ಗುರುವಾರ, ಮೇ 17, 2012

ಉಗ್ರ ಕ್ಷಣಗಳು ಜ್ಞಾನವಿರುವಲ್ಲಿ ಸಿಹಿ ಕನಸಿನ ರೂಪ ತಳೆಯುತ್ತವೆ

17
2012
May
ಸೋಫಿಯಾ, ಬಲ್ಗೇರಿಯಾ


ಪ್ರಶ್ನೆ: ನಾವು ನಮ್ಮ ವಾಸ್ತವವನ್ನು ಸೃಷ್ಟಿಸುತ್ತೇವೆಯೇ ಅಥವಾ ಎಲ್ಲವೂ ಪೂರ್ವ ನಿರ್ಧಾರಿತವೇ?
ಶ್ರೀ ಶ್ರೀ ರವಿಶಂಕರ್:
ನಿನ್ನ ಮನೆಯಲ್ಲಿ ಒಂದು ನಾಯಿಯಿದೆಯೇ?
(ಉತ್ತರ: ಹೌದು)
ನೋಡು, ನೀನು ಪಾರ್ಕಿಗೆ ಹೋಗುವಾಗ, ನಾಯಿಯ ಕೊರಳಿಗೆ ಹಗ್ಗವನ್ನು ಕಟ್ಟಿಕೊಂಡು ಹೋಗುವೆ. ಅದು ಕಾನೂನು. ಈಗ, ನಾಯಿಗೆ ಸ್ವಾತಂತ್ರ್ಯವಿರುವುದು ಹಗ್ಗದ ಉದ್ದದಷ್ಟು ಮಾತ್ರ. ಸರಿಯಾ? ಅದು ಹಗ್ಗವೆಲ್ಲಿದೆಯೋ ಅದಕ್ಕೆ ಬಹಳ ಸಮೀಪದಲ್ಲಿ ಕುಳಿತುಕೊಳ್ಳಬಹುದು, ಅಥವಾ ಹಗ್ಗ ಎಷ್ಟು ಉದ್ದವಿದೆಯೋ ಅಷ್ಟು ದೂರಕ್ಕೆ ಹೋಗಬಹುದು. ಅಷ್ಟು ಅದಕ್ಕಿರುವ ಸ್ವಾತಂತ್ರ್ಯ. ಒಂದು ಪ್ರದೇಶದಲ್ಲಿರುವಂತೆ ನೀವು ಒಂದು ನಾಯಿಗೆ ತರಬೇತಿ ನೀಡಿದ್ದರೆ, ಅದು ಅದರ ಸ್ವಾತಂತ್ರ್ಯ. ಅದು ಇಪ್ಪತ್ತು ಕಿಲೋಮೀಟರ್ ದೂರಕ್ಕೆ ಹೋಗುವುದಿಲ್ಲ. ಅದೇ ರೀತಿಯಲ್ಲಿ, ಜೀವನದಲ್ಲಿ, ಪ್ರತಿಯೊಬ್ಬರಿಗೂ ಸ್ವಲ್ಪ ಸ್ವಾತಂತ್ರ್ಯವಿದೆ ಮತ್ತು ಕೆಲವು ವಿಷಯಗಳು ನಿಶ್ಚಿತವಾಗಿವೆ. ಮನುಷ್ಯರಿಗೆ ಈ ಸ್ವಾತಂತ್ರ್ಯವಿದೆ, ಯಾಕೆಂದರೆ ಮನುಷ್ಯರಿಗೆ ಬುದ್ಧಿಯಿದೆ. ಪ್ರಾಣಿಗಳ ಜೀವನವು ಯೋಜಿತಗೊಳಿಸಲ್ಪಟ್ಟಿವೆ. ಅವುಗಳು ಅತಿಯಾಗಿ ತಿನ್ನುವುದಿಲ್ಲ. ಅವುಗಳ ಜೀವನವು ಪ್ರಕೃತಿಯೊಂದಿಗೆ ಹೊಂದಾಣಿಕೆಯಲ್ಲಿದೆ, ಆದರೆ ನಮಗೆ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ಅಥವಾ ನಿಯಮವನ್ನು ಉಲ್ಲಂಘಿಸುವ ಸ್ವಾತಂತ್ರ್ಯವಿದೆ. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ?
ನೀವು ಪ್ರಕೃತಿಯೊಂದಿಗೆ ಹೊಂದಿಕೊಂಡಾಗ, ಅಲ್ಲಿ ಸಾಮರಸ್ಯವಿರುತ್ತದೆ ಮತ್ತು ನೀವು ಪ್ರಕೃತಿ ನಿಯಮಗಳಿಗೆ ವಿರುದ್ಧವಾಗಿ ಹೋದಾಗ, ಅಲ್ಲಿ ಸಾಮರಸ್ಯವಿರುವುದಿಲ್ಲ. ಆದುದರಿಂದ ಜೀವನದಲ್ಲಿ, ಹಲವಾರು ವಿಷಯಗಳು ನಿಶ್ಚಿತವಾಗಿರುತ್ತವೆ ಮತ್ತು ಕೆಲವು ವಿಷಯಗಳು ಸ್ವತಂತ್ರ ಇಚ್ಛೆಯಾಗಿರುತ್ತವೆ.
ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ಕೊಡುತ್ತೇನೆ. ಮಳೆ ಸುರಿಯುತ್ತಿರುವಾಗ ಒದ್ದೆಯಾಗಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಸ್ವತಂತ್ರ ಇಚ್ಛೆ. ನೀವೊಂದು ಛತ್ರಿ ಅಥವಾ ರೈನ್ ಕೋಟನ್ನು ತೆಗೆದುಕೊಂಡು ಹೋಗಿ ಒದ್ದೆಯಾಗದೇ ಇರಬಹುದು. ಆದುದರಿಂದ, ಜೀವನವು ಸ್ವತಂತ್ರ ಇಚ್ಛೆ ಮತ್ತು ವಿಧಿಯ ಒಂದು ಸಂಯೋಗ. ನೀವು ಧ್ಯಾನದಲ್ಲಿ ಹೆಚ್ಚು ಆಳಕ್ಕೆ ಹೋದಷ್ಟೂ, ನೀವು ಹೆಚ್ಚು ಸಂತೋಷವಾಗಿದ್ದಷ್ಟೂ, ನೀವು ನಿಮ್ಮನ್ನು ಪ್ರಕೃತಿಯೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿದಷ್ಟೂ, ನಿಮ್ಮಲ್ಲಿರುವ ಸ್ವತಂತ್ರ ಇಚ್ಛೆಯೂ ಹೆಚ್ಚಾಗುತ್ತದೆ.

ಪ್ರಶ್ನೆ: ಜೀವನವು ಕೊನೆಯಾಗುವಾಗ ಪ್ರಪಂಚವು ಕೊನೆಯಾಗುವುದಿಲ್ಲ. ಆದರೆ ಪ್ರಪಂಚವು ಕೊನೆಯಾಗುವಾಗ ಜೀವನವು ಕೊನೆಯಾಗುತ್ತದೆ. ಈ ಪ್ರಪಂಚಕ್ಕೆ ಒಂದು ಕೊನೆಯಿದೆಯೇ?
ಶ್ರೀ ಶ್ರೀ ರವಿಶಂಕರ್:
ನೀನೊಂದು ಟೆನ್ನಿಸ್ ಚೆಂಡನ್ನು ನೋಡಿ, ಅದು ಎಲ್ಲಿಂದ ಪ್ರಾರಂಭವಾಗುತ್ತದೆ ಮತ್ತು ಎಲ್ಲಿ ಕೊನೆಯಾಗುತ್ತದೆ ಎಂದು ನನ್ನಲ್ಲಿ ಕೇಳಿದರೆ, ನಾನೇನು ಹೇಳಲು ಸಾಧ್ಯ?
ಪ್ರಪಂಚದಲ್ಲಿರುವ, ಪ್ರಾರಂಭವೂ ಆಗದ ಕೊನೆಯೂ ಆಗದ ಮೂರು ವಿಷಯಗಳೆಂದರೆ:
೧. ದೈವಿಕ ಪ್ರಕಾಶ ಅಥವಾ ಪ್ರಜ್ಞೆಗೆ ಪ್ರಾರಂಭವೂ ಇಲ್ಲ ಮತ್ತು ಕೊನೆಯೂ ಇಲ್ಲ.
೨. ಜೀವನಕ್ಕೆ ಪ್ರಾರಂಭವೂ ಇಲ್ಲ ಮತ್ತು ಕೊನೆಯೂ ಇಲ್ಲ. ಅದು ಅನಂತವಾದುದು.
೩. ಈ ಭೂಮಿ, ನಮ್ಮ ಪ್ರಪಂಚಕ್ಕೆ ಪ್ರಾರಂಭವೂ ಇಲ್ಲ ಮತ್ತು ಕೊನೆಯೂ ಇಲ್ಲ.
 ಈ ಭೂಮಿಯು ಗೋಳವಾಗಿದೆ. ಅದು ಅದರ ರೂಪವನ್ನು ಬದಲಾಯಿಸುತ್ತದೆ ಆದರೆ ಅದು ಮುಂದುವರಿಯುತ್ತಾ ಹೋಗುತ್ತದೆ. ಚಿಂತಿಸಬೇಡಿ; ಪ್ರಪಂಚವು ಕೊನೆಯಾಗುವುದಿಲ್ಲ, ವಿಶೇಷವಾಗಿ ೨೦೧೨ರಲ್ಲಿ. ಪ್ರಪಂಚವು ಕೊನೆಯಾಗುವುದು ಅಮೇರಿಕಾದ ಸಿನೆಮಾಗಳಲ್ಲಿ ಮಾತ್ರ.

ಪ್ರಶ್ನೆ: ನಾನು ಈ ಕೋರ್ಸಿಗೆ ಬರುವುದಾಗಿಯೂ ಮತ್ತು ನಿಮ್ಮ ಬಗ್ಗೆಯೂ ನನಗೆ ಕನಸು ಬಿದ್ದಿತ್ತು. ಕನಸುಗಳು ಒಂದು ರೀತಿಯ ಅಂತಃಸ್ಫುರಣೆಯೇ?
ಶ್ರೀ ಶ್ರೀ ರವಿಶಂಕರ್:
ಆರು ರೀತಿಯ ಕನಸುಗಳಿವೆ. ನೀನು ತಿಳಿಯಲು ಬಯಸುತ್ತೀಯಾ?
ಮೊದಲನೆಯ ರೀತಿಯದ್ದು ಹಗಲುಗನಸು. ಅದನ್ನು ನಾವು ಪಕ್ಕಕ್ಕಿಡೋಣ. ಅದು ಒಂದು ಕನಸೆಂದು ಹೇಳಲಾಗುವುದಿಲ್ಲ.
ನಿಮಗೆ ಬೀಳುವ ಎರಡನೆಯ ರೀತಿಯ ಕನಸು, ನಿಮ್ಮ ಹಿಂದಿನ ಅನುಭವಗಳ ಬಗ್ಗೆ. ನಿಮ್ಮ ಹಿಂದಿನ ಅನುಭವಗಳು ಮತ್ತು ಅಚ್ಚುಗಳು ಕನಸುಗಳಾಗಿ ನಿಮ್ಮಲ್ಲಿಗೆ ಬರುತ್ತವೆ.
