ಗುರುವಾರ, ಮೇ 10, 2012

ಟೀಕೆಯೂ ಪ್ರೀತಿ ವ್ಯಕ್ತಪಡಿಸುವ ಒ೦ದು ವಿಧಾನವಾಗಿರಲಿ


10
2012............................... ಮಾಂಟ್ರಿಯಲ್, ಕೆನಡ
May

ಪ್ರೀತಿಯೆಂಬುದು ನೀವು ತೊಡೆದು ಹಾಕಲು ಸಾಧ್ಯವಿಲ್ಲದಿರುವಂತಹುದು. ಅದು ನಿಮ್ಮ ಸ್ವಭಾವ. ಒಂದೋ ಅದು ತನ್ನನ್ನು ತಾನೇ ಒಂದು ಶುದ್ಧ ರೂಪದಲ್ಲಿ ಹಾಜರು ಪಡಿಸುತ್ತದೆ ಅಥವಾ ಅದು ತನ್ನನ್ನು ತಾನೇ ಒಂದು ತಿರುಚಿದ ರೂಪದಲ್ಲಿ ಹಾಜರು ಪಡಿಸುತ್ತದೆ. ಒಂದೋ ಶುದ್ಧವಾದ ಪ್ರೀತಿಯಿರುತ್ತದೆ ಅಥವಾ ಶುದ್ಧ ಪ್ರೀತಿಯು ಒಂದು ತಿರುಚಿದ ರೂಪದಲ್ಲಿ ವ್ಯಕ್ತಗೊಳಿಸಲ್ಪಡುತ್ತದೆ. ಪ್ರೀತಿಯ ವಿಕಾರಗಳು ಯಾವುವು? ಕ್ರೋಧ, ಮಾತ್ಸರ್ಯ, ದ್ವೇಷ, ಲೋಭ ಮತ್ತು ಸ್ವಾಮಿತ್ವ. ಈ ಎಲ್ಲಾ ಸಲಕರಣೆಗಳು, ನಕಾರಾತ್ಮಕ ಭಾವನೆಗಳು, ಪ್ರೀತಿ ತಲೆ ಕೆಳಗಾಗಿರುವುದಲ್ಲದೆ ಮತ್ತೇನೂ ಅಲ್ಲ. ದೂಷಣೆ ಕೂಡಾ ಪ್ರೀತಿಯೇ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ನೀವು ಯಾರನ್ನಾದರೂ ಇಷ್ಟ ಪಡದಿದ್ದರೆ, ನೀವು ಸುಮ್ಮನೇ ಅವರಿಂದ ದೂರ ಸರಿಯುತ್ತೀರಿ. ನೀವು ದೂಷಿಸುತ್ತಾ ಇದ್ದರೆ, ಅದರರ್ಥ ನಿಜವಾಗಿ ನೀವು ಅವರನ್ನು ಇಷ್ಟಪಡುತ್ತೀರೆಂದು. ನೀವು ಅವರಿಂದ ದೂರ ಇರಲಾರಿರಿ, ನೀವು ಅವರಿಂದ ದೂರ ಹೋಗಲಾರಿರಿ ಮತ್ತು ಅದಕ್ಕಾಗಿಯೇ ನೀವು ಅವರನ್ನು ದೂಷಿಸುತ್ತಾ ಇರುವುದು.
ದೂಷಣೆಯ ಪ್ರಯೋಜನವೇನು? ನೋಡಿ, ನೀವು ಒಬ್ಬನನ್ನು ದೂಷಿಸುತ್ತೀರಿ ಮತ್ತು ಆ ವ್ಯಕ್ತಿಯು ನಿಜವಾಗಿ ಒಬ್ಬ ಅಪರಾಧಿಯಾಗಿದ್ದರೆ, ಮೊದಲನೇ ಸಾರಿ ಅದು ಅವನನ್ನು ಪ್ರಚೋದಿಸುತ್ತದೆ, ಆದರೆ ನೀವು ಅವನನ್ನು ದೂಷಿಸುತ್ತಾ ಇದ್ದರೆ, ಅವನು ಅದರ ಬಗ್ಗೆ ಉದಾಸೀನನಾಗುತ್ತಾನೆ; ಅವನು ಅದನ್ನು ಲಕ್ಷಿಸುವುದಿಲ್ಲ. ಒಬ್ಬನು ನಿಜವಾದ ಕಳ್ಳನೆಂದಿಟ್ಟುಕೊಳ್ಳಿ ಮತ್ತು ನೀವು ಅವನನ್ನು "ನೀನೊಬ್ಬ ಕಳ್ಳ" ಎಂದು ಹೇಳುತ್ತಾ ಇರುತ್ತೀರಿ, ನೀವು ಅವನನ್ನು ದೂಷಿಸಿಕೊಂಡು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿರುತ್ತೀರಿ ಯಾಕೆಂದರೆ ಪ್ರತಿ ಸಲವೂ ನೀವು ಅದನ್ನು ಹೇಳುವಾಗ, ಅದು ಅವನಿಗೊಂದು ವಿಷಯವೇ ಅಲ್ಲ. ಅದು ಅವನನ್ನು ಸ್ಪರ್ಷಿಸುವುದೇ ಇಲ್ಲ. ಇಡೀ ದಿನ ನೀವೊಂದು ಗೋಪುರದ ಮೇಲೆ ನಿಂತು, "ಅವನೊಬ್ಬ ಕಳ್ಳ, ಅವನೊಬ್ಬ ಕಳ್ಳ" ಎಂದು ಕಿರುಚಿದರೆ ಏನಾಗುತ್ತದೆ? ಒಬ್ಬ ಕಳ್ಳನಿಗೆ ಅದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಆದುದರಿಂದ ಒಬ್ಬ ನಿಜವಾದ ಅಪರಾಧಿಗೆ ನೀವು ಅವನನ್ನು ಅಥವಾ ಅವಳನ್ನು ದೂಷಿಸುವುದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಅವನು ಅಪರಾಧಿಯಲ್ಲದಿದ್ದರೆ, ಅವನೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಿಜವಾಗಿ ನಿಷ್ಕಪಟಿಯಾಗಿದ್ದರೆ ಮತ್ತು ನೀವು ಅವನನ್ನು ದೂಷಿಸಿದರೆ, ಅದು ಅವನ ಹೃದಯದೊಳಗೆ ನಾಟುತ್ತದೆ; ಅದು ಅವನ ಆತ್ಮವನ್ನು ಮುಟ್ಟುತ್ತದೆ, ಅವನ ಆತ್ಮವನ್ನು ಕಲಕುತ್ತದೆ. ಆ ವ್ಯಕ್ತಿಯು ಒಬ್ಬ ಯೋಗಿಯಾಗಿದ್ದರೆ, ಅವನು ಅದನ್ನು ತನ್ನ ಲಾಭಕ್ಕಾಗಿ ಉಪಯೋಗಿಸುತ್ತಾನೆ. ಆ ವ್ಯಕ್ತಿಯು ಒಬ್ಬ ಯೋಗಿಯಾಗಿದ್ದರೆ, ಅಂದರೆ ಯಾರಲ್ಲಿ ಸ್ವಲ್ಪ ಬುದ್ಧಿವಂತಿಕೆಯಿರುತ್ತದೆಯೋ ಅವನು, "ಜನರು ಹೊಗಳುತ್ತಾರೆ ಮತ್ತು ಅವರು ದೂಷಿಸುತ್ತಾರೆ, ಆದರೆ ನಾನು ನನ್ನ ಸಮಚಿತ್ತತೆಯನ್ನಿರಿಸಬೇಕು" ಎಂದು ಹೇಳುತ್ತಾನೆ. ಆದುದರಿಂದ ಒಬ್ಬ ಯೋಗಿಯು ಅದನ್ನು, ತನ್ನ ಸಮಚಿತ್ತತೆಯನ್ನು ಉಳಿಸಲು ಇರುವ ಒಂದು ಅಭ್ಯಾಸವನ್ನಾಗಿ ಉಪಯೋಗಿಸುತ್ತಾನೆ ಮತ್ತು ಎಲ್ಲರಿಗೂ ಕೇವಲ ಒಳ್ಳೆಯದನ್ನು ಮಾತ್ರ ಬಯಸುತ್ತಾನೆ. ಆ ವ್ಯಕ್ತಿಯು ಅಷ್ಟೊಂದು ಬುದ್ಧಿವಂತನಲ್ಲದಿದ್ದರೆ, ಅದು  ಹೃದಯದೊಳಕ್ಕೆ ಇರಿದು ಅವನಿಗೆ ನೋವಾದರೆ, ಅದು ನಿಮಗೆ ಹಿಂತಿರುಗಿ ಬೀಳುತ್ತದೆ. ಆದುದರಿಂದ, ಎರಡೂ ಪರಿಸ್ಥಿತಿಗಳಲ್ಲಿ, ಒಬ್ಬನನ್ನು ದೂಷಿಸುವುದರಿಂದ ಮತ್ತು ಅವನ ಬಗ್ಗೆ ಹಗಲು ರಾತ್ರಿ ಕೆಟ್ಟದಾಗಿ ಬರೆಯುವುದರಿಂದ ಉದ್ದೇಶ ಸಾಧನೆಯಾಗುವುದಿಲ್ಲ.
