ಬುಧವಾರ, ಮೇ 9, 2012

ಅಶಾ೦ತರಾಗುವುದಾಗಲೀ, ಅನ್ಯರನ್ನು ಅಶಾ೦ತರನ್ನಾಗಿಸುವುದಾಗಲೀ ಬದುಕಿನ ಉದ್ದೇಶವಲ್ಲ


09
2012............................... ಮಾಂಟ್ರಿಯಲ್, ಕೆನಡ 
May

ಜೀವನದಲ್ಲಿ ಎರಡು ಸಂದರ್ಭಗಳಿವೆ: ಒಂದು ನೀವು ಸುಖವಾಗಿ, ಸಂತೋಷವಾಗಿ ಇರುವಾಗ. ಇನ್ನೊಂದು ಸಂದರ್ಭವೆಂದರೆ ನೀವು ಕಂಗೆಡುವಾಗ ಮತ್ತು ದುಃಖದಲ್ಲಿರುವಾಗ. ಈ ಸುಖ ಮತ್ತು ಸಂತೋಷಗಳನ್ನು ಹಾಗೇ ಉಳಿಸಿಕೊಳ್ಳಬೇಕಾದರೆ ಬೇಕಾಗಿರುವುದೆಂದರೆ ಸೇವೆ ಮಾಡುವ ಮನಸ್ಸು. ನಾವು ಸಂತೋಷವಾಗಿರುವಾಗ ಸೇವೆ ಮಾಡುವುದಿಲ್ಲ. ಸಾಧಾರಣವಾಗಿ ಮನಸ್ಸು ಆ ದಿಕ್ಕಿನಲ್ಲಿ ಹೋಗುವುದಿಲ್ಲ. ನೀವು ಸಂತೋಷವಾಗಿರುವಾಗ ನೀವು ಕೇವಲ ಮೋಜು ಮಾಡಲು ಬಯಸುತ್ತೀರಿ ಮತ್ತು ಕಾಳಜಿ ವಹಿಸುವುದು, ಹಂಚುವುದು ಅಥವಾ ಸೇವೆಯ ಬಗ್ಗೆ ಆ ಸಮಯದಲ್ಲಿ ಯೋಚಿಸುವುದಿಲ್ಲ. ಆಗಲೇ ಅದರ ಅಗತ್ಯ ಹೆಚ್ಚಿರುವುದು. ನೀವು ಸಂತೋಷವಾಗಿರುವಾಗ ಸೇವೆ ಮಾಡಿದರೆ, ಆಗ ಸಂತೋಷವು ಉಳಿಯುತ್ತದೆ. ನಾವು ಕೇಳಿಕೊಳ್ಳಬೇಕಾಗಿರುವುದು ಏನೆಂದರೆ, ನಾವು ಸಂತೋಷವಾಗಿರುವಾಗ ಸೇವೆ ಮಾಡುವ ಮನಸ್ಸು ಹಾಗೂ ದುಃಖದಲ್ಲಿರುವಾಗ ತ್ಯಾಗ ಮಾಡುವ ಮತ್ತು ಅಂತರ್ಮುಖವಾಗಿ ತಿರುಗುವ ಸಾಮರ್ಥ್ಯ. ನಾವು ಇದನ್ನು ಕೇಳಿಕೊಳ್ಳಬೇಕು, "ನಾನು ದುಃಖದಲ್ಲಿರುವಾಗ, ಹೋಗಲು ಬಿಡುವ ಮತ್ತು ಅಂತರ್ಮುಖವಾಗಿ ತಿರುಗುವ ಸಾಮರ್ಥ್ಯವನ್ನು ನನಗೆ ನೀಡಿ". ನಾವು ಇಲ್ಲಿರುವಾಗಲೇ, ಪ್ರಪಂಚದಲ್ಲಿದ್ದುಕೊಂಡೇ, ಅದನ್ನು ಸವಿಯುತ್ತಿರುವಾಗಲೇ ಅದನ್ನು ಹೋಗಲು ಬಿಡಲು ಕಲಿಯುವುದು ವಿವೇಕ.
ಒಮ್ಮೆ ಒಂದು ಸತ್ಸಂಗದಲ್ಲಿ ಒಬ್ಬರು ವಯಸ್ಸಾದ ಹೆಂಗಸು ಒಂದು ಪ್ರಶ್ನೆಯನ್ನು ಕೇಳಿದರು, "ದೇವರು ಯಾಕೆ ಈ ಪ್ರಪಂಚವನ್ನು ಇಷ್ಟೊಂದು ದುಃಖಮಯವಾಗಿ ಮಾಡಿದನು?" ಉತ್ತರವು  ಈ ರೀತಿಯಿತ್ತು, "ಹೌದು, ಅವನು ಅದನ್ನು ನಿನಗೆ ಆ ರೀತಿ ಮಾಡಿದ್ದಾನೆ. ಅದು ಅಷ್ಟು ದುಃಖಮಯವಾಗಿರುವಾಗಲೂ ನೀವು ಅದನ್ನು ಬಿಡುವುದಿಲ್ಲ ಮತ್ತು ದೇವರ ಕಡೆಗೆ ತಿರುಗುವುದಿಲ್ಲ. ಇಲ್ಲದಿದ್ದರೆ ನೀವು ಅಂತರ್ಮುಖವಾಗಿ ತಿರುಗುವುದೇ ಇಲ್ಲ".
ಪ್ರಶ್ನೆ: ಪ್ರೀತಿಯ ಗುರೂಜಿ, ಶಿವ ಲಿಂಗದ ಅರ್ಥವೇನು?
