಲ ಮತ್ತು ಅವರಲ್ಲಿ ಪ್ರಭಾವಳಿಯಿರುವುದಿಲ್ಲ. ಆದುದರಿಂದ ಅದು ನನ್ನಲ್ಲಿ ಯಾವುದೇ ಆಸಕ್ತಿಯನ್ನು ಕೆರಳಿಸಲಿಲ್ಲ.
ನೀವೊಂದು ಕುಂಭ ಮೇಳಕ್ಕೆ ಹೋದರೆ, ಅಲ್ಲಿ ಹುಕ್ಕಾ, ಚರಸ್, ಅಫೀಮು ಸೇದುವ ಹಲವಾರು ಸಾಧುಗಳು ನಿಮಗೆ ಸಿಗುತ್ತಾರೆ. ಆದರೆ ಅವರ ಮುಖಗಳನ್ನು ನೋಡಿದರೆ, ಅದು ನೀವು ಆಧ್ಯಾತ್ಮವೆಂದು ಕರೆಯುವಂತಿರುವುದಿಲ್ಲ. ಅವರು ಪ್ರಪಂಚದ ಇತರ ಎಲ್ಲದರ ಪರಿವೆಯಿಲ್ಲದೇ ಇರುತ್ತಾರೆ. ಅವರು ತಮ್ಮದೇ ಪ್ರಪಂಚದಲ್ಲಿರುತ್ತಾರೆ. ಆತ್ಮಸಾಕ್ಷಾತ್ಕಾರದ ಯಾವುದೇ ಚಿಹ್ನೆಯು ನಿಮಗೆ ಅವರಲ್ಲಿ ಕಾಣಸಿಗುವುದಿಲ್ಲ. ಆದುದರಿಂದ ಇದು ದುರದೃಷ್ಟಕರ.
ಹೌದು, ಹಿಂದಿನ ಕಾಲದಲ್ಲಿ ಇದನ್ನು ಕೇವಲ ಒಂದು ಚಿಕಿತ್ಸೆಯಾಗಿ ಉಪಯೋಗಿಸಲಾಗುತ್ತಿತ್ತು. ನೋಡಿ, ಯಾರಿಗಾದರೂ ಸಂಭೋಗದಲ್ಲಿ ಅತಿಯಾದ ಗೀಳಿದ್ದರೆ ಅಥವಾ ಯಾರಾದರೂ ಅತಿಯಾಗಿ ಲೋಭಿಗಳಾಗಿದ್ದರೆ, ಅಥವಾ ಅತಿಯಾದ ಅಸೂಯೆಯ ಗೀಳಿದ್ದರೆ ಅಥವಾ ಯಾವುದಾದರೂ ವಿಧದ ಭ್ರಮೆಯಲ್ಲಿದ್ದರೆ, ಆಗ ಹಿಂದಿನ ಕಾಲದಲ್ಲಿ ಅಂತಹವರಿಗೆ, ಅವರ ಸಮಸ್ಯೆಗಳಿಂದ  ಅವರ ಮನಸ್ಸನ್ನು ತೆಗೆಯಲು ಸ್ವಲ್ಪವೇ ಸ್ವಲ್ಪ  ಪ್ರಮಾಣದಲ್ಲಿ ಇದನ್ನು ಕೊಡುತ್ತಿದ್ದರು, ಆದರೆ ಅವರು ಅದನ್ನು ಹೆಚ್ಚು ಉಪಯೋಗಿಸಲಿಲ್ಲ.
ಅದೇ ರೀತಿ ತಾಂತ್ರಿಕ ಸ್ಂಭೋಗ ಕೂಡಾ, ಸಂಭೋಗದಲ್ಲಿ ಅತೀ ಹೆಚ್ಚು ಗೀಳಿದ್ದವರಿಗೆ ಮಾತ್ರ ಅದನ್ನು ಕೊಡಲಾಗುತ್ತಿತ್ತು. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಒಬ್ಬರಿಗೆ ಶರೀರದಲ್ಲಿ ಹಾರ್ಮೋನುಗಳ ಅಸಮತೋಲನವಿದೆ ಮತ್ತು ಅವರಿಗೆ ಸಂಭೋಗ ಬಿಟ್ಟು ಬೇರೇನನ್ನೂ ಯೋಚಿಸಲು ಸಾಧ್ಯವಾಗುವುದಿಲ್ಲ, ಇಡೀ ದಿನ ಮತ್ತು ರಾತ್ರಿ. ಅಂತಹ ಜನರಿಗೆ ಅವರಂದರು, ಇದೆಲ್ಲಾ ಕತ್ತಿಯ ಅಲಗಿನ ಮೇಲೆ ನಡೆಯುವಂತೆ ಅಂದರು. ಆದುದರಿಂದ ಒಬ್ಬರು ಒಳ್ಳೆಯ ಅನುಭವವಿರುವ ಗುರುವು ಅವರನ್ನು ತೊಡಗಿಸುತ್ತಿದ್ದರು ಮತ್ತು ಕೇವಲ ಆ ಕಾರಣಕ್ಕಾಗಿ ಅದನ್ನು ಕೊಡುತ್ತಿದ್ದರು. ವ್ಯವಸ್ಥೆಯಲ್ಲಿ ಸಮತೋಲನವುಂಟಾಗಲು ಕೇವಲ ಅಲ್ಪಾವಧಿಯ ವರೆಗೆ, ಎಂದೆಂದಿಗೂ ಅಲ್ಲ ಆದರೆ ೩ ತಿಂಗಳ ವರೆಗೆ, ೬ ತಿಂಗಳ ವರೆಗೆ ಅಥವಾ ೧ ವರ್ಷದ ವರೆಗೆ, ಹಾಗೇನಾದರೂ. ಇದು ಅವರು ಕಲಿಸುತ್ತಿದ್ದ ಒಂದು ನಿರ್ದಿಷ್ಟ ವಿಭಾಗ; ಆದರೆ ಆ ಇಡಿಯ ಸಂಪ್ರದಾಯವು ಈಗ ಕಾಣೆಯಾಗಿದೆ.
