ಶುಕ್ರವಾರ, ಮೇ 25, 2012

ಬದುಕೇ ಒ೦ದು ಸಾಧನೆಯೆ೦ದು ಭಾವಿಸಿರಿ

ಮೇ ೨೫, ೨೦೧೨
ಬೆಂಗಳೂರು ಆಶ್ರಮ, ಭಾರತ

ಪ್ರಶ್ನೆ: ಗುರೂಜಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಹೇಳುತ್ತಾನೆ, 'ನನ್ನ ಹುಟ್ಟು (ಜನ್ಮ) ಮತ್ತು ಕಾರ್ಯ (ಕರ್ಮ) ಇವೆರಡು ದೈವಿಕ’ ವೆ೦ದು.  ದಯವಿಟ್ಟು ಇದನ್ನು ವಿವರಿಸಿ.

ಶ್ರೀ ಶ್ರೀ ರವಿಶಂಕರ್:
  ಹೌದು, ನೀವು ಅತ್ಮಜ್ಞಾನ ಪಡೆದಾಗ ನಿಮ್ಮ ಹುಟ್ಟು ಮತ್ತು ಕೆಲಸ ಇವೆರಡೂ ದೈವಿಕ ಎ0ಬ ತಿಳುವಳಿಕೆ ನಿಮ್ಮಲ್ಲಿ ಮೂಡುತ್ತದೆ. ತದನ೦ತರ ನಿಮ್ಮಲ್ಲಿ ಶಿಸ್ತೂ, ನೈತಿಕತೆಯೂ ಸ್ತಾಪಿತವಾಗುತ್ತವೆ. ಆಗ ನೀವು ತಪ್ಪು ಮಾಡುವುದಿಲ್ಲ, ನಿಮ್ಮ ಬಾಯಿಂದ ಒಂದು ಕೆಟ್ಟ ಶಬ್ಧ ಬರುವುದಿಲ್ಲ. ನಿಮ್ಮ ಹೃದಯದಲ್ಲಿ ಅನ್ಯರನ್ನು ಕುರಿತು ದ್ವೇಷ ಅಥವಾ ಕೆಟ್ಟ ಭಾವನೆಗಳು ಇರುವುದಿಲ್ಲ, ಏಕೆಂದರೆ ಎಲ್ಲರೂ ನಿಮ್ಮವರು, ನಿಮ್ಮ ಸ್ವಂತದವರೇ  ಎಂದು ನೀವು ಭಾವಿಸಿರುತ್ತೀರಿ. ಇದೇ ಪ್ರೀತಿಯ ಶಿಖರ.

ಈ ರೀತಿಯ ಪ್ರೀತಿಯ ಅವಸ್ಥೆಯಲ್ಲಿ ನಿಮ್ಮ ಹೃದಯದಲ್ಲಿ ಅನ್ಯರನ್ನು ದೂರೀಕರಿಸುವ ಭಾವನೆಗಳು ಇರುವುದಿಲ್ಲ. ಒಮ್ಮೆ ನಿಮ್ಮಲ್ಲಿ ಈ ಜ್ಞಾನ, ಈ ಪ್ರಜ್ಞೆ ಸ್ಥಿರವಾಗಿ ಸ್ಥಾಪಿತವಾದಾಗ ನೀವು ಸಾಂಧರ್ಭಿಕವಾಗಿ ನಿಮ್ಮನ್ನು ಅನುಭವಿಸುತ್ತೀರ. ಗೀತೆಯಲ್ಲಿ ಇದನ್ನೇ ಹೇಳಲಾಗಿದೆ 'ತತ್ ಸ್ವಯಂ ಯೋಗ ಸಂಸಿದ್ಧಾಃ ಕಾಲೇ ಆತ್ಮಾನಿ ವಿಂದತಿ'.

’ನಾನು ಈಗ ಮಾಡುತ್ತಿರುವುದು ಮತ್ತು ಹಿಂದೆ ಮಾಡಿರುವುದು ಇವೆಲ್ಲವು ದೈವ ಪ್ರೇರಣೆಯಿಂದ ಮತ್ತು ಈ ಕ್ರಿಯೆಗಳೆಲ್ಲವೂ ಆ ಪರಮಾತ್ಮನಿಗೆ ಸಮರ್ಪಣೆಯಾಗುತ್ತವೆ’ . ಮೊದಲನೆಯದಾಗಿ ನೀವು ಆ ಪರಮಾತ್ಮನಿಗೆ ಶರಣಾಗಿದ್ದೇನೆ’ ಎಂಬಷ್ಟನ್ನು ಜೀವನದಲ್ಲಿ ನೀವು ಅರ್ಥಮಾಡಿಕೊಳ್ಳಬೇಕು. ಇ೦ಥ ಭಾವನೆಯ ಪರಿಣಾಮ ಸ್ವರೂಪವಾಗಿ, ನೀವೇ ಎಸಗಿದ ತಪ್ಪುಗಳಲ್ಲಿಯೂ ನಿಮ್ಮ ಕೈವಾಡ ಇಲ್ಲದಿರುವುದನ್ನು ಕಾಣುತ್ತೀರ.

ಹಾಗೆಂದರೆ ನಿಮ್ಮಿಂದಾದ ತಪ್ಪುಗಳು ಅಥವಾ ನಿಮ್ಮಲ್ಲಿನ ನ್ಯೂನತೆಗಳನ್ನು ನೀವು ನಿರ್ಲಕ್ಷಿಸಬೇಕೆಂದಲ್ಲ. ನಿಮ್ಮಲ್ಲಿನ ಆಸೆ, ಹಂಬಲಗಳ ಕಾರಣ ನಿಮ್ಮಿಂದಾದ ತಪ್ಪುಗಳು, ಅಪಕೃತ್ಯಗಳಿಗೆ ನೀವು ಪರಿಹಾರ ಕಂಡುಕೊಳ್ಳಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು . ಈ ರೀತಿಯಲ್ಲಿ ಮುಂದುವರಿದಾಗ ನೀವು ಆ ಪ್ರೀತಿಯ ಪರಿಸ್ಥಿತಿಯನ್ನು ಸಾಧಿಸುತ್ತೀರ. ಆ ಹಂತದಲ್ಲಿ ಎಲ್ಲವು ದೈವ ಪ್ರೇರಣೆಯಿಂದ ಎಂದು ಭಾವಿಸುತ್ತೀರ.

ಪ್ರಶ್ನೆ: ಗುರೂಜಿ, ನಿಮ್ಮನ್ನು ನಾನು ಹೇಗೆ ತಿಳಿಯಲಿ, ಗುರುವು ಶರೀರವನ್ನು ಮೀರಿದವನೆಂದೊ? ಗುರುತತ್ವವನ್ನು ನಾನು ಹೇಗೆ ತಿಳಿಯಬಹುದು? ನನ್ನಲ್ಲಿಯ ಅಂತಃಕರಣ ಕಡಿಮೆಯೆಂದು ಅನಿಸುತ್ತಿದೆ.

ಶ್ರೀ ಶ್ರೀ ರವಿಶಂಕರ್:
ನಿಮ್ಮಲ್ಲಿಯ ತಿಳುವಳಿಕೆ ಕಡಿಮೆಯೆಂದು ಅನಿಸಿದರೆ ಅಷ್ಟೇ ಸಾಕು , ವಿಶ್ರಮಿಸಿ ಹಾಗು ಅಂತರ್ಯವನ್ನು ಗಮನಿಸಿರಿ. ಪ್ರೀತಿಯೆಂದರೆ ಇದೇ, ಪ್ರೀತಿ ಅಭೇದ - ’ನಾನು ಅವನಿಂದ ಬೇರೆಯಲ್ಲ ಮತ್ತು ಅವನು ನನ್ನಿಂದ ಬೇರೆಯಲ್ಲ’ ಎ೦ಬ ಭಾವ.
ನೋಡಿ, ಯಾರಾದರೂ ಒಂದು ಮಗುವನ್ನು ದೂಷಿಸಿದರೆ ಆ ಮಗುವಿನ ತಂದೆ ಏನು ಹೇಳುತ್ತಾರೆ? ನೀವು ನಮ್ಮ ಮಗುವನ್ನು ದೂಷಿಸಿದರೆ ನಮ್ಮನ್ನು ದೂಷಿಸಿದ ಹಾಗೆಯೇ, ಅಥವಾ ನೀವು ಮತ್ತೊಬ್ಬರ  ತಾಯಿ ತಂದೆಯನ್ನು ದೂಷಿಸಿದರೆ, ಅವರ ಮಗುವು ಏನು ಹೇಳುತ್ತದೆ? ನಮ್ಮ ತಂದೆ ತಾಯಿಯನ್ನು ದೂಷಿಸುವುದು ನಮ್ಮನು ದೂಷಿಸಿದ ಹಾಗೆಯೇ. ಈ ರೀತಿ ಅವರು ಇದನ್ನು ವಿರೋದಿಸುತ್ತಾರೆ ಅಲ್ಲವೇ? ಹಾಗೆಂದರೆ ಅವರಲ್ಲಿ ಒಗ್ಗಟ್ಟಿದೆ. ಈ ರೀತಿಯ ಒಗ್ಗಟ್ಟು ಮತ್ತು ಐಕ್ಯತ್ವದ ಭಾವನೆಗಳು ಪ್ರೀತಿಯ ಸಂಕೇತ.

