ಗುರುವಾರ, ಮೇ 24, 2012

ಬದುಕಿನ ವಾಹನಕ್ಕೆ ನ೦ಬಿಕೆಯೇ ಇ೦ಧನ


24
2012............................... ಬೆಂಗಳೂರು ಆಶ್ರಮ, ಭಾರತ
May

 
ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಪ್ರಾಪಂಚಿಕ ವಸ್ತುಗಳಿಂದ, ಬಯಕೆಗಳಿಂದ ಮತ್ತು ಚಂಚಲತೆಯಿಂದ ದೊಡ್ಡ ಮಟ್ಟಿಗೆ ಬಿಡುಗಡೆಯನ್ನು ಹೊಂದಿದ್ದೇನೆ, ಆದರೆ ನಿಮ್ಮ ವಿಷಯ ಬರುವಾಗ ನನ್ನ ದಾಹವು ಹೆಚ್ಚುತ್ತಾ ಹೋಗುತ್ತದೆ. ಇದಕ್ಕಿರುವ ಪರಿಹಾರವೇನು?
ಶ್ರೀ ಶ್ರೀ ರವಿಶಂಕರ್:
ಅದು ಪರವಾಗಿಲ್ಲ. ಒಬ್ಬನು ಪ್ರಾಪಂಚಿಕ ವಸ್ತುಗಳಿಂದ ಹಿಂದೆ ಸರಿದು ಆತ್ಮದ ಕಡೆಗೆ ಚಲಿಸಿದಾಗ, ಇದುವೇ ಆಗುವುದು. ಜೀವನದಲ್ಲಿ ಸ್ವಲ್ಪ ರಸವಿದೆ, ಅದು ನೀರಸವಾದುದಲ್ಲ. ಪಥವು ನೀರಸವಾದುದಲ್ಲ ಮತ್ತು ಅಲ್ಲಿ ಸ್ವಲ್ಪ ರಸವಿರಬೇಕು, ಅಲ್ಲವೇ? ಇಲ್ಲದಿದ್ದರೆ ಅದು ಶುಷ್ಕ ವೈರಾಗ್ಯವಾಗುತ್ತದೆ. ನಮಗೆ ತುಂಬಾ ಪ್ರಿಯವಾದವರು, ಯಾರನ್ನು ನಾವು ತುಂಬಾ ಪ್ರೀತಿಸುತ್ತೇವೋ ಅವರು ನಮ್ಮ ಬಳಿಯಿರುವಾಗ ಜೀವನವು ಆಸಕ್ತಿದಾಯಕವಾಗುತ್ತದೆ. ನಮ್ಮ ಜೀವನದಲ್ಲಿ ನಾವು ಗಾಢವಾಗಿ ಪ್ರೀತಿಸಬಲ್ಲಂತಹವರು ಯಾರೂ ಇಲ್ಲವಾದರೆ, ಆಗ ಜೀವನವು ಆಸಕ್ತಿದಾಯಕವಾಗಿರುವುದಿಲ್ಲ, ಅದರಲ್ಲಿ ಯಾವುದೇ ರಸವಿರುವುದಿಲ್ಲ ಮತ್ತು ಪ್ರೀತಿಯು ಉದಯಿಸುವುದಿಲ್ಲ. ಅದಕ್ಕಾಗಿಯೇ ಈ ಸಾರ ಅಥವಾ ರಸದ ಅಗತ್ಯವಿರುವುದು ಮತ್ತು ಆಗ ಆ ಒಂದು ಎಲ್ಲಾ ಕಡೆಗಳಲ್ಲೂ ಕಾಣಿಸುತ್ತದೆ. ಅದೇ ದೈವಿಕತೆಯು ನನ್ನಲ್ಲಿದೆ, ಎಲ್ಲರಲ್ಲೂ ಇದೆ ಮತ್ತು ಎಲ್ಲೆಡೆಯೂ ಇದೆ ಎಂಬುದು ನಿಮಗೆ ಕ್ರಮೇಣವಾಗಿ ಅರ್ಥವಾಗುತ್ತದೆ.
ಪ್ರಶ್ನೆ: ಗುರೂಜಿ, ನಾವು ಸಾಕ್ಷಿ ಭಾವದಲ್ಲಿರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಸಾಕ್ಷಿ ಭಾವದಲ್ಲಿರಲು ನೀವು ಏನೂ ಮಾಡಬೇಕಾದ ಅಗತ್ಯವಿಲ್ಲ; ಅದು ಅದಾಗಿಯೇ ಉದಯಿಸುತ್ತದೆ. ನೀವು ಹೆಚ್ಚು ಹೆಚ್ಚು ಶಾಂತರಾದಷ್ಟು, ನಿಮ್ಮಲ್ಲೇ ನೀವು ವಿಶ್ರಾಂತಿ ಪಡೆದಷ್ಟು, ಅದು ನಿಮ್ಮಲ್ಲಿ ಹೆಚ್ಚು ಉದಯಿಸುತ್ತದೆ. ಇದನ್ನು ಹೊಂದಲು ನೀವು ಏನನ್ನೂ ಮಾಡಬೇಕಾಗಿಲ್ಲ. ಈ ದಿನಗಳಲ್ಲಿ ಏನಾಗಿದೆಯೆಂದರೆ, ಎಲ್ಲಾ ಸಾಧಕರು ಕೇಳುತ್ತಾ ಇರುತ್ತಾರೆ (ಗುರುಗಳನ್ನು), "ನಾನೇನು ಮಾಡಬೇಕು? ನಾನೇನು ಮಾಡಬೇಕು?" ಮತ್ತು ಗುರುಗಳು ಹೇಳುತ್ತಾ ಇರುತ್ತಾರೆ, "ಇದನ್ನು ಮಾಡು, ಇದನ್ನು ಮಾಡು ಮತ್ತು ಅದನ್ನು ಮಾಡು", ಮತ್ತು ಇಬ್ಬರೂ ಹತಾಶರಾಗುತ್ತಾರೆ. ನಾನು ಹೇಳುವುದೇನೆಂದರೆ, ಏನನ್ನೂ ಮಾಡುವುದರ ಅಗತ್ಯವಿಲ್ಲ, ಕೇವಲ ವಿಶ್ರಾಮ ಮಾಡಿ! ವಿಶ್ರಾಮವು ಸಾಮರ್ಥ್ಯ, ಶಾಂತಿ ಮತ್ತು ಪರಿಪೂರ್ಣತೆಗಳ ಜನನಿಯಾಗಿದೆ. ಪ್ರತಿಯೊಂದರ ಮೂಲವೂ ವಿಶ್ರಾಮವಾಗಿದೆ. ವಿಶ್ರಾಮ’ದಲ್ಲಿ ’ರಾಮ’ನಿದ್ದಾನೆ.  ಕ್ರಿಯೆಯನ್ನು ಹೆಚ್ಚು ಮಾಡಿ ಅದನ್ನು ಹೊಂದಲು ಸಾಧ್ಯವಿಲ್ಲ. ಇದರರ್ಥ ನೀವು ಇಡೀ ದಿನ ಕೇವಲ ತಿಂದು ನಿದ್ದೆ ಮಾಡಬೇಕೆಂದಲ್ಲ, ಅಲ್ಲ! ಮಿತ-ಆಹಾರ, ಮಿತ-ವ್ಯವಹಾರ, ಮಿತ-ಭಾಷಿ, ಹಿತ-ಭಾಷಿ, ಇವುಗಳೆಲ್ಲಾ ಮುಖ್ಯವಾದವುಗಳು.
