ಶುಕ್ರವಾರ, ಮೇ 11, 2012

ಭಕ್ತಿಯು ವಜ್ರಸದೃಶವಾದದ್ದು


11
2012............................... ಮಾಂಟ್ರಿಯಲ್, ಕೆನಡ
May

ಕ್ತಿಯೆಂಬುದು ಒಂದು ಉಡುಗೊರೆಯಾಗಿದೆ. ನೀವು ನಿಮ್ಮಲ್ಲಿರುವ ಭಕ್ತಿಗೆ ಹೆಮ್ಮೆ ಪಡಲು ಸಾಧ್ಯವಿಲ್ಲ. "ನಾನು ತುಂಬಾ ಭಕ್ತಿ ಹೊಂದಿದ್ದೇನೆ" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಯಾವುದೇ ರೀತಿಯ ಹೆಮ್ಮೆ ಪಡಲು ಸಾಧ್ಯವಿಲ್ಲ. ನೀವು ಅಷ್ಟೊಂದು ಭಕ್ತಿ ಹೊಂದಿದ್ದರೆ ಅದೊಂದು ಉಡುಗೊರೆ; ಅಂತಹ ಒಂದು ಆಶೀರ್ವಾದ. ಭಕ್ತಿಯು ಏನನ್ನು ಮಾಡುತ್ತದೆ? ಭಕ್ತಿಯು ನಿಮಗೆ ಅಗಾಧ ಸಂತೋಷವನ್ನು, ಆಳವಾದ ಪ್ರೀತಿಯನ್ನು ಮತ್ತು ಸಿದ್ಧಿಗಳನ್ನು ನೀಡುತ್ತದೆ. ಸಿದ್ಧಿಯೆಂದರೆ ನೀವು ಏನನ್ನು ಯೋಚಿಸುತ್ತೀರೋ ಅದು ಆಗುವುದು ಮತ್ತು ನಿಮಗೇನು ಬೇಕೋ ಅದು ಆಗುವುದು. ನೀವು ಯಾರಿಗಾದರೂ ಆಶೀರ್ವಾದ ಮಾಡುತ್ತೀರಿ ಮತ್ತು ಅದು ಆಗುತ್ತದೆ. ಇದೆಲ್ಲಾ ನಿಮ್ಮ ಇರುವಿಕೆಯ ಆ ಸ್ಥಿತಿಯ ಮೂಲಕ ಆಗುತ್ತದೆ. ಭಕ್ತಿಯು ನಮ್ಮ ಇರುವಿಕೆಯ ಸ್ಥಿತಿಯಾಗಿದೆ.
ಯೋಗ ಸೂತ್ರದಲ್ಲಿ ಪತಂಜಲಿ ಋಷಿಯು ಹೇಳಿದ್ದಾರೆ, "ಸಮಾಧಿ ಸಿದ್ಧೀಶ್ವರ ಪ್ರಣಿಧಾನಾತ್", ದೈವದ ಕಡೆಗಿನ ಭಕ್ತಿಯು ಸಮಾಧಿಯಲ್ಲಿ ಪರಿಪೂರ್ಣತೆಯನ್ನು ತರುತ್ತದೆ. ಅದು ನಿಮ್ಮ ಧ್ಯಾನವನ್ನು ಅಷ್ಟೊಂದು ಪ್ರಶಾಂತವಾಗಿರುವಂತೆ ಮಾಡುತ್ತದೆ ಮತ್ತು ನಿಮ್ಮನ್ನು ಪರಿಪೂರ್ಣತೆಯ ಸ್ಥಿತಿಗೆ ಕೊಂಡೊಯ್ಯುತ್ತದೆ. ಆದುದರಿಂದ, "ಓ ನಾನು ತುಂಬಾ ಭಕ್ತಿ ಹೊಂದಿದ್ದೇನೆ" ಎಂದು ನಮಗೆ ಹೇಳಲು ಸಾಧ್ಯವಿಲ್ಲ, ನೀವು ಅಷ್ಟೊಂದು ಭಕ್ತಿ ಹೊಂದಿದ್ದರೆ ಅದು ಅಂತಹ ಒಂದು ದೊಡ್ಡ ಉಡುಗೊರೆ. ಇದು ನನ್ನೊಂದಿಗೆ ಯಾವತ್ತೂ ಇರಲಿ ಎಂದು, ಬೇರೆ ಯಾವುದೂ ಇದನ್ನು ಹಾಳುಮಾಡದಿರಲಿ ಎಂದು ಪ್ರಾರ್ಥಿಸಿ, ಅಷ್ಟೆ.
ಭಕ್ತಿಯೆಂಬುದು ಒಂದು ವಜ್ರದಂತೆ; ಅದನ್ನು ಯಾವುದೇ ಮಣ್ಣಿನ ವಸ್ತುವಿನೊಂದಿಗೆ ವ್ಯವಹಾರದಲ್ಲಿ ಅದಲು ಬದಲು ಮಾಡಿಕೊಳ್ಳಬೇಡಿ. ಒಂದು ವಜ್ರವನ್ನು ಯಾವತ್ತಿಗೂ ಒಂದು ಲೋಟ ಮಣ್ಣಿನೊಂದಿಗೆ ಅದಲು ಬದಲು ಮಾಡಿಕೊಳ್ಳಬಾರದು. ನೀವು ನಿಮ್ಮ ಭಕ್ತಿಯನ್ನು ಎಲ್ಲಿ ಕಳೆದುಕೊಳ್ಳುವ ಸಂಭವವಿರುತ್ತದೆಯೆಂದು ನಿಮಗೆ ಗೊತ್ತಿದೆಯಾ? ತಾತ್ಕಾಲಿಕ ವಿಷಯಗಳಿಗೆ ಸಂಬಂಧಿಸಿದ ಏನನ್ನಾದರೂ ಮಾಡುವಾಗ, ಯಾರೊಂದಿಗಾದರೂ ಜಗಳವಾಡುವಾಗ, ಏನನ್ನಾದರೂ ಬಯಸುವಾಗ; ಉದಾಹರಣೆಗೆ ನೌಕರಿಯನ್ನು ಬಯಸುವಾಗ ಅಥವಾ ನಿಮ್ಮ ಸಂಬಂಧವು ಕೆಡುತ್ತಿರುವಾಗ ನಿಮ್ಮ ಭಕ್ತಿಯು ಬಳಲುತ್ತದೆ. ನೀವು ನಿಮ್ಮ ನೌಕರಿಯನ್ನು ಕಳೆದುಕೊಳ್ಳುತ್ತೀರಿ ಮತ್ತು ನಿಮ್ಮ ಭಕ್ತಿಯು ಬಳಲುತ್ತದೆ. ಯಾರಾದರೂ ನಿಮ್ಮನ್ನು ದೂಷಿಸಿದರೆ ಆಗ ನಿಮ್ಮ ಭಕ್ತಿಯು ಹೋಗಿ ಬಿಡುತ್ತದೆ. ನಿಮ್ಮ ಕೆಲಸವು ಆಗದೇ ಇದ್ದರೆ ಆಗ ನಿಮ್ಮ ಭಕ್ತಿಯು ಹೋಗಿ ಬಿಡುತ್ತದೆ. ಹೀಗೆ ನಾವು ನಮ್ಮ ಭಕ್ತಿಯನ್ನು ಕೆಲವು ಡಾಲರುಗಳಿಗಾಗಿ ಅಥವಾ ಚಿಕ್ಕ ವಿಷಯಗಳಿಗಾಗಿ ಕೆಳೆದುಕೊಳ್ಳುತ್ತಿದ್ದೇವೆ. ಯಾರೊಂದಿಗಾದರೂ ಒಂದು ಚಿಕ್ಕ ಜಗಳವಾದಾಗ, ನಿಮ್ಮೆಲ್ಲಾ ಭಕ್ತಿಯು ಹೋಯಿತೆಂದು ನಿಮಗನ್ನಿಸುತ್ತದೆ. ಅಲ್ಲವೇ? ಚಿಕ್ಕ ವಿಷಯಗಳಲ್ಲಿ ಮತ್ತು ಸಣ್ಣ ಪುಟ್ಟ ಬಯಕೆಗಳಲ್ಲಿ ನಾವು ಭಕ್ತಿಯನ್ನು ಕಳೆದುಕೊಳುವುದು ಮತ್ತು ಅದು ಕಳೆಯಲು ಯೋಗ್ಯವಾದುದಲ್ಲ. ಅಲ್ಲವೇ?
ನೋಡಿ, ನೀವೊಬ್ಬ ವೈದ್ಯಕೀಯ ವೃತ್ತಿಯಲ್ಲಿರುವವರಾಗಿದ್ದರೆ, ನೀವು ಜನರಿಗೆ ಔಷಧಿಯನ್ನು ನೀಡುತ್ತೀರಿ ಮತ್ತು ಹಲವು ಸಲ ಅದು ಕೆಲಸ ಮಾಡುತ್ತದೆ, ಆದರೆ ಕೆಲವೊಮ್ಮೆ ಅದು ಕೆಲಸ ಮಾಡುವುದಿಲ್ಲ. ಅದು ಹಲವಾರು ವಿಷಯಗಳನ್ನು ಅವಲಂಬಿಸಿದೆ. ಅದು ಕರ್ಮವನ್ನು ಅವಲಂಬಿಸಿದೆ. ಅದೇ ರೀತಿಯಲ್ಲಿ ನಿಮ್ಮ ಜೀವನದಲ್ಲಿ ಹಲವಾರು ಸಂಗತಿಗಳು ಆಗುತ್ತವೆ ಮತ್ತು ಕೆಲವು ಸಂಗತಿಗಳು ಆಗುವುದಿಲ್ಲ, ಆದರೆ ಕನಿಷ್ಠಪಕ್ಷ ಭಕ್ತಿಯನ್ನು ಬಿಡಬೇಡಿ. ಹಿಡಿದಿಟ್ಟುಕೊಳ್ಳಿ. 
ನಾನು ಪುನಃ ಹೇಳುತ್ತೇನೆ, ಕೆಲವೊಮ್ಮೆ ಅದು ಹೋದಂತೆ ಅಥವಾ ಹೋಗುತ್ತಿರುವಂತೆ ಕಾಣಿಸುತ್ತದೆ, ಆಗಲೂ ಕೂಡಾ ನಿಮಗೆ ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಸುಮ್ಮನೇ ನಿರಾಳವಾಗಿರಿ ಮತ್ತು ಅದಕ್ಕಾಗಿ ಪ್ರಾರ್ಥಿಸಿ.