ಪ್ರಶ್ನೆ: ಗುರೂಜಿ, ಗರುಡ ಪುರಾಣದಲ್ಲಿ ಮರಣಾನಂತರದ ವಿವರಣೆ ಭಯಾನಕವಾಗಿದೆ, ಆದರೆ ನೀವು 'ಸಾವು ಸುಂದರವಾದ ಧೀರ್ಘ ವಿಶ್ರಾಂತಿಯಂತೆ ' ಎಂದು ಹೇಳಿದ್ದೀರ .  ದಯವಿಟ್ಟು ಇದರ ಮೇಲೆ ಬೆಳಕು ಚೆಲ್ಲಿ.

ಶ್ರೀ ಶ್ರೀ:
ಹೌದು, ನಾವು ಮರಣದ ಬಗ್ಗೆ ಆಮೇಲೆ ಮಾತನಾಡೋಣ. ಇದೀಗ ನಾವು ಬದುಕಿನ ಬಗ್ಗೆ ಮಾತನಾಡೋಣ. ಈ ಬದುಕಿನಲ್ಲಿಯೇ ನಾವು ತೃಪ್ತರಾಗಿ, ಧನ್ಯತಾ ಭಾವನೆಯುಳ್ಳವರಾಗಿ ನಿರ್ಗಮಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ನಾವು ನಮ್ಮ ಕಡೆಗಾಲದಲ್ಲಿಯೂ ದುಃಖಿತರಾಗಿ ಅಥವಾ ಬೇರೆಯವರನ್ನು ದೂಷಿಸುತ್ತಾ ಅಥವಾ ಶಪಿಸುತ್ತಾ, ಕೋಪದಿಂದ ಇದ್ದಲ್ಲಿ ಸಮಸ್ಯೆ ಉಂಟಾಗುತ್ತದೆ. ಬದುಕಿನ ಕೊನೆವರೆಗೂ ವಿಶೇಷವಾಗಿ ವರ್ತಿಸಿ ಅ೦ತಿಮ ಕ್ಷಣದಲ್ಲಿ ನಮ್ಮ ದೇಹವನ್ನು ನಾವು ಸಂತೋಷದಿಂದ, ತೃಪ್ತಿಯಿಂದ ಬಿಡಬೇಕು.

ಬದುಕಿನ ಕಡೇ ಕ್ಷಣ ಯಾವಾಗ ಎ೦ದು ನಮಗೆ ಗೊತ್ತಿರುವುದಿಲ್ಲ. ಆದ್ದರಿಂದ ಸದಾಕಾಲ ಸಂತೋಷದಿಂದ ಪ್ರಸನ್ನತೆಯಿಂದ ಜೀವಿಸಿರಿ.

ಪ್ರಶ್ನೆ: ಅತ್ಮವು ಚಿರಾಯುವೇ ಅಲ್ಲವೆ ? ಭೂಲೋಕದಲ್ಲಿ ನಾವು ಕಳೆಯುವ ಒಂದು ವರ್ಷವು ಪಿತೃಲೋಕದಲ್ಲಿ ನಮ್ಮ ಪೂರ್ವಜರು ಕಳೆಯುವ ಒಂದು ದಿನಕ್ಕೆ ಸಮ ಎಂದು ಏಕೆ ಹೇಳುತ್ತೇವೆ ?

ಶ್ರೀ ಶ್ರೀ :
ಅದು ಹಾಗೆಯೇ. ಭೂಲೋಕದ ನಮ್ಮ ಜೀವನದ ಒಂದು ವರ್ಷವು ನಮ್ಮ ಪೂರ್ವಜರ ಲೋಕದ ಒಂದು ದಿನಕ್ಕೆ ಸಮಾನವಾಗಿದೆ. ಶಾಸ್ತ್ರಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ನಾವೆಲ್ಲ ಅಲ್ಲಿಗೆ ಹೋಗಿ ಹಿಂದಿರುಗಿದ್ದೀವಿ, ಆದರೆ ನಮಗೆ ಆ ಸಮಯದ ನೆನಪಿಲ್ಲ. ನಿಮಗೆ ನೀವು ಅಲ್ಲಿ ಕಳೆದ ಸಮಯದ ಅರಿವಿಲ್ಲವಾದ್ದರಿಂದ ಅದನ್ನು ನಂಬಲೇಬೇಕು.

ಪ್ರಶ್ನೆ: ಗುರೂಜಿ ನೀವು ಶಿವನ ಬಗ್ಗೆ ಬಹಳಷ್ಟು ಹೇಳಿದ್ದೀರಿ, ಲಿಂಗರೂಪಿಯಾದ ಶಿವನನ್ನು ನಾವು ನೋಡುತ್ತೇವೆ ಮತ್ತು ಆರಾಧಿಸುತ್ತೇವೆ, ಭಗವ೦ತ ಆಕಾರರಹಿತನಾದರೂ ಈ ಮೂರ್ತಿಪೂಜೆಯೇಕೆ?
ಶ್ರೀ ಶ್ರೀ ರವಿಶಂಕರ್:
ಲಿಂಗ ಎಂದರೆ ಗುರುತು ಎಂದರ್ಥ, ಯಾವ ಒಂದು ಚಿಹ್ನೆಯ ಮೂಲಕ ನೀವು ಸತ್ಯವನ್ನು ಗುರುತಿಸಬಹುದೋ, ಯಾವುದು ಕಾಣಿಸದಿದ್ದರೂ ಒಂದು ರೀತಿಯಲ್ಲಿ ಗುರುತಿಸಲು ಸಾಧ್ಯವೋ ಅದು ಲಿಂಗ. ಹುಟ್ಟಿದ ಶಿಶುವು ಗಂಡು ಹೆಣ್ಣು ಎಂದು ಹೇಗೆ ತಿಳಿಯುವಿರಿ? ಶರೀರದ ಒಂದು ಅಂಗದಿಂದ ಮಾತ್ರ ಶಿಶುವು ಗಂಡು ಹೆಣ್ಣು ಎಂದು ನೀವು ಗುರುತಿಸಬಹುದು. ಇದರ ಹೊರತು ಎಲ್ಲಾ ಮಕ್ಕಳು ಸ್ವಲ್ಪ ವಯಸ್ಸಿನವರೆಗೆ ಒಂದೇ ರೀತಿಯಲ್ಲಿ ಕಾಣುತ್ತಾರೆ. ಭವಿಷ್ಯವನ್ನು ಒಂದು ಭಾಗ ಮಾತ್ರ ಹೇಳುತ್ತದೆ . ಈ ಕಾರಣದಿಂದ ಶರೀರದ ಆ ಅಂಗವನ್ನು ಲಿಂಗವೆಂದು ಹೇಳಬಹುದು .

ಅ೦ತೆಯೇ ಈ ಸೃಷ್ಟಿಯ ಪ್ರಭುವನ್ನು ಹೇಗೆ ಗುರುತಿಸುವಿರಿ? ಅವನಿಗೆ ಆಕಾರವಿಲ್ಲ, ಹಾಗಾದರೆ ಆತನನ್ನು ಗುರುತಿಸಲು ಒಂದು ಚಿಹ್ನೆ ಇರಬೇಕು ಎಂದು ಹೇಳಲಾಯಿತು. ಯಾವ ಅ೦ಗಗಳ ಮೂಲಕ ನೀವು ಸ್ತ್ರೀ ಮತ್ತು ಪುರುಷರನ್ನು ಗುರುತ್ತಿಸುತ್ತೀರೋ, ಅವೆರಡನ್ನೂ ಒಗ್ಗೂಡಿಸಲ್ಪಟ್ಟ ಒಂದು ಚಿಹ್ನೆಯಿಂದ. ಆಕಾರ ಮತ್ತು ಗುರುತುಗಳಿಲ್ಲದ, ಸಮಸ್ತ ಬ್ರಹ್ಮಾಂಡದಲ್ಲಿ ವ್ಯಾಪ್ತನಾಗಿರುವ ಈ ಸೃಷ್ಠಿಯ ಒಡೆಯನನ್ನು ಗುರುತಿಸಲು ನಾವು ಆರಿಸಿಕೊ೦ಡ ಚಿಹ್ನೆ ಶಿವ ಲಿಂಗ.