ಪ್ರಶ್ನೆ: ಗುರೂಜಿ, ಜೀವನವು ಸುಲಭವೇ ಅಥವಾ ಕಷ್ಟವೇ? ಬೌದ್ಧ ಧರ್ಮದಲ್ಲಿ ಹೇಳುತ್ತಾರೆ, "ಮೊದಲನೆಯ ಸತ್ಯವೆಂದರೆ ಜೀವನವು ಕಷ್ಟವಾದುದು" ಮತ್ತು ನೀವು ಹೇಳುತ್ತೀರಿ ಜೀವನವು ಆನಂದಮಯವೆಂದು. ಯಾವುದು ಸರಿ? ಎರಡೂ ಸರಿಯೆಂದು ಹೇಳಬೇಡಿ.
ಶ್ರೀ ಶ್ರೀ ರವಿಶಂಕರ್:
ಯಾಕೆ? ನಾನು ಅದನ್ನೇ ಹೇಳುತ್ತೇನೆ! ಎರಡೂ ವ್ಯಾಖ್ಯಾನಗಳು ಸರಿ. ಒಬ್ಬ ದುಃಖಿತ ವ್ಯಕ್ತಿಯು ಜೀವನವು ದುಃಖಮಯವೆಂದು ಭಾವಿಸುವಾಗ, ನೀನು ಅವನಿಗೆ, ಜೀವನವು ಆನಂದಮಯವೆಂದು ಹೇಳಿದರೆ, ಅವನಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ದುಃಖವಿದೆಯೆಂಬುದನ್ನು ಮಾತ್ರ ಅವನಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಿದ್ದರೂ, ಅವನು ಜ್ಞಾನದಲ್ಲಿ ಪ್ರಗತಿ ಹೊಂದುತ್ತಿದ್ದಂತೆ, "ದುಃಖವೆಲ್ಲಿದೆ?" ಎಂಬುದು ಅವನಿಗೆ ಅರ್ಥವಾಗಲು ತೊಡಗುತ್ತದೆ. ಅವನು ಜ್ಞಾನದ ಪಥದಲ್ಲಿ ಪ್ರಗತಿ ಹೊಂದುತ್ತಿದ್ದಂತೆ ದುಃಖವು ಮಾಯವಾಗುತ್ತದೆ. ಯೋಗ ಮತ್ತು ಧ್ಯಾನಗಳ ಲಾಭವೇನೆಂದರೆ ಅವುಗಳು ನಿಮ್ಮ ಜೀವನದಿಂದ ದುಃಖವನ್ನು ನಿವಾರಿಸುತ್ತವೆ. ನಂತರ ನೀವು, ಜೀವನವು ಆನಂದಮಯವಾದುದು ಮತ್ತು ನೀವು ಅನಗತ್ಯವಾಗಿ ಚಿಂತೆಗೀಡಾಗಿದ್ದಿರಿ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ. ಹಿಂದೆ ನೀವು ಚಿಂತೆಗೀಡಾಗಿದ್ದು ನೆನೆಸಿದಾಗಲೆಲ್ಲಾ, ಎಚ್ಚೆತ್ತುಕೊಳ್ಳಿ ಮತ್ತು ನೋಡಿ, ನೀವು ಅನಗತ್ಯವಾಗಿ ಚಿಂತೆಗೀಡಾಗಿದ್ದಿರಿ ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ರೀತಿ ಅನ್ನಿಸಿದೆ?
ಪರೀಕ್ಷೆಗಳ ಫಲಿತಾಂಶಗಳು ನಿನ್ನೆ ಹೊರ ಬಂದಿವೆ. ಹೀಗಿದ್ದರೂ, ಕೆಲವು ದಿನಗಳ ಹಿಂದೆ, ನೀವು ಪಾಸಾಗುತ್ತೀರೋ ಇಲ್ಲವೋ ಎಂಬುದರ ಬಗ್ಗೆ ನೀವು ತುಂಬಾ ಚಿಂತೆಗೊಳಗಾಗಿದ್ದಿರಿ. ಈಗ ನಿಮಗನಿಸುವುದಿಲ್ಲವೇ, ಚಿಂತೆಪಡುವುದರೊಂದಿಗೆ ನೀವು ಅನಗತ್ಯವಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿದಿರೆಂದು? ಎಲ್ಲವೂ ಚೆನ್ನಾಗಿ ಬಂತು. ಉದಾಹರಣೆಗೆ, ಆಶ್ರಮದ ಶಾಲೆಯ ವಿದ್ಯಾರ್ಥಿಗಳು; ಅವರೆಲ್ಲರೂ ಡಿಸ್ಟಿಂಕ್ಷನ್ ಪಡೆದು ಪಾಸಾದರು.
ಚಿಂತೆ ಮಾಡುವುದರಿಂದ, ಸಮಯ ವ್ಯರ್ಥವಾಗುತ್ತದೆ ಮತ್ತು ಮನಸ್ಸಿಗೆ ತೊಂದರೆಯಾಗುತ್ತದೆ. ಅದಕ್ಕೇ ಹೇಳಿರುವುದು, ಘಟನೆಯು ಮುಗಿದ ಬಳಿಕ ಮಾತ್ರವೇ, ಚಿಂತಿಸಿದುದು ಅನಗತ್ಯವಾಗಿತ್ತು ಎಂಬುದು ನಮಗೆ ಅರ್ಥವಾಗುವುದು. ಆದುದರಿಂದ ಸಂತೋಷವೆಂಬುದು ವಾಸ್ತವ. ಸಂತೋಷವು ಯಾವತ್ತಿಗೂ ನಮ್ಮ ಒಂದು ಭಾಗವಾಗಿತ್ತು, ಅದು ನಮ್ಮ ಸ್ವಭಾವ. ಚಿಂತೆಗಳು ಕೇವಲ ಮೋಡದಂತೆ ಬಂದವು ಮತ್ತು ಮಾಯವಾದವು. ಯಾವುದು ಬದಲಾಗದೆ ಉಳಿಯುತ್ತದೆಯೋ ಅದನ್ನು ಮಾತ್ರ ’ಸತ್ಯ’ ಎಂದು ಕರೆಯಬಹುದು; ಹೇಗೆ ಆಕಾಶವು ಸತ್ಯವಾಗಿದ್ದು ಮೋಡಗಳು ಕೇವಲ ಬಂದು ಹೋಗುತ್ತವೆಯೋ ಹಾಗೆ.