ಪ್ರಶ್ನೆ: ನಾನು ಆಗಾಗ್ಗೆ ಯೋಚಿಸುತ್ತಿದ್ದೆ, ಮಧ್ಯ ಪೂರ್ವ (ಕೊಲ್ಲಿ) ರಾಷ್ಟ್ರಗಳಲ್ಲಿ ಆಳವಾದ ಮತ್ತು ಶಾಶ್ವತವಾದ ಶಾಂತಿಯು ಯಾವಾಗ ಉಂಟಾಗಬಹುದೆಂದು.
ಶ್ರೀ ಶ್ರೀ ರವಿಶಂಕರ್:
ಅದು ನಮ್ಮ ಜೀವಮಾನದ ಒಳಗೇ ಬರಬಹುದೆಂದು ಆಶಿಸೋಣ. ಇತ್ತೀಚೆಗೆ ಇಸ್ರೇಲಿನ ನಮ್ಮ ಜೀವನ ಕಲೆಯ ಶಿಕ್ಷಕರಲ್ಲೊಬ್ಬರು ಮೆಚ್ಚುವಂತಹ ಕೆಲಸವನ್ನು ಮಾಡಿದರು. ಆಕೆಯು ಸ್ವಲ್ಪ ಹಣವನ್ನು ಸಂಗ್ರಹಿಸಿ, ಪರಸ್ಪರ ದ್ವೇಷಿಸುತ್ತಿದ್ದ ಕೆಲವು ಪ್ಯಾಲೆಸ್ತೀನ್ ಹೆಂಗಸರು ಹಾಗೂ ಕೆಲವು ಇಸ್ರೇಲಿನ ಹೆಂಗಸರನ್ನು ಜರ್ಮನಿಯ ಆಶ್ರಮಕ್ಕೆ ಕರೆತಂದರು. ಆಕೆಯು ಅವರನ್ನು ಅಲ್ಲಿರಿಸಿದರು ಮತ್ತು ಅವರಿಗೆ ಎಲ್ಲಿಗೂ ಓಡಿಹೋಗಲು ಸಾಧ್ಯವಾಗಲಿಲ್ಲ. ಆಕೆಯು ನಂತರ ಅವರು ಪರಸ್ಪರ ಒಡನಾಡುವಂತೆ ಮಾಡಿದರು. ಮೊದಲಲ್ಲಿ ಅವರು ಪರಸ್ಪರ ಕೊಲ್ಲಲು ಸಿದ್ಧರಾಗಿದ್ದರು, ಅವರು ವಾದಿಸಿದರು ಮತ್ತು ಪರಸ್ಪರ ದ್ವೇಷಿಸಿದರು. ನಂತರ ಇಡಿಯ ಸಂಗತಿಯು ತಿರುಗಿತು ಮತ್ತು ತುಂಬಾ ಸಕಾರಾತ್ಮಕವಾಯಿತು. ಇದು ಜರ್ಮನಿಯ ವಾರ್ತಾಪತ್ರಿಕೆಗಳಲ್ಲೆಲ್ಲಾ ದೊಡ್ಡ ವಿಷಯವಾಗಿ  ಪ್ರಕಟವಾಯಿತು. ದೂರದರ್ಶನದವರು ಈ ಸುದ್ದಿಯನ್ನು ಬಿತ್ತರಿಸಿದರು ಮತ್ತು ಅಂದರು, "ಒಬ್ಬಳು ಹೆಂಗಸು, ಜೀವನ ಕಲೆಯ ಒಬ್ಬ ಶಿಕ್ಷಕಿಯು ಎರಡು ಸಮುದಾಯಗಳ ಇಷ್ಟೊಂದು ಮಹಿಳೆಯರನ್ನು ಜೊತೆಗೂಡಿಸಿದರೆ, ಆಗ ತುಂಬಾ ಭರವಸೆಯಿದೆ". ಇದು ಜನರನ್ನು ಹತ್ತಿರ ತರುವ ಪ್ರಶ್ನೆ.
ಪ್ರಶ್ನೆ: ಗಂಡಸು ಜೀವನದಲ್ಲಿ ಏನಾದರೂ ಒಂದನ್ನು ಕೇಳಬೇಕೆಂದಿದ್ದರೆ, ಅವನು ಏನನ್ನು ಕೇಳಬೇಕು?
ಶ್ರೀ ಶ್ರೀ ರವಿಶಂಕರ್:
ಅವನು ಯಾಕೆ ಕೇವಲ ಒಂದು ವಿಷಯವನ್ನು ಕೇಳಬೇಕು? ಅವನು ತನಗೆ ಎಷ್ಟು ಬೇಕೋ ಅಷ್ಟು ವಿಷಯಗಳನ್ನು ಕೇಳಬೇಕು. ಅವನಿಗೆ ಬಾಯಾರಿಕೆಯಾದಾಗ ಅವನು ನೀರನ್ನು ಕೇಳಬೇಕು, ಅದರ ಮೊದಲು ಅವನು ಭಸ್ತ್ರಿಕ ಮಾಡುವುದಿದ್ದರೆ ಅವನು ಟಿಶ್ಯೂ ಪೇಪರನ್ನು ಕೇಳಬೇಕು. ಹಸಿವಾದಾಗ ಅವನು ಆಹಾರವನ್ನು ಕೇಳಬೇಕು. ಅವನು ಕೇಳುವುದನ್ನು ಕೇವಲ ಒಂದೇ ವಿಷಯಕ್ಕೆ ಯಾಕೆ ನೀವು ಸೀಮಿತಗೊಳಿಸಬೇಕು? ಈ ಪ್ರಪಂಚದಲ್ಲಿ ಹಲವಾರು ವಿಷಯಗಳು ಬಹುಸಂಖ್ಯೆಯಲ್ಲಿವೆಯೆಂದು ನಾನು ಹೇಳುತ್ತೇನೆ. ದೇವರು ಕೇವಲ ಒಂದು ವಸ್ತುವನ್ನು ಸೃಷ್ಟಿಸಿ ನಿಮ್ಮನ್ನು ಅಲ್ಲಿ ಯಾಕೆ ಬಿಡಬೇಕು?