ಆದುದರಿಂದಲೇ ಈ ರೀತಿ ಹೇಳಲಾಗಿದೆ, ’ನಮಾಮಿಶಮೀಶಾನ ನಿರ್ವಾಣರೂಪಂ ವಿಭುಂ ವ್ಯಾಪಕ೦ ಬ್ರಹ್ಮವೇದಸ್ವರೂಪ೦ ನಿರ್ವಾಣರೂಪಂ - ಆತನಿಗೆ ಶರೀರವಾಗಲಿ ಆಕಾರವಾಗಲಿ ಇಲ್ಲ; ವಿಭುಂ - ಆತನು ಎಲ್ಲೆಡೆಯೂ ಇರುವನು, ಬ್ರಹ್ಮವೇದಸ್ವರೂಪಂ - ಆತನು ಪರಮಜ್ಞಾನಮೂರ್ತಿ.      

ನೋಡಿ, ಅಂತರ್ಜಾಲ ಮತ್ತು ದೂರವಾಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ? ಇವೆಲ್ಲಾ ಹೇಗೆ ಕೆಲಸ ಮಾಡುತ್ತವೆ?

ಆಕಾಶದಲ್ಲಿ ಪ್ರತಿ ಕಣವೂ ಜ್ಞಾನ ಭರಿತವಾಗಿದೆ. ಇದೀಗ ಇಲ್ಲಿ, ನಾವು ಕುಳಿತಿರುವಲ್ಲಿ, ಪ್ರಪಂಚದ ಅದೆಷ್ಟೋ ವಾಹಿನಿಗಳು ಚಾಲ್ತಿಯಲ್ಲಿವೆ. ಅದೆಷ್ಟೊ ಕಂಪನಗಳು ಇಲ್ಲಿವೆ . ಆದುದರಿಂದಲೇ ನಮ್ಮ ಕಂಪ್ಯೂಟರಲ್ಲಿ ಅವು ಇ-ಮೇಲ್ ರೂಪದಲ್ಲಿ ವ್ಯಕ್ತಗೊಳ್ಳಲು ಸಾಧ್ಯವಾಗಿದೆ.

ನೀವು ಎಸ್-ಎಮ್-ಎಸ್ ನಲ್ಲಿ ಮುದ್ರಿಸಿ ಕಳಿಸುವ ಅಕ್ಷರಗಳು ಈ ಆಕಾಶದಲ್ಲಿವೆ! ನೀವು ಯಾರೋರ್ವರ ಮೇಲೆ ಕೋಪಿಸಿಕೊ೦ಡರೆ ಆ ಪ್ರಕ್ರಿಯೆ ಆಕಾಶದಲ್ಲಿ ಲೀನವಾಗುತ್ತದೆ, ನೀವು ಯಾರನ್ನಾದರೂ ಅಭಿನಂದಿಸಿದರೆ ಅದು ಕೂಡ ಆಕಾಶಾನ್ಮುಖವಾಗಿ ಸಾಗುತ್ತದೆ. ಈ ರೀತಿಯಲ್ಲಿ ಅವು ನಮ್ಮ ’ಸೆಲ್ ಫ಼ೋನ್'ಗಳಿಗೆ ಲಭ್ಯವಾಗುತ್ತದೆ, ಈ ಕಾರಣದಿಂದಲೇ ಆಕಾಶ ತತ್ವದಲ್ಲಿ ಜ್ಞಾನವು ಸಹಜವಾಗಿದೆ. ಇಂದಿನ ಜ್ಞಾನ ಮಾತ್ರವಲ್ಲ, ಹಿಂದಿನ ಸಾವಿರಾರು ವರ್ಷಗಳ ಜ್ಞಾನವು ಇಲ್ಲಿದೆ. ಇದೀಗ ಈ ಕ್ಷಣದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದದ್ದು ಮತ್ತು ಮುಂದಿನ ಸಾವಿರಾರು ವರ್ಷಗಳ ನಂತರ ನಡೆಯುವುದನ್ನು ನೋಡಬಹುದು, ಏಕೆಂದರೆ ಎಲ್ಲವೂ ಆಕಾಶ ತತ್ವದಲ್ಲಿ ಲಿಖಿತವಾಗಿವೆ, ದಾಖಲಾಗಿವೆ ಮತ್ತು ಅವೆಲ್ಲ ಇದೀಗ ಇಲ್ಲಿ ವರ್ತಮಾನದಲ್ಲಿವೆ.

ಹಾಗಾದರೆ ಆಕಾಶ ತತ್ವವನ್ನು ಹೇಗೆ ಗುರುತಿಸಬಹುದು? ನಮ್ಮ ಪೂರ್ವಿಕರು ಒಂದು ಗುಂಡು ಕಲ್ಲನ್ನು ಪ್ರತಿಷ್ಠಾಪಿಸಿದರು, ಅದರ ಮೂಲಕ ನಾವು ಸೃಷ್ಠಿಕರ್ತನನ್ನು ಸ್ಮರಿಸುತ್ತೇವೆ.

ಪ್ರಶ್ನೆ: ಗುರುದೇವ , ಜ್ಞಾನ ಮತ್ತು ಭಕ್ತಿಗಳ ಸಂಬಂದವೇನು? ಜ್ಞಾನವಿಲ್ಲದ ಭಕ್ತಿಯು ಫಲಕಾರಿಯೆ?

ಶ್ರೀ ಶ್ರೀ ರವಿಶಂಕರ್:
ನಿಮಗೆ ರಸಗುಲ್ಲ ಇಷ್ಟವಾದರೆ ಮಾತ್ರ ಅದನ್ನು ತಿನ್ನಲು ಆಸೆ ಪಡುತ್ತೀರ ಅಲ್ಲವೇ? ಏನೂ ಅರಿಯದ ವಸ್ತುವಿನಲ್ಲಿ ನಿಮಗೆ ಆಸಕ್ತಿ ಇರಲು ಹೇಗೆ ಸಾಧ್ಯ? ಭಕ್ತಿ ಇಷ್ಟವಾಗುತ್ತದೆ - ಹೌದೆ? ಈಗ ಆಲೋಚಿಸಿ ನೀವು ಯಾವುದನ್ನು ಪ್ರೀತಿಸುತ್ತೀರ ಅಥವಾ ಯಾತಕ್ಕಾಗಿ ಆಸೆ ಪಡುತ್ತೀರ? ಯಾವುದರ ಬಗ್ಗೆ ನೀವು ಸ್ವಲ್ಪ ಈಗಾಗಲೇ ತಿಳಿದಿರುವಿರೋ ಅದನ್ನು; ಈ ತಿಳುವಳಿಕೆಯೇ ಜ್ಞಾನ. ಒಮ್ಮೆ ನೀವು ಯಾರನ್ನಾದರೂ ಅಥವಾ ಯಾವುದನ್ನಾದರೂ ಇಷ್ಟ ಪಟ್ಟಾಗ ನೀವು ಆ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಲು ಶ್ರಮಿಸುತ್ತೀರ.