ಶ್ರೀ ಶ್ರೀ ರವಿಶಂಕರ್:
ಲಿಂಗ ಎಂದರೆ  ಯಾವುದರ ಮೂಲಕ, ಸತ್ಯವೇನು, ವಾಸ್ತವವೇನು ಎಂಬುದನ್ನು ನೀವು ಗುರುತಿಸಲು ಸಾಧ್ಯವೋ ಅಂತಹ ಒಂದು ಗುರುತು, ಒಂದು ಚಿಹ್ನೆ. ಯಾವುದು ಕಾಣಿಸುವುದಿಲ್ಲವೋ ಆದರೂ ಒಂದು ವಸ್ತುವಿನಿಂದ ಗುರುತಿಸಲ್ಪಡುವುದೋ, ಆ ವಸ್ತುವೇ ಲಿಂಗ. ಒಂದು ಮಗುವು ಹುಟ್ಟಿದಾಗ, ಆ ಮಗುವು ಗಂಡೋ ಅಥವಾ ಹೆಣ್ಣೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಶರೀರದ ಕೇವಲ ಒಂದು ಭಾಗದ ಮೂಲಕ ಮಾತ್ರ ನಿಮಗೆ ಆ ಮಗುವು ಗಂಡೋ ಅಥವಾ ಹೆಣ್ಣೋ ಎಂದು ಗುರುತಿಸಲು ಸಾಧ್ಯ. ಇಲ್ಲದಿದ್ದರೆ ಮಕ್ಕಳು ಒಂದು ನಿರ್ದಿಷ್ಟ ವಯಸ್ಸಿನ ವರೆಗೆ ಒಂದೇ ರೀತಿ ಕಾಣಿಸುತ್ತಾರೆ. ಆದರೆ ಭವಿಷ್ಯವೇನೆಂಬುದನ್ನು ನಿಮಗೆ ಒಂದು ಅಂಗವು ಹೇಳುತ್ತದೆ ಮತ್ತು ಈ ಕಾರಣಕ್ಕಾಗಿಯೇ ಜನನಾಂಗವು ಲಿಂಗ ಎಂದು ಕೂಡಾ ಕರೆಯಲ್ಪಡುತ್ತದೆ. ಇದು ಲಿಂಗದ ಅಕ್ಷರಶಃ ಅರ್ಥ. ಆದುದರಿಂದ ಶಿವ ಲಿಂಗವೆಂದರೆ, ದೈವಿಕತೆಯು ಇನ್ನೂ ವ್ಯಕ್ತವಾಗಿಲ್ಲ. ದೈವವು ನಿಜವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲದುದು; ವ್ಯಕ್ತಪಡಿಸುವಿಕೆಗಿಂತಲೂ ಆಚಿನದು; ಯಾವುದು ಇನ್ನೂ ವ್ಯಕ್ತವಾಗಿಲ್ಲವೋ ಅದನ್ನು ಗುರುತಿಸುವುದು. ಒಂದು ಚಿಹ್ನೆಯೊಂದಿಗೆ ಆಚೆಯಿರುವ ಏನೋ ಒಂದರ ಬಗ್ಗೆ ತಿಳಿಯುವುದು.
ಈ ಪ್ರಾಚೀನ ಭಾಷೆಯು ತುಂಬಾ ಬಲಶಾಲಿಯಾದುದು. ಎಲ್ಲಾದರೂ ಕೇವಲ ಒಂದು ಕಲ್ಲನ್ನಿಡಿ ಮತ್ತು ಅದು ಲಿಂಗವಾಗುತ್ತದೆ. ಅದರರ್ಥ, ಯಾವುದು ಇನ್ನೂ ವ್ಯಕ್ತವಾಗಿಲ್ಲವೋ ಕಲ್ಲಿನ ಮೂಲಕ ಅದನ್ನು ನಾನು ಯೋಚಿಸುತ್ತಿದ್ದೇನೆ.
ಪ್ರಶ್ನೆ: ಜೀವನವನ್ನು ಬ್ರಹ್ಮಚಾರಿಯಾಗಿ ಜೀವಿಸುವುದು ನಡುಮಾರ್ಗವೇ? ಹೆಣ್ಣು-ಗಂಡು ತತ್ವವಿಲ್ಲದೇ, ನಾವು ದೇವರ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನೋಡಿ, ನೀವು ಹೆಣ್ಣು ಮತ್ತು ಗಂಡು ಎರಡರಿಂದಲೂ ಮಾಡಲ್ಪಟ್ಟಿದ್ದೀರಿ. ಎರಡೂ ಮಗ್ಗುಲುಗಳು ನಿಮ್ಮಲ್ಲಿವೆ. ಈಗ, ಬ್ರಹ್ಮಚರ್ಯವು ಒಂದೇ ಮಾರ್ಗವಲ್ಲ. ಅದೊಂದು ಅಭ್ಯಾಸವಲ್ಲ. ಬ್ರಹ್ಮಚರ್ಯವೆಂದರೆ ನೀವು ಶರೀರವಲ್ಲ ಎಂಬುದು ನಿಮಗೆ ತಿಳಿದಾಗ ಆಗುವುದು. ಲಿಂಗಗಳು; ಗಂಡು ಮತ್ತು ಹೆಣ್ಣು ಎಂದಿರುವುದು ಕೇವಲ ಶರೀರಕ್ಕೆ ಮಾತ್ರ, ಅದು ಆತ್ಮಕ್ಕಲ್ಲ. ಆತ್ಮವು ಅದರಾಚಿನದು.
ಈಗ, ಈ ಪ್ರಜ್ಞೆಯು ಆಚಿನದು ಎಂಬುದು ನಿಮಗೆ ತಿಳಿದಾಗ, ನೀವು ಶಾರೀರಿಕ ಸುಖದಾಚೆಗೆ ಹೋಗುತ್ತೀರಿ. ಒಂದು ಬೆಕ್ಕಾಗಿ, ನಾಯಿಯಾಗಿ, ಕುದುರೆಯಾಗಿ, ಯಾವುದಾದರೂ ಪ್ರಾಣಿಯಾಗಿ ಹಾಗೂ ಮನುಷ್ಯರಾಗಿ ಕೂಡಾ ಹಲವಾರು ಜನ್ಮಗಳಲ್ಲಿ ಗಂಡು ಮತ್ತು ಹೆಣ್ಣನ್ನು ತಿಳಿಯಲು ನಾವು ಪ್ರಯತ್ನಿಸುತ್ತಾ ಬಂದಿದ್ದೇವೆ. ನೀವು ಕೇವಲ ಅದನ್ನು ತಿಳಿಯಲು ಬಯಸುವುದಾದರೆ, ಅದನ್ನು ತಿಳಿಯುತ್ತಾ ಇರಿ. ಎಷ್ಟು ಸಮಯದ ವರೆಗೆ ನೀವು ಅದನ್ನು ತಿಳಿಯಲು ಬಯಸುವಿರಿ? ಯಾವುದಾದರೂ ಒಂದು ಸಮಯದಲ್ಲಿ ನೀವು ಹೇಳುವಿರಿ, " ಸಾಕಪ್ಪಾ ಸಾಕು. ನಾನು ಕೇವಲ ಅಂತರ್ಮುಖವಾಗಿ ಹೋಗಲು ಬಯಸುತ್ತೇನೆ". ಆಗಲೇ ಮನಸ್ಸು ಅಂತರ್ಮುಖವಾಗಿ ತಿರುಗುವುದು.