ಸುಮ್ಮನೇ ಕಲ್ಪಿಸಿಕೊಳ್ಳಿ, ನಿಮ್ಮ ಜೀವನದಲ್ಲಿ ಯಾವುದಾದರೂ ಒಂದೇ ಒಂದು ತರಕಾರಿಯನ್ನು ನೀವು ಕೇಳಬಹುದೆಂದಿದ್ದರೆ, ನೀವು ಯಾವುದನ್ನು ಕೇಳುವಿರಿ? ಬೆಂಡೆಕಾಯಿ? ನಿಮ್ಮ ಜೀವಮಾನವಿಡೀ ಬೆಂಡೆಕಾಯಿಯನ್ನು ತಿನ್ನುವಿರಾ? ಅಥವಾ ಬಾಳೆಹಣ್ಣು? ಮತ್ತು ಜೀವಮಾನವಿಡೀ ತಲೆ ಚಿಟ್ಟು ಹಿಡಿಸಿಕೊಳ್ಳುವುದು! ನೀವು ಯಾಕೆ ಈ ರೀತಿ ಮಾಡಬೇಕು? ಕೇಳಿ ಮತ್ತು ಅದನ್ನು ಕೊಡಲಾಗುತ್ತದೆ. ಯಾವಾಗೆಲ್ಲಾ, ಏನೆಲ್ಲಾ ಬೇಕೋ, ಆ ಸಮಯದಲ್ಲಿ ನೀವು ಕೇಳಿ ಮತ್ತು ಮುಂದೆ ಸಾಗಿ ಮತ್ತು ನೀವು ಎಲ್ಲದರಿಂದಲೂ ತುಂಬಿಕೊಂಡಾಗ, "ನನಗೇನೂ ಬೇಡ, ನಾನು ಸಂತೋಷವಾಗಿದ್ದೇನೆ" ಎಂದು ಹೇಳಿ.
ಬಯಕೆಗಳು ಬಿದ್ದು ಹೋಗಬೇಕು. ನೀವು ಅವುಗಳನ್ನು ಹಾಗೆಯೇ ತ್ಯಾಗ ಮಾಡಲು ಸಾಧ್ಯವಿಲ್ಲ. ನಿಮಗೆ ಬಾಯಾರಿಕೆಯಾಗಿದೆ ಮತ್ತು ನೀವು, "ಇಲ್ಲ, ನನಗೆ ನೀರು ಬೇಡ" ಎಂದು ಹೇಳಲು ಸಾಧ್ಯವಿಲ್ಲ. ನಿಮಗೆ ಬಾಯಾರಿಕೆಯಾಗಿದೆ, ಆಗ ಆ ಸಮಯದಲ್ಲಿ ನಿಮಗೆ ನೀರಿನ ಅಗತ್ಯವಿದೆ.
ದುರದೃಷ್ಟವಶಾತ್, ಜೈನಧರ್ಮದಲ್ಲಿ ಒಂದು ಪದ್ಧತಿಯಿದೆ, ಅದನ್ನು ನಾನು ಒಪ್ಪುವುದಿಲ್ಲ. ಅವರು ಆಹಾರವನ್ನು ತೆಗೆದುಕೊಳ್ಳದೆಯೇ ಶರೀರವನ್ನು ಬಿಡುತ್ತಾರೆ. ಅವರು ಹಲವು ದಿನಗಳ ವರೆಗೆ ಉಪವಾಸ ಮಾಡುತ್ತಾರೆ, ಅದು ಬಹುತೇಕ ಆತ್ಮಹತ್ಯೆಯಂತೆ. ಹೀಗೆ, ಸಂತನು ಹಾಸಿಗೆಯ ಮೇಲೆ ಮಲಗುತ್ತಾನೆ ಮತ್ತು "ನೀರು, ನೀರು, ನೀರು" ಎಂದು ಹೇಳುತ್ತಾನೆ, ಯಾಕೆಂದರೆ ಅದೊಂದು ಒಳ ಪ್ರೇರಣೆ, ಮತ್ತು ಅವನ ಸುತ್ತಲಿರುವ ಜನರು ಹೇಳುತ್ತಾರೆ, "ಸಂತನ ಮಾತುಗಳು ನಿಜ. ಅಲ್ಲಿ ನಿನಗೆ ತುಂಬಾ ನೀರು ಸಿಗುತ್ತದೆ". ಅವರು ಅವನಿಗೆ ನೀರನ್ನು ಕೊಡುವುದಿಲ್ಲ. ಅಲ್ಲಿ, ಮೇಲೆ ನಿನಗೆ ಸಿಗುತ್ತದೆ, ಅದನ್ನು ಕೇಳಬೇಡ, ಪರವಾಗಿಲ್ಲ, ನೀರಿಲ್ಲದೆ ಸಾಯಿ. ಅವನು ಅವರಿಗೆ ಮೊದಲೇ ತಿಳಿಸಿರುತ್ತಾನೆ, "ನಾನು ನೀರಿಗಾಗಿ ಕಿರುಚಿದರೂ ಅದನ್ನು ನನಗೆ ಕೊಡಬೇಡಿ". ಇದು ಚಿತ್ರಹಿಂಸೆಯೆಂದು ನಾನು ಹೇಳುತ್ತೇನೆ.
ಇವತ್ತು ಇದು ತುಂಬಾ ಕಡಿಮೆಯಾಗಿದೆ, ಆದರೂ ಜನರು ಅದನ್ನು ಮಾಡುತ್ತಾರೆ. ಇದು ತುಂಬಾ ತಪ್ಪೆಂದು ನಾನು ನಿಮಗೆ ಹೇಳುತ್ತೇನೆ. ನೀವು ನೀರಿಲ್ಲದೇ ಉಪವಾಸ ಮಾಡಿ ಈ ರೀತಿ ಸಾಯಬೇಕೆಂದು ಮಹಾವೀರನು ಯಾವತ್ತೂ ಹೇಳಲಿಲ್ಲ. ಆದರೆ ಒಂದು ನಿರ್ದಿಷ್ಟ ಸಂಪ್ರದಾಯವಿದೆ, ಅಲ್ಲಿ ಅವರು ಇದನ್ನು ಮಾಡಲು ಪ್ರಯತ್ನಿಸುತ್ತಾರೆ. ಹಿಂದುಗಳಲ್ಲಿ ಕೂಡಾ ಕೆಲವು ಜನರು ತಮ್ಮನ್ನೇ ಹಿಂಸಿಸಿಕೊಳ್ಳುತ್ತಾರೆ. ಜನರ ಒಂದು ತುಂಬಾ ಚಿಕ್ಕ ಪಂಗಡ, ಅವರಲ್ಲಿ ತಮ್ಮನ್ನು ತಾವೇ ಹಿಂಸಿಸಿಕೊಳ್ಳುವ ಈ ಎಲ್ಲಾ ಅಭ್ಯಾಸಗಳಿವೆ. ಇವುಗಳನ್ನು ಖಂಡಿತಾ ಸಮ್ಮತಿಸಲಾಗುವುದಿಲ್ಲ.