ಸಾಮಾನ್ಯವಾಗಿ ಪತಿ ಪತ್ನಿಯರಲ್ಲಿ ಇದೇ ರೀತಿ ಇರುತ್ತದೆ. ವಿವಾಹಕ್ಕೆ ಪೂರ್ವದಲ್ಲಿಯೇ ಅವರು ಪರಸ್ಪರ ಪ್ರೀತಿಸುತ್ತಾರೆ ಮತ್ತು ವಿವಾಹದ ನಂತರ ಒಬ್ಬರನೊಬ್ಬರು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಪರಸ್ಪರರು ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಬೇರೆ ಬೇರೆ ನಗರಗಳಲ್ಲಿದ್ದರೂ ದೂರವಾಣಿಯಲ್ಲಿ, ’ನೀನು ಈಗ ಏನು ಮಾಡುತ್ತಿರುವೆ? ನೀನು ಏನು ತಿಂದೆ?” ಎಂದು ವಿಚಾರಿಸುತ್ತಾರೆ. ತಾಯಿ ಸಹಜವಾಗಿಯೇ ತನ್ನ ಮಕ್ಕಳು ಬೇರೆ ನಗರದಲ್ಲಿದಾಗ ವಿಚಾರಿಸುತ್ತಾಳೆ, ’ನೀನು ಇಂದು ಏನು ತಿಂದೆ? ಎಲ್ಲಿಗೆ ಹೋಗಿದ್ದೆ? ಯಾವ ಉಡುಪು ಧರಿಸಿದ್ದೆ?’

ನಿಮಗೆ ಪ್ರೀತಿಪಾತ್ರರಾದವರು ನಿಮ್ಮಿಂದ ದೂರದಲ್ಲಿದ್ದಾಗ ಅವರು ಏನು ಮಾಡುತ್ತಿದ್ದಾರೆ ಏನು ಧರಿಸಿದ್ದಾರೆ ಎಂದೆಲ್ಲಾ ತಿಳಿಯುವ ಕಾತುರತೆ ನಿಮ್ಮಲ್ಲಿರುತ್ತದೆ. ಅವರನ್ನು ನಾವು ಪ್ರೀತಿಸುವ ಕಾರಣದಿಂದಲೇ ನಾವು ಅವರ ಬಗ್ಗೆ ಎಲ್ಲವನ್ನೂ ತಿಳಿಯುವ ಪ್ರಯತ್ನ ಮಾಡುತ್ತೇವೆ. ಅದಕ್ಕೇ ವೈವಾಹಿಕ ಜೀವನದಲ್ಲಿ ಪತಿ-ಪತ್ನಿ  ಒಬ್ಬರನ್ನೊಬ್ಬರು ಆ೦ತರಿಕವಾಗಿ ತಿಳಿಯುತ್ತಿದ್ದಾರೆ ಎಂದೆನಿಸುತ್ತದೆ. ಇದು ಸರಳ ಮತ್ತು ಸ್ವಾಭಾವಿಕ.   

ಜ್ಞಾನವಿರುವಲ್ಲಿ ಪ್ರೀತಿಯು ತನ್ನಷ್ಟಕ್ಕೆ ತಾನೇ ಅರಳುತ್ತದೆ. ಒಬ್ಬ ಗಗನವಿಜ್ಞಾನಿಯು ಈ ವಿಶ್ವದ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತಾ ಆತನ ಆಸಕ್ತಿಯು ಎಷ್ಟು ಹೆಚ್ಚುತ್ತದೆಯೆಂದರೆ ಅವನು ಅದರಲ್ಲಿ ಸಂಪೂರ್ಣವಾಗಿ ವಿಲೀನನಾಗುತ್ತಾನೆ. ಆ ವಿಷಯದಲ್ಲಿ ಪ್ರೀತಿಯುಳ್ಳವನಾಗುತ್ತಾನೆ. ಆದ್ದರಿಂದಲೇ ಪ್ರೀತಿ ಮತ್ತು ಭಕ್ತಿ ಗಳನ್ನು ನೀವು ಬೇರ್ಪಡಿಸಲಾಗುವುದಿಲ್ಲ. ಪ್ರಾರಂಭದಲ್ಲಿ, ಜ್ಞಾನವಿದ್ದಲ್ಲಿ ಭಕ್ತಿಯು ಮೂಡುತ್ತದೆ. ಹಾಗೆಯೇ ಭಕ್ತಿಯಿರುವಲ್ಲಿಗೆ ಜ್ಞಾನವು ತಡಮಾಡದೆ ಧಾವಿಸುತ್ತದೆ. ಆದಕಾರಣ ಪ್ರೀತಿ ಮತ್ತು ಭಕ್ತಿ ಎಂದೂ ವಿಭಿನ್ನವಾಗಿರುವ ಮಾರ್ಗಗಳೆಂದು ಭಾವಿಸಬೇಡಿರಿ.      

ಪ್ರಶ್ನೆ: ಗುರುದೇವ, ಸುಖ ದಾಂಪತ್ಯಕ್ಕೆ ಪತಿ-ಪತ್ನಿ ಪಾತ್ರಗಳೇನೆ೦ದು ತಿಳಿಸಿರುತ್ತೀರ, ಇಂದು ದಯವಿಟ್ಟು ದಾಂಪತ್ಯದ ಯಶಸ್ಸಿಗೆ ಅತ್ತೆ, ಮಾವಂದಿರ ಪಾತ್ರಗಳನ್ನು ತಿಳಿಸಿರಿ.

ಶ್ರೀ ಶ್ರೀ ರವಿಶಂಕರ್:
ನಿಮ್ಮ ತಾಯಿ-ತಂದೆ ನಿಮ್ಮನ್ನು ಹಲವು ಬಾರಿ ದೂಷಿಸಿರುತ್ತಾರೆ, ಅಲ್ಲವೇ? ನಿಮ್ಮ ತಾಯಿಯು ನಿಮ್ಮನ್ನು ದೂಷಿಸುವುದನ್ನು ನೀವು ಸುಲಭವಾಗಿ ಸ್ವೀಕರಿಸುತ್ತೀರ. ಆದರೆ ಇದೇ ರೀತಿ ನಿಮ್ಮ ಅತ್ತೆ ನಿಮ್ಮನ್ನು ದೂಷಿಸಿದರೆ ನಿಮಗೆ ನೋವಾಗುತ್ತದೆ ಮತ್ತು ಕ್ಷೋಭೆಗೊಳಗಾಗುತ್ತೀರ. ನಿಮ್ಮ ಗಂಟಲಿನಲ್ಲಿ ಏನೊ ಸಿಕ್ಕಿಕೊಂಡ ಹಾಗೆ ಅನಿಸುತ್ತದೆ. ವಾಸ್ತವದಲ್ಲಿ ನಿಮ್ಮ ಅತ್ತೆಯವರಾಗಲಿ ಅಥವಾ ನಿಮ್ಮ ಮಾವನವರಾಗಲಿ ನಿಮಗೆ ಏನಾದರೂ ಹೇಳುವ ಮುನ್ನ ಸ್ವಲ್ಪ ಹಿಂಜರಿಯುತ್ತಾರೆ. ನಿಮ್ಮ ಪೋಷಕರು ನಿಮ್ಮನ್ನು ದೂಷಿಸುವಷ್ಟು ಅಧಿಕಾರದಲ್ಲಿ ಸೊಸೆಯನ್ನಾಗಲಿ ಅಥವಾ ಅಳಿಯನ್ನಾಗಲಿ ದೂಷಿಸುವುದಿಲ್ಲ. ಮತ್ತು ಯಾರಾದರೂ ನಿಮ್ಮಲ್ಲಿ ಅಧಿಕಾರದ ಭಾವನೆಯಿಂದ ವರ್ತಿಸಿದಾಗ ಕೆಲುವೊಮ್ಮೆ ಅವರು ನಿಮ್ಮನ್ನು ದೂಷಿಸುವುದು ಅಥವಾ ಅಹಿತವಾಗಿ ವರ್ತಿಸುವುದುಂಟು. ಆದರೆ ಅದರಿಂದ ನಿಮಗೆ ನೋವಾಗುತ್ತದೆ ಏಕೆಂದರೆ ನೀವು ಅವರನ್ನು ನಿಮ್ಮ ಸ್ವಂತದವರೆಂದು ತಿಳಿದಿರುವುದಿಲ್ಲ, ಅವರು ಅಪರಿಚಿತರೆ೦ಬುದು ನಿಮ್ಮ ಭಾವನೆ. ನಿಮ್ಮ ಅತ್ತೆಯವರನ್ನು ತಾಯಿಯಂತೆ ಭಾವಿಸಿದಲ್ಲಿ, ಪರಸ್ಪರ ವಿವಾದಗಳ ಬಳಿಕ ನೀವು ಅವರನ್ನು ಅಪ್ಪಿಕೊಳ್ಳುವಿರಿ. ಅಪರಿಚಿತರಂತೆ ಭಾವಿಸಿದರೆ ವಿವಾದಗಳ ಬಳಿಕ ಅವರೇ ನಿಮ್ಮನ್ನು ಕ್ಷಮಾಪಣೆ ಕೇಳಲಿ ಅಥವಾ ನಿಮ್ಮನ್ನು ಓಲೈಸಲಿ ಎಂದು ನಿರೀಕ್ಷಿಸುತ್ತೀರ. ವಾಸ್ತವದಲ್ಲಿ, ನಿಮ್ಮ ಅತ್ತೆ ಅಥವಾ ಮಾವ ನಿಮ್ಮನ್ನು ದೂಷಿಸಿದರೆ ಅದು ಒಳ್ಳೆಯ ವಿಷಯವೇ! ನಿಮ್ಮ ಕೊರತೆಯನ್ನು ನೀವು ಅರಿಯಲು ಅದು ಸಹಾಯಕ!! ಅವರು ನಿಮ್ಮಲ್ಲಿ ಮತ್ತು ತಮ್ಮ ಮಕ್ಕಳಲ್ಲಿ ಏನೂ ವ್ಯತ್ಯಾಸ ಕಾಣುತ್ತಿಲ್ಲ ಎ೦ಬುದನ್ನು ನೀವು ಅರ್ಥಮಾಡಿಕೊಳ್ಳಬೇಕು .