ಪ್ರಶ್ನೆ: ಖರ್ಚು ವೆಚ್ಚಗಳನ್ನು ಸರಿದೂಗಿಸುವುದು ನನಗೆ ತುಂಬಾ ಕಷ್ಟವಾಗುತ್ತಿದೆ ಮತ್ತು ಹದಿನೈದು ವರ್ಷಗಳಿಂದ ಹೋರಾಡುತ್ತಿದ್ದೇನೆ. ನನ್ನ ಭಾಗ್ಯವನ್ನು ಬದಲಾಯಿಸಲು ನಾನು ಕೆಲವು ಪೂಜೆಗಳನ್ನು ಮಾಡಬೇಕೆಂದು ಜ್ಯೋತಿಷ್ಯರು ಸಲಹೆ ಕೊಡುತ್ತಿದ್ದಾರೆ. ದಯವಿಟ್ಟು ಸಲಹೆ ನೀಡಿ.
ಶ್ರೀ ಶ್ರೀ ರವಿಶಂಕರ್:
ಓ, ನಿನ್ನ ವೆಚ್ಚಗಳು ನಿನ್ನ ಆದಾಯಕ್ಕಿಂತ ಹೆಚ್ಚಾಗಿವೆ. ನಿನಗೆ ಸಮೃದ್ಧಿ ಸಿಗುತ್ತದೆಯೆಂಬ ಒಂದು ಸಂಕಲ್ಪವನ್ನು ತೆಗೆದುಕೋ, ಅದು ಸಾಕು. ಪೂಜೆ ಮಾಡುವುದು ಒಂದು ಒಳ್ಳೆಯ ವಿಷಯ; ಸ್ವಲ್ಪ ಪೂಜೆ ಒಳ್ಳೆಯದು, ಆದರೆ ಅಧಿಕವಾಗಿ ಪೂಜೆ ಮಾಡುವುದರ ಅಗತ್ಯವಿಲ್ಲ. ನೀನು ಧ್ಯಾನ ಮಾಡಬೇಕು; ಸತ್ಸಂಗಕ್ಕೆ, ರುದ್ರಾಭಿಷೇಕಕ್ಕೆ ಹೋಗು ಮತ್ತು ಹವನ ಮಾಡು. ಒಬ್ಬನು ಹವನ ಮಾಡುವಾಗ, ವಾತಾವರಣ ಮತ್ತು ಮನಸ್ಸು ಶುದ್ಧಗೊಳ್ಳುತ್ತವೆ. ಆದರೆ ಕೆಲವೊಮ್ಮೆ ಅವರು ಜನರಲ್ಲಿ, ನಿಜವಾಗಿ ಅಗತ್ಯವಿಲ್ಲದೇ ಇರುವ ಅನೇಕ ಶಾಸ್ತ್ರೋಕ್ತ ಪದ್ಧತಿಗಳನ್ನು ಮತ್ತು ಪೂಜೆಗಳನ್ನು ನೆರವೇರಿಸಲು ಹೇಳುತ್ತಾರೆ.
ಪ್ರಶ್ನೆ: ನಾನು ಬೇರೆ ಜಾತಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ನನ್ನ ಹೆತ್ತವರು ತುಂಬಾ ಸಂಪ್ರದಾಯ ಬದ್ಧರು. ಅವರಿಗೆ ಇದು ಅರ್ಥವಾಗುವುದಿಲ್ಲ. ಅವರಿಗೆ ಮನವರಿಕೆ ಮಾಡಿಸಲು ನಾನು ನನ್ನಿಂದಾದಷ್ಟು ಪ್ರಯತ್ನ ಮಾಡಿದೆ, ಆದರೆ ಅದು ಕೆಲಸ ಮಾಡುತ್ತಿಲ್ಲ. ನಾನೇನು ಮಾಡಬೇಕು? ನನ್ನ ಧರ್ಮವೇನು? ನಾನು ನನಗಾಗಿ ಜೀವಿಸಬೇಕೇ ಅಥವಾ ಅವರಿಗಾಗಿಯೇ?
ಶ್ರೀ ಶ್ರೀ ರವಿಶಂಕರ್:
ಕುಶಲತೆಯಿಂದಿರು. ಪರಿಣಾಮಗಳನ್ನು ತೂಗಿ ನೋಡು. ಅವರು ಅವರ ಪಟ್ಟು ಬಿಡದಿದ್ದರೆ, ಆಗ ಅವರನ್ನು ಅಷ್ಟೊಂದು ದುಃಖದಲ್ಲಿ ಸಿಲುಕಿಸಿ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ. ನೀನು ಕೂಡಾ ಸಂತೋಷವಾಗಿರಲಾರೆ. ನೀವಿಬ್ಬರೂ ದುಃಖ ಪಡುವಿರಿ. ಅವರನ್ನು ಒಪ್ಪಿಸಲು ನಿನ್ನ ಕುಶಲತೆಯನ್ನು ಉಪಯೋಗಿಸು. ಯಾವುದಾದರೂ ಮಧ್ಯಮ ಮಾರ್ಗವನ್ನು ಪ್ರಯತ್ನಿಸು. ನಿನಗೆ ಆಗದಿದ್ದರೆ, ಆಗ ನೀನು ಪರಿಣಾಮಗಳನ್ನು ತೂಗಿ ನೋಡಬೇಕು.
ಪ್ರಶ್ನೆ: ಆದರೆ ಧರ್ಮವೇನು ಹೇಳುತ್ತದೆ? ಮಗಳಾಗಿ ನಾನು ಅವರಿಗೆ ನೋವುಂಟು ಮಾಡಲು ಸಾಧ್ಯವಿಲ್ಲ, ಆದರೆ ನಾನು ಕೂಡಾ ನನ್ನ ಜೀವನವನ್ನು ಜೀವಿಸಬೇಕು.
ಶ್ರೀ ಶ್ರೀ ರವಿಶಂಕರ್:
ನೀನು ಸರಿ. ನಿನ್ನ ಮಕ್ಕಳಿಗೆ ನೀನು ಆ ರೀತಿ ಮಾಡು. ಆದರೆ ಈಗ, ನೀನು ಒಬ್ಬಳೇ ಮಗಳಾಗಿದ್ದರೆ, ನೀನು ನಿನ್ನ ಹೆತ್ತವರನ್ನು ನೋಡಿಕೊಳ್ಳಬೇಕು. ನೀನು ಮಗಳಂದಿರಲ್ಲಿ ಒಬ್ಬಳಾಗಿದ್ದರೂ ಸಹ ಅಲ್ಲೊಂದು ಸಮಸ್ಯೆಯಿದೆ. ಅವರನ್ನು ಒಪ್ಪಿಸಲು ನಿನ್ನ ಎಲ್ಲಾ ಕುಶಲತೆಗಳನ್ನು ಬಳಸು ಮತ್ತು ಒಂದು ಪರಿಹಾರವನ್ನು ಕಂಡುಹಿಡಿ. ನಿನ್ನಿಂದ ಆಗದಿದ್ದರೆ, ಆಗ ಕೆಲವೊಮ್ಮೆ ಇತರರ ಸಂತೋಷಕ್ಕಾಗಿ ತ್ಯಾಗಗಳನ್ನು ಮಾಡಬೇಕಾಗುತ್ತದೆ.