ಭಗವದ್ಗೀತೆಯಲ್ಲಿ ಭಗವಂತ ಕೃಷ್ಣನು ತುಂಬಾ ಸ್ಪಷ್ಟವಾಗಿ ಹೇಳುತ್ತಾನೆ, "ಈ ಜನರು ತಮ್ಮನ್ನು ತಾವೇ ಹಿಂಸಿಸಿಕೊಳ್ಳುತ್ತಿದ್ದಾರೆ, ಅವರಿಗೆ ಅವರೊಳಗಿರುವ ನನ್ನ ಬಗ್ಗೆ ಅರಿವಿಲ್ಲ. ನಾನಲ್ಲಿ ಅವರೊಳಗಡೆ ಅಲ್ಲಿಯೇ ಕುಳಿತಿದ್ದೇನೆ. ಅವರು ನನ್ನನ್ನು ನೋಡುವುದಿಲ್ಲ, ಅವರು ನನ್ನನ್ನು ಗುರುತಿಸುವುದಿಲ್ಲ".
ಇವುಗಳು ತಾಮಸಿಕ ಅಭ್ಯಾಸಗಳು, ಅವರು ತಮ್ಮನ್ನು ತಾವೇ ಹಿಂಸಿಸಲು ಪ್ರಯತ್ನಿಸುತ್ತಾರೆ. "ಕರ್ಸಯಂತಾ ಶರೀರ ಸ್ಥಾರಿನ್ ಭೂತ ಗ್ರಾಮ ಅಚೇತಸಃ ಮಂ, ಚೈವಂತಃ ಶರೀರ ಸ್ಥಂ ತನ್ ವಿದ್ಧಿ ಅಸುರ ನಿಶ್ಚಯನ್". ಆದುದರಿಂದ ಅಲ್ಲೊಂದು ನಡುಮಾರ್ಗವಿದೆ. ಒಂದು ಬದಿಯಲ್ಲಿ ಅಹಂ ಇರುವವರು ತಮ್ಮನ್ನು ತಾವೇ ಹಿಂಸಿಸಲು ಪ್ರಯತ್ನಿಸುತ್ತಾರೆ ಮತ್ತು ಇನ್ನೊಂದು ಬದಿಯಲ್ಲಿ ಶರೀರದ ಸುಖದ ಬಗ್ಗೆ ಅತಿಯಾಗಿ ಗೀಳು ಹಚ್ಚಿಕೊಂಡವರಿದ್ದಾರೆ. ನೀವು ಕುಳಿತಿದ್ದೀರಿ; ನಿಮ್ಮ ಕಾಲುಗಳು ನೋಯುತ್ತಿವೆ, ಪರವಾಗಿಲ್ಲ, ಚಿಂತಿಸಬೇಡಿ, ನೋಯಲಿ ಬಿಡಿ. ಅಲ್ಲಿ ಇಲ್ಲಿ ಸ್ವಲ್ಪ ನೋಯುವುದರಿಂದ ನೀವೇನೂ ಸಾಯುವುದಿಲ್ಲ. ಅದು ನೋಯಲಿ ಬಿಡಿ, ಈ ಛಲದೊಂದಿಗೆ ನೀವು ಕುಳಿತರೆ, ನೋವು ಮಾಯವಾಗುವುದನ್ನು ನೋಡುವಿರಿ.
ನೀವು ಯೋಗ ಮಾಡುವಾಗ, ಖಂಡಿತವಾಗಿ ನೋವಾಗುತ್ತದೆ. ನಿಮ್ಮ ಶರೀರವು ಇಲ್ಲಿ ಎಳೆಯಲ್ಪಡುತ್ತದೆ ಮತ್ತು ಅಲ್ಲಿ ಎಳೆಯಲ್ಪಡುತ್ತದೆ ಹಾಗೂ ಅದು ಇಲ್ಲಿ ಅಲ್ಲಿ ನೋವಾಗುತ್ತದೆ, ಆದರೆ ನೀವು ಮುಂದುವರಿಸಿದರೆ ನೋವು ಮಾಯವಾಗುತ್ತದೆ. ನೀವು ವ್ಯಾಯಾಮಶಾಲೆಗೆ ಹೋಗಿ ವ್ಯಾಯಾಮ ಮಾಡಿದರೂ ಅದೇ ರೀತಿ. ಮರುದಿನ ನಿಮ್ಮ ಶರೀರವು ಎಲ್ಲಾ ಕಡೆಗಳಲ್ಲೂ ನೋಯುತ್ತದೆ, ಅಲ್ಲವೇ? ಆದರೆ ನೀವು ಅದನ್ನು ಬಿಡುವುದಿಲ್ಲ, ನೀವು ಹಾಗೇ ಮುಂದುವರಿಸುತ್ತೀರಿ ಮತ್ತು ಆಗ ನೋವು ಮಾಯವಾಗುತ್ತದೆ. ನೀವು ಒಂದು ಅಥವಾ ಎರಡು ದಿನ ಮಾಡುತ್ತೀರಿ ಮತ್ತು ಎಲ್ಲಾ ನೋವುಗಳು ಹೋಗುತ್ತವೆ. ಹೀಗೆ, ಒಂದು ಬದಿಯಲ್ಲಿ ತಮ್ಮ ಅಹಂನಿಂದಾಗಿ ತಮ್ಮನ್ನು ತಾವೇ ಹಿಂಸಿಸಿಕೊಳ್ಳುವ ಜನರಿದ್ದಾರೆ, ಇನ್ನೊಂದು ಬದಿಯಲ್ಲಿ ಶರೀರದ ಸುಖದ ಬಗ್ಗೆ ಗೀಳು ಹಚ್ಚಿಸಿಕೊಂಡವರಿದ್ದಾರೆ. ಇಬ್ಬರೂ ಕಳೆದುಹೋಗಿರುತ್ತಾರೆ; ಅವರಿಬ್ಬರಿಗೂ ಜಯಿಸಲು ಸಾಧ್ಯವಿಲ್ಲ. ಯಾರಿಗೆ ಸಾಧ್ಯವಾಗುತ್ತದೆ? ಯಾರು ನಡುಮಾರ್ಗವನ್ನು, ಆ ಚಿನ್ನದ ಗೆರೆಯನ್ನು ಅನುಸರಿಸುತ್ತಾರೋ ಅವರಿಗೆ. ಇದು ಸ್ಪಷ್ಟವಾಯಿತೇ? ಆದುದರಿಂದ, ಧ್ಯಾನ ಕೂಡಾ, ಯಾರು ಉಪವಾಸ ಮಾಡುತ್ತಾರೋ ಅವರಿಗೆ ಅದು ಸಿಗುವುದಿಲ್ಲ ಮತ್ತು ಯಾರು ಜಾಸ್ತಿ ತಿನ್ನುತ್ತಾರೋ ಅವರಿಗೂ ಸಿಗುವುದಿಲ್ಲ; ಯಾರು ಅತಿಯಾಗಿ ನಿದ್ರಿಸುತ್ತಾರೋ ಅವರಿಗೂ ಇಲ್ಲ ಅಥವಾ ಯಾರು ಎಲ್ಲಾ ಸಮಯದಲ್ಲೂ ಎಚ್ಚರವಾಗಿದ್ದು ತಮಗೆ ತಾವೇ ಹಿಂಸೆ ನೀಡುತ್ತಾರೋ ಅವರಿಗೂ ಇಲ್ಲ. ಯಾವುದೇ ಚಟುವಟಿಕೆಯನ್ನು ಮಾಡದೇ ಇರುವವರಿಗೂ ಇಲ್ಲ ಮತ್ತು ಧ್ಯಾನ ಮಾಡಲು ಸ್ವಲ್ಪ ಸಮಯವನ್ನೂ ತೆಗೆದುಕೊಳ್ಳುವುದಿಲ್ಲವೋ ಅವರಿಗೂ ಇಲ್ಲ. ಯಾವುದೇ ಅತಿರೇಕಗಳೂ ಕೆಲಸ ಮಾಡುವುದಿಲ್ಲ. ಅದು ನಡುದಾರಿಯಾಗಿರಲೇಬೇಕು, ನಡುದಾರಿಯಾಗಿರಲೇಬೇಕು,ನಡುದಾರಿಯಾಗಿರಲೇಬೇಕು!
ಪ್ರಶ್ನೆ: ಭೂಮಿಯು ಒಂದು ಪರೀಕ್ಷೆ ಮಾಡುವ ಮತ್ತು ತರಬೇತಿ ನೀಡುವ ಕ್ಷೇತ್ರವೆಂದು ನನಗೆ ಅನ್ನಿಸುತ್ತಿದೆ. ಹಾಗಿದ್ದರೆ, ಯಾವ ಪಾಠಗಳನ್ನು ನಾನು ಕಲಿಯಬೇಕು ಅಥವಾ ಯಾವ ಕುಶಲತೆಗಳನ್ನು ನಾನು ಅಭಿವೃದ್ಧಿಪಡಿಸಬೇಕೆಂಬುದು ನನಗೆ ತಿಳಿಯುವುದು ಹೇಗೆ? ನಾನು ಆಯಾಸಗೊಂಡಿದ್ದೇನೆ. ಇನ್ನೂ ಎಷ್ಟು ಪಾಠಗಳಿವೆ?
ಶ್ರೀ ಶ್ರೀ ರವಿಶಂಕರ್:
ಎಲ್ಲದರ ಬಗ್ಗೆ ಸುಮ್ಮನೇ ಮರೆತುಬಿಡು. ನೀವು ಯಾವುದೋ ಪರೀಕ್ಷೆಯ ಮೂಲಕ ಹಾದು ಹೋಗಬೇಕೆಂದು ಯಾರು ಹೇಳುತ್ತಾರೆ? ನೀವು ಏನನ್ನೂ ಕಲಿಯಬೇಕಾಗಿಲ್ಲ ಎಂದು ನಾನು ಹೇಳುತ್ತೇನೆ. ಟೊಳ್ಳು ಮತ್ತು ಖಾಲಿಯಾಗಿ. ನೀವು ಸತ್ತು ಬೀಳುವ ಮೊದಲು ಎಲ್ಲವನ್ನೂ ಬಿಟ್ಟು ಬಿಡಿ. ಅದು ರಹಸ್ಯ, ಮತ್ತು ಸಂತೋಷವಾಗಿರಿ! ಪ್ರಪಂಚದಲ್ಲಿ ಪರಿಪೂರ್ಣತೆಯಿಲ್ಲ. ಈ ಪ್ರಪಂಚವು ಕುಂದುಕೊರತೆಗಳಿಂದ ತುಂಬಿದೆ, ಸುಮ್ಮನೇ ಅದನ್ನು ಸ್ವೀಕರಿಸಿ. ನೀವು ಶಾಂತಿಯಿಂದಿರುತ್ತೀರಿ. ನಿಮಗೆ ಅರ್ಥವಾಯಿತೇ? ಮತ್ತು ಈ ಶರೀರ ಮತ್ತು ಮನಸ್ಸು ಪ್ರಪಂಚಕ್ಕೆ ಸೇರಿವೆ. ಒಂದು ಆತ್ಮವಾಗಿ ನೀವು ಪರಿಪೂರ್ಣರಾಗಿದ್ದೀರಿ. ಒಂದು ಶರೀರ ಮತ್ತು ಮನಸ್ಸುಗಳ ಸಂಕೀರ್ಣವಾಗಿ ನೀವು ಅಪೂರ್ಣರಾಗಿದ್ದೀರಿ. ಆದುದರಿಂದ ನೀವು ನಿಮ್ಮನ್ನೇ ಪರೀಕ್ಷಿಸುತ್ತಾ ಇದ್ದರೆ, ನಿಮಗೆ ನಿಮ್ಮಲ್ಲೇ ಕುಂದು ಕೊರತೆಗಳು ಕಾಣಸಿಗುತ್ತವೆ ಮತ್ತು ನೀವು ಪ್ರಪಂಚವನ್ನು ಪರೀಕ್ಷಿಸುತ್ತಾ ಇದ್ದರೆ ನಿಮಗೆ ಅಲ್ಲಿ ಕೂಡಾ ಕುಂದುಕೊರತೆಗಳು ಕಾಣಸಿಗುತ್ತವೆ. ಸಾಧಾರಣವಾಗಿ ನೀವು ಈ ಕುಂದುಕೊರತೆಯಿಂದ ಆ ಕುಂದುಕೊರತೆಗೆ ಸಾಗುತ್ತೀರಿ. ಒಂದೋ ನೀವು ಪ್ರಪಂಚವು ಅಪೂರ್ಣವಾಗಿದೆಯೆಂದೂ ನೀವು ಪರಿಪೂರ್ಣರಾಗಿರುವಿರೆಂದೂ ಯೋಚಿಸುತ್ತೀರಿ ಅಥವಾ ನೀವು ಅಪೂರ್ಣರೆಂದು ನೀವು ಯೋಚಿಸಿದರೆ, ಉಳಿದವರೆಲ್ಲರೂ ನಿಮಗಿಂತ ಉತ್ತಮರೆಂದೂ, ಎಲ್ಲರೂ ಪರಿಪೂರ್ಣರೆಂದೂ ಮತ್ತು ಕೇವಲ ನೀವು ಮಾತ್ರ ಅಪೂರ್ಣರೆಂದೂ ನೀವು ತಿಳಿಯುತ್ತೀರಿ ಹಾಗೂ ನಿಮ್ಮನ್ನು ನೀವೇ ದೂಷಿಸಲು ಪ್ರಾರಂಭಿಸುತ್ತೀರಿ. ಹೀಗೆ ನೀವು ನಿಮ್ಮನ್ನೇ ದೂಷಿಸುವ ಅಥವಾ ಪ್ರಪಂಚವನ್ನು ದೂಷಿಸುವ ಈ ದೂಷಣೆಯ ಆಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ಒಬ್ಬ ಸಾಧಕನಿಗೆ ಇದು ತುಂಬಾ ಕೆಟ್ಟ ವಿಷಯ; ಹೀಗೆ ಮಾಡುವುದನ್ನು ನಿಲ್ಲಿಸಿ!
ನಿಮ್ಮ ಕುಂದುಕೊರತೆಗಳನ್ನು ದೇವರಿಗೆ ಅರ್ಪಿಸುತ್ತಾ ಹೀಗೆಂದು ಹೇಳಿ, "ನಾನು ಹೇಗೆಯೇ ಇರಲಿ ನಾನು ನಿಮಗೆ ಸೇರಿದ್ದೇನೆ. ನೀವು ದೇವರು, ನೀವು ಪರಿಪೂರ್ಣರು". ಹೀಗೆ ನೀವು ನಿಮ್ಮ ಕುಂದುಕೊರತೆಗಳನ್ನು ಯಾರಿಗೋ ಕೊಡುತ್ತೀರಿ. "ಓ ಜಗನ್ಮಾತೆ, ನೀನು ಪರಿಪೂರ್ಣಳು, ನಾನು ನನ್ನನ್ನೇ ನಿನಗೆ ಅರ್ಪಿಸುತ್ತೇನೆ".
ನೋಡಿ, ನೀವೊಬ್ಬ ಫುಟ್ಬಾಲ್ ಆಟಗಾರನಾಗಿದ್ದರೆ ನೀವೇನು ಮಾಡುತ್ತೀರಿ? ಒಬ್ಬ ಆಟಗಾರನು ತನ್ನ ಕುಂದುಕೊರತೆಗಳನ್ನು ತರಬೇತುದಾರನಿಗೆ ಅರ್ಪಿಸುತ್ತಾನೆ. ನಿಮಗೆ ಇಂತಿಂತಹುದು ತಿಳಿದಿಲ್ಲ ಮತ್ತು ಇಂತಿಂತಹವು ನಿಮ್ಮ ಕುಂದುಕೊರತೆಗಳು ಎಂಬುದನ್ನು ನೀವು ತರಬೇತುದಾರನಿಗೆ ಹೇಳುತ್ತೀರಿ. ಆಗ ತರಬೇತುದಾರನು ನಿಯಂತ್ರಣವನ್ನು ಕೈಗೆ ತೆಗೆದುಕೊಂಡು, "ಸರಿ, ನೀನು ಚಿಂತಿಸಬೇಡ, ಏನು ಮಾಡಬೇಕೆಂದು ನಾನು ನಿನಗೆ ಹೇಳುತ್ತೇನೆ" ಎಂದು ಹೇಳುತ್ತಾನೆ. ಅದೇ ರೀತಿ, ನೀವು ನಿಮ್ಮ ಕುಂದುಕೊರತೆಗಳನ್ನು ಗುರುವಿಗೆ ಅರ್ಪಿಸುತ್ತೀರಿ, "ಗುರೂಜಿ, ನಾನು ಹೇಗೆಯೇ ಇರಲಿ, ನನ್ನ ಕುಂದುಕೊರತೆಗಳನ್ನು ನಾನು ನಿಮಗೆ ಅರ್ಪಿಸಿದ್ದೇನೆ", ಮತ್ತು ಆರಾಮವಾಗಿರಿ.
ನಿಮ್ಮಲ್ಲಿರುವ ಮೌನ, ನಿಮ್ಮಲ್ಲಿರುವ ಶಾಂತತೆಯು  ಎಲ್ಲಾ ಕುಶಲತೆಗಳ ತಾಯಿ. ಅದು ಪರಿಪೂರ್ಣತೆಯ ತಾಯಿ. ಕ್ರಿಯೆಯು ಪರಿಪೂರ್ಣತೆಯ ತಾಯಿಯಲ್ಲ, ಕ್ರಿಯೆಯು ಕುಶಲತೆಗಳನ್ನು ತರುವುದಿಲ್ಲ. ಕುಶಲತೆಗಳನ್ನು ತರುವುದು ಯಾವುದೆಂದರೆ, ಯೋಗ. ನೀವು ಯಾಕೆ ಯೋಗ ಮಾಡಬೇಕೆಂದು ನಿಮಗೆ ತಿಳಿದಿದೆಯೇ? ನೀವು ಯಾಕೆ ಮೌನವಾಗಿರಬೇಕು? ನೀವು ಯಾಕೆ ಧ್ಯಾನ ಮಾಡಬೇಕು? ಅದು ನಿಮ್ಮಲ್ಲಿ ಪರಿಪೂರ್ಣವಾದ ಕುಶಲತೆಗಳನ್ನು ತರುತ್ತದೆ; ಅದು ಪರಿಪೂರ್ಣತೆಯನ್ನು ಮತ್ತು ಉತ್ತಮ ಗುಣಮಟ್ಟದ ಆನಂದವನ್ನೂ ತರುತ್ತದೆ - ಈ ಎಲ್ಲಾ ಮೂರು ಲಾಭಗಳು.