ಎಂದಿಗೂ ನೀವು ನಿಮ್ಮ ತಾಯಿಯೊಡನೆ ಜಗಳವಾಡಿಲ್ಲವೆ? ಒಮ್ಮೆ ಹೋಲಿಸಿ, ಎರಡನ್ನೂ ಗಮನವಿಟ್ಟು ನೋಡಿ! ಅದೆಷ್ಟೋ ಬಾರಿ ನೀವು ನಿಮ್ಮ ತಾಯಿಯೊಡನೆ ಜಗಳವಾಡಿದ್ದೀರ, ಬಹಳಷ್ಟು ಬಾರಿ ಅವರು ನಿಮ್ಮನ್ನು ದೂಷಿಸಿದ್ದಾರೆ, ಆದರೆ ಎಂದಾದರೂ ಅ೦ಥ ಸನ್ನಿವೇಶ ನಿಮ್ಮ ಹೃದಯವನ್ನು ಬಾಧಿಸಿದ್ದು೦ಟೆ? ಸ್ವಲ್ಪ ಸಹ ಇಲ್ಲ, ನೀವು ಅದನ್ನು ಲಕ್ಷಿಸುವುದೇ ಇಲ್ಲ.

ಎ೦ದು ತಾಯಿಯೊಡನೆ ಜಗಳವಾಡುವಿರೋ ಅಂದೇ ಅವರನ್ನು ಓಲೈಸುತ್ತೀರ ಮತ್ತು ಏನೂ ಆಗದಂತೆ ಅವರೊಡನೆ ಕುಳಿತು ಮಾತಾಡುತ್ತೀರ. ನಿಮ್ಮ ಅತ್ತೆಯವರೊಡನೆಯೂ ಈ ರೀತಿಯೇ ವರ್ತಿಸಿರಿ! ಕಾದಾಡಿದ ಬಳಿಕ ಅವರೊಡನೆ ಕುಳಿತು ಮಾತಾಡಿರಿ, ನಿಮ್ಮ ತಾಯಿಯ ಬಳಿ ನೀವು ಇರುವಂತೆಯೇ. ಜಗಳವನ್ನು ಹೃದಯದ ಸಮೀಪಕ್ಕೆ ಎಳೆದುಕೊಳ್ಳಬೇಡಿ, ನಿಧಾನವಾಗಿ ಅವರೂ ಕೂಡ ನಿಮ್ಮ ಬಗ್ಗೆ ಅವರು ಹೊ೦ದಿರುವ ಭಾವನೆಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಅವರ ಹೃದಯವೂ ಬದಲಾಗುತ್ತದೆ.

ಪ್ರೀತಿಯಿಂದ ನೀವು ಯಾರನ್ನಾದರೂ ಏನು, ಪ್ರತಿಯೊಬ್ಬರನ್ನೂ ಗೆಲ್ಲಬಹುದು. ನಿಮ್ಮಲ್ಲಿಯ ಸಂಕಲ್ಪದಿಂದ ನೀವು ಅವರನ್ನು ಗೆಲ್ಲಬಹುದು. ಪ್ರೀತಿ ಮತ್ತು ಸಂಕಲ್ಪಗಳೆರಡೂ ಸೋತರೆ ಪ್ರಾರ್ಥನೆ ಮಾಡಿ, ಕೃಪೆಯಿಂದ ನೀವು ಖಂಡಿತ ಜಯಿಸುತ್ತೀರ.

ಪ್ರಶ್ನೆ:  ಗುರೂಜಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಪರಮಾತ್ಮನೆಂದು ಮತ್ತು ಆತನೇ ಸರ್ವಸ್ವವೆಂದು ಹೇಳಲಾಗಿದೆ. ಶಿವ ತತ್ತ್ವದಲ್ಲಿ ಸರ್ವಸ್ವವೂ ಶಿವನೇ ಎಂಬ ಉಲ್ಲೇಖ ಇದೆ. ಎ೦ದಾಗ ಯಾವುದು ಸತ್ಯ?

ಶ್ರೀ ಶ್ರೀ ರವಿಶಂಕರ್:
ಎರಡೂ, ಏಕೆಂದರೆ ಇವರಿಬ್ಬರಲ್ಲಿ ಏನೂ ವ್ಯತ್ಯಾಸವಿಲ್ಲ. ಶಿವನಾರೋ ಅವನೇ ಕೃಷ್ಣ ಮತ್ತು ಆ ಪರಮಾತ್ಮನೇ ಸರ್ವಸ್ವ. ಆ ಈರ್ವರು ಬೇರೆಯಲ್ಲ, ಒಬ್ಬರೇ. ಓರ್ವ ಋಷಿವರರು ಹರಿ ಹರರು ಬೇರೆಯೆಂದು ನಂಬಿದ್ದರು. ಕೆಲವರು ಹರಿನಾಮ ಸ್ಮರಿಸಿದರೆ ಮತ್ತು ಕೆಲವರು ಹರನನ್ನು ಸ್ಮರಿಸುತ್ತಿದ್ದದ್ದರಿ೦ದ ಅವರಲ್ಲಿ ಆ ಭಾವನೆಯಿತ್ತು. ಅದಕ್ಕೇ ಭಗವಂತ, ಆ ಸಂತನಿಗೆ ತನ್ನ ಸ್ವರೂಪವನ್ನು ದರ್ಶಿಸಿದ. ಆ ಸ್ವರೂಪದಲ್ಲಿ ಭಗವಂತ ಅರ್ಧ ಹರಿ ಮತ್ತು ಅರ್ಧ ಹರನ ರೂಪದಲ್ಲಿ ಕಾಣಿಸಿಕೊ೦ಡು ಸಾಧುವಿಗೆ ಹರಿ ಹರರು ಬೇರೆಯಲ್ಲವೆಂದು ತಿಳಿಸಿದ.

ಇದೇ ರೀತಿ ಕೆಲವರು ಶಿವ, ಶಕ್ತಿ  ಬೇರೆಬೇರೆಯೆಂಬ ಅಭಿಪ್ರಾಯದಲ್ಲಿರುತ್ತಾರೆ. ಭೃ೦ಗಿಯೆಂಬ ಮುನಿಶ್ರೇಷ್ಠರು ಇದೇ ರೀತಿಯ ಭಾವನೆ ಹೊ೦ದಿದ್ದರು. ಪುರುಷ ಸ್ವರೂಪವು ಸ್ತ್ರೀ ಸ್ವರೂಪಕ್ಕಿಂತ ಶ್ರೇಷ್ಠವೆಂದು ತಿಳಿದಿದ್ದರು.