ಪ್ರಶ್ನೆ: ವೃತ್ತಿ ಜೀವನದಲ್ಲಿ ದುರಹಂಕಾರಿ ಜನರೊಂದಿಗೆ ನಾವು ವ್ಯವಹರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅವರ ದುರಹಂಕಾರವನ್ನು ಮೇಲೆತ್ತಿ. ಅವರು ದುರಹಂಕಾರಿಗಳಾಗಿದ್ದರೆ, ಅವರೊಂದಿಗೆ ವ್ಯವಹರಿಸಲು ಎರಡು ಮಾರ್ಗಗಳಿವೆ. ಒಂದನೆಯದೆಂದರೆ ಅವರನ್ನು ಕೇವಲ ನಿರ್ಲಕ್ಷಿಸುವುದು ಮತ್ತು ಕಡೆಗಣಿಸುವುದು. ಅವರು ಬಹಳ ವೇಗವಾಗಿ ಪ್ರತಿಕ್ರಿಯಿಸುವರು. ಇನ್ನೊಂದೆಂದರೆ, ಅವರ ಅಹಂಕಾರವನ್ನು ಹೆಚ್ಚಿಸುವುದು. "ನೀನು ಬಹಳ ಒಳ್ಳೆಯವನು, ನೀನು ಇಷ್ಟೊಂದು ಸಮರ್ಥನಾಗಿರಲು ಹೇಗೆ ಸಾಧ್ಯ? ನಾನು ನಿನ್ನಿಂದ ಸ್ವಲ್ಪ ತರಬೇತಿ ಪಡೆಯಬೇಕು" ಎಂದು ಹೇಳಿ. ಆಗ ಅವರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ತಿಳಿಯಿತಾ? ಅವರಿಗೆ ಸ್ವಲ್ಪ ಹೊಗಳಿಕೆ ನೀಡುವುದರಿಂದ ನೀವೇನೂ ಕಳೆದುಕೊಳ್ಳುವುದಿಲ್ಲ. ಒಬ್ಬರು, ಮೂರ್ಖರನ್ನು ಹೊಗಳಿ ಕಾರ್ಯ ಸಾಧಿಸಬೇಕು. ಒಳ್ಳೆಯ ಜನರು ಹೇಗಿದ್ದರೂ, ನೀವು ಅವರನ್ನು ಹೊಗಳಿದರೂ ಇಲ್ಲದಿದ್ದರೂ ಕೆಲಸ ಮಾಡುತ್ತಾರೆ. ದುರಹಂಕಾರಿ ಮತ್ತು ಮೂರ್ಖ ಜನರು ಹೊಗಳಿಕೆಗೆ ತಲೆಬಾಗುತ್ತಾರೆ. ಆದುದರಿಂದ ನೀವು ಅವರನ್ನು ಹೊಗಳಿ ಮತ್ತು ನಿಮ್ಮ ಕೆಲಸವಾಗುವಂತೆ ಮಾಡಿ.
ಅವರ ದುರಹಂಕಾರವು ಅವರಿಗೆ ದುಃಖವನ್ನು ತರುತ್ತದೆ. ನೀವು ಯಾಕೆ ಅದರ ಬಗ್ಗೆ ಚಿಂತಿಸಬೇಕು? ಮತ್ತು ಅದು ಒಳ್ಳೆಯದು ಯಾಕೆಂದರೆ ಆ ದುಃಖವು ಅವರನ್ನು ಪುನಃ ಅವರ ವಿವೇಚನೆಗೆ ತರುತ್ತದೆ. ದುಃಖ ಪಡುವಿಕೆಗೂ ಸಹ ಅದರದ್ದೇ ಆದ ಮಹತ್ವವಿದೆ. ಒಬ್ಬ ವ್ಯಕ್ತಿಯ ದುರಹಂಕಾರವನ್ನು ಮುರಿದು ಅವನಿಗೆ ಜ್ಞಾನದ ಹಾದಿಯನ್ನು ತೋರಿಸುವ ಕಾಲ ಹೋಗಿ ಬಿಟ್ಟಿದೆ. ಈ ದಿನಗಳಲ್ಲಿ, ಯಾರದ್ದಾದರೂ ಅಹಂಕಾರವನ್ನು ಮುರಿಯುವುದು ಕಷ್ಟ. ಅಹಂಕಾರವು ಹೇಗಾದರೂ ಮಾಡಿ ತನ್ನನ್ನು ತಾನೇ ಪ್ರದರ್ಶಿಸುವಲ್ಲಿ ಸಫಲವಾಗುತ್ತದೆ. ಆದುದರಿಂದ ನೀವು ಅವರನ್ನು ಹೊಗಳುವುದು ಉತ್ತಮ, ಅವರು ಸ್ವಯಂ ಆಗಿ ಕಲಿಯುತ್ತಾರೆ.
ಪ್ರಶ್ನೆ: ಮಕ್ಕಳನ್ನು ಸರಿಯಾದ ಮೌಲ್ಯಗಳೊಂದಿಗೆ ಬೆಳೆಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅವುಗಳನ್ನು ನೀವೇ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ.
ಪ್ರಶ್ನೆ: ನಾನು ಆಶ್ರಮದಲ್ಲಿ ಉಳಕೊಳ್ಳಲು ಬಯಸುತ್ತೇನೆ. ನಾನು ನನ್ನ ಜವಾಬ್ದಾರಿಗಳನ್ನು ಪೂರೈಸಿದ್ದೇನೆಂದು ನನಗೆ ಅನ್ನಿಸುತ್ತದೆ ಮತ್ತು ಈಗ ನಾನು ಆಶ್ರಮದಲ್ಲಿ ಸಾಧನೆ, ಸತ್ಸಂಗ ಮತ್ತು ಸೇವೆಗಳನ್ನು ಮಾಡಲು ಬಯಸುತ್ತೇನೆ. ನನ್ನ ಸಂಬಂಧಿಕರು ಮತ್ತು ಅತ್ತೆ-ಮಾವಂದಿರು ಆಶ್ರಮವನ್ನು ಸೇರುವ ನನ್ನ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.
ಶ್ರೀ ಶ್ರೀ ರವಿಶಂಕರ್:
ನಿನಗೆ ಗೊತ್ತಿದೆಯಾ, ಇಡಿಯ ಪ್ರಪಂಚವೇ ನನ್ನ ಆಶ್ರಮ! ನೀನೆಲ್ಲೇ ಉಳಕೊಂಡರೂ ಅದು ಒಂದು ಆಶ್ರಮವಾಗಿರುತ್ತದೆ. ಮೇಲಾಗಿ, ನಾನು ಒಂದು ಜಾಗದಲ್ಲಿ ಉಳಕೊಳ್ಳುವುದಿಲ್ಲ, ನಾನು ಸಂಚರಿಸುತ್ತಾ ಇರುತ್ತೇನೆ. ನಾನಿಲ್ಲಿಗೆ ಎರಡು ತಿಂಗಳುಗಳ ಬಳಿಕ ಬಂದಿದ್ದೇನೆ ಮತ್ತು ನಾನಿಲ್ಲಿ ಎರಡು ವಾರಗಳ ವರೆಗೆ ಮಾತ್ರ ಇರುತ್ತೇನೆ. ನಾನು ಹೋಗುತ್ತಾ, ಬರುತ್ತಾ ಮತ್ತು ಪುನಃ ಹೋಗುತ್ತಾ ಇರುತ್ತೇನೆ.