ಕೆಲವು ವ್ಯಕ್ತಿಗಳು ಜೀವನ ಕಲೆಯ ಬಗ್ಗೆ ಹಗಲು ರಾತ್ರಿ ನಕಾರಾತ್ಮಕ ವಿಷಯಗಳನ್ನು ಮಾತ್ರ ಬರೆಯುತ್ತಾರೆಂದು ನಾನು ಕೇಳಿದ್ದೇನೆ. ಈ ರೀತಿ ಮಾಡುವುದರಿಂದ ಕನಿಷ್ಠ ಪಕ್ಷ ನಾವು ಮಾಡುತ್ತಿರುವುದನ್ನು ಅವರು ಅನುಸರಿಸುತ್ತಿದ್ದಾರೆ! ಅವರು ಎಲ್ಲಾ ರೀತಿಯ ಕಚಡಾ ಬರೆಯುತ್ತಾರೆ. ಅದು ನಮಗೊಂದು ವಿಷಯವಲ್ಲ. ಅವರ ಉದ್ದೇಶವೇನೆಂಬುದು ನಮಗೆ ಗೊತ್ತಿಲ್ಲ. ಇತರರು ಜೀವನ ಕಲೆಗೆ ಬರುವುದನ್ನು ತಡೆಯಲು ಅವರು ಬಯಸುತ್ತಾರೆಯೇ? ನಾನು ಅವರಿಗೆ ಹೇಳುವುದೇನೆಂದರೆ ಅದು ಆ ರೀತಿಯಾಗಲು ಸಾಧ್ಯವಿಲ್ಲ. ಜನರು ಹೇಗಿದ್ದರೂ ಬರುತ್ತಾರೆ. ಅವರು ನಕಾರಾತ್ಮಕವಾಗಿ ಬರೆದರೆ, ಅದೇನೆಂದು ತಿಳಿಯಲು ಹೆಚ್ಚು ಜನರು ಕುತೂಹಲ ತಾಳುತ್ತಾರೆ ಮತ್ತು ಅವರು ಹೇಗಿದ್ದರೂ ಬರುತ್ತಾರೆ. ಆದುದರಿಂದ ಅವರು ಸುಮ್ಮನೇ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದಾರೆ.
ಆದುದರಿಂದ, ದೂಷಣೆಯು ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ ಮತ್ತು ನಿಮಗೆ ಯಾವುದೇ ಫಲವನ್ನು ನೀಡುವುದಿಲ್ಲ. ನಿಮ್ಮ ದೂಷಣೆಯಿಂದ ನೀವು ಯಾರನ್ನಾದರೂ ಸರಿಪಡಿಸಬಹುದೆಂದಿಟ್ಟುಕೊಳ್ಳಿ, ಅದು ಅತ್ಯುತ್ತಮ. ಆದರೆ ವಿಷಯವೇನೆಂದರೆ, ದೂಷಿಸುವುದರ ಮೂಲಕ  ನೀವು ಒಬ್ಬ ಅಪರಾಧಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ನೀವು ಅವನನ್ನು ಕೇವಲ ಪ್ರೀತಿ, ಸಹಾನುಭೂತಿ ಮತ್ತು ಸಂಪರ್ಕಗಳ ಮೂಲಕ ಮಾತ್ರ ಸರಿಪಡಿಸಲು ಸಾಧ್ಯ. ದೂಷಣೆಯೆಂದರೆ ಸಂಪರ್ಕವಿಲ್ಲದಿರುವುದು. ಒಬ್ಬ ನಿಜವಾದ ಅಪರಾಧಿಯಿದ್ದು, ನೀವು ಅವನನ್ನು ಸರಿಪಡಿಸಲು ಬಯಸಿದರೆ, ನೀವು ಅದನ್ನು ಸಂಪರ್ಕದ ಮೂಲಕ ಮಾತ್ರ ಮಾಡಲು ಸಾಧ್ಯ. ಅವನು ನಿಜವಾದ ಅಪರಾಧಿಯಲ್ಲದಿದ್ದರೆ, ನಿಮ್ಮ ಸಂಪೂರ್ಣ ಯತ್ನ ವಿಫಲವಾಗುತ್ತದೆ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ನಿಮ್ಮ ಸಂಪೂರ್ಣ ಯತ್ನ ವಿಫಲವಾಗುತ್ತದೆ ಯಾಕೆಂದರೆ ನೀವು ದೂಷಿಸುತ್ತೀರಿ ಮತ್ತು ದೂಷಿಸುತ್ತೀರಿ, ಹಾಗೂ ಅದು ಸಹಾಯ ಮಾಡುವುದಿಲ್ಲ.
ನಿಮ್ಮ ಮನೆಯಲ್ಲಿ ಒಬ್ಬರು ತಿದ್ದಿ ಸರಿಪಡಿಸಲಾಗದವರಾಗಿದ್ದು ನಿಮ್ಮನ್ನು ರೇಗಿಸುತ್ತಾರೆಂದಿಟ್ಟುಕೊಳ್ಳೋಣ. ನಿಮ್ಮ ತಾಯಿ, ನಿಮ್ಮ ತಂದೆ, ಸಂಗಾತಿ, ಮಕ್ಕಳು ಅಥವಾ ಯಾರಾದರೂ ನಿಮ್ಮನ್ನು ರೇಗಿಸುತ್ತಾರೆ, ನೀವೇನು ಮಾಡುತ್ತೀರಿ? ನೀವು ಅವರನ್ನು ದೂಷಿಸುತ್ತಾ ಇರುತ್ತೀರಿ. ನೀವು ನಿಮ್ಮ ಅತ್ತೆಯನ್ನು ದೂಷಿಸುವುದರಿಂದ ನಿಮಗೆ ಯಾವುದೇ ಸಕಾರಾತ್ಮಕ ಪ್ರತಿಫಲವು ಸಿಗುವುದಿಲ್ಲ. ನಿಮಗೆ ಬಹಳ ಸಮಸ್ಯೆಗಳು ಎದುರಾಗಬಹುದು! ಅವರನ್ನು ದೂಷಿಸುವುದರ ಬದಲು ಈ ಅವಕಾಶವನ್ನು, ನಿಮ್ಮ ಸಮಚಿತ್ತತೆಯನ್ನು, ನಿಮ್ಮ ಒಳಗಿನ ಸಮತೋಲನವನ್ನು ಕಾಪಾಡಲಿರುವ ಒಂದು ವ್ಯಾಯಾಮವನ್ನಾಗಿ ತೆಗೆದುಕೊಳ್ಳಿ. ಆದುದರಿಂದ, ಎಲ್ಲವೂ ಸರಿಯಾಗಿದ್ದರೆ, ಎಲ್ಲರೂ ನಿಮ್ಮನ್ನು ಹೊಗಳುತ್ತಾ ಇದ್ದರೆ ಮತ್ತು ನೀವು "ನಾನು ತುಂಬಾ ಸಮತೋಲನದಲ್ಲಿರುವ ವ್ಯಕ್ತಿ" ಎಂದು ಹೇಳಿದರೆ ಅದಕೆ ಅಷ್ಟು ಅರ್ಥವಿಲ್ಲ. ಅದು ಅಸಮಂಜಸ.