ಹಲವು ಜಾತಿ ವರ್ಗಗಳಲ್ಲಿ, ಸ್ತ್ರೀಯರಿಗೆ ಯೋಗ್ಯವಾದ ಸ್ಥಾನಮಾನಗಳು ದೊರೆತಿಲ್ಲ, ಅವರನ್ನು ಕೀಳಾಗಿ ಕಾಣುತ್ತಾರೆ ಮತ್ತು ಪುರುಷರಿಗೆ ಮಾತ್ರ ಪ್ರಾಧಾನ್ಯತೆ ಕೊಡುತ್ತಾರೆ.
ಪುರುಷ ತತ್ವ ಸ್ತ್ರೀ ತತ್ವಕ್ಕಿ೦ತ ಶ್ರೇಷ್ಠವೆ೦ದು ಭಾವಿಸುವವರ ಗು೦ಪಿನಲ್ಲಿ ಋಷಿ ಭೃ೦ಗಿಯೂ ಓರ್ವರಾಗಿದ್ದರು.
.
ಹಲವು ಧರ್ಮೀಯರು ಹಕ್ಕಿಗೆ ಅನುಗುಣವಾದ ಸ್ಥಾನಮಾನಗಳನ್ನು ಮಹಿಳೆಯರಿಗೆ ನೀಡುತ್ತಿಲ್ಲ. ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನ ನೀಡಿ, ಪುರುಷರು ಶ್ರೇಷ್ಠರೆ೦ದು ಅವರು ಪರಿಗಣಿಸುತ್ತಾರೆ.

ಕೆಲುವೊಮ್ಮೆ ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು ಕೂಡ ಹಾದಿ ತಪ್ಪುತ್ತಾರೆ. ಅವರೆಲ್ಲಾ ಒಳ್ಳೆಯವರೆ, ಆದರೆ ತಪ್ಪು ಅಭಿಪ್ರಾಯಗಳನ್ನು ಹೊಂದಿರುತ್ತಾರೆ, ಅವರ ಬುದ್ಧಿ ಶಕ್ತಿಗೆ ಮೋಡ ಕವಿದಂತಾಗುತ್ತದೆ , ಆದಕಾರಣ ಭೃಂಗಿ ಋಷಿಗಳಿಗೆ ಯೋಗ್ಯವಾದ ಜ್ಞಾನ ತರಲು ಭಗವಂತನು ಆತನಿಗೆ ತನ್ನ ಪುರುಷ ಮತ್ತು ಸ್ತ್ರೀ ಅವತಾರವನ್ನು ದರ್ಶಿಸಿದರು. ಅರ್ಧ ಶಿವ ಮತ್ತು ಅರ್ಧ ಶಕ್ತಿ (ಅರ್ಧನಾರೀಶ್ವರ) ಸ್ವರೂಪವನ್ನು ದರ್ಶಿಸಿದ ಋಷಿ ಭೃಂಗಿಗೆ , ಭಗವಂತನ ಶಿವ ಸ್ವರೂಪಕ್ಕೆ ಮಾತ್ರ ಪ್ರದಕ್ಷಿಣೆ ಮಾಡಲು ಸಾಧ್ಯವಾಗಲಿಲ್ಲ ಏಕೆಂದರೆ ಎರಡೂ ರೂಪಗಳು , ಒಂದೇ ಅವತಾರದಲ್ಲಿತ್ತು. ಆದರಿಂದ ಆತನು ಎರಡು ರೂಪಗಳಿಗೂ ಪ್ರದಕ್ಷಿಸುತ್ತ , ಶಕ್ತಿಯನ್ನು ಪೂಜಿಸಿದರು.

ಒಬ್ಬ ಪುರುಷನಿಗೆ ಸಲ್ಲುವ ಗೌರವವು ಒಬ್ಬ ಮಹಿಳೆಗೂ ಸಲ್ಲಬೇಕು . ಸ್ತ್ರೀ ಪುರುಷರಲ್ಲಿ ಬೇದ ಮಾಡಬಾರದು. ಇಂದಿಗೂ ನಾವು ವಿಚಾರಮಾಡುವ , ಸ್ತ್ರೀ ಸಬಲತೆ ಎಂಬ ವಿಷಯವನ್ನು ನೂರಾರು ವಾರ್ಷಗಳ ಹಿಂದೆ ನಮ್ಮ ದೇಶದಲ್ಲಿ ಚರ್ಚಿಸಿದ್ದಾರೆ. ಅರ್ಧನಾರೀಶ್ವರನ ಅವತಾರದಲ್ಲಿ ಭಗವಂತನು ಈ ಜ್ಞಾನವನ್ನು ಭೃಂಗಿ ಋಷಿಗಳಿಗೆ ತಿಳಿಸಿದರು.

ಭೃಂಗಿ ಎಂಬ ಪದದ ಅರ್ಥವು , ಒಂದು ದೊಡ್ದ ಜೇನು ನೊಣ ಎಂದು. ಭೃಂಗಿ ಋಷಿಗಳ ಹೃದಯದಲ್ಲಿ ದೈವ ಭಕ್ತಿಯು ಅಚಲವಾಗಿ ಅನುರಣಿಸುತ್ತಿತ್ತು,
ಸತತವಾಗಿ ಝೇಂಕರಿಸುವ ಜೇನಿನ ಶಬ್ದದ ಹಾಗೆ. ಹೇಗೆ ಒಂದು ದುಂಬಿಯು ಹೂವಿಂದ ಹೂವಿಗೆ ಹಾರುತ್ತಾ ಮಕರಂದವನ್ನು ಮಾತ್ರ ಸ್ವೀಕರಿಸುತ್ತದೆಯೋ , ಅದೇ ರೀತಿ ಋಷಿ ಭೃಂಗಿಯು ಒಬ್ಬ ಮನುಷ್ಯನಲ್ಲಿ ಶಿವ ತತ್ತ್ವವನ್ನು ಮಾತ್ರ ಹುಡುಕ್ಕುತ್ತಿದ್ದರು ಮತ್ತು ಸ್ವೀಕಾರ ಮಾಡುತ್ತಿದ್ದರು. ಅಂತಹ ಮಹಾ ಭಕ್ತರಾಗಿದ್ದರು. ಆದರೆ ಸ್ತ್ರೀಯರನ್ನು ಅಷ್ಟು ಗೌರವಿಸದ ಕಾರಣ , ಭಗವಂತನು ಸ್ತ್ರೀ ಮತ್ತು ಪುರುಷನ ಅವತಾರವನ್ನು ದರ್ಶನ ಕೊಟ್ಟು ಆತನನ್ನು ಸರಿಪಡಿಸಿದರು.

ಇದು ಪುರಾಣ ಅಥವಾ ನಿಜವಾದ ಕಥೆಯಾಗಿರಬಹುದು , ಆದರೆ ಇದರ ಸಾರವೆನೆಂದರೆ ಈ ರೀತಿಯಲ್ಲಿ ಆತನಿಗೆ ಹರ ಮತ್ತು ಹರಿ ಬೇರೇಯಲ್ಲವೆಂಬುದು ಅರಿವಾಯಿತು.

ಇತಿಹಾಸದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಒಬ್ಬ ಶ್ರೇಷ್ಠ ವ್ಯಕ್ತಿ . ಆದರೆ ಶಿವನಿಗೆ ಜನನವಿಲ್ಲ , ಆದರಿಂದಲೇ ಅವನನ್ನು ಸ್ವಯಂಭು ಎಂದು ಕರೆಯುತ್ತಾರೆ , ಅವನಿಗೆ ಜನನವೇ ಇಲ್ಲ.

ಇಸ್ಲಾಂ ಧರ್ಮದಲ್ಲಿಯೂ ಕೂಡ , ಅಲ್ಲಾಃ ಹುಟ್ಟಿರಲಿಲ್ಲ ಎಂದು ಹೆಳುತ್ತಾರೆ , ಶಿವನಿಗೂ ಕೂಡ ಇದೇ ರೀತಿ ಹೇಳಲಾಗಿದೆ . ಆತನು ಹಾಗೆಯೇ ಪ್ರತ್ಯಕ್ಷವಾದ ಅಥವಾ ತನ್ನಿಂದಲೇ ಪ್ರಕಟವಾದ. ಅವನು ಸಮಯವನ್ನು ಆಳುವವ , ಆದ್ದರಿಂದ ಮೃತ್ಯುವು ಅವನನ್ನು ಮುಟ್ಟಲೂ ಸಾಧ್ಯವಿಲ್ಲ . ಸಿಖರ ಧರ್ಮದಲ್ಲಿಯೂ ಇದೇ ರೀತಿ ಹೇಳಲಾಗಿದೆ , ದೇವರು ಚಿರಾಯು ಎಂದು - ಏಕ್ ಓಂಕಾರ್ ಸತ್ನಮ್ ಕರ್ತ ಪುರಖ್ ನಿರ್ಭೌ ನಿರ್ವೈರ್ ಆಕಲ್ ಮುರತ್ . ಎಲ್ಲಾ ಧರ್ಮಗಳು ಒಂದೇ ತತ್ತ್ವವನ್ನು ಹೆಳುತ್ತವೆ ಹಾಗು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಇದನ್ನೇ ಹೇಳಿದ್ದಾರೆ. 'ಅವಜನ೦ತಿ  ಮಾ೦ ಮುಧಾ ಮಾನುಸಿ೦ ತನು೦ ಆಶ್ರಿತ೦; ಪರ೦ ಭಾವ೦ ಅಜನ೦ತೋ ಮಮ ಭುತಾ - ಮಹೇಶ್ವರಂ'