ನೀನು ನಿನ್ನ ಸಂಬಂಧಿಕರನ್ನು ಮತ್ತು ಅತ್ತೆ-ಮಾವಂದಿರನ್ನು ಪ್ರೀತಿಯಿಂದ ಗೆಲ್ಲು. ಅಲ್ಲಿ ನಿನ್ನ ಸಾಧನೆ ಮತ್ತು ಸೇವೆಗಳನ್ನು ಮಾಡು ಹಾಗೂ ನಿನ್ನ ಮನೆಯನ್ನು ಒಂದು ಆಶ್ರಮವನ್ನಾಗಿ ಮಾಡು. ಇಲ್ಲಿಗೆ ವರ್ಷದಲ್ಲಿ ಒಂದು ಸಾರಿ ಅಥವಾ ಎರಡು ಸಾರಿ ಬರುತ್ತಾ ಇರು. ನೀನು ಅವರಲ್ಲಿ, ನೀನು ಆಶ್ರಮಕ್ಕೆ ಹೋಗಿ ಬಿಡುವೆಯೆಂದು ಹೇಳಿದರೆ, ಅವರು ಚಿಂತೆಗೀಡಾಗುವರು. ಅವರಿಗನ್ನಿಸಬಹುದು, "ಅವಳು ನಮ್ಮ ಸೊಸೆ, ಆದರೆ ಅವಳು ಮನೆಬಿಟ್ಟು ಹೋಗಲು ಬಯಸುತ್ತಾಳೆ". ಅದನ್ನು ಮಾಡಬೇಡ, ಸರಿಯಾ!
ಪ್ರಶ್ನೆ: ನಾನು ಆಶ್ರಮಕ್ಕೆ ಬರುವಾಗಲೆಲ್ಲಾ, ನನ್ನ ಮನೆಮಂದಿಗೆ ತಿಳಿಸುವುದಿಲ್ಲ.  ಇಲ್ಲಿರಲು ನಾನು ಕಾಲೇಜಿನಲ್ಲಿ ಕೂಡಾ ಸುಳ್ಳುಗಳನ್ನು ಹೇಳುತ್ತೇನೆ ಮತ್ತು ನೆಪಗಳನ್ನೊಡ್ಡುತ್ತೇನೆ. ಈ ವಿಷಯಗಳನ್ನು ನಾನು ಕುಶಲತೆಯಿಂದ ನಿರ್ವಹಿಸುತ್ತೇನೆ. ಹೀಗಿದ್ದರೂ, ಕೆಲವೊಮ್ಮೆ ಈ ಸುಳ್ಳುಗಳನ್ನು ಹೇಳಿ ನನಗೆ ಸಾಕಾಗಿ ಬಿಡುತ್ತದೆ.
ಶ್ರೀ ಶ್ರೀ ರವಿಶಂಕರ್:
ಇಲ್ಲ, ನೀನು ಸುಳ್ಳುಗಳನ್ನು ಹೇಳಬಾರದು. ನೋಡು, ನೀನಿಲ್ಲಿಗೆ ಪದೇ ಪದೇ ಬರುತ್ತಿರಬೇಕೆಂದಿಲ್ಲ. ನೀನೆಲ್ಲೇ ಇದ್ದರೂ, ಪ್ರತಿದಿನವೂ ನಿನ್ನ ಧ್ಯಾನವನ್ನು ಮಾಡುತ್ತಾ ಇರು. ಹೇಗಿದ್ದರೂ ನಿನಗೆ ನನ್ನನ್ನು ಪ್ರತಿದಿನವೂ ನೋಡಲು ಸಾಧ್ಯವಿದೆ. ಈಗಲೂ ಕೂಡಾ, ಈ ಸತ್ಸಂಗವನ್ನು ಅಂತರ್ಜಾಲದ ಮೂಲಕ ನೇರ ಪ್ರಸಾರ (ವೆಬ್ ಕಾಸ್ಟ್) ಮಾಡಲಾಗುತ್ತಿದೆ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ನನ್ನನ್ನು ನೋಡುತ್ತಿದ್ದಾರೆ. ನೀನಿಲ್ಲಿಗೆ ವರ್ಷಕ್ಕೆ ಒಂದು ಸಾರಿ ಅಥವಾ ಎರಡು ಸಾರಿ ಬಂದರೆ ಪರವಾಗಿಲ್ಲ, ಆದರೆ ನೀನಿಲ್ಲಿಗೆ ಪ್ರತಿದಿನವೂ ಬಂದರೆ, ಆಗ ಖಂಡಿತವಾಗಿ ಮನೆಯಲ್ಲಿ ಅವರು ಇದನ್ನು ವಿರೋಧಿಸುತ್ತಾರೆ. ನಾನು ಅವರ ಜಾಗದಲ್ಲಿರುತ್ತಿದ್ದರೆ, ನಾನು ಕೂಡಾ ಇದನ್ನು ವಿರೋಧಿಸುತ್ತಿದ್ದೆ. ಆದುದರಿಂದ ಈ ರೀತಿ ಮಾಡಬೇಡ. ನಿನ್ನ ಓದಿನ ಮೇಲೆ ಮತ್ತು ನಿನ್ನ ವೃತ್ತಿಯ ಮೇಲೆ ಗಮನವಿರಿಸು ಹಾಗೂ ಒಬ್ಬ ಮಾದರಿ ವ್ಯಕ್ತಿಯಾಗಲು ಪ್ರಯತ್ನಿಸು, ಸರಿಯಾ? ಕೇವಲ ಆಶ್ರಮಕ್ಕೆ ಬಂದು ನನ್ನ ಮುಖವನ್ನು ನೋಡುವುದಕ್ಕಿಂತ, ಬೋಧನೆಗಳನ್ನು ಅನುಸರಿಸುವುದು ಹೆಚ್ಚು ಮುಖ್ಯವಾದುದು.
ಪ್ರಶ್ನೆ:  ನನ್ನ ತಾಯಿ ಹೇಳುವುದೇನೆಂದರೆ,  "ನೀನು ನಮಗೆ ಸುಳ್ಳುಗಳನ್ನು ಹೇಳಿ, ನಮಗೆ ನೋವುಂಟು ಮಾಡಿ, ಜೀವನ ಕಲೆಯ ಕಾರ್ಯಕ್ರಮಗಳಿಗೆ ಹೋದರೆ, ಆಗ ಅದಕ್ಕೆ ನಿನಗೆ ಪುಣ್ಯವು ಸಿಗುವುದಿಲ್ಲ" ಎಂದು. ಅದು ಸರಿಯಾ?
ಶ್ರೀ ಶ್ರೀ ರವಿಶಂಕರ್:
ಹೌದು, ಒಂದು ರೀತಿಯಲ್ಲಿ ಅದು ಸರಿ.