ಒಂದು ಜನರ ಗುಂಪು ಅಥವಾ ಕೇವಲ ಒಬ್ಬ ವ್ಯಕ್ತಿಯಾದರೂ, ನೀವು ಮಾಡದೇ ಇರುವ ವಿಷಯಕ್ಕೆ ನಿಮ್ಮನ್ನು ದೂಷಿಸುತ್ತಾ ಇದ್ದರೆ ಮತ್ತು ಆಗಲೂ ನೀವು ನಿಮ್ಮ ಸಮತೋಲನವನ್ನಿಟ್ಟುಕೊಂಡಿದ್ದರೆ ಆಗ ಅದರರ್ಥ ನೀವು ಏನನ್ನೋ ಸಾಧಿಸಿದ್ದೀರೆಂದು, ನೀವೆಲ್ಲಿಗೋ ತಲುಪಿದ್ದೀರೆಂದು ಮತ್ತು ನೀವು ಯಾವುದೋ  ಹಂತಕ್ಕೆ ಏರಿದ್ದೀರೆಂದು. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ನಿಮಗೆ ಅಂತಹ ಒಂದು ಅವಕಾಶದ ಅಗತ್ಯವಿದೆ; ಯಾರೋ ನಿಮ್ಮನ್ನು ದೂಷಿಸುತ್ತಾರೆ, ಅವರು ಮಾಡುತ್ತಿರುವುದು ಸಂಪೂರ್ಣವಾಗಿ ಕಚಡಾ ಮತ್ತು ತಪ್ಪು ಎಂದು ತಿಳಿದಿದ್ದರೂ ಕೂಡಾ ನಿಮಗೆ ನಿಮ್ಮ ಸಮಚಿತ್ತತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಆದುದರಿಂದ, ಒಬ್ಬ ಮುಗ್ಧ ವ್ಯಕ್ತಿಯನ್ನು ದೂಷಿಸುತ್ತಿರುವ ವ್ಯಕ್ತಿಗೆ, ಬಲಿಪಶುವಾದವನು ಆಶೀರ್ವಾದಗಳನ್ನು ಕಳುಹಿಸುತ್ತಿದ್ದರೂ ಕೂಡಾ, ಅದು ಯಾವುದೇ ಒಳಿತನ್ನು ಮಾಡುವುದಿಲ್ಲ. ಮುಗ್ಧರನ್ನು ದೂಷಿಸುವುದು ಅಷ್ಟೊಂದು ಒಳ್ಳೆಯ ವಿಷಯವಲ್ಲ. ಹೀಗಿದ್ದರೂ, ರಚನಾತ್ಮಕ ಟೀಕೆಗಳು ಅಗತ್ಯವಾಗಿದೆ. ಇದರರ್ಥ, ಯಾವುದೂ ಸರಿಯಿಲ್ಲವೆಂದು ನಿಮಗೆ ಅನ್ನಿಸಿದಾಗಲೂ ನೀವು ಯಾವತ್ತೂ ಒಳ್ಳೆಯ ವಿಷಯಗಳನ್ನು  ಹೇಳಬೇಕೆಂದಲ್ಲ. ನೀವು ನಿಮ್ಮ ಮುಖದಲ್ಲಿ ನಗೆಯನ್ನಿರಿಸುತ್ತೀರಿ, ಆದರೆ ಒಳಗಡೆ ನೀವು ತುಂಬಾ ಕೋಪವನ್ನು ಅನುಭವಿಸುತ್ತೀರಿ. ಇದು ಕೆಲಸ ಮಾಡುವುದಿಲ್ಲ. ನಾವು ನಿಷ್ಕಪಟಿಗಳಾಗಿರಬೇಕು. ನಾವು ಪ್ರಾಮಾಣಿಕರಾಗಿರಬೇಕು. ನಿಮಗೆ ಗೊತ್ತಿದೆಯಾ, ಕೋಪವನ್ನು ಒಳಗಡೆ ಅದುಮಿಟ್ಟುಕೊಳ್ಳುವುದು ಕೂಡಾ ಇನ್ನೊಂದು ಸಮಸ್ಯೆ. ಅದೇ ಸಮಯದಲ್ಲಿ, ಎಲ್ಲಾ ಸಮಯದಲ್ಲೂ ಒಂದು ಟೈಮ್ ಬಾಂಬ್ ಆಗಿರುವುದು ಅಥವಾ ಒಂದು ಟೈಮ್ ಲೆಸ್ ಬಾಂಬ್ ಆಗಿರುವುದು ಕೂಡಾ ಅಪಾಯಕಾರಿ. ಆದುದರಿಂದ, ನಮಗೆ ಜೀವನದಲ್ಲಿ ಒಂದು ನಿರ್ದಿಷ್ಟ ಸಮತೋಲನದ, ನಿರ್ದಿಷ್ಟ ಜ್ಞಾನದ ಅಗತ್ಯವಿದೆ. ಮೌನ, ಧ್ಯಾನ ಮತ್ತು ಈ ಎಲ್ಲಾ ಅಭ್ಯಾಸಗಳು ನಿಮ್ಮನ್ನು ಆ ದಿಕ್ಕಿನಲ್ಲಿ ಕೊಂಡೊಯ್ಯುತ್ತವೆ.
ಈಗ ನನ್ನಲ್ಲಿ ಹೇಳಬೇಡಿ, "ಓ, ನಾನು ತುಂಬಾ ಸಮಯದಿಂದ ಧ್ಯಾನ ಮಾಡುತ್ತಿದ್ದೇನೆ ಆದರೂ ಕೋಪಗೊಳ್ಳುತ್ತೇನೆ". ಚಿಂತಿಸಬೇಡಿ. ನೀವು ೧೦೦ ಸಾರಿ ಕೋಪಗೊಳ್ಳುತ್ತಿದ್ದರೆ, ಈಗ ನೀವು ಒಂದು ಡಜ಼ನ್ ನಷ್ಟು ಸಾರಿ ಕೋಪಗೊಳ್ಳುತ್ತಿರುವಿರಿ. ನೀವು ಒಂದು ಡಜ಼ನ್ ನಷ್ಟು ಸಾರಿ ಕೋಪಗೊಳ್ಳುತ್ತಿದ್ದರೆ, ಈಗ ನೀವು ಎರಡು ಮೂರು ಬಾರಿ ಕೋಪಿಸಿಕೊಳ್ಳುತ್ತಿರಬಹುದು. ಆದುದರಿಂದ ಅದು ಯಾವತ್ತೂ ಕಡಿಮೆಯಾಗುತ್ತದೆ. ಅದು ಪ್ರಯೋಜನವೇ ಆಗುವುದಿಲ್ಲವೆಂದು ನಿಮಗೆ ಯಾವತ್ತೂ ಹೇಳಲು ಸಾಧ್ಯವಿಲ್ಲ. ನೀವು ಯಾರನ್ನಾದರೂ ದೂಷಿಸುವಾಗ, ನೀವು ದೂಷಿಸುತ್ತಿರುವುದರ ಉದ್ದೇಶವೇನೆಂದು ಸುಮ್ಮನೇ ವಿಶ್ಲೇಷಿಸಿ ನೋಡಿ. ನೀವು ಆ ವ್ಯಕ್ತಿಯನ್ನು ಸರಿಪಡಿಸಲು ಬಯಸುತ್ತೀರಿ, ಅದಕ್ಕಾಗಿಯೇ ನೀವು ದೂಷಿಸುತ್ತಿರುವುದು? ಅಥವಾ ನೀವು ದೂಷಿಸುತ್ತಿರುವುದು ಕೇವಲ ನಿಮ್ಮ ಭಾವನೆಗಳನ್ನು ಹೊರ ಹಾಕಲಿಕ್ಕಾಗಿಯೇ? ನಿಮ್ಮ ಮನೋಭಾವವೇನು? ಅದನ್ನು ಮಾಡಲು ನೀವು ಯಾಕೆ ಬಯಸುತ್ತೀರಿ? ನಿಮ್ಮ ಭಾವನೆಗಳನ್ನು ಹೊರ ಹಾಕುವುದು ಅಥವಾ ಒಬ್ಬರನ್ನು ದೂಷಿಸುವುದು, ನೀವೆಷ್ಟು ಅಪ್ರಬುದ್ಧರು, ನಿಮ್ಮಲ್ಲಿ ಎಷ್ಟು ಮಾತ್ಸರ್ಯವಿದೆ, ನಿಮಗೆ ನಿಮ್ಮದೇ ಮನಸ್ಸಿನ ಮೇಲೆ ಯಾವ ರೀತಿಯಲ್ಲಿ ನಿಯಂತ್ರಣವಿಲ್ಲ ಹಾಗೂ ನಿಮಗೆ ಹೇಗೆ ಇನ್ನೂ ಹೆಚ್ಚಿನ ಧ್ಯಾನದ ಅಗತ್ಯವಿದೆ, ಇವುಗಳನ್ನೆಲ್ಲಾ ಮಾತ್ರ ತೋರಿಸುತ್ತದೆ. ಅಲ್ಲವೇ?
ಕನ್ನಡದಲ್ಲಿ ಒಂದು ಸುಂದರವಾದ ದ್ವಿಪದಿಯಿದೆ. ಅದನ್ನು ನಾನು ಶಾಲೆಯಲ್ಲಿರುವಾಗ ಓದುತ್ತಿದ್ದೆ. ಅದು ಹೇಳುತ್ತದೆ, "ಅಡವಿಯೊಳಗೊಂದು ಮನೆಯ ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕೆ ನಾಚಿದೊಡೆಂತಯ್ಯ? ಬೆಟ್ಟದ ಮೇಲೊಂದು ಮನೆಯ ಮಾಡಿ, ಗಾಳಿಗೆ ಅಂಜಿದೊಡೆಂತಯ್ಯ? ಅದೇ ರೀತಿಯಲ್ಲಿ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳಿಗೆ ಅಂಜಿ, ನನ್ನನ್ನು ಸ್ತುತಿ-ನಿಂದೆ ಮಾಡುವುದು ಬೇಡವೆಂದರೆ ನಾನೇನು ಹೇಳಲಿ?  ನಾನು ನನ್ನ ದೇವರ ಪಾದಗಳಲ್ಲಿ ಆಶ್ರಯ ಪಡೆಯುತ್ತೇನೆ ಮತ್ತು ನಂತರ ನಾನೆಲ್ಲೇ ಇದ್ದರೂ ಅಲ್ಲಿ ಸುಖವಿದೆ. ದೇವರ ಪಾದಗಳಲ್ಲಿ ಆಶ್ರಯ ಪಡೆಯುವುದೊಂದೇ ಇರುವ ಸುಖ". ಇದು ಬಹಳ ಸುಂದರವಾಗಿದೆ! ಭಯವಿಲ್ಲದಿರುವ ಜಾಗ ಯಾವುದು? ಅದು ನಾನು ದೇವರ ಪಾದಗಳಲ್ಲಿ ಆಶ್ರಯ ಪಡೆಯುವಾಗ. ಶಾಲೆಯಲ್ಲಿ, ನಮ್ಮ ಪಠ್ಯಪುಸ್ತಕಗಳಲ್ಲಿರುತ್ತಿದ್ದ ಈ ಚಿಕ್ಕ ಪದ್ಯಗಳನ್ನು ನೋಡಿ ನಾವು ನಗುತ್ತಿದ್ದೆವು. ಆದರೆ ನನಗನಿಸುತ್ತದೆ ಈಗ ಈ ಎಲ್ಲಾ ಪದ್ಯಗಳನ್ನು ತೆಗೆದು ಹಾಕಿದ್ದಾರೆಂದು.