ಆದುದರಿಂದ ಭಕ್ತಿಯೆಂಬುದು ಒಂದು ಉಡುಗೊರೆ, ನೀವು ಅದರಿಂದ ಲಾಭ ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ತೆಗೆದುಕೊಳ್ಳಬಾರದು. ನೀವು ತೆಗೆದುಕೊಂಡರೆ ಆಗ ಅದುವೇ ನೀವು ಧ್ಯಾನದಿಂದ ಮತ್ತು ಭಕ್ತಿಯಿಂದ ಹೊರ ಜಾರಲು ಪ್ರಾರಂಭಿಸುವ ಮಾರ್ಗ. ಅದುವೇ ಆಗುವುದು, ನಾವು ಭಕ್ತಿಯನ್ನು ಗುರುತಿಸುತ್ತೇವೆ ಮತ್ತು ಅದರಿಂದ ಲಾಭ ತೆಗೆದುಕೊಳ್ಳಲು ಪ್ರಯತ್ನಿಸುತ್ತೇವೆ ಹಾಗೂ "ನಾನು ತುಂಬಾ ಭಕ್ತಿ ಹೊಂದಿದ್ದೇನೆ" ಎಂದು ಖಚಿತಪಡಿಸಿಕೊಳ್ಳುತ್ತೇವೆ. ನೀವು ಇದರ ಬಗ್ಗೆ ಅರಿವು ಹೊಂದಿದ್ದರೆ, ಕೇವಲ ಒಂದು ಮಗುವಿನಂತಿರಿ ಮತ್ತು ಹೋಗಲು ಬಿಡಿ. ನೀವು ಭಕ್ತಿ ಹೊಂದಿದ್ದರೆ, ಅದಕ್ಕಾಗಿ ಕೃತಜ್ಞರಾಗಿರಿ, ಆಗ ಅದು ಸುರಕ್ಷಿತ ದಾರಿ. ಆಗ ಭಕ್ತಿಯು ಪ್ರತಿಕ್ಷಣವೂ ಬೆಳೆಯುತ್ತದೆ.
ನೋಡಿ, ಕ್ರಿಯೆಯಲ್ಲಿ ಯಾವತ್ತೂ ಪರಿಪೂರ್ಣತೆಯಿರುವುದಿಲ್ಲ. ಯಾವುದೇ ಉತ್ತಮ ಕ್ರಿಯೆಯಲ್ಲಾದರೂ ನಿಮಗೆ ಯಾವಾಗಲೂ ೧% ತಪ್ಪು ಸಿಗುತ್ತದೆ. ಪ್ರಕೃತಿಯೆಂದರೆ ಹಾಗೆ. ಯಾವುದೇ ಕ್ರಿಯೆಯಿರಲಿ, ಅದೆಷ್ಟೇ ಒಳ್ಳೆಯದಾಗಿದ್ದರೂ ಎಷ್ಟೇ ಲಾಭದಾಯಕವಾಗಿದ್ದರೂ ಅದರಲ್ಲಿ ಸ್ವಲ್ಪ ಕುಂದು ಇರುತ್ತದೆ. ಸಮಾಧಿಯು ಭಕ್ತಿಯೊಂದಿಗೆ ಪರಿಪೂರ್ಣವಾಗುತ್ತದೆ. ಈಗ ನೀವು "ಓಹ್, ನನಗೆ ಭಕ್ತಿಯ ಅನುಭವವಾಗುತ್ತಿಲ್ಲ, ನಾನೇನು ಮಾಡಲಿ?" ಎಂದು ಯೋಚಿಸಿದರೆ, ಏನೂ ಮಾಡಬೇಡಿ. ಕೇವಲ ನಿರಾಳವಾಗಿರಿ! ನಿಮ್ಮಲ್ಲಿ ಅದಿಲ್ಲವೆಂದು ಯೋಚಿಸಬೇಡಿ. ನಿಮ್ಮಲ್ಲಿ ಅದು ಇದೆ, ಅದು ಈಗ ಪ್ರಕಟವಾಗಿಲ್ಲ, ಆದರೆ ಅದು ಆಗುತ್ತದೆ. ಸ್ವಲ್ಪ ಹೆಚ್ಚು ಪುಣ್ಯ, ಸ್ವಲ್ಪ ಸೇವೆ ಮತ್ತು ಸ್ವಲ್ಪ ಒಳ್ಳೆಯ ಕೆಲಸಗಳನ್ನು ಮಾಡಿ, ಆಗ ಅದು ಪ್ರಕಟವಾಗುತ್ತದೆ. ಜ್ಞಾನದಲ್ಲಿರಿ ಮತ್ತು ಅದು ಮೇಲೆ ಬರುತ್ತದೆ.
ಗ್ರಹಗತಿಗಳು ಕೂಡಾ ಪ್ರಾರಂಭದಲ್ಲಿ, ಪ್ರಾರಂಭಿಕರಲ್ಲಿ ಭಕ್ತಿಯ ಮೇಲೆ ಒಂದು ಪ್ರಭಾವ ಬೀರುತ್ತದೆ. ಒಂದು ನಿರ್ದಿಷ್ಟ ಗ್ರಹದ ಸಂಯೋಗವಾಗುವಾಗ, ಆ ಸಮಯದಲ್ಲಿ, ಮೊದಲನೆಯದಾಗಿ ಆಗುವ ಸಂಗತಿಯೆಂದರೆ ಭಕ್ತಿಯು ಹಿಂದಕ್ಕೆ ಹೋಗುವುದು. ಗುರು ಗ್ರಹವು ಎಂಟನೆಯ ಮನೆಗೆ ಬರುವಾಗ ಅದು ಅಷ್ಟಮ ಗುರುವೆಂದು ಕರೆಯಲ್ಪಡುತ್ತದೆ. ಒಬ್ಬ ವ್ಯಕ್ತಿಯು ಅಷ್ಟಮ ಗುರುವಿನ ಮೂಲಕ ಹಾದು ಹೋಗುತ್ತಿರುವನೆಂದು ಮತ್ತು ಅವನು ಆ ಒಂದು ವರ್ಷದಲ್ಲಿ ಪ್ರಕ್ಷುಬ್ಧತೆಗಳ ಮೂಲಕ ಹಾದು ಹೋಗಲಿರುವನೆಂದು ಪಂಡಿತರಿಗೆ ತಿಳಿದಿರುತ್ತದೆಯೆಂದು ಹೇಳಲಾಗುತ್ತದೆ. ಆಗ ಏನಾಗುತ್ತದೆ? ಮನಸ್ಸು ಎಲ್ಲೆಡೆಗಳಲ್ಲಿ ಸಂಚರಿಸುತ್ತದೆ, ಮನಸ್ಸು ಕಳವಳಗೊಂಡಿರುತ್ತದೆ, ಪ್ರತಿಯೊಂದು ನಿರ್ಧಾರವೂ ತಪ್ಪಾಗುತ್ತದೆ, ಅವನು ಮಾಡುವ ಪ್ರತಿಯೊಂದು ಕೆಲಸವೂ ನಿರಾಶಾದಾಯಕವಾಗಿರುತ್ತದೆ ಮತ್ತು ಅದಲ್ಲದೆ ಅವನು ಆಧ್ಯಾತ್ಮದಲ್ಲಿನ ಎಲ್ಲಾ ಆಸಕ್ತಿಯನ್ನೂ ಕಳೆದುಕೊಳ್ಳುತ್ತಾನೆ. ಇದು ಪ್ರತಿ ೧೨ ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಅದು ಎರಡು ತಿಂಗಳುಗಳ ವರೆಗಿರಬಹುದು, ಆರು ತಿಂಗಳುಗಳ ವರೆಗಿರಬಹುದು ಅಥವಾ ಹೆಚ್ಚೆಂದರೆ ಒಂದು ವರ್ಷದ ವರೆಗಿರಬಹುದು. ಎರಡು ತಿಂಗಳುಗಳು ಅಥವಾ ನಾಲ್ಕು ತಿಂಗಳುಗಳು ಅಥವಾ ಆರು ತಿಂಗಳುಗಳು ಅದು ತೀಕ್ಷ್ಣವಾಗಿರಬಹುದು. ಅದುದರಿಂದ ನೀವು, "ಓಹ್ ಇದು ನನ್ನ ಅಷ್ಟಮ ಗುರು, ಅದಕ್ಕೇ ನನ್ನ ಮನಸ್ಸು ಹಾಗಿರುವುದು" ಎಂಬುದನ್ನು ತಿಳಿದರೆ, ಆಗ ನೀವು ರೋಗವನ್ನು ಪತ್ತೆಹಚ್ಚಿದಂತೆ ಮತ್ತು ನಿಮ್ಮ ಮನಸ್ಸು ಆ ರೀತಿ ಯಾಕೆ ಹೋಗುತ್ತಿದೆಯೆಂದು ನಿಮಗೆ ತಿಳಿಯುತ್ತದೆ. ನಿಮಗೆ ತಿಳಿಯದಿದ್ದಲ್ಲಿ, ಆಗ ನೀವು ಯೋಚಿಸುತ್ತೀರಿ, "ಓಹ್, ನಾನು ನನ್ನ ಇಡಿಯ ಜೀವನವನ್ನು ವ್ಯರ್ಥ ಮಾಡಿದ್ದೇನೆ. ನಾನು ಪ್ರಾಣಾಯಾಮ ಯಾಕೆ ಮಾಡಿದೆ, ನಾನು ಇವುಗಳನ್ನೆಲ್ಲಾ ಯಾಕೆ ಮಾಡಿದೆ. ಇದೆಲ್ಲವೂ ವ್ಯರ್ಥ", ಇದುವೇ ಆಗುವುದು ಮತ್ತು ನೀವು ಮಾಡುವುದೆಲ್ಲವನ್ನೂ ನಿಲ್ಲಿಸುತ್ತೀರಿ. ಒಂದು ವರ್ಷದ ಬಳಿಕ ನಿಮಗೆ ಮನವರಿಕೆಯಾಗುತ್ತದೆ, "ಓಹ್ ದೇವರೇ, ನಾನೊಂದು ಪ್ರಮಾದ ಮಾಡಿದೆ, ನನ್ನ ಮನಸ್ಸು ಎಲ್ಲಿ ಹೋಗಿತ್ತು". ನೀವು ಆ ರೀತಿ ಚಿಂತಿಸುತ್ತೀರಿ.