ಪ್ರಶ್ನೆ: ಆದರೆ ಅವರಿಗೆ ಅರ್ಥವಾಗುವುದಿಲ್ಲ. ಅವರು ಕ್ರಿಯೆಯನ್ನು ಕೂಡಾ ಮಾಡುವುದಿಲ್ಲ. ನಾನು ಬಲವಂತ ಮಾಡಿದರೂ ಸಹ ಅವರು ಕ್ರಿಯೆ ಮಾಡುವುದಿಲ್ಲ. ದಯವಿಟ್ಟು ನನ್ನ ತಂದೆ ಮತ್ತು ತಾಯಿ ಇಬ್ಬರ ಬಗ್ಗೆಯೂ ಕಾಳಜಿ ವಹಿಸಿ.
ಶ್ರೀ ಶ್ರೀ ರವಿಶಂಕರ್:
ಈಗ ನೀನು ನಿನ್ನ ಕೆಲಸವನ್ನು ನನಗೆ ಕೊಟ್ಟೆ! ನೀನು ಅವರ ಕಾಳಜಿ ವಹಿಸಬೇಕಾಗಿರುವುದು ಅಲ್ಲವೇ? ಹೇಗಿದ್ದರೂ, ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನೋಡಿ, ಇದೇ ಆಗುತ್ತಿರುವುದು. ಜನರು, "ಗುರೂಜಿ ಇದನ್ನು ಮಾಡಿ, ಅದನ್ನು ಮಾಡಿ" ಎಂದು ಹೇಳುತ್ತಾ ಇರುತ್ತಾರೆ. ನನಗೆ ಎಲ್ಲಾ ಕಡೆಗಳಿಂದಲೂ ಆದೇಶಗಳು ಸಿಗುತ್ತಾ ಇರುತ್ತವೆ.
ಪ್ರಶ್ನೆ: ಇತರ ಜನರ ತಪ್ಪುಗಳ ಬಗ್ಗೆ ಯೋಚಿಸುವಾಗ, ನಾನು ದುರಹಂಕಾರಿಯಾಗುತ್ತೇನೆ; ಮತ್ತು ನಾನು ನನ್ನ ತಪ್ಪುಗಳನ್ನು ನೋಡುವಾಗ, ನನ್ನ ಅಹಂಕಾರಕ್ಕೆ ಪೆಟ್ಟಾಗುತ್ತದೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: 
ನಿನ್ನಲ್ಲಿರುವ ಕೊರತೆಗಳನ್ನು ನೋಡು ಮತ್ತು ಅವುಗಳನ್ನು ನಿವಾರಿಸುವುದಕ್ಕೆ ಕನಿಷ್ಠಪಕ್ಷ ಯಾರೋ ಒಬ್ಬರು ಇದ್ದಾರೆ ಎಂಬುದನ್ನು ಅರ್ಥ ಮಾಡಿಕೋ. ನಿನ್ನ ಕೊರತೆಗಳನ್ನು ನಿವಾರಿಸಲು ಯಾರೋ ಒಬ್ಬರು ಇದ್ದಾರೆ ಎಂಬ ನಂಬಿಕೆಯನ್ನಿರಿಸು. ಕೇವಲ ಈ ನಂಬಿಕೆಯನ್ನಿರಿಸುವುದರಿಂದ ಸಂಗತಿಗಳು ಮುಂದಕ್ಕೆ ಸಾಗುತ್ತವೆ. ನಿನ್ನ ಕೊರತೆಗಳನ್ನು ನೋಡು ಮತ್ತು ಅವುಗಳನ್ನು ನಂಬಿಕೆಯೊಂದಿಗೆ ಸಮರ್ಪಣೆ ಮಾಡು, "ಇವುಗಳು ನನ್ನಲ್ಲಿರುವ ಕೊರತೆಗಳು, ಅವುಗಳನ್ನು ನಾನು ನಿಮಗೆ ಸಮರ್ಪಣೆ ಮಾಡುತ್ತಿದ್ದೇನೆ". ನಿನಗೆ ಸಮರ್ಪಣೆ ಮಾಡಲು ಕಷ್ಟವಾದರೆ, ಆಗ ಕೇವಲ, "ನನ್ನಿಂದ ಈ ಕೊರತೆಗಳನ್ನು ದೂರ ಮಾಡುವುದಕ್ಕೆ ಯಾರೋ ಒಬ್ಬರು ಇದ್ದಾರೆ" ಎಂಬುದನ್ನು ತಿಳಿದುಕೋ. ಹೇಗೆಂದರೆ, ಒಬ್ಬ ಶಾಲಾ ವಿದ್ಯಾರ್ಥಿಗೆ, ತನಗೆ ಅಂಕೆಗಳನ್ನೆಣಿಸಲು ಬರುವುದಿಲ್ಲವೆಂಬುದು ಅರ್ಥವಾಗುತ್ತದೆ, ಆದರೆ ಅವನಿಗೆ, ಅದನ್ನು ಶಿಕ್ಷಕರು ಕಲಿಸುವರೆಂಬ ನಂಬಿಕೆಯಿರುತ್ತದೆ. ಅವನು ಮೊದಲನೆಯ ಪುಟವನ್ನು ತೆರೆದಾಗ ಮತ್ತು ಅಲ್ಲಿ ಬರೆದಿರುವುದೇನು ಎಂಬುದನ್ನು ಅರ್ಥೈಸಲು ಸಾಧ್ಯವಾಗದೇ ಇರುವಾಗಲೂ ಅವನಿಗೆ, ತನಗೆ ಆ ಪುಸ್ತಕವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆಯೆಂಬ ವಿಶ್ವಾಸವಿರುತ್ತದೆ ಯಾಕೆಂದರೆ ಅವನಿಗಾಗಿ ಅಲ್ಲಿ ಶಿಕ್ಷಕರಿರುತ್ತಾರೆ.
ನಂಬಿಕೆಯಿಲ್ಲದೆ, ಜೀವನದ ಗಾಡಿಯು ಮುಂದಕ್ಕೆ ಸಾಗಲಾರದು. ನಂಬಿಕೆಯು ಜೀವನವೆಂಬ ಗಾಡಿಯ ಪೆಟ್ರೋಲ್ ಆಗಿದೆ. ನಂಬಿಕೆಯೆಂದು ಕರೆಯಲ್ಪಡುವ ಪೆಟ್ರೋಲ್ ಕೂಡಾ ತುಂಬಾ ದುಬಾರಿಯಾಗಲು ಶುರುವಾಗಿದೆ! ನೀವು ಅದನ್ನು ದುಬಾರಿಯಾಗಲು ಬಿಡದಿದ್ದರೆ, ಜೀವನದ ಗಾಡಿಯು ಮುಂದಕ್ಕೆ ಚಲಿಸುತ್ತದೆ ಮತ್ತು ಅದರ ಗುರಿಯನ್ನು ತಲಪುತ್ತದೆ.
ಪ್ರಶ್ನೆ: ಎಲ್ಲವೂ ದೇವರಿಂದ ಸೃಷ್ಟಿಯಾಗಿರುವುದಾದರೆ, ಅವನನ್ನು ಸೃಷ್ಟಿಸಿರುವುದು ಯಾರು?