ಆದುದರಿಂದ ನೀವು ಎಲ್ಲವನ್ನೂ ನಿರಾಕರಿಸುತ್ತಾ ಹೋಗಬಾರದು; ಆದರೆ ನಿಮ್ಮಲ್ಲಿನ ಶಕ್ತಿಯು ಮೇಲಕ್ಕೇರುವಾಗ, ಆತಂಕರಹಿತವಾದ ಮತ್ತು ಭಾವಾವೇಶ ರಹಿತವಾದ ಒಂದು ಆನಂದವನ್ನು ನೀವು ಬಯಸುತ್ತೀರಿ. ಅದುವೇ ಇದು.
ಅದಕ್ಕೇ ಹೇಳಿರುವುದು, ಒಂದು ಕ್ಷಣದ ಸಮಾಧಿಯು ೧೦೦೦ ಘಟಕಗಳಷ್ಟು ಸಂಭೋಗಕ್ಕೆ ಸರಿಸಮಾನವಾದುದು. ಒಂದು ಅಂಶ ಸಂಭೋಗದಲ್ಲಿ ನಿಮಗೆ ಎಷ್ಟು ಸಂತೋಷ ಸಿಗುತ್ತದೋ, ಅಂತಹ ಸಾವಿರ ಅಂಶಗಳಷ್ಟು ಸಂಭೋಗವೆಂದರೆ ಒಂದು ಸಮಾಧಿ ಮತ್ತು ಒಂದು ಕ್ಷಣದ ಸಮಾಧಿಯು ಬಿಲಿಯನ್ ವರ್ಷಗಳಷ್ಟು ವಿಶ್ರಾಂತಿಗೆ ಸರಿಸಮಾನವಾದುದು. ಆದುದರಿಂದ, ನಿಮಗೆ ಅದು ಬೇಕಾ? ಹಾಗಾದರೆ ನೀವು ಈ ಸಾಮಾನ್ಯ ವಿಷಯಗಳಾಚೆಗೆ ಹೋಗಬೇಕು. ನೋಡಿ, ಏನನ್ನಾದರೂ ಪಡೆಯಬೇಕಾದರೆ ನೀವು ಏನನ್ನಾದರೂ ಬಿಡಬೇಕು. ನೀವು ನಿಜವಾಗಿ ಒಂದು ಒಳ್ಳೆಯ ಊಟವನ್ನು ಸವಿಯಬೇಕಾದರೆ, ನೀವು ದಿನವಿಡೀ ಕುರುಕಲು ಆಹಾರ ತಿನ್ನುವುದನ್ನು ಬಿಡಬೇಕು. ನೀವು ಬೆಳಗ್ಗಿನಿಂದ ಆಲೂಗಡ್ಡೆ ಚಿಪ್ಸ್ ತಿಂದು ಹೊಟ್ಟೆ ತುಂಬಿಸುತ್ತಾ ಇದ್ದರೆ, ನಿಮಗೆ ನಿಮ್ಮ ಊಟವನ್ನು ಆಸ್ವಾದಿಸಲು ಸಾಧ್ಯವಿಲ್ಲ ಯಾಕೆಂದರೆ ನಿಮಗೆ ಹಸಿವಿರುವುದಿಲ್ಲ, ಸರಿಯಾ? ನಿಮಗೆ ಹಸಿವಾದಾಗ, ಒಂದು ಒಳ್ಳೆಯ ಊಟವನ್ನು ಆಸ್ವಾದಿಸಲು ನಿಮಗೆ ಸಾಧ್ಯವಾಗುತ್ತದೆ.
ಪ್ರಶ್ನೆ: ನನ್ನ ಜೀವನದಲ್ಲಿ ನಾನು ಕ್ಷಮಿಸಲು ಬಯಸುವಂತಹ ಕೆಲವು ಜನರಿದ್ದಾರೆ.  ಹಲವಾರು ಸಾರಿ ಕ್ಷಮಿಸಲು ಮತ್ತು ಮರೆಯಲು ನಾನು ನಿರ್ಧರಿಸುತ್ತೇನೆ, ಆದರೆ ಅಚಾನಕ್ಕಾಗಿ ನಾನು ಆದುದನ್ನು ನೆನೆಸಿ ಅವರನ್ನು ಪುನಃ ಇಷ್ಟಪಡದಿರಲು ಪ್ರಾರಂಭಿಸುತ್ತೇನೆ. ನಾನು ಏನು ಮಾಡಬೇಕು? ನನಗೆ ಮುಕ್ತನಾಗಬೇಕು.
ಶ್ರೀ ಶ್ರೀ ರವಿಶಂಕರ್:
ಈಗಲೇ ಅದನ್ನು ಮಾಡು. ಅವರೇನು ಮಾಡಬೇಕಾಗಿತ್ತೋ ಅವರು ಕೇವಲ ಅದನ್ನು ಮಾಡಿದರು, ಅವರಿಗೆ ಬೇರೆ ಆಯ್ಕೆಯಿರಲಿಲ್ಲ. ಅವರು, ತಮ್ಮ ಆಯ್ಕೆಯೊಂದಿಗೆ ಹೋಗಬಲ್ಲಂತಹ ಮುಕ್ತ ವ್ಯಕ್ತಿಗಳೆಂದು ಯೋಚಿಸಬೇಡ. ಅವರು ಆ ರೀತಿ ಯೋಜಿಸಲ್ಪಟ್ಟಿದ್ದರು; ಮತ್ತು ಯೋಜಿಸಲ್ಪಟ್ಟ ಚಿಪ್ ಒಳಗಡೆಯಿದೆ. ಅವರು ಕೇವಲ ಆ ರೀತಿ ಕೆಲಸ ಮಾಡುತ್ತಾರೆ, ಪಾಪ. ಅವರ ಬಗ್ಗೆ ಕೇವಲ ಸಹಾನುಭೂತಿಯಿಡು. ಅವರು ನಿನಗೆ ಏನನ್ನು ಮಾಡಿದರೋ ಅದನ್ನು ಅವರು  ಮಾಡಬೇಕಾಗಿ ಬಂತು. ಅಷ್ಟೆ, ಮುಗಿಯಿತು!