ಯಾರಾದರೂ ನಿಮ್ಮನ್ನು ದೂಷಿಸಿದರೆ ಅಥವಾ ನಿಮ್ಮನ್ನು ಟೀಕಿಸಿದರೆ ಅಥವಾ ನಿಮ್ಮನ್ನು ಹೊಗಳಿದರೆ ನೀವು ಅವರನ್ನು ಒಂದೇ ಸಮನಾಗಿ ಸ್ವೀಕರಿಸಬೇಕು, ನೀವು ಅದರ ಬಗ್ಗೆ ಚಿಂತಿಸಬಾರದೆಂಬುದು ನಮಗಿದ್ದ ಒಂದು ಪಾಠವಾಗಿತ್ತು. ಟೀಕೆಗಳನ್ನು ಎದುರಿಸಿ ಮತ್ತು ಸಹಾನುಭೂತಿಯೊಂದಿಗೆ ರಚನಾತ್ಮಕ ಟೀಕೆಗಳನ್ನು ನೀಡಿ. ಒಂದು ಟೀಕೆಯು, ಸಹಾನುಭೂತಿ ಮತ್ತು ಕಾಳಜಿಯೊಂದಿಗಿರಬೇಕು. ಅದು ಕೆಲಸ ಮಾಡುತ್ತದೆ. ಕೋಪದೊಂದಿಗೆ, ಮಾತ್ಸರ್ಯದೊಂದಿಗೆ ಮತ್ತು ದ್ವೇಷದೊಂದಿಗೆ ದೂಷಿಸುವುದು ಕೆಲಸ ಮಾಡುವುದಿಲ್ಲ. ಅದು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ.
ಪ್ರಶ್ನೆ: ಪ್ರೀತಿಯ ಗುರುದೇವ, ಈಗಿನ ಶಿಕ್ಷಣ ಪದ್ಧತಿಯು ಹೆಚ್ಚಾಗಿ ಮಕ್ಕಳಿಗೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆಯೆಂದು ನನಗನ್ನಿಸುತ್ತದೆ. ಸಹಕರಿಸುವುದರ ಬದಲಾಗಿ ಸ್ಪರ್ಧಿಸಲು ನಮಗೆ ಕಲಿಸಲಾಗುತ್ತದೆ ಹಾಗೂ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಸಂತೋಷಕ್ಕಾಗಿ ಕಲಿಯುವುದರ ಬದಲು ಉತ್ತಮ ದರ್ಜೆಗಳಿಗಾಗಿ ಮತ್ತು ನೌಕರಿಗಳಿಗಾಗಿ ಓದಲು ಪ್ರೋತ್ಸಾಹಿಸಲಾಗುತ್ತದೆ. ವಿಷಯಗಳನ್ನು ನಮ್ಮದೇ ಆದ ಗತಿಯೊಂದಿಗೆ ಮತ್ತು ಜ್ಞಾನದೊಂದಿಗೆ ಅರಿಯುವುದರ ಬದಲು ಮಾಹಿತಿಗಳನ್ನು ಮತ್ತು ವಸ್ತುಸ್ಥಿತಿಗಳನ್ನು ಹೀರಲು ನಮ್ಮನ್ನು ಬಲವಂತಪಡಿಸಲಾಗುತ್ತದೆ. ಇದರ ಬಗ್ಗೆ ನಿಮ್ಮ ಮಾರ್ಗದರ್ಶನವೇನು, ಗುರೂಜಿ? ಪರೀಕ್ಷೆಗಳು ಮತ್ತು ಕಠಿಣ ಪಠ್ಯಕ್ರಮವಿಲ್ಲದ ಶಾಲೆಗಳನ್ನು ನಾವು ಹುಡುಕಬೇಕೇ?
ಶ್ರೀ ಶ್ರೀ ರವಿಶಂಕರ್:
ಶಿಕ್ಷಣ ಪದ್ಧತಿಯು ಪರಿಪೂರ್ಣವಾಗಿಲ್ಲದಿದ್ದರೂ ಕೂಡಾ ನಾವು ಪ್ರವಾಹದೊಂದಿಗೆ ಹೋಗಬೇಕಾಗಿ ಬರುತ್ತದೆ, ಯಾಕೆಂದರೆ ಆಗ ಮಾತ್ರ ನಿಮ್ಮ ಮಕ್ಕಳಿಗೆ ನೌಕರಿ ಸಿಗುತ್ತದೆ. ಅವರಿಗೆ ಒಂದು ಶೈಕ್ಷಣಿಕ ಗುರುತು ಸಿಗುತ್ತದೆ. ವೈದ್ಯಕೀಯ ವಿಜ್ಞಾನದಲ್ಲಿ ಕೂಡಾ, ಬಹಳ ಸಮಯದ ಹಿಂದೆ ಬರೆಯಲಾದ ಹಲವಾರು ಪಠ್ಯಪುಸ್ತಕಗಳಿವೆ, ಆದರೆ ಅವುಗಳನ್ನು ಈಗಲೂ ಕಲಿಸಲಾಗುತ್ತಿದೆ. ಇವತ್ತಿನ ಆಧುನಿಕ ವೈದ್ಯಕೀಯವು ಹಲವಾರು ವಿಷಯಗಳನ್ನು ಅಪ್ರಸ್ತುತವಾಗಿಸಿದೆ, ಆದರೆ ನಾವು ಈಗಲೂ ಹಳೆಯ ಪಠ್ಯಪುಸ್ತಕಗಳನ್ನು ಓದುತ್ತಾ ಹೋಗುತ್ತಿದ್ದೇವೆ.
ಹೃದಯದ ಸಮಸ್ಯೆಗಳಿಗೆ ಕಾರಣವಾಗುವ ಸುಮಾರು ೪೩ ಜೀನುಗಳಿವೆಯೆಂದು, ಆದರೆ ನಮ್ಮ ವೈದ್ಯಕೀಯ ವಿಜ್ಞಾನವು ಕೇವಲ ಐದು ಅಥವಾ ಆರನ್ನು ಮಾತ್ರ ತಿಳಿದಿದೆಯೆಂದು ನಾನು ನಿನ್ನೆ ಕೇಳಿದೆ. ಅವರು ಆ ಆಯಾಮಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರಿಗೆ ಇತರ ಆಯಾಮಗಳು ತಿಳಿದಿಲ್ಲ.
ಆದುದರಿಂದ, ವಿಜ್ಞಾನವು ಪ್ರತಿದಿನವೂ ನವೀಕರಿಸಲ್ಪಡುತ್ತದೆ. ಹೊಸ ಸಂಶೋಧಕರು ಬರುತ್ತಿದ್ದಾರೆ ಮತ್ತು ಹಳೆಯ ಮಾದರಿ ಪಲ್ಲಟವಾಗಿದೆ, ಆದರೆ ಮಕ್ಕಳು ಶಾಲೆ ಮತ್ತು ಕಾಲೇಜುಗಳಲ್ಲಿ ಇನ್ನೂ ಅದೇ ಪಠ್ಯಕ್ರಮವನ್ನು ಓದುತ್ತಿದ್ದಾರೆ. ಅವರಿಗೆ ಪಠ್ಯಕ್ರಮವನ್ನು ನವೀಕರಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಉದಾಹರಣೆಗೆ, ಚರಿತ್ರೆಯಲ್ಲಿ ಆರ್ಯರ ದಾಳಿಯ ಸಿದ್ಧಾಂತವಿತ್ತು. ಅದರ ಪ್ರಕಾರ ಆರ್ಯರು ಮಧ್ಯ ಏಷ್ಯಾದಿಂದ ಬಂದರು ಮತ್ತು ಭಾರತದ ಮೇಲೆ ದಾಳಿ ಮಾಡಿದರು. ಇವತ್ತು, ಅದು ತಪ್ಪೆಂದು ಹಾಗೂ ಒಂದು ಸಂಪೂರ್ಣ ಸುಳ್ಳೆಂದು ಸಾಬೀತುಪಡಿಸಿದ್ದಾರೆ. ಆದರೂ, ಪಠ್ಯಪುಸ್ತಕಗಳು ಅದೇ ಕಥೆಯನ್ನು ಸಾರುತ್ತಿವೆ. ಇದನ್ನೆಲ್ಲಾ ಬದಲಾಯಿಸಲು ಅವರಿಗೆ ಇನ್ನೊಂದು ದಶಕ ಬೇಕಾಗಬಹುದು. ಆದರೆ ಬೇರೆ ಆಯ್ಕೆಯಿಲ್ಲ. ಯಾರಾದರೂ, "ಇಲ್ಲ, ನಾನು ಇದನ್ನು ಓದುವುದಿಲ್ಲ, ನಾನು ಸ್ವಂತವಾಗಿ ಬರೆಯುತ್ತೇನೆ" ಎಂದು ಹೇಳಿದರೆ, ಅವರಿಗೆ ಒಂದು ಪದವಿ ಸಿಗಲಾರದು. ಅವರಿಗೆ ಒಂದು ನೌಕರಿ ಸಿಗಲಾರದು. ಅವರಿಗೆ ಹೆಚ್ಚಿನ ಜ್ಞಾನವಿದ್ದರೂ, ಅವರನ್ನು ಒಬ್ಬ ವಿದ್ಯಾವಂತ ವ್ಯಕ್ತಿಯೆಂದು ಕೂಡಾ ಪರಿಗಣಿಸುವುದಿಲ್ಲ. ನೀವು ಕೇವಲ ನಿಮ್ಮದೇ ಹವ್ಯಾಸಕ್ಕಾಗಿ, ನಿಮ್ಮದೇ ಸಂತೋಷಕ್ಕಾಗಿ, ಜ್ಞಾನ ಮತ್ತು ವಿವೇಕ ಗಳಿಸುವುದಕ್ಕಾಗಿ ಮಾತ್ರ ಅಧ್ಯಯನ ಮಾಡುವುದಾದರೆ ನಿಮಗೆ ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ. ಆದರೆ ನೀವು  ಒಂದು ವೃತ್ತಿಗಾಗಿ, ನೌಕರಿ ಹುಡುಕುವುದಕ್ಕಾಗಿ ಮಾಡುವುದಾದರೆ ನೀವು ಪ್ರವಾಹದೊಂದಿಗೆ ಹೋಗಬೇಕಾಗುತ್ತದೆ.