ಶ್ರೀ ಶ್ರೀ ರವಿಶಂಕರ್:
ಎಲ್ಲವೂ ದೇವರಿಂದ ಸೃಷ್ಟಿಯಾಗಿರುವುದು ಎಂದು ನಿನಗೆ ಯಾರು ಹೇಳಿದರು? ನೀನು ಯಾಕೆ ಸೃಷ್ಟಿ ಮತ್ತು ವಿನಾಶಗಳೆಂಬ ಪರಿಕಲ್ಪನೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೀಯಾ? ಅಲ್ಲೇನಿದೆ, ಅದು ಇದೆ. ಒಂದು ನಿರ್ದಿಷ್ಟ ಪದವಿದೆ - ಸ್ವಯಂಭು; ಇದು ದೇವರನ್ನು ವಿವರಿಸಲು ಬಳಸಲ್ಪಡುತ್ತದೆ. ಇದರರ್ಥ, ತಾನೇ ಆಗಿ ಹುಟ್ಟಿಕೊಂಡಂತಹ ಒಂದು. ಅದು ಯಾವತ್ತೂ ಅಸ್ಥಿತ್ವದಲ್ಲಿತ್ತು. ನಾವು "ಹುಟ್ಟಿದುದು" ಎಂದು ಕೂಡಾ ಹೇಳುವಂತಿಲ್ಲ; ಅದು ಹಾಗೇ ಅಸ್ಥಿತ್ವದಲ್ಲಿದೆ.
ನಾವನ್ನುತ್ತೇವೆ, ಸೂರ್ಯನು ಹುಟ್ಟಿದನು. ನಾವು ಸೂರ್ಯನು ಉದಯಿಸುವುದನ್ನು ಮತ್ತು ಅಸ್ತಮಿಸುವುದನ್ನು ನೋಡುತ್ತೇವೆ; ಆದರೆ ನಿಜವಾಗಿ ಸೂರ್ಯನು ಉದಯಿಸುವುದೂ ಇಲ್ಲ, ಅಸ್ತಮಿಸುವುದೂ ಇಲ್ಲ. ವಾಸ್ತವವಾಗಿ ಸೂರ್ಯನು ಅಲ್ಲಿದ್ದಾನೆ, ಆದರೆ ಕೇವಲ ಅವನು ಕಾಣುವುದಿಲ್ಲವೆಂಬ ಮಾತ್ರಕ್ಕೆ, ಅವನು ಅಲ್ಲಿಲ್ಲವೆಂದು ಅರ್ಥವಲ್ಲ. ಆದುದರಿಂದ, ಯಾರು ಯಾವತ್ತಿಗೂ ಅಲ್ಲಿದ್ದಾರೋ ಮತ್ತು ಯಾವತ್ತೂ ಹುಟ್ಟಲಿಲ್ಲವೋ ಅವರು ದೇವರು.
ಪ್ರಶ್ನೆ: ನನ್ನ ಪತ್ನಿ ಮತ್ತು ನನ್ನ ತಾಯಿ ಜಗಳವಾಡುತ್ತಾರೆ. ಅವರಿಬ್ಬರೂ ತಮ್ಮದೇ ಆದ ರೀತಿಯಲ್ಲಿ ಸರಿಯಾಗಿದ್ದಾರೆ. ನನಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.
ಶ್ರೀ ಶ್ರೀ ರವಿಶಂಕರ್:
ಸರಿಯಾದ ಮಾರ್ಗವೆಂದರೆ ನೀನು ಮೌನವಾಗಿರುವುದು ಮತ್ತು ಸಹಜವಾಗಿರುವುದು. ಯಾರ ಪರ ವಹಿಸಿಯೂ ಮಾತನಾಡಬೇಡ. ನಿನ್ನ ತಾಯಿಗೆ ಹೇಳು, "ಸೊಸೆಯಂದಿರು ಹೀಗೆಯೇ ಇರುವುದು"; ಮತ್ತು ನಿನ್ನ ಪತ್ನಿಗೆ ಹೇಳು, "ಅವರಿರುವುದು ಹಾಗೆ. ನನ್ನ ತಾಯಿಯು ನಿನ್ನ ತಾಯಿಯಂತೆಯೇ. ಅವರ ತಪ್ಪನ್ನು ಹೃದಯಕ್ಕೆ ತೆಗೆದುಕೊಳ್ಳಬೇಡ". ಇಂತಹ ಸಮಸ್ಯೆಗಳಿಂದ ನಿಮ್ಮನ್ನು ದೂರ ಕೊಂಡೊಯ್ಯಲು ಜ್ಞಾನದ ಮಾರ್ಗದಿಂದ ಮಾತ್ರ ಸಾಧ್ಯ.
ಪ್ರಶ್ನೆ: ಒಂದು ದೇವಸ್ಥಾನದಲ್ಲಿರುವ ’ಕಲಶ’ದ ಮಹತ್ವವೇನು?
ಶ್ರೀ ಶ್ರೀ ರವಿಶಂಕರ್:
ವಾಸ್ತುವಿನ ಪ್ರಕಾರ ಮತ್ತು ವಾಸ್ತುಶಿಲ್ಪದ ಕಾರಣದಿಂದ ಕಲಶವು ಮುಖ್ಯವಾದುದು. ಅದು ವಿದ್ಯುಚ್ಛಕ್ತಿ ಮತ್ತು ಇತರ ಕಂಪನಗಳನ್ನು ಸ್ಥಿರಗೊಳಿಸುತ್ತದೆ. ಎರಡನೆಯದಾಗಿ, ಇದು ದೈವಿಕ ಶಕ್ತಿಯ ಒಂದು ಸಂಕೇತ ಕೂಡಾ. ಅದು ವಿಶ್ವದ (ಕಾಸ್ಮಿಕ್) ಶಕ್ತಿಯನ್ನು ಭೂಮಿಗೆ ಸೆಳೆಯುವ ಒಂದು ಮಾಧ್ಯಮ.
ಪ್ರಶ್ನೆ: ನಾನು ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ಆದರೆ ಆತ್ಮ-ಗೌರವ ಮತ್ತು ಅಹಂಕಾರಗಳ ನಡುವಿರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನನಗೆ ಈಗಲೂ ಸಾಧ್ಯವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಯಾರಿಗೂ ನಿನ್ನಿಂದ ನಿನ್ನ ಆತ್ಮ-ಗೌರವವನ್ನು ಕಸಿಯಲು ಸಾಧ್ಯವಿಲ್ಲ. ಆದರೆ ಅಹಂಕಾರವು ಇತರರ ಮೇಲೆ ಅವಲಂಬಿಸಿರುತ್ತದೆ. ಅಹಂಕಾರವಿರುವಾಗಲೆಲ್ಲಾ ಅದು ನಿಮ್ಮನ್ನು ನೋಯಿಸುತ್ತದೆ ಮತ್ತು ನಿಮಗೆ ದುಃಖವನ್ನು ತರುತ್ತದೆ; ಆದರೆ ಆತ್ಮ-ಗೌರವವು ಯಾವತ್ತೂ ನಿಮಗೆ ಶಾಂತಿಯನ್ನು ತರುತ್ತದೆ. ತಿಳಿಯಿತಾ? ನಿಮ್ಮ ಅಹಂಕಾರಕ್ಕೆ ಪೆಟ್ಟಾಗಬಹುದು, ಆದರೆ ನಿಮ್ಮ ಆತ್ಮ-ಗೌರವಕ್ಕೆ ಪೆಟ್ಟಾಗುವುದಿಲ್ಲ. ಸಮಾಜದಲ್ಲಿ ಜನರನ್ನು ನಿಂದಿಸುವ ಹಲವಾರು ತಿಳುವಳಿಕೆಯಿಲ್ಲದ ಮೂರ್ಖರಿದ್ದಾರೆ. ನೀವೆಷ್ಟೇ ಒಳ್ಳೆಯದನ್ನು ಮಾಡಿದರೂ, ನಕಾರಾತ್ಮಕವಾಗಿ ಮಾತನಾಡುವ ಜನರು ಯಾವತ್ತೂ ಇರುತ್ತಾರೆ. ನಾವು ಅದರಿಂದ ತೊಂದರೆಗೊಳಪಡಬಾರದು.