ಈ ಪ್ರಪಂಚವನ್ನು ಆಸ್ವಾದಿಸಲು ಕೂಡಾ ನೀವು ಒಳಮುಖವಾಗಿ ಹೋಗಬೇಕು, ನಿಮಗೆ ಯೋಗದ ಅಗತ್ಯವಿದೆ. ಯೋಗವು ಕ್ರಿಯೆಯಲ್ಲಿ ಕುಶಲತೆಯನ್ನು ತರುತ್ತದೆ, ಯೋಗವು ನಿಮ್ಮಲ್ಲಿರುವ ಪರಿಪೂರ್ಣತೆಯನ್ನು ಹೊರ ತರುತ್ತದೆ ಮತ್ತು ಯೋಗವು ನಿಮ್ಮಲ್ಲಿರುವ ಪ್ರತಿಭೆಗಳನ್ನು ಹಾಗೂ ಕುಶಲತೆಗಳನ್ನು ಹೊರ ತರುತ್ತದೆ ಮತ್ತು ನಿಮಗೆ ಉತ್ತಮ ಸುಖಗಳನ್ನೂ, ಆನಂದಗಳನ್ನೂ ಒದಗಿಸುತ್ತದೆ.
ಪ್ರಶ್ನೆ: ಈ ಮೌನ ಶಿಬಿರವಿರುವುದು ಮತ್ತು ಸತ್ಯ ಹಾಗೂ ಜೀವನದ ಬಗ್ಗೆ ಕಲಿಯುವುದು ತುಂಬಾ ಒಳ್ಳೆಯದು. ನಾವು ವಾಸ್ತವ ಜಗತ್ತಿಗೆ ತಿರುಗಿ ಹೋದಾಗ ಎಲ್ಲಾ ಒತ್ತಡಗಳು ಮತ್ತು ನಕಾರಾತ್ಮಕತೆಗಳು ನಮ್ಮನ್ನು ಪುನಃ ಸುತ್ತುವರಿಯುತ್ತವೆ, ಅದನ್ನು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಿಜವಾಗಿ ಇದು ವಾಸ್ತವ ಜಗತ್ತು. ನೀವಿದನ್ನು ಪ್ರತ್ಯೇಕವಾಗಿ ನೋಡಬೇಕು. ಇದು ವಾಸ್ತವ ಜಗತ್ತು ಮತ್ತು ನೀವು ಅಲ್ಲಿಗೆ ಹೋದಾಗ, ಅದು ಕೇವಲ ನೀವು ಭೇಟಿ ನೀಡುವ ಸ್ಥಳ. ಅದು ನಿಮ್ಮ ವಿಶ್ರಾಂತಿ ಕೋಣೆ ಮತ್ತು ಇದು ನಿಮ್ಮ ಮನೆ.
ಆದಿ ಶಂಕರಾಚಾರ್ಯರು ಭಜ ಗೋವಿಂದಂ ನಲ್ಲಿ ಏನು ಹೇಳಿದರೆಂದು ನಿಮಗೆ ಗೊತ್ತಿದೆಯಾ? ಅವರಂದರು, "ಸುರಮಂದಿರತರುಮೂಲನಿವಾಸಃ, ಸಯ್ಯಾ ಭೂತಲಮಜಿನಂ ವಾಸಃ, ಸರ್ವಪರಿಗ್ರಹ ಭೋಗತ್ಯಾಗಃ, ಕಸ್ಯ ಸುಖಂ ನ ಕರೋತಿ ವಿರಾಗಃ. ಭಜ ಗೋವಿಂದಂ, ಭಜ ಗೋವಿಂದಂ".  ಇದು ತುಂಬಾ ಸುಂದರವಾಗಿದೆ, ಇದು ಹೇಳುತ್ತದೆ - ನನ್ನ ಮೂಲ ನಿವಾಸವು ಅಲ್ಲಿದೆ, ನನ್ನ ನಿಜವಾದ ಮನೆ ಅಲ್ಲಿದೆ ಮತ್ತು ಇಲ್ಲಿಗೆ ನಾನು ಭೇಟಿ ನೀಡಲು ಬಂದಿದ್ದೇನೆ, ಕೇವಲ ಸ್ವಲ್ಪ ವಿಶ್ರಾಂತಿ ಪಡೆಯಲು. ಆದುದರಿಂದ ಇದು ನಿಜವಾದುದೆಂಬುದನ್ನು ಮತ್ತು ಇದು ವಾಸ್ತವವೆಂಬುದನ್ನು ತಿಳಿಯಿರಿ. ನೀವು ಪ್ರಪಂಚಕ್ಕೆ ಹಿಂದಿರುಗಿ ಹೋದಾಗ ಖಂಡಿತವಾಗಿ ಸ್ವಲ್ಪ ನಕಾರಾತ್ಮಕತೆಯು ಬರುತ್ತದೆ. ಅದು ಹಾಗೆಯೇ ಆಗುವುದು ಮತ್ತು ನೀವಲ್ಲಿರುವುದು ಅದರಲ್ಲಿ ಸ್ವಲ್ಪ ಸಕಾರಾತ್ಮಕತೆಯನ್ನು ತರಲು! ನಿಮ್ಮ ಕೆಲಸವೆಂದರೆ, ಆ ವಾತಾವರಣದಲ್ಲಿ ಸ್ವಲ್ಪ ಸಕಾರಾತ್ಮಕತೆಯನ್ನು ತರುವುದು, ಅಲ್ಲಿ ಕಳೆದು ಹೋಗಬೇಡಿ; ಅದಕ್ಕೇ ನೀವು ಹಿಂದಿರುಗಿ ಬರುತ್ತಾ ಇರುವುದು ಮತ್ತು ಹಿಂದಿರುಗಿ ಹೋಗುತ್ತಾ ಇರುವುದು.