ಹಿಂದಿನ ಕಾಲದಲ್ಲಿ ಹಲವು ಬುದ್ಧಿವಂತ ವ್ಯಕ್ತಿಗಳು ಇದನ್ನು ಪ್ರಯತ್ನಿಸಿದ್ದಾರೆ. ಹಲವಾರು ಜನರು ಇದನ್ನು ಪ್ರಯೋಗ ಮಾಡುತ್ತಾ ಇದ್ದರು, ಆದರೆ ಈ ಯೋಜನೆಯ ಯಶಸ್ಸು ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಅಲ್ಲಿ ಕಲಿತವರಲ್ಲಿ ಎಷ್ಟು ಮಕ್ಕಳಿಗೆ ನೌಕರಿ ಸಿಕ್ಕಿದೆ ಮತ್ತು ತಮ್ಮ ವೃತ್ತಿಯಲ್ಲಿ ಯಶಸ್ಸು ಹೊಂದಿದ್ದಾರೆಂದು ನಮಗೆ ಗೊತ್ತಿಲ್ಲ. ಅವರಿಗೆ ಸಿಕ್ಕಿರಲೂ ಬಹುದು, ಆದರೆ ಇದೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ.
ಅಮೇರಿಕಾದಲ್ಲಿ ಮನೆ-ಶಿಕ್ಷಣ ಚೆನ್ನಾಗಿದೆ; ಹೆಚ್ಚು ಹೆಚ್ಚು ಜನರು ಮನೆ-ಶಿಕ್ಷಣ ಮಾಡುತ್ತಿದ್ದಾರೆ. ನಾನು ಬೇಡವೆಂದು ಹೇಳುತ್ತಿಲ್ಲ, ಆದರೆ ನೀವು ಅದರ ಬಗ್ಗೆ ತಿಳಿದುಕೊಳ್ಳಬೇಕಾಗಬಹುದು. ನಿಮಗೊಂದು ಸ್ವಂತ ವ್ಯಾಪಾರವಿದ್ದರೆ, ಆಗ ಪದವಿಗಳು ಸಂಗತಿಯೇ ಅಲ್ಲ, ಯಾಕೆಂದರೆ ನಿಮ್ಮ ಮಕ್ಕಳು ಹೇಗಿದ್ದರೂ ಸ್ವಂತ ವ್ಯಾಪಾರವನ್ನು ನೋಡಿಕೊಳ್ಳುವರು. ಆಗ ಅವರು ಅವರಿಗೆ ಬೇಕಾದುದೇನನ್ನಾದರೂ ಮಾಡಬಹುದು.
ಪ್ರಶ್ನೆ: ಸಾವಿನ ಸಮಯದಲ್ಲಿ ಉಚ್ಛರಿಸಲು ಯೋಗ್ಯವಾದ ಮಂತ್ರ ಅಥವಾ ಮನಸ್ಸಿನಲ್ಲಿಡಲು ತಕ್ಕ ಚಿತ್ರ ಯಾವುದು? ಅದನ್ನು ನೀವು ಸರಿಯಾಗಿ ಮಾಡಿದರೆ, ನೀವು ಮೋಕ್ಷ ಹೊಂದಬಹುದೆಂದು ಧರ್ಮಗ್ರಂಥಗಳು ಹೇಳುತ್ತವೆ. ಹಾಗೆಯೇ, ಸಾಯುತ್ತಿರುವ ವ್ಯಕ್ತಿಗೆ ಮೋಕ್ಷ ಪಡೆಯಲು ಸಹಾಯ ಮಾಡುವುದಕ್ಕಾಗಿ, ಕುಟುಂಬ ಸದಸ್ಯರು ಏನನ್ನು ಉಚ್ಛರಿಸಬಹುದು ಅಥವಾ ಪಿಸುಗುಟ್ಟಬಹುದು?
ಶ್ರೀ ಶ್ರೀ ರವಿಶಂಕರ್:
ನಾನು ಹೇಳುವುದೆಂದರೆ ಓಂ ನಮಃ ಶಿವಾಯ. ಓಂ ನಮಃ ಶಿವಾಯ ಅಥವಾ ಓಂ ನಮೋ ನಾರಾಯಣಾಯ ಅಥವಾ ಹರಿ ಓಂ; ಇವುಗಳಲ್ಲಿ ಯಾವುದಾದರೂ.
ಪ್ರಶ್ನೆ: ಆತ್ಮನು ಒಂದೇ ಅಥವಾ ಹಲವಾರೇ? ಒಂದೇ ಆಗಿದ್ದರೆ, ಪ್ರತಿಯೊಬ್ಬನ ಕರ್ಮವನ್ನು ಕೊಂಡೊಯ್ಯುವುದು ಮತ್ತು ಅದನ್ನು ಒಂದು ಶರೀರದಿಂದ ಇನ್ನೊಂದಕ್ಕೆ ಸಾಗಿಸುವುದು ಯಾವುದು? ಒಬ್ಬರಿಗೆ ಜ್ಞಾನೋದಯವಾದ ಬಳಿಕವೂ ವೈಯಕ್ತಿಕತೆಯನ್ನು ಉಳಿಸಿಕೊಳ್ಳುವುದು ಯಾವುದು? ಒಬ್ಬನೇ ಜ್ಞಾನೋದಯವಾದ ವ್ಯಕ್ತಿಯಿರುವುದೇ  ಅಥವಾ ಹಲವರಿದ್ದಾರೆಯೇ?
ಶ್ರೀ ಶ್ರೀ ರವಿಶಂಕರ್:
ನೀನು ಕೇಳಿದ ಪ್ರಶ್ನೆಗಳೊಂದಿಗೆ, ನಾವೊಂದು ಪುಸ್ತಕವನ್ನು ಬರೆಯಬಹುದು! ನಾವು ಇದೆಲ್ಲವನ್ನೂ ಇನ್ನು ಯಾವಾಗಲಾದರೂ ತೆಗೆದುಕೊಳ್ಳೋಣ. ಈಗ, ನೀನು ಅದರ ಬಗ್ಗೆ ಯೋಚಿಸುತ್ತಾ ಇರು.
ಪ್ರಶ್ನೆ: ನಾನು ಹಲವಾರು ಸಾರಿ ನಿಮ್ಮಿಂದ ನನ್ನ ಸಂಪರ್ಕವನ್ನು ಕಳೆದುಕೊಳ್ಳುವುದಕ್ಕೆ ಕಾರಣವೇನು, ಕೇವಲ ಅದನ್ನು ಪುನಃ ಕಂಡುಕೊಳ್ಳುವುದಕ್ಕಾಗಿಯೇ? ನೀವು ಇದರ ಬಗ್ಗೆ ವ್ಯಾಖ್ಯಾನಿಸುವಿರಾ? ಇದು ಒಂದು ದಿನ ಬದಲಾಗುವುದೇ?
ಶ್ರೀ ಶ್ರೀ ರವಿಶಂಕರ್:
ಸಂಪರ್ಕವನ್ನು ಕಳೆದುಕೊಳ್ಳುವುದು ಒಂದು ಭ್ರಮೆ ಮತ್ತು ಸಂಪರ್ಕವಿರುವುದು ವಾಸ್ತವವೆಂಬುದನ್ನು ತಿಳಿ. ಕೆಲವೊಮ್ಮೆ, ಕಪ್ಪು ಮೋಡಗಳಿರುವಾಗ, ನೀಲಿ ಆಕಾಶವು ಕಾಣಿಸುವುದಿಲ್ಲ. ನೀಲಿ ಆಕಾಶವು ಎಲ್ಲೂ ಹೋಗಿಲ್ಲ. ಕೆಲವು ಕ್ಷಣಗಳಲ್ಲಿ ಆ ಕಪ್ಪು ಮೋಡಗಳು ಮಾಯವಾಗುತ್ತವೆ. ಆಕಾಶವು ಯಾವತ್ತೂ ಅಲ್ಲಿದೆ. ಅದು ಮೋಡಗಳ ಮೊದಲು, ಮೋಡಗಳ ನಂತರ, ಮೋಡಗಳಿರುವಾಗ, ಎಲ್ಲಾ ಸಮಯದಲ್ಲೂ ಅಲ್ಲಿರುತ್ತದೆ. ಅದೇ ರೀತಿಯಲ್ಲಿ, ಒಬ್ಬನ ಸಂಪರ್ಕವು ಯಾವತ್ತೂ ಅಲ್ಲಿರುತ್ತದೆ; ಅದು ಕಡಿದು ಹೋದಂತೆ ಕಾಣುವುದು ಒಂದು ಭ್ರಮೆಯಾಗಿದೆ.