ಪ್ರಶ್ನೆ: ನಾನು ಆಧ್ಯಾತ್ಮ ಮತ್ತು ಸಂಭೋಗಗಳ ನಡುವೆ ಹರಿದು ಹೋಗಿದ್ದೇನೆ. ಇವುಗಳೆರಡನ್ನೂ ಸೇರಿಸುವುದರಿಂದ ನಾನು ತಪ್ಪಿತಸ್ಥ ಭಾವನೆಯನ್ನು ಹೊಂದಿದ್ದೇನೆ. ನಾನು ವಿವಾಹಿತ ಮತ್ತು ನನ್ನ ಪತ್ನಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ.
ಶ್ರೀ ಶ್ರೀ ರವಿಶಂಕರ್:
ನೀವು ವಿವಾಹಿತರಾಗಿರುವಾಗ ನಿಮಗೆ ಆ ಧರ್ಮವಿರುತ್ತದೆ; ಅದು ನಿಮ್ಮ ಕರ್ತವ್ಯ. ಆದುದರಿಂದ ನೀವು ವಿವಾಹಿತರಾಗಿರುವಾಗ ನೀವು ನಿಮ್ಮ ಸಂಗಾತಿಯೊಂದಿಗೆ ಜೊತೆಯಲ್ಲಿ ಬೆಳೆಯಬೇಕು ಮತ್ತು ಅವರಿಗೆ ಬೆಳೆಯಲು ಸಹಾಯ ಮಾಡಬೇಕು. ನೀನು ಯೋಗ ವಾಸಿಷ್ಠ ಓದಿದ್ದೀಯಾ? ಅದರಲ್ಲಿ ಲೀಲಾಳ ಕಥೆಯಿದೆ. ಯೋಗ ವಾಸಿಷ್ಠ ಓದು.
ಪ್ರಶ್ನೆ: ಮನಃಶಾಸ್ತ್ರಜ್ಞರು ಮತ್ತು ಹೆಚ್ಚಾಗಿ ಪಶ್ಚಿಮದ ಚಿಂತಕರು ಹೇಳುವುದೇನೆಂದರೆ, ಒಬ್ಬನು ತನ್ನ ಉದ್ದೇಶವನ್ನು ಕಂಡುಕೊಳ್ಳಲು ಹೋರಾಡಬೇಕು ಮತ್ತು ಅದನ್ನು ಜೀವಿಸಬೇಕು. ಜ್ಞಾನೋದಯವನ್ನು ಹೊಂದುವುದರ ಹೊರತಾಗಿ, ಪ್ರತಿಯೊಂದು ಆತ್ಮಕ್ಕೂ ಈ ಜೀವನದಲ್ಲಿ ಒಂದು ಪ್ರತ್ಯೇಕವಾದ ಉದ್ದೇಶವಿದೆಯೇ?
ಶ್ರೀ ಶ್ರೀ ರವಿಶಂಕರ್: 
ಪ್ರತಿಯೊಂದು ಆತ್ಮವೂ ಈ ಭೂಮಿಯ ಮೇಲೆ ಏನೋ ಕೆಲಸವನ್ನು ಮಾಡುತ್ತಿದೆ. ನೀವು ಮಾಡಲು ಬಯಸುವ ಯಾವುದೇ ಕೆಲಸವನ್ನಾದರೂ, ತೆಗೆದುಕೊಳ್ಳಲು ಬಯಸುವ ಯಾವುದೇ ವೃತ್ತಿಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮನಃಶಾಸ್ತ್ರಜ್ಞರು ಮರೆಯುವ ಒಂದು ಸಾಮಾನ್ಯ ಸಂಗತಿಯಿದೆ. ಆ ಸಾಮಾನ್ಯ ಸಂಗತಿ ಯಾವುದು? ಒಪ್ಪಿಕೊಂಡ ಮೌಲ್ಯಗಳು, ಮಾನವೀಯ ಮೌಲ್ಯಗಳು, ಸಂತೋಷ. ಈಚಿನ ದಿನಗಳಲ್ಲಿ ಅವರು ಇವುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ.
"ನೀವು ಸಂತೋಷವಾಗಿದ್ದೀರಾ?" ಇದು ನಾವು ಕೇಳಬೇಕಾಗಿರುವುದು. ನೀವು ಸಂತೋಷವಾಗಿಲ್ಲದಿದ್ದರೆ, ಆಗ ಸಂತೋಷವನ್ನು ಕಂಡುಕೊಳ್ಳಲು ಅಂತರ್ಮುಖವಾಗಿ ತಿರುಗಿ. ಅದಕ್ಕಾಗಿ ಹೊರಗಡೆಯೆಲ್ಲೋ ಹುಡುಕಬೇಡಿ. ಒಮ್ಮೆ ನೀವು ಅಂತರ್ಮುಖವಾಗಿ ತಿರುಗಿದ ಮೇಲೆ ಎಲ್ಲವೂ ತೆರೆಯಲು ಪ್ರಾರಂಭವಾಗುತ್ತದೆ.