ನೀವು ಸಾಡೇಸಾತಿ ಎಂದು ಕರೆಯುವ, ಏಳೂವರೆ ವರ್ಷಗಳ ಶನಿಯನ್ನು ಜ್ಯೋತಿಷಿಗಳು ಹಾಗೂ ಭಾರತದ ಜನರು ತಿಳಿದಿದ್ದಾರೆ. ಆ ಸಮಯದಲ್ಲಿ ಜನರು ತಮ್ಮೆಲ್ಲಾ ವಸ್ತುಗಳೊಂದಿಗಿನ ಸಂಬಂಧಗಳನ್ನು, ವಸ್ತುಗಳ ಐಶ್ವರ್ಯಗಳನ್ನು ನಿಜವಾಗಿ ಕಳೆದುಕೊಳ್ಳುತ್ತಾರೆ ಮತ್ತು ಕೆಲವರಿಗೆ ಇದು ತುಂಬಾ ಕಷ್ಟದ ಸಮಯ. ಒಬ್ಬರು ಕೇವಲ ಬಹಿರ್ಮುಖವಾಗಿದ್ದರೆ, ಆರೋಗ್ಯ ಮತ್ತು ಈ ಎಲ್ಲಾ ಕಾಳಜಿಗಳು ಬರುತ್ತವೆ. ಆದರೆ ಒಬ್ಬರು ಆಧ್ಯಾತ್ಮಿಕವಾಗಿದ್ದರೆ ಆಗ ಅದೇ ಪರಿಸ್ಥಿತಿಯು ಅವರನ್ನು ತುಂಬಾ ಹೆಚ್ಚು ಉತ್ತಮವಾಗಿರುವಂತೆ ಮಾಡುತ್ತದೆ. ವ್ಯಕ್ತಿಯು ಹೇಗಿದ್ದಾನೆಂಬುದರ ಮೇಲೆ ಅದು ಅವಲಂಬಿಸಿದೆ. ಸುತ್ತಲಿರುವ ಜನರು ಹೇಳುವುದನ್ನು ನೀವು ಕೇಳಿರಬೇಕು, "ಓಹ್, ಏಳು ವರ್ಷಗಳಿಂದ ನನಗೆ ಯಾವುದೂ ಸರಿಯಾಗುತ್ತಿಲ್ಲ. ನಾನು ಪ್ರಯತ್ನಿಸುತ್ತೇನೆ, ಆದರೆ ಎಲ್ಲವೂ ಸೋಲುತ್ತಿದೆ". ಶನಿಯ ಏಳೂವರೆ ವರ್ಷಗಳಲ್ಲಿ ಇದು ಸಂಭವಿಸುತ್ತದೆ. ಇದು ಪ್ರತಿ ೩೦ ವರ್ಷಗಳಿಗೊಮ್ಮೆ ಬರುತ್ತದೆ. ಆದುದರಿಂದ ಒಂದು ಜೀವಮಾನದಲ್ಲಿ ಇದು ಕೇವಲ ಎರಡು ಸಾರಿ ಬರುತ್ತದೆ, ತುಂಬಾ ಸಾಮಾನ್ಯವಾಗಿಯಲ್ಲ. ಆದರೆ ಅದು ಒಬ್ಬ ವ್ಯಕ್ತಿಯನ್ನು ಅಲ್ಲಾಡಿಸಲು; ಒಬ್ಬರನ್ನು ಹುರಿಯಲು ಸಾಕಾಗುತ್ತದೆ. ಸಾಧಾರಣವಾಗಿ ಒಬ್ಬ ವ್ಯಕ್ತಿಯ ಬಾಲ್ಯದಲ್ಲಿ, ೧೫ ರಿಂದ ೨೦ ವರ್ಷ ವಯಸ್ಸಿನೊಳಗೆ ಇದು ಬಂದರೆ, ಇದು ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ ನಡು ವಯಸ್ಸಿನಲ್ಲಿ ಮಾತ್ರ ಇದು ಪ್ರಭಾವ ಬೀರುತ್ತದೆ. ಒಬ್ಬರು ೫೦ ವರ್ಷ ವಯಸ್ಸು ದಾಟಿದ ಬಳಿಕ ಇದು ಬಂದರೆ, ಆಗ ಕೂಡಾ ಇದರ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಹೀಗೆ, ಏಳೂವರೆ ವರ್ಷಗಳ ಈ ಅವಧಿಯು ಕೂಡಾ ತುಮುಲವನ್ನು ತರುತ್ತದೆ. ಒಂದು ರೀತಿಯಲ್ಲಿ ಇದು ಒಬ್ಬ ವ್ಯಕ್ತಿಯು ಅಂತರ್ಮುಖವಾಗಿ ತಿರುಗುವಂತೆ ಮಾಡುತ್ತದೆ. ನೀವು ಗಮನಿಸಿದ್ದರೆ, ನಿಮ್ಮಲ್ಲಿ ಆಧ್ಯಾತ್ಮಿಕ ಪಥದಲ್ಲಿ ಬಂದವರು, ಬಂದಿರುವುದು ಯಾಕೆಂದರೆ ಅಲ್ಲೇನೋ ಸಂಕಷ್ಟವಿತ್ತು.  ನಿಮ್ಮಲ್ಲಿ ಎಷ್ಟು ಮಂದಿ ಬಂದಿರುವುದು ಸಂಕಷ್ಟದ ಕಾರಣದಿಂದ?  ಇದನ್ನೇ ಶನಿಯು ಮಾಡುವುದು. ನಿಮಗೆ ಹೊರಜಗತ್ತು ಸಾಕಾಗಿ ಹೋಗಿ ನೀವು ಅಂತರ್ಮುಖವಾಗಿ ತಿರುಗುವಂತೆ ಮಾಡುವ ಪರಿಸ್ಥಿತಿಯನ್ನು ಅದು ಸೃಷ್ಟಿಸುತ್ತದೆ. ಆ ನಿಟ್ಟಿನಲ್ಲಿ ಇದು ತುಂಬಾ ಒಳ್ಳೆಯದು.
ಆದರೆ ೧೨ ವರ್ಷಗಳಿಗೊಮ್ಮೆ ಅಷ್ಟಮ ಗುರು ಬಂದಾಗ, ನಂಬಿಕೆಯು ಚಂಚಲಗೊಳ್ಳುತ್ತದೆ. ಅಲ್ಲೊಬ್ಬರು ದೇವರು ಇದ್ದಾರೆಯೇ ಇಲ್ಲವೇ ಎಂಬುದಾಗಿ ಕೂಡಾ ನೀವು ಅಚ್ಚರಿ ಪಡುತ್ತೀರಿ. ಯಾವುದೂ ಯೋಗ್ಯವೆಂದು ಕಂಡುಬರುವುದಿಲ್ಲ. ಎಲ್ಲವೂ ರುಚಿಯಿಲ್ಲದಂತೆ ಮತ್ತು ದಿಕ್ಕಿಲ್ಲದಂತೆ ಕಂಡುಬರುತ್ತದೆ ಹಾಗೂ ಬೇಸರಿಕೆಯ ಮತ್ತು ಗೊಂದಲಗಳ ಭಾವನೆಗಳು ಉತ್ಪತ್ತಿಯಾಗುತ್ತವೆ. ಆದರೆ ಅದು ಇರುವುದು ಸ್ವಲ್ಪ ಸಮಯದ ವರೆಗೆ.
ನೀವು ಸತ್ಸಂಗದಲ್ಲಿರುವ ಕ್ಷಣದಲ್ಲಿ ಮನಸ್ಸು ಮೇಲಕ್ಕೆತ್ತಲ್ಪಡುತ್ತದೆ. ಇದೆಲ್ಲಾ ನಿವಾರಿಸಲ್ಪಡುತ್ತದೆ. ಆದುದರಿಂದಲೇ, ಗುರುವಿನ ಸಮಕ್ಷಮದಲ್ಲಿ ಅಥವಾ ಸತ್ಸಂಗದಲ್ಲಿ ಅಥವಾ ಸಾಧನೆಯಲ್ಲಿ ಈ ಗ್ರಹಗಳ ಪ್ರಭಾವಗಳು ಕನಿಷ್ಠವಾಗಿರುತ್ತವೆ. ಅದು ನಿಮ್ಮ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಜನರು ಮೇಲಿಂದ ಮೇಲೆ ಪುನಃ, ಹಲವಾರು ಸಾರಿ ಇದನ್ನು ಅನುಭವಿಸುತ್ತಾರೆ. ಅದಕ್ಕೇ ಈ ಸಂಪ್ರದಾಯಗಳು ಹೀಗಿರುವುದು. ಅವರು ಅದನ್ನು ಒಟ್ಟುಗೂಡಿಸಿದ ರೀತಿಯು ತುಂಬಾ ಸೋಜಿಗವಾದುದು. ಈ ಸಂಪ್ರದಾಯವನ್ನು ಹೇಗೆ ಇಟ್ಟುಕೊಳ್ಳಲಾಗಿದೆ ಮತ್ತು  ಜ್ಞಾನವನ್ನು ಹೇಗೆ ನಿರ್ವಹಿಸಲಾಗಿದೆಯೆಂಬುದು ಸೋಜಿಗವಾದುದು.ಪ್ರಶ್ನೆ: ಗುರೂಜಿ, ಒಂದು ವಿಷಯವು ಭಾವನೆಯೇ ಅಥವಾ ಒಂದು ಅಂತರ್ದೃಷ್ಟಿಯೇ ಎಂದು ನಿರ್ಧರಿಸುವುದು ಹೇಗೆಂದು ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್: ಸಮಯವು ನಿನಗೆ ಹೇಳುತ್ತದೆ.
ಪ್ರಶ್ನೆ: ಸೃಷ್ಟಿಕರ್ತನು ನಿಜವಾದವನಾಗಿದ್ದರೆ, ಸೃಷ್ಟಿಕರ್ತನ ಭಾಗವಾಗಿರುವ ಈ ಪ್ರಪಂಚವು ಮಾಯೆಯಾಗುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಮಾಯೆಯೆಂದರೆ ಅರ್ಥವೇನು? ಮಾಯೆಯೆಂದರೆ, ಇರುವಂತೆ ಕಾಣುವುದು.  ನೋಡು, ಒಂದು ಹಾಲೋಗ್ರಾಮಿನಲ್ಲಿ ಎಲ್ಲಾ ಆಕಾರಗಳೂ ಕಾಣಿಸುತ್ತವೆ. ಹಾಲೋಗ್ರಾಮಿನಲ್ಲಿ ಎಲ್ಲಾ ರಶ್ಮಿಗಳೂ ನಿಜವಾದವು, ಆದರೆ ಆಕಾರಗಳು ತತ್ಕಾಲಿಕವಾದವು. ಅವುಗಳು ನಿಜವಾದ ಅಸ್ಥಿತ್ವವಲ್ಲ. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ?
ನಿಜವಾಗಿ, ಮಾಯೆ ಎಂಬ ಪದದರ್ಥ, ಯಾವುದು ಬದಲಾಗುತ್ತದೆಯೋ ಅದು, ಯಾವುದನ್ನು ಅಳೆಯಲು ಸಾಧ್ಯವಿದೆಯೋ ಅದು ಎಂದು. ಅಳತೆಯು ಒಂದೇ ರೀತಿಯಾಗಿರುವುದಿಲ್ಲ. ಒಂದು ವಸ್ತುವಿನ ತೂಕ ಇಲ್ಲಿ ಒಂದು ಕಿಲೋ ಇದ್ದರೆ, ನೀವು ಉತ್ತರ ಧ್ರುವಕ್ಕೆ ಹೋದಾಗ ಅದರ ತೂಕ ಬೇರೆಯಿರುತ್ತದೆ ಮತ್ತು ನೀವು ಸಿಂಗಾಪುರಕ್ಕೆ ಹೋದಾಗ ಅದೇ ವಸ್ತುವಿನ ತೂಕ ಬೇರೆಯಾಗಿರುತ್ತದೆ. ನೀವು ಚಂದ್ರನಲ್ಲಿಗೆ ಹೋದರೆ ಅದರ ತೂಕವು, ಅದರ ಇಲ್ಲಿನ ತೂಕದ ಕೇವಲ ೧/೬ ರಷ್ಟಿರುತ್ತದೆ. ಈ ಜ್ಞಾನವು ಹಿಂದಿನ ಜನರಲ್ಲಿತ್ತು. ಅದಕ್ಕೇ ಅವರು ಹೇಳಿದರು, ಈ ಸಂಪೂರ್ಣ ವಿಶ್ವವನ್ನು ಅಳೆಯಬಹುದು ಮತ್ತು ಅಳತೆಯು ನಿಜವಾದುದಲ್ಲ ಎಂದು.