ಪ್ರಶ್ನೆ: ಈಗ ಜೋರಾಗಿ ಓದಿ ಹೇಳಲಾಗುತ್ತಿರುವ ಪ್ರಶ್ನೆಯನ್ನು, ಸಭಿಕರಲ್ಲಿ ಯಾರು ಕೇಳುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ?
ಶ್ರೀ ಶ್ರೀ ರವಿಶಂಕರ್:
ಎಲ್ಲಿಯ ವರೆಗೆ ನೀನು ಉತ್ತರವನ್ನು ತೆಗೆದುಕೊಳ್ಳುತ್ತೀಯೋ, ಅದು ಒಳ್ಳೆಯದು. ಉತ್ತರವು ಬೇರೆ ಯಾರಿಗೋ ಇರುವುದೆಂದು ಅಂದುಕೊಳ್ಳಬೇಡ. ಆ ಪ್ರಶ್ನೆಯು ನಿನ್ನದು ಮತ್ತು ಉತ್ತರವು ಕೇವಲ ನಿನಗಾಗಿ ಇರುವುದು.
ಪ್ರಶ್ನೆ: ನಾವು ೩ ಸಾರಿ "ಓಂ" ಎಂದು ಜಪಿಸುವುದರ ಅರ್ಥವೇನು, ಅದು ನಮ್ಮಲ್ಲಿ ಏನನ್ನು ಪ್ರೇರೇಪಿಸುತ್ತದೆ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ೨೦೧೦ ರ ಗುರುಪೂರ್ಣಿಮಾದ ಸಮಯದಲ್ಲಿ, ಬಾಸ್ಟನ್ ನಲ್ಲೆಲ್ಲೋ, ಬಾಸ್ಟನ್-ಕನೆಚ್ಟಿಕಟ್ ಪ್ರದೇಶದ ಒಬ್ಬಳು ಹೆಂಗಸು ಒಂದು ಸಂಶೋಧನೆಯನ್ನು ಮಾಡಿದ್ದಳು. ಅದರಲ್ಲಿ ಅವರು ಓಂ ಶಬ್ದವನ್ನು ರೆಕಾರ್ಡ್ ಮಾಡಿ ಕಂಪ್ಯೂಟರಿನಲ್ಲಿ ಹಾಕಿದರು ಮತ್ತು ಓಂ ನ ಫ್ರೀಕ್ವೆನ್ಸಿಯು, ಭೂಮಿಯು ತನ್ನದೇ ಅಕ್ಷದ ಸುತ್ತಲೂ ತಿರುಗುವ ಫ್ರೀಕ್ವೆನ್ಸಿಗೆ ಸರಿಸಮಾನವಾಗಿದೆ ಎಂಬುದನ್ನು ಕಂಡುಹಿಡಿದರು. ಆದುದರಿಂದ, ಒಂದು ರೀತಿಯಲ್ಲಿ, ಭೂಮಿಯು ಓಂ ಎಂದು ಹೇಳುತ್ತಿದೆ. ಇದು ತುಂಬಾ ಆಸಕ್ತಿಕರ. ಓಂ ಎಂಬುದು ಒಂದು ಕೈ ಚಪ್ಪಾಳೆಯ ಶಬ್ದ ಎಂದು ಕರೆಯಲ್ಪಡುತ್ತದೆ. ಓಂ ಎಂಬುದು ಸರ್ವಕಾಲಿಕ  ಶಬ್ದ; ಓಂ ಎಂಬುದು ವಿಶ್ವದಲ್ಲಿ ಎಲ್ಲಾ ಕಾಲದಲ್ಲೂ ಇರುವ ಶಬ್ದ.
ಹಿಂದಿನ ಕಾಲದ ಎಲ್ಲಾ ಸಂತರು, ಅವರು ಧ್ಯಾನದಲ್ಲಿ ಆಳಕ್ಕೆ ಹೋದಾಗ, ಕೇವಲ ಓಂ ಎಂಬುದನ್ನು ಕೇಳಿದರು. ಆದುದರಿಂದ, ಓಂ ಎಂದರೆ ಹಲವಾರು ವಿಷಯಗಳು. ಅದರರ್ಥ, ಪ್ರೀತಿ, ಅನಂತತೆ, ಶುದ್ಧತೆ, ಶಾಂತಿ. ಓಂ ಎಂಬುದು ಹಲವಾರು ಧಾತುಗಳಿಂದ ಮಾಡಲ್ಪಟ್ಟಿದೆ; ಅಹ್-ಊಹ್-ಮ. ಕೇವಲ ’ಅಹ್’ ಎಂಬುದಕ್ಕೆ ೧೯ ಅರ್ಥಗಳಿವೆ. ಓಂ ಎಂಬುದರಿಂದ ನೀವು ಸುಮಾರು ಹಲವು ಸಾವಿರಗಳಷ್ಟು ಅರ್ಥಗಳನ್ನು ಪಡೆಯಬಹುದು. ಆ ಎಲ್ಲಾ ಅರ್ಥಗಳನ್ನು ಓಂ ಗೆ ಕೊಡಲಾಗಿದೆ, ಆದುದರಿಂದ ಓಂ ಎಂಬುದು ಸಂಪೂರ್ಣ ಸೃಷ್ಟಿಯ ಬೀಜವಾಗಿದೆ; ಓಂ ಎಂಬುದು ಸೃಷ್ಟಿಯ ಶಬ್ದವಾಗಿದೆ.
ಬೈಬಲ್ಲಿನಲ್ಲಿ ಕೂಡಾ ಹೇಳಲಾಗಿದೆ, "ಮೊದಲಲ್ಲಿ ಒಂದು ಶಬ್ದವಿತ್ತು ಮತ್ತು ಶಬ್ದವು ದೇವರ ಜೊತೆಯಿತ್ತು ಮತ್ತು ಶಬ್ದವು ದೇವರಾಗಿತ್ತು". ಅದು ಓಂ. ಅಲ್ಲಿ ಅವರು ಯಾವ ಶಬ್ದವೆಂದು ಹೇಳುವುದಿಲ್ಲ; ಆ ಶಬ್ದವು ಓಂ. ಇದು ಎಲ್ಲಾ ಧರ್ಮಗಳಲ್ಲೂ ಒಂದಲ್ಲ ಒಂದು ರೂಪದಲ್ಲಿದೆ. ಅದು ನಿಜವಾದ ಹೆಸರು, "ಏಕ್ ಓಂಕಾರ್ ಸತ್ ನಾಮ್". ಓಂ ಎಂದರೆ ಸತ್ಯ. ಇದು ಅನಂತತೆಯ ಅಥವಾ ದೈವತ್ವದ ಹೆಸರು. ಅದರರ್ಥ ಪ್ರೀತಿ. ಅದು ವಿಶ್ವದ ಮೂಲ. ಗುರು ಗ್ರಂಥ್ ಸಾಹಿಬ್ ನಲ್ಲಿ ಒಂದು ಸುಂದರವಾದ ಗೀತೆಯಿದೆ. ಅದು "ಏಕ್ ಓಂಕಾರ್ ಸತ್ ನಾಮ್, ಕರ್ತಾ ಪೂರಖ್" ಎಂಬುದರಿಂದ ಪ್ರಾರಂಭವಾಗುತ್ತದೆ - ಓಂ ನಿಂದ ಎಲ್ಲವೂ ಬಂದಿದೆ, ಓಂ ನಲ್ಲಿ ಎಲ್ಲವೂ ಆಶ್ರಯ ಪಡೆಯುತ್ತದೆ ಮತ್ತು ಓಂ ನಲ್ಲಿ ಎಲ್ಲವೂ ಕರಗಿ ಹೋಗುತ್ತದೆ; ಪದಾರ್ಥ ಮತ್ತು ಪ್ರಜ್ಞೆ ಎರಡೂ.