ನಾವು ಈ ಆಶ್ರಮಗಳನ್ನೆಲ್ಲಾ ಯಾಕೆ ಕಟ್ಟುತ್ತಿದ್ದೇವೆ? ನಾವು ಒಂದು ಜಾಗದಲ್ಲಿ ಸುಮ್ಮನೇ ಕುಳಿತುಕೊಳ್ಳಬಹುದಿತ್ತು. ನಾನು ಪ್ರಪಂಚದಾದ್ಯಂತ ಯಾಕೆ ಸಂಚರಿಸುತ್ತಿದ್ದೇನೆ? ನಿಮಗೆ ಗೊತ್ತಿದೆಯಾ ಒಂದು ತಿಂಗಳ ಕಾಲದಲ್ಲಿ ಇದು ನನ್ನ ೧೮ ನೆಯ ಅಥವಾ ೧೯ ನೆಯ ನಿಲುಗಡೆ. ಇದು ನಾನು ಭೇಟಿ ನೀಡುತ್ತಿರುವ ೧೨ ನೆಯ ದೇಶ. ನಾನು ಯಾಕೆ ಸುತ್ತಲೂ ಹೋಗುತ್ತೇನೆ; ಎಲ್ಲಾ ಕಡೆಗಳಿಗೂ? ನನಗೆ ಗೊತ್ತು, ಜನರು ಬಂದು ತಮ್ಮ ಆಂತರಿಕ ಶಾಂತಿಯನ್ನು ಕಂಡುಕೊಳ್ಳಬಹುದಾದಂತಹ ಲೈಟ್ ಹೌಸುಗಳಂತಹ ಇಂತಹ ಜಾಗಗಳು ನಮಗೆ ಅಗತ್ಯವಿದೆಯೆಂದು. ಆದುದರಿಂದಲೇ ನಾವು ಎಲ್ಲೆಡೆಗಳಲ್ಲಿ ಕೇಂದ್ರಗಳನ್ನು ಮಾಡುತ್ತಿರುವುದು ಮತ್ತು ಎಲ್ಲೆಡೆಗಳಲ್ಲಿ ಸತ್ಸಂಗಗಳಿರುವುದು. ನೀವಿರುವ ಜಾಗದಲ್ಲಿ ಇವುಗಳಿಲ್ಲದಿದ್ದರೆ, ಆಗ ನೀವು ಒಂದನ್ನು ಪ್ರಾರಂಭಿಸಿ!
ನಿಮಗೆ ಗೊತ್ತಾ, ಇವುಗಳು ಪೆಟ್ರೋಲ್ ಬಂಕುಗಳು; ನಿಮಗೆ ಪೆಟ್ರೋಲ್ ಬಂಕುಗಳ ಅಗತ್ಯವಿರುತ್ತದೆ ಯಾಕೆಂದರೆ ಎಲ್ಲಾ ಕಡೆಗಳಲ್ಲೂ ಜನರಲ್ಲಿ ಪೆಟ್ರೋಲ್ ಖಾಲಿಯಾಗುತ್ತದೆ. ಆಗ ಅವರ ಕಾರುಗಳು ಚಲಿಸುವುದಿಲ್ಲ. ಸತ್ಸಂಗ ಗುಂಪುಗಳು ಪೆಟ್ರೋಲ್ ಬಂಕುಗಳಾಗಿವೆ, ಹೋಗಿ ತುಂಬಿಸಿಕೊಳ್ಳಿ, ನಿಮ್ಮನ್ನೇ ನೀವು ಚಾರ್ಜ್ ಮಾಡಿಕೊಳ್ಳಿ. ನೀವು, "ಓ ನಾನು ಇಲ್ಲಿ ಪೆಟ್ರೋಲ್ ತುಂಬಿಸಿದ್ದೆ ಮತ್ತು ಈಗ ಅದೆಲ್ಲಾ ಖಾಲಿಯಾಗಿದೆ, ನಾನೇನು ಮಾಡಬೇಕು?" ಎಂದು ಅಳಲು ಸಾಧ್ಯವಿಲ್ಲ. ಅದು ಖಾಲಿಯಾಗಿದೆ ಯಾಕೆಂದರೆ ಅದು ಸ್ವಾಭಾವಿಕ; ಪುನಃ ಅದನ್ನು ತುಂಬಿಸಿ.
ಅದೇ ಸಮಯದಲ್ಲಿ, ನೀವು ಪೆಟ್ರೋಲ್ ಬಂಕಿನಲ್ಲಿ ಜೀವಿಸಲು ಸಾಧ್ಯವಿಲ್ಲ. ತಿಳಿಯಿತಾ? ಅದಕ್ಕೇ ನಾನು ಆಶ್ರಮವಾಸಿಗಳಿಗೆ ಮತ್ತು ತುಂಬಾ ಸಮಯ ಒಂದೇ ಜಾಗದಲ್ಲಿರುವವರಿಗೆ ಕೂಡಾ ಹೇಳುವುದು, ಅವರು ಆಚೀಚೆ ಹೋಗಬೇಕೆಂದು. ನಾನು ಅವರಿಗೆ ಎಲ್ಲೆಡೆ ಪ್ರಯಾಣಿಸಿ ತಮ್ಮ ಜ್ಞಾನವನ್ನು ಹಂಚಬೇಕೆಂದು ಹೇಳುತ್ತೇನೆ. ಅವರು ಹಂಚಿಕೊಳ್ಳಲು ಪ್ರಾರಂಭಿಸಿದಾಗ ಸಂತೋಷಗೊಳ್ಳುತ್ತಾರೆ. ಎಲ್ಲಾ ಸಮಯವೂ ಒಂದೇ ಜಾಗದಲ್ಲಿದ್ದಾಗ ಕೆಲವೊಮ್ಮೆ ಅವರು ಬೇಜಾರುಗೊಳ್ಳುತ್ತಾರೆ. ನೀವು ಪ್ರಯಾಣಿಸಲು ಸಾಧ್ಯವಿಲ್ಲದಿರುವ ಮತ್ತು ನೀವು ತೃಪ್ತಿ ಹಾಗೂ ಸಂಪೂರ್ಣತೆಯನ್ನು ಅನುಭವಿಸುವ ಒಂದು ವಯಸ್ಸಿರುತ್ತದೆ, ಆಗ ಪರವಾಗಿಲ್ಲ.