ಪ್ರಶ್ನೆ: ಐನ್ ಸ್ಟೀನಿನ ವಿಶೇಷವಾದ ಸಾಪೇಕ್ಷ ಸಿದ್ಧಾಂತದ ಪ್ರಕಾರ E=MC2. ಇದು, ಬದಲಾಗದೆ ಇರುವುದು ಬೆಳಕಿನ ವೇಗವೊಂದೇ ಎಂಬ ಸತ್ಯಾಂಶದ ಮೇಲೆ ಆಧರಿಸಿದೆ. ನೀವು ಇದರ ಬಗ್ಗೆ ಸ್ವಲ್ಪ ಹೇಳುವಿರಾ?
ಶ್ರೀ ಶ್ರೀ ರವಿಶಂಕರ್: ಡಾರ್ಕ್ ಮ್ಯಾಟರ್ (ಗಾಢ ವಸ್ತು) ಮತ್ತು ಡಾರ್ಕ್ ಎನರ್ಜಿ (ಗಾಢ ಶಕ್ತಿ) ಗಳ ಸಂಶೋಧನೆಯೊಂದಿಗೆ ಅವರು ಹೇಳುವುದೆಂದರೆ ಒಂದು ಬಹಳ ದೊಡ್ಡ ವ್ಯತ್ಯಾಸವಿದೆಯೆಂದು. ಬೆಳಕಿನ ಅಳತೆಯೂ ಕೂಡಾ ಕೇವಲ ಸಾಪೇಕ್ಷವಾದುದು, ಅದು ನಿರಪೇಕ್ಷವಾದುದಲ್ಲ. ಆ ಅರ್ಥದಲ್ಲಿ ಪ್ರೀತಿ, ಬೆಳಕು ಮೊದಲಾದವುಗಳನ್ನು ಅಳೆಯಲು ಸಾಧ್ಯವಿಲ್ಲ, ಅದೆಲ್ಲವೂ ದೈವಿಕತೆಯ ಭಾಗ, ಅದು ಮಾಯೆಯಲ್ಲ.
ಆದರೆ ಈಗ ವಿಜ್ಞಾನವು  ಹೇಳುತ್ತಿರುವ ಈ ಗಾಢ ಶಕ್ತಿ ಮತ್ತು ಗಾಢ ವಸ್ತು ತುಂಬಾ ಆಸಕ್ತಿಕರವಾದುದು. ಅದನ್ನೇ ಋಗ್ವೇದದಲ್ಲೂ ಹೇಳಿರುವುದು. ಆರಂಭದಲ್ಲಿ ವಿಶ್ವವು ಕತ್ತಲೆಯಿಂದ ಮುಚ್ಚಲ್ಪಟ್ಟಿದ್ದ ಗಾಢ ಶಕ್ತಿಯಾಗಿತ್ತು ಎಂದು ಹೇಳಲಾಗಿದೆ. ಜನರಿಗೆ ಇದು ಅರ್ಥವಾಗಲಿಲ್ಲ; ಅವರಿಗೆ ಅದು ತುಂಬಾ ವಿಚಿತ್ರವಾಗಿ ಮತ್ತು ಅರ್ಥವಿಲ್ಲದ ಏನೋ ಎಂಬಂತೆ ಕಂಡಿತು. ಆದರೆ ನಸದಿಯ ಸೂಕ್ತದಲ್ಲಿ (ಸೃಷ್ಟಿಯ ಶ್ಲೋಕಗಳು), "ಇದೂ ಇರಲಿಲ್ಲ, ಅದೂ ಇರಲಿಲ್ಲ, ಇದೆಲ್ಲವೂ ಕತ್ತಲಿನಿಂದ ಮುಚ್ಚಲ್ಪಟ್ಟಿದ್ದ ಗಾಢ ಶಕ್ತಿಯಾಗಿತ್ತು" ಎಂದು ಹೇಳುತ್ತದೆ. ಇದರ ಬಗೆಗಿನ ಇತ್ತೀಚಿನ ಸಂಶೋಧನೆಯು ಸಂಪೂರ್ಣವಾಗಿ ಅನುರೂಪವಾದುದಾಗಿದೆ. ನಿಜವಾಗಿ, ಅದು ಸಂಸ್ಕೃತದಿಂದ ಅನುವಾದಿಸಿದಂತೆ ಕಾಣುತ್ತದೆ. ನೀವು ಕ್ಷೀರಪಥವೆಂದು ಯಾವುದನ್ನು ಕರೆಯುತ್ತೀರೋ ಅದರ ಬಗ್ಗೆ ಅದು ಮಾತನಾಡುತ್ತದೆ, ಎಲ್ಲಾ ಗ್ರಹಗಳು ಮತ್ತು ನಕ್ಷತ್ರಗಳು ಹೇಗೆ ಕೇವಲ ಅನಿಲ ಮತ್ತು ನೀರಾಗಿದ್ದವು ಎಂದು. ಆಕಾಶ ತತ್ವದಿಂದ ಹೇಗೆ ಅನಿಲ ಮತ್ತು ಪ್ರಕಾಶ ಬಂದುವು ಎಂದು. ಅನಿಲಗಳಿಂದುಂಟಾದ ಘರ್ಷಣೆಯು ಪ್ರಕಾಶವನ್ನುಂಟುಮಾಡಿತು, ಪ್ರಕಾಶದಿಂದ ನೀರು ಬಂತು ಮತ್ತು ನೀರಿನಿಂದ ಭೂಮಿ ಬಂತು. ಇದು ಆಕಾಶಗಂಗೆಯ ಬಗೆಗಿನ ಅಷ್ಟೊಂದು ಸುಂದರವಾದ ವಿವರಣೆ.
ಪ್ರಶ್ನೆ: ಪ್ರೀತಿಯ ಗುರೂಜಿ, ಒಂದು ಮಂತ್ರದ ಬದಲು ನಾವು ನಿಮ್ಮ ಮೇಲೆ ಧ್ಯಾನ ಮಾಡಬಹುದೇ? ನಿಮ್ಮ ಶಕ್ತಿಯೊಂದಿಗೆ ಜೊತೆಗೂಡಲು ಮತ್ತು ನೀವಾಗಲು ಇರುವ ಅತ್ಯುತ್ತಮ ಧ್ಯಾನ ವಿಧಾನ ಯಾವುದು?
ಶ್ರೀ ಶ್ರೀ ರವಿಶಂಕರ್: ಈಗ ಕೇವಲ ಮಂತ್ರವನ್ನು ತೆಗೆದುಕೋ ಮತ್ತು ಅದನ್ನು ಹೋಗಲು ಬಿಡು, ಏನನ್ನೂ ಮಾಡಬೇಡ.
ಪ್ರಶ್ನೆ: ನನ್ನ ಶಾಲೆಯಲ್ಲಿ, ಬಹುತೇಕ ಎಲ್ಲಾ ಮಕ್ಕಳು ಕೆಟ್ಟ ಶಬ್ದಗಳನ್ನು ಹೇಳುತ್ತಾರೆ. ಈ ಶಬ್ದಗಳನ್ನು ಹೇಳದಂತೆ ನಾನು ನನ್ನನ್ನೇ ನಿಯಂತ್ರಿಸುವುದು ಹೇಗೆ? ಮತ್ತು ಈ ಶಬ್ದಗಳನ್ನು ಹೇಳುವುದನ್ನು ನಿಲ್ಲಿಸುವಲ್ಲಿ ಅವರಿಗೆ ನಾನು ಸಹಾಯ ಮಾಡುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನಿನ್ನಲ್ಲಿ ಶಕ್ತಿಯಿದೆ. ನೀನು ಸೂಪರ್ ಮ್ಯಾನ್ ಎಂದು ನಾನು ಹೇಳುತ್ತೇನೆ. ನೀನು ನಿರ್ಧಾರ ತೆಗೆದುಕೋ, "ನಾನು ಯಾವುದೇ ಕೆಟ್ಟ ಶಬ್ದಗಳನ್ನು ಹೇಳುವುದಿಲ್ಲ".
ನಿನಗೆ ಗೊತ್ತಿದೆಯಾ, ಈ ಎಲ್ಲಾ ವರ್ಷಗಳಲ್ಲಿ ನಾನು ಒಂದು ಕೆಟ್ಟ ಶಬ್ದವನ್ನೂ ಹೇಳಿಲ್ಲವೆಂದು? ಆದುದರಿಂದ ನನಗೆ ಅದನ್ನು ಮಾಡಲು ಸಾಧ್ಯವಾದರೆ, ನಿನಗೂ ಮಾಡಲು ಸಾಧ್ಯವಿದೆ. ನಾನು ಬೇಸರದಲ್ಲಿದ್ದಾಗಲೂ ಸಹ, ಅದು ನನಗೆ ಬರಲಿಲ್ಲ. ನನ್ನಿಂದ ಹೊರಬಂದ ಅತೀ ಕೆಟ್ಟ ಪದವೆಂದರೆ, "ಮೂರ್ಖ", ಅಷ್ಟನ್ನೇ ನಾನು ಹೇಳಿರುವುದು. ಅದಕ್ಕಿಂತ ಹೆಚ್ಚೇನನ್ನೂ ಇಲ್ಲ. ಯಾವುದೇ ಬೈಗಳನ್ನೂ ಇಲ್ಲ, ಒಂದೇ ಒಂದು ಕೆಟ್ಟ ಪದವೂ ಇಲ್ಲ, ಯಾವತ್ತಿಗೂ.
ಪ್ರಶ್ನೆ: ಆಧ್ಯಾತ್ಮದ ಮಾರ್ಗವು ಯಾಕೆ ಅಷ್ಟೊಂದು ಕಷ್ಟಕರವಾಗಿದೆ?