ಅಜ್ಞಾನಿಗಳು ನನ್ನನ್ನು ಈ ದೇಹವೆಂದು ತಿಳಿಯುತ್ತಾರೆ , ನನ್ನ ಆ ಅಲೌಕಿಕ ಸ್ವರೂಪವನ್ನು ಅರಿಯದೆ, ಜನರು ನನ್ನನ್ನು ಕೇವಲ ಮನುಷ್ಯ ದೇಹ ಅಥವಾ ಮನಸ್ಸು ಎಂದು ತಿಳಿಯುತ್ತಾರೆ . ಮೂರ್ಖರು ಇದನ್ನು ಅರಿಯರು ,  ನಾನು ಮನುಷ್ಯ ದೇಹದಲ್ಲಿರುವೆ ಆದರೆ ನನ್ನಲ್ಲಿಯ ಪ್ರಜ್ಞೆಯು ಆ ಪರಮ ಶ್ರೇಷ್ಠ ಪ್ರಜ್ಞೆಯಾಗಿದೆ. ಎಲೇ ಅರ್ಜುನನೆ ! ನೀನು ನನ್ನಲ್ಲಿ ಆ ದೈವಾಂಶ ಮಾತ್ರ ಕಾಣಬೇಕು.

ಅದಕ್ಕಾಗಿಯೆ ದೇವರಲ್ಲಿ ಮನುಷ್ಯ ಬುದ್ಧಿಯಿಂದ ನೋಡಬೇಡ ಎಂದು ಹೇಳಿದ್ದಾರೆ , ಏಕೆಂದರೆ ನೀವು ನೋಡುವ ರೀತಿಯಲ್ಲಿಯೆ ಅದು ನಿಮಗೆ ಕಾಣಿಸುತ್ತದೆ . ಒಂದು ಶಿಲೆಯನ್ನು ಕೇವಲ ಕಲ್ಲು ಎಂದು ತಿಳಿದರೆ ಅದು ಕಲ್ಲಿನ ಹಾಗೆಯೆ ಕಾಣುತ್ತದೆ , ಆದರೆ ಆ ಶಿಲೆಯನ್ನು ಪೂಜ್ಯ ಭಾವನೆಯಿಂದ ಕಂಡರೆ ಅಲ್ಲಿಯೂ ದೇವರನ್ನು ಕಾಣಬಹುದು .

ಇದೇ ರೀತಿ , ಪ್ರತಿಯೊಬ್ಬರಲ್ಲಿಯೂ ದೈವಾಂಶ ಮತ್ತು ಪ್ರೀತಿಯನ್ನು ನಾವು ಗುರುತಿಸಿದಾಗ ನಮ್ಮ ಸುತ್ತಲೂ ಇರುವ ಜನರಲ್ಲಿಯ ಐಕ್ಯತೆಯನ್ನು ನಾವು ಕಾಣಬಹುದು , ಏಕೆಂದರೆ ಅವರೆಲ್ಲ ಒಬ್ಬ ಪರಮಾತ್ಮನಿಂದ ಬಂದಿರುತ್ತಾರೆ. ಮನುಷ್ಯ ಬುದ್ಧಿ ಎಂದರೆ ಸ್ತಿಮಿತವಾದ ಲೌಕಿಕ ಅವತಾರವನ್ನು ಕಾಣುವುದು , ಆದರೆ ನಾವು ಸಕಲದಲೂ ವ್ಯಾಪಿಸಿರುವ ದೈವವನ್ನು , ಎಲ್ಲೆಡೆಯೂ ಎಲ್ಲರಲ್ಲೂ ಕಾಣಬೇಕು.

ಪ್ರಶ್ನೆ : ಗುರುದೇವ , ಜ್ಞಾನವನ್ನು ನಾವು ಪಡೆಯುತ್ತೇವೆ ಮತ್ತು ತಿಳಿಯುತ್ತೇವೆ ಹಾಗೆಯೆ ನಾವು ಅದನ್ನು ಕಳೆದುಕೊಳ್ಳುತ್ತೇವಾ ?

ಶ್ರೀ ಶ್ರೀ ರವಿಶಂಕರ್ :
ನಾವು ಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದಿಲ್ಲ , ಪರಿಪೂರ್ಣವಾದ ಜ್ಞಾನ ಪಡೆದಾಗ , ಅದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ , ಆದರೆ ಯಾರಾದರು ಅಪೂರ್ಣವಾದ ಜ್ಞಾನ ಪಡೆದಾಗ , ಅವರ ತಿಳುವಳಿಕೆಯಲ್ಲಿ ಸ್ವಲ್ಪ ಹಿಂದು ಮುಂದು ಹೋಗಬಹುದು.

ಪ್ರಶ್ನೆ : ನಾನು ಸಾಧನೆಗೆ ಕುಳಿತಾಗಲೆಲ್ಲ, ನನ್ನ ಮನಸ್ಸು ದಾರಿತಪ್ಪಿ ಹೋಗುತ್ತದೆ , ಮನಸನ್ನು ನಿಯಂತ್ರಿಸಲು ನಾನು ಏನು ಮಾಡಬೇಕು ?

ಶ್ರೀ ಶ್ರೀ ರವಿಶಂಕರ್ :
ಕಿವಿಗೊಟ್ಟು ಆಲಿಸಿರಿ , ನಿಮ್ಮ ಜೀವನವನ್ನೇ ಸಾಧನೆಯೆಂದು ಪರಿಗಣಿಸಿರಿ. ನಿಮ್ಮ ಸಂಪೂರ್ಣ ಜೀವನವನ್ನೇ ಸಾಧನೆಯಂದು ತಿಳಿಯಿರಿ.
ಮನಸ್ಸು ಎಲ್ಲಿ ಅಲೆದಾಡುತ್ತದೆ ? ಅದು ಎಲ್ಲಿ ಸಂತೃಪ್ತಿ ಪಡೆಯುತ್ತದೆಯೋ ಅಲ್ಲಿ ಹೋಗುತ್ತದೆ , ಮತ್ತೊಮ್ಮೆ ಈ ರೀತಿಯಾದಗ ಗಮನಿಸಿರಿ , 'ನನ್ನ ಮನಸ್ಸು ನಾನು ಸಂತೃಪ್ತಿ ಪಡೆಯುವಲ್ಲಿ ಅಲೆದಾಡುತ್ತಿದಯೇ ?'

ಈ ರೀತಿ ನೀವು ಗಮನಿಸಿ , ಜ್ಞಾನದಿಂದ ವಿವೇಚಿಸಿದಾಗ ಮನಸ್ಸು ಅಲ್ಲಿಯೂ ಇಲ್ಲ , ಅಲ್ಲೆಲೂ ಇಲ್ಲ ಎಂದು ನೀವು ಕಾಣುತ್ತೀರ. ನಿಮ್ಮ ಮನಸ್ಸು ಶಾಂತವಾಗುತ್ತದೆ ಮತ್ತು ಸ್ಥಾಪಿತವಾಗುತ್ತದೆ . ಅದು ಆಂತರ್ಯದಲ್ಲಿ ವಿಶ್ರಾಂತಿ ಪಡೆಯುತ್ತದೆ.
ಈ ಕಾರಣದಿಂದಲೇ , ಧ್ಯಾನ ಮತ್ತು ಸಾಧನೆಗಳ ಹಲವಾರು ಸೀಡಿಗಳು ಕೊಡಲಾಗಿದೆ , ಇವನ್ನು ಅಭ್ಯಾಸ ಮಾಡಿ , ಆದರೆ ಧ್ಯಾನವಷ್ಟೆ ಸಹಾಯವಾಗುವುದಿಲ್ಲ , ಧ್ಯಾನ ಮತ್ತು ಜ್ಞಾನಗಳು ನಿಮ್ಮ ಮನಸ್ಸು ಸ್ಥಾಪಿತವಾಗಲು  ಸಹಕಾರಿಯಾಗುತ್ತದೆ.