ಆದುದರಿಂದ ಜೀವನದ ಉದ್ದೇಶವು ದುಃಖಿತರಾಗುವುದಲ್ಲ ಮತ್ತು ಇತರರನ್ನು ದುಃಖಿತರನ್ನಾಗಿಸುವುದಲ್ಲ. ನೀವು ಈ ಒಂದು ವಿಷಯವನ್ನು ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಂಡರೆ, ಆಗ ಉದ್ದೇಶವೇನು ಎಂಬುದು ತನ್ನಿಂತಾನೇ ಬರುತ್ತದೆ. ಗರಿಷ್ಠ ಜನರಿಗೆ ಗರಿಷ್ಠ ಪ್ರಮಾಣದಲ್ಲಿ ಒಳ್ಳೆಯದನ್ನು ಮಾಡಿ. ನೀವೆಲ್ಲೇ ಇದ್ದರೂ, ಅಲ್ಲಿ ಎಲ್ಲರಿಗೂ ಬೇಕಾದವರಾಗಿ. ನೀವು ನಿಮ್ಮ ೧೦೦% ವನ್ನು ಕೊಟ್ಟಿದ್ದೀರಾ? ಜನರು ನಿಮ್ಮನ್ನು ಪುನಃ ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಬಯಸುವಂತಹ ವ್ಯಕ್ತಿತ್ವವೇ ನಿಮ್ಮದು? ನೀವೊಬ್ಬ ತಂಡದಲ್ಲಿ ಬೆರೆಯುವ ಆಟಗಾರನೇ? ಅಲ್ಲದಿದ್ದರೆ, ತಂಡದಲ್ಲಿ ಬೆರೆಯುವ ಆಟಗಾರರಾಗುವಂತೆ ನಾವು ನಮ್ಮನ್ನೇ ಟ್ಯೂನ್ ಮಾಡಿಕೊಳ್ಳಬೇಕು. ನಮ್ಮ ಜೀವನದ ಈ ಒರಟಾದ ಅಲಗುಗಳನ್ನು ನಾವು ನಯಗೊಳಿಸಿದಾಗ ಜೀವನದ ಉದ್ದೇಶವು ತುಂಬಾ ಸ್ಪಷ್ಟವಾಗುತ್ತದೆ.
ನಿಮಗೊಂದು ಉದ್ದೇಶ ಯಾಕೆ ಬೇಕೆಂದು ನಿಮಗೆ ಗೊತ್ತಿದೆಯೇ? ಯಾಕೆಂದರೆ ಅದು ನಿಮಗೆ ತೃಪ್ತಿಯನ್ನು ತರುತ್ತದೆ. ಒಂದು ಉದ್ದೇಶಪೂರ್ವಕ ಕೆಲಸವನ್ನು ಮಾಡುವುದರ ಅರ್ಥವೇನು? ಯಾಕೆಂದರೆ ಅದು ತೃಪ್ತಿಯನ್ನು ತರುತ್ತದೆ. ನೀವು ಉದ್ದೇಶಪೂರ್ವಕವಲ್ಲದ ಏನನ್ನಾದರೂ ಮಾಡಿದರೆ ಅದು ನಿಮಗೆ ತೃಪ್ತಿಯನ್ನು ತರುವುದಿಲ್ಲ. ಆದುದರಿಂದ, ಒಂದು ಉದ್ದೇಶವಿರಲು ಬಯಸುವುದು ಅಥವಾ ಉದ್ದೇಶವಿಲ್ಲದಿರಲು ಬಯಸುವುದು, ತೃಪ್ತಿಯನ್ನು ಹೊಂದುವುದರ ಮೇಲೆ ಕೇಂದ್ರೀಕೃತವಾಗಿದೆ. ನೀವು ತೃಪ್ತಿಯನ್ನು ಹೊಂದಿದರೆ, ನೀವು ಮಾಡುವ ಪ್ರತಿಯೊಂದು ಚಿಕ್ಕ ಕೆಲಸವೂ ತುಂಬಾ ಪ್ರಯೋಜನಕಾರಿಯಾಗುತ್ತದೆ. ನೀವು, "ನನಗೊಂದು ಉದ್ದೇಶ ಬೇಕು" ಎಂದು ಹೇಳುವಾಗ, ನೀವು ಅದರ ಕೇಂದ್ರವಾಗಿರುತ್ತೀರಿ ಮತ್ತು ನೀವು ಯಾವಾಗಲೂ ನಿಮಗೆ ಇದರಿಂದ ಏನು ಸಿಗುತ್ತದೆ ಎಂಬುದಾಗಿ ಯೋಚಿಸುತ್ತೀರಿ. ಆದರೆ ನೀವು ತೃಪ್ತರಾದಾಗ, ನಿಮ್ಮ ಸಂಪೂರ್ಣ ಜೀವನವು ಪ್ರಯೋಜನಕಾರಿಯಾಗುತ್ತದೆ ಮತ್ತು ಪ್ರಯೋಜನಕಾರಿಯಾಗಿರುವುದು ನಿಮ್ಮ ಜೀವನದ ಉದ್ದೇಶವಾಗಿದ್ದರೆ, ಹಾಗೇ ಆಗಲಿ, ಮತ್ತು ಅಷ್ಟೆ. ತಿಳಿಯಿತಾ? ನೀವು ಪ್ರಯೋಜನಕಾರಿಗಳಾಗಿರುವಾಗ ನೀವು ತುಂಬಾ ತೃಪ್ತಿಯನ್ನು ಅನುಭವಿಸುತ್ತೀರಿ. ಇದು ಜನರು ಮನಸ್ಸಿನಲ್ಲಿಡಬೇಕಾದ ಒಂದು ಸಂಗತಿ, ಪ್ರಯೋಜನಕಾರಿಗಳಾಗುವುದು. ನೀವು, ನಾನು ಪ್ರಯೋಜನಕಾರಿಯಾಗಬೇಕು ಎಂದು ಹೇಳುವಾಗ, ನೀವೆಲ್ಲೇ ಇದ್ದರೂ ನೀವೇನೇ ಮಾಡಿದರೂ, ನೀವು ತುಂಬಾ ಪ್ರಯೋಜನಕಾರಿಗಳಾಗಿದ್ದೀರೆಂಬುದು ನಿಮಗೆ ತನ್ನಿಂತಾನೇ ಗೋಚರವಾಗುತ್ತದೆ.
ಪ್ರಶ್ನೆ: ನಾನೊಂದು ಸೋತುಹೋದ ವಿವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಸಹ ಆತ್ಮ ಸಾಕ್ಷಾತ್ಕಾರವನ್ನು ಗಳಿಸಲು ಸಾಧ್ಯವಿದೆಯೇ? ನನ್ನ ಸಂಗಾತಿಯ ನಕಾರಾತ್ಮಕತೆ ಮತ್ತು ಕ್ರೋಧವು ನನ್ನನ್ನು ಕಾಡುತ್ತದೆ. ನನಗೆ ಈಗಲೂ ಒಂದು ಅವಕಾಶ ಇದೆಯೇ?