ಶ್ರೀ ಶ್ರೀ ರವಿಶಂಕರ್: ಕಷ್ಟಕರವೇ?!  ಇದು ಇರುವುದರಲ್ಲಿ ಸುಗಮವಾದ, ಪ್ರಯತ್ನವಿಲ್ಲದ ಮತ್ತು ಸುಲಭವಾದ ಮಾರ್ಗ. ಇತರ ಕೆಲಸಗಳು ತುಂಬಾ ಕಷ್ಟಕರ. ನಾನು ಪ್ರಪಂಚದಲ್ಲಿನ ಅತೀ ಸುಲಭ ಸಂಗತಿಗಳತ್ತ ಹೋಗುತ್ತೇನೆ. ಇದು ತುಂಬಾ ಸುಖಕರ ಮತ್ತು  ತುಂಬಾ ಸುಲಭ, ನೀವು ನಗುವಿನೊಂದಿಗೆ, ನೃತ್ಯದೊಂದಿಗೆ ನಿಮ್ಮ ದಾರಿಯನ್ನು ಕ್ರಮಿಸಬಹುದು. ಕಷ್ಟಕರವಾದುವೆಂದರೆ, ನೀವು ಪ್ರಪಂಚದಲ್ಲಿ ಮಾಡಬೇಕಾಗಿರುವ ಇತರ ಸಂಗತಿಗಳು. ನೀವು ನಿಮ್ಮ ಒಂದು ಬಯಕೆಯನ್ನು ಈಡೇರಿಸಬೇಕಾದಾಗ, ಅದು ತುಂಬಾ ಕಷ್ಟಕರ. ಆದರೆ ಆಧ್ಯಾತ್ಮಿಕ ಪಥದಲ್ಲಿ, ಬಯಕೆಯನ್ನು ಬಿಟ್ಟುಬಿಡುವುದು ತುಂಬಾ ಸುಲಭ. ನೀವು ಅದನ್ನು ಬಿಟ್ಟುಬಿಡುತ್ತೀರಿ ಮತ್ತು ನಂತರ ನೀವು ಅದನ್ನು ಮರೆಯುತ್ತೀರಿ.
ಪ್ರಶ್ನೆ: ಒಬ್ಬರು ನಿಮ್ಮನ್ನು ಪ್ರೀತಿಸುತ್ತಾರೆಂದು ಮತ್ತು ನಿಮ್ಮ ಬಗ್ಗೆ ಕಾಳಜಿ ವ್ಯಕ್ತ ಪಡಿಸುತ್ತಾರೆಂದು ನಿಮಗೆ ತಿಳಿದಿರುತ್ತದೆ. ಅವರು ಅದನ್ನು ಇನ್ನೆಂದೂ ತೋರಿಸದೇ ಇದ್ದಲ್ಲಿ, ಅವರೊಡನೆ ಕೋಪಗೊಳ್ಳದೆಯೇ, ಅವರಿನ್ನೂ ನಿಮ್ಮನ್ನು ಪ್ರೀತಿಸುತ್ತಾರೆಂದು ನೀವು ನಂಬುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಅವರಿಗೆ ಸ್ವಲ್ಪ ಸಮಯ ಕೊಡು, ಅವರು ಒಂದು ವಿರಾಮ ತೆಗೆದುಕೊಂಡು, ತಮ್ಮನ್ನು ಚಾರ್ಜ್ ಪಡಿಸಿಕೊಂಡು ನಿನ್ನ ಬಗ್ಗೆ ಅವರಿಗಿರುವ ಕಾಳಜಿಯನ್ನು ಪುನಃ ತೋರಿಸಲು ಬಿಡು. ಜನರಿಗೆ ಪುನಃ ಪುನಃ ಸ್ವಲ್ಪ ಚಾರ್ಜ್ ಮಾಡಬೇಕಾಗುತ್ತದೆ. ನೀನು ಅವರಿಂದ ಆ ಎಲ್ಲಾ ಪ್ರೀತಿ ಮತ್ತು ಗಮನವನ್ನು ಎಳೆದುಕೊಂಡಿದ್ದಿ ಮತ್ತು ಪುನಃ ಚಾರ್ಜ್ ಮಾಡಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ಕೇವಲ ಅವರು ತಮ್ಮ ಬ್ಯಾಟರಿಗಳನ್ನು ಚಾರ್ಜ್ ಮಾಡುತ್ತಿದ್ದಾರೆಂಬುದನ್ನು ತಿಳಿ. ತಮ್ಮ ಪ್ರೀತಿಯನ್ನು ನಿಮಗೆ ತೋರಿಸುವಂತೆ ನೀವು ಯಾರಲ್ಲಾದರೂ ಬೇಡಿಕೆಯನ್ನಿಟ್ಟರೆ, ಅದು ಕೆಲಸ ಮಾಡುವುದಿಲ್ಲ. ತದ್ವಿರುದ್ಧವಾಗಿ, ಅದು ಕಡಿಮೆಯೇ ಆಗುತ್ತದೆ. ಆದುದರಿಂದ ಯಾವತ್ತೂ ಬೇಡಿಕೆಯನ್ನಿಡಬೇಡಿ ಮತ್ತು ಪ್ರಶ್ನಿಸಬೇಡಿ. "ನೀನು ನನ್ನನ್ನು ಯಾಕೆ ಪ್ರೀತಿಸುವುದಿಲ್ಲ?" - ಹೀಗೆ ಹೇಳಬೇಡಿ.
ನಿಜವಾಗಿ ನೀವು ಇನ್ನೊಂದು ರೀತಿಯಲ್ಲಿ ಹೇಳಬೇಕು,  "ನೀನು ನನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುತ್ತೀಯಾ? ನಾನು ಅದಕ್ಕೆ ಅರ್ಹನಲ್ಲ. ನೀನು ನನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುತ್ತೀಯಾ? ನೀನು ನನ್ನನ್ನು ತುಂಬಾ ಪ್ರೀತಿಸುತ್ತಿ, ನನಗಿನ್ನು ಇದನ್ನು ಸಹಿಸಲು ಸಾಧ್ಯವಿಲ್ಲ". ನೀವು ಅವರಿಗೆ ಇದನ್ನು ಹೇಳಿ ಮತ್ತು ಎಲ್ಲವೂ ಬದಲಾಗುವುದನ್ನು ನೋಡುತ್ತೀರಿ. ನಿಮಗೆ ಗೊತ್ತಿದೆಯಾ, ಒಬ್ಬರಿಗೆ, ತಮಗೆ ನಿಮ್ಮ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸುವುದು ಅಷ್ಟೊಂದು ಪ್ರಯಾಸವಾಗುತ್ತದೆ. ಯಾರಾದರೂ ನಿಮ್ಮೊಡನೆ ಅದೇ ರೀತಿ ಹೇಳುತ್ತಾರೆಂದಿಟ್ಟುಕೊಳ್ಳಿ, ’ನೀನು ನನ್ನನ್ನು ಪ್ರೀತಿಸುತ್ತೀಯೆಂದು ನನಗನ್ನಿಸುವುದಿಲ್ಲ, ಬಾ ನನಗೆ ತೋರಿಸು". ಆಗ ನೀವು ಯೋಚಿಸುತ್ತೀರಿ, "ಓ ದೇವರೇ, ನಾನು ಅವನನ್ನು ನಿಜವಾಗಿ ಪ್ರೀತಿಸುತ್ತೇನೆಂದು ಸಾಬೀತುಪಡಿಸುವುದು ಹೇಗೆ". ಅದು ಅಷ್ಟೊಂದು ಭಾರವಾದ ಹೊರೆಯಾಗುತ್ತದೆ ಮತ್ತು ಯಾರೂ ಅಂತಹ ಹೊರೆಯನ್ನು ಎಲ್ಲಾ ಸಮಯದಲ್ಲೂ ತಮ್ಮ ತಲೆಯ ಮೇಲೆ ಹೊತ್ತೊಯ್ಯಲು ಬಯಸುವುದಿಲ್ಲ. ಪ್ರತಿದಿನವೂ ನೀವು ಮನೆಗೆ ಬರುತ್ತೀರಿ ಮತ್ತು ನೀವು ನಿಮ್ಮ ಸಂಗಾತಿಯನ್ನು ನಿಜವಾಗಿ ಪ್ರೀತಿಸುತ್ತೀರೆಂದು ಸಾಬೀತುಪಡಿಸುತ್ತೀರಾ? ಇಲ್ಲ! ಅದು ಖಂಡಿತವಾಗಿಯೂ ಇದೆಯೆಂದು ತಿಳಿದುಕೊಂಡು ಮುಂದೆ ಸಾಗಿ. ತಮಗೆ ನಿಮ್ಮ ಮೇಲಿರುವ ಪ್ರೀತಿಯನ್ನು ತೋರಿಸಲು ಒಬ್ಬರನ್ನು ಜವಾಬ್ದಾರರನ್ನಾಗಿಸಲು ಪ್ರಯತ್ನಿಸಬೇಡಿ.
ಪ್ರಶ್ನೆ: ಬುದ್ಧನು ಆತ್ಮ ಸಾಕ್ಷಾತ್ಕಾರವನ್ನು ಹೊಂದುತ್ತಿದ್ದಂತೆ ಅವನು, ಇತರ ಗುರುಗಳು ಅನುಭವಿಸಿದುದನ್ನು ಅನುಭವಿಸಿರಬೇಕು. ಆದರೂ ಅವನು ದೇವರ ಬಗ್ಗೆ ಮಾತನಾಡಲಿಲ್ಲ. ಈ ಕಾರಣದಿಂದಾಗಿ ಕೆಲವು ಜನರು, ಅವನು ನಿರೀಶ್ವರವಾದಿಯಾಗಿದ್ದನು ಎಂದು ಕೂಡಾ ಹೇಳುತ್ತಾರೆ. ನೀವು ಇದರ ಬಗ್ಗೆ ಮಾತನಾಡುವಿರಾ?
ಶ್ರೀ ಶ್ರೀ ರವಿಶಂಕರ್: ಬುದ್ಧನ ಕಾಲದಲ್ಲಿ ದೇವರ ಬಗ್ಗೆ ಹಲವಾರು ಪರಿಕಲ್ಪನೆಗಳಿದ್ದವು.  ಹಲವಾರು ಜನರು ಎಲ್ಲಾ ಉಪನಿಷತ್ತುಗಳನ್ನು ಓದಿದ್ದರು. ಯೇಸುಕ್ರಿಸ್ತನ ಹಿಂಬಾಲಕರೆಲ್ಲಾ ಬೆಸ್ತರೂ, ಅಜ್ಞಾನಿಗಳೂ ಆಗಿದ್ದರು. ಇದಕ್ಕೆ ವಿರುದ್ಧವಾಗಿ, ಬುದ್ಧನ ಹಿಂಬಾಲಕರೆಲ್ಲಾ ಹೆಚ್ಚು ಬುದ್ಧಿಜೀವಿಗಳಾಗಿದ್ದರು ಎಂಬುದನ್ನು ನೀನು ನೆನಪಿಸಿಕೊಳ್ಳಬೇಕು. ಬುದ್ಧನ ಹಿಂಬಾಲಕರು ಚೆನ್ನಾಗಿ ಓದಿದ ಉನ್ನತ ಬುದ್ಧಿಜೀವಿಗಳಾಗಿದ್ದರು, ಆದುದರಿಂದ ಅವರೆಲ್ಲರೂ ದೇವರ ಬಗ್ಗೆ ತಿಳಿದಿದ್ದರು; ಅವರು ಬ್ರಹ್ಮನ ಬಗ್ಗೆ ತಿಳಿದಿದ್ದರು, ಅವರು ಆತ್ಮದ ಬಗ್ಗೆ ತಿಳಿದಿದ್ದರು, ಅವರು ಎಲ್ಲದರ ಬಗ್ಗೆಯೂ ತಿಳಿದಿದ್ದರು ಮತ್ತು ನೀವು ಮಾತನಾಡಲು ಹಾಗೂ ಚರ್ಚಿಸಲು ತೊಡಗುವಾಗ, ಅದು ಕೇವಲ ಆ ಹಂತದಲ್ಲೇ ಉಳಿಯುತ್ತದೆ.  