ಅತ್ಯುತ್ತಮ ವಿಚಾರವೆಂದರೆ ಅದು ಒಂದು ಸಂಪೂರ್ಣ  ಕಂಪನ. "ಅಹ್" - ಇದು ಶರೀರದ ಕೆಳ ಭಾಗದ ಮೇಲೆ ಪರಿಣಾಮ ಬೀರುತ್ತದೆ, "ಊಹ್" - ಮಧ್ಯ ಭಾಗದ ಮೇಲೆ ಪರಿಣಾಮ ಬೀರುತ್ತದೆ, "ಮ್" - ಮೇಲ್ಭಾಗದ ಮೇಲೆ ಪರಿಣಾಮ ಬೀರುತ್ತದೆ. ಸಂಪೂರ್ಣ ಪ್ರಾಣವು ಓಂ ಎಂಬ ಒಂದು ಅಕ್ಷರದಿಂದ ಪ್ರತಿನಿಧಿಸಲ್ಪಡುತ್ತದೆ. ಹುಟ್ಟುವ ಮೊದಲು ನಾವು ಆ ಶಬ್ದದ ಭಾಗವಾಗಿದ್ದೆವು ಮತ್ತು ಸಾವಿನ ನಂತರ ನಾವು ಆ ಶಬ್ದದೊಂದಿಗೆ ವಿಲೀನವಾಗುತ್ತೇವೆ; ಆತ್ಮದ ಶಬ್ದ. ಆದುದರಿಂದ, ನೀವು ಓಂ ನ ಬಗ್ಗೆ ಹಲವಾರು ಸಂಗತಿಗಳನ್ನು ಹೇಳಬಹುದು; ಒಂದು ಇಡಿಯ ಉಪನಿಷತ್ತೇ ಇದೆ, ಮಂಡೂಕ್ಯ ಉಪನಿಷತ್ತು. ಇದು ಪೂರ್ತಿಯಾಗಿ ಓಂ ನ ಬಗ್ಗೆಯೇ ಇರುವುದು.
ಈಗ, ನಾವು ಒಂದು ಮಂತ್ರವಾಗಿ ಕೇವಲ ಓಂ ನ್ನು ಮಾತ್ರ ಯಾಕೆ ತೆಗೆದುಕೊಳ್ಳುವುದಿಲ್ಲ? ಧ್ಯಾನದ ಸಂದರ್ಭದಲ್ಲಿ ಜಪಿಸಲು ನಮಗೆ ಬೇರೆ ಯಾವುದಾದರೂ ಮಂತ್ರ ಯಾಕೆ ಬೇಕು? ಧ್ಯಾನದ ಮೊದಲು ನೀವು ಓಂ ಎಂದು ಉಚ್ಛರಿಸಿ ಕಂಪನವನ್ನು ಸೃಷ್ಟಿಸುತ್ತೀರಿ, ಆದರೆ ಧ್ಯಾನಕ್ಕೆ ನಿಮಗೆ ಬೇರೆ ಮಂತ್ರಗಳು ಬೇಕು. ಕೇವಲ ಓಂ ಬಳಸಲ್ಪಡುವುದಿಲ್ಲ; ಓಂ ನೊಂದಿಗೆ ಹರಿ ಓಂ ಅಥವಾ ಓಂ ನಮಃ ಶಿವಾಯ ಅಥವಾ  ಬೇರೇನಾದರೂ ಬಳಸಲ್ಪಡುತ್ತದೆ. ಕೇವಲ ಏಕಾಂತವಾಸಿಗಳಿಗೆ, ಯಾರು ಪ್ರಪಂಚದೊಂದಿಗೆ ಏನನ್ನೂ ಮಾಡಲು ಬಯಸುವುದಿಲ್ಲವೋ ಅವರಿಗೆ ಅಥವಾ ಯಾರಿಗೆ ತುಂಬಾ ವಯಸ್ಸಾಗಿದೆಯೋ ಅವರಿಗೆ ಕೇವಲ ಓಂ ನ್ನು ಜಪಿಸಲು ಅವಕಾಶವಿದೆ. ಆಗಲೂ ಸಹ ಅದು ಸೂಕ್ತವಲ್ಲ.
ಪ್ರಶ್ನೆ: ಆತ್ಮ ಸಾಕ್ಷಾತ್ಕಾರವನ್ನು ಧ್ಯಾನದ ಮೂಲಕ ಮಾತ್ರ ಸಾಧಿಸಬಹುದೇ?
ಶ್ರೀ ಶ್ರೀ ರವಿಶಂಕರ್:
ಬಾಯಾರಿಕೆಯನ್ನು ನೀರಿನ ಮೂಲಕ ಮಾತ್ರ ಇಂಗಿಸಬಹುದೇ? ಹಸಿವನ್ನು ಆಹಾರದ ಮೂಲಕ ಮಾತ್ರ ಇಂಗಿಸಬಹುದೇ? ಅಥವಾ ನೀವು ನೃತ್ಯ ಮಾಡಿ ನಿಮ್ಮ ಹಸಿವನ್ನು ತೊಲಗಿಸಲು ಸಾಧ್ಯವೇ? ನೀವೇನು ಹೇಳುತ್ತೀರಿ? ಸೇವೆಯು ಅಗತ್ಯವಾದುದು; ಸೇವೆ, ಧ್ಯಾನ, ಇವೆಲ್ಲಾ ಅಗತ್ಯವಾದವು.
ಪ್ರಶ್ನೆ: ನಾನು ಜೀವನದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ. ನಾನು ನಿಮ್ಮನ್ನು ಕೇಳಬೇಕೆಂದಿದ್ದೇನೆ ಆದರೆ ಏನನ್ನು ಕೇಳಬೇಕೆಂಬುದು ಮತ್ತು ನಿಜವಾಗಿ ನನಗೇನು ಬೇಕೆಂಬುದೂ ಕೂಡಾ ನನಗೆ ಗೊತ್ತಿಲ್ಲ. ಏನು ಮಾಡುತ್ತಿದ್ದರೂ ಬಹಳ ಸ್ವಲ್ಪವೇ ಸಮಯದಲ್ಲಿ ನಾನು ಬೇಜಾರುಗೊಳ್ಳುತ್ತೇನೆ. ನನ್ನ ಮನಃಸ್ಥಿತಿಯು ತುಂಬಾ ಬದಲಾಗುತ್ತಿರುತ್ತದೆ. ಏನು ಮಾಡುತ್ತಿದ್ದರೂ ನನಗೆ ತೃಪ್ತಿ ಅಥವಾ ಸಂತೋಷ ಸಿಗುವುದಿಲ್ಲ. ಈ ರೀತಿಯ ಮಾನಸಿಕ ಅವಸ್ಥೆಯೊಂದಿಗೆ ನಾನು ನನ್ನ ಜೀವನವನ್ನು ಜೀವಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಿನಗೆ ಬಹಳವಾಗಿ ಸೌಕರ್ಯ ಬೇಕು. ನಿನ್ನ ಸೌಕರ್ಯ ವಲಯದಿಂದ ಹೊರ ಬಾ. ನೀನು ಕೇವಲ ನಿನ್ನ ಸೌಕರ್ಯ ಮತ್ತು ಸಂತೋಷಗಳ ಬಗ್ಗೆ ಯೋಚಿಸುತ್ತಿರುವೆ; ಆಗಲೇ ನೀನು ಈ ರೀತಿಯ ಹಂತಕ್ಕೆ ಅಥವಾ ಅವಸ್ಥೆಗೆ ಹೋಗುವುದು.
ನೀವಿಲ್ಲಿ ಇರುವುದು ಬೇರೆ ಯಾರಿಗೋ ಪ್ರಯೋಜನಕಾರಿಯಾಗಲು. ನೀವಿಲ್ಲಿ ಇರುವುದು ಯಾರಿಗಾದರೂ ಏನಾದರೂ ಪ್ರಯೋಜನವಾಗುವಂತಹುದನ್ನು ಮಾಡಲು. ನಿಮಗೆ ಬೇಜಾರಾಗಲು ಹೇಗೆ ಸಾಧ್ಯ? ನಿಮಗೆ ಬೇಜಾರಾದರೂ ಕೂಡಾ, ನೀವದನ್ನು ಮಾಡಬೇಕು, ಯಾಕೆಂದರೆ ನೀವು ಮಾಡುವುದು ಬೇರೊಬ್ಬರಿಗೆ ಪ್ರಯೋಜನಕಾರಿಯಾಗುತ್ತದೆ. ನೀವು ಸ್ವಾರ್ಥಿಯಾಗಿದ್ದು, "ನಾನದನ್ನು ಇಷ್ಟಪಟ್ಟರೆ ಮಾತ್ರ ಅದನ್ನು ಮಾಡುತ್ತೇನೆ" ಎಂದು ಯೋಚಿಸಿದರೆ, ಆಗ ಅದು ಸೇವೆಯಲ್ಲ. ಅದು ನಿಮಗೆ ತೃಪ್ತಿಯನ್ನು ತರಲಾರದು. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? "ನನಗೆ ಜನರನ್ನು ಭೇಟಿಯಾಗಲು ಇಷ್ಟವಿಲ್ಲ", ಆದರೆ ನೀವು ಜನರನ್ನು ಭೇಟಿಯಾಗುವುದು ನಿಮ್ಮ ಸಲುವಾಗಿಯೇ ಅಥವಾ ಅವರ ಸಲುವಾಗಿಯೇ? ನೀವು ಜನರನ್ನು ಅವರ ಸಲುವಾಗಿ ಭೇಟಿಯಾಗುವುದಾದರೆ, ಆಗ ನಿಮ್ಮ ಜೀವನವು ತೃಪ್ತಿಕರವಾಗುತ್ತದೆ.