ಮೂರನೆಯ ರೀತಿಯ ಕನಸೆಂದರೆ, ನಿಮ್ಮ ಬಯಕೆಗಳು ಮತ್ತು ಭಯಗಳು; ಅವುಗಳು ನಿಮ್ಮಲ್ಲಿಗೆ ಕನಸುಗಳಾಗಿ ಬರುತ್ತವೆ.
ನಾಲ್ಕನೆಯ ರೀತಿಯ ಕನಸೆಂದರೆ, ನಿಮ್ಮ ಅಂತಃಸ್ಫುರಣೆ ಅಥವಾ ಪೂರ್ವಸೂಚನೆ. ಮುಂದೆ ಆಗಲಿರುವ ಏನಾದರೂ ನಿಮಗೆ ಕನಸಾಗಿ ಬರಬಹುದು.
ಐದನೆಯ ರೀತಿಯದಕ್ಕೆ ನಿಮ್ಮ ಜೊತೆ ಯಾವುದೇ ಸಂಬಂಧವಿಲ್ಲ, ಆದರೆ ನೀವು ಮಲಗುವ ಜಾಗದೊಂದಿಗೆ ಸಂಬಂಧ ಹೊಂದಿದೆ. ನೀವು ನಿಮಗೆ ಅಪರಿಚಿತವಾಗಿರುವ ಮುಖಗಳನ್ನು ನೋಡುತ್ತೀರಿ ಮತ್ತು ಭಾಷೆಗಳನ್ನು ಕೇಳುತ್ತೀರಿ.
ಆರನೆಯ ರೀತಿಯ ಕನಸು ಇವುಗಳೆಲ್ಲದರ ಮಿಶ್ರಣವಾಗಿದೆ ಮತ್ತು ಕನಸುಗಳಲ್ಲಿ ೯೯% ಈ ರೀತಿಯದ್ದು. ಆದುದರಿಂದ, ಅವುಗಳ ಬಗ್ಗೆ ಅರ್ಥ ಕಲ್ಪಿಸಿಕೊಳ್ಳಲು ಪ್ರಯತ್ನಿಸದಿರುವುದು ಅಥವಾ ಬಹಳವಾಗಿ ಚಿಂತಿಸದಿರುವುದು ಅತ್ಯುತ್ತಮವಾದುದು.  ನಿಮಗೆ ತಿಳಿಯದು, ಕೆಲವು ಕನಸುಗಳು ನಿಮ್ಮ ಪೂರ್ವಸೂಚನೆ ಅಥವಾ ಅಂತಃಸ್ಫುರಣೆ ಆಗಿರಲೂಬಹುದು ಮತ್ತು ಕೆಲವು ಕೇವಲ ನಿಮ್ಮ ಭಯ ಅಥವಾ ಆತಂಕವಾಗಿರಲೂಬಹುದು. ಆದುದರಿಂದ, ಕೇವಲ ಹೋಗಲು ಬಿಡುವುದು, ಒಂದು ಲೋಟ ಚಹಾ ಕುಡಿಯುವುದು ಮತ್ತು ಸಂತೋಷವಾಗಿರುವುದು ಉತ್ತಮ. ಕನಸಿನಿಂದ ಎಚ್ಚೆತ್ತುಕೊಳ್ಳಿ.
ಜ್ಞಾನಿಗಳು ಈ ಜೀವನವನ್ನು ಕೂಡಾ ಒಂದು ಕನಸಿನಂತೆ ಕಾಣುತ್ತಾರೆ. ಸಂಪೂರ್ಣ ಭೂತಕಾಲವನ್ನು ನೀವೊಂದು ಕನಸಾಗಿ ಕಾಣಬೇಕು. ಅದೆಲ್ಲವೂ ಹೋಯಿತು, ಅಲ್ಲವೇ? ಅದೊಂದು ಕನಸಿನಂತೆ. ಕನಸುಗಳೆಂದರೆ ಅಚ್ಚುಗಳ ನೆನಪುಗಳಲ್ಲದೆ ಬೇರೇನೂ ಅಲ್ಲ. ಅದೆಲ್ಲವೂ ಹೋಯಿತು, ಮತ್ತು ಇದು (ವರ್ತಮಾನ) ಒಂದು ಕನಸಾಗಲಿದೆ. ಇದು ಹೋಗುತ್ತದೆ. ನಾಳೆ, ನಾಡಿದ್ದು ಮತ್ತು ಮೂರು ದಿನಗಳ ಬಳಿಕ ನೀವೆಲ್ಲರೂ ಮರಳಿ ಮನೆಗೆ ಹೋಗಿ, "ಓ, ನಾವು ಬಲ್ಗೇರಿಯಾದಲ್ಲಿದ್ದೆವು. ಅದೆಲ್ಲವೂ ಒಂದು ಕನಸಿನಂತೆ" ಎಂದು ಹೇಳುವಿರಿ.
ಅದೇ ರೀತಿಯಲ್ಲಿ, ನೀವು ಅದರ ಬಗ್ಗೆ ಯೋಚಿಸಿದರೆ, ನೀವು ದಿನ ಕಳೆದು ದಿನ, ದಿನ ಕಳೆದು ದಿನ ಹೀಗೆ ಇನ್ನೊಂದು ೫೦ ವರ್ಷಗಳು ಈ ಭೂಮಿಯ ಮೇಲೆ ಜೀವಿಸುವಿರಿ ಮತ್ತು ನಂತರ ಎಚ್ಚೆತ್ತು ನೀವು ಹೇಳುವಿರಿ, "ಓ, ಅದೊಂದು ಕನಸಿನಂತೆ, ಅದೆಲ್ಲವೂ ಹೋಯಿತು." ಸರಿಯಾ!
ಪ್ರತಿಯೊಂದು ದುಃಸ್ವಪ್ನವನ್ನು ಒಂದು ಸಿಹಿ ಸ್ವಪ್ನವಾಗಿ ಬದಲಾಯಿಸುವುದು ಜ್ಞಾನವಾಗಿದೆ.

ಪ್ರಶ್ನೆ: ಆತ್ಮವು ಅದೇ ಕುಟುಂಬದಲ್ಲಿ ಮತ್ತೆ ಜನ್ಮತಾಳಲು ಸಾಧ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್:
ವ್ಯಕ್ತಿಗೆ ತನ್ನ ಮೊಮ್ಮಕ್ಕಳ ಮೇಲೆ ಅಷ್ಟೊಂದು ಮೋಹವಿದ್ದರೆ, ಅದು ಸಾಧ್ಯವಿದೆ. ಮನಸ್ಸಿನಲ್ಲಿರುವ ಒಂದೇ ಯೋಚನೆಯು "ನನ್ನ ಮೊಮ್ಮಕ್ಕಳು, ನನ್ನ ಮೊಮ್ಮಕ್ಕಳು" ಎಂದಾಗಿದ್ದರೆ, ಆಗ ಅವರು ಅಲ್ಲಿ ಹುಟ್ಟುತ್ತಾರೆ. ನಮ್ಮ ಮನಸ್ಸಿನಲ್ಲಾಗುವ ಆಳವಾದ ಅಚ್ಚುಗಳು ಮುಂದಿನ ಜನ್ಮಕ್ಕೆ ಕಾರಣವಾಗುತ್ತವೆ.

ಪ್ರಶ್ನೆ: ಕೇವಲ ವೈಯಕ್ತಿಕ ಕರ್ಮ ಮಾತ್ರವಿರುವುದೇ ಅಥವಾ ಒಂದು ದೇಶದ ಕರ್ಮ ಎಂದಿದೆಯೇ?
ಶ್ರೀ ಶ್ರೀ ರವಿಶಂಕರ್:
ಕರ್ಮದ ಹಲವಾರು ಪದರಗಳಿವೆ. ವೈಯಕ್ತಿಕ ಕರ್ಮವಿದೆ, ಕೌಟುಂಬಿಕ ಕರ್ಮವಿದೆ, ಸಮುದಾಯ ಕರ್ಮವಿದೆ, ದೇಶೀಯ ಕರ್ಮವಿದೆ ಮತ್ತು ಸಮಯದ ಕರ್ಮವೂ ಇದೆ. ಕರ್ಮದ ಹಲವಾರು ಪದರಗಳಿವೆ. ಆದರೆ ಅದೆಲ್ಲವನ್ನೂ ಬದಲಾಯಿಸಬಹುದು. ನೀವು ಕುಳಿತುಕೊಂಡು ಧ್ಯಾನ ಮಾಡುವಾಗ, ಹಲವಾರು ರೀತಿಗಳಲ್ಲಿ ಬದಲಾವಣೆಗಳಾಗುತ್ತವೆ. ನೀವು ಕೇವಲ ನಿಮಗಾಗಿ ಮಾತ್ರ ಧ್ಯಾನ ಮಾಡುವುದು ಎಂದು ಯೋಚಿಸಬೇಡಿ. ನೀವು ಕ್ರಿಯೆ ಅಥವಾ ಧ್ಯಾನ ಮಾಡುವಾಗ, ನೀವು ನಿಮ್ಮ ಕರ್ಮವನ್ನು ಸಕಾರಾತ್ಮಕ ಮಾಡಿಕೊಳ್ಳುವುದು ಮಾತ್ರವಲ್ಲ, ನೀವು ಭೂಮಿಯ ಮೇಲೆ ಕೂಡಾ ಪ್ರಭಾವ ಬೀರುತ್ತೀರಿ ಮತ್ತು ಇತರ ಸೂಕ್ಷ್ಮ ಸ್ತರಗಳ ಮೇಲೂ ನೀವು ಪ್ರಭಾವ ಬೀರುತ್ತೀರಿ. ನೀವು ಧ್ಯಾನ ಮಾಡುವಾಗ, ಸತ್ತುಹೋದ ಜನರ ಮೇಲೂ ಅದೊಂದು ಬಹಳ ಹಿತ ನೀಡುವ ಮತ್ತು ಶಾಂತಗೊಳಿಸುವ  ಪ್ರಭಾವವನ್ನು ಬೀರುತ್ತದೆ.

ಪ್ರಶ್ನೆ: ನಾವು ನಮ್ಮ ಜೀವನದ ಧ್ಯೇಯವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಿಮ್ಮ ಧ್ಯೇಯವನ್ನು ಕಂಡುಕೊಳ್ಳಲು, ನಿಮ್ಮ ಮನಸ್ಸು ಸ್ಪಷ್ಟವಾಗಬೇಕು ಮತ್ತು ಟೊಳ್ಳು ಹಾಗೂ ಖಾಲಿ ಧ್ಯಾನವು ಮನಸ್ಸನ್ನು ಬಹಳ ಸ್ಪಷ್ಟವಾಗಿಸುತ್ತದೆ. ಮನಸ್ಸು ಸ್ಪಷ್ಟವಾದಾಗ ಅಂತಃಸ್ಫುರಣೆಯು ಬರುತ್ತದೆ.
ನಾನು ಜನರಿಗೆ ಯಾವ ರೀತಿಯಲ್ಲಿ ಅತ್ಯುತ್ತಮವಾಗಿ ಪ್ರಯೋಜನಕಾರಿಯಾಗಬಹುದು ಎಂಬುದನ್ನು ಯೋಚಿಸಿ ಮತ್ತು ನೀವು ನಿಮ್ಮ ಸುತ್ತಲಿರುವ ಜನರಿಗೆ ಪ್ರಯೋಜನಕಾರಿಯಾದಾಗ, ನಿಮ್ಮ ಜೀವನವು ಸೇವೆಗಾಗಿರುವಾಗ, ಜೀವನವು ಬಹಳ ಅರ್ಥಪೂರ್ಣವಾದುದು ಮತ್ತು ಬಹಳ ಸಾಫಲ್ಯವಾದುದು ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.