ಅಲ್ಲಿ ಹಲವಾರು ಪಂಥಗಳು ಇದ್ದುದರಿಂದ, ಅವನು ಯಾವುದಾದರೂ ಒಂದು ಪಂಥಕ್ಕೆ ಒಪ್ಪಿಗೆ ನೀಡಿದರೆ ಆಗ ಇತರ ಪಂಥಗಳು ಹೇಳಬಹುದು, "ಇಲ್ಲ, ಅದು ಆ ರೀತಿಯಲ್ಲ", ಮತ್ತು ನಂತರ ಅವರೆಲ್ಲರೂ ಅವನಿಂದ ದೂರ ಹೋಗುವರು. ಬುದ್ಧನು ತುಂಬಾ ಬುದ್ಧಿಶಾಲಿಯಾಗಿದ್ದನು, ಅವನಂದನು, "ನಾನು ಈ ಎಲ್ಲಾ ವಿಭಿನ್ನ ಪಂಥಗಳ ಬಗ್ಗೆ ಮಾತನಾಡುವುದಿಲ್ಲ. ಜನರೆಲ್ಲರೂ ಬಂದು, ನಿಜವಾಗಿ ಇದನ್ನು ಸವಿದು, ಸತ್ಯವನ್ನು ತಾವೇ ಕಂಡುಕೊಳ್ಳುವರು", ಯಾಕೆಂದರೆ ಅವರೆಲ್ಲರೂ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಓದಿದ್ದುದರಿಂದ ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆ ಕಾಲದಲ್ಲಿ ದೊಡ್ಡ ವಿಶ್ವವಿದ್ಯಾಲಯಗಳಿದ್ದವು, ಸಾವಿರಾರು ಜನರು ಓದುತ್ತಿದ್ದರು ಮತ್ತು ಅವರು ಎಲ್ಲಾ ವಿಭಿನ್ನ ಪಂಥಗಳನ್ನು, ಧರ್ಮಗ್ರಂಥಗಳನ್ನು, ವೈದ್ಯಕೀಯವನ್ನು ಮತ್ತು ಎಲ್ಲವನ್ನೂ ಓದಿದರು. ಆ ಸಮಯದಲ್ಲಿ ಭಾರತವು ಉತ್ತುಂಗದಲ್ಲಿತ್ತು.
ಆದುದರಿಂದ ಬುದ್ಧನು ಹೇಳಿದನು, "ನಾನು ಈ ವಾದದಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ನಾನು ಅವರಿಗೆ ಕೇವಲ ಒಂದು ಸುಲಭವಾದ ತಂತ್ರವನ್ನು ಕೊಡಲು ಬಯಸುತ್ತೇನೆ". ನಾವು ಮಾಡುವಂತೆ. ನಾವು ನಂಬುಗೆ ಪದ್ಧತಿಯ ಬಗ್ಗೆ, ಧರ್ಮ ಅಥವಾ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ನಾವು, "ಕೇವಲ ಸುದರ್ಶನ ಕ್ರಿಯೆ ಮಾಡಿ" ಎಂದು ಹೇಳುತ್ತೇವೆ ಮತ್ತು ಎಲ್ಲರೂ ಅದನ್ನು ಮಾಡುತ್ತಾರೆ - ಮುಸ್ಲಿಮರು, ಯಹೂದ್ಯರು, ಕ್ರಿಶ್ಚಿಯನ್ನರು, ಹಿಂದುಗಳು, ಬೌದ್ಧರು, ಎಲ್ಲರೂ ಅದನ್ನು ಮಾಡುತ್ತಾರೆ ಮತ್ತು ಟೊಳ್ಳು ಹಾಗೂ ಖಾಲಿಯಾಗುವುದರ ನಿಜವಾದ ಅನುಭವವನ್ನು ಅವರು ಪಡೆಯುತ್ತಾರೆ. ಅದಕ್ಕಾಗಿಯೇ ಬುದ್ಧನು ಹೇಳಿದುದು, "ಇಲ್ಲ, ನಾನು ದೇವರ ಬಗ್ಗೆ ಮಾತನಾಡುವುದಿಲ್ಲ". ಆ ಸಮಯದಲ್ಲಿ ಅದೇ ಸರಿಯಾಗಿತ್ತು.
ಆದರೆ ಯೇಸುವು ಭಿನ್ನನಾಗಿದ್ದನು. ಅವನ ಸಮಯದಲ್ಲಿ ಅಲ್ಲಿ, ಅವನು ಕಲಿಸುತ್ತಿದ್ದ ಹಳ್ಳಿಯಲ್ಲಿ ಕೇವಲ ಒಂದೇ ಒಂದು ಪಂಥ ಇತ್ತು ಮತ್ತು ಅವರೆಲ್ಲರೂ ದೇವರನ್ನು ನಂಬಿದ್ದರು. ಯಹೂದಿ ಎಂಬುದು ಇದ್ದ ಒಂದೇ ಪಂಥ ಆಗಿತ್ತು ಮತ್ತು ಅವರೆಲ್ಲರೂ ಆ ಒಂದೇ ಪುಸ್ತಕದ ಮೇಲೆ ಅವಲಂಬಿತರಾಗಿದ್ದರು. ಆದುದರಿಂದ ಅವನು ದೇವರು ಹೇಳಿದ ಮಾತುಗಳನ್ನೇ ಆಡಿದನು ಮತ್ತು ನಂತರ ಜ್ಞಾನವನ್ನು ನಿರಾಕರಿಸದೆಯೇ ಅವರನ್ನು ಜ್ಞಾನಕ್ಕೆ ಪರಿಚಯಿಸಿದನು. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ಅದಕ್ಕಿಂತ ಹೆಚ್ಚಾಗಿ, ಅವನ ಹಿಂಬಾಲಕರು ತುಂಬಾ ಸರಳವಾದ ಜನರಾಗಿದ್ದರು. ಅವರು ವಿವಿಧ ಧರ್ಮಗ್ರಂಥಗಳ ಆಳವಾದ ಅಧ್ಯಯನವನ್ನೂ ಸಹ ಮಾಡಿರಲಿಲ್ಲ. ಆದುದರಿಂದ ಅದು ಸುಲಭವಾಗಿತ್ತು, ಅವರೆಲ್ಲರೂ ದೇವರೆಂದರೆ ಪ್ರೇಮವೆಂಬ ಸರಳ ಸಂದೇಶಕ್ಕೆ ಮಾರುಹೋಗಿದ್ದರು ಮತ್ತು ಅವರು ಹಿಂಬಾಲಿಸಿದರು.
ಭಗವಾನ್ ಬುದ್ಧನು ತಾನು ಏನು ಮಾಡಬೇಕಾಗಿತ್ತೋ ಅದನ್ನೇ ಮಾಡಿದನು ಮತ್ತು ಅದು ಖಂಡಿತಾ ಸರಿಯಾಗಿತ್ತು. ಅದಕ್ಕಾಗಿಯೇ ಮುಂದೆ ಕೂಡಾ, ಆದಿ ಶಂಕರ ಮತ್ತು ಇತರ ಸಂತರು ಬಂದಾಗ, ಬುದ್ಧ ಹೇಳಿದುದಕ್ಕೂ ಉಪನಿಷತ್ತುಗಳು ಹೇಳುವುದಕ್ಕೂ ನಡುವೆ ನಿಜವಾಗಿ ಯಾವುದೇ   ವ್ಯತ್ಯಾಸವಿಲ್ಲವೆಂಬುದು ಅವರಿಗೆ ತಿಳಿಯಿತು. ಆದುದರಿಂದ ಭಾರತವು ಒಂದು ಬೌದ್ಧ ದೇಶವಾಗಲಿಲ್ಲ ಯಾಕೆಂದರೆ, ಬುದ್ಧನು ಹೇಳಿದುದೆಲ್ಲಾ ಮೊದಲೇ ಇತ್ತು.
ಬುದ್ಧನು ತಾನಾಗಿಯೇ ಒಂದು ಧರ್ಮವನ್ನು ಪ್ರಾರಂಭಿಸಲಿಲ್ಲ; ಅವನು ಒಬ್ಬ ಹಿಂದೂ ಸಂನ್ಯಾಸಿಯಾಗಿ ಜೀವಿಸಿದನು. ಅವನೊಬ್ಬ ಹಿಂದೂ ಸಂನ್ಯಾಸಿಯಾದನು ಮತ್ತು ಹಿಂದೂ ಸಂನ್ಯಾಸಿಯಾಗಿಯೇ ಸಾವನ್ನಪ್ಪಿದನು ಕೂಡಾ. ಆದರೆ ನಂತರ ಬೌದ್ಧ ಮತವು ಒಂದು ಬೇರೆ ಧರ್ಮವಾಯಿತು. ಅವನು ಹಿಂದೂ ಸನಾತನದ, ಪ್ರಾಚೀನ ಜೀವನ ಮಾರ್ಗದ ಕೇವಲ ಒಬ್ಬ ಸುಧಾರಕನಾಗಿದ್ದನು. ಅದು ಒಂದು ಧರ್ಮವೆಂದು ಕೂಡಾ ಕರೆಯಲ್ಪಡುತ್ತಿರಲಿಲ್ಲ ಆದರೆ ಕೇವಲ ಒಂದು ಜೀವನ ಮಾರ್ಗ. ಅವನು ಪ್ರಾಚೀನ ಜೀವನ ಮಾರ್ಗದ ಭಾಗವಾಗಿದ್ದನು ಮತ್ತು ನಂತರ ಭಾರತವನ್ನು ಬಿಟ್ಟಾಗ ಅದೊಂದು ಧರ್ಮವಾಯಿತು.
ಭಗವಾನ್ ಬುದ್ಧನ ಪ್ರಭಾವ ನಂತರ ಎಷ್ಟಿತ್ತೆಂದರೆ, ಜನರು ಎಲ್ಲಾ ಉಪನಿಷತ್ತುಗಳು ಮತ್ತು ಎಲ್ಲವನ್ನೂ ಮರೆಯಲು ಪ್ರಾರಂಭಿಸಿದರು. ನಂತರ, ಈ ಸಂಪ್ರದಾಯದಿಂದ ಆದಿ ಶಂಕರರು ಬಂದು ಯೋಗ ಮತ್ತು ವೇದಾಂತಗಳನ್ನು ಪುನಃ ಸ್ಥಾಪಿಸಿದರು. ಆದಿ ಶಂಕರರು ಕೇವಲ ಒಂದು ಬದಲಾವಣೆ ಹೇಳಿದರಷ್ಟೆ, ಎಲ್ಲವೂ ಆಗಿ ಹೋಯಿತು.