ಶ್ರೀ ಶ್ರೀ ರವಿಶಂಕರ್:
ಹೌದು, ಹೌದು, ಹೌದು, ಹೌದು! ನಿನ್ನ ಸಂಗಾತಿಗೆ ಧನ್ಯವಾದ ಹೇಳು. ನೀನು ಬಹಳ ಚೆನ್ನಾಗಿ ಬೆಳೆಯಲು ಸಾಧ್ಯವಿದೆ ಮತ್ತು ನೀನು ನಿಜವಾಗಿ ದೃಢವಾಗಲು ಸಾಧ್ಯವಿದೆ. ಅವರು ನಕಾರಾತ್ಮಕವಾಗಿದ್ದಾರೆ ಮತ್ತು ನೀನು ಸಕಾರಾತ್ಮಕವಾಗಿದ್ದಿ, ಅವರು ನಿನ್ನನ್ನು ಯಾವುದೇ ವಿಷಯದಲ್ಲಿ ದೂಷಿಸಿದರೂ ನೀನು ನಗುತ್ತಾ ಇರು. ನಿನಗೆ ಎಲ್ಲಾ ಅವಕಾಶಗಳೂ ಇವೆ, ಸರಿಯಾ.
ಪ್ರಶ್ನೆ: ಟೊರೊಂಟೋ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳ ಪ್ರಕಾರ ಒಬ್ಬಳು ಸ್ತ್ರೀ ಆತ್ಮಸಾಕ್ಷಾತ್ಕಾರ ಹೊಂದಬೇಕಿದ್ದರೆ ಅವಳು ಗಂಡಸಿನ ಶರೀರದಲ್ಲಿ ಪುನರ್ಜನ್ಮ ಪಡೆಯಬೇಕು. ಪಠ್ಯಪುಸ್ತಕ ಹೇಳುತ್ತದೆ, ಇದು ವೇದಗಳಲ್ಲಿ ಬರೆದಿದೆಯೆಂದು.
ಶ್ರೀ ಶ್ರೀ ರವಿಶಂಕರ್: 
ಸಂಪೂರ್ಣವಾಗಿ ತಪ್ಪು ! ಇದು ತಪ್ಪೆಂದು ಹೇಳಿ ಕೂಡಲೇ ಅವರಿಗೊಂದು ಪತ್ರ ಬರೆ. ವೇದಗಳಲ್ಲಿ ಎಲ್ಲಿಯೂ ಆ ರೀತಿ ಹೇಳಿಲ್ಲ. ಅವರು ನನಗೊಂದು ಉಲ್ಲೇಖನವನ್ನು ಕೊಡಲಿ. ಇದು ನಿಜವಲ್ಲ.
ಹೌದು, ಅವುಗಳು ಸ್ಮೃತಿಗಳು ಎಂದು ಕರೆಯಲ್ಪಡುತ್ತವೆ, ಆದರೆ ಸ್ಮೃತಿಗಳು ವೇದಗಳಲ್ಲ. ಅವುಗಳು ಬೇರೆ ಬೇರೆ ಸಮಯದ ಬೇರೆ ಬೇರೆ ರಾಜರಿಂದ ಬರೆಯಲ್ಪಟ್ಟವು. ಪ್ರಾಚೀನ ಕಾಲದಲ್ಲಿ, ಬೇರೆ ಬೇರೆ ಸಾಮ್ರಾಜ್ಯಗಳ ಬೇರೆ ಬೇರೆ ರಾಜರು ಸಮಾಜದ ನಿಯಮಗಳನ್ನು ಮತ್ತು ನಿಬಂಧನೆಗಳನ್ನು ಬರೆದರು. ಅವುಗಳಲ್ಲೊಂದು ಮನು ಸ್ಮೃತಿ. ಇದರಲ್ಲಿ ಅವನು ಬರೆದಿರುವುದು ಒಂದೇ ಒಂದು ವಿಷಯ. ಅದೇನೆಂದರೆ ಸ್ತ್ರೀಯರು ಮುಕ್ತಿಯನ್ನು ಪಡೆಯಲು ಯೋಗ್ಯರಲ್ಲ, ಯಾಕೆಂದರೆ ಅವಳಿಗೆ ತಂದೆಯಿಂದ, ನಂತರ ಗಂಡನಿಂದ ಮತ್ತು ನಂತರ ಮಗನಿಂದ ಸಂರಕ್ಷಣೆಯ ಅಗತ್ಯವಿದೆಯೆಂದು. ಜೀವನದುದ್ದಕ್ಕೂ ಅವಳಿಗೆ ಸಂರಕ್ಷಣೆಯ ಅಗತ್ಯವಿದೆ, ಆದುದರಿಂದ ಮುಕ್ತಿಯನ್ನು ಪಡೆಯಲು ಅವಳು ಯೋಗ್ಯಳಲ್ಲವೆಂದು. ಆದರೆ ಇದು ಇರುವುದು ಕೇವಲ ಸ್ಮೃತಿಗಳಲ್ಲಿ ಮಾತ್ರ, ಅದರರ್ಥ ಇದು ಕೇವಲ ಒಬ್ಬ ರಾಜನ ಅಭಿಪ್ರಾಯ. ವೇದಗಳಲ್ಲೆಲ್ಲೂ ಸ್ತ್ರೀಯರು ಆತ್ಮಸಾಕ್ಷಾತ್ಕಾರ ಗಳಿಸಲು ಸಾಧ್ಯವಿಲ್ಲವೆಂದು ಹೇಳಿಲ್ಲ. ಸ್ತ್ರೀ ಸಂತರು ಇದ್ದಾರೆ! ಗಾರ್ಗಿ ಮತ್ತು ಮೈತ್ರಿ, ಅವರು ಆತ್ಮ ಸಾಕ್ಷಾತ್ಕಾರ ಹೊಂದಿದವರು.
ಅವರಿಗೆ ಯೋಗ ವಾಸಿಷ್ಠವನ್ನು ಓದಲು ಹೇಳು. ಯೋಗ ವಾಸಿಷ್ಠದಲ್ಲಿ ವೇದಗಳ ಪಾಠಗಳಿವೆ. ಮೊತ್ತ ಮೊದಲು ಆತ್ಮಸಾಕ್ಷಾತ್ಕಾರವನ್ನು ಹೊಂದಿದುದು ಒಬ್ಬಳು ಸ್ತ್ರೀ, ಚೂಡಲಾ ಮತ್ತು ನಂತರ ಇನ್ನೊಬ್ಬಳು ಸ್ತ್ರೀ, ಲೀಲಾ.