ನೀವು ಹೇಳಬಹುದು, "ಗುರೂಜಿ, ನೀವಿದನ್ನು ಮಾಡಬಲ್ಲಿರಿ, ಆದರೆ ನನಗೆ ಇದನ್ನು ಮಾಡಲು ಸಾಧ್ಯವಿಲ್ಲ". ಕನಿಷ್ಠಪಕ್ಷ ಏನಾದರೂ ಮಾಡಿ! ನಾನು ಮಾಡುತ್ತಿರುವುದನ್ನು ನೀವು ಮಾಡಬೇಕಾಗಿಲ್ಲ; ಕನಿಷ್ಠಪಕ್ಷ ಅದರ ಒಂದು ಭಾಗವನ್ನಾದರೂ ಮಾಡಿ, ಹತ್ತು ಶೇಕಡಾ ಅಥವಾ ಐದು ಶೇಕಡಾ. ನೋಡಿ, ನಾನು ತುಂಬಾ ಸ್ವತಂತ್ರನು, ಆದರೂ ನಾನು ಸ್ವತಂತ್ರನಲ್ಲ ಕೂಡಾ. ನನ್ನ ಪ್ರತಿದಿನವೂ ನಿರ್ಬಂಧಿತವಾಗಿದೆ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ನೀವೆಲ್ಲರೂ ಇಲ್ಲಿಗೆ ನನ್ನೊಂದಿಗೆ ಸತ್ಸಂಗದಲ್ಲಿರಲು ಬಂದಿದ್ದೀರಿ, ನಾನು ಹೇಳುತ್ತೇನೆ, "ಓ, ನನಗೆ ಇಲ್ಲಿರಬೇಕೆಂದು ಅನ್ನಿಸುತ್ತಿಲ್ಲ. ನನ್ನ ಮನಃಸ್ಥಿತಿ ಬದಲಾಗಿ ನನಗೆ, ಶೋವಿನಿಗನಿಗೆ, ಟ್ರೋಯಿಸ್-ರಿವರೆಸ್ ಎಲ್ಲಿಗಾದರೂ ಹೋಗಬೇಕು ಅಂತ ಅನಿಸುತ್ತದೆ" ಮತ್ತು ನಾನೊಂದು ಕಾರು ತೆಗೆದುಕೊಂಡು ಹೋಗಿ ಬಿಡುತ್ತೇನೆ, ನೀವಿಲ್ಲಿ ಗುರೂಜಿಗಾಗಿ ಕಾಯುತ್ತಾ ಕುಳಿತುಕೊಳ್ಳುತ್ತೀರಿ, ಎಲ್ಲಿದ್ದಾರೆ ಗುರೂಜಿ?
ನಾನಿದನ್ನು ಮಾಡಲು ಬಯಸುವುದಿಲ್ಲ ಆದರೆ ಎಲ್ಲಾ ೩೬೫ ದಿನಗಳೂ ನಾನಿದನ್ನು ಮಾಡುತ್ತಿದ್ದೇನೆ. ನಾನು ಅದೇ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ; ಜನರು ಕೇಳುತ್ತಾರೆ, "ನೀವು ನನಗೊಬ್ಬ ಗಂಡನನ್ನು ಹುಡುಕಿ ಕೊಡುವಿರಾ?" "ನೀವು ನನಗೊಬ್ಬಳು ಪತ್ನಿಯನ್ನು ಹುಡುಕಿ ಕೊಡುವಿರಾ?" ಅಥವಾ "ನನಗೊಂದು ನೌಕರಿ ಕೊಡಿಸಿ" ಅಥವಾ ಇದನ್ನು ಮಾಡಿ, ಅಥವಾ ಅದನ್ನು ಮಾಡಿ ಅಥವಾ ನನ್ನೊಂದಿಗೆ ಒಂದು ಫೋಟೋ ತೆಗೆಯಿರಿ, "ನೀವು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ", "ನೀವು ನನ್ನ ಬಗ್ಗೆ ಕಾಳಜಿ ವಹಿಸುತ್ತೀರಿ"; ಈ ಎಲ್ಲಾ ಕಥೆಗಳು. ನನಗೆ ಬೇಜಾರು ಅನ್ನಿಸುತ್ತದೆಯೇ? ನಾನಿದನ್ನು ೩೦ ವರ್ಷಗಳಿಂದ ಮಾಡುತ್ತಿದ್ದೇನೆ; ೩೦ ವರ್ಷಗಳಿಗಿಂತಲೂ ಹೆಚ್ಚು, ಜೀವನ ಕಲೆಗಿಂತಲೂ ಮೊದಲು, ೪೦ ವರ್ಷಗಳಿಂದ!
ಎಲ್ಲಿಗಾದರೂ ಒಂದು ಸವಾರಿಗೆ ಹೋಗಬೇಕೆಂದು ಹೇಳಲು ನನಗೆ ಸಾಧ್ಯವಿಲ್ಲ. ಆದುದರಿಂದ, ಇತರರಿಗೆ ಒಳ್ಳೆಯದಾಗುವುದೇನನ್ನಾದರೂ ಮಾಡಿ. ನನಗೆ ನಿಮ್ಮ ಬಹಳಷ್ಟು ಸಮಯ ಮತ್ತು ನಿಮ್ಮ ಕೆಲಸ ಬೇಕು. ನೀವದನ್ನು ಇಷ್ಟಪಡುವಿರೇ ಇಲ್ಲವೇ ಎಂಬುದರ ಬಗ್ಗೆ ಚಿಂತಿಸಬೇಡಿ, ಸುಮ್ಮನೇ ಅದನ್ನು ಮಾಡಿ ನೋಡಿ. ಕೆಲವೊಮ್ಮೆ ಅವುಗಳನ್ನು ಮಾಡಲು ನಿಮಗೆ ಮೊದ ಮೊದಲು ಇಷ್ಟವಾಗುವುದಿಲ್ಲ, ಆದರೆ ಕ್ರಮೇಣ, ನಿಮಗೆ ಆ ಕಾರ್ಯದ ಫಲವು ಸಿಗುತ್ತದೆ. ನೀವು ಮಾಡುವ ಯಾವುದೇ ಸೇವೆಯು ಯಾವಾಗಲೂ ನಿಮ್ಮನ್ನು ಎತ್ತರಕ್ಕೇರಿಸುತ್ತದೆ; ಅದು ಯಾವಾಗಲೂ ನಿಮಗೆ, ನಿಮ್ಮ ಊಹೆಯನ್ನೂ ಮೀರಿದ ಲಾಭಗಳನ್ನು ತರುತ್ತದೆ. ಆದುದರಿಂದ ಅದನ್ನು ಅಲ್ಪವಾಗಿ ಕಾಣಬೇಡಿ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ಇಲ್ಲದಿದ್ದರೆ, ನೀವು ನಿಮ್ಮನ್ನೇ ತೃಪ್ತಿಪಡಿಸಲು ಎಲ್ಲವನ್ನೂ ಮಾಡುತ್ತಿದ್ದರೆ, ನಿಮಗೆ ಬೇಜಾರಾಗುತ್ತದೆ ಯಾಕೆಂದರೆ ಪ್ರಪಂಚದಲ್ಲಿರುವ ಯಾವುದಕ್ಕೂ ನಿಮ್ಮನ್ನು ತೃಪ್ತಿಪಡಿಸಲು ಸಧ್ಯವಿಲ್ಲ.
ಒಂದು ರೀತಿಯಲ್ಲಿ ನೀನು ಭಾಗ್ಯವಂತ ಯಾಕೆಂದರೆ ನೀನು ಅಷ್ಟೊಂದು ಬೇಗನೇ ಅಷ್ಟೊಂದು ಬೇಜಾರುಗೊಳ್ಳುತ್ತಿ. ನೀನು ತುಂಬಾ ಅದೃಷ್ಟವಂತ; ನೀನೊಬ್ಬ ಸರಿಯಾದ ಅನ್ವೇಷಕ, ನಿನ್ನಲ್ಲಿ ಬೆಳೆಯಲು ಬೇಕಾದ ಸರಿಯಾದ ಅಂಶಗಳಿವೆ ಯಾಕೆಂದರೆ ಈ ಎಲ್ಲಾ ವಸ್ತು ವಿಷಯಗಳಿಂದ ನಿನಗೆ ಬೇಜಾರಾಗುತ್ತದೆ. ಅದು ಒಳ್ಳೆಯದು.
ಈಗಿನ ದಿನಗಳಲ್ಲಿ ಮಕ್ಕಳಲ್ಲಿರುವ ಒಂದು ಬಹಳ ಒಳ್ಳೆಯ ಸಂಗತಿಯೆಂದರೆ ಅವರು ಎಲ್ಲದರಿಂದಲೂ ಬಹಳ ಬೇಗನೇ ಬೇಜಾರುಗೊಳ್ಳುತ್ತಾರೆ, ಆದರೆ ಹತಾಶರಾಗುವ ಬದಲು ಅವರು ಆ ಸಂಪೂರ್ಣ ಶಕ್ತಿಯನ್ನು ವಿಕಾಸದ ಇನ್ನೊಂದು ದಿಕ್ಕಿನಲ್ಲಿ ಹೋಗಲು, ಎತ್ತರಕ್ಕೇರಲು ಬಳಸಬೇಕು.
ಪ್ರಶ್ನೆ: ವಿವಾಹಿತ ಗಂಡಸರು ಉಪನಯನ ಸಮಾರಂಭದಲ್ಲಿ ಭಾಗವಿಹಿಸಬಹುದೇ?
ಶ್ರೀ ಶ್ರೀ ರವಿಶಂಕರ್:
ಹೌದು, ಖಂಡಿತವಾಗಿ.