ನಿಮ್ಮ ಜೀವನವು ಕೇವಲ ನಿಮ್ಮ ಮೇಲೆ ಮಾತ್ರ ಕೇಂದ್ರಿತವಾಗಿದ್ದರೆ, "ನನಗೆ? ನನಗೇನು ಸಿಗುವುದು? ನಾನು ಇನ್ನೂ ಎಷ್ಟು ಹೆಚ್ಚು ಆನಂದವಾಗಿರಬಹುದು?" - ನೀವು ಅದರ ಮೇಲೆ ಮಾತ್ರ ಗಮನವಿರಿಸಿದರೆ, ಆಗ ನೀವು ಖಿನ್ನತೆಗೊಳಗಾಗುವಿರಿ.
ನೋಡಿ, ನಿಮ್ಮ ಶಕ್ತಿ ಮತ್ತು ಪ್ರತಿಭೆಗಳು ಇತರರಿಗೆ ಒಳ್ಳೆಯ ಉಪಯೋಗವಾಗಲು ಇರುವುದು. ಪ್ರಕೃತಿಯು ನಿಮಗೆ ಒಂದು ಒಳ್ಳೆಯ ಸ್ವರವನ್ನು ಕೊಟ್ಟಿದ್ದರೆ, ಅದು ನಿಮಗಾಗಿ ಇರುವುದೇ ಅಥವಾ ಇತರರಿಗಾಗಿಯೇ? ನೀವು ಹಾಡಿಕೊಂಡು, ನಿಮ್ಮದೇ ಹಾಡನ್ನು ಕೇಳುವಿರೇ? ಪ್ರಕೃತಿಯು ನಿಮಗೆ ಒಂದು ಒಳ್ಳೆಯ ಸ್ವರವನ್ನು ಕೊಟ್ಟಿದ್ದರೆ, ಅದು ಇತರರಿಗೆ ಆನಂದಿಸಲು ಇರುವುದು.
ಪ್ರಕೃತಿಯು ನಿಮಗೆ ಒಂದು ಒಳ್ಳೆಯ ರೂಪವನ್ನು ಕೊಟ್ಟಿದ್ದರೆ, ಅದು ನಿಮಗಾಗಿ ಇರುವುದೇ ಅಥವಾ ಇತರರಿಗಾಗಿಯೇ? ಅದು ಇರುವುದು ಇತರರು ನಿಮ್ಮನ್ನು ನೋಡಿ ಆನಂದಿಸಲು.
ಆದುದರಿಂದ, ನಿಮ್ಮಲ್ಲಿರುವ ಯಾವುದೇ ಶಕ್ತಿಯು ನಿಮಗಾಗಿಯಲ್ಲ; ಅದು ಇತರರಿಗಾಗಿ. ನಿಮ್ಮಲ್ಲಿರುವ ಯಾವುದೇ ಬಲ ಅಥವಾ ಶಕ್ತಿಯನ್ನು ಎರಡು ರೀತಿಯಲ್ಲಿ ಉಪಯೋಗಿಸಬಹುದು. ಒಂದೋ ನೀವು ಶಕ್ತಿಯನ್ನು, ಇತರರೊಂದಿಗೆ ಜಗಳವಾಡಲು ಉಪಯೋಗಿಸಬಹುದು, ಅಥವಾ ಶಕ್ತಿಯನ್ನು ಇತರರ ಸೇವೆ ಮಾಡಲು ಉಪಯೋಗಿಸಬಹುದು. ಶತಮಾನಗಳ ಕಾಲ, ಪ್ರಪಂಚದಲ್ಲಿನ ಜನರು, ಕೇವಲ ಇತರರೊಂದಿಗೆ ಯುದ್ಧ ಮಾಡುವುದಕ್ಕಾಗಿ ಶಕ್ತಿಯನ್ನು ಗಳಿಸುತ್ತಿದ್ದಾರೆ, ಅಲ್ಲವೇ? ಇನ್ನೊಬ್ಬರೊಂದಿಗೆ ಯುದ್ಧ ಮಾಡಲು ಸಾಧ್ಯವಾಗುವುದಕ್ಕಾಗಿ ಒಬ್ಬರು ಶಕ್ತಿಯನ್ನು ಗಳಿಸಿದರು ಮತ್ತು ನೀವು ಯುದ್ಧ ಮಾಡುವುದು ಯಾರೊಂದಿಗೆ - ಯಾರು ನಿಮಗೆ ಸರಿಸಮಾನರೋ ಅವರೊಂದಿಗೆ. ಖಂಡಿತವಾಗಿಯೂ ಒಬ್ಬನು ತನಗಿಂತ ಕಡಿಮೆ ಶಕ್ತಿ ಹೊಂದಿದವನೊಬ್ಬನೊಡನೆ ಯುದ್ಧ ಮಾಡುವುದಿಲ್ಲ. ಒಬ್ಬನು ತನಗೆ ಸರಿಸಮಾನವಾದ ಒಬ್ಬನೊಂದಿಗೆ ಯುದ್ಧ ಮಾಡುತ್ತಾನೆ. ಶಕ್ತಿಯೊಂದಿಗೆ ಯುದ್ಧ ಮಾಡುವುದರಿಂದ ಯಾರಿಗೂ ಸಂತೋಷ ಸಿಗಲಿಲ್ಲ. ನಿಮಗೆ ನೀಡಲಾದ ಶಕ್ತಿಯನ್ನು ಒಳ್ಳೆಯ ಉಪಯೋಗಕ್ಕಾಗಿ ಹಾಕಿದರೆ, ಸೇವೆ ಮಾಡಲು, ಅದು ನಿಮಗೆ ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ. ಆದುದರಿಂದ, ನಿಮ್ಮಲ್ಲಿರುವ ಎಲ್ಲವೂ - ಶಕ್ತಿ, ಸೌಂದರ್ಯ, ಹಣ, ಸ್ವರೂಪ, ಸ್ವರ, ಅವುಗಳೆಲ್ಲವೂ ಒಳ್ಳೆಯ ಉಪಯೋಗಕ್ಕೆ ಹಾಕಲು ಇರುವುದು, ಇತರರ ಸೇವೆಗಾಗಿ. ಆಗ, ಜೀವನವು ಬಹಳ ತೃಪ್ತಿಕರವಾದುದೆಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರಶ್ನೆ: (ಮಾನಸಿಕವಾಗಿ ಕುಂಠಿತವಾದ ಮಕ್ಕಳಿಗೆ ಸಹಾಯ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಶ್ನೆ)
ಶ್ರೀ ಶ್ರೀ ರವಿಶಂಕರ್:
ಕೇವಲ ಅವರಲ್ಲಿಗೆ ಹೋಗಿ, ಅವರೊಂದಿಗೆ ಸ್ವಲ್ಪ ಹೊತ್ತು ಆಟವಾಡಿ. ಅಷ್ಟು ಸಾಕು. ಅವರು ದುಃಖಿತರು ಅಥವಾ ಸಂತೋಷವಾಗಿಲ್ಲವೆಂದು ಯೋಚಿಸಬೇಡಿ. ಅವರು ಇನ್ನೊಂದು ಆಯಾಮದಲ್ಲಿ ಜೀವಿಸುತ್ತಾರೆ. ಅವರು ಇಲ್ಲಿರುವುದು ನಿಮ್ಮಿಂದ ಸೇವೆಯನ್ನು ಪಡೆಯಲು, ಅಷ್ಟೆ.

ಪ್ರಶ್ನೆ: ಸಹಾಯವನ್ನು ನಿರಾಕರಿಸಿದ ಒಬ್ಬರಿಗೆ ಸಹಾಯ ಮಾಡಲು ನಮಗೆ ಅಧಿಕಾರವಿದೆಯೇ? ಅವರ ಸ್ವತಂತ್ರ ಇಚ್ಛೆಯು ಪವಿತ್ರವಾದುದು ಎಂಬುದನ್ನು ಗಮನದಲ್ಲಿರಿಸಿಕೊಂಡು, ನಾವು ಅವರಿಗೆ ಸಹಾಯ ಮಾಡಬೇಕೇ?
ಶ್ರೀ ಶ್ರೀ ರವಿಶಂಕರ್:
ನಾನು ನಿನಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಒಂದು ಮಗುವು ಒಂದು ಎತ್ತರದ ಗೋಡೆಯ ಮೇಲೆ ಓಡುತ್ತಿರುವುದಾಗಿ ಹಾಗೂ ಅಲ್ಲಿ ಬೀಳುವ ಅಪಾಯವಿದೆ ಎಂಬುದಾಗಿ ಊಹಿಸು. ನೀನೇನು ಮಾಡುವೆ? ಮಗುವು ಸ್ವತಂತ್ರವಾಗಿರಲು ಬಿಡುವೆಯಾ? ಇಲ್ಲ, ನೀನು ಮಗುವಿಗೆ ಮಾರ್ಗದರ್ಶನ ಮಾಡಿ ಹಿಂದೆ ಕರೆದುತರುವೆ, ಸರಿಯಾ?
ಅದೇ ರೀತಿಯಲ್ಲಿ, ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ ಮತ್ತು ಅದು ಅವರಿಗೆ ಅಪಾಯಕಾರಿ ಎಂಬುದು ನಿನಗೆ ತಿಳಿದಿದ್ದರೆ, ನೀನು ಹೋಗಿ ಅವರಿಗೆ ಸಹಾಯ ಮಾಡುವುದಿಲ್ಲವೇ? ಅದೇ ರೀತಿಯಲ್ಲಿ ನಾವು ಸಾಧ್ಯವಾದಷ್ಟೂ ನಮ್ಮ ಕುಶಲತೆಯಿಂದ, ಜನರನ್ನು ತೊಂದರೆಯಿಂದ ಹೊರತರಲು ಸಹಾಯ ಮಾಡುವುದಕ್ಕಾಗಿ  ಪ್ರಯತ್ನಿಸಬೇಕು.
ಒಬ್ಬನು ಮಾನಸಿಕವಾಗಿ ರೋಗಿಯಾಗಿದ್ದಾನೆ ಹಾಗೂ ಔಷಧಿಯನ್ನು ತೆಗೆದುಕೊಳ್ಳುವುದಿಲ್ಲವೆಂದಿಟ್ಟುಕೊಳ್ಳೋಣ. ಕುಟುಂಬದವರು ಏನು ಮಾಡುತ್ತಾರೆ? ಅವನನ್ನು ಹಾಗೆಯೇ ಇರಲು ಬಿಡುತ್ತಾರೆಯೇ? ಅವನು ಹಿಂಸಾತ್ಮಕವಾಗಿ ಎಲ್ಲರನ್ನೂ ಹೊಡೆಯಲೂಬಹುದು. ಬುದ್ಧಿವಂತರಾದ ಕುಟುಂಬದ ಸದಸ್ಯರು ಅವನಿಗೆ ವೈದ್ಯರು ಹೇಳಿದ ಔಷಧಿಯನ್ನು ಜ್ಯೂಸಿನಲ್ಲೋ ಅಥವಾ ಹಾಲಿನಲ್ಲೋ ಹಾಕಿ ಕೊಡುತ್ತಾರೆ ಮತ್ತು ಅದನ್ನು ಕುಡಿದ ಬಳಿಕ ಅವನು ಉತ್ತಮವಾಗುತ್ತಾನೆ.