ಪ್ರಶ್ನೆ: ಒತ್ತಡದ ಕಾರಣದಿಂದ ನನಗೆ ನನ್ನ ನೌಕರಿಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಇಲ್ಲ. ನೀನು ನಗುತ್ತಾ ಇರು ಮತ್ತು ನಿನ್ನ ಕೆಲಸವನ್ನು ಮಾಡು, ಜನರೇನಂದರೂ ಪರವಾಗಿಲ್ಲ. ಯಾರೋ ಏನೋ ಹೇಳಿದರೆಂಬ ಮಾತ್ರಕ್ಕೆ ನಿನ್ನ ನೌಕರಿಯನ್ನು ಬಿಡಬೇಡ. ನೀನು ರಾಜನಂತೆ ನಡೆ ಮತ್ತು ಯಾರಾದರೂ ನಿನ್ನಲ್ಲಿ ಏನಾದರೂ ತಪ್ಪು ಕೆಲಸವನ್ನು ಮಾಡಲು ಹೇಳಿದರೆ, ಅದನ್ನು ನೀನು ಮಾಡುವುದಿಲ್ಲವೆಂದು ನಮ್ರತೆಯಿಂದ ಹೇಳು. "ಏನಾದರೂ ಕೆಟ್ಟದನ್ನು ಮಾಡಿ ನಾನು ಜೈಲಿಗೆ ಹೋಗಲು ಬಯಸುವುದಿಲ್ಲ", ಇದನ್ನು ಹೇಳುತ್ತಾ, ಕೇವಲ ನಿನ್ನ ಕೆಲಸವನ್ನು ಮಾಡುತ್ತಾ ಇರು. ಮುಂದೆ ನಿನ್ನನ್ನು ಸಮಸ್ಯೆಯಲ್ಲಿ ಸಿಕ್ಕಿಸಬಹುದಾದಂತಹ ಯಾವುದೇ ಕೆಟ್ಟ ಕೆಲಸವನ್ನು ನೀನು ಮಾಡುವುದಿಲ್ಲವೆಂಬ ನಿರ್ಧಾರವನ್ನು ತೆಗೆದುಕೋ. ನಾವಿದನ್ನು ಮಾಡುವಾಗ, ನಾವು ನಮ್ಮನ್ನೇ ಗೌರವಿಸುವಾಗ ಅದು ಆತ್ಮ-ಗೌರವವೆಂದು ಕರೆಯಲ್ಪಡುತ್ತದೆ.
ಪ್ರಶ್ನೆ: ಪ್ರಪಂಚದಾದ್ಯಂತ ಕೋಟಿಗಟ್ಟಲೆ ಹಿಂದೂಗಳಿದ್ದಾರೆ. ಹೀಗಿದ್ದರೂ, ಹಿಂದೂ ದೇವ-ದೇವತೆಯರನ್ನು ಅವಮಾನಗೊಳಿಸಲಾಗುತ್ತಿದೆ. ದೇವರು ನಮ್ಮ ಮೇಲೆ ಕೋಪಗೊಂಡಿದ್ದಾರೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ದೇವರು ಕೋಪಗೊಂಡಿಲ್ಲ. ಕೆಲವು ಜನರು ಇವುಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ಚಿಂತಿಸಬೇಡ.
ಯಾರಿಗೂ ಹಿಂದೂ ಧರ್ಮವನ್ನು ಅವಮಾನಿಸಲು ಸಾಧ್ಯವಿಲ್ಲ. ಇದನ್ನು ಮಾಡುವವರು ಕೇವಲ ಅವರ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಮಾಧ್ಯಮದಲ್ಲಿ ಅಥವಾ ಸಿನೆಮಾದಲ್ಲಿ ಯಾರಾದರೂ ಹಿಂದುತ್ವದ ಬಗ್ಗೆ ಅವಮಾನಕಾರಿಯಾಗಿ ವರ್ತಿಸುತ್ತಿದ್ದರೂ ಕೂಡಾ, ಅದು ನಮ್ಮನ್ನು ದುಃಖಕ್ಕೀಡು ಮಾಡಬಾರದು. ಹಿಂದುತ್ವವು ನೂರಾರು ಸಾವಿರಾರು ವರ್ಷಗಳಿಂದ ಇದೆ ಮತ್ತು ಅದು ಅದೇ ರೀತಿ ಮುಂದುವರಿಯಲಿದೆ. ಆದುದರಿಂದ ಯಾರಾದರೂ ಹಿಂದುತ್ವದ ವಿರುದ್ಧವಾಗಿ ಏನಾದರೂ ಹೇಳಿದರೆ, ಅದನ್ನು ಕೇವಲ ಅವರ ಅಜ್ಞಾನ ಮತ್ತು ಮೂರ್ಖತನವೆಂಬಂತೆ ತೆಗೆದುಕೊಳ್ಳಿ. ನಾವು ಕೋಪಗೊಂಡು ಒಂದು ಸರಿಯಲ್ಲದ ರೀತಿಯಲ್ಲಿ ಸೇಡು ತೀರಿಸಿಕೊಂಡರೆ - ಬಸ್ಸುಗಳನ್ನು ಸುಡುವುದು, ಕಲ್ಲುಗಳನ್ನೆಸೆಯುವುದು ಅಥವಾ ಹಿಂದುತ್ವದ ವಿರುದ್ಧ ಮಾತನಾಡಿದವರಿಗೆ ತೊಂದರೆ ನೀಡುವುದು - ಅದು ಸಮಾಜದಲ್ಲಿ ಹಿಂದುತ್ವದ ಗೌರವವನ್ನು ಹೆಚ್ಚಿಸಲಾರದು. ಹಿಂದುತ್ವದ ಕಡೆಗಿರುವ ಗೌರವವು, ನಮ್ಮ ವರ್ತನೆಯೊಂದಿಗೆ, ನಮ್ಮ ಮೃದುತ್ವದೊಂದಿಗೆ, ನಮ್ಮ ಸೇವೆಯೊಂದಿಗೆ ಮತ್ತು ಇತರರಿಗೆ ಶಿಕ್ಷಣ ನೀಡುವುದರೊಂದಿಗೆ ಸುಧಾರಣೆಯಾಗುತ್ತದೆ.