ಪ್ರಶ್ನೆ : ಗುರುದೇವ , ನಮಗೆ ಪ್ರೀತಿಪಾತ್ರವಾದ ಅಥವಾ ನಮಗೆ ಹತ್ತಿರವಾದ ಜನರು ನಮ್ಮಿಂದ ದೂರವಾದಾಗ , ಅವರನ್ನು ನಮ್ಮ ಜೀವನದಲ್ಲಿ ಹೇಗೆ ತಂದುಕೊಳ್ಳಬಹುದು , ವಿಶೇಷವಾಗಿ ನಾವು ಆಧ್ಯಾತ್ಮಿಕ ಮಾರ್ಗದಲ್ಲಿರುವಾಗ?

ಶ್ರೀ ಶ್ರೀ ರವಿಶಂಕರ್ :
ಯಾರು ನಮ್ಮನ್ನು ಅಗಲಿರುವರೋ ಅವರುಗಳು ಯೊಗ್ಯವಾದ ಸ್ಥಳವನ್ನು ಸೇರಿದ್ದಾರೆ, ಪ್ರೀತಿಪಾತ್ರರಾದವರು ನಮ್ಮನ್ನು ಅಗಲಿದಾಗ , ನಮಗೆ ನಮ್ಮ ಜೀವನ ತಾತ್ಕಲಿಕವಾದದ್ದು ಮತ್ತು ನಿಶ್ಚಿತವಾಗಿ ಅಂತ್ಯವಾಗುವುದು ಎಂದು ತಿಳಿಸುತ್ತದೆ. ನೀವು ತಿಳಿದುಕೊಂಡಿರಾ ?

ನಾನು ಕೂಡ ಒಂದು ದಿನ ವಿಧಾಯ ಹೇಳಬೇಕು, ನೀವು ಕೂಡ ಎಲ್ಲವನ್ನು ಬಿಟ್ಟು ಹೋಗುವಿರಿ. ಹೌದು ಇಂತಹ ಸಂಧರ್ಭಗಳಲ್ಲಿ ನಿಮಗೆ ದುಃಖವಾಗುತ್ತದೆ, ಆದರಿಂದಲೆ ಧ್ಯಾನ , ಸಾಧನಾ ಮತ್ತು ಸತ್ಸಂಗಗಳಿವೆ , ಇವುಗಳಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿಯ ದುಃಖ ಮತ್ತು ಅವರನ್ನು ಅಗಲಿದ ಶೋಖದಿಂದ , ನೀವು ಹೊರಬರಲು ಸಾಧ್ಯವಾಗುತ್ತದೆ.

ಪ್ರಶ್ನೆ : ಗುರೂಜಿ , ನಾನು ಆಶ್ರಮದಲ್ಲಿರಬೇಕೆಂದು ಇಚ್ಛಿಸುತ್ತೇನೆ .

ಶ್ರೀ ಶ್ರೀ ರವಿಶಂಕರ್ :
ಸರಿ , ಆಶ್ರಮದ ಆದಳಿತ ವರ್ಗದವರೊಡನೆ ಮಾತಾಡಿರಿ , ನಾವು ಹೇಳಿರುವ ಹಾಗೆ , ಈ ಸಮಸ್ತ ಪ್ರಪಂಚವೇ ನನ್ನ ಆಶ್ರಮ. ನೀವು ಇರುವಲ್ಲಿ ಜನರಿಗೆ ಜ್ಞಾನವನ್ನು ಕೊಡಿ , ಸಹೃದಯಿಗಳಾಗಿ ಮತ್ತು ಪರೋಪಕಾರಿಯಾಗಿರಿ ಆಗ ಅದೇ ಆಶ್ರಮ. ಎಲ್ಲಾ ಮನೆಗಳು ಆಶ್ರಮವೇ.
ಆಶ್ರಮ ಎಂದರೆ ಏನು ? ಎಲ್ಲಿ ಮನಸ್ಸು ಶ್ರಮವಿಲ್ಲದೆಯೆ ಗಾಢವಾದ ವಿಶ್ರಾಂತಿಯಿಂದ ಇರುವುದೊ , ದೇಹವು ಶಕ್ತಿ ಪಡೆಯುವುದೊ , ಬುದ್ದಿಯು ವಿವೇಕವನ್ನು ಕಾಣುವುದೊ , ಆತ್ಮಕ್ಕೆ ಶಾಂತಿ ಸಿಗುವುದೊ , ಮತ್ತು ಜೀವನವೇ ಸಂಭ್ರಮವಾಗುವುದೊ , ಅದು ಆಶ್ರಮ. 

ಪ್ರಶ್ನೆ : ಜೀವಾತ್ಮನಿಗೆ ಸಾವಿಲ್ಲವಾದರೆ , ಈ ಗ್ರಹದಲ್ಲಿ ಜನಸಂಖ್ಯೆ ಹೇಗೆ ಹೆಚ್ಚುತ್ತಿದೆ ?

ಶ್ರೀ ಶ್ರೀ ರವಿಶಂಕರ್ :
ವಿವಿದ ಮೃಗಗಳ ಜಾತಿಗಳು ಈ ಭೂಮಿಯಿಂದ ಮರೆಯಾಗುತ್ತಿದೆ . ಹಾವುಗಳು , ಕ್ರಿಮಿಗಳು , ಹುಲಿಗಳು ಇತ್ಯಾದಿ ಈ ಭೂಮಿಯಿಂದ ಮರೆಯಾಗುತ್ತಿವೆ . ಕತ್ತೆಗಳ ಸಂಖ್ಯೆಯು ಕೂಡ ಕಡಿಮೆಯಾಗುತ್ತಿದೆ! ಹಿಂದೆ ಕಂಡಷ್ಟು ಮಂಗಗಳನ್ನು ಈಗ ನಾವು ಕಾಣುವುದಿಲ್ಲ. ಕಾಡುಗಳು ಬೇರುಸಹಿತ ನಾಷವಾಗುತ್ತಿವೆ , ಎಲ್ಲೆಡೆ ನಗರಗಳು ಮೂಡುತ್ತಿವೆ. ಹೀಗಿರುವಾಗ , ಮಂಗಗಳು ಎಲ್ಲಿಗೆ ಹೋಗುತ್ತವೆ? ಮನೆಗಳು, ಸಾಮೂಹಿಕ ವಸತಿಗಳನ್ನು ಸೇರುತ್ತವೆ.

ಪ್ರಶ್ನೆ : ಯಾವಾಗಲದರೂ ನಾನು ಬಾಂಬ್ ಸ್ಪೋಟ , ಅಥವಾ ವಿಮಾನ ದುರಂತಗಳಲ್ಲಿ ಪುಟ್ಟ ಮಕ್ಕಳು ಮರಣಹೊಂದಿರುವುದನ್ನು ಕೇಳಿದಾಗ , ನಾನಗೆ ದಿನವಿಡಿ ಬೇಸರವಾಗುತ್ತದೆ ಮತ್ತು ಮರಣಾನಂತರ ಅವರು ಕ್ಷೆಮದಿಂದಿರುತ್ತಾರೆಂದು ನಿರೀಕ್ಷಿಸುತ್ತೇನೆ , ಅವರನ್ನು ಕೂಡ ನೀವು ಲಕ್ಷಿಸುವಿರಾ?

ಶ್ರೀ ಶ್ರೀ ರವಿಶಂಕರ್ :
ಹೌದು , ಚಿಂತಿಸಬೇಡಿರಿ , ಈ ರೀತಿ ಅನಿಸುವುದು ಸಹಜವೇ. ಇತರರ ನೋವನ್ನು ಕಂಡ ನಿಮಗೂ ನೋವಿನ ಅನುಭವವಾದಗ , ನಿಮ್ಮಲ್ಲಿ ಮಾನವೀಯತೆ ಇದೆ ಎಂದರ್ಥ. ಇತರರ ನೋವನ್ನು ಅರಿಯಲಾರದಂತಹ ಹೃದಯದಿಂದ ಪ್ರಯೊಜನವೇನು ?  ಆದರೆ ನೀವು ಏನೂ ಮಾಡಲಾರದಷ್ಟು ಸಿಕ್ಕಿಕ್ಕೊಳ್ಳಬೇಡಿರಿ , ಈ ಕನಿಕರವನ್ನು ಸೇವೆಯತ್ತ ತಿರುಗಿಸಿ ಮತ್ತು ಸೇವೆ ಮಾಡಿರಿ, ಸರಿಯೆ.