ಆದುದರಿಂದ, ’ಪರಿಪೂರ್ಣ’ ಎಂದು ಕರೆಯಲ್ಪಡುವುದು ಯಾವುದೂ ಇಲ್ಲ. ನೀವು ಯಾವತ್ತೂ ಪರಿಸ್ಥಿತಿಗೆ ತಕ್ಕಂತೆ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಒಬ್ಬರಿಗೆ ಸಹಾಯ ಮಾಡುವುದಕ್ಕಾಗಿ ನೀವು ಅವರ ಮೇಲೆ ಬಲ ಪ್ರಯೋಗಿಸುವಂತಿಲ್ಲ. ಒಬ್ಬರು ರಸ್ತೆಯ ಮೇಲೆ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಲು ಬಯಸುತ್ತಾರೆಂದಿಟ್ಟುಕೊಳ್ಳೋಣ. ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸುವುದು ನನ್ನ ಸ್ವತಂತ್ರ ಇಚ್ಛೆ ಎಂದು ಅವರು ಹೇಳಲು ಸಾಧ್ಯವಿಲ್ಲ. ನೀವು ಸಮಾಜದಲ್ಲಿ ಜೀವಿಸುತ್ತಿರುವಾಗ, ನೀವು ನಿರ್ದಿಷ್ಟ ಆದರ್ಶಗಳನ್ನು ಅನುಸರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ, ನೀವು ಒಬ್ಬರಿಗೆ ಸಹಾಯ ಮಾಡಲು ಬಯಸುವಾಗ ಕೂಡಾ, ನೀವು ನಿರ್ದಿಷ್ಟ ಆದರ್ಶಗಳನ್ನು ಅನುಸರಿಸಬೇಕಾಗುತ್ತದೆ. ಬಲವಂತ ಮಾಡಬೇಡಿ, ಅದೇ ಸಮಯದಲ್ಲಿ, ತಮ್ಮ ಮನೆಯಲ್ಲಾದ ಬೆಂಕಿಯನ್ನು ಆರಿಸಲು ಯಾರಾದರೂ ನಿಮ್ಮನ್ನು ಆಮಂತ್ರಿಸಬಹುದು ಎಂದು ಕಾಯಬೇಡಿ. ನಿಮ್ಮ ಪಕ್ಕದ ಮನೆಗೆ ಬೆಂಕಿ ಬಿದ್ದಿದ್ದರೆ, ಹೋಗಿ ಅದನ್ನು ಆರಿಸಲು ಒಂದು ದೂರವಾಣಿ ಕರೆಯನ್ನು ಅಥವಾ ಒಂದು ಆಮಂತ್ರಣವನ್ನು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಬೆಂಕಿಯನ್ನು ಆರಿಸಲು ನೀವು ನುಗ್ಗುತ್ತೀರಿ. ನೀವು ನೀವಾಗಿಯೇ ಸಹಾಯ ಮಾಡಲು ಸಿದ್ಧರಾಗುತ್ತೀರಿ, ಸರಿಯಾ? ಅರ್ಥವಾಯಿತಾ! ಆದುದರಿಂದ ನಡುಮಾರ್ಗವನ್ನು ಹಿಡಿಯಿರಿ.

ಪ್ರಶ್ನೆ: (ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಅವರಿಗೆ ಸಹಾಯ ಮಾಡಲು ನಾವು ನಮ್ಮಿಂದ ಸಾಧ್ಯವಾದುದನ್ನೆಲ್ಲಾ ಮಾಡಬೇಕು. ನಾನು ನಿಮ್ಮೊಂದಿಗಿದ್ದೇನೆ. ನಾವೆಲ್ಲರೂ ಸೇರಿ ಒಂದು ತಂಡವನ್ನು ರಚಿಸಬೇಕು. ಅವರನ್ನು ಸಂಪರ್ಕಿಸಿ ಅವರಿಗೆ ಉಸಿರಾಟ-ನೀರು-ಶಬ್ದ (ಉಸಿರಾಟ-ನೀರು-ಶಬ್ದ ಶಿಬಿರದ ಬಗ್ಗೆ ಉಲ್ಲೇಖಿಸುತ್ತಾ) ಮಾಡಿಸಬೇಕು ಮತ್ತು ಮದ್ಯಪಾನ ವ್ಯಸನದಿಂದ ಹೊರಬರಲು ಅವರಿಗೆ ಸಹಾಯ ಮಾಡಬೇಕು. ಜಿಪ್ಸಿ ಅಲ್ಪಸಂಖ್ಯಾತರಲ್ಲಿರುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಅವರು ಕುಡಿಯುತ್ತಾರೆ, ಕುಡಿಯುತ್ತಾರೆ ಮತ್ತು ಕುಡಿಯುತ್ತಾರೆ. ಅವರು ತಮ್ಮ ಆದಾಯದ ಐವತ್ತರಿಂದ ಅರುವತ್ತು ಶೇಕಡಾವನ್ನು ಮದ್ಯಕ್ಕಾಗಿ ವೆಚ್ಚ ಮಾಡುತ್ತಾರೆ ಮತ್ತು ತಮ್ಮ ಹೆಂಗಸರಿಗೆ ಹೊಡೆಯುತ್ತಾರೆ ಕೂಡಾ. ಮಹಿಳೆಯರು ಬಹಳಷ್ಟು ದೊಡ್ಡ ನೋವಲ್ಲಿದ್ದಾರೆ. ನಾವಿದನ್ನು ಬದಲಾಯಿಸಬೇಕು. ನಾವು ಅವರಿಗಾಗಿ ಉಚಿತ ಕೋರ್ಸುಗಳನ್ನು ಆಯೋಜಿಸಬಹುದು.

ಪ್ರಶ್ನೆ: ನಾನು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತೇನೆ. ಅವರು ಯಾಕೆ ಕುಟುಂಬಗಳನ್ನು ಸೃಷ್ಟಿಸಬಾರದು? ಅವರು ಪರಸ್ಪರ ಕಂಡುಕೊಂಡು ಒಂದು ಸಂಬಂಧವನ್ನು ಮಾಡಬಾರದು?