ಲೀಲಾ ಮತ್ತು ಚೂಡಲಾ, ಇವರು ಮೊದಲಿಗೆ ಆತ್ಮಸಾಕ್ಷಾತ್ಕಾರವನ್ನು ಹೊಂದಿದ ಸ್ತ್ರೀಯರು. ನಂತರ ಅವರು ತಮ್ಮ ಮೂಲಕ ತಮ್ಮ ಗಂಡಂದಿರು ಆತ್ಮಸಾಕ್ಷಾತ್ಕಾರ ಹೊಂದುವಂತೆ ಮಾಡಿದರು.
ನಾವು ಅವರಲ್ಲಿ ಅವರ ಪಠ್ಯವನ್ನು ಬದಲಾಯಿಸಲು ಹೇಳಬೇಕು.
ಪ್ರಶ್ನೆ: ಪ್ರೀತಿಯ ಗುರೂಜಿ, ನನಗೆ ಆಧ್ಯಾತ್ಮದಲ್ಲಿ ಅಥವಾ ಆತ್ಮ ಸಾಕ್ಷಾತ್ಕಾರವನ್ನು ಹೊಂದುವುದರಲ್ಲಿ ಆಸಕ್ತಿಯಿಲ್ಲ. ನನಗೆ ಆಸಕ್ತಿಯಿರುವುದು ಕೇವಲ ನಿಮ್ಮಲ್ಲಿ! ನಾನು ನಿಮ್ಮನ್ನು ಹೇಗೆ ಹೊಂದಬಹುದು?
ಶ್ರೀ ಶ್ರೀ ರವಿಶಂಕರ್:
ನೀನು ಅದೇ ಸಂಗತಿಯನ್ನು ಬೇರೆ ರೀತಿಯಲ್ಲಿ ಹೇಳುತ್ತಿದ್ದಿ, ಅಷ್ಟೆ. ನಾನು ಆಧ್ಯಾತ್ಮ ಮತ್ತು ನೀನು ಆಧ್ಯಾತ್ಮ ಅಥವಾ ಆತ್ಮಸಾಕ್ಷಾತ್ಕಾರವನ್ನು ನನ್ನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅದು ಅಸಾಧ್ಯ.
ಪ್ರಾಚೀನ ಗ್ರಂಥಗಳಲ್ಲಿ ಇದು ದ್ರವ್ಯ ಗುಣ ಸಂಬಂಧ ಎಂದು ಕರೆಯಲ್ಪಡುತ್ತದೆ, ಒಂದು ವಸ್ತು ಮತ್ತು ಅದರ ಗುಣದ ನಡುವಿರುವ ಸಂಬಂಧ. ಗುಣದ ಮೂಲಕವೇ ನೀವು ಒಂದು ವಸ್ತುವನ್ನು ಗುರುತಿಸುವುದು. ಸಕ್ಕರೆ ಹುಡಿ ಮತ್ತು ಉಪ್ಪಿನ ಹುಡಿಗಳು ಒಂದೇ ರೀತಿ ಕಾಣಿಸುತ್ತವೆ, ರುಚಿಯ ಮೂಲಕ ಮಾತ್ರವೇ ನಿಮಗೆ ಅದು ಸಕ್ಕರೆಯೋ ಅಥವಾ ಉಪ್ಪೋ ಎಂದು ತಿಳಿಯಲು ಸಾಧ್ಯವಾಗುವುದು; ಸಿಹಿಯ ಮೂಲಕ ಅಥವಾ ಉಪ್ಪಿನಂಶದ ಮೂಲಕ. ಹಲವು ಸಮಯಗಳಲ್ಲಿ ಹಲವು ಸ್ತ್ರೀಯರು ತಮ್ಮ ಅತೀ ಆನಂದದ ಅವಸ್ಥೆಯಲ್ಲಿ ಅಥವಾ ತಮ್ಮ ಚಿಂತಾವಸ್ಥೆಯಲ್ಲಿ ಪಾಯಸಕ್ಕೆ ಉಪ್ಪು ಹಾಕುತ್ತಾರೆಂಬುದು ನನಗೆ ತಿಳಿದಿದೆ. ಪ್ರಾಮಾಣಿಕವಾಗಿ ಹೇಳಿ, ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಮೊದಲು ಮಾಡಿದ್ದೀರಿ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ). ಅದು ಹಾಲು ಪಾಯಸ ಮತ್ತು ಅದು ತುಂಬಾ ಉಪ್ಪಾಗಿರುತ್ತದೆ. ಆದುದರಿಂದ, ಒಂದು ವಸ್ತುವಿನಲ್ಲಿರುವ ಗುಣವು ಆ ವಸ್ತುವನ್ನು ಮಾಡುವುದು. ಅವುಗಳು ತುಂಬಾ ಹತ್ತಿರದ ಸಂಬಂಧವನ್ನು ಹೊಂದಿವೆ.
ಪ್ರಶ್ನೆ: ನಾನು ನನ್ನ ಮನಸ್ಸನ್ನು ಕಳೆಯಲು ಬಯಸುತ್ತೇನೆ, ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಕಾರು ಚಲಾಯಿಸುವಾಗಲಲ್ಲ!
ಟೊಳ್ಳು ಮತ್ತು ಖಾಲಿ ಧ್ಯಾನವಾಗುತ್ತಿರುವಾಗ ಸುಮ್ಮನೇ ಇಲ್ಲಿ ಕುಳಿತುಕೋ ಮತ್ತು ಮನಸ್ಸು ಅದರಷ್ಟಕ್ಕೇ ಕರಗುತ್ತದೆ. ನೀನು ಅದನ್ನು ಕಳೆಯಲು ಬಯಸುವುದು ಇಲ್ಲಿರುವ ಸಮಸ್ಯೆಯಾಗಿದೆ. ಸುಮ್ಮನೇ ಇರು! ಮನಸ್ಸು ಹೇಗೇ ಇದ್ದರೂ, ಇರಲು ಬಿಡು. ಅದು ತ್ಯಾಜ್ಯದಿಂದ ತುಂಬಿದ್ದರೆ ಹೇಳು, "ಸರಿ, ಇರಲಿ ಬಿಡು".
ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ತ್ಯಾಜ್ಯಗಳೂ ಸಾವಯವ ಗೊಬ್ಬರಗಳು, ಇರಲಿ ಬಿಡಿ. ನೀವದನ್ನು ಇಲ್ಲದಂತೆ ಮಾಡಲು ಪ್ರಯತ್ನಿಸುವುದು ಅತ್ಯಂತ ದೊಡ್ಡ ಸಮಸ್ಯೆ. ಅದೊಂದು ದೊಡ್ಡ ಕೆಲಸ, ಆದುದರಿಂದ ದೇವರ ಸಲುವಾಗಿಯಾದರೂ, ಅಂತಹ ಕೆಲಸವನ್ನು ಮಾಡಬೇಡಿ. ಮನಸ್ಸು ದೇವರಿಂದ ಕೊಡಲ್ಪಟ್ಟಿದೆ, ಅದನ್ನು ಇರಲು ಬಿಡಿ. ಇದೊಂದು ಸೂತ್ರ - ಅದನ್ನು ಇರಲು ಬಿಡಿ.
ಪ್ರಶ್ನೆ: ನಕಾರಾತ್ಮಕ, ನಿಯಂತ್ರಿಸುವ, ರಾಜಕೀಯ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೇಗೆ? ಚಿಕ್ಕದಾಗಿ ಹೇಳುವುದಾದರೆ ನಮ್ಮ ಮೇಲಧಿಕಾರಿಗಳು.
ಶ್ರೀ ಶ್ರೀ ರವಿಶಂಕರ್:
ಮೂರು ವಿಷಯಗಳೊಂದಿಗೆ, ಕುಶಲತೆ, ತಾಳ್ಮೆ ಮತ್ತು ಸಕಾರಾತ್ಮಕತೆ. ಇದು ಕೆಲಸ ಮಾಡಬೇಕು.
ಇದು ಕೆಲಸ ಮಾಡದೇ ಇದ್ದರೆ, ಆಗ ಗುಂಪು ಕಟ್ಟಿಕೊಳ್ಳಿ, ಇದು ಹಲವು ಜನರು ಮಾಡುವ ಅತ್ಯಂತ ಸುಲಭ ವಿಷಯ. ಒಬ್ಬರ ವಿರುದ್ಧವಾಗಿ ಗುಂಪುಕಟ್ಟಿ ಮತ್ತು ಇದು ತುಂಬಾ ಸುಲಭವಾಗಿ ಕೆಲಸ ಮಾಡಬಹುದು. ಆದರೆ ಇಲ್ಲಿ ಯಶಸ್ಸು ನಿಶ್ಚಿತವಲ್ಲ. ಯಶಸ್ಸಿಗೆ, ಕುಶಲತೆ, ತಾಳ್ಮೆ ಮತ್ತು ಸಕಾರಾತ್ಮಕತೆ, ಇವುಗಳೆಲ್ಲದರ ಅಗತ್ಯವಿದೆ. ನೀವು ನನ್ನಲ್ಲಿ ಕೇಳಿದರೆ, ಪ್ರಾರ್ಥನೆ, ಅದು ಅತ್ಯಂತ ಒಳ್ಳೆಯದು.
ನಾನು ನಿನ್ನೆ ಹೇಳಿದಂತೆ, ಎಲ್ಲವೂ ಕೇವಲ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ. ನಿಮ್ಮಲ್ಲಿ ಕೇವಲ ಆ ಉದ್ದೇಶವಿದ್ದರೆ, ಈ ವ್ಯಕ್ತಿಯು ಇವತ್ತು ಬದಲಾಗಲಿ, ಮತ್ತು ಈ ಉದ್ದೇಶದೊಂದಿಗೆ ನೀವು ಹೋದಾಗ ನೀವು ನೋಡುತ್ತೀರಿ, ಅವನು ಪೂರ್ತಿ ವಿಭಿನ್ನವಾಗಿ ವರ್ತಿಸುತ್ತಾನೆ.
ನೋಡಿ, ಈ ಪ್ರಪಂಚದಲ್ಲಿ ಹಲವು ಸಾರಿ ನಿಮ್ಮ ಸ್ನೇಹಿತರು ಶತ್ರುಗಳಂತೆ ವರ್ತಿಸುತ್ತಾರೆ, ಇದು ನಿಮಗೆ ಆಗಲಿಲ್ಲವೇ? ಯಾರಿಗಾಗಿ ನೀವು ಎಲ್ಲವನ್ನೂ ಮಾಡುತ್ತೀರೋ ಅವರು ಶತ್ರುಗಳಂತೆ ವರ್ತಿಸುತ್ತಾರೆ ಮತ್ತು ಕೆಲವೊಮ್ಮೆ ಯಾರನ್ನು ನೀವು ಶತ್ರುಗಳೆಂದು ಪರಿಗಣಿಸಿದ್ದಿರೋ ಅವರು ನಿಮ್ಮನ್ನು ಕಾಪಾಡಲು ಬರುತ್ತಾರೆ. ಇದು ಚರಿತ್ರೆಯಲ್ಲಿನ ಒಂದು ವಾಸ್ತವ. ಚರಿತ್ರೆಯ ಪುಟಗಳನ್ನು ತಿರುಗಿಸಿ ಮತ್ತು ಪ್ರತಿಯೊಂದು ಭೂಖಂಡದಲ್ಲಿ, ಪ್ರತಿಯೊಂದು ದೇಶದಲ್ಲಿ, ಪ್ರತಿಯೊಂದು ಹಳ್ಳಿಯಲ್ಲಿ ಇಂತಹ ಸಂಗತಿಗಳು ಹಿಂದಿನ ಕಾಲದಲ್ಲಿ ಆಗುತ್ತಾ ಇದ್ದುವು ಎಂಬುದು ನಿಮಗೆ ತಿಳಿಯುತ್ತದೆ. ಆದುದರಿಂದ, ಅವಲಂಬಿಸಲು ಯೋಗ್ಯವಾದ ಒಂದೇ ಒಂದು ವಿಷಯವಿರುವುದು ಮತ್ತು ಅದುವೇ ಅಸ್ಥಿತ್ವ, ಸತ್ಯ, ಪ್ರಜ್ಞೆ ಮತ್ತು ಅದುವೇ ಎಲ್ಲವೂ.