ಎಲ್ಲವೂ ಖಾಲಿಯೆಂದು ಬುದ್ಧನು ಹೇಳಿದನು. "ನಾನು ಧ್ಯಾನದಲ್ಲಿ ಆಳಕ್ಕೆ ಹೋದೆನು ಮತ್ತು ಹುಡುಕಿದೆನು, ಆದರೆ ನನಗೆ ಯಾವುದೇ ಆತ್ಮ ಅಥವಾ ಯಾವುದೇ ’ಅಹಂ’ ಸಿಗಲಿಲ್ಲ" - ಇದು ಅವನ ಕೊನೆಯ ವಾಕ್ಯವಾಗಿತ್ತು.
ಆದಿ ಶಂಕರರು ಇದನ್ನು ಒಂದು ಭಿನ್ನ ರೀತಿಯಲ್ಲಿ ಹೇಳಿದರು; ಆತ್ಮವನ್ನು ಒಂದು ವಸ್ತುವಾಗಿ ಅಥವಾ ಒಂದು ಪದಾರ್ಥವಾಗಿ ಉಲ್ಲೇಖಿಸುತ್ತಾ. ಹೀಗೆ ಆದಿ ಶಂಕರರು ಅದನ್ನು ತಿರುಗಿಸಿ ಹೇಳಿದರು, "ಯಾರಿಗೆ ಆತ್ಮವು ಸಿಗಲಿಲ್ಲ, ಅದುವೇ ಆತ್ಮ ಮತ್ತು ಈ ಆತ್ಮವು ಪೂರ್ತಿ ಸುಖವಾಗಿದೆ, ಅದು ಅಂತರಿಕ್ಷವಾಗಿದೆ". ನಂತರ ಅವರು ಈ ಸಂಪೂರ್ಣ ಜ್ಞಾನವನ್ನು, ಈ ತತ್ವಜ್ಞಾನವನ್ನು ಹಿಂದೆ ತಂದರು. ಅದುವರೆಗೂ, ಬೌದ್ಧ ಧರ್ಮದಲ್ಲಿ ಹೇಳಿದ್ದುದೆಲ್ಲವೂ ಒಂದೇ ರೀತಿಯಾಗಿತ್ತು - ನಾನು ಶರೀರವಲ್ಲ, ನಾನು ಮನಸ್ಸಲ್ಲ, ನಾನು ಇದಲ್ಲ, ನಾನು ಅದಲ್ಲ - ಮತ್ತು ನೀವು ಕೇಂದ್ರಕ್ಕೆ ಹೋಗುವಾಗ, ಬುದ್ಧನು ಅಂದನು, "ಅಲ್ಲಿ ಏನೂ ಇಲ್ಲ", ಹಾಗೂ ಆದಿ ಶಂಕರರು ಅಂದರು, "ಅಲ್ಲಿ ಎಲ್ಲವೂ ಇದೆ. ಇದು ಆತ್ಮ, ಇದು ಪ್ರಜ್ಞೆ ಮತ್ತು ಪ್ರಜ್ಞೆಯು ಒಂದು ಜಾಗದಲ್ಲಿದೆ ಹಾಗೂ ಎಲ್ಲಾ ಜಾಗಗಳಲ್ಲೂ ಇದೆ.
ಚಿಕ್ಕದಾಗಿ ಹೇಳುವುದಾದರೆ, ಯೇಸುಕ್ರಿಸ್ತನಂತೆ ಆದಿ ಶಂಕರರು ಕೂಡಾ ಕೇವಲ ೩೨ ವರ್ಷಗಳವರೆಗೆ ಜೀವಿಸಿದರು ಮತ್ತು ಆ ೩೨ ವರ್ಷಗಳಲ್ಲಿ ಅವರು ಈಗಿರುವ ಭಾರತದ ಉದ್ದಗಲಗಳಲ್ಲಿ ಹಲವಾರು ಸಾರಿ ಸಂಚರಿಸಿದರು. ಆ ದಿನಗಳಲ್ಲಿ ಯಾವುದೇ ವಾಹನಗಳಿರಲಿಲ್ಲ, ಸೆಲ್ ಫೋನುಗಳಿರಲಿಲ್ಲ, ಏನೂ ಇರಲಿಲ್ಲ. ಆದಿ ಶಂಕರರು ಯಾವುದೇ ದಿಕ್ಕಿನಲ್ಲಿ ಸಂಚರಿಸಿದರೂ ಅಲ್ಲಿ ಜಯ, ಆಚರಣೆ ಇರುತ್ತಿದ್ದುವು ಎಂದು ಹೇಳಲಾಗುತ್ತದೆ. ಯಾಕೆಂದರೆ ಬುದ್ಧನ ನಂತರ, ೫೦೦ ವರ್ಷಗಳ ಬಳಿಕ ಜನರು ತುಂಬಾ ನಿರಾಶಾವಾದಿಗಳಾದರು. ಜನರು ಜೀವನದಲ್ಲಿ ಯಾವುದರಲ್ಲೂ ಆಸಕ್ತಿ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಅವರನ್ನುತ್ತಿದ್ದರು, "ಜೀವನವು ಹೇಗಿದ್ದರೂ ದುಃಖಕರ, ಜೀವನವು ತೊಳಲಾಟ, ಆದುದರಿಂದ ನಾವೇನನ್ನೂ ಮಾಡಬೇಕಾಗಿಲ್ಲ". ಆದುದರಿಂದ, ಅಲ್ಲಿ ಸೈನ್ಯವಿರಲಿಲ್ಲ, ರಾಜರೆಲ್ಲಾ ನಿರುತ್ಸಾಹಿತರಾಗಿದ್ದರು, ಆಚರಣೆಯ ಅಂಶವು ಸುಮ್ಮನೇ ಮಾಯವಾಗಿತ್ತು. ಜನರು ಕೇವಲ ಅನಿತ್ಯದ ಬಗ್ಗೆ - ಅಂದರೆ ಎಲ್ಲವೂ ನಶ್ವರ ಆದುದರಿಂದ ಕೇವಲ ಟೊಳ್ಳು ಮತ್ತು ಖಾಲಿಯಾಗುವುದರ ಬಗ್ಗೆ ಮಾತನಾಡುತ್ತಿದ್ದರು. ಉದ್ದಕ್ಕೂ ಹೇಳಲಾಗುತ್ತಿದ್ದ  ಘೋಷಣೆ ಇದೊಂದೇ ಆಗಿತ್ತು. ಆದರೆ ಆದಿಶಂಕರರು ಹೇಳಿದರು, "ಹೇ, ಅದು ನಶ್ವರ ಆದರೆ ಶಾಶ್ವತವಾದುದೂ ಏನೋ ಇದೆ, ಆದುದರಿಂದ ಎಲ್ಲರೂ ಆಚರಿಸೋಣ, ಹಾಡೋಣ, ಕುಣಿಯೋಣ". ನಂತರ ಅವರು ಭಜ ಗೋವಿಂದಂನ್ನು ಶುರು ಮಾಡಿದರು ಮತ್ತು ನಂತರ ಹಾಡು, ನೃತ್ಯ, ಸಂಸ್ಕೃತಿ, ಈ ಎಲ್ಲಾ ವಿಷಯಗಳು ಆದಿ ಶಂಕರರಿಂದ ಮರು ಪರಿಚಯಿಸಲ್ಪಟ್ಟಿತು.
ಪ್ರಶ್ನೆ: ನನ್ನ ಕೋಪ ಮತ್ತು ಅಜ್ಞಾನದೊಂದಿಗೆ ನಾನು ನನ್ನ ಮೇಲೆ ಕಾಳಜಿಯಿರುವ ಮತ್ತು ಪ್ರೀತಿಯ ಪತ್ನಿಯನ್ನು ಹಾಗೂ ನನ್ನ ಮಗಂದಿರನ್ನು ಹಿಂಸಿಸಿದೆ. ಈಗ ನನಗೆ ಮನವರಿಕೆಯಾಗಿದೆ. ನಾನು, ಅವರ ಹೃದಯವು ಸಂತೋಷಗೊಳ್ಳುವಂತೆ ಮಾಡುವುದು ಹೇಗೆ? ನಾನು ಯಾವತ್ತೂ ತಪ್ಪಿತಸ್ಥ ಮನೋಭಾವ ಹೊಂದಿರುತ್ತೇನೆ.
ಶ್ರೀ ಶ್ರೀ ರವಿಶಂಕರ್: ಕೇವಲ ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ಮಾಡು ಮತ್ತು ನಿರಾಳವಾಗಿರು. ಸರಿಯಾ.
ಪ್ರಶ್ನೆ: ಹಲವು ವರ್ಷಗಳ ಮೊದಲು ನನ್ನ ಉಪನಯನವಾಯಿತು, ಆದರೆ ನನಗೆ ಆ ಸಮಾರಂಭದ, ಆ ನೂಲಿನ ಮತ್ತು ಸಂಧ್ಯಾವಂದನೆಯ ಮಹತ್ವ ಅರ್ಥವಾಗಿಲ್ಲ. ನೀವು ದಯವಿಟ್ಟು ವಿವರಿಸುವಿರಾ? ಕ್ರಿಯೆ ಸಾಲದೇ, ಸಂಧ್ಯಾವಂದನೆ ಯಾಕೆ?
ಶ್ರೀ ಶ್ರೀ ರವಿಶಂಕರ್: ಹೌದು, ನೀನು ಕ್ರಿಯೆ ಮಾಡು, ಅದು ಸಾಕು ಮತ್ತು ನಂತರ, ನಿನ್ನನ್ನು ತೊಡಗಿಸಲಾಗಿದ್ದರೆ, ಗಾಯತ್ರಿ ಜಪ ಮಾಡು.
ಗಾಯತ್ರಿ ಜಪದ ಅರ್ಥವೇನೆಂದರೆ - ನನ್ನ ಬುಧ್ಹಿಯು ದೈವದಿಂದ ಸ್ಪೂರ್ತಿಗೊಳ್ಳಲಿ. ವಿಶಾಲವಾದ ದೈವಿಕತೆಯು ತನ್ನನ್ನು ತಾನೇ ಜೀವನದಲ್ಲಿ ಸಂಪೂರ್ಣವಾಗಿ ಪ್ರಕಟಪಡಿಸುವುದನ್ನು ತಡೆಯುವುದು ನಮ್ಮ ಬುದ್ಧಿ. ಆದುದರಿಂದ ಪ್ರಾರ್ಥನೆಯು ಹೀಗಿದೆ, "ದೈವವು ನನ್ನ ಬುದ್ಧಿಗೆ ಸ್ಪೂರ್ತಿ ನೀಡಲಿ. ನನ್ನ ಜೀವನದಲ್ಲಿ ಮತ್ತು ನನ್ನ ಬುದ್ಧಿಯಲ್ಲಿ ಸರ್ವೋಚ್ಛ ಶಕ್ತಿಯು ಪ್ರಕಟಗೊಳ್ಳಲಿ".