ಶ್ರೀ ಶ್ರೀ ರವಿಶಂಕರ್:
ನೀನು ಒಂದು ಸಂಬಂಧಕ್ಕಾಗಿ ಹುಡುಕುತ್ತಿರುವೆಯಾ? ಹೌದಾ? ಸರಿ, ನಾವು ಇಲ್ಲಿ ಒಂದು ವೈವಾಹಿಕ ಸೇವೆಯನ್ನು ಪ್ರಾರಂಭಿಸೋಣ. ಎಲ್ಲಾ ಅವಿವಾಹಿತರು ನೋಂದಾಯಿಸಬಹುದು.

ಪ್ರಶ್ನೆ: ನಾನು ಪ್ರಾಮಾಣಿಕವಾಗಿ ಈ ಎಲ್ಲಾ ಅಭ್ಯಾಸಗಳನ್ನು ಮಾಡುತ್ತಿದ್ದೇನೆ, ಆದರೆ ನಾನು ಬದಲಾಗಿರುವೆನೆಂಬ ಬಗ್ಗೆ ನನಗೆ ಖಚಿತವಿಲ್ಲ. ನಾನು ಈಗಲೂ ಅಸಮಾಧಾನಗೊಳ್ಳುತ್ತಿರುತ್ತೇನೆ ಮತ್ತು ಅದರಿಂದ ನನಗೆ ದುಃಖವಾಗುತ್ತದೆ.
ಶ್ರೀ ಶ್ರೀ ರವಿಶಂಕರ್:
ಕೇಳು, ನೀನು ಈಗ ಹೇಗಿದ್ದೀಯಾ? ಈಗ ನೀನು ಸಂತೋಷವಾಗಿದ್ದೀಯಾ? ಹಿಂದಿನ ಬಗ್ಗೆ ಮರೆತುಬಿಡು. ಇಲ್ಲಿರುವುದಕ್ಕೆ ನಿನಗೆ ಸಂತೋಷವಾಗುತ್ತಿದೆಯಾ? ನೀನು ಆನಂದಿಸುತ್ತಿರುವೆಯಾ? ಅಷ್ಟೆ. ನಮ್ಮಲ್ಲಿ ಪ್ರತಿಯೊಬ್ಬರ ಒಳಗೆ ಎರಡು ವಿಷಯಗಳಿವೆ. ಬದಲಾಗದೇ ಇರುವ ಒಂದು ವಿಷಯವಿದೆ. ಬದಲಾಗದೇ ಇರುವ ಪ್ರಜ್ಞೆಯ ಒಂದು ನಿರಂತರ ಹರಿವಿದೆ. ಸುತ್ತಲಿರುವ ಇತರ ಹಲವಾರು ಸಂಗತಿಗಳು ಬದಲಾಗುತ್ತಾ ಇರುತ್ತವೆ. ಆದುದರಿಂದ, ನೀನು ನಿನ್ನ ಜೀವನದಲ್ಲಿ ಹಿಂದಿನದನ್ನು ನೋಡುವಾಗ, ನೀನು ಯಾವ ವ್ಯಕ್ತಿಯಾಗಿದ್ದೆಯೋ ಅದೇ ವ್ಯಕ್ತಿಯಾಗಿ ಉಳಿದಿಲ್ಲ. ಆದರೆ ಅದೇ ಸಮಯದಲ್ಲಿ, ನೀನು ನೋಡುವಾಗ, ನೀನು ಅದೇ ವ್ಯಕ್ತಿಯಾಗಿರುವೆ. ಅವುಗಳೆರಡೂ ಒಂದೇ ಸಲಕ್ಕೆ ಅಲ್ಲಿವೆ.
ನೀನು ಬದಲಾಗಿಲ್ಲವೆಂದು ನಿನಗನಿಸುವುದು ಯಾವಾಗ? ನೀನು ಅಸಮಾಧಾನಗೊಂಡಾಗ. ಯಾರಾದರೂ ನಿನಗೆ ಕಿರಿಕಿರಿಯನ್ನುಂಟುಮಾಡಿದರು ಮತ್ತು ನೀನು ಕೋಪಗೊಳ್ಳುವೆ ಎಂದಿಟ್ಟುಕೊಳ್ಳೋಣ. ನೀನನ್ನುವೆ, "ಓ, ನಾನು ಬದಲಾಗಿಲ್ಲ, ಈಗಲೂ ನಾನು ಕೋಪಗೊಳ್ಳುತ್ತೇನೆ." ಅದು ಇರುವ ಸಮಸ್ಯೆ, ಸರಿಯಾ? ಅದು ನಿಜವಲ್ಲ. ಹಿಂದೆ ನೀನು ಕೋಪಗೊಳ್ಳುತ್ತಿದ್ದೆ. ಆದರೆ ಆ ಕೋಪವು ನಿನ್ನ ಮನಸ್ಸಿನಲ್ಲಿ ತಿಂಗಳುಗಟ್ಟಲೆ ಉಳಿಯುತ್ತಿತ್ತು. ನೀನು ಈಗಲೂ ಕೂಡಾ ಕೋಪಗೊಳ್ಳುವೆ, ಆದರೆ ಅದು ಕೇವಲ ಕೆಲವು ನಿಮಿಷಗಳ ವರೆಗೆ ಅಥವಾ ನೀನು ಒಂದು ಚಿಕ್ಕ ಕ್ರಿಯೆ ಮಾಡುವ ವರೆಗೆ ಮಾತ್ರ ಉಳಿಯುತ್ತದೆ ಮತ್ತು ನಂತರ ನೀನು ಪುನಃ ತಾಜಾವಾಗುವೆ.