ಉಪನಯನದಲ್ಲಿ, ಅವರು ಸಾಧಾರಣವಾಗಿ ನಿಮ್ಮ ಮೇಲೆ ಒಂದು ನೂಲು ಹಾಕುತ್ತಾರೆ ಮತ್ತು ನೂಲು ಇರುವುದು, ನಿಮಗೆ ಜ್ಞಾನದ ಕಡೆಗೆ, ನಿಮ್ಮ ಹೆತ್ತವರ ಕಡೆಗೆ ಮತ್ತು ಸಮಾಜದ ಕಡೆಗೆ ಒಂದು ಜವಾಬ್ದಾರಿಯಿದೆಯೆಂಬುದನ್ನು ಸೂಚಿಸಲು. ಆದುದರಿಂದ ಅದು, ಜವಾಬ್ದಾರಿಗಳನ್ನು ನಿಮ್ಮ ಹೆಗಲುಗಳ ಮೇಲೆ ಕೊಂಡೊಯ್ಯುವುದನ್ನು ಸೂಚಿಸುತ್ತದೆ. ಒಬ್ಬ ಎಳೆಯ ಹುಡುಗನು ವಿದ್ಯಾಭ್ಯಾಸಕ್ಕೆ ಹೋಗುವ ಮೊದಲು, ಅವರು ಅವನಿಗೆ, "ನಿನಗೆ ಜವಾಬ್ದಾರಿಯಿದೆ" ಎಂಬುದನ್ನು ತಿಳಿಯುವಂತೆ ಮಾಡುತ್ತಾರೆ ಮತ್ತು ನಂತರ ಬಾಲಕನು ವಿದ್ಯಾಭ್ಯಾಸ ಮಾಡುತ್ತಾನೆ ಹಾಗೂ ತಿರುಗಿ ಬರುತ್ತಾನೆ.
ನೀವು ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಮಾಡಿ ಮುಗಿಸಿದಾಗ, ಸಂನ್ಯಾಸದಲ್ಲಿ; ಆಗ ಅವರು ನೂಲನ್ನು ತೆಗೆದು ಬಿಸಾಡುತ್ತಾರೆ.
ನೀವು ಏಕಾಂತವಾಸಿಯಾಗಿದ್ದರೆ, ಆಗ ನಿಮಗೆ ನೂಲು ಇರುವುದಿಲ್ಲ. ಇದು ಒಂದು ದೀರ್ಘ ಕಾಲದಿಂದ ನಡೆದು ಬರುತ್ತಿರುವಂತಹ ಒಂದು ಪದ್ಧತಿ.
ಪ್ರಶ್ನೆ: ಗುರೂಜಿ, ಸ್ಟ್ರಿಂಗ್ ಸಿದ್ಧಾಂತವು ಸಮಾನಾಂತರ ವಿಶ್ವಗಳ ಬಗ್ಗೆ ಮಾತನಾಡುತ್ತದೆ. ನೀವು ಇದರ ಬಗ್ಗೆ ಏನಾದರೂ ಹೇಳುವಿರಾ?
ಶ್ರೀ ಶ್ರೀ ರವಿಶಂಕರ್: ಹೌದು, ಸಮಾನಾಂತರ ವಿಶ್ವಗಳ ಬಗ್ಗೆ ಮಾತನಾಡಲಾಗಿದೆ. ೧೪ ಪ್ರಪಂಚಗಳಿವೆ ಮತ್ತು ಅವುಗಳು ಸಮಾನಾಂತರದಲ್ಲಿವೆ, ಒಂದರೊಳಗೆ ಇನ್ನೊಂದು. ಇಲ್ಲಿಯೇ ಹಲವಾರು ಪ್ರಪಂಚಗಳಿರಬಹುದು.
ಪಿತೃ ಲೋಕವಿರುವುದು ಬೇರೆಲ್ಲೋ ಅಲ್ಲ, ಇಲ್ಲಿಯೇ ಇರುವುದು. ಅದಕ್ಕಾಗಿಯೇ ನಮ್ಮ ಇಂದ್ರಿಯಗಳು ಕೇವಲ ಕೆಲವೇ ವಿಷಯಗಳನ್ನು ವಿಶ್ಲೇಷಿಸುವುದು - ತನ್ಮಾತ್ರಗಳು. ನಮ್ಮ ಇಂದ್ರಿಯಗಳಲ್ಲಿ ಎಲ್ಲಾ ಪಂಚಭೂತಗಳೂ ಸ್ವಲ್ಪ ಪ್ರಮಾಣದಲ್ಲಿ ಇವೆ ಮತ್ತು ಅವುಗಳ ಇರುವಿಕೆಯಿಂದಾಗಿ ನಮಗೆ ಇದನ್ನು ನೋಡಲು ಹಾಗೂ ಅನುಭವಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಮ್ಮ ಬೆಳಕಿನ ತನ್ಮಾತ್ರವು ಒಂದು ಗೂಬೆಯ ತನ್ಮಾತ್ರಕ್ಕಿಂತ ವ್ಯತ್ಯಸ್ತವಾಗಿದೆ. ಆದುದರಿಂದ, ಹೊರಗೆ ತುಂಬಾ ಕತ್ತಲಿದ್ದರೆ, ನಿಮಗೆ ಕಾಣಲು ಸಾಧ್ಯವಿಲ್ಲ, ಆದರೆ ಒಂದು ಗೂಬೆಗೆ ಕಾಣಲು ಸಾಧ್ಯವಿದೆ. ಬಾವಲಿಗಳ ತನ್ಮಾತ್ರಗಳು ಇನ್ನೂ ವ್ಯತ್ಯಸ್ತವಾಗಿವೆ. ನಿಮಗೆ ಯಾವುದನ್ನೂ ಕಾಣಲು ಸಾಧ್ಯವಿಲ್ಲದಿರುವಾಗ, ಬಾವಲಿಗಳಿಗೆ ಕಾಣಲು ಸಾಧ್ಯವಿದೆ. ಅದರ ಗ್ರಹಿಸುವ ಸಾಮರ್ಥ್ಯವು ವ್ಯತ್ಯಸ್ತವಾಗಿದೆ. ಎಲ್ಲವೂ ಕತ್ತಲಾಗಿರುವಾಗ, ನಿಮ್ಮ ಕೋಣೆಯಲ್ಲಿ ಆಚೀಚೆ ಓಡಾಡಲು ನಿಮಗೆ ಟೋರ್ಚಿನ ಅಗತ್ಯವಿದೆ, ಆದರೆ ಒಂದು ಬೆಕ್ಕಿಗೆ ಅದರ ಅಗತ್ಯವಿಲ್ಲ, ಅದು ಅದರ ದಾರಿಯನ್ನು ಕಂಡುಕೊಳ್ಳುತ್ತದೆ. ಆದುದರಿಂದ, ನಮ್ಮ ಎಲ್ಲಾ ಐದು ಇಂದ್ರಿಯಗಳ ಗ್ರಹಿಕೆಗಳು ತನ್ಮಾತ್ರ ಎಂದು ಕರೆಯಲ್ಪಡುವ ಒಂದರ ಮೇಲೆ, ನಮ್ಮ ಫ್ರೀಕ್ವೆನ್ಸಿಯ ಮೇಲೆ ಆಧರಿಸಿದೆ. ನಾವು ಒಂದು ನಿರ್ದಿಷ್ಟ ಫ್ರೀಕ್ವೆನ್ಸಿಗೆ ಟ್ಯೂನ್ ಮಾಡಲ್ಪಟ್ಟಿದ್ದೇವೆ, ಆದರೆ ವಿಶ್ವವು ಅನಂತ ಫ್ರೀಕ್ವೆನ್ಸಿಗಳನ್ನು ಹೊಂದಿದೆ.
ಪ್ರಶ್ನೆ: ನಾನು ಈಗಷ್ಟೇ, ನಾನಿರುವ ಮಾನಸಿಕ ಅವಸ್ಥೆಗಾಗಿ ಒಂದು ಹೊಸ ನಿರೋಧಕ ಔಷಧಿಯನ್ನು ಪ್ರಾರಂಭಿಸಿದ್ದೇನೆ.ನಾನು ನಿಮ್ಮಿಂದ ಸ್ಫೂರ್ತಿ ಅಥವಾ ಭರವಸೆ ತುಂಬಿದ ಯಾವುದಾದರೂ ಸಂದೇಶವನ್ನು ಕೇಳಲು ಬಯಸುತ್ತೇನೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಾನು ನಿಮ್ಮ ಭಾಗವಾಗಿರುವುದಾಗಿ ಅನುಭವಿಸುತ್ತೇನೆ, ಆದರೆ ಈ ಹೊತ್ತಿನಲ್ಲಿ ನಾನು ಸೋತುಹೋದವನೆಂದು ಅನ್ನಿಸುತ್ತಿದೆ ಹಾಗೂ ನಾನು ನನ್ನ ಪ್ರತಿಭೆಗಳನ್ನು ಪುನಃ ಪಡೆಯಲಾರೆನೆಂದು ಚಿಂತೆಯಾಗುತ್ತಿದೆ. ನಾನು ಹೋರಾಡುತ್ತಿರುತ್ತೇನೆ, ಆದರೆ ನಿಮ್ಮಿಂದ ಕೆಲವು ಮಾತುಗಳು ತುಂಬಾ ಸಹಾಯಕವಾಗಬಹುದು.
ಶ್ರೀ ಶ್ರೀ ರವಿಶಂಕರ್: ಇಲ್ಲ, ಹೋರಾಡಬೇಡ. ಶರೀರಕ್ಕೆ ಔಷಧಿಗಳ ಅಗತ್ಯವಿದೆ, ಸುಮ್ಮನೇ ಅವುಗಳನ್ನು ತೆಗೆದುಕೋ, ನಿರಾಳವಾಗಿರು ಮತ್ತು ಸಂತೋಷವಾಗಿರು. ನೀನು ಆಧ್ಯಾತ್ಮದೊಳಕ್ಕೆ ಒಂದು ಹೆಜ್ಜೆ ಇಟ್ಟಿದ್ದರೆ, ನೀನು ನೆನಪಿನಲ್ಲಿಟ್ಟುಕೊಳ್ಳಬೇಕಾದುದೆಂದರೆ - ಯಾವುದೇ ಅವಸ್ಥೆಯಲ್ಲೂ ನನ್ನಲ್ಲಿ ಸಂತೋಷವಿರಲಿ. ನಾನೆಲ್ಲೇ ಇದ್ದರೂ, ನಾನು ಹೇಗೇ ಇದ್ದರೂ, ನಾನು ಸಂತೋಷವಾಗಿರಲು ಬಯಸುತ್ತೇನೆ. ನಾನು ಸಂತೋಷವಾಗಿರುತ್ತೇನೆ, ನಾನು ನಗುನಗುತ್ತಾ ಇರುತ್ತೇನೆ ಮತ್ತು ನಾನು ಒಂದು ಕಷ್ಟಕಾಲದ ಮೂಲಕ ಹಾದು ಹೋಗಬೇಕಾಗಿ ಬಂದರೂ ಸಹ, ನಾನು ಒಂದು ನಗುವಿನೊಂದಿಗೆ ಅದರ ಮೂಲಕ ಹಾದು ಹೋಗುತ್ತೇನೆ - ಈ ಒಂದು ಯೋಚನೆ, ಈ ಒಂದು ನಿರ್ಧಾರ ನಿಮ್ಮಲ್ಲಿರಬೇಕು.